( ನ್ಯಾನೋ ಕಥೆಗಳ ಜನಕ ಗೆಳೆಯ ಚ.ಹ.ನಟೇಶ್ ಬಾಬು ಹುಟ್ಟಿಸಿದ ಗೀಳು ಅಷ್ಟಿಷ್ಟಲ್ಲ. ಅವನಿಂದ ಸ್ಫೂರ್ತಿ ಪಡೆದ ನಾನು ಕೆಲವು ನ್ಯಾನೋ ಕಥೆಗಳನ್ನ ಬರೆದಿದ್ದೇನೆ ಓದಿ ಆನಂದಿಸಿ, ಹಿಡಿಸದಿದ್ದರೆ ಬೈದಾದರು ಸರಿ ಅಭಿಪ್ರಾಯ ತಿಳಿಸಿ ನಿಮ್ಮ ಎಲ್ಲ ಪ್ರತಿಕ್ರಿಯೆಗಳಿಗೆ ಹೃದಯ ಪೂರ್ವಕ ಸ್ವಾಗತ...)
ಸುಮಂಗಲೆ:
ಸುಮಂಗಲಾ ಆಗತಾನೆ ಪದವಿ ಮುಗಿಸಿದ್ದಳು. ಕಿತ್ತು ತಿನ್ನುವ ಬಡತನದ ನಡುವೆಯೂ ಓದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ಹಳ್ಳಿಯಲ್ಲಿ ಏನಾದರೂ ಮಾಡಬೇಕೆಂದಿದ್ದವಳಿಗೆ ಅಪ್ಪ ಸುಮ್ಮನಿರಲಾರದೆ ಮದುವೆ ಮಾಡಿದ್ದ. ‘ನೀನು ಹುಡ್ಗಿ, ನೀನು ದುಡ್ದು ನಮ್ಮನ್ನ ಸಾಕೋದ್ ಬ್ಯಾಡ, ನಾನಿನ್ನೂ ಗಟ್ಟಿ ಇದ್ದೀನಿ’ ಎಂದಿದ್ದ. ಹಾಗೇ ಹೇಳಿ ವರ್ಷಕ್ಕೇ ಅವನು ಮಣ್ಣು ಸೇರಿದ್ದ. ಇತ್ತ ಅಪ್ಪನ ಒತ್ತಾಯಕ್ಕೆ ಕಟ್ಟುಬಿದ್ದು ಪೇಟೆಯ ಹುಡುಗನನ್ನು ಮದುವೆಯಾದ ಸುಮಂಗಲಾ ಗಂಡನ ದಾಸಿಯಾಗಿದ್ದಳು. ಅವನೊ ಹೈಟೆಕ್ ಪಿಂಪ್, ಮದುವೆ ನೆಪದಲ್ಲಿ ಆಕೆಯನ್ನು ತಂದು ಮಾಂಸದಡ್ಡೆಗೆ ಬಿಟ್ಟಿದ್ದ. ಎಷ್ಟೇ ಗೋಳಾಡಿದರೂ ಆ ಜಾಲದಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ. ಆತ್ಮಹತ್ಯೆಯ ದಾರಿಯೂ ಅವಳನ್ನು ಕಂಡು ದೂರ ಓಡಿತ್ತು. ಇನ್ನೇನು ಮನೆಯಲ್ಲಿದ್ದ ವಿಧವೆ ಅಮ್ಮ, ಮುಗ್ದ ತಮ್ಮನಿಗಾಗಿ ಗಂಡನಿದ್ದೂ ‘ನಿತ್ಯ ಸಮಂಗಲಿ’ಯಾಗಿದ್ದಳು. ಊರಿಗೆ ಬಂದಾಗ ಎಲ್ಲರೂ ಆಕೆಯನ್ನು ಆರತಿ ಎತ್ತಿ ‘ಹೀಗೇ ಸುಮಂಗಲಿಯಾಗಿರು...’ ಎಂದು ಹರಸಿದ್ದರು !
ಪ್ರೀತಿಯ ಬೆಂಕಿ:
ಹರೆಯಕ್ಕೆ ಕಾಲಿಟ್ಟ ಮಧು ಹಾಗೂ ಮನು ಇಬ್ಬರೂ ಪ್ರೀತಿಯಲ್ಲಿ ಜಾರಿ ಬಿದ್ದಿದ್ದರು. ಹಾಗೇ ಬಿದ್ದಿದ್ದರಿಂದಲೇ ಅವಳಿಗೀಗ ಮೂರು ತಿಂಗಳು ತುಂಬಿತ್ತು. ಇದನ್ನು ಮನೆಯವರಲ್ಲಿ ಹೇಳಲೂ ಮಧುಗೆ ಧೈರ್ಯವಿರಲಿಲ್ಲ; ಅವನಿಗೂ. ಅದೇ ವಿಚಾರದಲ್ಲಿ ಇಬ್ಬರೂ ಮಾತಿಗೆ ಮಾತು ಬೆಳೆಸಿದ್ದರು. ಮಧು ‘ಎಲ್ಲ ಮಾಡಿದವನು ನೀನೆ, ಈಗ ಹಿಂಗೆ ಮಾತನಾಡಿದ್ರೆ ಹೆಂಗೆ?’ ಎಂದಳು. ಅದಕ್ಕವನು ‘ಆಗಿದ್ದೆಲ್ಲಾ ನಿನ್ನಿಂದ್ಲೇ ನೀನು ನನ್ನ ಜೀವನದಲ್ಲಿ ಬರದಿದ್ದರೆ ನಾನು ನೆಮ್ಮದಿಯಾಗಿರುತ್ತಿದ್ದೆ’ ಎಂದ. ಮಾರನೇ ದಿನ ಆಕೆ ಎಲ್ಲವನ್ನೂ ಬರೆದಿಟ್ಟು ಲೋಕವನ್ನು ಬಿಟ್ಟು ಹೋದಳು. ಮರುಕ್ಷಣವೇ ಅವರಿಬ್ಬರ ಮನೆಗೂ ಬೆಂಕಿ ಬಿದ್ದಿತ್ತು. ಮನೆ ಮನಗಳೆರಡೂ ಧಗಧಗಿಸಿ ಉರಿಯುತ್ತಿದ್ದವು.
ಮಕ್ಕಳಾಗದಿರಲಿ ಮನೆ ತುಂಬಾ:
ಆತ ಕುಟುಂಬ ಕಲ್ಯಾಣ ಇಲಾಖೆಯ ಅಕಾರಿ. ಹೆಸರು ಶರಣಪ್ಪ. ‘ಮನೆಗೊಂದು ಮಗು ಸಾಕು’ ಎಂದು ಹೋದ ಹೋದಲ್ಲೆಲ್ಲ ಬಾಷಣ ಬಿಗಿಯುತ್ತಿದ್ದ. ಮದುವೆಯಾಗಿತ್ತು. ವರ್ಷವಾದ ಬಳಿಕ ಇಬ್ಬರು ಅವಳಿಜವಳಿ ಮಕ್ಕಳಾಗಿದ್ದರು. ಅದಾಗಿ ವರ್ಷಕ್ಕೇ ಮತ್ತೊಬ್ಬಳು ಸುಂದರಿಗೆ ಅವ ಶರಣಾಗಿದ್ದ. ಹೋದಲ್ಲೆಲ್ಲ ಎಲ್ಲರನ್ನೂ ಮಾತಿನಲ್ಲಿ ಸೋಲಿಸಿ ಕುಟುಂಬ ಕಲ್ಯಾಣದ ಪಾಠ ಹೇಳುತ್ತಿವ ಹುಡುಗಿಯ ವಿಷಯದಲ್ಲಿ ಸೋತ. ಅದರಿಂದಾಗಿ ಮದುವೆಯಾಗದೇ ಅವಳಿಗೂ ಒಂದು ಮಗುವಾಗಿತ್ತು...!
ಜವ್ಬಾದಾರಿ:
ಮನೆ ಹೊರಗಡೆ ಚಿನ್ನು ಮತ್ತು ಚಿಂಟು ಇಬ್ಬರೂ ಆಟವಾಡುತ್ತಿದ್ದರು. ಒಳಗಡೆ ಅಮ್ಮ ಗೊಣಗುತ್ತಿದ್ದಳು. ‘ಈ ಮಕ್ಳಿಗೆ ಒಂದಿಷ್ಟೂ ಬುದ್ದಿ ಇಲ್ಲ, ಯಾವಾಗ್ ನೋಡೀದ್ರೂ ಆಟ ಆಟ... ಮುಂದಿನ್ ಜೀವ್ನದ್ ಬಗ್ಗೆ ಸ್ವಲ್ಪಾದ್ರೂ ಖಬರ್ ಐತೆನೋ ನೋಡು’ ಎನ್ನುತ್ತಿದ್ದರೆ ಅಪ್ಪ ಹೇಳಿದ ‘ಖಬರ್ ಇದ್ದಿದ್ರ ಅವರ‍್ಯಾಕ್ ಹಂಗ್ ಆಡ್ತಿದ್ರು ? ಖಬರ್ ಇರಾಕ್ ಅವ್ರೇನ್ ನೀನಾ? ಇಲ್ಲಾ ನಾನ?’ ಮಕ್ಕಳಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತ ಎರಡು ಮನೆ ಕಟ್ಟಿ ‘ಇದು ನಿಂಗೆ ಅದು ನಂಗೆ’ ಎನ್ನುತ್ತಿದ್ದರು.
1 comment:
ಕಥೆ ಚಿಕ್ಕವಾದರು ಚನ್ನಾಗಿವೆ....
ನಿರಂಜನ, ಕೊಪ್ಪಳ,
Post a Comment