Monday, October 11, 2010

ಮೂರು ಕೃತಿಗಳ ಬಿಡುಗಡೆ

ಸರ್/ ಸ್ನೇಹಿತರೇ,
ನನ್ನ ಮೂರು ಕೃತಿಗಳನ್ನು ಖ್ಯಾತ ಕವಿ ಡಾ.ನಿಸಾರ್ ಅಹಮದ್ ಅವರು ಬಿಡುಗಡೆ ಮಾಡಲಿದ್ದಾರೆ.
ಮೌನ ಬೆಳದಿಂಗಳು(ಕವನ ಸಂಕಲನ), ಸತ್ಯಕ್ಕ-ಕಾಯಕಕ್ಕೆ ಮತ್ತೊಂದು ಹೆಸರು, ಮಗ್ಗುಲು ಮುಳ್ಳು(ಆಯ್ದ ಲೇಖನಗಳು) ಇವು ನನ್ನ ಮೂರು ಕೃತಿಗಳು.
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಬೆಂಗಳೂರು.
ದಿನಾಂಕ: ಅಕ್ಟೋಬರ್ ೨೪
ಸಮಯ: ಬೆಳಗ್ಗೆ 10.30
ತಾವು ದಯಮಾಡಿ ಆ ಕಾರ್ಯಕ್ರಮಕ್ಕೆ ಆಗಮಿಸಿ, ಆ ಸುಮಧುರ ಗಳಿಗೆಯಲ್ಲಿ ನನ್ನೊಂದಿಗೆ ಇರಬೇಕೆಂದು ಆಶಿಸುತ್ತೇನೆ...
ಮೊ:9449510318, 9964916753.

Wednesday, September 1, 2010

ತೆಂಗಿನೆಣ್ಣೆಯಲ್ಲಿದೆ ತಾಕತ್ತು (ಸೆ.೨ ವಿಶ್ವ ತೆಂಗು ದಿನ)

ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಎಂದಾಕ್ಷಣ ಮೂಗು ಮುರಿಯುವವರೇ ಇತ್ತೀಚೆಗೆ ಹೆಚ್ಚಾಗಿದ್ದಾರೆ. ಆದರೆ ಇದೇ ಎಣ್ಣೆಯಲ್ಲಿ ರೋಗ ನಿರೋಧಕ ಶಕ್ತಿಯಿದೆ, ಇದು ತಾಯಿ ಎದೆ ಹಾಲಿನಷ್ಟೇ ಪೌಷ್ಠಿಕಾಂಶಯುಕ್ತವಾದದ್ದು ಎಂದರೆ ನಂಬಲೇಬೇಕು...
ನಿಜ, ಅದೇ ನಮ್ಮದೇ ಕಲ್ಪವೃಕ್ಷ. ಅದರಲ್ಲಿ ಬೆಳೆದ ತೆಂಗಿನ ಕಾಯಿಯಿಂದ ತಯಾರಿಸುವ ಕೊಬ್ಬರಿ ಎಣ್ಣೆ ಸರ್ವ ರೋಗಕ್ಕೂ ಮದ್ದು ಎಂದರೆ ಅಚ್ಚರಿಪಡಬೇಕಿಲ್ಲ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಜಾಗತಿಕ ಮಟ್ಟದ ಕುತಂತ್ರಗಳಿಂದಾಗಿ ತೆಂಗಿನ ಎಣ್ಣೆ ಇಂದು ತೀರಾ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ತಲೆಯ ಕೂದಲನ್ನು ಬೆಳೆಸಲು ಬಿಟ್ಟರೆ ಬೇರೆ ಯಾವುದಕ್ಕೂ ಅದು ಉಪಯುಕ್ತವಾದುದ್ದಲ್ಲ, ಅದನ್ನು ಸೇವಿಸುವುದರಿಂದ ಬಹಳ ಬೇಗ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ, ಹೃದಯಾಘಾತವಾಗುತ್ತದೆ ಎಂಬ ಸಲ್ಲದ ನಿರ್ಧಾರಕ್ಕೆ ಬಂದುಬಿಡುವಷ್ಟು ನಾವು ಅeನಿಗಳಾಗಿದ್ದೇವೆ. ಇದೆಲ್ಲ ಅಮೆರಿಕ ಹಾಗೂ ಪಶ್ಚಿಮ ರಾಷ್ಟ್ರಗಳ ಕುತಂತ್ರ. ಆದರೆ ಅದ್ಯಾವುದರ ಅರಿವೂ ಇಲ್ಲದೆ ನಾವು ನಮ್ಮದೇ ನೆಲದಲ್ಲಿ ಬೆಳೆದ ತೆಂಗಿನ ಎಣ್ಣೆಯನ್ನು ದೂರ ತಳ್ಳಿ ನಿರಾಳರಾಗಿದ್ದೇವೆ !
ತೆಂಗಿನ ಎಣ್ಣೆಯ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದ ಕೆಲವು ವೈದ್ಯರು ಕೂಡ ಕೊಬ್ಬರಿ ಎಣ್ಣೆ ಬಳಸಿದರೆ ಕೊಬ್ಬು ಹೆಚ್ಚಾಗುತ್ತದೆ ಎಂಥಲೇ ಭಯ ಹುಟ್ಟಿಸುತ್ತಿದ್ದಾರೆ. ಇದರ ಅರಿವಿದ್ದೂ ಕೆಲವು ವಿeನಿಗಳು ಅದೇ ಪಾಠ ಮಾಡುತ್ತಿದ್ದಾರೆ. ಈ ಇಡೀ ಸುಳ್ಳಿನ ಕಂತೆ ಸೃಷ್ಟಿಯಾದದ್ದು ೧೯೫೦ರಲ್ಲಿ. ಕೊಬ್ಬರಿ ಎಣ್ಣೆ ವಿಶ್ವದ ಎಲ್ಲ ಎಣ್ಣೆಗಳಿಗಿಂತ ಶ್ರೇಷ್ಠವಾದ ಎಣ್ಣೆ. ಅದು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಗಳಿಸಿದ ಕಾಲ. ಆದರೆ ಅದೇ ಸಮಯಕ್ಕೆ ಅಮೆರಿಕದ ಸೋಯಾಬೀನ್ ಹಾಗೂ ಜೋಳದ ಎಣ್ಣೆ ಮಾರುಕಟ್ಟೆಗೆ ಬಂದಿತ್ತು. ಅದಕ್ಕೆ ಬೇಡಿಕೆಯೇ ಇರಲಿಲ್ಲ. ಹೀಗಾಗಿ ಅಲ್ಲಿನ ಸೋಯಾಬೀನ್ ಅಸೋಷಿಯೇಷನ್ ತಮ್ಮ ಪದಾರ್ಥಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳುವ ಸಲುವಾಗಿ ಕುತಂತ್ರ ನಡೆಸಿ, ತೆಂಗಿನ ಎಣ್ಣೆಯ ವಿರುದ್ಧ ಹಾಗೂ ತಮ್ಮ ಸೋಯಾಬೀನ್ ಹಾಗೂ ಜೋಳದ ಎಣ್ಣೆಯ ಪರವಾಗಿ ಪ್ರಚಾರಾಂದೋಲನ ನಡೆಸಿತು. ಅದರ ಫಲವಾಗಿ ಇಂದು ಶೇ.೯೦ ಮಂದಿ ತೆಂಗಿನ ಎಣ್ಣೆಯನ್ನು ಕ್ಕರಿಸಿ ಸಿಕ್ಕ ಸಿಕ್ಕ ಎಣ್ಣೆಯನ್ನೆಲ್ಲಾ ಅಡುಗೆಗೆ ಬಳಸಿ ಕೊಬ್ಬು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಅದೆಲ್ಲಕ್ಕಿಂತ ತೆಂಗಿನ ಎಣ್ಣೆಯೇ ಅತ್ಯುತ್ತಮ ಎಂಬ ಅರಿವು ಮಾತ್ರ ಯಾರಿಗೂ ಗೊತ್ತಿಲ್ಲ.
ಹೊಸ ಸಂಶೋಧನೆಯ ಹೆಸರಿನಲ್ಲಿ ಅಮೆರಿಕದ ವಿeನಿಗಳು ಕೊಬ್ಬರಿ ಎಣ್ಣೆಯಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ, ಅದು ದೇಹ ಹಾಗೂ ಹೃದಯ ಎರಡಕ್ಕೂ ಹಾನಿಯುಂಟು ಮಾಡುತ್ತದೆ ಎಂದರು. ಅದನ್ನು ಕಣ್ಣು ಮುಚ್ಚಿಕೊಂಡು ಎಲ್ಲರೂ ಒಪ್ಪಿಕೊಂಡರು. ನಮ್ಮ ತೆಂಗಿನ ಬಗ್ಗೆ ಸಂಶೋಧನೆ ಮಾಡಲು ಅವರ‍್ಯಾರು? ಅದರ ಬಗ್ಗೆ ನಾವೇ ಸಂಶೋಧನೆ ಮಾಡುತ್ತೇವೆ ಎಂದು ಒಬ್ಬರೇ ಒಬ್ಬ ಈ ದೇಶದ ವಿeನಿಗಳು ಮುಂದೆ ಬರಲಿಲ್ಲ. ಹೀಗಾಗಿ ಪಾಪ ಜನ ಸಾಮಾನ್ಯರು ಚಕಾರವೆತ್ತದೆ ಅನ್ಯರ ಸಂಶೋಧನೆಯನ್ನು ಒಪ್ಪಿಕೊಂಡು ಮನೆ ಎಣ್ಣೆಯನ್ನು ದೂರ ತಳ್ಳಿ, ಅಮೆರಿಕದ ಸೋಯಾಬೀನ್ ಹಾಗೂ ಕಾರ್ನ್ ಎಣ್ಣೆಯೆಂಬ ‘ಮಾರಿ’ಯನ್ನು ಮನೆಗೆ ಕರೆತಂದರು.
ಅಲ್ಲಿಗೆ ತೆಂಗಿನ ಎಣ್ಣೆ, ತೆಂಗಿನ ಉತ್ಪನ್ನಗಳು ಹಾಗೂ ಅವುಗಳಿಂದ ತಯಾರಾಗುವ ಸಿಹಿ ಪದಾರ್ಥಗಳೂ ಸೇರಿದಂತೆ ಎಲ್ಲ ಉತ್ಪನ್ನಗಳ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿದುಬಿತ್ತು. ಇದೇ ಖುಷಿಯಲ್ಲಿ ಸೋಯಾಬೀನ್ ಹಾಗೂ ಕಾರ್ನ್ ಎಣ್ಣೆಯಿಂದ ಅಮೆರಿಕ ಬರ್ಜರಿ ಲಾಭ ಮಾಡಿಕೊಂಡಿತು.
ಆದರೆ ಇಷ್ಟು ವರ್ಷಗಳಾದರೂ ತೆಂಗಿನ ಎಣ್ಣೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಅದು ರೋಗ ನಿರೋಧಕ ಶಕ್ತಿ ಹೊಂದಿದೆ. ಕೇವಲ ತಲೆಗೆ ಎಣ್ಣೆ ಹಾಕಿದರೆ ವಾರಗಟ್ಟಲೆ ನಿದ್ದೆ ಮಾಡದವನೂ ನೆಮ್ಮದಿಯಿಂದ ನಿದ್ದೆ ಮಾಡಬಲ್ಲ, ತಲೆ ನೋವು ನಿವಾರಿಸಿಕೊಳ್ಳಬಲ್ಲ ಎಂದಾದರೆ ಇನ್ನು ಅದನ್ನು ಸೇವಿಸುವುದರಿಂದ ಏನೆಲ್ಲ ಉಪಯೋಗವಿದೆ ಎಂಬುದನ್ನು ಒಬ್ಬರೇ ಒಬ್ಬ ವಿeನಿಯಗಲಿ, ವೈದ್ಯೆರಾಗಲಿ ಜನಸಾಮಾನ್ಯರಿಗೆ ತಿಳಿ ಹೇಳಲಿಲ್ಲ.
ಇದರ ಫಲವಾಗಿ ರೈತರು ಕಷ್ಟಪಟ್ಟು ಬೆಳೆದ ತೆಂಗಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರವಲ್ಲ ಸ್ಥಳೀಯ ಮಾರುಕಟ್ಟೆಯಲ್ಲೂ ಬೆಲೆ ಕುಸಿದು ಬಿದ್ದಿದೆ. ಕೇವಲ ಕಾಯಿಯನ್ನು ನಾವು ಅಡುಗೆಗೆ ಬಳಸುವಂತಾಗಿದೆ. ಸಾಲದ್ದಕ್ಕೆ ಇತ್ತೀಚೆಗೆ ತೆಂಗಿನ ಕಾಯಿನ್ನೂ ಬಳಸಿದರೆ ಕೊಬ್ಬು ಹೆಚ್ಚಾಗುತ್ತದೆ ಎನ್ನುತ್ತಲೇ ಫಾಸ್ಟ್ ಫುಡ್ ಪ್ಯಾಕೆಟ್ ಸೇವಿಸುವ ಸಂಸ್ಕೃತಿ ಮೆರೆಯುತ್ತಿದೆ. ಇದೆಲ್ಲದರಿಂದ ಲಾಭ ಮಾತ್ರ ಅಮೆರಿಕ ಹಾಗೂ ಪಶ್ಚಿಮ ರಾಷ್ಟ್ರಗಳಿಗೆ. ಇಂದಿಗೂ ಅದು ತೃತೀಯ ರಾಷ್ಟ್ರಗಳಿಗೆ ತನ್ನ ಎಣ್ಣೆಯನ್ನು ಬ್ಯಾರಲ್‌ಗಟ್ಟಲೆ ರಫ್ತು ಮಾಡುತ್ತ ಲಾಭ ಗಳಿಸುತ್ತಲೇ ಇದೆ. ನಮ್ಮ ತೆಂಗು ಮೂಲೆ ಸೇರಿ ಕೊಳೆಯುತ್ತಿದೆ.
ಆದರೆ ಇಷ್ಟಾದರೂ ಕರಾವಳಿ ಭಾಗದಲ್ಲಿ ಸಾವಿರಾರು ವರ್ಷಗಳಿಂದ ಕಡಲ ತೀರದ ಜನ ಅಡುಗೆಗೆ ತೆಂಗಿನ ಎಣ್ಣೆಯನ್ನೇ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಬೇರೆ ಪ್ರದೇಶದ ಜನರಿಗಿಂತ ಇಂದಿಗೂ ಅವರು ಹೆಚ್ಚು ಆರೋಗ್ಯವಾಗಿದ್ದಾರೆ. ಇದಲ್ಲದೆ ಆಯುರ್ವೇದ ಕೂಡ ತೆಂಗಿನ ಎಣ್ಣೆ ಬಳಕೆ ಒಳ್ಳೆಯದು ಎನ್ನುತ್ತದೆ. ಅನಾದಿ ಕಾಲದಿಂದಲೂ ಸಕಲ ರೋಗ ನಿವಾರಣೆಗೂ ಆಯುರ್ವೇದದಲ್ಲಿ ತೆಂಗಿನ ಎಣ್ಣೆಯನ್ನೇ ಬಳಕೆ ಮಾಡಲಾಗುತ್ತಿದೆ. ಇಷ್ಟಾದರೂ ತೆಂಗಿನೆಣ್ಣೆ ಬಳಕೆ ಬಗ್ಗೆ ಯಾಕೆ ತಾತ್ಸಾರ...?
ತೆಂಗಿನ ಅನುಕೂಲ:
*ತೆಂಗಿನ ಎಣ್ಣೆಯಿಂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. *ಬ್ಯಾಕ್ಟೀರಿಯಾ, ವೈರಾಣುಗಳು ದೇಹ ಪ್ರವೇಶಿಸುವುದನ್ನು ತಡೆಯಬಲ್ಲದು. *ಸಾಮಾನ್ಯ ತಂಡಿ ಅಥವಾ ಶೀತ, ಜ್ವರ, ಹೆಪಟೈಟೀಸ್, ..... ಎಚ್‌ಐವಿ ಮುಂತಾದ ಕಾಯಿಲೆಯನ್ನೂ ತಡೆಯಬಲ್ಲ ಶಕ್ತಿಯಿದೆ. *ತೆಂಗಿನ ಎಣ್ಣೆಯಲ್ಲಿರುವ ಲೂರಿಕ್ ಆಸಿಡ್(....) ತಾಯಿ ಎದೆ ಹಾಲಿನಷ್ಟೇ ಉತ್ಕೃಷ್ಟ ಮತ್ತು ಪೌಷ್ಠಿಕಾಂಶಯುಕ್ತವಾದದ್ದು. * ಕೊಬ್ಬರಿ ಎಣ್ಣೆ ಬಳಕೆಯಿಂದ ಶೇ.೫೦ ಎದೆ ಹಾಲು ವೃದ್ಧಿಯಾಗುತ್ತದೆ. *ಆಯುರ್ವೇದದಲ್ಲಿ ರೋಗ ನಿವಾರಣೆಗೆ ಇದೇ ಎಣ್ಣೆ ಬಳಕೆ.
ಜನಜಾಗೃತಿ ಆಂದೋಲನ:
ಸೆ. ವಿಶ್ವ ತೆಂಗು ದಿನ. ಹೀಗಾಗಿ ನಮ್ಮ ತೆಂಗು ಹಾಗೂ ಅದರ ಎಣ್ಣೆ ಮತ್ತು ಅದರಿಂದ ತಯಾರಿಸುವ ಉತ್ಪನ್ನಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಇಂದಿನಿಂದ ಎರಡು ದಿನಗಳ ಕಾಲ ಸೈಕಲ್ ಜಾಥಾ ಆಯೋಜಿಸಲಾಗಿದೆ. ಬೆಳಗ್ಗೆ ೧೦ಕ್ಕೆ ಚಿಕ್ಕನಾಯಕನ ಹಳ್ಳಿಯಿಂದ ಜಾಥಾ ಆರಂಭವಾಗಿದೆ. ತಿಪಟೂರು, ತುರುವೆಕೆರೆ, ಗುಬ್ಬಿ, ದೊಡ್ಡಬಳ್ಳಾಪುರ ಮಾರ್ಗವಾಗಿ ತುಮಕೂರು ವರೆಗೆ ಜಾಥಾ ಆಗಮಿಸಲಿದೆ.
ಸೆ.೨ರ ಬೆಳಗ್ಗೆ ೧೦ಕ್ಕೆ ಜಾಥಾ ತುಮಕೂರಿಗೆ ಆಗಮಿಸಿದ ನಂತರ ಅಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಈ ಜಾಥಾ ಹಾಗೂ ಸಮಾವೇಶದಲ್ಲಿ ರೈತರು, ಗ್ರಾಹಕರು, ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ತೆಂಗಿನೆಣ್ಣೆ ಹೃದಯಾಘಾತಕ್ಕೆ ಹೇಗೆ ಔಷಧವಾಗಿ ಬಳಕೆಯಾಗುತ್ತದೆ, ಅದರಲ್ಲಿನ ಕೊಬ್ಬಿನಂಶದ ವಾಸ್ತವಾಂಶ ಏನು? ತೆಂಗಿನೆಣ್ಣೆ ಬೇಡಿಕೆ ಹಾಗೂ ಬೆಲೆ ಎರಡನ್ನೂ ಕಳೆದುಕೊಳ್ಳಲು ಜಾಗತಿಕ ಕಾರಣಗಳೇನು? ಇದರ ಗುಣಗಳ ಬಗ್ಗೆ ಜಾಗೃತಿ ಮೂಡದಿರಲು ಹಿಂದಿರುವ ರಾಜಕೀಯವೇನು? ಎಂಬುದರ ಬಗ್ಗೆ ಹೃದಯ ತಜ್ಞ ಡಾ.ಬಿ.ಎಂ.ಹೆಗಡೆ, ಆಹಾರ ತಜ್ಞರಾದ ಕೆ.ಸಿ.ರಘು ಮಾತನಾಡಲಿದ್ದಾರೆ.
ಜಾಥಾದಲ್ಲಿ ಭಾಗವಹಿಸುವವರು ಆಯೋಜಕರಾದ ವಿಶ್ವನಾಥ್ ಅಣೆಕಟ್ಟೆ, ರಘುರಾಮ್( ಮೊ:೮೦೯೫೨೨೨೭೨೮)ಅವರನ್ನು ಸಂಪರ್ಕಿಸಬಹುದು.
ಪ್ರದರ್ಶನ ಮತ್ತು ಮಾರಾಟ:
ಅಂದು ತುಮಕೂರಿನಲ್ಲಿ ತೆಂಗು, ತೆಂಗಿನೆಣ್ಣೆ, ಫಲಪಾಕ, ಸಾಬೂನು, ನಾರು ಉತ್ಮನ್ನಗಳು, ಸಿಹಿ ಪದಾರ್ಥ ಮುಂತಾದ ತೆಂಗು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕೂಡ ನಡೆಯುತ್ತದೆ.

Wednesday, August 25, 2010

ಅವರು ನಿಮ್ಮ ಕಣ್ಣಿಗೆ ಮನುಷ್ಯರಂತೆ ಕಾಣುವುದಿಲ್ಲವೆ ?

‘ಮರು ವಸತಿ ಕೇಂದ್ರದಲ್ಲಿ ಭಿಕ್ಷುಕರ ಸಾವು ಸಾಮಾನ್ಯ ಸಂಗತಿ. ಇದರಲ್ಲಿ ವಿಶೇಷವೇನಿಲ್ಲ’ ಇದು ‘ಸಮಾಜ ಕಲ್ಯಾಣ’ ಖಾತೆ ಸಚಿವರಾಗಿದ್ದ ಡಿ.ಸುಧಾಕರ ಅವರ ಕಲ್ಯಾಣದ ನುಡಿಗಳು.
ಈ ಮಾತನ್ನು ಗಮನಿಸಿದರೆ ಅವರಿಗೆ ಅಕಾರದ ಮದ ಎಷ್ಟರ ಮಟ್ಟಿಗೆ ಏರಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಗೋವುಗಳ ಬಗ್ಗೆಯೇ ಮಾನವೀಯ ಹಿನ್ನೆಲೆಯಲ್ಲಿ ಮಾತನಾಡು ಪಕ್ಷದ ಸಚಿವರಲ್ಲಿ ಮನುಷ್ಯರ ಜೀವಕ್ಕೆ ಎಷ್ಟರಮಟ್ಟಿಗೆ ಬೆಲೆಯಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಎಲ್ಲೆಲ್ಲೊ ಭಿಕ್ಷೆ ಬೇಡಿಕೊಂಡು ಹೇಗೋ ಬದುಕುತ್ತಿದ್ದವರು ಬೆಂಗಳೂರಿನ ಭಿಕ್ಷುಕರ ಕಾಲೊನಿಯೆಂಬ ‘ನರಕ’ದಲ್ಲಿ ಸಾಲು ಸಾಲಾಗಿ ಹೆಣಗಳಾಗಿ ಮಲಗುತ್ತಿದ್ದಾರೆ. ಇಲ್ಲಿವರೆಗೆ ೨೬ ಮಂದಿ ಸಾವಿನ ಕದ ತಟ್ಟಿದ್ದಾರೆ. ಅಕ್ಷರಶಃ ಆ ಭಿಕ್ಷುಕರ ಪುನರ್ವಸತಿ ಕೇಂದ್ರ ಸಾವಿನ ಮನೆಯಾಗಿದೆ.
ಭಿಕ್ಷುಕರು ಎಂದಾಕ್ಷಣ ಎಲ್ಲರೂ ದೂರ ಸರಿಯುತ್ತಾರೆ. ನಿಜ, ಕೊಳಕು ಕೊಳಕಾಗಿರುವ ಭಿಕ್ಷುಕರು ಎದುರು ಬಂದರೆ ಬಹುತೇಕ ಮಂದಿ ಗೊಣಗುತ್ತಲೇ ಆತನನ್ನು ದೂರ ಕಳುಹಿಸುತ್ತಾರೆ. ಆದರೆ ಅದೇ ಭಿಕ್ಷುಕರು ನಾಯಿಗಳ ಹಾಗೆ ಸಾಮೂಹಿಕವಾಗಿ ಮಲಗಿದ್ದಲ್ಲಿ ಹೆಣವಾಗುತ್ತಾರೆ ಎಂದರೆ ಗೊಣಗಿದವರೂ ಸುಮ್ಮನೆ ಕೂರುವುದಿಲ್ಲ. ಹೀಗೆ ಸಾಲು ಸಾಲು ಹೆಣಗಳುರುಳಿದ್ದು ಅಕಾರಿಗಳ, ಸಂಭಂಸಿದವರ ನಿರ್ಲಕ್ಷ್ಯದಿಂದಲೇ ಎನ್ನುವುದನ್ನ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಜತೆಗೆ ತಿಂಗಳಲ್ಲಿ ಅಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ಹೋದ ಪ್ರಾಣ ಮತ್ತೆ ಬರಲು ಸಾಧ್ಯವೇ?
ಇದೊಂದೇ ಅಲ್ಲ, ರಾಜ್ಯದಲ್ಲಿ ಇಂಥ ೨೦ ಕಡೆಗಳಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರಗಳಿವೆ. ಆದರೆ ಧಾರವಾಡ ಒಂದನ್ನು ಹೊರತುಪಡಿಸಿದರೆ ಉಳಿದ ೧೯ ಕೇಂದ್ರಳಲ್ಲಿರುವ ಬಹುತೇಕ ಭಿಕ್ಷುಕರ ಸ್ಥತಿ ಬೆಂಗಳೂರಿನ ಭಿಕ್ಷುಕರಿಗಿಂತ ಭಿನ್ನವಾಗಿಯೇನು ಇಲ್ಲ!
ಸರಕಾರದಿಂದ ಭಿಕ್ಷುಕರ ಹೆಸರಿನಲ್ಲಿ ಬಿಡುಗಡೆಯಾಗುವ ಕೋಟ್ಯಂತರ ಹಣವನ್ನು ಸಂಪೂರ್ಣವಾಗಿ ಸ್ವಾಹ ಮಾಡಿ ಅಲ್ಲಿನ ಭಿಕ್ಷುಕರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣುತ್ತಿದೆ. ಆದರೆ ಈಗ ಬೆಂಗಳೂರಿನ ಬೆಗ್ಗರ್ಸ್ ಕಾಲೊನಿಯಲ್ಲಿ ೧೧ ಮಂದಿ ಏಕಕಾಲಕ್ಕೆ ಮೃತಪಟ್ಟ ಕಾರಣಕ್ಕೆ ಇವುಗಳ ನಗ್ನ ಸತ್ಯ ಬಯಲಾಗಿದೆ. ಇಲ್ಲಿವರೆಗೆ ಭಿಕ್ಷುಕರನ್ನು ಕಂಡಾಕ್ಷಣ ‘ಈ ಭಿಕ್ಷುಕರಿಗೆ ಅಲ್ಲೆಲ್ಲೊ ಒಂದು ಕಾಲೊನಿ ಇದೆಯಂತೆ. ಅಲ್ಲಿ ಹೋಗಿ ನೆಮ್ಮದಿಯಿಂದಿರಬಾರ‍್ದಾ..?’ ಎಂದು ಗೊಣಗುತ್ತಿದ್ದವರೂ ಕೂಡ ‘ಹೇಗೊ ಇಲ್ಲೇ ಬದುಕಲಿ ಬಿಡಿ’ ಎನ್ನುವಷ್ಟರ ಮಟ್ಟಿಗೆ ಭಯಾನಕ ಚಿತ್ರ ಹೊರ ಬಿದ್ದಿದೆ.
ತಿಂಗಳಿಗೆ ಇಂತಿಷ್ಟು ಭಿಕ್ಷುಕರನ್ನು ಈ ಕಾಲೊನಿಗೆ ತಂದು ತುಂಬಬೇಕು ಎಂದು ಸಚಿವ ಸುಧಾಕರ್ ರಚಿಸಿದ ‘ಸ್ಪಷೆಲ್ ಡ್ರೈವ್’ ನಿಂದಾಗಿ ೧೭೦೦ಕ್ಕೂ ಹೆಚ್ಚು ಮಂದಿಯನ್ನು ನಾಯಿಗಳ ಹಾಗೆ ಹಿಡಿದು ತಂದು ಇಲ್ಲಿ ಕುರಿಗಳ ಹಾಗೆ ತುಂಬಲಾಗಿತ್ತು. ಹಾಗೆ ಮಾಡುವಾಗ ಅವರ ಬಳಿ ಇದ್ದ ಚಿನ್ನಾಭರಣಗಳನ್ನೂ ಕಿತ್ತುಕೊಂಡು ‘ಸಾಧನೆ’ ಮೆರೆದ ಅಕಾರಿಗಳು ಈಗ ಸದ್ದು ಗದ್ದಲವಿಲ್ಲದೆ ಅಲ್ಲಿಂದ ಮಾಯವಾಗಿದ್ದಾರೆ.
ಮನುಷ್ಯ ಸಂಬಂಧಗಳೇ ಮಾಯವಾಗುವ ಕಾಲದಲ್ಲಿ ಪಾಪ ಈ ಭಿಕ್ಷುಕರ ಬಗ್ಗೆ ಅದ್ಯಾವ ಅಕಾರಿಗಳಿಗೆ ತಾನೆ ಕನಿಕರ ಹುಟ್ಟಬೇಕು ಹೇಳಿ? ಬಹುಶಃ ಇಲ್ಲಿನ ಅಕಾರಿಗಳಿಗೆ ಅವರು ಮನುಷ್ಯರಂತೆಯೇ ಕಾಣುತ್ತಿಲ್ಲವೆ? ಈ ಪ್ರಕರಣ ನಡೆದ ಬಳಿಕ ಈ ನಿರಾಶ್ರಿತರ ಕೇಂದ್ರದಲ್ಲಿ ನಡೆ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಇಲ್ಲಿ ತಿಂಗಳಿಗೆ ಹತ್ತಾರು ಭಿಕ್ಷುಕರು ಕೊನೆಯುಸಿರೆಳೆಯುತ್ತಿದ್ದರು. ಅವುಗಳನ್ನು ಸದ್ದಿಲ್ಲದೆ ಪೀಣ್ಯಾದ ಚಿತಾಗಾರದಲ್ಲಿ ಯಾವುದೇ ಶವಪರೀಕ್ಷೆ ನಡೆಸದೆ ಸುಟ್ಟು ಹಾಕುತ್ತಿದ್ದರು ಎನ್ನುವ ಅಂಶ ಕೂಡ ಬಯಲಾಗಿದೆ. ಹೀಗೆ ಸಾಗಿದ ಇಲ್ಲಿನ ಅಕಾರಿಗಳ ದರ್ಪದಲ್ಲಿ ಕೆಲ ತಿಂಗಳೀಚೆಗೆ ೨೧೯ಕ್ಕೂ ಹೆಚ್ಚು ಮಂದಿಯನ್ನು ಸುಟ್ಟು ಹಾಕಿರುವ ಶಂಕೆ ಹೊಗೆಯಾಡುತ್ತಿದೆ.
ಸರಕಾರಿ ಸಂಬಳ ಸಾಲದೆ ಭಿಕ್ಷುಕರಿಗಾಗಿ ಬಿಡುಗಡೆ ಮಾಡುವ ಹಣದಲ್ಲೂ ತಿಂದು ತೇಗುವ ಅಕಾರಿಗಳ ದಾಹ ಬಹುಶಃ ಇನ್ನೂ ಇಂಗಿದಂತೆ ಕಾಣುತ್ತಿಲ್ಲ. ೨೦೦೪ರಲ್ಲಿ ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗಲೇ ಈ ಪುನರ್ವಸತಿ ಕೇಂದ್ರದಲ್ಲಿ ಅವ್ಯವಹಾರ ನಡೆಯುತ್ತಿತ್ತು. ಅಲ್ಲಿನ ಭಿಕ್ಷುಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರು ನೀಡಲಾಗಿತ್ತು. ಆದರೆ ಆಗ ಕೂಡ ಆ ಅಕಾರಿಗೆ ಯಾವುದೇ ಶಿಕ್ಷೆಯಾಗಲಿಲ್ಲ. ಬದಲಿಗೆ ಪ್ರಮೋಷನ್ ಕೊಟ್ಟರು!
ಮುಖ್ಯಮಂತ್ರಿಯವರೇ ಹೇಳಿದ ಹಾಗೆ ‘ಇಲ್ಲಿಗೆ ಬರುವ ಅಕಾರಿಗಳು ಸಂಬಳಕ್ಕೆ ಬರುತ್ತಾರೆ’, ಜತೆಗೆ ಗಿಂಬಳಕ್ಕು ಹಾತೊರೆಯುತ್ತಾರೆ. ಹೀಗಾಗಿಯೇ ಇಲ್ಲಿ ಸೇವಾ ಮನೋಭಾವ ಮಾಯವಾಗಿದೆ. ಈ ಕೇಂದ್ರದ ಸುಪರ್ದಿಯಲ್ಲಿ ೩೧೦ ಎಕರೆ ಭೂಮಿಯಿದೆ. ಅದನ್ನು ಕಬಳಿಸಲು ಹಲವು ವರ್ಷಗಳ ಹಿಂದಿನಿಂದಲೂ ಯತ್ನ ನಡೆಯುತ್ತಲೇ ಇದೆ. ಹೀಗೆ ಇಲ್ಲಿ ನಡೆಯುವ ಅವ್ಯವಹಾರಗಳು ಒಂದೆರಡಲ್ಲ. ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಇಲ್ಲಿನ ಜನರಿಗೆ ಚಿತ್ರ ಹಿಂಸೆ ನೀಡುತ್ತಾ ಅವರನ್ನು ಅಕ್ಷರಶಃ ನಿರ್ಗತಿಕರನ್ನಾಗಿ ಮಾಡಲಾಗಿದೆ.
ನಾಗರಿಕ ಸಮಾಜಕ್ಕೆ ಅವಮಾನವಾಗಬಾರದು ಎಂಬ ಕಾರಣಕ್ಕಾಗಿಯೇ ರಾಜ್ಯದಲ್ಲಿ ೧೯೪೮ರಲ್ಲಿಯೇ ನಿರ್ಗತಿಕರ ಪುನರ್ವಸತಿ ಕೆಂದ್ರ ಕಲ್ಪನೆಯನ್ನು ಮೈಸೂರು ಅರಸರು ತಂದಿದ್ದರು. ಅದರ ಫಲವಾಗಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅದೇ ಸಮಯದಲ್ಲಿ ಒಂದು ಪುನರ್ವಸತಿ ಕೇಂದ್ರ ತೆರೆಯಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದನ್ನು ಸ್ಥಳಾಂತರಿಸಿ, ಅದಕ್ಕೆ ಭಿಕ್ಷುಕರ ಕಾಲೊನಿ ಎಂದು ನಾಮಕರಣ ಮಾಡಿದರೆ ಹೊರತು ಅಲ್ಲಿಗೆ ಹಿಡಿದು ತರುವ ಜನರಿಗೆ ಪುನರ್ವಸತಿ ಕಲ್ಪಿಸಲೇ ಇಲ್ಲ. ಭಿಕ್ಷುಕರು ಬೀದಿ ಬೀದಿಯಲ್ಲಿ ತಿರುಗುತ್ತಾ ಜನರಿಗೆ ಕಿರಿಕಿರಿ ಮಾಡುವುದು ಸರಿಯಲ್ಲ, ಅವರಿಗೂ ಕರಕುಶಲ ಕಲೆ ಕಲಿಸಿ, ಉದ್ಯೋಗ ಒದಗಿಸಬೇಕು, ಅವರೂ ಎಲ್ಲರಂತೆ ಬದುಕಬೇಕೆಂದು ಈ ಪುನರ್ವಸತಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಯಿತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.
ಈ ಪುನರ್ವಸತಿ ಕೇಂದ್ರದ ಉಸ್ತುವಾರಿಗಾಗಿಯೇ ಒಂದು ಸಮಿತಿ ಮಾಡಿ ಅದಕ್ಕೆ ಮಂಜೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಸಾಲದ್ದಕ್ಕೆ ಅವರಿಗೆ ಎಲ್ಲ ಸರಕಾರಿ ಸವಲತ್ತು, ಕಾರು ಎಲ್ಲವೂ ಇತ್ತು. ಪಾಪ ಅವರು ಅಕಾರದ ಅಮಲಿನಲ್ಲಿ ತೇಲುತ್ತಿದ್ದರೆ ಹೊರತು ಒಮ್ಮೆಯೂ ಇತ್ತ ಸುಳಿದಿರಲಿಲ್ಲ. ಜತೆಗೆ ಸರಕಾರ ಕೂಡ ಇಷ್ಟೆಲ್ಲ ಭಿಕ್ಷುಕರನ್ನು ನೋಡಿಕೊಳ್ಳಲು ಪಕ್ಕದಲ್ಲಿಯೇ ಇರುವ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರನ್ನು ಬಿಟ್ಟಿದೆ !
ಹೀಗೆ ನಿಜವಾದ ಉದ್ದೇಶಗಳೆಲ್ಲವೂ ಗಾಳಿಗೋಪುರವಾಗಿದ್ದು, ಕೈಗೆ ಸಿಕ್ಕ ಅಮಾಯಕರು, ಬಸ್, ರೈಲು ಕಾಯುತ್ತಿದ್ದವರು, ಕೂಲಿ ಕಾರ್ಮಿಕರು, ಕೆಲವು ನೌಕರರನ್ನೂ ಎಳೆದು ತಂದು ಇಲ್ಲಿ ನಿಜಕ್ಕೂ ನಿರ್ಗತಿಕರನ್ನಾಗಿ ಮಾಡಲಾಗಿದೆ. ಇದೆಲ್ಲವೂ ಸಮಾಜ ಕಲ್ಯಾಣ ಇಲಾಖೆಯ ಅಕಾರಿಗಳಿಗೆ, ಸಚಿವರಿಗೆ ಗೊತ್ತಿತ್ತು! ಆದರೆ ಅವರೆಲ್ಲಾ ಭಿಕ್ಷುಕರು, ಅವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬ ತಾತ್ಸಾರದಿಂದ ದಿನ ದೂಡುತ್ತಿದ್ದರು. ಅದರ ಫಲವಾಗಿ ೨೬ ಮಂದಿ ಸ್ಮಶಾನ ಸೇರಿದ್ದಾರೆ.
ಈ ದುರಂತಕ್ಕೆ ಮುಂಚೆಯೂ ಇಲ್ಲಿ ಸಾವು ನೋವು ಸಾಮಾನ್ಯವಾಗಿತ್ತು! ಆದರೆ ಅದು ಬೆಳಕಿಗೆ ಬಂದಿರಲಿಲ್ಲ. ತಿಂಗಳಿಗೆ ಹತ್ತಾರು ಮಂದಿ ಇಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ‍್ಯಾರನ್ನೂ ಶವ ಪರೀಕ್ಷೆ ಕೂಡ ಮಾಡದೆ ಸುಟ್ಟು ಹಾಕಿದ್ದಾರೆ. ಸೆಕ್ಷನ್ ೫೯ರ ಪ್ರಕಾರ ಕಸ್ಟಡಿಯಲ್ಲಿರುವವರು ಯಾರೇ ಮೃತಪಟ್ಟರೂ ಅವರನ್ನು ಶವಪರೀಕ್ಷೆ ಮಾಡಬೇಕು. ಅದೂ ಕೂಡ ಇಲ್ಲಿ ಆಗಿಲ್ಲ. ಸಚಿವ ಸುಧಾಕರ್ ಮಾತಿನಂತೆ ಅವೆಲ್ಲವೂ ‘ಸಾಮಾನ್ಯ ಸಾವು’. ಆದರೆ ಅವರೂ ಮನುಷ್ಯರು ಎನ್ನುವ ಆಲೋಚನೆ ಅಲ್ಲಿದ್ದ ಒಬ್ಬನೇ ಒಬ್ಬ ಅಕಾರಿಗೂ ಬರಲೇ ಇಲ್ಲವೆ ? ಅವರ ದೃಷ್ಟಿಯಲ್ಲಿ ಭಿಕ್ಷುಕರ ಕಾಲೊನಿಯಲ್ಲಿದ್ದವರೆಲ್ಲ ಪ್ರಾಣಿಗಳೇ? ಕೈಗೆ ಸಿಕ್ಕವರನ್ನೆಲ್ಲಾ ತಂದು ಈ ದೊಡ್ಡಿಯಲ್ಲಿ ತುಂಬಿದವರಿಗೆ ಸಂಬಂಕರು ಯಾರಾದರೂ ಇದ್ದಾರೆಯೇ ಎಂದು ಹುಡುಕುವ ವ್ಯವದಾನ ಕೂಡ ಇರಲಿಲ್ಲವೆ? ಅವರೂ ತಮ್ಮ ಅಪ್ಪ,-ಅಮ್ಮ, ಅಣ್ಣ- ತಂಗಿ, ಅಕ್ಕ -ತಮ್ಮನಂತೆಯೇ ಮನುಷ್ಯರು ಎನಿಸಲಿಲ್ಲವೆ? ಛೇ... ಎಂಥ ದುರುಳ ಜನ...

Monday, July 5, 2010

"ಜ್ಯೋತಿಬಸು'' ಬಿಡುಗಡೆ''


ಈ ದೇಶ ಕಂಡ ಅದ್ಭುತ ನಾಯಕ ಜ್ಯೋತಿ ಬಸು. ಅವರ ಬದುಕು, ರಾಜಕೀಯ ನಡೆ, ನಡವಳಿಕೆ, ಸಂಯಮ, ತಾಳ್ಮೆ ಹೀಗೆ ಎಲ್ಲವೂ ಇಂದಿನ ಯುವಕರಿಗೆ ಮಾದರಿ.
ಅಂತ ಮಹಾನ್ ನಾಯಕನ ಹುಟ್ಟು ಹಬ್ಬದ ಪ್ರಯುಕ್ತ ಅವರ ಇಡೀ "ಜೀವನ ಚರಿತ್ರೆ''ಯನ್ನ ಪದ್ಮಶ್ರೀ ಪುರಸ್ಕೃತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ನಮ್ಮಗಳ ಮುಂದೆ ಇಡಲಿದ್ದಾರೆ... ಮರೆಯದೆ ಬನ್ನಿ, ಭಾಗವಹಿಸಿ...

Friday, June 18, 2010

ಕೇಳದೆ ನಿಮಗೀಗ ಪ್ರಕೃತಿ ನರಳುವ ಕೂಗು...

‘ಪ್ರಕೃತಿಯನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ’ ಎಂಬ ಮಾತಿದೆ. ಅದು ನೂರಕ್ಕೆ ನೂರು ಸತ್ಯ. ಪ್ರತಿನಿತ್ಯ ನಾವು ‘ಅಭಿವೃದ್ಧಿ’ ಹೆಸರಿನಲ್ಲಿ ಪ್ರಕೃತಿದತ್ತವಾಗಿ ಬೆಳೆದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮರಗಳನ್ನು ಕ್ಷಣಾರ್ಧದಲ್ಲಿ ಸರ್ವನಾಶ ಮಾಡುತ್ತಿದ್ದೇವೆ. ಆದರೆ ಅದಕ್ಕೆ ಪರ್ಯಾಯವಾಗಿ ಅದೆಷ್ಟು ಮರಗಳನ್ನು ಸಾಕಿ ಬೆಳೆಸಿದ್ದೇವೆ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡರೆ ನಾಲಗೆಯಲ್ಲಿ ಪದಗಳೇ ಉಸುರುವುದಿಲ್ಲ...
ನಿಜ, ದಿನಗಳೆದಂತೆ ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯ ಎಲ್ಲೆ ಮೀರುತ್ತಿದೆ. ಸಹನೆಯ ಕಟ್ಟೆಯೊಡೆದು ಪ್ರಕೃತಿ ಕೂಡ ಒಂದಿಲ್ಲೊಂದು ಹೊಸ ಹೊಸ ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಲೇ ಇದೆ. ಮಳೆಯನ್ನೇ ನಂಬಿ ಬೆಳೆ ಬೆಳೆಯುವ ರೈ ಕೂಡ ಸಂಪೂರ್ಣ ಸೋತು ಸುಣ್ಣವಾಗಿದ್ದಾನೆ.
ಇದು ಯಾಂತ್ರಿಕ ಯುಗ. ಈಗ ಎಲ್ಲರಿಗೂ ಸೌಲಭ್ಯಗಳು ಮನೆ ಬಾಗಿಲಿಗೆ ಎಟಕಬೇಕು. ಹೀಗಾಗಿ ಯಾರೂ ಕೂಡ ಕಷ್ಟಪಡಲು ತಯಾರಿಲ್ಲ. ಏನೆಲ್ಲಾ ಅನುಕೂಲಗಳ ನಡುವೆಯೂ ಇನ್ನೂ ಆಸೆ ತೀರುತ್ತಿಲ್ಲ. ಇದರಿಂದಾಗಿ ಪ್ರತಿನಿತ್ಯ ಹೆಜ್ಜೆ ಹೆಜ್ಜೆಗೂ ಪ್ರತಿಯೊಬ್ಬರು ಒಂದಿಲ್ಲೊಂದು ರೀತಿ ಮರಗಳನ್ನು ಬೆಳೆಸುವ ಬದಲು ಅವುಗಳನ್ನು ಧರೆಗುರುಳಿಸಿ ‘ನಾಟಾ’ ತಯಾರು ಮಾಡುವ ಬಗ್ಗೆಯೇ ಆಲೋಚಿಸುತ್ತಿದ್ದೇವೆ. ಈ ದು ಮರಗಳು ಮರೆಯಾಗುತ್ತಲೇ ಇವೆ. ಜತೆಗೆ ದಟ್ಟ ಕಾನನವನ್ನು ಕಾಪಾಡಲೆಂದೇ ಸೃಷ್ಟಿ ಮಾಡಿರುವ ‘ಅರಣ್ಯ ಇಲಾಖೆ’ ಕೂಡ ಅನಾಯಾಸವಾಗಿ ಮಲಗಿದೆ. ಮರಗಳನ್ನು ಬೆಳೆಸಲೆಂದು ಸರಕಾರದಿಂದ ಬಿಡುಗಡೆಯಾಗುವ ಕೋಟಿ ಕೋಟಿ ಹಣದಲ್ಲಿ ಸಲೀಸಾಗಿ ನೀಲಿಗಿರಿ, ಅಕೇಶಿಯಾದಂಥ ‘ರಾಕ್ಷಸಿ ಮರ’ಗಳನ್ನು ಬೆಳೆಸಿ ಅರಣ್ಯ ಇಲಾಖೆ ಕೈ ತೊಳೆದುಕೊಳ್ಳುತ್ತಿದೆ. ಇದು ಇಂದಿನ ಕತೆಯಲ್ಲ. ಕಳೆದ ಇಪ್ಪತೈದು ವರ್ಷಗಳೀಚೆಗೆ ನಡೆಯುತ್ತಿರುವ ನಿರಂತರ ಪ್ರಕ್ರಿಯೆ.
ಹೀಗಾಗಿ ದಿನಕಳೆದಂತೆ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ನೂರಾರು ಅಡಿ ಬೋರ್‌ವೆಲ್ ಕೊರೆಯಿಸಿದರೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಗಾಳಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗಿ ಓಜೋನ್ ಪದರ ದಿನನಿತ್ಯ ಹರಿದು ಛಿದ್ರವಾಗುತ್ತಿದೆ. ಜನರ ಆರೋಗ್ಯ ಹದಗೆಟ್ಟು ದಿನಕಳೆದಂತೆ ಹೊಸ ಹೊಸ ಕಾಯಿಲೆಗಳು ದಾಂಗುಡಿಯಿಡುತ್ತಿವೆ. ಜತೆಗೆ ಸರಿಯಾದ ಸಮಯದಲ್ಲಿ ಮಳೆಯಿಲ್ಲದೆ ರೈತರು ಬೀದಿಗೆ ಬೀಳುತ್ತಿದ್ದಾರೆ. ಅನ್ನ, ನೀರಿಲ್ಲದೆ ನಿತ್ಯವೂ ಪರದಾಡುತ್ತಿದ್ದಾರೆ.
ಈಗಾಲೇ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿಯಂತ ಜಿಲ್ಲೆಗಳಲ್ಲಿ ಕುಡಿಯಲು ಕೂಡ ನೀರಿಲ್ಲ. ಬೆಂಗಳೂರಿನಂಥ ಮಹಾನಗರಗಳಲ್ಲಿ ಇದ್ದ ೭೬೧ ಕೆರೆಗಳೂ ಮಾಯವಾಗಿ ನೀರಿಗಾಗಿ ಹಾಹಾಕಾರ ಶುರುವಾಗುತ್ತಿದೆ. ಆದರೂ ನಗರಗಳ ವಿಸ್ತರಣೆ ಎನ್ನುವುದು ನಿರಂತರವಾಗಿ ನಡೆದೇ ಇದೆ. ಪರಿಸರವನ್ನು ನಾಶ ಮಾಡಿ ಹೀಗೆ ಮಾಡುತ್ತಿರುವ ಅಭಿವೃದ್ಧಿಯಿಂದಲೇ ಮನುಕುಲ ಮಾತ್ರವಲ್ಲ , ಸಕಲ ಜೀವರಾಶಿಗಳೂ ವಿನಾಶದಂಚಿಗೆ ಹತ್ತಿರವಾಗುತ್ತಿವೆ ಎಂಬ ಸತ್ಯದ ಬಗ್ಗೆ ಯಾರೂ ಯೋಚಿಸುತ್ತಿಲ್ಲ.
ಇದಲ್ಲದೆ ಈಗ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ನೆಪದಲ್ಲಂತೂ ಮರಗಳ ಸಾಮೂಹಿಕ ಮಾರಣಹೋಮ ನಡೆಯುತ್ತಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಎಲ್ಲೂ ಮರಗಳನ್ನು ನೆಡುತ್ತಿಲ್ಲ. ಶಿವಮೊಗ್ಗ, ಬೆಳಗಾವಿ, ತುಮಕೂರು, ರಾಯಚೂರು ವಿಭಾಗಗಳಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು ಕೆಶಿಪ್ (ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್) -೧ರ ಅಡಿ ೨,೩೯೫ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದು, ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಅದಕ್ಕಾಗಿ ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲು ಅರ್ಜಿ ಸಲ್ಲಿಸಲಾಗಿದೆ.
ರಸ್ತೆಗಳ ನಿರ್ಮಾಣವಾಗುತ್ತದೆ ಎಂಬ ಕಾರಣಕ್ಕೆ ಅಂಧಕಾರದಲ್ಲಿ ಮುಳುಗುವುದು ಯಾವ ನ್ಯಾಯ? ಅಭಿವೃದ್ಧಿ ಬೇಕೆ ಬೇಕು ಎಂದಾದರೆ ಅದಕ್ಕೆ ಪರ್ಯಾಯವಾಗಿ ಮರಗಳನ್ನಾದರೂ ನೆಡಬೇಕಲ್ಲ? ಅದೂ ಇಲ್ಲ. ಗಿಡ ಬೆಳೆಸುವ ಗೋಜಿಗೇ ಹೋಗದೆ ೨,೩೯೫ಕಿ.ಮೀ. ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕೆಶಿಪ್-೧ರ ಅಡಿ ೧,೭೭,೦೦೦ ಮರಗಳನ್ನು ಧರೆಗುರುಳಿಸಲಾಗಿದೆ. ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ೫೫,೫೯೬ ಮರಗಳನ್ನು ಕಡಿದು ಹಾಕಲು ತಂತ್ರ ರೂಪಿಸಲಾಗಿದೆ. ಇದರಲ್ಲಿ ಈಗಾಗಲೇ ೯,೮೦೮ ಮರಗಳನ್ನು ಸರ್ವನಾಶ ಮಾಡಿಯಾಗಿದೆ. ಉಳಿದ ೪೫,೮೦೮ ಮರಗಳಿಗೆ ಸದ್ಯದಲ್ಲಿಯೇ ಕೊಡಲಿ ಏಟು ಬೀಳಲಿದೆ.
ಇದು ಕೇವಲ ಸರಕಾರಿ ಜಾಗದಲ್ಲಿರುವ ಮರಗಳ ಸಂಖ್ಯೆ. ಅದರಲ್ಲೂ ಇಲಾಖೆ ನೀಡುವ ಮಾಹಿತಿ. ಖಾಸಗಿ ಜಮೀನು ಸೇರಿದಂತೆ ಲೆಕ್ಕದಿಂದ ತಪ್ಪಿದ ಲಕ್ಷಾಂತರ ಮರಗಳ ಮಾರಣಹೋಮ ನಡೆದಿದೆ ಎನ್ನುವ ಕೂಗು ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಆದರೆ ಇದ್ಯಾವುದೂ ಇಲಾಖೆಯ ಅಥವಾ ಸಂಬಂಸಿದ ಅಕಾರಿಗಳ, ಜನಪ್ರತಿನಿಗಳ ಕಿವಿಗೆ ಬೀಳುತ್ತಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ, ಕೋಟಿಗಟ್ಟಲೆ ಬೆಲೆ ಬಾಳುವ ಮರಗಳನ್ನು ಹೀಗೆ ಹಿಂದು ಮುಂದು ನೋಡದೆ ಗುತ್ತಿಗೆ ಕೊಟ್ಟು ಕತ್ತರಿಸಿ ಹಾಕುವ ಅರಣ್ಯ ಇಲಾಖೆಯ ಅಕಾರಿಗಳಿಗೆ ಅಷ್ಟೇ ಸಲೀಸಾಗಿ ಮರಗಳನ್ನು ಬೆಳೆಸಲು ಆದೀತೆ...? ಖಂಡಿತಾ ಇಲ್ಲ. ಒಂದು ಮರ ಸ್ವತಂತ್ರವಾಗಿ ಬೆಳೆಯಲು ಅಣಿಯಾಗಬೇಕಾದರೆ ಕನಿಷ್ಠ ೭ ವರ್ಷಗಳಾದರೂ ಬೇಕು. ಅಲ್ಲಿಯವರೆಗೆ ಅವುಗಳನ್ನು ಸಹನೆಯಿಂದ ಸಾಕುವ ವ್ಯವಧಾನ ಈ ಅರಣ್ಯ ಇಲಾಖೆಯ ಸಿಬ್ಬಂದಿಗೆ ಇದೆಯೇ?
ಗಿಡ ನೆಡುವ ಅವಕಾಶ ಸಿಕ್ಕಾಗಲೆಲ್ಲಾ ನೀಲಿಗಿರಿ, ಅಕೇಶಿಯಾದಂಥ ಪರಿಸರಕ್ಕೆ ಮಾರಕವಾದ ಗಿಡಗಳನ್ನು ಬೆಳೆಸಿ ಭೂಮಿಯನ್ನು ಹಾಳು ಮಾಡುವುದರ ಜತೆಗೆ ತಮಗೆ ‘ಆದಾಯ’ ಮಾಡಿಕೊಳ್ಳುವ ಇಂಥವರು ಮಮತೆಯಿಂದ ಮರಗಳನ್ನು ಬೆಳೆಸುವುದಾದರೂ ಎಂದು ? ಅದಿರಲಿ, ಅವುಗಳು ಮನುಷ್ಯನೂ ಸೇರಿದಂತೆ ಪ್ರಾಣಿ, ಪಕ್ಷಿಗಳ ಸಂಕುಲಗಳಿವೆ ನೀಡುವ ಉಸಿರಿಗೆ ಬೆಲೆ ಕಟ್ಟಲಾದೀತೆ...? ಅರಣ್ಯ ಇಲಾಖೆ ಕೇವಲ ನೆಪ ಮಾತ್ರಕ್ಕಿದೆ ಎಂಬ ಮಾತು ಈಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನೈಜವಾಗಿ ಬೆಳೆದ ಕಡೆಗಳಲ್ಲೆಲ್ಲ ‘ಪರವಾನಗಿ’ ಹೆಸರಿನಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕೆಲವು ಅರಣ್ಯ ಇಲಾಖೆಯ ಅಕಾರಿಗಳೇ ಅಗತ್ಯಕ್ಕಿಂತ ಹೆಚ್ಚು ಮರಗಳನ್ನು ಕತ್ತರಿಸುತ್ತಿರುವುದೂ ಬಹಿರಂಗ ಸತ್ಯ. ಆದರೆ ಅವುಗಳ ಜಾಗದಲ್ಲಿ ಇಲಾಖೆ ಬೆಳೆಸುತ್ತಿರುವುದು ಮಾತ್ರ ಕೇವಲ ಪ್ರಕೃತಿ ವಿರೋಯಾದ ಅಕೇಶಿಯಾ ಹಾಗೂ ನೀಲಿಗಿರಿ ಮರಗಳನ್ನು.
ಜತೆಗೆ ಅರಣ್ಯ ಇಲಾಖೆ ಹೇಗೆಂದರೆ ಹಾಗೆ ಮರ ಕಡಿಯಲು ನೀಡುತ್ತಿರುವ ಅನುಮತಿಗೆ ಲೆಕ್ಕವೇ ಇಲ್ಲ. ಜತೆಗೆ ಸಣ್ಣಪುಟ್ಟ ಕಾಮಗಾರಿಗಳಾದರೂ ಅದೇ ನೆಪದಲ್ಲಿ ಬೃಹದಾಕಾರದ ಮರಗಳು ನೆಲಕಚ್ಚುತ್ತಿವೆ. ಅವುಗಳಿಗೆ ಯಾವ ಲೆಕ್ಕವೂ ಇಲ್ಲ. ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಹೆಸರಲ್ಲಿ, ಅಂಡರ್‌ಪಾಸ್, ಅಥವಾ ಮೇಲ್ಸೇತುವೆ ಮುಂತಾದ ಕಾರಣಗಳಿಗಾಗಿ ಎರಡು ವರ್ಷದಿಂದೀಚೆ ಐದು ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಶಿವಮೊಗ್ಗ, ಮಂಡ್ಯ, ಕೋಲಾರ, ತುಮಕೂರು, ಬಳ್ಳಾರಿ ಮುಂತಾದ ನಗರಗಳಲ್ಲಿ ಸಣ್ಣಪುಟ್ಟ ರಸ್ತೆ ವಿಸ್ತರಣೆಗೂ ನೂರಾರು ಮರಗಳನ್ನು ಧರೆಗುರುಳಿಸಲಾಗಿದೆ. ಆದರೆ ಎಲ್ಲೂ ಉತ್ತಮ ತಳಿಯ ಮರಗಳನ್ನು ನೆಟ್ಟಿಲ್ಲ! ಮರಗಳ ಕಳ್ಳಸಾಗಣೆ, ಗಣಿ ಹೆಸರಿನಲ್ಲಂತೂ ಅರಣ್ಯಕ್ಕೆ ಅರಣ್ಯವೇ ಸಮಾಪ್ತಿಯಾಗುತ್ತಿದೆ... ಇವುಗಳ ಬಗ್ಗೆ ಮಾತ್ರ ಪ್ರಶ್ನೆ ಮಾಡುವವರೇ ಇಲ್ಲ.
ಕೆಶಿಪ್ ಅಡಿ ಕಡಿದಿರುವ ಮರಗಳ ಬದಲಿಗೆ ಒಂದು ಕಿ.ಮೀ.ಗೆ ೨೦೦ ಮರಗಳಂತೆ ಮರಗಳನ್ನು ಬೆಳೆಸಿ ನೆಡಲು ಹಾಗೂ ೭ವರ್ಷಗಳ ವರೆಗೆ ಅವುಗಳ ಮುತುವರ್ಜಿ ನೋಡಿಕೊಳ್ಳಲು ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್ ಹಾಗೂ ಅರಣ್ಯ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಅದಕ್ಕೆ ತಗಲುವ ವೆಚ್ಚವನ್ನೂ ಕೆಶಿಪ್ ಭರಿಸಲು ಒಪ್ಪಿಗೆ ನೀಡಿ, ಹಂತ ಹಂತವಾಗಿ ಹಣ ನೀಡುತ್ತಿದೆ. ಆದರೆ ಇಲ್ಲೂ ಅರಣ್ಯ ಇಲಾಖೆ ಇನ್ನೂ ಒಂದೇ ಒಂದು ಗಿಡಗಳನ್ನೂ ಎಲ್ಲೂ ನೆಟ್ಟಿಲ್ಲ !
ಸಂಪದ್ಭರಿತವಾದ ಕಾಡುಗಳನ್ನು ಕಡಿದು ಅಲ್ಲಿ ಜೀವ ವೈವಿಧ್ಯ ವಿರೋ ನೀಲಿಗಿರಿ, ಅಕೇಶಿಯಾ ಬೆಳೆಸಿದ ರೀತಿಯಲ್ಲಿ ರಸ್ತೆಯುದ್ದಕ್ಕೂ ಅರಣ್ಯ ಇಲಾಖೆ ನಾಳೆ ಇದೇ ಮರಗಳನ್ನು ನೆಟ್ಟರೆ ಭೂಮಿಯ ತಾಪಮಾನ ಈಗಿನದ್ದಕ್ಕಿಂತ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಅಂತರ್ಜಲದ ಮಟ್ಟ ಪಾತಾಳ ಸೇರಿ ಕೋಲಾರ ಜಿಲ್ಲೆಯಲ್ಲಿರುವ ನೀರಿನ ಸಮಸ್ಯೆ ಇಡೀ ರಾಜ್ಯಕ್ಕೆ ವಕ್ಕರಿಸಿಕೊಳ್ಳುವುದು ನಿಶ್ಚಿತ. ಆದ್ದರಿಂದ ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಜನಸಾಮಾನ್ಯರೂ ಕೂಡ ಇಂಥ ಮಾರಕ ಹಾಗೂ ಅನಾವಶ್ಯಕ ಅಭಿವೃದ್ಧಿ, ಪರಿಸರ ವಿರೋ ನಿರ್ಧಾರಗಳ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೊಂದು ದಿನ ಉಸಿರಾಡಲೂ ಕೂಡ ಹಣ ನೀಡಿ ಆಮ್ಲಜನಕವನ್ನು ಖರೀದಿಸಬೇಕಾದ ದಿನ ದೂರವಿಲ್ಲ !

Monday, May 17, 2010

ಸುಣ್ಣ ಬೆಣ್ಣೆ ಹಚ್ಚುವ ಪೈಂಟರ್‌ಗಳಿವರು !

ಬಿಜೆಪಿ ಸರಕಾರ ರಾಜ್ಯದಲ್ಲಿ ಅಕಾರಕ್ಕೆ ಬಂದಾಗಿನಿಂದ ಸಮಾಜ ಇಷ್ಟು ಕುಲಗೆಟ್ಟು ಹೋಯಿತೆ ? ಎಂಬ ಪ್ರಶ್ನೆ ಮತ್ತೆ ಮತ್ತೆ ಮನದಾಳದಲ್ಲಿ ಅಲೆಯೆಬ್ಬಿಸುತ್ತಲೇ ಇದೆ. ಎಲ್ಲಿ ನೋಡಿದರಲ್ಲಿ ಕ್ರೈಂ, ಅಮಾನವೀಯತೆ, ಲೈಂಗಿಕ ಕಿರುಕುಳಗಳು ಎಲ್ಲೆ ಮೀರುತ್ತಿವೆ.
ಹಾಗಂತ ಹಿಂದೆ ಇವೆಲ್ಲ ಇರಲಿಲ್ಲವೇ ಎಂದು ಕೇಳಬಹುದು. ‘ಊರು ಎಂದ ಮೇಲೆ ಹೊಲೆಗೇರಿ ಇದ್ದದ್ದೆ’. ಆದರೆ ಅದು ಅಷ್ಟು ಕೊಳಕಾಗಬಾರದು. ಆದರೆ ಇಂಥ ವಾತಾವರಣಕ್ಕೆ ಸಂಪೂರ್ಣ ಕಾರಣ ಬಿಜೆಪಿ ಸರಕಾರ. ಆರಂಭದಲ್ಲಿ ‘ಜೆಡಿಎಸ್ ನಮಗೆ ಮೋಸ ಮಾಡಿತು’. ‘ವಚನ ಭ್ರಷ್ಟರು ಮಾತು ತಪ್ಪಿದರು’ ಎಂದು ಅಳುತ್ತಲೇ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರ ಇನ್ನೂ ‘ಅಳುತ್ತಲೇ ಇದೆ’. ಆರಂಭದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕುಮಾರಸ್ವಾಮಿ ಹಾಗೂ ದೇವೇಗೌಡರ ವಿಚಾರದಲ್ಲಿ ಅಳುತ್ತಿದ್ದರು. ಆನಂತರ ಗಣಿ ರೆಡ್ಡಿಗಳು ಅಳುವಂತೆ ಮಾಡಿದರು. ಮತ್ತೆ ‘ಆಪ್ತ’ ಸ್ನೇಹಿತೆ ಶೋಭಾ ಕರಂದ್ಲಾಜೆಗಾಗಿ ಯಡಿಯೂರಪ್ಪನವರೇ ಕಣ್ಣೀರಿಟ್ಟರು.
ಹೋಗಲಿ ಅದು ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ರೇಣುಕಾಚಾರ್ಯನ ಪುರಾಣ ಬಿಚ್ಚಿಕೊಂಡಿತು. ಅಲ್ಲೋ ಯಡಿಯೂರಪ್ಪ ರೇಣುಕಾನನ್ನು ತಬ್ಬಿಕೊಂಡು ‘ತಂತ್ರ’ ಉಪಯೋಗಿಸಿ ಮಂತ್ರಿ ಮಾಡಿದರು. ಆದರೆ ಗಣಿ ರೆಡ್ಡಿಗಳು ಧೂಳು ಮಾತ್ರ ಕಡಿಮೆಯಾಗಲೇ ಇಲ್ಲ. ಇದೆಲ್ಲದರ ನಡುವೆ ಹಾವೇರಿ ಗೋಲಿಬಾರ್(ಅದರಲ್ಲಿ ಸತ್ತವರು ರೈತರೇ ಅಲ್ಲ ಎಂದಿದೆ ಸರಕಾರಿ ಸಮಿತಿಯ ವರದಿ!), ತಿರುಕ್ಕುರುಳ್ ಪ್ರತಿಮೆ, ಹೊಗೇನಕಲ್ ವಿವಾದ, ಕಾವೇರಿ ವಿವಾದ, ನೈಸ್ ವಿವಾದ, ನಿತ್ಯಾನಂದನ ರಾಸಲೀಲೆ ಹೀಗೆ ಒಂದಲ್ಲಾ ಒಂದು ಪ್ರಕರಣಗಳು ಬೀದಿಗೆ ಬೀಳುತ್ತಲೇ ಬಂದವು.
ಈಗ ಹಾಲಪ್ಪನ ಕಾಮ ಪುರಾಣ. ಆದರೆ ಇಷ್ಟೆಲ್ಲಾ ಘಟನೆಗಳ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ತಮ್ಮ ಹಿತಾಸಕ್ತಿಯನ್ನು ಹಾಗೂ ಪಕ್ಷದಲ್ಲೇ ಇರುವ ಅವರ ವಿರೋ ಬಣ ಅವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತಲೇ ಬಂದಿದ್ದಾರೆ ! ಅಮಾಯಕರು ಮಾತ್ರ ಇಂಥವರ ಮಧ್ಯೆ ಸಿಲುಕಿ ನಲುಗುತ್ತಲೇ ಇದ್ದಾರೆ. ಬೌದ್ಧಿಕವಾಗಿ ವೀಕ್ ಇರುವವರು ಹಾಗೂ ಚೆಡ್ಡಿಗಳಲ್ಲದೆ ಚೆಡ್ಡಿ ಹಾಕಿಕೊಂಡವರು ಮಾತ್ರ ಅಲ್ಲಿ ವಿಲಿ ವಿಲಿ ಒದ್ದಾಡುತ್ತಿದ್ದಾರೆ. ಆರಂಭದಿಂದಲೂ ಚೆಡ್ಡಿಯಲ್ಲೇ ನಿಂತವರು ಬಲವಾಗಿಯೇ ನಿಂತಿದ್ದಾರೆ.
ಮೊನ್ನೆ ನೋಡಿ ಶ್ರೀರಾಮನ ಹೆಸರು ಹೇಳಿಕೊಂಡು ನೈತಿಕತೆ ಭೋದಿಸುತ್ತ ಇಡೀ ರಾಮಾಯಣ, ಮಹಾಭಾರತಗಳನ್ನು ಗುತ್ತಿಗೆ ಪಡೆದವರ ಹಾಗೆ ವರ್ತಿಸುತ್ತಲೇ ಪಾಕಿಸ್ತಾನದ ಮುಸ್ಲೀಂ ಟೆರರಿಸ್ಟ್ ಗಳಂತೆಯೇ ಬೆಳೆದು ನಿಂತಿರುವ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಬಂಡವಾಳ ಬಟಾಬಯಲಾಗಿದೆ(ಹೆಡ್‌ಲೈನ್ಸ್ ಟುಡೆ ಹಾಗೂ ತೆಹಲ್ಕಾ ಕಾರ್ಯಾಚರಣೆ ವೇಳೆ). ಗುಟ್ಟು ರಟ್ಟಾಗುತ್ತಿದ್ದಂತೆ ಆತನ ಕಿರುಚಾಟ, ಅರಚಾಟ ಜೊರಾಗಿಯೇ ಸಾಗಿದೆ. ಬೆಂಗಳೂರಿನ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಕಲಾ ಪ್ರದರ್ಶನವೊಂದರಲ್ಲಿ ಕೋಮು ದಳ್ಳುರಿ ಹಚ್ಚಲು ೬೦ಲಕ್ಷಕ್ಕೆ ಡೀಲ್ ಮಾಡಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾನೆ. ಆದರೆ ಸರಕಾರ ಮಾತ್ರ ಕೇವಲ ಒಂದು ಪ್ರತಿಕ್ರಿಯೆ ನೀಡಿ ಸ್ಥಬ್ದವಾಗಿದೆ. ಯಾಕೆ ?
ನಿತ್ಯಾನಂದನೇನೋ ಧರ್ಮ, ದ್ಯಾನದ ಹೆಸರಿನಲ್ಲಿ ಅಮಾಯಕ ಮಹಿಳೆಯರಿಗೆ ‘ಯೋಗ’ ಹೇಳಿಕೊಟ್ಟು ಕೆಡ್ಡಾಗೆ ಬಿದ್ದಿದ್ದ. ಆದರೆ ಆಹಾರ ಹಾಗೂ ನಾಗರಿಕ ಸರಬರಾಜು ಖಾತೆ ಸಚಿವನಾಗಿದ್ದ ಹರತಾಳು ಹಾಲಪ್ಪ ‘ಊಟ’ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ! ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗದು ಎನ್ನುವಂತಿದ್ದ ಹಾಲಪ್ಪ ಈಗ ಬೀದಿಗೆ ಬಂದಿದ್ದಾನೆ. ಆದರೆ ಇದು ‘ಒಪ್ಪಿತ ಯೋಗ ಪುರಾಣ’.
ಹಾಗಂತ ಇಲ್ಲಿ ನಾನು ಹಾಲಪ್ಪನ ಪರ ವಾದಿಸುತ್ತಿಲ್ಲ. ಈ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಇದರ ಬಗ್ಗೆ ಚರ್ಚೆ ಮಾಡುವುದು ತಪ್ಪು. ಆದರೂ ಸುಮ್ಮನಿರಲಾಗುತ್ತಿಲ್ಲ. ಕಾರಣ ಸರಕಾರದ ಧೊರಣೆ. ಇಲ್ಲಿ ಕೆಲವು ಪ್ರಶ್ನೆಗಳು ಏಳುತ್ತವೆ. ಹಾಲಪ್ಪ ಅತ್ಯಾಚಾರ ಮಾಡುವಾಗ ಚಂದ್ರಾವತಿ ಕೂಗಿದರೂ ಮನೆಯಲ್ಲಿದ್ದ ಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳು ಏಳಲೇ ಇಲ್ಲವೆ(ದಂಪತಿ ಪ್ರಕಾರ ಮನೆಯಲ್ಲಿದ್ದರು)? ಆಕೆಯ ಪತಿ ವೆಂಕಟೇಶ ಮೂರ್ತಿಯ ಹಿನ್ನೆಲೆ ಎಂಥಹದ್ದು ? ಮಕ್ಕಳನ್ನು ಅದೇ ದಿನ ಶಿವಮೊಗ್ಗದ ತಿರುಮಲ ಲಾಡ್ಜ್‌ನಲ್ಲಿ ಬಿಟ್ಟಿದ್ದಾದರೂ(ಸಿಒಡಿ ತನಿಖೆಯಿಂದ ಬಹಿರಂಗವಾಗಿದೆ) ಏಕೆ ? ಹೆಣ್ಣೆಂಬ ಮಾತ್ರಕ್ಕೆ ಚಂದ್ರಾವತಿಯ ಎಲ್ಲ ತಪ್ಪುಗಳನ್ನೂ ಇಲ್ಲ ಮನ್ನಿಸಲೇಬೇಕೆ ? ಇದಲ್ಲಿ ಅವಳ ತಪ್ಪೆ ಇಲ್ಲವೇ? ಇವೆಲ್ಲವಕ್ಕೂ ಉತ್ತರ ಸದ್ಯದಲ್ಲಿಯೇ ಸಿಗಲಿದೆ.
ಆದರೆ ಹಾಲಪ್ಪನ ಪ್ರಕರಣಕ್ಕೂ ‘ಮುತಾಲಿಕ್ ಲಂಚ ಪ್ರಕರಣ’ಕ್ಕೂ ಹೋಲಿಸಿದರೆ ಮುತಾಲಿಕ್ ಪ್ರಕರಣ ಬಹಳ ಮುಖ್ಯ. ಆದರೆ ಅವನನ್ಯಾಕೆ (ಏಕವಚನಕ್ಕೆ ಕ್ಷಮೆ ಇರಲಿ) ಬಂಸಿ ತನಿಖೆ ನಡೆಸುತ್ತಿಲ್ಲ ? ಆತ ಬಿಜೆಪಿಯ ಬಲಪಂಥೀಯ, ಜತೆಗೆ ಪಕ್ಷದ ಸಂಘಟನೆಗಳಲ್ಲಿ ಇಂದಿಗೂ ಒಡನಾಟ ಇದೆ ಎಂದೆ ? ತಪ್ಪು ಯಾರು ಮಾಡಿದರೂ ತಪ್ಪೆ. ಹಾಲಪ್ಪ ಒಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆದರೆ ಮುತಾಲಿಕ್ ನಿತ್ಯ ಸಾವಿರಾರು, ಲಕ್ಷಾಂತರ ಜನರ ಮರ್ಯಾದೆಯ, ಮುಗ್ದತೆ, ಭಾವನೆಗಳ ಮೇಲೆ ಅತ್ಯಾಚಾರ ಮಾಡುತ್ತಲೆ ಇದ್ದಾನೆ. ಅನೇಕರ ಹತ್ಯೆಗೆ ಕಾರಣವಾಗುತ್ತಿದ್ದಾನೆ. ಇದು ನ್ಯಾಯವೇ ?
ಲವ್ ಜಿಹಾದ್ ಎಂದು ಬೊಬ್ಬಿಡುವ ಇದೇ ಶ್ರೀರಾಮ ಸೇನೆಯ ಮುಖಂಡರು ಹಾಸನದಲ್ಲಿ ಮನೆಯವರು ವಿರೋಸಿದರೆಂಬ ಕಾರಣಕ್ಕೆ ಮುಸ್ಲಿಂ ಹುಡುಗಿಯೊಬ್ಬಳನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿ ಮುಂದೆ ನಿಂತು ಮದುವೆ ಮಾಡಿದರಲ್ಲ ಅದು ತಪ್ಪಲ್ಲವೇ? ಪ್ರೀತಿಯ ಮುಂದೆ ಜಾತಿ, ಮತ, ಧರ್ಮಗಳು ಮುಖ್ಯವಾಗುವುದಿಲ್ಲ. ಆದರೆ ಹೀಗೆ ಧರ್ಮ, ಧಾರ್ಮಿಕತೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತ ಹೋಗುವ, ಹಣದಾಸೆಗೆ ಅಮಾಯಕರ ಜೀವ ತಿನ್ನುವ ಇಂಥವರನ್ನು ಮೊದಲು ಸರಕಾರ ಕಂಬಿ ಎಣಿಸುವಂತೆ ಮಾಡಬೇಕು.
ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತ ಏನೂ ತಿಳಿಯದು ಎನ್ನುವ ರೀತಿ ವರ್ತಿಸುವ ಈ ಬಿಜೆಪಿ ಸರಕಾರ ತಕ್ಷಣ ಬುದ್ದಿ ಕಲಿಯದಿದ್ದರೆ ಜನಸಾಮಾನ್ಯರೇ ಬುದ್ದಿ ಕಲಿಸುವ ಕಾಲ ಇಂದಲ್ಲ ನಾಳೆ ಬಂದೇ ಬರುತ್ತದೆ. ನೆನಪಿರಲಿ...

Thursday, April 22, 2010

ಶಿಕ್ಷಣ ಕ್ಷೇತ್ರದಲ್ಲಿ ‘ಕುರುಡು ಕಾಂಚಾಣ’ದ ನರ್ತನ ನಿಲ್ಲಲಿ

ಶಿಕ್ಷಣ ಇಂದು ಕೇವಲ ಉಳ್ಳವರ ಸ್ವತ್ತಾಗುತ್ತಿದೆ. ಶಿಕ್ಷಣ ಕ್ಷೇತ್ರ ಕೇವಲ ಉದ್ಯಮವಾಗುತ್ತಿದೆ. ಗುರುವಿಗಿರುವ ಮಹತ್ವ ಕೂಡ ಮಾಯವಾಗುತ್ತಿದೆ. ಕೆಲವೇ ವರ್ಷಗಳ ಮುಂಚೆ ‘ಮುಂದೆ ಗುರಿಯಿರಬೇಕು ಹಿಂದೆ ಗುರುವಿರಬೇಕು’ ಎಂಬ ಮಾತಿತ್ತು. ಈಗ ಅದನ್ನು ಕೊಂಚ ಬದಲಿಸಿ ‘ಮುಂದೆ ಹಣವಿರಬೇಕು ಹಿಂದೂ ಹಣವಿರಬೇಕು’ ಎನ್ನಬೇಕಾಗಿದೆ.
ಎಳೆಯ ಮಕ್ಕಳನ್ನು ಕೂಡ ಇಂದು ಅಂಗನವಾಡಿಗಳಿಗೆ ಅಥವಾ ಶಾಲೆಗೆ ಸೇರಿಸಬೇಕೆಂದರೆ ‘ಕಾಂಚಣಂ ಕಾರ್ಯಸಿದ್ಧಿ’ ಎನ್ನುತ್ತಿವೆ ಶಿಕ್ಷಣ ಸಂಸ್ಥೆಗಳು. ಇಡೀ ಶಿಕ್ಷಣ ವ್ಯವಸ್ಥೆ ಭ್ರಷ್ಟತನದಲ್ಲಿ ಮುಳುಗೆದ್ದು ಎಲ್ಲಿ ನೋಡಿದರಲ್ಲಿ ಡೊನೇಷನ್ ವಸೂಲಿ ಮಾಡುವ ಖಯಾಲಿ ಶುರುವಾಗಿದೆ. ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ಮಾತ್ರವಲ್ಲ, ಆನಂತರದ ಉನ್ನತ ಶಿಕ್ಷಣಕ್ಷೇತ್ರದಲ್ಲಿಯೂ ಕುರುಡು ಕಾಂಚಾಣ ಕುಣಿಯುತ್ತಲಿದೆ. ಆದರೆ ಅದರ ಕಾಲಿಗೆ ಸಿಕ್ಕವರು ಮಾತ್ರ ನಜ್ಜುಗುಜ್ಜಾಗುತ್ತಲೇ ಇದ್ದಾರೆ!!
ಹೀಗಾಗಿ ನಗರ ಪ್ರದೇಶಗಳಲ್ಲಿ ಕೂಲಿನಾಲಿ ಅಥವಾ ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಕೆಲಸ ಮಾಡಿ ಬದುಕುವ ಅದೆಷ್ಟೋ ಮಂದಿಯ ಮಕ್ಕಳು ಇಂದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂದ ಮಾತ್ರಕ್ಕೆ ಹಳ್ಳಿಗಳು ಕೂಡ ಇದರಿಂದ ಹೊರತಾಗಿಲ್ಲ! ಅಲ್ಲೂ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ಮೂಲ ಕಾರಣ ಶಿಕ್ಷಣ ಉದ್ಯಮವಾಗಿ ಬೆಳೆದು ನಿಂತಿರುವುದು. ಯಾಂತ್ರಿಕ ಜೀವನ ಹೆಚ್ಚಾದಂತೆ ಪೋಷಕರು ಕೂಡ ತಮ್ಮ ಮಕ್ಕಳ ಕಾಳಜಿಯನ್ನು ಶಿಕ್ಷಣ ಸಂಸ್ಥೆಗಳಿಗೆ ವಹಿಸಿ ತಾವು ಮಾತ್ರ ದುಡ್ಡು ದುಡ್ಡು ಎಂದು ದುಡಿಮೆಗೆ ನಿಂತಿದ್ದಾರೆ. ಹಣವೊಂದೆ ಜೀವನವೇ ?ಎನ್ನುವ ಪ್ರಶ್ನೆಗೆ ಉತ್ತರ ದೊರೆಯದಿದ್ದರೂ ಹಣದ ಬೆನ್ನು ಬಿದ್ದು ಬೆಂಬಿಡದೆ ಓಡುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಈಗ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಮನೆಬಾಗಿಲಿಗೆ ಶಾಲಾ ವಾಹನಗಳು ಬೇಕು. ಹೀಗೆ ಸೌಲಭ್ಯ ನೀಡುವ ನೆಪ ಮಾಡಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಹಾಗೂ ಪೋಷಕರ ರಕ್ತ ಹೀರುತ್ತಿವೆ. ಆದರೆ ಇಂಥ ಜಿಗಣೆಗಳು ಹೀರುವ ರಕ್ತವನ್ನೂ ನೋಡಿಕೊಳ್ಳದ ಅಥವಾ ಅವುಗಳನ್ನು ಕಿತ್ತು ಬಿಸಾಡುವ ವ್ಯವದಾನ ಪೋಷಕರಲ್ಲಿ ಇಲ್ಲವಾಗಿದೆ. ಆ ಕಾರಣಕ್ಕೇ ಸರಕಾರಿ ಶಾಲೆಗಳಿಗೂ ನಿರ್ಲಕ್ಷ್ಯಕ್ಕೊಳಗಾಗಿವೆ.
ಇಂಥ ವ್ಯವಸ್ಥೆಯಲ್ಲಿ ಶಿಕ್ಷಕರು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಲು ಶತಪ್ರಯತ್ನ ನಡೆಸುವುದು ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಬಡವರು, ಕೂಲಿ ಕಾರ್ಮಿಕರು, ನಿಗರ್ತಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದೇ ಕಷ್ಟವಾಗಿದೆ. ಇಲ್ಲಿ ಯಾವುದೇ ಜಾತಿ ಭೇದವಿಲ್ಲ, ಬ್ರಾಹ್ಮಣರಿಂದ ಹಿಡಿದು ದಲಿತರ ವರೆಗೆ ಎಲ್ಲರೂ ಇದರ ಸುಳಿಯಲ್ಲಿ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಯುಪಿಎ ಸರಕಾರ ಏ.೧ರಿಂದ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು’ ಕಾಯಿದೆ ಜಾರಿಗೆ ತಂದಿರುವುದು ನಿಜಕ್ಕೂ ಎಲ್ಲ ವರ್ಗದವರಿಗೆ ಅನುಕೂಲ. ಆದರೆ ಅದು ಪ್ರಾಮಾಣಿಕವಾಗಿ ಅನುಷ್ಠಾನವಾಗಬೇಕು ಅಷ್ಟೆ.
ದೇಶದಲ್ಲಿರುವ ೬ರಿಂದ ೧೪ ವರ್ಷದೊಳಗಿನ ೨೨ಕೋಟಿ ಮಕ್ಕಳಲ್ಲಿ ಈಗಾಗಲೇ ೯೨ಲಕ್ಷ ಮಕ್ಕಳು (ಶೇ.೪.೬) ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂಥ ಮಕ್ಕಳೆಲ್ಲ ಇನ್ನು ಶಾಲೆಗೆ ಬರಬೇಕಾದರೆ ಈ ಕಡ್ಡಾಯ ಕಾನೂನು ಕಡ್ಡಾಯವಾಗಿಯೇ ಜಾರಿಗೆ ಬರಬೇಕು. ಈ ದೇಶದಲ್ಲಿ ಸಾಕಷ್ಟು ಕಾನೂನುಗಳಿವೆ, ಆದರೆ ಯಾವ ಕಾನೂನು ಕೂಡ ಇದೂವರೆಗೆ ಕಡ್ಡಾಯವಾಗಿ ಜಾರಿಗೆ ಬರುತ್ತಿಲ್ಲ. ಜತೆಗೆ ಉಲ್ಲಂಘನೆಗಳು ಬಹಿರಂಗವಾಗಿ ನಡೆಯುತ್ತಿವೆ. ಇದಕ್ಕೆ ಸಂಬಂಸಿದ ಅಕಾರಿಗಳು ಅಥವಾ ಜನಪ್ರತಿನಿಗಳ ನಿರ್ಲಕ್ಷ್ಯವೇ ಕಾರಣ ಎನ್ನುವುದರಲ್ಲಿ ಯಾವುದೇ ಗೊಂದಲವಿಲ್ಲ. ಇದೊಂದು ‘ಐತಿಹಾಸಿಕ ಯೋಜನೆ’ ಎಂಬ ಕಾರಣಕ್ಕೆ ಇದನ್ನೇ ರಾಜಕೀಯ ಗಿಮಿಕ್ ಆಗಿ ಬಳಸಿಕೊಳ್ಳದೆ ಅದು ಪ್ರಾಮಾಣಿಕವಾಗಿ ಜಾರಿಯಾಗಲು ಎಲ್ಲ ಅಕಾರಿಗಳ ಹಾಗೂ ರಾಜ್ಯ ಸರಕಾರಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಯುಪಿಎ ಕಾರ್ಯರೂಪಗೊಳಿಸಬೇಕಿದೆ. ಆಗ ಮಾತ್ರ ಈ ಕಾನೂನು ರೂಪಿಸಿದ್ದಕ್ಕೆ ಸಾರ್ಥಕ.
ಶಾಲೆಯಿಂದ ಹೊರಗುಳಿದ ದೇಶದ ೯೨ಲಕ್ಷ ಮಕ್ಕಳನ್ನು ಮರಳಿ ಶಾಲೆಗೆ ತರುವ ಹೊಣೆಗಾರಿಕೆಯನ್ನು ರಾಜ್ಯ ಹಾಗೂ ಸ್ಥಳಿಯ ಆಡಳಿತಗಳಿಗೆ ವಹಿಸಲಾಗಿದೆ. ಇದಕ್ಕಾಗಿ ೫ ವರ್ಷಗಳ ವರೆಗೆ ತಗಲುವ ೧.೭೧ಲಕ್ಷ ಕೋಟಿ ರೂ.ಗಳನ್ನು ಭರಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಕೇಂದ್ರದಿಂದ ಶೇ.೫೫ ಹಣ ನೀಡಿದರೆ ರಾಜ್ಯ ಸರಕಾರಗಳು ಇದಕ್ಕೆ ಉಳಿದ ಶೇ.೪೫ ಹಣವನ್ನು ಒದಗಿಸಬೇಕಿದೆ. ೨೦೦೨ರಲ್ಲಿಯೇ ಸಂವಿದಾನದ ೮೬ನೇ ತಿದ್ದುಪಡಿ ರೂಪದಲ್ಲಿ ಈ ಕಾಯಿದೆ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ಹಿಂದಿನ ವರ್ಷ ಸಂಸತ್‌ನಲ್ಲಿ ಈ ಮಸೂದೆಗೆ ಅಂಗೀಕಾರ ದೊರೆತಿತ್ತು. ಈಗ ಅದು ಜಾರಿಗೆ ಬರುತ್ತಿದೆ.
ಇದು ಕೆಂದ್ರದ ಮೂರನೇ ಮಹತ್ವದ ಯೋಜನೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಮೊದಲ ಹಾಗೂ ೨ನೇ ಮಹತ್ವದ ಯೋಜನೆಗಳಾದ ‘ಮಾಹಿತಿ ಹಕ್ಕು ಹಾಯಿದೆ’ ಹಾಗೂ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಈಗಾಗಲೇ ಜಾರಿಯಾಗಿದ್ದರೂ ದೇಶದೆಲ್ಲಡೆ ಭ್ರಷ್ಟರ ಕೈಲಿ ಸಿಕ್ಕಿ ಸರಿಯಾಗಿ ಜಾರಿಯಾಗದೆ ವಿಲಿವಿಲಿ ಒದ್ದಾಡುತ್ತಿವೆ. ಈ ಕಾನೂನು ಕೂಡ ಹಾಗೆಯೇ ಆದರೆ ಯಾವುದೇ ಪ್ರಯೋಜನವಿಲ್ಲ.
ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ದುರ್ಬಲ ವರ್ಗದ ಮಕ್ಕಳಿಗೂ ಶೇ.೨೫ ಸೀಟುಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಯಾವುದೇ ಪ್ರಾಥಮಿಕ ಶಾಲೆ ಇನ್ನು ಡೊನೇಷನ್ ಪಡೆಯುವಂತಿಲ್ಲ, ಜತೆಗೆ ಬಡ ವರ್ಗದ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಿಕೊಳ್ಳುವುದಿಲ್ಲ ಎನ್ನವಂತೆಯೂ ಇಲ್ಲ. ಮಕ್ಕಳ ಪೋಷಕರನ್ನು ಸಂದರ್ಶಿಸುವಂತೆಯೂ ಇಲ್ಲ. ಒಂದು ವೇಳೆ ಹೀಗಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತಿದೆ.
ಆದರೆ ಈ ಕಾನೂನು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮೂಲ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ, ಇದು ಸಂವಿದಾನ ವಿರೋಯಾದದ್ದು ಎಂದು ಅದನ್ನು ಪ್ರಶ್ನಿಸಿ ಈಗಾಗಲೇ ಕೆಲವು ಸಂಸ್ಥೆಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ಕರ್ನಾಟಕದಲ್ಲಿ ಈಗ ೪೪,೯೯೮ ಸರಕಾರಿ ಪ್ರಾಥಮಿಕ ಶಾಲೆಗಳು, ೨,೪೯೯ ಅನುದಾನಿತ ಪ್ರಾಥಮಿಕ ಶಾಲೆಗಳು ಹಾಗೂ ೮,೮೫೧ ಅನುದಾನ ರಹಿತ ಪ್ರಾಥಮಿಕ ಶಾಲೆಗಳು ಸೇರಿ ೫೬,೩೪೮ ಪ್ರಾಥಮಿಕ ಶಾಲೆಗಳಿವೆ. ಇಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಸರಕಾರಿ ಶಾಲೆಗಳನ್ನು ಹೊರತುಪಡಿಸಿ ಉಳಿದ ೧೧,೩೫೦ ಶಾಲೆಯಲ್ಲಿ ಓದುವ ಮಕ್ಕಳ ಎಲ್ಲ ಪೋಷಕರು ಪ್ರತಿನಿತ್ಯ ತಮ್ಮ ಮಕ್ಕಳ ಶಿಕ್ಷಣದ ಬದಲಾಗಿ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಯೋಚಿಸುತ್ತಿದ್ದಾರೆ...ಇನ್ನು ಹಾಗಾಗದಿರಲಿ.
ರಾಜ್ಯದಲ್ಲಂತೂ ಇದು ಯಾವ ಮಟ್ಟಕ್ಕೆ ಬಂದಿದೆ ಎಂದರೆ ಹೆಚ್ಚು ಡೊನೇಷನ್ ಪಡೆಯುವ ಶಾಲೆಗಳು ಮಾತ್ರ ಉತ್ತಮ ಶಿಕ್ಷಣ ನೀಡುತ್ತವೆ ಎನ್ನುವ ಹಂತಕ್ಕೆ ಪೋಷಕರು ತಲುಪಿದ್ದಾರೆ. ಶೇ.೮೦ ಅಥವಾ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರವೇಶ ನೀಡಿ ಶೇ.೧೦೦ ಫಲಿತಾಂಶ ಪಡೆಯುವ ಇಂಥ ಖಾಸಗಿ ಶಾಲೆಗಳು ಮಾಡಿದ ಸಾಧನೆಯಾದರೂ ಏನು ? ಮಕ್ಕಳಲ್ಲಿ ಪರೀಕ್ಷೆ ಎಂದರೆ ಭಯ, ಆತಂಕ ತುಂಬುವುದರ ಜತೆಗೆ ಬದುಕು ಕಲಿಸದೆ ಭಯ ಹುಟ್ಟು ಹಾಕಿ ಆತ್ಮಹತ್ಯೆಯ ಹಾದಿಗೆ ತಳ್ಳುವುದೇ?
ಆದ್ದರಿಂದ ಇಂಥ ಶಾಲೆಗಳಿಗೆ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲೇಬೇಕು. ಅದಕ್ಕಾಗಿ ಏ.೧ರಿಂದ ಜಾರಿಗೆ ಬಂದಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು ಕಾಯಿದೆ ಕೇವಲ ಜಾರಿಗೊಂಡರೆ ಸಾಲದು ನಿರ್ಧಾಕ್ಷಿಣ್ಯವಾಗಿ ಅನುಷ್ಠಾನಗೊಳ್ಳಬೇಕು. ಆ ಕೆಲಸಕ್ಕೆ ಇನ್ನು ಪೋಷಕರೂ ಕೂಡ ಆತ್ಮಸ್ಥೈರ್ಯದಿಂದ ಸಹಕರಿಸಬೇಕು. ಆಗ ಮಾತ್ರ ಬಂಡವಾಳಶಾಹಿಗಳ ಕೈಲಿ ಸಿಲುಕುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಬಿಡಿಸಿಕೊಳ್ಳಲು ಸಾಧ್ಯ, ಜತೆಗೆ ಶಿಕ್ಷಣ ಸಂಸ್ಥೆಗಳಲ್ಲಿನ ಕುರುಡು ಕಾಂಚಾಣದ ನರ್ತನವನ್ನು ನಿಲ್ಲಿಸಲು ಸಾಧ್ಯ...

Saturday, March 20, 2010

ವೈದ್ಯ ಲೋಕಕ್ಕೆ ಬರುತ್ತಿದೆ ವಿ- ಸ್ಕ್ಯಾನ್ !

( ಬೆಂಗಳೂರಿನ ಸೆಂಟ್ ಆನ್ಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಎಂ. ಶಿಲ್ಪಾಬರೆದಿದ್ದಾಳೆ.)
ಇನ್ನು ಸ್ಟೆಥಸ್ಕೋಪ್‌ಗೆ ಜಾಗವಿಲ್ಲ...
ಇಷ್ಟು ದಿನ ವೈದ್ಯರ ಕೈ ಹಿಡಿದಿದ್ದ ಸ್ಟೆಥಸ್ಕೋಪ್ ೨೧ನೇ ಶತಮಾನಕ್ಕೆ ವಿ ಸ್ಕ್ಯಾನ್ ಆಗಿ ಬದಲಾಗುತ್ತಿದೆ. ವೈದ್ಯಕೀಯ ಲೋಕಕ್ಕೆ ದಿನೇ ದಿನೆ ಹೊಸ ಹೊಸ ಯಂತ್ರಗಳು ಕಾಲಿಡುತ್ತಲೇ ಇವೆ. ಆ ಮೂಲಕ ರೋಗಿಗಳ ರೋಗ ಪತ್ತೆ ಹಾಗೂ ಚಿಕಿತ್ಸೆ ನೀಡುವ ವಿಧಾನ ಕೂಡ ಸುಲಭ ಹಾಗೂ ಸರಳಗೊಳ್ಳುತ್ತಲೇ ಇದೆ. ಇಂಥದ್ದರ ನಡುವೆಯೇ ಈಗ ಮತ್ತೊಂದು ಸಾಧನ ಈ ವಿಸ್ಮಯ ಲೋಕಕ್ಕೆ ಕಾಲಿಡುತ್ತಿದೆ. ಅದರ ಹೆಸರೇ ವಿ-ಸ್ಕ್ಯಾನ್! ಇದು ತಕ್ಷಣವೇ ಕಾಯಿಲೆ ಅಥವಾ ತೊಂದರೆಯನ್ನು ಸೂಕ್ಷ್ಮವಾಗಿ ಪತ್ತೆ ಹಚ್ಚಿ, ಅದಕ್ಕೆ ಯಾವ ರೀತಿಯ ಚಿಕಿತ್ಸೆ ಬೇಕು ಎಂಬುದನ್ನು ತಿಳಿಯಲು ವೈದ್ಯರಿಗೆ ಸಹಕಾರಿಯಾಗಲಿದೆ. ಇದನ್ನು ಕಂಡುಹಿಡಿದವರು ಸ್ಯಾನ್ ಫ್ರಾನ್ಸಿಸ್ಕೋನ ವೆಬ್ ೨.೦ ಸುಮೀತ್ ಸಂಸ್ಥೆಯ ಸಿಇಒ ಜಿಫ್ ಇಮ್ಲೆಟ್. ಇದು ನೋಡಲು μಪ್ ಒಪನ್ ಮೊಬೈಲ್‌ಗೆ ಐ-ಪಾಡ್ ಜೋಡಿಸಿದಂತೆ ಕಾಣುತ್ತದೆ. ವಿ ಸ್ಕ್ಯಾನ್ ಒಂದು ಪೌಂಡ್ ತೂಕವಿದ್ದು, ಪ್ರಪಂಚದಲ್ಲೆ ಅತಿ ಚಿಕ್ಕ ಅಲ್ಟ್ರಾ ಸೌಂಡ್ ಉಪಕರಣವೆಂದು ಹೆಸರು ಪಡೆದಿದೆ. ಈಗಾಗಲೇ ಇದರ ಬಳಕೆಯ ಬಗ್ಗೆ ಏಷ್ಯಾ, ಯೂರೋಪ್ ಹಾಗೂ ಅಮೆರಿಕದಲ್ಲಿ ಪ್ರಯೋಗ ನಡೆಯುತ್ತಿದೆ. ಇಷ್ಟು ದಿನ ವೈದ್ಯರು ರೋಗಿಗಳನ್ನು ಸ್ಟೆಥಸ್ಕೋಪ್ ಮೂಲಕ ಪರೀಕ್ಷೆ ಮಾಡಿ ಅವರ ಹೃದಯಬಡಿತ, ನಾಡಿ ಮಿಡಿತಗಳನ್ನು ಪತ್ತೆ ಹೆಚ್ಚುತ್ತಿದ್ದರು. ಆ ಮೂಲಕವೇ ರೋಗಿಯ ಪರೀಕ್ಷೆ ನಡೆಯುತ್ತಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಅವಕಾಶವೇ ಇಲ್ಲ! ಅದರ ಜಾಗವನ್ನು ವಿ ಸ್ಕ್ಯಾನ್ ಅಲಂಕರಿಸಲಿದೆ.
ವಿ ಸ್ಕ್ಯಾನ್ ವೈಶಿಷ್ಟ್ಯ :
ಕ್ಯಾಲಿರ್ಫೋನಿಯಾ ವಿಶ್ವ ವಿದ್ಯಾಲಯದ ಡಾ.ಆಂಥೊನಿ ಎನ್. ಡಿಮರಿಯಾ ಅವರ ಪ್ರಕಾರ ಹೊರ ರೋಗಿಗಳಿಗೂ ಮತ್ತು ಆಂಬ್ಯುಲೆನ್ಸ್‌ನಲ್ಲಿ ಕರೆತರುವ ರೋಗಿಗಳಿಗೂ ವಿ-ಸ್ಕ್ಯಾನ್ ಉಪಯುಕ್ತ. ಈ ಉಪಕರಣದ ಬ್ಯಾಟರಿಯನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಒಬ್ಬ ರೋಗಿಯ ಪರೀಕ್ಷೆಗೆ ಎರಡು ನಿಮಿಷದ ಹಾಗೆ ೩೦ರಿಂದ ೩೫ ರೋಗಿಯನ್ನು ಪರೀಕ್ಷೆ ಮಾಡಬಹುದು. ಈ ರೀತಿ ಪರೀಕ್ಷೆ ಮಾಡಿದ ಮಾಹಿತಿಯನ್ನು ಪೆನ್‌ಡ್ರೈವ್ ಮೂಲಕವೂ ಸಂಗ್ರಹಿಸಿ ಟ್ಟುಕೊಳ್ಳಬಹುದು. ಒಂದ ವೇಳೆ ಹಿಂದಿನ ಮಾಹಿತಿ
ಇಲ್ಲವಾಗಿದ್ದರೆ ಆನ್‌ಲೈನ್ ಮೂಲಕವೂ ಅದನ್ನು ಪಡೆದುಕೊಳ್ಳಬಹುದು.
ಜಾಗತೀಕರಣದಿಂದಾಗಿ ಇಡೀ ವಿಶ್ವವೇ ಒಂದು ಹಳ್ಳಿಯಂತಾಗುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಈ ‘ವಿ ಸ್ಕ್ಯಾನ್’ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ವೈದ್ಯರ ಕೈ ಹಿಡಿದಿದ್ದ ಸ್ಟೆಥಸ್ಕೋಪ್ ೨೧ನೇ ಶತಮಾನಕ್ಕೆ ವಿ ಸ್ಕ್ಯಾನ್ ಆಗಿ ಬದಲಾಗುತ್ತಿದೆ. ಜತೆಗೆ ನಾಲ್ಕು ಹೆಜ್ಜೆ ಮುಂದೆ ಹೋಗಿ ಸ್ಥಳದಲ್ಲೇ ವೈದ್ಯರು ರೋಗಿಗೆ ಯಾವ ಚಿಕಿತ್ಸೆ ಬೇಕು ಎಂಬುದನ್ನು ನಿಸ್ಸಂಕೋಚವಾಗಿ ಹೇಳಲು ಇದರಿಂದ ಸಹಕಾರಿವಾಗಲಿದೆ.
ಉಪಯೋಗಗಳು :
*ಪ್ರಥಮ ಚಿಕಿತ್ಸಾ ಕ್ರಮಕ್ಕೆ ತುಂಬಾ ಅನುಕೂಲ.
*ಅಲ್ಟ್ರಾ ಸೌಂಡ್ ಮಾಡುವಂಥ ಕೆಲಸವನ್ನು ವಿ-ಸ್ಕ್ಯಾನ್ ತುಂಬಾ ಬೇಗನೆ ಮಾಡುತ್ತದೆ.
*ವಿ-ಸ್ಕ್ಯಾನ್‌ನಿಂದ ಮನುಷ್ಯನ ದೇಹದ ಯಾವುದೇ ಭಾಗವನ್ನು ಪರೀಕ್ಷಿಸಬಹುದು.
*ಇದರಿಂದ ಹೃದಯ ಸಂಬಂ ಕಾಯಿಲೆ ಮತ್ತು ಭ್ರೂಣ ಚಿಕಿತ್ಸೆಗೂ ಸಹಕಾರಿ.
* ರೋಗಿಯ ರೋಗದ ಬಗೆಗಿನ ಮಾಹಿತಿಯನ್ನು ಅದರಲ್ಲಿಯೇ ಶೇಖರಿಸಿಡಲೂಬಹುದು.
*ರೋಗಿಯ ದೇಹದಲ್ಲಾಗುವ ಚಲನವಲನಗಳು ವೀಡಿಯೋ ಶಬ್ದದ ತೀವ್ರತೆ ಕೂಡ ಇದರಲ್ಲಿ ದಾಖಲಾಗುತ್ತದೆ.
*ಹಳ್ಳಿಗಳು ಅಥವಾ ಪ್ರಕೃತಿ ವಿಕೋಪದಂಥ ಪರಿಸ್ಥಿತಿಗಳಲ್ಲಿ ಇದು ಹೆಚ್ಚು ಉಪಯುಕ್ತ.

ಸುಮಂಗಲೆ (ನ್ಯಾನೋ ಕಥೆ )

( ನ್ಯಾನೋ ಕಥೆಗಳ ಜನಕ ಗೆಳೆಯ ಚ.ಹ.ನಟೇಶ್ ಬಾಬು ಹುಟ್ಟಿಸಿದ ಗೀಳು ಅಷ್ಟಿಷ್ಟಲ್ಲ. ಅವನಿಂದ ಸ್ಫೂರ್ತಿ ಪಡೆದ ನಾನು ಕೆಲವು ನ್ಯಾನೋ ಕಥೆಗಳನ್ನ ಬರೆದಿದ್ದೇನೆ ಓದಿ ಆನಂದಿಸಿ, ಹಿಡಿಸದಿದ್ದರೆ ಬೈದಾದರು ಸರಿ ಅಭಿಪ್ರಾಯ ತಿಳಿಸಿ ನಿಮ್ಮ ಎಲ್ಲ ಪ್ರತಿಕ್ರಿಯೆಗಳಿಗೆ ಹೃದಯ ಪೂರ್ವಕ ಸ್ವಾಗತ...)

ಸುಮಂಗಲೆ:

ಸುಮಂಗಲಾ ಆಗತಾನೆ ಪದವಿ ಮುಗಿಸಿದ್ದಳು. ಕಿತ್ತು ತಿನ್ನುವ ಬಡತನದ ನಡುವೆಯೂ ಓದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ಹಳ್ಳಿಯಲ್ಲಿ ಏನಾದರೂ ಮಾಡಬೇಕೆಂದಿದ್ದವಳಿಗೆ ಅಪ್ಪ ಸುಮ್ಮನಿರಲಾರದೆ ಮದುವೆ ಮಾಡಿದ್ದ. ‘ನೀನು ಹುಡ್ಗಿ, ನೀನು ದುಡ್ದು ನಮ್ಮನ್ನ ಸಾಕೋದ್ ಬ್ಯಾಡ, ನಾನಿನ್ನೂ ಗಟ್ಟಿ ಇದ್ದೀನಿ’ ಎಂದಿದ್ದ. ಹಾಗೇ ಹೇಳಿ ವರ್ಷಕ್ಕೇ ಅವನು ಮಣ್ಣು ಸೇರಿದ್ದ. ಇತ್ತ ಅಪ್ಪನ ಒತ್ತಾಯಕ್ಕೆ ಕಟ್ಟುಬಿದ್ದು ಪೇಟೆಯ ಹುಡುಗನನ್ನು ಮದುವೆಯಾದ ಸುಮಂಗಲಾ ಗಂಡನ ದಾಸಿಯಾಗಿದ್ದಳು. ಅವನೊ ಹೈಟೆಕ್ ಪಿಂಪ್, ಮದುವೆ ನೆಪದಲ್ಲಿ ಆಕೆಯನ್ನು ತಂದು ಮಾಂಸದಡ್ಡೆಗೆ ಬಿಟ್ಟಿದ್ದ. ಎಷ್ಟೇ ಗೋಳಾಡಿದರೂ ಆ ಜಾಲದಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ. ಆತ್ಮಹತ್ಯೆಯ ದಾರಿಯೂ ಅವಳನ್ನು ಕಂಡು ದೂರ ಓಡಿತ್ತು. ಇನ್ನೇನು ಮನೆಯಲ್ಲಿದ್ದ ವಿಧವೆ ಅಮ್ಮ, ಮುಗ್ದ ತಮ್ಮನಿಗಾಗಿ ಗಂಡನಿದ್ದೂ ‘ನಿತ್ಯ ಸಮಂಗಲಿ’ಯಾಗಿದ್ದಳು. ಊರಿಗೆ ಬಂದಾಗ ಎಲ್ಲರೂ ಆಕೆಯನ್ನು ಆರತಿ ಎತ್ತಿ ‘ಹೀಗೇ ಸುಮಂಗಲಿಯಾಗಿರು...’ ಎಂದು ಹರಸಿದ್ದರು !

ಪ್ರೀತಿಯ ಬೆಂಕಿ:
ಹರೆಯಕ್ಕೆ ಕಾಲಿಟ್ಟ ಮಧು ಹಾಗೂ ಮನು ಇಬ್ಬರೂ ಪ್ರೀತಿಯಲ್ಲಿ ಜಾರಿ ಬಿದ್ದಿದ್ದರು. ಹಾಗೇ ಬಿದ್ದಿದ್ದರಿಂದಲೇ ಅವಳಿಗೀಗ ಮೂರು ತಿಂಗಳು ತುಂಬಿತ್ತು. ಇದನ್ನು ಮನೆಯವರಲ್ಲಿ ಹೇಳಲೂ ಮಧುಗೆ ಧೈರ್ಯವಿರಲಿಲ್ಲ; ಅವನಿಗೂ. ಅದೇ ವಿಚಾರದಲ್ಲಿ ಇಬ್ಬರೂ ಮಾತಿಗೆ ಮಾತು ಬೆಳೆಸಿದ್ದರು. ಮಧು ‘ಎಲ್ಲ ಮಾಡಿದವನು ನೀನೆ, ಈಗ ಹಿಂಗೆ ಮಾತನಾಡಿದ್ರೆ ಹೆಂಗೆ?’ ಎಂದಳು. ಅದಕ್ಕವನು ‘ಆಗಿದ್ದೆಲ್ಲಾ ನಿನ್ನಿಂದ್ಲೇ ನೀನು ನನ್ನ ಜೀವನದಲ್ಲಿ ಬರದಿದ್ದರೆ ನಾನು ನೆಮ್ಮದಿಯಾಗಿರುತ್ತಿದ್ದೆ’ ಎಂದ. ಮಾರನೇ ದಿನ ಆಕೆ ಎಲ್ಲವನ್ನೂ ಬರೆದಿಟ್ಟು ಲೋಕವನ್ನು ಬಿಟ್ಟು ಹೋದಳು. ಮರುಕ್ಷಣವೇ ಅವರಿಬ್ಬರ ಮನೆಗೂ ಬೆಂಕಿ ಬಿದ್ದಿತ್ತು. ಮನೆ ಮನಗಳೆರಡೂ ಧಗಧಗಿಸಿ ಉರಿಯುತ್ತಿದ್ದವು.


ಮಕ್ಕಳಾಗದಿರಲಿ ಮನೆ ತುಂಬಾ:
ಆತ ಕುಟುಂಬ ಕಲ್ಯಾಣ ಇಲಾಖೆಯ ಅಕಾರಿ. ಹೆಸರು ಶರಣಪ್ಪ. ‘ಮನೆಗೊಂದು ಮಗು ಸಾಕು’ ಎಂದು ಹೋದ ಹೋದಲ್ಲೆಲ್ಲ ಬಾಷಣ ಬಿಗಿಯುತ್ತಿದ್ದ. ಮದುವೆಯಾಗಿತ್ತು. ವರ್ಷವಾದ ಬಳಿಕ ಇಬ್ಬರು ಅವಳಿಜವಳಿ ಮಕ್ಕಳಾಗಿದ್ದರು. ಅದಾಗಿ ವರ್ಷಕ್ಕೇ ಮತ್ತೊಬ್ಬಳು ಸುಂದರಿಗೆ ಅವ ಶರಣಾಗಿದ್ದ. ಹೋದಲ್ಲೆಲ್ಲ ಎಲ್ಲರನ್ನೂ ಮಾತಿನಲ್ಲಿ ಸೋಲಿಸಿ ಕುಟುಂಬ ಕಲ್ಯಾಣದ ಪಾಠ ಹೇಳುತ್ತಿವ ಹುಡುಗಿಯ ವಿಷಯದಲ್ಲಿ ಸೋತ. ಅದರಿಂದಾಗಿ ಮದುವೆಯಾಗದೇ ಅವಳಿಗೂ ಒಂದು ಮಗುವಾಗಿತ್ತು...!


ಜವ್ಬಾದಾರಿ:
ಮನೆ ಹೊರಗಡೆ ಚಿನ್ನು ಮತ್ತು ಚಿಂಟು ಇಬ್ಬರೂ ಆಟವಾಡುತ್ತಿದ್ದರು. ಒಳಗಡೆ ಅಮ್ಮ ಗೊಣಗುತ್ತಿದ್ದಳು. ‘ಈ ಮಕ್ಳಿಗೆ ಒಂದಿಷ್ಟೂ ಬುದ್ದಿ ಇಲ್ಲ, ಯಾವಾಗ್ ನೋಡೀದ್ರೂ ಆಟ ಆಟ... ಮುಂದಿನ್ ಜೀವ್ನದ್ ಬಗ್ಗೆ ಸ್ವಲ್ಪಾದ್ರೂ ಖಬರ್ ಐತೆನೋ ನೋಡು’ ಎನ್ನುತ್ತಿದ್ದರೆ ಅಪ್ಪ ಹೇಳಿದ ‘ಖಬರ್ ಇದ್ದಿದ್ರ ಅವರ‍್ಯಾಕ್ ಹಂಗ್ ಆಡ್ತಿದ್ರು ? ಖಬರ್ ಇರಾಕ್ ಅವ್ರೇನ್ ನೀನಾ? ಇಲ್ಲಾ ನಾನ?’ ಮಕ್ಕಳಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತ ಎರಡು ಮನೆ ಕಟ್ಟಿ ‘ಇದು ನಿಂಗೆ ಅದು ನಂಗೆ’ ಎನ್ನುತ್ತಿದ್ದರು.

Tuesday, January 26, 2010

ಕುಲಾಂತರಿ ತಳಿ ಮತ್ತು ಕುಲಗೆಟ್ಟ ಶಾಂತಾರಾಮ್

ಓದುಗರು ಕ್ಷಮಿಸಬೇಕು, ಮೊದಲನೆಯದಾಗಿ ಈ ಲೇಖನವನ್ನು ಬರೆಯಲ ಪ್ರಮುಖವಾಗಿ ನನಗಿರುವ ಅರ್ಹತೆ ನಾನೊಬ್ಬ ರೈತ. ಎರಡನೆಯದು ಒಬ್ಬ ಜವಾಬ್ದಾರಿಯುತ ಪತ್ರಕರ್ತ. ಆ ಕಾರಣಕ್ಕಾಗಿಯೇ ಈ ‘ಖಾರವಾ ಲೇಖನ’
“ಬಿ.ಟಿ. ವಿರುದ್ಧ ಯಾರೊಬ್ಬ ರೈತರೂ ಮಾತನಾಡುತ್ತಿಲ್ಲ, ಮಾತನಾಡುವವರಿಗೆ ವಿeನದ ಗಂಧ ಗಾಳಿ ಗೊತ್ತಿಲ್ಲ" ಎನ್ನುತ್ತಿರುವ ಅಮೆರಿಕ ‘ದಲ್ಲಾಳಿ ಶಾಂತಾರಾಮ್’ ಪಕ್ಕಾ ‘ರೈತ ವಿರೋಧಿ, ‘ದೇಶ ದ್ರೋಹಿ’ ಎಂಬುದರಲ್ಲಿ ಎರಡು ಮಾತೇ ಇಲ್ಲ. ರೈತರಿಗೆ ಅಥವಾ ರೈತ ಪರವಾಗಿ ನಿಂತಿರುವವರಿಗೆ ‘ವಿಜ್ಞಾನ’ ಗೊತ್ತಿಲ್ಲ ಸರಿ. ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ದಲ್ಲಾಳಿಗೆ ರೈತರಿಗಿರುವಷ್ಟಾದರೂ ಜ್ಞಾನ’ವಿದೆಯೇ ಎಂಬುದನ್ನು ಮೊದಲು ಸಾಭೀತುಪಡಿಸಲಿ. ಆನಂತರ ಈ ದೇಶದ ರೈತರು ಜ್ಞಾನಿಗಳೋ ಅಜ್ಞಾನಿಗಳೋ ಎಂಬುದನ್ನು ತಿಳಿಯೋಣ.
ಸ್ವಾಮಿ ದಲ್ಲಾಳಿ ಮಹಾಶಯರೇ ನೀವು ಮಾತ್ರ ಈ ದೇಶದಲ್ಲಿ ದಲ್ಲಾಳಿಗಳಲ್ಲ ನಿಮ್ಮಂತ ‘ಹುಸಿ ಬೀಜಗಳು ಭಾರತದ ಮೂಲೆ ಮೂಲೆಯಲ್ಲಿವೆ. ನಿಮ್ಮಂಥವರ ಕಾರಣಕ್ಕಾಗಿಯೇ ಅಮಾಯಕ ರೈತರು ನಯವಾದ ನಿಮ್ಮ ವಂಚಕತನಕ್ಕೆ ಬಲಿಯಾಗಿ ಹಗಲಿರುಳು ನರಳಿದ್ದಾರೆ, ನರುಳುತ್ತಲೇ ಇದ್ದಾರೆ...
ನಮ್ಮ ರೈತರು ದಡ್ಡಶಿಖಾಮಣಿಗಳೆಂದು ನೀವು ಭಾವಿಸಿದ್ದರೆ ಅದು ನಿಮ್ಮ ‘ಜ್ಞಾನ’ವನ್ನು ಬಿಂಬಿಸುತ್ತದೆ. ಖಾಸಗಿ ಚಾನೆಲ್‌ಗಳಲ್ಲಿ ಕೂತು ಏಕಮುಖವಾಗಿ ವಾದ ಮಂಡಿಸುವ ಆ ಮೂಲಕ ‘ಸ್ವಯಂಘೋಷಿತ ಜ್ಞಾನಿಗಳು’ ಆಗಿರುವ ನಿಂಥವರು ರೈತರ ಮಧ್ಯೆ ಬಂದು ಉತ್ತರಿಸಿ, ಆಗ ನಿಮ್ಮ ಬಂಡವಾಳ ಬಯಲಾಗುತ್ತದೆ. ತಾನೇ ಜ್ಞಾನಿಯೆಂದು ಬೊಬ್ಬಿಡುತ್ತ ಗುಳ್ಳೆ ನರಿಯಂತೆ ಮಾಡುವ ನಿಮ್ಮಂತವರನ್ನು ಈ ದೇಶದ ರೈತರೇ ಸಾಕಿ ಬೆಳೆಸಿದ್ದು ಎಂಬುದನ್ನ ಮರೆಯಬೇಡಿ. ಕೊನೇ ಪಕ್ಷ ಅವರು ಬೆಳೆದು ನಿಮ್ಮಂತ ಹೆಗ್ಗಣಗಳಿಗೆ ತಿನ್ನಲು ಸುರಿದ ಆಹಾರದ ಋಣಕ್ಕಾದರೂ ಸರಿ ನ್ಯಾಯಯುತವಾಗಿ ಮಾತನಾಡುವುದನ್ನು ಕಲಿಯಿರಿ, ನೀವು ತಿಂದು ತೇಗುವ ಪ್ರತಿಯೊಂದೂ ರೈತ ಬೆಳೆದದ್ದು. ಅದರ ಹಿಂದೆ ಅವನ ಬೆವರಿನ ವಾಸನೆಯಿದೆ. ಅದನ್ನು ಮರೆತು ನಿಮ್ಮ ಸ್ವಾರ್ಥಕ್ಕಾಗಿ ರೈತರನ್ನು ಯಾಕೆ ಬಲಿ ಕೊಡುತ್ತೀರಿ...?
ನೀವು ಹೋದಲ್ಲೆಲ್ಲಾ ಈ ದೇಶದ ರೈತರನ್ನ, ರೈತ ಪರವಾಗಿ ಮಾತನಾಡುವ ಜಾಗೃತ ಮನೋಸ್ಥಿತಿಯವರನ್ನು ಟೀಕಿಸುತ್ತಿದ್ದೀರಿ. ಅದನ್ನು ನೋಡಿ ನೋಡಿ ಒಬ್ಬ ರೈತನಾಗಿ ನನ್ನಿಂದ ಸಹಿಸಲಾಗುತ್ತಿಲ್ಲ. ಹೌದು, ರೈತರಿಗೆ ವಿದ್ಯೆಯಿಲ್ಲ, ಬುದ್ದಿಯಿಲ್ಲ, ಅವರಿಗೆ ವಿeನ ಗೊತ್ತಿಲ್ಲ. ಆದರೆ ನೀವು ಎಲ್ಲವನ್ನೂ ಅರಿತ ಮಹಾಶಯ. ಈ ದೇಶದ ಕೃಷಿ ನೀವು ವಿ(ಕೃತ) ಜ್ಞಾನಿಗಳು ನಾಲ್ಕು ಗೋಡೆಯ ಎಸಿ ಕೋಣೆಗಳಲ್ಲಿ ಕೂತು ಮಾಡಿದಂತೆ ಅಲ್ಲ ಸ್ವಾಮಿ, ತಪಸ್ಸು. ಇದು ಮಳೆ ಮತ್ತು ರೈತನ ನಡುವಿನ ಹಾವು ಏಣಿಯಾಟ ! ಇಲ್ಲಿ ಬಹುತೇಕ ಸಾರಿ ಸೋತು ಸುಣ್ಣವಾದವನು ರೈತನೆ. ಹಾಗಿದ್ದೂ ಅಲ್ಲಿಯೇ ಸೋಲನ್ನುಂಡ್ಡೂ ಸೋಲದೆ ದುಡಿದು, ತನ್ನ ದಣಿವನ್ನೂ ಅರಿಯದೇ ದುಡಿದು ಈ ದೇಶದಲ್ಲಿರುವ ನಿಮ್ಮಂತ ಹೆಗ್ಗಣಗಳನ್ನು ಸಾಕುತ್ತಿದ್ದಾರೆ ರೈತರು. ಆದರೆ ಅನ್ನ ತಿಂದ ಮನೆಗೆ ಕನ್ನ ಹಾಕಿ ‘ನಾನೇ ಬುದ್ದಿವಂತ’ ಎಂದು ಬೊಬ್ಬಿಡುವ ನಿಮ್ಮಂಥವರು ಬುದ್ದಿ ಕಲಿಯುವುದಾದರೂ ಹೇಗೆ !?
ನೀವು ನಿಜಕ್ಕೂ ಮನುಷ್ಯರಾಗಿದ್ದರೆ, ನಿಮಗೆ ಎದೆಗಾರಿಕೆ ಎನ್ನುವದೇ ಇದ್ದರೆ, ನಿಮ್ಮಲ್ಲಿ ಹರಿಯುವುದು ಈ ದೇಶದ ಬಗೆಗಿನ ಅಭಿಮಾನದ ರಕ್ತವೇ ಆಗಿದ್ದರೆ ಒಬ್ಬ ರೈತನಾಗಿ ನಾನು ಹಾಕುವ ಈ ಸವಾಲನ್ನು ಒಪ್ಪಿಕೊಳ್ಳಿ.
“ನಿಮಗೆ ನಾನು ನನ್ನ ಜಮೀನಿನಲ್ಲೇ ‘ಒಂದು ಗುಂಟೆ’ ಜಮೀನು ನೀಡುತ್ತೇನೆ. ಸಾವಯವ ಕೂಡ ಒಂದು ಕೃಷಿ ವಿಧಾನ, ಅದಕ್ಕೂ ಬಿಟಿಗೂ ಸಂಬಂಧವೇ ಇಲ್ಲ, ಬಿಟಿಯಿಂದ ಭೂಮಿಗೆ, ಜೀವ ಸಂಕುಲಕ್ಕೆ ಯಾವುದೇ ನಷ್ಟವಿಲ್ಲ ಎಂಬುದನ್ನು ನಮ್ಮ ನೆಲದ ಮೇಲೆ ಪ್ರಯೋಗಿಸಿ ತೋರಿಸಿ. ವಿಷಯ ಇಷ್ಟೇ... ನಾನು ಕೊಡುವ ಒಂದು ಗುಂಟೆ ಜಮೀನಿನಲ್ಲಿ ನೀವು ಯಾವುದಾರೂ ಗೊಬ್ಬರವನ್ನಾದರೂ ಬಳಸಿ, ಒಂದು ವರ್ಷ ಕಾಲಾವಕಾಶ ತೆಗೆದುಕೊಳ್ಳಿ, ಹೊಲಕ್ಕಿಳಿದು ನಿಮ್ಮ ಕೈಯ್ಯಾರೆ ಕೃಷಿ ಮಾಡಿ, ಅದರಲ್ಲಿ ಸಾಮಾನ್ಯ ರೈತ ಬೆಳೆಯುವಷ್ಟೇ ಬೆಳೆಯನ್ನು ತೆಗೆದು ತೋರಿಸಿ. ಆಗ ನಿಜಕ್ಕೂ ನಿಮಗೆ ಕೃಷಿಯ ಬಗ್ಗೆ ಗಂಧ ಗಾಳಿ ಗೊತ್ತಿದೆ ಎಂದು ತಿಳಿಯುತ್ತೇನೆ."
ಈ ದೇಶದ ರೈತರು ಇಂದು ನಿಮ್ಮಂಥವರಿಗಾಗಿಯೇ ಜೀವನದುದ್ದಕ್ಕೂ ಜೀವ ತೇಯುತ್ತಲೇ ಬಂದಿದ್ದಾರೆ. ಬುದ್ದಿಗೇಡಿ ವಿಜ್ಞಾನಿ , ಮುಟ್ಟಾಳ ಅಕಾರಿಗಳ ಮಾತು ಕೇಳುತ್ತಲೇ ಕೃಷಿ ಭೂಮಿ ದಿನೇ ದಿನೇ ಒಂದೆಡೆ ಕರಗುತ್ತಿದ್ದರೆ ಮತ್ತೊಂದೆಡೆ ಅಮಾಯಕರ ಮೇಲೆ ದೌರ್ಜನ್ಯ ನಡೆಸಿ ಕಸಿದುಕೊಳ್ಳುತ್ತಿದ್ದೀರಿ. ಇದರಿಂದ ರೈತ ಮತ್ತು ಆತನ ಕುಟುಂಬ ಬೀದಿಗೆ ಬೀಳುತ್ತಿದೆ. ಹಾಗೆ ಬಲವಂತವಾಗಿ ಅಥವಾ ಬಣ್ಣದ ಮಾತಿನಿಂದ ಮರುಳು ಮಾಡಿ ಕಸಿದುಕೊಂಡು ನೀಡಿದ ಪರಿಹಾರ ಒಂದು ಹೊತ್ತಿನ ಕೂಳಿಗೂ ಸಾಕಾಗುತ್ತಿಲ್ಲ!!
ರೈತರಿಗೆ ನಿಮ್ಮ ಕಾನೂನು ಗೊತ್ತಿಲ್ಲ, ನಿಮ್ಮ ಬುದ್ದಿವಂತಿಕೆ ತಂತ್ರಗಾರಿಕೆ ಗೊತ್ತಿಲ್ಲ, ಕುತಂತ್ರವಂತೂ ಮೊದಲೇ ತಿಳಿದಿಲ್ಲ. ಅವರು ನಿರ್ಮಲರು, ನಿಮ್ಮಂತೆ ಕಲಬೆರಕಿಗಳಲ್ಲ... ಅವರಿಗೆ ಗೊತ್ತಿರುವುದೊಂದೇ ಕೃಷಿ, ಕೃಷಿ ಮತ್ತು ಕೃಷಿ.... ಭೂಮಿಯನ್ನೇ ತಮ್ಮ ತಾಯಿಯೆಂದು ನಿತ್ಯವೂ ಪೂಜಿಸಿ, ಅದನ್ನೇ ನಂಬಿಕೊಂಡು ಬದುಕುತ್ತಿರುವವರು ನಿಮ್ಮಂತವರ ಕುತಂತ್ರಕ್ಕೆ ಬಲಿಯಾಗಿ ನಿಟ್ಟುಸಿರು ಬಿಡುತ್ತಿದ್ದಾರೆ. ಅವರ ಶಾಪ ನಿಮಗೆ ತಟ್ಟದೆ ಇರದು. ನಾವೇ ಬುದ್ದಿವಂತರು, ಪ್ರಭುದ್ಧರು ಜಗತ್ತನ್ನೇ ಜಯಿಸಬಲ್ಲೆವು ಎಂದು ಕೊಬ್ಬಿನಿಂದ ಬೊಬ್ಬಿಟ್ಟರೂ ಪ್ರಕೃತಿ ಮುಂದೆ ನೀವೆಲ್ಲಾ ಬಚ್ಚಾಗಳು.
ಇಂದು ಮಳೆ ಬರುತ್ತದೆ ಎಂದು ನಿಮ್ಮ ವಿeನಿಗಳು ಹೇಳಿದ್ದು, ಅದು ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಕಂಡು ಹೊಲದಲ್ಲಿ ಬೀಜ ಬಿತ್ತಿ, ಅದು ಬರದಿದ್ದಾಗ ರೈತರು ಪ್ರತೀ ಸಾರಿ ನಿಮಗೆ ಹಿಡಿ ಶಾಪ ಹಾಕಿದ್ದಾರೆ, ಹಾಕುತ್ತಲೇ ಇದ್ದಾರೆ. ಮಳೆ ಬರುವುದಿಲ್ಲ ಎಂದಾಗಲೆಲ್ಲಾ ರೈತರ ಬದುಕಿನಲ್ಲಿ ಸುನಾಮಿಯೇ ಅಪ್ಪಳಿಸಿದೆ. ಆ ಸತ್ಯ, ನಿಮ್ಮ ವಿಜ್ಞಾನದ ಬಂಡವಾಳ ನಿಮ್ಮ ಆತ್ಮ ಸಾಕ್ಷಿಗೂ ಗೊತ್ತು. ಆದರೆ ನೀವು ಆತ್ಮಸಾಕ್ಷಿಯನ್ನು ಮಾರಿಕೊಂಡವರು. ನಮಗೆ ಅದು ಅರ್ಥ ಆಗದು...
ಮತ್ತೊಮ್ಮೆ ಹೇಳುತ್ತೇನೆ ನನ್ನ ಸವಾಲಿಗೆ ರೆಡಿಯಾದರೆ ನೀವು ಯಾವತ್ತಾದರೂ ಸರಿ ಬನ್ನಿ. ನಾನು ಭೂಮಿ ನೀಡಲು ರೆಡಿ. ಇಲ್ಲದಿದ್ದರೆ ಅಮಾಯಕ ರೈತರನ್ನು ಅನಾವಶ್ಯಕವಾಗಿ ಹಾದಿ ತಪ್ಪಿಸುವ ಬದಲು ‘ತೆಪ್ಪಗೆ ಕುಳಿತುಕೊಳ್ಳಿ’. ಇಲ್ಲದಿದ್ದರೆ ಅದರ ಪರಿಣಾಮವನ್ನು ಮುಂದೆ ನೀವೇ ಅನುಭವಿಸುತ್ತೀರಿ... ಇದನ್ನು ಬೆದರಿಕೆ ಎಂದು ಭಾವಿಸಬೇಡಿ, ರೈತರು ನಿಮ್ಮಷ್ಟು ಸಹನಶೀಲರಲ್ಲ, ಪಿತ್ತ ನೆತ್ತಿಗೇರಿದರೆ ಅವರಷ್ಟು ಕೆಟ್ಟವರು ಈ ದೇಶದಲ್ಲಿ ಮತ್ತಾರೂ ಇಲ್ಲ ಹಾಗಾಗಿ ಇದು ಎಚ್ಚರಿಕೆ...

ಜತೆಗೆ ನಿಮಗೆ ಕೆಲವು ಪ್ರಶ್ನೆಗಳಿವೆ. ಸಾಧ್ಯವಾದರೆ ಮನಸ್ಸಾಕ್ಷಿಯಿದ್ದರೆ ಉತ್ತರಿಸಿ...
* ನಿಮಗೆ ಎಂದಾದರೂ ವಿಷ ಕುಡಿದು ಅನುಭವ ಇದೆಯೇ ?
* ಬಿಟಿ ಹತ್ತಿಯನ್ನು ಸದ್ದಿಲ್ಲದೆ ಈ ದೇಶದ ರೈತರ ಮನೆಗೆ ತಳ್ಳಿದ್ದು ನೀವೆ ತಾನೆ ?
*ಬಿಟಿ ಹತ್ತಿ ಬೆಳೆದ ಭೂಮಿ ಯಾಕೆ ಹಂತ ಹಂತವಾಗಿ ಬಂಜರಾಗುತ್ತಿದೆ ?
* ಬ್ರೂಣದಲ್ಲಿದ್ದ ಶಿಶುವಿನ ಲಿಂಗ ಪತ್ತೆ ಹಚ್ಚಿದ ನಿಮ್ಮ ವಿeನದಿಂದ ಇಂದು ಏನಾಗಿದೆ ?
*ಡಿಡಿಟಿ, ಎಂಟೋಸಲಾನ್‌ಗಳನ್ನು ಮಾರುಕಟ್ಟೆಗೆ ಬಿಡುವಾಗ ಅದರ ಅವಗುಣಗಳನ್ನು ಯಾಕೆ ಜನರಿಗೆ ತಿಳಿಸಲಿಲ್ಲ ?
* ಈ ಕ್ರಿಮಿನಾಶಕದಿಂದ ದೇಶದ ಉದ್ದಗಲಕ್ಕೂ ಆದ ದುಷ್ಪರಿಣಾಮವನ್ನು ನೀವು ಹತ್ತಿರದಿಂದ ಕಂಡೀದ್ದೀರಾ?
* ಬದುಕಿನಲ್ಲಿ ಒಮ್ಮೆಯಾದರೂ ಗಾಯದ ಮೇಲೆ ಬರೆ ಎಳೆದುಕೊಂಡಿದ್ದೀರಾ? ಅದರ ನೋವು ಹೇಗಿರುತ್ತದೆ ಗೊತ್ತಾ ?

Thursday, January 21, 2010

ಬ್ರೇಕಿಂಗ್ ನ್ಯೂಸ್ : ರಂಗ ಕರ್ಮಿ ಚಂದೋಡಿ ಲೀಲಾ ನಿಧನ

ಹಿರಿಯ ರಂಗ ಕರ್ಮಿ, ಪದ್ಮಶ್ರೀ ಪ್ರಶಸ್ತಿ ವಿಜೇತೆ ಚಂದೋಡಿ ಲೀಲಾ (೭೨) ಗುರುವಾರ (ಜ.೨೧) ಬೆಂಗಳೂರಿನ ವೋಕಾರ್ಟ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ೧೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಕೆಲ ದಿನಗಳಿಂದ ಹೃದಯ ಸಂಭಂದಿ ಕಾಯಿಲೆಯಿಂದ ಬಳಲುತ್ತಿದ್ದರು...
ಕೆ.ಬಿ.ಆರ್. ನಾಟಕ ಕಂಪನಿಯಲ್ಲಿ ಅವಿರತವಾಗಿ ದುಡಿದ ಅವರು "ಪೊಲೀಸನ ಮಗಳು" ನಾಟಕ ೪೫೦೦ ಪ್ರದಶನ ಕಾಣುವ ಮೂಲಕ ಇತಿಹಾಸ ನಿರ್ಮಿಸಿತ್ತು.

Wednesday, January 20, 2010

ಬಿಟಿ ಮತ್ತು ರೈತರು

ರಾಜ್ಯದಲ್ಲಿ ಮಾತ್ರವಲ್ಲ ಈಗ ದೇಶದೆಲ್ಲೆಡೆ ಬಿಟಿ ಬದನೆ ಬಗ್ಗೆ ಚರ್ಚೆ ನಡೆಯುತ್ತಿದೆ. ರೈತರು ಮಾತ್ರವಲ್ಲ ಈ ದೇಶದ ನೆಲ ಮತ್ತು ರೈತಪರ ಕಾಳಜಿಯುಳ್ಳ ಎಲ್ಲರೂ ಇದನ್ನು ಸಾರಸಗಟಾಗಿ ವಿರೋಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸೇರಿದಂತೆ ದೇಶದ ೭ ರಾಜ್ಯಗಳು ಈಗಾಲೇ ಈ ಕುಲಾಂತರಿ ತಳಿಗಳನ್ನು ವಿರೋಸಿವೆ. ವಿಶ್ವದ ಶೇ.೮೦ ರಾಷ್ಟ್ರಗಳು ಕೂಡ ಇದನ್ನು ವಿರೋಸಿದ್ದರಿಂದ ಈಗ ಅಮೆರಿಕದ ಕಣ್ಣು ಭಾರತದ ಮೇಲೆ ಬಿದ್ದಿದೆ!
ಇಂಥ ಅಮೆರಿಕದ ಕುತಂತ್ರವನ್ನು ಹಿಂದು ಮುಂದು ನೋಡದೆ ಒಪ್ಪಿಕೊಂಡು ಶೇ.೬೫ ಕುಲಾಂತರಿ ಬೀಜ ಬಳಸಿದ ಅರ್ಜೆಂಟೈನಾ ಮತ್ತು ಪೆರುಗ್ವೆ ದೇಶಗಳಲ್ಲಿ ಈಗ ಇಳುವರಿ ಕಡಿಮೆಯಾಗಿದೆ. ಆದರೆ ಇಷ್ಟೆಲ್ಲಾ ಕುತಂತ್ರವನ್ನು ಇತರ ದೇಶಗಳ ಮೇಲೆ ಹೇರುತ್ತಿರುವ ಅಮೆರಿಕ ಮಾತ್ರ ಸಾವಯವ ಆಹಾರವನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ. ಎಲ್ಲ ದೇಶಗಳ ಮೇಲೆ ಹೀಗೆ ಬಿಟಿ ಬೀಜಗಳನ್ನು ಬಿತ್ತಲ್ಲು ಹಚ್ಚಿದರೆ ಮುಂದೊಂದು ದಿನ ತಮಗೇ ಸಾವಯವ ಆಹಾರ ಸಿಗುವುದಿಲ್ಲ ಎಂಬ ಸಣ್ಣ ಸತ್ಯ ಕೂಡ ದೊ(ದ)ಡ್ಡಣ ಅಮೆರಿಕಗೆ ತಿಳಿದಿಲ್ಲ. ಇದೇ ವಿಪರ್ಯಾಸ.
ಹೀಗೆ ಆತುರಾತಿರವಾಗಿ ಬಿಟಿ ಬದನೆಯನ್ನು ಭಾರತದ ರೈತರ ಮೇಲೆ ಹೇರಲು ಹುನ್ನಾರ ನಡೆಸಿರುವ ಅಮೆರಿಕ, ಕೇಂದ್ರ ಸರಕಾರದ ಜುಟ್ಟು ಹಿಡಿದು ಕೂತಿದೆ. ಈಗಾಗಲೇ ಭಾರತದ ರೈತರ ಮೇಲೆ ಬಲವಂತವಾಗಿ ಬಿಟಿ ಬದನೆಯನ್ನು ಹೇರಿ ಶೇ.೫೦ರಷ್ಟು ರೈತರ ಭೂವಿಯನ್ನು ಹಾಳುಗೆಡವಿರುವ ಅಮೆರಿಕದ ‘ಸಂಜೆಂಟಾ’, ‘ಮಾನ್ಸಂಟೋ’ದಂಥ ಬಹುರಾಷ್ಟ್ರೀಯ ಕಂಪೆನಿಗಳು ಈಗ ಬಿಟಿ ಬದನೆಯನ್ನು ಮುಂದಿಟ್ಟುಕೊಂಡು ಕೂತಿವೆ.
ಬಿಟಿ ಹತ್ತಿ ಬೆಳೆಯುತ್ತಿರು ರೈತರಲ್ಲಿ ಈಗಾಗಲೇ ಉಬ್ಬಸ, ಚರ್ಮರೋಗದಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಅದರ ಗಾಯ ಇನ್ನೂ ಹಸಿ ಹಸಿಯಾರಿಗುವಾಗಲೇ ಅದರ ಮೇಲೆ ಮತ್ತೊಂದು ಬರೆ ಎಳೆಯಲು ‘ಸಂಜೆಂಟಾ’ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ಇದಕ್ಕೆ ‘ಶಾಂತಾರಾಮ್‌ರಂಥ ಏಜೆಂಟ್’ರನ್ನು ಬಳಸಿಕೊಳ್ಳುತ್ತಿದೆ. ಅದಕ್ಕೆ ಇಂಥವರೆಲ್ಲಾ ವಿeನಿಗಳು ಎಂಬ ಹೆಸರಿನಲ್ಲಿ ಕೋಲೆ ಬಸವನ ರೀತಿ ತಲೆದೂಗುತ್ತಿರುವುದಲ್ಲದೆ ಈ ದೇಶದ ರೈತರನ್ನೂ ತಲೆದೂಗಲು ಹೇಳುತ್ತಿದ್ದಾರೆ.
ಇಲ್ಲಿಯ ರೈತರು ಬೆಳೆದ ಅನ್ನ ತಿಂದು, ನೀರು ಕುಡಿದು ಬೆಳೆದು, ಈ ನೆಲದಲ್ಲಿ ಕಲಿತು ದೊಡ್ಡವರಾಗಿ ಉನ್ನತ ಶಿಕ್ಷಣವನ್ನ ಇನ್ಯಾವುದೋ ಪರದೇಶಿಗಳ ಕೈಲಿ ಕಲಿತು ಅದನ್ನೇ ಮೈಗೂಡಿಸಿಕೊಂಡು ಅವರು ಕೊಟ್ಟ ಪುಡಿಗಾಸನ್ನು ಆರಿಸಿಕೊಳ್ಳುತ್ತಿರುವ ಶಾಂತಾರಾಮ್‌ರಂಥವರು ಜನ್ಮ ನೀಡಿ ಸಾಕಿ ಬೆಳೆಸಿದ ಭೂಮಿಗೇ ವಿಷವಿಕ್ಕಲು ಅಣಿಯಾಗಿದ್ದಾರೆ. ಇಂಥ ‘ದೇಶದ್ರೋಹಿಗಳು’, ‘ಹೃದಯ ಹೀನರು’, ಕಿರಾತಕರಿಗೆ ಅದ್ಯವಾವ ರೀತಿ ಬುದ್ದಿ ಹೇಳಬೇಕೋ ತಿಳಿಯದು.
ಅದಿರಲಿ, ಇಂಥ ಮಾರಕ ಜೀ ವಿರೋ ವಿಚಾರದ ಬಗ್ಗೆ ದೇಶಾದ್ಯಂತ ಬಿಸಿ ಬಿಸಿ ಚರ್ಚೆ ನಡೆಸುವ ಸಂದರ್ಭದಲ್ಲಿ ಬೆಂಗಳೂರಿಗೆ ಅದೇ ವಿಚಾರದ ಬಗ್ಗೆ ಚರ್ಚೆ ನಡೆಸಲು ಖ್ಯಾತ ವಿಜ್ಞಾನಿ ಡಾ. ಪುಷ್ಪ ಎಂ.ಭಾರ್ಗವ್ ಜ.೨೦ರಂದು ಆಗಮಿಸಿದ್ದರು.
ಇದರ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿಯೂ ಪ್ರಚಾರ ಮಾಡಲಾಗಿತ್ತು. ‘ಬಿಟಿ ಬದನೆಯ ತೆರೆಮರೆಯ ಸತ್ಯಕಥೆ’ ಕುರಿತ ಭಾಷಣ ಹಾಗೂ ಚರ್ಚೆ’ಯಲ್ಲಿ ಭಾಗವಹಿಸಲು ರೈತರು, ರೈತ ನಾಯಕರಿಗೆ ಮನವಿ ಮಾಡಲಾಗಿತ್ತು. ಜತೆಗೆ ಚರ್ಚೆಗೆ ಮುಂಚಿತವಾಗಿಯೇ ಹೆಸರು ನೋಂದಣಿ ಮಾಡಿಸಲು ತಿಳಿಸಲಾಗಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಕೆಲವೇ ಕೆಲವು ರೈತರು ಮಾತ್ರ ಅಲ್ಲಿಗೆ ಆಗಮಿಸಿದ್ದರು. ಇನ್ನು ಹೆಸರು ನೋಂದಾಯಿಸಿದ ಪ್ರಮುಖ ರೈತರು ಕೂಡ ಚರ್ಚೆ ವೇಳೆ ಕಾರ್ಯಕ್ರಮದಲ್ಲಿರಲಿಲ್ಲ! ಇದು ನಮ್ಮ ರೈತರ, ರೈತನಾಯಕರ ಉತ್ಸಾಹ, ಆಕ್ರೋಶ ಮತ್ತು ಬುದ್ದಿವಂತಿಕೆ...!!
ರೈತರಿಗೆ ರೈತಾಪಿಯ ಜತೆಗೆ ಅದೆಷ್ಟು ಅನಿವಾರ್ಯತೆ, ಹೊಂದಾಣಿಕೆಗಳಿರುತ್ತವೆ ಎಂಬುದು ಗೊತ್ತು. ಆದರೂ ಇಂಥ ಸುಸಂದರ್ಭಗಳಲ್ಲಿ ಒಂದು ದಿನದ ಮಟ್ಟಿಗಾದರೂ ಬಿಡುವು ಮಾಡಿಕೊಂಡು ಭಾಗವಹಿಸುವುದು, ತಮ್ಮ ಪರ ಕಾಳಜಿ ಇರುವವರ, ತಮ್ಮನ್ನು ಬೆಂಬಲಿಸುವವರ ಜತೆ ಕುಳಿತು ಚರ್ಚೆ ನಡೆಸುವ ಉತ್ಸಾಹವನ್ನಾದರೂ ತೋರಬೇಕು. ಅದಾಗದೆ ಹೋದರೆ ಮುಂದೊಂದು ದಿನ ಇಂಥ ಬಹುರಾಷ್ಟ್ರೀಯ ಕಂಪನಿಗಳು, ಏಜೆಂಟರು ರೈತರನ್ನು ತಿಂದು ತೇಗುವುದರಲ್ಲಿ ಸಂಶಯವಿಲ್ಲ.
ಡಾ.ಪುಷ್ಪ ಎಂ.ಭಾರ್ಗವ್ ಹೇಳಿದ್ದೇನು?
ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಆಯಾ ಪ್ರದೇಶಕ್ಕೆ ಅನುಗುಣವಾಗಿ ಆಹಾರ ಪದ್ಧತಿ ರೂಪಿತವಾಗಿದೆ. ಅದರ ಆಧಾರದ ಮೇಲೆಯೇ ಅಲ್ಲಿನ ರೈತರು ಆಹಾರ ಬೆಳೆಯನ್ನು ಬೆಳೆಯುತ್ತಾರೆ. ಅದೆಲ್ಲವೂ ಅಲ್ಲಿನ ಹವಾಗುಣಕ್ಕೆ ಹೊಂದಿಕೊಂಡಿರುತ್ತದೆ. ಅಲ್ಲಿ ಏನು ಬೆಳೆಯಬೇಕು ಎಂಬುದನ್ನು ರೈತರೇ ನಿರ್ಧರಿಸುತ್ತಾರೆ. ಆದರೆ ಈಗ ಲಾಭದಾಸೆಗಾಗಿ ಮಾನ್ಸಾಂಟೋ ಹಾಗೂ ಸಂಜೆಂಟಾದಂತ ಬಹುರಾಷ್ಟ್ರೀಯ ಕಂಪನಿಗಳು ರೈತರ ಮೇಲೆ ವಿಷಕಾರ ಬೀಜಗಳನ್ನು ಬಿತ್ತಲು ಒತ್ತಡ ಹೇರುತ್ತಿವೆ.
ಬಿಟಿ ತಳಿ ಪರಿಸರಕ್ಕೆ ಮಾರಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಪರೀಕ್ಷೆ ಮಾಡಲು ಕೂಡ ಭಾರತದಂಥ ದೇಶಗಳಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ಲ್ಯಾಬ್‌ಗಳಿಲ್ಲ. ಒಂದು ವೇಳೆ ಪರೀಕ್ಷೆ ಮಾಡಲು ಮುಂದಾದರೂ ಅದರ ಫಲಿತಾಂಶ ಗೊತ್ತಾಗಲು ಕನಿಷ್ಠ ೨೦ ವರ್ಷ ಬೇಕು.
ಹೀಗಾಗಿ ಕೇಂದ್ರ ಸರಕಾರ ರೈತಸ್ನೇಹಿಯಾಗಿ ನಿರ್ಧಾರ ಕೈಗೊಂಡು ಬಿಟಿ ಬದನೆಯನ್ನು ತಿರಸ್ಕರಿಸುವುದು ಒಳಿತು. ಬಿಟಿ ಬದನೆ ಕುರಿತು ಸಾಕಷ್ಟು ಜನರಲ್ಲಿ ಅರಿವಿನ ಕೊರತೆಯಿದೆ. ಮುಖ್ಯವಾಗಿ ರೈತರಲ್ಲಿ ಈ ಕುರಿತ ಜಾಗೃತಿ ಮೂಡಲೇಬೇಕಿದೆ. ಬಿಟಿ ಬದನೆ ಕುರಿತು ಎದುರಾಗುವ ಸಮಸ್ಯೆಯ ಸಂಪೂರ್ಣ ವಿವರ ಇದುವರೆಗೂ ಸಿಕ್ಕಿಲ್ಲ. ದೊರೆತ ಮಾಹಿತಿ ಆಧರಿಸಿ ವಿಶ್ಲೇಷಿಸಿದಾಗ ಇದರಿಂದ ಆಗುವ ದುಷ್ಪರಿಣಾಮವೇ ಹೆಚ್ಚು.
ಜತೆಗೆ ಬಿಟಿ ಎಂದಾಕ್ಷಣ ಅದರ ಹಿಂದೆ ಕೇವಲ ಬೀಜ ಮಾತ್ರವಲ್ಲ ಅರ್ಥಶಾಸ್ತ್ರ, ರಾಜಕೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪಿತೂರಿ ಎಲ್ಲವೂ ಅಡಗಿದೆ. ಹೀಗಾಗಿ ಅದೊಂದು ಸುಳ್ಳಿನ ಕಂತೆ. ಭಾರತಕ್ಕೆ ಸ್ವಾತಂತ್ರ್ಯವೇನೊ ಬಂದಿದೆ ಆದರೆ ಇಂಥ ಕಂಪನಿಗಳ ವರ್ತನೆ ಒತ್ತಡಗಳನ್ನು ನೋಡಿದರೆ ಎಲ್ಲಿ ಸ್ವಾತಂತ್ರ್ಯ ಬಂದಿದೆ ಎಂಬ ಪ್ರಶ್ನೆ ಕಾಡುತ್ತದೆ ಎಂದು ವಿeನಿ ಪುಷ್ಪ ಎಂ.ಭಾರ್ಗವ್ ಹೇಳಿದರು. (ಇವು ಪ್ರಮುಖ ಅಂಶಗಳು ಮಾತ್ರ)
ರೈತರೇ ಬನ್ನಿ...
ಅಂದ ಹಾಗೆ ಇದೇ ಬಿಟಿ ಬಗ್ಗೆ ಚರ್ಚೆ ನಡೆಸಲು ಹಾಗೂ ರಾಜ್ಯದ ರೈತರ ಅಭಿಪ್ರಾಯ ಸಂಗ್ರಹಿಸಲು ಜ.೨೫ರ ಸೋಮವಾರ ಕೇಂದ್ರ ಪರಿಸ ಮತ್ತು ಅರಣ್ಯ ಸಚಿವ ಜಯ್‌ರಾಮ್ ರಮೇಶ್ ಆಗಮಿಸಲಿದ್ದಾರೆ.
ಬೆಂಗಳೂರಿ ರೆಸಿಡೆನ್ಸಿ ರಸ್ತೆಯಲ್ಲಿರುವ ಸೈಂಟ್ ಜೋಸೆಂಫ್ ಪಿಯು ಕಾಲೇಜು ಮುಂಭಾಗದಲ್ಲಿರುವ ಗುಡ್ ಶೇಫರ್ಡ್ ಆಡಿಟೋರಿಮ್‌ನಲ್ಲಿ ಶೀಘ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ರೈತರು, ರೈತಪರ ಕಾಳಜಿಯುಳ್ಳವರು ಅಂದು ಸಮಯಕ್ಕಿಂತ ಮುಂಚಿತವಾಗಿಯೇ ಬಂದು ಕುಳಿತರೆ ಒಳ್ಳೆಯದು. ಜತೆಗೆ ತಮ್ಮ ರೈತಪರ ನಿಲುವನ್ನು ಪ್ರಕಟಿಸಿದರೆ ಇನ್ನೂ ಒಳಿತು. ರೈತರದಲ್ಲದವರಿಗೂ ಇದು ರಾಜ್ಯದ ರೈತರ ಅನ್ನದ ಋಣವನ್ನು ತೀರಿಸಲು ಒಂದು ಸುವರ್ಣಾವಕಾಶ !

Saturday, January 16, 2010

ಬನ್ನಿ ಪುಸ್ತಕ ಪರಿಷೆಗೆ

ಇದು ಹೊತ್ತಗೆ ಎತ್ತಿಕೊಳ್ಳುವ ಹೊತ್ತು
ಕಡಲೆ ಪರಿಷೆ ನಡೆಯೋ ಜಾಗ ಬೆಂಗಳೂರಿನ ಬಸವನಗುಡಿ ಇನ್ನೊಂದು ಪರಿಷೆಗೆ ಸಜ್ಜಾಗಿದೆ. ಈ ಬಾರಿ ಕಡಲೆ ಸಿಗಲ್ಲ. ಪುಸ್ತಕ ಸಿಗುತ್ತೆ !
ಇದು ‘ಪುಸ್ತಕ ಪರಿಷೆ’. ಹಿಂದೆ ನಡೆಯದಿದ್ದ ವಿನೂತನ ಪ್ರಯೋಗವಿದು. ಯಾವುದೇ ಪುಸ್ತಕ ಮೇಳ, ಪುಸ್ತಕ ಸಂತೆ ಅಥವಾ ಮಳಿಗೆಗೆ ಕಾಲಿಟ್ಟರೂ ಹಣ ಕೊಟ್ಟೇ ಪುಸ್ತಕ ಖರೀದಿ ಮಾಡಬೇಕು. ಹಳೇ ಪುಸ್ತಕದ ಅಂಗಡಿಗೆ ಕಾಲಿಟ್ಟರೂ ದುಡ್ಡು ಕೊಡದೆ ಒಂದು ಖಾಲಿ ಹಾಳೆಯೂ ಸಿಗುವುದಿಲ್ಲ ! ಅಂಥದ್ದರಲ್ಲಿ ಇಲ್ಲಿ ಪುಕ್ಕಟೆ, ಅದೂ ನಿಮಗೆ ಇಷ್ಟವಾದ ಪುಸ್ತಕ ದೊರೆಯುತ್ತದೆ !
ನಿಜ, ಅದೇ ಇಲ್ಲಿನ ವಿಶೇಷತೆ. ಜ.೧೭ರಂದು ಬಸವನಗುಡಿಯಲ್ಲಿ ‘ಪುಸ್ತಕ ಪರಿಷೆ’ ನಡೆಯಲಿದೆ. ‘ಸೃಷ್ಟಿ ವೆಂಚರ‍್ಸ್’ ಸಂಸ್ಥೆ ಈ ಕಾರ್ಯಕ್ರಮಕ್ಕೆ ಕೈ ಹಾಕಿದೆ. ‘ತಮಗೊಂದು ಪುಸ್ತಕ ಉಚಿತವಾಗಿ ಮತ್ತು ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿ’ ಎಂಬ ಘೋಷಣೆಯೊಂದಿಗೆ ನಡೆಸುತ್ತಿರುವ ಈ ಪರಿಷೆಗೆ ಈಗಾಗಲೇ ಸಾಕಷ್ಟು ಅಮೂಲ್ಯ ಪುಸ್ತಕಗಳು ಕೊಡುಗೆಯಾಗಿ ಬಂದಿವೆ. ಪುಸ್ತಕಗಳನ್ನು ಪ್ರೀತಿಸುವವರು, ಕೊಳ್ಳಲು ಹಣವಿಲ್ಲ ಎಂದು ಯೋಚಿಸುವವರೂ ಈ ಪರಿಷೆಗೆ ಆಗಮಿಸಬಹುದು. ಆದರೆ ನಿಮಗಿಷ್ಟವಾದ ಒಂದೇ ಒಂದು ಪುಸ್ತಕವನ್ನು ಮಾತ್ರ ತೆಗೆದುಕೊಂಡು ಹೋಗಬಹುದು.
ಇದು ಓದುಗರ ಅಭಿರುಚಿ ಹೆಚ್ಚಿಸುವ ಜತೆಗೆ ಪುಸ್ತಕಗಳ ಬಗ್ಗೆ ಓದುಗರಲ್ಲಿ ಆಸಕ್ತಿಯನ್ನೂ ಹೆಚ್ಚಿಸಲಿದೆ ಎಂಬುದು ಸುಳ್ಳಲ್ಲ. ಈ ವಿಶೇಷತೆಯಿಂದಾಗಿಯೇ ಈಗಾಗಲೇ ಪರಿಷೆ ಬಗ್ಗೆ ಪುಸ್ತಕಪ್ರಿಯರಲ್ಲಿ ಕುತೂಹಲ ಆರಂಭವಾಗಿದೆ. ಕನ್ನಡದಲ್ಲಿ ಓದುಗರೇ ಇಲ್ಲವಾಗುತ್ತಿದ್ದಾರೆ ಎಂಬ ಅಪವಾದದ ನಡುವೆಯೂ ಪುಸ್ತಕಗಳು ಹರಿದು ಬರುತ್ತಿರುವುದು ಹಾಗೂ ಈ ಬಗ್ಗೆ ಪುಸ್ತಕ ಪ್ರೇಮಿಗಳ ನಡುವೆ ಚರ್ಚೆಯಾಗುತ್ತಿರುವುದು ನೋಡಿದರೆ ಆ ಮಾತು ಸುಳ್ಳು ಎನಿಸದಿರದು. ಪಂಚಭೂತ, ಬಣ್ಣದ ಬಯಲು, ವಿeನ ಶಿಬಿರದಂಥ ಕಾರ್ಯಕ್ರಮ ನಡೆಸಿದ್ದ ‘ಸೃಷ್ಟಿ ವೆಂಚರ‍್ಸ್’ ಈಗ ಈ ಪ್ರಯೋಗಕ್ಕೆ ಕೈ ಹಾಕಿದೆ.
ಇಲ್ಲಿ ಎಲ್ಲ ರೀತಿಯ ಪುಸ್ತಕಗಳೂ ಸಿಗಲಿವೆ. ಇಲ್ಲಿಗೆ ಬರಲು ಯಾವುದೇ ನಿರ್ಬಂಧಗಳಿಲ್ಲ. ಪುಸ್ತಕಪ್ರಿಯನಾಗಿರಬೇಕು ಎಂಬುದೊಂದೇ ಕಟ್ಟಳೆ. ಬರುವಾಗ ಒಂದಾದರೂ ಪುಸ್ತಕ ತನ್ನಿ ಎಂಬುದು ಪ್ರೀತಿಯ ಕಂಡಿಷನ್. ಬರುತ್ತೀರಲ್ವಾ...?

೧೭ರಂದು ಬಸವನಗುಡಿಯಲ್ಲಿಪುಸ್ತಕ ಪರಿಷೆನಡೆಯಲಿದೆ. ‘ಸೃಷ್ಟಿ ವೆಂಚರ್ಸ್ಸಂಸ್ಥೆಯ ಸಾಹಸವಿದು. ‘ತಮಗೊಂದು ಪುಸ್ತಕ ಉಚಿತವಾಗಿ ಮತ್ತು ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿಎಂಬುದು ಇದರ ಘೋಷಣೆ.

ಬಸವನಗುಡಿಯಲ್ಲಿ .೧೭ರಂದು ಬೆಳಗ್ಗೆ೧೦ ಗಂಟೆಗೆ ಪುಸ್ತಕ ಪರಿಷೆಯನ್ನು ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಉದ್ಘಾಟಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಕಾರದ ಅಧ್ಯಕ್ಷ ಡಾ.ಸಿದಟಛಿಲಿಂಗಯ್ಯ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಪರಿಷೆ ನಡೆಯುವ ಸ್ಥಳ: ನಂ.೮೧, ೧ನೇ ಮಹಡಿ,(ಪುಳಿಯೊಗರೆ ಪಾಯಿಂಟ್ ಮೇಲೆ), ..ಟಿ.ರಸ್ತೆ, ಎನ್.ಆರ್.ಕಾಲನಿ, ಬಸವನಗುಡಿ, ಬೆಂಗಳೂರು
-ಭಾಗ್ಯ ನೆಲ್ಲಿಕ್ಕಳಯ