Sunday, November 9, 2008

ಹಸಿವಿನ ರುದ್ರ ನರ್ತನ..

ನೀವು ಕುಡಿಯುವ ನೀರಿಗೆ, ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟಿಸುವ ಜನರನ್ನು ಕಂಡಿದ್ದೀರಿ. ಆದರೆ ತುತ್ತಿನ ಚೀಲ ತುಂಬಿಸಿಕೊಳ್ಳಲೂ ಆಗದೆ ಪರದಾಡುತ್ತ, ವರ್ಷಗಟ್ಟಲೆ ಹಸಿವಿನಿಂದ ಬಳಲುತ್ತ, ಹೊಟ್ಟ್ಟೆ ಮೇಲೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಲೂ ಆಗದೆ , ಬಳಲಿ ಬೆಂಡಾಗಿ ಬಸವಳಿದವರ ಗೋಳಿನ ದೃಶ್ಯಗಳನ್ನು ನೋಡಿದ್ದೀರಾ...?
ಜಾಗತೀಕರಣ ಎಂಬ ರಾಕ್ಷಸ ಭೂಮಿಯ ಮೇಲೆ ತನ್ನ ಪಾದ ಊರಿದಾಗಿನಿಂದ ಇಂಥ ದೃಶ್ಯಗಳು ಸಾಮಾನ್ಯವಾಗಿವೆ ! ಇದು ಕೇವಲ ಒಂದು ರಾಜ್ಯ, ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವವನ್ನೇ ಆವರಿಸಿದೆ. ಆದರೆ ಅಭಿವೃದ್ಧಿ, ಪಾಶ್ಚಾತ್ಯೀಕರಣ, ಫ್ಯಾಷನ್‌ಗಳೆಂಬ ಅಂಧಕಾರದಲ್ಲಿ ಅದು ಬೂದಿ ಮುಚ್ಚಿದ ಕೆಂಡವಾಗಿ ಕೂತಿದೆ. ವಿಶ್ವದ ಹತ್ತು ಮಂದಿಯಲ್ಲಿ ಒಬ್ಬರು ವರ್ಷಾನುಗಟ್ಟಲೆ ಅನ್ನ ನೀರು ಇಲ್ಲದೆ ತೊಳಲಾಡುತ್ತಿದ್ದಾರೆ !!
ಒಂದೆಡೆ ಬಂಡವಾಳಶಾಹಿಗಳು ಆಹಾರ ಉತ್ಪನ್ನಗಳನ್ನು ಶೇಖರಿಸಿ, ಗೋದಾಮಿನಲ್ಲಿ ಕೊಳೆಯುವಂತೆ ಮಾಡಿ ಕೃತಕ ಅಬಾವ ಸೃಷ್ಟಿಸುತ್ತಿದ್ದಾರೆ. ಮತ್ತೊಂದೆಡೆ ಕುಡಿಯಲು ಗಂಜಿಯೂ ಇಲ್ಲದೆ ಅನೇಕರು ಹಸಿವೆಂಬ ಹೆಬ್ಬಾವಿಗೆ ನಿತ್ಯವೂ ಆಹುತಿಯಾಗುತ್ತಿದ್ದಾರೆ. ಇದರ ನಡುವೆ ಹಣದುಬ್ಬರದ ಕಾರ್ಕೂಟಕ ಸರ್ಪದ ಕಾಟ...
ಏಷಿಯಾದಲ್ಲಿಯೇ ಹಸಿವಿನಿಂದ ಬಳಲುವ ಹೆಚ್ಚು ಜನರಿರುವ ರಾಷ್ಟ್ರಗಳಲ್ಲಿ ಕಾಂಬೋಡಿಯಾ ಹಾಗೂ ಫಿಲಿಪೈನ್ಸ್‌ಗಳು ಪ್ರಮುಖ ಸ್ಥಾನದಲ್ಲಿವೆ. ಕಾಂಬೋಡಿಯಾದಲ್ಲಿ ಶೇ.೩೪, ಫಿಲಿಪೈನ್ಸ್‌ನಲ್ಲಿ ಶೇ.೩೩ರಷ್ಟು ಮಂದಿ ತುತ್ತು ಕೂಳಿಗೂ ಪರಿತಪಿಸುತ್ತಾ ಕಣ್ಣು ಮುಚ್ಚುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ.೪೦ಕ್ಕೂ ಹೆಚ್ಚು ಜನ ಹೊಟ್ಟೆಗೆ ಹಿಟ್ಟಿಲ್ಲದೆ ಅಶುದ್ಧ ನೀರು ಕುಡಿದು ಬದುಕುತ್ತಿದ್ದಾರೆ !
ಹಸಿವು ಈ ರಾಷ್ಟ್ರಗಳಲ್ಲಿ ರುದ್ರತಾಂಡವ ಮಾಡುತ್ತಿದೆ ಎಂದ ಮಾತ್ರಕ್ಕೆ ಇಲ್ಲಿ ಅಭಿವೃದ್ಧಿಯಿಲ್ಲ, ಆಹಾರ ಉತ್ಪಾದನೆಯೇ ಇಲ್ಲ ಎನ್ನುವಂತಿಲ್ಲ. ಈ ರಾಷ್ಟ್ರಗಳು ಶೇ.೬೫ಕ್ಕಿಂತಲೂ ಹೆಚ್ಚು ಅಭಿವೃದ್ಧಿ ಸಾಸಿವೆ . ಈ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅನುಕೂಲತೆಗಳು ಹೆಚ್ಚಾದಂತೆ ಅನಾನುಕೂಲಗಳೂ ನೃತ್ಯ ಮಾಡುತ್ತಿವೆ . ಹೀಗಾಗಿಯೇ ಹಸಿವಿನ ರುದ್ರ ನರ್ತನ .
ಎಂಜಲು ತಿನ್ನುವ ಸ್ಥಿತಿ !
ಒಂದೆಡೆ ಉಳ್ಳವರು, ಇನ್ನೊಂದೆಡೆ ದೀನರು. ತುತ್ತು ಇಲ್ಲದೆ ಈ ದೇಶಗಳಲ್ಲಿ ಕೂಲಿಗೂ ಕುತ್ತು. ಹೀಗಾಗಿ ಅನೇಕರು ಬೀದಿ ಬದಿಯಲ್ಲಿ ಶ್ರೀಮಂತರು ತಿಂದು, ಸಾಕಾಗಿ ಬಿಸಾಡಿದ ಎಂಜಲನ್ನು ತಿಂದು ಬದುಕುತ್ತಿದ್ದಾರೆ ! ಈ ಚಿತ್ರಣ ಫಿಲಿಪೈನ್ಸ್‌ನಲ್ಲಿ ಸಾಮಾನ್ಯ !!
ಆದರೆ ಭಾರತದ ನಗರ ಪ್ರದೇಶಗಳಲ್ಲಿಯೂ ಇಂಥ ಹೀನ ಸ್ಥಿತಿ ನಿರ್ಮಾಣವಾಗುತ್ತಿದೆ. ಫಿಲಿಪೈನ್ಸ್‌ನಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು .
ಫಿಲಿಪೈನ್ಸ್ ಹಾಗೂ ಕಾಂಬೋಡಿಯಾದಲ್ಲಿ ಹಸಿವಿನ ರುದ್ರತಾಂಡವ ಸಾಮಾನ್ಯವಾಗಿಬಿಟ್ಟಿದೆ. ಅಲ್ಲಿನ ಜನ ಈಗಾಗಲೇ ‘ಎಂಜಲು ತಿಂದು ಬದುಕುವುದಕ್ಕೆ ’ ಒಗ್ಗಿಬಿಟ್ಟಿದ್ದಾರೆ. ಆರೋಗ್ಯದ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಭಾರತದ ಜನ ಒಗಿಲ್ಲ ; ಒಗ್ಗಲಾರರು. ವಿಶ್ವದಲ್ಲಿಯೇ ಅತಿ ಹೆಚ್ಚು ಮಂದಿ ಹಸಿವಿನಿಂದ ಬಳಲುವವರನ್ನು ಭಾರತದಲ್ಲಿ ಕಾಣಬಹುದು ಎನ್ನುತ್ತಾರೆ ಇಂಗ್ಲಿಷ್ ಯುವ ಲೇಖಕ ರಾಜ್‌ಪಟೇಲ್. ಅವರ ‘stuffed and starved ’ ಪುಸ್ತಕದಲ್ಲಿನ ಭಾರತದ ಹಸಿವಿನ ಸ್ಥಿತಿಯ ಬಗ್ಗೆ ಅನೇಕ ನಿದರ್ಶನಗಳನ್ನು ನೀಡಿದ್ದಾರೆ.
ಅಕ್ಕಿಯ ಬೆಲೆ ಭಾರತದಲ್ಲಿ ಗಗನಕ್ಕೇರಿದೆ. ಕನಿಷ್ಠ ೨೦ ರೂ. ಇಲ್ಲದೆ ಉತ್ತಮ ಗುಣಮಟ್ಟದ ಅಕ್ಕಿ ಸಿಗುವುದು ಕಷ್ಟ . ಇದು ಇತರ ದೇಶಗಳಲ್ಲೂ ಮುಂದುವರಿದಿದೆ. ಯಾವುದೇ ತರಕಾರಿ, ಕಾಳು, ಬೇಳೆಗಳನ್ನು ಖರೀದಿಸಲು ಅಂಗಡಿಗೆ ತೆರಳಿದರೆ ಅಲ್ಲಿ ಕನಿಷ್ಠ ೨೦ ರೂ. ತೆರಬೇಕು. ಇದು ಇಂದಿನ ದುಸ್ಥಿತಿ. ಕಾಂಬೋಡಿಯಾ ಹಾಗೂ ಪಿಲಿಪೈನ್ಸ್‌ಗಳಲ್ಲಿ ಇದು ಇನ್ನೂ ಹೆಚ್ಚಾಗಿದೆ. ಹೀಗಾಗಿ ಅನ್ನಕ್ಕಾಗಿ ಹಾಹಾಕಾರ ಆರಂಭವಾಗಿದೆ. ಈ ಅಕ್ಕಿ ಕೊರತೆಯಿಂದಲೇ ಪ್ರಪಂಚದಲ್ಲಿ ೧೦೦ ಮಿಲಿಯನ್ ಜನ ಹಸಿವಿನಿಂದ ಬಳಲಿ ಕೊನೆಯುಸಿರೆಳೆಯುತ್ತಿದ್ದಾರೆ. ಫಿಲಿಪೈನ್ಸ್ ಒಂದರಲ್ಲಿಯೇ ೯೦ ಮಿಲಿಯನ್ ಮಂದಿ ಅನ್ನವಿಲ್ಲದೆ ಸಾವಿನಂಚಿನಲ್ಲಿ ಉಸಿರು ಬಿಗಿ ಹಿಡಿದು ನಿಂತಿದ್ದಾರೆ ...
ವಿಶ್ವದಲ್ಲಿ ಹಸಿವಿನ ವಿಚಾರದಲ್ಲಿ ನೋಡಿದರೆ ತೃಪ್ತರು ಕೇವಲ ಶೇ.೨೭ ಮಂದಿ. ಇನ್ನು ಶೇ.೫೩ ರಷ್ಟು ಜನ ಅರ್ಧಂಬರ್ಧ ತಿಂದು, ಇಲ್ಲವೇ ಸಂಪೂರ್ಣ ಉಪವಾಸ ಇದ್ದು ಬದುಕು ದೂಡುತ್ತಿದ್ದಾರೆ.
ಬಂಡವಾಳಶಾಹಿ ತತ್ವ :
ಭುವಿಯೇನು ಬಂಜೆಯಲ್ಲ. ಇಲ್ಲಿ ಎಲ್ಲವೂ ಬೆಳೆಯುತ್ತವೆ. ಆದರೆ ಜಾಗತಿಕ ವ್ಯವಸ್ಥೆಯಲ್ಲಿ ಮನುಷ್ಯನ ದುರಾಸೆ ಮಿತಿ ಮೀರಿದೆ. ಜಪಾನ್ ಗೋದಾಮುಗಳಲ್ಲಿ ಕೊಳೆಯುತ್ತಾ ಬಿದ್ದಿರುವ ಅಕ್ಕಿಯ ಮೂಟೆಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
ಹೌದು, ಜಪಾನ್, ಅಮೆರಿಕದಂತಹ ರಾಷ್ಟ್ರಗಳು ಆಹಾರ ವಸ್ತುಗಳನ್ನು ತಮ್ಮ ಭದ್ರಕೋಟೆಯಲ್ಲಿ ಬಂಸಿಟ್ಟಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಕೃತಕ ಅಭಾವ ಸೃಷ್ಟಿಯಾಗುತ್ತಿದೆ ( ಇದೇ ತಂತ್ರವನ್ನು ಈಗೀಗ ಸಣ್ಣಪುಟ್ಟ ವ್ಯಾಪಾರಿಗಳೂ ಅನುಸರಿಸುತ್ತಿರುವುದು ). ಇದರಿಂದಾಗಿ ಆಹಾರ, ದವಸ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಪ್ರಪಂಚದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ೪ಪಟ್ಟು ಅಕ್ಕಿ ಜಪಾನ್‌ನಲ್ಲಿ ಶೇಖರಣೆಯಾಗಿದೆ. ಆದರೂ ಅದು ೭ಲಕ್ಷ ಟನ್ ಅಕ್ಕಿಯನ್ನು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಲೇ ಇದೆ.
೧೯೯೩ರಲ್ಲಿ ಡಬ್ಲ್ಯುಟಿಒ ಜತೆ ಜಪಾನ್ ಮಾಡಿಕೊಂಡ ಒಪ್ಪಂದದಂತೆ ಇಂದಿಗೂ ಈ ಅಕ್ಕಿ ಆಮದು ಮುಂದುವರಿದಿದೆ. ಈ ನಡುವೆ ಫಿಲಿಪೈನ್ಸ್‌ನ ಹಸಿವನ್ನು ಕಣ್ಣಾರೆ ಕಂಡಿರುವ ಜಪಾನ್ ೨.೨೦ಲಕ್ಷ ಟನ್ ಅಕ್ಕಿಯನ್ನು ದಾನ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಅಕ್ಕಿ ಗೋದಾಮಿನಲ್ಲಿ ಕೊಳೆಯುವ ಹಂತ ತಲುಪಿದ್ದರೂ ಅದನ್ನು ವಿತರಿಸುವ ಇಚ್ಛೆ ಅಲ್ಲಿನ ಸರಕಾರಿ ಅಕಾರಿಗಳಿಗಿಲ್ಲ !
ಅಕಾರಿಗಳು ಹಾಗೂ ಶ್ರೀಮಂತರ ಸ್ವ ಹಿತಾಸಕ್ತಿಯಿಂದಾಗಿ ಇಂದು ವಿಶ್ವದಲ್ಲಿ ಮಿಲಿಯನ್‌ಗಟ್ಟಲೆ ಜನ ಬಡವರು, ಮಧ್ಯಮವರ್ಗದವರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಹಸಿವಿನ ರುದ್ರ ನರ್ತನ ಎಲ್ಲೆ ಮೀರಿದೆ. ಮಹಿಳೆಯರು, ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೆ, ಜಾತಿ, ಮತ , ಧರ್ಮಗಳ ತಾರತಮ್ಯವಿಲ್ಲದೆ ಎಲ್ಲರೂ ಒಂದಾಗಿ ಬಳಲುತ್ತಿದ್ದಾರೆ. ನೀರಿನಲ್ಲಿ ಮುಳುಗುವವನಿಗೆ ಒಂದು ಹುಲ್ಲಿನ ಗರಿ ಸಿಕ್ಕರೂ ಸಾಕು ಬದುಕಿಯೇನು ಎಂಬ ಆಸೆ ಇರುತ್ತದೆ. ಆದರೆ ಹಸಿವಿನ ಸುಳಿಯಲ್ಲಿ ಸಿಕ್ಕಿರುವ ಜನರಿಗೆ ಅದೂ ಕೂಡ ಇಲ್ಲದಾಗಿದೆ. ಈ ಜೀವನ ಇಷ್ಟಕ್ಕೇ ಸಾಕು ಎನ್ನುತ್ತಿದ್ದಾರೆ. ಈ ಭುವಿಯಲ್ಲಿ ಹಸಿವಿಗೆ ಹೆದರದವರ್‍ಯಾರು ಹೇಳಿ ?

ದೇಸಿ ಕೃಷಿಯಿಂದ ಮಾತ್ರ ರೈತರಿಗೆ ಬದುಕು...

ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಒಂದೇ ತಿಂಗಳಲ್ಲಿ ಹತ್ತು ರೈತರು ಗೊಬ್ಬರದ ವಿಚಾರಕ್ಕೆ ಕೊನೆಯುಸಿರೆಳೆದಿದ್ದಾರೆ. ಒಬ್ಬ ಗೋಲಿಬಾರ್‌ನಲ್ಲಿ, ಮತ್ತೆ ಒಂಬತ್ತು ಮಂದಿ ವಿಷ ಕುಡಿದು ತಮ್ಮ ಕುಟುಂಬವನ್ನು ಬೀದಿಗೆ ತಂದಿಟ್ಟಿದ್ದಾರೆ. ಈ ಎರಡೂ ರೀತಿಯ ಸಾವಿಗೆ ಸರಕಾರವೇ ನೇರ ಕಾರಣ.
೧೯೬೦ಕ್ಕಿಂತ ಹಿಂದೆ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದುಳಿದಿದ್ದಾಗ ಅದನ್ನು ಸರಿದೂಗಿಸುವ ಸಲುವಾಗಿ ಕೇಂದ್ರ ಸರಕಾರ ಸ್ವಾಮಿನಾಥನ್ ಆಯೋಗವನ್ನು ರಚಿಸಿ, ಕೃಷಿ ನೀತಿಯನ್ನು ಬದಲಿಸಲು ಪ್ರಯತ್ನಿಸಿತು. ರೈತರು ತಮ್ಮ ಜಮೀನುಗಳಲ್ಲಿ ಉತ್ತಮ ಹಾಗೂ ಅತ್ಯಕ ಬೆಳೆ ಬೆಳೆಯಬೇಕಾದರೆ ಐರೋಪ್ಯ ರಾಷ್ಟ್ರಗಳಂತೆ ಆಧುನಿಕ ಕೃಷಿ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಪ್ರಚಾರ ಮಾಡಿ, ರೈತರನ್ನು ದಿಕ್ಕು ತಪ್ಪಿಸಲಾಯಿತು.
ಆದರೆ ಆಧುನಿಕ ನೀತಿಯಿಂದ ಅಡ್ಡ ಪರಿಣಾಮಗಳಾಗಬಹುದು, ಮುಂದೊಂದು ದಿನ ಇಂಥ ಸ್ಥಿತಿ ತಲುಪುತ್ತೇವೆ ಎಂಬ ಭಯವಾಗಲಿ, ವಿಚಾರಶೀಲತೆ, ವಿವೇಕವಾಗಲಿ ಆಗ ಅಂದಿನ ಸಚಿವರಿಗಾಗಲಿ, ಅಕಾರಿಗಳಿಗಾಗಲಿ ಇರಲಿಲ್ಲ. ಅದರ ಫಲವಾಗಿ ಉಂಟಾಗಿದ್ದೇ ‘ಹಸಿರುಕ್ರಾಂತಿ’. ಆಗ ರಸಗೊಬ್ಬರ ಬಳಕೆ ಅತಿಯಾಗದಂತೆ ಮತ್ತು ಇದರ ಬಳಕೆಯಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಯಾರೊಬ್ಬರೂ ಯೋಚಿಸಲಿಲ್ಲ. ಸರಕಾರ ಕೂಡ ಅದರ ಬಗ್ಗೆ ಜನಜಾಗೃತಿ ಮೂಡಿಸಲಿಲ್ಲ. ಅದರ ಪ್ರತಿಫಲಗಳೇ ಇಂದಿನ ರೋದನಗಳು...
ಜಾಗತೀಕರಣದ ಹೆಸರಿನಲ್ಲಿ ಕಾಲಿಟ್ಟ ಆಧುನಿಕ ನೀತಿಗೆ ದೇಶದ ರೈತರು ಮೊರೆ ಹೋಗಿ ತಮ್ಮ ಮೂಲ ಪದ್ಧತಿಯನ್ನೇ ಮೂಲೆಗುಂಪು ಮಾಡಿದರು. ಸರಕಾರಗಳ ಮೇಲೆ ನಂಬಿಕೆ ಇಟ್ಟ ಅನ್ನದಾತ ಇಂದು ದೇಶಕ್ಕಿರಲಿ, ತನಗೇ ಅನ್ನವಿಲ್ಲದೆ ಪರದಾಡುವಂತಾಗಿದೆ. ನಮ್ಮ ಸರಕಾರಗಳು ಆ ಮಟ್ಟಿಗೆ ರೈತರನ್ನು ಹಾದಿ ತಪ್ಪಿಸಿ, ಆಟ ಆಡುತ್ತಿವೆ.
ಸ್ವಾತಂತ್ರ್ಯ ಬಂದು ೬೦ ವರ್ಷಗಳಾದರೂ ಕೇಂದ್ರ ಹಾಗೂ ರಾಜ್ಯಗಳಲ್ಲಿ ಕೃಷಿ ಬಗ್ಗೆ ಪರಿಣತಿ ಪಡೆದ ಒಬ್ಬರೇ ಒಬ್ಬರು ಕೂಡ ಮಂತ್ರಿಗಳಾಗಲಿಲ್ಲ. ಮಂತ್ರಿಗಳಾದ ಮಹನೀಯರಿಗೆ ಕೃಷಿಯ ವಾಸ್ತವ ಸ್ಥಿತಿ ಗೊತ್ತಿರಲಿಲ್ಲ, ಕೊನೆಪಕ್ಷ ತಿಳಿದುಕೊಳ್ಳುವ ಪ್ರಯತ್ನ ಕೂಡ ಆಗಲಿಲ್ಲ. ಅದರ ಫಲವಾಗಿ ಇಂದು ರೈತ ವಿಷ ಕುಡಿಯುವ, ನೇಣಿಗೆ ಕೊರಳೊಡ್ಡುವ ದಾರಿ ಹಿಡಿಯುತ್ತಿದ್ದಾನೆ. ಆಗಾಗ ತಾಳ್ಮೆ ಕಳೆದುಕೊಂಡು ‘ಗುಂಡಿಗೆ’ ಬಲಿಯಾಗುತ್ತಿದ್ದಾನೆ.
ರೈತರ ಬದುಕು ಬೀದಿಗೆ ಬಿದ್ದು ಈ ರೀತಿ ಮಾಧ್ಯಮಗಳಲ್ಲಿ ಸುದ್ದಿಯಾದಾಗಲೆಲ್ಲ ಜನಪ್ರತಿನಿಗಳು, ಬುದ್ಧಿಜೀವಿಗಳು, ಪ್ರಗತಿಪರ ಕೃಷಿಕರು ಸಾವಯವ ಕೃಷಿಯ ಬಗ್ಗೆ ಮಾತನಾಡುತ್ತಾರೆ !
ನಮ್ಮ ರೈತರಲ್ಲಿ ಮಳೆಯನ್ನು ಕಂಡು ಬೆಳೆ ಬೆಳೆಯುವವರೆ ಹೆಚ್ಚು . ಮೇಲಾಗಿ ಈ ರೈತರು ಈಗಾಗಲೇ ಶೇ.೧೭೦ರಷ್ಟು ರಸಗೊಬ್ಬರ ಬಳಕೆಯನ್ನೇ ಮುಂದುವರಿಸಿದ್ದಾರೆ. ರಸಗೊಬ್ಬರ ಹಾಕಿದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯ ಎಂಬ ಅನಿವಾರ್ಯ ಸ್ಥಿತಿ ತಲುಪಿದ್ದಾರೆ. ಇದರಿಂದ ಭೂಮಿಯಲ್ಲಿರುವ ಸೂಕ್ಷ್ಮಜೀವಿಗಳು ಶೇ.೭೫ರಷ್ಟು ನಾಶವಾಗಿವೆ ! ಹೀಗಾಗಿ ರಸಗೊಬ್ಬರ ಬೇಕೆ ಬೇಕು...
ಬೆಳೆ ಬೆಳೆಯುವ ನಮ್ಮ ಜನರಿಗೆ ಸುಲಭವಾಗಿ ಸಿಕ್ಕುವುದು ಕೊಟ್ಟಿಗೆ ಅಥವಾ ತಿಪ್ಪೆಗೊಬ್ಬರ. ಸೆಗಣಿಗೆ ಸಾಕಷ್ಟು ದಿನಗಳ ವರೆಗೆ ತೇವಾಂಶವನ್ನು ಹಿಡಿದಿಡುವ ಶಕ್ತಿ ಇದೆ. ಅದೇ ಕಾರಣಕ್ಕೆ ರೈತನಿಗೆ ಇದೇ ಜೀವಾಳ. ಯಾವುದೇ ಗ್ರಾಮೀಣ ಪ್ರದೇಶಗಳಿಗೆ ಹೋದರೂ ಅಲ್ಲಿ ದನ, ಕರು, ಕುರಿಗಳನ್ನು ಸಾಕುವ ರೈತರು ಊರ ಹೊರಗಡೆ ಸೆಗಣಿ, ಗಂಜಲ, ಹಸುಗಳು ತಿಂದು ಬಿಟ್ಟ ಹುಲ್ಲನ್ನು ಪ್ರತಿನಿತ್ಯವೂ ತಿಪ್ಪೆಗೆ ಹಾಕಿ ವರ್ಷಕ್ಕೆ ಒಮ್ಮೆ ಇದನ್ನು ಹೊಲಗಳಿಗೆ ಸಾಗಿಸುತ್ತಾರೆ. ಆದರೂ ಜತೆಗೆ ರಸಗೊಬ್ಬರ ಬಳಸುತ್ತಿದ್ದಾರೆ.
ರೈತರಿಗೀಗ ಬೇಕಿರುವುದು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಹೇಳುವ ‘ಕೃಷಿ ಪಾಠ ’ ವಲ್ಲ ; ರಾಜಕಾರಣಿಗಳ ಭರವಸೆಗಳ ‘ನುಡಿಮುತ್ತು’ಗಳೂ ಅಲ್ಲ. ‘ಪ್ರಗತಿಪರ ರೈತ’ರೆನಿಸಿಕೊಂಡಿರುವ ‘ಶ್ರೀಮಂತ ರೈತ ’ರ ಭೂಧನೆಗಳೂ ಅಲ್ಲ. ಬದಲಿಗೆ ವಾಸ್ತವ ಕೃಷಿ ದೇಸಿ ಕೃಷಿ ...
ಹೌದು, ನಾವು ಹೇಳುವ ಮಾತಿಗೂ ವಾಸ್ತವ ಕೃಷಿಗೂ ಅಜಗಜಾಂತರ ವ್ಯತ್ಯಾಸವಿದೆ. ಆ ಕಾರಣಕ್ಕೇ ರೈತರು ಇದೂವರೆಗೂ ಉದ್ಧಾರವಾಗಿಲ್ಲ. ಮಳೆ ನೋಡಿ ಬೆಳೆ ಬೆಳೆಯುವ ರೈತರು ನೇರವಾಗಿ ಸಾವಯವ ಕೃಷಿಗೆ ಮುಂದಾಗದೆ ಕೈಸುಟ್ಟುಕೊಂಡು ಬೆಳೆ ಬರುವುದಕ್ಕಿಂತ ಮುಂಚಿತವಾಗಿಯೇ ಬೀದಿಗೆ ಬೀಳುತ್ತಾರೆ. ಆ ಕಾರಣಕ್ಕೇ ಎಲ್ಲರೂ ಹಿಂದೆ ಮುಂದೆ ನೋಡುವುದು. ಏಕ ಕಾಲಕ್ಕೆ ಸಾವಯವ ಕೃಷಿಗೆ ಕೈ ಹಾಕುವುದು ‘ಪುಸ್ತಕದ ಬದನೆಕಾಯಿ’ ಯನ್ನು ಸಾಂಬಾರು ಮಾಡಿದಂತೆ !!
ರೈತರ ಹೊಲ ಗದ್ದೆಗಳೀಗ ಹತ್ತಾರು ವರ್ಷಗಳ ಹಿಂದೆ ಹೈಟೆಕ್ ಸಿಟಿಗಳಿಗೆ ಸೇರಿದ ಕುಟುಂಬದಂತಾಗಿದೆ. ಆಧುನಿಕ ನಗರದಲ್ಲಿ ಬೆಳೆದ ಮಕ್ಕಳು ಸದಾ ಪಿಜಾ, ಬರ್ಗರ್, ಐಸ್‌ಕ್ರೀಮ್ ಹಾಗೂ ಫಾಸ್ಟ್ ಫುಡ್ ತಿಂದು ಬೆಳೆದಿರುತ್ತಾರೆ. ನೈಜ ಉಪ್ಪು , ಹುಳಿ, ಖಾರದ ರುಚಿ ಹಾಗೂ ಅವುಗಳಿಂದ ಆರೋಗ್ಯಕ್ಕಾಗುವ ಲಾಭಗಳೇ ಅವರಿಗೆ ಗೊತ್ತಿರುವುದಿಲ್ಲ. ಅವರಿಗೆ ಏಕಾಏಕಿ ಒಣ ಜೋಳದ ರೊಟ್ಟಿ, ಖಾರದ ಚಟ್ನಿ ಕೊಟ್ಟು ‘ತಿನ್ನು ’ ಎಂದರೆ ಹೇಗೆ ಸಾಧ್ಯ ?
ರೊಟ್ಟಿ ಚಟ್ನಿ ಅಗೆದು ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ಜತೆಗೆ ಮುಖದ ಸ್ನಾಯುಗಳ ವ್ಯಾಯಾಮಕ್ಕೂ ಅದು ಸಹಕಾರಿ ಎನ್ನುವುದು ಗೊತ್ತು. ಅದನ್ನೇ ತಿಂದು ಬದುಕುತ್ತಿದ್ದ ಹಿಂದಿನವರೂ ಆರೋಗ್ಯವಂತವಾಗಿದ್ದರು ; ಹೆಚ್ಚು ಕಾಲ ಬದುಕುತ್ತಿದ್ದರು ಎಂಬುದನ್ನು ಅವರು ಅರಿತಿರುತ್ತಾರೆ. ಆದರೆ ಏಕಾಏಕಿ ಅದನ್ನೇ ತಿಂದು ಬದುಕಬೇಕು ಎಂದು ಹೇಳಿದರೆ ಹೇಗಾಗುತ್ತದೆ ಯೋಚಿಸಿ. ಅದೇ ಸ್ಥಿತಿ ಈಗ ರೈತರ ಭೂಮಿಯದ್ದಾಗಿದೆ.
ಸಾವಯವ ಕೃಷಿ ನಡೆಸಬೇಕಾದರೆ ಸ್ವಲ್ಪವಾದರೂ ನೀರು ಬೇಕು. ಮೂಲ ಸೌಕರ್ಯ ಬೇಕು. ಕುಡಿಯಲು ನೀರಿಲ್ಲದೆ ಪ್ರತಿನಿತ್ಯ ಪರಿತಪಿಸುವ ರೈತರು ಹೇಗೋ ಬದುಕು ಸಾಗಿಸುತ್ತಾರೆ. ಅಂಥದರಲ್ಲಿ ಸಾವಯವ ಕೃಷಿ ಮಾಡುವುದಾದರೂ ಎಲ್ಲಿಂದ ? ಅವರಿಗೆ ಗೊತ್ತಿರುವುದು ಒಂದೇ, ಕೊಟ್ಟಿಗೆ ಗೊಬ್ಬರ ಬಳಸಿ ರೈತಾಪಿ ಮಾಡುವುದು. ಹಿಂದೆ ಮಾಡುತ್ತಿದ್ದುದೂ ಇದೆ. ಆದರೆ ಜಾಗತೀಕರಣದ ಕುತಂತ್ರ ಹಾಗೂ ಸರಕಾರಗಳ ದೂರಾಲೋಚನೆಯ ಕೊರತೆಯಿಂದ ರೈತರು ಇಂದು ಬಲಿಪಶುಗಳಾಗಿ ಕೊನೆಯುಸಿರೆಳೆಯಬೇಕಾಗಿದೆ.
ನಮ್ಮ ಭೂಮಿಯಲ್ಲಿ ಈಗ ನೀರಿನ ಅಂಶ ಕೂಡ ಇಲ್ಲದಾಗಿದೆ. ಮಳೆಯ ನೀರು ಜಮೀನುಗಳಲ್ಲಿಯೇ ಇಂಗಿಸುವ ಕೆಲಸ ಮೊದಲು ಆಗಬೇಕು. ಅದೂ ಸಣ್ಣ ಸಣ್ಣ ಪ್ರಮಾಣದಲ್ಲಿ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ. ಜತೆಗೆ ಹಳೆಯ ದೇಸೀ ಕೃಷಿ ನೀತಿಯನ್ನು ಪುನಃ ಮುಂದುವರಿಸುವಂತೆ ವಾಸ್ತವ ಪ್ರಾತ್ಯಕ್ಷಿಕೆಯ ಮೂಲಕ ಜನ ಜಾಗೃತಿ ಮೂಡಿಸಬೇಕು .
ಇಲ್ಲಿ ಅರ್ಧ ಗುಂಟೆಯಿಂದ ೩ ಎಕರೆ ಒಳಗಡೆಯೇ ಜಮೀನು ಹೊಂದಿರುವ ಸಣ್ಣ ರೈತರೇ ಹೆಚ್ಚು. ಅವರಿಗೆ ಯಾವುದೇ ಬೋರ್‌ವೆಲ್‌ಗಳಿರುವುದಿಲ್ಲ. ಕೆರೆ ಕಟ್ಟೆಗಳ ಸೌಲಭ್ಯವೂ ಇಲ್ಲ. ಆದ್ದರಿಂದ ಶ್ರೀಮಂತ ರೈತರಿಗೆ ಹಾಗೂ ಬೋರ್‌ವೆಲ್ ಹೊಂದಿರುವ ರೈತರಿಗೆ ಮಾಹಿತಿ ನೀಡುವ ಬದಲು ಬಡ ಹಾಗೂ ಸಣ್ಣ ರೈತರಿಗೆ ಸಮಗ್ರ ಮಾಹಿತಿ ನೀಡಿ, ಜನಾಂದೋಲನದ ರೀತಿ ಸರಕಾರ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಬೇಕು. ಅದು ಕೇವಲ ಒಂದು ವರ್ಷವಲ್ಲ. ನಿರಂತರವಾಗಿ... ಇದರಿಂದ ಎಲ್ಲೆಡೆ ಭೂಮಿಯ ಆಳದಲ್ಲಿ ನೀರು ಶೇಖರಣೆಯಾಗುತ್ತದೆ. ಭೂಮಿ ತನ್ನ ಸತ್ವ ಗಳಿಸಿಕೊಳ್ಳುತ್ತದೆ. ಆಗ ಮಾತ್ರ ಸಾವಯವ ಕೃಷಿ ನೀತಿಯನ್ನು ಅಳವಡಿಸಬಹುದು.
ರಸಗೊಬ್ಬರಗಳಿಗೆ ಒಗ್ಗಿ ಹೋಗಿರುವ ನೆಲ ಈಗ ಮತ್ತೆ ಹಳೆ ರೀತಿಯಲ್ಲಿ ಹೊಂದಿಕೊಳ್ಳಬೇಕಾದಲ್ಲಿ ಕನಿಷ್ಠ ೩೦ ವರ್ಷಗಳು ಬೇಕು ! ಅದನ್ನು ಮೊದಲು ಸರಕಾರ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ನೀರು ಇಂಗಿಸುವ ಹಾಗೂ ಸಹಜ ಕೃಷಿಯನ್ನು ಕಾರ್ಯರೂಪಗೊಳಿಸುವ ಕೆಲಸ ಸರಕಾರದ ನೇತೃತ್ವದಲ್ಲಿಯೇ ನಡೆಯಬೇಕು. ಆಗ ಮಾತ್ರ ರೈತರು ಈ ರಸಗೊಬ್ಬರ ಸಮಸ್ಯೆಯಿಂದ ದೂರ ಉಳಿಯಲು ಸಾಧ್ಯ. ದೇಸಿ ಕೃಷಿಯ ಅಳವಡಿಕೆ ಮೂಲಕ ರೈತರ ಬದುಕು ಹಸನಾದರೆ ಮತ್ತೆ ದೇಶ ತನ್ನತನವನ್ನು ಮೆರೆಯಲು ಸಾಧ್ಯ.

ದೀಪ್ತಿಯಾಗಲಿ ಎಲ್ಲರ ಬದುಕು...

ದೀವಳಿಗೆ ಹಬ್ಬ ದೀಪಾವಳಿ. ಹಳ್ಳಿ ಜನರಿಗೆ ಸುಗ್ಗಿ ಕಾಲ. ಎಷ್ಟೊಂದು ಅರ್ಥಪೂರ್ಣ ಹಬ್ಬ ಅಲ್ಲವೇ ? ವರ್ಷವಿಡೀ ಹೊಲದಲ್ಲಿ ಬಿಸಿಲು, ಮಳೆ ಎನ್ನದೆ ಬೆವರು ಸುರಿಸಿ ದುಡಿದ ರೈತನಿಗೆ ಬೆಳೆ ಬಂದ ಸಂತಸ ಆ ಮೂಲಕ ಆ ಇಡೀ ಕುಟುಂಬದ ಬಾಳಿನಲ್ಲಿ ಬೆಳಕು ಮೂಡುವ ಅಪೂರ್ವ ಕ್ಷಣ ಈ ಕಾರ್ತಿಕ ಮಾಸ...
ಹೆಚ್ಚುತ್ತಿರುವ ನಗರೀಕರಣ, ಪಾಶ್ಚಾತ್ಯೀಕರಣ, ಆಧುನಿಕತೆಯ ಸೋಗುಗಳು ಇಂದು ಈ ನೆಲದ ಸೊಗಡನ್ನು ಒಂದೊಂದಾಗಿ ನುಂಗಿ ನೀರು ಕುಡಿಯುತ್ತಿವೆ. ಆದರೆ ಎಲ್ಲೋ ಒಂದು ಮೂಲೆಯಲ್ಲಿ ಇನ್ನೂ ಆ ಸೊಗಡು ಉಳಿದಿದೆ. ಮತ್ತೆ ಚಿಗುರೊಡೆಯಲು ಹಪಹಪಿಸುತ್ತಿದೆ. ಆ ಸೊಗಡುಗಳಲ್ಲಿ ದೀಪಾವಳಿ ಹಬ್ಬ ಕೂಡ ಒಂದು. ನಗರ ಪ್ರದೇಶಗಳಲ್ಲಿ ದೀವಳಿಗೆಯನ್ನು ಕೇವಲ ಪಟಾಕಿ ಸಿಡಿಸಿ, ಕಿವಿಗಡುಚಿಕ್ಕುವಂತೆ ಶಬ್ದ ಬರಿಸಿ ಸಂಭ್ರಮಿಸುವ ಸಂಪ್ರದಾಯ ಬೆಳೆದು ಬರುತ್ತಿದೆ.
ಆದರೆ ಹಳ್ಳಿಗಳಲ್ಲಿ ಹಾಗಿಲ್ಲ. ದೀಪಾವಳಿಗೆ ವಿಶೇಷ ಆದ್ಯತೆ . ಈ ಹಬ್ಬಕ್ಕೆ ಕೇವಲ ಮನೆ ಅಂಗಳದಲ್ಲಿ ಮಾತ್ರ ದೀಪ ಹಚ್ಚುವುದಿಲ್ಲ. ಮನದ ಅಂಗಳದಲ್ಲೂ ದೀಪ ಬೆಳಗಿಸುತ್ತದೆ. ಅದು ನಂದಾದೀಪವಾಗಲಿ ಎಂದು ಎಲ್ಲರೂ ಹಾರೈಸುತ್ತಾರೆ.
ಈ ದೀಪಾವಳಿಗೆ ಹಳ್ಳಿಗಳಲ್ಲಿ ಕೆಲವು ಕಡೆ ‘ಹಟ್ಟಿಹಬ್ಬ ’ ಎಂಥಲೂ ಕರೆಯುವುದುಂಟು. ಏಕೆಂದರೆ ಹಳ್ಳಿಗಳಲ್ಲಿ ರೈತರ ಬದುಕು ಹಸನಾಗಲು ದನಕರುಗಳು ಬೇಕೇ ಬೇಕು. ಆಧುನಿಕತೆ ಎಷ್ಟೇ ಮುಂದುವರಿದರೂ ಅವರ ಬದುಕು ಅವುಗಳ ಮೇಲೆಯೇ ಅವಲಂಬಿತವಾಗಿರುತ್ತದೆ . ದನಕರುಗಳ ವಾಸ ಸ್ಥಾನ ಹಟ್ಟಿ ಅಥವಾ ಕೊಟ್ಟಿಗೆ. ಹೀಗಾಗಿ ಅದು ಚೆನ್ನಾಗಿದ್ದರೆ ದನಕರುಗಳು ಚೆನ್ನಾಗಿರುತ್ತವೆ. ದನಕರುಗಳು ಚೆನ್ನಾಗಿದ್ದರೆ ನಾವೆಲ್ಲಾ ಚೆನ್ನಾಗಿರುತ್ತೇವೆ ಎನ್ನುವುದು ಗ್ರಾಮೀಣ ಪ್ರದೇಶದ ಜನರ ನಂಬಿಕೆ.
ಹಟ್ಟಿ ಪೂಜೆ :
ಅಮಾವಾಸ್ಯೆಯ ದಿನ ಹಳ್ಳಿಗಳಲ್ಲಿ ತಮ್ಮ ಮನೆಯನ್ನು ಒಪ್ಪ ಓರಣವಾಗಿ ಮಾಡುತ್ತಾರೆ. ಸುಣ್ಣ, ಬಣ್ಣ ಬಳಿಯುತ್ತಾರೆ. ಮನೆಯ ನೆಲ ಹಾಗೂ ಹಟ್ಟಿಯನ್ನು ಸಾರಿಸಿ ರಂಗೋಲಿ ಹಾಕುತ್ತಾರೆ. ಬೆಳಗ್ಗೆಯೇ ದನಕರುಗಳಿಗೆ ಸ್ನಾನ ಮಾಡಿಸಿ ಅವುಗಳಿಗೆ ‘ಗುಲ್ಲು ’ ಕೊಡುತ್ತಾರೆ . ಇದು ಕೇವಲ ದನಕರುಗಳಿಗೆ ಮಾತ್ರವಲ್ಲ ಮಕ್ಕಳಿಗೆ ನಡೆಯುತ್ತದೆ. ಆದರೆ ಅವರಿಗೆ ಊದುಬತ್ತಿಯಲ್ಲಿ ಗುಲ್ಲು ಕೊಡುತ್ತಾರೆ. ಈ ಗುಲ್ಲು ಕೊಡುವುದರಿಂದ ಯಾವುದೇ ರೋಗರುಜಿನಗಳು ಬರುವುದಿಲ್ಲ ಎಂಬುದು ಹಳ್ಳಿಗರ ನಂಬಿಕೆ.
ಯುವತಿಯರು ರಂಗೋಲಿ ಇಡುವುದರಲ್ಲಿ ಮನೆಯನ್ನು ಶೃಂಗಾರಗೊಳಿಸುವುದರಲ್ಲಿ ನಿರತರಾಗಿ ಸಂಭ್ರಮಪಟ್ಟರೆ , ಯುವಕರು ಎತ್ತುಗಳಿಗೆ ಮೈ ತೊಳೆದು ಅವುಗಳನ್ನು ಸಿಂಗರಿಸಿ, ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ , ಟೇಪು , ಕೊಬ್ಬರಿ ಕಟ್ಟಿ ಖುಷಿ ಅನುಭವಿಸುತ್ತಾರೆ. ಅದಕ್ಕೂ ಮುಂಚೆ ನೇಗಿಲು, ನೊಗ, ಎತ್ತಿನ ಗಾಡಿ, ಕೊರಡು, ಕುಂಟೆಗಳೆಲ್ಲವನ್ನೂ ತೊಳೆದು ಅವುಗಳಿಗೆ ಸುಣ್ಣ ಹಾಗೂ ಕೆಮ್ಮಣ್ಣುವಿನಿಂದ ಗುಲ್ಲು ಇಡುತ್ತಾರೆ. ಮನೆಯಲ್ಲಿ ಇರುವ ಆಯುಧಗಳನ್ನು ಹಾಗೂ ಯಂತ್ರಗಳನ್ನು ತೊಳೆದು ಪೂಜೆ ಮಾಡುತ್ತಾರೆ. ಅದೇ ಲಕ್ಷ್ಮೀ ಪೂಜೆ.
ವರ್ಷವಿಡೀ ದುಡಿದ ರೈತನಿಗೆ ಕೆಲವೊಮ್ಮೆ ಬೆಳೆ ಮಾರಿದ ಹಣ ಕೂಡ ಬಂದಿರುತ್ತದೆ. ಆಗ ನಿಜಕ್ಕೂ ಲಕ್ಷ್ಮೀ ಪೂಜೆ. ಆಯುಧಗಳ ಜತೆಗೆ ಹಣವನ್ನೂ ಇಟ್ಟು ಕೆಲವೆಡೆ ಪೂಜೆ ಮಾಡುತ್ತಾರೆ.
ಬಲಿಪಾಡ್ಯಮಿಯ ದಿನ ನಿಜಕ್ಕೂ ಹಟ್ಟಿ ಹಬ್ಬ ಅಥವಾ ದೀಪಾವಳಿ. ಬೆಳಗ್ಗೆಯೇ ಮನೆ ಹಾಗೂ ಹಟ್ಟಿ ಹಸಿರು ಮಾವಿನ ತೋರಣಗಳಿಂದ ಸಿಂಗಾರಗೊಂಡಿರುತ್ತದೆ. ಅದನ್ನು ನೋಡಲು ಎರಡು ಕಣ್ಣುಗಳು ಸಾಲವು. ಬೆಳಗ್ಗೆ ಎದ್ದು ಮಹಿಳೆಯರು ಸೆಗಣಿಯಿಂದಲೇ ಕೊಟ್ಟಿಗೆಯಲ್ಲಿ ‘ಹಟ್ಟಿ ’ ( ನವ ದೇವತೆಗಳಿಗಾಗಿ ಒಂಬತ್ತು ಮನೆಯ ಒಂದು ಆವಾಸ ಸ್ಥಾನ ) ಹಾಕುತ್ತಾರೆ .
ಹೋಳಿಗೆ , ಅಕ್ಕಿ ಹುಗ್ಗಿ, ತರ ತರನಾದ ಪಲ್ಯೆ, ಅನ್ನ , ಸಾಂಬಾರು ಮಾಡಿ, ಮನೆ ದೇವರಿಗೆ ನೈವೇದ್ಯ ಮಾಡುತ್ತಾರೆ. ಅನಂತರ ಸೆಗಣಿಯಲ್ಲಿ ಗುಪ್ಪೆಗಳನ್ನು ( ಗುರುಜವ್ವ ದೇವತೆ) ಮಾಡಿ ನಮೆಯ ಎಲ್ಲ ಬಾಗಿಲುಗಳಿಗೆ ಎರಡೆರಡು ಇಡುತ್ತಾರೆ. (ಇದು ದುಷ್ಟ ಶಕ್ತಿಯನ್ನು ಮನೆಯೊಳಗೆ ಬಿಡದಂತೆ ಕಾಪಾಡುವ ಶಕ್ತಿ ಹೊಂದಿದೆ ಎಂಬುದು ಅವರ ನಂಬಿಕೆ.) ನಂತರ ಹಟ್ಟಿಯ ಒಂಬತ್ತು ಕೋಣೆಗಳಿಗೆ ಒಂದೊಂದು ರೀತಿಯ ಬಣ್ಣ ಬಳಿದು, ಅದನ್ನು ಚೆಂಡು ಹೂವು, ಉತ್ರಾಣಿ ಕಡ್ಡಿ, ಅಣ್ಣಿ ಹೂವು, ಗೇರು ಬೀಜ, ಬತ್ತದ ಗರಿ, ಬಾಮ್‌ದಂಡಿ, ಕಬ್ಬು, ಗರಿಕೆ ಹುಲ್ಲು, ಮುಂತಾದ ಹಟ್ಟಿಗೆ ಪ್ರಿಯವಾದ ಹೂವು ಹಣ್ಣುಗಳಿಂದ ಸಿಂಗರಿಸುತ್ತಾರೆ. ನಂತರ ಒಂದು ಮಣ್ಣಿನ ಮಡಕೆಯಲ್ಲಿ ನೀರು ತುಂಬಿ ಅದಕ್ಕೆ ಸೀರೆ, ಅಥವಾ ರವಿಕೆ ಬಟ್ಟೆಯನ್ನು ಹೊದಿಸಿ, ತಾಳಿ ಹಾಕಿ ವಿಶಿಷ್ಟವಾಗಿ ಪೂಜೆ ಮಾಡುತ್ತಾರೆ. ಮನೆಯವರೆಲ್ಲಾ ಪೂಜೆ ಮಾಡಿದ ಬಳಿಕ ಕೃಷಿ ಸಲಕರಣೆಗಳಾದ ನೇಗಿಲು, ನೊಗ, ಎತ್ತಿನ ಗಾಡಿ, ಕುಂಟೆ, ಕೊರಡುಗಳಿಗೂ ಪೂಜೆ ಮಾಡುತ್ತಾರೆ.
ಇದೆಲ್ಲವೂ ಆದ ಮೇಲೆ ಎತ್ತುಗಳಿಗೆ ಹಸುಗಳಿಗೆ ಪೂಜೆ. ಎತ್ತುಗಳನ್ನು ಅಂದು ಕೊಟ್ಟಿಗೆಗೆ ತಂದು ಅವುಗಳಿಗೆ ಪೂಜೆ ಮಾಡಿದ, ನೈವೇದ್ಯ ಮಾಡಿದ ನಂತರ ಮನೆಯವರಿಗೆ ಊಟ...
ಹಬ್ಬ ಇಲ್ಲಿಗೇ ಮುಗಿಯುವುದಿಲ್ಲ ; ನಿಜವಾದ ಹಬ್ಬ ಶುರುವಾಗುವುದೇ ಈಗ...
ದನ ಬೆದರಿಸುವುದು....
ದೀಪಾವಳಿಯು ಬಹು ಮುಖ್ಯವಾಗಿ ರಂಗು ಪಡೆಯುವುದೇ ಮಧ್ಯಾಹ್ನದ ಮೇಲೆ. ಹೌದು, ಬೆದರುವ ಎತ್ತುಗಳನ್ನು ಚೆನ್ನಾಗಿ ಸಿಂಗರಿಸಿ, ಅವುಗಳನ್ನು ಊರ ಅಗಸಿ ಬಾಗಿಲಿನಲ್ಲಿ ಜನರ ಮಧ್ಯೆ ತಂದು ಬಿಡುತ್ತಾರೆ. ಅದಕ್ಕೂ ಮುನ್ನ ಅವುಗಳಿಗೆ ಕೊಬ್ಬರಿ ( ಕೆಲವೆಡೆ ಗಿಟಗ ಎನ್ನುತ್ತಾರೆ) ಸರ ಕಟ್ಟುತ್ತಾರೆ. ಅವುಗಳನ್ನು ಪಡ್ಡೆ ಹುಡುಗರು ಹಿಡಿದು ಕಿತ್ತುಕೊಳ್ಳಬೇಕು( ಕೆಲವೆಡೆ ಇದಕ್ಕೆ ಬಹುಮಾನವೂ ಇರುತ್ತದೆ.).
ಇದನ್ನು ನೋಡುವುದೇ ಹಳ್ಳಿಯ ಜನರಿಗೆ ಒಂದು ಸಂಭ್ರಮ. ಆ ದಿನ ಮಹಿಳೆಯರು, ಮಕ್ಕಳು ವೃದ್ಧರು ಎನ್ನದೇ ಎಲ್ಲರೂ ಅಗಸಿ ಬಾಗಿಲಿನಲ್ಲಿ ನಿಲ್ಲುತ್ತಾರೆ. ಹಬ್ಬವನ್ನು ಮನಸ್ಪೂರ್ವಕವಾಗಿ ಸವಿಯುತ್ತಾರೆ.
ಒಂದೊಂದು ಹೋರಿ ಒಂದೊಂದು ರೀತಿ ಅಂದು ತನ್ನ ತಾಕತ್ತು ಹಾಗೂ ಚಾಕಚಕ್ಯತೆ ಪ್ರದರ್ಶನ ಮಾಡುತ್ತದೆ. ಹೆಚ್ಚು ಸಾರಿ ಜನರ ಮಧ್ಯೆ ಕೊಬ್ಬರಿ ಕಿತ್ತುಕೊಳ್ಳಲು ಅವಕಾಶ ನೀಡದೇ ತಪ್ಪಿಸಿಕೊಂಡು ಬರುವ ಎತ್ತಿಗೆ ಅಂದು ಬಹುಮಾನ. ಅವರ ಮನೆಯವರಿಗೆ ಸಗ್ಗದ ಸಿರಿ. ನಿಜಕ್ಕೂ ಅದು ರೋಮಾಂಚನ. ಇಲ್ಲಿ ಕೆಲವೊಮ್ಮೆ ಅವಘಡಗಳೂ ಸಂಭವಿಸುವ ಸಾಧ್ಯತೆ ಇರುತ್ತದೆ. ಆದರೆ ಆ ಸಂಭ್ರಮದ ನಡುವೆ ಅದೆಲ್ಲವೂ ನಗಣ್ಯ...
ಅದಕ್ಕಾಗಿಯೇ ಇಡೀ ಊರಿನ ಎಲ್ಲ ಮನೆಯಿಂದಲೂ ಹಣ ಸಂಗ್ರಹಿಸಿ ಊರಿನ ಮುಂಭಾಗವನ್ನು ಸಿಂಗಾರ ಮಾಡಿರುತ್ತಾರೆ. ಮೈಕು ಹಾಕಿರುತ್ತಾರೆ. ಹೀಗಾಗಿ ಎಲ್ಲ ಜಾತಿ ಮತ, ಭೇದಗಳನ್ನೂ ಮರೆತು ಸಾಮರಸ್ಯದಿಂದ ಹಬ್ಬ ಆಚರಿಸುತ್ತಾರೆ.
ದೀಪದಿಂದ ದೀಪವ...:
ಸಂಜೆಯಾಗುತ್ತಿದ್ದಂತೆಯೇ ಮಕ್ಕಳಿಗೆ ಸಂಭ್ರಮ. ಹೊತ್ತು ಮುಳುಗುವ ಮುನ್ನವೇ ಪಂಜುಗಳನ್ನು ಹೊತ್ತಿಸುತ್ತಾರೆ ಮಕ್ಕಳು. ಇವು ಒಂದು ತಿಂಗಳ ಮುಂಚೆಯೇ ತಯಾರಾಗಿರುತ್ತವೆ. ಮುತ್ತುಗದ ಮರದಿಂದ ಇವುಗಳನ್ನು ತಯಾರಿಸಿ, ಅವುಗಳನ್ನು ಒಂದು ತಿಂಗಳ ಕಾಲ ಬಿಸಿಲಿನಲ್ಲಿ ಒಣಗಿಸಿರುತ್ತಾರೆ. ಹೀಗಾಗಿ ಅದು ಬೆಂಕಿ ಹೊತ್ತಿಕೊಂಡ ಕ್ಷಣವೇ ಪ್ರಾಂಜಲವಾಗಿ ಉರಿಯುತ್ತದೆ.
ಮಕ್ಕಳು ಊರ ಹೊರಗೆ ಇವುಗಳನ್ನು ಉರಿಸಿ ರಾತ್ರಿ ೧೦ ಗಂಟೆಯವರೆಗೆ ಸಂಭ್ರಮಿಸುತ್ತಾರೆ. ಇಲ್ಲಿ ಪಟಾಕಿ ಶಬ್ದವೇ ಇಲ್ಲ ! ನಿಜಕ್ಕೂ ಇದು ಇಲ್ಲಿ ಬೆಳಕಾಗುತ್ತದೆ. ಇತ್ತ ಮನೆಯ ಅಂಗಳದಲ್ಲಿ ಯುವತಿಯರು, ಮಹಿಳೆಯರು ದೀಪವನ್ನು ಬೆಳಗಿಸುತ್ತಾರೆ. ಎಲ್ಲರ ಮನೆಯಲ್ಲೂ ಅವುಗಳ ಜತೆಗೆ ಆಕಾಶ ಬುಟ್ಟಿ ಕೂಡ ಈಗ ಬೆಳಕು ಚೆಲ್ಲುತ್ತಿವೆ.
ಇದೆಲ್ಲ ಎಷ್ಟು ಅರ್ಥಪೂರ್ಣ ಅಲ್ಲವೇ ? ದೀಪಾವಳಿಯ ಹೆಸರಲ್ಲಿ ಕಿವಿ ಕಿತ್ತುಹೋಗುವಂತೆ ಪಟಾಕಿ ಸಿಡಿಸಿ, ಆಕಸ್ಮಿಕವಾಗಿ ಸುಟ್ಟುಕೊಂಡು ಆರ್ತನಾದ ಅನುಭವಿಸುವುದಕ್ಕಿಂತ ಹಳ್ಳಿಗರ ಈ ಅರ್ಥಪೂರ್ಣ ದೀವಳಿಗೆ ಎಷ್ಟು ಚೆಂದ ?
ನಿಜ, ಮನುಷ್ಯ ದೀಪದಿಂದ ದೀಪ ಹಚ್ಚಿ ಬೆಳಕು ನೀಡುವ ಕೆಲಸ ಮಾಡಬೇಕೇ ಹೊರತು ಬೆಂಕಿ ಮೈ ,ಮನಸುಗಳನ್ನು, ಸಿಡಿಸುವ ಕೆಲಸ ಮಾಡಬಾರದು... ಆಧುನಿಕತೆಯ ಮೋಜಿಗೆ ಬಲಿಯಾಗುವುದಕ್ಕಿಂತ ನಮ್ಮತನವನ್ನು ಎಲ್ಲೆಡೆ ಪಸರಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು.