Wednesday, December 24, 2008

ಚೀನಾಗೆ ರಾಜಕಾರಣಿಗಳ ಜಾಲಿ ರೈಡ್!


ಚೀನಾಗೆ ರಾಜಕಾರಣಿಗಳ ಜಾಲಿ ರೈಡ್!
ಬಿಜೆಪಿ ಕಾರ್ಯಕರ್ತರಿಗೆ, ಪುಡಾರಿ ರಾಜಕಾರಣಿಗಳಿಗೆ ಇದೀಗ ಸುಗ್ಗಿ. ಅಕಾರ ವಹಿಸಿಕೊಂಡ ಆರೇ ತಿಂಗಳಲ್ಲಿ ಮೂರು ಬಾರಿ ವಿದೇಶ ಪ್ರಯಾಣ ಮಾಡಿ ಜತೆಗೆ ಡಾಕ್ಟರೇಟ್ ದೋಚಿಕೊಂಡು ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ತಮ್ಮ ಕಾರ್ಯಕರ್ತರಿಗೂ ವಿದೇಶ ಪ್ರಯಾಣದ ರುಚಿ ತೋರಿಸಲು ಅಣಿಯಾಗಿದ್ದಾರೆ.
ಆರಂಭದಿಂದ ಇಲ್ಲಿಯವರೆಗೆ ಕೇವಲ ರೈತರ ಹೆಸರಿನಲ್ಲೆ ರಾಜಕೀಯ ಬೇಳೆ ಬೇಯಿಸಿಕೊಂಡು ಬಂದ ಯಡಿಯೂರಪ್ಪ ಈಗಲೂ ರೈತರ ಹೆಸರಿನಲ್ಲಿಯೇ ವಂಚನೆಗೆ ಇಳಿದಿದ್ದಾರೆ. ನಿಜಕ್ಕೂ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಎನ್ನುವುದಿದ್ದರೆ, ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಅದನ್ನು ಇಲ್ಲಿ ಕಾರ್ಯಗತ ಮಾಡಿ ತೋರಿಸಬಹುದಿತ್ತು. ಅದಕ್ಕೆ ಆರು ತಿಂಗಳು ಬೇಕಿರಲಿಲ್ಲ. ಕೈಲಿ ಅಕಾರ ಇರುವಾಗ ಕೇವಲ ಒಂದು ದಿನ ಸಾಕಿತ್ತು .
ಆದರೆ ಅಸಲಿಗೆ ಯಡಿಯೂರಪ್ಪನವರಿಗೆ ಆಗಬೇಕಿರುವುದು ರೈತರ ಉದ್ಧಾರವಲ್ಲ. ಅವರ ಹೆಸರಿನಲ್ಲಿ ತಮ್ಮ ಬೇಳೆ ಬೇಯ್ಯಬೇಕಷ್ಟೆ . ಭಾರತದ ಕೃಷಿಗೆ ಪುರಾತನ ಹಿನ್ನೆಲೆ ಇದೆ. ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳ ಕುತಂತ್ರಕ್ಕೆ ಬಲಿಯಾಗಿ ಈಗ ಇಡೀ ದೇಶದ ಕೃಷಿ ಪದ್ಧತಿ ಹಳ್ಳ ಹತ್ತಿದೆ. ರೈತರು ಕುಟುಂಬ ಸಮೇತ ಬೀದಿಗೆ ಬಿದ್ದಿದ್ದಾರೆ. ತಾವೇ ಬೆಳೆದ ಬೀಜಗಳನ್ನು ಬಿತ್ತನೆಗೆ ಇಟ್ಟುಕೊಂಡು, ಉಳಿದವನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ರೈತರ ಜೀವನ ಶೈಲಿ ಈಗ ಅದೇ ಚೀನಾ, ಅಮೆರಿಕ, ರಷ್ಯಾ, ಇಟಲಿಯಂತ ರಾಷ್ಟ್ರಗಳ ಕೈಗೆ ಸಿಕ್ಕಿ ನುಚ್ಚು ನೂರಾಗಿದೆ.
ಅಲ್ಲಿನ ಬುಹು ರಾಷ್ಟ್ರೀಯ ಕಂಪೆನಿಗಳು ಹೂಡಿದ ತಂತ್ರಕ್ಕೆ ಇಲ್ಲಿನ ಅಮಾಯಕ ರೈತರು ಮಾರು ಹೋಗಿ ಈಗ ತಾವೇ ಬೆಳೆದ ಬೆಳೆ ತಮಗೇ ತಿನ್ನಲು ಸಿಗುತ್ತಿಲ್ಲ. ಪ್ರತೀವರ್ಷ ಬಹುರಾಷ್ಟ್ರೀಯ ಕಂಪೆನಿಗಳು ತಯಾರಿಸಿದ ಕೆಮಿಕಲ್‌ಯುಕ್ತ ಬೀಜಗಳನ್ನು ಬಿತ್ತಿ ಬೆಳೆ ತೆಗೆಯಬೇಕಿದೆ.
ಕ್ಷಮಿಸಿ, ಈ ಬೀಜಗಳನ್ನು ಕೇವಲ ಬಿತ್ತಿದ ಮಾತ್ರಕ್ಕೆ, ಸರಿಯಾಗಿ ನೀರು ಉಣಿಸಿದ ಮಾತ್ರಕ್ಕೆ ಬೆಳೆ ಬಂದು ಬಿಡುವುದಿಲ್ಲ. ಅದಕ್ಕೆ ಅದೇ ರಾಷ್ಟ್ರಗಳು ತಯಾರಿಸುವ ಗೊಬ್ಬರ ಹಾಕಬೇಕು. ಔಷಧ ಸಿಂಪಡಿಸಬೇಕು ! ಅಬ್ಬಾ ಎಂಥ ಭಯಾನಕ ಕುತಂತ್ರ...?
ನಮ್ಮದೇ ಬೀಜಗಳನ್ನು ಇಪ್ಪತ್ತು ವರ್ಷಗಳ ಹಿಂದೆ ಆಮದು ಮಾಡಿಕೊಳ್ಳುತ್ತಿದ್ದ ಅನ್ಯ ದೇಶಗಳ ಕಂಪೆನಿಗಳು ಈಗ ಅದೇ ಬೀಜಗಳನ್ನು ಇಲ್ಲಿಗೆ ದುಪ್ಪಟ್ಟು ಹಣಕ್ಕೆ ರವಾನೆ ಮಾಡುತ್ತಿವೆ. ಕೇವಲ ಹತ್ತು ವರ್ಷದಲ್ಲಿ ಇಡೀ ನಮ್ಮ ನೆಲ ಬಂಜರಾಗಿ, ಯಾವುದೇ ಬೀಜವನ್ನು ಬಿತ್ತಿದರೂ ಅದಕ್ಕೆ ರಸಗೊಬ್ಬರ ಬಳಸಲೇಬೇಕಾದ ಅನಿವಾರ್ಯತೆ ಸೃಷ್ಟಿವೆ.
ಇದಕ್ಕೆಲ್ಲಾ ಇಲ್ಲಿನ ಮಾನಗೆಟ್ಟ ಸರಕಾರಗಳೇ ಕಾರಣ. ಹಸಿರು ಕ್ರಾಂತಿಯ ಹೆಸರಿನಲ್ಲಿ ರೈತರ ದಿಕ್ಕು ತಪ್ಪಿಸಿದ್ದ ಸರಕಾರಗಳು ಈಗ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ಯಡಿಯೂರಪ್ಪ ಈಗ ಮಾಡುತ್ತಿರುವುದು ಅದನ್ನೇ. ಆದರೆ ಸ್ವಲ್ಪ ಡಿಫರೆಂಟ್. ಹಿಂದಿನ ಸರಕಾರಗಳು ರಾತ್ರಿ ದರೋಡೆ ಮಾಡಿದರೆ, ಯಡಿಯೂರಪ್ಪ ಹಗಲು ದರೋಡೆಗೆ ಇಳಿದಿದ್ದಾರೆ ಅಷ್ಟೆ .
ಚೀನಾದ ನೆಲದಲ್ಲಿ ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಅಲ್ಲಿನ ರೈತರು ಬೆಳೆಯುವ ಕೃಷಿ ಪದ್ಧತಿಯನ್ನು ಇಲ್ಲಿನ ರೈತರಿಗೆ ತೋರಿಸುವುದಾಗಿ ಹೇಳಿ ರೈತರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಈ ಯೋಜನೆ ರೂಪಿಸುವ ಮುಂಚೆ ಯಡಿಯೂರಪ್ಪ ಕಿಂಚಿತ್ತಾದರೂ ಯೋಚಿಸಬಹುದಿತ್ತು. ನಿಜಕ್ಕೂ ಯಡ್ಡಿ ರೈತನ ಮಗನಾಗಿದ್ದರೆ ಅದು ಗೊತ್ತಾಗುತ್ತಿತ್ತು. ಇಲ್ಲಿನ ಪರಿಸರದ ಕೃಷಿಗೂ ಅಲ್ಲಿನ ಕೃಷಿ ಪದ್ಧತಿಗೂ ಅಜಗಜಾಂತರ ವ್ಯತ್ಯಾಸವಿದೆ !
ಯಡಿಯೂರಪ್ಪ ರೈತನ ಮಗ(!?). ಬಹುಶಃ ಅದು ಅವರಿಗೂ ಗೊತ್ತಿರಬಹುದು. ಅದಕ್ಕೇ ಅವರು ರೈತರ ಹೆಸರಿನಲ್ಲಿ ಬಿಜೆಪಿ ಮುಖಂಡರನ್ನು , ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದ ರಾಜಕಾರಣಿಗಳು, ಕಾರ್ಯಕರ್ತರನ್ನು ಕರೆದುಕೊಂಡು ಚೀನಾ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಅದು ಮೋಜು, ಮಸ್ತಿಗಾಗಿ.
ರಾಜಕೀಯ ಗಿಮಿಕ್ಕು :
ಈ ಕಾರ್ಯಕರ್ತರಲ್ಲಿ ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರ ಇಲ್ಲ. ಎಲ್ಲ ಪಕ್ಷಗಳ ಕಾರ್ಯಕರ್ತರೂ ಇದ್ದಾರೆ! ಆದರೆ ಒಬ್ಬನೇ ಒಬ್ಬ ನಿಜವಾದ ರೈತನೂ ಇಲ್ಲ. ಈಗಿನ ವಿಧಾನಸಭೆ ಮರು ಚುನಾವಣೆ ಹಾಗೂ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಯಡಿಯೂರಪ್ಪ ಈ ಪ್ರವಾಸಕ್ಕೆ ಕೈ ಹಾಕಿದ್ದಾರೆ.
ಶಾಸಕರನ್ನು ಈಗಾಗಲೇ ಖರೀದಿಸುವ ಮೂಲಕ ತಮ್ಮ ಕಡೆ ಸೆಳೆದುಕೊಂಡಿರುವ ಯಡಿಯೂರಪ್ಪ, ತಳ ಮಟ್ಟದಲ್ಲಿ ಕಾರ್ಯಕರ್ತರನ್ನು ಆಸೆ ಆಮಿಷಗಳ ಮೂಲಕ ತಮ್ಮತ್ತ ಎಳೆದುಕೊಳ್ಳಲು ಈ ಕುತಂತ್ರ ಮಾಡಿದ್ದಾರೆ. ಚೀನಾದ ನೆಲದಲ್ಲಿ ಇಲ್ಲಿನ ಪಡ್ಡೆ ರಾಜಕಾರಣಿಗಳಿಗೆ ಮೋಜು ಮಾಡಿಸಲು ಈ ಪ್ರವಾಸ... ಇದು ಒಂದು ರೀತಿ ಹಿಂದಿನ ‘ರೆಸಾರ್ಟ್ ರಾಜಕಾರಣ’ದಂತೆ ‘ಜಾಲಿರೈಡ್ ರಾಜಕಾರಣ’. ಪಾಪ , ಅದು ನಮ್ಮ ಬಡ ರೈತರಿಗೆ ಎಲ್ಲಿಂದ ಅರ್ಥವಾಗಬೇಕು...? ಏನೆ ಆಗಲಿ ಯಡ್ಡಿ ನಿಜಕ್ಕೂ ಬುದ್ದಿಶಾಲಿ ಬಿಡಿ.

Thursday, December 11, 2008

ಬಾಬಾಬುಡನ್‌ಗಿರಿಯಲ್ಲಿ ಭಜರಂಗಿಗಳ ‘ಬಂಡಾಟ’




ಡಿಸೆಂಬರ್ ಬಂತೆದರೆ ಚಳಿ ಜೋರಾಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಚಿಕ್ಕಮಗಳೂರಿನಲ್ಲಿ ಮಾತ್ರ ಬಿಸಿ ಏರುತ್ತದೆ. ಆ ಬಿಸಿ ಗಾಳಿ ಕೇವಲ ಅಲ್ಲಿಗೆ ಮಾತ್ರ ಸೀಮಿತಗೊಳ್ಳುದಿಲ್ಲ. ಇಡೀ ರಾಜ್ಯಕ್ಕೇ ವ್ಯಾಪಿಸಿ ಕೂಮು ದಳ್ಳುರಿ ಹೊತ್ತಿಕೊಳ್ಳಲು ಪ್ರಚೋದನೆ ನೀಡುತ್ತದೆ.
ಇದಕ್ಕೆಲ್ಲಾ ಕಾರಣ ಸಂಘಪರಿವಾರದ ನಾಯಕರು ಹಾಗೂ ಕಾರ್ಯಕರ್ತರು. ಹೌದು, ಚಿಕ್ಕಮಗಳೂರಿನ ಹೊಟ್ಟೆಯಲ್ಲಿರುವ ಪ್ರಶಾಂತ ಹಾಗೂ ಸೌಹಾರ್ದ ಕೇಂದ್ರ ಬಾಬಾಬುಡನ್‌ಗಿರಿ. ಇದು ನಿಜಕ್ಕೂ ರಮಣೀಯ ತಾಣ. ಬೆಟ್ಟದ ಮೇಲೆ ಹತ್ತಿ ಹುಳಿತರೆ ಆ ಸ್ವರ್ಗವೇ ಧರೆಗಿಳಿದು ಬಂದಂತಿರುತ್ತದೆ. ಆ ನಯನ ಮನೋಹರ ದೃಶ್ಯವನ್ನು ನೋಡಲು ಕಣ್ಣುಗಳೇ ಸಾಲದು. ಅದು ಅಂಥ ಅದ್ಬುತ ಪ್ರವಾಸಿ ತಾಣ. ಇಲ್ಲಿಗೆ ನಿತ್ಯವೂ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ ( ಈಗ ಕಡಿಮೆಯಾಗಿದ್ದಾರೆ).
ಆದರೆ ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಯಾವ ಪ್ರವಾಸಿಗರೂ ಈ ಕಡೆ ಮುಖ ಮಾಡಿ ಕೂಡ ನೋಡುವುದಿಲ್ಲ. ಕಾರಣ ಇಲ್ಲಿ ಸುಳಿಯುವ ಬಿಸಿ ಗಾಳಿ ! ಅಂದರೆ ಇಲ್ಲಿಯ ವಾತಾವರಣ ಬಿಸಿಯಾಗುತ್ತದೆ ಎಂದರ್ಥವಲ್ಲ. ಇಡೀ ವಾತಾವರಣವನ್ನು ಸಂಘಪರಿವಾರದ ಕಿಡಿಗೇಡಿಗಳು ಬಿಸಿ ಮಾಡುತ್ತಾರೆ ಅಷ್ಟೆ.
ಇವರಿಗೆ ಬೇರೆ ಕೆಲಸ ಇರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರತಿ ಡಿಸೆಂಬರ್‌ಗೆ ಒಂದಲ್ಲ ಒಂದು ತಗಾದೆ ತೆಗೆಯಬೇಕೆಂದು ವರ್ಷವಿಡೀ ಹೊಂಚು ಹಾಕುವುದಂತೂ ಸತ್ಯ. ಅದಕ್ಕೇ ಎರಡು ಸಮುದಾಯಗಳ ನಡುವೆ ಈ ತಿಂಗಳು ಶೀಥಲ ಸಮರ ನಡೆಯುತ್ತದೆ. ಜಿಲ್ಲಾಡಳಿತ ಹಾಗೂ ಪೊಲೀಸರು ಸ್ವಲ್ಪ ಎಚ್ಚರ ತಪ್ಪಿದರೂ ಅಲ್ಲಿ ಭಾರೀ ಕದನ ನಡೆದರೂ ಅಚ್ಚರಿಯಿಲ್ಲ.
ಬಾಬಾಬುದಡನ್‌ಗಿರಿ ನಿಜಕ್ಕೂ ಸಮನ್ವಯ ತಾಣ. ಟಿಪ್ಪುವಿನ ಹಿಂದಿನ ಕಾಲದಿಂದಲೂ ಅಲ್ಲಿ ದತ್ತಾತ್ರೇಯ ಹಾಗೂ ಬಾಬಾನ ಅನುಯಾಯಿಗಳು ತಮ್ಮದೇ ಆದ ರೀತಿಯಲ್ಲಿ ಯಾವುದೇ ಸಂಪ್ರದಾಯ, ಕಂದಾಚಾರಗಳಿಲ್ಲದೆ, ಶಾಂತಿ ಮತ್ತು ಸಮನ್ವಯತೆಯಿಂದ ಪೂಜೆ ಮಾಡಿಕೊಂಡು ಬರುತ್ತಿದ್ದರು. ೧೯೮೦ರ ನಂತರ ಹಿಂದುತ್ವಕ್ಕೆ ರಾಜ್ಯದಲ್ಲೂ ಪ್ರಚೋದನೆ ಹಾಗೂ ತುಸು ಬೆಂಬಲ ದೊರೆತ ಕೂಡಲೇ ಈ ‘ಸೌಹಾರ್ದ ಗಿರಿ’ ಸೇರಿದಂತೆ ಅನೇಕ ಸ್ಥಳಗಳನ್ನು ಸಂಘಪರಿವಾರ ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳಲು ಇಂದಿಗೂ ಹೊಂಚು ಹಾಕುಲೇ ಇದೆ.
ಹಿಂದಿನ ಪುರಾಣಗಳನ್ನು ಕೆದಕುವುದು ಬೇಡ ಈಗಿನದರ ಬಗ್ಗೆ ಯೋಚಿಸೋಣ. ಮೊನ್ನೆ ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ಬಾಬಾಬುಡನ್‌ಗಿರಿಯಲ್ಲಿ ಯತ್ಥಾ ಸ್ಥಿತಿ ಕಾಪಾಡಿಕೊಳ್ಳಿ, ಹೊಸ ಆಚರಣೆಗಳು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಸಂಘ ಪರಿವಾರದ ಜನ ಮಾಡಿದ್ದಾದರೂ ಏನು...? ಅದೇ... ಜಾಗದಲ್ಲಿ ಕಡ್ಡಿ ಹಾಕಿ ಕೆದಕುವ ಕೆಲಸ.
ಪ್ರತಿಭಾರಿ ಶೋಭಾಯಾತ್ರೆ, ಹನುಮಜಯಂತಿ ಅಂತೆಲ್ಲಾ ಪೂಜೆ ಮಾಡಿ ಚಿಕ್ಕಮಗಳೂರಿನ ಬೀದಿ ಬೀದಿಗಳಲ್ಲಿ ಕೇಸರಿ ಧ್ವಜ ಹಿಡಿದು ಮೆರವಣಿಗೆ ಮಾಡುತ್ತಿದ್ದರು., ಗಂಟಲು ಹರಿದುಕೊಳ್ಳುತ್ತಿದ್ದರು. ಆದರೆ ಈ ವರ್ಷ ರಾಜ್ಯದ ಮೂಲೆ ಮೂಲೆಗಳಿಂದ ಮಹಿಳಾ ಮೋರ್ಚಾದ ಸಾವಿರಾರು ಮಹಿಳೆಯರನ್ನು ಚಿಕ್ಕಮಗಳೂರಿಗೆ ಕರೆಸಿ, ಅಲ್ಲಿ ಹೊಸದಾಗಿ ಅನುಸೂಯ ಯಾತ್ರೆ ಮಾಡಿದ್ದಾರೆ. ಇದು ತರವೇ? ಕಡ್ಡಿ ಹಾಕಿ ಕೆದಕುವುದು ಅಂದರೆ ಇದೇ ತಾನೆ ?
ಜತೆಗೆ ಬಾಬಾ ಬುಡನ್‌ಗಿರಿಯಲ್ಲಿ ಗುಹೆ ಕುಸಿದಿದೆ. ಅಷ್ಟಕ್ಕಾದರೂ ಇವರು ಸುಮ್ಮನಾಗುತ್ತಾರೆ ಎಂದುಕೊಳ್ಳೋಣ ಎಂದು ಯೋಚಿಸುತ್ತಿರುವಾಗಲೇ ಗಿರಿಯ ಮೇಲೆ ಶೆಡ್ ಹಾಕಿ, ದತ್ತಾತ್ರೇಯ ಹಾಗೂ ಅನುಸೂಯ ದೇವಿಯ ಬೆಳ್ಳಿ ಮೂರ್ತಿ ತಂದು ಇಟ್ಟು , ಪೂಜೆ ಹೋಮ, ಹವನ ಮಾಡುತ್ತಿದ್ದಾರೆ. ಸಮಾಜದಲ್ಲಿ ತಾವೇ ನಿಷ್ಠಾವಂತ ಹಿಂದೂಗಳು ಎಂದು ತೋರಿಸಿಕೊಳ್ಳಲು ಪಾಪ ಇವರಿಗೆ ಬೇರೆ ದಾರಿಯೇ ಸಿಕ್ಕಿಲ್ಲವೇನೂ ಅದಕ್ಕೆ ಇಂಥ ಸೂಕ್ಷ್ಮ ವಿಚಾರಗಳನ್ನು ಕೆದಕಿ ಕೆದಕಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬಂದಾಗಿದೆ. ಆದರೂ ಇವರು ತಮ್ಮ ಹಳೇ ಚಾಳಿ ಬಿಟ್ಟಿಲ್ಲ. ಅಕಾರಕ್ಕೆ ಬಂದ ನಂತರ ಮಾಡಿದ ‘ಮಹಾನ್‌ಕಾರ್ಯ’ ಮೆಚ್ಚಿಕೊಂಡು ಈಗ ನಿತ್ಯವೂ ಬೀದಿಗಿಳಿಯುತ್ತಿದ್ದಾರೆ. ಇಷ್ಟಾದರೂ ಈ ಚಡ್ಡಿಗಳಿಗೆ ಬುದ್ದಿ ಬಂದಿಲ್ಲ. ನಾಚಿಕೆಯಾಗುತ್ತಿಲ್ಲ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಸೇರಿದಂತೆ ನಾಡಿನ ನಾನಾ ಪ್ರಗತಿಪರ ಸಂಘಟನೆಗಳು, ಪರಿಸರವಾದಿಗಳು, ಪ್ರಗತಿಪರರು, ವಿಚಾರವಂಥರು ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇ ಇಷ್ಟು ಆಡುವ ಈ ಭಜರಂಗಿಗಳು ಯಾವುದೇ ಪ್ರತಿರೋಧ ಇಲ್ಲದೆ ಹೋಗಿದ್ದರೆ ಇಷ್ಟೊತ್ತಿಗಾಗಲೇ ಇಡೀ ಬಾಬಾಬುಡನ್‌ಗಿರಿಯೇ ಸಂಘ ಪರಿವಾರದ್ದು ಎಂದು ಸಾರಿ, ಅಲ್ಲಿ ಚಡ್ಡಿಗಳಿಗೆ ಮಾರ್ಚಫಾಸ್ಟ್ ಮಾಡಿಸುತ್ತಿದ್ದರೋ ಏನೋ....
Powered By Blogger