ಕಡಲೆ ಪರಿಷೆ ನಡೆಯೋ ಜಾಗ ಬೆಂಗಳೂರಿನ ಬಸವನಗುಡಿ ಇನ್ನೊಂದು ಪರಿಷೆಗೆ ಸಜ್ಜಾಗಿದೆ. ಈ ಬಾರಿ ಕಡಲೆ ಸಿಗಲ್ಲ. ಪುಸ್ತಕ ಸಿಗುತ್ತೆ !
ಇದು ‘ಪುಸ್ತಕ ಪರಿಷೆ’. ಹಿಂದೆ ನಡೆಯದಿದ್ದ ವಿನೂತನ ಪ್ರಯೋಗವಿದು. ಯಾವುದೇ ಪುಸ್ತಕ ಮೇಳ, ಪುಸ್ತಕ ಸಂತೆ ಅಥವಾ ಮಳಿಗೆಗೆ ಕಾಲಿಟ್ಟರೂ ಹಣ ಕೊಟ್ಟೇ ಪುಸ್ತಕ ಖರೀದಿ ಮಾಡಬೇಕು. ಹಳೇ ಪುಸ್ತಕದ ಅಂಗಡಿಗೆ ಕಾಲಿಟ್ಟರೂ ದುಡ್ಡು ಕೊಡದೆ ಒಂದು ಖಾಲಿ ಹಾಳೆಯೂ ಸಿಗುವುದಿಲ್ಲ ! ಅಂಥದ್ದರಲ್ಲಿ ಇಲ್ಲಿ ಪುಕ್ಕಟೆ, ಅದೂ ನಿಮಗೆ ಇಷ್ಟವಾದ ಪುಸ್ತಕ ದೊರೆಯುತ್ತದೆ !
ನಿಜ, ಅದೇ ಇಲ್ಲಿನ ವಿಶೇಷತೆ. ಜ.೧೭ರಂದು ಬಸವನಗುಡಿಯಲ್ಲಿ ‘ಪುಸ್ತಕ ಪರಿಷೆ’ ನಡೆಯಲಿದೆ. ‘ಸೃಷ್ಟಿ ವೆಂಚರ‍್ಸ್’ ಸಂಸ್ಥೆ ಈ ಕಾರ್ಯಕ್ರಮಕ್ಕೆ ಕೈ ಹಾಕಿದೆ. ‘ತಮಗೊಂದು ಪುಸ್ತಕ ಉಚಿತವಾಗಿ ಮತ್ತು ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿ’ ಎಂಬ ಘೋಷಣೆಯೊಂದಿಗೆ ನಡೆಸುತ್ತಿರುವ ಈ ಪರಿಷೆಗೆ ಈಗಾಗಲೇ ಸಾಕಷ್ಟು ಅಮೂಲ್ಯ ಪುಸ್ತಕಗಳು ಕೊಡುಗೆಯಾಗಿ ಬಂದಿವೆ. ಪುಸ್ತಕಗಳನ್ನು ಪ್ರೀತಿಸುವವರು, ಕೊಳ್ಳಲು ಹಣವಿಲ್ಲ ಎಂದು ಯೋಚಿಸುವವರೂ ಈ ಪರಿಷೆಗೆ ಆಗಮಿಸಬಹುದು. ಆದರೆ ನಿಮಗಿಷ್ಟವಾದ ಒಂದೇ ಒಂದು ಪುಸ್ತಕವನ್ನು ಮಾತ್ರ ತೆಗೆದುಕೊಂಡು ಹೋಗಬಹುದು.
ಇದು ಓದುಗರ ಅಭಿರುಚಿ ಹೆಚ್ಚಿಸುವ ಜತೆಗೆ ಪುಸ್ತಕಗಳ ಬಗ್ಗೆ ಓದುಗರಲ್ಲಿ ಆಸಕ್ತಿಯನ್ನೂ ಹೆಚ್ಚಿಸಲಿದೆ ಎಂಬುದು ಸುಳ್ಳಲ್ಲ. ಈ ವಿಶೇಷತೆಯಿಂದಾಗಿಯೇ ಈಗಾಗಲೇ ಪರಿಷೆ ಬಗ್ಗೆ ಪುಸ್ತಕಪ್ರಿಯರಲ್ಲಿ ಕುತೂಹಲ ಆರಂಭವಾಗಿದೆ. ಕನ್ನಡದಲ್ಲಿ ಓದುಗರೇ ಇಲ್ಲವಾಗುತ್ತಿದ್ದಾರೆ ಎಂಬ ಅಪವಾದದ ನಡುವೆಯೂ ಪುಸ್ತಕಗಳು ಹರಿದು ಬರುತ್ತಿರುವುದು ಹಾಗೂ ಈ ಬಗ್ಗೆ ಪುಸ್ತಕ ಪ್ರೇಮಿಗಳ ನಡುವೆ ಚರ್ಚೆಯಾಗುತ್ತಿರುವುದು ನೋಡಿದರೆ ಆ ಮಾತು ಸುಳ್ಳು ಎನಿಸದಿರದು. ಪಂಚಭೂತ, ಬಣ್ಣದ ಬಯಲು, ವಿeನ ಶಿಬಿರದಂಥ ಕಾರ್ಯಕ್ರಮ ನಡೆಸಿದ್ದ ‘ಸೃಷ್ಟಿ ವೆಂಚರ‍್ಸ್’ ಈಗ ಈ ಪ್ರಯೋಗಕ್ಕೆ ಕೈ ಹಾಕಿದೆ.
ಇಲ್ಲಿ ಎಲ್ಲ ರೀತಿಯ ಪುಸ್ತಕಗಳೂ ಸಿಗಲಿವೆ. ಇಲ್ಲಿಗೆ ಬರಲು ಯಾವುದೇ ನಿರ್ಬಂಧಗಳಿಲ್ಲ. ಪುಸ್ತಕಪ್ರಿಯನಾಗಿರಬೇಕು ಎಂಬುದೊಂದೇ ಕಟ್ಟಳೆ. ಬರುವಾಗ ಒಂದಾದರೂ ಪುಸ್ತಕ ತನ್ನಿ ಎಂಬುದು ಪ್ರೀತಿಯ ಕಂಡಿಷನ್. ಬರುತ್ತೀರಲ್ವಾ...?
೧೭ರಂದು ಬಸವನಗುಡಿಯಲ್ಲಿ ‘ಪುಸ್ತಕ ಪರಿಷೆ’ ನಡೆಯಲಿದೆ. ‘ಸೃಷ್ಟಿ ವೆಂಚರ‍್ಸ್’ ಸಂಸ್ಥೆಯ ಸಾಹಸವಿದು. ‘ತಮಗೊಂದು ಪುಸ್ತಕ ಉಚಿತವಾಗಿ ಮತ್ತು ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿ’ ಎಂಬುದು ಇದರ ಘೋಷಣೆ.
ಬಸವನಗುಡಿಯಲ್ಲಿ ಜ.೧೭ರಂದು ಬೆಳಗ್ಗೆ೧೦ ಗಂಟೆಗೆ ಈ ಪುಸ್ತಕ ಪರಿಷೆಯನ್ನು ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಉದ್ಘಾಟಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಕಾರದ ಅಧ್ಯಕ್ಷ ಡಾ.ಸಿದಟಛಿಲಿಂಗಯ್ಯ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಪರಿಷೆ ನಡೆಯುವ ಸ್ಥಳ: ನಂ.೮೧, ೧ನೇ ಮಹಡಿ,(ಪುಳಿಯೊಗರೆ ಪಾಯಿಂಟ್ ಮೇಲೆ), ಇ.ಎ.ಟಿ.ರಸ್ತೆ, ಎನ್.ಆರ್.ಕಾಲನಿ, ಬಸವನಗುಡಿ, ಬೆಂಗಳೂರು
-ಭಾಗ್ಯ ನೆಲ್ಲಿಕ್ಕಳಯ
1 comment:
ಈ ಲೇಖನದಿಂದ ನಮಗೆ ತುಂಬಾ ಅನುಕೂಲವಾಯಿತು ಥ್ಯಾಂಕ್ಸ್
-ಶಾಂತ ಕುಮಾರಿ, ಬೆಂಗಳೂರು
Post a Comment