Wednesday, September 10, 2014

ಮೇಷ್ಟ್ರು ಇಲ್ಲದೆ ಹೋಗಿದ್ದರೆ ವೈಚಾರಿಕತೆಯೇ ಇರುತಿರಲಿಲ್ಲ...

ಪುಸ್ತಕಗಳ ರಾಶಿಯೊಂದಿಗೆ ಅನಂತಮೂರ್ತಿ
 ನಮ್ಮ ಮೇಷ್ಟ್ರು ಪಾಠ ನಿಲ್ಲಿಸಿಬಿಟ್ಟರು, ಅವರು ನಮ್ಮನ್ನು ಅಗಲಿ ದೂರವಾದರು. ಆದರೆ ಅವರು ಈ ಜಗತ್ತಿಗೆ ಬೆಳಕು ನೀಡುವ ಜೋತಿಯಾಗಿದ್ದು ನಿಜ. ಬೆಂಕಿಗೆ ಸುಡುವ ಹಾಗೂ ಬೆಳಕು ನೀಡಿ ಕಾಯುವ ಎರಡೂ ಶಕ್ತಿ ಇರುತ್ತದೆ. ಅದೇ ರೀತಿ ಯು.ಆರ್. ಅನಂತಮೂರ್ತಿ ಕೂಡ. ಅವರು ಹಚ್ಚಿದ ಅದೆಷ್ಟೋ ಜೋತಿಗಳು ಈಗ ಜಗತ್ತಿನ ತುಂಬ ಬೆಳಗುತ್ತ ಬೆಳಕು ನೀಡುತ್ತಿವೆ. ನಾವು ನಂಬುವ ಆ ದೇವರು ಕೂಡ ಪರಿಪೂರ್ಣ ಅಲ್ಲ ಎನ್ನುವುದನ್ನು ಪುರಾಣಗಳೇ ಹೇಳುತ್ತವೆ. ಅಲ್ಲೂ ಪರ ವಿರೋಧಗಳು ರಕ್ಷಿಸುವ ಹಾಗೂ ರಾಕ್ಷಸ ಎರಡೂ ಗುಣಗಳಿದ್ದವು ಎನ್ನುವುದು ಸತ್ಯ. ಹೀಗಿರುವಾಗ ನೇರ, ನಿಷ್ಟುರ, ದೂರದೃಷ್ಟಿಯ ಮಾತುಗಳನ್ನು ವಿಚಾರಪೂರ್ಣವಾಗಿ ಆಡುತ್ತ ಸಾವಿರ ಸಾವಿರಗಟ್ಟಲೆ ಯುವ ಪ್ರತಿಬೆಗಳಿಗೆ ಸ್ಫೂರ್ತಿಯೆಂಬ ಎಣ್ಣೆ ಎರೆದು ಬೆಳೆಸಿ ಅವರೂ ನನ್ನಂತೆಯೇ ಜ್ಯೋತಿಯಾಗಿ ಬೆಳಗಲಿ ಎಂದು ಪ್ರೇರಿಪಿಸಿದವರು ಮೇಷ್ಟ್ರು. ಆದರೆ ಇಂಥ ಸಂದರ್ಭದಲ್ಲಿ ಬಹಳ ಪೂರ್ವಾಪರವಾಗಿ ಚಿಂತನೆ ನಡೆಸಿ ಯಾವುದೇ ವಿಚಾರದ ಬಗ್ಗೆಯಾದರೂ ಮಾತನಾಡುತ್ತಿದ್ದ ಅನಂತ ಮೂರ್ತಿಯವರು ತಮ್ಮ ಉಸಿರು ನಿಲ್ಲುವ ಕೊನೆಯ ಗಳಿಗೆಯ ವರೆಗೂ ತಮ್ಮತನವನ್ನು ಬಿಟ್ಟುಕೊಡದೆ ತಾವು ನಂಬಿದ ಸಿದ್ಧಾಂತದ ಅಡಿಯಲ್ಲೇ ಎಲ್ಲವನ್ನೂ ನೋಡುತ್ತ ಬಂದವರು. ಹೀಗಾಗಿ ಅನಂತ ಮೂರ್ತಿಯವರಿಗೆ ಅನಂತಮೂರ್ತಿಯೇ ಸಾಟಿ.
ಅನಂತಮೂರ್ತಿ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕೆಲವು ವಿಕೃತ ಮನಸ್ಸುಗಳು ಅಲ್ಲಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಉರಿವ ಮನೆಯ ಗಳ ಹರಿದು ಕೇಕೆ ಹಾಕಿದರು. ಇನ್ನು ಕೆಲವರು ಅದೆಲ್ಲವನ್ನೂ ಸವಿಸ್ಥಾರವಾಗಿ ವರದಿ ಮಾಡುವ ಮಾದ್ಯಮಗಳ ವಿರುದ್ಧವೂ ಮಾತನಾಡಿ "ಸಾವಿನ ಮನೆಯಲ್ಲಿ ಮಾದ್ಯಮಗಳ ಸಂಭ್ರಮ" ಎಂದು ಗೇಲಿ ಮಾಡಿದರು. ಈ ಎರಡೂ ಮನೋಸ್ಥಿತಿಗಳೂ ಒಂದೆ. ಅಂದರೆ ಅನಂತ ಚೇತನವಾಗಿದ್ದ ಅನಂತಮೂರ್ತಿ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಅದನ್ನು ವರದಿಯನ್ನೂ ಮಾಡದೆ ಅಲ್ಲಿಗೆ ತಣ್ಣಗೆ ಆ ಸುದ್ದಿಯನ್ನು ಮಲಗಿಸಿದ್ದರೆ ಅಂಥ ಮನಸ್ಸುಗಳಿಗೆ ಬಹುಶಃ ಹಾಲುಕುಡಿದ ಸಂತಸವಾಗುತ್ತಿತ್ತೇನೋ? ಈ ಸಮಾಜದಲ್ಲಿ ಸಾಧನೆಗೆ ಹಲವು ದಾರಿಗಳಿವೆ. ಒಂದೊಂದು ಸಾಧನೆಯ ಹಾದಿಯಲ್ಲಿ ಒಬ್ಬೊಬ್ಬರು ಅವರ ಆಸಕ್ತಿಗೆ ಅನುಗುಣವಾಗಿ ಸಾಗುತ್ತಾರೆ. ಅಂಥ ಧೀಮಂತ ಸಾಧಕರು ಕಾಲದೊಡನೆ ಲೀನವಾದಾಗ ಅವರ ಇಡೀ ಬದುಕು, ಸಾಮಾಜಿಕ ಜೀವನ, ಅವರಿಲ್ಲದೆ ಹೋದಾಗ ಆ ಕುಟುಂಬದ ಅಥವಾ ಮನೆಯ ಪರಿಸ್ಥಿತಿಯನ್ನು ಸವಿವರವಾಗಿ ಈ ನಾಡಿನ ಜನತೆಗೆ ಅಥವಾ ಅವರನ್ನು ಒಪ್ಪಿ, ಮಾನಸಿಕವಾಗಿ ಅಪ್ಪಿಕೊಂಡಿರುವ ಸಮಾಜದ ಎಲ್ಲ ಸ್ಥರದ ಜನರಿಗೆ ತಿಳಿಸುವುದು ಮಾದ್ಯಮಗಳ ಜವಾಬ್ದಾರಿ; ಅದು ಮುದ್ರಣ, ದೃಶ್ಯ ಅಥವಾ ಈಗ ಜನಪ್ರಿಯವಾಗುತ್ತಿರುವ ಆನ್ ಲೈನ್ ಮಾದ್ಯಮದಗಳಿರಬಹುದು. ಆದರೆ ನರೇಂದ್ರ ಮೋದಿ ಅವರ ಬಗ್ಗೆ ಒಂದು ಮಾತು ಹೇಳಿದರು ಎನ್ನುವ ಒಂದೇ ಕಾರಣಕ್ಕೆ ಯಾವುದರ ಅರಿವೂ ಇಲ್ಲದೆ ಕೇವಲ ಅನಂತಮೂರ್ತಿಗಳು ಹೇಳಿದ ಒಂದು ಮಾತನ್ನೇ ಇಟ್ಟುಕೊಂಡು ಅವರ ಸಾವು ಕೇಳಿ ಕೇಕೆ ಹಾಕುವುದು. ಸಾವಿನ ಸುದ್ದಿಯನ್ನು ಮನೆ ಮನೆಗೆ ಮುಟ್ಟಿಸಿ ಕನ್ನಡ ನಾಡಿನ ಜನ ಕಂಬನಿ ಮಿಡಿಯುವಂತೆ ಮಾಡಿದ ಮಾದ್ಯಮಗಳ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಇತರ ದಾರಿಗಳಲ್ಲಿ ಇಲ್ಲಸಲ್ಲದ ರೀತಿಯಲ್ಲಿ ಬಾಯಿಗೆ ಬಂದಂತೆ ಹರಟುವುದು ನಿಜಕ್ಕೂ ಸಹೃದಯರು ಮಾಡುವಂಥ ಕೆಲಸವೆ?
ಅನಂತ ಚೇತನಕೆ ಅಂಬರೀಶ್ ಅಂತಿಮ ನಮನ
ಈ ಪ್ರಶ್ನೆಯನ್ನು ನಾನು ಕೇಳಲೇ ಬೇಕಿದೆ. ಯಾಕೆಂದರೆ ಕಳೆದ ಬಾರಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ನವರು ನಿಧನರಾದಾಗ ಆಗಲೂ ಕೆಲವು ಕಿಡಿಗೇಡಿಗಳು ಸದ್ದಿಲ್ಲದೆ ಊಹಾಪೋಹ ಹರಡಿಸಿದ್ದರು. ಜೊತೆಗೆ ಇದೇ ರೀತಿ ಮಾದ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಿದ್ದೂ ಉಂಟು. ಆದರೆ ಮಾದ್ಯಮಗಳು ಎಲ್ಲವನ್ನೂ ಸೆರೆ ಹಿಡಿಯುವಾಗ ಆತುರದಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳಾಗಬಹುದು. ಆದರೆ ಅದನ್ನೇ ಮುಂದಿಟ್ಟುಕೊಂಡು ಇಂಥ ಸೂತಕದ ಸಂದರ್ಭದಲ್ಲೂ ಸಮಯಸಾಧಕತೆಯನ್ನು ಮೆರೆಯುವುದು ಇದೆಯಲ್ಲ ಇದು ಎಂಥವರನ್ನೂ ಕೆಣಕುತ್ತದೆ. ಈ ಬಾರಿ ಮಾದ್ಯಮಗಳ ಕಡೆಯಿಂದ ಯಾವೊಂದು ತಪ್ಪೂ ಆಗಬಾರದು ಎಂಬ ಕಾರಣಕ್ಕಾಗಿ ಸ್ವತಃ ನಾನೇ ಮುಂದೆ ನಿಂತು ಬೆಂಗಳೂರಿನ ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾದ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್, ಹಿರಿಯ ರಂಗ ಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರ ಜೊತೆ ಖುದ್ದಾಗಿ ಮಾತುಕತೆ ನಡೆಸಿ ಮಾದ್ಯಮಗಳಿಗೆ ಹಾಗೂ ಅಲ್ಲಿ ಬರುವ ಗಣ್ಯರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಜೊತೆಗೆ ಎಲ್ಲರೂ ಮಾದ್ಯಮಗಳಿಗೆ ಪ್ರತಿಕ್ರಯಿಸುವ ರೀತಿ ವ್ಯವಸ್ಥೆ ಮಾಡಿದೆ. ನಿಜಕ್ಕೂ ಅದಕ್ಕೆ ಸ್ಪಂದಿಸಿದ ಎಲ್ಲ ಮಾದ್ಯಮದ ಸ್ನೇಹಿತರಿಗೆ (ಮುದ್ರಣ ಹಾಗು ದೃಶ್ಯ ಎರಡೂ) ಧನ್ಯವಾದಗಳು. ಯಾಕೆಂದರೆ ಯಾರೊಬ್ಬರೂ ಕಿಂಚಿತ್ತೂ ಆತರು ಬೀಳಲಿಲ್ಲ. ಇಂಥ ಸಂದರ್ಭದಲ್ಲೂ ಮಾದ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಕೆಲವರು ಮಾಡಿದರು!
ಬಹುಶಃ ಅನಂತಮೂರ್ತಿ ಅವರ ಪಾರ್ಥಿವ ಶರೀರವನ್ನು ಮನೆಯಿಂದ ಹೊರತಂದಾಗಿನಿಂದ ಹಿಡಿದು ಅಂತ್ಯಕ್ರಿಯೆ ನಡೆಯುವ ವರೆಗೆ ಪ್ರತಿ ಗಳಿಗೆಯನ್ನೂ ಈ ಟಿವಿ ಹಾಗೂ ಇತರ ಎಲ್ಲ ಮಾದ್ಯಮಗಳೂ ನೇರ ಪ್ರಸಾರ ಮಾಡಿದವು. ಇದು ನಿಜಕ್ಕೂ ಒಬ್ಬ ಹೆಸರಾಂತ ಹಾಗೂ ನಾಡಿನ ಶ್ರೇಷ್ಟ ಸಾಹಿತಿಗೆ ಮಾದ್ಯಮಗಳು ನೀಡಬೇಕಾದ ಗೌರವ. ಇದನ್ನು ಎಲ್ಲ ಮಾದ್ಯಮಗಳೂ ಮಾಡಿದವು. ಇದನ್ನು ಕೆಲವರಿಗೆ ಸಹಿಸಲಾಗಲಿಲ್ಲವೇನೋ? ಇನ್ನು ಕೆಲವರು ಮಾದ್ಯಮಗಳು ಹಾಗೂ ಸಾಮಾಜಿಕ ಜಾಲ ತಾಣ ಜೊತೆಗೆ ಅದರಾಚೆಗೆ ಅನಂತಮೂರ್ತಿಗಳನ್ನು ಯಾವ್ಯಾವುದೋ ಕಾರಣಗಳನ್ನಿಟ್ಟುಕೊಂಡು ಟೀಕೆ ಮಾಡಿದವು. ಅನಂತಮೂರ್ತಿಗಳು ಒಬ್ಬ ಮೂರ್ತಿಬಂಜಕರು ನಿಜ. ಅವರು ಎಲ್ಲ ಗೊಡ್ಡು ಸಂಪ್ರದಾಯಗಳನ್ನು ಮುರಿದು ಬಿಸಾಡಿ ಹೊಸ "ಸಂಸ್ಕಾರ"ವನ್ನು ಕಟ್ಟಿಬೆಳೆಸಿದರು. ಆ ಕಾರಣಕ್ಕಾಗಿಯೇ ಅವರ ಕುಟುಂಬ ವರ್ಗದ ಜೊತೆಗೆ ಸರ್ಕಾರ ನೇರವಾಗಿ ತಡವಾದರೂ ನಿದಾನವಾಗಿ ಮುಂದೆ ನಿಂತು ಮಾತುಕತೆ ನಡೆಸಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಸಂಪ್ರದಾಯದಂತೆ ಪ್ರಾರ್ಥನೆಗಳನ್ನು ಹಾಡಿಸಿ, ಜೊತೆಗೆ ಭಾವಗೀತೆಗಳನ್ನು ಹಾಡಿಸಿ ಅವರಿಗೆ ಅರ್ಥಪೂರ್ಣವಾಗಿ ಗೌರವನಮನ ಸಲ್ಲಿಸಲಾಯಿತು. ಜಾತಿ, ಮತ ಪಂಥಗಳನ್ನು ಮೀರಿ ಬೆಳೆದು, ಇಡೀ ಸಮಾಜವನ್ನೂ ಕಟ್ಟಿ ಬೆಳೆಸಿದ ಒಬ್ಬ ಮೇರು ಸಾಧಕನಿಗೆ ಇದಕ್ಕಿಂತ ದೊಡ್ಡ ನಮನ ಬೇಕಾ? ಅವರನ್ನು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದೂ ತಪ್ಪಾ? ಮೆಲ್ವರ್ಗದ ಅದರಲ್ಲೂ ಕಟ್ಟಾ ಸಂಪ್ರದಾಯ ಕುಟುಂಬದಿಂದ ಬೆಳೆದು ಬಂದ ಹುಡುಗ ಈ ನಾಡೇ ಮೆಚ್ಚುವ ಹಾಗೆ ಬೆಳೆದು ನಿಂತು ಹೆಮ್ಮರವಾಗಿ ಇಡೀ ಮಾನವ ಸಮೂಹಕ್ಕೇ ತಾತ್ವಿಕ ನೆಲೆಯ ನೆರಳಾಗಿ ಬೆಳೆದವಗೆ ಇನ್ಯಾವ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡಬೇಕಿತ್ತು?
ಅನಂತಮೂರ್ತಿ ಅವರು ನನಗೆ ನೇರವಾಗಿ ಪಾಠ ಮಾಡದೇ ಇರಬಹುದು. ಆದರೆ ನಿಜಬದುಕಿನಲ್ಲಿ ಅವರು ನನಗೆ ಸಾಕಷ್ಟು ಕಲಿಸಿದ್ದಾರೆ. ಅವರಿಂದ ಕಲಿತದ್ದು ಲೆಕ್ಕವಿಲ್ಲ. ಈ ನಾಡಿಗೆ ಅವರಿಲ್ಲದೆ ಎಷ್ಟು ನಷ್ಟವಾಗಿದೆಯೋ ಅದಕ್ಕಿಂತ ಹೆಚ್ಚು ವಯಕ್ತಿಕವಾಗಿ ನನಗೆ ನಷ್ಟವಾಗಿದೆ. ಶೀಘ್ರದಲ್ಲಿ ಬರಲಿರುವ ನನ್ನ ಪುಸ್ತಕದ  ಕರುಡು ಒಯ್ದು ಇತ್ತೀಚೆಗಷ್ಟೇ ತೋರಿಸಿದ್ದೆ. ಆಗ ಕಣ್ಣಾಡಿಸಿ "ಕವಿತೆಗಳು ತುಂಬಾ ಚೆನ್ನಾಗಿವೆ. ಯುವಕರು ಏನೇನೋ ಬರೆಯುವುದಕ್ಕಿಂತ ಸಮಾಜಪರ ಕಾಳಜಿಯ  ವಿಷಯಗಳನ್ನು ಎತ್ತಿಕೊಂಡು ಬರೀಬೇಕು. ಆ ಬಗೆಯ ವಿಚಾರ ನಿನ್ನ ಕವಿತೆಗಳಲ್ಲಿದೆ. ಕೆಳಸ್ತರದಿಂದ ಬಂದು ನೋವು ನಲಿವನ್ನು ಉಂಡವನಿಗೆ ಮಾತ್ರ ಇಂಥ ವಿಷಯಗಳನ್ನು ಇಟ್ಟುಕೊಂಡು ಕವಿತೆ ಹೆಣೆಯಲು ಸಾಧ್ಯ. ಆ ಕೆಲಸವನ್ನು ಅಚ್ಚುಟ್ಟಾಗಿ ಮಾಡಿದ್ದೀಯ, ಇನ್ನಷ್ಟು ತಿದ್ದು. ಬರವಣಿಗೆ ನಿಲ್ಲಿಸಬೇಡ. ಬರವಣಿಗೆಯಿಂದ ಜಗತ್ತು ಉದ್ದಾರ ಆಗುತ್ತೆ ಅನ್ನೋ ಭ್ರಮೆ ಬೇಡ. ಆದರೆ ತಾಳ್ಮೆ, ಸಂಯಮ ಇದ್ದರೆ ಸಾಹಿತ್ಯದಿಂದ ಬದಲಾವಣೆ ಕಂಡಿತಾ ಸಾಧ್ಯ. ಹಾಗಾಗಿ ತಳ ಸಮುದಾಯ, ಜನಪರವಾದ ಕಾಳಜಿ ನಮ್ಮಿಂದ ದೂರಾಗಬಾರದು. ಇದನ್ನು ಸಂಪೂರ್ಣವಾಗಿ ತಿದ್ದಿ ತಂದುಕೊಡು ನಾನೊಂದು ಚಿಕ್ಕದಾಗಿ ಮುನ್ನುಡಿ ಅಥವಾ ಬೆನ್ನುಡಿ ಬರೆದುಕೊಡುತ್ತೇನೆ" ಎಂದು ಹೇಳಿದ್ದರು. ಜೊತೆಗೆ ನಾನು ಬರೆದ "ಸತ್ಯಕ್ಕ - ಕಾಯಕಕ್ಕೆ ಮತ್ತೊಂದು ಹೆಸರು" ಕೃತಿ ಬಗ್ಗೆ ಮೆಚ್ಚಿಕೊಂಡು "ಇಂಥ ಹಿಂದುಳಿದ ಕಾಯಕ ಯೋಗಿಗಳು ವಚನಸಾಹಿತ್ಯದ ಕಾಲಘಟ್ಟದಲ್ಲಿ ಸಾಕಷ್ಟು ಮಂದಿ ಇದ್ದರು. ಅಂಥ ಎಲ್ಲರ ಬಗ್ಗೆಯೂ ಅಧ್ಯಯನ ಅಗತ್ಯ. ಕನಿಷ್ಟಪಕ್ಷ ನಿನ್ನಿಂದಲಾದರೂ ಸತ್ಯಕ್ಕನ ಬಗ್ಗೆ ಜನರಿಗೆ ತಿಳಿಯುವಂತಾಯಿತಲ್ಲ. ಗುಡ್" ಎಂದು  ಬೆನ್ನು ತಟ್ಟಿ ಕಳುಹಿಸಿದ್ದರು. ಆದರೆ ಈಗ ನನ್ನ ಮುಂದಿನ ಪುಸ್ತಕ ತಿದ್ದಲು ಅವರಿಲ್ಲ. ಮೇಷ್ಟ್ರು ಅದೆಷ್ಟೋ ಯುವಕರಿಗೆ ಬೆನ್ನು ತಟ್ಟಿ ಬೆಳೆಸಿ ಮುನ್ನುಡಿ ಬರೆದುಕೊಟ್ಟರು. ಸಾಲದ್ದಕ್ಕೆ ಅನೇಕ ಯುವಕರಿಂದಲೂ ತಮ್ಮ ಪುಸ್ತಕಕ್ಕೆ ಮುನ್ನುಡಿ ಬರೆಸಿದ್ದರು! ಆದರೆ ಅವರಿಂದ ಮುನ್ನುಡಿ ಬರೆಸಿಕೊಳ್ಳುವ ಸೌಭಾಗ್ಯದಿಂದ ನಾನು ವಂಚಿತನಾಗಿದ್ದೇನೆ. ಅವರಿದ್ದಿದ್ದರೆ ನನ್ನ ಬರವಣಿಗೆಯನ್ನು ಇನ್ನಷ್ಟು ಮೊನಚುಗೊಳಿಸುತ್ತಿದ್ದರು. ಆದ್ದರಿಂದಲೇ ವಯಕ್ತಿಕವಾಗಿ ನನಗೆ ತುಂಬಾ ನಷ್ಟವಾಯಿತು ಎಂದು ಹೇಳಿದ್ದು.
ನಿಜ ಅನಂತಮೂರ್ತಿಗಳು ಕೊನೆಯ ದಿನಗಳಲ್ಲಿ ಅವರ ದೇಹವನ್ನು ದಾನ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಖಾಯಿಲೆ ಅವರನ್ನು ಆವರಿಸಿದ್ದರಿಂದ ಅವರ ಆ ಕೊನೆಯ ಆಸೆ ಈಡೇರಲಿಲ್ಲ. ಹಾಗೆಂದ ಮಾತ್ರಕ್ಕೆಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಪ್ರಾರ್ಥನೆ ಮಾಡಿಸಿದ್ದು ತಪ್ಪಾ? ಭಾವಗೀತೆಗಳ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದು ತಪ್ಪಾ? ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಿದ್ದು ತಪ್ಪಾ? ಬದುಕಿದ್ದಾಗಲಂತೂ ಅವರು ಪುರೋಹಿತರನ್ನು ಹತ್ತಿರಬಿಡಲಿಲ್ಲ. ಕೊನೆಗಳಿಗೆಯಲ್ಲಾದರೂ ಅವರನ್ನು ಸೋಕಿ ಪುನೀತರಾಗುವ ಅವಕಾಶ ಪುರೋಹಿತರಿಗೆ ಸಿಕ್ಕಿತಲ್ಲ. ಅದಕ್ಕಿಂತ ಬೇರೆ ಬಗೆಯ ಚಿಂತನೆ ಬೇಕಾ? ಮೇಷ್ಟ್ರು ಎಂದೂ ಯಾವುದೇ ವಿಚಾರವನ್ನು ಪಟ್ಟು ಹಿಡಿದು ವಿರೋಧಿಸಿದವರಲ್ಲ, ಹಾಗಂಥ ತಾವು ಹೇಳಲೇಬೇಕಾದ ವಿಚಾರವನ್ನು ಮುಚ್ಚಿಟ್ಟು ತೇಲಿಸಿದವರೂ ಅಲ್ಲ. ನೇರವಾಗಿ, ನಿಷ್ಠುರವಾಗಿ, ಕಟುವಾಗಿ, ಸ್ಪುಟವಾಗಿ ಹೇಳಿದವರು. ಅದು ಅವರ ಗುಣ. ಬೇರೆಯವರಿಗೆ ಅಂಥ ಗುಣ ಬರಲು ಸಾಧ್ಯವೇ ಇಲ್ಲ. ಕರ್ನಾಟಕದ ಜನ ಸುಸಂಸ್ಕೃತರು, ಸಜ್ಜನರು. ಸಹಿಷ್ಣುಗಳು ಎನ್ನುವ ಮಾತಿದೆ. ಆದರೆ ಅನಂತಮೂರ್ತಿಯವರು ರಾಜಕೀಯ ನೆಲೆಯಲ್ಲಿ ಮೋದಿಯನ್ನು ಟೀಕಿಸಿದರು ಎನ್ನುವ ಒಂದೇ ಒಂದು ವಿಚಾರವನ್ನು ಅವರು ತೀರಿಕೊಂಡಾಗಲೂ ಸಹಿಸಲಾಗದೆ ಹೋದರೆ ಕನ್ನಡಿಗರು ಸಹಿಷ್ಟುತೆಗೆ ಹೆಸರಾದವರು ಎನ್ನುವ ಮಾತಿಗೆ ಅರ್ಥವೆಲ್ಲಿ?
ಮೇಷ್ಟ್ರು ಕೇವಲ ಸಾಹಿತ್ಯ ಮಾತ್ರವಲ್ಲ, ರಂಗ, ಚಿತ್ರರಂಗ, ರಾಜಕೀಯ, ಸಾಮಾಜಿಕ, ಚಳವಳಿಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡವರು. ಆದರೆ ಚಲನ ಚಿತ್ರರಂಗದ ಕೆಲವು ಹಿರಿಯ ನಟ, ನಟಿಯರನ್ನು ಹೊರತುಪಡಿಸಿದರೆ ಇತ್ತೀಚೆಗೆ ಬೆಳೆದು ನಿಂತ ಯಾವೊಬ್ಬ ಹೆಸರಾಂತ ನಟ-ನಟಿಯರೂ ಅವರ ಅಂತಿಮ ದರ್ಶನ ಪಡೆಯಲು ಬರಲಿಲ್ಲ! ಇವರಿಗೆ ಅನಂತಮೂರ್ತಿಗಳು ಏನು ಮಾಡಿದ್ದರು? ನಿಜಕ್ಕೂ ಈ ನಾಡು, ನುಡಿ, ಭಾಷೆಯ ಬಗ್ಗೆ ಇವರಿಗೆ ಕಾಳಜಿ ಇದೆಯಾ? ಈ ಕಾರಣಕ್ಕೇ ಹಿಂದೆ ಕರವೇ ಅಧ್ಯಕ್ಷ ನಾರಾಯಣಗೌಡರು ಬೆಳಗಾವಿ ವಿಚಾರದಲ್ಲಿ ಗಲಾಟೆಯಾದಾಗ "ಸಿನಿಮಾ ನಟ-ನಟಿಯರಿಗೆ ಇಲ್ಲಿನ ಜನರ ಪ್ರೀತಿ ಬೇಕು, ಅವರು ದುಡಿದು ಸಂಪಾದಿಸಿದ ಹಣ ಬೇಕು. ಅವರಿಂದಲೇ ಬೆಳೆದ ಇವರಿಗೆ ಇಲ್ಲಿನ ನೆಲ, ಜಲ, ಭಾಷೆ ಬೇಕಿಲ್ಲ" ಎಂದಿದ್ದರು. ಅದು ನಿಜ ಎನಿಸುತ್ತದೆ.
ಲೋಹಿಯಾ, ಮಾವೋ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಅವರನ್ನು, ಅವರ ಚಿಂತನೆಗಳನ್ನು ಆಳವಾಗಿ ಅರಗಿಸಿಕೊಂಡು ಬೆಳೆದ ಅನಂತಮೂರ್ತಿಗಳು ಕೊನೆಗಾಲದ ವರೆಗೆ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡವರಲ್ಲ. ನಿಜ ಹೇಳಬೇಕೆಂದರೆ ತಾತ್ವಿಕ ಕಾರಣಗಳಿಗಾಗಿಯೇ ಅವರು ತಮಗೆ ಬಂದ ಅದೆಷ್ಟೋ ಅವಕಾಶಗಳನ್ನೂ ತಿರಸ್ಕರಿಸಿದ್ದಾರೆ ಎಂಬುದನ್ನು ನಾನು ಕೆಲವು ಹಿರಿಯರು, ಅವರ ಆಪ್ತ ಸ್ನೇಹಿತರಿಂದ ತಿಳಿದಿದ್ದೇನೆ. ಅಂಥವರಿಗೆ ಸಾವು ಬಂದಾಗಲೂ ಸಂಭ್ರಮಿಸುವುದು, ಅವರ ಸಾವಿನ ಸುದ್ದಿಗೆ ಪ್ರಚಾರ ನೀಡಬಾರದಿತ್ತು ಎಂದು ಕಮರುವ ಮನಸ್ಸುಗಳಿಗೆ, ಅಂಥ ಹೀನ ಮನೋ ಪ್ರವೃತ್ತಿಯವರಿಗೆ ಯಾವ ರೀತಿ ಬುದ್ದಿ ಹೇಳಬೇಕು ಹೇಳಿ?
ಕೊನೆಯ ಮಾತು: ಅನಂತಮೂರ್ತಿಯಂತ ಹಿರಿಯ ಸಾಹಿತಿಗಳು ಈ ನಾಡಿನಲ್ಲಿ ಇಲ್ಲದೆ ಹೋಗಿದ್ದರೆ ಈ ನಾಡಿಗೆ ಇತಿಹಾಸ ಇರುತ್ತಿರಲಿಲ್ಲ. ಪಂಪ, ರನ್ನ, ಜನ್ನ, ಪೊನ್ನ, ಬಸವ, ಅಕ್ಕಮಹಾದೇವಿ, ಸತ್ಯಕ್ಕ, ಸರ್ವಜ್ಞ ಇವರೆಲ್ಲ ಸಾಹಿತಿಗಳೇ. ಅವರು ಕಟ್ಟಿ ಬೆಳೆಸಿದ ನಾಡಿನಲ್ಲಿ ನಾವು ಅನ್ನ ತಿನ್ನುತ್ತಿದ್ದೇವೆ. ಅಂಥವರ ಸಾಲಿನಲ್ಲಿ ನಿಂತವರು ಡಾ. ಯು. ಆರ್. ಅನಂತಮೂರ್ತಿ ಅವರು ಕೂಡ. ರಾಜ್ಯದೊಳಗೆ ನುಸುಳುವ ಅದೆಷ್ಟೋ ಭಾಷಿಕರನ್ನು ನಾವು ಸಹಿಸಿಕೊಂಡು ಸಹಿಷ್ಣುತೆ ಮೆರೆದಿದ್ದೇವೆ. ಆದರೆ ಅನಂತಮೂರ್ತಿಯವರನ್ನು ಸಹಿಸಿಕೊಳ್ಳಲು ಏನಾಗಿತ್ತು? ಅನಂತ ಮೂರ್ತಿಯಂಥವರ ಬಗ್ಗೆ ಕಿಂಚಿತ್ತೂ ಪ್ರೀತಿ ಬೆಳೆಸಿಕೊಳ್ಳದ ಮನುಷ್ಯರು ಈ ಸಮೃದ್ಧ ನಾಡಿನಲ್ಲಿ ಬದುಕುವುದಕ್ಕೂ ಯೋಗ್ಯರಲ್ಲ!
Powered By Blogger