Wednesday, August 25, 2010

ಅವರು ನಿಮ್ಮ ಕಣ್ಣಿಗೆ ಮನುಷ್ಯರಂತೆ ಕಾಣುವುದಿಲ್ಲವೆ ?

‘ಮರು ವಸತಿ ಕೇಂದ್ರದಲ್ಲಿ ಭಿಕ್ಷುಕರ ಸಾವು ಸಾಮಾನ್ಯ ಸಂಗತಿ. ಇದರಲ್ಲಿ ವಿಶೇಷವೇನಿಲ್ಲ’ ಇದು ‘ಸಮಾಜ ಕಲ್ಯಾಣ’ ಖಾತೆ ಸಚಿವರಾಗಿದ್ದ ಡಿ.ಸುಧಾಕರ ಅವರ ಕಲ್ಯಾಣದ ನುಡಿಗಳು.
ಈ ಮಾತನ್ನು ಗಮನಿಸಿದರೆ ಅವರಿಗೆ ಅಕಾರದ ಮದ ಎಷ್ಟರ ಮಟ್ಟಿಗೆ ಏರಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಗೋವುಗಳ ಬಗ್ಗೆಯೇ ಮಾನವೀಯ ಹಿನ್ನೆಲೆಯಲ್ಲಿ ಮಾತನಾಡು ಪಕ್ಷದ ಸಚಿವರಲ್ಲಿ ಮನುಷ್ಯರ ಜೀವಕ್ಕೆ ಎಷ್ಟರಮಟ್ಟಿಗೆ ಬೆಲೆಯಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಎಲ್ಲೆಲ್ಲೊ ಭಿಕ್ಷೆ ಬೇಡಿಕೊಂಡು ಹೇಗೋ ಬದುಕುತ್ತಿದ್ದವರು ಬೆಂಗಳೂರಿನ ಭಿಕ್ಷುಕರ ಕಾಲೊನಿಯೆಂಬ ‘ನರಕ’ದಲ್ಲಿ ಸಾಲು ಸಾಲಾಗಿ ಹೆಣಗಳಾಗಿ ಮಲಗುತ್ತಿದ್ದಾರೆ. ಇಲ್ಲಿವರೆಗೆ ೨೬ ಮಂದಿ ಸಾವಿನ ಕದ ತಟ್ಟಿದ್ದಾರೆ. ಅಕ್ಷರಶಃ ಆ ಭಿಕ್ಷುಕರ ಪುನರ್ವಸತಿ ಕೇಂದ್ರ ಸಾವಿನ ಮನೆಯಾಗಿದೆ.
ಭಿಕ್ಷುಕರು ಎಂದಾಕ್ಷಣ ಎಲ್ಲರೂ ದೂರ ಸರಿಯುತ್ತಾರೆ. ನಿಜ, ಕೊಳಕು ಕೊಳಕಾಗಿರುವ ಭಿಕ್ಷುಕರು ಎದುರು ಬಂದರೆ ಬಹುತೇಕ ಮಂದಿ ಗೊಣಗುತ್ತಲೇ ಆತನನ್ನು ದೂರ ಕಳುಹಿಸುತ್ತಾರೆ. ಆದರೆ ಅದೇ ಭಿಕ್ಷುಕರು ನಾಯಿಗಳ ಹಾಗೆ ಸಾಮೂಹಿಕವಾಗಿ ಮಲಗಿದ್ದಲ್ಲಿ ಹೆಣವಾಗುತ್ತಾರೆ ಎಂದರೆ ಗೊಣಗಿದವರೂ ಸುಮ್ಮನೆ ಕೂರುವುದಿಲ್ಲ. ಹೀಗೆ ಸಾಲು ಸಾಲು ಹೆಣಗಳುರುಳಿದ್ದು ಅಕಾರಿಗಳ, ಸಂಭಂಸಿದವರ ನಿರ್ಲಕ್ಷ್ಯದಿಂದಲೇ ಎನ್ನುವುದನ್ನ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಜತೆಗೆ ತಿಂಗಳಲ್ಲಿ ಅಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ಹೋದ ಪ್ರಾಣ ಮತ್ತೆ ಬರಲು ಸಾಧ್ಯವೇ?
ಇದೊಂದೇ ಅಲ್ಲ, ರಾಜ್ಯದಲ್ಲಿ ಇಂಥ ೨೦ ಕಡೆಗಳಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರಗಳಿವೆ. ಆದರೆ ಧಾರವಾಡ ಒಂದನ್ನು ಹೊರತುಪಡಿಸಿದರೆ ಉಳಿದ ೧೯ ಕೇಂದ್ರಳಲ್ಲಿರುವ ಬಹುತೇಕ ಭಿಕ್ಷುಕರ ಸ್ಥತಿ ಬೆಂಗಳೂರಿನ ಭಿಕ್ಷುಕರಿಗಿಂತ ಭಿನ್ನವಾಗಿಯೇನು ಇಲ್ಲ!
ಸರಕಾರದಿಂದ ಭಿಕ್ಷುಕರ ಹೆಸರಿನಲ್ಲಿ ಬಿಡುಗಡೆಯಾಗುವ ಕೋಟ್ಯಂತರ ಹಣವನ್ನು ಸಂಪೂರ್ಣವಾಗಿ ಸ್ವಾಹ ಮಾಡಿ ಅಲ್ಲಿನ ಭಿಕ್ಷುಕರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣುತ್ತಿದೆ. ಆದರೆ ಈಗ ಬೆಂಗಳೂರಿನ ಬೆಗ್ಗರ್ಸ್ ಕಾಲೊನಿಯಲ್ಲಿ ೧೧ ಮಂದಿ ಏಕಕಾಲಕ್ಕೆ ಮೃತಪಟ್ಟ ಕಾರಣಕ್ಕೆ ಇವುಗಳ ನಗ್ನ ಸತ್ಯ ಬಯಲಾಗಿದೆ. ಇಲ್ಲಿವರೆಗೆ ಭಿಕ್ಷುಕರನ್ನು ಕಂಡಾಕ್ಷಣ ‘ಈ ಭಿಕ್ಷುಕರಿಗೆ ಅಲ್ಲೆಲ್ಲೊ ಒಂದು ಕಾಲೊನಿ ಇದೆಯಂತೆ. ಅಲ್ಲಿ ಹೋಗಿ ನೆಮ್ಮದಿಯಿಂದಿರಬಾರ‍್ದಾ..?’ ಎಂದು ಗೊಣಗುತ್ತಿದ್ದವರೂ ಕೂಡ ‘ಹೇಗೊ ಇಲ್ಲೇ ಬದುಕಲಿ ಬಿಡಿ’ ಎನ್ನುವಷ್ಟರ ಮಟ್ಟಿಗೆ ಭಯಾನಕ ಚಿತ್ರ ಹೊರ ಬಿದ್ದಿದೆ.
ತಿಂಗಳಿಗೆ ಇಂತಿಷ್ಟು ಭಿಕ್ಷುಕರನ್ನು ಈ ಕಾಲೊನಿಗೆ ತಂದು ತುಂಬಬೇಕು ಎಂದು ಸಚಿವ ಸುಧಾಕರ್ ರಚಿಸಿದ ‘ಸ್ಪಷೆಲ್ ಡ್ರೈವ್’ ನಿಂದಾಗಿ ೧೭೦೦ಕ್ಕೂ ಹೆಚ್ಚು ಮಂದಿಯನ್ನು ನಾಯಿಗಳ ಹಾಗೆ ಹಿಡಿದು ತಂದು ಇಲ್ಲಿ ಕುರಿಗಳ ಹಾಗೆ ತುಂಬಲಾಗಿತ್ತು. ಹಾಗೆ ಮಾಡುವಾಗ ಅವರ ಬಳಿ ಇದ್ದ ಚಿನ್ನಾಭರಣಗಳನ್ನೂ ಕಿತ್ತುಕೊಂಡು ‘ಸಾಧನೆ’ ಮೆರೆದ ಅಕಾರಿಗಳು ಈಗ ಸದ್ದು ಗದ್ದಲವಿಲ್ಲದೆ ಅಲ್ಲಿಂದ ಮಾಯವಾಗಿದ್ದಾರೆ.
ಮನುಷ್ಯ ಸಂಬಂಧಗಳೇ ಮಾಯವಾಗುವ ಕಾಲದಲ್ಲಿ ಪಾಪ ಈ ಭಿಕ್ಷುಕರ ಬಗ್ಗೆ ಅದ್ಯಾವ ಅಕಾರಿಗಳಿಗೆ ತಾನೆ ಕನಿಕರ ಹುಟ್ಟಬೇಕು ಹೇಳಿ? ಬಹುಶಃ ಇಲ್ಲಿನ ಅಕಾರಿಗಳಿಗೆ ಅವರು ಮನುಷ್ಯರಂತೆಯೇ ಕಾಣುತ್ತಿಲ್ಲವೆ? ಈ ಪ್ರಕರಣ ನಡೆದ ಬಳಿಕ ಈ ನಿರಾಶ್ರಿತರ ಕೇಂದ್ರದಲ್ಲಿ ನಡೆ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಇಲ್ಲಿ ತಿಂಗಳಿಗೆ ಹತ್ತಾರು ಭಿಕ್ಷುಕರು ಕೊನೆಯುಸಿರೆಳೆಯುತ್ತಿದ್ದರು. ಅವುಗಳನ್ನು ಸದ್ದಿಲ್ಲದೆ ಪೀಣ್ಯಾದ ಚಿತಾಗಾರದಲ್ಲಿ ಯಾವುದೇ ಶವಪರೀಕ್ಷೆ ನಡೆಸದೆ ಸುಟ್ಟು ಹಾಕುತ್ತಿದ್ದರು ಎನ್ನುವ ಅಂಶ ಕೂಡ ಬಯಲಾಗಿದೆ. ಹೀಗೆ ಸಾಗಿದ ಇಲ್ಲಿನ ಅಕಾರಿಗಳ ದರ್ಪದಲ್ಲಿ ಕೆಲ ತಿಂಗಳೀಚೆಗೆ ೨೧೯ಕ್ಕೂ ಹೆಚ್ಚು ಮಂದಿಯನ್ನು ಸುಟ್ಟು ಹಾಕಿರುವ ಶಂಕೆ ಹೊಗೆಯಾಡುತ್ತಿದೆ.
ಸರಕಾರಿ ಸಂಬಳ ಸಾಲದೆ ಭಿಕ್ಷುಕರಿಗಾಗಿ ಬಿಡುಗಡೆ ಮಾಡುವ ಹಣದಲ್ಲೂ ತಿಂದು ತೇಗುವ ಅಕಾರಿಗಳ ದಾಹ ಬಹುಶಃ ಇನ್ನೂ ಇಂಗಿದಂತೆ ಕಾಣುತ್ತಿಲ್ಲ. ೨೦೦೪ರಲ್ಲಿ ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗಲೇ ಈ ಪುನರ್ವಸತಿ ಕೇಂದ್ರದಲ್ಲಿ ಅವ್ಯವಹಾರ ನಡೆಯುತ್ತಿತ್ತು. ಅಲ್ಲಿನ ಭಿಕ್ಷುಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರು ನೀಡಲಾಗಿತ್ತು. ಆದರೆ ಆಗ ಕೂಡ ಆ ಅಕಾರಿಗೆ ಯಾವುದೇ ಶಿಕ್ಷೆಯಾಗಲಿಲ್ಲ. ಬದಲಿಗೆ ಪ್ರಮೋಷನ್ ಕೊಟ್ಟರು!
ಮುಖ್ಯಮಂತ್ರಿಯವರೇ ಹೇಳಿದ ಹಾಗೆ ‘ಇಲ್ಲಿಗೆ ಬರುವ ಅಕಾರಿಗಳು ಸಂಬಳಕ್ಕೆ ಬರುತ್ತಾರೆ’, ಜತೆಗೆ ಗಿಂಬಳಕ್ಕು ಹಾತೊರೆಯುತ್ತಾರೆ. ಹೀಗಾಗಿಯೇ ಇಲ್ಲಿ ಸೇವಾ ಮನೋಭಾವ ಮಾಯವಾಗಿದೆ. ಈ ಕೇಂದ್ರದ ಸುಪರ್ದಿಯಲ್ಲಿ ೩೧೦ ಎಕರೆ ಭೂಮಿಯಿದೆ. ಅದನ್ನು ಕಬಳಿಸಲು ಹಲವು ವರ್ಷಗಳ ಹಿಂದಿನಿಂದಲೂ ಯತ್ನ ನಡೆಯುತ್ತಲೇ ಇದೆ. ಹೀಗೆ ಇಲ್ಲಿ ನಡೆಯುವ ಅವ್ಯವಹಾರಗಳು ಒಂದೆರಡಲ್ಲ. ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಇಲ್ಲಿನ ಜನರಿಗೆ ಚಿತ್ರ ಹಿಂಸೆ ನೀಡುತ್ತಾ ಅವರನ್ನು ಅಕ್ಷರಶಃ ನಿರ್ಗತಿಕರನ್ನಾಗಿ ಮಾಡಲಾಗಿದೆ.
ನಾಗರಿಕ ಸಮಾಜಕ್ಕೆ ಅವಮಾನವಾಗಬಾರದು ಎಂಬ ಕಾರಣಕ್ಕಾಗಿಯೇ ರಾಜ್ಯದಲ್ಲಿ ೧೯೪೮ರಲ್ಲಿಯೇ ನಿರ್ಗತಿಕರ ಪುನರ್ವಸತಿ ಕೆಂದ್ರ ಕಲ್ಪನೆಯನ್ನು ಮೈಸೂರು ಅರಸರು ತಂದಿದ್ದರು. ಅದರ ಫಲವಾಗಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅದೇ ಸಮಯದಲ್ಲಿ ಒಂದು ಪುನರ್ವಸತಿ ಕೇಂದ್ರ ತೆರೆಯಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದನ್ನು ಸ್ಥಳಾಂತರಿಸಿ, ಅದಕ್ಕೆ ಭಿಕ್ಷುಕರ ಕಾಲೊನಿ ಎಂದು ನಾಮಕರಣ ಮಾಡಿದರೆ ಹೊರತು ಅಲ್ಲಿಗೆ ಹಿಡಿದು ತರುವ ಜನರಿಗೆ ಪುನರ್ವಸತಿ ಕಲ್ಪಿಸಲೇ ಇಲ್ಲ. ಭಿಕ್ಷುಕರು ಬೀದಿ ಬೀದಿಯಲ್ಲಿ ತಿರುಗುತ್ತಾ ಜನರಿಗೆ ಕಿರಿಕಿರಿ ಮಾಡುವುದು ಸರಿಯಲ್ಲ, ಅವರಿಗೂ ಕರಕುಶಲ ಕಲೆ ಕಲಿಸಿ, ಉದ್ಯೋಗ ಒದಗಿಸಬೇಕು, ಅವರೂ ಎಲ್ಲರಂತೆ ಬದುಕಬೇಕೆಂದು ಈ ಪುನರ್ವಸತಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಯಿತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.
ಈ ಪುನರ್ವಸತಿ ಕೇಂದ್ರದ ಉಸ್ತುವಾರಿಗಾಗಿಯೇ ಒಂದು ಸಮಿತಿ ಮಾಡಿ ಅದಕ್ಕೆ ಮಂಜೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಸಾಲದ್ದಕ್ಕೆ ಅವರಿಗೆ ಎಲ್ಲ ಸರಕಾರಿ ಸವಲತ್ತು, ಕಾರು ಎಲ್ಲವೂ ಇತ್ತು. ಪಾಪ ಅವರು ಅಕಾರದ ಅಮಲಿನಲ್ಲಿ ತೇಲುತ್ತಿದ್ದರೆ ಹೊರತು ಒಮ್ಮೆಯೂ ಇತ್ತ ಸುಳಿದಿರಲಿಲ್ಲ. ಜತೆಗೆ ಸರಕಾರ ಕೂಡ ಇಷ್ಟೆಲ್ಲ ಭಿಕ್ಷುಕರನ್ನು ನೋಡಿಕೊಳ್ಳಲು ಪಕ್ಕದಲ್ಲಿಯೇ ಇರುವ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರನ್ನು ಬಿಟ್ಟಿದೆ !
ಹೀಗೆ ನಿಜವಾದ ಉದ್ದೇಶಗಳೆಲ್ಲವೂ ಗಾಳಿಗೋಪುರವಾಗಿದ್ದು, ಕೈಗೆ ಸಿಕ್ಕ ಅಮಾಯಕರು, ಬಸ್, ರೈಲು ಕಾಯುತ್ತಿದ್ದವರು, ಕೂಲಿ ಕಾರ್ಮಿಕರು, ಕೆಲವು ನೌಕರರನ್ನೂ ಎಳೆದು ತಂದು ಇಲ್ಲಿ ನಿಜಕ್ಕೂ ನಿರ್ಗತಿಕರನ್ನಾಗಿ ಮಾಡಲಾಗಿದೆ. ಇದೆಲ್ಲವೂ ಸಮಾಜ ಕಲ್ಯಾಣ ಇಲಾಖೆಯ ಅಕಾರಿಗಳಿಗೆ, ಸಚಿವರಿಗೆ ಗೊತ್ತಿತ್ತು! ಆದರೆ ಅವರೆಲ್ಲಾ ಭಿಕ್ಷುಕರು, ಅವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬ ತಾತ್ಸಾರದಿಂದ ದಿನ ದೂಡುತ್ತಿದ್ದರು. ಅದರ ಫಲವಾಗಿ ೨೬ ಮಂದಿ ಸ್ಮಶಾನ ಸೇರಿದ್ದಾರೆ.
ಈ ದುರಂತಕ್ಕೆ ಮುಂಚೆಯೂ ಇಲ್ಲಿ ಸಾವು ನೋವು ಸಾಮಾನ್ಯವಾಗಿತ್ತು! ಆದರೆ ಅದು ಬೆಳಕಿಗೆ ಬಂದಿರಲಿಲ್ಲ. ತಿಂಗಳಿಗೆ ಹತ್ತಾರು ಮಂದಿ ಇಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ‍್ಯಾರನ್ನೂ ಶವ ಪರೀಕ್ಷೆ ಕೂಡ ಮಾಡದೆ ಸುಟ್ಟು ಹಾಕಿದ್ದಾರೆ. ಸೆಕ್ಷನ್ ೫೯ರ ಪ್ರಕಾರ ಕಸ್ಟಡಿಯಲ್ಲಿರುವವರು ಯಾರೇ ಮೃತಪಟ್ಟರೂ ಅವರನ್ನು ಶವಪರೀಕ್ಷೆ ಮಾಡಬೇಕು. ಅದೂ ಕೂಡ ಇಲ್ಲಿ ಆಗಿಲ್ಲ. ಸಚಿವ ಸುಧಾಕರ್ ಮಾತಿನಂತೆ ಅವೆಲ್ಲವೂ ‘ಸಾಮಾನ್ಯ ಸಾವು’. ಆದರೆ ಅವರೂ ಮನುಷ್ಯರು ಎನ್ನುವ ಆಲೋಚನೆ ಅಲ್ಲಿದ್ದ ಒಬ್ಬನೇ ಒಬ್ಬ ಅಕಾರಿಗೂ ಬರಲೇ ಇಲ್ಲವೆ ? ಅವರ ದೃಷ್ಟಿಯಲ್ಲಿ ಭಿಕ್ಷುಕರ ಕಾಲೊನಿಯಲ್ಲಿದ್ದವರೆಲ್ಲ ಪ್ರಾಣಿಗಳೇ? ಕೈಗೆ ಸಿಕ್ಕವರನ್ನೆಲ್ಲಾ ತಂದು ಈ ದೊಡ್ಡಿಯಲ್ಲಿ ತುಂಬಿದವರಿಗೆ ಸಂಬಂಕರು ಯಾರಾದರೂ ಇದ್ದಾರೆಯೇ ಎಂದು ಹುಡುಕುವ ವ್ಯವದಾನ ಕೂಡ ಇರಲಿಲ್ಲವೆ? ಅವರೂ ತಮ್ಮ ಅಪ್ಪ,-ಅಮ್ಮ, ಅಣ್ಣ- ತಂಗಿ, ಅಕ್ಕ -ತಮ್ಮನಂತೆಯೇ ಮನುಷ್ಯರು ಎನಿಸಲಿಲ್ಲವೆ? ಛೇ... ಎಂಥ ದುರುಳ ಜನ...