Saturday, February 4, 2012

ನಾಡೋಜ ಶ್ರೀ ನಿಸಾರ್ ಅಹಮದ್ ಅವರಿಗೆ ಜನ್ಮ ದಿನದ ಅಂಗವಾಗಿ ನುಡಿ ನಮನ

ನಾಳೆ (ಫೆ.5 ) ಕನ್ನಡ ಖ್ಯಾತ ಕವಿ, ನಾಡೋಜ ಶ್ರೀ ನಿಸಾರ್ ಅಹಮದ್ ಅವರ ಜನ್ಮ ದಿನ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಕಳೆದ ವರ್ಷ ನಾನು ಅವರ ಜೊತೆ ಇದೇ ದಿನ ಸುಮ್ಮನೆ ಕುಳಿತು ಸುಮಾರು 3 ಗಂಟೆ ಹಾಗೇ ಸುಮ್ಮನೆ ಹರಟಿದ್ದೆ. ಅವರ ಜೊತೆ ಬಿಡುವು ಸಿಕ್ಕಾಗೆಲ್ಲ ಮಾತನಾಡುತ್ತೇನೆ. ಆದರೆ ಆ ಸಮಯವನ್ನು ನನ್ನ ಜೀವನದಲ್ಲಿ ಮರೆಯಲಿಕ್ಕೆ ಸಾಧವಿಲ್ಲ. ಅಂದು ಅವರು ನನಗೆ ಅವರ ಬದುಕಿನ ಅದೆಷ್ಟೋ ವಿಚಾರಗಳನ್ನ ಹರವಿದ್ದರು. ಅವುಗಳಿಂದ ನಾನು ನಿಜಕ್ಕೂ ಪ್ರಭಾವಿತನಾನಿದ್ದೇನೆ. ಆ ವೇಳೆ ಹೊರ ಬಂದ ವಿಶಿಷ್ಟ ವಿಚಾರಗಳಲ್ಲಿ ಕೆಲವನ್ನು ನಾನು ಪತ್ರಿಕೆಯಲ್ಲಿ ಬರೆದಿದ್ದೆ. ಅದಕ್ಕೆ ನನಗೆ ಬಂದ ಪ್ರತಿಕ್ರಿಯೆ ಅಷ್ಟಿಷ್ಟಲ್ಲ... ಅವುಗಳನ್ನು ಮತ್ತೊಮ್ಮೆ ನಿಮಗಾಗಿ ನೀಡುತ್ತಿದ್ದೇನೆ... Sir ನಿಜಕ್ಕೂ ಹ್ಯಾಟ್ಸ್ ಆಫ್ ಟು ಯೂ... ones again Happy Birth Day Sir...
=======================================
ನಿಸಾರ್ ಹೃದಯ ನೀನಾದ..

ನಾಡೋಜ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕವಿಯಾಗಿ ಜನಮಾನಸಕ್ಕೆ ಪರಿಚಿತರಾದ ನಿಸಾರ್, ಇಂದು ೭೫ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಳೆಯ ಕೆಲವು ಖಾಸಗಿ ನೆನಪುಗಳನ್ನು ಅವರು ‘ಲವಲವಿಕೆ’ಯೊಂದಿಗೆ ಹಂಚಿಕೊಂಡಿದ್ದಾರೆ. ಅಪರೂಪದ ಈ ನೆನಪಿನ ಬುತ್ತಿ ನಿಮ್ಮ ಮುಂದೆ...
‘ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೇ-
ಎಂದೋ ನಲಿಸಿದ ನಗೆಯ ಸಂಚಿನಲ್ಲಿ ;
ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ-
ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ.’
ಕೆಎಸ್.ನಿಸಾರ್ ಅಹಮದ್ ಅವರ ಜತೆ ಬಾಲ್ಯದಲ್ಲಿ ಇದ್ದುದು ಒಂದೇ ಒಂದು ಅದು ಲಾಲ್‌ಬಾಗ್! ಆದರೆ ಅವರಿಗೆ ಓದಿನ ಗೀಳು ಹಚ್ಚಿದ್ದು ಅವರ ತಂದೆ ಕೆ.ಎಸ್. ಹೈದರ್, ಶಿಸ್ತು ಬೆಳೆಸಿದ್ದು ತಾಯಿ ಹಮೀದಾ ಬೇಗಂ. ಇದೆಲ್ಲದರ ಜತೆಗೆ ಕವಿ ನಿಸಾರ್ ಒಬ್ಬ ಭಗ್ನ ಪ್ರೇಮಿಯೂ ಹೌದು...!! ಅದೂ ಕೂಡ ಸಾಕಷ್ಟು ಕವಿತೆಗಳಿಗೆ ಸೂರ್ತಿ...
ಅದನ್ನು ನಿಸಾರ್ ನಿಸ್ಸಂಕೋಚವಾಗಿ ಒಪ್ಪಿಕೊಳ್ಳುತ್ತಾರೆ. ಅವೆಲ್ಲ ಘಟನೆಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ನಡೆಯಲೇಬೇಕು. ದ್ವೇಷ, ಅಸೂಯೆಗಳನ್ನು ಬಿತ್ತಿ ಬೆಳೆಸಿಕೊಳ್ಳುವುದರ ಬದಲು

ಪ್ರೀತಿಯ ಗುಲಾಬಿ ಗಿಡ ನೆಟ್ಟುಕೊಳ್ಳುವುದೇ ಲೇಸು ಎನ್ನುತ್ತಾರೆ ನಿಸಾರ್. ಪ್ರೀತಿ ಕೈ ಕೊಟ್ಟಾಗ ಮುಳ್ಳಿನ ಹಾಗೆ ಚುಚ್ಚುತ್ತದೆ; ಆದರೂ ಆ ಹೂವು ಕಂಡಾಗ ಅವೆಲ್ಲವೂ ಗೌಣವಾಗುತ್ತವೆ ಎನ್ನುವುದು ಅವರ ಅಂತರಾಳದ ನುಡಿ.
ನಾನೂ ಒಬ್ಬ ಸಾಮಾನ್ಯ ಮನುಷ್ಯ. ಪ್ರೇಮ ಲೋಕದಿಂದ ಹೊರಗುಳಿದಿಲ್ಲ. ೨ನೇ ಹಾನರ‍್ಸ್ ಮಾಡುವಾಗ ಕಾಲೇಜು ದಿನಗಳಲ್ಲಿ ಪ್ರೀತಿಸಿದ್ದೇನೆ. ಆದರೆ ಅದನ್ನು ಪಡೆಯದೆ ಸೋತಿದ್ದೇನೆ. ಪ್ರೀತಿ ಶೃಂಗಾರ ಕಾವ್ಯ. ಅದರ ಸೆಳೆತಕ್ಕೆ ಸಿಕ್ಕಿ ನಾನು ಸೋತು, ವಿರಹ ವೇದನೆ ಅನುಭವಿಸಿದ್ದೇನೆ. ಆಗ ನಾನು, ಅವಳು ಇಬ್ಬರೂ ಪ್ರೀತಿಸುತ್ತಿದ್ದೆವು. ಕಲ್ಪನೆಯಲ್ಲಿ ವಿಹರಿಸುತ್ತಿದ್ದೆವು. ಅದು ಇಬ್ಬರಿಗೂ ಗೊತ್ತಿತ್ತು. ಆದರೆ ಇಬ್ಬರೂ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಲಿಲ್ಲ. ಆದರೆ ಭಾವನೆಯ ಬುತ್ತಿ ಬಿಚ್ಚುವಷ್ಟರಲ್ಲಿ ಆಕೆಗೆ ಮನೆಯವರು ‘ಮದುವೆ’ ನಿಶ್ಚಯ ಮಾಡಿದ್ದರು. ಆಗ ಇಬ್ಬರಿಗೂ ಸಿಡಿಲು ಬಡಿದಿತ್ತು. ಒಬ್ಬರಿಗೊಬ್ಬರು ಗೊತ್ತಿಲ್ಲದೆ ನೊಂದುಕೊಂಡಿದ್ದೆವು. ನಾನಂತೂ ತುಂಬಾ ನೊಂದಿದ್ದೆ. ಆ ಅಗಲಿಕೆಯ ವೇದನೆಯೇ ನನ್ನಿಂದ ಬಹುತೇಕ ವಿರಹದ ಕಾವ್ಯಗಳ ‘ಚಿಲುಮೆ’ಯಾಯಿತು. ‘ನವೋಲ್ಲಾಸ ’ ಸಂಕಲನದ ‘ಎಲ್ಲಿರುವೆಯೋ ಈಗ ನನ್ನ ಚಿನ್ನ’, ‘ನನ್ನ ಬಾಲ್ಯದ ಗೆಳತಿ’ ಮುಂತಾದ ಕಾವ್ಯಗಳು ಆ ನೆನಪಿನಲ್ಲೇ ಬರೆದವು.
ಆದರೆ ಆಗ ಪ್ರೀತಿಯಲ್ಲಿ ಸೋತಿದ್ದರಿಂದ ಕೆಲವೊಮ್ಮೆ ಜೀವನವೇ ಬೇಡ, ಇದು ‘ನಾದವಿರದ ಬದುಕು’ ಎನಿಸಿದ್ದೂ ಉಂಟು! ಆಗ ನನ್ನ ಕೈ ಹಿಡಿದಿದ್ದೇ ಲಾಲ್‌ಬಾಗ್. ಹಾಗಂತ ಎದೆಗುಂದಲಿಲ್ಲ. ನೀ ಮತ್ತೆ ‘ನೆನಪಾಗಿ ಬಾರದಿರು’ ಎನ್ನುತ್ತಲೇ ಸಾಹಿತ್ಯದ ಕಡೆ ಒಲವು ತೋರಿದೆ. ಭಾವನೆಗಳೇ ಕಾವ್ಯವಾಗಿ ಹೊರ ಬಂದವು. ಮತ್ತೆ ‘ನಿತ್ಯೋತ್ಸವ’ ಶುರವಾಯಿತು. ಆದರೆ ಅದಕ್ಕಿಂತ ನನಗೆ ಹೆಚ್ಚು ಕಾಡಿದ್ದು ‘ಎಲ್ಲ ಮರೆತಿರುವಾಗ’ ನಾನು ಪ್ರೀತಿಸಿದ ಹುಡುಗಿ ಅಜ್ಜಿಯಾಗಿ ಮಗಳು, ಮೊಮ್ಮಗುವಿನೊಂದಿಗೆ ಒಂದು ಆರತಕ್ಷತೆಯಲ್ಲಿ ಸಿಕ್ಕು ಮಾತನಾಡಿಸಿದ್ದು...!! ಆಕೆಯೇ ನನ್ನನ್ನು ಗುರುತಿಸಿ, ಬಂದು ಮಾತನಾಡಿಸಿ “ನನ್ನ ಪರಿಚಯವಿದೆಯಾ ನಿಮಗೆ...?" ಎಂದಾಗ ಆದ ಶಾಕ್ ಅಷ್ಟಿಷ್ಟಲ್ಲ. ಆಗ ‘ಆ ನೋವಿನ ಹಾಡು’ ಮನದ ಸ್ವಾಸ್ಥ್ಯ ಕೆಡಿಸಿದ್ದು ನಿಜ, ಆಗ ಬಾಯಿ ಕಟ್ಟಿ ಹೋಗಿತ್ತು. ಕ್ಷಣ ಹೊತ್ತು ಭಾವೋತ್ಕಟತೆಯಿಂದ ವರ್ತಿಸಿದ್ದೆ. ಹಳೆಯ ನೆನಪುಗಳು ಮರುಕಳಿಸಿ ಜೋಗದ ‘ಜಲಪಾತ’ವಾಗಿ ಹರಿಯುವುದರ ಜತೆಗೆ ಅಂದು ನಾನೇನಾದರೂ ತಪ್ಪಾಗಿ ಮಾತನಾಡಿರಬಹುದೇ ? ಅದರಿಂದ ಇಂದು ಅವಳೆದುರು ನಾ ಚಿಕ್ಕವನಾದೆನೆ? ಎಂಬ ಅಳುಕು. ಕಾಲೇಜು ದಿನಗಳಲ್ಲಿ ಎಷ್ಟೇ ಜಾಗೃತನಾಗಿ ಭಯದಿಂದಲೇ ಸಭ್ಯರಾಗಿ ಅವಳ ಜತೆ ನಾನು, ನನ್ನ ಜತೆ ಅವಳು ವ್ಯವಹರಿಸುವಾಗ ಆಡಿದ ಮಾತುಗಳಲ್ಲಿ ತಪ್ಪಿದ್ದರೆ, ಇವನೇನಾ... ನಿಸಾರ್ ಅಹಮದ್ ಎಂಬ ಭಾವನೆ ಮೂಡಿದ್ದರೆ!? ಎಂಬ ಆತಂಕ ಕಾಡತೊಡಗಿತ್ತು. ಆ ಕಾರಣಕ್ಕೇ ಎರಡು ದಿನ ಕಂಗೆಟ್ಟಿದ್ದೂ ಉಂಟು. ಹರೆಯದಲ್ಲಿ ಒಬ್ಬ ಹುಡುಗ ಹುಡುಗಿ ನಡುವೆ ಪ್ರೀತಿ ಶುರುವಾದಾಗ ಖಾಸಗಿತನ ಹುಟ್ಟಿಕೊಳ್ಳುತ್ತದೆ. ಆ ಕಾರಣಕ್ಕೇ ಆ ದುಗುಡ ನನ್ನನ್ನು ಕಾಡಿದ್ದು.
ಜೀವನವೇ ಅಂತಹದ್ದು, ಅಂದುಕೊಂಡದ್ದಕ್ಕಿಂತ ಮೀರಿ ನಿಲ್ಲುತ್ತಲೇ ದೊಡ್ಡ ದೊಡ್ಡ ಸವಾಲು ತಂದೊಡ್ಡುವುದೇ ಬದುಕು. ಅದಕ್ಕೇ ಅದು ನಿಗೂಢ ಎನಿಸುತ್ತದೆ. ಅಘಟಿತ ಘಟನಾ ಪರಂಪರೆಯನ್ನು ಜೀವನ ಸೃಷ್ಟಿ ಮಾಡುತ್ತದೆ. ಇಲ್ಲಿ ಒಂದು ಘಟನೆ ಮತ್ತೊಂದನ್ನು ಮರೆಸುತ್ತಾ ಬರುತ್ತೆ. ಇದು ನನ್ನ ಜೀವನದ ಮರೆಯಲಾಗ ಪ್ರೀತಿ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ಆನಂತರ ಇಂಥ ಸಾಕಷ್ಟು ಘಟನೆಗಳು ನಡೆದಿವೆ. ‘ನಗೆಯೇ ಪ್ರೀತಿಯೆಂದು ನಂಬಿ’, ‘ನೀನೇ ಸರ್ವಸ್ವ’ ಎಂದುಕೊಂಡದ್ದೂ ಉಂಟು. ಆದರೆ ಅವ್ಯಾವೂ ಅಚ್ಚಳಿಯದೆ ಉಳಿದಿಲ್ಲ. ಆ ಕಾರಣಕ್ಕೋ ಏನೋ First love is Best love ಎನ್ನುವುದು.
ಪ್ರೀತಿಯನ್ನು ಲೈಂಗಿಕತೆಯಿಂದ ಅಳೆಯಬಾ
ರದು. ಅದೊಂದು ಸ್ವಚ್ಛಂದವಾದ ಭಾವನಾತ್ಮಕ ಸಂಬಂಧ. ಈ ಸಮಯದಲ್ಲಿ ಲಾಲ್ ಬಾಗ್ ನನಗೆ ಕಾಶ್ಮೀರವಾಗಿತ್ತು. ಏಕಾಂತಕ್ಕೆ ಅದೇ ನನ್ನ ಅಚ್ಚುಮೆಚ್ಚಿನ ತಾಣ. ಲೋಕಾಂತಕ್ಕೆ ಗಾಂಬಜಾರ್‌ನ ಕಲಾಮಂದಿರ...
ಯಾರೇ ಆಗಲಿ ಒಂದು ಸಲ ಪ್ರೇಮದ ಸವಿಯನ್ನು ಸವಿಯಬೇಕು. ಅದರಿಂದ ಬಿಡಿಸಿಕೊಂಡು ಆಚೆ ಬಂದಾಗ ಜೀವನ ಸಾರ್ಥಕ ಎನಿಸುತ್ತದೆ. ಪ್ರೀತಿಯಲ್ಲಿ ಬರುವ ತ್ಯಾಗದ ನೋವಲ್ಲೂ ಏನೋ ಒಂದು ರೀತಿ ಹಿತವಿರುತ್ತದೆ...
ವಿವಾಹದ ನಂತರದ ಪ್ರೇಮ:

“ನನ್ನದು Arrenged Marriage. ೩೦ನೇ ವರ್ಷಕ್ಕೆ ವಿವಾಹವಾದೆ. ಆಗ ನನಗೆ ಮೆಚ್ಯೂರಿಟಿ ಬಂದಿತ್ತು. ನಮ್ಮಲ್ಲಿ ಎಷ್ಟೆಲ್ಲಾ ಸಂಪ್ರದಾಯಗಳಿದ್ದರೂ ನಾನು ಷಾನವಾಜ್ ಬೇಗಂ ಅವರನ್ನು ನೋಡಿ ಮೆಚ್ಚಿಕೊಂಡು ಕೈಹಿ

ಡಿದೆ. ಆ ಕಾರಣಕ್ಕೋ ಏನೋ ಷಾನವಾಜ್ ನನ್ನ ಬದುಕಲ್ಲಿ ಗೃಹಲಕ್ಷ್ಮೀಯಾಗಿ ಬಂದಳು. ಆಕೆ ಕೂಡ ಡಬ್ಬಲ್ ಗ್ಯಾಜುಯೆಟ್. ಪ್ರಾಧ್ಯಾಪಕಿಯಾಗಿದ್ದವಳು. ಮನೆ, ಮನ ಎರಡನ್ನೂ ಬೆಳಗುವುದರ ಜತೆಗೆ ಈಗ ಮನೆಯ ಇಡೀ ಜವಾಬ್ದಾರಿಯನ್ನು ನಿರ್ವಹಿಸುವವಳು ಅವಳೇ. ‘ಮದುವೆ’ ನಂತರದ ಪ್ರೀತಿಯಲ್ಲಿ ಗೆದ್ದಿದ್ದೇನೆ. ಆಕೆಯನ್ನು ಮದುವೆಯಾಗಿದ್ದಕ್ಕೆ ನನಗೆ, ನನ್ನನ್ನು ವಿವಾಹವಾಗಿದ್ದಕ್ಕೆ ಅವಳಿಗೆ ಹೆಮ್ಮೆಯಿದೆ. ಆದರೆ ನಮ್ಮ ನಡುವಿರುವ ವ್ಯತ್ಯಾಸ ನಾನು ಅಜಾತಕನು. ಅವಳು ಜಾತಕಳು. ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊಮ್ಮಕ್ಕಳಿಗೆ ‘ತಾತ’ ಎಂದರೆ ಅಚ್ಚುಮೆಚ್ಚು.
ಇವರು ಸಹಾಯಕ ಭೂ ವಿಜ್ಞಾನಿ!

೧೯೫೭ರಲ್ಲಿ ಬಿಎಸ್ಸಿ ಹಾನರ‍್ಸ್
ಮುಗಿಸಿ ೧೯೫
೮ರಲ್ಲಿ ಭೂ ವಿeನದಲ್ಲಿ ಎಂಎಸ್ಸಿ ಮಾಡುವಾಗ ನಿಸಾರ್ ಅಹಮದ್ ಅವರಿಗೆ ಗುಲ್ಬರ್ಗದಲ್ಲಿ ಮೈಸೂರು ಗಣಿ ಮತ್ತು ಭೂ ವಿeನ ಇಲಾಖೆಯಲ್ಲಿ ಸಹಾಯಕ ಭೂ ವಿeನಿಯಾಗಿ ನೌಕರಿ ಸಿಕ್ಕಿತು. ಕೆಲಸಕ್ಕೆ ಸೇರಿದ ಅವರು, ಗುಲ್ಬರ್ಗಕ್ಕೆ ತೆರಳಿ ಒಂದು ವರ್ಷ ಸೇವೆ ಮಾಡಿದರು. ಜೀವನದ ಮೊದಲ ‘ಬಿಸಿ’ ಅನುಭವಿಸಿದ್ದೇ ಅಲ್ಲಿ. ಅದು ‘ಆದಿಯನರಿಯದ ಪಯಣ’. ಅವರು ಕಚೇರಿಯಲ್ಲಿಯೇ ಇರುವ ರೂಮಿನಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಅಲ್ಲಿನ ಜೀವನವನ್ನು ಅವರಿಂದ ಇಂದಿಗೂ ಮರೆಯಲಾಗುತ್ತಿಲ್ಲ. ಕಾರಣ ಅಲ್ಲಿನ ವಾತಾವರಣ, ನೀರು, ಹಿಡಿಸದೆ ತುಂಬಾ ವೇದನೆ ಅನುಭವಿಸುತ್ತಾ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು. ಆದರೂ ಗುಲ್ಬರ್ಗ ಜಿಲ್ಲೆಯಾದ್ಯಂತ ಸುತ್ತಿ ಸರ್ವೆ ಕಾರ್ಯ ನಡೆಸಿದ್ದರು. ಅಂತರ್ಜಲ, ಸುಣ್ಣದ ಕಲ್ಲು ಸರ್ವೇಕ್ಷಣೆ ಮಾಡಿದ್ದರು. ಸೇಡಂ ಬಳಿ ಅವರು ಸರ್ವೆ ಮಾಡಿದ ಕರಿಘಟ್ಟವೇ ಇಂದಿನ ಸಿಮೆಂಟ್ ಕಾರ್ಖಾನೆಯಾಗಿದೆ.
ಕೆಲಸ ಇಷ್ಟವಾದರೂ ಮನೆಯವರಿಂದ ದೂರವಾಗಿದ್ದರಿಂದ, ಜತೆಗೆ ಸಾಹಿತಿಗಳ ಹಾಗೂ ಆಕಾಶವಾಣಿಯ ಸಂಪರ್ಕ ಕಳೆದುಕೊಂಡಿದ್ದರಿಂದ ಏನೋ ಕಳೆದುಕೊಂಡಂತ ಅನುಭವ, ಅನಾಥ ಪ್ರe ಹಾಗೂ ‘ಮತ್ತದೇ ಬೇಸರ’ ಕಾ
ಡುತ್ತಿತ್ತು. ಆ ಕಾರಣಕ್ಕೆ ೧೯೫೯ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ವಾಪಸ್ ಬಂದರು.
ಸಿನಿಮಾ ಹುಚ್ಚಿತ್ತು :

‘ಬಾಲ್ಯ’ದಿಂದಲೂ ಹಿಂದಿ ಸಿನಿಮಾ
ಎಂದರೆ ನಿಸಾರ್ ಅವರಿಗೆ ಪ್ರಾಣ. ಮನೆ ಬಳಿಯೇ ಮಿನರ್ವ ಟಾಕೀಸ್ ಇತ್ತು. ಒಂದಾಣೆ, ಎರಡಾಣೆ ಸಂಗ್ರಹಿಸಿ ತಮ್ಮನ ಜತೆಗೂಡಿ ಅಂದಿನ ಪ್ಯಾರಾಮೌಂಟ್ ಚಿತ್ರಮಂದಿರದ ಗೇಟ್ ಕೀಪರ್‌ಗೆ ಕೊಟ್ಟು ಮೆಲ್ಲಗೆ ನುಸುಳಿಕೊಂಡು ಹೋಗಿ ಸಿನಿಮಾ ನೋಡುತ್ತಿದ್ದರು. ಸಿನಿಮಾ ನೋಡಿ ಲೇಟಾಗಿ ಮನೆಗೆ ಬಂದಾಗ ತಮ್ಮಿಂದ ಶಿಸ್ತು ಬಯಸುತ್ತಿದ್ದ ಅಮ್ಮ ಕೇಳಿದಾಗ ಸು
ಳ್ಳು ಹೇಳಿದ್ದೂ ಉಂಟು. ಅಪ್ಪನಿಗೆ ಅದು ಗೊತ್ತಾಗುತ್ತಿತ್ತು. ಆದರೂ ಸುಮ್ಮನಿರುತ್ತಿದ್ದರು.
ಅಪ್ಪನ ಪ್ರೇರಣೆ:

ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಬೆಳೆಸಿದ್ದು ಅಪ್ಪ ಕೆ.ಎಸ್. ಹೈದರ್. ಆ ಕಾರಣಕ್ಕಾಗಿಯೇ ಅವರಿಗೆ ತಂದೆಯೇ ಮೊದಲ ಗುರು. ಆಹಾರ ನಿರೀಕ್ಷಕರಾದ ತಂದೆಯೇ ಅವರಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತವನ್ನೂ ಹೇಳಿಕೊಟ್ಟದ್ದು. ಹದ್ದು ಮೀರಿ ವರ್ತಿಸದಂತೆ ಎಚ್ಚರವಹಿಸುವುದು, ಉದಾರ ಮನೋಭಾವ, ಸರಳತೆ ಬೆಳೆಸಿದ್ದು ತಂದೆಯೇ. ತಾಯಿಯಿಂದ ಶಿಸ್ತು ಕಲಿತರೆ, ಜನರ ಮಧ್ಯೆ ಬೆಳೆಯುವುದನ್ನು ಕಲಿತದ್ದು ತಂದೆಯಿಂದ.
ನೆನಪಿನ ಬುತ್ತಿಯ ಅಚ್ಚು ಮೆಚ್ಚು:

* ಹೈಸ್ಕೂಲಿನಲ್ಲಿದ್ದಾಗ ಜಲಪಾತವನ್ನೇ ನೋಡದೆ ಮೊದಲು ಬರೆದ ಪದ್ಯ ‘ಜಲಪಾತ’.
*ನಿಸಾರ್ ಅಹಮದ್ ೧೯೫೫ರಲ್ಲಿ ದ.ರಾ.ಬೇಂದ್ರೆ ಅಧ್ಯಕ್ಷತೆಯಲ್ಲಿ ಬೆಂಗಳೂರು ಕಸಾಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ‘ಸಮರ ಗೀತೆ’ ಪದ್ಯ ಓದಿ, ಬೇಂದ್ರೆಯಿಂದ ಬೆನ್ನು ತಟ್ಟಿಸಿಕೊಂಡಿದ್ದರು.
* ಆನಂತರ ೧೯೫೬ರಲ್ಲಿ ಮೊದಲ ಬಾರಿಗೆ ಆಕಾಶವಾಣಿಯಲ್ಲಿ ‘ಕಾವ್ಯಧಾರೆ’ ಎಂಬ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅದೇ ಕಾವ್ಯವನ್ನು ಓದಿದ್ದು.
* ಗಾಂಬಜಾರ್‌ನ ಕಲಾಮಂದಿರದಿಂದಲೇ ಸಾಹಿತಿಗಳ ಸಂಪರ್ಕ ಸಿಕ್ಕಿತ್ತು.
* ಅಶೋಕ್ ಕುಮಾರ್, ಶ್ಯಾಮ್, ಕುಂದಲ್‌ಲಾಲ್ ಸೈಗಲ್, ದಿಲೀಪ್‌ಕುಮಾರ್, ರಾಜ್‌ಕಪೂರ್ ನೆಚ್ಚಿನ ಹೀರೋಗಳು.
*‘ಕಿಸ್ಮತ್’ ನೆಚ್ಚಿನ ಚಿತ್ರ. ಅಂದೇ ಎರಡ್ಮೂರು ಬಾರಿ ನೋಡಿದ್ದ ಇನ್ನೊಂದು ಚಿತ್ರ ‘ಫನ್ನಾ’
*ಫೈಜಲ್ ಪಂಕಜ್ ಮಲ್ಲಿಕ್ ಇಷ್ಟದ ಗಾಯಕರು.
* ವಿಜಯದಶಮಿ ವಿಶೇಷ ಕವಿ ಸಮ್ಮೇಳನದಲ್ಲಿ ಕುವೆಂಪು, ಮಾಸ್ತಿ, ಪುತಿನ ಸಮ್ಮುಖದಲ್ಲಿ ಮತ್ತ್ತೆ ಕಾವ್ಯ ವಾಚನ. ಕುವೆಂಪು ಅವರಿಂದ ಪ್ರಶಂಸೆ.
* ಮೈಸೂರಿನ ದಸರಾ ಕವಿ ಸಮ್ಮೇಳನದಲ್ಲಿ ಮತ್ತೆ ಕುವೆಂಪು ಎದುರು ‘ಸಿಡಿದ ಸದ್ದು’ ಕಾವ್ಯವಾಚನ.
* ಮೈಸೂರು ವಿವಿಯ ವೈಸ್ ಚಾನ್ಸಲರ್ ಆಗಿದ್ದ ಕುವೆಂಪು ಅವರ ಕೃಪೆಯಿಂದ ೧೯೫೯ರ ನ.೧೬ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವೆಂಕಟಾಚಲಪತಿ ಎಂಬ ಪ್ರಾಧ್ಯಾಪಕರ ಜಾಗಕ್ಕೆ ಪ್ರಾಧ್ಯಾಪಕರಾಗಿ ನೇಮಕ.
*ಶಿವಮೊಗ್ಗದಲ್ಲಿ ಕಳೆದ ೮ ವರ್ಷಗಳು ಮರೆಯುವಂತಿಲ್ಲ. ಅದು ಸೃಜನಶೀಲತೆಯ ತವರು.