‘ನೀರಾದಿಂದ ಬೆಲ್ಲ ತಯಾರಿಸಬಹುದು. ಅದು ತುಂಬಾ ಸಿಹಿ. ಕಬ್ಬಿನ ಬೆಲ್ಲಕ್ಕಿಂತ ಈ ಬೆಲ್ಲ ಅತ್ಯಂತ ಉತ್ಕೃಷ್ಟದ್ದು. ನೀರಾದಿಂದ ತಯಾರಿಸುವ ಬೆಲ್ಲ ಸಿಹಿ ಹಾಗೂ ಸ್ವಾದಿಷ್ಟಯುಕ್ತ ಕೂಡ. ಇದರಿಂದ ಕೋಟಿಗಟ್ಟಲೆ ಹಣ ಸಂಪಾದಿಸಬಹುದು. ಎಲ್ಲಿ ತೆಂಗು ಬೆಳೆಯಲಾಗುತ್ತದೆಯೋ ಅಲ್ಲಿ ಅದರ ಬೆಲ್ಲ ತಯಾರಿಸಬಹುದು. ಇದು ಬಡತನ ನಿರ್ಮೂಲನೆಗೆ ದಾರಿ ಕೂಡ. ಆ ಮೂಲಕ ಈ ಧರೆಯಿಂದಲೇ ಬಡತನವನ್ನು ದೂರ ಮಾಡಬಹುದು’. -ಮಹಾತ್ಮ ಗಾಂಧಿ .
ಹೀಗೆ ಮಹಾತ್ಮ ಗಾಂಜಿ ಅವರೇ ನೀರಾ ಇಳಿಸುವುದನ್ನು ಸಮರ್ಥಿಸಿದ್ದರು. ಅಲ್ಲದೆ ಅವರ ‘ಹರಿಜನ’ ಪತ್ರಿಕೆಯಲ್ಲೂ ದಿ.ಗಜಾನನ ನಾಯಕ್ ಅವರು ೧೯೩೯ರ ಜನವರಿ೭ರ ಸಂಚಿಕೆಯಲ್ಲಿ ‘ಗರ್ಭಿಣಿಯರು ವಾರಕ್ಕೆ ಎರಡ್ಮೂರು ಬಾರಿ ನೀರಾ ಸೇವಿಸಿದರೆ ಹುಟ್ಟುವ ಮಗು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯಪೂರ್ಣವಾಗಿ ಹಾಗೂ ಸೌಂದರ್ಯಯುತವಾಗಿ ಹುಟ್ಟುತ್ತವೆ’ ಎಂದು ಬರೆದಿದ್ದರು.
ಇಷ್ಟೆಲ್ಲಾ ನಿದರ್ಶನಗಳು ಕಣ್ಮುಂದೆ ಇದ್ದರೂ ನಮ್ಮ ಸರಕಾರಗಳಿಗೆ ಮಾತ್ರ ನೀರಾವನ್ನು ಅಭಿವೃದ್ಧಿಪಡಿಸುವ ಬಗ್ಗೆಯಾಗಲಿ, ಅದರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದಕ್ಕಾಗಲಿ, ರೈತರ ಬದುಕನ್ನು ಆ ಮೂಲಕ ಹಸನು ಮಾಡುವುದಕ್ಕಾಗಲಿ ಕಾಳಜಿ ಇದ್ದಂತಿಲ್ಲ. ಕರ್ನಾಟಕದಲ್ಲಿ ‘ನೀರಾ ಚಳವಳಿ’ ನಡೆದು ೯ ವರ್ಷಗಳಾಗುತ್ತಿವೆ. ೨೦೦೧ರ ಅಕ್ಟೋಬರ್ ೯ಕ್ಕೆ ಇದೇ ಚಳವಳಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿಯ ಇಬ್ಬರು ರೈತರು ಬಲಿಯಾದರೂ ಸರಕಾರ ಮಾತ್ರ ಕೇವಲ ಭರವಸೆಯ ‘ಮತ್ತಿನಲ್ಲಿ’ಯೇ ತೇಲಾ(ಡುತ್ತಿದೆ.) ಡಿಸುತ್ತಿದೆ.
ಬೆಂಗಳೂರಿನ ಗಾಂ ಭವನದಲ್ಲಿ ಅದೇ ೨೦೦೧ರ ಆಗಸ್ಟ್೧೩ರಂದು ‘ನುಸಿಪೀಡೆ ಹಾಗೂ ನೀರಾ’ಎಂಬ ವಿಷಯದ ಕುರಿತು ನಡೆಸಿದ ರಾಷ್ಟ್ರೀಯ ಕಾರ್ಯಾಗಾರವೇ ನೀರಾ ಚಳವಳಿಗೆ ಪ್ರಮುಖ ಪ್ರೇರಣೆಯಾಯಿತು. ಚಳವಳಿಗೆ ಆದೇ ಆ.೨೭ರಂದು ಸರಕಾರ ಸ್ಪಂದಿಸುವ ನಾಟಕವಾಡಿ ಮೊಸಳೆ ಕಣ್ಣೀರು ಸುರಿಸಿ ನೀರಾ ಇಳಿಸಲು ಅನುಮತಿ ನೀಡುವುದಾಗಿ ತಿಳಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಅದರ ಫಲವಾಗಿಯೇ ಚಳವಳಿ ತೀವ್ರ ಸ್ವರೂಪ ಪಡೆಯಿತು. ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಅದೇ ವರ್ಷ ಅಕ್ಟೋಬರ್ ೯ರಂದು ನಡೆದ ಹೋರಾಟ ತೀವ್ರ ಸ್ವರೂಪ ಪಡೆದಾಗ ಸರಕಾರ ಉತ್ತರ ನೀಡಿದ್ದು ಬಂದೂಕಿನ ನಳಿಕೆಯ ಮೂಲಕ! ಅದಕ್ಕೆ ತಮ್ಮಯ್ಯ ಹಾಗೂ ಪುಟ್ಟನಂಜಯ್ಯ ಎಂಬ ಇಬ್ಬರು ಅಮಾಯಕ ರೈತರು ಬಲಿಯಾದರು. ಆದರೆ ಅವರ ಬಲಿದಾನವಾದರೂ ಸರಕಾರಗಳು ಇಂದಿಗೂ ಬಗ್ಗದಿರುವುದು ಇತ್ತೀಚಿನ ಸರಕಾರಗಳು ಎಷ್ಟರಮಟ್ಟಿಗೆ ಜನಪರ, ರೈತಪರವಾಗಿವೆ ಎಂಬುದನ್ನು ತೋರಿಸುತ್ತವೆ.
ಅಂದು ಅದೇ ಚಳವಳಿಯನ್ನು ರಾಜಕೀಯ ದಾಳವಾಗಿಸಿಕೊಂಡ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್, ಎಚ್.ಕೆ.ಪಾಟೀಲ್ ಹಾಗೂ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ರಾಜಕೀಯವಾಗಿ ಮತ್ತಷ್ಟು ಬೆಳೆದುನಿಂತರು. ದೇವೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಠಲೇನಹಳ್ಳಿಯಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಮಾಡಿದರು. ಆದರೆ ಅದರಿಂದ ಬಡ ರೈತರಿಗೆ ಮಾತ್ರ ಸಿಕ್ಕಿದ್ದು ಕೋರ್ಟ್‌ಗೆ ಅಲೆಯುವ ಕಾಯಕ. ಆ ರೈತರ ಮೇಲೆ ಹಾಕಲಾಗಿರುವ ಪ್ರಕರಣಗಳು ಇಂದಿಗೂ ಇತ್ಯರ್ಥವಾಗಿಲ್ಲ, ಜತೆಗೆ ಚಳವಳಿಯ ಆಶಯವೂ ಈಡೇರಿಲ್ಲ! ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪದ್ಮರಾಜ್ ಆಯೋಗವನ್ನು ನೇಮಕ ಮಾಡಲಾಯಿತು. ಆ ಆಯೋಗ ವರದಿ ತಯಾರಿಸಿ ಸರಕಾರಕ್ಕೆ ನೀಡಿತಾದರೂ ಅದರಲ್ಲಿ ಏನಿದೆ ಎಂಬುದು ಇಂದಿಗೂ ಬಹಿರಂಗವಾಗಲಿಲ್ಲ.
ಲಕ್ಷಾಂತರ ರೈತರ ಬದುಕನ್ನು ಹಸನುಗೊಳಿಸಿದ ಕಲ್ಪವೃಕ್ಷಕ್ಕೆ ನುಸಿ ಪೀಡೆ ಕಾಣಿಸಿಕೊಂಡ ನಂತರ ಅವರು ಕಂಡುಕೊಂಡಿದ್ದು ನೀರಾ ಉತ್ಪನ್ನವನ್ನು. ನೀರಾ ಚಳವಳಿ ಆರಂಭವಾದ ನಂತರ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ವಿಶ್ವವೇ ಬೆರಗಾಗುವ ರೀತಿಯಲ್ಲಿ ನೀರಾದಿಂದ ಸಕ್ಕರೆ ತಯಾರಿಸುವ ಪ್ರಶಿಕ್ಷಣ ತರಬೇತಿ ನೀಡಲಾಯಿತು. ಆದರೆ ಅನಂತರ ಅದಕ್ಕೆ ಮಾರುಕಟ್ಟೆ ಸಮಸ್ಯೆ ಹಾಗೂ ಸರಕಾರದ ನಿರುತ್ಸಾಹ ಎದುರಾಯಿತು. ಅಂದಿನಿಂದ ತೆಂಗು ಬೆಳೆಗಾರರು ಮತ್ತೆ ಅತಂತ್ರವಾದರು.
೨೦೦೦ರಿಂದ ೨೦೦೩ರ ವರೆಗೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆ ಬೀದಿ ಬೀದಿಗಳಲ್ಲಿ ಚಳವಳಿ ನಡೆಸಿದರು. ನೀರಾ ಬಗ್ಗೆ ರೈತರು ಹಾಗೂ ಸರಕಾರದ ಕಣ್ಣು ತೆರೆಸಿದರು. ೨೦೦೮ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಭಾರತೀಯ ಸತ್ಸಂಗ ಸಮಾಜದ ಅಧ್ಯಕ್ಷರಾದ ಶ್ರೀ ಭಕ್ತಿ ತೀರ್ಥ ಸ್ವಾಮೀಜಿ ಕೂಡ ನೀರಾಗೆ ಸಂಬಂಸಿದಂತೆ ಹೋರಾಟ ನಡೆಸಿದರು. ಕರ್ನಾಟಕ ನೀರಾ ಮಹಾಮಂಡಳಿ ರಚನೆಗೆ ಒತ್ತಾಯಿಸಿದ್ದರು. ಬಜೆಟ್‌ನಲ್ಲಿ ೧೦ ಕೋಟಿ ರೂ.ಗಳನ್ನು ನೀರಾ ಉತ್ಪಾದನೆ, ಅಭಿವೃದ್ಧಿ ಹಾಗೂ ವಹಿವಾಟಿಗಾಗಿಯೇ ಮೀಸಲಿಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದರು. ರಾಜ್ಯದ ಬಹುತೇಕ ಕಡೆಗಳಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಿದರು. ಆದರೂ ಸರಕಾರ ಮಾತ್ರ ಅಕಾರದ ಅಮಲಿನಲ್ಲಿ ಬೀದಿ ಬೀದಿಯಲ್ಲಿ ಹೆಂಡದಂಗಡಿ, ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಮುಂದಾಗುತ್ತಿದೆಯೇ ಹೊರತು ನೀರಾ ಉತ್ಪಾದನೆಗೆ ಸಹಕಾರ ನೀಡಲೇ ಇಲ್ಲ.
ನೀರಾ ಉತ್ಪಾದನೆಯ ಹಿನ್ನೆಲೆ:
ಭಾರತದಲ್ಲಿ ಅನಾದಿ ಕಾಲದಿಂದಲೂ ನೀರಾ ತಯಾರಿಸಲಾಗುತ್ತಿದೆ. ಇದು ಆಯುರ್ವೇದದಲ್ಲಿ ಹೆಚ್ಚು ಚಿರಪರಿಚಿತವೂ ಹೌದು. ಎಲ್ಲ ರೀತಿಯ ರೋಗಗಳಿಗೂ ಇದು ಮದ್ದು. ಆದರೆ ರಾಜ್ಯದಲ್ಲಿ ೧೯೫೧ರಲ್ಲಿ ಮೊದಲ ಬಾರಿಗೆ ನೀರಾ ಉತ್ಪಾದಿಸಲಾಯಿತು. ಆಗಲೇ ಕರ್ನಾಟಕದಲ್ಲಿ ೧೬೭ ಪಟ್ಟಣ ಹಾಗೂ ೧೫೨ ಪ್ರಮುಖ ಗ್ರಾಮೀಣ ಭಾಗಗಳಲ್ಲಿ ನೀರಾ ಮಾರಾಟ ಕೇಂದ್ರಗಳು ಸ್ಥಾಪನೆಯಾದವು. ೧೭ ನೀರಾ ಮತ್ತು ಪನೆ ಬೆಲ್ಲ ಸಹಕಾರಿ ಸಂಘಗಳು ಕಾರ್ಯನಿರ್ವಹಿಸತೊಡಗಿದವು. ೧೯೫೮ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ನೀರಾ ಮತ್ತು ಪನೆ ಬೆಲ್ಲ ಸಂಯುಕ್ತ ಸಂಘಗಳು ಆಸ್ತಿತ್ವಕ್ಕೆ ಬಂದವು.
ಕೇವಲ ಹತ್ತು ವರ್ಷಗಳ ನಂತರ ಸರಕಾರ ತಂದ ೧೯೬೮ರ ಶಾಸನದಿಂದ ನೀರಾ ಉದ್ಯಮ ಸಂಪೂರ್ಣ ನೆಲ ಕಚ್ಚಿತು. ಆದರೆ ೨೦೦೧ರಲ್ಲಿ ಎಲ್ಲೆಡೆ ತೆಂಗಿಗೆ ನುಸಿಪೀಡೆ ಕಾಣಿಸಿಕೊಂಡಾಗ ಮತ್ತೆ ನೀರಾ ಕುರಿತ ಚಿಂತನೆ, ಚಳವಳಿ ಆರಂಭವಾಗಿದ್ದು.
ಉಪಯೋಗ ಹಾಗೂ ಸಾಧ್ಯತೆ:
ನೀರಾ ಬಗ್ಗೆ ಜನಪ್ರತಿನಿಗಳಿಗೆ ಹಾಗೂ ಅಕಾರಿಗಳಿಗೆ ಸರಿಯಾದ ಅರಿವು ಇಲ್ಲದಿರುವುದೇ ನಿರುತ್ಸಾಹಕ್ಕೆ ಕಾರಣ ಎನ್ನಲಾಗಿದೆ. ಅದನ್ನು ಮರದಿಂದ ಇಳಿಸಿದ ಕೆಲವೇ ಗಂಟೆಗಳಲ್ಲಿ ಇದು ಹುಳಿ ಬಂದು ಹೆಂಡವಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ನೀರಾ ನಿಜಕ್ಕೂ ಪರಿಪೂರ್ಣ ಪೇಯ. ಕೋಕಾ ಕೋಲಾ, ಪೆಪ್ಸಿಯಂತ ವಿದೇಶಿ ಹಾಗೂ ಹಾನಿಕಾರಕ ಪಾನೀಯಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಎದುರು ನಿಂತು ಬೆಳೆಯಬಲ್ಲ ಸಾಮರ್ಥ್ಯ ಇರುವುದು ಎಳೆನೀರು ಹಾಗೂ ನೀರಾಗೆ ಮಾತ್ರ! ಹೌದು, ಇವೆರಡೂ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ.
ನೀರಾ ಎಂದರೆ ಹೆಂಡ(ಸರಾಯಿ) ಎಂದಲ್ಲ. ಇದು ಎಲ್ಲ ವಯೋಮಿತಿಯ ಜನರಿಗೂ ಉಪಯುಕ್ತವಾಗುವ ಆರೋಗ್ಯದಾಯಕ ಪಾನೀಯ. ಆದರೆ ಕೆಲವರು ನೀರಾ ಹೆಸರಿನಲ್ಲಿ ಅಬಕಾರಿ ಅಕಾರಿಗಳ ಜತೆ ಸೇರಿಕೊಂಡು ಹೆಂಡವನ್ನು ಮಾರುವ ದಂಧೆ ಆರಂಭಿಸಿದ್ದಾರೆ. ಇಂಥವರು ನಿಜಕ್ಕೂ ರೈತರಲ್ಲ ಎಂಬುದು ಬಹಿರಂಗ ಸತ್ಯ. ನೀರಾ, ನೀರಿನಂತೆ ಪರಿಶುದ್ಧ, ಪಾರದರ್ಶಕ ಹಳದಿ ಬಣ್ಣದಿಂದ ಕೂಡಿರುತ್ತದೆ. ಇದನ್ನು ಇಳಿಸಿದ ನಂತರ ಮೂರು ಗಂಟೆಯವರೆಗೆ ಹಾಗೆಯೇ ಇಟ್ಟರೂ ಮತ್ತಿನ ಅಂಶ ಇರುವುದಿಲ್ಲ. ೧೨ ಗಂಟೆಯ ನಂತರವಷ್ಟೇ ಶೇ.೦.೭ ರಿಂದ ಶೇ.೦.೮ರಷ್ಟು ಮತ್ತು ಬರುತ್ತದೆ. ಆದರೆ ವೈeನಿಕವಾಗಿ ಇದನ್ನು ಸಂಸ್ಕರಿಸಿದರೆ ೬ ತಿಂಗಳ ಕಾಲ ರುಚಿ ಕೆಡದಂತೆ ಹಾಗೆಯೇ ಇಡಬಹುದು ಎಂಬುದು ತಜ್ಞರ ಅಭಿಪ್ರಾಯ.
ನೀರಾ ನಿಜಕ್ಕೂ ಆರೋಗ್ಯದಾಯಕ, ರೋಗನಿರೋಧಕ ಶಕ್ತಿ ಹೊಂದಿದ ಹಾಗೂ ನರದೌರ್ಬಲ್ಯ ಹೊಂದಿದವರಿಗೆ ದಿವ್ಯ ಔಷಧ ಕೂಡ ಹೌದು. ಇದರಿಂದ ಬೆಲ್ಲ, ಕಲ್ಲು ಸಕ್ಕರೆ, ಜ್ಯೂಸ್, ಜಾಮ್, ಚಾಕೋಲೇಟ್, ಬಿಸ್ಕೆಟ್, ಸಿರಪ್ ಹಾಗೂ ಇನ್ನಿತರೆ ಸಿಹಿ ತಿಂಡಿಗಳನ್ನು ತಯಾರಿಸಬಹುದು! ಆಯುರ್ವೇದದಲ್ಲಿ ತೆಂಗಿನ ಉತ್ಪಾದನೆಗಳಿಗೆ ಶ್ರೇಷ್ಠ ಸ್ಥಾನವಿದೆ. ಆದರೆ ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಈಗಿನ ಯಾವ ಜನಪ್ರತಿನಿಗಳಿಗೂ ಇಲ್ಲ.
ನೆರೆಯ ಕೇರಳ, ತಮಿಳು ನಾಡು, ಮಹಾರಾಷ್ಟ್ರದಲ್ಲಿ ನೀರಾ ಉದ್ಯಮ ಬೆಳೆದಂತೆ ಕರ್ನಾಟಕದಲ್ಲಿ ಬೆಳೆದಿಲ್ಲ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಅಕಾರಿಗಳಿಗೆ ಹಾಗೂ ಜನಪ್ರತಿನಿಗಳಿಗೆ ಇದರ ಬಗ್ಗೆ ಇರುವ ಅರಿವಿನ ಕೊರತೆ ಹಾಗೂ ರೈತರ ಬಗ್ಗೆ ಇವರಿಗಿರುವ ನಿಷ್ಕಾಳಜಿ. ನೀರಾ ನಿಜಕ್ಕೂ ರೈತರ ಪಾಲಿನ ಆಶಾಕಿರಣ. ಇಲ್ಲಿ ಕೃಷಿಕರಿಗೆ ವಿಫುಲವಾದ ಅವಕಾಶಗಳಿವೆ. ಅವುಗಳನ್ನು ಸರಕಾರ ಕಂಡುಕೊಳ್ಳಬೇಕಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೆಂಡದ ಅಮಲಿನಲ್ಲಿ ಕುಣಿದಾಡುವುದಕ್ಕಿಂತ ವೈಜ್ಞಾನಿಕವಾಗಿ ನೀರಾದಿಂದಾಗುವ ಉಪಯೋಗಗಳನ್ನು ಪತ್ತೆ ಹಚ್ಚಬೇಕಿದೆ. ಜತೆಗೆ ಸರಕಾರದಿಂದ ಪರವಾನಗಿ ಪಡೆದು ನೀರಾ ಉತ್ಪಾದನೆಗೆ ಕೈ ಹಾಕುವಂತೆ ಮಾಡಬೇಕಿದೆ. ಜತೆಗೆ ನೀರಾ ಉತ್ಪನ್ನಗಳ ಅಭಿವೃದ್ಧಿ ಬಗ್ಗೆ ಚಿಂತಿಸಿದರೆ ರೈತರ ಬಾಳು ಕೂಡ ಹಸನಾಗುವುದರಲ್ಲಿ ಸಂಶಯವಿಲ್ಲ.
ಇಂದು ಕರ್ನಾಟಕದಲ್ಲಿ ಶೇ.೩೫ ರಿಂದ ಶೇ.೪೦ ರಷ್ಟು ಕೃಷಿ ಹಾಗೂ ತೋಟಗಾರಿಕೆ ಉತ್ಮನ್ನಗಳು ವಿನಾಕಾರಣ ಹಾಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತರುವ ತುರ್ತು ಅಗತ್ಯವಿದೆ. ವಿಶ್ವದಲ್ಲಿ ಇಂದು ರೈತರು ಜಾಗತಿಕರಣ, ಉದಾರೀಕರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ಇಳಿಯಬೇಕಿದ್ದು, ಮೌಲ್ಯರ್ವತ ವಸ್ತುಗಳನ್ನು ಉತ್ಪಾದಿಸುವ ಮೂಲಕ ಸ್ಪರ್ಧೆಯಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಳ್ಳಬೇಕಿದೆ. ಈ ಕಾರಣಕ್ಕಾಗಿಯೇ ಸರಕಾರಗಳು ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಕೃಷಿ ಉತ್ಪನ್ನಗಳನ್ನು ಉದ್ಯಮವಾಗಿ ನಿರ್ಮಾಣ ಮಾಡುವ ಇಚ್ಛಾಶಕ್ತಿ ತೋರಬೇಕಿದೆ.