My Dear Friend,
ಆಗಿನ್ನೂ ಮೈಸೂರಿಗೆ ಬಂದಿಳಿದು ಮೂರು ದಿನಗಳಾಗಿರಲಿಲ್ಲ. ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಆ ಹಸಿರು ಹಾಸಿಗೆ ಮೇಲೆ ಕುಳಿತು ನಾ ಏನೋ ಗೀಚುತ್ತಿದ್ದ ಸಮಯದಲ್ಲಿ ನೀ ಬಂದು ಮಾತನಾಡಿಸಿದ ದೃಶ್ಯ ಇನ್ನೂ ಕಣ್ಣಂಚಿನಲ್ಲೇ ಇದೆ. ಪರಿಚಯ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ನೇಹದ ಚಿಗುರೊಡೆದಿತ್ತು. ಅಂದು ನಿನ್ನ ಧ್ವನಿಯಿಂದ ಹೊರ ಬಂದ ಮಮತೆಯ ನಾದ ಇಂದಿಗೂ ನನ್ನೆದೆಯಲ್ಲಿ ಝೇಂಕರಿಸುತ್ತಲೇ ಇದೆ. ಅದಕ್ಕೆ ಅಲ್ಲಿನ ಆ ಹಸಿರೇ ಸಾಕ್ಷಿ!
ಅಲ್ಲಿಂದ ಶುರುವಾದ ನಮ್ಮಿಬ್ಬರ ಸ್ನೇಹ ಹೆಮ್ಮರವಾಗಿದ್ದು ನಿನಗೂ ಗೊತ್ತು. ತುಂಟಾಟ, ತರಲೆಗಳು, ವಿಚಾರಗಳ ವಿನಿಮಯ, ಚಿಂತನೆಗಳು ನಮ್ಮೊಳಗೆ ಬ್ರೇಕಿಲ್ಲದ ಕಾರಿನಂತೆ ಓಡಿದ್ದೂ ಉಂಟು. ಗಂಡು ಹೆಣ್ಣು ಕೇವಲ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂಬ ಮಾತಿಗೆ ಅಪವಾದ ನೀನು. ನಿನ್ನೊಂದಿಗೆ ಕಳೆದ ಎರಡು ವರ್ಷಗಳು ಇನ್ನೂ ಆ ಹಸಿರಿನಂತೆಯೇ ಹಸಿರಾಗಿ ಉಸಿರಾಡುತ್ತಿವೆ. ಸ್ನೇಹದ ಹಾಳೆಗೆ ಮಮತೆಯ ಬಣ್ಣ ಹಚ್ಚಿ ಅಂದಗೊಳಿಸಿದವಳು ನೀನು. ಆ ಇಡೀ ಎರಡು ವರ್ಷಪೂರ್ತಿ ನಿನ್ನ ‘ಮಮತೆಯ ಸಿಹಿ’ ಉಂಡು ಕೊಬ್ಬಿದ ನನಗೆ ಮತ್ಯಾಕೊ ಕೊರಗು ಶುರುವಾಯಿತಲ್ಲ! ಕಾರಣ, ನೀನು ದಿಢೀರ್ ಮರೆಯಾದದ್ದೇ ಇರಬೇಕು!?
ಪ್ರತಿನಿತ್ಯ ನಿನ್ನ ಮಾತು ಕೇಳುತ್ತಲೇ ನಿನ್ನ ತುಂಟತನ, ನಿರ್ಮಲ ನಗು, ವಿಚಾರಲಹರಿಗಳಿಗೆ ತಲೆ ದೂಗುತ್ತಲೇ ಇದ್ದವನು ನಾನು. ನೀ ಹೇಳದೆ, ಕೇಳದೆ, ಒಂದು ಮಾತೂ ಉಲಿಯದೆ ನಾಪತ್ತೆಯಾಗೊದೆ? ಅಂದಿನಿಂದ ನಾನು ಧ್ವನಿಯಿಲ್ಲದ ಕೋಗಿಲೆಯಾಗಿದ್ದೆ. ಅಂದವಿಲ್ಲದ ಅರಗಿಣಿಯಾಗಿದ್ದೆ. ರೆಕ್ಕೆಪುಕ್ಕಗಳೆಲ್ಲ ಇದ್ದೂ ಕುಣಿಯಲಾಗದ ನವಿಲಾಗಿದ್ದೆ.
ಈ ಜಗತ್ತಿನಲ್ಲಿ ಪ್ರೀತಿ, ಸ್ನೇಹಕ್ಕೆ ಬರವಿಲ್ಲ(?). ಆದರೆ ನಿರ್ಮಲ ಪ್ರೀತಿ, ‘ಮುಕ್ತಮನದ ಸ್ನೇಹ’ ಅದೆಷ್ಟು ಜನರಿಗೆ ಸಿಕ್ಕಿದೆ ಹೇಳು? ಅಪ್ಪಟ ಗೆಳೆಯರೆಂದು ನಂಬಿ ಕಷ್ಟ ಸುಖಗಳೆಲ್ಲವನ್ನೂ ಬಿಚ್ಚಿಟ್ಟ ಮಾರನೆ ದಿನವೇ ಸಹಾಯ ಮಾಡುವ ಗೋಜಿಗೂ ಹೋಗದೆ ಸಮಯ ಸಾಧಕತನವನ್ನು ತೋರಿಸಿ, ಅದನ್ನೇ ಬಂಡವಾಳ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುವ ಈ ದಿನಮಾನಗಳಲ್ಲಿ ನೀನು ನಿಜಕ್ಕೂ ‘ಕಡಲಾಳದ ಮುತ್ತು’. ಆ ವಿಚಾರದಲ್ಲಿ ನಾ ನಿಜಕ್ಕೂ ಆದೃಷ್ಟವಂತ; ಆಂದುಕೊಂಡಿದ್ದೆ. ನೀ ಮರೆಯಾದಾಗ ಅದೇ ಕಡಲಲ್ಲಿ ಈ ಮುತ್ತು ಕಳೆದು ಹೋಯಿತು ಎಂದುಕೊಂಡೆ. ಆ ಗಳಿಗೆಯಿಂದ ಸುಮಾರು ಐದು ವರ್ಷ ನಮ್ಮ ನಿರ್ಮಲ ಸ್ನೇಹ ನನಗೇ ಕನಸೆಂಬಂತೆ ಭಾಸವಾಗಿತ್ತು.
ಮನದಾಳದ ಎಷ್ಟೋ ನೋವು ನಲಿವುಗಳನ್ನು ಆಗ ನಿನ್ನೊಂದಿಗೆ ಬಿಚ್ಚಿಟ್ಟಿದ್ದೆ. ಆಗಾಗ ಮಾಡಿದ ತಪ್ಪಿಗೆ ಬೈಸಿಕೊಂಡಿದ್ದೆ, ಬೈದಿದ್ದೆ. ಆನಂತರ ಈ ಹಕ್ಕಿ ಮೂಕವಾಗಿತ್ತು! ನೀ ಮರೆಯಾದಾಗ ಇನ್ನೆಂದೂ ಸಿಗಲಾರೆ ಎಂಬ ಭಯ, ನಿನ್ನ ನೆನಪು ಆಗಾಗ ಕಡಲಿನಲ್ಲಿ ಭುಗಿಲೇಳುವ ಅಲೆಗಳ ಹಾಗೆ ಭೋರ್ಗರೆಯುತ್ತ ಅಪ್ಪಳಿಸುತ್ತಿದ್ದವು. ನೀನು ಬರೆದುಕೊಟ್ಟ ವಿಳಾಸದ ಆಟೋಗ್ರಾಫ್ ಡೈರಿ ಕೂಡ ನನ್ನ ದುರಾದೃಷ್ಟಕ್ಕೆ ಕಳೆದುಹೋಗಿತ್ತು. ನಿನ್ನ ಊರು ಗೊತ್ತಿದ್ದರೂ ವಿಳಾಸ ಗೊತ್ತಿರಲಿಲ್ಲ, ನೀನೆಲ್ಲಿದ್ದೆ ತಿಳಿಯಲಿಲ್ಲ. ಈಗ ನನ್ನ ಮನದಾಳದ ಸಾಗರ ಪ್ರಶಾಂತವಾಗಿದೆ. ತುಪ್ಪವೇ ಬಂದು ರೊಟ್ಟಿಗೆ ಬಿದ್ದಹಾಗೆ ನೀ ಮೊನ್ನೆ ನನ್ನ Cellಗೆ ಅದೆಲ್ಲಿಂದಲೋ "I am Kamala. how r u ?'' ಎಂಬ ಸಂದೇಶ ಕಳುಹಿಸಿದಾಗ ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ!
ನೀ ಸಿಕ್ಕಿದ್ದು ಕಾಯಿಲೆ ಬಿದ್ದ ಕೋಗಿಲೆಗೆ ಹುಶಾರಾಗಿ ಧ್ವನಿ ಬಂದಹಾಗಿತ್ತು, ನವಿಲಿಗೆ ನರ್ತಿಸಿದ ಖುಷಿ. ಹೆಣ್ಣು ಮಮತಾಮಯಿ, ಅವಳ ಹೃದಯ ಸಾಗರದಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ ಮಮತೆಗಳಿಗೆ ಅಪಾರ ಜಾಗ ಎಂದು ಕೇಳಿದ್ದೆ. ಅದು ಈಗ ಮತ್ತೆ ನಿಜವಾಯಿತು.
ನೀ ಮತ್ತೆ ಸಿಕ್ಕ ಈ ಗಳಿಗೆಯನ್ನು ನಿಜಕ್ಕೂ ನನ್ನಿಂದ ವರ್ಣಿಸಲಾಗುತ್ತಿಲ್ಲ. ನಿನ್ನ ಮಮತೆಗೆ ನಿಜಕ್ಕೂ ಈ ಹೃದಯದ ಗೆಳೆಯನ ಥ್ಯಾಂಕ್ಸ್.