Thursday, July 30, 2009

ಬೇರು ಬಿಡದ ನಾರು ಉದ್ಯಮ...

ರಾಜ್ಯದಲ್ಲಿ ನಾರು ಉದ್ಯಮ ನಲುಗುತ್ತಿದೆ. ನರಳುವಿಕೆಯಲ್ಲೇ ಇದು ಮೇಲೆದ್ದು ನಳನಳಿಸುತ್ತಾ ದೇಶದಲ್ಲಿಯೇ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಆಶ್ಚರ್ಯ ಆಗುತ್ತಿದೆಯೇ? ಹೌದು, ತೆಂಗು ಬೆಳೆಯುವಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ೨ನೇ ಸ್ಥಾನ. ಭಾರತದಲ್ಲಿ ವಾರ್ಷಿಕ ೧೩ ಸಾವಿರ ದಶಲಕ್ಷ ತೆಂಗಿನಕಾಯಿ ಇಳುವರಿ ಬರುತ್ತಿದೆ. ಅದರಲ್ಲಿ ೧,೫೨೫ದಶಲಕ್ಷ ತೆಂಗು ಕರ್ನಾಟಕದಲ್ಲಿ ಬೆಳೆದವು !
ರಾಜ್ಯದ ೩,೮೭,೦೫೨ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇಲ್ಲಿನ ೧೫ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಬೆಳೆಯ ಶೇ.೧೭ರಷ್ಟು ಮಾತ್ರ ತೆಂಗಿನ ಸಿಪ್ಪೆಗಳನ್ನು ನಾರು ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ೪,೨೦೨ ತೆಂಗು ನಾರು ಉತ್ಪನ್ನಗಳ ತಯಾರಿಕಾ ಘಟಕಗಳಿವೆ. ಈ ಘಟಕಗಳಲ್ಲಿ ೨೦ಸಾವಿರ ಪುರುಷ ಹಾಗೂ ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ಇವುಗಳಿಂದ ವಾರ್ಷಿಕ ೨೪ ಸಾವಿರ ಮೆಟ್ರಿಕ್ ಟನ್ ನಾರು ಉತ್ಪಾದಿಸಲಾಗುತ್ತಿದೆ. ಈ ನಾರಿನಲ್ಲಿ ಶೇ.೪೦ ಮಾತ್ರ ‘ರಬ್ಬರೈಸ್ಡ್ ಕಾಯರ್ ಮ್ಯಾಟ್ರೆಸ್ ’ ತಯಾರಿಸಲು ಬೇಕಾಗುವ ಸುರುಳಿ ನಾರಿನ ಹಗ್ಗವನ್ನು ತಯಾರಿಸಲಾಗುತ್ತಿದೆ.
ಉಳಿದದ್ದನ್ನು ಕಾಯರ್ ಮ್ಯಾಟ್ಸ್ , ಮ್ಯಾಟಿಂಗ್ಸ್ , ಜಿಯೋ ಟೆಕ್ಸ್‌ಟೈಲ್ಸ್ , ಕೋಕೋಲಾನ್ ಬ್ರೆಷಸ್ ಮುಂತಾದ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿದೆ. ರಾಜ್ಯ ತೆಂಗು ನಾರಿನ ಸಹಕಾರ ಮಹಾಮಂಡಳಿಯು ಪ್ರತಿ ವರ್ಷ ೧೮ರಿಂದ ೪೦ಲಕ್ಷ ರೂ. ಲಾಭ ಗಳಿಸುತ್ತಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಉಳಿದ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆದರೂ ನಾರು ಉತ್ಪಾದನೆಗೆ ಬೇಕಾದ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಸರಕಾರಕ್ಕಿಲ್ಲ. ಜತೆಗೆ ಖಾಸಗಿಯವರೂ ಇಲ್ಲಿ ಘಟಕಗಳನ್ನು ಸ್ಥಾಪಿಸಲು ಹಿಂದೇಟು ಹಾಕುತ್ತಿದ್ದಾರೆ.
ನೆರೆಯ ಕೇರಳ ಹಾಗೂ ತಮಿಳುನಾಡುಗಳಲ್ಲಿ ತೆಂಗು ನಾರು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿರುವ ಪರಿಣಾಮ ಅವು ದೇಶದಲ್ಲಿಯೇ ಅತಿ ಹೆಚ್ಚು ಉತ್ಪಾದನೆ ಮಾಡುತ್ತಿವೆ. ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿವೆ. ಆ ಮೂಲಕ ಪ್ರಗತಿ ಸಾಸಿವೆ. ಆ ಇಚ್ಛಾಶಕ್ತಿ ನಮ್ಮ ರಾಜ್ಯ ಸರಕಾರಕ್ಕೆ ಏಕಿಲ್ಲ? ಕೃಷಿ, ಕೃಷಿ ಉತ್ಪನ್ನಗಳು, ಅದರ ಉಪ ಕಸುಬುಗಳು ಉದ್ಯಮವಾಗದೆ ರೈತರ ಉದ್ಧಾರ ಅಸಾಧ್ಯ. ಈ ನೀತಿ ಮಾತ್ರ ಸರಕಾರಗಳಿಗೆ ಅರ್ಥವಾಗುತ್ತಲೇ ಇಲ್ಲ.
ರಾಜ್ಯದಲ್ಲಿ ೩೦೨ ಕೇಂದ್ರಗಳಲ್ಲಿ ಈ ನಾರು ಹಾಗೂ ಅವುಗಳ ಉತ್ಪನ್ನಗಳ ತಯಾರಿಕೆ ನಡೆಯುತ್ತಿದೆ. ಆದರೆ ಅವುಗಳ ಜತೆಗೆ ೩,೯೦೦ ಮನೆಗಳಲ್ಲಿ ಗ್ರಾಮೀಣ ಮಹಿಳೆಯರೇ ಇದರಿಂದ ಉದ್ಯೋಗ ಕಂಡುಕೊಂಡಿದ್ದಾರೆ ! ಇದಕ್ಕೆ ಪ್ರೋತ್ಸಾಹ ನೀಡಿದರೆ ಸ್ವಯಂ ಉದ್ಯೋಗದ ಸೃಷ್ಟಿ ಹೆಚ್ಚಾಗುತ್ತದೆ ಎಂಬ ನಿದರ್ಶನ ಕಣ್ಣೆದುರೇ ಇದ್ದರೂ ರಾಜ್ಯ ಸರಕಾರ ಮಾತ್ರ ನಿರ್ಲಕ್ಷ್ಯತೋರುತ್ತಿದೆ. ಇದರಿಂದ ಇಡೀ ಉದ್ಯಮ ನಲುಗುತ್ತಿದೆ.
ರಾಜ್ಯದ ತುಮಕೂರು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೋಲಾರ, ಹಾಸನ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ಆದರೆ ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಇದು ಈ ನಾಡಿನ ದುಸ್ಥಿತಿ.
ರಫ್ತು ಮತ್ತು ಆದಾಯ :
ಭಾರತದಲ್ಲಿ ತೆಂಗು ನಾರನ್ನು ಒಂದು ಉದ್ಯಮವಾಗಿ ರೂಪಿಸಿದ್ದು ೧೯೬೫ರಲ್ಲಿ . ಆನಂತರ ತೆಂಗುನಾರು ತಂತ್ರeನ ಸಂಶೋಧನಾ ಕೇಂದ್ರೀಯ ಸಂಸ್ಥೆಯ ಸ್ಥಾಪನೆಯಾಯಿತು. ಈ ಸಂಸ್ಥೆ ೧೯೭೮ರಲ್ಲಿ ಹಲವೆಡೆ ತರಬೇತಿ ನೀಡಲಾರಂಭಿಸಿತು. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭಿಸಿದಾಗ ಅಂದಿನ ರಾಜ್ಯ ಸರಕಾರ ಪ್ರೋತ್ಸಾಹ ನೀಡಲಿಲ್ಲ.
ಆದರೂ ಭಾರತ ಪ್ರಸ್ತುತ ೬೫೦ ಕೋಟಿ ರೂ. ನಾರು ಉತ್ಪಾದನೆಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ರಫ್ತಿನಲ್ಲೂ ಕೇರಳ ಹಾಗೂ ತಮಿಳುನಾಡುಗಳದ್ದೇ ಮೇಲುಗೈ. ಕೇವಲ ಶೇ.೧೭ರಷ್ಟು ತೆಂಗು ನಾರನ್ನು ಬಳಕೆ ಮಾಡಿಕೊಳ್ಳುತ್ತಿರುವ ಕರ್ನಾಟಕಕ್ಕೆ ೩ನೇ ಸ್ಥಾನ. ಇದರ ನಡುವೆಯೂ ಒರಿಸ್ಸಾದಿಂದ ತೆಂಗು ನಾರಿನ ಕರಕುಶಲ ವಸ್ತುಗಳು ಹೆಚ್ಚು ರಫ್ತಾಗುತ್ತಿವೆ. ಕರ್ನಾಟಕದಿಂದ ಬೆಡ್ ಹಾಗೂ ಕುಷನ್ ವಸ್ತುಗಳು ಹೆಚ್ಚಾಗಿ ಹೊರ ದೇಶಗಳಿಗೆ ಸಾಗಣೆಯಾಗುತ್ತಿವೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಅತ್ಯಂತ ಬೇಡಿಕೆ ಸೃಷ್ಟಿಸಿವೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಕುರ್ಲಾ ಬೆಡ್ ಮತ್ತು ರಸ್ಟೋಲೆಕ್ಸ್‌ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಅರಸೀಕೆರೆ ಹಾಗೂ ತಿಪಟೂರು ನಾರು ಹಗ್ಗ ಹೆಚ್ಚು ಬಲಿಷ್ಠ ಎಂಬುದು ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ. ಇಲ್ಲಿನ ಮ್ಯಾಟ್ರೆಸ್‌ಗೆ ಕೂಡ ಸೌದಿ ಅರೇಬಿಯಾದಲ್ಲಿ ಬೇಡಿಕೆ ಹೆಚ್ಚಾಗಿದೆ. ಆಶ್ಚರ್ಯದ ಅಂಶ ಎಂದರೆ ಬೇಡಿಕೆಗೆ ತಕ್ಕ ಹಾಗೆ ನಾರು ಉತ್ಪನ್ನಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ !
ಇದೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ಅಂಶ ಎಂದರೆ ಮಲೆನಾಡು ಮತ್ತು ಕರಾವಳಿಯ ತೆಂಗು ನಾರು ಹೇಗೆ? ಅದರ ಗುಣಮಟ್ಟ ಎಷ್ಟು ? ಎಂಬುದರ ಬಗ್ಗೆ ಸಂಶೋಧನೆಗಳೇ ಆಗಲಿಲ್ಲ. ಈ ಭಾಗದಲ್ಲಿ ಹೇರಳವಾಗಿ ತೆಂಗು ಬೆಳೆದರೂ ಅದರ ನಾರು ಮಾತ್ರ ವಿನಾಕಾರಣ ಹಾಳಾಗುತ್ತಿದೆ. ಇದರ ನಡುವೆಯೂ ಬೆಂಗಳೂರಿನ ಕೆಂಗೇರಿ, ಮೈಸೂರು ರಸ್ತೆ, ಹೊರ ವಲಯದ ಹೊಸೂರುಗಳಲ್ಲಿ ಫ್ಲೈವುಡ್ ತಯಾರಿಸಲಾಗುತ್ತಿದೆ. ಹೊಸದಾಗಿ ಆವಿಷ್ಕಾರಗೊಂಡ ವಸ್ತುಗಳನ್ನು ತಯಾರಿಸಲು ಸರಕಾರದ ಪ್ರೋತ್ಸಾಹ ಹಾಗೂ ಯುವಜನತೆಯ ಆಸಕ್ತಿ ಬೇಕಿದೆ.
ಮಾರುಕಟ್ಟೆ ವ್ಯವಸ್ಥೆ:
ತೆಂಗು ನಾರು ಬಳಸಿ ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಕೇಂದ್ರ ಸರಕಾರ ದೇಶದ ೩೦ಕ್ಕೂ ಹೆಚ್ಚು ಕಡೆಗಳಲ್ಲಿ ಬೃಹತ್ ಶೋ ರೂಂ ನಿರ್ಮಾಣ ಮಾಡಿದೆ. ಇದರ ಜತೆಗೆ ದೇಶ, ವಿದೇಶಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳಲ್ಲಿ ನಾರು ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲು ಕೂಡ ಮಳಿಗೆ ನಿರ್ಮಿಸುತ್ತದೆ. ಒಂದು ಉದ್ಯಮ ಸಮೃದ್ಧವಾಗಿ ಬೆಳೆಯಲು ಇನ್ನೇನು ಬೇಕು ?
ರಾಜ್ಯದಲ್ಲಿ ಕೂಡ ತೆಂಗು ನಾರು ಸಹಕಾರ ಮಹಾ ಮಂಡಳಿ ೧೮ ಮಾರಾಟ ಮಳಿಗೆಗಳನ್ನು, ೨ ಸಂಚಾರಿ ಮಾರಾಟ ವಾಹನಗಳನ್ನು ಹೊಂದಿದೆ. ಆಗಾಗ ಪ್ರದರ್ಶನವೂ ನಡೆಯುತ್ತದೆ. ಆ ಮೂಲಕವೇ ಮಂಡಳಿ ೨೦೦೪ರಿಂದ ೨೦೦೮ರ ವರೆಗೆ ೭೨೬ ಲಕ್ಷ ರೂ. ವಹಿವಾಟು ನಡೆಸಿದೆ. ಆದರೂ ಬೇರೆ ಉದ್ಯಮದಂತೆ ಇದನ್ನೂ ಸರಕಾರ ಪರಿಗಣಿಸದಿರುವುದರಿಂದ ರಾಜ್ಯದ ಉದ್ಯಮಿಗಳು, ಕಾರ್ಮಿಕರು ಹೀನಾಯ ಸ್ಥಿತಿಯಲ್ಲಿದ್ದಾರೆ. ನೆರೆಯ ರಾಜ್ಯಗಳಲ್ಲಿ ಅವುಗಳಿಂದಲೇ ಅಭಿವೃದ್ಧಿ ಸಾಸಲಾಗುತ್ತಿದೆ. ಆ ಪ್ರe ಇಲ್ಲಿನ ಸರಕಾರಕ್ಕಿಲ್ಲ.
ಈ ಉದ್ಯಮದಲ್ಲಿ ದುಡಿಯುವ ರಾಜ್ಯದ ೨೦ ಸಾವಿರ ಕಾರ್ಮಿಕರಲ್ಲಿ ಶೇ.೭೫ರಷ್ಟು ಮಹಿಳೆಯರಿದ್ದಾರೆ. ಅದಲ್ಲಿ ಶೇ.೯೦ ಗ್ರಾಮೀಣ ಮಹಿಳೆಯರು. ಇದರಿಂದ ಕೇಂದ್ರ ಸರಕಾರ ಮಹಿಳಾ ಕಾಯರ್ ಯೋಜನೆ ಜಾರಿಗೊಳಿಸಿತು. ಕೇರಳ, ಒರಿಸ್ಸಾ, ತಮಿಳು ನಾಡು ಹಾಗೂ ಆಂಧ್ರಪ್ರದೇಶಗಳೇ ಹೆಚ್ಚು ಇದರ ಸದುಪಯೋಗ ಪಡೆದವು. ನಮ್ಮ ಸರಕಾರದ ತಾತ್ಸಾರದಿಂದ ಉದ್ಯಮ ಬೆಳೆಯಲೇ ಇಲ್ಲ. ೨೦೦೩ರಿಂದ ೨೦೦೭ರವರೆಗೆ ಕೇವಲ ೨,೧೮೦ ಮಹಿಳೆಯರು ಮಾತ್ರ ಈ ತರಬೇತಿ ಪಡೆದಿದ್ದಾರೆ. ಮಹಿಳೆಯರಿಗೆ ಕೇರಳ, ತಮಿಳುನಾಡು, ಆಂಧ್ರ ಸರಕಾರಗಳು ಶೇ.೭೫ ಸಬ್ಸಿಡಿ ನೀಡಿ, ಉತ್ತೇಜನ ನೀಡುತ್ತಿವೆ. ಇದರಿಂದ ವಾರ್ಷಿಕ ಹೆಚ್ಚು ಆದಾಯ ಬರುತ್ತಿದೆ. ಆದರೆ ಕರ್ನಾಟಕದಲ್ಲಿ...?
ರಾಜ್ಯ ಸರಕಾರದಿಂದಲೇ ಅನ್ಯಾಯ..!
ಈ ಉದ್ಯಮವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ೮ನೇ ಪಂಚವಾರ್ಷಿಕ ಯೋಜನೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಒರಿಸ್ಸಾ, ಅಸ್ಸಾಂಗಳಲ್ಲಿ ತೆಂಗು ನಾರು ತರಬೇತಿ ಮತ್ತು ಅಭಿವೃದ್ಧಿ ವಿಭಾಗೀಯ ಕಚೇರಿಯನ್ನು ತೆರೆದಿತ್ತು.
ಗ್ರಾಮೀಣ ಮಹಿಳೆಯರು ಹಾಗೂ ಯುವ ಜನರಿಗೆ ಈ ಉದ್ಯಮದ ಬಗ್ಗೆ ಸೂಕ್ತ ತರಬೇತಿ ನೀಡಿ, ಅಗತ್ಯ ಸವಲತ್ತು ನೀಡಿ, ಉದ್ಯಮವನ್ನು ಬೆಳೆಸುವುದು ಅದರ ಉದ್ದೇಶವಾಗಿತ್ತು. ರಾಜ್ಯದಲ್ಲಿ ಅರಸೀಕೆರೆಯಲ್ಲಿ ಕಚೇರಿ ತೆರೆಯಲಾಗಿತ್ತು. ತರಬೇತಿ ಹಾಗೂ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿತ್ತು. ಇದಕ್ಕಾಗಿ ಕೇಂದ್ರ ಸರಕಾರದ ಹಣದಲ್ಲಿ ಒಂದು ಸುಸಜ್ಜಿತ ಕಟ್ಟಡವನ್ನೂ ಕಟ್ಟಲಾಗಿತ್ತು.
ಅಲ್ಲಿ ಮೂರು ತಿಂಗಳ ತರಬೇತಿ ಕೋರ್ಸ್ ಆರಂಭಿಸಲಾಗಿತ್ತು. ಆ ಸಮಯದಲ್ಲಿ ತರಬೇತಿ ಪಡೆದವರು ಇಂದಿಗೂ ತೆಂಗು ನಾರು ಉದ್ಯಮವನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ. ಕೆಲವು ವರ್ಷಗಳವರೆಗೆ ಎಲ್ಲ ವಿಭಾಗೀಯ ಕಚೇರಿ ಹೊಣೆಯನ್ನು ಕೇಂದ್ರ ಸರಕಾರವೇ ಹೊತ್ತುಕೊಂಡಿತ್ತು. ಅವು ಸರಾಗವಾಗಿ ನಡೆಯುತ್ತವೆ ಎಂಬ ನಂಬಿಕೆ ಬಂದ ನಂತರ ಅವುಗಳನ್ನು ೧೦ನೇ ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ಆಯಾ ರಾಜ್ಯ ಸರಕಾರಗಳಿಗೆ ವಹಿಸಲಾಯಿತು. ಅಂದು ಅಕಾರದಲ್ಲಿದ್ದ ಸರಕಾರ ತೀವ್ರ ನಿರ್ಲಕ್ಷ್ಯವಹಿಸಿತು. ಇದರಿಂದಾಗಿ ಅರಸೀಕೆರೆಯ ಕಚೇರಿಯನ್ನು ಮುಚ್ಚಬೇಕಾಯಿತು !
ರಾಜ್ಯದಲ್ಲಿ ತೆಂಗು ನಾರು ಉದ್ಯಮ ಹಿಂದೆ ಬೀಳಲು ಮತ್ತೊಂದು ಪ್ರಮುಖ ಕಾರಣ ವಿದ್ಯುತ್. ರಾಜ್ಯದಲ್ಲಿ ೧೨೬.೭೩ ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ೭.೭೬ ದಶಲಕ್ಷ ಯೂನಿಟ್ ವಿದ್ಯುತ್ ಕೊರತೆಯಿದೆ. ಇದರಿಂದ ಸರಕಾರ ತೆಂಗುನಾರು ಉದ್ಯಮಕ್ಕೆ ವಿದ್ಯುತ್ ನೀಡುವುದಾದರೂ ಎಲ್ಲಿಂದ? ಉದ್ಯಮ ಸ್ಥಾಪಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳಲ್ಲಿ ಆ ಸರಕಾರಗಳು ವಿದ್ಯುತ್ ಸಬ್ಸಿಡಿ ನೀಡುತ್ತವೆ . ನಮ್ಮಲ್ಲಿ ಅದ್ಯಾವ ಸವಲತ್ತೂ ಇಲ್ಲ. ಈ ಕಾರಣದಿಂದಲೂ ಉದ್ಯಮದಲ್ಲಿ ತೊಡಗಿಕೊಳ್ಳಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರಕಾರ ಈ ವಿದ್ಯುತ್ ಕೊರತೆಯನ್ನು ನೀಗಿಸಿಕೊಂಡು, ಉದ್ಯಮಕ್ಕೆ ಪ್ರೋತ್ಸಾಹ ನೀಡಿದರೆ ಗ್ರಾಮೀಣ ಜನರ ಬದುಕು ಹಸನಾಗುತ್ತದೆ. ಜತೆಗೆ ರಾಜ್ಯಕ್ಕೂ ಹೆಚ್ಚು ಆದಾಯ ಹರಿದು ಬರುತ್ತದೆ.

ತೆಂಗು ನಾರಿನಲ್ಲಿ ಹೊಸ ಆವಿಷ್ಕಾರ !
*ಬೆಡ್, ಮ್ಯಾಟ್, ಹಗ್ಗ, ಸೇರಿದಂತೆ ಕುಷನ್ ವಸ್ತುಗಳು, ಗೊಬ್ಬರ ( ಕರ್ನಾಟಕ). *ಬೊಂಬೆ, ಜೋಕಾಲಿ, ಗಡಿಯಾರ, ಕರಕುಶಲ ವಸ್ತುಗಳು (ಒರಿಸ್ಸಾ) . * ಪಿತ್ ( ಪುಡಿ ನಾರು), ಕತ್ತ , ಹಗ್ಗ, ಮ್ಯಾಟ್ (ಅಲಂಕಾರಿಕ) ಮತ್ತಿತರ ತರಹೇವಾರಿ ವಸ್ತುಗಳು (ಕೇರಳ, ತಮಿಳುನಾಡು, ಆಂಧ್ರ ,ಅಸ್ಸಾಂ ). * ಊಟದ ತಟ್ಟೆ , ಲೋಟ, ಮಡಿಕೆ, ಅಲಂಕಾರಿಕ ಪಾಟ್, ಗ್ರೀನ್ ಹೌಸ್, ಟೈಲ್ಸ್ ,ಕುರ್ಚಿ, ಮೇಜು, ಟೇಬಲ್, ಮಂಚ ,ಕಿಟಕಿ , ಬಾಗಿಲು, ಪ್ಲೇ ವುಡ್ ಮುಂತಾದ ಗಟ್ಟಿ ವಸ್ತುಗಳು ( ಕರ್ನಾಟಕದ ಹೊಸ ಆವಿಷ್ಕಾರಗಳು)

ಒಂದು ತೆಂಗಿನ ಸಿಪ್ಪೆಗೆ ಎಲ್ಲೆಲ್ಲಿ ಎಷ್ಟು ದರ ?
ರಾಜ್ಯಗಳು ದರ
* ಕರ್ನಾಟಕ ೧.೫೦ರೂ. * ತಮಿಳುನಾಡು ೧.೦೦ರೂ.ನಿಂದ ೨.೦೦ರೂ. * ಕೇರಳ ೧.೫೦ ರೂ.ನಿಂದ ೨.೫೦ ರೂ. * ಆಂಧ್ರಪ್ರದೇಶ ೧.೦೦ರೂ. ನಿಂದ ೨.೦೦ರೂ. * ಓರಿಸ್ಸಾ ೨.೦೦ ರೂ.