Friday, June 18, 2010

ಕೇಳದೆ ನಿಮಗೀಗ ಪ್ರಕೃತಿ ನರಳುವ ಕೂಗು...

‘ಪ್ರಕೃತಿಯನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ’ ಎಂಬ ಮಾತಿದೆ. ಅದು ನೂರಕ್ಕೆ ನೂರು ಸತ್ಯ. ಪ್ರತಿನಿತ್ಯ ನಾವು ‘ಅಭಿವೃದ್ಧಿ’ ಹೆಸರಿನಲ್ಲಿ ಪ್ರಕೃತಿದತ್ತವಾಗಿ ಬೆಳೆದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮರಗಳನ್ನು ಕ್ಷಣಾರ್ಧದಲ್ಲಿ ಸರ್ವನಾಶ ಮಾಡುತ್ತಿದ್ದೇವೆ. ಆದರೆ ಅದಕ್ಕೆ ಪರ್ಯಾಯವಾಗಿ ಅದೆಷ್ಟು ಮರಗಳನ್ನು ಸಾಕಿ ಬೆಳೆಸಿದ್ದೇವೆ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡರೆ ನಾಲಗೆಯಲ್ಲಿ ಪದಗಳೇ ಉಸುರುವುದಿಲ್ಲ...
ನಿಜ, ದಿನಗಳೆದಂತೆ ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯ ಎಲ್ಲೆ ಮೀರುತ್ತಿದೆ. ಸಹನೆಯ ಕಟ್ಟೆಯೊಡೆದು ಪ್ರಕೃತಿ ಕೂಡ ಒಂದಿಲ್ಲೊಂದು ಹೊಸ ಹೊಸ ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಲೇ ಇದೆ. ಮಳೆಯನ್ನೇ ನಂಬಿ ಬೆಳೆ ಬೆಳೆಯುವ ರೈ ಕೂಡ ಸಂಪೂರ್ಣ ಸೋತು ಸುಣ್ಣವಾಗಿದ್ದಾನೆ.
ಇದು ಯಾಂತ್ರಿಕ ಯುಗ. ಈಗ ಎಲ್ಲರಿಗೂ ಸೌಲಭ್ಯಗಳು ಮನೆ ಬಾಗಿಲಿಗೆ ಎಟಕಬೇಕು. ಹೀಗಾಗಿ ಯಾರೂ ಕೂಡ ಕಷ್ಟಪಡಲು ತಯಾರಿಲ್ಲ. ಏನೆಲ್ಲಾ ಅನುಕೂಲಗಳ ನಡುವೆಯೂ ಇನ್ನೂ ಆಸೆ ತೀರುತ್ತಿಲ್ಲ. ಇದರಿಂದಾಗಿ ಪ್ರತಿನಿತ್ಯ ಹೆಜ್ಜೆ ಹೆಜ್ಜೆಗೂ ಪ್ರತಿಯೊಬ್ಬರು ಒಂದಿಲ್ಲೊಂದು ರೀತಿ ಮರಗಳನ್ನು ಬೆಳೆಸುವ ಬದಲು ಅವುಗಳನ್ನು ಧರೆಗುರುಳಿಸಿ ‘ನಾಟಾ’ ತಯಾರು ಮಾಡುವ ಬಗ್ಗೆಯೇ ಆಲೋಚಿಸುತ್ತಿದ್ದೇವೆ. ಈ ದು ಮರಗಳು ಮರೆಯಾಗುತ್ತಲೇ ಇವೆ. ಜತೆಗೆ ದಟ್ಟ ಕಾನನವನ್ನು ಕಾಪಾಡಲೆಂದೇ ಸೃಷ್ಟಿ ಮಾಡಿರುವ ‘ಅರಣ್ಯ ಇಲಾಖೆ’ ಕೂಡ ಅನಾಯಾಸವಾಗಿ ಮಲಗಿದೆ. ಮರಗಳನ್ನು ಬೆಳೆಸಲೆಂದು ಸರಕಾರದಿಂದ ಬಿಡುಗಡೆಯಾಗುವ ಕೋಟಿ ಕೋಟಿ ಹಣದಲ್ಲಿ ಸಲೀಸಾಗಿ ನೀಲಿಗಿರಿ, ಅಕೇಶಿಯಾದಂಥ ‘ರಾಕ್ಷಸಿ ಮರ’ಗಳನ್ನು ಬೆಳೆಸಿ ಅರಣ್ಯ ಇಲಾಖೆ ಕೈ ತೊಳೆದುಕೊಳ್ಳುತ್ತಿದೆ. ಇದು ಇಂದಿನ ಕತೆಯಲ್ಲ. ಕಳೆದ ಇಪ್ಪತೈದು ವರ್ಷಗಳೀಚೆಗೆ ನಡೆಯುತ್ತಿರುವ ನಿರಂತರ ಪ್ರಕ್ರಿಯೆ.
ಹೀಗಾಗಿ ದಿನಕಳೆದಂತೆ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ನೂರಾರು ಅಡಿ ಬೋರ್‌ವೆಲ್ ಕೊರೆಯಿಸಿದರೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಗಾಳಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗಿ ಓಜೋನ್ ಪದರ ದಿನನಿತ್ಯ ಹರಿದು ಛಿದ್ರವಾಗುತ್ತಿದೆ. ಜನರ ಆರೋಗ್ಯ ಹದಗೆಟ್ಟು ದಿನಕಳೆದಂತೆ ಹೊಸ ಹೊಸ ಕಾಯಿಲೆಗಳು ದಾಂಗುಡಿಯಿಡುತ್ತಿವೆ. ಜತೆಗೆ ಸರಿಯಾದ ಸಮಯದಲ್ಲಿ ಮಳೆಯಿಲ್ಲದೆ ರೈತರು ಬೀದಿಗೆ ಬೀಳುತ್ತಿದ್ದಾರೆ. ಅನ್ನ, ನೀರಿಲ್ಲದೆ ನಿತ್ಯವೂ ಪರದಾಡುತ್ತಿದ್ದಾರೆ.
ಈಗಾಲೇ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿಯಂತ ಜಿಲ್ಲೆಗಳಲ್ಲಿ ಕುಡಿಯಲು ಕೂಡ ನೀರಿಲ್ಲ. ಬೆಂಗಳೂರಿನಂಥ ಮಹಾನಗರಗಳಲ್ಲಿ ಇದ್ದ ೭೬೧ ಕೆರೆಗಳೂ ಮಾಯವಾಗಿ ನೀರಿಗಾಗಿ ಹಾಹಾಕಾರ ಶುರುವಾಗುತ್ತಿದೆ. ಆದರೂ ನಗರಗಳ ವಿಸ್ತರಣೆ ಎನ್ನುವುದು ನಿರಂತರವಾಗಿ ನಡೆದೇ ಇದೆ. ಪರಿಸರವನ್ನು ನಾಶ ಮಾಡಿ ಹೀಗೆ ಮಾಡುತ್ತಿರುವ ಅಭಿವೃದ್ಧಿಯಿಂದಲೇ ಮನುಕುಲ ಮಾತ್ರವಲ್ಲ , ಸಕಲ ಜೀವರಾಶಿಗಳೂ ವಿನಾಶದಂಚಿಗೆ ಹತ್ತಿರವಾಗುತ್ತಿವೆ ಎಂಬ ಸತ್ಯದ ಬಗ್ಗೆ ಯಾರೂ ಯೋಚಿಸುತ್ತಿಲ್ಲ.
ಇದಲ್ಲದೆ ಈಗ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ನೆಪದಲ್ಲಂತೂ ಮರಗಳ ಸಾಮೂಹಿಕ ಮಾರಣಹೋಮ ನಡೆಯುತ್ತಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಎಲ್ಲೂ ಮರಗಳನ್ನು ನೆಡುತ್ತಿಲ್ಲ. ಶಿವಮೊಗ್ಗ, ಬೆಳಗಾವಿ, ತುಮಕೂರು, ರಾಯಚೂರು ವಿಭಾಗಗಳಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು ಕೆಶಿಪ್ (ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್) -೧ರ ಅಡಿ ೨,೩೯೫ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದು, ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಅದಕ್ಕಾಗಿ ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲು ಅರ್ಜಿ ಸಲ್ಲಿಸಲಾಗಿದೆ.
ರಸ್ತೆಗಳ ನಿರ್ಮಾಣವಾಗುತ್ತದೆ ಎಂಬ ಕಾರಣಕ್ಕೆ ಅಂಧಕಾರದಲ್ಲಿ ಮುಳುಗುವುದು ಯಾವ ನ್ಯಾಯ? ಅಭಿವೃದ್ಧಿ ಬೇಕೆ ಬೇಕು ಎಂದಾದರೆ ಅದಕ್ಕೆ ಪರ್ಯಾಯವಾಗಿ ಮರಗಳನ್ನಾದರೂ ನೆಡಬೇಕಲ್ಲ? ಅದೂ ಇಲ್ಲ. ಗಿಡ ಬೆಳೆಸುವ ಗೋಜಿಗೇ ಹೋಗದೆ ೨,೩೯೫ಕಿ.ಮೀ. ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕೆಶಿಪ್-೧ರ ಅಡಿ ೧,೭೭,೦೦೦ ಮರಗಳನ್ನು ಧರೆಗುರುಳಿಸಲಾಗಿದೆ. ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ೫೫,೫೯೬ ಮರಗಳನ್ನು ಕಡಿದು ಹಾಕಲು ತಂತ್ರ ರೂಪಿಸಲಾಗಿದೆ. ಇದರಲ್ಲಿ ಈಗಾಗಲೇ ೯,೮೦೮ ಮರಗಳನ್ನು ಸರ್ವನಾಶ ಮಾಡಿಯಾಗಿದೆ. ಉಳಿದ ೪೫,೮೦೮ ಮರಗಳಿಗೆ ಸದ್ಯದಲ್ಲಿಯೇ ಕೊಡಲಿ ಏಟು ಬೀಳಲಿದೆ.
ಇದು ಕೇವಲ ಸರಕಾರಿ ಜಾಗದಲ್ಲಿರುವ ಮರಗಳ ಸಂಖ್ಯೆ. ಅದರಲ್ಲೂ ಇಲಾಖೆ ನೀಡುವ ಮಾಹಿತಿ. ಖಾಸಗಿ ಜಮೀನು ಸೇರಿದಂತೆ ಲೆಕ್ಕದಿಂದ ತಪ್ಪಿದ ಲಕ್ಷಾಂತರ ಮರಗಳ ಮಾರಣಹೋಮ ನಡೆದಿದೆ ಎನ್ನುವ ಕೂಗು ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಆದರೆ ಇದ್ಯಾವುದೂ ಇಲಾಖೆಯ ಅಥವಾ ಸಂಬಂಸಿದ ಅಕಾರಿಗಳ, ಜನಪ್ರತಿನಿಗಳ ಕಿವಿಗೆ ಬೀಳುತ್ತಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ, ಕೋಟಿಗಟ್ಟಲೆ ಬೆಲೆ ಬಾಳುವ ಮರಗಳನ್ನು ಹೀಗೆ ಹಿಂದು ಮುಂದು ನೋಡದೆ ಗುತ್ತಿಗೆ ಕೊಟ್ಟು ಕತ್ತರಿಸಿ ಹಾಕುವ ಅರಣ್ಯ ಇಲಾಖೆಯ ಅಕಾರಿಗಳಿಗೆ ಅಷ್ಟೇ ಸಲೀಸಾಗಿ ಮರಗಳನ್ನು ಬೆಳೆಸಲು ಆದೀತೆ...? ಖಂಡಿತಾ ಇಲ್ಲ. ಒಂದು ಮರ ಸ್ವತಂತ್ರವಾಗಿ ಬೆಳೆಯಲು ಅಣಿಯಾಗಬೇಕಾದರೆ ಕನಿಷ್ಠ ೭ ವರ್ಷಗಳಾದರೂ ಬೇಕು. ಅಲ್ಲಿಯವರೆಗೆ ಅವುಗಳನ್ನು ಸಹನೆಯಿಂದ ಸಾಕುವ ವ್ಯವಧಾನ ಈ ಅರಣ್ಯ ಇಲಾಖೆಯ ಸಿಬ್ಬಂದಿಗೆ ಇದೆಯೇ?
ಗಿಡ ನೆಡುವ ಅವಕಾಶ ಸಿಕ್ಕಾಗಲೆಲ್ಲಾ ನೀಲಿಗಿರಿ, ಅಕೇಶಿಯಾದಂಥ ಪರಿಸರಕ್ಕೆ ಮಾರಕವಾದ ಗಿಡಗಳನ್ನು ಬೆಳೆಸಿ ಭೂಮಿಯನ್ನು ಹಾಳು ಮಾಡುವುದರ ಜತೆಗೆ ತಮಗೆ ‘ಆದಾಯ’ ಮಾಡಿಕೊಳ್ಳುವ ಇಂಥವರು ಮಮತೆಯಿಂದ ಮರಗಳನ್ನು ಬೆಳೆಸುವುದಾದರೂ ಎಂದು ? ಅದಿರಲಿ, ಅವುಗಳು ಮನುಷ್ಯನೂ ಸೇರಿದಂತೆ ಪ್ರಾಣಿ, ಪಕ್ಷಿಗಳ ಸಂಕುಲಗಳಿವೆ ನೀಡುವ ಉಸಿರಿಗೆ ಬೆಲೆ ಕಟ್ಟಲಾದೀತೆ...? ಅರಣ್ಯ ಇಲಾಖೆ ಕೇವಲ ನೆಪ ಮಾತ್ರಕ್ಕಿದೆ ಎಂಬ ಮಾತು ಈಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನೈಜವಾಗಿ ಬೆಳೆದ ಕಡೆಗಳಲ್ಲೆಲ್ಲ ‘ಪರವಾನಗಿ’ ಹೆಸರಿನಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕೆಲವು ಅರಣ್ಯ ಇಲಾಖೆಯ ಅಕಾರಿಗಳೇ ಅಗತ್ಯಕ್ಕಿಂತ ಹೆಚ್ಚು ಮರಗಳನ್ನು ಕತ್ತರಿಸುತ್ತಿರುವುದೂ ಬಹಿರಂಗ ಸತ್ಯ. ಆದರೆ ಅವುಗಳ ಜಾಗದಲ್ಲಿ ಇಲಾಖೆ ಬೆಳೆಸುತ್ತಿರುವುದು ಮಾತ್ರ ಕೇವಲ ಪ್ರಕೃತಿ ವಿರೋಯಾದ ಅಕೇಶಿಯಾ ಹಾಗೂ ನೀಲಿಗಿರಿ ಮರಗಳನ್ನು.
ಜತೆಗೆ ಅರಣ್ಯ ಇಲಾಖೆ ಹೇಗೆಂದರೆ ಹಾಗೆ ಮರ ಕಡಿಯಲು ನೀಡುತ್ತಿರುವ ಅನುಮತಿಗೆ ಲೆಕ್ಕವೇ ಇಲ್ಲ. ಜತೆಗೆ ಸಣ್ಣಪುಟ್ಟ ಕಾಮಗಾರಿಗಳಾದರೂ ಅದೇ ನೆಪದಲ್ಲಿ ಬೃಹದಾಕಾರದ ಮರಗಳು ನೆಲಕಚ್ಚುತ್ತಿವೆ. ಅವುಗಳಿಗೆ ಯಾವ ಲೆಕ್ಕವೂ ಇಲ್ಲ. ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಹೆಸರಲ್ಲಿ, ಅಂಡರ್‌ಪಾಸ್, ಅಥವಾ ಮೇಲ್ಸೇತುವೆ ಮುಂತಾದ ಕಾರಣಗಳಿಗಾಗಿ ಎರಡು ವರ್ಷದಿಂದೀಚೆ ಐದು ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಶಿವಮೊಗ್ಗ, ಮಂಡ್ಯ, ಕೋಲಾರ, ತುಮಕೂರು, ಬಳ್ಳಾರಿ ಮುಂತಾದ ನಗರಗಳಲ್ಲಿ ಸಣ್ಣಪುಟ್ಟ ರಸ್ತೆ ವಿಸ್ತರಣೆಗೂ ನೂರಾರು ಮರಗಳನ್ನು ಧರೆಗುರುಳಿಸಲಾಗಿದೆ. ಆದರೆ ಎಲ್ಲೂ ಉತ್ತಮ ತಳಿಯ ಮರಗಳನ್ನು ನೆಟ್ಟಿಲ್ಲ! ಮರಗಳ ಕಳ್ಳಸಾಗಣೆ, ಗಣಿ ಹೆಸರಿನಲ್ಲಂತೂ ಅರಣ್ಯಕ್ಕೆ ಅರಣ್ಯವೇ ಸಮಾಪ್ತಿಯಾಗುತ್ತಿದೆ... ಇವುಗಳ ಬಗ್ಗೆ ಮಾತ್ರ ಪ್ರಶ್ನೆ ಮಾಡುವವರೇ ಇಲ್ಲ.
ಕೆಶಿಪ್ ಅಡಿ ಕಡಿದಿರುವ ಮರಗಳ ಬದಲಿಗೆ ಒಂದು ಕಿ.ಮೀ.ಗೆ ೨೦೦ ಮರಗಳಂತೆ ಮರಗಳನ್ನು ಬೆಳೆಸಿ ನೆಡಲು ಹಾಗೂ ೭ವರ್ಷಗಳ ವರೆಗೆ ಅವುಗಳ ಮುತುವರ್ಜಿ ನೋಡಿಕೊಳ್ಳಲು ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್ ಹಾಗೂ ಅರಣ್ಯ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಅದಕ್ಕೆ ತಗಲುವ ವೆಚ್ಚವನ್ನೂ ಕೆಶಿಪ್ ಭರಿಸಲು ಒಪ್ಪಿಗೆ ನೀಡಿ, ಹಂತ ಹಂತವಾಗಿ ಹಣ ನೀಡುತ್ತಿದೆ. ಆದರೆ ಇಲ್ಲೂ ಅರಣ್ಯ ಇಲಾಖೆ ಇನ್ನೂ ಒಂದೇ ಒಂದು ಗಿಡಗಳನ್ನೂ ಎಲ್ಲೂ ನೆಟ್ಟಿಲ್ಲ !
ಸಂಪದ್ಭರಿತವಾದ ಕಾಡುಗಳನ್ನು ಕಡಿದು ಅಲ್ಲಿ ಜೀವ ವೈವಿಧ್ಯ ವಿರೋ ನೀಲಿಗಿರಿ, ಅಕೇಶಿಯಾ ಬೆಳೆಸಿದ ರೀತಿಯಲ್ಲಿ ರಸ್ತೆಯುದ್ದಕ್ಕೂ ಅರಣ್ಯ ಇಲಾಖೆ ನಾಳೆ ಇದೇ ಮರಗಳನ್ನು ನೆಟ್ಟರೆ ಭೂಮಿಯ ತಾಪಮಾನ ಈಗಿನದ್ದಕ್ಕಿಂತ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಅಂತರ್ಜಲದ ಮಟ್ಟ ಪಾತಾಳ ಸೇರಿ ಕೋಲಾರ ಜಿಲ್ಲೆಯಲ್ಲಿರುವ ನೀರಿನ ಸಮಸ್ಯೆ ಇಡೀ ರಾಜ್ಯಕ್ಕೆ ವಕ್ಕರಿಸಿಕೊಳ್ಳುವುದು ನಿಶ್ಚಿತ. ಆದ್ದರಿಂದ ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಜನಸಾಮಾನ್ಯರೂ ಕೂಡ ಇಂಥ ಮಾರಕ ಹಾಗೂ ಅನಾವಶ್ಯಕ ಅಭಿವೃದ್ಧಿ, ಪರಿಸರ ವಿರೋ ನಿರ್ಧಾರಗಳ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೊಂದು ದಿನ ಉಸಿರಾಡಲೂ ಕೂಡ ಹಣ ನೀಡಿ ಆಮ್ಲಜನಕವನ್ನು ಖರೀದಿಸಬೇಕಾದ ದಿನ ದೂರವಿಲ್ಲ !
Powered By Blogger