
ಕಳೆದ ಬಾರಿ ಕೂಡ ಇದೆ ರೀತಿ ಅಮಾಯಕ ಯುವಕ ಯುವತಿಯರ ಮೇಲೆ ದಾಳಿ ನಡೆದಿತು. ಆಗ ಈಗಿನ ಜೆಡಿಎಸ್ ಮುಖಂಡ ಮಹೇಂದ್ರಕುಮಾರ್ ನೇತೃತ್ವ ವಹಿಸಿದ್ದರು. ಇಂದು ಅವರೇ ಇದರ ವಿರುದ್ಧ ಮಾತನಾಡಿದ್ದಾರೆ. ಅಂದರೆ ಅಲ್ಲಿಗೆ ಈ ವೇದಿಕೆ ರಾಜಕಾರಣಕ್ಕೆ ಇಲ್ಲವೇ ಅಲ್ಲಿನ ಕೆಲವು ಪುಂಡು ಪೋಕರಿಗಳಿಗೆ ಸಮಾಜದಲ್ಲಿ ದಿಡೀರ್ ಹೆಸರು ಪಡೆದುಕೊಳ್ಳಲು ಇದು ವೇದಿಕೆ ಆಗುತ್ತಿದೆ. ಇದಕ್ಕೆ ಅಮಾಯಕ ಯುವಕ ಯುವತಿಯರು ಮಾತ್ರ ಬಲಿಯಾಗುತ್ತಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಉಡುಪಿ-ಮಂಗಳೂರಿನ ಸಮುದ್ರ ತೀರದಲ್ಲಿ ಸರಕಾರವೇ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ರೇವು ಪಾರ್ಟಿಗೆ ಅವಕಾಶ ನೀಡಿ ಮೋಜು ಮಸ್ತಿಗೆ ಅನುವು ಮಾಡಿಕೊಟ್ಟಿತ್ತು. ಆಗ ಈ ಕಾರ್ಯಕರ್ತರು ಮಾತ್ರ ಅಂಡು ಸುಟ್ಟ ಬೆಕ್ಕಿನ ಹಾಗೆ ಕೂತಿದ್ದರು. ಇದೆಲ್ಲ ನೋಡಿದರೆ ಸರಕಾರದ ಕೃಪಾಪೋಷಿತ ನಾಟಕ ನಡೆಸುತಿದೆ ಎನಿಸುತ್ತದೆ.
ಹಿಂದೂ ಧರ್ಮದ ಹೆಸರಿನಲ್ಲಿ ತಾವೇ ಧರ್ಮ ರಕ್ಷಕರು ಎನ್ನುವ ಈ ಹಿಂದೂಪರ ಸಂಘಟನೆಗಳು ಮುಸ್ಲಿಂ ಹಾಗು ಕ್ರಿಶ್ಚಿಯನ್ ಸಂಘಟನೆಗಳನ್ನು ನಿಂದಿಸುತ್ತವೆ. ಹಾಗಾದರೆ ಇವರು ಮಾಡುತ್ತಿರುವುದು ಏನು? ಮತ್ತೊಂದು ತಾಲಿಬಾನ್ ಸಂಸ್ಕೃತಿ ಹುಟ್ಟು ಹಾಕುವುದಾ? ಇದು ಮನುಷ್ಯ ಸಂಸ್ಕೃತಿಯ...? ನೀ ಅತ್ತಂತೆ ಮಾಡು ನಾ ಸತ್ತಂತೆ ಮಾಡುತ್ತೇನೆ ಎನ್ನುತ್ತಿದೆ ಸರಕಾರ. ಇತ್ತ ಹಿಂದೂ ಜಾಗರಣಾ ವೇದಿಕೆಗೆ ಮಾನ ಮರ್ಯಾದೆ ಇಲ್ಲ... ಅತ್ತ ಬಿಜೆಪಿ ಸರಕಾರ ಕೂಡ ಲಜ್ಜೆಗೆಟ್ಟು ಕೂತಿದೆ... ನಿಜಕ್ಕೂ ಇವರೇನು ಆಧುನಿಕ ದುಷ್ಯಾಸನರೋ ಇಲ್ಲ ಆಧುನಿಕ ರಾವನರೋ...?