Tuesday, January 26, 2010

ಕುಲಾಂತರಿ ತಳಿ ಮತ್ತು ಕುಲಗೆಟ್ಟ ಶಾಂತಾರಾಮ್

ಓದುಗರು ಕ್ಷಮಿಸಬೇಕು, ಮೊದಲನೆಯದಾಗಿ ಈ ಲೇಖನವನ್ನು ಬರೆಯಲ ಪ್ರಮುಖವಾಗಿ ನನಗಿರುವ ಅರ್ಹತೆ ನಾನೊಬ್ಬ ರೈತ. ಎರಡನೆಯದು ಒಬ್ಬ ಜವಾಬ್ದಾರಿಯುತ ಪತ್ರಕರ್ತ. ಆ ಕಾರಣಕ್ಕಾಗಿಯೇ ಈ ‘ಖಾರವಾ ಲೇಖನ’
“ಬಿ.ಟಿ. ವಿರುದ್ಧ ಯಾರೊಬ್ಬ ರೈತರೂ ಮಾತನಾಡುತ್ತಿಲ್ಲ, ಮಾತನಾಡುವವರಿಗೆ ವಿeನದ ಗಂಧ ಗಾಳಿ ಗೊತ್ತಿಲ್ಲ" ಎನ್ನುತ್ತಿರುವ ಅಮೆರಿಕ ‘ದಲ್ಲಾಳಿ ಶಾಂತಾರಾಮ್’ ಪಕ್ಕಾ ‘ರೈತ ವಿರೋಧಿ, ‘ದೇಶ ದ್ರೋಹಿ’ ಎಂಬುದರಲ್ಲಿ ಎರಡು ಮಾತೇ ಇಲ್ಲ. ರೈತರಿಗೆ ಅಥವಾ ರೈತ ಪರವಾಗಿ ನಿಂತಿರುವವರಿಗೆ ‘ವಿಜ್ಞಾನ’ ಗೊತ್ತಿಲ್ಲ ಸರಿ. ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ದಲ್ಲಾಳಿಗೆ ರೈತರಿಗಿರುವಷ್ಟಾದರೂ ಜ್ಞಾನ’ವಿದೆಯೇ ಎಂಬುದನ್ನು ಮೊದಲು ಸಾಭೀತುಪಡಿಸಲಿ. ಆನಂತರ ಈ ದೇಶದ ರೈತರು ಜ್ಞಾನಿಗಳೋ ಅಜ್ಞಾನಿಗಳೋ ಎಂಬುದನ್ನು ತಿಳಿಯೋಣ.
ಸ್ವಾಮಿ ದಲ್ಲಾಳಿ ಮಹಾಶಯರೇ ನೀವು ಮಾತ್ರ ಈ ದೇಶದಲ್ಲಿ ದಲ್ಲಾಳಿಗಳಲ್ಲ ನಿಮ್ಮಂತ ‘ಹುಸಿ ಬೀಜಗಳು ಭಾರತದ ಮೂಲೆ ಮೂಲೆಯಲ್ಲಿವೆ. ನಿಮ್ಮಂಥವರ ಕಾರಣಕ್ಕಾಗಿಯೇ ಅಮಾಯಕ ರೈತರು ನಯವಾದ ನಿಮ್ಮ ವಂಚಕತನಕ್ಕೆ ಬಲಿಯಾಗಿ ಹಗಲಿರುಳು ನರಳಿದ್ದಾರೆ, ನರುಳುತ್ತಲೇ ಇದ್ದಾರೆ...
ನಮ್ಮ ರೈತರು ದಡ್ಡಶಿಖಾಮಣಿಗಳೆಂದು ನೀವು ಭಾವಿಸಿದ್ದರೆ ಅದು ನಿಮ್ಮ ‘ಜ್ಞಾನ’ವನ್ನು ಬಿಂಬಿಸುತ್ತದೆ. ಖಾಸಗಿ ಚಾನೆಲ್‌ಗಳಲ್ಲಿ ಕೂತು ಏಕಮುಖವಾಗಿ ವಾದ ಮಂಡಿಸುವ ಆ ಮೂಲಕ ‘ಸ್ವಯಂಘೋಷಿತ ಜ್ಞಾನಿಗಳು’ ಆಗಿರುವ ನಿಂಥವರು ರೈತರ ಮಧ್ಯೆ ಬಂದು ಉತ್ತರಿಸಿ, ಆಗ ನಿಮ್ಮ ಬಂಡವಾಳ ಬಯಲಾಗುತ್ತದೆ. ತಾನೇ ಜ್ಞಾನಿಯೆಂದು ಬೊಬ್ಬಿಡುತ್ತ ಗುಳ್ಳೆ ನರಿಯಂತೆ ಮಾಡುವ ನಿಮ್ಮಂತವರನ್ನು ಈ ದೇಶದ ರೈತರೇ ಸಾಕಿ ಬೆಳೆಸಿದ್ದು ಎಂಬುದನ್ನ ಮರೆಯಬೇಡಿ. ಕೊನೇ ಪಕ್ಷ ಅವರು ಬೆಳೆದು ನಿಮ್ಮಂತ ಹೆಗ್ಗಣಗಳಿಗೆ ತಿನ್ನಲು ಸುರಿದ ಆಹಾರದ ಋಣಕ್ಕಾದರೂ ಸರಿ ನ್ಯಾಯಯುತವಾಗಿ ಮಾತನಾಡುವುದನ್ನು ಕಲಿಯಿರಿ, ನೀವು ತಿಂದು ತೇಗುವ ಪ್ರತಿಯೊಂದೂ ರೈತ ಬೆಳೆದದ್ದು. ಅದರ ಹಿಂದೆ ಅವನ ಬೆವರಿನ ವಾಸನೆಯಿದೆ. ಅದನ್ನು ಮರೆತು ನಿಮ್ಮ ಸ್ವಾರ್ಥಕ್ಕಾಗಿ ರೈತರನ್ನು ಯಾಕೆ ಬಲಿ ಕೊಡುತ್ತೀರಿ...?
ನೀವು ಹೋದಲ್ಲೆಲ್ಲಾ ಈ ದೇಶದ ರೈತರನ್ನ, ರೈತ ಪರವಾಗಿ ಮಾತನಾಡುವ ಜಾಗೃತ ಮನೋಸ್ಥಿತಿಯವರನ್ನು ಟೀಕಿಸುತ್ತಿದ್ದೀರಿ. ಅದನ್ನು ನೋಡಿ ನೋಡಿ ಒಬ್ಬ ರೈತನಾಗಿ ನನ್ನಿಂದ ಸಹಿಸಲಾಗುತ್ತಿಲ್ಲ. ಹೌದು, ರೈತರಿಗೆ ವಿದ್ಯೆಯಿಲ್ಲ, ಬುದ್ದಿಯಿಲ್ಲ, ಅವರಿಗೆ ವಿeನ ಗೊತ್ತಿಲ್ಲ. ಆದರೆ ನೀವು ಎಲ್ಲವನ್ನೂ ಅರಿತ ಮಹಾಶಯ. ಈ ದೇಶದ ಕೃಷಿ ನೀವು ವಿ(ಕೃತ) ಜ್ಞಾನಿಗಳು ನಾಲ್ಕು ಗೋಡೆಯ ಎಸಿ ಕೋಣೆಗಳಲ್ಲಿ ಕೂತು ಮಾಡಿದಂತೆ ಅಲ್ಲ ಸ್ವಾಮಿ, ತಪಸ್ಸು. ಇದು ಮಳೆ ಮತ್ತು ರೈತನ ನಡುವಿನ ಹಾವು ಏಣಿಯಾಟ ! ಇಲ್ಲಿ ಬಹುತೇಕ ಸಾರಿ ಸೋತು ಸುಣ್ಣವಾದವನು ರೈತನೆ. ಹಾಗಿದ್ದೂ ಅಲ್ಲಿಯೇ ಸೋಲನ್ನುಂಡ್ಡೂ ಸೋಲದೆ ದುಡಿದು, ತನ್ನ ದಣಿವನ್ನೂ ಅರಿಯದೇ ದುಡಿದು ಈ ದೇಶದಲ್ಲಿರುವ ನಿಮ್ಮಂತ ಹೆಗ್ಗಣಗಳನ್ನು ಸಾಕುತ್ತಿದ್ದಾರೆ ರೈತರು. ಆದರೆ ಅನ್ನ ತಿಂದ ಮನೆಗೆ ಕನ್ನ ಹಾಕಿ ‘ನಾನೇ ಬುದ್ದಿವಂತ’ ಎಂದು ಬೊಬ್ಬಿಡುವ ನಿಮ್ಮಂಥವರು ಬುದ್ದಿ ಕಲಿಯುವುದಾದರೂ ಹೇಗೆ !?
ನೀವು ನಿಜಕ್ಕೂ ಮನುಷ್ಯರಾಗಿದ್ದರೆ, ನಿಮಗೆ ಎದೆಗಾರಿಕೆ ಎನ್ನುವದೇ ಇದ್ದರೆ, ನಿಮ್ಮಲ್ಲಿ ಹರಿಯುವುದು ಈ ದೇಶದ ಬಗೆಗಿನ ಅಭಿಮಾನದ ರಕ್ತವೇ ಆಗಿದ್ದರೆ ಒಬ್ಬ ರೈತನಾಗಿ ನಾನು ಹಾಕುವ ಈ ಸವಾಲನ್ನು ಒಪ್ಪಿಕೊಳ್ಳಿ.
“ನಿಮಗೆ ನಾನು ನನ್ನ ಜಮೀನಿನಲ್ಲೇ ‘ಒಂದು ಗುಂಟೆ’ ಜಮೀನು ನೀಡುತ್ತೇನೆ. ಸಾವಯವ ಕೂಡ ಒಂದು ಕೃಷಿ ವಿಧಾನ, ಅದಕ್ಕೂ ಬಿಟಿಗೂ ಸಂಬಂಧವೇ ಇಲ್ಲ, ಬಿಟಿಯಿಂದ ಭೂಮಿಗೆ, ಜೀವ ಸಂಕುಲಕ್ಕೆ ಯಾವುದೇ ನಷ್ಟವಿಲ್ಲ ಎಂಬುದನ್ನು ನಮ್ಮ ನೆಲದ ಮೇಲೆ ಪ್ರಯೋಗಿಸಿ ತೋರಿಸಿ. ವಿಷಯ ಇಷ್ಟೇ... ನಾನು ಕೊಡುವ ಒಂದು ಗುಂಟೆ ಜಮೀನಿನಲ್ಲಿ ನೀವು ಯಾವುದಾರೂ ಗೊಬ್ಬರವನ್ನಾದರೂ ಬಳಸಿ, ಒಂದು ವರ್ಷ ಕಾಲಾವಕಾಶ ತೆಗೆದುಕೊಳ್ಳಿ, ಹೊಲಕ್ಕಿಳಿದು ನಿಮ್ಮ ಕೈಯ್ಯಾರೆ ಕೃಷಿ ಮಾಡಿ, ಅದರಲ್ಲಿ ಸಾಮಾನ್ಯ ರೈತ ಬೆಳೆಯುವಷ್ಟೇ ಬೆಳೆಯನ್ನು ತೆಗೆದು ತೋರಿಸಿ. ಆಗ ನಿಜಕ್ಕೂ ನಿಮಗೆ ಕೃಷಿಯ ಬಗ್ಗೆ ಗಂಧ ಗಾಳಿ ಗೊತ್ತಿದೆ ಎಂದು ತಿಳಿಯುತ್ತೇನೆ."
ಈ ದೇಶದ ರೈತರು ಇಂದು ನಿಮ್ಮಂಥವರಿಗಾಗಿಯೇ ಜೀವನದುದ್ದಕ್ಕೂ ಜೀವ ತೇಯುತ್ತಲೇ ಬಂದಿದ್ದಾರೆ. ಬುದ್ದಿಗೇಡಿ ವಿಜ್ಞಾನಿ , ಮುಟ್ಟಾಳ ಅಕಾರಿಗಳ ಮಾತು ಕೇಳುತ್ತಲೇ ಕೃಷಿ ಭೂಮಿ ದಿನೇ ದಿನೇ ಒಂದೆಡೆ ಕರಗುತ್ತಿದ್ದರೆ ಮತ್ತೊಂದೆಡೆ ಅಮಾಯಕರ ಮೇಲೆ ದೌರ್ಜನ್ಯ ನಡೆಸಿ ಕಸಿದುಕೊಳ್ಳುತ್ತಿದ್ದೀರಿ. ಇದರಿಂದ ರೈತ ಮತ್ತು ಆತನ ಕುಟುಂಬ ಬೀದಿಗೆ ಬೀಳುತ್ತಿದೆ. ಹಾಗೆ ಬಲವಂತವಾಗಿ ಅಥವಾ ಬಣ್ಣದ ಮಾತಿನಿಂದ ಮರುಳು ಮಾಡಿ ಕಸಿದುಕೊಂಡು ನೀಡಿದ ಪರಿಹಾರ ಒಂದು ಹೊತ್ತಿನ ಕೂಳಿಗೂ ಸಾಕಾಗುತ್ತಿಲ್ಲ!!
ರೈತರಿಗೆ ನಿಮ್ಮ ಕಾನೂನು ಗೊತ್ತಿಲ್ಲ, ನಿಮ್ಮ ಬುದ್ದಿವಂತಿಕೆ ತಂತ್ರಗಾರಿಕೆ ಗೊತ್ತಿಲ್ಲ, ಕುತಂತ್ರವಂತೂ ಮೊದಲೇ ತಿಳಿದಿಲ್ಲ. ಅವರು ನಿರ್ಮಲರು, ನಿಮ್ಮಂತೆ ಕಲಬೆರಕಿಗಳಲ್ಲ... ಅವರಿಗೆ ಗೊತ್ತಿರುವುದೊಂದೇ ಕೃಷಿ, ಕೃಷಿ ಮತ್ತು ಕೃಷಿ.... ಭೂಮಿಯನ್ನೇ ತಮ್ಮ ತಾಯಿಯೆಂದು ನಿತ್ಯವೂ ಪೂಜಿಸಿ, ಅದನ್ನೇ ನಂಬಿಕೊಂಡು ಬದುಕುತ್ತಿರುವವರು ನಿಮ್ಮಂತವರ ಕುತಂತ್ರಕ್ಕೆ ಬಲಿಯಾಗಿ ನಿಟ್ಟುಸಿರು ಬಿಡುತ್ತಿದ್ದಾರೆ. ಅವರ ಶಾಪ ನಿಮಗೆ ತಟ್ಟದೆ ಇರದು. ನಾವೇ ಬುದ್ದಿವಂತರು, ಪ್ರಭುದ್ಧರು ಜಗತ್ತನ್ನೇ ಜಯಿಸಬಲ್ಲೆವು ಎಂದು ಕೊಬ್ಬಿನಿಂದ ಬೊಬ್ಬಿಟ್ಟರೂ ಪ್ರಕೃತಿ ಮುಂದೆ ನೀವೆಲ್ಲಾ ಬಚ್ಚಾಗಳು.
ಇಂದು ಮಳೆ ಬರುತ್ತದೆ ಎಂದು ನಿಮ್ಮ ವಿeನಿಗಳು ಹೇಳಿದ್ದು, ಅದು ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಕಂಡು ಹೊಲದಲ್ಲಿ ಬೀಜ ಬಿತ್ತಿ, ಅದು ಬರದಿದ್ದಾಗ ರೈತರು ಪ್ರತೀ ಸಾರಿ ನಿಮಗೆ ಹಿಡಿ ಶಾಪ ಹಾಕಿದ್ದಾರೆ, ಹಾಕುತ್ತಲೇ ಇದ್ದಾರೆ. ಮಳೆ ಬರುವುದಿಲ್ಲ ಎಂದಾಗಲೆಲ್ಲಾ ರೈತರ ಬದುಕಿನಲ್ಲಿ ಸುನಾಮಿಯೇ ಅಪ್ಪಳಿಸಿದೆ. ಆ ಸತ್ಯ, ನಿಮ್ಮ ವಿಜ್ಞಾನದ ಬಂಡವಾಳ ನಿಮ್ಮ ಆತ್ಮ ಸಾಕ್ಷಿಗೂ ಗೊತ್ತು. ಆದರೆ ನೀವು ಆತ್ಮಸಾಕ್ಷಿಯನ್ನು ಮಾರಿಕೊಂಡವರು. ನಮಗೆ ಅದು ಅರ್ಥ ಆಗದು...
ಮತ್ತೊಮ್ಮೆ ಹೇಳುತ್ತೇನೆ ನನ್ನ ಸವಾಲಿಗೆ ರೆಡಿಯಾದರೆ ನೀವು ಯಾವತ್ತಾದರೂ ಸರಿ ಬನ್ನಿ. ನಾನು ಭೂಮಿ ನೀಡಲು ರೆಡಿ. ಇಲ್ಲದಿದ್ದರೆ ಅಮಾಯಕ ರೈತರನ್ನು ಅನಾವಶ್ಯಕವಾಗಿ ಹಾದಿ ತಪ್ಪಿಸುವ ಬದಲು ‘ತೆಪ್ಪಗೆ ಕುಳಿತುಕೊಳ್ಳಿ’. ಇಲ್ಲದಿದ್ದರೆ ಅದರ ಪರಿಣಾಮವನ್ನು ಮುಂದೆ ನೀವೇ ಅನುಭವಿಸುತ್ತೀರಿ... ಇದನ್ನು ಬೆದರಿಕೆ ಎಂದು ಭಾವಿಸಬೇಡಿ, ರೈತರು ನಿಮ್ಮಷ್ಟು ಸಹನಶೀಲರಲ್ಲ, ಪಿತ್ತ ನೆತ್ತಿಗೇರಿದರೆ ಅವರಷ್ಟು ಕೆಟ್ಟವರು ಈ ದೇಶದಲ್ಲಿ ಮತ್ತಾರೂ ಇಲ್ಲ ಹಾಗಾಗಿ ಇದು ಎಚ್ಚರಿಕೆ...

ಜತೆಗೆ ನಿಮಗೆ ಕೆಲವು ಪ್ರಶ್ನೆಗಳಿವೆ. ಸಾಧ್ಯವಾದರೆ ಮನಸ್ಸಾಕ್ಷಿಯಿದ್ದರೆ ಉತ್ತರಿಸಿ...
* ನಿಮಗೆ ಎಂದಾದರೂ ವಿಷ ಕುಡಿದು ಅನುಭವ ಇದೆಯೇ ?
* ಬಿಟಿ ಹತ್ತಿಯನ್ನು ಸದ್ದಿಲ್ಲದೆ ಈ ದೇಶದ ರೈತರ ಮನೆಗೆ ತಳ್ಳಿದ್ದು ನೀವೆ ತಾನೆ ?
*ಬಿಟಿ ಹತ್ತಿ ಬೆಳೆದ ಭೂಮಿ ಯಾಕೆ ಹಂತ ಹಂತವಾಗಿ ಬಂಜರಾಗುತ್ತಿದೆ ?
* ಬ್ರೂಣದಲ್ಲಿದ್ದ ಶಿಶುವಿನ ಲಿಂಗ ಪತ್ತೆ ಹಚ್ಚಿದ ನಿಮ್ಮ ವಿeನದಿಂದ ಇಂದು ಏನಾಗಿದೆ ?
*ಡಿಡಿಟಿ, ಎಂಟೋಸಲಾನ್‌ಗಳನ್ನು ಮಾರುಕಟ್ಟೆಗೆ ಬಿಡುವಾಗ ಅದರ ಅವಗುಣಗಳನ್ನು ಯಾಕೆ ಜನರಿಗೆ ತಿಳಿಸಲಿಲ್ಲ ?
* ಈ ಕ್ರಿಮಿನಾಶಕದಿಂದ ದೇಶದ ಉದ್ದಗಲಕ್ಕೂ ಆದ ದುಷ್ಪರಿಣಾಮವನ್ನು ನೀವು ಹತ್ತಿರದಿಂದ ಕಂಡೀದ್ದೀರಾ?
* ಬದುಕಿನಲ್ಲಿ ಒಮ್ಮೆಯಾದರೂ ಗಾಯದ ಮೇಲೆ ಬರೆ ಎಳೆದುಕೊಂಡಿದ್ದೀರಾ? ಅದರ ನೋವು ಹೇಗಿರುತ್ತದೆ ಗೊತ್ತಾ ?