Monday, March 7, 2011

ಅದ ಮರೆತೇವೆಂದರೆ ಬದುಕುವುದ್ಹೆಂಗ...!?

ಭಾರತದಲ್ಲಿ ಶೇ.೫೧ರಷ್ಟು ಮಕ್ಕಳು, ರಾಜ್ಯದಲ್ಲಿ ೯,೪೪೬ ಮಕ್ಕಳು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಶೇ.೪೬ ಮಕ್ಕಳಿಗೆ ಕೇವಲ ಆರು ತಿಂಗಳಿಗೇ ಕುಡಿಯಲು ಎದೆ ಹಾಲು ಸಿಗುತ್ತಿಲ್ಲ. ವಿಶ್ವದ ೩೩ ದೇಶಗಳಲ್ಲಿ ಹಸಿವು ರೌದ್ರ ನರ್ತನ ಮಾಡುತ್ತಿದ್ದು, ಭಾರತ ಕೂಡ ಅದರಲ್ಲೊಂದು. ಭಾರತದ ೧೭ರಾಜ್ಯಗಳಲ್ಲಿ ಸರಾಸರಿ ಶೇ.೯೫ ಮಂದಿ ಹೊಟ್ಟೆಗೆ ಅನ್ನ ಗಂಜಿಯೂ ಇಲ್ಲದೆ ನಿತ್ಯ ಬದುಕಿಗಾಗಿ ಪರಿತಪಿಸುತ್ತಿದ್ದಾರೆ...
ಇದರ ಅರ್ಥ ಎಲ್ಲೆಡೆ ಆಹಾರದ ಅಭದ್ರತೆ ಕಾಡುತ್ತಿದೆ ಎಂಬುದು. ಎಲ್ಲೋ ಒಂದು ಕಡೆ ನಾವು ಅಭಿವೃದ್ಧಿ, ನಾಗರಿಕತೆ, ಸಂಸ್ಕೃತಿಯ ಪಲ್ಲಟಗಳ ನೆಪದಲ್ಲಿ ಹೊಟ್ಟೆಗೆ ಹಿಟ್ಟು ನೀಡುವ ನೆಲವನ್ನು ಮರೆತಿದ್ದೇವೆ ಎನ್ನುವುದು ಇವುಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’. ಆದರೆ ನಾವು ಬಟ್ಟೆಯ ಜತೆಗೆ ಬೇರೆ ಬೇರೆ ಅಗತ್ಯಗಳ ಕಡೆ ಗಮನ ಹರಿಸುತ್ತಿದ್ದೇವೆಯೇ ಹೊರತು, ನಿತ್ಯ ಚೈತನ್ಯ ನೀಡುವ ಹೊಟ್ಟೆಯ ಬಗ್ಗೆ, ಹೊಟ್ಟೆಗೆ ಹಿಟ್ಟು ಒದಗಿಸುವ ಕೃಷಿಯ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿಲ್ಲ ಎನ್ನುವುದನ್ನು ನಾವೆಲ್ಲ ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲೇಬೇಕಿದೆ.
ಭಾರತ ಶೇ.೭೨ರಷ್ಟು ಕೃಷಿ ಭೂಮಿಯನ್ನು ಹೊಂದಿದೆ. ಆದರೆ ಇತ್ತೀಚೆಗೆ ಅದರ ಪ್ರಮಾಣ ಕುಸಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ! ಜತೆಗೆ ಕೃಷಿ ಭೂಮಿ ಇದ್ದೂ ಆಹಾರ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗೆಯೇ ಅವುಗಳ ದರ ಕೂಡ ಗಗನಕ್ಕೇರುತ್ತಿದೆ. ಈ ವರ್ಷ ೨೧೦೮.೩೬ಮೆಟ್ರಿಕ್ ಟನ್ ಈರುಳ್ಳಿ ಬೆಳೆದಿದ್ದರೂ ಅದು ಸಾಕಾಗದೆ ಅಭಾವ ಸೃಷ್ಟಿಯಾಗಿ(ಮಳೆಯಿಂದಲೂ ಇಳುವರಿ ಕುಂಠಿವಾಗಿದೆ) ಇದರ ದರ ಪ್ರತಿ ಕೆಜಿ. ೭೦ರ ಗಡಿ ದಾಟಿದೆ.
ಈ ವರ್ಷ ಭಾರತದಲ್ಲಿ ೧,೬೩,೪೩೫.೧೮ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ. ಇಷ್ಟಾದರೂ ೧೭ರಾಜ್ಯಗಳಲ್ಲಿ ಸಾಮಾನ್ಯ ಜನರಿಗೆ ತಿನ್ನಲೂ ಗಂಜಿಯೂ ಗತಿ ಇಲ್ಲ ಎಂದರೆ ಈ ದೇಶದ ಕೃಷಿ ಎತ್ತ ಸಾಗುತ್ತಿದೆ ಎನ್ನುವುದನ್ನು ಅರಿಯಲೇಬೇಕು. ಕರ್ನಾಟಕ, ಬಿಹಾರ, ಜಾರ್ಕಂಡ್, ಮಧ್ಯ ಪ್ರದೇಶ ತೀರಾ ಬಡತನದಲ್ಲಿ ಬದುಕುತ್ತಿವೆ. ಇದ್ದುದರಲ್ಲಿ ಪಂಜಾಬ್, ಕೇರಳ, ಓರಿಸ್ಸಾ ರಾಜ್ಯಗಳ ಪರಿಸ್ಥಿತಿ ಪರವಾಗಿಲ್ಲ ಎನ್ನುತ್ತವೆ ಪ್ರಸಕ್ತ ವರ್ಷದ ಸಮೀಕ್ಷೆಗಳು. ಹೀಗಿದ್ದೂ ಸರಕಾರಗಳು ಕೃಷಿ ಪ್ರಗತಿ ಹಾಗೂ ಅವುಗಳ ಉತ್ತೇಜನಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತವೇ ಸರಿ.
ದೇಶದ ಪ್ರಗತಿ ಎಂದರೆ ಕೇವಲ ಕೈಗಾರಿಕೆಗಳ ಅಭಿವೃದ್ಧಿ ಎನ್ನುವಂತಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎಲ್ಲ ಯೋಜನೆಗಳೂ ರೈತರ ಜಮೀನಿಗೇ ಹೋಗಿ ನಿಲ್ಲುತ್ತಿವೆ. ಇದರಿಂದ ನಿತ್ಯ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಆಹಾರ ಅಭದ್ರತೆ ದಿನೇದಿನೇ ಹೆಚ್ಚಾಗಿ ಕಾಡುತ್ತಿದೆ. ೧೯೬೦ರಲ್ಲಿ ಆಹಾರ ಸಮಸ್ಯೆ ಕೇವಲ ಭಾರತವನ್ನು ಮಾತ್ರವಲ್ಲ ಇಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡಿದ್ದು ಸುಳ್ಳಲ್ಲ. ಆಗ ಕೃಷಿ ಪ್ರಗತಿಯ ಬಗ್ಗೆ ಕೇವಲ ಶೇ.೨೦ ಮಂದಿ ಮಾತ್ರ ಚಿಂತನೆ ನಡೆಸಿದರು. ಆಹಾರ ಉತ್ಪಾದನೆಯ ಕಡೆ ಹೆಚ್ಚು ಗಮನಹರಿಸಿದ್ದರಿಂದ ತತಕ್ಷಣದಲ್ಲಿಯೇ ಆಹಾರ ಉತ್ಪಾದನೆ, ಅವುಗಳ ಮಾರಾಟ, ಸರಬರಾಜು ಹೀಗೆ ಎಲ್ಲೆಂದರಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯವಾಯಿತು. ಇದರಿಂದ ಎಲ್ಲೆಡೆ ತುಸು ಪ್ರಗತಿ ಕಂಡಿತಾದರೂ ನಂತರದ ದಿನಗಳಲ್ಲಿ ಅದು ಮತ್ತೆ ದಿಕ್ಕು ತಪ್ಪಿತು. ಅದರ ಪರಿಣಾಮ ಮತ್ತೆ ಆಹಾರ ಸಮಸ್ಯೆ ಸೃಷ್ಟಿಯಾಗುತ್ತಿದೆ.
ಕರ್ನಾಟಕ ಒಂದರಿಂದಲೇ ಈ ಬಾರಿ ೮,೦೮೫.೪೦ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ. ಇಷ್ಟಾದರೂ ಆಹಾರ ಸಾಕಾಗುತ್ತಿಲ್ಲ. ಅದಕ್ಕೆ ಕಾರಣ ಒಂದೆಡೆ ಜನಸಂಖ್ಯಾ ಸ್ಫೋಟ ಮತ್ತೊಂದೆಡೆ ಕೃಷಿ ಬಗೆಗಿನ ನಿರ್ಲಕ್ಷ್ಯ. ಒಬ್ಬ ರೈತ ಒಂದು ದಿನ ಕೃಷಿ ಬಿಟ್ಟು ಹೊರ ನಡೆದರೆ ಅಂದು ಕನಿಷ್ಠ ಹತ್ತು ಮಂದಿ ಉಪವಾಸ ಮಲಗಬೇಕು! ಹೀಗಿರುವಾಗ ರೈತರ ಮಕ್ಕಳು ವಿದ್ಯಾವಂತರಾದ ತಕ್ಷಣ ರೈತಾಪಿಯನ್ನು ಬಿಟ್ಟು ಬೇರೆ ದುಡಿಮೆ ಹುಡುಕುತ್ತಿದ್ದಾರೆ. ಇದಕ್ಕೆ ಕಾರಣ ಅವರಿಗೆ ಕೃಷಿ ಬಗ್ಗೆ ಒಲವಿಲ್ಲ ಎಂದಲ್ಲ, ಬದಲಿಗೆ ಅದರಲ್ಲಿ ಯಾವುದೇ ಲಾಭವಿಲ್ಲ; ಬದುಕು ಅಸಾಧ್ಯ ಎನ್ನುವ ಸ್ಥಿತಿಯನ್ನು ಸರಕಾರಗಳು ಸೃಷ್ಟಿಸಿರುವುದು. ಒಂದು ಚಿಕ್ಕ ಚಾಕೋಲೇಟ್ ತಯಾರಿಸುವವನು ಕೂಡ ಅದರ ಬೆಲೆಯನ್ನು ಆತನೇ ನಿರ್ಧರಿಸುತ್ತಾನೆ. ಆದರೆ ರೈತನಿಗೆ ಆ ಹಕ್ಕು ಇಲ್ಲವೇ ಇಲ್ಲ. ಸರಕಾರವಾದರೂ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುತ್ತದೆ ಎಂದರೆ ಊಹೂಂ... ಅದೂ ಸಿಗುತ್ತಿಲ್ಲ, ಒಂದುವೇಳೆ ಅಲ್ಪಸ್ವಲ್ಪ ಬೆಲೆ ಸಿಗಬೇಕು ಎಂದರೂ ಆತ ಬೀದಿಗೆ ಬಂದು ತನ್ನ ಉತ್ಪನ್ನಗಳನ್ನು ಸುರಿದು ಪ್ರತಿಭಟಿಸಬೇಕು. ಹೀಗಿರುವಾಗ ಯಾವ ರೈತ ತಾನೆ ತನ್ನ ಮಗ ರೈತನಾಗಬೇಕೆಂದು ಬಯಸುತ್ತಾನೆ?
ಇದರ ನಡುವೆ ಒಂದಿಲ್ಲೊಂದು ಕಾರಣ ನೀಡಿ ರೈತರಿಗೆ ಹಣದಾಸೆ ತೋರಿಸಿ ಅವರ ಜಮೀನುಗಳನ್ನು ಒಣ ಭೂಮಿಯ ಹೆಸರಿನಲ್ಲಿ ಮುಟ್ಟುಗೋಲು ಹಾಕಿಕೊಂಡು ಪುಡಿಗಾಸು ನೀಡಿ ಕೃಷಿ ಬಿಡಿಸಿದರೆ ಈ ದೇಶದಲ್ಲಿ ಆಹಾರ ಅಭದ್ರತೆ ಕಾಡದೆ ಇನ್ನೇನಾದೀತು? ಅದಕ್ಕಾಗಿಯೇ ಮಹಾತ್ಮಾ ಗಾಂಧೀಜಿ ‘ಅದು ಯಾವುದೇ ಸಮಾಜವಾಗಲಿ ಅಲ್ಲಿ ಮನುಷ್ಯ ಮುಖ್ಯವಾಗಬೇಕು. ಯಂತ್ರಗಳಲ್ಲ!’ ಎಂದಿದ್ದರು.
ಆದರೆ ಆ ರೀತಿ ಚಿಂತನೆಗಳೇ ಇಲ್ಲ. ಬದಲಿಗೆ ‘ರೈತ ದೇಶದ ಬೆನ್ನೆಲುಬು’ ಎನ್ನುತ್ತಲೇ ಆತನನ್ನು ಜಾಗತಿಕರಣವೆಂಬ ಜೇಡರ ಬಲೆಯಲ್ಲಿ ಸಿಕ್ಕಿಸಿ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ. ಸಾವಲ್ಲದೆ ಆತನಿಗೆ ಬೇರೆ ದಾರಿ ಕಾಣದಂತ ಸ್ಥಿತಿಗೆ ಆತನನ್ನು ದೂಡಲಾಗುತ್ತಿದೆ. ಮೊದಲೇ ಕೃಷಿ ಮಳೆಯೊಂದಿಗಿನ ಜೂಜಾಟ. ಅದರಲ್ಲಿ ನಿತ್ಯ ರೈತ ಸೋಲುತ್ತಲೇ ಅದರಲ್ಲೇ ಬದುಕು ಕಂಡುಕೊಳ್ಳಲು ಶತಪ್ರಯತ್ನ ನಡೆಸುತ್ತಲೇ ಇರುತ್ತಾನೆ. ಆದರೆ ಅದ್ಯಾವುದನ್ನೂ ಯಾವುದೇ ಸರಕಾರಗಳು ಅರ್ಥ ಮಾಡಿಕೊಳ್ಳದೆ ಅವನ ಭೂಮಿ ಹಾಗೂ ಆತನ ಬದುಕು ಎರಡನ್ನೂ ನುಂಗಿ ನೀರು ಕುಡಿಯಲು ಯತ್ನಿಸುತ್ತವೆ.
ಭುವಿಯ ಬಗ್ಗೆ ಹೀಗೆಯೇ ನಿರ್ಲಕ್ಷ್ಯ ತೋರುತ್ತಾ ಬಂದರೆ ಈಗಿರುವ ವಾತಾವರಣವೇ ೨೦೫೦ ವೇಳೆಗೆ ಸಂಪೂರ್ಣವಾಗಿ ಬದಲಾಗಲಿದೆ ಎಂಬ ಮಾತುಗಳು ವಿeನ ವಲಯದಲ್ಲಿ ಕೇಳಿಬರುತ್ತಿವೆ. ಅದು ನಿಜವಾದರೆ ಆಹಾರ ಉತ್ಪಾದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ.೭.೬ರಿಂದ ಶೇ.೧೨.೧ರಷ್ಟು ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ.೬.೮ರಿಂದ ಶೇ.೧೨.೨ರಷ್ಟು ತಾನೇ ತಾನಾಗಿ ಕಡಿಮೆಯಾಗುತ್ತದೆ. ಇದರಿಂದ ಆಹಾರ ಉತ್ಪಾದನೆಯ ಪ್ರಮಾಣ ಸಂಪೂರ್ಣವಾಗಿ ಕುಸಿದು ಬೀಳುತ್ತದೆ. ಆಗ ಎಲ್ಲ ರಾಷ್ಟ್ರಗಳೂ ಆಹಾರಕ್ಕಾಗಿ ಪರಿತಪಿಸಬೇಕಾಗುತ್ತದೆ. ಮುಂದೊಂದು ದಿನ ಮನುಷ್ಯನೇ ಮುನುಷ್ಯನನ್ನು ಕೊಂದು ತಿನ್ನುವ ಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ...
ಆದ್ದರಿಂದ ಮೊದಲು ‘ಅಭಿವೃದ್ಧಿ’ಯ ಬಗೆಗಿನ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ. ಅಭಿವೃದ್ಧಿ ಎಂದರೆ ಕೃಷಿಯ ಪ್ರಗತಿ. ಕೃಷಿ ಕ್ಷೇತ್ರದಲ್ಲಿ ಮನುಷ್ಯನಿಗೆ ಕೈತುಂಬ ಕೆಲಸ ಹಾಗೂ ಹೊಟ್ಟೆ ತುಂಬಾ ಆಹಾರ ಪ್ರದಾರ್ಥ ಸಿಗುವಂತಾಗಲು ಯಾವ ರೀತಿಯ ಯೋಜನೆ ರೂಪಿಸಬೇಕೋ ಅದನ್ನು ಮಾಡಬೇಕಿದೆ. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಎನ್ನುವುದನ್ನು ಮರೆತು ಮನುಷ್ಯನಲ್ಲಿರುವ ಬಡತನ ನಿವಾರಣೆ ಮಾಡಿ, ಸಾಮಾಜಿಕ ಭದ್ರತೆ, ಉತ್ತಮ ಆರೋಗ್ಯ ಹಾಗೂ ಪೌಷ್ಠಿಕ ಆಹಾರ ಸಿಗುವಂತೆ ಮಾಡುವಂತಾಗಬೇಕು.
ಈ ನಿಟ್ಟಿನಲ್ಲಿ ಯೋಚಿಸುತ್ತ ಕೃಷಿ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಬೇಕಿದೆ. ಆಗ ಆರ್ಥಿಕ ಭದ್ರತೆ ಹಾಗೂ ಇನ್ನಿತರ ಸವಲತ್ತುಗಳು ತಾನೇ ತಾನಾಗಿ ದೊರೆಯುತ್ತವೆ. ಅದು ಬಿಟ್ಟು ಕೇವಲ ಯಂತ್ರಗಳ ಹಿಂದೆ ಬಿದ್ದು ಕೃಷಿಯನ್ನೇ ಮರೆತು ಧಿಕ್ಕರಿಸಿ ನಿಂತರೆ ನಾಳೆ ಹೊಟ್ಟೆಗೆ ತಿನ್ನುವುದಾದರೂ ಏನನ್ನ? ಬದುಕು ನಡೆಸುವುದಾರೂ ಹೆಂಗ?
Powered By Blogger