Friday, March 11, 2011

ಮತ್ತೆ ಬಾರದ, ಮರೆಯಲಾಗದ ಅನುಭವ

ಕಾಲೇಜು ಜೀವನ ನಿಜಕ್ಕೂ ಅನುಭವಿಸಲೇಬೇಕಾದ ಮಧುರ ಕ್ಷಣ. ವಿದ್ಯಾರ್ಥಿಯಾದ ಪ್ರತಿಯೊಬ್ಬರಿಗೂ ಕಾಲೇಜು ಲೈಫ್ ದಕ್ಕಲೇಬೇಕು. ಆ ಜೀವನವಿಲ್ಲದೆ ವಿದ್ಯಾರ್ಥಿ ಎನಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ಅದನ್ನು ಕಾಲೇಜ್ ಲೈಫ್ ಗೋಲ್ಡನ್ ಲೈಫ್ ಎನ್ನುವುದು. ಹೀಗಿರುವಾಗ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುವ ಚಟುವಟಿಕೆಗಳನ್ನು ನೆನಪಿಸಿಕೊಂಡರೆ ‘ಛೇ.. ಆ ಕ್ಷಣ ಮತ್ತೆ ಬರಬಾರದೇ...’ ಎನಿಸಿಬಿಡುತ್ತದೆ. ಪ್ರಾಥಮಿಕ ಹಂತದಿಂದ ಕಾಲೇಜು ಜೀವನದವರೆಗೆ ಗಂಡು ಹೆಣ್ಣುಗಳೆಂಬ ಭೇದ ಬಾವವಿಲ್ಲದೆ ಎಲ್ಲರೂ ಒಟ್ಟುಗೂಡಿ ಕಲೆತು ಬೆರೆತು ಬಾಳುವವರಿಗೆ ಕಾಲೇಜಿಗೆ ಬರುತ್ತಿದ್ದಂತೆ ಮೈಮನದೊಳಗೆ ಹೊಸ ಹೊಸ ಆಸೆ, ಕನಸುಗಳು ನವಿರಾಗಿ ಚಿಗುರೊಡೆಯುತ್ತವೆ.
ಮೈ ಹರೆಯಕ್ಕೆ ಕಾಲಿಡುತ್ತಿದ್ದಂತೆ ಚೈತನ್ಯ ಎನ್ನುವುದು ಮೊಗ್ಗಾಗಿರುತ್ತದೆ. ಮನದಾಳದಲ್ಲಿ ಎಲ್ಲವನ್ನೂ ಜಯಿಸುವ, ನವ ನವೀನವಾದ ಕನಸುಗಳ ಗೋಪುರ ಕಟ್ಟುತ್ತ ಅವುಗಳನ್ನು ಒಂದೊಂದಾಗಿ ನನಸಾಗಿಸುವ ಕಾಲ ಅದು. ಹೀಗಿರುವಾಗ ಕಾಲೇಜು ಕ್ಯಾಂಪಸ್‌ನ ಹಾಸುಗಲ್ಲಿನ ಮೇಲೆ ಕುಳಿತು ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈ ಹಾಕಿಕೊಂಡು ತರಲೆ ಮಾಡುತ್ತ ಎಲ್ಲವನ್ನು ಹರವಿಕೊಳ್ಳುವ ಸುಮಯವದು...
ಕುಗ್ರಾಮವೊಂದರಿಂದ ಬೆಳೆದು ಬಂದ ನಾನು ಶಿವಮೊಗ್ಗದ ಡಿವಿಎಸ್(ದೇಶೀಯ ವಿದ್ಯಾ ಶಾಲೆ) ಕಾಲೇಜಿಗೆ ಪದವಿ ಶಿಕ್ಷಣಕ್ಕಾಗಿ ಪ್ರವೇಶ ಪಡೆದೆ. ಹಳ್ಳಿಯಲ್ಲಿ ನಮ್ಮದೇ ಆದ ಜಂಜಡದ ನಡುವೆ ಬೆಳೆದ ನನಗೆ ಸಾಮಾನ್ಯವಾಗಿ ಶಿಕ್ಷಕನಾಗಬೇಕು ಎಂಬ ಹಂಬಲವಿತ್ತು. ಆ ಕಾರಣಕ್ಕಾಗಿಯೇ ಪಿಯುಸಿಯಲ್ಲಿ ಶಿಕ್ಷಣ ವಿಷಯವನ್ನು ಆರಿಸಿಕೊಂಡಿದ್ದೆ. ಆದರೆ ಮನೆಯ ಆರ್ಥಿಕ ಕಾರಣಗಳಿಂದ ಅದು ಕೈಗೂಡದೆ ಮತ್ತೆ ಪದವಿ ಮಾಡಲು ಹಾತೊರೆದು ಡಿವಿಎಸ್‌ಗೆ ಬಂದು ಬಿದ್ದಿದ್ದೆ.
ಆಗ ಮುಂದೆ ಯಾವುದನ್ನು ಓದಬೇಕು ಎಂಬುದೇ ಗೊಂದಲ ಶುರುವಾಗಿತ್ತು. ಆ ಹೊತ್ತಿನಲ್ಲಿ ಕೃಷ್ಣಮೂರ್ತಿ ಎಂಬ ಪ್ರಾಧ್ಯಾಪಕರು ‘ಕನ್ನಡ ಐಶ್ಚಿಕ ವಿಷಯ ತೆಗೆದುಕೊಂಡರೆ ಒಳ್ಳೆಯದು...’ ಎಂದ ಮಾತು ಕಿವಿಗೆ ಬಿದ್ದು, ಇದೇ ಇರಲಿ ಎಂದು ಅಚಾನಕ್ಕಾಗಿ ಅದಕ್ಕೇ ಗುರುತು ಹಾಕಿ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಿದ್ದೆ. ಸೀಟು ಸಲೀಸಾಗಿಯೇ ಸಿಕ್ಕಿತು. ಆದರೆ ವಸತಿಯದು ದೊಡ್ಡ ಸಮಸ್ಯೆಯಾಯಿತು. ಆದರೆ ಆ ಕ್ಷಣದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಇದ್ದಿದ್ದರಿಂದ ಎದೆಗುಂದದೆ ಒಂದು ಕಡೆ ಸಂಜೆ ಕೆಲಸಕ್ಕೆ ಸೇರಿ ಚಿಕ್ಕದೊಂದು ರೂಮ್ ಮಾಡಿಕೊಂಡು ವಿದ್ಯಾಬ್ಯಾಸ ಆರಂಬಿಸಿದೆ. ಸಂಜೆ ಕೆಲಸ ಆ ವಯಸ್ಸಿಗೆ ಬೇಸರ ತರಿಸಿದರೂ ಬೆಳಗ್ಗೆಯಿಂದ ಸಂಜೆ ವರೆಗೆ ಕಾಲೇಜಿನಲ್ಲಿರುತ್ತಿದ್ದರಿಂದ ಆ ಎಲ್ಲ ಬೇಸರ, ನೋವು, ಹತಾಷೆಗಳು ಮಾಯವಾಗುತ್ತಿದ್ದವು.
ಹೇಳಿಕೇಳಿ ನನ್ನದು ಕನ್ನಡ ಐಶ್ಚಿಕ ವಿಷಯ. ಅಲ್ಲಿ ನನ್ನ ಜತೆಗೆ ಆ ವಿಷಯಕ್ಕೆ ಪ್ರವೇಶ ಪಡೆದಿದ್ದು ಕೇವಲ ೧೨ ಮಂದಿ. ಅವರಲ್ಲಿ ಇಬ್ಬರು ಮಾತ್ರ ಹುಡುಗಿಯರು! ಹೀಗಾಗಿ ನಮಗೆ ಪ್ರಾಧ್ಯಾಪಕರ ಜತೆಗೆ ಒಡನಾಟ ಇಟ್ಟುಕೊಳ್ಳಲು ಸುಲಭ ಮಾರ್ಗ ದೊರೆತ್ತಿತ್ತು. ಆದರೆ ತರಗತಿಯಿಂದ ಹೊರಗೆ ಬಂದ ನಂತರ ಕಾಲೇಜು ನಿಜಕ್ಕೂ ದೊಡ್ಡ ಸಾಗರ. ಒಂದೇ ಕಾಲೇಜಿನಲ್ಲಿ ಹಲವು ವಿಭಾಗಗಳು. ಆ ವಿಭಾಗಗಳಲ್ಲಿ ಒಂದನೇ ತರ
ಗತಿಯಿಂದ ಪದವಿ ವರೆಗೆ ಹತ್ತಾರು ಸೆಕ್ಷನ್‌ಗಳು. ಇದರಿಂದ ಆ ಕಾಲೇಜು ಕ್ಯಾಂಪಸ್ ಸದಾ ಕಲರ್‌ಫುಲ್ ಜಗತ್ತು.
ಎಲ್ಲಿ ನೋಡಿದರಲ್ಲಿ ಹುಡುಗ-ಹುಡುಗಿಯರ ಬಣ್ಣದ ಲೋಕ. ಅಲ್ಲಿ ಪ್ರೇಮಿಗಳು ಯಾರೊ? ಸ್ನೇಹಿತರು ಯಾರೊ? ಸೋದರ ಸೋದರಿಯರ‍್ಯಾರೋ? ಒಂದು ತಿಳಿಯುತ್ತಿರಲಿಲ್ಲ. ಅಲ್ಲಿದ್ದ ಮರಗಳ ಮೇಲೆ ಹಕ್ಕಿಗಳ ಕಲರವ. ಕೆಳಗೆ ಈ ಹಕ್ಕಿಗಳು... ಒಂದಂತೂ ಸತ್ಯ ಅಲ್ಲಿ ಪ್ರೇಮಿಗಳು ಹಾಗೂ ಸ್ನೇಹಿತರ ಸಂಖ್ಯೆಯೇ ಹೆಚ್ಚಾಗಿತ್ತು. ವಿಶಾಲವಾದ ಕ್ಯಾಂಪಸ್‌ನಲ್ಲಿ ಅವರು ಅವರದ್ದೇ ಆದ ಜಗತ್ತಿನಲ್ಲಿ
ಮೈಮರೆತು ಕಾಲ ಕಳೆಯುತ್ತಿದ್ದರು. ಗಲಾಟೆಗಳು, ಹೊಡೆದಾಟಗಳೂ ಕೂಡ ಇದ್ದವು! ಆದರೆ ಅವುಗಳು ಎಲ್ಲೋ ಒಮ್ಮೊಮ್ಮೆ ನಡೆಯುತ್ತಿದ್ದವು. ಆದರೆ ಅವುಗಳ ನಡುವೆ ರ‍್ಯಾಗಿಂಗು ಹೆಚ್ಚಾಗಿತ್ತು. ಅಮಾಯಕ ಹುಡುಗಿಯರು ಸೈಲೆಂಟಾಗಿ ಬರುತ್ತಿದ್ದರೆ ಸೀನಿಯರ್ ಹುಡುಗರು ಅವರನ್ನು ರೇಗಿಸುತ್ತಿದ್ದರು. ಕೆಲವು ತೀರಾ ಸೌಮ್ಯ ಸ್ವಭಾವದ ಹುಡುಗಿಯರು ಅಳುತ್ತ ಓಡಿದರೆ ಮತ್ತೆ ಕೆಲವು ಹುಡುಗಿಯರು ರೇಗಿಸಿದ ಹುಡುಗರೇ ಅಳುವಂತೆ ಮಾಡುತ್ತಿದ್ದರು!!
ಹಾಗಂತ ಕಾಲೇಜಂದರೆ ಇವಿಷ್ಟೇ ಅಲ್ಲ, ಸ್ನೇಹಕ್ಕೆ ಅಲ್ಲಿ ಪ್ರಮುಖ ಸ್ಥಾನ. ಅದಿಲ್ಲದೆ ಅಲ್ಲಿ ಯಾವುದೂ ನಡೆಯುತ್ತಿರಲಿಲ್ಲ. ರ‍್ಯಾಂಗಿಂಗ್ ಕೆಲವೊಮ್ಮೆ ಅತಿರೇಕ ಎನಿಸಿದರೂ ಅಲ್ಲಿಂದಲೇ ಎಷ್ಟೋ ಸಾರಿ ಹೊಸ ಸ್ನೇಹ ಚಿಗುರೊಡೆದಿದ್ದೂ ಉಂಟು. ಆ ಕಾಲದ ಸ್ನೇಹದಲ್ಲಿ ಯಾವು
ದೇ ಮುಚ್ಚುಮರೆಯಿಲ್ಲ. ಅಶ್ಲೀಲತೆ, ಗೌಪ್ಯತೆ ಎಂಬ ಯಾವುದೇ ಭೇದ ಕೂಡ ಅಲ್ಲಿರುತ್ತಿರಲಿಲ್ಲ. ಇದರಿಂದಾಗಿ ಎಲ್ಲವೂ ನಿಸ್ಸಂಕೋಚವಾಗಿ ಹಂಚಿಕೆಯಾಗುತ್ತಿದ್ದವು. ಒಳ್ಳೆಯದು, ಕೆಟ್ಟದ್ದು ಎಲ್ಲವೂ ವಿನಿಮಯವಾಗುತ್ತಿದ್ದರಿಂದ ಸ್ನೇಹ ಮತ್ತಷ್ಟು ಗಟ್ಟಿಕೊಳ್ಳಿತ್ತು.
ಬದುಕು ಹೊಸ ದಿಕ್ಕಿಗೆ ತೆರೆದುಕೊಳ್ಳುತ್ತಿತ್ತು. ಸ್ವಲ್ಪ ಎಚ್ಚರ ತಪ್ಪಿದ್ದರೂ ಆ ಕ್ಯಾಂಪಸ್ ಬಾಳ ಹಾದಿಯ ಗುರಿಯನ್ನೇ ದಿಕ್ಕು ತಪ್ಪಿಸುವ ಸಾಧ್ಯತೆಯೂ ಇತ್ತು. ಆದರೆ ಹಾಗಾಗಲಿಲ್ಲ... ಹಾಗಾಗಿ ನಿಜಕ್ಕೂ ಅದು ಮತ್ತೆ ಬಾರದ ಮರೆಯಲಾಗದ ಅನುಭವ.

ಮಕ್ಕಳ ಮನೋಭಾವಕ್ಕೆ ನೀರೆರೆದು ನೋಡಿ...

ಮಕ್ಕಳು ಪ್ರಾಜೆಕ್ಟ್ ವರ್ಕ್ ಮಾಡುವಾಗ ‘ಅದು ಪ್ರಯೋಜನವಿಲ್ಲದ್ದು, ಅದನ್ನು ಮಾಡುತ್ತಾ ಕುಳಿತು ಟೈಮ್ ವೇಸ್ಟ್ ಮಾಡ್ಬೇಡ... ಹೋಗಿ ಓದು...’ ಎಂದು ಗದರಿಸಬೇಡಿ. ಅದು ಕೇವಲ ಪ್ರಾಜೆಕ್ಟ್ ಅಲ್ಲ, ಅವರ ಮನೋಬಲವನ್ನು ಹೆಚ್ಚಿಸುವ ಜತೆಗೆ ಕೌಶಲ ವೃದ್ಧಿಸುವ ಕಾಯಕ. ಕ್ರಿಯಾಶೀಲತೆ ಬೆಳೆಸುವ ಸ್ಫೂರ್ತಿಯ ಚಿಲುಮೆ. ನಿಮ್ಮಿಂದ ಅದಕ್ಕೆ ಪ್ರೇರಣೆ ಒದಗಿಸಲು ಸಾಧ್ಯವಾದರೆ ಜತೆಗೆ ನಿಂತು ಸಹಾಯ ಮಾಡಿ. ಇಲ್ಲದೇ ಹೋದರೆ ಅವರ ಪಾಡಿಗೆ ಅವರನ್ನು ಬಿಟ್ಟು ನೋಡುತ್ತ ಸುಮ್ಮನಿದ್ದುಬಿಡಿ. ಅವರನ್ನು ನಿರಾಶರನ್ನಾಗಿ ಮಾಡಿ ನಿರುತ್ಸಾಹಗೊಳಿಸಬೇಡಿ...

ಮಕ್ಕಳಿಗೆ ಇತ್ತೀಚೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರಾಜೆಕ್ಟ್ ವರ್ಕ್‌ಗಳನ್ನು ಮನೆಗೆಲಸಕ್ಕೆ ಕೊಡುವ ಪ್ರವೃತ್ತಿ ಹೆಚ್ಚುತ್ತಿದೆ. ಅದಕ್ಕೆ ಕಾರಣ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸುವ ಪ್ರಯತ್ನ ಅಷ್ಟೆ. ಆದರೆ ಮಗುವಿನ ತಾಯಿಯೂ ಸೇರಿದಂತೆ ಬಹುತೇಕ ಪೋಷಕರು ಇದೊಂದು ನಿಷ್ಪ್ರಯೋಜಕ ಕೆಲಸವೆಂದು ತಿಳಿದುಕೊಂಡು, ಮಕ್ಕಳು ಮಾಡುವ ಆ ಪ್ರಾಜೆಕ್ಟ್ ವರ್ಕ್‌ಗೆ ಅಡ್ಡಿಪಡಿಸುವ ಪ್ರವೃತ್ತಿ ನಿರಂತರವಾಗಿ ಮುಂದುವರಿಸುತ್ತಾರೆ.
ಮಕ್ಕಳಿಗೆ ಈ ರೀತಿ
ಯ ಕೆಲಸ ನೀಡುವುದರಿಂದ ಅವರ ಅಲೋಚನಾ ಶಕ್ತಿ ಕೂಡ ಹೆಚ್ಚುತ್ತದೆ. ಜತೆಗೆ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದ್ದು, ಇದು ಮಕ್ಕಳ ಮನಸ್ಸನ್ನು ಪ್ರಭುದ್ಧಗೊಳಿಸುತ್ತದೆ ಎನ್ನುವ ಉದ್ದೇಶದಿಂದ ಶಿಕ್ಷಕರು ಪ್ರಾಜೆಕ್ಟ್ ಕೆಲಸ ನೀಡುತ್ತಾರೆ. ಆದರೆ ಪೋಷಕರು ಇದರಿಂದ ಮಕ್ಕಳು ಸಮಯ ಹಾಳು ಮಾಡುತ್ತಾರೆ, ಇದರಿಂದ ಯಾವುದೇ ಉಪಯೋಗವಿಲ್ಲ. ಹೆಚ್ಚು ಓದಿಕೊಂಡರೆ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಹೆಚ್ಚು ಅಂಕ ಪಡೆಯಬಹುದು ಎಂದು ಯೋಚಿಸಿ ಮಕ್ಕಳನ್ನು ‘ಆ ಪ್ರಾಜೆ
ಕ್ಟ್ ಬಿಟ್ಟು ಹೋಗಿ ಓದ್ಕೋ...’ ಎಂದು ಗದರಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಮಕ್ಕಳು ಖುಷಿಯಿಂದ ಮಾಡುವ ಈ ಪ್ರಾಜೆಕ್ಟ್ ಕೆಲಸಕ್ಕೆ ಪೋಷಕರು ಅಡ್ಡಿಪಡಿಸುವುದರಿಂದ ಮಕ್ಕಳು ತಮ್ಮ ಅಭಿಲಾಷೆಗೆ ಪ್ರೇರಣೆ ಅಥವಾ ಪ್ರೋತ್ಸಾಹವೇ ಇಲ್ಲ ಎಂದುಕೊಂಡು ಖಿನ್ನತೆಗೆ ಒಳಗಾಗುವ ಅಥವಾ ಹೊಸತನದ ಬಗ್ಗೆ ಚಿಂತಿಸದೇ ಹೋಗುವ ಸಾಧ್ಯತೆ ಹೆಚ್ಚಿದೆ.
ಆದರೆ ಪೋಷಕರು ಅವರ ಕೆಲಸಕ್ಕೆ ಬೆಂಬಲವಾಗಿ ನಿಲ್ಲಬೇಕು. ಇದೂ ಕೂಡ ಮಕ್ಕಳ ಓದಿಗೆ ಪೂರಕ. ಪೋಷಕರು ಮಕ್ಕಳ ಪ್ರಾಜೆಕ್ಟ್ ವರ್ಕ್ ಏನು ಎಂಬುದನ್ನು ತಿಳಿದು, ಅದಕ್ಕೆ ಪೂರಕವಾಗಿ ಕೆಲವು ಸಲಹೆ ನೀಡಬಹುದು. ಇಲ್ಲವೇ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ಹೊಸ ಪ್ರಯೋಗಗಳ ಬಗ್ಗೆ ಇಂಟರ್‌ನೆಟ್ ಅಥವಾ ಇನ್ನಾವುದೇ ಮೂಲಗಳಿಂದ ಹುಡುಕಿ ತೋರಿಸಬೇಕು. ಜತೆಗೆ ಅವರ ಪ್ರಾಜೆಕ್ಟ್‌ಗೆ ಬೇಕಾದ ವಸ್ತುಗಳ
ನ್ನು ಹೊಂದಿಸಿಕೊಡಬೇಕು. ಇಲ್ಲವೇ ಅವರ ಪ್ರಾಜೆಕ್ಟ್ ಪೂರ್ಣಗೊಂಡ ನಂತರ ಅದನ್ನು ಮತ್ತಷ್ಟು ಉತ್ತಮಗೊಳಿಸಿಕೊಡಬೇಕು. ಹೀಗಾದಾಗ ಮಕ್ಕಳು ಮತ್ತಷ್ಟು ಭಿನ್ನವಾಗಿ ಅಥವಾ ವೈವಿಧ್ಯಪೂರ್ಣವಾಗಿ ಯೋಚಿಸಲು ಸಾಧ್ಯವಾಗುತ್ತದೆ.
ಇದು ಮಕ್ಕಳ ಓದಿನ ಸಮಯವನ್ನು ಕೊಲ್ಲುವುದಿಲ್ಲ. ಬ
ದಲಿಗೆ ಇದೊಂದು ಪಠ್ಯೇತರ ಚಟುವಟಿಕೆ ಅಷ್ಟೆ. ಇದರಿಂದ ಮಕ್ಕಳು ಓದಿನಲ್ಲಿ ಮತ್ತಷ್ಟು ಆಸಕ್ತಿ ತೋರಲು ಪ್ರೇರಣೆ ನೀಡುತ್ತದೆ. ಜತೆಗೆ ಅವರ ಕೌಶಲ ಶಕ್ತಿ ಕೂಡ ವೃದ್ಧಿಸುತ್ತದೆ. ಅಲ್ಲದೇ ಅವರೇ ಪ್ರಾಜೆಕ್ಟ್ ಮಾಡುವ ವಿಚಾರದಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವುದೂ ತಪ್ಪುತ್ತದೆ. ಇದೆಲ್ಲದರ ಜತೆಗೆ ಮಕ್ಕಳಿಗಾಗುವ ಮತ್ತೊಂದು ಉಪಯೋಗವೆಂದರೆ ಅವರು ಸದಾ ಉಲ್ಲಾಸದಿಂದ ಇರುವುದರೊಂದಿಗೆ ಮುಂದಿನ ತರಗತಿಗಳಲ್ಲೂ ಅದೇ ಚೈತನ್ಯದಿಂದ ಓದು ಹಾಗೂ ಹೊಸ ಪ್ರಾಜೆಕ್ಟ್‌ನ ಕಡೆಗೆ ಮಗನಹರಿಸುತ್ತಾರೆ. ಇದರಿಂದ ಅ
ವರು ಹೆಚ್ಚು ಅಂಕ ಗಳಿಸಲು ಕೂಡ ಪೂರಕವಾಗುತ್ತದೆ.
ಕ್ರಿಯಾಶೀಲ ವಿದ್ಯಾರ್ಥಿಗಳು ಕೇವಲ ಓದಿನಲ್ಲಿ ಮಾತ್ರ ಮುಂದಿರುವುದಿಲ್ಲ, ಬದಲಿಗೆ ಅವರು ಯಾವಾಗಲೂ ಒಂದಿಲ್ಲೊಂದು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತಾರೆ. ಅಂಥ ಮಕ್ಕಳು ಮೈದಾನದಲ್ಲಿ ಆಡುತ್ತಾರೆ, ಇಲ್ಲವೇ ಅದೇ ಮೈದಾನದಲ್ಲಿ ಒಂದು ಬ್ಲೇಡ್, ಗಮ್ ಹಾಗೂ ದಪ್ಪನೆಯ ಕಾಗದದೊಂದಿಗೆ ಕುಳಿತು ಏನಾದರೊಂದು ಭಿನ್ನವಾದ ಚಿತ್ರ, ಇಲ್ಲವೆ ಹಸ್ತ ಕೌಶಲದ ಮೂಲಕ ಹೊಸ ವಸ್ತು
ವನ್ನು ತಯಾರಿಸುವ ನಿಟ್ಟಿನಲ್ಲಿ ಆಲೋಚಿಸುತ್ತಿರುತ್ತಾರೆ. ಹೀಗಾಗಿ ಅವರು ಅದನ್ನೇ ಬಿಡುವಿನ ಸಮಯ ಎಂದುಕೊಂಡು ಸದಾ ಹೊಸತನಕ್ಕೆ ಹಪಹಪಿಸುವ ಮನೋಸ್ಥಿತಿ ಬೆಳೆಸಿಕೊಳ್ಳುತ್ತಾರೆ.
ಇಂಥ ಸಂದರ್ಭದಲ್ಲಿ ಮಕ್ಕಳ ಮುಂದೆ ಪೋಷಕರು ಅದರ ಬಗ್ಗೆ ಸಲ್ಲದ ರೀತಿಯಲ್ಲಿ ಹೇಳಿಕೆಗಳನ್ನು ನೀಡಿ ಅವರನ್ನು ಮಾನಸಿಕವಾಗಿ ವಿಚಲಿತರನ್ನಾಗಿ ಮಾಡಬಾರದು. ಇದು ಅವರ ಮಾನಸಿಕ ಮನೋಬಲದ ಮೇಲೆ ವಾಸಿಯಾಗದ ರೀತಿಯಲ್ಲಿ ಗಾಯ ಮಾಡಿಬಿಡುತ್ತದೆ.
ಮೊದಲು ಶಾಲೆಗಳಲ್ಲಿ ಇಂಥ ಪ್ರಾಜೆಕ್ಟ್ ವರ್ಕ್‌ಗಳು ತುಂಬಾ ಕಡಿಮೆ ಇದ್ದವು. ಈಗ ಶಿಕ್ಷಣದ ಕ್ರಮ ಬದಲಾಗಿದ್ದರಿಂದ ಇಂಥ ಮನೆಗೆಲಸಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಪಠ್ಯಕ್ಕಿಂತ ಇಂಥ ಪಠ್ಯೇತರ ಚಟುವಟಿಕೆಗಳಿಂದಲೇ ಮಕ್ಕಳು ಉತ್ತಮ ಬೌದ್ಧಿಕ ಮಟ್ಟ ಪಡೆಯತ್ತಾರೆ. ಜತೆಗೆ ಇವು ಮಕ್ಕಳ ಬಾಲ್ಯವನ್ನು ಅವರಿಗೆ ಧಕ್ಕಿಸಿಕೊಡುವ ಜತೆಗೆ ಅವರಿಗೆ ಅವು ತುಂಬಾ ಸಿಹಿಯಾದ ನೆನಪಿನ ಬುತ್ತಿಗಳು ಎನ್ನುತ್ತಾರೆ ಶಿಕ್ಷಣ ತಜ್ಞರು.
ಹೀಗಿರುವಾಗ ಪೋಷಕರಾದ ನಾವು ಆ ಮುಗ್ದ ಮಕ್ಕಳ ಮನೋಬಲಕ್ಕೆ ಅದು ಬೇಡ, ಇದು ಬೇಡ, ನಾವು ಹೇಳಿದ್ದನ್ನೇ ಮಾಡಿ ಎಂದು ತಣ್ಣೀರೆರಚುವ ಬದಲು ಅವರ ಆಸಕ್ತಿಗೆ ಅನುಗುಣವಾಗಿ ಬೆಂಬಲವಾಗಿ ನಿಂತು ಮಕ್ಕಳ ಸಾಮರ್ಥ್ಯಕ್ಕೆ ಮತ್ತಷ್ಟು ನೀರೆರೆದು ಪೋಷಿಸೋಣ ಅಲ್ಲವೆ?