Sunday, January 18, 2009

ಬೇಲಿಯೇ ಎದ್ದು ‘ಹೊಲ’ ಮೇಯ್ದರೆ ಹೇಗೆ ?

ರೈತನ ಮಗ ಎಂದು ಹೇಳಿಕೊಂಡು ಅಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಯಡಿಯೂರಪ್ಪ ಗಾದಿಗೇರಿದ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಗೊಬ್ಬರದ ಹಾಹಾಕಾರ. ಅದರ ಬೆನ್ನಲ್ಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್. ಬಿತ್ತನೆ ಬೀಜಕ್ಕಾಗಿ ಪರದಾಟ. ಜತೆಗೆ ಕೈಕೊಟ್ಟ ಮಳೆ, ಮುಗಿಲು ನೋಡುತ್ತಿದ್ದಂತೆ ಧೋ ಎಂದು ಸುರಿದ ವರುಣನ ಆರ್ಭಟ...
ಇವೆಲ್ಲಾ ಭೂಮಿತಾಯಿಯ ಚೊಚ್ಚಲ ಮಕ್ಕಳ ಸದ್ಯದ ಬವಣೆಗಳ ಪಟ್ಟಿ. ಭಾರತದ ಕೃಷಿ ಒಂದು ರೀತಿ ಮಳೆರಾಯನೊಂದಿಗಿನ ಜೂಜಾಟ ಎಂದು ಶತ ಶತಮಾನಗಳಿಂದಲೂ ನಾವು ಹೇಳಿಕೊಡು ಬಂದಿದ್ದೇವೆ. ಇಲ್ಲಿ ಶೇ.೭೦ ಮಂದಿ ಕೃಷಿಕರು. ಇಡೀ ದೇಶ ಅವಲಂಬಿಸಿರುವುದೇ ಅದನ್ನು. ರೈತ ಕೈ ಕಟ್ಟಿ ಕುಳಿತನೆಂದರೆ ದೇಶದ ಉದ್ದಗಲಕ್ಕೂ ನಾನಾ ವೃತ್ತಿಯಲ್ಲಿ ನಿರತರಾಗಿರುವವರ ಪಾಡು ಅಧೋಗತಿ. ಈಗ ನಾವೆಲ್ಲ ತಿನ್ನುತ್ತಿರುವುದು ಅದೇ ರೈತ ಬೆಳೆದ ಅನ್ನವನ್ನ.
ಪ್ರತಿ ಚುನಾವಣೆಗಳಲ್ಲೂ ಎಲ್ಲ ಪಕ್ಷಗಳ ಪ್ರಣಾಳಿಕೆಯ ಮೊದಲ ಸಾಲು ರೈತರ ಉದ್ಧಾರ. ಆದರೆ ಈ ದೇಶದಲ್ಲಿ ನಿತ್ಯ ಬಡವಾಗುತ್ತಿರುವವನು ಮಾತ್ರ ರೈತ. ರೈತ ಸಮುದಾಯಗಳಿಂದ ಬೆಳೆದು ಬಂದವರು ಕೂಡ ಒಂದು ಹಂತಕ್ಕೆ ಬಂದ ನಂತರ ಮತ್ತೆ ಹಿಂದೆ ತಿರುಗಿ ನೋಡುವುದೇ ಇಲ್ಲ. ತಾನು ನಡೆದು ಬಂದ ಹಾದಿಯಲ್ಲಿ ಕಾಲಿಗೆ ನಾಟಿದ ಕಲ್ಲು ಮುಳ್ಳುಗಳು ಈಗ ಲೆಕ್ಕಕ್ಕೇ ಇಲ್ಲ. ಯಾಕೆಂದರೆ ಗಾಯ ವಾಸಿಯಾಗಿರುತ್ತದೆ. ಅದರ ನೋವು ಮಾಯವಾಗಿರುತ್ತದೆ. ಕಲೆಗಳ ಕುರುಹುಗಳು ಕೂಡ ಸಿಗುವುದಿಲ್ಲ.
ಯಡಿಯೂರಪ್ಪನವರ ಸರಕಾರ ಅಕಾರಕ್ಕೆ ಬಂದ ಮೊದಲ ವಾರದಲ್ಲೇ ಖಾಸಗಿ ಏಜೆನ್ಸಿಗಳಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ವಿತರಿಸಲು ಅಕಾರ ಕೊಡಲಾಗಿತ್ತು. ಅದರ ಪರಿಣಾಮ ಇಡೀ ರಾಜ್ಯದಲ್ಲಿ ರೈತರು ಏಜೆನ್ಸಿಗಳ ಮುಂದೆ ನಿದ್ರೆ, ನೀರಡಿಕೆ ಬಿಟ್ಟು ಸಾಲು ಸಾಲಾಗಿ ನಿಂತಿದ್ದರು. ಕೊನೆಗೆ ಸಹನೆ ಕಳೆದುಕೊಂಡು, ರೊಚ್ಚಿಗೆದ್ದು ವಾಹನಗಳಿಗೆ ಬೆಂಕಿ ಹಚ್ಚಿ ರಾಜ್ಯದ ಉದ್ದಗಲಕ್ಕೂ ಗಲಭೆಗಳು ನಡೆದವು. ಅದನ್ನು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಈಗಾಗಲೇ ಮರೆತಂತ್ತಿವೆ.
ಅದಕ್ಕೇ ಈಗ ಕೃಷಿ ಪರಿಕರಗಳ ಸಹಾಯ ಧನವನ್ನು ರೈತರಿಗೆ ನೀಡುವುದಾಗಿ ಹೇಳಿದ್ದ ಸರಕಾರ ಈಗ ಏಜೆನ್ಸಿಗಳಿಗೆ ಹಾಗೂ ಪರಿಕರಗಳನ್ನು ತಯಾರಿಸುವ ಖಾಸಗಿ ಕಂಪನಿಗಳಿಗೆ ನೀಡಲು ಮುಂದಾಗುತ್ತಿದೆ. ಜತೆಗೆ ತಾಲೂಕು ಕೇಂದ್ರಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಣ್ಣು ಆರೋಗ್ಯ ಕೇಂದ್ರವನ್ನು ಶೇ.೫೦ರಷ್ಟು ಸಹಾಯಧನ ನೀಡಿ ಖಾಸಗಿ ಕಂಪನಿಗಳ ಉಸ್ತುವಾರಿಗೆ ವಹಿಸಲು ನಿರ್ಧರಿಸಲಾಗಿದೆ. ನಾನಾ ಇಲಾಖೆಯ ಕಾರ್ಮಿಕರನ್ನು ಖಾಸಗೀಕರಣವೆಂಬ ಕಪ್ಪು ಕೋಣೆಗೆ ತಳ್ಳಿ ಮಜಾ ತೆಗೆದುಕೊಂಡ ಸರಕಾರಗಳು ಈಗ ಕೃಷಿ ಇಲಾಖೆಯನ್ನೂ ಖಾಸಗೀಕರಣಗೊಳಿಸಲು ಸದ್ದಿಲ್ಲದೆ ಹುನ್ನಾರ ನಡೆಸುತ್ತಿವೆ.
ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲಿದೆ. ಇಲ್ಲಿ ಯಾವುದೇ ಒಂದು ಸರಕಾರವನ್ನು ದೂರುವಂತಿಲ್ಲ. ಖಾಸಗೀಕರಣಕ್ಕೆ ಈ ದೇಶ ಹಾಗೂ ರಾಜ್ಯದಲ್ಲಿ ಅದೆಷ್ಟು ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಎರಡೂ ಸರಕಾರಗಳ ಸಂಪುಟದಲ್ಲಿರುವ ಪ್ರತಿ ಮಂತ್ರಿ ಮಹೋದಯರಿಗೂ ಗೊತ್ತು. ಆದರೂ ಇವರೆಲ್ಲ ಜಾಣಕುರುಡು ಪ್ರದರ್ಶಿಸುತ್ತಿರುವುದು ಮಾತ್ರ ನಾಚಿಕೆಗೇಡು.
ಸರಕಾರಗಳ ಕೈಲಿ ಇರುವ ಇಲಾಖೆಯಿಂದಲೇ ಈಗಾಗಲೇ ದೇಶದ ಉದ್ದಗಲಕ್ಕೂ ರೈತರ ಶೋಷಣೆ ನಡೆಯುತ್ತಿದೆ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ. ಇನ್ನು ಇಡೀ ಇಲಾಖೆಯನ್ನೇ ಹೊತ್ತುಕೊಂಡು ಹೋಗಿ ಖಾಸಗಿ ವ್ಯಕ್ತಿಗಳ ಕಪಿ ಮುಷ್ಟಿಗೆ ಒಡ್ಡಿದರೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಗ ಬಡ ರೈತರು ಮತ್ತೆ ತುತ್ತು ಕೂಳಿಗೂ ಪರಿತಪಿಸುತ್ತಾ ಜೀತ ಮಾಡಬೇಕಾಗುತ್ತದೆ ಎಚ್ಚರವಿರಲಿ.
ಸರಕಾರಗಳಿಂದಲೇ ವ್ಯವಸ್ಥಿತವಾಗಿ ಆಡಳಿತ ನಡೆಸಲಾಗದೆ ರೈತರಿಗೆ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ಗೊಬ್ಬರ ಪೂರೈಕೆ ಮಾಡಲಾಗದೆ ತೊಳಲಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಮಾಯಕ ರೈತರು ಭೂಮಿಯ ಒಡಲನ್ನು ನಂಬಿ ಸುರಿದ ಹಣ ಮತ್ತೆ ಕೈಗೆ ಬಾರದೆ ಬ್ಯಾಂಕ್, ಸಹಕಾರಿ ಸಂಘಗಳು ಹಾಗೂ ಕೆಲವು ದುಷ್ಟ ಶ್ರೀಮಂತರ ಕೈಲಿ ಸಾಲ ಮಾಡಿ ಶೂಲಕ್ಕೆ ಸಿಕ್ಕಿಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ನೋವು ತಾಳಲಾರದೆ ನೇಣಿಗೆ ಕೊರಳೊಡುತ್ತಿದ್ದಾರೆ. ಕುಟುಂಬ ಸಮೇತರಾಗಿ ವಿಷ ಕುಡಿಯುತ್ತಿದ್ದಾರೆ. ಇಷ್ಟಾದರೂ ಅವರ ಬವಣೆ ನೀಗುತ್ತಿಲ್ಲ. ಇನ್ನು ಕೃಷಿ ಇಲಾಖೆಯನ್ನೇ ‘ಖಾಸಗೀಕರಣ’ದ ಸರಹದ್ದಿಗೆ ತಂದಿಟ್ಟರೆ ಅವರ ಗತಿ ಏನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ.
ಕೃಷಿಯಲ್ಲಿ ಈಗಾಗಲೇ ಯಾವುದೇ ಲಾಭವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿ ಯುವಕ ಯುವತಿಯರು ನಗರ ಪ್ರದೇಶಗಳಿಗೆ ವಲಸೆ ಬರಲಾರಂಭಿಸಿದ್ದಾರೆ. ಇದರಿಂದ ದಿನಕ್ಕೆ ೧೦೦ ರೂ. ಕೊಟ್ಟರೂ ಕೂಲಿ ಕೆಲಸಕ್ಕೆ ಆಳುಗಳು ಸಿಗುತ್ತಿಲ್ಲ. ಇದರಿಂದ ದಿನೇ ದಿನೆ ಆಹಾರ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಈ ಕಾರಣಕ್ಕಾಗಿ ದೇಶದ ಶೇ.೪೦ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿ ೧೦೦ ಮಿಲಿಯನ್ ಮಂದಿ ಹಸಿವಿನಿಂದ ಕೊನೆಯುಸಿರೆಳೆಯುತ್ತಿದ್ದಾರೆ.
ಭಾರತ ಕೂಡ ಈಗ ತೀವ್ರತರನಾದ ಆಹಾರ ಕೊರತೆಯ ಸಮಸ್ಯೆ ಎದುರಿಸುತ್ತಿದೆ. ೨೦೫೦ರೊಳಗೆ ಭಾರತ ವಿಶ್ವದ ಅತ್ಯಕ ಜನ ಸಂಖ್ಯೆ ಹೊಂದಿದ ರಾಷ್ಟ್ರವಾಗಲಿದೆ. ಚೀನಾದಲ್ಲಿ ಈಗ ೧೧೮.೬ಕೋಟಿ ಜನಸಂಖ್ಯೆ ಇದೆ. ೨೦೫೦ಕ್ಕೆ ಅದು ೧೬೫.೮ಕೋಟಿಗೆ ತಲುಪಬಹುದು. ಆದರೆ ಭಾರತ ಅದನ್ನು ಮೀರಿ ಮುಂದೆ ಹೋಗುತ್ತದೆ ಎಂಬ ಆತಂಕ ಈಗಾಗಲೇ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದು ನಿಜವಾದರೆ ಆಹಾರ ಸಮಸ್ಯೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ.
ಜತೆಗೆ ಈಗಾಗಲೇ ಕೃಷಿ ಭೂಮಿಯನ್ನು ನಾನಾ ಕೈಗಾರಿಕೆಗಳು, ವಿತ್ತವಲಯ ಅದು ಇದು ಎಂದೆಲ್ಲಾ ಸ್ವಲ್ಪ ಸ್ವಲ್ಪ ನುಂಗಿ ನೀರು ಕುಡಿಯುತ್ತಿರುವ ಸರಕಾರಗಳಿಂದ ಮುಂದೊಂದು ದಿನ ರೈತರಿಗೆ ಕೃಷಿಗಾಗಿ ಭೂಮಿ ಸಿಗುವುದೇ ಕಷ್ಟ. ಹೀಗಿರುವಾಗ ಇರುವ ಕೃಷಿ ಇಲಾಖೆಯನ್ನೂ ಖಾಸಗೀಕರಣಗೊಳಿಸಿ ಕೈ ತೊಳೆದುಕೊಂಡರೆ ರೈತರ ಬದುಕು ಹೇಗಾಗಬಹುದು...?
ಸರಕಾರದ ಕೈಯಲ್ಲಿಯೇ ರೈತರ ಬದುಕನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅವರ ಏಳುಬೀಳುಗಳನ್ನು ಗಮನಿಸಿ ರೈತರನ್ನು ಖಾಸಗಿ ಕಂಪನಿಗಳಿಂದ ಮಾತ್ರವಲ್ಲ ಅವರ ಎಲ್ಲ ಸಂಕಷ್ಟಗಳಿಂದ ಕಾಪಾಡಬೇಕಾದದ್ದು ಸರಕಾರಗಳ ಕರ್ತವ್ಯ. ಹೀಗಿರುವಾಗ ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ನೀವೇ ಹೇಳಿ ?
rameshhirejambur@gmail.com