Wednesday, January 8, 2014

ಎಂಭತ್ತನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ

80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣರಾದ ಹಿರಿಯ ಸಾಹಿತಿ ನಾ.ಡಿಸೋಜ ಅವರ ಭಾಷಣ...
ನಾ. ಡಿಸೋಜ
ಎಲ್ಲ ಅಭಿಮಾನಿ ಕನ್ನಡಿಗರೇ,

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವೊಳೋ
ಅಲ್ಲಿ ಆಕಡೆ ನೋಡಲಾ ಅಲ್ಲಿ ಕೊಡವರ ನಾಡಲಾ ಅಲ್ಲಿ ಕೊಡವರ ಬೀಡಲಾ.
ಸವಿದು ಮೆದ್ದರೋ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು
ಕವಣೆತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು
ಸವರಿ ಆನೆಯ ಸೊಂಡಿಲಲಿ ರಣಕೊಂಬನಾರ್ ಭೋರ್ಗರೆವರೋ
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ
ಅವರು ಸೋಲ್ಸಾವರಿಯರು ಅವರು ಕಡುಗಲಿಗಲಿವರು ಅವರು ಕೊಡಗಿನ ಹಿರಿಯರು ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್
ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮ ದಾನದ ಕಟ್ಟು ಕಟ್ಟಳೆ ರೀತಿ ನೀತಿಯ ಕೋಶವು
ನಮ್ಮ ಕೊಡಗಿದು ಜಮ್ಮದು ಜಮ್ಮ ಕೊಡಗಿದು ನಮ್ಮದು ನಮ್ಮೊಡಲ್ ಬಿಡಲಮ್ಮದು.
ಇದು ಅಗಸ್ತ್ಯನ ತಪದ ಮಣೆ ಕಾವೇರಿ ತಾಯ ತವರ್ಮನೆ
ಕನಸಸಿರಿಗುಯ್ಯಾಲೆ ತೂಗಿನಿಲ್ಲಿ ಚಂದಿರವರ್ಮನೆ
ಇದಕೋ ಚಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು
ಇದೋ ಇದೋ ಇಲ್ಲುರುಳ್ದ ಹಾಲೇರಿಯರ ಬಲಗಿರಿ ಶೃಂಗವು
ವಿಧಿಯ ಮಾಟದ ಕೊಡಗಿದು ಮೊದಲೆ ನಮ್ಮದು, ಕಡೆಗಿದು ಕದಲದೆಮ್ಮನು ಬೆಡಗಿದುಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ ಸುಮ್ಮನಿತ್ತರೋ ದಟ್ಟಿ ಕುಪ್ಪಸ ? ಹಾಡು ಹುತ್ತರಿಗೇಳಿರಿ ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ ನೆಮ್ಮದಿಯನಿದು ತಾಳಲಿ ಅಮ್ಮೆಯಾ ಬಲ ತೋಳಲಿ ನಮ್ಮ ಕೊಡಗಿದು ಬಾಳಲಿ ಪಂಜೆ ಮಂಗೇಶ ರಾವ್ (1874=1937)
ಪಂಜೆ ಮಂಗೇಶ ರಾಯರ ಈ ಕವಿತೆ ಚಿಕ್ಕಂದಿನಲ್ಲಿಯೇ ನನ್ನನ್ನ ಆಕರ್ಷಿಸಿತ್ತು. ಪಂಜೆಯವರು ಕೊಡಗಿನ ಈ ಶ್ರೀಮಂತಿಕೆಯನ್ನ, ಪರಿಸರದ ವೈಭವವನ್ನ, ಕೊಡಗರ ಧೀರತನವನ್ನ ಸೆರೆ ಹಿಡಿದದ್ದು ಕೇವಲ ಭಾಷೆಯ ಮೂಲಕ. ಇಂತಹಾ ಒಂದು ಘನತೆ ನಮ್ಮ ಭಾಷೆಗೆ ಇದೆ ಅನ್ನುವುದೇ ಒಂದು ವಿಶೇಷತೆ.
ಓರ್ವ ಮಹಾನ್ ಕಲಾವಿದ ಕೈಲಿದ್ದ ಕಲಾ ಕುಂಚವನ್ನ ವಿವಿಧ ಬಣ್ಣಗಳಲ್ಲಿ ಅದ್ದಿ ವಿಸ್ತಾರವಾದ ಕ್ಯಾನವಾಸಿನ ಮೇಲೆ ಒಂದು ಭವ್ಯವಾದ ಚಿತ್ರವನ್ನ ರಚಿಸಿದ ಹಾಗೆ ಪಂಜೆಯವರು ಈ ಪದ್ಯದಲ್ಲಿ ಕೊಡಗನ್ನ ಬಣ್ಣಿಸಿದ್ದಾರೆ. ಇದು ನನ್ನ ಆಕರ್ಷಣೆಗೆ ಕಾರಣ. ಆದರೆ ಈ ಸುಂದರ ಭವ್ಯ ಪ್ರದೇಶವನ್ನ ನೋಡ ಬೇಕು ಅನ್ನುವ ನನ್ನ ಕನಸು ನನಸಾದದ್ದು ತುಸು ತಡವಾಗಿ. ನನ್ನ ಮಗಳ ಮದುವೆಯ ನಂತರ ನನ್ನ ಮಗಳು ಅಳಿಯನ ಜೊತೆಯಲ್ಲಿ ನಾನು ಕೊಡಗಿಗೆ ಬಂದೆ. ಇಲ್ಲೆಲ್ಲ ಸುತ್ತಾಡಿದೆ. ಸಾಲಲಿಲ್ಲ. ಮತ್ತೊಮ್ಮೆ ನನ್ನ ಹೆಂಡತಿ ಜೊತೆಗೆ ಕೊಡಗಿಗೆ ಬಂದೆ. ತಲಕಾವೇರಿ, ಭಾಗಮಂಡಲದಿಂದ ರಾಜಾ ಸೀಟಿನವರೆಗೆ ಕೊಡಗನ್ನ ಕಂಡೆ.
ನಾನು ಮಲೆನಾಡಿನವ. ನಮ್ಮಲ್ಲಿ ಗುಡ್ಡಗಳು ವಿಸ್ತಾರ, ಕಣಿವೆಗಳು ಆಳ. ಆದರೆ ಕೊಡಗಿನ ಬೆಟ್ಟಗಳು ಹತ್ತಿರ ಹತ್ತಿರ ಒಂದನ್ನೊಂದು ಒತ್ತಿ ನಿಂತು ಕೊಂಡವು. ನಮ್ಮ ಮಲೆನಾಡಿನ ಪರಿಸರಕ್ಕಿಂತ ಭಿನ್ನವಾದ ಪರಿಸರವನ್ನ ನಾನಿಲ್ಲಿ ಕಂಡೆ. ಇದಕ್ಕೆ ಕಾರಣ ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿ ಪ್ರಾರಂಭವಾಗುವುದೇ ಕೊಡಗಿನಿಂದ. ಕೊಡಗನ್ನ ಕರ್ನಾಟಕದ ಸ್ವಿಜರಲ್ಯಾಂಡ ಎಂದು ಕರೆಯುತ್ತಾರೆ. ನಾನು ನನ್ನ ನಾಡನ್ನ ಹೊಗಳಲಿಕ್ಕೆ ಬೇರೊಂದು ದೇಶವನ್ನ ಎರವಲು ಪಡೆಯಲು ಹೋಗುವುದಿಲ್ಲ. ಕೊಡಗು ಕೊಡಗೆ. ಸಮುದ್ರಕ್ಕೆ ಸುಮುದ್ರವೇ ಉಪಮೆಯಂತೆ. ಹಾಗೆಯೇ ಕೊಡಗಿಗೆ ಕೊಡಗೇ ಉಪಮೆ. ಇಲ್ಲಿಯ ಜನಜೀವನ, ಬದುಕಿನ ಕ್ರಮ, ಶ್ರೀಮಂತಿಕೆ, ಭಾಷೆ, ವೀರಯೋಧರನ್ನ ಸದಾ ದೇಶಕ್ಕೆ ಮೀಸಲಿಡುವ ಪರಂಪರೆ, ಕ್ರೀಡಾ ಪಟುಗಳ ಜನ್ಮ ಭೂಮಿ ಇದು. ಇದೆಲ್ಲವೂ ನಾವು ಕನ್ನಡಿಗರು ಹೆಮ್ಮೆ ಪಡುವಂತಹದು. ಇದೀಗ ಮೂರನೇ ಬಾರಿ ನಾನು ಕೊಡಗಿಗೆ ಬಂದಿದ್ದೇನೆ. ಬಂದಿದ್ದೇನೆ ಅನ್ನುವುದಕ್ಕಿಂತ ಕನ್ನಡ ಜನ ನನ್ನನ್ನ ಇಲ್ಲಿಗೆ ಬರಮಾಡಿ ಕೊಂಡಿದ್ದಾರೆ, ಪ್ರೀತಿಯಿಂದ, ಮಮತೆಯಿಂದ, ವಿಶ್ವಾಸದಿಂದ, ಆದರದಿಂದ, ಆತ್ಮೀಯತೆಯಿಂದ. ಕಳೆದ 50 ವರ್ಷಗಳ ನನ್ನ ಕನ್ನಡ ಸೇವೆಯನ್ನ ಗುರುತಿಸಿ ನನಗೆ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನ ದಯಪಾಲಿಸಿ ನನ್ನನ್ನ ಇಲ್ಲಿಗೆ ಬರಮಾಡಿಕೊಂಡಿದ್ದಾರೆ.
ಕೊಡಗು ಐತಿಹಾಸಿಕವಾಗಿ, ಜಾನಪದೀಯವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ನೈಸಗರ್ಿಕವಾಗಿ ಶ್ರೀಮಂತವಾದ ಪ್ರದೇಶ. ದೇಶದ ರಕ್ಷಣೆಯ ವಿಷಯಕ್ಕೆ ಬಂದಾಗ ಸದಾ ಮುಂಚೂಣಿಯಲ್ಲಿ ಇರುವ ಪ್ರದೇಶ ಇದು. ನಮ್ಮ ಸೇನಾ ಹಿನ್ನೆಲೆಯಲ್ಲಿ ಪ್ರಭಾವಶಾಲಿಯಾಗಿ ನಿಂತ ಓರ್ವ ಯೋಧ ಜನರಲ್ ಕಾರಿಯಪ್ಪ ಕುರಿತು ಮಕ್ಕಳಿಗಾಗಿ ನಾನು ಒಂದು ಪುಸ್ತಕವನ್ನ ಬರೆದಿದ್ದೇನೆ ಕೂಡ. ಕನ್ನಡ, ಮಲೆಯಾಳಿ, ತಮಿಳಿನಿಂದ ಪ್ರಭಾವಿತವಾದ ಕೊಡಗು ಭಾಷೆ ಮೂಲದಲ್ಲಿ ಅವಲಂಬಿಸಿ ಕೊಂಡಿರುವುದು ಕನ್ನಡ ಶಬ್ದಗಳನ್ನೇ ಎಂದು ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಕೊಡಗಿನ ಪ್ರಖ್ಯಾತ ಕವಿಗಳೆಂದರೆ ಅಪ್ಪನೆರವಂಡಪ್ಪುಚ್ಚ ಕವಿ, ನಡಕೇರಿಯಿಂಡ ಚಿಣ್ಣಪ್ಪ ಕವಿ. ಕನ್ನಡ ಸಾಹಿತ್ಯಕ್ಕೆ ಅಪರೂಪದ ಸಣ್ಣ ಕತೆ ನೀಡಿದ ಕೊಡಗಿನ ಗೌರಮ್ಮನವರನ್ನ ಎಂದೂ ಮರೆಯಲಾಗದು. ಅಂತೆಯೇ ಕೊಡಗಿನ ಪ್ರಖ್ಯಾತ ಲೇಖಕರಾದ ಐ. ಮಾ. ಮುತ್ತಣ್ಣ, ಬಿ. ಗಣಪತಿ, ಎಸ್. ಚಿನ್ನಪ್ಪ ಮೊದಲಾದವರನ್ನು ಸಹ. ಕ್ರಿಸ್ತಶಕ ಎರಡನೇ ಶತಮಾನದಿಂದ ಪ್ರಾರಂಭವಾಗುವ ಕೊಡಗಿನ ಇತಿಹಾಸ ರೋಮಾಂಚನವನ್ನ ಉಂಟು ಮಾಡುವಂತಹದು.
ಕರ್ನಾಟಕದ ಪ್ರಥಮ ದೊರೆಯೆಂದೇ ಪ್ರಖ್ಯಾತನಾದ ಕದಂಬ ಮಯೂರ ವರ್ಮನ ವಂಶದವನಾದ ಚಂದ್ರ ವರ್ಮ ಕೊಡಗಿನ ಮೂಲ ಪುರುಷ. ಗಂಗ, ಕದಂಬ, ಚೋಳ, ಕೊಂಗಾಳ್ವರು, ಚೆಂಗಾಳ್ವರು, ಹೊಯ್ಸಳ, ವಿಜಯನಗರದ ಅರಸರು, ಇಲ್ಲಿ ರಾಜ್ಯವನ್ನ ಆಳಿದ್ದಾರೆ. ದೂರದ ನಮ್ಮ ಇಕ್ಕೇರಿಯ ಅರಸರು ಕೊಡಗರ ಹೆಣ್ಣನ್ನ ಮಲೆನಾಡಿಗೆ ಕೊಂಡೊಯ್ದದ್ದು ನಮಗೆ ಮಲೆನಾಡಿಗರಿಗೆ ಹೆಮ್ಮೆಯ ವಿಷಯ. ಇದೆಲ್ಲದರ ಕುರುಹಾಗಿ ಹಿಂದಿನ ಅವಶೇಷಗಳು, ದೇವಾಲಯಗಳು ಇಲ್ಲಿವೆ. ಈ ದೊರೆಗಳ ಕಾಲದ ಶಾಸನಗಳು ದೊರೆತಿವೆ. ಇಂತಹಾ ಒಂದು ಮಣ್ಣಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣ ಎಂದು ನಾನು ಬಗೆಯುತ್ತೇನೆ.
ನನ್ನ ಬಗ್ಗೆ ಎರಡು ಮಾತು
ನನ್ನ ಮನೆ ಮಾತು ಕೊಂಕಣಿ. ಗೋವೆಯಲ್ಲಿ ಧಾರ್ಮಿಕ ವಿಚಾರಣೆ ಅನ್ನುವಂತಹ ತುಸು ಕ್ರೂರವಾದ ಒಂದು ಪ್ರಕ್ರಿಯೆ ನಡೆದಾಗ ಅದನ್ನ ಎದುರಿಸಲಾರದೆ ಕೊಂಕಣಿ ಜನ ಕರ್ನಾಟಕಕ್ಕೆ ಓಡಿ ಬಂದಾಗ ಇಲ್ಲಿಯ ಇಕ್ಕೇರಿ ದೊರೆಗಳು ನಮಗೆ ಆಶ್ರಯ ನೀಡಿದರು. ಅಲ್ಲಿಂದ ವಿವಿಧ ವೃತ್ತಿ ಧರ್ಮಗಳನ್ನ ನಂಬಿದ ಕೊಂಕಣಿ ಜನ ಇಲ್ಲಿ ಇಲ್ಲಿಯವರೇ ಆಗಿ ಬದುಕಿದ್ದಾರೆ. ಅವರ ಭಾಷೆ, ಸಂಸ್ಕೃತಿ, ಜೀವನ ವಿಧಾನ ತುಸು ಬೇರೆ. ಆದರೂ ಕನ್ನಡ ನಾಡಿನವರೇ ಆಗಿ ಇಂದು ಉಳಿದಿದ್ದಾರೆ. ಉದ್ಯಮಿಗಳು, ಬ್ಯಾಂಕರುಗಳು, ಲೇಖಕರು, ಕಲಾವಿದರು ಕೊಂಕಣಿಯನ್ನ ಮಾತನಾಡುತ್ತಲೇ ಕನ್ನಡದ ಸೇವೆ ಮಾಡಿದ್ದಾರೆ. ಕನ್ನಡದ ಪ್ರಖ್ಯಾತ ಚುಟುಕು ಕವಿ ದಿನಕರ ದೇಸಾಯಿ ಹೇಳಿದ್ದಾರೆ-
ಕನ್ನಡದ ಜೊತೆಗೆ ಕೊಂಕಣಿ ಮಾತನಾಡಿ ಒಂದುಗೂಡಿದವು ಎರಡು ಜೀವನಾಡಿ ಎರಡು ಪಕಳೆಯ ಹೂವು ಹಣ್ಣಾಗಿ ಕಾಯಿ
ಕಾಯಿ ಹಣ್ಣಾದೊಡನೆ ಜೀವನ ಮಿಠಾಯಿ.
ಹೀಗೆ ಕೊಂಕಣಿಯ ಜೊತೆಗೆ ಕನ್ನಡ ಮಾತನಾಡಿ ತಮ್ಮ ಜೀವನವನ್ನ ಮಿಠಾಯಿ ಮಾಡಿ ಕೊಂಡವರು ಬಹಳ ಜನ ಇದ್ದಾರೆ. ಗೋವಿಂದ ಪೈಗಳು, ಗೌರೀಶ ಕಾಯ್ಕಿಣಿ, ಗೋಪಾಲ ಕೃಷ್ಣ ಪೈ, ಸಂತೋಷ ಕುಮಾರ ಗುಲ್ವಾಡಿ, ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ಇನ್ನೂ ಹಲವರು ಕೊಂಕಣಿ ಮನೋಭಾವದ ಕನ್ನಡಿಗರು. ಕನ್ನಡದ ಸೇವೆ ಮಾಡಿದವರು. ಕೊಂಕಣಿ ಬಹಳ ಪುರಾತನವಾದ ಭಾಷೆ, ಬಹಳ ಅಪರೂಪದ ಜಾನಪದ ಹಿನ್ನೆಲೆಯನ್ನ ಉಳ್ಳಂತಹದು, ಇದರ ಪ್ರಯೋಜನವನ್ನ ಈ ಕೊಂಕಣಿ ಜನ ಕನ್ನಡಕ್ಕೆ ಧಾರೆ ಎರೆದು ಕನ್ನಡವನ್ನ ಶ್ರೀಮಂತ ಗೊಳಿಸಿದ್ದಾರೆ. ನಾನು ಕೂಡ ನನ್ನ ಅಮ್ಮ ನನಗೆ ಹೇಳುತ್ತಿದ್ದ ಕೊಂಕಣಿಯ ಅದ್ಭುತ ಕತೆಗಳನ್ನ ಕೇಳಿ ಬೆಳೆದವನು. ಕೊಂಕಣಿ ಹಾಡು, ಗಾದೆ, ಒಗಟು ನನಗೆ ಪ್ರಿಯವಾಗಿತ್ತು. ಜೊತೆ ಜೊತೆಗೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ನನ್ನ ತಂದೆ ನನಗೆ ಕನ್ನಡದ ಕಡೆಗೆ ಕರೆದು ಕೊಂಡು ಹೋದರು. ಮಕ್ಕಳಿಗೆ ಕಲಿಸಲೆಂದೇ ಅವರು ಬರೆದು ಇರಿಸಿ ಕೊಂಡ ಪುಸ್ತಕದ ಒಂದು ಕವಿತೆ ನನ್ನನ್ನ ಹೊಸದೊಂದು ಪ್ರಪಂಚಕ್ಕೆ ಕರೆದೊಯ್ದಿತು.
ಸಮ್ಮೇಳನಾಧ್ಯಕ್ಷರ ಜೊತೆಗೆ ಸಿ ಎಂ ಸಿದ್ದರಾಮಯ್ಯ, ಕೋ. ಚೆನ್ನಬಸಪ್ಪ, ಸಚಿವ ಮಹದೇವ ಪ್ರಸಾದ್, ಉಮಾಶ್ರೀ, ಪುಂಡಲೀಕ ಹಾಲಂಬಿ.
ತೆಂಗಿನ ಮರಗಳು ಕುಳ್ಳಾಗಿದ್ದು ಕಾಯ್ಗಳು ಕೈಗೆ ಸಿಗುವಂತಿದ್ದು ಕೊಬ್ಬರಿ ಎಲ್ಲ ಮೇಲ್ಗಡೆ ಇರಲು ಎಳನೀರಿನ ಮುಚ್ಚಳ ತೆಗೆದಿರಲು ಎಷ್ಟೋ ಚೆನ್ನಾಗಿರುತ್ತಿತ್ತು ಇನ್ನೂ ಚೆನ್ನಾಗಿರುತ್ತಿತ್ತು  ಅನ್ನುವ ಈ ಕವಿತೆ ಕನ್ನಡದ ಎಳನೀರಿನ ಪರಿಚಯ ನನಗೆ ಮಾಡಿ ಕೊಟ್ಟಿತು. ನಾನು 5ನೇ ವಯಸ್ಸಿನಲ್ಲಿ ಕನ್ನಡದ ಮೋಹಕ್ಕೆ ಒಳಗಾದೆ. ಅಂದು ನಾನು ಬೆಳೆಸಿ ಕೊಂಡ ಈ ಮೋಹ ಇಂದು ನನ್ನನ್ನ ಇಲ್ಲಿಗೆ ಕರೆತಂದು ನಿಲ್ಲಿಸಿದೆ. ಆದರೆ ಇದು ನಾನು ಒಂಟಿಯಾಗಿ ಮಾಡಿದ ಪಯಣವಲ್ಲ. ನನ್ನ ಬರವಣಿಗೆಗೆ ನನ್ನ ಮಿತ್ರರು, ಪತ್ರಿಕಾ ಸ್ನೇಹಿತರು ಸಾಥ್ ನೀಡಿದ್ದಾರೆ. ನನ್ನನ್ನ ಹುರಿದುಂಬಿಸಿದ್ದಾರೆ, ನಾನು ಬರೆದುದನ್ನ ಮೆಚ್ಚಿ ಕೊಂಡಿದ್ದಾರೆ. ನನ್ನ ನೋವಿಗೆ ಮಿಡಿದಿದ್ದಾರೆ. ಅವರೆಲ್ಲರನ್ನ ಸ್ಮರಿಸುವುದು ನನ್ನ ಕರ್ತವ್ಯ. ಇಂತಹಾ ಒಂದು ಸ್ಥಾನವನ್ನ ನನಗೆ ದೊರಕಿಸಿ ಕೊಡಲು ಕಾರಣರಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಮತ್ತು ಎಲ್ಲ ಪದಾಧಿಕಾರಿಗಳಿಗೆ, ಜಿಲ್ಲಾ ಅಧ್ಯಕ್ಷರುಗಳಿಗೆ, ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೆ, ನನಗೆ ಈ ಸ್ಥಾನ ಲಭ್ಯವಾಗಿದೆ ಅನ್ನುವುದನ್ನ ಕೇಳಿ ಸಂಭ್ರಮಿಸಿದ ಸಮಸ್ತ ಕನ್ನಡ ಕುಲ ಬಾಂಧವರಿಗೆ ನಾನು ನನ್ನ ಕೃತಜ್ಞತೆಯನ್ನ ಹೇಳುತ್ತಿದ್ದೇನೆ. ನೀವು ತೋರಿದ ಈ ಪ್ರೀತಿ ಕನ್ನಡ ಭಾಷೆಯ ಬಗ್ಗೆ ನೀವು ವ್ಯಕ್ತ ಪಡಿಸಿದ ಪ್ರೀತಿ ಎಂದು ತಿಳಿಯುತ್ತೇನೆ.
ಸಾಹಿತ್ಯ ಮತ್ತು ಕಲೆ :
ನಮ್ಮ ಜನ ಯಾವತ್ತೂ ಸಾಹಿತ್ಯಕ್ಕೆ ಹೆಚ್ಚಿನ ಸ್ಥಾನಮಾನವನ್ನ ಕೊಡುತ್ತ ಬಂದಿದ್ದಾರೆ. ಸಾಹಿತ್ಯ ಸಮ್ಮೇಳನ ಅಂದರೆ ಇಡೀ ನಾಡಿನ ಉದ್ದಕ್ಕೂ ಒಂದು ಸಂಚಲನ ಕಾಣಿಸುತ್ತದೆ. ಸಾಹಿತ್ಯ ಸಮ್ಮೇಳನಗಳನ್ನ ಸಂತೆ ಜಾತ್ರೆ ಎಂದು ಕೆಲವರು ಕರೆದರೂ ಅದಕ್ಕೆ ಬರುವ ಜನ ಕಡಿಮೆ ಆಗಿಲ್ಲ. ಸಮ್ಮೇಳನದ ಗೋಷ್ಠಿಗಳಲ್ಲಿ ಜನ ಭಾಗವಹಿಸುತ್ತಾರೆ, ಕವಿ ಗೋಷ್ಠಿಯನ್ನ ಕೇಳುತ್ತಾರೆ. ಪುಸ್ತಕ ಪ್ರದರ್ಶನದ ಪ್ರಯೋಜನ ಪಡೆದು ಕೊಳ್ಳುತ್ತಾರೆ.ಸಮ್ಮೇಳನ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನ ಹೆಚ್ಚು ಮಾಡಿ ಕೊಳ್ಳುತ್ತದೆ. ಈ ಸಮ್ಮೇಳನವನ್ನ ಬೇರೊಂದು ರೀತಿಯಲ್ಲಿ ನಡೆಸಬೇಕು ಅನ್ನುವ ಮಾತು ಇದೆಯಾದರೂ ಅದಕ್ಕೊಂದು ಪರ್ಯಾಯ ರೂಪ ಕೊಡಲು ಯಾರಿಂದಲೂ ಆಗಿಲ್ಲ. ಇದಕ್ಕೆ ಕಾರಣ, ಮೊದಲನೆಯದು ಸಾಹಿತ್ಯ ಬದುಕನ್ನ ಪ್ರತಿ ಬಿಂಬಿಸುತ್ತದೆ ಅನ್ನುವುದು; ಎರಡನೆಯದು ಅದೊಂದು ಭಾಷೆಯನ್ನ ಅವಲಂಬಿಸಿ ಕೊಂಡಿದೆ ಅನ್ನುವುದು. ಈ ಬದುಕು ನಮಗೆ ಬಹಳ ಪ್ರಿಯವಾದದ್ದು. ನಮ್ಮ ಸುಖ, ನೋವು, ಕಷ್ಟ, ತಾಪತ್ರಯಗಳು ಅದೆಷ್ಟೇ ಇರಲಿ ಬದುಕಿಗೆ ವಿಮುಖವಾಗಿ ಹೋಗಲಿಕ್ಕೆ ನಾವು ಬಯಸುವುದಿಲ್ಲ. ನಮ್ಮಲ್ಲಿ ಬದುಕನ್ನ ಧಿಕ್ಕರಿಸಿ ಸನ್ಯಾಸಿಗಳಾಗುವವರು ಕೆಲವರೇ ಆದರೆ ಉಳಿದವರೆಲ್ಲ ಪರಿಸ್ಥಿತಿ ಏನೇ ಬರಲಿ ಬದುಕ ಬೇಕು ಅನ್ನುವವರು. ಆತ್ಮಹತ್ಯಗೆ ನಮ್ಮಲ್ಲಿ ಗೌರವ ಇಲ್ಲ. ಇರಬೇಕು ಇದ್ದು ಜಯಿಸ ಬೇಕು ಅನ್ನುವುದು ನಮ್ಮ ಧ್ಯೇಯ. ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿ ಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ನಮ್ಮ ದಾಸರು ಹೇಳಿದ್ದಾರೆ. ಇಂತಹಾ ಬದುಕಿನ ಬಗ್ಗೆ ನಮಗೆ ನೇರವಾಗಿ ತಿಳಿಸಿ ಕೊಡುವುದು ಸಾಹಿತ್ಯ.
ನಮ್ಮಲ್ಲಿ ಸದಾ ಮತ್ತೊಬ್ಬರು ಬದುಕನ್ನ ಹೇಗೆ ಎದುರಿಸಿದರು ಅನ್ನುವುದರ ಬಗ್ಗೆ ಕುತೂಹಲ ಇರುತ್ತದೆ. ಈ ಕುತೂಹಲವನ್ನ ತಣಿಸೋದು ಸಾಹಿತ್ಯ. ಈ ಕೆಲಸವನ್ನ ಬೇರೆ ಕಲಾ ಮಾಧ್ಯಮಗಳು ಮಾಡಿದರೂ ಕೂಡ ಒಂದು ಕ್ರಮದಲ್ಲಿ ಒಂದು ಮಾದರಿಯಲ್ಲಿ ಸರಳವಾಗಿ ಈ ಕೆಲಸ ಮಾಡುವುದು ಸಾಹಿತ್ಯ. ಇದಕ್ಕಾಗಿ ಸಾಹಿತ್ಯದ ಬಗ್ಗೆ ನಮಗೆ ಗೌರವ. ಇದು ಸಾಹಿತ್ಯವನ್ನ ನಾವು ಗೌರವಿಸಲಿಕ್ಕೆ ಒಂದು ಕಾರಣ ಅಂತ ನಾನು ತಿಳಿದಿದ್ದೇನೆ. ಅದು ಕತೆ ಕಾದಂಬರಿ ಕಾವ್ಯ ನಾಟಕ ಬೇರೆ ಯಾವುದೇ ಸಾಹಿತ್ಯ ಪ್ರಕಾರವೇ ಇರಲಿ ಅದು ಬದುಕನ್ನ ಕುರಿತೇ ಇರುತ್ತದೆ. ನಾವು ಬದುಕುವ ಧಾವಂತದಲ್ಲಿ ಬದುಕುತ್ತ ಹೋಗಿ ಬಿಡುತ್ತೇವೆ. ನಾವೇನು ತಪ್ಪು ಮಾಡಿದ್ದೇವೆ ಅನ್ನುವುದು ನಮಗೆ ತಿಳಿಯದೇ ಹೋಗಿ ಬಿಡುತ್ತದೆ. ಅಧಿಕಾರವನ್ನ ಹಣವನ್ನ ಹೆಣ್ಣನ್ನ ಭೋಗಿಸುವಾಗ ನಮ್ಮ ವರ್ತನೆ ಏನಾಗಿತ್ತು ಅನ್ನುವುದು ನಮಗೆ ತಿಳಿಯುವುದಿಲ್ಲ. ಇಂತಹಾ ಸಂದರ್ಭದಲ್ಲಿ ನಮ್ಮ ಬದುಕಿನ ಪುನರಾವಲೋಕನ ಮಾಡಲು ಸಾಹಿತ್ಯ ನಮಗೆ ನೆರವು ನೀಡುತ್ತದೆ. ಮತ್ತೊಬ್ಬರ ಕತೆಯನ್ನ, ಬದುಕನ್ನ ನಮ್ಮ ಮುಂದೆ ತೆರೆದು ಇಡುವುದರ ಮೂಲಕ ಸಾಹಿತ್ಯ ನಮ್ಮ ಬದುಕನ್ನ ನಾವೇ ಪರಿಶೀಲಿಸಿ ಕೊಳ್ಳುವ ಅವಕಾಶವನ್ನ ಕಲ್ಪಸಿ ಕೊಡುತ್ತದೆ. ಸಾಹಿತ್ಯವನ್ನ ನಾವು ಮೆಚ್ಚಿ ಕೊಳ್ಳಲು ಕೂಡ ಇದೇ ಕಾರಣ. ಬದುಕಿನ ಪುನರಾವಲೋಕನಕ್ಕೆ ಅವಕಾಶ ಮಾಡಿ ಕೊಡುವುದೇ ಸಾಹಿತ್ಯದ ವಿಶೇಷತೆ. ಇದನ್ನ ನಾವೆಲ್ಲ ಗೌರವಿಸುವುದು ಇದೇ ಕಾರಣಕ್ಕೆ. ಇನ್ನು ಎರಡನೆಯದಾಗಿ ಸಾಹಿತ್ಯ ತನ್ನ ಕೆಲಸಕ್ಕೆ ಭಾಷೆಯನ್ನ ಅವಲಂಬಿಸಿ ಕೊಂಡಿರುತ್ತದೆ. ಕಲಾವಿದ ಬಣ್ಣವನ್ನ, ಸಂಗೀತಗಾರ ರಾಗ ಆಲಾಪನೆಯನ್ನ, ನಟ ಅಭಿನಯವನ್ನ, ನರ್ತಕ ಮುದ್ರೆಗಳನ್ನ ಬಳಸಿದರೆ ಸಾಹಿತಿ ಕೇವಲ ಭಾಷೆಯನ್ನ. ಹೌದು ಕೇವಲ ಭಾಷೆಯನ್ನ ಬಳಸಿ ಕೊಳ್ಳುತ್ತಾನೆ. ಈ ಭಾಷೆ ಕೆಲ ಶಬ್ದಗಳ ಜಂಜಡ ಅಲ್ಲ. ಗೊಂದಲ ಅಲ್ಲ. ಭಾಷೆಗೆ ಒಂದು ಜಾನಪದ ಶ್ರೀಮಂತಿಕೆ, ಭವ್ಯ ಇತಿಹಾಸ, ಒಂದು ಪರಂಪರೆ ಒಂದು ಜೀವನ ವಿಧಾನ ಇರುತ್ತೆ. ಇಂತಹಾ ಭಾಷೆಯನ್ನ ಲೇಖಕ ತನ್ನ ಸಂವಹನಕ್ಕೆ ಬಳಸಿ ಕೊಳ್ಳುತ್ತಾನೆ. ಭಾಷೆಯ ಮೂಲಕವೇ ಲೇಖಕ ಎಲ್ಲವನ್ನ ತಂದು ಓದುಗನಿಗೆ ತಲುಪಿಸುತ್ತಾನೆ. ಒಂದು ಪುಸ್ತಕವನ್ನ ಓದುತ್ತ ಓದುಗ ಬೆರಗಾಗುತ್ತಾನೆ, ಕಂಬನಿ ಮಿಡಿಯುತ್ತಾನೆ, ಸಂತೋಷ ಪಡುತ್ತಾನೆ. ಇದು ಪುಸ್ತಕ ಮಾಡುವ ಪರಿಣಾಮ ಎಂದು ನಾನು ತಿಳಿಯುತ್ತೇನೆ. ಅಲೆಕ್ಷಾಂಡರನ ಆಸ್ಥಾನಕ್ಕೆ ಬಂದ ಓರ್ವ ಕಲಾವಿದ ಕಲಾತ್ಮಕವಾಗಿ ಕೆತ್ತಿದ ಒಂದು ಕರಂಡಕವನ್ನ ದೊರೆಗೆ ಕಾಣಿಕೆಯಾಗಿ ನೀಡಿದ. ಅದರಲ್ಲಿ ಏನನ್ನ ಇಡುವುದು ಅನ್ನುವ ಪ್ರಶ್ನೆ ಬಂದಿತು. ಜನ ಒಂದೊಂದು ಸಲಹೆ ನೀಡಿದರು. ದೊರೆಯ ಪಟ್ಟದ ಕತ್ತಿ, ಉಂಗುರ, ಕಿರೀಟ ಇಡಿ ಎಂದರು ಜನ. ಆದರೆ ಕೊನೆಗೆ ಅಲೆಕ್ಸಾಂಡರ್ ನುಡಿದ ಈ ಕಲಾತ್ಮಕವಾದ ಕರಂಡಕದಲ್ಲಿ ಏನನ್ನಾದರೂ ಇಡಬೇಕು ಅಂದರೆ ಅದು ಗ್ರೀಕ್ ಭಾಷೆಯ ಶ್ರೇಷ್ಠ ಕೃತಿಗಳಾದ ಒಡೆಸ್ಸಿ ಹಾಗೂ ಎಲಿಯಡ್ಡನ್ನ ಇಡಬೇಕು ಎಂದ ಆತ. ಜನ ಆಗ ಅದನ್ನ ಒಪ್ಪಿಕೊಂಡರು. ಅಂದರೆ ಪುಸ್ತಕ ಅನ್ನುವ ವಸ್ತು ಶ್ರೇಷ್ಠವಾದದ್ದು. ಇಂತಹ ಪುಸ್ತಕದ ಮೂಲಕ ಭಾಷೆ ಮಾಡುವ ಮ್ಯಾಜಿಕ್ ಬಹಳ ದೊಡ್ಡದು ಎಂದು ನಾನು ನಂಬುತ್ತೇನೆ.

ಲೇಖಕ ಇಂತಹ ಭಾಷೆ ಉಳಿಯ ಬೇಕು ಎಂದು ಬಯಸುವುದು ಇದಕ್ಕಾಗಿ. ಆತ ಹೋರಾಟ ಮಾಡುವುದು, ಭಾಷೆಯ ಶಕ್ತಿ ಅವನಿಗೆ ಗೊತ್ತಿದೆ ಅನ್ನುವ ಕಾರಣಕ್ಕೆ. ಸರಸ್ವತಿಯನ್ನ ಅಕ್ಷರ ಮಾಲಾ ಪುಸ್ತಕ ಧಾರಿಣಿ ಎಂದು ಒಪ್ಪಿಕೊಂಡವರು ನಾವು. ಶೃಂಗೇರಿಯ ಶಾರದೆಯ ಕೈಯಲ್ಲಿ ಪುಸ್ತಕವಿದೆ. ಒಂದು ಕಾಲದಲ್ಲಿ ಜ್ಞಾನ ಅನ್ನುವುದು ಪುಸ್ತಕದ ಮೂಲಕವೇ ನಮಗೆ ಲಭ್ಯವಾಗುತ್ತಿತ್ತು. ಪುಸ್ತಕ ಭಂಡಾರಗಳ ಅಭಿವೃಧ್ದಿಯ ಮೂಲಕವೇ ಹೊಸ ಸಾಧನೆಗಳನ್ನ ಮಾಡಿದ ದೇಶಗಳೂ ಇವೆ. ಆದರೆ ಇಂದು ಪುಸ್ತಕದ ಜಾಗದಲ್ಲಿ ಕಂಪ್ಯೂಟರ್, ಲ್ಯಾಪಟಾಪ್, ಮೊಬೈಲ, ಟ್ಯಾಬ್ ಇಂಟರ್ ನೆಟ್ ಬಂದಿದೆ. ಒಂದು ಕಾಲದಲ್ಲಿ ಪುಸ್ತಕಗಳನ್ನ ಓದಿ ಅಲ್ಲಿಯ ಆಗುಹೋಗುಗಳ ಕುರಿತು ಮಾತನಾಡುತ್ತಿದ್ದ ನಮ್ಮ ಓದುಗ ವರ್ಗ ಇಂದು ಈ ವಿದ್ಯುನ್ಮಾನ ಮಾಧ್ಯಮಗಳ ಕೈಯಲ್ಲಿ ಸಿಕ್ಕಿ ಬಿದ್ದಿದೆ. ಈ ಯಂತ್ರದ ಹಿಂದೆ ಈ ಆಧುನಿಕ ಯಂತ್ರವನ್ನ ಎಲ್ಲೆಲ್ಲೂ ಜನಪ್ರಿಯಗೊಳಿಸಿ ಅದರ ಮೂಲಕ ಇಡೀ ವಿಶ್ವವನ್ನ ಆಳಬೇಕು ಅನ್ನುವ ಅಭಿಲಾಷೆ ಇರುವ ಒಂದು ಕುತಂತ್ರ ಮನಸ್ಸು ಇದೆಯೇನೋ ಎಂದು ಕೂಡ ನನಗೆ ಅನಿಸುತ್ತಿದೆ. ಈ ಯಂತ್ರಗಳು ಮಾನವೀಯ ಗುಣಗಳನ್ನ ಕೊಲ್ಲುತ್ತ, ಮಾನವೀಯತೆಯಿಂದ ನಮ್ಮನ್ನ ದೂರ ಸೆಳೆದೊಯ್ಯುತ್ತ ಯಂತ್ರದ ಗುಲಾಮರನ್ನಾಗಿ ನಮ್ಮನ್ನ ಪರಿವತರ್ಿಸಿ ಇಡೀ ವಿಶ್ವ ಒಂದೇ ಮಾದರಿಯ, ಒಂದೇ ರೀತಿಯಲ್ಲಿ ಯೋಚಿಸುವ, ಒಂದೇ ಆಹಾರವನ್ನ ಸೇವಿಸುವ ವಿಚಿತ್ರ ಜೀವಿಗಳನ್ನ ಸೃಷ್ಟಿ ಮಾಡುವ ಹುನ್ನಾರ ನಡೆದಿರಬಹುದೆ ಅನ್ನುವ ಅನುಮಾನ ನನ್ನನ್ನ ಕಾಡುತ್ತಿದೆ.
ಜ್ಞಾನ ಮತ್ತು ವಿವೇಕ :
ಪುಸ್ತಕಗಳ ವಿಶೇಷತೆ ಅಂದರೆ ಒಂದು ಪುಸ್ತಕ ಓರ್ವ ಓದುಗನನ್ನ ಆಯ್ಕೆ ಮಾಡಿ ಕೊಂಡು ಅವನ ವಿಶ್ವಾಸವನ್ನ ಗಳಿಸಿ ಏಕಾಂತದಲ್ಲಿ ಅವನಿಗೆ ಕೆಲ ವಿಷಯಗಳನ್ನ ತಿಳಿಸಿ ಕೊಡುತ್ತ ಅವನನ್ನ ಎಲ್ಲ ವಿಷಯಗಳಲ್ಲೂ ಕನ್ವಿನ್ಸ್ ಮಾಡುತ್ತ ಹೋಗುತ್ತದೆ. ಇದರಿಂದಾಗಿ ಓದುಗನ ವ್ಯಕ್ತಿತ್ವದಲ್ಲಿ ಬದಲಾವಣೆ ಆಗುತ್ತದೆ, ಆವನ ಅನುಭವ, ಕಲ್ಪನೆ, ಜೀವನ ದೃಷ್ಟಿ ಪಕ್ವವಾಗುತ್ತ ಹೋಗುತ್ತದೆ. ಈ ಕೆಲಸವನ್ನ ಇಂದಿನ ವಿದ್ಯುನ್ಮಾನ ಯಂತ್ರಗಳು ಮಾಡುವುದಿಲ್ಲ. ಹೊಸದು, ಆಧುನಿಕ ಆವಿಷ್ಕಾರ, ಒಂದು ಅದ್ಭುತ ಎಂಬಂತಹಾ ಭ್ರಮೆಯನ್ನ ಸೃಷ್ಟಿ ಮಾಡುತ್ತ ಬಂದ ಒಂದು ಯಂತ್ರ, ಮೊದಲು ಮನುಷ್ಯನ ವಿವೇಕವನ್ನ ನಾಶ ಮಾಡಿದರೆ ನಂತರ ಅದು ಹೃದಯ ಮನಸ್ಸುಗಳ ಮೇಲೆ ದಾಳಿ ಮಾಡುತ್ತದೆ. ಈ ಕಾರಣಕ್ಕಾಗಿಯೇ ಗಾಂಧೀಜಿ ಯಂತ್ರವನ್ನ ರಕ್ಕಸ ಎಂದು ಕರೆದದ್ದು. ಈ ಯಂತ್ರ ತನಗೆ ಬೇಕಾದ ಕಮಾಡಟಿಯನ್ನ ಉತ್ಪಾದಿಸುವಲ್ಲಿ, ಬಿಕರಿಮಾಡುವಲ್ಲಿ ಸದಾ ನಿರತ. ಸದಾ ಸಾಮಾಜಿಕ ಬದ್ಧತೆಯೊಡನೆ ಯೋಚನೆ ಮಾಡುವ ಬರೆಯುವ ಲೇಖಕ ಇಂದು ಈ ಯಂತ್ರದ ಎದಿರು ಸೋಲುತ್ತಿದ್ದಾನೆ. ಹಾಗೆಂದು ನಾವು ಯಂತ್ರಗಳನ್ನ ನಿರಾಕರಿಸಬೇಕು ಎಂದು ನಾನು ಹೇಳುತ್ತಿಲ್ಲ, ಯಂತ್ರ ಮನುಷ್ಯನ ಕೈಲಿರ ಬೇಕು, ಮಾನವ ಯಂತ್ರದ ಗುಲಾಮನಾಗ ಬಾರದು. ಮಾಹಿತಿ ತಂತ್ರ ಜ್ಞಾನದ ಇಂದಿನ ದಿನಗಳಲ್ಲಿ ನಾವೆಲ್ಲ ಜ್ಞಾನವಂತರಾಗುತ್ತಿದ್ದೇವೆ. ಆದರೆ ನಾವು ಯಾರೂ ಕೂಡ ವಿವೇಕ ಶಾಲಿಗಳಾಗಿ ಪರಿವರ್ತನೆ ಹೊಂದುತ್ತಿಲ್ಲ. ಒಂದು ನದಿ ಎಲ್ಲಿ ಹುಟ್ಟುತ್ತೆ, ಅದರಲ್ಲಿ ಎಷ್ಟು ನೀರು ಹರಿಯುತ್ತೆ, ಅದು ಎಲ್ಲಿ ಕಡಲನ್ನ ಸೇರುತ್ತದೆ ಅನ್ನುವುದು ನಮಗೆ ಗೊತ್ತಿದೆ. ಆದರೆ ಅದೇ ನದಿ ಒಂದು ಸಂಸ್ಕೃತಿಯನ್ನ ಹುಟ್ಟು ಹಾಕುವುದು, ಲಕ್ಷಲಕ್ಷ ಜನರ ದಾಹವನ್ನ ನೀಗಿಸುವುದು, ವಿವಿಧ ರೀತಿಯಲ್ಲಿ ಜನರನ್ನ ಸಲಹುವುದು ನಮಗೆ ಗೊತ್ತಿಲ್ಲ. ನದಿಯೊಂದರ ಕುರಿತ ಅಂಕಿ ಅಂಶ ಅರಿತ ನಾವು ಅದರ ಮಾನವೀಯ ಸಂಬಂಧಗಳ ಕುರಿತು ಕುರುಡರಾಗುತ್ತೇವೆ. ಹೀಗಾಗಿ ನದಿಯೊಂದರಿಂದ ಕಲಿಯ ಬೇಕಾದ ಪಾಠವನ್ನ ನಾವು ಕಲಿಯುವುದೇ ಇಲ್ಲ. ನಮಗೆ ಇಂದು ಜ್ಞಾನದ ಜೊತೆಗೆ ವಿವೇಕ ಬೇಕಾಗಿದೆ. ಆದರೆ ಅದರ ಕೊರತೆ ಇದೆ.
ಇನ್ನು ಈ ಯಂತ್ರದ ದಾಳಿಗೆ ಒಳಗಾಗಿ ನಮ್ಮ ಭಾಷೆ ಕೂಡ ನಶಿಸಿ ಹೋಗುತ್ತಿದೆಯೆ? ನಾವು ಈ ವಿಚಾರ ಮಾಡಬೇಕು. ಎಫ್.ಎಂ. ರೇಡಿಯೋ ಬಂದ ಮೇಲೆ ನಮ್ಮ ಭಾಷೆಗೆ ಬಂದೊದಗಿದ ದುರವಸ್ಥೆಯ ಕುರಿತು ಈಗಾಗಲೇ ಸಾಕಷ್ಟು ನಾವು ಕೇಳಿದ್ದೇವೆ. ಮಗಾ, ಮಚ್ಚಾ ಅನ್ನುವ ಶಬ್ದಗಳನ್ನ ಉಪಯೋಗಿಸ ಬಾರದು ಎಂದು ಒಂದು ವಿದ್ಯಾ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಆದೇಶ ಹೊರಡಿಸಿದೆ. ಮೊಬೈಲ್ ಬಂದ ನಂತರ ಕನ್ನಡದ ಅಂಕಿಗಳು ನಮಗೆ ಮರೆತೇ ಹೋಗಿವೆ. ಯಂತ್ರದ ಅವಸರಕ್ಕೆ ಹೊಂದಿ ಕೊಳ್ಳುವ ಭರದಲ್ಲಿ ಭಾಷೆಯನ್ನ ಮೊಟಕು ಗೊಳಿಸುವ, ಹೃಶ್ಯ ಗೊಳಿಸುವ ಯತ್ನ ನಡೆದಿದೆ. ಅನ್ನದ ಪ್ರಶ್ನೆಯೇ ಮುಖ್ಯವಾಗಿ ಕನ್ನಡ ಹಿಂದೆ ಸರಿದು ಇಂಗ್ಲೀಷ್ ವಿಜೃಂಬಿಸುತ್ತಿದೆ.
ಕವಿರಾಜ ಮಾರ್ಗದ ಕವಿ ತನ್ನ ಕಾಲದಲ್ಲಿ ಇದ್ದ ಕನ್ನಡವನ್ನ ಕುರಿತು ಬರೆಯುತ್ತ ಕನ್ನಡಂಗಳ್ ಅನ್ನುವ ಶಬ್ದವನ್ನ ಬಳಸುತ್ತಾನೆ. ಈ ಮಾತು ಇಂದಿಗೂ ನಿಜ. ಗಂಡು ಮೆಟ್ಟಿನ ಭಾಷೆಯಾದ ಬೇಂದ್ರೆಯವರ ಧಾರವಾಡದ ಕನ್ನಡ, ಅನಕೃ ಅವರ ಮಧುರವಾದ ಮೈಸೂರು ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಕಾರಂತರ ಕನ್ನಡ, ಗೋಕಾಕದ ಕೃಷ್ಣ ಮೂರ್ತಿ ಪುರಾಣಿಕರ ಕನ್ನಡ, ಗ್ರಾಮಾಯಣ ಕಾದಂಬರಿಯ ಬಹದ್ದೂರರ ಕನ್ನಡ, ಕುವೆಂಪು ಅವರ ಮಲೆನಾಡಿನ ಕನ್ನಡ, ಕುಂವಿ ಅವರ ಬಳ್ಳಾರಿಯ ಕನ್ನಡ, ದೇವನೂರರ ಚಾಮರಾಜ ನಗರದ ಕನ್ನಡ, ಇತ್ಯಾದಿಗಳು ಕನ್ನಡದಲ್ಲಿ ಇರುವುದನ್ನ ನಾವು ಗಮನಿಸ ಬೇಕಿದೆ. ಇಂತಹ ವೈವಿಧ್ಯತೆ ನಾಳೆ ಉಳಿದೀತೆ ಅನ್ನುವ ಪ್ರಶ್ನೆ ಕೂಡ ಇದೆ. ಇಂತಹ ವೈವಿಧ್ಯಮಯ ಕನ್ನಡವನ್ನ ಇರಿಸಿ ಕೊಂಡು ನಾವು ಏನೂ ಮಾಡಬಹುದು. ಆದರೆ ನಮ್ಮ ಜನ ಕನ್ನಡದಲ್ಲಿ ಶಬ್ದಗಳಿಲ್ಲ, ವಿಜ್ಞಾನ, ವೈದ್ಯಕೀಯ ಇತ್ಯಾದಿ ವಿಷಯಗಳನ್ನ ಕನ್ನಡದಲ್ಲಿ ಹೇಳಲಿಕ್ಕೆ ಸಾಧ್ಯವಿಲ್ಲ ಅನ್ನುವ ನೆಪಗಳನ್ನ ಹೇಳುತ್ತಿರುವುದು ನಾಚಿಕೆಗೇಡು. ನಮ್ಮ ನಾಡಿನ ಕೃಷಿಕರು, ಕುಶಲ ಕರ್ಮಿಗಳು, ವಿವಿಧ ಕೆಲಸ ಕಾರ್ಯಗಳನ್ನ ಮಾಡುವವರು ತಾವು ದಿನ ನಿತ್ಯ ಬಳಸುವ ವಸ್ತುಗಳಿಗೆ ಸುಂದರ ಹೆಸರುಗಳನ್ನ ಇರಿಸಿದ್ದಾರೆ, ತಮ್ಮ ಸುತ್ತ ಇರುವ ಗಿಡ ಮರ ಬಳ್ಳಿ ಹಕ್ಕಿ ಮೀನುಗಳಿಗೆ ಹೆಸರನ್ನ ಇರಿಸಿದ್ದಾರೆ. ಆದರೆ ಒಂದು ಮೋರಿ ಕಟ್ಟಲು ನಮ್ಮ ಇಂಜಿನಿಯರುಗಳಿಗೆ ವರ್ಡ್ಸ ಇಲ್ಲ ಅಂದರೆ ಅದು ಭಾಷೆಯ ಅಸಾಮರ್ಥ್ಯ ಅಲ್ಲ. ಇದು ಅವರ ಅಸಾಮರ್ಥ್ಯ.
ಕನ್ನಡದ ವಿಷಯ ಬಂದಾಗಲೆಲ್ಲ ನಾವು ಸರಕಾರವನ್ನ ಅಪರಾಧೀ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಸರಕಾರ ಕನ್ನಡಕ್ಕಾಗಿ ಏನೂ ಮಾಡುತ್ತಿಲ್ಲ ಅನ್ನುವುದು ನಮ್ಮ ಜನರ ಪುಕಾರು. ಸರಕಾರ ಆಕಡೆ ಇರಲಿ, ನಾವು ಏನು ಮಾಡಿದ್ದೇವೆ? ನಮ್ಮ ಮಕ್ಕಳು ನಾಯಿಯನ್ನ ಡಾಗಿ ಅಂದಾಗ, ಬೆಕ್ಕನ್ನ ಕ್ಯಾಟಿ ಅಂದಾಗ, ಚಂದ್ರನನ್ನ ಮೂನ್ ಅಂಕಲ್ ಎಂದಾಗ ತೆಂಗಿನ ಮರ ಹತ್ತಿ ಕೂರುವ ನಮ್ಮ ನಮ್ಮ ಪೋಷಕರು ಕನ್ನಡದ ಇಂದಿನ ಸ್ಥಿತಿಗೆ ಮೂಲ ಕಾರಣ. ಆಂಗ್ಲ ಮಾಧ್ಯಮ ಶಾಲೆಗಳು ನಮ್ಮ ಜನರಿಗೆ ರೋಮಾಂಚನವನ್ನ ಉಂಟುಮಾಡುತ್ತವೆ. ಈ ಶಾಲೆಗಳ ಶಿಕ್ಷಣದ ಬಗ್ಗೆ ನನ್ನ ತಕರಾರಿದೆ. ಹತ್ತು ಕೆಜಿ ಹೆಗಲ ಚೀಲ, ಕೈಯಲ್ಲಿ ನೀರಿನ ಬಾಟಲಿ, ಊಟದ ಡಬ್ಬಿ, ಕೊಡೆ, ಇತ್ಯಾದಿ ಹೊತ್ತು ಶಾಲೆಗೆ ಹೋಗುವ ಮಕ್ಕಳಿಗೂ ಗಡಿಯಲ್ಲಿ ಗಡಿಕಾಯುವ ನಮ್ಮ ಸೈನಿಕರಿಗೂ ನನಗೆ ವ್ಯತ್ಯಾಸ ಕಾಣುವುದಿಲ್ಲ. ಅಲ್ಲಿಯ ಹೋಂ ವಕರ್್ ಅನ್ನುವ ಶಿಕ್ಷೆ, ಶಿಸ್ತಿನ ಹೆಸರಿನ ಬಿಗಿ ಶಿಕ್ಷಣ ಇದು ಮಕ್ಕಳನ್ನ ಏನು ಮಾಡ ಬಹುದು ನಾವು ವಿಚಾರ ಮಾಡ ಬೇಕು. ಮಕ್ಕಳು ಒಂದು ವೇಳೆ ಗದ್ದಲ ಮಾಡಿದರೆ ಅವರ ಮೊದಲ ಕಲ್ಲು ಬೀಳುವುದು ಅವರೇ ಕಲಿತ ಶಾಲೆಯ ಮೇಲೆ ಎಂಬ ಮಾತಿದೆ. ನಮ್ಮ ಶಾಲೆಗಳಲ್ಲಿ ಕನ್ನಡದ ವಾತಾವರಣ ಇಲ್ಲ ಅಂದರೆ ಅದಕ್ಕೆ ಕಾರಣ ನಮ್ಮ ಅಪ್ಪ ಅಮ್ಮ. ಎರಡನೆಯ ಕಾರಣ ನಮ್ಮ ಸರಕಾರ. ಎಲ್ಲ ರಾಜ್ಯಗಳ ಸರಕಾರಗಳೂ ತಮ್ಮ ರಾಜ್ಯದ ಭಾಷೆಯ ಹಿತವನ್ನ ಕಾಪಾಡುತ್ತ ಬಂದಿವೆ. ಆದರೆ ಕರ್ನಾಟಕದ ಸರಕಾರ ಕನ್ನಡ ಸರಕಾರವಾಗಿದೆಯೇ?
ಕೆಲ ವರ್ಷಗಳ ಹಿಂದೆ ತಮಿಳು ನಾಡಿನ ಮುಖ್ಯಮಂತ್ರಿ ಬೆಂಗಳೂರಿನ ವಿಧಾನ ಸೌಧಕ್ಕೆ ಬಂದ. ಆತ ಅಲ್ಲಿ ಕುಳಿತು ತಮಿಳಿನಲ್ಲಿ ಮಾತನಾಡಿದ. ನಮ್ಮ ಮುಖ್ಯಮಂತ್ರಿ ಆತನಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದರು. ಇದು ಕನ್ನಡ ಸರಕಾರದ ಲಕ್ಷಣ ಖಂಡಿತ ಅಲ್ಲ. ನರಕಕ್ಕೆ ಇಳಿಸಿ ನಾಲಿಗೆ ಸೀಳ್ಸಿ ಬಾಯಿ ಹೊಲಸಾಕಿದ್ರು ಮೂಗನಲ್ಲಿ ಕನ್ನಡವನ್ನ ಆಡುತ್ತೇನೆ ಅನ್ನುವ ನಮ್ಮ ಕವಿಗಳ ಶಪಥಕ್ಕೆ ನಮ್ಮ ಮಂತ್ರಿಗಳು ಎಂತಹ ಅವಮಾನ ಮಾಡುತ್ತಾರಲ್ಲ ಎಂದು ಮೈ ಉರಿಯುತ್ತದೆ. ಇನ್ನು ಕನ್ನಡದ ಏಳಿಗೆಗೆ ಕಾವಲು ಸಮಿತಿ, ಅಭಿವೃಧ್ದಿ ಪ್ರಾಧಿಕಾರ ಇತ್ಯಾದಿಗಳು. ಕನ್ನಡವನ್ನ ದಿನ ನಿತ್ಯದ ವ್ಯವಹಾರದಲ್ಲಿ ಬಳಸಿ ಅನ್ನುವ ಸರಕಾರಿ ಆದೇಶಗಳು, ಬೋಡರ್ುಗಳನ್ನ ಕನ್ನಡದಲ್ಲಿ ಹಾಕಿ ಅನ್ನುವ ಸಾಲು ಸಾಲು ಸರಕಾರೀ ಆಜ್ಞೆಗಳು ಯಾರಿಗೂ ಮಯರ್ಾದೆ ತರುವ ವಿಷಯವಲ್ಲ. ಎಷ್ಟೋ ಸಂದರ್ಭಗಳಲ್ಲಿ ಸರಕಾರ ಜನರ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ತಮಿಳು ನಾಡಿನಲ್ಲಿ ತಾಂತ್ರಿಕ ಹಾಗು ವೈದ್ಯಕೀಯ ಶಿಕ್ಷಣವನ್ನ ತಮಿಳಿನಲ್ಲಿ ನೀಡುವಾಗ ನಾವು ಪ್ರಾಥಮಿಕ ಮೊದಲ ತರಗತಿಯಲ್ಲಿ ಇಂಗ್ಲೀಷ್ ಶಿಕ್ಷಣ ನೀಡಲಿಕ್ಕೆ ಮುಂದಾಗಿದ್ದೇವೆ.
ಕನ್ನಡವನ್ನ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಮಂತ್ರಿಗಳು ಮುಂದಿದ್ದಾರೆ. ಆದರೆ ಇವರಿಗೆ ಅಡ್ಡಿಯಾಗಿ ನಿಂತಿರುವವರು ವಿಧಾನ ಸೌಧ ಮತ್ತಿತರ ಕಡೆಗಳಲ್ಲಿ ಕುಳಿತಿರುವ ಆಂಗ್ಲ ಮೋಹೀ ಅಧಿಕಾರಿಗಳು ಅನ್ನುವ ಮಾತಿದೆ. ಇವರು ಕನ್ನಡದ ಪರವಾಗಿ ನಿಂತರೆ ಕನ್ನಡ ಖಂಡಿತ ಉದ್ದಾರವಾಗುತ್ತದೆ.
ಒಂದು ಉದಾಹರಣೆ ಬೆಂಗಳೂರಿನಲ್ಲಿ ಪ್ರತಿ ವರ್ಷ ಒಂದು ಪುಸ್ತಕ ಪ್ರದರ್ಶನ 10 ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಸಹಸ್ರ ಜನ ಬಂದು ಪುಸ್ತಕಗಳನ್ನ ಅಲ್ಲಿ ಕೊಳ್ಳುತ್ತಿದ್ದರು. ಈ ಬಾರಿ ಈ ಪ್ರದರ್ಶನಕ್ಕೆ ಕೇವಲ 3 ದಿನ ನೀಡಲಾಯಿತು. ಇಲ್ಲಿ ಪುಸ್ತಕ ಮಾರಾಟ ಲಾಭ ದಾಯಕ ಉದ್ಯಮ ಪುಸ್ತಕ ವ್ಯಾಪಾರಿಗಳು ಹಣ ಮಾಡುತ್ತಾರೆ ಅನ್ನುವ ಕಾರಣಕ್ಕೆ ಹೀಗೆ ಮಾಡಲಾಯಿತು ಅನ್ನುವ ಮಾತು ಕೇಳಿ ಬಂತು. ಪುಸ್ತಕ ವ್ಯಾಪಾರದಿಂದ ಹಣ ಮಾಡಬಹುದು ಅನ್ನುವುದು ಮೊದಲ ಬಾರಿ ನಾನು ಕೇಳಿದ ಮಾತು. ಪುಸ್ತಕ ಮಾರಾಟ ಒಂದು ಸಾಂಸ್ಕೃತಿಕ ಪ್ರಕ್ರಿಯೆ. ಸಾವಿರಾರು ಜನ ಬಂದು ತಮಗೆ ಬೇಕಾದ ಒಂದು ಪುಸ್ತಕವನ್ನ ಆಯ್ಕೆ ಮಾಡಿ ಕೊಂಡು ಹೋಗುತ್ತಾರೆ ಅಂದರೆ ಈ ನೆಲದಲ್ಲಿ ಒಂದು ಉತ್ತಮ ಕೆಲಸವಾಗುತ್ತಿದೆ ಎಂದು ತಿಳಿಯಬೇಕು. ಇದರ ಬದಲು ಲಾಭದ ಮಾತನ್ನ ಆಡುವುದು ಅಕ್ಷಮ್ಯ ಅಪರಾಧ. ಪುಸ್ತಕೋದ್ಯಮವೇ ಕಷ್ಟದಲ್ಲಿ ಇರುವಾಗ ಇಂತಹಾ ವರ್ತನೆ ಖಂಡನಾರ್ಹ. ಜೊತೆಗೆ ಮೂರು ವರ್ಷಗಳಿಂದ ಗ್ರಂಥಾಲಯ ಇಲಾಖೆ ಬಿಡುಗಡೆ ಮಾಡಬೇಕಾದ ಹಣವನ್ನ ಬಿಡುಗಡೆ ಮಾಡಿಲ್ಲವಂತೆ. ಇದು ಕೂಡ ಸರಕಾರ ಗಮನಿಸ ಬೇಕಾದ ವಿಷಯ. ಸರಕಾರದಲ್ಲಿ ಇರುವ ನಮ್ಮ ಬಿಳಿಕಾಲರಿನ ಕೆಲವೇ ಕೆಲ ಜನ ಕನ್ನಡದ ವಿಷಯ ಬಂದಾಗ ತೊಂಚವಂಚ ಮಾಡುತ್ತಿದ್ದಾರೆ. ಕನ್ನಡಕ್ಕೆ ಆಗಬಹುದಾದ ಲಾಭವನ್ನ, ಸಿಗಬೇಕಾದ ಸೌಲಭ್ಯವನ್ನ ಕಾನೂನನ್ನ ತಿರುಚುವುದರ ಮೂಲಕ ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕನ್ನಡಾಭಿಮಾನಿ ಅಧಿಕಾರಿಗಳು ಇದ್ದಾರೆ, ಆದರೆ ಇವರ ಸಂಖ್ಯೆ ಕಡಿಮೆ. ಕೆಲವರು ಉದ್ದೇಶ ಪೂರ್ವಕವಾಗಿ ಕನ್ನಡದ ಬೆಳವಣಿಗೆಗೆ ಆತಂಕವನ್ನ ತಂದೊಡ್ಡುತ್ತಿದ್ದಾರೆ ಎಂದು ಹೇಳಲಾಗಿದೆ. ನಮ್ಮ ಕನ್ನಢಾಭಿಮಾನ ಮಂತ್ರಿಗಳು ಇಂತಹವರ ಕಿವಿ ಹಿಂಡಿ ಕನ್ನಡದ ಹಿತವನ್ನ ಕಾಪಾಡ ಬೇಕಾಗಿದೆ.
ಸಮ್ಮೇಳನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ.
ಕನ್ನಡ ಭಾಷೆಗೆ, ಕರ್ನಾಟಕಕ್ಕೆ ಎಲ್ಲೇ ಅವಮಾನವಾಗಲಿ, ನಷ್ಟವಾಗಲಿ, ಅದರ ವಿರುಧ್ದ ಮೊದಲು ಸರಕಾರ ನಂತರ ಜನ ಸಿಡಿದು ನಿಲ್ಲಬೇಕು. ಮೊನ್ನೆ ಬೆಳಗಾಂನಲ್ಲಿ ಒಂದು ಮಾತು ಕೇಳಿ ಬಂತು.ನಾಲ್ಕು ಜನ ಇದ್ದರೆ ಕರ್ನಾಟಕದ ಹೆಣ ಹೊರುತ್ತೇವೆ, ಐದು ಜನ ಇದ್ದರೆ ಕರ್ನಾಟಕದ ತಿಥಿ ಮಾಡುತ್ತೇವೆ ಅನ್ನುವ ಮಾತದು. ಇದರ ವಿರುಧ್ದ ನಮ್ಮ ರಕ್ಷಣಾ ವೇದಿಕೆಯ ಮಿತ್ರರು ಪ್ರತಿಭಟನೆ ನಡೆಸಿದರು. ಆದರೆ ಈ ಬಗ್ಗೆ, ಸರಕಾರ, ನಮ್ಮ ಜನ ಪ್ರತಿನಿಧಿಗಳು, ಕೊನೆಗೆ ಜನ ಕೂಡ ಪ್ರತಿಭಟಿಸಲಿಲ್ಲ. ಇಂತಹದ್ದೇ ಮಾತು ಮಹಾರಾಷ್ಟ್ರದಲ್ಲಿ ಕೇಳಿ ಬಂದಿದ್ದರೆ ಏನಾಗುತ್ತಿತ್ತು ನಾವು ಯೋಚಿಸ ಬೇಕು. ಕನ್ನಡಕ್ಕೆ ಕರ್ನಾಟಕಕ್ಕೆ ಇಂತಹಾ ದುಸ್ಥಿತಿ ಬರಬೇಕಿತ್ತೆ ನಾನು ಕೇಳುತ್ತಿದ್ದೇನೆ. ನಾನು ಸಮ್ಮೇಳನದ ಅಧ್ಯಕ್ಷನಾಗಿ ಒಪ್ಪಿತನಾಗಿದ್ದೇನೆ ಅಂದ ಕೂಡಲೇ ಕನ್ನಡದ ಜನ ನನ್ನಿಂದ ಕೆಲ ನಿರೀಕ್ಷೆಗಳನ್ನ ಇರಿಸಿ ಕೊಂಡು ನನಗೆ ಪತ್ರ ಬರೆದಿದ್ದಾರೆ, ದೂರವಾಣಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆ ವಿಷಯಗಳು ಇಡೀ ನಾಡಿನಲ್ಲಿ ಚರ್ಚೆಗೆ ಒಳಗಾಗಿರುವುದರಿಂದ ಅವುಗಳನ್ನ ನಾನಿಲ್ಲಿ ಚುಟುಕಾಗಿ ನಿಮ್ಮ ಮುಂದೆ ಇಡ ಬಯಸುತ್ತೇನೆ. ಜೊತೆಗೆ ಕವಿ ಲೇಖಕ ಎಳೆ ಬಿಸಿಲು, ತಂಪು ಬೆಳದಿಂಗಳು, ಜುಳುಜುಳು ಹರಿಯುವ ನದಿಯ ನೀರು ಇವುಗಳ ಕುರಿತೇ ಬರೆಯ ಬೇಕು ಅನ್ನುವ ತತ್ವಕ್ಕೆ ವಿರೋಧಿ ಯಾದವನು ನಾನು. ಈ ಕಾರಣಕ್ಕೆ ಈ ಕೆಲ ವಿಷಯಗಳನ್ನ ಪ್ರಸ್ತಾಪ ಮಾಡಲಿಕ್ಕೆ ಬಯಸುತ್ತೇನೆ. ಹಾಗೆ ನೋಡಲು ಹೋದರೆ ಹೇಳಲಿಕ್ಕೆ ಬಹಳ ವಿಷಯಗಳಿವೆ. ಆದರೆ ಕೆಲವನ್ನ ಮಾತ್ರ ನಿಮ್ಮ ಜೊತೆಯಲ್ಲಿ ಹಂಚಿಕೊಳ್ಳುವ ಇರಾದೆ ನನ್ನದು.
ಪುಡಾರಿ :
* ನಮ್ಮಲ್ಲಿ ಸ್ವಾತಂತ್ಯ್ರ ಹೋರಾಟ ನಡೆದಾಗ, ನಮಗೆ ಸ್ವಾತಂತ್ರ್ಯ ದೊರೆತ ನಂತರದ ಕೆಲ ವರ್ಷಗಳ ವರೆಗೆ ಏನು ನಮ್ಮ ರಾಜಕಾರಿಣಿಗಳು ಇದ್ದರು ಅವರಿಗೂ ಇಂದಿನ ರಾಜಕಾರಿಣಿಗಳಿಗೂ ಇರುವ ವ್ಯತ್ಯಾಸ ಏನು ಅನ್ನುವುದು ನಮಗೆ ಇಂದು ಎದ್ದು ಕಾಣುತ್ತಿದೆ. ತ್ಯಾಗ, ನಿಸ್ವಾರ್ಥ ಮನೋಭಾವ, ದೇಶದ ಬಗ್ಗೆ ನಿಜವಾದ ಕಳಕಳಿ, ದೇಶದ ಪ್ರಗತಿಯ ಕುರಿತಂತೆ ಆಸಕ್ತಿ ಇದೆಲ್ಲ ಅಂದಿನ ವಿಶೇಷತೆ ಆಗಿದ್ದರೆ ಇಂದು ಅದಕ್ಕೆ ತದ್ವಿರುಧ್ದವಾದ ಚಿತ್ರಣವನ್ನ ನಾವು ನೋಡುತ್ತಿದ್ದೇವೆ. ನಾನು ಕೆಲ ವರ್ಷಗಳ ಹಿಂದೆ ಸೊಲ್ಲಾಪುರಕ್ಕೆ ಹೋಗಿದ್ದೆ. ಅಲ್ಲೊಂದು ಪತ್ರಿಕಾ ಕಛೇರಿ. ಪುಡಾರಿ ಅನ್ನುವ ಒಂದು ದಿನಪತ್ರಿಕೆ ಅಲ್ಲಿಂದ ಪ್ರಕಟವಾಗುತ್ತಿತ್ತು. ಸಂಪಾದಕರಲ್ಲಿ ಮಾತನಾಡುತ್ತ ನಾನು ಪುಡಾರಿ ಅನ್ನುವ ಶಬ್ದಕ್ಕೆ ನಮ್ಮಲ್ಲಿ ಒಳ್ಳೆಯ ಅರ್ಥವಿಲ್ಲ, ನಮ್ಮಲ್ಲಿ ಚಿಲ್ಲರೆ ರಾಜಕಾರಣ ಮಾಡುವರನ್ನ, ದೇಶ ಸೇವೆಯ ಸೋಗು ಹಾಕುವವರನ್ನ, ರಾಜಕೀಯ ದೂರ್ತರನ್ನ ನಾವು ಪುಡಾರಿ ಎಂದು ಕರೆಯುತ್ತೇವೆ. ನೀವು ಇಂತಹಾ ಹೆಸರನ್ನ ಇಟ್ಟಿದ್ದೀರಲ್ಲ? ಎಂದು ಕೇಳಿದೆ. ಅವರು ಇಲ್ಲಿ ಆ ಅರ್ಥದಲ್ಲಿ ಈ ಶಬ್ದ ಬಳಕೆಯಲ್ಲಿ ಇಲ್ಲ, ಇಲ್ಲಿ ಪುಡಾರಿ ಅಂದರೆ ನಿಜವಾದ ದೇಶ ಭಕ್ತ, ಎಲ್ಲರೂ ಹೀಗಿರಬೇಕು ಅನ್ನುವ ಕಾರಣಕ್ಕೆ ನಾವು ನಮ್ಮ ಪತ್ರಿಕೆಗೆ ಆ ಹೆಸರನ್ನ ಇರಿಸಿದ್ದೇವೆ ಎಂದರು. ಜೊತೆಗೆ ಇಂದಿನ ಪರಿಸ್ಥಿತಿ ನೋಡಿದರೆ ನಾಳೆ ನಾವೂ ಕೂಡ ನೀವು ಹೇಳುವ ಅರ್ಥದಲ್ಲಿ ಈ ಶಬ್ದವನ್ನ ನೋಡಬೇಕಾಗುತ್ತದೇನೋ ಅನ್ನುವ ಅಭಿಪ್ರಾಯ ವ್ಯಕ್ಯಪಡಿಸಿದರು. ಆಗ ನನಗೆ ಕನ್ನಡದ ಜನ ಬಹಳ ಮುಂಚೆಯೇ ನಮ್ಮ ರಾಜಕಾರಣದ ದುರವಸ್ತೆಯನ್ನ ಗುರುತಿಸಿ ಬಿಟ್ಟರಲ್ಲ ಅನಿಸಿ ಸಂತೋಷವಾಯಿತು. ಅಂದು ನನಗೆ ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಅನಿಸಿತು. ಒಂದು ಸತ್ಯವನ್ನ, ಒಂದು ವಾಸ್ತವ ಪರಿಸ್ಥಿತಿಯನ್ನ ನಮ್ಮ ಕನ್ನಡದ ಜನ ಎಂತಹಾ ಶಬ್ದದ ಮೂಲಕ ಹೊರಗೆಡವಿದ್ದಾರಲ್ಲ ಅನಿಸಿತು. ಇಂದು ಈ ಶಬ್ದದ ವ್ಯಾಪ್ತಿ ಆಳ ಅಗಲ ಹೆಚ್ಚಾಗಿದೆ. ದೇಶದಲ್ಲಿ ಈ ಪುಡಾರಿಗಳ ಆಟಾಟೋಪ ಹೆಚ್ಚಾಗಿ ದೇಶದ ಅವಸಾನವನ್ನ ನಾವು ಕಾಣ ಬೇಕಾಗಿದೆ. ನಮ್ಮಲ್ಲಿ ಯಾರನ್ನ ನಾವು ರಾಜಕಾರಿಣಿ, ಜನನಾಯಕ, ಸಮಾಜ ಸೇವಕ, ಜನಪ್ರತಿನಿಧಿಮೊದಲಾದ ಹೆಸರಿನಿಂದ ಕರೆಯುತ್ತೇವೆಯೋ ಅವರೆಲ್ಲ ಕನ್ನಡದ ಪುಡಾರಿಗಳಾಗಿರುವುದನ್ನ ನಾವು ನೋಡುತ್ತಿದ್ದೇವೆ. ಈ ಮಾತಿಗೆ ಹೊರತಾಗಿ ಇರುವವರು ಯಾರಾದರೂ ಇದ್ದರೆ ಅವರನ್ನ ನಾನು ಮನಃಪೂರ್ವಕ ನಮಸ್ಕರಿಸುತ್ತೇನೆ. ಅಯ್ಯಾ ನಿಮ್ಮ ಸಂತತಿ ಸಾವಿರವಾಗಲಿ. ಈ ಸಂತತಿಯಿಂದ ಈ ದೇಶದ ರೈತರಿಗೆ, ಬಡವರಿಗೆ ಒಳಿತಾಗಲಿ ಎಂದು ಹಾರೈಸುತ್ತೇನೆ.

* ಹೌದು ನಾನು ರೈತರ ಹೆಸರನ್ನ ತೆಗೆದೆ. ಕುವೆಂಪು ಅವರ ನೇಗಿಲ ಯೋಗಿ ಕವಿತೆಯ ಮೂಲಕ ರೈತನ ಎಲ್ಲ ಸ್ಥಾನಮಾನ ಬವಣೆಗಳನ್ನ ಬಣ್ಣಿಸುತ್ತಾರೆ. ರೈತ ದೇಶದ ಬೆನ್ನೆಲಬು, ಅವನನ್ನ ನಾವೆಲ್ಲ ಚೆನ್ನಾಗಿ ನೋಡಿಕೊಳ್ಳ ಬೇಕು ಅನ್ನುವ ಆಶಯ ಅಲ್ಲಿದೆ. ಆದರೆ ಇವತ್ತು ಈ ರೈತನನ್ನ ನಾವು ಯಾವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದೇವೆ ಯೋಚಿಸೋಣ. ಅವನ ದುಡಿಮೆಗೆ ಬೆಲೆ ಇಲ್ಲ. ಅವನ ನೆಲ ಅವನ ಕೈಯಲ್ಲಿ ಉಳಿದಿಲ್ಲ. ಅವನಿಗೆ ಗೌರವವಿಲ್ಲ. ರೈತನಿಗೆ ಹಣದ ಆಸೆ ತೋರಿಸಿ ಅವನ ಜಮೀನಿಗೆ ಲಕ್ಷಾಂತರ ರೂಪಾಯಿ ಬೆಲೆ ಕಟ್ಟಿ ಅದನ್ನ ಆಧುನಿಕ ವ್ಯವಹಾರಗಳಿಗಾಗಿ ಕೊಂಡು ಅವನನ್ನ ಅದೇ ನೆಲದಲ್ಲಿ ತಲೆ ಎತ್ತುತ್ತಿರುವ ಕಾರ್ಖಾನೆಯ ಕಾವಲುಗಾರನನ್ನಾಗಿ ಮಾಡುವ ಹುನ್ನಾರ ನಡೆದಿದೆ. ನೆಲ ಅನ್ನುವುದು ಒಂದು ಗಟ್ಟಿ ಸಂಪತ್ತು. ನೆಲ ಇದೆ ಅನ್ನುವುದೇ ರೈತನಿಗೆ ಒಂದು ಭರವಸೆ, ಬೆಂಗಾವಲು, ವರ, ಮುಂದಿನ ಬದುಕಿಗೆ ಆಧಾರ, ಇದನ್ನೇ ಅವನಿಂದ ನಾವು ಕಿತ್ತು ಕೊಳ್ಳುತ್ತಿದ್ದೇವೆ. ವ್ಯವಸಾಯವೇ ಬದುಕು ಅನ್ನುವ ನಂಬಿಕೆ ಇದ್ದ ಈ ನಾಡಿನಲ್ಲಿ ವ್ಯವಸಾಯವನ್ನ ದಿವಾಳಿ ಕೋರತನ ಅನ್ನುವಂತೆ ಪ್ರತಿಬಿಂಬಸಲಾಗುತ್ತಿದೆ. ಅಣೆಕಟ್ಟುಗಳು, ಕಾಖರ್ಾನೆಗಳು, ರಸ್ತೆಗಳು, ಹೊಸ ಬಡಾವಣೆಗಳು, ಒಂದು ಕಡೆ ಅಭಿವೃಧ್ದಿಯ ಕತೆ ಹೇಳಿದರೆ, ಇವೇ ಇನ್ನೊಂದು ಕಡೆ ರೈತರ ದುರವಸ್ಥೆಯ ವ್ಯಥೆಯನ್ನ ಹೇಳುತ್ತಿವೆ. ಕುವೆಂಪು ಹೇಳಿದ ನೇಗಿಲ ಯೋಗಿ ನಿತ್ಯ ಆತ್ಮಹತ್ಯೆಯ ಪ್ರತೀಕನಾಗುತ್ತಿದ್ದಾನೆ.
ನಮ್ಮ ಸರಕಾರಗಳು ರೈತರಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನ ಕೂಡಲೇ ಪರಿಹರಿಸದೆ, ಅವುಗಳನ್ನ ಜೀವಂತವಾಗಿ ಇರಿಸಿ ಕೊಂಡು ಹೇಗೆ ರೈತರ ಬದುಕು ಚಂಚಲವಾಗಿ ಇಡುತ್ತಾರೆ ಅನ್ನುವುದಕ್ಕೆ ಒಂದು ಉದಾಹರಣೆಯನ್ನ ನೀಡ ಬಯಸುತ್ತೇನೆ.
1952ರಲ್ಲಿ ಕೆಂಗಲ್ ಹನುಮಂತಯ್ಯನವರು ಶಾಲೆಗಳ ಅಭಿವೃಧ್ದಿಗಾಗಿ ಭೂಮಾಲಿಕರಿಂದ ಜಮೀನು ದಾನ ಪಡೆದು ಅದನ್ನ ಕೆಲ ರೈತರಿಗೆ ನೀಡಿ ಶಾಲೆಗೆ ಇಷ್ಟು ಗೇಣಿಯನ್ನ ನೀಡಿ ಎಂಬ ನಿಯಮವನ್ನ ರೂಪಿಸಿದರು. ಇದಾಗಿ ಈಗ 60 ವರ್ಷಗಳು ಉರುಳಿವೆ. 1972ರಲ್ಲಿ ಭೂಸುಧಾರಣಾ ಕಾನೂನು ಬಂದಿತು. ಗೇಣಿ ಪದ್ದತಿ ಅಮಾನುಷವಾದದ್ದು ಎಂದರು. ಉಳುವವನೇ ಹೊಲದೊಡೆಯನಾದ. ಆದರೆ ಈ ಭೂವಿದ್ಯಾದಾನದ ರೈತ ಇಂದಿಗೂ ಗೇಣಿದಾರ. 10,000 ಎಕರೆ ಸರಕಾರೀ ಜಮೀನಿನಲ್ಲಿ ಇಂದು 30,000 ರೈತ ಕುಟುಂಬಗಳು ಗೇಣಿದಾರರಾಗಿ ಬದುಕುತ್ತಿವೆ. ಪುರಾತನವಾದ ಅನಿಷ್ಟ ಗೇಣಿ ಪದ್ದತಿಯನ್ನ ನಿರ್ಮೂಲನೆ ಮಾಡಿದ ದೇಶ ಈ ಪದ್ದತಿಯನ್ನ ಇನ್ನೂ ಕಾಪಾಡಿ ಕೊಂಡು ಬಂದಿದೆ ಅನ್ನುವುದು ಎಂತಹಾ ವಿಪರ್ಯಾಸ ಅಲ್ಲವೆ?
ಈ ನಾಡಿನ ರೈತ ಅವನು ಕಬ್ಬು ಬೆಳೆಗಾರ ಇರಬಹುದು, ಭತ್ತ, ಅಡಿಕೆ, ರಾಗಿ, ಜೋಳ, ಏನೇ ಬೆಳೆಯುವವ ಇರಬಹುದು ಅವರೆಲ್ಲ ಸಂತೃಪ್ತಿಯಿಂದಂತೂ ಇಲ್ಲ. ಅವರ ನಿಟ್ಟುಸಿರು, ಸರಕಾರದ ಕಣ್ಣಿಗೆ ಬೀಳದೆ? ಸಭೆ ಸಮಾರಂಭಗಳಲ್ಲಿ ರೈತ ಗೀತೆ ಹಾಡಿದರೆ ಸಾಕೆ?
* ನನಗೆ ಬಹಳ ಪ್ರಿಯವಾದದ್ದು ಈ ಪರಿಸರ. ಈ ಪ್ರೀತಿಗೆ ಕಾರಣ ಪರಿಸರದ ಮೇಲೆ ನನಗೆ ಇರುವ ಗೌರವ. ನೆಲದ ಮೇಲೆ ಕೋಟ್ಯಾನು ಕೋಟಿ ಜೀವ ಜಂತುಗಳು ಇವೆ. ಅವುಗಳಲ್ಲಿ ಮಾನವ ಜೀವಿ ಕೂಡ ಒಬ್ಬ. ಪರಿಸರದಲ್ಲಿ ಅವನು ಶ್ರೇಷ್ಠ ಖಂಡಿತಾ ಅಲ್ಲ. ಇದ್ದುದರಲ್ಲಿ ಆತ ಬುದ್ಧಿವಂತ. ಬುಧ್ದಿವಂತ ಅಂದ ಕೂಡಲೇ ಇಡೀ ಪರಿಸರವನ್ನ ಆಳುವ, ಬದಲಾಯಿಸುವ, ಬೇಕಾ ಬಿಟ್ಟಿಯಾಗಿ ಬಳಸಿ ಕೊಳ್ಳುವ ಅಧಿಕಾರವನ್ನ ಈ ಮನುಷ್ಯನಿಗೆ ಯಾರೂ ಕೊಟ್ಟಿಲ್ಲ. ಆದರೆ ತನ್ನ ಕುತಂತ್ರದಿಂದ ಅವನು ಇದನ್ನ ಸಾಧಿಸಿದ್ದಾನೆ. ಹೀಗೆ ಇಲ್ಲದ ಸಾಧನೆಗಳನ್ನ ಮಾಡಿ ತನಗೆ ತಾನೇ ಅಪಾಯ ತಂದು ಕೊಳ್ಳುತ್ತಿದ್ದಾನೆ. ಮೊನ್ನೆ ಮೊನ್ನೆ ಉತ್ತರಾಖಂಡದಲ್ಲಿ ಏನಾಯಿತು ನಮಗೆ ಗೊತ್ತಿದೆ. ಎಲ್ಲಿಯವರೆಗೆ ನಾವು ಪರಿಸರದ ನಿಯಮಗಳನ್ನ ಅರ್ಥ ಮಾಡಿಕೊಂಡು ನಮ್ಮ ಬದುಕನ್ನ ನಡೆಸುತ್ತೇವೆ, ಅಲ್ಲಿವರೆಗೆ ನಾವು ಸುರಕ್ಷಿತ. ನಾವು ಪರಿಸರದ ನಿಯಮಗಳನ್ನ ಮೀರಿದ ದಿನ ಅದು ನಮ್ಮ ಮೇಲೆ ಸೇಡು ತೀರಿಸಿ ಕೊಳ್ಳುತ್ತದೆ. ಸೇಡು ತೀರಿಸಿ ಕೊಳ್ಳುವ ಅದರ ಪ್ರಕ್ರಿಯೆಯನ್ನ ಅದು ಈಗಾಗಲೇ ಪ್ರಾರಂಭಿಸಿದೆ. ಅಲ್ಲದೆ ಇದೀಗ ಮತ್ತೊಂದು ಮಾತು ಕೇಳಿಬರುತ್ತಿದೆ. ನೇತ್ರಾವತಿ ನದಿ ನೀರನ್ನ ಕೋಲಾರಕ್ಕೆ ತಿರುಗಿಸುವುದು, ಶರಾವತಿಯ ನೀರನ್ನ ಮತ್ತೆಲ್ಲಿಗೋ ಕೊಂಡೊಯ್ಯುವುದು. ಸಮುದ್ರ ಸೇರುವ ನೀರು ವ್ಯರ್ಥ ಎಂದು ಹೇಳುವುದು. ಈ ನೀರನ್ನ ಇಲ್ಲಿಂದ ಮತ್ತೆಲ್ಲಿಗೋ ಸಾಗಿಸುವ ಕೆಲಸ ನಕ್ಷೆಯ ಮೇಲೆ ಸುಲಭ. ಒಂದು ಗೆರೆ ಎಳೆದರಾಯಿತು. ಆದರೆ ಇದು ಕಾರ್ಯರೂಪಕ್ಕೆ ಇಳಿದಾಗ ಪರಿಣಾಮ ಏನಾದೀತು?
ನಾವು ಎಷ್ಟು ಅಣೆಕಟ್ಟುಗಳನ್ನ, ನಾಲೆಗಳನ್ನ ನಿರ್ಮಿಸಬೇಕು. ಕಾಡು ಮೇಡು ಎಂದು ನಷ್ಟವಾಗುವ ಪರಿಸರ ಎಷ್ಟು? ತೊಂದರೆಗೆ ಒಳಗಾಗುವ ಜನರ ಬವಣೆ ಯೋಚಿಸ ಬೇಡವೇ? ಹೊಸದಾಗಿ ತಲೆದೋರುವ ಸಮಸ್ಯೆಗಳ ಅರಿವು ನಮಗಿದೆಯೇ. ಶರಾವತಿಯಲ್ಲಿ ಒಂದು ನಾಲೆ ಕಟ್ಟಿಸಿದರು. ಅದರಲ್ಲಿ ಬಿಟ್ಟ ನೀರು ಅಕ್ಕಪಕ್ಕದ ಗದ್ದೆಗಳಲ್ಲಿ ಪುಟಿಯಿತು. ಕೊನೆಗೆ ಮತ್ತೊಂದು ಸುರಂಗ ತೆಗೆದರು. ಹೀಗೆ ಆಗಬಾರದಲ್ಲವೆ. ಆಸ್ಟ್ರೇಲಿಯಾದಲ್ಲಿ ನದಿ ತಿರುವಿಗೆಂದು ಕಟ್ಟಿದ ಅಣೆಕಟ್ಟುಗಳನ್ನ ಒಡೆದು ಹಾಕಿ ಮತ್ತೆ ಹಿಂದಿನಿಂದ ನದಿಗಳನ್ನ ಹರಿಯ ಬಿಡುತ್ತಿದ್ದಾರಂತೆ. ಅಲ್ಲಿ ಈ ಯೋಜನೆ ಹಲವು ಸಮಸ್ಯೆಗಳಿಗ ಕಾರಣವಾಗಿದೆಯಂತೆ. ಇಂತಹಾ ಯೋಜನೆಗಳು ಈ ದೇಶಕ್ಕೆ ಬೇಕೆ?
ನಮ್ಮ ದೇಶವನ್ನ ಹೊಸದಾಗಿ ನಿರ್ಮಿಸುವ ಸಂದರ್ಭದಲ್ಲಿ ಜವಾಹರಲಾಲ್ ನೆಹರು ಅವರು ಅಣೆಕಟ್ಟುಗಳನ್ನ ದೇಶದ ದೇವಾಲಯಗಳು ಅಂತ ಕರೆದರು. ಇಂದು ಈ ದೇವಾಲಯಗಳು ಜನರ ಪಾಲಿಗೆ ನರಕಗಳಾಗಿ ಪರಿಣಮಿಸಿವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಏನು ಜನ ನಿರಾಶ್ರಿತರಾದರು ಅದರ ಮೂರು ಪಟ್ಟು ಜನ ಅಣೆಕಟ್ಟುಗಳಿಂದ ತೊಂದರೆಗೆ ಒಳಗಾಗಿದ್ದಾರೆ. ಅಣೆಕಟ್ಟುಗಳು ವಿವಿಧ ಸಮಸ್ಯೆಗಳಿಗೆ ಕಾರಣವಾಗಿವೆ. ಈ ವಿಷಯವನ್ನ ವೈಜ್ಞಾನಿಕವಾಗಿ ನೋಡಿ ಸಮಸ್ಯೆಗಳನ್ನ ಬಗೆಹರಿಸುವ ಯತ್ನ ಆಗಬೇಕಾಗಿದೆ. ಇದೀಗ ಪರಿಸರದ ಬಗ್ಗೆ ವ್ಯಾಪಕವಾದ ಚಚರ್ೆ ಪ್ರಾರಂಭವಾಗಿದೆ. ಈ ವರೆಗೆ ಕೇವಲ ಪರಿಸರವಾದಿಗಳು ಮಾತ್ರ ಯಾವ ವಿಷಯವನ್ನ ಕುರಿತು ಮಾತನಾಡುತ್ತಿದ್ದರೋ ಆ ವಿಷಯ ಈಗ ಸಾರ್ವತ್ರಿಕ ವಿಷಯವಾಗಿದೆ. ವಿಶ್ವಸಂಸ್ಥೆ ಪಶ್ಚಿಮ ಘಟ್ಟವನ್ನ ವಿಶೇಷ ಪ್ರದೇಶವೆಂದು ಸಾರಲು ಹೊರಟಾಗ ನಮ್ಮಲ್ಲಿ ಕೆಲ ರಾಜಕಾರಿಣಿಗಳು ತಮ್ಮ ವಿರೋಧವನ್ನ ವ್ಯಕ್ತ ಪಡಿಸಿದರು. ಡಾ. ಕಸ್ತೂರಿ ರಂಗನ್ ವರದಿ ಬಂದ ನಂತರ ಈ ವಿರೋಧ ಹೆಚ್ಚಾಗಿದೆ. ಕಸ್ತೂರಿ ರಂಗನ್ ವರದಿ ಬರಲು ಮುಖ್ಯ ಕಾರಣ ಪರಿಸರವನ್ನ ಬೇಕಾಬಿಟ್ಟಿಯಾಗಿ ನಾವು ನಾಶ ಮಾಡ ಹೊರಟಿದ್ದು. ಪರಿಸರ ಇರುವುದೇ ನಮಗಾಗಿ ಅನ್ನುವ ಭ್ರಮೆಯಲ್ಲಿ ನಾವು ಅದನ್ನ ದೋಚಲು ಹೊರಟೆವು. ಈ ಕೃತ್ಯದಿಂದ ಪರಿಸರ ಉಳಿಯುವುದೇ ಇಲ್ಲ ಅನ್ನುವಾಗ ಕಸ್ತೂರಿ ರಂಗನ್ ವರದಿ ಬಂದಿದೆ.
ಈ ಹಿಂದೆ ಒಂದು ಕಡೆ ಪರಿಸರ ನಾಶವಾಯಿತು, ಇನ್ನೊಂದು ಕಡೆ ಬಂಗಾರದ ಊಟದ ತಟ್ಟೆಗಳು, ಹವಾ ನಿಯಂತ್ರಿತ ವಾಹನಗಳು, ಹೆಲಿಕ್ಯಾಫ್ಟರುಗಳು ಬಂದವು. ಗಣೀ ಲಾಬಿ ಧೇಶವನ್ನ ಆಳ ತೊಡಗಿತು. ಪರಿಸರವನ್ನ ಮುಟ್ಟಲೇ ಬೇಡ ಅನ್ನುವುದು ಅವೈಜ್ಞಾನಕ. ಏಕೆಂದರೆ ನಮಗೆ ಇರುವುದೊಂದೇ ಭೂಮಿ. ನಾವು ಇದನ್ನ ಬಿಟ್ಟು ಇರಲಾರೆವು, ಇದನ್ನ ತೊರೆದೂ ಬದುಕಲಾರೆವು. ಬಂಗಾರದ ಮೊಟ್ಟೆಯನ್ನ ಇಡುತ್ತಿದ್ದ ಕೋಳಿಯ ಹೊಟ್ಟೆ ಸೀಳಿದ ರೈತನ ಕತೆ ನಮಗೆ ಗೊತ್ತಿದೆ. ನಮ್ಮ ಅಭಿವೃಧ್ದಿಗಾಗಿ ಪಶ್ಚಿಮ ಘಟ್ಟವನ್ನ ದೋಚುವ ಕೆಲಸ ಆಗ ಬೇಕೇ ? ಈಗ ಒಂದು ಮಧ್ಯದ ದಾರಿಯನ್ನ ನಾವು ಕಂಡು ಕೊಳ್ಳಬೇಕು. ಪ್ರಕೃತಿಯನ್ನ ಉಳಿಸಿ ನಾವು ಉಳಿಯುವುದು. ಪ್ರಕೃತಿಯನ್ನ ಬಳಸಿ ಕೊಳ್ಳುವ ವಿಷಯ ಬಂದಾಗ ತುಸು ತಾಳ್ಮೆ, ಮುಂದಿನ ಜನಾಂಗದ ಮೇಲೆ ನಮ್ಮ ಹೊಣೆ, ಪ್ರಕೃತಿಯ ಬಗ್ಗೆ ಗೌರವ, ನಮ್ಮ ಸುಖದ ಮೇಲೆ ಹಿಡಿತ ಇರಿಸಿ ಕೊಂಡು ಯೋಚಿಸಿದರೆ ಇದು ಸಾಧ್ಯ ಎಂದು ನನಗೆ ಅನಿಸುತ್ತದೆ. ಇಂತಹಾ ಒಂದು ಸುವರ್ಣ ಮಾಧ್ಯಮದ ದಾರಿ ಹಿಡಿಯದಿದ್ದರೆ ನಾವೂ ಇಲ್ಲ ಈ ಪರಿಸರವೂ ಇಲ್ಲ.
* ದೇಶದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಮನೋಭಾವವನ್ನ ನಾನಿಲ್ಲಿ ಪ್ರಸ್ತಾಪಿಸ ಬೇಕು. ಹಿಂದೆ ನಮ್ಮ ದೇಶದಲ್ಲಿ ಹುಟ್ಟುವ ಮಕ್ಕಳೆಲ್ಲ ಕೈ ಮುಷ್ಟಿಯನ್ನ ಕಟ್ಟಿ ಕೊಂಡೇ ಹುಟ್ಟುತ್ತಿದ್ದವು. ಇಂದು ಎಲ್ಲ ಮಕ್ಕಳೂ ಕೈ ಚಾಚಿ ಕೊಂಡೇ ಹುಟ್ಟುತ್ತಿವೆ. ತಾ ತಾ ತಾ ನಮ್ಮ ಜನರ ಮನೋಭಾವ ಆಗುತ್ತಿದೆ. ಈ ತಾ ತಾ ಅನ್ನುವ ಮನೋಭಾವಕ್ಕೆ ಭಾಗ್ಯ ಅನ್ನುವ ಹೆಸರನ್ನ ನಾವು ಇರಿಸಿದ್ದೇವೆ. ಸೈಕಲ್ ಭಾಗ್ಯ, ಅನ್ನ ಭಾಗ್ಯ, ಶಾದಿಭಾಗ್ಯ, ಪುಸ್ತಕ ಭಾಗ್ಯ, ಇಲ್ಲಿ ನಮ್ಮ ಆತ್ಮಾಭಿಮಾನದ ಕೊರತೆ ಇದೆ ಅಂತ ನಮಗೆ ಏಕೆ ಅನಿಸೋದಿಲ್ಲ. ಒಬ್ಬ ವಿದೇಶಿ ಆಫ್ರಿಕಾಗೆ ಹೋದನಂತೆ. ಜನ ಎಲ್ಲ ಕೈ ಕಟ್ಟಿ ಕೊಂಡು ಕುಳಿತಿದ್ದರು. ಏನು ಕುಳಿತಿದ್ದೀರಿ? ಎಂದು ಆತ ಕೇಳಿದ. ಗೆಣಸು ತೆಗೆಯ ಬೇಕಿತ್ತು ಎಂದರು ಅವರು. ತೆಗೆಯಿರಿ, ಇಲ್ಲ ಭೂಕಂಪ ಆದರೆ ಗೆಣಸು ಮೇಲೆ ಬಂದು ಬೀಳುತ್ತದೆ, ನಾವು ಭೂಕಂಪದ ದಾರಿ ಕಾಯುತ್ತಿದ್ದೇವೆ ಎಂದರು ಅವರು. ಅವರ ನಿರೀಕ್ಷೆಯಂತೆ ಭೂಕಂಪ ಆಯಿತು. ಗೆಣಸು ಮೇಲೆ ಬಂದು ಬಿದ್ದಿತು. ಆದರೂ ಅವರು ಕುಳಿತಿದ್ದರು. ಮತ್ತೆ ಸುಮ್ಮನೆ ಕುಳಿತಿರಲ್ಲ ಅಲ್ಲ ಕಾಡು ಕಿಚ್ಚು ಬರಲಿ ಅಂತ ಕಾಯುತ್ತಿದ್ದೇವೆ, ಗೆಣಸು ಸುಡಬೇಕಲ್ಲ…ಕಾಡು ಕಿಚ್ಚೂ ಬಂದಿತು. ಗೆಣಸು ಬೆಂಕಿಗೆ ಬೆಂದಿತು. ಆಗ ಅವರು ಅದನ್ನ ತಿಂದರು. ನಮ್ಮ ಕತೆ ಇದಕ್ಕಿಂತ ಬೇರೆ ಅಲ್ಲ.
ನಮ್ಮ ಸರಕಾರಗಳು ನಮ್ಮ ಜನರನ್ನ ನಿಷ್ಪ್ರಯೋಜಕರು, ಸೋಮಾರಿಗಳು, ಆತ್ಮಾಭಿಮಾನ ಇಲ್ಲದವರನ್ನಾಗಿ ಮಾಡುತ್ತಿದೆಯೆ ನಾವು ಯೋಚಿಸ ಬೇಕು. ಕೆಲ ವರ್ಷಗಳ ಹಿಂದೆ ಮುಂಬಯಿಯಲ್ಲಿ ಓರ್ವ ಫುಟ್ ಪಾತ ಹುಡುಗನಗೆ ಒಂದು ಹಣದ ಚೀಲ ದೊರೆಯುತ್ತದೆ. ಅದನ್ನ ಆತ ಹತ್ತಿರದ ಪೋಲೀಸ ಠಾಣೆಗೆ ತೆಗೆದು ಕೊಂಡು ಹೋಗಿ ಕೊಡುತ್ತಾನೆ. ಅಲ್ಲಿಯ ಅಧಿಕಾರಿ ಅದನ್ನ ತೆರೆದು ನೋಡಿದಾಗ ಅದರಲ್ಲಿ ಗರಿಗರಿಯಾದ ನೂರರ ಹತ್ತು ನೋಟುಗಳು ಇರುತ್ತವೆ. ಅಧಿಕಾರಿ ಅಚ್ಚರಿಯಿಂದ ಕೇಳುತ್ತಾನೆ ಈ ಹಣ ನಿನಗೆ ಸಿಕ್ಕಿದ್ದನ್ನ ಯಾರೂ ನೋಡಿಲ್ಲ, ಇದನ್ನ ನೀನೇ ಇರಿಸಿಕೊಳ್ಳ ಬಹುದಿತ್ತಲ್ಲ ಆಗ ಆ ಫುಟ್ ಪಾತ್ ಹುಡುಗ ಹೇಳುತ್ತಾನೆ ಹರಾಮಕಾ ಪೈಸಾ ಮತ್ ಚಾಹಿಯೇ ಸಾಬ್.ಇವತ್ತು ಎಲ್ಲಿಯಾದರೂ ಯಾರಾದರೂ ಇಂತಹಾ ಮಾತನ್ನ ಆಡಿಯಾರೇ? ಇಂತಹಾ ಮಾತನ್ನ ಯಾರೂ ಆಡದ ಹಾಗೆ ನಮ್ಮ ಸಾಮಾಜಿಕ, ರಾಜಕೀಯ, ಧಾರ್ಮಿಕ ವ್ಯವಸ್ಥೆ ಒಂದು ವಾತಾವರಣವನ್ನ ನಿರ್ಮಾಣ ಮಾಡಿದೆ. ಇದನ್ನ ಸಮರ್ಥಿಸಿ ಕೊಳ್ಳುವ ಬುಧ್ದಿವಂತಿಕೆಯೂ ನಮ್ಮಲ್ಲಿದೆ ಇದರ ಬಗ್ಗೆ ನಮಗೆ ಯಾಕೆ ನಾಚಿಕೆ ಆಗುವುದಿಲ್ಲ? ನಮ್ಮ ಗಣಿ ಮಾಫಿಯಾಗಳು, ಅರಣ್ಯ ಮಾಫಿಯಾಗಳು ಎಷ್ಟು ಬಲಶಾಲಿಯಾಗಿವೆ ಅಂದರೆ ಹರಾಮಿ ಹಣವನ್ನ ನಾನು ಮುಟ್ಟುವುದಿಲ್ಲ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಅನ್ನುವ ಯುವ ಅಧಿಕಾರಿಗಳನ್ನು ಹಸಿಹಸಿಯಾಗಿ ಕೊಲ್ಲುವಷ್ಟು ಸಮರ್ಥವಾಗಿವೆ. ಇಂತಹಾ ಕೊಲೆಗಳು ದಿನ ನಿತ್ಯ ನಡೆಯುತ್ತಿದ್ದರೂ ನಮ್ಮ ಜನ ಏನೂ ಆಗಿಲ್ಲ ಅನ್ನುವಂತೆ ಇದನ್ನ ನೋಡುತ್ತ ಕೂರುತ್ತಾರೆ. ಅಂದರೆ ನಮ್ಮ ನೈತಿಕ ಅಧೋಗತಿಗೆ ಏನು ಹೇಳ ಬೇಕು?
* ಗಾಂಧೀಜಿಯವರು ಒಂದು ಮಾತನ್ನ ಹೇಳುತ್ತಿದ್ದರು. ನಮ್ಮ ದೇಶದ ಓರ್ವ ಹೆಣ್ಣು ಮಗಳು ನಿಶ್ಚಿಂತೆಯಿಂದ ಮಧ್ಯರಾತ್ರಿಯಲ್ಲಿ ಊರಿನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಂತಾದ ದಿನ ಬಂದಾಗ ಈ ದೇಶಕ್ಕೆ ಸ್ವಾತಂತ್ರ್ಯ ಬಂತು ಅಂತ ನಾನು ನಂಬುತ್ತೇನೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಅನ್ನುವ ಭ್ರಮೆಯಲ್ಲಿ ನಾವು ಇದ್ದೇವೆ. ಆದರೆ ನಮ್ಮ ಹೆಣ್ಣು ಮಕ್ಕಳು ಇಂದು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ನಾವು ನೋಡಬೇಕು. ಅತ್ಯಾಚಾರ ದಿನ ನಿತ್ಯದ ಸುದ್ದಿ ಆಗುತ್ತಿದೆ. ನಮ್ಮ ಹೆಣ್ಣು ಮಕ್ಕಳು ರಾತ್ರಿ ಹೊತ್ತು ಬೇಡ ಹಗಲು ಹೊತ್ತಿನಲ್ಲಿ ಕೂಡ ಇವತ್ತು ಅಸುರಕ್ಷಿತರು. ಇದು ಆಧುನಿಕತೆಯ ಅತಿರೇಕವೇ? ನಮ್ಮ ಸಂಸ್ಕೃತಿ ಧರ್ಮಗಳ ಪತನವೇ? ಗಂಡಿನ ಸ್ವೇಛ್ಚಾಚಾರವೇ? ಹೆಣ್ಣಿನ ಬೆಳವಣಿಗೆಯನ್ನ ಸಹಿಸದ ಜನ ಮಾಡುತ್ತಿರುವ ಗದ್ದಲವೇ? ಟಿವಿ ಸಿನೀಮಾಗಳ ಪ್ರಭಾವವೇ? ಕಿರಿಯರನ್ನ ಸರಿದಾರಿಯಲ್ಲಿ ಕರೆದೊಯ್ಯದ ಹಿರಿಯರ ಬೇಜವಾಬ್ದಾರಿತನವೇ? ನನಗೆ ಗೊತ್ತಾಗುತ್ತಿಲ್ಲ. ಮೊದಲಿನಿಂದಲೂ ನಮ್ಮ ಹೆಣ್ಣು ವಿವಿಧ ಬಗೆಯ ಕಿರುಕುಳಕ್ಕೆ ಒಳಗಾದವಳು. ಆಧುನಿಕತೆ ಅವಳನ್ನ ಅವಳ ಶತಮಾನಗಳ ಸಂಕೋಲೆಯಿಂದ ಹೊರ ತಂದಿದೆ ಅಂತ ನಾನು ನಂಬಿದ್ದೆ ಆದರೆ ಆಕೆ ಇನ್ನೊಂದು ಬಗೆಯ ಶಾಪಕ್ಕೆ ಒಳಗಾಗಿರೋದು ನಿಜಕ್ಕೂ ವಿಷಾದದ ಸಂಗತಿ. ದಿನ ನಿತ್ಯ ನಡೆಯುತ್ತಿರುವ ಸಾಲು ಅತ್ಯಾಚಾರಗಳು ಕೂಡ ನಮ್ಮ ಸರಕಾರದ ಕಣ್ಣನ್ನ ತೆರೆಸುವುದಿಲ್ಲ. ನಮ್ಮ ಸ್ವಾಮಿ ಜಗದ್ಗುರುಗಳು ಇದರಿಂದ ವಿಚಲಿತರಾಗುವುದಿಲ್ಲ. ಅಯ್ಯಾ ಅಣ್ಣಾ ಅಂತ ಕರೆ ಎದಿರು ನಿಂತವ ಅತ್ಯಾಚಾರಕ್ಕೆ ಮುಂದಾಗುವುದಿಲ್ಲ ಅನ್ನುವ ಉಪದೇಶ ಬಿಟ್ಟರೆ ಕಾರ್ಯಗತವಾಗ ಬಹುದಾದ ಯಾವುದೇ ಕ್ರಮ, ಮಾತು ಸರಕಾರದಿಂದ ಬಂದಿಲ್ಲ. ತನ್ನ ಮೇಲೆ ಒಂದು ಹುಲಿ ಆಕ್ರಮಣ ಮಾಡಿದಾಗ ಜಿಂಕೆ ಹೀಗೆಯೇ ಹೇಳುತ್ತದೇನೋ, ಆದರೆ ಹುಲಿ ದುಷ್ಟ ವ್ಯಾಘ್ರವೇ ಅಲ್ಲವೆ? ಹೆಣ್ಣನ್ನ ನೋಡುವ ಸಮಗ್ರ ದೃಷ್ಟಿ ನಮ್ಮಲ್ಲಿ ಬದಲಾಗದಿದ್ದರೆ ಹೆಣ್ಣಿನ ಬದುಕಿಗೆ ಭರವಸೆ ಇಲ್ಲ. ಅವಳನ್ನ ಒಪ್ಪಿಕೊಳ್ಳುವ, ಸ್ವೀಕರಿಸುವ, ಸಹಿಸಿ ಕೊಳ್ಳುವ, ಯಥಾ ಅವಳನ್ನ ಗೌರವಿಸುವ ಮನೋಭಾವ ಎಲ್ಲರಲ್ಲಿಬಾರದೆ ಹೆಣ್ಣಿಗೆ ಇವತ್ತಿನ ಆತಂಕ, ಭೀತಿ, ಕಳವಳ, ದೂರವಾಗುವುದಿಲ್ಲ. ಹೆಣ್ಣಿಗೆ ನೀಡಬೇಕಾದ ಸ್ಥಾನ ನೀಡದಿದ್ದರೆ ನಮ್ಮ ಸಮಾಜಕ್ಕೆ ಪಾಶ್ರ್ವವಾಯು ಹೊಡೆಯುತ್ತದೆ.
* ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳ ಬಗ್ಗೆ ಸದಾ ಒಂದು ತಕರಾರಿದೆ. ಈ ಬಾರಿ ಯಾವುದೇ ನಿರ್ಣಯ ಕೈಕೊಳ್ಳ ಬೇಡಿ, ಅದು ನೆರವೇರುವುದಿಲ್ಲ ಅನ್ನುವ ಸಲಹೆ ನನಗೆ ಬಂದಿದೆ. ಸಮ್ಮೇಳನಗಳಲ್ಲಿ ನಿರ್ಣಯಗಳನ್ನ ಕೈಕೊಳ್ಳೋದು ಒಂದು ಪದ್ದತಿ. ಎಷ್ಟೋ ನಿರ್ಣಯಗಳು ಅನುಷ್ಠಾನಗೊಂಡಿವೆ. ಪರಿಷತ್ತು ಕೈಕೊಂಡ ನಿರ್ಣಯಗಳನ್ನ ಯಾವ ಕ್ರಮದಲ್ಲಿ ಸರಕಾರಕ್ಕೆ ಸಲ್ಲಿಸುತ್ತೆ ನನಗೆ ಗೊತ್ತಿಲ್ಲ, ಸರಕಾರದಲ್ಲಿ ವಿವಿಧ ವಿಭಾಗಗಳು ಇರುತ್ತವೆ. ಆ ಆ ವಿಭಾಗಕ್ಕೆ ಪ್ರತ್ಯೇಕವಾಗಿ ನಿರ್ಣಯಗಳು ತಲುಪ ಬೇಕು. ಆ ಇಲಾಖೆ ಅದನ್ನ ಪರಿಶೀಲಿಸಿ ಕ್ರಮ ಕೈಕೊಳ್ಳ ಬೇಕು. ಆ ನಿರ್ಣಯ ಸರಕಾರದ ಪಾಲಿಸಿಗಳಿಗೆ ಅನುಗುಣವಾಗಿರ ಬೇಕು. ಆ ನಿರ್ಣಯಗಳ ಹಿಂದೆ ಬೆನ್ನು ಹತ್ತಿ ಹೋಗುವ ಜನ ಇರಬೇಕು. ಸರಕಾರ ಸಮ್ಮೇಳನಗಳ ನಿರ್ಣಯಗಳನ್ನ ಅನುಷ್ಠಾನಕ್ಕೆ ತರುವ ಬಗ್ಗೆ ಒಂದು ಹೊಣೆಯನ್ನ ಹೊರಬೇಕು. ಸಮ್ಮೇಳನಕ್ಕೆ ಕೋಟಿ ಹಣ ನೀಡುವ ಸರಕಾರ ಅಷ್ಟಕ್ಕೆ ಸುಮ್ಮನಿರ ಬಾರದು. ತನ್ನ ಓರ್ವ ಅಧಿಕಾರಿಯನ್ನ ನಿಯೋಜಿಸಿ ಸರಕಾರಕ್ಕೆ ಇಡೀ ಸಮ್ಮೇಳನದಲ್ಲಿ ಏನೇನು ಸಲಹೆ, ಸೂಚನೆ ಬರುತ್ತೆ ಅನ್ನುವುದನ್ನ ದಾಖಲೆ ಮಾಡ ಬೇಕು. ಈ ಎಲ್ಲ ವಿಚಾರಗಳು ಜಾರಿ ಆಗುವ ಹಾಗೆ ಆ ಅಧಿಕಾರಿ ಮಾಡ ಬೇಕು. ಅಲ್ಲದೆ ಕನ್ನಡ ಸಾಹಿತ್ಯ ಸಮ್ಮೇಲನ ಏನೋ ಒಂದು ಜಾತ್ರೆ ಅನ್ನುವ ಅಭಿಪ್ರಾಯ ಸರಕಾರದ್ದಾಗಬಾರದು. ದೇಶ, ಭಾಷೆಯನ್ನ ಜನಜೀವನವನ್ನ ಗಮನದಲ್ಲಿ ಇರಿಸಿ ಕೊಂಡು ನಡೆಸುವ ಈ ಸಮ್ಮೇಳನಕ್ಕೆ ಸರಕಾರ ಗೌರವ, ಪ್ರಾತಿನಿಧ್ಯವನ್ನ ನೀಡ ಬೇಕು. ಇಲ್ಲಿ ಕೇಳಿಬರುವ ವಿಚಾರಗಳಿಗೆ ಸರಕಾರದ ಮುದ್ರೆ ಬೀಳ ಬೇಕು.
* ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಏರ ಬೇಕಾದ ಮಟ್ಟವನ್ನ ಏರಿಲ್ಲ. ಒಂದು ಕಾಲದಲ್ಲಿ ನಾಡಿನ ಎಲ್ಲ ಹಿರಿಯ ಲೇಖಕರೂ ಮಕ್ಕಳಿಗಾಗಿ ಬರೆಯುವುದನ್ನ ಒಂದು ಪವಿತ್ರ ಕೆಲಸ ಅಂತ ತಿಳಿದರು. ಕುವೆಂಪು, ರಾಜರತ್ನಂ, ಕಾರಂತ ಕಸ್ತೂರಿ, ಹೊಯ್ಸಳ ಇವರೆಲ್ಲ ಮಕ್ಕಳಿಗಾಗಿ ಬರೆದರು. ಆದರೆ ಯಾಕೋ ಇವತ್ತಿನ ಅಕ್ಯಾಡೆಮಿಶೀಯನ್ಗಳು ಮಕ್ಕಳಿಗಾಗಿ ಬರೆಯುವುದು ಅವಮಾನ ಅಂತ ತಿಳಿದಿದ್ದಾರೆ. ಆದರೂ ಕೆಲ ಲೇಖಕರು ಬರೆಯುತ್ತಿರುವುದು ಸಂತೋಷ. ಆದರೆ ಈ ಕ್ಷೇತ್ರ ಇನ್ನೂ ವಿಸ್ತಾರವಾಗ ಬೇಕು. ಹೊಸ ಪ್ರಯೋಗ ಆಗ ಬೇಕು. ಪೋಷಕರು ಮಕ್ಕಳಿಗೆ ಮೊಬೈಲ ಟ್ಯಾಬ್ ಕೊಡಿಸುವುದರ ಬದಲು ಪುಸ್ತಕ ಕೊಡಿಸಬೇಕು. ಜೊತೆಗೆ ಆ ಪುಸ್ತಕದ ಬಗ್ಗೆ ಒಂದು ಸಣ್ಣ ವಿವರವನ್ನ ಮಗುವಿಗೆ ನೀಡಿ ಪುಸ್ತಕ ಕೊಟ್ಟರೆ ತುಂಬಾ ಉಪಯೋಗ. ಹಿಂದೆ ಮನೆಗೆ ಬರುತ್ತಿದ್ದ ಚಂದಾಮಾಮವನ್ನ ಮೊದಲು ನಮ್ಮ ಅಜ್ಜ ಓದಿ ನಂತರ ಆತ ಮಕ್ಕಳಿಗೆ ಅದನ್ನ ಕೊಡುತ್ತಿದ್ದ. ಈ ಕ್ರಮವನ್ನ ನಾವು ಅನುಸರಿಸಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಪುಸ್ತಕಗಳನ್ನ ನೀಡುವ ಪದ್ದತಿ ನಿಂತು ಹೋಗಿದೆ. ಸರಕಾರ ಶಾಲಾ ಲೈಬ್ರರಿಗಳನ್ನ ಸಜ್ಜು ಗೊಳಿಸಿದರೂ ಪುಸ್ತಕ ಕಳೆದು ಹೋಗುತ್ತೆ, ಹರಿಯುತ್ತದೆ ಅನ್ನುವ ಕಾರಣಕ್ಕೆ ಪುಸ್ತಕಗಳನ್ನ ಬೀರುವಿನಲ್ಲಿ ಇರಿಸಿ ಬೀಗ ಹಾಕಲಾಗುತ್ತದೆ ಅನ್ನುವ ಮಾತು ಕೇಳಿ ಬಂದಿದೆ. ಇದು ತಪ್ಪು. ಪುಸ್ತಕ ಹರೀಬೇಕು, ಕಳೆದು ಹೋಗ ಬೇಕು. ನಮ್ಮ ಮಕ್ಕಳು ಪುಸ್ತಕಗಳೊಡನೆ ತಮ್ಮ ಸಂಬಂಧವನ್ನ ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗ ಬೇಕು. ನಮಗೆ ಸ್ವಾತಂತ್ರ್ಯ ದೊರೆತು 60 ವರ್ಷ ಕಳೆದು ಹೋದರೂ ಶಿಕ್ಷಣದ ಬಗ್ಗೆ ಸ್ಪಷ್ಟವಾದ ಒಂದು ನಿಧರ್ಾರಕ್ಕೆ ನಾವು ಬಂದಿಲ್ಲ. ಪ್ರತಿ ವಿದ್ಯಾ ಮಂತ್ರಿ ಬಂದ ಕೂಡಲೇ ನಮ್ಮ ಶಿಕ್ಷಣ ನೀತಿ ಬದಲಾಗುತ್ತದೆ. ವಿವಿಧ ಪ್ರಯೋಗಗಳಿಗೆ ನಮ್ಮ ಮಕ್ಕಳು ತುತ್ತಾಗುತ್ತಿದ್ದಾರೆ. ಈ ಸ್ಥಿತಿ ತಪ್ಪ ಬೇಕು. ಮಕ್ಕಳಿಗೆ ಇಂಗ್ಲೀಷನ್ನ ಕಲಿಸುವ ವಿಷಯದಲ್ಲಿ ಸಾಹಿತಿಗಳ ತಕರಾರಿಲ್ಲ. ಆದರೆ ಇಂಗ್ಲೀಷಿನಲ್ಲಿಯೇ ಎಲ್ಲ ಇದೆ, ಅದೇ ಸರ್ವ ಶ್ರೇಷ್ಠ, ಅದು ಬಾರದೆ ಇದ್ದರೆ ನಮ್ಮ ಬದುಕೇ ವ್ಯರ್ಥ ಅನ್ನುವ ನಂಬಿಕೆಯನ್ನ ನಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸವನ್ನ ನಾವು ಮಾಡಬಾರದು. ಇದರಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತೆ. ನಮ್ಮ ಮಕ್ಕಳು ಅಜ್ಜನ ಕೋಲಿದು ನನ್ನಯ ಕುದುರೆ ಹೇಳಲಿ. ಬಾರೋ ಬಾರೋ ಮಳೆರಾಯ ಹೇಳಲಿ ಈ ಪದ್ಯಗಳನ್ನ ಹೇಳುವಾಗ ಅವು ರೋಮಾಂಚನಗೊಳ್ಳುತ್ತವೆ. ಆದರೆ ಅವರಿಗೆ ಮುದ ನೀಡದ ಬ್ಯಾಬ್ಯಾ ಬ್ಲಾಕ್ ಶೀಪ್ ಗೋ ಅವೇ ಗೋ ಅವೇ ರೈನ ಅನ್ನುವಂತಹಾ ಜೀವ ವಿರೋಧಿ ಹಾಡುಗಳನ್ನ ಮಕ್ಕಳಿಗೆ ಕಲಿಸ ಬೇಡಿ.
* ನಾವು ನಮ್ಮ ಬಗ್ಗೆಯೇ ತುಂಬಾ ಮಾತನಾಡುತ್ತೇವೆ, ನಮ್ಮ ಅಭಿವೃಧ್ದಿ, ನಮ್ಮ ಪ್ರಗತಿಯ ಚಿಂತೆ ನಮಗೆ. ಆದರೆ ನಮ್ಮ ಜೊತೆಯಲ್ಲಿ ಹೊರನಾಡ ಕನ್ನಡಿಗರು, ಗಡಿನಾಡ ಕನ್ನಡಿಗರು ಇದ್ದಾರೆ. ಇವರು ಕನ್ನಡಿಗರಾಗಿ ಇರಲಿಕ್ಕೆ ಒಂದು ಹೋರಾಟವನ್ನೇ ನಡೆಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಕನ್ನಡಿಗರ ಸ್ಥಿತಿಗತಿಗಳು ತೃಪ್ತಿಕರವಾಗಿ ಇಲ್ಲ. ಇವರ ಮಕ್ಕಳಿಗೆ ಅಲ್ಲಿ ಕನ್ನಡ ಶಾಲೆಗಳಿಲ್ಲ, ವಿದ್ಯಾರ್ಥಿಗಳಿಗೆ ಅಲ್ಲಿಯ ಸರಕಾರ, ಜನರ ಬೆಂಬಲವಿಲ್ಲ. ಕೇರಳದಲ್ಲಿ ಕನ್ನಡ ಕಾರ್ಯಕ್ರಮಗಳ ನೋಟೀಸನ್ನ ಬೋರ್ಡುಗಳ ಮೇಲೆ ಹಾಕಿದರೆ ಅದನ್ನ ಹರಿದು ಹಾಕುವಂತಹಾ ಪರಿಸ್ಥಿತಿ ಇದೆ. ಇಲ್ಲಿ ಬೇರೆ ಭಾಷಿಕರ ಮೇಲೆ ಏನಾದರೂ ಹಲ್ಲೆಯಾದರೆ ಅಲ್ಲಿಯ ಕನ್ನಡ ಜನ ಆತಂಕದಿಂದ ಬದುಕುವ ಸ್ಥಿತಿ ಇದೆ. ಅಲ್ಲಿಯ ಸರಕಾರಗಳು ಗಡಿನಾಡ ಕನ್ನಡಿಗರ, ಹೊರನಾಡ ಕನ್ನಡಿಗರ ಹಿತವನ್ನ ಕಾಪಾಡುವುದಿಲ್ಲ. ಕನರ್ಾಟಕದ ಸರಕಾರ ಕೂಡ ಎಷ್ಟೋ ವಿಷಯಗಳಲ್ಲಿ ತಮ್ಮನ್ನ ದೂರ ಇರಿಸಿದೆ ಅನ್ನುವ ವ್ಯಥೆ ಇವರದ್ದು. ಗಡಿನಾಡು ಹಾಗು ಹೊರನಾಡ ಕನ್ಮಡಿಗರಿಗೆ ಆಗುತ್ತಿರುವ ಅನ್ಯಾಯಗಳ ಒಂದು ಯಾದಿಯೇ ಇದೆ. ಅಲ್ಲಿಯ ಪ್ರತಿಭಾವಂತರನ್ನ ಗುರುತಿಸದೇ ಇರುವುದು, ವಿದ್ಯಾರ್ಥಿಗಳ ಪ್ರವಾಸ, ಅಶಕ್ತರಿಗೆ ಮಾಶಾಸನ ಅಲ್ಲಿ ಕನ್ನಡ ಜಾನಪದ ಉತ್ಸವ, ಕವಿ ಗೋಷ್ಠಿ, ಉಪನ್ಯಾಸಗಳ ಏರ್ಪಡೆ, ಈ ಕನ್ನಡಿಗರು ಬರೆದ ಪುಸ್ತಕಗಳ ಪ್ರಕಟಣೆ, ಶಾಸ್ತ್ರೀಯ ಕನ್ನಡ ಸ್ಥಾನಮಾನದಿಂದ ದೊರೆಯುವ ಸೌಲಭ್ಯಗಳನ್ನ ಇವರಿಗೆ ನೀಡುವುದು ಇಂತಹಾ ಹಲವು ಕೆಲಸಗಳು ಆಗಬೇಕಿದೆ. ಅಲ್ಲಿಯ ಸರಕಾರಗಳು ಇವರು ಕನ್ನಡಿಗರು ಅನ್ನುವ ಕಾರಣಕ್ಕೆ ಇವರನ್ನ ದೂರ ಮಾಡಿದರೆ ಇವರು ಗಡಿನಾಡಿನವರು, ಇಲ್ಲ ಹೊರನಾಡಿನವರು ಅನ್ನುವ ಕಾರಣಕ್ಕೆ ನಮ್ಮ ಆಡಳಿತದಿಂದ ಹೊರಗೆ ಉಳಿಯುತ್ತಾರೆ.
* ಕರ್ನಾಟಕ ಪ್ರಾಂತ್ಯ ರಚನೆಯಾಗುವ ಮುನ್ನ ನಮ್ಮ ನಾಡು ಬೇರೆ ಬೇರೆ ಪ್ರಾಂತ್ಯಗಳ ಜೊತೆಯಲ್ಲಿ ಹರಿದು ಹೋಗಿತ್ತು. ಆಗ ನಾಡಿನ ಕೆಲ ಪ್ರದೇಶಗಳನ್ನ ಗುರುತಿಸುವಾಗ ಹೈದರಾಬಾದ ಕರ್ನಾಟಕ, ಮದರಾಸು ಕರ್ನಾಟಕ, ಮುಂಬಯಿ ಕರ್ನಾಟಕ ಎಂದೆಲ್ಲ ನಾವು ಕರೆಯುತ್ತಿದ್ದೆವು. ಹೀಗೆ ಕರೆಯುವ ಈ ಪರಿಪಾಠ ಇಂದಿಗೂ ಮುಂದುವರೆದಿರುವುದು ಅಷ್ಟೊಂದು ಸೂಕ್ತವಲ್ಲ. ಪದೇ ಪದೇ ಈ ಬಗೆಯ ಮಾತುಗಳು ಮನಸ್ಸಿಗೆ ರೇಜಿಗೆಯನ್ನ ಉಂಟು ಮಾಡುತ್ತವೆ. ನಾವೆಲ್ಲ ಒಂದು ಅನ್ನುವಾಗ ಈ ಭಿನ್ನತೆಗೆ ಅವಕಾಶ ಕೊಡಬಾರದು. ಅಂತೆಯೇ ಇದೀಗ ಕನ್ನಡ ನಾಡನ್ನ ಒಡೆಯುವ ಮಾತು ಕೇಳಿ ಬರುತ್ತಿದೆ. ಒಂದು ದೀರ್ಘ ಹೋರಾಟದ ಮೂಲಕ ಪಡೆದ ನಾಡು ಇದು. ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರ ರಾಯರು. ಮುದವೀಡು ಕೃಷ್ಣರಾಯರು, ಯಾವುದೇ ಅಧಿಕಾರದ ಆಸೆ ಇಲ್ಲದೆ, ಮಕ್ಕಳು ಮೊಮ್ಮಕ್ಕಳಿಗೆ ಆಸ್ತಿ ಮಾಡದೆ, ಯಾವುದೇ ಅನ್ಯಾಯವನ್ನ ಮಾಡದೆ ಕಟ್ಟಿದ ನಾಡು. ಇದನ್ನ ನಾವು ಹಾಗೆಯೇ ಇರಿಸಿ ಕೊಳ್ಳ ಬೇಕು. ಆದರೆ ನಾಳೆ ತಮಗೆ ಮಂತ್ರಿಗಿರಿ ದೊರೆಯ ಬೇಕೆಂದೋ, ಇಲ್ಲ ತಮ್ಮ ಬೇಳೆ ಬೇಯಿಸಿ ಕೊಳ್ಳ ಬೇಕೆಂದೋ ಕೆಲವರು ಬೇರೆ ಬೇರೆ ರಾಜ್ಯಗಳ ಮಾತನ್ನ ಆಡುತ್ತಿದ್ದಾರೆ. 1956ರಲ್ಲಿ ಈ ನಾಡು ನವ ಮೈಸೂರು ಅನ್ನುವ ಹೆಸರಿನಲ್ಲಿ ತಲೆ ಎತ್ತಿತು, ಜನರ ಅಭಿಪ್ರಾಯ ರೂಪಿಸಿ ದೇವರಾಜು ಅರಸು ಅವರು ಇದಕ್ಕೆ ಕನರ್ಾಟಕ ಅನ್ನುವ ಹೆಸರನ್ನ ಇರಿಸಿದರು. ಇದು ಹಾಗೇ ಇರಲಿ. ಮತ್ತೆ ಒಡಕು ಬೇಡ. ಮತ್ತೆ ಈ ನಾಡು ಒಡೆದರೆ ನಾವು ದುರ್ಬಲರಾಗುತ್ತೇವೆ. ನಮ್ಮ ದನಿ ಉಡುಗಿ ಹೋಗುತ್ತದೆ. ಅವರಿಗೆ ರಾಜ್ಯ ಕೊಟ್ಟಿರಿ ನಮಗೂ ಕೊಡಿ ಎಂದು ವೆಂಕ ನಾಣಿ ಸೀನರೆಲ್ಲ ಎದ್ದು ನಿಲ್ಲುತ್ತಾರೆ. ಗಡಿ ಸಮಸ್ಯೆ, ಜಲ ಸಮಸ್ಯೆಗಳು ಹೆಚ್ಚುತ್ತವೆ, ದೇಶದ ಸಂಪತ್ತು ವಿಂಗಡಣೆ ಆಗುತ್ತದೆ, ಇಡೀ ರಾಷ್ಟ್ರ ಒಂದಾಗಿ ಬಾಳದೇ ಹೋದ ಕನ್ನಡಿಗರ ದುಸ್ಥಿತಿಗೆ ಮರಗುತ್ತದೆ.
ಇವತ್ತು ತೆಲಂಗಾಣಕ್ಕೆ ಬಂದಿರುವ ಪರಿಸ್ಥಿತಿ ನಮಗೆ ಒಂದು ಪಾಠವಾಗ ಬೇಕು. ಇಲ್ಲಿ ಸರಕಾರದ ಒಂದು ಹೊಣೆ ಇದೆ. ಈ ಬಗೆಯ ಪ್ರತ್ಯೇಕತೆಯ ಕೂಗು ಏಕೆ ಹುಟ್ಟುತ್ತದೆ ಎಂಬ ಬಗ್ಗೆ ಸರಕಾರ ಪರಿಶೀಲಿಸ ಬೇಕಿದೆ. ನಾಡಿನ ಯಾವುದೇ ಪ್ರದೇಶದ ಜನ ನಮ್ಮನ್ನ ಯಾರೂ ಕೇಳುತ್ತಿಲ್ಲ, ಸಿಗಬೇಕಾದ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ಎಂದು ಕೊರಗುವಂತಹಾ ಪರಿಸ್ಥಿತಿ ಏರ್ಪಡದ ಹಾಗೆ ನೋಡಿ ಕೊಳ್ಳ ಬೇಕಿದೆ.
* ಇಂದಿನ ಸರಕಾರ ಬಂದ ಕೂಡಲೇ ನಮ್ಮ ಮುಖ್ಯ ಮಂತ್ರಿಗಳು ಬೆಂಗಳೂರಿನ ಸಾಹಿತಿಗಳನ್ನ ಹೋಗಿ ಭೇಟಿಯಾದದ್ದು ಒಂದು ಒಳ್ಳೆಯ ಸೂಚನೆ. ಇದಕ್ಕಾಗಿ ನಾನು ಮುಖ್ಯ ಮಂತ್ರಿಗಳನ್ನ ಅಭಿನಂದಿಸುತ್ತೇನೆ. ಆದರೆ ಆ ನಂತರದ ದಿನಗಳಲ್ಲಿ ಓರ್ವ ಲೇಖಕನ ಮೇಲೆ ಪೋಲೀಸ್ ಕ್ರಮ ಕೈಕೊಂಡಿದ್ದು ಕಸಿವಿಸಿಯ ವಿಷಯ. ಇದು ಲೇಖಕರನ್ನ ನಡೆಸಿ ಕೊಳ್ಳುವ ರೀತಿಯಲ್ಲ. ಈ ದೇಶ ಶತಮಾನಗಳಿಂದ ಭಿನ್ನಾಭಿಪ್ರಾಯಗಳನ್ನ, ಅಭಿಪ್ರಾಯ ಬೇಧಗಳನ್ನ ಜೀರ್ಣಿಸಿ ಕೊಂಡು ಬಂದಿದೆ. ನಾವು ಮತ್ತೊಬ್ಬರ ಅಭಿಪ್ರಾಯವನ್ನ ಒಪ್ಪುವುದು ಬಿಡುವುದು ಬೇರೆ ಆದರೆ ಕೊನೆಯ ಪಕ್ಷ ಇನ್ನೊಬ್ಬರ ಅಭಿಪ್ರಾಯವನ್ನ ಕೇಳುವ ತಾಳ್ಮೆಯಾದರೂ ನಮಗೆ ಬೇಕಲ್ಲ. ಇದೂ ಇಲ್ಲ ಅಂದರೆ ಬೀದಿಯಲ್ಲಿ ನಡೆಯುವ ಗೂಳಿ ಕಾಳಗಕ್ಕೂ ನಮ್ಮ ವರ್ತನೆಗೂ ವ್ಯತ್ಯಾಸ ಇಲ್ಲ ಎಂದಾಗುತ್ತದೆ.
* ಇತ್ತೀಚೆಗೆ ನಮ್ಮ ಸರಕಾರ ಮೂಢ ನಂಬಿಕೆಯ ವಿರುಧ್ದ ಒಂದು ಯುಧ್ದವನ್ನೇ ಸಾರಿತು. ಸಾಕಷ್ಟು ಕಡೆ ಇದರ ಬಗ್ಗೆ ಚರ್ಚೆ ಆಯಿತು, ಆಗುತ್ತಿದೆ. ಇದು ಆಗಬೇಕಾದ ಒಂದು ಕೆಲಸ. ಹಿಂದೆ ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ ನಡೆಯುತ್ತಿತ್ತು, ಸರಕಾರ ಕಾನೂನಿನ ಮೂಲಕ ಅದನ್ನ ತಡೆದಿದೆ. ಮಹಾರಾಷ್ಟ್ರದಲ್ಲಿ ಇಂತಹಾ ಒಂದು ಕಾನೂನು ಬಂದಿದೆ ಎಂದು ಕೇಳಿದೆ ಆದರೆ ಅದರ ವಿವರ ನನಗೆ ದೊರೆತಿಲ್ಲ. ಇಲ್ಲಿ ಕೂಡ ಜೀವ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಮನುಷ್ಯನನ್ನ ಕೆಳಹಂತಕ್ಕೆ ತರುವ, ಅವನನ್ನ ಇನ್ನೊಬ್ಬನ ಪಾದದ ಕೆಳಗೆ ಬೀಳಿಸುವ ಹಲವು ನಂಬಿಕೆ ಆಚರಣೆ ಸಂಪ್ರದಾಯಗಳು ಇವೆ. ಇದು ಈ ಧರ್ಮ ಆ ಧರ್ಮ ಅಂತ ಅಲ್ಲ. ಎಲ್ಲ ಧರ್ಮಗಳಲ್ಲೂ ಈ ಸಂಪ್ರದಾಯಗಳು ಇವೆ. ಇವು ನಿಲ್ಲಬೇಕು. ಆದರೆ ಇದು ಧಿಡೀರನೆ ಆಗುವ ಕೆಲಸವಲ್ಲ. ಜನರಲ್ಲಿ ಆತ್ಮ ವಿಶ್ವಾಸ, ವೈಜ್ಞಾನಿಕ ಮನೋಭಾವ, ಸ್ಪಷ್ಟವಾಗಿ ಚಿಂತಿಸುವ ಶಕಿ,್ತ ಬದುಕನ್ನ ಒಂಟಿಯಾಗಿ ನಿಂತು ಎದುರಿಸುವ ಧೀಮಂತಿಕೆ ಬಂದರೆ ಜನ ತಾವಾಗಿ ಈ ಮೌಢ್ಯದಿಂದ ದೂರವಾಗುತ್ತಾರೆ. ಮುಖ್ಯವಾಗಿ ನಮ್ಮ ನಾಯಕರು, ಧಮರ್ಾಧಿಕಾರಿಗಳು, ಸಮಾಜದ ಮುಂದುವರೆದ ವರ್ಗ, ವಿದ್ಯಾವಂತರು ರಿಪೇರಿಯಾದರೆ ಸಮಾಜದ ರಿಪೇರಿ ಆದ ಹಾಗೆ. ಇಲ್ಲೊಂದು ಅಂಶವನ್ನ ನಾವೆಲ್ಲ ಗಮನಿಸಬೇಕು. ಜನ ತಾವು ಒಪ್ಪಿ ಕೊಂಡಿರುವ ಆಚರಣೆಗಳನ್ನ ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಬೇರೆಯವರು ಅದನ್ನ ಟೀಕೆ ಮಾಡಿದಷ್ಟೂ ಅದಕ್ಕೆ ಬಲವಾಗಿ ಅಂಟಿ ಕೊಳ್ಳುತ್ತಾರೆ. ಈ ಸೂಕ್ಷ್ಮವಾದ ಕೆಲಸವನ್ನ ಎಚ್ಚರಿಕೆಯಿಂದ ಮಾಡ ಬೇಕು.
ಶ್ರೀ ನಾರಾಯಣ ಗುರುಗಳು ಬಹಳ ಅಪರೂಪದ ಸಮಾಜ ಸುಧಾರಕರು. ಅವರು ಮೊದಲು ದೇವಾಲಯಗಳನ್ನ ಕಟ್ಟಲಿಕ್ಕೆ ಹೊರಟರು ನಂತರ ದೇವಾಲಯ ಬಿಟ್ಟು ಶಾಲೆಗಳನ್ನ ನಿರ್ಮಿಸಿದರು. ಇದು ಪ್ರಯೋಜನಕಾರಿ ಅಂತ ಅವರಿಗೆ ಅನಿಸಿತು. ಜನರಿಗೆ ನೀಡುವ ನಿಜವಾದ ಶಿಕ್ಷಣ ಅವರ ಬದುಕನ್ನ ಬದಲಾಯಿಸುತ್ತದೆ. ಈ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕು.
* ಶಿಕ್ಷಣ ಅಂದಾಗ ನನಗೆ ನೆನಪಾಗುವುದು ನಮ್ಮ ವಿಶ್ವವಿದ್ಯಾಲಯಗಳು. ಒಂದು ಕಾಲದಲ್ಲಿ ಇಡೀ ಕನ್ನಡ ನಾಡಿನಲ್ಲಿ ಎರಡೇ ಎರಡು ವಿಶ್ವವಿದ್ಯಾಲಯಗಳು ಇದ್ದವು. ಮೈಸೂರು ಹಾಕು ಕರ್ನಾಟಕ ವಿ.ವಿ. ಗಳು ಚೆನ್ನಾಗಿಯೇ ಕೆಲಸ ಮಾಡುತ್ತಿದ್ದವು. ಅಲ್ಲಿ ಪ್ರಕಾಂಡ ಪಂಡಿತರು, ವಿಧ್ವಾಂಸರು, ನಾಡು ನುಡಿಯ ನಿಜವಾದ ಅಭಿಮಾನಿಗಳು ಇದ್ದರು. ಪ್ರಚಾರೋಪನ್ಯಾಸಗಳ ಮೂಲಕ ಹಳ್ಳಿಗಳನ್ನ ಈ ವಿ.ವಿ.ಗಳು ಮುಟ್ಟುತ್ತಿದ್ದವು. ಪುಸ್ತಕ ಪತ್ರಿಕೆಗಳ ಮೂಲಕ ಜನಜಾಗೃತಿಯನ್ನ ಉಂಟು ಮಾಡುತ್ತಲಿದ್ದವು. ಹೊರನಾಡಿನಲ್ಲಿ ಈ ವಿವಿ. ಗಳ ಬಗ್ಗೆ ತುಂಬಾ ಗೌರವವಿತ್ತು. ಇಂದು ಹಲವಾರು ವಿವಿ.ಗಳಿವೆ, ಹೊಸದಾಗಿ ಕೆಲವು ಹುಟ್ಟಿ ಕೊಳ್ಳುತ್ತಿವೆ. ಒಳಜಗಳ, ಕಾಲು ಹಿಡಿದು ಎಳೆಯುವುದು, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಪೈಪೋಟಿ, ಗುಂಪುಗಾರಿಕೆ, ಕೋಮು ಕಲಹ, ಅಶಿಸ್ತು, ಈ ಬಗೆಯ ಹಲವು ಶಾಪಗಳು ನಮ್ಮ ಇಂದಿನ ವಿವಿ.ಗಳನ್ನ ಕಾಡುತ್ತಿದೆ. ಹೊರಗಿನ ರಾಜ್ಯಗಳು ನಮ್ಮ ವಿವಿ.ಗಳ ಪ್ರಶಸ್ತಿ ಪತ್ರಗಳನ್ನ ಮುಟ್ಟಲು ಕೂಡ ಹಿಂಜರಿಯುತ್ತಿವೆ. ಈ ಪರಿಸ್ಥಿತಿ ಸರಿ ಆಗುವುದು ಯಾವಾಗ, ಸರಿಮಾಡುವವರು ಯಾರು? ಈ ಪ್ರಶ್ನೆಗಳು ನಮ್ಮ ಮುಂದಿವೆ.
ಹೇಳ ಬೇಕಾದ ವಿಷಯಗಳು ಬಹಳ ಇವೆ. ಇಲ್ಲಿ ಅವುಗಳನ್ನ ಸೂಕ್ಷ್ನವಾಗಿ ಹೇಳ ಬಹುದು- ಹೊಸ ಸರಕಾರ ಬಂದು ಕೆಲ ತಿಂಗಳುಗಳು ಕಳೆದರೂ ಇನ್ನೂ ಅಕ್ಯಾಡೆಮಿಗಳು ಅಸ್ತಿತ್ವಕ್ಕೆ ಬಂದಿಲ್ಲ. ನಾಡಿನ ಸಾಂಸ್ಕೃತಿಕ ಬದುಕಿಗೆ ಒಂದು ಬಗೆಯ ಗರ ಬಡಿದಿದೆ. ಬೇರೆ ಭಾಷೆಯ ಚಲನ ಚಿತ್ರಗಳು ವಿಜೃಂಭಣೆಯಿಂದ ಕನ್ನಡ ನಾಡಿನಲ್ಲಿ ಪ್ರದರ್ಶಿತವಾಗುತ್ತಿವೆ. ಕನ್ನಡ ಬಾರದೇನೆ ಇಲ್ಲಿ ಬುದುಕುವಂತಹಾ ವಾತಾವರಣವನ್ನ ನಾವು ಸೃಷ್ಟಿ ಮಾಡಿ ಇರಿಸಿದ್ದೇವೆ. ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಅನ್ನುವ ಉದ್ದೇಶದಿಂದ, ಇತರೇ ಕೆಲ ಸಮಸ್ಯೆಗಳನ್ನ ಬಗೆಹರಿಸಲು ಸಿಧ್ದಪಡಿಸಿದ ವರದಿಗಳು ಗೆದ್ದಲು ತಿನ್ನುತ್ತ ವಿಧಾನ ಸೌಧದಲ್ಲಿ ಬಿದ್ದಿವೆ. ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಬಿ ಬಲವಾಗುತ್ತಿದೆ. ಕೋಮು ಶಕ್ತಿಗಳು ತಮ್ಮೆಲ್ಲ ಆಂತರಿಕ ಶಕ್ತಿಯನ್ನ ಬಳಸಿ ಕೊಂಡು ಜನರ ನಡುವೆ ವಿಷ ಬೀಜವನ್ನ ಬಿತ್ತುವ ಕೆಲಸವನ್ನ ಮುಂದುವರೆಸಿವೆ. ನೈತಿಕ ಪೊಲೀಸ್ ಅನ್ನುವ ಪರ್ಯಾಯ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ನಮ್ಮ ಸಹಜೀವಿಗಳನ್ನ ಅನುಮಾನದಿಂದ ನೋಡುವ ಪ್ರವೃತ್ತಿಗೆ ತಡೆ ಬಂದಿಲ್ಲ. ಕಿರುತೆರೆ ಅನ್ನುವ ಆಧುನಿಕ ಅಪಾಯ ಮೌಢ್ಯ, ಭಯ, ಅಪರಾಧ, ಇತ್ಯಾದಿಗಳನ್ನ ವೈಭವೀಕರಿಸಿ ಜನರ ಬೇಡಿಕೆಯನ್ನ ಪೂರೈಸುತ್ತ ತನ್ನ ನಿಜವಾದ ಶಕ್ತಿಯ ದುರುಪಯೋಗವನ್ನ ಮಾಡಿಕೊಳ್ಳುತ್ತದೆ. ಇವುಗಳನ್ನ ಸರಕಾರ, ಜನ, ಗಮನಿಸ ಬೇಕು. ಇಂತಹಾ ಸಮಸ್ಯೆಗಳನ್ನ ಇರಿಸಿ ಕೊಂಡು ನಾವು ಬದುಕುವುದರಲ್ಲಿ ಸುಖ ಇಲ್ಲ. ನೆಮ್ಮದಿಯೂ ಇಲ್ಲ. ಅದು ಪುರುಷಾರ್ಥವೂ ಅಲ್ಲ.
ನಾನು ಇಡೀ ಕರ್ನಾಟಕವನ್ನ ಸುತ್ತಿ ಬಂದವನು. ಇಲ್ಲಿಯ ವೈವಿಧ್ಯಮಯವಾದ ಭಾಷೆ, ಜನಬದುಕು, ರೀತಿ, ನೀತಿ, ಉಡುಗೆ, ಆಹಾರ, ನೀರಿನ ಗುಣ, ಮಣ್ಣಿನ ಬಣ್ಣ, ಪರಿಸರದ ವಿವಿಧತೆ ನನ್ನನ್ನ ಮರಳು ಮಾಡಿದೆ. ಒಂದು ಕಡೆ ಕುರಿಗಳನ್ನ ಕರೆದುಕೊಂಡು ಓರ್ವ ಕುರುಬು ಹೆಗಲ ಮೇಲೆ ದೋಟಿ ಹೊತ್ತು ನಡೆದರೆ ಕುರಿಗಳು ಅವನನ್ನ ಅನುಕರಿಸುತ್ತವೆ, ಇನ್ನೊಂದು ಕಡೆ ಕುರಿಗಳನ್ನ ಕುರುಬ ಹೊಡೆದು ಕೊಂಡು ಹೋಗ ಬೇಕಾಗುತ್ತದೆ. ಒಂದು ಕಡೆ ನೀರು ಬೆಟ್ಟದ ತುದಿಯಲ್ಲಿ ಪುಟಿದು ಬಚ್ಚಲು ಮನೆಯ ಹಂಡೆಗೆ ಬಂದು ಬಿದ್ದರೆ, ಇನ್ನೊಂದು ಕಡೆ ಒಂದು ಕೊಡಪಾನ ನೀರಿಗಾಗಿ ನಮ್ಮ ಹೆಂಗಳೆಯರು ಇಂದು ಒಂದು ಕಿಮೀ. ನಾಳೆ ಮೂರು ಕಿಮೀ ಹೋಗ ಬೇಕಾಗುತ್ತದೆ. ಒಂದು ಕಡೆ ಸಮೃಧ್ದವಾದ ಹಸಿರು ಇನ್ನೊಂದು ಕಡೆ ಹಸಿರೇ ಇಲ್ಲದ ಬೆಂಗಾಡು. ಇದು ಕರ್ನಾಟಕ. ಶತಮಾನಗಳಿಂದ ನಮ್ಮ ಜನ ಇಲ್ಲಿ ಬದುಕಿದ್ದಾರೆ. ನಾನು ನೆಮ್ಮದಿಯಿಂದ ಇರುವವರನ್ನ ಕಂಡು ಸಂತಸ ಪಟ್ಟಿದ್ದೇನೆ, ಕಷ್ಟದಲ್ಲಿ ಇರುವವರ ಕುರಿತು ನೊಂದಿದ್ದೇನೆ. ದಿನ ನಿತ್ಯ ನೋವನ್ನ ಅನುಭವಿಸುವವರ ನೋವು ದೂರವಾಗಲಿ ಎಂದು ಹಾರೈಸುತ್ತೇನೆ. ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಎಂಬ ಸಾಹಿತ್ಯದ ಉದ್ದೇಶ ನಮ್ಮ ನಾಡಿನ ಎಲ್ಲರ ವಿಷಯದಲ್ಲೂ ನಿಜವಾಗಬೇಕು. ನಮ್ಮ ಸರಕಾರ, ನಾಡಿನ ಕ್ರಿಯಾ ಶೀಲರು, ವೈಜ್ಞಾನಿಕ ವಿಧಿ ವಿಧಾನಗಳ ಮೂಲಕ ಆ ಆಶಯವನ್ನು ಸಾಧಿಸುವಂತಾಗಲಿ ಎಂದು ಹಾರೈಸುತ್ತೇನೆ. ಈ ನಾಡನ್ನ ಕವಿಗಳು, ದೃಷ್ಟಾರರು, ರಾಜಕೀಯ ವ್ಯಕ್ತಿಗಳು, ನಾಡಿನ ಕೃಷಿ ಕಾಮಿಕರು, ವ್ಯಾಪಾರಿಗಳು, ಕ್ರೀಡಾ ಪಟುಗಳು, ಮತ್ತೆಲ್ಲರೂ ಬಯಸಿ ಬಯಸಿ ಹಂಬಲಿಸಿ ನಿರ್ಮಿಸಿದರು ಅನ್ನುವ ಅಂಶ ಸದಾ ನಮ್ಮ ನೆನಪಿನಲ್ಲಿ ಇರಬೇಕು. ಈ ನಾಡನ್ನ ಒಡೆಯುವ, ಇಲ್ಲಿ ಅಶಾಂತಿಯನ್ನ ಹುಟ್ಟಿಸುವ ಕೆಲಸ ಆಗದಿರಲಿ ಅನ್ನುವುದೇ ನಮ್ಮೆಲ್ಲರ ಹಾರೈಕೆ.
ನನ್ನ ಮಾತು ತುಸು ದೀರ್ಘವಾಗಿದ್ದರೂ ಕೇಳಿದ್ದೀರಿ. ಹಂಸ ಕ್ಷೀರ ನ್ಯಾಯ ಅನ್ನುವ ಮಾತನ್ನ ನಿಮ್ಮ ನೆನಪಿಗೆ ತರುತ್ತೇನೆ. ಬೇಂದ್ರೆಯವರ ಈ ಮಾತುಗಳ ಮೂಲಕ ನನ್ನ ಮಾತಿಗೆ ಮಂಗಳ ಹಾಡುತ್ತೇನೆ.
ಲೇಸೆ ಕೇಳಿಸಲಿ ಕಿವಿಗೆ, ನಾಲಗೆಗೆ ಲೇಸೆ ನುಡಿದು ಬರಲಿ, ಲೇಸೆ ಕಾಣಿಸಲಿ ಕಣ್ಗೆ, ಜಗದೊಳಗೆ ಲೇಸೆ ಹಬ್ಬುತಿರಲಿ, ಲೇಸೆ ಕೈಗಳಿಂದಾಗುತಿರಲಿ, ತಾ ಬರಲಿ ಲೇಸೆ ನಡೆದು, ಲೇಸನುಂಡು, ಲೇಸುಸಿರಿ, ಇಲ್ಲಿರಲಿ ಲೇಸೆ ಮೈಯ ಪಡೆದು.-ಅಂಬಿಕಾತನಯ ದತ್ತ.
ನಮಸ್ಕಾರ.
ನಾ. ಡಿಸೋಜ
Powered By Blogger