Monday, November 17, 2008

ಕರ್ನಾಟಕದ ನಕ್ಸಲರಿಗೆ ನೇಪಾಳದ ಕುಮ್ಮಕ್ಕು


ಕರ್ನಾಟಕದ ನಕ್ಸಲರಿಗೆ ನೇಪಾಳದ ಕುಮ್ಮಕ್ಕು
ನಗರ ಪ್ರದೇಶಗಳಿಗೂ ಚಳವಳಿ ವಿಸ್ತರಿಸಲು ಕಾರ್ಯತಂತ್ರ !

ಬೆಂಗಳೂರು : ಪಶ್ಚಿಮ ಘಟ್ಟಕ್ಕೂ ನೇಪಾಳಕ್ಕೂ ಈಗ ಹೊಸ ನಂಟು ಬೆಳೆದಿದೆ ! ಕರ್ನಾಟಕದಲ್ಲಿ ನಕ್ಸಲ್ ಚಳವಳಿ ಪ್ರಬಲಗೊಳಿಸಲು ನೇಪಾಳ ಸರಕಾರ ಸಂಪೂರ್ಣವಾಗಿ ಬೆಂಬಲ ನೀಡತೊಡಗಿದೆ !!
ಆ ದೇಶದಲ್ಲಿ ಮೊದಲ ಬಾರಿಗೆ ಸರಕಾರ ರಚಿಸಿರುವ ಮಾವೋವಾದಿಗಳು ಈಗ ತಮ್ಮ ಕಾರ್ಯತಂತ್ರವನ್ನು ಭಾರತದ ಉದ್ದಗಲಕ್ಕೂ ವಿಸ್ತರಿಸಿ ತಮ್ಮದೇ ಆದ ರಾಜಕೀಯ ನೆಲೆ ಕಂಡುಕೊಳ್ಳಲು ಸಕಲ ರೀತಿಯಲ್ಲೂ ಸನ್ನದ್ಧವಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಕರ್ನಾಟಕ , ಆಂಧ್ರಪ್ರದೇಶ, ಒರಿಸ್ಸಾ, ಗುಜರಾತ್, ಛತ್ತೀಸ್‌ಗಢ ಮುಂತಾದ ರಾಜ್ಯಗಳಿಂದ ಅರಣ್ಯ ಪ್ರದೇಶದಲ್ಲಿ ಕಾರ್ಯಪ್ರವೃತ್ತವಾಗಿರುವ ನಕ್ಸಲ್ ಮುಖಂಡರನ್ನು ಕರೆಯಿಸಿಕೊಂಡು ನೇಪಾಳದ ಪ್ರಧಾನಿ ಪ್ರಚಂಡ ಗುಪ್ತ ಮಾತುಕತೆ ನಡೆಸಿದ್ದು, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಚಳವಳಿ ವಿಸ್ತರಿಸಲು ಸಕಲ ಸಲಹೆ ಹಾಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ .
ಇಲ್ಲಿಯವರೆಗೆ ಕರ್ನಾಟಕದಲ್ಲಿ ಮಾವೋವಾದಿಗಳಿಂದ ಸಣ್ಣಪುಟ್ಟ ಸುದ್ದಿಗಳಾಗಿದ್ದವೇ ಹೊರತು ಅಷ್ಟಾಗಿ ದೊಡ್ಡ ಅನಾಹುತಗಳ್ಯಾವೂ ಆಗಿರಲಿಲ್ಲ. ಆದರೆ ಈಗ ಕರ್ನಾಟಕದಲ್ಲಿ ತಮ್ಮದೇ ಆದ ನೆಲೆ ಕಂಡುಕೊಳ್ಳಲು ಮಾವೋವಾದಿಗಳು ಬಹಿರಂಗವಾಗಿಯೇ ಸಿದ್ಧತೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ನೇಪಾಳದಲ್ಲಿ ನಡೆದ ಮಾವೋವಾದಿಗಳ ಉನ್ನತ ಮಟ್ಟದ ಗುಪ್ತ ಸಭೆಯಲ್ಲಿ ಕರ್ನಾಟಕದಿಂದ ಕೆಲವು ಆಯ್ದ ನಕ್ಸಲ್ ಮುಖಂಡರು ಭಾಗವಹಿಸಿದ್ದಾರೆ. ಕಾಡಿನಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ನಕ್ಸಲ್ ಚಟುವಟಿಕೆ ಪ್ರಾರಂಭಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲು ಆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಅರಣ್ಯ ಪ್ರದೇಶಗಳಲ್ಲಿ ಆದಿವಾಸಿಗಳ, ಗಿರಿಜನರ ಏಳಿಗೆಗಾಗಿ ಹೋರಾಟ ನಡೆಸುತ್ತಿದ್ದ ನಕ್ಸಲ್ ಸಂಘಟನೆ ಈಗ ಇಬ್ಭಾಗವಾಗಿದೆ. ಒಂದು ಗುಂಪು ನಗರ ಪ್ರದೇಶಗಳಲ್ಲೂ ತಮ್ಮ ಹೋರಾಟ ಮುಂದುವರಿಸಲು ತೀರ್ಮಾನಿಸಿ ‘ರೆವಲ್ಯೂಷನರಿ ಕಮ್ಯೂನಿಸ್ಟ್ ಪಾರ್ಟಿ- ಕರ್ನಾಟಕ (RCPK)’ ಮಾಡಿಕೊಂಡು ಹೊರ ಬಂದು ಬಹಿರಂಗ ಕ್ರಾಂತಿಗೆ ಅಣಿಯಾಗಿದೆ ಎಂದು ಹೇಳಲಾಗಿದೆ.
ನೇಪಾಳದಲ್ಲಿ ನಕ್ಸಲರು ರಾಜ ಪ್ರಭುತ್ವದ ವಿರುದ್ಧ ಸಶಸ್ತ್ರ ಧಂಗೆ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಜತೆಗೆ ರಾಜಕೀಯವಾಗಿ ಬೆಳೆದು ಅಕಾರದ ಗದ್ದುಗೆ ಏರಿದ್ದಾರೆ. ಅದೇ ದಾಳವನ್ನು ಈಗ ನೇಪಾಳ ಸರಕಾರ ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳ ಮೇಲೂ ಮುನ್ನಡೆಸಲು ಪೂರ್ವ ತಯಾರಿಯಲ್ಲಿದೆ. ಅದಕ್ಕಾಗಿಯೇ ಉನ್ನತ ಸಭೆ ನಡೆಸಿ ನಕ್ಸಲರಿಗೆ ಚಳವಳಿ ನಡೆಸಲು ಎಲ್ಲ ರೀತಿಯ ಸಲಹೆ ಹಾಗೂ ಸಹಕಾರ ನೀಡುವುದಾಗಿ ನೇಪಾಳ ಪ್ರಧಾನಿ ಪ್ರಚಂಡ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿಯೇ ಕರ್ನಾಟಕದಲ್ಲಿ ಆರು ತಿಂಗಳಿನಿಂದೀಚೆಗೆ ನಕ್ಸಲರ ಚಟುವಟಿಕೆ ತೀವ್ರಗೊಂಡಿದೆ. ಮೊದಲಿನ ನಕ್ಸಲ್ ತಂಡ ಎಂದಿನಂತೆ ಪಶ್ಚಿಮಘಟ್ಟದಲ್ಲಿ ಕಾರ್ಯಪ್ರವೃತ್ತವಾಗಿದೆ. ಆದರೆ ಅಲ್ಲಿ ಹೊರ ಬಂದ ತಂಡ ನಗರ ಪ್ರದೇಶಗಳ ಕೊಳಚೆ ಪ್ರದೇಶ, ಐಟಿ, ಬಿಟಿ, ಬಿಪಿಒಗಳಲ್ಲಿ ಸಂಘಟನೆಯಲ್ಲಿ ತೊಡಗಿದೆ .
ಐಟಿ ಕೇಂದ್ರಗಳಲ್ಲಿ ನಕ್ಸಲ್ ಸಂಘಟನೆ :
ನಕ್ಸಲರು ಇಷ್ಟು ದಿನ ಕೇವಲ ಪಶ್ಚಿಮ ಘಟ್ಟದ ಗಿರಿಜನರ ಮೂಲ ಸಮಸ್ಯೆಗಳಿಗೆ ಮಾತ್ರ ತಲೆ ಕೆಡಿಸಿಕೊಂಡು ಬಂದೂಕು ಹಿಡಿದು ತಿರುಗುತ್ತಿದ್ದರು. ಆದರೆ ಈಗ ಆ ಅಜೆಂಡಾ ಹೊಸ ಸಂಘಟನೆಯಲ್ಲಿ ಬದಲಾಗಿದೆ. ಈಗ ಅವರು ನಗರ ಪ್ರದೇಶಗಳಲ್ಲಿನ ಉದ್ಯೋಗ ಅಭದ್ರತೆ, ನಿಯಮಾವಳಿಗಳಿಲ್ಲದ ಕೆಲಸದ ಹೊರೆ, ಇತ್ತೀಚೆಗೆ ಆರ್ಥಿಕ ಕುಸಿತದಿಂದ ಸದ್ದಿಲ್ಲದೆ ನಡೆಯುತ್ತಿರುವ ಸಂಬಳ ಕಡಿತ, ಉದ್ಯೋಗದಿಂದ ತೆಗೆದು ಹಾಕುವ ಪ್ರಕ್ರಿಯೆಗಳ ವಿರುದ್ಧ ನೌಕರರನ್ನು ಜಾಗೃತಗೊಳಿಸಿ ತಮ್ಮ ಸಂಘಟನೆಯನ್ನು ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಆ ಮೂಲಕ ತಮ್ಮ ‘ಆರ್‌ಸಿಪಿ-ಕೆ ’ಯನ್ನು ಪ್ರಬಲಗೊಳಿಸಿ ಹೋರಾಟವನ್ನು ತೀವ್ರಗೊಳಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದ್ದು, ಅದು ಈಗಾಗಲೇ ಜಾರಿಗೊಳ್ಳುತ್ತಿದೆ. ಅದಕ್ಕೆ ಪ್ರತ್ಯಕ್ಷ ನಿದರ್ಶನ ಕೆಲ ತಿಂಗಳ ಹಿಂದಷ್ಟೆ ಬೆಂಗಳೂರಿನ ಕೊಳಚೆ ಪ್ರದೇಶವೊಂದರಲ್ಲಿ ನಾಗರಿಕರನ್ನು ಸಂಘಟಿಸುತ್ತಿದ್ದ ನಕ್ಸಲ್ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಸಿರುವುದು. ಶೃಂಗೇರಿಯಲ್ಲಿ ಬಿಜೆಪಿ ಮುಖಂಡರ ಜತೆ ನಡೆದ ಬಹಿರಂಗ ಸಭೆ. ಕುಂದಾಪುರದ ಮಡಾಮಕ್ಕಿಯ ಹಂಜಾದಲ್ಲಿ ನ.೪ರಂದು ನಡೆದ ಪ್ರಜಾಸಭೆ. ಜತೆಗೆ ಈ ಹಿಂದೆ ಜೈಲಿನಲ್ಲಿದ್ದು, ಬಿಡುಗಡೆಯಾಗಿದ್ದ ಕೆಲವು ನಕ್ಸಲ್ ಮುಂಡರು ಮತ್ತೆ ಭೂಗತರಾಗಿರುವುದು...
ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ನಕ್ಸಲರು ಮತ್ತಷ್ಟು ಜಾಗೃತರಾಗಿದ್ದು, ಆರೇಳು ತಿಂಗಳಿನಿಂದೀಚೆಗೆ ಚಳವಳಿ ಎರಡು ಬಣಗಳಾದ ನಂತರ ಹೋರಾಟ ನಗರ ಪ್ರದೇಶಗಳಿಗೂ ವಿಸ್ತರಣೆಗೊಂಡಿದ್ದು, ಬಹಿರಂಗವಾಗಿ ಜನರನ್ನು ಒಟ್ಟುಗೂಡಿಸಿ, ಸಂಘಟಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಹೀಗಾಗಿ ರಾಜ್ಯದಲ್ಲಿ ಸಶಸ್ತ್ರ ಹೋರಾಟದ ಜತೆಗೆ ನಕ್ಸಲ್ ಚಳವಳಿ ಹೊಸ ರೂಪ ಪಡೆಯುವ ಎಲ್ಲ ಸಾಧ್ಯತೆಗಳಿವೆ .

Wednesday, November 12, 2008

‘ಸ್ವಾಭಿಮಾನಿ ’

ಇಡೀ ರಾತ್ರಿ ಮಂತ್ರ ಜಪಿಸಿದ ಹಾಗೆ ಭರಮ್ಯಾ ಗೊಣಗುತ್ತಲೇ ಇದ್ದ. ಅದ್ಯಾಕೋ ಅವತ್ತು ಇಂದ್ರಿ ಮೇಲೆ ಅವನಿಗೆ ತುಂಬಾ ಸಿಟ್ಟು ಬಂದಿತ್ತು...
‘ ನೀನು ಊರು ಮಿಂಡ್ರಿ ಇದ್ದಂಗೆ, ಸುಖಾ ಸುಮ್ನೆ ಕಿತಿಬಿ ತಗಿಯಾಕ್ಹೋಗ್ತಿ , ನೀನು ಮಾಡೋ ಹಡಬಿ ಕೆಲ್ಸಕ್ಕೆ ನಾನ್ ಹೋಗಿ ಬಯಸ್ಗೋಬೇಕು. ಮೊದ್ಲೇ ಆಗಲ್ಲ ಅಂದಿದ್ರ ನಿಮ್ಮಪ್ಪನ್ ಗಂಟೇನ್ ಹೋಗ್ತಿತ್ತು...’ ಎಂದ ಭರಮ್ಯಾ ಗುಟುರು ಹಾಕುತ್ತಿದ್ದ.
ಪ್ರತಿ ದಿನ ಇದೇ ಡೈಲಾಗ್ ಕೇಳಿ ಕೇಳಿ ಅವನ ಹೆಂಡತಿ ಇಂದ್ರಿಗೆ ಸಾಕ್‌ಬೇಕಾಗಿ ಹೋಗಿತ್ತು. ಐದಾರು ವರ್ಷಗಳ ಕಾಲ ಅವನ ಜತೆ ಜೀವನ ಮಾಡಿದ್ದ ಆಕೆಗೆ ಇವನದ್ದು ಇದೇ ಕಥೆ ಎಂದು ಗೊತ್ತಿತ್ತು. ‘ಅವ್ರ ಗೌಡನಿಗೆ ವಿರುದ್ಧವಾಗಿ ನಡಕೊಂಡ್ರೆ, ಈ ಮೂದೇವಿ ಇಂಗೇ ಆಡ್ತದೆ , ದಿನಾ ಹೋಗಿ ಅವನ್ದೇ ಗೇದ್ರೆ ನಾವ್ ಉದ್ದಾರಾಗೋದ್ ಯಾವಾಗ ? ’ ಎಂದು ಮನಸ್ಸಿನಲ್ಲೇ ಅಂದುಕೊಂಡು ಸುಮ್ಮನೆ ನಿದ್ರೆಗೆ ಜಾರಿದ್ದಳು.
ಇಡೀ ದಾಸನಪುರ ಕಗ್ಗತ್ತಲ್ಲಲ್ಲಿ ಮುಳುಗಿತ್ತು. ಊರ ಅಗಸಿ ಬಾಗಿಲ ಬಳಿಯೇ ಇದ್ದ ಆ ಪುಟ್ಟ ಗುಡಿಸಲಿನಲ್ಲಿ ಮಾತ್ರ ಒಂದೇ ಒಂದು ಚಿಮುಣಿ ಬೆಳಕು ಕಾಣುತ್ತಿತ್ತು.
ಸೋಗೆ ಹಾಗೂ ಸೌದೆಯಿಂದ ಕಟ್ಟಿದ್ದ ಆ ನೆರಕೆ ಮನೆಯೊಳಗಿನಿಂದಲೇ ಬೆಳಕಿನ ಜತೆಗೆ ಸಿಟ್ಟಿನಿಂದ ಮಿಶ್ರಿತವಾದ ಕೆಟ್ಟ ಬೈಗುಳಗಳೂ ತೂರಿ ಬರುತ್ತಿದ್ದವು . ಕಾರ್ಗತ್ತಲಲ್ಲಿ ನಿಧಾನವಾಗಿ ಬೈಗುಳಗಳೂ ನಿಂತು ಹೋದವು. ಎಲ್ಲವೂ ನಿರುಮ್ಮಳವಾಗಿ ಶಾಂತವಾಯಿತು. ಬರೀ ತಣ್ಣನೆಯ ಗಾಳಿ ಹಾಯಾಗಿ ಸುಯ್‌ಯೆಂದು ಬೀಸುತ್ತಿತ್ತು ಕತ್ತಲೊಳಗೆ ...
ಬೆಳಗ್ಗೆ ಎದ್ದೊಡನೆಯೇ ಭರಮ್ಯಾ ‘ ಏ.. ಇಂದ್ರಿ , ಇವತ್ತಾದ್ರೂ ನೀನು ಗೌಡ್ರ ಕೆಲ್ಸಕ್ಕೆ ಹೋಗಿ ಬಾ, ಇಲ್ಲಾಂದ್ರೆ ನಿನ್ ಸಿಗ್ದು ತೋರ್‍ಣ ಕಡ್ತೀನಿ. ಗ್ಯಾನ ಇಟ್ಕೋ ’ ಎಂದು ಎಚ್ಚರಿಸಿದ.
ತಾನೂದುವ ಊದುಗೊಳವೆಯ ನಡುವಿಂದ ಹೊರ ಬರುತ್ತಿದ್ದ ಸದ್ದಿನ ಮಧ್ಯೆ ಗಂಡನ ಕರ್ಕಶ ಧ್ವನಿಯನ್ನು ಕೇಳಿಕೊಂಡ ಇಂದ್ರಿ ‘ಊಂ...’ ಎಂದಳು .
ಕಟ್ಟಿಗೆ ಮುರಿದು ಹಾಕುತ್ತಿದ್ದರೂ ಅದೇಕೊ ಒಲೆ ಉರಿಯುತ್ತಲೇ ಇರಲಿಲ್ಲ. ಎಷ್ಟೇ ಊದಿದರೂ ಬರೀ ಹೊಗೆ ಬರುತ್ತಲೇ ಇತ್ತು. ‘ ಬೆಳಗ್ಗೆ ಎದ್ರೆ ಸಾಕು , ಈ ಮಿಂಡ್ರಿಗುಟ್ಟಿದ್ ಒಲೆದೇ ಒಂದ್ ತ್ರಾಸ್ ನಂಗೆ . ಎಷ್ಟ್ ಊದಿದ್ರೂ ಉರಿಯಂಗಿಲ್ಲ ಅಂತ್ತತಿ...’ ಎಂದು ಗೊಣಗುತ್ತಲೇ ಇಂದ್ರಿ ಬೆಂಕಿ ಹತ್ತಿಸಿದಳು.
ಆ ಬೆಂಕಿ ಹತ್ತಿಸುವುದರೊಳಗೆ ಆಕೆಯ ಕಣ್ಣುಗಳೆರಡೂ ಕೆಂಪಾಗಿದ್ದವು. ಅದರಲ್ಲೇ ಅಕ್ಕಿ ತೊಳೆದು ಸಿಲ್ವಾರದ ಪಾತ್ರೆಯಲ್ಲಿ ಅನ್ನಕ್ಕೆ ಇಟ್ಟು ಬೇಯಿಸುತ್ತಿದ್ದಳು. ಸಣಕಲು ದೇಹದ ಭರಮ್ಯಾ ಅಷ್ಟರೊಳಗೆ ಕಟ್ಟಿಗೆ ಒಡೆದು ಸುಸ್ತಾಗಿ ಹಿಂಬಾಗಿಲಿನಿಂದ ಒಳಗಡೆ ಬಂದು ಕಟ್ಟಿಗೆ ಮೂಲೆಯಲ್ಲಿ ಸೌದೆ ಹಾಕಿದ. ಅವನನ್ನೇ ದಿಟ್ಟಿಸಿ ನೋಡಿದ ಇಂದ್ರಿಯ ಕೆಂಪಾದ ಕಣ್ಣುಗಳು ಕಂಡಿದ್ದೇ ತಡ ...
‘ಗೌಡ್ರ ಕೆಲ್ಸಕ್ಕೆ ಹೋಗೆ ಅಂದ್ರೆ ಸಾಕು, ಕಣ್ ಕೆಂಪಾಗ್ತಾವೆ . ಸೋರ್‍ಗಣ್ಣಿನ್ ಮುಂಡೇರ್ ಹಣೇಬರಾನೆ ಇಷ್ಟು , ಹೋಗಲ್ಲಿ ಮಿಂಡ್ರ ಗದ್ದಿ ಹುಡ್ಕೊಂಡು ಬತ್ತ ಆಯಾಕೆ. ಬದಿನ್ ಕೆಳ್ಗೆ ಮಲಗಾಕೆ ಚೆನ್ನಾಗಾಗ್ತೈತಿ...!! ’
ಅಷ್ಟು ಕಿವಿಗೆ ಬೀಳುತ್ತಿದ್ದಂತೆಯೇ ಇಂದ್ರಿಯ ಎಲ್ಲ ಇಂದ್ರಿಯಗಳೂ ನೆಟ್ಟಗಾಗಿದ್ದವು . ನಿಯತ್ತಿನಲ್ಲಿರುವ ಯಾವ ಹೆಣ್ಣುತಾನೆ ಈ ರೀತಿ ಅನ್ನಿಸಿಕೊಂಡಾಳು ?
‘ ಹೌದು, ಊರ್ ತುಂಬಾ ಇರೋರೆಲ್ಲಾ ನನ್ ಮೆಂಡ್ರೆ , ಮಿಂಡ್ರಿಗ್ ಹುಟ್ಟಿದೋರ್ ಬಾಯಾಗೆ ಅವು ಬಿಟ್ರೆ ಬೇರೆ ಏನ್ ಬರ್‍ತಾವ್ ಹೇಳು ?’ ಎಂದಳು.
ತನ್ನ ಹುಟ್ಟಿನ ಬುಡಕ್ಕೇ ಕೈ ಹಾಕಿದಳೆಂದು ಭರಮ್ಯಾ ಮತ್ತೆ ಸಿಟ್ಟಿಗೆದ್ದು ‘ ಮುಚ್ಕೊಂಡು ಅಡ್ಗಿ ಮಾಡೇ ,ನಿನ್ನಂತ ಗರ್‍ತೇರ್‍ನ ಬಾಳ ಕಂಡಿದೀನಿ ’ ಎಂದ.
ಮತ್ತೆ ಪರೋಕ್ಷವಾಗಿ ಇಂದ್ರಿಯ ಶೀಲದ ಬಗ್ಗೆಯೇ ಮೂದಲಿಸಿದ್ದಕ್ಕೆ ಅವಳಿಗೆ ಮತ್ತಷ್ಟು ರೇಗಿ ಹೋಗಿತ್ತು. ಹೌದು, ನಮ್ಮವ್ವ ಮತ್ತೊಬ್ಬನ್ನ ಇಟ್ಕೊಂಡೇ ನನ್ನ ಹಡ್ದಿದ್ದು. ನಿಮ್ಮವ್ವ ಬಾಳ್ ಅಪ್ಪಂತಾಕಿ. ಮೊದ್ಲು ನಿಂದು, ನಿಮ್ಮವ್ವ, ನಿಮ್ಮಪ್ಪಂದು ನೋಡ್ಕೊ. ಅಮ್ಯಾಗೆ ಬೇರೇವ್ರುದು ನೋಡೊವಂತಿ.’ ಎಂದು ಬಡಬಡನೇ ಬಡಾಯಿಸಿದಳು.
ತನ್ನ ಅವ್ವ, ಅಪ್ಪನ ಬಗ್ಗೆ ಮಾತಾಡಿದ್ದಕ್ಕೆ ತಡೆಯಲಾಗದ ಭರಮ್ಯಾ ‘ ಏನೆ... ಗಯ್ಯಾಳಿ, ಮುಚ್ಕೊಂಡು ಕೆಲ್ಸ ಮಾಡೆ ಅಂದ್ರೆ ನಂಗೇ ಎದ್ರು ವಾದಿಸ್ತೀಯಾ? ಹಲ್ಕಟ್ ಸೂಳೆ ’ ಎಂದು ಕೈಲಿದ್ದ ಕೊಡಲಿ ಕಾವಿನಿಂದಲೇ ಹೊಡೆದ !
ಆದರೆ ಒಲೆ ಮುಂದೆ ಕುಳಿತಿದ್ದ ಇಂದ್ರಿ ಕ್ಷಣಾರ್ಧದಲ್ಲಿ ಎದ್ದು ತಪ್ಪಿಸಿಕೊಂಡಳು. ಆದರೂ ಬಿಡದ ಭರಮ್ಯಾ, ಅವಳನ್ನು ಜುಟ್ಟು ಹಿಡಿದು ಹಿಗ್ಗಾಮುಗ್ಗ ಹೊಡೆದ. ಅವನ ಒರಟು ಕೈಗಳ ಹೊಡೆತಕ್ಕೆ ಇಂದ್ರಿ ತತ್ತರಿಸಿ ಹೋದಳು. ನೆರೆ ಹೊರೆಯವರು ಇದನ್ನು ನೋಡಿ ಜಗಳ ಬಿಡಿಸಲು ಬಂದರು. ಅಷ್ಟರಲ್ಲಿ ಕುಂತಲ್ಲಿಯೇ ಇಂದ್ರಿ ಕುಸಿದು ನೆಲಕ್ಕುರುಳಿದಳು. ನೆರೆಹೊರೆಯ ಜನ ಆಕೆಯನ್ನು ಪಕ್ಕದ ಮನೆಗೆ ಕರೆದುಕೊಂಡು ಹೋಗಿ ನೀರು ಕುಡಿಸಿದರು. ಅಷ್ಟರೊಳಗೆ ಇಂದ್ರಿ ಪ್ರe ಹೀನಳಾಗಿದ್ದಳು !! ಕೂಡಲೇ ಅವಳನ್ನು ಎತ್ತಿನ ಗಾಡಿಯಲ್ಲಿ ಕೂರಿಸಿಕೊಂಡು ಹತ್ತಿರದ ಶಿರಾಳಕೊಪ್ಪದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿಂದ ಶಿರಾಳಕೊಪ್ಪ ಸುಮಾರು ಐದು ಕಿ.ಮೀ. ದೂರ.
ಮುರುಕಲು ಎತ್ತಿನ ಗಾಡಿಯ ಶಬ್ದ ಹಾಗೂ ಅದು ಜೀಕು ಹೊಡೆಯುವುದರಿಂದ ಇಂದ್ರಿ ತನ್ನಷ್ಟಕ್ಕೆ ತಾನೇ ಎಚ್ಚರವಾದಳು.
ಹೇಗಾದರಾಗಲಿ ಎಂದು ಸಣ್ಣದೊಂದು ಕೊಡದಲ್ಲಿ ತಂದಿದ್ದ ನೀರನ್ನು ಎಲ್ಲ ಗಾಡಿಯಲ್ಲಿದ್ದ ಹೆಂಗಸರು ಅವಳಿಗೆ ಕುಡಿಸಿ, ‘ ಯವ್ವಾ, ದೇವರು ದೊಡ್ಡೋನು. ಮತ್ತ ಬದುಕಿಬಿಟ್ಟಿ ನೀನು . ಏನ್ ಆಗಿದೆಯೇ ನಿನ್ ಗಂಡಂಗೆ ? ಉರುಗು ಮುಕ್ಳೇನು ಮಾಡಿದಂಗೆ ಮಾಡ್ತಾನೆ. ಯಾವಾಗ್ ನೋಡಿದ್ರೂ ಉತ್ತರ್ ಕುಮಾರ್‍ನ ಪೌರುಷ ಒಲೆ ಮುಂದೆ ಅನ್ನೋ ಹಂಗೆ ಹೆಂಡ್ತಿಗೆ ಹೊಡಿತಾನೇ ಇರ್‍ತಾನೆ. ಕಟ್ಕೊಂಡಾಗಿಂದ ನಾವು ನೋಡ್ತಾ ಇದೇವಿ. ಏನ್ ಗಂಡ್ಸೋ ಏನೋ...’ ಎಂದು ಎಲ್ಲರೂ ಒಂದೊಂದು ಮಾತು ಆಡಿದರು.
****
ಬೋರ್‌ವೆಲ್ ಮನೆಯ ಕಟ್ಟೆಯ ಮೇಲೆ ರಾಜೇಗೌಡ ಕುಳಿತಿದ್ದ .ಟ್ರ್ಯಾಕ್ಟರ್‌ನಿಂದ ಉತ್ತಿದ್ದ ಗದ್ದೆಯಲ್ಲಿ ಮೇಲೆದ್ದಿದ್ದ ಒರಟು ಹೆಂಟೆಯನ್ನು ಒಡೆಯುತ್ತಿದ್ದ ಭರಮ್ಯಾ ಏನೇನೋ ಬಡಬಡಿಸುತ್ತಿದ್ದ. ತುಂಬಾ ಹೊತ್ತು ಹೆಂಟೆ ಒಡೆದು ಸುಸ್ತಾದ ಮೇಲೆ ಬೋರ್‌ವೆಲ್ ಮನೆ ಬಳಿ ನೀರು ಕುಡಿಯಲು ಬಂದ.
‘ಅಲ್ಲಲೇ ಭರಮ್ಯಾ ನಿನ್ ಹೆಂಡ್ತಿಗೆ ಇವತ್ತು ಸಾಯೋ ಹಂಗ್ ಹೊಡ್ದಿದ್ದಂತ ಯಾಕ ? ಅಂಥ ತಪ್ ಅವ್ಳೇನ್ ಮಾಡಿದ್ಲು ? ’ ಎಂದ ರಾಜೇಗೌಡ.
‘ಹೆಂಗುಸ್ರು ಹೆಂಗ್ ಇರ್‍ಬೇಕ್ ಹಂಗಿರ್‍ಬೇಕು ಗೌಡ್ರೆ, ಇಲ್ಲಾಬಾರ್‍ದು ಮಾತಾಡ್ಬಾರ್‍ದು ...’
‘ಅಂಥದ್ದೇನಲೆ ಮಾತಾಡಿದ್ ಅವ್ಳು ?’
‘ನಿನ್ನೆ ನಿಮ್ ಕೆಲ್ಸಕ್ ಬಂದಿಲ್ಲಾಂತ ಬೈದೆ, ಅದ್ಕೇ ನಂಗೇ ಬೈತಾಳೆ. ಮುಚ್ಕೊಂಡ್ ಕುಂದ್ರೆ ಅಂದ್ರೂ ಕೇಳವಲ್ಲು . ಸಿಟ್ಟು ಬಂತು, ತಗುದು ಕೊಟ್ಟೆ ಸೆಟ್ಗೊಂಡ್ ಬಿದ್ಲು. ಸತ್ರ್ ಸಾಯ್ಲಿ ಅಂತ ಸುಮ್ಮನ್ ಬಂದೆ...’
‘ ಅಲ್ಲಲೆ ಬೋಸೂಡಿಕೆ , ತಿರುಗಿ ಏನೋ ಒಂದ್ ಮಾತ್ ಬೈದ್ಲು ಅಂತ ಸಾಯಂಗ್ ಹೊಡೆಯೋದಾ? ಏನ್ ಗಂಡ್ಸ್ ಅದಿಯಲೇ ? ’
‘ಸುಮ್ನಿರ್ರಿ ಗೌಡ್ರೆ , ನಿಮ್ಗೆ ಗೊತ್ತಾಗಂಗಿಲ್ಲ. ಈ ಹೆಂಗಸ್ರಿಗೆ ಸದ್ರ ಕೊಡ್ಬಾರ್‍ದು . ಕೊಟ್ವಿ, ತಲೆ ಮೇಲೆ ಬಂದು ಕೂರ್‍ತಾರೆ ’ ಎಂದು ಸಿಟ್ಟಿನಿಂದಲೇ ಹೇಳಿದ ಭರಮ್ಯಾ.
‘ಲೇ , ನಿನ್ ಹೆಂಡ್ತೀದು ಗಟ್ಟಿ ಜೀವ . ಏನೊ ಬದ್ಕೊಂಡಿದ್ದಾಳೆ . ನೀನ್ ಉಳ್ಕೊಂಡೆ ಮಗ್ನೆ ,ಇಲ್ದಿದ್ರೆ ಪೊಲೀಸ್ ಸ್ಟೇಷನ್‌ನಲ್ಲಿ ಕಂಬಿ ಎಣಿಸ್ಬೇಕಿತ್ತು ಸೂಳೆಮಗ್ನೆ ...’
ಗೌಡನ ಮಾತು ಭರಮ್ಯಾನಿಗೆ ಎಲ್ಲಿಗೆ ನಾಟಬೇಕಿತ್ತೋ ಅಲ್ಲಿಗೆ ನಾಟಿ, ಸಿಟ್ಟು ಬಂತು. ಆದರೆ ಏನು ಮಾಡುವ ಹಾಗಿಲ್ಲ. ಅವನು ಊರಿನ ಗೌಡ. ನಾಳೆ ಮತ್ತೆ ಏನೇ ಬೇಕು ಅಂದರೂ ಗೌಡನ ಹತ್ತಿರವೇ ಹೋಗಿ ಕೈ ಚಾಚಬೇಕು. ಆದ್ದರಿಂದ ಸಹಿಸಿಕೊಂಡು ಸುಮ್ಮನಾದ. ಮೇಲಾಗಿ ಈತ ಸ್ವಾಮಿ ನಿಷ್ಠ . ಪ್ರತಿ ದಿನ ಕೆಲಸ ಕೊಟ್ಟು , ಹೊಟ್ಟೆಗೆ ಅನ್ನ ನೀಡುತ್ತಿದ್ದ ಸಾಹುಕಾರನಿಗೆ ಅವನಷ್ಟು ನಿಯತ್ತಿನಿಂದ ಇದ್ದವನು ಇಡೀ ದಾಸನಪುರದಲ್ಲಿ ಯಾರೂ ಇರಲಿಲ್ಲ. ಹಾಗಾಗಿಯೇ ತೆಪ್ಪಗೆ ಬಾಯಿ ಮುಚ್ಚಿಕೊಂಡ.
ಆದರೂ ತಾನೊಬ್ಬ ಶೂರನೆಂಬತೆ ‘ ಏನು ಆಗ್ತಿರಲಿಲ್ಲ ಬುಡಿ, ಸ್ವಲ್ಪ ದಿನ ಜೈಲಲ್ಲಿರ್‍ತಿದ್ದೆ ಅಷ್ಟೆ. ಅಲ್ಲಾದ್ರೂ ಇದ್ದಿದ್ರೆ ಈ ಹಾದ್ರಗಿತ್ತಿ ಕಾಟದಿಂದ ಬಿಡುಗಡಿ ಸಿಕ್ತಿತ್ತು’ ಎಂದು ಹೋಗಿ ಹೆಂಟೆ ಒಡೆಯುವ ಕೆಲಸ ಮುಂದುವರಿಸಿದ .
ಗೌಡ ಒಳಗೊಳಗೇ ಮುಸಿ ಮುಸಿ ನಗುತ್ತ, ಸ್ವಗತದಲ್ಲಿಯೇ ‘ ಲೇ ಭರಮ್ಯಾ ನೀನ್ ಅಂದ್ಕೊಂಡಂಗಾಲ್ಲಕಣ್ಲೇ ಇಂದ್ರಿ , ಪೊಗುರು ಇರೋ ಹೆಂಗ್ಸು . ಅವಳ್ನ ಪಳಗ್ಸೋದು ಬಾರಿ ಕಷ್ಟ...’ ಎನ್ನುತ್ತ ಬೋರ್‌ವೆಲ್ ಮನೆಯಲ್ಲಿ ಬಾಗಿಲು ಹಾಕಿಕೊಂಡ.
‘ಇಂದ್ರಿ ತುಂಬಾ ಸುಂದ್ರಿ. ಆಕೆ ಮಾದಿಗರ ಕುಟುಂಬದಾಗೆ ಹುಟ್ಟಿದ್ರೂ ಬ್ರಾಹ್ಮಣರ ಹೆಣ್ಣು ಇದ್ದಂಗೆ ಇದಾಳೆ. ತೆಳ್ಳನೆಯ ಬಳ್ಳಿಯಂಥಾ ಮೈ , ಬೆಳ್ಳನೆ ಕಾಂತಿ, ಹೊಳೆಯುವ ಅವಳ ಕಣ್ಗಳು, ತೀಡಿದಂತಿರುವ ಹುಬ್ಬು , ಹರುಕು ಸೀರೆಯಾಚೆ ಕಾಣುವ ನಿಬ್ಬೆ ಹಣ್ಣಿನಂಥ ಮೊಲೆಗಳು, ನಾಗರ ಹಾವಿನಂತ ಕೂದಲು, ವ್ಹಾ...! ಅವಳ್ನ ನೋಡೋಕೆ ಎರಡು ಕಣ್ ಸಾಲ್ದು . ಅವ್ಳು ನನ್ನೋಳಾದ್ರೆ...!! ’
ರಾಜೇಗೌಡನ ಮನೆಯ ಬೆಡ್ ರೂಂ ನಲ್ಲಿ ದಿಢೀರನೆ ಹುಡುಗಿಯೊಬ್ಬಳು ಪ್ರತ್ಯಕ್ಷ . ನೀಳಕಾಯದ ದೇಹ ಸಿರಿ ಹೊಂದಿರುವ ಆ ಸುರ ಸುಂದರಾಂಗಿ . ತಳುಕು ದೇಹಕ್ಕೆ ಅಂಟಿಕೊಂಡಂತಿರುವ ಹೊಕ್ಕಳಿನ ಕೆಳಗೆ ಉಟ್ಟ ನೀಲಿ ಬಣ್ಣದ ಸೀರೆ , ಕೊರಳನ್ನು ಸುತ್ತುವರಿದಿದ್ದ ವಜ್ರದ ನಕ್ಲೇಸ್, ನೀಳ ಕೇಶ ರಾಶಿಯ ತುಂಬ ಮುಡಿದ ಮಲ್ಲಿಗೆ ಹಾಗೂ ಕನಕಾಂಬರ ಹೂವಿನ ಚೆಲುವು ಅವಳ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದವು. ಅವಳು ಬೇರೆ ಯಾರೂ ಅಲ್ಲ ಇಂದ್ರಿ...!!!
ರಾಜೇಗೌಡನಿಗಾದ ಪರಮಾನಂದಕ್ಕೆ ಅಂದು ಸಾಟಿಯೇ ಇರಲಿಲ್ಲ. ಮೆಲ್ಲಗೆ ಬಡ್‌ನಿಂದೆದ್ದು ಅಡಿಯಿಂದ ಮುಡಿಯವರೆಗೆ ಇಂದ್ರಿಯನ್ನು ಕಣ್ಣು ತುಂಬಿಕೊಂಡು ‘ ಇಂದ್ರಿ, ಇಂದ್ರಿ, ಇಂದ್ರಿ, ಇವತ್ ನಿಜವಾಗ್ಲೂ ನಂಗೆ ಸ್ವರ್ಗಕ್ಕೆ ಮೂರೇ ಗೇಣು ಇಂದ್ರಿ...’
ಇದ್ದಕ್ಕಿಂದ್ದಂತೆ ಬೋರ್‌ವೆಲ್ ಮನೆ ಬಾಗಿಲು ಬಡಿದ ಭರಮ್ಯಾ ‘ ಗೌಡ್ರೇ, ಗೌಡ್ರೆ... ಅದ್ಹೇನ್ ಹಂಗ್ ಬಡಬಡಿಸ್ತಾ ಇದೀರಿ ? ಸರಿಯಾಗೂ ಕೇಳಿಸ್ವಲ್ದು , ಹೊತ್ತಾತು ನಾನ್ ಮನಿಗೋಗ್ತೀನಿ . ನೀವ್ ಬರ್‍ತೀರೋ ಇಲ್ಲ ಒಬ್ನೇ ಹೋಗ್ಲೋ ?’ ಎಂದ.
ಗೌಡನಿಗೆ ಗಾಬರಿಯಾಯಿತು. ‘ಹಾಂ !! ’ ಎಂದು ಮೇಲೆದ್ದು , ‘ ತಡಿಯಲೇ ಬಂದೇ... ಅದೂ... ನಿದ್ದೆ ಮಾಡ್ತಾ ಇದ್ದೆ , ಕನಸ್ ಬಿದ್ದಿತ್ತು. ಹಂಗಾಗಿ ಬಡಬಡಿಸ್ತಾ ಇದ್ನೇನೋ...’ ಎಂದು ಸ್ವಲ್ಪ ಗಾಬರಿಯಿಂದಲೇ ಬಾಗಿಲು ತೆರೆದ.
‘ಕನ್ಸಾ... ಇಷ್ಟೋತ್ನಾಗ ಗೌಡ್ರೆ, ಸರಿಯೋತ್ತು ’ಎಂದ.
‘ ಹೌದಲೆ, ಬಾಳ್ ನಿದ್ದೆ ಬಂದಿತ್ತು. ಅದ್ಕೇ ಕನಸ್ ಬದ್ ಬಿಟ್ಟೇತಿ. ’
‘ ಸರಿ ಬುಡಿ, ಹಗಲ್ಹೊತ್ನಾಗೆ ನಿಮ್ಮಂತೋರ್‍ಗಲ್ದೆ ನಮ್ಮಂತಾರ್‍ಗಾ ಕನಸ್ ಬೀಳತ್ತೆ ?’ ಎನ್ನುತ್ತಾ ಭರಮ್ಯಾ ಊರ ಕಡೆ ಹೊರಟ. ಅವನ ಮುಂದೆ ಗೌಡ ಹೆಜ್ಜೆ ಹಾಕಿದ.
***
ಭರಮ್ಯಾ ಮನೆಗೆ ಬರುವ ಹೊತ್ತಿಗಾಗಲೇ ಕತ್ತಲಾಗಿತ್ತು . ಬೆಳಗ್ಗೆ ತನ್ನ ಮೇಲೆ ಹಲ್ಲೆ ಮಾಡಿದ್ದ ಗಂಡನನ್ನು ನೆನಪಿಸಿಕೊಳ್ಳುತ್ತಾ ಕೆಲಸಕ್ಕೆ ಹೋಗದೆ, ಸುಧಾರಿಸಿಕೊಳ್ಳುತ್ತಾ ಕುಳಿತಿದ್ದ ಇಂದ್ರಿ ಅದರಲ್ಲೇ ತನ್ನ ಪತಿಯೇ ದೈವ ಎಂದುಕೊಂಡು ಅಚ್ಚುಕಟ್ಟಾಗಿ ಇದ್ದುದರಲ್ಲಿಯೇ ಅಡುಗೆ ಮಾಡಿ ಇಟ್ಟಿದ್ದಳು.
ಒಳ ಬಂದವನೇ ಭರಮ್ಯಾ ತುಸು ಹೊತ್ತು ದೀಪದ ಬೆಳಕಿನಲ್ಲೇ ಹೆಂಡತಿಯನ್ನು ದುರುಗುಟ್ಟಿಕೊಂಡು ನೋಡಿದ. ಅವಳೂ ಸ್ವಲ್ಪ ಹೊತ್ತು ಮಾತನಾಡಿಸಲಿಲ್ಲ . ಊಟದ ಹೊತ್ತಾಗುವವರೆಗೆ ಇಬ್ಬರೂ ಹಾಗೇ ಮೌನಾಚರಣೆ ಮಾಡಿದರು. ಭರಮ್ಯಾ ದಿನಕ್ಕೊಮ್ಮೆಯಾದರೂ ಸಾವಿತ್ರಿಬಾಯಿಯ ಹೆಂಡದಂಗಡಿಗೆ ಹೋಗಿ ಅವಳ ಮುಖ ನೋಡಿ, ತುಸು ಹಲ್ಲು ಗಿರಿದು, ಆಕೆಯಿಂದ ಬೈಸಿಕೊಂಡಾದರೂ ಸರಿ ಎರಡು -ಮೂರು ಸಾರಾಯಿ ಪ್ಯಾಕೆಟ್ ಕಚ್ಚಿ ಹೀರಿ, ಆನಂತರ ಊರನ್ನು ಒಂದು ಸುತ್ತು ಹಾಕದೆ ಮನೆ ಸೇರುವವನಲ್ಲ ! ಆದರೂ ಅಂದು ಎಲ್ಲೂ ಊರು ಹರಿಯಾಡಲು ಹೋಗಲಿಲ್ಲ.
ಇಂದ್ರಿಯೇ ಮನಸೋತು ಮಣೆ ಹಾಗೂ ಗಂಗಾಳ , ನೀರಿನ ಚಂಬು ಇಟ್ಟು , ಗಂಗಾಳದಲ್ಲಿ ಕೆಂಪಕ್ಕಿ ಅನ್ನ , ತಂಬ್ಳಿ ಸಾರು ಹಾಕಿ ‘ಉಣ್ರಿ ’ ಎಂದಳು.
ಹಸಿವಾಗಿದ್ದರೂ ‘ ನಿನ್ ಊಟ ಯಾವನಿಗ್ ಬೇಕು. ನೀನೆ ನೆಕ್ಕು ’ ಎಂದು ಮತ್ತೆ ಅವಳನ್ನೇ ಗುರಾಯಿಸುತ್ತಿದ್ದ .
‘ಇದಕ್ಕೇನ್ ಕಮ್ಮಿ ಇಲ್ಲ. ದುಡಿದಿದ್ ನೆಟ್ಗ್ ಮನಿಗೆ ತರೋದ್ ಗೊತ್ತಿಲ್ಲ . ಆದ್ರೂ ದೌಲತ್ತು. ಮೊದ್ಲು ತಿನ್ನು . ಮೈಯ್ಯೆಲ್ಲಾ ನೋಯ್ತದೆ. ಮಲಗ್ಬೇಕು ನಾನು ’ ಎಂದು ನವಿರಾಗಿಯೇ ಗದರಿಸಿದಳು ಇಂದ್ರಿ.
ಅಲ್ಲಿಗೆ ಭರಮ್ಯಾ ಸುಮ್ಮನೆ ಕುಳಿತಲ್ಲಿಯೇ ಗಂಗಾಳವನ್ನು ಎಳೆದುಕೊಂಡು ಊಟ ಮುಗಿಸಿದ. ಅವಳು ಊಟ ಮಾಡಿದಳು. ಸ್ವಲ್ಪ ಹೊತ್ತಿನ ನಂತರ ಇಂದ್ರಿ ಪಾತ್ರೆಗಳನ್ನೆಲ್ಲಾ ತೊಳೆದು ಒಳ ಬಂದಳು.
ಆ ನೆರಕೆ ಮನೆಯಲ್ಲಿ ಇದ್ದುದು ಎರಡೇ ರೂಮು. ಒಂದು ಅಡುಗೆ ಮನೆ ಮತ್ತೊಂದು ನಡುಮನೆ. ಉಳಿದಂತೆ ಸ್ನಾನ, ಪಾತ್ರೆ ತೊಳೆಯುವುದು, ಹೇಲುವುದು ಎಲ್ಲವೂ ಹೊರಗೆ .ಸ್ನಾನಕ್ಕಾಗಿ ತೆಂಗಿನ ಗರಿಯಲ್ಲಿ ಮನೆ ಕಡೆ ಬಾಗಿಲು ಬಿಟ್ಟು ಮೂರು ದಿಕ್ಕಿಗೂ ನೆರಕೆ ಹಾಗೆ ಕಟ್ಟಿದ್ದರು. ಅಲ್ಲಿ ಸ್ನಾನಕ್ಕೆ ಕುಳಿತರೆ ರಸ್ತೆಯಲ್ಲಿ ಹೋಗುವವರಿಗೆಲ್ಲಾ ಕಾಣಿಸುತ್ತಿತ್ತು. ಅಗಸಿಬಾಗಿಲಿನಲ್ಲಿ ಮನೆ ಇದ್ದಿದ್ದರಿಂದ ಆ ಕಡೆ ಕೆಲವರು ದಿಟ್ಟಿಸಿ ನೋಡುತ್ತಿದ್ದರು. ಅದಕ್ಕಾಗಿಯೇ ಇಂದ್ರಿ ಸ್ನಾನಕ್ಕೆ ಹೋದಾಗ ಆ ತೆಂಗಿನ ಗರಿಗಳ ಸುತ್ತಲೂ ಹಳೆ ಸೀರೆ ಕಟ್ಟಿ, ಸ್ನಾನ ಮಾಡುತ್ತಿದ್ದಳು .
ಪಾತ್ರೆ ತೊಳೆದ ಮುಗಿಸಿದ ನಂತರ ಇಂದ್ರಿ ನಡುಮನೆಯಲ್ಲಿ ಹುಲ್ಲಿನ ಚಾಪೆ ಹಾಗೂ ಒಂದು ಕೌದಿ ಹಾಸಿದಳು. ಮತ್ತೊಂದು ಕೌದಿಯನ್ನು ಹೊದ್ದುಕೊಂಡು ಮಲಗಿದಳು .
ಭರಮ್ಯಾ ಬೇರೆ ಕಡೆ ಮಲಗುವ ಹಾಗೆಯೇ ಇರಲಿಲ್ಲ. ಎಲ್ಲೇ ಹೋದರೂ ರಾತ್ರಿ ಎಷ್ಟೇ ಹೊತ್ತಾದರೂ ಸರಿ ಮನೆಗೆ ಬಂದು ಹೆಂಡತಿಯ ಪಕ್ಕದಲ್ಲಿಯೇ ಮಲಗುವ ಹವ್ಯಾಸ ಅವನಿಗೆ. ಮೊದಲು ಅವನ ಅವ್ವನ ಪಕ್ಕ ಮಲಗುತ್ತಿದ್ದ. ಮದುವೆಯಾದ ನಂತರ ಆ ಜಾಗಕ್ಕೆ ಇಂದ್ರಿ ಬಂದಿದ್ದಳು. ಇಂದ್ರಿ ಹಾಗೂ ಭರಮ್ಯಾನನ್ನು ಒಳಗಡೆ ಮಲಗಿಸಿ ಚೌಡವ್ವ ಮನೆಯ ಹೊರಗಡೆ ಮಲಗುತ್ತಿದ್ದಳು. ಮುದುಕಿ ತನ್ನದೇನು ಆಯಸ್ಸು ಮುಗಿಯಿತು. ಮಗ ಹಾಗೂ ಸೊಸೆ ಸುಖವಾಗಿರಲಿ. ತನಗೊಂದು ಮುದ್ದು ಮಗುವನ್ನು ಕರುಣಿಸಲಿ ಎಂಬ ಆಸೆ ಅವಳಿಗಿತ್ತು.
ಎರಡು ವರ್ಷವಾದರೂ ತನ್ನ ಸೊಸೆಗೆ ಮಕ್ಕಳಾಗಲಿಲ್ಲ ಎಂಬ ಕೊರಗು ಚೌಡವ್ವನಿಗೆ ಇದ್ದೇ ಇತ್ತು. ಅದನ್ನು ಬೇರೆ ಯಾರ ಬಳಿಯೂ ಆಕೆ ತೋಡಿಕೊಳ್ಳುವ ಹಾಗಿರಲಿಲ್ಲ. ಯಾಕೆಂದರೆ ಇಂದ್ರಿ ಅನಾಥ ಹೆಣ್ಣು . ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಚಿಕ್ಕವ್ವನ ಮನೆಯಲ್ಲಿ ಬೆಳೆದವಳು. ಚಿಕ್ಕಂದಿನಲ್ಲೇ ಗಂಡನನ್ನು ಕಳೆದುಕೊಂಡು ವಿಧವೆಯಾದ ಅವಳ ಚಿಕ್ಕವ್ವ ಸೀತಮ್ಮ ಯಾವುದೇ ಕೊರತೆಯಿಲ್ಲದೆ ಇಂದ್ರಿಯನ್ನು ಸಾಕಿದಳು. ಆದರೆ ಅವಳ ಕೈಯಿಂದ ಇಂದ್ರಿಯನ್ನು ಓದಿಸಲಾಗಲಿಲ್ಲ. ಸುರದ್ರೂಪಿ ಹೆಣ್ಣು ತನ್ನ ಮನೆ ಸೊಸೆಯಾಗಿದ್ದಾಳೆ. ನಮ್ಮ ಜಾತೀಲಿ ಇಂತ ಹೆಣ್ಣು ಸಿಗೋದು ಕಷ್ಟ , ಮಕ್ಕಳಾಗದ್ದಕ್ಕೆ ತನ್ನ ಮಗನೂ ಕಾರಣವಿರಬಹುದು. ಸದಾ ಕುಡಿತಕ್ಕೆ ದಾಸನಾದ ಭರಮ್ಯಾ ಸರಿಯಾಗಿ ಹೆಂಡತಿಯ ಜತೆ ಸ್ಪಂದಿಸುತ್ತಾನೋ ಇಲ್ಲವೊ ಎಂಬ ಅಳುಕು ಚೌಡವ್ವನಿಗಿತ್ತು. ಆದರೆ ಅದ್ಯಾವುದನ್ನೂ ಹೇಳಿಕೊಳ್ಳುವಂತಿರಲಿಲ್ಲ. ದುರಾದೃಷ್ಟ ವಶಾತ್ ಮಗನ ಮದುವೆಯಾಗಿ ಎರಡೂವರೆ ವರ್ಷಕ್ಕೆ ಕಾಯಿಲೆ ಬಿದ್ದ ಚೌಡವ್ವ ಕೆಲವೇ ದಿನಗಳಲ್ಲಿ ಕೊನೆಯುಸಿರೆಳೆದಳು.
ಅಲ್ಲಿಂದ ಆ ಗುಡಿಸಲಿನಲ್ಲಿ ಭರಮ್ಯಾ ಹಾಗೂ ಇಂದ್ರಿ ಇಬ್ಬರೆ . ಏನೇ ಜಗಳಗಳಾದರೂ ತನ್ನ ಪತಿರಾಯ ಶ್ರೀರಾಮಚಂದ್ರನ ಅಪರಾವತಾರ .ತನ್ನನ್ನು ಬಿಟ್ಟು ದೂರ ಹೋಗಿ ಮಲಗಲಾರ. ಒಂದು ವೇಳೆ ಮಲಗಿದರೂ ನಡುರಾತ್ರಿ ತನ್ನ ಹತ್ತಿರ ಬಂದೇ ಬರುತ್ತಾನೆ ಎಂಬ ವಿಶ್ವಾಸ ಇಂದ್ರಿಗೆ. ಆ ಕಾರಣಕ್ಕೇ ಅವಳು ಇದ್ದ ಒಂದೇ ಚಾಪೆಯ ಮೇಲೆ ಇಬ್ಬರಿಗೂ ಆಗುವಷ್ಟು ಕೌದಿ ಹಾಸಿ, ಮಲಗಿದ್ದಳು .
ಭರಮ್ಯಾ ಅನಿವಾರ್ಯವಾಗಿ ಅವಳ ಪಕ್ಕ ಬಂದು ಮಲಗಿದ. ಸ್ವಲ್ಪ ಹೊತ್ತು ಅವಳನ್ನು ಕ್ಯಾರೆ ಎನ್ನದೆ ಮಲಗಿಕೊಂಡನಾದರೂ ನಿದ್ರೆ ಬರಲಿಲ್ಲ. ಅತ್ತ ಇತ್ತ ಹೇಗೆ ಬೇಕೋ ಹಾಗೆ ಹೊರಳಾಡಿದ. ಊಂ... ನಿದ್ರೆ ಬರಲೇ ಇಲ್ಲ. ‘ ಏ ಬೆಳಗ್ಗೆ ನೋವಾಯ್ತೇನೇ ...?’ ಎಂದ ಮೆಲು ಧ್ವನಿಯಲ್ಲಿ.
ಇಂದ್ರಿಗೂ ನಿದ್ರೆ ಬಂದಿರಲಿಲ್ಲ ! ಒಮ್ಮೆ ಕರೆದ ಕೂಡಲೇ ನಿದ್ರೆ ಹತ್ತಿದ ಹಾಗೆ ಸುಮ್ಮನೇ ಇದ್ದಳು. ಮೈ ನೋವಾಗಿ ನಿದ್ರೆಗೆ ಜಾರಿದಳೆಂದು ಕೊಂಡ ಭರಮ್ಯಾ ಆಕೆಯ ಮೇಲೆ ಕೈ ಹಾಕಿ ತಬ್ಬಿಕೊಂಡು ಮಲಗಿದ. ತಬ್ಬಿಕೊಳ್ಳುತ್ತಿದ್ದಂತೆಯೇ ಇಂದ್ರಿ ‘ಅವ್ವಾ..’ ಎಂದು ನರಳಿದಳು. ಭರಮ್ಯಾನಿಗೆ ಸ್ವಲ್ಪ ನೋವಾಯಿತು. ಬೆಳಗ್ಗೆ ತಾನು ನಡೆದುಕೊಂಡ ರೀತಿಗೆ ತನ್ನನ್ನು ತಾನೆ ಮನಸ್ಸಿನಲ್ಲಿ ಶಪಿಸಿಕೊಂಡ.
ಅಷ್ಟರಲ್ಲಿ ಇಂದ್ರಿ ಗಂಡನ ಕಡೆ ತಿರುಗಿ ಮಲಗಿಕೊಂಡಳು. ಪ್ರತಿ ರಾತ್ರಿ ಕುಡಿದು ಬರುತ್ತಿದ್ದ ಗಂಡ ಇಂದು ತನಗೆ ನೋವಾಗಿದೆ ಎಂದುಕೊಂಡು ಹೆಂಡದಂಗಡಿ ಕಡೆ ಮುಖ ಮಾಡದಿರುವುದು ಒಳಗೊಳಗೆ ಹೆಮ್ಮೆ ಎನಿಸಿತು. ಜತೆಗೆ ಎಂದಿನಂತೆ ಹೆಂಡ ಕುಡಿದ ಗಂಡನ ಉಸಿರಿಗೂ ಇಂದಿನ ಬಿಸಿಯುಸಿರು ಏನೋ ಒಂದು ರೀತಿ ಹಿತ ನೀಡಿತು. ತನಗೇ ಅರಿವಿಲ್ಲದೆ ಅವನನ್ನು ತಬ್ಬಿಕೊಂಡಳು !!
‘ ಇಂದ್ರಿ, ಮೈ ತುಂಬಾ ನೋಯ್ತಿದೆಯೇನೆ ?’
‘ಹೂಂ..’
‘ಅಂಬ್ರೂತಾಂಜನ್ ಹಚ್ಲಾ..?’
‘ಬೇಡ ’
‘ಸ್ವಲ್ಪ ಹಚ್ಚಿದ್ರೆ ನೊಯೋದ್ ಕಡ್ಮೆ ಆಗ್ತದೆ. ವಸಿ ತಡಿ..’ ಎಂದು ಭರಮ್ಯಾ ಮೇಲೆದ್ದು ಚಿಮುಣಿ ದೀಪದ ಬೆಳಕಿನಲ್ಲಿಯೇ ಹಲಗೆ ಮೇಲಿದ್ದ ಅಂಬ್ರೂತಾಂಜನ್‌ನ ಬಾಟಲಿ ತೆಗೆದುಕೊಂಡು ಮಡದಿಯ ಬಳಿ ಬಂದ.
‘ಈಗ ಬ್ಯಾಡ ಸ್ವಲ್ಪ ತಡಿ, ಆಮ್ಯಾಗ್ ಹಚ್ಚೊಂತಿ ’ ಎಂದಳು ಇಂದ್ರಿ.
ಸತಿಯ ಮನದಾಳದ ಮಾತು ಭರಮ್ಯಾನಿಗೂ ಅರ್ಥವಾಯಿತು. ಇಂದ್ರಿಯ ಪಂಚೇಂದ್ರಿಗಳೂ ಭರಮ್ಯಾನನ್ನು ಬಯಸುತ್ತಿದ್ದವು.
ಮೆಲ್ಲಗೆ ಬಳಿ ಸಾರಿದ ಭರಮ್ಯಾ, ಅವಳ ಎದೆಯ ಮೇಲೆ ಕೈ ಹಾಕಿ ಸವರಿದ. ಇಂದ್ರಿ ಮೈ ನೋವನ್ನೂ ಮರೆತು ಬೇರೊಂದು ಲೋಕಕ್ಕೆ ನಿಧಾನವಾಗಿ ಕಾಲಿಡತೊಡಗಿದ್ದಳು. ಅಷ್ಟಕ್ಕೆ ಭರಮ್ಯಾ ಸುಮ್ಮನಿರಲಿಲ್ಲ. ನಿಧಾನವಾಗಿ ಮುದ್ದಿನಾಟ ಆರಂಭಿಸಿದ.
ಅದರ ನಡುವೆಯೇ ಭರಮ್ಯಾ ಸುಮ್ಮನಿರದೆ ‘ ನಿನ್ನೆ ನಾನ್ ಹೇಳಿದಂಗೆ ಗೌಡ್ರ ಕೆಲ್ಸಕ್ಕೆ ಹೋಗಿದ್ರೆ ನಾನ್ ಯಾಕ್ ಹೊಡಿತಿದ್ದೆ ? ಸುಖಾಸುಮ್ನೆ ನೀನೇ ಕಿತಿಬಿ ತಗ್ದು ಹೊಡ್ಸೆಂಗೆಂಡಿ ’ ಎಂದ ಮೆಲು ಧ್ವನಿಯಲ್ಲಿ .
‘ ನೀನು ಪೆದ್ದ ಅಂದ್ರೆ ಪೆದ್ದ .ನಾನು ನೀನು ಇಬ್ರೂ ಗೌಡನ್ ಮುಕ್ಳಿ ತೊಳಿಯೋಕ್ ಹೋದ್ರೆ ಅನ್ನ ಎಲ್ಲಿಂದ ಬರ್‍ತದೆ ? ಅಲ್ಲಿ ಇಲ್ಲಿ ಕೊಯ್ದ ಗದ್ದಿ ಹುಡ್ಕಿ ಭತ್ತ ಬಳ್ದಿದ್ರಿಂದ ಹೊಟ್ಟಿಗ್ ಒಂದಿಸ್ಟ್ ಭತ್ತನಾದ್ರೂ ಸಿಕ್ಕಾವು. ನಿನ್ ಜೊತಿಗೆ ಬಂದ್ರೆ ನನ್ ಕೂಲಿ ದುಡ್ಡೂ ನಿಂಗೆ ಹೆಂಡ ಕುಡಿಯೋಕ್ ಆಗ್ತದೆ. ಸುಮ್ನೆ ಇರು. ಮತ್ ಅದನ್ನೇ ಕೆದರ್‍ಬ್ಯಾಡ .ನಿಂಗ್ ಎಸ್ಟ್ ಹೇಳಿದ್ರೂ ಅಷ್ಟೆ .ಕಲ್ ಮ್ಯಾಗ್ ಮಳಿ ಸುರ್‍ದಂಗೆ ’ ಎಂದಳು ತುಸು ಕೋಪದಿಂದಲೇ .
ಮತ್ತೆ ಅದೇ ಪುಟಗಳನ್ನು ತೆರೆದರೆ ತನಗೇ ನಷ್ಟ ಎಂದುಕೊಂಡ ಭರಮ್ಯಾ ‘ಬರೀ ಒಡ್ಡಿವರ್ಮಾದಲ್ಲೇ ಬಂದ್ ಬಿಟ್ಟೆ ನೀನು ’ ಎಂದು ಸಕ್ರಿಯನಾದ... ಸ್ವಲ್ಪ ಹೊತ್ತಿನಲ್ಲಿ ಇಬ್ಬರೂ ನಿದ್ರೆಗೆ ಜಾರಿದರು.
***
ಎಂದಿನಂತೆ ಕಟ್ಟಿಗೆ ಒಡೆದು ಒಳಗೆ ಬಂದ ಭರಮ್ಯಾ , ನೀನು ಇವತ್ತಾದ್ರೂ ಕೆಲ್ಸಕ್ಕೆ ಬಾ. ಗೌಡ್ರು ನಿನ್ ಹೆಂಡ್ತಿ ಕಡ್ಕೊಂಡ್ ಬಾ ಕೂಲಿಗೆ ಅಂದಿದಾರೆ. ಏನೂ ಬಿಗಿ ಕೆಲ್ಸ ಇಲ್ಲೆ , ಬದಿನ್ ಕೆಳಗೆ, ಮ್ಯಾಲೆ ಇರೋ ಹುಲ್ ಕೊಯ್ದು ಹಾಕಿದ್ರೆ ಸಾಕು. ಒಂದೇ ಆಳ್ ಸಾಕು. ಬೇರೆ ಯಾರ್‍ನೋ ಕರ್‍ಕೊಂಡ್ ಬರೋಕಿಂತ ನಿನ್ ಹೆಂಡ್ತಿಗೇ ಬರೋಕೇಳು ಅಂದಿದಾರೆ ಗೌಡ್ರು ’ ಎಂದ.
ಗೌಡ ಬರೀ ಒಂದೇ ಆಳಿಗೆ ಹೇಳಿದಾನೆ ಅಂದ್ರೆ ಅದಕ್ಕೆ ಕಾರಣವೇನು ಎಂದು ಇಂದ್ರಿಗೆ ಚೆನ್ನಾಗಿ ಗೊತ್ತಾಯಿತು. ರಾಜೇಗೌಡನ ತೋಟ, ಗದ್ದೆಯಲ್ಲಿ ಎಂದೇ ಆದರೂ ಒಬ್ಬಿಬ್ಬರು ಕೆಲಸ ಮಾಡುವ ಹಾಗಿರಲಿಲ್ಲ. ಏನಿದ್ದರೂ ಐದಾರು ಮಂದಿ ಕೈ ಹಿಡಿದರೆ ಮಾತ್ರ ಕೆಲಸ ಮುಗಿಯುತ್ತಿತ್ತು. ಗೌಡ ಒಬ್ಬಳನ್ನೇ ಬರೋಕೆ ಹೇಳಿದ್ದಾನೆ ಎಂದರೆ ಅದರಲ್ಲಿನ ಮರ್ಮವೇ ಬೇರೆ...
ಅದು ಇಂದ್ರಿಗೆ ಚೆನ್ನಾಗಿ ಅರ್ಥವಾಗಿತ್ತು.
ಇಂದ್ರಿ ಕುಳಿತು ಬೋರ್‌ವೆಲ್ ಮನೆ ಸುತ್ತ ಇದ್ದ ಹುಲ್ಲು ಕೊಯ್ಯುತ್ತಿದ್ದಳು. ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ ಇಂದ್ರಿಯ ಎದುರು ಹೋಗಿ ನಿಂತ ರಾಜೇಗೌಡ, ‘ಇನ್ನೊಂದ್ ಸ್ವಲ್ಪ ಹತ್ತಿಗೆ ಹೊಯ್ಯಿ’ ಎಂದ.
ಗೌಡನ ಕಣ್ಣುಗಳು ಜಾರಿದ್ದ ಇಂದ್ರಿಯ ಸೆರಗಿ ಕಡೆಗೆ ದಿಟ್ಟಿಸುತ್ತಿದ್ದವು. ಗೌಡನ ಮಾತು ಕೇಳಿದ ಇಂದ್ರಿ ಕೂಡಲೇ ಆ ಕಡೆ ನೋಡಿದಳು. ಅವನ ಕಣ್ಣುಗಳು ಏನೋ ಹುಡುಕುತ್ತಿದ್ದವು. ಅದನ್ನು ಗಮನಿಸಿ, ಸೆರಗು ಸರಿ ಮಾಡಿಕೊಂಡು ಕೆಲಸ ಮುಂದುವರಿಸಿದಳು.
ಬೋರ್‌ವೆಲ್ ಮನೆಯೊಳಗೆ ಹೋಗುವ ರೀತಿ ನಟಿಸಿ ಹಿಂದೆ ಬಂದ ಗೌಡ, ಕ್ಷಣಾರ್ಧದಲ್ಲಿ ಇಂದ್ರಿಯನ್ನು ತಬ್ಬಿಕೊಂಡು ‘ ಇಂದ್ರಿ ನಿನ್ ನೋಡಿದಾಗೆಲ್ಲ ನಂಗೆ ಹುಚ್ ಹಿಡೀತೇತೆ ’ಎನ್ನುವಷ್ಟರಲ್ಲಿ ಮೇಲೆದ್ದು ಕೊಸರಿಕೊಂಡು ದೂರ ಹೋಗಿ ನಿಂತು ‘ ಗೌಡ್ರೆ ಏನ್ ಮಾಡ್ತಿದ್ದೀರಿ ? ನನ್ ಗಂಡಂಗೇನಾದ್ರೂ ಗೊತ್ತಾದ್ರೆ ನಿಮ್ಮನ್ ಸಿಗ್ದ್ ಹಾಕ್ತಾನೆ. ನನ್ ಹತ್ರ ಇವೆಲ್ಲಾ ಇಟ್ಕೋ ಬ್ಯಾಡ್ರಿ ’ ಎಂದಳು.
ಇಂದ್ರಿ, ಭರಮ್ಯಾ ತೋಟದಾಗ್ ಐದಾನ . ಇಲ್ಲಿ ಏನ್ ಮಾಡಿದ್ರೂ ಕಾಣಂಗಿಲ್ಲ. ನಿನ್ ನನ್ ಜತಿ ಇದ್ರ ರಾಣಿ ಹಂಗ್ ನೋಡ್ಕೋತೀನಿ. ನೀನ್ ಕೆಲ್ಸ ಮಾಡ್ದಿದ್ರೂ ಕೂಲಿ ಕೊಡ್ತೀನಿ. ಕೇಳಿದಾಗೆಲ್ಲ ದುಡ್ ಕೊಡ್ತೀನಿ ’ ಎಂದು ಹತ್ತಿರ ಹೋದ ಗೌಡ.
‘ಥ್ಹೂ... ನಿನ್ ಮನಿ ಹಾಳಾಗ, ನಿಂಗ್ ಬರಬಾರ್‍ದು ಬರಾ , ನಾಗ್ರಾವ್ ಕಡ್ದು ನೆಗದ್ ಬಿದ್ ಹೋಗಾ , ನಿಂಗ್ಯಾರೂ ಅಕ್ಕ ತಂಗೀರ್ ಇಲ್ವಾ ? ಅವ್ರಿಗ್ಯಾವನಾದ್ರೂ ಇಂಗೇ ಹಿಡ್ಕೋಂಡ್ರೆ ನೀನ್ ಸುಮ್ನಿರ್‍ತೀಯಾ ಬಾಡ್ಕೊ ? ಮರ್‍ವಾದೆಯಿಂದ ಇಲ್ಲಿಂದ ಹೋಗು . ಇಲ್ಲಂದ್ರೆ ನಾನ್ ಏನ್ ಮಾಡೋಕು ಹೇಸೋಳಲ್ಲ ’ ಎಂದು ಕೈಯ್ಯಲ್ಲಿದ್ದ ಕುಡುಗೋಲು ಎತ್ತಿ ತೋರಿಸಿದಳು .
ಯಾಕೋ ಗ್ರಹಚಾರ ಕೆಟ್ಟು ಹೋಯ್ತು ಎಂದು ಗೌಡ ಹಿಂದಕ್ಕೆ ಹೋದ .
ರೊಟ್ಟಿ ಬಡಿಯುತ್ತಲೇ ಇದ್ದ ಇಂದ್ರಿ ಅಲ್ಲಿ ಹಿಟ್ಟು ಸರಿ ಇದೆಯೋ ಇಲ್ವೋ ಎನ್ನುವುದನ್ನೂ ನೋಡದೆ ಬಡಿಯುತ್ತಲೇ ಇದ್ದಳು.
ಮಾತನಾಡುತ್ತಲೇ ಬಂದ ಭರಮ್ಯಾ ತನ್ನ ಹೆಂಡತಿ ರೊಟ್ಟಿ ಬಡಿಯುತ್ತಿದ್ದುದನ್ನು ಕಂಡು ‘ ಏ.. ನಿನ್ನವ್ನು. ಕಳ್ಮುಂಡೆ, ಅಲ್ಲೇನ್ ಐತಿ ಅಂತ ಸುಡ್ತಾನೇ ಇದಿಯೇ ರೊಟ್ಟೀನ ?’ ಎಂದು ಕಾಲಿನಿಂದ ನಿಧಾನವಾಗಿ ದೂಡಿದ. ತಕ್ಷಣ ಇಂದ್ರಿಗೆ ಎಚ್ಚರವಾಯಿತು.
‘ಆ.. ಏನಿಲ್ಲ , ಏನೋ ಯೋಚ್ನೇ ಮಾಡ್ತಾ ಇದ್ದೆ ’ ಎಂದು ಮತ್ತೆ ಕಲಸಿದ್ದ ಹಿಟ್ಟು ಹಾಕಿಕೊಂಡು ರೊಟ್ಟಿ ತಟ್ಟತೊಡಗಿದಳು .
ಗೌಡನ ಕೆಲಸಕ್ಕೆ ಹೋಗುವುದೇ ಇಂದ್ರಿಗೆ ದೊಡ್ಡ ತಲೆ ನೋವಾಗಿತ್ತು. ಹೋಗಲಿಲ್ಲ ಎಂದರೆ ಗಂಡನ ಬೈಗುಳ, ಹೊಡೆತಗಳು ಇದ್ದದ್ದೆ . ಹೋದರೆ ಅಲ್ಲಿ ಬಸವನಗೌಡನ ಲೈಂಗಿಕ ಹಿಂಸೆ . ಜತೆಗೆ ಮನೆಯ ಖರ್ಚಿಗೆ ಹಣ ಬೇಕು. ಯಾವುದನ್ನು ಸಹಿಸುವುದು? ಯಾವುದನ್ನು ಬಿಡುವುದು ? ಎನ್ನುವುದೆ ಚಿಂತೆಯಾಯಿತು . ಇದನ್ನು ಯಾರಿಗೂ ಹೇಳುವಂತಿಲ್ಲ, ಬಿಡುವಂತಿಲ್ಲ .
ಗೌಡ ತನ್ನ ಮೇಲೆ ಕಣ್ಣು ಹಾಕಿದ್ದಾನೆ ಎಂದು ಯಾರಿಗಾದರೂ ಹೇಳಿದರೆ ದಾಸನಪುರದ ಸೋಮ್ಲಿಬಾಯಿ, ನೀಲಿ ಬಾಯಿ, ರಾಮೀಬಾಯಿಯಂಥವರ ಸರದಿಗೆ ತನ್ನನ್ನೂ ಎಲ್ಲಿ ಸೇರಿಸಿಬಿಡುವರೋ ಎಂಬ ಭಯ ಇಂದ್ರಿಗೆ ಶುರುವಾಗಿತ್ತು. ರಾಜೇಗೌಡ ಚೆಲುವಾಗಿ ಕಾಣುವ ಯಾವ ಹೆಂಗಸರನ್ನೂ ಬಿಟ್ಟವನಲ್ಲ. ಮನೆಯಲ್ಲಿ ಮುದ್ದಾದ ಹೆಂಡತಿ, ತೊದಲು ಮಾತನಾಡುವ ಪುಟ್ಟ ಮಗಳು ಇದ್ದರೂ ಚಪಲ ಬಿಟ್ಟವನಲ್ಲ. ಹೆಸರಿಗೆ ತಕ್ಕ ಹಾಗೆ ರಾಜೇಗೌಡ, ಚೆಂದ ಕಾಣುವ ಚೆಲುವೆಯರ ಜತೆ ರಾಜಾ ರಾಣಿ ಆಟ ಆಡಿದ ಚಪಲ ಚನ್ನಿಗರಾಯ.
ಗೌಡನ ಮನೆ ಹಾಗೂ ತೋಟದಲ್ಲಿ ಭರಮ್ಯಾ ನಿಷ್ಠೆಯಿಂದ ಕೆಲಸ ಮಾಡುವುದು ಕೆಲವರಿಗೆ ಹೊಟ್ಟೆಕಿಚ್ಚು ಬಂದಿದೆ ಎಂಬುದು ಇಂದ್ರಿಗೆ ಗೊತ್ತಿತ್ತು. ಕೂಲಿ ಇಲ್ಲದ ಸಮಯದಲ್ಲೂ ಭರಮ್ಯಾನಿಗೆ ಗೌಡನ ತೋಟದಲ್ಲಿ ಕೆಲಸ ಸಿಗುತ್ತಿತ್ತು . ದಿನಕ್ಕೆ ೩೦ ರೂ. ಕೂಲಿ. ಊರಿನ ಕೆಲವರು ಅವನು ರಾಜೇಗೌಡನ ತೋಟದಲ್ಲಿ ಕೆಲಸ ಮಾಡುವುದನ್ನು ಬಿಡಿಸಿ, ತಾವು ತೂರಿಕೊಳ್ಳಲು ಏನೆಲ್ಲಾ ಹರಸಾಹಸ ಮಾಡಿದ್ದರು . ಗೌಡನಿಗೆ ಚಾಡಿ ಹೇಳಿದ್ದರು. ಆದರೂ ಮನೆ ಮಾದಿಗ್ಯಾ ಎನ್ನುವ ಕಾರಣಕ್ಕೆ ಹಾಗೂ ಬೊಜ್ಜು ಮೈ ಹೆಂಗಸರ ರುಚಿ ನೋಡಿದ್ದ ಗೌಡನಿಗೆ ಕಡಕ್ಕಾದ ಇಂದ್ರಿಯ ಮೇಲಿನ ಮೋಹದಿಂದ ಭರಮ್ಯಾನನ್ನು ಕೆಲಸದಿಂದ ಬಿಡಿಸಿರಲಿಲ್ಲ.
ಇದೆಲ್ಲವನ್ನೂ ಮೆಲುಕು ಹಾಕಿದ ಇಂದ್ರಿ ಗಟ್ಟಿ ಮನಸ್ಸು ಮಾಡಿ ರೊಟ್ಟಿ ಕಟ್ಟಿಕೊಂಡು ಕೆಲಸಕ್ಕೆ ಹೊರಟು ನಿಂತಳು.
ಭರಮ್ಯಾ ಹೆಂಟೆಗಳನ್ನು ಒಡೆಯುತ್ತಿದ್ದ. ಇನ್ನೊಂದು ಮೂಲೆಯಲ್ಲಿ ಇಂದ್ರಿ ಕುಡುಗೋಲು ಹಿಡಿದು ಹುಲ್ಲು ಕೊಯ್ಯುತ್ತಿದ್ದಳು. ರಾಜೇಗೌಡ ಇಡೀ ಗದ್ದೆಯನ್ನು ಒಂದು ಸುತ್ತು ಹಾಕಿ ಇಂದ್ರಿಯ ಬಳಿ ಬಂದ. ಅವನು ಬರುವುದನ್ನು ಕಂಡೂ ನೋಡದಂತೆ ಸೆರಗು ಸರಿ ಮಾಡಿಕೊಂಡು ಹುಲ್ಲು ಕೊಯ್ಯತೊಡಗಿದಳು.
ಏನೋ ತೋರಿಸಿ ಹೇಳಿದಂತೆ ನಟಿಸುತ್ತಾ ರಾಜೇಗೌಡ, ‘ನೋಡು ಇಂದ್ರಿ , ನನ್ ಕೆಲ್ಸಕ್ ಬರ್‍ಲಿಲ್ಲಾಂದ್ರೆ ನಿನ್ ಗಂಡಂಗೇ ಹೇಳಿ ನಿನ್ನ ಮೂಳಿ ಮುರಸ್ತೇನಿ. ಸುಮ್ನೆ ನಾನ್ ಹೇಳಿದಂಗೆ ಕೇಳು. ಜೀವನ್ದಾಗ ಚೆನ್ನಾಗಿರ್‍ತೀಯ . ತಿನ್ನಾಕ್ ಅನ್ನಾನಾದ್ರೂ ಸಿಗ್ತದೆ. ಇಲ್ಲಾಂದ್ರೆ ನಿನ್ನೀದ್ ಬೇಕಾಗುತ್ತೆ , ಇನ್ಮುಂದೆ ಬ್ಯಾಡಾಗುತ್ತೆ...’ ಎಂದ.
ಇಂದ್ರಿಗೆ ಸಿಟ್ಟು ನೆತ್ತಿಗೇರಿತ್ತು . ಆದರೂ ‘ನೋಡ್ರಿ ರಾಜೇಗೌಡ್ರೆ , ಸುಮ್ನೆ ನನ್ ಪಾಡಿಗೆ ನನ್ ಬಿಟ್ ಬಿಡಿ. ಇಂಗೇ ನಂಗೆ ಕಾಟಾ ಕೊಡ್ತಾ ಇದ್ರೆ ನಿಮ್ ಹೆಂಡ್ತಿ ಒಂದಲ್ಲಾ ಒಂದ್ ದಿನ ನನ್ ಕೈಲಿಂದಾನೇ ಮುಂಡೆ ಆಗೋದು ನೋಡ್ತಿರಿ..!’ ಎಂದು ಗಡುಸಾಗಿಯೇ ಹೇಳಿದಳು.
ಆಕೆಯ ಧ್ವನಿಯಲ್ಲಿದ್ದ ಗತ್ತು, ಗಾಂಭೀರ್ಯಗಳು ಗೌಡನ ಎದೆ ನಡುಗಿಸಿದವು . ಆದರೂ ಹುಟ್ಟು ಗುಣ ಸುಟ್ಟರೆ ಹೋಗುತ್ತದೆಯೇ ? ‘ಏನೆ , ನಂಗೇ... ಜಬರ್‍ದಸ್ತ್ ಮಾಡ್ತೀಯಾ? ನಿನ್ನಂಗೇ ಆಡ್ತಿದ್ದ ನೀಲಿಬಾಯಿ ಒಂದಿನ ಅವಳಾಗೇ ಬಂದು ಬೋರ್ ಮನ್ಯಾಗ್ ಬಿಚ್ಕೊಂದ್ ನಿಂತಿದ್ಲು . ದುಡ್ಡಿದ್ರೆ ಅದೇನೋ... ಹೆಗಲ್ ಮ್ಯಾಗಂತೆ. ಅದೆಷ್ಟು ದಿನ ಹಿಂಗೇ ಆಡ್ತಿಯೋ ನಾನೂ ನೋಡಿಬಿಡ್ತೀನಿ. ಆದ್ರೆ ಎಷ್ಟ್ ದಿನಾನಾದ್ರೂ ಸರಿ ನಿನ್ ಬಿಡೊಲ್ಲ. ಒಂದಲ್ಲಾ ಒಂದ್ ದಿನ ಕೈ ಹಾಕೇ ಹಾಕ್ತೇನಿ...’ ಎನ್ನುತ್ತಿದ್ದಂತೆ
‘ಹೋಗಲೇ ಬದ್ಮಾಸ್. ನಿನ್ನಂತ ಕಚ್ಚೆ ಹರ್‍ಕರ್‍ನ ಬಾಳ ನೋಡಿದೀನಿ . ಯಾವಾಳ್ ಜತಿಗಾದ್ರು ಮಲ್ಗೇಳು, ನಂಗೇನಾಗ್ಬೇಕು. ಆ ಹಾದರ್‍ಗಿತ್ತೇರ್ ತರಾ ನಾನೂ ಅಂದ್ಕೊಂಡಿದೀಯಾ ? ನನ್ ಜತಿ ಆಟ ಆಡಾಕ್ ಬಂದ್ರೆ ತೊಲ್ಡ್ ಹರ್‍ದು ಕಯ್ಯಾಗ್ ಕೊಡ್ತೇನಿ ಬ್ಯಾಬರ್ಸಿ ’ ಎಂದು ಕುಡುಗೋಲು ಹಿಡಿದು ಎದ್ದು ನಿಂತಳು.
ಕೂಡಲೇ ಎಡವಿದ ರೀತಿ ನಾಟಕವಾಡುತ್ತಾ ಗೌಡ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ.
***
ಲಂಬಾಣಿ ಕೇರಿಯ ಮಧ್ಯೆ ಭಾಗದಲ್ಲಿದ್ದ ಕೈ ಪಂಪ್‌ನಲ್ಲಿ ನೀರು ಜಗ್ಗಲು ನೀಲಿಬಾಯಿ ಬಂದಿದ್ದಳು. ಬೇರೊಂದು ಹುಡುಗಿ ನೀರು ಜಗ್ಗುತ್ತಿದ್ದರಿಂದ ಅವಳು ಅಲ್ಲಿಯೇ ಕೊಡ ಇಟ್ಟು , ಎದುರುಗಡೆ ಇರುವ ಸೋಮ್ಲಿಬಾಯಿ ಮನೆ ಕಡೆ ಹೆಜ್ಜೆ ಹಾಕಿದಳು.
‘ ಏ ಸೋಮ್ಲಿ , ಏನ್ ಮಾಡ್ತಿದಿಯೇ ?’ ಎನ್ನುತ್ತಾ ಒಳಗಡೆ ಬಂದಳು.
ಮನೆ ಹಿಂದುಗಡೆ ಒಳಕಲ್ಲು ಹೂತು, ಮಾರುದ್ದ ಜಾಗದಲ್ಲಿ ಸಗಣಿಯಿಂದ ನೆಲ ಬಳಿದು, ಭತ್ತ ಕುಟ್ಟುತ್ತಿದ್ದ ಸೋಮ್ಲಿಗೆ ಇವಳ ಕೂಗು ಕೇಳಿಸಲಿಲ್ಲ. ಎತ್ತೆತ್ತಿ ಕುಟ್ಟುತ್ತಿದ್ದ ಒನಕೆಯ ಶಬ್ದವೇ ಹೆಚ್ಚಾಗಿತ್ತು. ಮನೆಯನ್ನೆಲ್ಲಾ ತಡಕಾಡಿ ಹಿತ್ತಲ ಬಾಗಿಲಿಗೆ ಬಂದು ನೋಡಿದ ನೀಲಿ, ‘ಏನೇ ಗಯ್ಯಾಳಿ, ಇಷ್ಟೊತ್ತಲ್ಲಿ ಕುಟ್ಟಾಕ್ ಹಚ್ಗೆಂಡೀಯ ?’ ಎಂದಳು.
‘ಬಾರೆ ,ನೀನ್ ಸ್ವಲ್ಪ ಕೈ ಹಾಕು. ನಿನ್ನೆ ರಾತ್ರಿನೇ ರಾಗಿ ಹಿಟ್ ಖಾಲಿ ಆಗೋತು, ಹಿಟ್ ಹಾಕ್ಸಾನ ಅಂದ್ರ ರಾಗಿ ಇಲ್ಲ. ರಾಜೇಗೌಡ್ರ ಗದ್ದಿಂದ ಭತ್ತ ತಂದೋವ್ ಇದ್ವಲ್ಲ. ಅದ್ಕೆ ಒಂದಿಷ್ಟ್ ಕುಟ್ಟಾನ ಅಂತ ಕುಂತೀನಿ.’
‘ಅಲ್ಲೇ , ನೀನು ಬಾರೀ ಗಟ್ಟೂಳಾಕಿ ಐದಿ ಬಿಡು. ಅಲ್ಲಿ ನಿನ್ನೆ ಗೌಡನ್ ಕೈಯ್ಯಾಗ್ ಕುಟ್ಟಿಸ್ಗೆಂಡ್ ಅಸ್ಟೊಂದ್ ಸುಸ್ತಾಗಿದ್ರೂ ಇವತ್ ಇಲ್ಲಿ ಕುಟ್ಟಾಕ್ ನಿಂತಿದೀಯಲ್ಲ ?’ ಎಂದು ಮಾರ್ಮಿಕವಾಗಿ ಸೋಮ್ಲಿಯ ತಾಕತ್ತನ್ನು ಪ್ರಶಂಸಿಸಿದಳು.
ಒಳಗೊಳಗೆ ಸೋಮ್ಲಿಗೆ ಖುಷಿಯಾಯಿತು. ಆದರೂ ‘ ಹೌದು , ಸಂಜೆ ತಡ ಆಗಿ ಬಂದೆಲ್ಲಾ ಹೆಂಗಿತ್ತು ನಿಂದು ಗೌಡ್ರದು ಕುಸ್ತಿ ?’
‘ಏ , ಬಾಳ್ ಚಟ್ಗಾರ ಅದಾನೇ ಆ ಗೌಡ. ಕತ್ಲಾತು ಅಂದ್ರೂ ಬಿಡಾವಲ್ಲ ’ ಎಂದು ಒನಕೆಗೆ ನಾನೂ ಕೈ ಹಾಕಿ ‘ ಅಲ್ಲೇ ಸೋಮ್ಲಿ , ಅವ್ನಿಗೆ ಅಷ್ಟೆಲ್ಲಾ ಮಜಾ ಕೊಟ್ರೂ ದುಡ್ ಕೊಡಾಕ್ ಹಿಂದ್‌ಮುಂದ್ ನೋಡ್ತಾನ . ಅವ್ನ ಚಾಳಿ ನೋಡಿದ್ರ ನಮ್ ಸಾವಾಸ ಸಾಕಾದಂಗ್ ಆಡ್ತಾನ . ನಂಗ್ಯಾಕೋ ಅನ್ಮಾನ. ಅವ್ನು ಆ ಮನಿ ಮಾದಗ್ಯಾ ಭರಮ್ಯಾನ್ ಹೆಂಡ್ತಿ ಇಂದ್ರಿ ಮ್ಯಾಗ್ ಕಣ್ ಹಾಕ್ದಂಗೈತಿ...’ ಎಂದಳು ನೀಲಿ.
‘ಚೊಲೊ ಕಥಿ ಆತ್ ನಿಂದು. ನಿಂಗೇನೆ ಆಗ್ಬೇಕು ? ಕೂಲಿ ಜತಿಗೆ ಕೈಗೊಂದಿಷ್ಟ್ ಸಿಕ್ರೆ ಸಾಕಾಗಲ್ಲ ? ಅವ್ರೇನಾರ ಮಾಡ್ಕಲ್ಲಿ . ಕೂಲಿ ಇಲ್ದೆ ಇರೋ ಹೊತ್ನ್ಯಾಗ ಅದೇನೋ ಅಂತಾರಲ್ಲ ಹಂಗ್ ಆತ್ ನಿಂದು. ಕಣ್ ಹಾಕ್ಯಾರ ಅಂತಾನೆ ಇಟ್ಕ. ಅವರ್‍ದೇನ್ ಮುರಿಬೇಕಾ ಇವುಳ್ದೇನ್ ಹರಿಬೇಕ ?’
‘ಅಲ್ಲೇ , ಸೋಮ್ಲಿ ಯಾರನ್ ನಂಬಿದ್ರೂ ಈ ರಾಜೇಗೌಡನ್ ನಂಬಂಗಿಲ್ಲ. ಮಾ.. ಕಚ್ಚರ್‍ಕ . ಕೂಲಿಗ್ ಬರೋ ಯಾವಳ್ನೂ ಬಿಡ್ಲಿಲ್ಲ ಅವ್ನು . ನಾವು ಮೊದ್ಲೆ ದಪ್ಪ ದಪ್ಪ ಇದೇವಿ. ಇಂದ್ರಿ ನೋಡೋಕ್ ಮಾದಿಗ್ರ ಜಾತ್ಯಾಗ್ ಹುಟ್ಟಿದ್ರೂ ಸುಂದ್ರಿ . ಅವ್ಳೇನಾದ್ರೂ ಹತ್ರ ಆದ್ಲು ಅಂತ ನಮ್ಮನ್ ದೂರ ಮಾಡಿದ್ರೆ ? ’ ನೀಲಿಯ ಮಾತಿನಲ್ಲಿ ಮುಂದೆಲಿ ತನ್ನ ಕೂಲಿ ಹಾಗೂ ಕಮಾಯಿಗಳೆರಡಕ್ಕೂ ಕುತ್ತು ಬರುತ್ತದೋ ಎಂಬ ಆತಂಕ ಇತ್ತು.
ಆದರೆ ಸೋಮ್ಲಿಗೆ ಅಂಥ ಭಯ ಇರಲಿಲ್ಲ. ಯಾಕೆಂದರೆ ರಾಜೇಗೌಡನಿಗೆ ಸೊಮ್ಲಿ ಅನಿವಾರ್ಯವಾಗಿದ್ದಳು. ಗೌಡನಿಗೆ ಹೊಸ ರುಚಿ ಬೇಕು ಅನ್ನಿಸಿದಾಗೆಲ್ಲಾ ಒಬ್ಬಳನ್ನು ಸೋಮ್ಲಿಯೇ ತೆರೆಮರೆಯಲ್ಲಿ ರೆಡಿ ಮಾಡುತ್ತಿದ್ದಳು. ಮೇಲಾಗಿ ಅದೇ ಕಾರಣಕ್ಕೆ ಇವಳನ್ನು ಗೌಡ ಚೆನ್ನಾಗಿ ನೋಡಿಕೊಂಡಿದ್ದ. ಹಾಗಾಗಿಯೇ ಆಕೆಗೆ ಅತೀ ನಿಷ್ಠ. ಅಪ್ಪಿ ತಪ್ಪಿಯು ಗೌಡ ಅನ್ನುತ್ತಿರಲಿಲ್ಲ. ಗೌಡ್ರೆ ಎನ್ನದೆ ಬಾಯಿ ಬಿಡುತ್ತಿರಲಿಲ್ಲ. ಅದೇ ನಂಬಿಕೆಯಲ್ಲಿ ‘ ಚಿಂತಿ ಮಾಡ್ಬ್ಯಾಡೆ, ಯಾವಳೇ ಬಂದ್ರೂ ನನ್ನಂತೂ ಅವ್ರು ಕೈ ಬಿಡೋದಿಲ್ಲ. ನೀನು ನನ್ ಗೆಳ್ತಿ, ನಿನ್ನನ್ ನಾನ್ ಬಿಟ್ಕೊಡ್ತೀನಾ? ’ ಎಂದಳು.
ಏನೇ ಅಂದರೂ ನೀಲಿಗೆ ಗೌಡನ ಮೇಲೆ ಅನುಮಾನ. ಎರಡನೇ ಕ್ಲಾಸ್‌ವರೆಗೂ ಒದಿದ್ದ ಅವಳು ಒಳಗೊಳಗೇ ಸೋಮ್ಲೀಗೂ ಗೊತ್ತಿಲ್ದೆ ಇಂಥಾ ಗಂಡಸರನ್ನ ಬಹಳ ನೋಡಿದ್ದಳು. ಚಾಲಾಕಿ ಹೆಣ್ಣು. ಆದರೂ ಸೋಮ್ಲಿಯನ್ನು ಕೈ ಬಿಡಲಾರ ಎಂಬ ನಂಬಿಕೆ ಇದ್ದುದರಿಂದ ಸುಮ್ಮನಾದಳು .
‘ಹೂಂ... ಹೊತ್ತಾತು. ಕೊಡ್ಪಾನ ಅಲ್ಲೇ ಇಟ್ ಬಂದೀನಿ. ಇಲ್ಲಾಂದ್ರೆ ನಮ್ಮತ್ತಿ ಬೊಗಳಾಕ್ ಚಾಲು ಮಾಡ್ತಾಳ. ಬರ್‍ತೀನಿ’ ಎಂದು ಹೊರಟು ನಿಂತಳು .
‘ಏ ನೀಲಿ ಇರೇ, ಚಾ ಕುಡ್ದು ಹೋಗಂತಿ...’ ಎಂದು ಒನಕೆ ಕೆಳಗಿಟ್ಟು ಹಿಂದೆಯೇ ಬಂದಳು ಸೋಮ್ಲಿ. ಸೋಮ್ಲಿ ಮನೆಯಲ್ಲಿ ಆಕೆ ಹಾಗೂ ಮಗಳು ಸೀತಾಬಾಯಿ, ಮಗ ರೇಣಕ್ಯಾನಾಯ್ಕ ಮೂವರು ಇದ್ದರು. ಮಕ್ಕಳಿಬ್ಬರೂ ಚಿಕ್ಕವರು. ಅದರಲ್ಲಿ ಮಗ ರೇಣಕ್ಯಾ ದೊಡ್ಡವನು. ಎಲ್ಲವೂ ಅವನಿಗೆ ತಿಳಿಯುತ್ತಿತ್ತು.
ಗಂಡುಬೀರಿಯ ರೀತಿ ಇದ್ದ ಸೋಮ್ಲಿಯ ವರ್ತನೆಗಳು ಗಂಡನಿಗೆ ಹೇಸಿಗೆ ತಂದಿದ್ದವು. ನೋಡಲು ಕಪ್ಪಗಿದ್ದ ಈಕೆ ದಡೂತಿ ಹೆಂಗಸು. ಅವಳ ದೊಡ್ಡದಾದ ಮಣ್ಣಿನ ಮೊಲೆಗಳೇ ಅವಳ ಅಂದವನ್ನು ಹೆಚ್ಚಿಸಿದ್ದವು . ಮದುವೆಯ ಮುಂಚಿನಿಂದಲೂ ಈಕೆ ಕಟ್ಟುಮಸ್ತಾದ ಹುಡುಗರನ್ನು ಬೆನ್ನುತ್ತಿಕೊಂಡು ಹೋದವಳು. ಮದುವೆಯಾದ ನಂತರ ಆ ವಿಚಾರ ಗಂಡ ಜಗಲ್ಯಾನಾಯ್ಕನಿಗೆ ತಿಳಿದಿತ್ತು. ಇದರಿಂದ ಒಳಗೊಳಗೇ ಕೊರಗುತ್ತಿದ್ದ. ಅದೇ ಕಾರಣವಿಟ್ಟುಕೊಂಡು ಹೆಂಡತಿಯನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸಿದಾಗ ಭಜಾರಿ ಸೋಮ್ಲಿ ಜಗಳ ತೆಗೆದು ಅವನ ಮೇಲೆ ಗಂಡ ಎಂಬುದನ್ನು ನೋಡದೆ ಹಲ್ಲೆ ಮಾಡತೊಡಗಿದಳು. ಅಲ್ಲಿಗೆ ಅವನು ಮೂಲೆಗುಂಪಾದ. ಗಯ್ಯಾಳಿ ಹೆಂಡತಿಯ ಜತೆಗಿನ ಸಂಗಕ್ಕಿಂತ ಕುರಿ ಮೇಯಿಸುವುದೇ ಲೇಸೆಂದು ಬೆಳಗ್ಗೆ ಎದ್ದ ಕೂಡಲೇ ಇದ್ದದ್ದು ತಿಂದು ಕುರಿ ಕಾಯಲು ಹೋಗುತ್ತಿದ್ದ .
ಸಣಕಲು ದೇಹದ ಜಗಲ್ಯಾನಾಯ್ಕ ನೋಡಲು ರೋಗಿಷ್ಠನ ರೀತಿ ಆಗಿದ್ದ . ಅವನಾದರೂ ಇವಳನ್ನು ನಿಯಂತ್ರಿಸಲು ಸಾಧ್ಯವೆ? ಆದ್ದರಿಂದ ಬೆಳಗ್ಗೆಯೇ ತನ್ನ ಕಾಯಕಕ್ಕೆ ಹೋಗಿದ್ದ.
ಮಗ ರೇಣಕ್ಯಾ ಹೊರಗೆಲ್ಲೋ ಹೋಗಿದ್ದ. ಇನ್ನು ಸೀತಾಬಾಯಿ ಏಳು ವರ್ಷದವಳು. ಮನೆ ಮುಂದೆ ಮಣ್ಣಾಟ ಆಡುತ್ತಾ ತನ್ನದೇ ಪ್ರಪಂಚದಲ್ಲಿ ತೇಲಾಡುತ್ತಿದ್ದಳು.
ಆದ್ದರಿಂದಲೇ ಈ ಇಬ್ಬರು ಮಧ್ಯವಯಸ್ಸಿನ ಹೆಂಗಸರು ರಾಜೇಗೌಡನ ಜತೆಗಿನ ಕಾಮ ಕ್ರೀಡೆಯ ಬಗ್ಗೆ ಅಷ್ಟು ನಿಭರ್ಯವಾಗಿ ಮಾತನಾಡುತ್ತಿದ್ದರು.
ಸೋಮ್ಲಿ ಚಾ ತುಂಬಿದ ಲೋಟ ತಂದು ‘ತಗೋ ಕುಡಿ’ ಎಂದಳು.
ಇಬ್ಬರು ಜತೆಗೂಡಿ ಚಾ ಹೀರಿದರು. ನೀಲಿ ಬರುತ್ತೇನೆಂದು ಅಲ್ಲಿಂದ ದಡದಡ ಹೊರಟಳು. ಬಿಸಿಲಿಗೆ ಕಾದು ತೆಳ್ಳಗಾಗಿದ್ದ ಕೊಡವನ್ನು ತೊಳೆದು ನೀರು ಜಗ್ಗಿಕೊಂಡು ನೀಲಿ ಮನೆಕಡೆ ಹಾದಿ ಹಿಡಿದಳು.
***
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಭತ್ತ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿರುವ ತಾಲೂಕು. ಬಹುತೇಕ ಜಮೀನುದಾರರು ಭತ್ತ ಬೆಳೆಯುತ್ತಿದ್ದರು . ಶಿಕಾರಿಪುರ ತಾಲೂಕಿನ ದಾಸನಪುರ ಕೂಡ ಅದರಿಂದ ಹೊರತಾಗಿರಲಿಲ್ಲ.
ಇದು ಅತ್ತ ಮಲೆನಾಡೂ ಅಲ್ಲ, ಇತ್ತ ಬಯಲುಸೀಮೆಯೂ ಅಲ್ಲ. ಅರೆ ಮಲೆನಾಡು ಪ್ರದೇಶ. ಆದರೆ ಕೆರೆ ಕಟ್ಟೆಗಳಿಗೆ ಬರವಿರಲಿಲ್ಲ. ಮಳೆಗಾಲದಲ್ಲಿ ಕೆರೆಗಳಲ್ಲಿ ತುಂಬಿಕೊಂಡ ನೀರಿನಿಂದಲೇ ಒಂದುವೇಳೆ ಮಳೆ ಹೋದರೂ ಬೆಳೆ ತೆಗೆಯುವ ಚಾತುರ್‍ಯ ಇಲ್ಲಿನ ರೈತರಿಗಿತ್ತು.
ಊರಿನ ಪೂರ್ವ ದಿಕ್ಕಿಗೆ ಹರಗಳ್ಳಿ ಕಟ್ಟೆ, ಪಶ್ಚಿಮಕ್ಕೆ ತಾವರೆಕರೆ ಇದ್ದವು. ಇವೇ ಈ ದಾಸನಪುರದ ಜನರಿಗೆ ಹೇಲಲು ಹೇಳಿ ಮಾಡಿಸಿದ ಜಾಗಗಳು. ಎರಡೂ ಕೆರೆಗಳಲ್ಲಿ ಬೆಂಡು, ಕವಳಿ ಗಿಡ, ಕಳ್ಳಿ ಗಿಡ, ಕಲ್ಲಿನ ಬಂಡೆಗಳಿದ್ದವು ಜತೆಗೆ ಕೆರೆಗಳ ಮೂರು ದಿಕ್ಕಿಗೆ ಭತ್ತದ ಗದ್ದೆಗಳಿದ್ದವು .
ತಾವರೆಕರೆ ಪಕ್ಕದ ಒಂದು ಗದ್ದೆಯಲ್ಲಿ ಭತ್ತ ಕೊಯ್ದಿದ್ದರಿಂದ ಇಂದ್ರಿ ಬೆಳಗ್ಗೆಯೇ ಎದ್ದು ಗಂಡನಿಗೆ ಅಡುಗೆ ಮಾಡಿಟ್ಟು ಹೇಳದೆ ಕೇಳದೆ ಒಂದು ಕೈ ಮರ, ಚಿಕ್ಕದೊಂದು ಬರ್ಲು, ಕುಂಚಿಗೆ ಹಿಡಿದು ಬರಬರನೆ ಕಾಲು ಹಾಕಿದಳು. ತಂಪು ಹೊತ್ತಿನಲ್ಲಿ ಕೆಲಸ ಸಾಗುತ್ತದೆ. ಜತೆಗೆ ಹೆಚ್ಚು ಭತ್ತ ಗುಡಿಸಿಕೊಳ್ಳಬಹುದು ಎಂಬುದು ಇಂದ್ರಿಯ ಚಿಂತನೆ .
ಭತ್ತ ಬಡಿದು, ಹುಲ್ಲೊಕ್ಕಲು ಮಾಡಿದ್ದ ಗದ್ದೆಯಲ್ಲಿ ಮೊದಲು ಕಣದ ಬಳಿ ಬಂದ ಇಂದ್ರಿ ಜೊಳ್ಳು ಭತ್ತವನ್ನು ತೂರಿ ಅದರಲ್ಲಿ ಸಿಕ್ಕ ಗಟ್ಟಿ ಭತ್ತವನ್ನು ಕುಂಚಿಗೆಯಲ್ಲಿ ತುಂಬಿಕೊಂಡಳು. ಅವಳ ಅದೃಷ್ಟಕ್ಕೆ ಎರಡ್ಮೂರು ಕೆ.ಜಿ. ಭತ್ತ ಸಿಕ್ಕವು. ಆನಂತರ ಗದ್ದೆಯಲ್ಲಿ ಭತ್ತ ಕೊಯ್ದು ಒಣಗಲು ಬಿಟ್ಟಿದ್ದ ಸಮಯದಲ್ಲಿ ಹಿಡಿಯಷ್ಟು ಅಲ್ಲಲ್ಲಿ ಉದುರಿದ್ದ ಭತ್ತದ ಕಾಳು ಹಾಗೂ ಶಿವುಡು ಕಟ್ಟುವಾಗ ಬೇರ್ಪಟ್ಟ ಬಿಡಿ ತೆನೆಗಳನ್ನು ಹುಡುಕುತ್ತ ಅವುಗಳನ್ನು ಗುಡಿಸಿ, ಆರಿಸಿಕೊಂಡು ಕುಂಚಿಗೆಯಲ್ಲಿ ತುಂಬಿಕೊಂಡಳು.
ಅವಳ ಭತ್ತದ ಹುಡುಕಾಟ ಮುಂದುವರಿದಿತ್ತು. ಗದ್ದೆಯ ಒಂದು ಮೂಲೆಯಿಂದ ‘ ಏ... ಯಾರದು... ಏನ್ ಮಾಡ್ತಾ ಇದೀರಾ...? ಎಂಬ ಜೋರಾದ ಕೂಗು ಕೇಳಿ ಬಂತು. ಅತ್ತ ಕಡೆ ಗಮನಹರಿಸದ ಇಂದ್ರಿ ತನ್ನ ಕಾಯಕದಲ್ಲಿ ಮಗ್ನಳಾಗಿದ್ದಳು. ಮತ್ತೆ ಅದೇ ಕೂಗು ಮತ್ತಷ್ಟು ಗಟ್ಟಿಯಾಗಿ ಬಂತು. ಆಗ ಗಾಬರಿಗೊಂಡ ಎದ್ದು ತಿರುಗಿ ನೋಡಿದಳು. ಅಷ್ಟೊತ್ತಿಗಾಗಲೇ ಆ ರೀತಿ ಕೂಗಿದ್ದ ವ್ಯಕ್ತಿ ಹತ್ತಿರ ಬರುತ್ತಿದ್ದ.
ಅತ್ತಿತ್ತ ನೋಡುವುದರೊಳಗೆ ಹತ್ತಿರ ಬಂದ ಜಮೀನಿನ ಒಡೆಯ ಲಿಂಗೇಗೌಡ , ‘ಏನವ್ವೋ ಇಲ್ಲೇನ್ ಮಾಡ್ತಾ ಇದೀಯ ?’ ಎಂದ.
ಇಂದ್ರಿ, ತುಸು ಗಾಬರಿ ಹಾಗೂ ದಯನೀಯವಾಗಿ ‘ ಇಲ್ಲಣ್ಣೋ ಭತ್ತ ಒಡ್ಕಂತಾ ಐದಿನಿ, ಹೊಟ್ಟೀಗ್ ಬೇಕಲ್ಲಣ್ಣ . ಒಂದ್ ತಾಸಣ್ಣ , ಆಮ್ಯಾಗೆ ಹೊಂಟೋಗ್ತೀನಿ...’ ಎಂದು ಬೇಡಿದಳು.
ಆಕೆಯ ವಿನಯ ಲಿಂಗೇಗೌಡನಿಗೆ ಇಷ್ಟವಾಯಿತು. ಆದರೂ ಅಲ್ಲವ್ವ ಒಕ್ಲಿಗೆ ಕರ್‍ದರೆ ಬರಲ್ಲ , ಈಗ ನೋಡಿದ್ರ ತೆನಿ ಆರ್‍ಸಾಕ, ಬತ್ತ ಹೊಡ್ಕಾಳಕ್ ಬರ್‍ತೀಯಾ..? ಎಂದ.
‘ಇಲ್ಲಣ್ಣೊ , ಒಕ್ಲಿಗ್ ಬರಾಣ ಅಂತಾನೆ ಇದ್ದ. ಆದ್ರ್ ನನ್ ಯಾರೂ ಕರಿಲೇ ಇಲ್ಲ ... ಇನೊಂದ್ ಸರ್‍ತಿ ಏನಾದ್ರೂ ಕೆಲ್ಸ ಇದ್ರ ಕರೀಯಣ್ಣ ಬರ್‍ತೀನಿ ’ಎಂದಳು ಇಂದ್ರಿ .
ಇಂದ್ರಿ ಒಳ್ಳೇ ಸ್ವಭಾವದ ಹೆಂಗಸು. ದಲಿತಳಾದರೂ ಯಾರ ಮನೆ ಬಾಗಿಲಿಗೂ ಹೋಗಿ ಸಾಲ ಕೇಳಿದವಳಲ್ಲ. ಉಟ್ಟು ಬಿಟ್ಟ ಬಟ್ಟೆ ಕೇಳಿ ಪಡೆದವಳಲ್ಲ. ಬಹಳ ಸ್ವಾಭಿಮಾನಿ ಹೆಣ್ಣು . ಯಾರ ಬಳಿಯೂ ಅಂಗಲಾಚದೆ , ಹಾಸಿಗೆ ಇದ್ದಷ್ಟು ಕಾಲು ಚಾಚುತ್ತಲೇ ಜೀವನ ನಡೆಸುತ್ತಿದ್ದವಳು. ಆ ಮೂಲಕವೇ ಬದುಕು ಕಂಡುಕೊಂಡವಳು. ಈ ವಿಚಾರ ಲಿಂಗೇ ಗೌಡನಿಗೂ ಗೊತ್ತಿತ್ತು. ಆದ್ದರಿಂದಲೇ ‘ಹೂಂ... ಆತವ್ವ ನೋಡ್ತೀನಿ, ಇಲ್ಲೇನಾದ್ರೂ ದನಕರ ಬಂದ್ರೆ ಒಡ್ಸು ...’ ಎಂದು ಹುಲ್ಲಿನ ಬಣವೆ ಕಡೆ ಕೈ ತೋರಿಸಿ ಅಲ್ಲಿಂದ ಹೊರಟು ಹೋದ .
ಇಂದ್ರಿಗೆ ಧೈರ್ಯ ಬಂದಂತಾಯಿತು. ನಿರ್ಭಯವಾಗಿ ಭತ್ತ ಗುಡಿಸಿಕೊಂಡು, ಸಿಕ್ಕಷ್ಟು ತೆನೆ ಆರಿಸಿಕೊಂಡು ಮನೆಗೆ ಬಂದಳು. ಅಂದೇ ಅವುಗಳನ್ನೆಲ್ಲ ಹಸನುಮಾಡಿ ಬಿಸಿಲಿಗೆ ಹಾಕಿದಳು.
ಇಂದ್ರಿಯ ಈ ಜೀವನದ ಪರಿ ನಿಜಕ್ಕೂ ವಿಶಿಷ್ಟವಾಗಿತ್ತು. ಚಳಿಗಾಲ ಭತ್ತದ ತೆನೆ ಕೊಯ್ಯುವ ಸಮಯ. ಆ ಸಮಯದಲ್ಲಿ ಕಷ್ಟಪಟ್ಟು ಭತ್ತದ ತೆನೆ ಆರಿಸಿ, ಗದ್ದೆಯಲ್ಲಿ ಸಿಕ್ಕ ಪುಡಿ ಭತ್ತದ ಕಾಳನ್ನು ಗುಡಿಸಿ , ಚೀಲ ತುಂಬಿಕೊಂಡರೆ ವರ್ಷ ಪೂರ್ತಿ ಅಲ್ಲದಿದ್ದರೂ ಕೂಲಿ ಕೆಲಸ ಇಲ್ಲದಿದ್ದಾಗ ಅವು ತಮ್ಮ ಉಸಿರಾಟಕ್ಕೆ ನಿರಾತಂಕವಾಗಿ ಸಹಾಯ ಮಾಡುತ್ತವೆ ಎಂಬ ಜಾಣ್ಮೆ ಅವಳದು.
ಬೇಸಿಗೆ ಬಂತೆಂದರೆ ಇಂದ್ರಿಯದು ಮಾತ್ರವಲ್ಲ, ಈ ಭಾಗದ ಹಳ್ಳಿಗಳ ದಲಿತ ಜನಾಂಗದ ಬಹುತೇಕ ಮಹಿಳೆಯರ ಬುದ್ಧಿವಂತಿಕೆ ಇದು. ಒಂದು ರೀತಿ ಅದು ಜೀವನಕ್ಕೆ ಸುಲಲಿತ ದಾರಿ ಕೂಡ ಆಗಿತ್ತು. ಇಂಥ ಹಲವು ವೈಶಿಷ್ಟ್ಯತೆಗಳಲ್ಲಿ ಇಂದ್ರಿ ಅತೀ ಬುದ್ಧಿವಂತೆ. ಆದರೂ ಗಂಡನ ಕುಡುಕತನ , ಗೌಡನ ಮೇಲೆ ಅವನಿಗಿರುವ ನಿಷ್ಠೆಯಿಂದ ಬದುಕಿನಲ್ಲಿ ಬಹಳಷ್ಟು ಕುಂದಿ ಹೋಗಿದ್ದಳು.
***
ಕಂಡ ಕಂಡ ದೇವರಿಗೆ ಕೈ ಮುಗಿದು, ದೀಡು ನಮಸ್ಕಾರ ಹಾಕುತಿದ್ದ ಇಂದ್ರಿಗೆ ಆ ಹೊತ್ತಿಗೆ ನೀರು ನಿಂತಿದ್ದವು ! ತಾನು ತಾಯಿ ಆಗುತ್ತಿದ್ದೇನೆ ಎಂಬ ಖುಷಿ ಆಕೆಗೆ. ಆದರೆ ಅದು ಅಷ್ಟು ಖಚಿತವಾಗಿ ಹೇಳಲಾಗದ ಸ್ಥಿತಿ ಕೂಡ ಅವಳಲ್ಲಿತ್ತು. ಈ ಹಿಂದೆ ಕೂಡ ಹಲವು ಬಾರಿ ಖಾಯಿಲೆ ಬಿದ್ದು ರಕ್ತದ ತೊಂದರೆಯಿಂದಾಗಿ ಋತುಸ್ರಾವ ಆಗಿರಲಿಲ್ಲ. ಆದರೆ ಈಗ ಇಂದ್ರಿ ಮೊದಲಿನಂತೆ ಸಣಕಲಾಗಿರಲಿಲ್ಲ. ಎಲ್ಲ ಚಿಂತೆಗಳನ್ನೂ ಬಿಟ್ಟು ಧೈರ್ಯದಿಂದ ಕಷ್ಟಗಳನ್ನು ಎದುರಿಸಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದಳು. ಆದ್ದರಿಂದಲೇ ಗಂಡನ ಪೆಟ್ಟುಗಳಿಗೂ ಜಗ್ಗದೆ ಸಂಸಾರ ಎಂಬ ಬಂಡಿಯನ್ನು ಎಳೆಯುತ್ತಿದ್ದಳು.
ಒಂದು ತಿಂಗಳು ಕಳೆಯುತ್ತಿದ್ದಂತೆಯೇ ದೇಹದಲ್ಲಿನ ಬದಲಾವಣೆ ಅವಳಿಗೆ ತಾನು ಅವ್ವನಾಗುತ್ತಿದ್ದೇನೆ ಎಂಬುದನ್ನು ಖಚಿತಪಡಿಸಿದ್ದವು. ಒಂದು ದಿನ ಕೂಲಿಯೇ ಇರಲಿಲ್ಲ. ಹೋದರೆ ಗೌಡನ ಕೆಲಸಕ್ಕೇ ಹೋಗಬೇಕಿತ್ತು. ಅದು ಅವಳಿಗೆ ಇಷ್ಟವಿರಲಿಲ್ಲ. ಮಟ ಮಟ ಮಧ್ಯಾಹ್ನ ಮನೆಯಲ್ಲಿಯೇ ಇದ್ದ ಇಂದ್ರಿ, ಒಡೆದ ಕನ್ನಡಿಯನ್ನು ಹಿಡಿದು ಹಿಂಬಾಗಿಲಿನ ತಂತಿಗೆ ಸಿಕ್ಕಿಸಿದಳು. ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡಳು. ಸೀರೆ ಮೇಲೆತ್ತಿ ತನ್ನ ಹೊಟ್ಟೆಯನ್ನು ಗಮನಿಸಿಕೊಂಡಳು. ಮಗು ಜೀವ ಪಡೆಯುತ್ತಿರುವುದು ನಿಖರವಾಗಿತ್ತು. ಅವಳ ಹರ್ಷಕ್ಕೆ ಪಾರವೇ ಇರಲಿಲ್ಲ. ಆಮೇಲೆ ಮತ್ತೆ ಮತ್ತೆ ಕನ್ನಡಿಯಲ್ಲಿ ಮುಖ ನೋಡಿಕೊಂಡಳು ಎಂದಿಗಿಂತ ಅಂದು ತನ್ನ ಮುಖ ಹೊಳಪು ಪಡೆದುಕೊಂಡಿತ್ತು. ಬಣ್ಣ ಬದಲಾದಂತಿತ್ತು. ಜತೆಗೆ ಮುಗುಳ್ನಗೆ ಬೇಡವೆಂದರೂ ಮತ್ತೆ ಕೆನ್ನೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆಕಾಶವೇ ಕೈಗೆ ಸಿಕ್ಕಂತಾಗಿತ್ತು. ಜೀವನದ ಕಷ್ಟ ನಷ್ಟಗಳೇನೆ ಇದ್ದರೂ ಹೆಣ್ಣು ತಾನು ತಾಯಿಯಾಗುತ್ತೇನೆ ಎಂಬ ವಿಷಯ ಖಚಿತವಾದಾಗ ಅದಕ್ಕೆ ಈ ಪ್ರಪಂಚದಲ್ಲಿ ಬೇರೆ ಯಾವುದಾದರೂ ಸಾಟಿ ಎನಿಸುತ್ತದೆಯೇ ? ಇಂದ್ರಿ ಕೂಡ ಅದೇ ರೀತಿಯ ಹರ್ಷೋಲ್ಲಾಸದಲ್ಲಿದ್ದಳು.
ಭರಮ್ಯಾ ಸಂಜೆ ಮನೆಗೆ ಬಂದ . ಬರುತ್ತಿದ್ದ ಹಾಗೆಯೇ ಅವನ ಮುಖ ಊದಿಕೊಂಡಿತ್ತು. ಆಗಲೇ ಹೊತ್ತಾಗಿತ್ತು. ಆತ ಹೊತ್ತಾಗಿ ಮನೆಗೆ ಬಂದ ಅಂದರೆ ಸಾವಿತ್ರಿಯ ಮುಖ ದರ್ಶನ ಮಾಡಿ ಬಂದಿದ್ದಾನೆ ಎಂದೇ ಅರ್ಥ. ಇವತ್ತೂ ಮತ್ತೆ ಇಂದ್ರಿ ತನ್ನ ಹಳೆ ಚಾಳಿ ಮುಂದುವರಿಸಿದಳು. ಗೌಡರ ಕೆಲಸಕ್ಕೆ ಬರದೆ ಮೈಗಳ್ಳತನ ಮಾಡಿದಳು ಎಂದುಕೊಂಡು ಭರಮ್ಯಾ, ಸಾವಿತ್ರಿಬಾಯಿಯ ಹೆಂಡದಂಗಡಿಗೆ ಹೋಗಿ ಮೂರು ಪ್ಯಾಕೆಟ್ ಹಿಗ್ಗಿ ಬಂದಿದ್ದ.
ದಿನವೂ ಅದೇ ಕಥೆ. ಆದ್ದರಿಂದ ಇಂದ್ರಿ ಹೇಗೇ ಬಂದರೂ ಇವತ್ತು ಗಂಡನಿಗೆ ವಿಷಯ ತಿಳಿಸಬೇಕು ಎಂದು ರೆಡಿಯಾಗಿದ್ದಳು. ಆದರೆ ಹೊಸ್ತಿಲು ದಾಟುತ್ತಿದ್ದಂತೆಯೇ ‘ ಏ ಹಲ್ಕ ಮುಂಡೆ, ನಿಂಗ್ ಎಷ್ಟ್ ಹೇಳಿದ್ರೂ ಕೇಳ್ವಲ್ಲಿ ಅಲ್ಲ , ಮೆಟ್ನ್ಯಾಗ್ ಹೊಡ್ದೇ ಹೇಳ್ಬೇಕೇನು.. ಕುಂತ್ಗಂಡ್ ಕೊಪ್ರಿಗಿ ತಿನ್ನಾಕ್ ಇಲ್ಲೇನ್ ನಿಮ್ಮಂಪ್ಪಂದ್ ಹತ್ತೆಕ್ರೆ ತ್ವಾಟ ಐತಿ ಅಂದ್ಕಂಡಿಯೇನೆ ?’ ಎಂದು ಕಿರುಚಾಡುತ್ತಲೇ ಬಂದ .
ಇದ್ಯಾಕೋ ಗ್ರಹಚಾರ ಮತ್ತೆ ವಕ್ಕರಿಸಿಕೊಂಡಿತೆಂದ ಇಂದ್ರಿ ಏನೂ ಮಾತನಾಡದೆ ಸುಮ್ಮನಾದಳು. ಮಾಮೂಲಿನಂತೆ ಬೈಗುಳ ನಿಲ್ಲಿಸಿದ ನಂತರ ‘ಏ.. ಏನುಂದ್ರೆ...’ ಎಂದಳು.
ಅದು ಭರಮ್ಯಾನ ಕಿವಿಗೆ ಬೀಳಲೇ ಇಲ್ಲ. ಹತ್ತಿರ ಬಂದು ಚಿಮುಣಿ ದೀಪ ತಂದು ‘ಏ.. ಏನಾರು ಹೇಳಾನ ಅಂತ ಬಂದ್ರೆ ಬರ್‍ತಿದ್ದಾಂಗೆ ವಟಾವಟ ಪಿಟೀಪಿಟಿ ಶುರು ಮಾಡ್ದಿ, ಈಗ ಬಿದ್ಕಂಡೇನು.. ಏಳ್ ಮ್ಯಾಗ ’ಎಂದು ಮೈ ಅಲ್ಲಾಡಿಸಿದಳು.
ಕುಡಿದ ಮಬ್ಬಿನಲ್ಲಿದ್ದ ಅವನಿಗೆ ಏನು ಹೇಳಿದರೂ ಕೇಳಿಸಲೇ ಇಲ್ಲ. ‘ ಏ.. ನಿದ್ದಿ ಬರ್‍ತಾ ಐತಿ . ಎಬ್ಬಿಸ್ಬೇಡ...’ ಎಂದು ಸುಮ್ಮನೆ ಮತ್ತೆ ತೂಕಡಿಕೆ ಮುಂದುವರಿಸಿದ.
ಇದೇಕೋ ಸರಿಯಾಗುತ್ತಿಲ್ಲ ಎಂದುಕೊಂಡು ಅಡುಗೆ ಕೆಲಸ ಮುಗಿಸಿ ಆನಂತರ ಎಬ್ಬಿಸಿದಳು. ಅಷ್ಟೊತ್ತಿಗಾಗಲೇ ಭರಮ್ಯಾನ ನಿಶೆ ಸ್ವಲ್ಪ ಮಟ್ಟಿಗೆ ಇಳಿದಿತ್ತು. ಆಗ ಮತ್ತೆ ಎಬ್ಬಿಸಿದಳು. ‘ ಆಂ.. ಹೂಂ..’ ಎನ್ನುತ್ತಲೇ ತಡವರಿಸಿಕೊಂಡು ಮೇಲೆದ್ದು ಮಣೆಯೇರಿ ಕುಳಿತ. ಅವನ ಮೂಡ್ ಹೇಗಿದೆ ಎಂಬುದನ್ನು ಅವಲೋಕಿಸಿ ಇಂದ್ರಿ ಊಟ ಬಡಿಸುತ್ತಲೇ ‘ರೀ.. ನಂಗೇ ನೀರ್ ನಿಂತ್ಯಾವೆ...’ ಎಂದು ರಾಗ ಎಳೆದಳು.
ಅರೆಪ್ರeವಸ್ಥೆಯಲ್ಲಿದ್ದ ಭರಮ್ಯಾನಿಗೆ ಅದನ್ನು ಸರಿಯಾಗಿ ಗ್ರಹಿಸಲಾಗಲಿಲ್ಲ. ತಕ್ಷಣ ಪ್ರತಿಕ್ರಿಯಿಸದಿದ್ದರಿಂದ ಸಿಟ್ಟು ಮಾಡಿಕೊಂಡ ಇಂದ್ರಿ, ‘ಏ.. ಮೂದೇವಿ, ನಾನ್ ಹೇಳಿದ್ ಕೇಳ್ತೋ ಇಲ್ಲೊ...’ ಎಂದು ಗದರಿದಳು.
ಆಗ ಅವನು ಸ್ವಲ್ಪ ಜಾಗೃತನಾಗಿ ‘ಏನು ?’ ಎಂದ.
‘ನಂಗೆ ನೀರ್ ನಿಂತ್ಯಾವೆ... ನೀನ್ ಅಪ್ಪ ಆಗ್ತಿದಿಯ...’ ಎನ್ನುತ್ತಿದ್ದಂಯೇ ‘ಏ...ನಂದಿ? ಬಸ್ರಾಗಿದಿಯಾ...? ಕಡೀಗೂ ದ್ಯಾವ್ರು ಕಣ್ ಬಿಟ್ನೇ ಇಂದ್ರಿ... ಮದ್ವೆಯಾಗಿ ಇಷ್ಟ್ ವರ್ಷ ಆದ್ರೂನು ನಮ್ಗೆ ಮಕ್ಳೇ ಆಗಲ್ಲ ಅಂದ್ಕಂಡಿದ್ದೆ. ಹೋಗು ದ್ಯಾವ್ರಿಗೆ ಊದಿನ್‌ಕಡ್ಡಿ ಹಚ್ಚಿ ನಂಸ್ಕಾರ ಮಾಡು ’ ಎಂದು ಹೇಳಿದ.
‘ನಾನ್ ಸಂಜೇನೆ ಮಾಡ್ದೆ. ಈಗ್ ತಿನ್ನು. ನೀ ಬರ್‍ತಿದ್ದಂಗೇ ಅದ್ನೇ ಹೇಳಾನ ಅಂತ ಬಂದ್ರ ಕುಡ್ಕಂಡ್ ತೂರಾಡ್ತ ಇದ್ದಿ. ನಿಂಗ್ಯಾಕ್ ಬೇಕು ಹೆಂಡ್ರು ಮಕ್ಳು... ಗುಂಡ್ರು ಗೂಳಿ ಥರ ಇದ್ಬುಡು...’ ಎಂದು ಅಸಮಾಧಾನ ವ್ಯಕ್ತಪಡಿಸಿದಳು.
ಭರಮ್ಯಾನಿಗೆ ಅವಳ ಮಾತು ಎದೆಗೆ ನಾಟಿತು. ‘ಇಲ್ಲೇ.. ನಿನ್ ಹಿಂಗಾಗಿಯ ಅಂತ ನಂಗೇನ್ ಗೊತ್ತಾಗ್ಬೇಕು. ಗೌಡ್ರ ಕೆಲ್ಸಕ್ ಬರ್‍ಲಿಲ್ಲ ಅಂತ ತುಸು ಸಿಟ್ ಬಂದಿತ್ತು. ಅದ್ಕೇ ಕುಡ್ಕಂಡ್ ಬಂದೆ.’ ಎಂದು ರಾಗ ಎಳೆದ.
‘ನಿಂದ್ ಯಾವಾಗ್ಲೂ ಇದೇ ಕಥಿ ಆತು. ಕುಡಿಯಾಕ್ ಒಂದ್ ನೆಪ ಬೇಕು ಅಸ್ಟೆ , ಒಂದ್ ದಿನಾ ಆದ್ರು ದುಡ್ದುದ್ ದುಡ್ನ ಸೀದಾ ಮನಿಗೆ ತಂದಿಯೇನು ? ಇನ್ಮೇಲಾದ್ರೂ ತಿಳ್ಕಂಡ್ ಬದ್ಕು . ನಾವ್ ಆದಂಗ್ ನಮ್ ಮಕ್ಳೂ ಆಗದ್ ಬ್ಯಾಡ. ಎಷ್ಟ್ ಹೇಳಿದ್ರೂ ನಿನ್ ಬುದ್ಧಿ ಬಿಡದಿಲ್ಲ ನೀನು...’ ಎಂದು ಗೊಣಗಿದಳು.
ತನ್ನ ವಂಶಕ್ಕೊಂದು ಕುಡಿ ಬರುತ್ತಿದೆ ಎಂಬ ಸಂತಸದಲ್ಲಿ ಹೆಂಡತಿ ಹೇಳಿದ್ದ ಮಾತಿಗೆಲ್ಲಾ ಸೈ ಅಂದ ಭರಮ್ಯಾ, ‘ಇನ್ನು ನಾನ್ ಕುಡಿಯೋದ್ ಬಿಟ್ ಬಿಡ್ತೇನಿ. ನಿನ್ನಾಣೆ ಇಂದ್ರಿ’ ಎಂದು ಸಂಭ್ರಮಿಸಿದ.
ಮರುದಿನ ಆ ಸಂಭ್ರಮಕ್ಕೆ ಮತ್ತಷ್ಟು ಜಾಸ್ತಿಯೇ ಕುಡಿದು ಬಂದಿದ್ದ. ಇಂದ್ರಿಗೆ ಇದೇನು ಹೊಸತಾಗಿರಲಿಲ್ಲ. ಆದ್ದರಿಂದ ಎಲ್ಲವನ್ನೂ ಸಹಿಸಿಕೊಂಡು ಮುಂದೆ ಸಾಗುತ್ತಲೇ ಇದ್ದಳು. ಆದರೆ ಇಂದ್ರಿ ಕೆಲಸಕ್ಕೆ ಬರಲಿಲ್ಲ , ತನಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ರಾಜೇಗೌಡ , ಇಲ್ಲಸಲ್ಲದ ನೆಪ ಹೇಳಿ ಕೂಲಿ ಕೊಡುವುದನ್ನು ನಿಲ್ಲಿಸಿದ. ವಾರಕ್ಕೆ ಹದಿನೈದು ದಿನಕ್ಕೆ ಅಷ್ಟೋ ಇಷ್ಟೊ ಹಣ ಕೊಟ್ಟು ತನಗೆ ಯಾವ ದಿನದಲ್ಲಿ ಕೂಲಿ ಬಂದಿದೆ, ಯಾವ ದಿನದ್ದು ಬಂದಿಲ್ಲ ಎಂಬ ಗೊಂದಲದಲ್ಲಿ ಭರಮ್ಯಾನ ತಲೆ ಚಿಟ್ಟು ಹಿಡಿದು ಹೋಗತೊಡಗಿತು. ಆದರೂ ಅವನಿಗೆ ಗೌಡರ ಮೇಲೆ ಗೌರವ ಕಡಿಮೆಯಾಗಿರಲಿಲ್ಲ...
***
ಇಂದ್ರಿಯ ಮೇಲೆ ರಾಜೇಗೌಡ ಹಗೆ ತೀರಿಸಿಕೊಳ್ಳುವ ಸಲುವಾಗಿ ಪರೋಕ್ಷವಾಗಿ ಹಿಂಸೆ ನೀಡತೊಡಗಿದ. ಕೆಲಸವಿದ್ದರೂ ಭರಮ್ಯಾನಿಗೆ ‘ಇವತ್ತು ಕೆಲಸ ಮಾಡೋದು ಬ್ಯಾಡ, ಅದೇನೂ ಆಗೊಲ್ಲ ’ ಎಂದು ಸಬೂಬು ಹೇಳುತ್ತ ಕೂಲಿ ಕೂಡ ಕೊಡದೆ ಸತಾಯಿಸುತ್ತಿದ್ದ. ಮಳೆಗಾಲ ಆರಂಭವಾದರೂ ಭರಮ್ಯಾನಿಗೆ ರಾಜೇಗೌಡ ಕೆಲಸಕ್ಕೆ ಹಚ್ಚಲೇ ಇಲ್ಲ... ಅವನಿಗೆ ‘ನಾಳೆ ಬರಬ್ಯಾಡ ’ ಎಂದು ಹೇಳಿ ಬೇರೆಯವರನ್ನು ಕರೆಸಿ ಕೆಲಸ ಮಾಡಿಸುತ್ತಿದ್ದ . ಇದರಿಂದ ದಿನೇ ದಿನೆ ಭರಮ್ಯಾನಿಗೆ ಕುಡಿಯಲು ಕಾಸು ಸಿಗದಾಯಿತು. ಮನೆಯಲ್ಲಂತೂ ಪರಿಸ್ಥಿತಿ ಬಿಗಡಾಯಿಸುತ್ತಲೇ ಇತ್ತು. ಇಂದ್ರಿ ಭತ್ತದ ಗದ್ದೆಯಲ್ಲಿ ತೆನೆ ಆರಿಸಿ, ಕಾಳು ಗುಡಿಸಿಕೊಂಡು ಬಂದಿದ್ದರಿಂದ ಭತ್ತವೇನೋ ಇತ್ತು. ಆದರೆ ಅದನ್ನು ಕುಟ್ಟಬೇಕು. ತರಕಾರಿ, ಬೇಳೆ, ಕಾರ, ಉಪ್ಪು, ಹೀಗೆ ಮನೆ ದಿನಸಿಗಳೆಲ್ಲಾ ಇಲ್ಲದಾಗುತ್ತಿತ್ತು. ಮೇಲಾಗಿ ಈಗ ಇಂದ್ರಿ ಗರ್ಭಿಣಿ.
ರಾಜೇಗೌಡನ ಕುತಂತ್ರ ಇಂದ್ರಿಗೆ ಮಾತ್ರ ಗೊತ್ತಿತ್ತು. ಆದ್ದರಿಂದ ಸ್ವಾಭಿಮಾನ, ಮಾನ, ಮರ್ಯಾದೆಗಳನ್ನು ಕಳೆದುಕೊಳ್ಳುವುದಕ್ಕಿಂತ ಈ ಕಷ್ಟ ಎಷ್ಟೋ ಮೇಲು ಎಂದುಕೊಂಡು ಅವಳು ಮಾನಸಿಕವಾಗಿ ತಯಾರಾಗಿಯೇ ಇದ್ದಳು. ಆದರೆ ಭರಮ್ಯಾ ಕಂಗಾಲಾಗಿದ್ದ. ಗೌಡರು ಹೀಗೇಕೆ ಮಾಡುತ್ತಿದ್ದಾರೆ ಎಂಬುದು ಅವನಿಗೆ ಅರ್ಥವಾಗುತ್ತಿರಲಿಲ್ಲ. ಬೇರೆಯವರ ಕೂಲಿಗೆ ಹೋದರೆ ಎಲ್ಲಿ ರಾಜೇಗೌಡ ಬೇಜಾರಾಗುತ್ತಾನೋ.. ಎಂಬ ಗೌರವಯುಕ್ತ ಭಯ ಅವನನ್ನು ಆವರಿಸಿತ್ತು. ಹೀಗಾಗಿ ಬೀದಿ ಬೀದಿ ಅಲೆಯುತ್ತಿದ್ದ.
ಮಳೆಗಾಲವಾಗಿದ್ದರಿಂದ ಇಂದ್ರಿಗೆ ಕೂಲಿ ಕೆಲಸ ಸಿಗತೊಡಗಿತು. ಗರ್ಭಿಣಿಯಾದರೂ ಅದರಲ್ಲಿಯೇ ಕೂಳಿ ಆರಿಸಲು, ರಾಗಿ, ಮೆಣಸು, ಭತ್ತದ ಮಡಿ ಮಾಡಿ, ಬಿತ್ತಲು, ನಾಟಿ ಹಚ್ಚಲು, ಹತ್ತಿ, ಜೋಳ, ಹಲಸಂದಿ, ಕುರಿಶಣಿ, ಶೇಂಗಾ ಮುಂತಾದ ಬೀಜ ಹಾಕಲು ಅವರಿವರ ಕೆಲಸಕ್ಕೆ ತಾನೇ ಕೇಳಿಕೊಂಡು ಹೋಗಿ ಹೇಗೋ ಸಂಸಾರ ನಿಭಾಯಿಸುತ್ತಿದ್ದಳು. ಬೇರೆಯವರ ಕೆಲಸಕ್ಕೆ ಹೋಗು ಎಂದು ಗಂಡನಿಗೆ ಎಷ್ಟೇ ಹೇಳಿದರೂ ಅವನು ಹೋಗಲು ತಯಾರಿರಲಿಲ್ಲ. ಇದರಿಂದ ಇಂದ್ರಿಗೆ ಕೂಲಿಗೆ ಹೋಗುವುದು ಅನಿವಾರ್ಯವಾಗಿತ್ತು.
ಸಂತೆಗೆ ಹೋಗು ಎಂದರೂ ಭರಮ್ಯಾ ಹೋಗದೆ ಗೌಡನ ಕರೆಯನ್ನೇ ಎದುರು ನೋಡುತ್ತಿದ್ದ. ಆದರೆ ಗೌಡ ಮಾತ್ರ ಈ ಕಡೆ ಸುಳಿಯಲೇ ಇಲ್ಲ. ದಿನಕ್ಕೊಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದ. ತುತ್ತು ಅನ್ನಕ್ಕೂ ಗತಿಯಿಲ್ಲದಂತಾಗಿ ಅವರೇ ನನ್ನ ಬಳಿ ಬಂದು ನಿಂತುಕೊಳ್ಳಲಿ ಎಂಬ ಚಿಂತನೆ ಅವನದು. ಹೊಟ್ಟೆಗಿಲ್ಲದಂತಾದರೆ ಎಷ್ಟು ದಿನ ಬೇರೆಯವರ ಕೂಲಿ ಮಾಡೋಕೆ ಸಾಧ್ಯ ? ಮತ್ತೆ ತನ್ನ ಹತ್ತಿರ ಇಂದ್ರಿಯೇ ಕೆಲಸಕ್ಕೆ ಬರಬೇಕು ಎಂಬ ದುಡ್ಡಿನ ದುರಹಂಕಾರ. ಅದಕ್ಕೇ ಗದ್ದೆಯಲ್ಲಿ ಕೇವಲ ಹೆಣ್ಣಾಳುಗಳಿಗೇ ಕೆಲಸ ಕೊಡುತ್ತಿದ್ದ. ‘ನಿಂಗೇನೂ ಈಗ ಕೆಲ್ಸ ಇಲ್ಲ ಬೇಕಾದ್ರೆ ಇಂದ್ರಿ ಕಳುಸು...’ ಎಂದು ಪರೋಕ್ಷವಾಗಿ ಹೇಳುತ್ತಿದ್ದ . ಇಂದ್ರಿ ಮಾತ್ರ ತಲೆ ಕೆಡಿಸಿಕೊಳ್ಳಲೇ ಇಲ್ಲ. ಊರ ಸಾಹುಕಾರನಿಗೇ ಸವಾಲ್ ಹಾಕಿ ಜೀವನ ನಡೆಸತೊಡಗಿದಳು.
ಪ್ರತಿ ಭಾನುವಾರ ಹತ್ತಿರದ ಶಿರಾಳಕೊಪ್ಪದಲ್ಲಿ ವಾರದ ಸಂತೆ. ಇಡೀ ವಾರ ಇವರ ಜೀವನ ನಡೆಯಬೇಕೆಂದರೆ ಭಾನುವಾರ ಸಂತೆಗೆ ಹೋಗಿ ಕಾಳು, ತರಕಾರಿ, ಸಕ್ಕರೆ, ಬೆಲ್ಲ, ಅಡಕೆ, ಎಲೆ, ತಂಬಾಕು ಸುಣ್ಣ ಮುಂತಾದ ವಸ್ತುಗಳನ್ನು ತರಲೇಬೇಕು. ಇಲ್ಲದಿದ್ದರೆ ತಲಬೂ ಇಲ್ಲ. ತುತ್ತು ಕೂಳೂ ಇಲ್ಲ...
ಭರಮ್ಯಾ ಸಂತೆಗೆ ಹೋಗುತ್ತಿರಲಿಲ್ಲ. ಆದ್ದರಿಂದ ಗರ್ಭದಲ್ಲಿ ಕರುಳ ಕುಡಿ ಇಟ್ಟುಕೊಂಡೇ ಇಂದ್ರಿ ಭಾನುವಾರ ಸಂತೆಗೆ ಹೋಗಿದ್ದಳು. ಮೂರ್‍ನಾಲ್ಕು ದಿನದ ಕೂಲಿಯಿಂದ ಬಂದಿದ್ದ ಹಣ ತೆಗೆದುಕೊಂಡು ಇಡೀ ಸಂತೆ ಸುತ್ತಿದ ಅವಳು ಕಡಿಮೆ ಬೆಲೆಗೆ ಸಿಕ್ಕ ತರಕಾರಿ, ಕಾಳು ಕಡಿ ತೆಗೆದುಕೊಂಡು ಚೀಲದಲ್ಲಿ ತುಂಬಿ, ತಲೆಯ ಮೇಲಿಟ್ಟುಕೊಂಡು ಊರ ಹಾದಿ ಹಿಡಿದಿದ್ದಳು. ಅದು ಡಾಂಬರು ಕಾಣದ ಹಾದಿ. ಅಲ್ಲಿ ಧೂಳು ತುಂಬಿದ ಕಲ್ಲುಗಳದ್ದೇ ದರ್ಬಾರು. ಬಹಳಷ್ಟು ಜನ ಅದೇ ದಾರಿಯಲ್ಲಿ ಬರುತ್ತಿದ್ದರು. ಅಂಥಾ ರಸ್ತೆಯಲ್ಲಿ ಬರುವಾಗ ಅದೇ ಸಮಯಕ್ಕೆ ಬೈಕ್‌ನಲ್ಲಿ ರಾಜೇಗೌಡ ಮನೆಗೆ ಹೋಗುತ್ತಿದ್ದ.
ಸಂತೆ ಸಾಮಾನಿನ ಚೀಲ ಹೊತ್ತು ಏದುಸಿರು ಬಿಡುತ್ತಾ ಎತ್ತರದ ಹಾದಿ ಸವೆಸುತ್ತಿದ್ದ ಇಂದ್ರಿಯ ಕಂಡ ರಾಜೇಗೌಡನಿಗೆ ಎಲ್ಲಿಲ್ಲದ ಸಂತಸ. ತಕ್ಷಣ ಬೈಕ್ ಸ್ಲೋ ಮಾಡಿ, ‘ಯಾಕೆ ಇಂದ್ರಿ, ನಿನ್ ಗಂಡ ಬರ್‍ಲಿಲ್ವಾ ? ಇಂಥಾ ಹೊತ್ನ್ಯಾಗ ಹಿಂಗ್ ಹೊಂಟಿಯಲ್ಲ ಬಾ ನಿಮ್ ಮನಿವರ್‍ಗೂ ಬಿಡ್ತೀನಿ ’ಅಂದ.
ಅವಳ ಸಿಟ್ಟು ನೆತ್ತಿಗೇರಿತ್ತು. ಮಳೆ ಮೋಡ ಆಗಿದ್ದರಿಂದ ಸರಸರ ಮನೆಗೆ ಹೆಜ್ಜೆ ಹಾಕುವ ತವಕದಲ್ಲಿದ್ದವಳಿಕೆ ಏಕಾ ಎಕಿ ಈತ ಬಂದು ಕೆಣಕಿದ್ದರಿಂದ ತಕ್ಷಣ ಅವನ ಮುಖ ನೋಡಿ ‘ಹೊಗಲೇ ಬ್ಯಾವರ್ಸಿ...ನಿನ್ ಕೆಲ್ಸ ನೀನ್ ನೋಡ್ಕೊ ಹೋಗ್. ಕಚ್ಚೆ ಹರ್‍ಕನ್ ತಗೋ ಬಂದ್. ಹೆಂಗ್ಸರ ಹಾಟ್ ಕುಡೀಲಿಲ್ಲ ಅಂದ್ರ ಆಂಗಂಗಿಲ್ಲೇನು...? ಇನ್ನೊಂದ್ ಸರ್‍ತಿ ನನ್ನ್ ಸಂಗ್ತಿ ಬಂದಿ ಅಂದ್ರ ಮೆಟ್ ಹರಿಯಂಗ್ ಹೊಡೀತೀನಿ ’ಎಂದಳು.
‘ಇಷ್ಟೆಲ್ಲಾ ಅನುಭವಿಸಂಗೆ ಮಾಡಿದೋನೇ ನಾನು. ಆದ್ರೂ ನಿಂಗ್ ಬುದ್ಧಿ ಬಂದಿಲ್ಲ ಅಲ್ಲ? ಐತಿ ನಿಂಗ್ ಇನ್ನೂ ಮಾರಿ ಹಬ್ಬ...’
‘ಹೋಗ್ಲೇ ನಾಯಿ, ನಿನ್ನಂತೋರಿಗೆ ಸೆರ್‍ಗ್ ಹಾಸಿ ಜೀವ್ನ ಮಾಡೋ ಬದ್ಲು ರಟ್ಯಾಗ್ ಶಕ್ತಿ ಇರೋವರ್‍ಗೂ ದುಡ್ದು ತಿಂತೀವಿ, ರಟ್ಟಿ ಸೋತ್ ಮ್ಯಾಗ ವಿಷ ಕುಡ್ದು ಸಾಯ್ತೀವಿ... ನಿನ್ನಂತ ನೀತಿಗ್ಗೆಟ್ ತಾಯ್ಗಂಡ್ರ ಹತ್ರ ಕೈ ಚಾಚದಿಲ್ಲ ’ ಎಂದು ಸರಸರನೆ ಹೊರಟಳು.
‘ಸೊಕ್ಕು ಕರಗಸ್ತೇನೆ. ಇನ್ನೂ ಕರಗಸ್ತೇನಿ ನೋಡ್ತಾ ಇರು...’ ಎನ್ನುತ್ತಿದ್ದಂತೆಯೇ ಇಂದ್ರಿ ಚೀಲ ಕೆಳಗಿಳಿಸಿ ಹರಕು ಚಪ್ಪಲಿಯನ್ನು ಕೈಗೆ ತೆಗೆದುಕೊಂಡಳು. ಅಷ್ಟರಲ್ಲಿಯೇ ಗೌಡ ಬೈಕ್ ಆಕ್ಸಿಲೇಟರ್ ಜಾಸ್ತಿ ಮಾಡಿದ.
ದಾಸನಪುರದ ಅನೇಕರು ಅದೇ ದಾರಿಯಲ್ಲಿ ಬರುತ್ತಿದ್ದರು. ಇಂದ್ರಿಗೆ ಈಗಾಗಲೇ ತಿಂಗಳು ತುಂಬಿದ್ದವು. ಮಳೆ ಕೂಡ ಶುರುವಾಗಿತ್ತು. ಅದರಲ್ಲೇ ಗಟ್ಟಿ ಮನಸ್ಸು ಮಾಡಿ ನೆನೆದುಕೊಂಡೇ ಮನೆಕಡೆಯ ದಾರಿ ಹಿಡಿದಿದ್ದಳು. ನಾಲ್ಕೈದು ಕಿ.ಮೀ. ನಡೆದು ಬಂದಿದ್ದರಿಂದ ಆಯಾಸ ಹೆಚ್ಚಾಗಿತ್ತು. ಜತೆಗೆ ಹೊಟ್ಟೆ ನೋವು . ಊರು ಹತ್ತಿರ ಬರುತ್ತಿದ್ದಂತೆಯೇ ಇಂದ್ರಿ ಶಕ್ತಿ ಕಳೆದುಕೊಳ್ಳತೊಡಗಿದಳು. ಹೊಟ್ಟೆ ನೋವು ಜಾಸ್ತಿಯಾಗಿತ್ತು. ಸುರಿವ ಮಳೆಯ ನಡುವೆ ಮುಂದೆ ಹೋಗಲಾರದೆ ಮುತ್ತುಗದ ಮರದ ಕೆಳಗೆ ನಿಲ್ಲಲು ಯೋಚಿಸಿಕೊಂಡು ಹತ್ತಿರ ಬರುತ್ತಿದ್ದಂತೆಯೇ ಹೆರಿಗೆ ಬೇನೆ ಕಾಣಿಸಿಕೊಂಡಿತು. ಮರದ ಕೆಳಗೆ ಬರುತ್ತಿದ್ದಂತೆಯೇ ಚೀಲವನ್ನೂ ಇಳಿಸಲಾಗಲಿಲ್ಲ. ತಕ್ಷಣ ನೆಲಕ್ಕುರುಳಿ ‘ಅವ್ವಾ...’ ಎಂದು ಜೋರಾಗಿ ಕಿರುಚಿಕೊಳ್ಳತೊಡಗಿದಳು. ಕಾಲ ಯಾರಿಗಾದರೂ ನಿಲ್ಲುತ್ತದೆಯೇ ? ಸುರಿವ ಮಳೆಯಲ್ಲಿಯೇ ತಾವರೆ ಕೆರೆಯ ಏರಿಯ ಮೇಲಿರುವ ಆ ಮುತ್ತುಗದ ಮರದ ಕೆಳಗೇ ಇಂದ್ರಿಯ ಗರ್ಭದಿಂದ ಗಂಡು ಮಗುವೊಂದು ಭೂಮಿಗೆ ಬಂತು...!!
ಕ್ಷಣಾರ್ಧದಲ್ಲಿ ಇಂದ್ರಿ eನತಪ್ಪಿದಳು. ಮುಂಗಾರುಮಳೆ, ಬಿರುಗಾಳಿ ಹೆಚ್ಚಾಗಿತ್ತು. ಗಾಳಿಗೆ ಮಳೆಯ ಹನಿಗಳು ಮಗುವಿನ ಮೇಲೆ ತಟತಟನೆ ಜೋರಾಗಿಯೇ ಬಿಳುತ್ತಿದ್ದವು. ರಕ್ತಸಿಕ್ತಗೊಂಡ ಮಗು ಸುರಿವ ಮಳೆಯ ರಭಸಕ್ಕೇ ನೋವಿನಿಂದ ಚೀರುತ್ತಿತ್ತು. ಅದೇ ಸಮಯಕ್ಕೆ ಕೆಲವು ಮಹಿಳೆಯರು ಸಂತೆ ಮಾಡಿಕೊಂಡು ಊರಿಗೆ ಬರುತ್ತಿದ್ದರು. ಕೆಲವರು ಬ್ಯಾಗಡಿ ಹೊತ್ತಿದ್ದರು. ಮತ್ತೆ ಕೆಲವರು ಛತ್ರಿ ಹಿಡಿದುಕೊಂಡು ಬರುತ್ತಿದ್ದರು. ಕೆಸರಿನಲ್ಲಿಯೇ ಬಿದ್ದು ಒದ್ದಾಡುವ ಮಗುವನ್ನು ಕಂಡು ಎಲ್ಲರ ಕರುಳು ಕತ್ತರಿಸಿ ಬಂದಂತಾಯಿತು. ಸಂತೆ ಗಂಟುಗಳನ್ನೆಲ್ಲಾ ಎಲ್ಲರೂ ಮರದ ಕೆಳಗಡೆ ಇಟ್ಟು ಇಂದ್ರಿಯನ್ನು ವಿಚಾರಿಸಿದರು. ಒಂದಿಬ್ಬರು ಗ್ರಾಮದ ಸೂಲಗಿತ್ತಿ ಶಾರದವ್ವನ ಕರೆದುಕೊಂಡು ಬರಲು ಮಳೆಯಲ್ಲಿಯೇ ಓಡಿದರು.
ತಾಯಿ ಹಾಗೂ ಮಗುವನ್ನು ಎಲ್ಲರೂ ಮಳೆಯಲ್ಲಿಯೇ ಕರೆದಕೊಂಡು ಬಂದು ಮನೆಗೆ ಬಿಟ್ಟರು. ಅವರ್‍ಯಾರೂ ಆಗ ಜಾತಿ ನೋಡಲಿಲ್ಲ. ಎಲ್ಲರೂ ಹೆಣ್ಣಾಗಿ ನೋಡಿದರು. ಕಪ್ಪಾಗಿ ಲಕ್ಷಣವಾಗಿದ್ದ ಆ ಮಗುವನು ನೋಡಿ ಎಲ್ಲರೂ ಸಂತಸಪಟ್ಟರು. ಊರು ಸುತ್ತಿಕೊಂಡಿದ್ದ ಭರಮ್ಯಾ ಸ್ವಲ್ಪ ಹೊತ್ತಿನಲ್ಲಿ ವಿಷಯ ತಿಳಿದು ಮನೆಗೆ ಓಡಿ ಬಂದ. ಅವನೆಲ್ಲ ನೋವುಗಳು ಆಗ ಮಾಯವಾಗಿದ್ದವು. ಇಬ್ಬರ ಕಣ್ಣಲ್ಲೂ ಹರ್ಷ ಹೊಳೆಯಾಗಿ ಹರಿಯುತ್ತಿತ್ತು.
***
ಮತ್ತೆ ಬದುಕಿನ ಚಿಂತೆ ಕಾಡುತ್ತಿತ್ತು. ಇದ್ದುದರಲ್ಲಿಯೇ ಸ್ವಲ್ಪ ದಿನಗಳವರೆಗೆ ಬಾಳ ಬಂಡಿ ದೂಡಿದರು. ಕೆಲವು ದಿನಗಳ ನಂತರ ‘ಗೌಡ್ರು ಯಾಕೋ ನನ್ನ ಕೆಲಸ್ಕೇ ಕರಿಯಂಗ ಕಾಣಂಗಿಲ್ಲ. ನಾನೇ ಹೋಗಿ ಕೇಳ್ಕೊಂಡ್ ಬರ್‍ತೀನಿ. ಹಂಗೇ ತುಸು ದುಡ್ ಇಸ್ಕೊಂಡ್ ಬರ್‍ತೀನಿ’ ಎಂದು ಭರಮ್ಯಾ ಹೊರಟು ನಿಂತ.
ಆಗ ಚಾಪೆಯ ಮೇಲೆ ಹರಕು ಶಟರ್ ಹಾಕಿಕೊಂಡು ಕೌದಿ ಹೊದ್ದುಕೊಂಡು ಮಲಗಿದ್ದ ಇಂದ್ರಿ ‘ರಾಜೇಗೌಡನ ಹತ್ರ ಮಾತ್ರ ಹೋಗಬ್ಯಾಡ ’ ಎಂದಳು.
ಅವಳ ಮಾತಿಗೆ ಕೋಪ ಉಕ್ಕೇರಿ ಬಂತು. ಆವೇಶದಲ್ಲಿಯೇ ಹತ್ತಿರ ಬಂದಾಗ ಆವಳ ಕಣ್ಣಲ್ಲಿ ನೀರ ಹನಿ ಇತ್ತು. ಹಸಿ ಮೈ. ಎಲ್ಲಿ ತನಗೆ ಹೊಡೆಯುತ್ತಾನೋ ಎಂಬ ಭಯ ಕಾಡತೊಡಗಿತು ಅವಳಿಗೆ. ಆಗ ‘ಗೌಡ ಸರಿಯಿಲ್ಲ’ ಎಂದಳು ದುಗುಡದಲ್ಲಿ. ಭರಮ್ಯಾನಿಗೆ ಮತ್ತಷ್ಟು ಸಿಟ್ಟು ನೆತ್ತಿಗೇರಿತು. ಇಷ್ಟೆಲ್ಲಾ ಅನುಬೋಸಿದ್ದು ಸಾಲ್ದೇನೆ. ಇನ್ನೂ ಇಂಗೇ ಇರು ಅಂತೀಯಾ? ಹೌದು, ಅವ್ರ್ಯಾಕೆ ಸರಿ ಇಲ್ಲ ?’ ಎಂದ. ಕೂಡಲೇ ಇಂದ್ರಿ ದಂಗಾದಳು. ‘ಏನಿಲ್ಲ ಸುಮ್ನೇ ಹೇಳಿದೆ ’ ಎಂದು ಸುಮ್ಮನಾದಳು.
ಅಷ್ಟಕ್ಕೆ ಭರಮ್ಯಾ ಕೂಡ ತಣ್ಣಗಾದ. ಮನೆಯಲ್ಲಿ ನೀರು ತಂದಿಟ್ಟ ಅವನು ಸೀದಾ ಗೌಡರ ಮನೆಯ ಹಾದಿ ಹಿಡಿದ . ಆದರೆ ರಾಜೇಗೌಡ ಮನೆಯಲ್ಲಿರಲಿಲ್ಲ. ಗೌಡನ ಪತ್ನಿ ದೀಪಾಳನ್ನು ವಿಚಾರಿಸಿದ. ಆಕೆ ‘ಗೌಡ್ರು ಗದ್ದೀಗ್ ಹೋಗ್ಯಾರ ’ಎಂದು ಸುಮ್ಮನಾದಳು . ಭರಮ್ಯಾ ಗದ್ದೀಗೇ ಹೋಗಿ ವಿಚಾರಿಸಿದರಾಯಿತು ಎಂದುಕೊಂಡ. ಆದರೆ ಇಲ್ಲೇ ಕಾಯುವುದು ಒಳ್ಳೇದು ಎಂದು ಜಗಲಿಯ ಮೂಲೆಯಲ್ಲಿ ಕುಳಿತ. ಸ್ವಲ್ಪ ಹೊತ್ತಿನ ನಂತರ ರಾಜೇಗೌಡ ಮನೆಗೆ ಬಂದ.
‘ಗೌಡ್ರೆ ಗದ್ದೀ ಕೆಲ್ಸಕ್ ಬರುಬೋದೇನೋ ಎಂದು ಕೇಳಾನ ಅಂತ ಬಂದಿದ್ದೆ...’ ಎಂದ.
ಅವನ ಮುಖ ನೋಡುತ್ತಿದ್ದತೆಂಯೇ ಗೌಡ ಗರಂ ಆಗಿ ‘ ಹೋಗೋ, ಬಸ್ರಿ ಹೆಂಗ್ಸು ಮನೆವರ್‍ಗೂ ಬೈಕಲ್ಲಿ ಬಿಡ್ತೀನಿ ಬಾ ಅಂಥ ಕರೆದಿದ್ಕೆ ನಿನ್ ಹೆಂಡ್ತಿ ಚಪ್ಲಿ ತಗಾತಾಳೆ. ನಿಮ್ಮಂಥೋರ್‍ನ ಕೆಲ್ಸಕ್ ಇಟ್ಕೋಳ್ತಿವಲ್ಲ. ನಮ್ಗೆ ಬುದ್ಧಿ ಇಲ್ಲ. ನಮ್ ಎಕ್ಡ ತಗೊಂಡು ನಾವೇ ಹೊಡ್ಕೋಬೇಕು. ಮದ್ಲು ಇಲ್ಲಿಂದ ಹೊಂಟ್ ಹೋಗೋ ಮಾದ್ಗೆನ್ ಮಗ್ನ... ಎಂದು ಒಂದೇ ಉಸುರಿನಲ್ಲಿ ಕೂಗಿದ.
ಗೌಡನ ಮಾತು ಕೇಳಿ ಭರಮ್ಯಾನಿಗೆ ಆವೇಶ ಹೆಚ್ಚಾಯ್ತು. ಜತೆಗೆ ಗೌಡ್ರಿಗೆ ಇಂದ್ರಿ ಎಲ್ಲಿ ಸಿಕ್ಕಿದ್ಲು ಎಂಬ ಪ್ರಶ್ನೆ ಕೂಡ ಕಾಡತೊಡಗಿತು. ಭರಮ್ಯಾ ಮತ್ತೆ ಮಾತನಾಡುವುದರೊಳಗೆ ರಾಜೇಗೌಡ ಮನೆಯೊಳಗಡೆ ಹೋಗಿದ್ದ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ವಾಪಸ್ ಬಂದ.
ಗುಡಿಸಲ ಒಳಗೆ ಕಾಲಿಡುತ್ತಿದ್ದಂತೆಯೇ ‘ಏ ಇಂದ್ರಿ ನಿಂಗೇನಾರೂ ಬುದ್ದಿಗಿದ್ದಿ ಇದಿಯೇನೆ ಮಿಂಡ್ರಗಾಳಿ...’ ಎಂದು ಕೂಗಾಡುತ್ತ ಬಂದ. ಇಂದ್ರಿಗೆ ಗಾಬರಿಯಾಯಿತು. ಆಕೆ ಮೊದಲಿನ ಸ್ಥಿತಿಯಲ್ಲಿದ್ದಿದ್ದರೆ ಅಷ್ಟೊಂದು ಭಯಪಡುತ್ತಿರಲಿಲ್ಲ. ಆದರೆ ಪಕ್ಕದಲ್ಲಿ ಹಸುಗೂಸು ಕೂಡ ಇತ್ತು. ಅದಕ್ಕೇ ಭಯ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಬಾರದು ಎಂಬ ಆತಂಕ...
ಗೌಡ ಏನೋ ಬೆಂಕಿ ಹಚ್ಚಿದ್ದಾನೆ. ಇನ್ನು ಮುಚ್ಚಿಡುವುದರಲ್ಲಿ ಯಾವುದೇ ಸುಖವಿಲ್ಲ ಎಂದುಕೊಂಡು ಅದರಲ್ಲಿಯೇ ಮೇಲೇಳಲು ಅಣಿಯಾದಳು. ಒಳಗೆ ಬಂದ ಭರಮ್ಯಾನಿಗೆ ಮೊದಲು ಕಂಡದ್ದು ಮಗು. ಆದ್ದರಿಂದ ಸ್ವಲ್ಪ ಸಮಾಧಾನ ಮಾಡಿಕೊಂಡು, ’ಗೌಡ್ರಿಗ್ಯಾಕೆ ಚಪ್ಲಿ ತಗೊಂಡೆಂತೆ ? ಅವ್ರೆಲ್ಲಿ ಸಿಕ್ಕಿದ್ರು ನಿಂಗೆ..?’ ಎಂದ.
ಇಂದ್ರಿ ಸಮಾಧಾನದಿಂದಲೇ ತುಂಬಿ ಬಂದ ಕಣ್ಣೀರಿನ ನಡುವೆ ನಡೆದುದ್ದೆಲ್ಲವನ್ನೂ ವಿವರಿಸಿದಳು. ಕೇಳುತ್ತಿದ್ದಂತೆಯೇ ಭರಮ್ಯಾನ ಕೂದಲು ನೆಟ್ಟಗಾಗಿದ್ದವು. ಅವಳು ಎಲ್ಲವನ್ನೂ ಹೇಳಿ ಮುಗಿಸುವುದರೊಳಗೇ ‘ಆ ಹಲ್ಕಟ್ ಸೂಳೇಮಗ ಗೌಡನ್ನ ಸಿಗ್ದು ಹಾಕ್ತೀನಿ ...’ ಎಂದು ಕದ್ಲಿ ಹುಡುಕಿದ.
ಆಗ ಇಂದ್ರಿಯೇ ಮೇಲೆದ್ದು ಸಮಾಧಾನ ಮಾಡಿ, ‘ನೋಡು, ಬಡ್ತನ ಐತಿ ಅಂಥ ನಾನ್ ಯಾವತ್ತೂ ಹಾದಿ ತಪ್ಪೋಳಲ್ಲ. ಕೂಗಾಡ್ಬ್ಯಾಡ. ಮರ್‍ಯಾದೆ ಹೋಗೋದು ನಮ್ದೆ . ಮೊದ್ಲು ನೀನ್ ನಮ್ ಮನಿ, ಮಠ ಹೇಂಗ ಅನ್ನೋದನ್ ಯೋಚ್ನಿ ಮಾಡು. ಕುಡಿಯೋದು, ಬರೀ ಗೌಡಂದೆ ಕೆಲ್ಸ ಮಾಡೋದ್ ಬಿಟ್ಟು ಯಾರ್ ಕರೀತಾರೋ ಅವ್ರುದು ಕೆಲ್ಸಕ್ ಹೋಗು. ಎಲ್ರಂಗೇ ನಾವೂ ಉದ್ಧಾರಾಗೋನ. ಸಿಟ್ಟಿನ್ ಕೈಯ್ಯಾಗ ಬುದ್ಧಿ ಕೊಟ್ಟು ಮತ್ತಸ್ಟ್ ಹಾಳಾಗೋದ್ ಬ್ಯಾಡ. ದುಡ್ಡಿರೋರ್‍ನ ಎದುರ್ ಹಾಕ್ಕೊಂಡ್ ಏನ್ ಮಾಡಾಕ್ ಆಗ್ತದೆ ? ಎಂದು ತಿಳಿ ಹೇಳಿದಳು.
ಆಗ ಅವಳು ಹೇಳಿದ್ದರಲ್ಲಿ ಯಾವುದೂ ಸುಳ್ಳಲ್ಲ ಎನಿಸಿತು. ಅಲ್ಲಿಂದ ಇಂದ್ರಿ ಹಾಗೂ ಭರಮ್ಯಾ ಇಬ್ಬರೂ ತಾವು ಬಡವರಾದರೂ ಸ್ವಾಭಿಮಾನಿಗಳಾಗಿ ಜೀವನ ನಡೆಸತೊಡಗಿದರು.

Sunday, November 9, 2008

ಹಸಿವಿನ ರುದ್ರ ನರ್ತನ..

ನೀವು ಕುಡಿಯುವ ನೀರಿಗೆ, ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟಿಸುವ ಜನರನ್ನು ಕಂಡಿದ್ದೀರಿ. ಆದರೆ ತುತ್ತಿನ ಚೀಲ ತುಂಬಿಸಿಕೊಳ್ಳಲೂ ಆಗದೆ ಪರದಾಡುತ್ತ, ವರ್ಷಗಟ್ಟಲೆ ಹಸಿವಿನಿಂದ ಬಳಲುತ್ತ, ಹೊಟ್ಟ್ಟೆ ಮೇಲೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಲೂ ಆಗದೆ , ಬಳಲಿ ಬೆಂಡಾಗಿ ಬಸವಳಿದವರ ಗೋಳಿನ ದೃಶ್ಯಗಳನ್ನು ನೋಡಿದ್ದೀರಾ...?
ಜಾಗತೀಕರಣ ಎಂಬ ರಾಕ್ಷಸ ಭೂಮಿಯ ಮೇಲೆ ತನ್ನ ಪಾದ ಊರಿದಾಗಿನಿಂದ ಇಂಥ ದೃಶ್ಯಗಳು ಸಾಮಾನ್ಯವಾಗಿವೆ ! ಇದು ಕೇವಲ ಒಂದು ರಾಜ್ಯ, ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವವನ್ನೇ ಆವರಿಸಿದೆ. ಆದರೆ ಅಭಿವೃದ್ಧಿ, ಪಾಶ್ಚಾತ್ಯೀಕರಣ, ಫ್ಯಾಷನ್‌ಗಳೆಂಬ ಅಂಧಕಾರದಲ್ಲಿ ಅದು ಬೂದಿ ಮುಚ್ಚಿದ ಕೆಂಡವಾಗಿ ಕೂತಿದೆ. ವಿಶ್ವದ ಹತ್ತು ಮಂದಿಯಲ್ಲಿ ಒಬ್ಬರು ವರ್ಷಾನುಗಟ್ಟಲೆ ಅನ್ನ ನೀರು ಇಲ್ಲದೆ ತೊಳಲಾಡುತ್ತಿದ್ದಾರೆ !!
ಒಂದೆಡೆ ಬಂಡವಾಳಶಾಹಿಗಳು ಆಹಾರ ಉತ್ಪನ್ನಗಳನ್ನು ಶೇಖರಿಸಿ, ಗೋದಾಮಿನಲ್ಲಿ ಕೊಳೆಯುವಂತೆ ಮಾಡಿ ಕೃತಕ ಅಬಾವ ಸೃಷ್ಟಿಸುತ್ತಿದ್ದಾರೆ. ಮತ್ತೊಂದೆಡೆ ಕುಡಿಯಲು ಗಂಜಿಯೂ ಇಲ್ಲದೆ ಅನೇಕರು ಹಸಿವೆಂಬ ಹೆಬ್ಬಾವಿಗೆ ನಿತ್ಯವೂ ಆಹುತಿಯಾಗುತ್ತಿದ್ದಾರೆ. ಇದರ ನಡುವೆ ಹಣದುಬ್ಬರದ ಕಾರ್ಕೂಟಕ ಸರ್ಪದ ಕಾಟ...
ಏಷಿಯಾದಲ್ಲಿಯೇ ಹಸಿವಿನಿಂದ ಬಳಲುವ ಹೆಚ್ಚು ಜನರಿರುವ ರಾಷ್ಟ್ರಗಳಲ್ಲಿ ಕಾಂಬೋಡಿಯಾ ಹಾಗೂ ಫಿಲಿಪೈನ್ಸ್‌ಗಳು ಪ್ರಮುಖ ಸ್ಥಾನದಲ್ಲಿವೆ. ಕಾಂಬೋಡಿಯಾದಲ್ಲಿ ಶೇ.೩೪, ಫಿಲಿಪೈನ್ಸ್‌ನಲ್ಲಿ ಶೇ.೩೩ರಷ್ಟು ಮಂದಿ ತುತ್ತು ಕೂಳಿಗೂ ಪರಿತಪಿಸುತ್ತಾ ಕಣ್ಣು ಮುಚ್ಚುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಶೇ.೪೦ಕ್ಕೂ ಹೆಚ್ಚು ಜನ ಹೊಟ್ಟೆಗೆ ಹಿಟ್ಟಿಲ್ಲದೆ ಅಶುದ್ಧ ನೀರು ಕುಡಿದು ಬದುಕುತ್ತಿದ್ದಾರೆ !
ಹಸಿವು ಈ ರಾಷ್ಟ್ರಗಳಲ್ಲಿ ರುದ್ರತಾಂಡವ ಮಾಡುತ್ತಿದೆ ಎಂದ ಮಾತ್ರಕ್ಕೆ ಇಲ್ಲಿ ಅಭಿವೃದ್ಧಿಯಿಲ್ಲ, ಆಹಾರ ಉತ್ಪಾದನೆಯೇ ಇಲ್ಲ ಎನ್ನುವಂತಿಲ್ಲ. ಈ ರಾಷ್ಟ್ರಗಳು ಶೇ.೬೫ಕ್ಕಿಂತಲೂ ಹೆಚ್ಚು ಅಭಿವೃದ್ಧಿ ಸಾಸಿವೆ . ಈ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅನುಕೂಲತೆಗಳು ಹೆಚ್ಚಾದಂತೆ ಅನಾನುಕೂಲಗಳೂ ನೃತ್ಯ ಮಾಡುತ್ತಿವೆ . ಹೀಗಾಗಿಯೇ ಹಸಿವಿನ ರುದ್ರ ನರ್ತನ .
ಎಂಜಲು ತಿನ್ನುವ ಸ್ಥಿತಿ !
ಒಂದೆಡೆ ಉಳ್ಳವರು, ಇನ್ನೊಂದೆಡೆ ದೀನರು. ತುತ್ತು ಇಲ್ಲದೆ ಈ ದೇಶಗಳಲ್ಲಿ ಕೂಲಿಗೂ ಕುತ್ತು. ಹೀಗಾಗಿ ಅನೇಕರು ಬೀದಿ ಬದಿಯಲ್ಲಿ ಶ್ರೀಮಂತರು ತಿಂದು, ಸಾಕಾಗಿ ಬಿಸಾಡಿದ ಎಂಜಲನ್ನು ತಿಂದು ಬದುಕುತ್ತಿದ್ದಾರೆ ! ಈ ಚಿತ್ರಣ ಫಿಲಿಪೈನ್ಸ್‌ನಲ್ಲಿ ಸಾಮಾನ್ಯ !!
ಆದರೆ ಭಾರತದ ನಗರ ಪ್ರದೇಶಗಳಲ್ಲಿಯೂ ಇಂಥ ಹೀನ ಸ್ಥಿತಿ ನಿರ್ಮಾಣವಾಗುತ್ತಿದೆ. ಫಿಲಿಪೈನ್ಸ್‌ನಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು .
ಫಿಲಿಪೈನ್ಸ್ ಹಾಗೂ ಕಾಂಬೋಡಿಯಾದಲ್ಲಿ ಹಸಿವಿನ ರುದ್ರತಾಂಡವ ಸಾಮಾನ್ಯವಾಗಿಬಿಟ್ಟಿದೆ. ಅಲ್ಲಿನ ಜನ ಈಗಾಗಲೇ ‘ಎಂಜಲು ತಿಂದು ಬದುಕುವುದಕ್ಕೆ ’ ಒಗ್ಗಿಬಿಟ್ಟಿದ್ದಾರೆ. ಆರೋಗ್ಯದ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಭಾರತದ ಜನ ಒಗಿಲ್ಲ ; ಒಗ್ಗಲಾರರು. ವಿಶ್ವದಲ್ಲಿಯೇ ಅತಿ ಹೆಚ್ಚು ಮಂದಿ ಹಸಿವಿನಿಂದ ಬಳಲುವವರನ್ನು ಭಾರತದಲ್ಲಿ ಕಾಣಬಹುದು ಎನ್ನುತ್ತಾರೆ ಇಂಗ್ಲಿಷ್ ಯುವ ಲೇಖಕ ರಾಜ್‌ಪಟೇಲ್. ಅವರ ‘stuffed and starved ’ ಪುಸ್ತಕದಲ್ಲಿನ ಭಾರತದ ಹಸಿವಿನ ಸ್ಥಿತಿಯ ಬಗ್ಗೆ ಅನೇಕ ನಿದರ್ಶನಗಳನ್ನು ನೀಡಿದ್ದಾರೆ.
ಅಕ್ಕಿಯ ಬೆಲೆ ಭಾರತದಲ್ಲಿ ಗಗನಕ್ಕೇರಿದೆ. ಕನಿಷ್ಠ ೨೦ ರೂ. ಇಲ್ಲದೆ ಉತ್ತಮ ಗುಣಮಟ್ಟದ ಅಕ್ಕಿ ಸಿಗುವುದು ಕಷ್ಟ . ಇದು ಇತರ ದೇಶಗಳಲ್ಲೂ ಮುಂದುವರಿದಿದೆ. ಯಾವುದೇ ತರಕಾರಿ, ಕಾಳು, ಬೇಳೆಗಳನ್ನು ಖರೀದಿಸಲು ಅಂಗಡಿಗೆ ತೆರಳಿದರೆ ಅಲ್ಲಿ ಕನಿಷ್ಠ ೨೦ ರೂ. ತೆರಬೇಕು. ಇದು ಇಂದಿನ ದುಸ್ಥಿತಿ. ಕಾಂಬೋಡಿಯಾ ಹಾಗೂ ಪಿಲಿಪೈನ್ಸ್‌ಗಳಲ್ಲಿ ಇದು ಇನ್ನೂ ಹೆಚ್ಚಾಗಿದೆ. ಹೀಗಾಗಿ ಅನ್ನಕ್ಕಾಗಿ ಹಾಹಾಕಾರ ಆರಂಭವಾಗಿದೆ. ಈ ಅಕ್ಕಿ ಕೊರತೆಯಿಂದಲೇ ಪ್ರಪಂಚದಲ್ಲಿ ೧೦೦ ಮಿಲಿಯನ್ ಜನ ಹಸಿವಿನಿಂದ ಬಳಲಿ ಕೊನೆಯುಸಿರೆಳೆಯುತ್ತಿದ್ದಾರೆ. ಫಿಲಿಪೈನ್ಸ್ ಒಂದರಲ್ಲಿಯೇ ೯೦ ಮಿಲಿಯನ್ ಮಂದಿ ಅನ್ನವಿಲ್ಲದೆ ಸಾವಿನಂಚಿನಲ್ಲಿ ಉಸಿರು ಬಿಗಿ ಹಿಡಿದು ನಿಂತಿದ್ದಾರೆ ...
ವಿಶ್ವದಲ್ಲಿ ಹಸಿವಿನ ವಿಚಾರದಲ್ಲಿ ನೋಡಿದರೆ ತೃಪ್ತರು ಕೇವಲ ಶೇ.೨೭ ಮಂದಿ. ಇನ್ನು ಶೇ.೫೩ ರಷ್ಟು ಜನ ಅರ್ಧಂಬರ್ಧ ತಿಂದು, ಇಲ್ಲವೇ ಸಂಪೂರ್ಣ ಉಪವಾಸ ಇದ್ದು ಬದುಕು ದೂಡುತ್ತಿದ್ದಾರೆ.
ಬಂಡವಾಳಶಾಹಿ ತತ್ವ :
ಭುವಿಯೇನು ಬಂಜೆಯಲ್ಲ. ಇಲ್ಲಿ ಎಲ್ಲವೂ ಬೆಳೆಯುತ್ತವೆ. ಆದರೆ ಜಾಗತಿಕ ವ್ಯವಸ್ಥೆಯಲ್ಲಿ ಮನುಷ್ಯನ ದುರಾಸೆ ಮಿತಿ ಮೀರಿದೆ. ಜಪಾನ್ ಗೋದಾಮುಗಳಲ್ಲಿ ಕೊಳೆಯುತ್ತಾ ಬಿದ್ದಿರುವ ಅಕ್ಕಿಯ ಮೂಟೆಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
ಹೌದು, ಜಪಾನ್, ಅಮೆರಿಕದಂತಹ ರಾಷ್ಟ್ರಗಳು ಆಹಾರ ವಸ್ತುಗಳನ್ನು ತಮ್ಮ ಭದ್ರಕೋಟೆಯಲ್ಲಿ ಬಂಸಿಟ್ಟಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಕೃತಕ ಅಭಾವ ಸೃಷ್ಟಿಯಾಗುತ್ತಿದೆ ( ಇದೇ ತಂತ್ರವನ್ನು ಈಗೀಗ ಸಣ್ಣಪುಟ್ಟ ವ್ಯಾಪಾರಿಗಳೂ ಅನುಸರಿಸುತ್ತಿರುವುದು ). ಇದರಿಂದಾಗಿ ಆಹಾರ, ದವಸ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಪ್ರಪಂಚದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ೪ಪಟ್ಟು ಅಕ್ಕಿ ಜಪಾನ್‌ನಲ್ಲಿ ಶೇಖರಣೆಯಾಗಿದೆ. ಆದರೂ ಅದು ೭ಲಕ್ಷ ಟನ್ ಅಕ್ಕಿಯನ್ನು ಇತರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಲೇ ಇದೆ.
೧೯೯೩ರಲ್ಲಿ ಡಬ್ಲ್ಯುಟಿಒ ಜತೆ ಜಪಾನ್ ಮಾಡಿಕೊಂಡ ಒಪ್ಪಂದದಂತೆ ಇಂದಿಗೂ ಈ ಅಕ್ಕಿ ಆಮದು ಮುಂದುವರಿದಿದೆ. ಈ ನಡುವೆ ಫಿಲಿಪೈನ್ಸ್‌ನ ಹಸಿವನ್ನು ಕಣ್ಣಾರೆ ಕಂಡಿರುವ ಜಪಾನ್ ೨.೨೦ಲಕ್ಷ ಟನ್ ಅಕ್ಕಿಯನ್ನು ದಾನ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಅಕ್ಕಿ ಗೋದಾಮಿನಲ್ಲಿ ಕೊಳೆಯುವ ಹಂತ ತಲುಪಿದ್ದರೂ ಅದನ್ನು ವಿತರಿಸುವ ಇಚ್ಛೆ ಅಲ್ಲಿನ ಸರಕಾರಿ ಅಕಾರಿಗಳಿಗಿಲ್ಲ !
ಅಕಾರಿಗಳು ಹಾಗೂ ಶ್ರೀಮಂತರ ಸ್ವ ಹಿತಾಸಕ್ತಿಯಿಂದಾಗಿ ಇಂದು ವಿಶ್ವದಲ್ಲಿ ಮಿಲಿಯನ್‌ಗಟ್ಟಲೆ ಜನ ಬಡವರು, ಮಧ್ಯಮವರ್ಗದವರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಹಸಿವಿನ ರುದ್ರ ನರ್ತನ ಎಲ್ಲೆ ಮೀರಿದೆ. ಮಹಿಳೆಯರು, ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೆ, ಜಾತಿ, ಮತ , ಧರ್ಮಗಳ ತಾರತಮ್ಯವಿಲ್ಲದೆ ಎಲ್ಲರೂ ಒಂದಾಗಿ ಬಳಲುತ್ತಿದ್ದಾರೆ. ನೀರಿನಲ್ಲಿ ಮುಳುಗುವವನಿಗೆ ಒಂದು ಹುಲ್ಲಿನ ಗರಿ ಸಿಕ್ಕರೂ ಸಾಕು ಬದುಕಿಯೇನು ಎಂಬ ಆಸೆ ಇರುತ್ತದೆ. ಆದರೆ ಹಸಿವಿನ ಸುಳಿಯಲ್ಲಿ ಸಿಕ್ಕಿರುವ ಜನರಿಗೆ ಅದೂ ಕೂಡ ಇಲ್ಲದಾಗಿದೆ. ಈ ಜೀವನ ಇಷ್ಟಕ್ಕೇ ಸಾಕು ಎನ್ನುತ್ತಿದ್ದಾರೆ. ಈ ಭುವಿಯಲ್ಲಿ ಹಸಿವಿಗೆ ಹೆದರದವರ್‍ಯಾರು ಹೇಳಿ ?

ದೇಸಿ ಕೃಷಿಯಿಂದ ಮಾತ್ರ ರೈತರಿಗೆ ಬದುಕು...

ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಒಂದೇ ತಿಂಗಳಲ್ಲಿ ಹತ್ತು ರೈತರು ಗೊಬ್ಬರದ ವಿಚಾರಕ್ಕೆ ಕೊನೆಯುಸಿರೆಳೆದಿದ್ದಾರೆ. ಒಬ್ಬ ಗೋಲಿಬಾರ್‌ನಲ್ಲಿ, ಮತ್ತೆ ಒಂಬತ್ತು ಮಂದಿ ವಿಷ ಕುಡಿದು ತಮ್ಮ ಕುಟುಂಬವನ್ನು ಬೀದಿಗೆ ತಂದಿಟ್ಟಿದ್ದಾರೆ. ಈ ಎರಡೂ ರೀತಿಯ ಸಾವಿಗೆ ಸರಕಾರವೇ ನೇರ ಕಾರಣ.
೧೯೬೦ಕ್ಕಿಂತ ಹಿಂದೆ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದುಳಿದಿದ್ದಾಗ ಅದನ್ನು ಸರಿದೂಗಿಸುವ ಸಲುವಾಗಿ ಕೇಂದ್ರ ಸರಕಾರ ಸ್ವಾಮಿನಾಥನ್ ಆಯೋಗವನ್ನು ರಚಿಸಿ, ಕೃಷಿ ನೀತಿಯನ್ನು ಬದಲಿಸಲು ಪ್ರಯತ್ನಿಸಿತು. ರೈತರು ತಮ್ಮ ಜಮೀನುಗಳಲ್ಲಿ ಉತ್ತಮ ಹಾಗೂ ಅತ್ಯಕ ಬೆಳೆ ಬೆಳೆಯಬೇಕಾದರೆ ಐರೋಪ್ಯ ರಾಷ್ಟ್ರಗಳಂತೆ ಆಧುನಿಕ ಕೃಷಿ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಪ್ರಚಾರ ಮಾಡಿ, ರೈತರನ್ನು ದಿಕ್ಕು ತಪ್ಪಿಸಲಾಯಿತು.
ಆದರೆ ಆಧುನಿಕ ನೀತಿಯಿಂದ ಅಡ್ಡ ಪರಿಣಾಮಗಳಾಗಬಹುದು, ಮುಂದೊಂದು ದಿನ ಇಂಥ ಸ್ಥಿತಿ ತಲುಪುತ್ತೇವೆ ಎಂಬ ಭಯವಾಗಲಿ, ವಿಚಾರಶೀಲತೆ, ವಿವೇಕವಾಗಲಿ ಆಗ ಅಂದಿನ ಸಚಿವರಿಗಾಗಲಿ, ಅಕಾರಿಗಳಿಗಾಗಲಿ ಇರಲಿಲ್ಲ. ಅದರ ಫಲವಾಗಿ ಉಂಟಾಗಿದ್ದೇ ‘ಹಸಿರುಕ್ರಾಂತಿ’. ಆಗ ರಸಗೊಬ್ಬರ ಬಳಕೆ ಅತಿಯಾಗದಂತೆ ಮತ್ತು ಇದರ ಬಳಕೆಯಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಯಾರೊಬ್ಬರೂ ಯೋಚಿಸಲಿಲ್ಲ. ಸರಕಾರ ಕೂಡ ಅದರ ಬಗ್ಗೆ ಜನಜಾಗೃತಿ ಮೂಡಿಸಲಿಲ್ಲ. ಅದರ ಪ್ರತಿಫಲಗಳೇ ಇಂದಿನ ರೋದನಗಳು...
ಜಾಗತೀಕರಣದ ಹೆಸರಿನಲ್ಲಿ ಕಾಲಿಟ್ಟ ಆಧುನಿಕ ನೀತಿಗೆ ದೇಶದ ರೈತರು ಮೊರೆ ಹೋಗಿ ತಮ್ಮ ಮೂಲ ಪದ್ಧತಿಯನ್ನೇ ಮೂಲೆಗುಂಪು ಮಾಡಿದರು. ಸರಕಾರಗಳ ಮೇಲೆ ನಂಬಿಕೆ ಇಟ್ಟ ಅನ್ನದಾತ ಇಂದು ದೇಶಕ್ಕಿರಲಿ, ತನಗೇ ಅನ್ನವಿಲ್ಲದೆ ಪರದಾಡುವಂತಾಗಿದೆ. ನಮ್ಮ ಸರಕಾರಗಳು ಆ ಮಟ್ಟಿಗೆ ರೈತರನ್ನು ಹಾದಿ ತಪ್ಪಿಸಿ, ಆಟ ಆಡುತ್ತಿವೆ.
ಸ್ವಾತಂತ್ರ್ಯ ಬಂದು ೬೦ ವರ್ಷಗಳಾದರೂ ಕೇಂದ್ರ ಹಾಗೂ ರಾಜ್ಯಗಳಲ್ಲಿ ಕೃಷಿ ಬಗ್ಗೆ ಪರಿಣತಿ ಪಡೆದ ಒಬ್ಬರೇ ಒಬ್ಬರು ಕೂಡ ಮಂತ್ರಿಗಳಾಗಲಿಲ್ಲ. ಮಂತ್ರಿಗಳಾದ ಮಹನೀಯರಿಗೆ ಕೃಷಿಯ ವಾಸ್ತವ ಸ್ಥಿತಿ ಗೊತ್ತಿರಲಿಲ್ಲ, ಕೊನೆಪಕ್ಷ ತಿಳಿದುಕೊಳ್ಳುವ ಪ್ರಯತ್ನ ಕೂಡ ಆಗಲಿಲ್ಲ. ಅದರ ಫಲವಾಗಿ ಇಂದು ರೈತ ವಿಷ ಕುಡಿಯುವ, ನೇಣಿಗೆ ಕೊರಳೊಡ್ಡುವ ದಾರಿ ಹಿಡಿಯುತ್ತಿದ್ದಾನೆ. ಆಗಾಗ ತಾಳ್ಮೆ ಕಳೆದುಕೊಂಡು ‘ಗುಂಡಿಗೆ’ ಬಲಿಯಾಗುತ್ತಿದ್ದಾನೆ.
ರೈತರ ಬದುಕು ಬೀದಿಗೆ ಬಿದ್ದು ಈ ರೀತಿ ಮಾಧ್ಯಮಗಳಲ್ಲಿ ಸುದ್ದಿಯಾದಾಗಲೆಲ್ಲ ಜನಪ್ರತಿನಿಗಳು, ಬುದ್ಧಿಜೀವಿಗಳು, ಪ್ರಗತಿಪರ ಕೃಷಿಕರು ಸಾವಯವ ಕೃಷಿಯ ಬಗ್ಗೆ ಮಾತನಾಡುತ್ತಾರೆ !
ನಮ್ಮ ರೈತರಲ್ಲಿ ಮಳೆಯನ್ನು ಕಂಡು ಬೆಳೆ ಬೆಳೆಯುವವರೆ ಹೆಚ್ಚು . ಮೇಲಾಗಿ ಈ ರೈತರು ಈಗಾಗಲೇ ಶೇ.೧೭೦ರಷ್ಟು ರಸಗೊಬ್ಬರ ಬಳಕೆಯನ್ನೇ ಮುಂದುವರಿಸಿದ್ದಾರೆ. ರಸಗೊಬ್ಬರ ಹಾಕಿದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯ ಎಂಬ ಅನಿವಾರ್ಯ ಸ್ಥಿತಿ ತಲುಪಿದ್ದಾರೆ. ಇದರಿಂದ ಭೂಮಿಯಲ್ಲಿರುವ ಸೂಕ್ಷ್ಮಜೀವಿಗಳು ಶೇ.೭೫ರಷ್ಟು ನಾಶವಾಗಿವೆ ! ಹೀಗಾಗಿ ರಸಗೊಬ್ಬರ ಬೇಕೆ ಬೇಕು...
ಬೆಳೆ ಬೆಳೆಯುವ ನಮ್ಮ ಜನರಿಗೆ ಸುಲಭವಾಗಿ ಸಿಕ್ಕುವುದು ಕೊಟ್ಟಿಗೆ ಅಥವಾ ತಿಪ್ಪೆಗೊಬ್ಬರ. ಸೆಗಣಿಗೆ ಸಾಕಷ್ಟು ದಿನಗಳ ವರೆಗೆ ತೇವಾಂಶವನ್ನು ಹಿಡಿದಿಡುವ ಶಕ್ತಿ ಇದೆ. ಅದೇ ಕಾರಣಕ್ಕೆ ರೈತನಿಗೆ ಇದೇ ಜೀವಾಳ. ಯಾವುದೇ ಗ್ರಾಮೀಣ ಪ್ರದೇಶಗಳಿಗೆ ಹೋದರೂ ಅಲ್ಲಿ ದನ, ಕರು, ಕುರಿಗಳನ್ನು ಸಾಕುವ ರೈತರು ಊರ ಹೊರಗಡೆ ಸೆಗಣಿ, ಗಂಜಲ, ಹಸುಗಳು ತಿಂದು ಬಿಟ್ಟ ಹುಲ್ಲನ್ನು ಪ್ರತಿನಿತ್ಯವೂ ತಿಪ್ಪೆಗೆ ಹಾಕಿ ವರ್ಷಕ್ಕೆ ಒಮ್ಮೆ ಇದನ್ನು ಹೊಲಗಳಿಗೆ ಸಾಗಿಸುತ್ತಾರೆ. ಆದರೂ ಜತೆಗೆ ರಸಗೊಬ್ಬರ ಬಳಸುತ್ತಿದ್ದಾರೆ.
ರೈತರಿಗೀಗ ಬೇಕಿರುವುದು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಹೇಳುವ ‘ಕೃಷಿ ಪಾಠ ’ ವಲ್ಲ ; ರಾಜಕಾರಣಿಗಳ ಭರವಸೆಗಳ ‘ನುಡಿಮುತ್ತು’ಗಳೂ ಅಲ್ಲ. ‘ಪ್ರಗತಿಪರ ರೈತ’ರೆನಿಸಿಕೊಂಡಿರುವ ‘ಶ್ರೀಮಂತ ರೈತ ’ರ ಭೂಧನೆಗಳೂ ಅಲ್ಲ. ಬದಲಿಗೆ ವಾಸ್ತವ ಕೃಷಿ ದೇಸಿ ಕೃಷಿ ...
ಹೌದು, ನಾವು ಹೇಳುವ ಮಾತಿಗೂ ವಾಸ್ತವ ಕೃಷಿಗೂ ಅಜಗಜಾಂತರ ವ್ಯತ್ಯಾಸವಿದೆ. ಆ ಕಾರಣಕ್ಕೇ ರೈತರು ಇದೂವರೆಗೂ ಉದ್ಧಾರವಾಗಿಲ್ಲ. ಮಳೆ ನೋಡಿ ಬೆಳೆ ಬೆಳೆಯುವ ರೈತರು ನೇರವಾಗಿ ಸಾವಯವ ಕೃಷಿಗೆ ಮುಂದಾಗದೆ ಕೈಸುಟ್ಟುಕೊಂಡು ಬೆಳೆ ಬರುವುದಕ್ಕಿಂತ ಮುಂಚಿತವಾಗಿಯೇ ಬೀದಿಗೆ ಬೀಳುತ್ತಾರೆ. ಆ ಕಾರಣಕ್ಕೇ ಎಲ್ಲರೂ ಹಿಂದೆ ಮುಂದೆ ನೋಡುವುದು. ಏಕ ಕಾಲಕ್ಕೆ ಸಾವಯವ ಕೃಷಿಗೆ ಕೈ ಹಾಕುವುದು ‘ಪುಸ್ತಕದ ಬದನೆಕಾಯಿ’ ಯನ್ನು ಸಾಂಬಾರು ಮಾಡಿದಂತೆ !!
ರೈತರ ಹೊಲ ಗದ್ದೆಗಳೀಗ ಹತ್ತಾರು ವರ್ಷಗಳ ಹಿಂದೆ ಹೈಟೆಕ್ ಸಿಟಿಗಳಿಗೆ ಸೇರಿದ ಕುಟುಂಬದಂತಾಗಿದೆ. ಆಧುನಿಕ ನಗರದಲ್ಲಿ ಬೆಳೆದ ಮಕ್ಕಳು ಸದಾ ಪಿಜಾ, ಬರ್ಗರ್, ಐಸ್‌ಕ್ರೀಮ್ ಹಾಗೂ ಫಾಸ್ಟ್ ಫುಡ್ ತಿಂದು ಬೆಳೆದಿರುತ್ತಾರೆ. ನೈಜ ಉಪ್ಪು , ಹುಳಿ, ಖಾರದ ರುಚಿ ಹಾಗೂ ಅವುಗಳಿಂದ ಆರೋಗ್ಯಕ್ಕಾಗುವ ಲಾಭಗಳೇ ಅವರಿಗೆ ಗೊತ್ತಿರುವುದಿಲ್ಲ. ಅವರಿಗೆ ಏಕಾಏಕಿ ಒಣ ಜೋಳದ ರೊಟ್ಟಿ, ಖಾರದ ಚಟ್ನಿ ಕೊಟ್ಟು ‘ತಿನ್ನು ’ ಎಂದರೆ ಹೇಗೆ ಸಾಧ್ಯ ?
ರೊಟ್ಟಿ ಚಟ್ನಿ ಅಗೆದು ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ಜತೆಗೆ ಮುಖದ ಸ್ನಾಯುಗಳ ವ್ಯಾಯಾಮಕ್ಕೂ ಅದು ಸಹಕಾರಿ ಎನ್ನುವುದು ಗೊತ್ತು. ಅದನ್ನೇ ತಿಂದು ಬದುಕುತ್ತಿದ್ದ ಹಿಂದಿನವರೂ ಆರೋಗ್ಯವಂತವಾಗಿದ್ದರು ; ಹೆಚ್ಚು ಕಾಲ ಬದುಕುತ್ತಿದ್ದರು ಎಂಬುದನ್ನು ಅವರು ಅರಿತಿರುತ್ತಾರೆ. ಆದರೆ ಏಕಾಏಕಿ ಅದನ್ನೇ ತಿಂದು ಬದುಕಬೇಕು ಎಂದು ಹೇಳಿದರೆ ಹೇಗಾಗುತ್ತದೆ ಯೋಚಿಸಿ. ಅದೇ ಸ್ಥಿತಿ ಈಗ ರೈತರ ಭೂಮಿಯದ್ದಾಗಿದೆ.
ಸಾವಯವ ಕೃಷಿ ನಡೆಸಬೇಕಾದರೆ ಸ್ವಲ್ಪವಾದರೂ ನೀರು ಬೇಕು. ಮೂಲ ಸೌಕರ್ಯ ಬೇಕು. ಕುಡಿಯಲು ನೀರಿಲ್ಲದೆ ಪ್ರತಿನಿತ್ಯ ಪರಿತಪಿಸುವ ರೈತರು ಹೇಗೋ ಬದುಕು ಸಾಗಿಸುತ್ತಾರೆ. ಅಂಥದರಲ್ಲಿ ಸಾವಯವ ಕೃಷಿ ಮಾಡುವುದಾದರೂ ಎಲ್ಲಿಂದ ? ಅವರಿಗೆ ಗೊತ್ತಿರುವುದು ಒಂದೇ, ಕೊಟ್ಟಿಗೆ ಗೊಬ್ಬರ ಬಳಸಿ ರೈತಾಪಿ ಮಾಡುವುದು. ಹಿಂದೆ ಮಾಡುತ್ತಿದ್ದುದೂ ಇದೆ. ಆದರೆ ಜಾಗತೀಕರಣದ ಕುತಂತ್ರ ಹಾಗೂ ಸರಕಾರಗಳ ದೂರಾಲೋಚನೆಯ ಕೊರತೆಯಿಂದ ರೈತರು ಇಂದು ಬಲಿಪಶುಗಳಾಗಿ ಕೊನೆಯುಸಿರೆಳೆಯಬೇಕಾಗಿದೆ.
ನಮ್ಮ ಭೂಮಿಯಲ್ಲಿ ಈಗ ನೀರಿನ ಅಂಶ ಕೂಡ ಇಲ್ಲದಾಗಿದೆ. ಮಳೆಯ ನೀರು ಜಮೀನುಗಳಲ್ಲಿಯೇ ಇಂಗಿಸುವ ಕೆಲಸ ಮೊದಲು ಆಗಬೇಕು. ಅದೂ ಸಣ್ಣ ಸಣ್ಣ ಪ್ರಮಾಣದಲ್ಲಿ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ. ಜತೆಗೆ ಹಳೆಯ ದೇಸೀ ಕೃಷಿ ನೀತಿಯನ್ನು ಪುನಃ ಮುಂದುವರಿಸುವಂತೆ ವಾಸ್ತವ ಪ್ರಾತ್ಯಕ್ಷಿಕೆಯ ಮೂಲಕ ಜನ ಜಾಗೃತಿ ಮೂಡಿಸಬೇಕು .
ಇಲ್ಲಿ ಅರ್ಧ ಗುಂಟೆಯಿಂದ ೩ ಎಕರೆ ಒಳಗಡೆಯೇ ಜಮೀನು ಹೊಂದಿರುವ ಸಣ್ಣ ರೈತರೇ ಹೆಚ್ಚು. ಅವರಿಗೆ ಯಾವುದೇ ಬೋರ್‌ವೆಲ್‌ಗಳಿರುವುದಿಲ್ಲ. ಕೆರೆ ಕಟ್ಟೆಗಳ ಸೌಲಭ್ಯವೂ ಇಲ್ಲ. ಆದ್ದರಿಂದ ಶ್ರೀಮಂತ ರೈತರಿಗೆ ಹಾಗೂ ಬೋರ್‌ವೆಲ್ ಹೊಂದಿರುವ ರೈತರಿಗೆ ಮಾಹಿತಿ ನೀಡುವ ಬದಲು ಬಡ ಹಾಗೂ ಸಣ್ಣ ರೈತರಿಗೆ ಸಮಗ್ರ ಮಾಹಿತಿ ನೀಡಿ, ಜನಾಂದೋಲನದ ರೀತಿ ಸರಕಾರ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಬೇಕು. ಅದು ಕೇವಲ ಒಂದು ವರ್ಷವಲ್ಲ. ನಿರಂತರವಾಗಿ... ಇದರಿಂದ ಎಲ್ಲೆಡೆ ಭೂಮಿಯ ಆಳದಲ್ಲಿ ನೀರು ಶೇಖರಣೆಯಾಗುತ್ತದೆ. ಭೂಮಿ ತನ್ನ ಸತ್ವ ಗಳಿಸಿಕೊಳ್ಳುತ್ತದೆ. ಆಗ ಮಾತ್ರ ಸಾವಯವ ಕೃಷಿ ನೀತಿಯನ್ನು ಅಳವಡಿಸಬಹುದು.
ರಸಗೊಬ್ಬರಗಳಿಗೆ ಒಗ್ಗಿ ಹೋಗಿರುವ ನೆಲ ಈಗ ಮತ್ತೆ ಹಳೆ ರೀತಿಯಲ್ಲಿ ಹೊಂದಿಕೊಳ್ಳಬೇಕಾದಲ್ಲಿ ಕನಿಷ್ಠ ೩೦ ವರ್ಷಗಳು ಬೇಕು ! ಅದನ್ನು ಮೊದಲು ಸರಕಾರ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ನೀರು ಇಂಗಿಸುವ ಹಾಗೂ ಸಹಜ ಕೃಷಿಯನ್ನು ಕಾರ್ಯರೂಪಗೊಳಿಸುವ ಕೆಲಸ ಸರಕಾರದ ನೇತೃತ್ವದಲ್ಲಿಯೇ ನಡೆಯಬೇಕು. ಆಗ ಮಾತ್ರ ರೈತರು ಈ ರಸಗೊಬ್ಬರ ಸಮಸ್ಯೆಯಿಂದ ದೂರ ಉಳಿಯಲು ಸಾಧ್ಯ. ದೇಸಿ ಕೃಷಿಯ ಅಳವಡಿಕೆ ಮೂಲಕ ರೈತರ ಬದುಕು ಹಸನಾದರೆ ಮತ್ತೆ ದೇಶ ತನ್ನತನವನ್ನು ಮೆರೆಯಲು ಸಾಧ್ಯ.

ದೀಪ್ತಿಯಾಗಲಿ ಎಲ್ಲರ ಬದುಕು...

ದೀವಳಿಗೆ ಹಬ್ಬ ದೀಪಾವಳಿ. ಹಳ್ಳಿ ಜನರಿಗೆ ಸುಗ್ಗಿ ಕಾಲ. ಎಷ್ಟೊಂದು ಅರ್ಥಪೂರ್ಣ ಹಬ್ಬ ಅಲ್ಲವೇ ? ವರ್ಷವಿಡೀ ಹೊಲದಲ್ಲಿ ಬಿಸಿಲು, ಮಳೆ ಎನ್ನದೆ ಬೆವರು ಸುರಿಸಿ ದುಡಿದ ರೈತನಿಗೆ ಬೆಳೆ ಬಂದ ಸಂತಸ ಆ ಮೂಲಕ ಆ ಇಡೀ ಕುಟುಂಬದ ಬಾಳಿನಲ್ಲಿ ಬೆಳಕು ಮೂಡುವ ಅಪೂರ್ವ ಕ್ಷಣ ಈ ಕಾರ್ತಿಕ ಮಾಸ...
ಹೆಚ್ಚುತ್ತಿರುವ ನಗರೀಕರಣ, ಪಾಶ್ಚಾತ್ಯೀಕರಣ, ಆಧುನಿಕತೆಯ ಸೋಗುಗಳು ಇಂದು ಈ ನೆಲದ ಸೊಗಡನ್ನು ಒಂದೊಂದಾಗಿ ನುಂಗಿ ನೀರು ಕುಡಿಯುತ್ತಿವೆ. ಆದರೆ ಎಲ್ಲೋ ಒಂದು ಮೂಲೆಯಲ್ಲಿ ಇನ್ನೂ ಆ ಸೊಗಡು ಉಳಿದಿದೆ. ಮತ್ತೆ ಚಿಗುರೊಡೆಯಲು ಹಪಹಪಿಸುತ್ತಿದೆ. ಆ ಸೊಗಡುಗಳಲ್ಲಿ ದೀಪಾವಳಿ ಹಬ್ಬ ಕೂಡ ಒಂದು. ನಗರ ಪ್ರದೇಶಗಳಲ್ಲಿ ದೀವಳಿಗೆಯನ್ನು ಕೇವಲ ಪಟಾಕಿ ಸಿಡಿಸಿ, ಕಿವಿಗಡುಚಿಕ್ಕುವಂತೆ ಶಬ್ದ ಬರಿಸಿ ಸಂಭ್ರಮಿಸುವ ಸಂಪ್ರದಾಯ ಬೆಳೆದು ಬರುತ್ತಿದೆ.
ಆದರೆ ಹಳ್ಳಿಗಳಲ್ಲಿ ಹಾಗಿಲ್ಲ. ದೀಪಾವಳಿಗೆ ವಿಶೇಷ ಆದ್ಯತೆ . ಈ ಹಬ್ಬಕ್ಕೆ ಕೇವಲ ಮನೆ ಅಂಗಳದಲ್ಲಿ ಮಾತ್ರ ದೀಪ ಹಚ್ಚುವುದಿಲ್ಲ. ಮನದ ಅಂಗಳದಲ್ಲೂ ದೀಪ ಬೆಳಗಿಸುತ್ತದೆ. ಅದು ನಂದಾದೀಪವಾಗಲಿ ಎಂದು ಎಲ್ಲರೂ ಹಾರೈಸುತ್ತಾರೆ.
ಈ ದೀಪಾವಳಿಗೆ ಹಳ್ಳಿಗಳಲ್ಲಿ ಕೆಲವು ಕಡೆ ‘ಹಟ್ಟಿಹಬ್ಬ ’ ಎಂಥಲೂ ಕರೆಯುವುದುಂಟು. ಏಕೆಂದರೆ ಹಳ್ಳಿಗಳಲ್ಲಿ ರೈತರ ಬದುಕು ಹಸನಾಗಲು ದನಕರುಗಳು ಬೇಕೇ ಬೇಕು. ಆಧುನಿಕತೆ ಎಷ್ಟೇ ಮುಂದುವರಿದರೂ ಅವರ ಬದುಕು ಅವುಗಳ ಮೇಲೆಯೇ ಅವಲಂಬಿತವಾಗಿರುತ್ತದೆ . ದನಕರುಗಳ ವಾಸ ಸ್ಥಾನ ಹಟ್ಟಿ ಅಥವಾ ಕೊಟ್ಟಿಗೆ. ಹೀಗಾಗಿ ಅದು ಚೆನ್ನಾಗಿದ್ದರೆ ದನಕರುಗಳು ಚೆನ್ನಾಗಿರುತ್ತವೆ. ದನಕರುಗಳು ಚೆನ್ನಾಗಿದ್ದರೆ ನಾವೆಲ್ಲಾ ಚೆನ್ನಾಗಿರುತ್ತೇವೆ ಎನ್ನುವುದು ಗ್ರಾಮೀಣ ಪ್ರದೇಶದ ಜನರ ನಂಬಿಕೆ.
ಹಟ್ಟಿ ಪೂಜೆ :
ಅಮಾವಾಸ್ಯೆಯ ದಿನ ಹಳ್ಳಿಗಳಲ್ಲಿ ತಮ್ಮ ಮನೆಯನ್ನು ಒಪ್ಪ ಓರಣವಾಗಿ ಮಾಡುತ್ತಾರೆ. ಸುಣ್ಣ, ಬಣ್ಣ ಬಳಿಯುತ್ತಾರೆ. ಮನೆಯ ನೆಲ ಹಾಗೂ ಹಟ್ಟಿಯನ್ನು ಸಾರಿಸಿ ರಂಗೋಲಿ ಹಾಕುತ್ತಾರೆ. ಬೆಳಗ್ಗೆಯೇ ದನಕರುಗಳಿಗೆ ಸ್ನಾನ ಮಾಡಿಸಿ ಅವುಗಳಿಗೆ ‘ಗುಲ್ಲು ’ ಕೊಡುತ್ತಾರೆ . ಇದು ಕೇವಲ ದನಕರುಗಳಿಗೆ ಮಾತ್ರವಲ್ಲ ಮಕ್ಕಳಿಗೆ ನಡೆಯುತ್ತದೆ. ಆದರೆ ಅವರಿಗೆ ಊದುಬತ್ತಿಯಲ್ಲಿ ಗುಲ್ಲು ಕೊಡುತ್ತಾರೆ. ಈ ಗುಲ್ಲು ಕೊಡುವುದರಿಂದ ಯಾವುದೇ ರೋಗರುಜಿನಗಳು ಬರುವುದಿಲ್ಲ ಎಂಬುದು ಹಳ್ಳಿಗರ ನಂಬಿಕೆ.
ಯುವತಿಯರು ರಂಗೋಲಿ ಇಡುವುದರಲ್ಲಿ ಮನೆಯನ್ನು ಶೃಂಗಾರಗೊಳಿಸುವುದರಲ್ಲಿ ನಿರತರಾಗಿ ಸಂಭ್ರಮಪಟ್ಟರೆ , ಯುವಕರು ಎತ್ತುಗಳಿಗೆ ಮೈ ತೊಳೆದು ಅವುಗಳನ್ನು ಸಿಂಗರಿಸಿ, ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ , ಟೇಪು , ಕೊಬ್ಬರಿ ಕಟ್ಟಿ ಖುಷಿ ಅನುಭವಿಸುತ್ತಾರೆ. ಅದಕ್ಕೂ ಮುಂಚೆ ನೇಗಿಲು, ನೊಗ, ಎತ್ತಿನ ಗಾಡಿ, ಕೊರಡು, ಕುಂಟೆಗಳೆಲ್ಲವನ್ನೂ ತೊಳೆದು ಅವುಗಳಿಗೆ ಸುಣ್ಣ ಹಾಗೂ ಕೆಮ್ಮಣ್ಣುವಿನಿಂದ ಗುಲ್ಲು ಇಡುತ್ತಾರೆ. ಮನೆಯಲ್ಲಿ ಇರುವ ಆಯುಧಗಳನ್ನು ಹಾಗೂ ಯಂತ್ರಗಳನ್ನು ತೊಳೆದು ಪೂಜೆ ಮಾಡುತ್ತಾರೆ. ಅದೇ ಲಕ್ಷ್ಮೀ ಪೂಜೆ.
ವರ್ಷವಿಡೀ ದುಡಿದ ರೈತನಿಗೆ ಕೆಲವೊಮ್ಮೆ ಬೆಳೆ ಮಾರಿದ ಹಣ ಕೂಡ ಬಂದಿರುತ್ತದೆ. ಆಗ ನಿಜಕ್ಕೂ ಲಕ್ಷ್ಮೀ ಪೂಜೆ. ಆಯುಧಗಳ ಜತೆಗೆ ಹಣವನ್ನೂ ಇಟ್ಟು ಕೆಲವೆಡೆ ಪೂಜೆ ಮಾಡುತ್ತಾರೆ.
ಬಲಿಪಾಡ್ಯಮಿಯ ದಿನ ನಿಜಕ್ಕೂ ಹಟ್ಟಿ ಹಬ್ಬ ಅಥವಾ ದೀಪಾವಳಿ. ಬೆಳಗ್ಗೆಯೇ ಮನೆ ಹಾಗೂ ಹಟ್ಟಿ ಹಸಿರು ಮಾವಿನ ತೋರಣಗಳಿಂದ ಸಿಂಗಾರಗೊಂಡಿರುತ್ತದೆ. ಅದನ್ನು ನೋಡಲು ಎರಡು ಕಣ್ಣುಗಳು ಸಾಲವು. ಬೆಳಗ್ಗೆ ಎದ್ದು ಮಹಿಳೆಯರು ಸೆಗಣಿಯಿಂದಲೇ ಕೊಟ್ಟಿಗೆಯಲ್ಲಿ ‘ಹಟ್ಟಿ ’ ( ನವ ದೇವತೆಗಳಿಗಾಗಿ ಒಂಬತ್ತು ಮನೆಯ ಒಂದು ಆವಾಸ ಸ್ಥಾನ ) ಹಾಕುತ್ತಾರೆ .
ಹೋಳಿಗೆ , ಅಕ್ಕಿ ಹುಗ್ಗಿ, ತರ ತರನಾದ ಪಲ್ಯೆ, ಅನ್ನ , ಸಾಂಬಾರು ಮಾಡಿ, ಮನೆ ದೇವರಿಗೆ ನೈವೇದ್ಯ ಮಾಡುತ್ತಾರೆ. ಅನಂತರ ಸೆಗಣಿಯಲ್ಲಿ ಗುಪ್ಪೆಗಳನ್ನು ( ಗುರುಜವ್ವ ದೇವತೆ) ಮಾಡಿ ನಮೆಯ ಎಲ್ಲ ಬಾಗಿಲುಗಳಿಗೆ ಎರಡೆರಡು ಇಡುತ್ತಾರೆ. (ಇದು ದುಷ್ಟ ಶಕ್ತಿಯನ್ನು ಮನೆಯೊಳಗೆ ಬಿಡದಂತೆ ಕಾಪಾಡುವ ಶಕ್ತಿ ಹೊಂದಿದೆ ಎಂಬುದು ಅವರ ನಂಬಿಕೆ.) ನಂತರ ಹಟ್ಟಿಯ ಒಂಬತ್ತು ಕೋಣೆಗಳಿಗೆ ಒಂದೊಂದು ರೀತಿಯ ಬಣ್ಣ ಬಳಿದು, ಅದನ್ನು ಚೆಂಡು ಹೂವು, ಉತ್ರಾಣಿ ಕಡ್ಡಿ, ಅಣ್ಣಿ ಹೂವು, ಗೇರು ಬೀಜ, ಬತ್ತದ ಗರಿ, ಬಾಮ್‌ದಂಡಿ, ಕಬ್ಬು, ಗರಿಕೆ ಹುಲ್ಲು, ಮುಂತಾದ ಹಟ್ಟಿಗೆ ಪ್ರಿಯವಾದ ಹೂವು ಹಣ್ಣುಗಳಿಂದ ಸಿಂಗರಿಸುತ್ತಾರೆ. ನಂತರ ಒಂದು ಮಣ್ಣಿನ ಮಡಕೆಯಲ್ಲಿ ನೀರು ತುಂಬಿ ಅದಕ್ಕೆ ಸೀರೆ, ಅಥವಾ ರವಿಕೆ ಬಟ್ಟೆಯನ್ನು ಹೊದಿಸಿ, ತಾಳಿ ಹಾಕಿ ವಿಶಿಷ್ಟವಾಗಿ ಪೂಜೆ ಮಾಡುತ್ತಾರೆ. ಮನೆಯವರೆಲ್ಲಾ ಪೂಜೆ ಮಾಡಿದ ಬಳಿಕ ಕೃಷಿ ಸಲಕರಣೆಗಳಾದ ನೇಗಿಲು, ನೊಗ, ಎತ್ತಿನ ಗಾಡಿ, ಕುಂಟೆ, ಕೊರಡುಗಳಿಗೂ ಪೂಜೆ ಮಾಡುತ್ತಾರೆ.
ಇದೆಲ್ಲವೂ ಆದ ಮೇಲೆ ಎತ್ತುಗಳಿಗೆ ಹಸುಗಳಿಗೆ ಪೂಜೆ. ಎತ್ತುಗಳನ್ನು ಅಂದು ಕೊಟ್ಟಿಗೆಗೆ ತಂದು ಅವುಗಳಿಗೆ ಪೂಜೆ ಮಾಡಿದ, ನೈವೇದ್ಯ ಮಾಡಿದ ನಂತರ ಮನೆಯವರಿಗೆ ಊಟ...
ಹಬ್ಬ ಇಲ್ಲಿಗೇ ಮುಗಿಯುವುದಿಲ್ಲ ; ನಿಜವಾದ ಹಬ್ಬ ಶುರುವಾಗುವುದೇ ಈಗ...
ದನ ಬೆದರಿಸುವುದು....
ದೀಪಾವಳಿಯು ಬಹು ಮುಖ್ಯವಾಗಿ ರಂಗು ಪಡೆಯುವುದೇ ಮಧ್ಯಾಹ್ನದ ಮೇಲೆ. ಹೌದು, ಬೆದರುವ ಎತ್ತುಗಳನ್ನು ಚೆನ್ನಾಗಿ ಸಿಂಗರಿಸಿ, ಅವುಗಳನ್ನು ಊರ ಅಗಸಿ ಬಾಗಿಲಿನಲ್ಲಿ ಜನರ ಮಧ್ಯೆ ತಂದು ಬಿಡುತ್ತಾರೆ. ಅದಕ್ಕೂ ಮುನ್ನ ಅವುಗಳಿಗೆ ಕೊಬ್ಬರಿ ( ಕೆಲವೆಡೆ ಗಿಟಗ ಎನ್ನುತ್ತಾರೆ) ಸರ ಕಟ್ಟುತ್ತಾರೆ. ಅವುಗಳನ್ನು ಪಡ್ಡೆ ಹುಡುಗರು ಹಿಡಿದು ಕಿತ್ತುಕೊಳ್ಳಬೇಕು( ಕೆಲವೆಡೆ ಇದಕ್ಕೆ ಬಹುಮಾನವೂ ಇರುತ್ತದೆ.).
ಇದನ್ನು ನೋಡುವುದೇ ಹಳ್ಳಿಯ ಜನರಿಗೆ ಒಂದು ಸಂಭ್ರಮ. ಆ ದಿನ ಮಹಿಳೆಯರು, ಮಕ್ಕಳು ವೃದ್ಧರು ಎನ್ನದೇ ಎಲ್ಲರೂ ಅಗಸಿ ಬಾಗಿಲಿನಲ್ಲಿ ನಿಲ್ಲುತ್ತಾರೆ. ಹಬ್ಬವನ್ನು ಮನಸ್ಪೂರ್ವಕವಾಗಿ ಸವಿಯುತ್ತಾರೆ.
ಒಂದೊಂದು ಹೋರಿ ಒಂದೊಂದು ರೀತಿ ಅಂದು ತನ್ನ ತಾಕತ್ತು ಹಾಗೂ ಚಾಕಚಕ್ಯತೆ ಪ್ರದರ್ಶನ ಮಾಡುತ್ತದೆ. ಹೆಚ್ಚು ಸಾರಿ ಜನರ ಮಧ್ಯೆ ಕೊಬ್ಬರಿ ಕಿತ್ತುಕೊಳ್ಳಲು ಅವಕಾಶ ನೀಡದೇ ತಪ್ಪಿಸಿಕೊಂಡು ಬರುವ ಎತ್ತಿಗೆ ಅಂದು ಬಹುಮಾನ. ಅವರ ಮನೆಯವರಿಗೆ ಸಗ್ಗದ ಸಿರಿ. ನಿಜಕ್ಕೂ ಅದು ರೋಮಾಂಚನ. ಇಲ್ಲಿ ಕೆಲವೊಮ್ಮೆ ಅವಘಡಗಳೂ ಸಂಭವಿಸುವ ಸಾಧ್ಯತೆ ಇರುತ್ತದೆ. ಆದರೆ ಆ ಸಂಭ್ರಮದ ನಡುವೆ ಅದೆಲ್ಲವೂ ನಗಣ್ಯ...
ಅದಕ್ಕಾಗಿಯೇ ಇಡೀ ಊರಿನ ಎಲ್ಲ ಮನೆಯಿಂದಲೂ ಹಣ ಸಂಗ್ರಹಿಸಿ ಊರಿನ ಮುಂಭಾಗವನ್ನು ಸಿಂಗಾರ ಮಾಡಿರುತ್ತಾರೆ. ಮೈಕು ಹಾಕಿರುತ್ತಾರೆ. ಹೀಗಾಗಿ ಎಲ್ಲ ಜಾತಿ ಮತ, ಭೇದಗಳನ್ನೂ ಮರೆತು ಸಾಮರಸ್ಯದಿಂದ ಹಬ್ಬ ಆಚರಿಸುತ್ತಾರೆ.
ದೀಪದಿಂದ ದೀಪವ...:
ಸಂಜೆಯಾಗುತ್ತಿದ್ದಂತೆಯೇ ಮಕ್ಕಳಿಗೆ ಸಂಭ್ರಮ. ಹೊತ್ತು ಮುಳುಗುವ ಮುನ್ನವೇ ಪಂಜುಗಳನ್ನು ಹೊತ್ತಿಸುತ್ತಾರೆ ಮಕ್ಕಳು. ಇವು ಒಂದು ತಿಂಗಳ ಮುಂಚೆಯೇ ತಯಾರಾಗಿರುತ್ತವೆ. ಮುತ್ತುಗದ ಮರದಿಂದ ಇವುಗಳನ್ನು ತಯಾರಿಸಿ, ಅವುಗಳನ್ನು ಒಂದು ತಿಂಗಳ ಕಾಲ ಬಿಸಿಲಿನಲ್ಲಿ ಒಣಗಿಸಿರುತ್ತಾರೆ. ಹೀಗಾಗಿ ಅದು ಬೆಂಕಿ ಹೊತ್ತಿಕೊಂಡ ಕ್ಷಣವೇ ಪ್ರಾಂಜಲವಾಗಿ ಉರಿಯುತ್ತದೆ.
ಮಕ್ಕಳು ಊರ ಹೊರಗೆ ಇವುಗಳನ್ನು ಉರಿಸಿ ರಾತ್ರಿ ೧೦ ಗಂಟೆಯವರೆಗೆ ಸಂಭ್ರಮಿಸುತ್ತಾರೆ. ಇಲ್ಲಿ ಪಟಾಕಿ ಶಬ್ದವೇ ಇಲ್ಲ ! ನಿಜಕ್ಕೂ ಇದು ಇಲ್ಲಿ ಬೆಳಕಾಗುತ್ತದೆ. ಇತ್ತ ಮನೆಯ ಅಂಗಳದಲ್ಲಿ ಯುವತಿಯರು, ಮಹಿಳೆಯರು ದೀಪವನ್ನು ಬೆಳಗಿಸುತ್ತಾರೆ. ಎಲ್ಲರ ಮನೆಯಲ್ಲೂ ಅವುಗಳ ಜತೆಗೆ ಆಕಾಶ ಬುಟ್ಟಿ ಕೂಡ ಈಗ ಬೆಳಕು ಚೆಲ್ಲುತ್ತಿವೆ.
ಇದೆಲ್ಲ ಎಷ್ಟು ಅರ್ಥಪೂರ್ಣ ಅಲ್ಲವೇ ? ದೀಪಾವಳಿಯ ಹೆಸರಲ್ಲಿ ಕಿವಿ ಕಿತ್ತುಹೋಗುವಂತೆ ಪಟಾಕಿ ಸಿಡಿಸಿ, ಆಕಸ್ಮಿಕವಾಗಿ ಸುಟ್ಟುಕೊಂಡು ಆರ್ತನಾದ ಅನುಭವಿಸುವುದಕ್ಕಿಂತ ಹಳ್ಳಿಗರ ಈ ಅರ್ಥಪೂರ್ಣ ದೀವಳಿಗೆ ಎಷ್ಟು ಚೆಂದ ?
ನಿಜ, ಮನುಷ್ಯ ದೀಪದಿಂದ ದೀಪ ಹಚ್ಚಿ ಬೆಳಕು ನೀಡುವ ಕೆಲಸ ಮಾಡಬೇಕೇ ಹೊರತು ಬೆಂಕಿ ಮೈ ,ಮನಸುಗಳನ್ನು, ಸಿಡಿಸುವ ಕೆಲಸ ಮಾಡಬಾರದು... ಆಧುನಿಕತೆಯ ಮೋಜಿಗೆ ಬಲಿಯಾಗುವುದಕ್ಕಿಂತ ನಮ್ಮತನವನ್ನು ಎಲ್ಲೆಡೆ ಪಸರಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು.