Thursday, September 3, 2009

ಉಳ್ಳವರಿಗೆ ದೇವರು ಹತ್ತಿರವಂತೆ! ಹೌದಾ...?

ಇವತ್ತು ದೇವರ ಹೆಸರು ಹೇಳಿಕೊಂಡು ಅದೆಷ್ಟೋ ಮಂದಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ದೇವರಿದ್ದಾನೋ ಇಲ್ಲವೋ ಬೇರೆ ವಿಚಾರ, ಆದರೆ ಅವನ ಹೆಸರು ಹೇಳಿಕೊಂಡು ಬದುಕುವವರು ಮಾತ್ರ ‘ಸೊಂಪಾಗಿದ್ದಾರೆ’. ಮೊನ್ನೆ ಸಣ್ಣದೊಂದು ಪ್ರವಾಸಕ್ಕೆಂದು ಬೇರೆ ಕಡೆಗೆ ಹೋಗಿದ್ದೆ. ಆ ಸ್ಥಳದಲ್ಲಿ ಒಬ್ಬ ಆತ್ಮೀಯ ಗೆಳೆಯನಿದ್ದ. ಅವನ ಮನೆಗೆಂದು ಹೋದಾಗ ಅವನು ತನ್ನ ಹಬ್ಬದ ದಿನವಾಗಿದ್ದರಿಂದ ತನ್ನ ಎಳೆಯ ಮಕ್ಕಳಿಗೆ ಪ್ರಸಾದ ತರಬೇಕೆಂದು ಒಂದು ‘ಭವ್ಯ ದೇವಸ್ಥಾನ’ಕ್ಕೆ ಕರೆದುಕೊಂಡು ಹೋಗಿದ್ದ.
ದೇವರು ಎಂದರೆ ನನಗೆ ಮೊದಲಿನಿಂದಲೂ ದೂರ. ಆದರೆ ‘ಆ ದೇವಸ್ಥಾನದಲ್ಲಿ ಶೂದ್ರರೇ ಪೂಜೆ ಮಾಡ್ತಾರೆ. ಬೇಕಾದವರು ಪೂಜೆ ಮಾಡಿಸ್ಕೊಳ್ಳಬಹುದು, ಇಲ್ಲದಿದ್ರೆ ಸುಮ್ನೆ ದೇವಾಲಯ ಸುತ್ತಿಕೊಂಡು ಬರಬಹ್ದು, ದೇವಸ್ಥಾನದ ಸುತ್ತ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗಿದೆ. ಅಲ್ಲಿ ಕೊಳ ಇದೆ, ಸುಂದರ ಪಾರ್ಕ್ ಇದೆ’ ಎಂದು ಅವನು ತಿಳಿಸಿದ. ಜತೆಗೆ ಆ ದೇವಸ್ಥಾನದಿಂದ ಮಕ್ಕಳಿಗೆ ಪ್ರಸಾದ ತರಬೇಕೆಂಬುದು ಅವನ ತಾಯಿಯ ಒತ್ತಾಸೆ ಕೂಡ ಆಗಿತ್ತು. ಆದ್ದರಿಂದ ಅವನು ಹೋಗಲೇಬೇಕಿತ್ತು. ಅವನ ಒತ್ತಾಯ ಹಾಗೂ ಆತ ಹೇಳಿದ ಕೆಲವು ಮಾತುಗಳಿಂದ ಕುತೂಹಲ ಶುರುವಾಯಿತು. ಸರಿ ಇಬ್ಬರೂ ಹೋದೆವು.
ದೇವಸ್ಥಾನದಲ್ಲಿ ಮಕ್ಕ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಲು ಅವನು ರಶೀದಿ ಖರೀದಿಸಿದ. ಆರಂಭದಲ್ಲೇ ಅವನು ಹೇಳಿದ ಮಾತು ಅಲ್ಲಿ ಸುಳ್ಳಾಗಿತ್ತು. ಅಷ್ಟೆಲ್ಲಾ ಹೇಳಿದ ಅವನೇ ಹೋಗಿ ಹಣ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದ. ದೇವಸ್ಥಾನ ಸುಂದರ ಹಾಗೂ ಪ್ರಶಾಂತವಾಗಿದ್ದರಿಂದ ಸ್ವಲ್ಪ ಸುತ್ತಾಡುತ್ತಿದೆ. ಅವನು ಪ್ರಸಾದಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ. ಅಲ್ಲಿ ನವಗ್ರಹ ದೇವತೆಗಳು, ಅನ್ನಪೂರ್ಣೇಶ್ವರಿ, ವಿಘ್ನ ನಿವಾರಕ ಗಣೇಶ, ಶಿವ ಪಾರ್ವತಿ, ಶಾರದೆ ಹೀಗೆ ಎಲ್ಲ ಬಗೆಯ ದೇವಾನು ದೇವತೆಗಳಿದ್ದರು!
ಅಷ್ಟು ಸಾಲದೆಂಬಂತೆ ದೇವಾಲಯದ ಬಳಿ ಪಾರ್ಕ್ ಹಾಗೂ ಕೊಳಗಳಿದ್ದವು. ಅವು ತುಂಬಾ ಸುಂದರವಾಗಿದ್ದವು. ಮಕ್ಕಳಿಗಂತೂ ಅಲ್ಲಿ ಹೋದರೆ ಹಬ್ಬ. ಇವೆಲ್ಲದರ ಜೊತೆಗೆ ದೇವಸ್ಥಾನದ ಹಿಂದೆ ಬಡವರಿಗಾಗಿಯೇ ಒಂದು ವಿವಾಹ ಮಂಟಪ, ಶ್ರೀಮಂತರಿಗಾಗಿ ಪಕ್ಕದಲ್ಲಿ ಮತ್ತೊಂದು ಮಂಟಪ. ಇದೂವರೆಗೆ ಕಂಡ ಹಾಗೆ ಬಹುತೇಕ ಕಡೆಗಳಲ್ಲಿ ದೇವಸ್ಥಾನ ಅಥವಾ ಮಠಗಳನ್ನು ನಿರ್ಮಾಣ ಮಾಡಿದರೆ ಹಣ ಗಳಿಕೆಗಾಗಿಯೇ ಅಲ್ಲೊಂದು ‘ಕಲ್ಯಾಣ’ ಮಂಟಪ ಇದ್ದೇ ಇರುತ್ತದೆ. ಆದರೆ ಇದು ಸ್ವಲ್ಪ ವಿಭಿನ್ನ. ಶ್ರೀಮಂತರ ಕಲ್ಯಾಣ ಮಂಟಪದಿಂದ ಬಂದ ಹಣದಿಂದ ಬಡವರ ಕಲ್ಯಾಣಕ್ಕಾಗಿಯೂ ತುಸು ಉಪಯೋಗಿಸುತ್ತಿದ್ದಾರೆ.
ಆದರೆ ಇಲ್ಲಿ ವಿಚಾರ ಅದಲ್ಲ, ತಿರುಪತಿಯಲ್ಲಿರುವಂತೆ ಎಲ್ಲ ದೇವಾಲಯಗಳಲ್ಲೂ ಹುಂಡಿಗೆ ಹೆಚ್ಚು ಹಣ ಹಾಕುವ ಶ್ರೀಮಂತರಿಗಾಗಿಯೇ ವಿಶೇಷ ಮಾರ್ಗ ಇದ್ದೇ ಇರುತ್ತವೆ. ಅದು ಕಾಣುವುದಿಲ್ಲ ಅಷ್ಟೆ. ಅವರಿಗೆಲ್ಲಾ ಅಲ್ಲಿ ದೇವರು ತುಂಬಾ ಬೇಗ ಸಿಗುತ್ತಾನೆ. ಆದರೆ ಬಡವರು ಮಾತ್ರ ಅದೇ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತು, ಬೆವರಿಳಿಸಿ ದೇವರ ದರ್ಶನ ಪಡೆಯಬೇಕು! ಕೇಳಿದ್ದಕ್ಕೆಲ್ಲ ತಥಾಸ್ತು ಎನ್ನುತ್ತಾನೋ ಇಲ್ಲವೋ ಅದು ಬೇರೆ ವಿಚಾರ. ಆದರೆ ಉಳ್ಳವರಿಗೆ ಹಾಗಿಲ್ಲ...
ಮೊನ್ನೆ ಅಲ್ಲಿ ಆಗಿದ್ದೂ ಅದೇ; ಸರದಿಯಲ್ಲಿ ನಿಂತಿದ್ದ ನನ್ನ ಸ್ನೇಹಿತನನ್ನು ಕಂಡ ಆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಅವನನ್ನು ಕರೆದು ಮಾತನಾಡಿಸಿದರು. ‘ಇದೇನ್ ಸರ್ ನೀವು ಕ್ಯೂನಲ್ಲಿ ನಿಂತಿದ್ದೀರಿ. ನಂಗೆ ಒಂದ್ ಮಾತ್ ಹೇಳೋದ್ ಬ್ಯಾಡ್ವಾ... ಬನ್ನಿ..’ ಎಂದು ಅವನನ್ನು ಕರೆದುಕೊಂಡು ಗರ್ಭ ಗುಡಿಯ ಎದುರು ಹೋಗಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಅವರು ಮತ್ತಷ್ಟು ಶ್ರೀಮಂತ ಸ್ನೇಹಿತರು ಆಗಮಿಸಿದ್ದಾರೆ. ಎಲ್ಲರೂ ಕೂಡಿ ಅಲ್ಲಿ ಮಾತಿಗಿಳಿದಾಗ ನನ್ನ ಸ್ನೇಹಿತ ‘ನಾನು ಹಾಗೂ ನನ್ನ ಸ್ನೇಹಿತ ಬಂದಿದ್ದೇವೆ’ ಎಂದಿದ್ದಾನೆ. ತಕ್ಷಣ ‘ಅವರನ್ನು ಕರ್‍ಕೊಂಡು ಬನ್ನಿ...’ ಎಂದು ಕಳುಹಿಸಿದರು.
ಬರುವುದಿಲ್ಲ ಎಂದರೂ ನನ್ನ ಗೆಳೆಯ ಬಿಡಲಿಲ್ಲ. ‘ನಾನು ಅವರ ಬಳಿ ಹೇಳಿಬಿಟ್ಟಿದ್ದೇನೆ, ನೀನು ಬರದೆ ಹೋದ್ರೆ ಅವರು ಬೇಸರ ಮಾಡಿಕೊಳ್ಳುತ್ತಾರೆ. ಬರಲೇಬೇಕು’ ಎಂದು ದುಂಬಾಲು ಬಿದ್ದ. ಅವನ ಕಾಟ ತಾಳದೆ ಹೋದರೆ ಹೇಳದೆ ಇದ್ದರೂ ವಿಶೇಷ ಪೂಜೆ! ಶುಲ್ಕ ಪಾವತಿ ಮಾಡದಿದ್ದರೂ ವಿಶೇಷ ಪ್ರಸಾದ, ಕುಂಕುಮ, ಹೂವು, ಹಣ್ಣು, ಕಾಯಿ ಹಾಕಿ ಪ್ಯಾಕ್ ಮಾಡಿ ಕೊಟ್ಟರು!! ನನ್ನ ಸ್ನೇಹಿತ ಶುಲ್ಕ ಪಾವತಿ ಮಾಡಿ ಪೂಜೆ ಮಾಡಿಸಿದ್ದಕ್ಕೆ ಒಂದು, ಅಧ್ಯಕ್ಷರ ಒತ್ತಾಯದ ಮೇರೆಗೆ ಮತ್ತೊಂದು ಪ್ರಸಾದ ಚೀಲ!! ಹೇಗಿದೆ ನೋಡಿ ಕಾಲ...ಇಂಥ ಮನೋಧರ್ಮ ಈಗ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಶೂದ್ರರು ಪೂಜೆ ಮಾಡುವ ದೇವಸ್ಥಾನಗಳಲ್ಲಿಯೇ ಹೀಗಾದರೆ, ಪೂಜೆಯನ್ನೇ ಕುಲ ಕಸುಬಾಗಿಸಿಕೊಂಡು ಬಂದವರ ದೇವಸ್ಥಾನಗಳಲ್ಲಿ ಇನ್ನು ಹೆಂಗೆ..?
ಆದರೆ ನಮ್ಮ ಮುಂದೆ ಬಂದ ಅದೆಷ್ಟೋ ಬಡಪಾಯಿಗಳು ಪೂಜೆಗಾಗಿ ಕಾಯುತ್ತಿದ್ದವರು ಕಾಯುತ್ತಿಲೇ ಇದ್ದವು. ನಾವು ಮಾತ್ರ ಮನೆಯ ಕಡೆ ಹೆಜ್ಜೆ ಹಾಕಿದೆವು. ಆಗ ಕಾಡಿದ ಒಂದೇ ಪ್ರಶ್ನೆ ಉಳ್ಳವರಿಗೆ ದೇವರು ತುಂಬಾ ಹತ್ತಿರನಾ...?