Monday, January 19, 2009

ಕನ್ನಡಿಗರೇ ಓಡೋಡಿ ಬನ್ನಿ

ಕಸ್ತೂರಿ ಕನ್ನಡಕೆ
ಕೊಡಲಿ ಪೆಟ್ಟು ಬಿದ್ದೈತೆ
ಹೃದಯದಾ ಮಾತು
ಮರೆಯಾಗಿ ಹೊಂಟೈತೆ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ನೂರಾರು ವರ್ಷ ಆಳಿದಾ ಪರಕೀಯರು
ಮಾಡಲಿಲ್ಲ ಕನ್ನಡಕೆ ದ್ರೋಹ.
ಸ್ವಾತಂತ್ರ್ಯ ಬಂದ ಮರು ಕ್ಷಣವೆ
ಆಯ್ತು ಕನ್ನಡ ಛಿದ್ರ ಛಿದ್ರ
ವಿಚಿತ್ರ ಜನರಿಂದ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ನಗರದಲ್ಲಿ ನಿಂತು ನಗಾರಿ ಬಾರಿಸಿದ್ರೂ
ಕೇಳುವವರಿಲ್ಲ ಕನ್ನಡಾಂಬೆಯ ಗೋಳು
ರೈತರೇ ಬನ್ನಿ, ಕೂಲಿ ಕಾರ್ಮಿಕರೇ ಬನ್ನಿ ,
ಕೈಲಿರುವ ಸಲಕರಣೆಗಳ ಹೊತ್ತು ತನ್ನಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ತಿಳಿದವರೇ ತುಳಿದರು ಕನ್ನಡವನ್ನ
ಮೆರೆಸಿದರು ಒಟ್ಟುಗೂಡಿ ಇಂಗ್ಲಿಷನ್ನ
ಉಳಿಸಿ ಬೆಳೆಸೋಣ ಕನ್ನಡಾನ
ಹೊಡೆದೋಡಿಸೋಣ ಇಂಗ್ಲಿಷ್‌ನ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಅನುದಿನವೂ ನರಳುತಿದೆ
ಅನುಕ್ಷಣವೂ ಕೊರಗುತಿದೆ
ತಾಯಿ ಎದೆಹಾಲು
ಕುಡಿದು ಕಲಿತ ಕನ್ನಡ
ರಕ್ಷಣೆಗೆ ಬನ್ನಿ ಕನ್ನಡಿಗರೆ
ಓಡೋಡಿ ಬನ್ನಿ... ||

ಅರವತ್ತು ವರುಷ ಕಳೆದರೂ
ಕನ್ನಡಾಭಿಮಾನ ಬರಲಿಲ್ಲ
ಅನ್ಯ ಭಾಷೆಗೆ ಪಲ್ಲಂಗ ಹಾಸುವುದ ಬಿಡಲಿಲ್ಲ
ಅದಕೇ ಬಿತ್ತು ಕನ್ನಡ ಅಂಗಳದಲ್ಲಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಹಿಂದೂ, ಮುಸ್ಲಿಂ ಎಂದು
ಹಿಂದು ಮುಂದು ನೋಡದಿರಿ
ಜಾತಿ ಭೇದಗಳ ಮರೆಯಲ್ಲಿ
ಕನ್ನಡಾಂಬೆಯ ಮರೆಯದಿರಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ ... ||

ತಾಯಿ ಎದೆ ಹಾಲುಂಡು
ಮೊಲೆ ಕೊಯ್ಯುವರಿಹರಿಲ್ಲಿ
ಅನ್ಯಳಾ ಉಬ್ಬಿದೆದೆಯನು ಕಂಡು
ಜೊಲ್ಲು ಸುರಿಸುವರಿಹರಿಲ್ಲಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಭುವನೇಶ್ವರಿಯ ನಯನದಲಿ
ಸುರಿಯುತಿದೆ ರಕ್ತಕಣ್ಣೀರು
ತನ್ನ ಮಕ್ಕಳೇ ಇರಿದ
ಚೂರಿ ಉರಿಯಿಂದ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಅನ್ಯ ಭಾಷೆಗಳ ವ್ಯಾಮೋಹ
ಹುಚ್ಚು ಹಿಡಿಸಿದೆ . ಆಹಾ...!
ಮುತ್ತುಕೊಡುವಳು ಬಂದಾಗ
ತುತ್ತು ಕೊಟ್ಟೋಳ ಮರೆಯೋದೆ ?
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

Sunday, January 18, 2009

ಬೇಲಿಯೇ ಎದ್ದು ‘ಹೊಲ’ ಮೇಯ್ದರೆ ಹೇಗೆ ?

ರೈತನ ಮಗ ಎಂದು ಹೇಳಿಕೊಂಡು ಅಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಯಡಿಯೂರಪ್ಪ ಗಾದಿಗೇರಿದ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಗೊಬ್ಬರದ ಹಾಹಾಕಾರ. ಅದರ ಬೆನ್ನಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್. ಬಿತ್ತನೆ ಬೀಜಕ್ಕಾಗಿ ಪರದಾಟ. ಜತೆಗೆ ಕೈಕೊಟ್ಟ ಮಳೆ, ಮುಗಿಲು ನೋಡುತ್ತಿದ್ದಂತೆ ಧೋ ಎಂದು ಸುರಿದ ವರುಣನ ಆರ್ಭಟ...
ಇವೆಲ್ಲಾ ಭೂಮಿತಾಯಿಯ ಚೊಚ್ಚಲ ಮಕ್ಕಳ ಸದ್ಯದ ಬವಣೆಗಳ ಪಟ್ಟಿ. ಭಾರತದ ಕೃಷಿ ಒಂದು ರೀತಿ ಮಳೆರಾಯನೊಂದಿಗಿನ ಜೂಜಾಟ ಎಂದು ಶತ ಶತಮಾನಗಳಿಂದಲೂ ನಾವು ಹೇಳಿಕೊಡು ಬಂದಿದ್ದೇವೆ. ಇಲ್ಲಿ ಶೇ.೭೦ ಮಂದಿ ಕೃಷಿಕರು. ಇಡೀ ದೇಶ ಅವಲಂಬಿಸಿರುವುದೇ ಅದನ್ನು. ರೈತ ಕೈ ಕಟ್ಟಿ ಕುಳಿತನೆಂದರೆ ದೇಶದ ಉದ್ದಗಲಕ್ಕೂ ನಾನಾ ವೃತ್ತಿಯಲ್ಲಿ ನಿರತರಾಗಿರುವವರ ಪಾಡು ಅಧೋಗತಿ. ಈಗ ನಾವೆಲ್ಲ ತಿನ್ನುತ್ತಿರುವುದು ಅದೇ ರೈತ ಬೆಳೆದ ಅನ್ನವನ್ನ.
ಪ್ರತಿ ಚುನಾವಣೆಗಳಲ್ಲೂ ಎಲ್ಲ ಪಕ್ಷಗಳ ಪ್ರಣಾಳಿಕೆಯ ಮೊದಲ ಸಾಲು ರೈತರ ಉದ್ಧಾರ. ಆದರೆ ಈ ದೇಶದಲ್ಲಿ ನಿತ್ಯ ಬಡವಾಗುತ್ತಿರುವವನು ಮಾತ್ರ ರೈತ. ರೈತ ಸಮುದಾಯಗಳಿಂದ ಬೆಳೆದು ಬಂದವರು ಕೂಡ ಒಂದು ಹಂತಕ್ಕೆ ಬಂದ ನಂತರ ಮತ್ತೆ ಹಿಂದೆ ತಿರುಗಿ ನೋಡುವುದೇ ಇಲ್ಲ. ತಾನು ನಡೆದು ಬಂದ ಹಾದಿಯಲ್ಲಿ ಕಾಲಿಗೆ ನಾಟಿದ ಕಲ್ಲು ಮುಳ್ಳುಗಳು ಈಗ ಲೆಕ್ಕಕ್ಕೇ ಇಲ್ಲ. ಯಾಕೆಂದರೆ ಗಾಯ ವಾಸಿಯಾಗಿರುತ್ತದೆ. ಅದರ ನೋವು ಮಾಯವಾಗಿರುತ್ತದೆ. ಕಲೆಗಳ ಕುರುಹುಗಳು ಕೂಡ ಸಿಗುವುದಿಲ್ಲ.
ಯಡಿಯೂರಪ್ಪನವರ ಸರಕಾರ ಅಕಾರಕ್ಕೆ ಬಂದ ಮೊದಲ ವಾರದಲ್ಲೇ ಖಾಸಗಿ ಏಜೆನ್ಸಿಗಳಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ವಿತರಿಸಲು ಅಕಾರ ಕೊಡಲಾಗಿತ್ತು. ಅದರ ಪರಿಣಾಮ ಇಡೀ ರಾಜ್ಯದಲ್ಲಿ ರೈತರು ಏಜೆನ್ಸಿಗಳ ಮುಂದೆ ನಿದ್ರೆ, ನೀರಡಿಕೆ ಬಿಟ್ಟು ಸಾಲು ಸಾಲಾಗಿ ನಿಂತಿದ್ದರು. ಕೊನೆಗೆ ಸಹನೆ ಕಳೆದುಕೊಂಡು, ರೊಚ್ಚಿಗೆದ್ದು ವಾಹನಗಳಿಗೆ ಬೆಂಕಿ ಹಚ್ಚಿ ರಾಜ್ಯದ ಉದ್ದಗಲಕ್ಕೂ ಗಲಭೆಗಳು ನಡೆದವು. ಅದನ್ನು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಈಗಾಗಲೇ ಮರೆತಂತ್ತಿವೆ.
ಅದಕ್ಕೇ ಈಗ ಕೃಷಿ ಪರಿಕರಗಳ ಸಹಾಯ ಧನವನ್ನು ರೈತರಿಗೆ ನೀಡುವುದಾಗಿ ಹೇಳಿದ್ದ ಸರಕಾರ ಈಗ ಏಜೆನ್ಸಿಗಳಿಗೆ ಹಾಗೂ ಪರಿಕರಗಳನ್ನು ತಯಾರಿಸುವ ಖಾಸಗಿ ಕಂಪನಿಗಳಿಗೆ ನೀಡಲು ಮುಂದಾಗುತ್ತಿದೆ. ಜತೆಗೆ ತಾಲೂಕು ಕೇಂದ್ರಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಣ್ಣು ಆರೋಗ್ಯ ಕೇಂದ್ರವನ್ನು ಶೇ.೫೦ರಷ್ಟು ಸಹಾಯಧನ ನೀಡಿ ಖಾಸಗಿ ಕಂಪನಿಗಳ ಉಸ್ತುವಾರಿಗೆ ವಹಿಸಲು ನಿರ್ಧರಿಸಲಾಗಿದೆ. ನಾನಾ ಇಲಾಖೆಯ ಕಾರ್ಮಿಕರನ್ನು ಖಾಸಗೀಕರಣವೆಂಬ ಕಪ್ಪು ಕೋಣೆಗೆ ತಳ್ಳಿ ಮಜಾ ತೆಗೆದುಕೊಂಡ ಸರಕಾರಗಳು ಈಗ ಕೃಷಿ ಇಲಾಖೆಯನ್ನೂ ಖಾಸಗೀಕರಣಗೊಳಿಸಲು ಸದ್ದಿಲ್ಲದೆ ಹುನ್ನಾರ ನಡೆಸುತ್ತಿವೆ.
ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲಿದೆ. ಇಲ್ಲಿ ಯಾವುದೇ ಒಂದು ಸರಕಾರವನ್ನು ದೂರುವಂತಿಲ್ಲ. ಖಾಸಗೀಕರಣಕ್ಕೆ ಈ ದೇಶ ಹಾಗೂ ರಾಜ್ಯದಲ್ಲಿ ಅದೆಷ್ಟು ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಎರಡೂ ಸರಕಾರಗಳ ಸಂಪುಟದಲ್ಲಿರುವ ಪ್ರತಿ ಮಂತ್ರಿ ಮಹೋದಯರಿಗೂ ಗೊತ್ತು. ಆದರೂ ಇವರೆಲ್ಲ ಜಾಣಕುರುಡು ಪ್ರದರ್ಶಿಸುತ್ತಿರುವುದು ಮಾತ್ರ ನಾಚಿಕೆಗೇಡು.
ಸರಕಾರಗಳ ಕೈಲಿ ಇರುವ ಇಲಾಖೆಯಿಂದಲೇ ಈಗಾಗಲೇ ದೇಶದ ಉದ್ದಗಲಕ್ಕೂ ರೈತರ ಶೋಷಣೆ ನಡೆಯುತ್ತಿದೆ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ. ಇನ್ನು ಇಡೀ ಇಲಾಖೆಯನ್ನೇ ಹೊತ್ತುಕೊಂಡು ಹೋಗಿ ಖಾಸಗಿ ವ್ಯಕ್ತಿಗಳ ಕಪಿ ಮುಷ್ಟಿಗೆ ಒಡ್ಡಿದರೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಗ ಬಡ ರೈತರು ಮತ್ತೆ ತುತ್ತು ಕೂಳಿಗೂ ಪರಿತಪಿಸುತ್ತಾ ಜೀತ ಮಾಡಬೇಕಾಗುತ್ತದೆ ಎಚ್ಚರವಿರಲಿ.
ಸರಕಾರಗಳಿಂದಲೇ ವ್ಯವಸ್ಥಿತವಾಗಿ ಆಡಳಿತ ನಡೆಸಲಾಗದೆ ರೈತರಿಗೆ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ಗೊಬ್ಬರ ಪೂರೈಕೆ ಮಾಡಲಾಗದೆ ತೊಳಲಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಮಾಯಕ ರೈತರು ಭೂಮಿಯ ಒಡಲನ್ನು ನಂಬಿ ಸುರಿದ ಹಣ ಮತ್ತೆ ಕೈಗೆ ಬಾರದೆ ಬ್ಯಾಂಕ್, ಸಹಕಾರಿ ಸಂಘಗಳು ಹಾಗೂ ಕೆಲವು ದುಷ್ಟ ಶ್ರೀಮಂತರ ಕೈಲಿ ಸಾಲ ಮಾಡಿ ಶೂಲಕ್ಕೆ ಸಿಕ್ಕಿಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ನೋವು ತಾಳಲಾರದೆ ನೇಣಿಗೆ ಕೊರಳೊಡುತ್ತಿದ್ದಾರೆ. ಕುಟುಂಬ ಸಮೇತರಾಗಿ ವಿಷ ಕುಡಿಯುತ್ತಿದ್ದಾರೆ. ಇಷ್ಟಾದರೂ ಅವರ ಬವಣೆ ನೀಗುತ್ತಿಲ್ಲ. ಇನ್ನು ಕೃಷಿ ಇಲಾಖೆಯನ್ನೇ ‘ಖಾಸಗೀಕರಣ’ದ ಸರಹದ್ದಿಗೆ ತಂದಿಟ್ಟರೆ ಅವರ ಗತಿ ಏನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ.
ಕೃಷಿಯಲ್ಲಿ ಈಗಾಗಲೇ ಯಾವುದೇ ಲಾಭವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿ ಯುವಕ ಯುವತಿಯರು ನಗರ ಪ್ರದೇಶಗಳಿಗೆ ವಲಸೆ ಬರಲಾರಂಭಿಸಿದ್ದಾರೆ. ಇದರಿಂದ ದಿನಕ್ಕೆ ೧೦೦ ರೂ. ಕೊಟ್ಟರೂ ಕೂಲಿ ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲ. ಇದರಿಂದ ದಿನೇ ದಿನೆ ಆಹಾರ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಈ ಕಾರಣಕ್ಕಾಗಿ ದೇಶದ ಶೇ.೪೦ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿ ೧೦೦ ಮಿಲಿಯನ್ ಮಂದಿ ಹಸಿವಿನಿಂದ ಕೊನೆಯುಸಿರೆಳೆಯುತ್ತಿದ್ದಾರೆ.
ಭಾರತ ಕೂಡ ಈಗ ತೀವ್ರತರನಾದ ಆಹಾರ ಕೊರತೆಯ ಸಮಸ್ಯೆ ಎದುರಿಸುತ್ತಿದೆ. ೨೦೫೦ರೊಳಗೆ ಭಾರತ ವಿಶ್ವದ ಅತ್ಯಕ ಜನ ಸಂಖ್ಯೆ ಹೊಂದಿದ ರಾಷ್ಟ್ರವಾಗಲಿದೆ. ಚೀನಾದಲ್ಲಿ ಈಗ ೧೧೮.೬ಕೋಟಿ ಜನಸಂಖ್ಯೆ ಇದೆ. ೨೦೫೦ಕ್ಕೆ ಅದು ೧೬೫.೮ಕೋಟಿಗೆ ತಲುಪಬಹುದು. ಆದರೆ ಭಾರತ ಅದನ್ನು ಮೀರಿ ಮುಂದೆ ಹೋಗುತ್ತದೆ ಎಂಬ ಆತಂಕ ಈಗಾಗಲೇ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದು ನಿಜವಾದರೆ ಆಹಾರ ಸಮಸ್ಯೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ.
ಜತೆಗೆ ಈಗಾಗಲೇ ಕೃಷಿ ಭೂಮಿಯನ್ನು ನಾನಾ ಕೈಗಾರಿಕೆಗಳು, ವಿತ್ತವಲಯ ಅದು ಇದು ಎಂದೆಲ್ಲಾ ಸ್ವಲ್ಪ ಸ್ವಲ್ಪ ನುಂಗಿ ನೀರು ಕುಡಿಯುತ್ತಿರುವ ಸರಕಾರಗಳಿಂದ ಮುಂದೊಂದು ದಿನ ರೈತರಿಗೆ ಕೃಷಿಗಾಗಿ ಭೂಮಿ ಸಿಗುವುದೇ ಕಷ್ಟ. ಹೀಗಿರುವಾಗ ಇರುವ ಕೃಷಿ ಇಲಾಖೆಯನ್ನೂ ಖಾಸಗೀಕರಣಗೊಳಿಸಿ ಕೈ ತೊಳೆದುಕೊಂಡರೆ ರೈತರ ಬದುಕು ಹೇಗಾಗಬಹುದು...?
ಸರಕಾರದ ಕೈಯಲ್ಲಿಯೇ ರೈತರ ಬದುಕನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅವರ ಏಳುಬೀಳುಗಳನ್ನು ಗಮನಿಸಿ ರೈತರನ್ನು ಖಾಸಗಿ ಕಂಪನಿಗಳಿಂದ ಮಾತ್ರವಲ್ಲ ಅವರ ಎಲ್ಲ ಸಂಕಷ್ಟಗಳಿಂದ ಕಾಪಾಡಬೇಕಾದದ್ದು ಸರಕಾರಗಳ ಕರ್ತವ್ಯ. ಹೀಗಿರುವಾಗ ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ನೀವೇ ಹೇಳಿ ?
rameshhirejambur@gmail.com

Thursday, January 15, 2009

ಮುಸ್ಲಿಂ ಉಗ್ರರು ಮತ್ತು ಹಿಂದೂ ಉಗ್ರರು...

ಭಯೋತ್ಪಾದನೆ ಎನ್ನುವುದನ್ನು ಮುಸ್ಲಿಮರು ಗುತ್ತಿಗೆ ಪಡೆದಿದ್ದಾರೆ ಎಂಬಂತೆ ಮಾತನಾಡುತ್ತಿದ್ದವರು ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಸ್ವತಂತ್ರ ಭಾರತ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ನಡೆದ ಅನೇಕ ಬಾಂಬ್ ಸೋಟ ಪ್ರಕರಣಗಳಲ್ಲಿ ಬಹುತೇಕ ಭಾಗಿಯಾದವರು ಮುಸ್ಲಿಮರೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನೇ ನೆಪ ಮಾಡಿಕೊಂಡು ಇಡೀ ಸಮುದಾಯವನ್ನೇ ಅನುಮಾನದಿಂದ ನೋಡುವ ಪರಿಪಾಠ ಅದರಿಂದ ಬೆಳೆದಿತ್ತು. ಅದಕ್ಕೊಂದು ಹೊಸ ದಿಕ್ಕು ಈಗ ದೊರೆತಿದೆ...
ಮುಂಬಯಿ ಸರಣಿ ಸೋಟ, ಹೈದರಾಬಾದ್ ಸೋಟ, ಹೊಸದಿಲ್ಲಿ ಸೋಟ, ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಾಗ್ಗೆ ನಡೆಯುವ ಬಾಂಬ್ ದಾಳಿ, ಮುಂಬಯಿನಲ್ಲಿ ಇತ್ತೀಚೆಗಷ್ಟೇ ನಡೆದ ಪಾಕ್ ಉಗ್ರರ ರುದ್ರ ನರ್ತನಗಳನ್ನು ನೋಡಿದಾಗಲೆಲ್ಲ ನಮ್ಮ ನಡುವೆ ಹರಿದಾಡುತ್ತಿದ್ದ ಒಂದು ವಾಕ್ಯ ‘ ಇದೆಲ್ಲ ಮುಸ್ಲಿಮರದ್ದು ’. ದಾಳಿ ಮಾಡಿ ಅಮಾಯಕರ ಪ್ರಾಣಹರಣ ಮಾಡಿದ ಪಾಪಿಗಳನ್ನು ಬೊಟ್ಟು ಮಾಡಿ ತೋರಿಸುವ ಬದಲಾಗಿ ಆ ಕಳಂಕವನ್ನು ಇಡೀ ಆ ಸಮುದಾಯಕ್ಕೇ ಅಂಟಿಸಿ ಮಸಿ ಬಳಿಯಲಾಗುತ್ತಿದೆ.
ಇಂಥ ದಾಳಿಗಳಲ್ಲಿ ಕೊನೆಯುಸಿರೆಳೆಯುವವರು ಅಮಾಯಕ ಜನಸಾಮಾನ್ಯರು. ಆ ಸಾವು ನೋವಿನಲ್ಲೂ ಹಿಂದುಗಳಿದ್ದಾರೆ. ಮುಸ್ಲಿಮರಿದ್ದಾರೆ. ಕ್ರಿಶ್ಚಿಯನ್ನರಿದ್ದಾರೆ... ಅವರೆಲ್ಲಾ ಈ ಮೂಲಭೂತವಾದಿಗಳ ಕಣ್ಣಿಗೆ ಯಾಕೆ ಕಾಣುವುದಿಲ್ಲ ? ಇಲ್ಲಿಯ ವರೆಗೆ ಭಾರತದಲ್ಲಿ ಮುಸ್ಲಿಮ್ ಭಯೋತ್ಪಾದಕರ ಕೈಲಿ ೩ಸಾವಿರಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ನಿಜ. ಆದರೆ ಸದ್ದಿಲ್ಲದೆ ನಡೆಯುವ ಹಿಂದೂ ಉಗ್ರರ ಕೈಯಿಂದ ಅದೆಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಅದೆಷ್ಟು ಮಹಿಳೆಯರ ಹಣೆಯ ಕುಂಕುಮ ಅಳಿಸಿದೆ. ಅದೆಷ್ಟು ಮಕ್ಕಳು ಅನಾಥರಾಗಿದ್ದಾರೆ ಎಂಬುದನ್ನು ಇಂಥ ಮೂಲಭೂತವಾದಿಗಳು ಮಾತ್ರ ನೋಡುವುದೇ ಇಲ್ಲ.
೧೯೪೭ರಲ್ಲಿ ನಡೆದ ಧಾರ್ಮಿಕ ಕಲಹದಲ್ಲಿ ಸಾವಿರಾರು ಮಂದಿಯ ಹತ್ಯೆಯಾಯಿತು. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸತ್ತವರ ಸಂಖ್ಯೆ ಎಷ್ಟು ಎಂಬುದು ಇಡೀ ದೇಶಕ್ಕೆ ಗೊತ್ತು. ಗುಜರಾತ್‌ನಲ್ಲಿ ನಡೆದ ನರಮೇಧ ಇಂದಿಗೂ ಕಣ್ಣಿಗೆ ಕಟ್ಟುತ್ತದೆ. ಅದರ ನಡುವೆ ಈ ಹಿಂದು ಉಗ್ರರು ಸದ್ದಿಲ್ಲದೆ ನಡೆಸುವ ದಾಂಧಲೆಗಳು, ಕೋಮು ಸಂಘರ್ಷಗಳಿಂದ ಬಳಲುವ ಜೀವಗಳ ಸಂಖ್ಯೆಯ ಲೆಕ್ಕವೇ ಸಿಗುವುದಿಲ್ಲ.
ಮುಸ್ಲಿಮರಂತೆ ಈಗ ಬಾಂಬ್ ಅಟ್ಯಾಕ್‌ಗಳಲ್ಲಿ ಹಿಂದೂಗಳೂ ತೊಡಗುತ್ತಿದ್ದಾರೆ ! ಮಹಾತ್ಮ ಗಾಂಜಿಯ ಹತ್ಯೆಯ ಹಿಂದೆ ಕೂಡ ಇಂಥ ಉಗ್ರ ಹಿಂದೂ ಕ್ರಾಂತಿಕಾರಿಗಳ ಕೈವಾಡವಿರುವುದು ಆಗಲೇ ಸಾಬೀತಾಗಿತ್ತು. ೧೯೮೦ರಲ್ಲಿ ಭಾರತದಲ್ಲಿ ಹಿಂದೂ ಮೂಲಭೂತವಾದಕ್ಕೆ ಉತ್ತೇಜನ ನೀಡಿದಾಗಿನಿಂದಂತೂ ಈ ಮೂಲಭೂತವಾದಿಗಳ ಅಟ್ಟಹಾಸ ಎಲ್ಲೆ ಮೀರಿದೆ. ಮಲೆಗಾಂವ್ ಸೋಟಕ್ಕೂ ಮುನ್ನ ಈ ಹಿಂದು ಉಗ್ರರು ಅಭಿನವ ಭಾರತ ಸಂಘಟನೆಯ ಮೂಲಕ ಅನೇಕ ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಿದ್ದಾರೆ ಎಂಬುದನ್ನು ದಿವಂಗತ, ದಿಟ್ಟ ಪೊಲೀಸ್ ಅಕಾರಿ ಹೇಮಂತ್ ಕರ್ಕರೆ ಪತ್ತೆ ಹಚ್ಚಿ ಹೋಗಿದ್ದಾರೆ.
ಪಾಕಿಸ್ತಾನ ಹಾಗೂ ಭಾರತದ ನಡುವೆ ಉತ್ತಮ ಸಂಬಂಧ ಬೆಸೆಯುವ ನಿಟ್ಟಿನಲ್ಲಿ ಹೊಸದಿಲ್ಲಿ -ಲಾಹೋರ್ ನಡುವೆ ಸಂಚರಿಸುತ್ತ ಮಹತ್ವದ ಪಾತ್ರ ವಹಿಸಿದ್ದ ಸಂಜೌತಾ ಎಕ್ಸ್‌ಪ್ರೆಸ್ ಅನ್ನು ೨೦೦೭ರ ಫೆಬ್ರವರಿಯಲ್ಲಿ ಸೋಟಿಸಿ, ೬೮ ಮಂದಿಯನ್ನು ಕೊಲ್ಲುವ ಮೂಲಕ ಮುಸ್ಲಿಮರ ಮೇಲೆ ಹಿಂದು ಉಗ್ರರು ಸೇಡು ತೀರಿಸಿಕೊಂಡಿದ್ದಾರೆ. ಇದುವರೆಗೆ ಹಿಂದು ಉಗ್ರರು ಕೇವಲ ಮುಸ್ಲಿಮ್ ಪ್ರದೇಶಗಳನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ ಎಂಬುದನ್ನು ದಿ.ಹೇಮಂತ್ ಕರ್ಕರೆ ತಾವು ಕೊನೆಯುಸಿರೆಳೆಯುವ ಹಿಂದಿನ ದಿನ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಲ್ಲದೇ ‘ಹಿಂದು ಉಗ್ರರು ಇನ್ನೂ ಅನೇಕ ಕಡೆ ದಾಳಿ ಮಾಡಿದ್ದಾರೆ. ಈ ಜಾಲದಲ್ಲಿ ದೊಡ್ಡ ದೊಡ್ಡ ‘ಕೈಗಳು’ ಇವೆ. ಅದಕ್ಕೆ ನನ್ನ ಬಳಿ ಸಾಕಷ್ಟು ಸಾಕ್ಷಿಗಳೂ ಇವೆ ’. ಎಂದಿದ್ದರು. ಆದರೆ ದುರಂತವೆಂದರೆ ಮುಂಬಯಿಯಲ್ಲಿ ಅವರು ಉಗ್ರರ ಕೈಯಲ್ಲಿಯೇ ಹತರಾದರು.
ಇಲ್ಲಿ ಒಂದು ಸಮುದಾಯವನ್ನು ಎತ್ತಿಕಟ್ಟುವುದು, ಮತ್ತೊಂದು ಸಮುದಾಯವನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ಒಳಿತು ಕೆಡುಕುಗಳೆರಡೂ ಒಂದೇ ನಾಣ್ಯದ ಎರಡು ಮುಖಗಳು. ಅವು ಪ್ರತಿಯೊಬ್ಬ ಮನುಷ್ಯನಲ್ಲೂ ಇವೆ. ಆದರೆ ಇಲ್ಲಿ ಕೆಟ್ಟ ಗುಣ ಹಾವಾಗಿ ಹೊರಬರುವುದು ಯಾರಲ್ಲಿ ಹೆಚ್ಚೋ ಅವನು ಕೆಟ್ಟವ ಎಂದು ನಾವು ನಿರ್ಧರಿಸಬೇಕು. ಅಂಥ ವ್ಯಕ್ತಿಯನ್ನು ಕಾನೂನು ಪ್ರಕಾರ ದಂಡನೆಗೆ ಗುರಿಪಡಿಸಬೇಕು.
ಒಳ್ಳೆಯ ಕಾರ್ಯಗಳು ಅದು ಎಲ್ಲಿಯೇ ಆಗಲಿ, ಯಾವುದೇ ಸಮುದಾಯದಲ್ಲಾಗಲಿ ಅದನ್ನು ಪುರಸ್ಕರಿಸಬೇಕು. ಅಂಥ ಮನೋಭಾವ ನಮ್ಮಲ್ಲೇ ಒಡಮೂಡಬೇಕು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ. ಮುಸ್ಲಿಂ ಭಯೋತ್ಪಾದನೆ ಸಂಘಟನೆಗಳಿಗೆ ಪ್ರತಿಯಾಗಿ ಹಿಂದೂ ಸಂಘಟನೆಗಳೂ ಉಗ್ರವಾದಿ ಚಟುವಟಿಕೆಯಲ್ಲಿ ತೊಡಗಿವೆ. ಅದಕ್ಕೆ ಮಹಾರಾಷ್ಟ್ರದ ಮಲೆಗಾಂವ್ ಸೋಟ ಹಾಗೂ ಸಂಜೌತಾ ಎಕ್ಸ್‌ಪ್ರೆಸ್ ಸೋಟ ಪ್ರಕರಣಗಳೇ ಪ್ರತ್ಯಕ್ಷ ನಿದರ್ಶನ.
ಮಲೆಗಾಂವ್ ಸೋಟಕ್ಕೆ ಸಂಬಂಸಿದಂತೆ ಈಗಾಗಲೇ ಜಮ್ಮುವಿನ ಸರ್ವಜ್ಞ ಪೀಠದ ಮಠಾಪತಿ ದಯಾನಂದ ಪಾಂಡೆಯನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಂಸಲಾಗಿದೆ. ಮುಂಬಯಿ ಉಗ್ರ ನಿಗ್ರಹ ದಳದ ( ಎಟಿಎಸ್) ಕೈಗೆ ಆತನ ಸಹಚರ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಆತನ ಮಗ ಸಿಕ್ಕಿ ಬಿದ್ದಿದ್ದಾರೆ. ಸೇನಾಕಾರಿ ಕರ್ನಲ್ ಪುರೋಹಿತ್ ಹಾಗೂ ಸ್ವಾ ಪ್ರeಸಿಂಗ್ ಠಾಕೂರ್ ಸೇರಿ ೧೦ ಮಂದಿ ಪ್ರಮುಖ ಆರೋಪಿಗಳನ್ನು ಉಗ್ರ ನಿಗ್ರಹ ದಳ ಸೆರೆ ಹಿಡಿದಿದೆ. ಇವರೆಲ್ಲಾ ಹಿಂದೂ ಉಗ್ರವಾದಿಗಳು.
ಹಿಂಸೆ ಯಾರು ಮಾಡಿದರೂ ಹಿಂಸೆಯೇ. ನೋವು ನೀಡುವುದೇ ಅದರ ಗುಣ. ಕತ್ತಿ ಅಥವಾ ಗುಂಡು ಮನುಷ್ಯನ ದೇಹದೊಳಗೆ ತೂರಿದರೆ ಹರಿಯುವುದು ರಕ್ತವೆ. ರಕ್ತ ಸುರಿಸಿ ಪ್ರಾಣ ಕಿತ್ತುಕೊಳ್ಳುವುದೊಂದೇ ಅದರ ಸ್ವಭಾವ. ಆದರೆ ಅದಕ್ಕೆ ಜಾತಿ, ಧರ್ಮಗಳ ಬಣ್ಣ ಕಟ್ಟುವುದು ಸರಿಯಲ್ಲ.
ತಾವೇ ಕಟ್ಟಾ ಹಿಂದೂವಾದಿಗಳು ಎಂದು ಭಗವದ್ಗೀತೆ ಹಿಡಿದು ಪ್ರದರ್ಶನ ಮಾಡುವ , ಕುರಾನ್ ಹಿಡಿದು ಇದೇ ನಿಜವಾದ ಧರ್ಮ ಎಂದು ಬೊಬ್ಬೆ ಹೊಡೆದು ಎಲ್ಲೆಡೆ ರಕ್ತ ಚೆಲ್ಲುವ ಉಭಯ ಮೂಲಭೂತವಾದಿಗಳಿಂದ ಈ ಸಮಾಜಕ್ಕೆ ಯಾವುದೇ ಲಾಭಗಳಿಲ್ಲ. ಅವರಿಂದ ನಷ್ಟವೇ ಹೆಚ್ಚು. ಇದನ್ನು ಜನಸಾಮಾನ್ಯರು ಮೊದಲು ಅರ್ಥ ಮಾಡಿಕೊಳ್ಳಬೇಕು.
ಪಾಕಿಸ್ತಾನ ಕೂಡ ಇದೇ ರೀತಿ ಭಯೋತ್ಪಾದಕರಿಗೆ ಧಾರ್ಮಿಕ ಬಣ್ಣ ಕಟ್ಟಿ ಮುಂದೆ ಬಿಟ್ಟು ‘ಕೂಳು’ ಹಾಕಿ ಬೆಳೆಸಿತು. ಅದರ ಪರಿಣಾಮ ಈಗ ಅದೇ ಸಮುದಾಯದ ಜನರನ್ನೇ ಅದು ಆಗಾಗ್ಗೆ ಬಲಿ ತೆಗೆದುಕೊಳ್ಳುತ್ತಿದೆ. ಅದರ ಪರಿಣಾಮವಾಗಿಯೇ ಪಾಕ್‌ನಲ್ಲಿ ಹೆಸರಾಂತ ರಾಷ್ಟ್ರೀಯ ನಾಯಕಿ, ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋ ಹತ್ಯೆಯಾಗಿದ್ದು !!
ಒಂದು ಕಡೆ ಮೂಲಭೂತವಾದಿಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಂಸ್ಕೃತಿ, ಮತ್ತೊಂದೆಡೆ ಭಯೋತ್ಪಾದನೆ ಹೆಸರಿನಲ್ಲಿ ಧರ್ಮ ಸ್ಥಾಪನೆಯ ಹೊಸ ಕಲ್ಪನೆ. ಇವೆರಡೂ ಸಮಾಜಕ್ಕೆ ಮಾರಕ. ಈ ಎರಡೂ ಸಂಸ್ಕೃತಿ ಭಾರತ ಮತ್ತು ಪಾಕ್ ಎರಡರಲ್ಲೂ ಇದೆ. ಇದರಿಂದ ದೇಶಕ್ಕೆ ಒಳ್ಳೆಯದಲ್ಲ ಎಂಬುದು ಈಗಾಗಲೇ ಪಾಕ್‌ನಲ್ಲಿ ಸಾಬೀತಾಗಿದೆ. ಈ ವಿಚಾರದಲ್ಲಿ ಭಾರತ ಇನ್ನೂ ಅಂಬೆಗಾಲಿಡುತ್ತಿದೆ. ಪಾಕ್ ಬೆಳೆಸಿದ ಭಯೋತ್ಪಾದನೆ ಎಂಬ ಕಳಂಕಿತ ಕೂಸು ಈಗ ಬೆಳೆದು ದೊಡ್ಡವನಾಗಿ ತಮ್ಮ ಮನೆ ಮಾತ್ರವಲ್ಲ ನೆರೆ ಹೊರೆಯ ಮನೆಗಳನ್ನು ಧ್ವಂಸಗೊಳಿಸುತ್ತಿದ್ದಾನೆ. ಅದೇ ಕೆಲಸವನ್ನು ಭಾರತ ಮಾಡದಿರಲಿ.
ಭಯೋತ್ಪಾದನೆಯನ್ನು ಕೇವಲ ಮುಸ್ಲಿಮರಷ್ಟೇ ಗುತ್ತಿಗೆ ಪಡೆದಿಲ್ಲ. ಅಲ್ಲಿ ಹಿಂದೂ ಮೂಲಭೂತವಾದಿಗಳು ಇದ್ದಾರೆ. ಯಾವುದೇ ಧರ್ಮ ಹಿಂಸೆಯನ್ನು ಬೋಸಿಲ್ಲ, ಪ್ರಚೋದಿಸಿಲ್ಲ. ಆದರೆ ಅದನ್ನು ಸರಿಯಾಗಿ ಅರಿಯದವರು ಹೀಗೆ ಧರ್ಮಗಳ ಹೆಸರಿನಲ್ಲಿ ರಕ್ತ ಚೆಲ್ಲಲು ಮುಂದಾಗಿದ್ದಾರೆ ಅಷ್ಟೆ...
ಇಂಥ ಹೇಯ ಕೃತ್ಯಗಳನ್ನು ನಡೆಸುವವರನ್ನು ಹಿಡಿದು ಅವರ ನರ ನಾಡಿಗಳನ್ನು ಬಿಚ್ಚಬೇಕೆ ಹೊರತು, ಅದಕ್ಕೆ ಧಾರ್ಮಿಕ ಬಣ್ಣ ಲೇಪನ ಮಾಡಿ ಸಮಾಜದಲ್ಲಿ ಮತ್ತಷ್ಟು ಕ್ಷೋಭೆ, ಕಲಹಗಳನ್ನು ಹುಟ್ಟು ಹಾಕಿ ಶಾಂತಿ ಕದಡುವ ದುಷ್ಟ ಕೆಲಸಕ್ಕೆ ಕೈ ಹಾಕಬಾರದು. ಇದು ನೆನಪಿರಲಿ..

Powered By Blogger