Wednesday, February 8, 2012

ಸದನದಲ್ಲಿ "ಕಾಮ ಕಲಾಪ": ನಾವು ನೀವು ಮತ್ತು ಕರ್ನಾಟಕದ ಮಾನ

ಪ್ರಜಾಪಭುತ್ವದ ನಿಜವಾದ ದೇಗುಲ ವಿಧಾನ ಸೌಧ. ಅಲ್ಲಿ ಏನು ನಡೆಯಬಾರದಿತ್ತೋ ಅದು ನಿನ್ನೆ (ಫೆ.೭) ನಡೆದು ಹೋಗಿದೆ. ಜತೆಗೆ ಅದೇ ದಿನ ಹೋರಾಟಗಾರ್ತಿ ಮೇಧಾ ಪಾಟ್ಕರ್ ರಾಜ್ಯ ಸರಕಾರದ "ಬಸವಶ್ರೀ ಪ್ರಶಸ್ತಿ" ಯನ್ನು ತಿರಸ್ಕರಿಸಿದ್ದಾರೆ. ಅಲ್ಲಿಗೆ ಒಟ್ಟೊಟ್ಟಿಗೆ ಎರಡು ರೀತಿಯಲ್ಲಿ ಕರ್ನಾಟಕದ ಮಾನ ಹಾರಜಿಗೆ ಬಿದ್ದಿದೆ!!
ವಿಧಾನ ಸೌಧದಲ್ಲಿ ನಡೆದ "ಕಾಮ ಕಲಾಪ"ಕ್ಕೆ ಸಂಬಂದಿಸಿದಂತೆ ಮೂವರು ಸಚಿವರ ತಲೆ ದಂಡ ಕೂಡ ಆಗಿದೆ ನಿಜ. ಆದರೆ ಅವರು ಮೊದಲು ಶಾಸಕರು, ಆಮೇಲೆ ಸಚಿವರು. ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಅಲ್ಲಿಗೆ ಈ ಪ್ರಕರಣ ಮುಗಿಯಿತ...? ಒಂದು ವೇಳೆ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದರೆ ಮತ್ತೆ ಚುನಾವಣಾ, ಅಲ್ಲೊಂದಿಷ್ಟು ಹೆಂಡ- ಹಣದ ನರ್ತನ. ಮತ್ತೆ ಅದೇ ಜನಪ್ರತಿನಿಧಿಗಳು. ಆನಂತರ ಮತ್ತೆ ಯಥಾ: ಸ್ಥಿತಿ. ಇಷ್ಟೇನೆ...? ಇಂಥದ್ದೊಂದು ಪ್ರಶ್ನೆಯನ್ನ ಈ ಸಮಾಜದಲ್ಲಿ ಬದಕುವ ನಾವೆಲ್ಲರೂ ನಮಗೆ ನಾವೇ ಹಾಕಿಕೊಳ್ಳಬೇಕಿದೆ.
ಮೂರು ತಿಂಗಳ ಹಿಂದೆ ನಾನು ನನ್ನ ಸ್ನೇಹಿತರೊಬ್ಬರ ಹಳ್ಳಿ ಮನೆಗೆ ಹೋಗಿದ್ದೆ. ಅಲ್ಲಿ ಒಂದು ಕುಟುಂಬದ ನಡುವೆ ಹಹಲ ದೊಡ್ಡದಾಗಿ ಜಗಳ ನಡೆಯುತ್ತಿತ್ತು. ನಾನು ಕುತೂಹಲಕ್ಕಾಗಿ ಜತೆಗೆ ಅದು ನನ್ನ ಸ್ನೇಹಿತನ ಸಂಬಂದಿಗಳ ಜಗಳ ಎನ್ನುವ ಕಾರಣಕ್ಕೆ ಅಲ್ಲಿ ಹೋದೆ. ಆಸ್ತಿಗಾಗಿ ಅಣ್ಣ ತಮ್ಮನ ನಡುಉವೆ ಜಗಳ ನಡೆದಿತ್ತು. ತಮ್ಮ ಅಣ್ಣನ ತಲೆ ಒಡೆದಿದ್ದ...! ಅದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರಲಿಲ್ಲ. ಬದಲಿಗೆ ಗ್ರಾಮದವರೇ ಅದನ್ನು ಪಂಚಾಯಿತಿ ಮೂಲಕ ಬಗೆಹರಿಸೋಣ, ಊರಿಗೆ ಪೊಲೀಸರು ಬರುವುದು ಬೇಡ ಎಂದು ತೀರ್ಮಾನಿಸಿ ಪಂಚಾಯಿತಿ ಕರೆದಿದ್ದರು. ಆಗ ತಮ್ಮ ಅಣ್ಣನ ತಲೆ ಒಡೆದಿದ್ದು. ಆಟ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದುದು ಎಲ್ಲವು ಕಣ್ಣ ಮುಂದೆ ಇತ್ತು. ಜತೆಗೆ ಜಗಳ ನಡೆಯುವಾಗ ಅದನ್ನ ನೋಡಿದವರು ಇದ್ದರು. ಆದರು ಆ ತಮ್ಮ ಪಂಚಾಯಿತಿಯಲ್ಲಿ ನನ್ನ ಅಣ್ಣನ ತಲೆಯನ್ನು ನಾನು ಒದೆದಿಲ್ಲ ಇದೆಲ್ಲ ಸುಳ್ಳು ಕಥೆ, ನಾನು ಯಾವ ದೇವರ ಮೇಲಾದ್ರು ಪ್ರಮಾಣ ಮಾಡಿ ಹೇಳ್ತೇನೆ. ನಾನು ಆ ತಪ್ಪು ಮಾಡಿಲ್ಲ ಎನ್ನುತ್ತಿದ್ದ.
ಇದರಿಂದ ಸಿಟ್ಟಿಗೆದ್ದ ಪಂಚಾಯಿತಿಯ ಹಿರಿಯರು "ಅಲ್ಲಯ್ಯ ಊರವರೆ ಎಸ್ಟೋ ಜನ ನೀವು ಜಗಳ ಆಡಿದ್ದು, ನೀನು ತಲೆ ಒಡೆದಿದ್ದು ಎಲ್ಲ ನೋಡಿದಾರೆ. ಆದರು ಹೀಗೆ ಹೇಳ್ತಿಯಲ್ಲ" ಎಂದಾಗ ಆಟ ಹೇಳಿದ " ಈ ರಾಜ್ಯದ ಮುಕ್ಯಮಂತ್ರಿಯಾದವ್ರೆ ದೇವರ ಮೇಲೆ ಆನೆ ಮಾಡಿ ಹೇಳ್ತಾರೆ, ನಾನು ಆಣೆ ಮಾಡಿ ಹೇಳಿದ್ರೆ ತಪ್ಪೇನು. ನಾನು ಆ ಕೆಲಸ ಮಾಡೇ ಇಲ್ಲ..." ಎಂದ. ನಾನು ಮಾತ್ರವಲ್ಲ ಅಲ್ಲಿ ನೆರೆದ ಅಷ್ಟೂ ಜನ ಅವನ ಮಾತಿನಿಂದ ಬೆಚ್ಚಿ ಬಿದ್ದಿದ್ದರು.( ಇದು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರ ಆಣೆ ಪ್ರಮಾಣದ ಎಫೆಕ್ಟ್.)
****
ಇದಾಗಿ ಸ್ವಲ್ಪ ದಿನದ ಹಿಂದೆ... ಅದೇ ಊರಿನಲ್ಲಿ ಮತ್ತೊಂದು ಘಟನೆ ನಡೆದಿತ್ತು. ಅಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಪತ್ನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆಗ ಈ ವಿಚಾರ ಪಂಚಾಯಿತಿಗೆ ಬಂದಿತ್ತು. ಆಗ ಆ ಪ್ರಕರಣದಲ್ಲಿ ಅದಕ್ಕೂ ಕೂಡ ಗ್ರಾಮದ ಸಾಕಷ್ಟು ಜನ ಸಾಕ್ಷಿಯಿದ್ದರು. ಆದರೂ ಪಂಚಾಯಿತಿಯಲ್ಲಿ ಅವರಿಬ್ಬರೂ "ಈ ವಿಚಾರ ಆಕೆಯ ಗಂಡನಿಗೂ ಗೊತ್ತು. ಹೌದು, ಇದು ನಮ್ಮ ವಯಕ್ತಿಕ ವಿಚಾರ. ಇದು ನನ್ನ ಅವಳ ಇಷ್ಟ, ಕೇಳೋಕೆ ನೀವ್ಯಾರು?" ಎಂದು ಒಮ್ಮೆ ಹೇಳುತ್ತಿದ್ದನಂತೆ, ಇನ್ನೊಮ್ಮೆ ನಮ್ಮಿಬ್ಬರ ನಡುವೆ ಅಂತ ಯಾವ "ಕ್ರಿಯೆ" ಯೂ ನಡೆದೇ ಇಲ್ಲ. ನಾವು ನಿರಪರಾದಿಗಳು ಎಂದು ವಾದಿಸುತ್ತಿದ್ದರಂತೆ. ಇದೆಲ್ಲವನ್ನು ನೋಡಿ ಅಲ್ಲಿಯ ಜನ ಬೇಸತ್ತು ಹೋಗಿದ್ದಲ್ಲದೇ. ನಮ್ಮ ಊರು ಈ ಮಟ್ಟಕ್ಕೆ ಹಾಲಯಿತಲ್ಲ ಎಂದು ನೊಂದುಕೊಲ್ಲುತ್ತಿದ್ದಾರೆ. (ಇದು ಬಹುಶ: ರೇಣುಕಾಚಾರ್ಯ ಹಾಗು ಹಾಲಪ್ಪನ ಕಾಮ ಪ್ರಕರಣದ ಎಫೆಕ್ಟ್)
****
ಇನ್ನು ಮುಂದೆ ಹರೆಯದ ಯುವಕರು ತಮ್ಮ ಮೊಬೈಲ್ ಗಳಲ್ಲಿ ನೀಲಿ ಚಿತ್ರಗಳನ್ನು ಮನೆಯಲ್ಲೇ ನೋಡುತ್ತಾ ಇರುವಾಗ ಅಪ್ಪ ಅಮ್ಮ ಕೇಳಿದರೆ "ನೋಡಿದರೆ ತಪ್ಪೇನು...!?" ಎಂದರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಇದೆಲ್ಲ. ರಾಜ್ಯ ಸರಕಾರದ ಹಾಗು ನಮ್ಮ ಜನಪ್ರತಿನಿಧಿಗಳ ಮಾದರಿಗಳು.
ಹಿಂದೆ ಸಿನಿಮಾ ರಂಗದ ನಾಯಕ, ನಾಯಕಿಯರನ್ನು ಅನುಕರಿಸುವ ಸಂಪ್ರದಾಯ ಇತ್ತು. ಆದರೆ ಈಗ ಜನ "ಚುನಾವಣೆಯಲ್ಲಿ ಆಯ್ಕೆಯಾದ ನಾಯಕರು"ಗಳನ್ನೂ ಬಹು ಬೇಗ ಅನುಕರಿಸುತ್ತಿದ್ದಾರೆ. ಅವರೇ ಇವರಿಗೆ ನಾಯಕರಾಗುತ್ತಿದ್ದಾರೆ. ಇಂಥ ಸಂಧರ್ಭದಲ್ಲಿ ತಳಮಟ್ಟದ ಜನ ಸಮುದಾಯವನ್ನು, ಸಮಾಜವನ್ನು ತಮ್ಮ ಸಚ್ಚಾರಿತ್ರ್ಯದ ಮೂಲಕ ಒಳ್ಳೆಯ ದಿಕ್ಕಿನ ಕಡೆಗೆ ನಡೆಸಿಕೊಂಡು ಹೋಗಬೇಕಾದ ಜನಪ್ರತಿನಿದಿಗಳು ಅವರನ್ನು ಹೇಗೆ ದಿಕ್ಕು ತಪ್ಪಿಸಿ, ತಾವು ಮಾಡುತ್ತಿರುವುದೇ ಸರಿ ಎಂದು ವಾದಿಸುವ ಕ್ರಮ ಇದೆಯಲ್ಲ ಅದಕ್ಕಿಂತ ಬೇರೆ ನಾಚಿಕೆಗೇಡಿನ ಕೆಲಸ ಇನ್ನೊಂದಿಲ್ಲ ಎನಿಸುತ್ತದೆ.
ಈ ಬಿಜೆಪಿ ಸರಕಾರ ಬಂದಂದಿನಿಂದ ಇಲ್ಲಿರುವ ಸಚಿವ, ಶಾಸಕರಿಗೆ ಅರ್ಧ ರಾತ್ರಿಯಲ್ಲಿ ಐಶ್ವರ್ಯ ಬಂದ ಹಾಗಾಗಿದೆ. ಅದಕ್ಕಾಗಿ ಇವರೆಲ್ಲ ಏನು ಮಾಡಿದರು ಅದು ಸರಿ ಎನ್ನುವಂತಾಗಿದೆ. ಸಚಿವ ರೇಣುಕಾಚಾರ್ಯ ತಮ್ಮ ಹಾಗು ಜಯಲಕ್ಷ್ಮಿ ಸೆಕ್ಸ್ ಪ್ರಕರಣವನ್ನು ಸಮರ್ತಿಸಿಕೊಂಡು ಮಂತ್ರಿಯಾದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಾವು ಏನೇ ತಪ್ಪು ಮಾಡಿದರು ಅದು ಸರಿ ಎಂದು ಭಂಡತನದಲ್ಲಿ ವಾದಿಸುತ್ತಲೇ ಕೆಳಗಿಳಿದರು. ಹಾಲಪ್ಪ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ ನಾನು "ಮಾಡೇ ಇಲ್ಲ" ಎಂದು ವಾದಿಸುತ್ತಲೇ ಹೋದರು. ಕಟ್ಟಾ, ಜನಾರ್ಧನ ರೆಡ್ಡಿ ತಾವು ಯಾವ ತಪ್ಪೂ ಮಾಡಿಲ್ಲ. ಇದು ಪ್ರತಿ ಪಕ್ಷಗಳ ಕೈವಾಡ ಎಂದು ತಿಪ್ಪೆ ಸಾರಿಸಲು ಯತ್ನಿಸಿ ಜೈಲು ಸೇರಿದರು.
ಮೊನ್ನೆ ಮೊನ್ನೆಯಷ್ಟೇ ಕರಾವಳಿಯಲ್ಲಿ ನಡೆದ ಸೈಂಟ್ ಮೇರೀಸ್ ದ್ವೀಪದಲ್ಲಿ ನಡೆದ ರೇವು ಪಾರ್ಟಿಯನ್ನು ಮುಖ್ಯಮಂತ್ರಿ ಸದಾನದ ಗೌಡ "ಇದು ಪ್ರವಾಸೋದ್ಯಮದ ಸಂಸ್ಕೃತಿ" ಇಲ್ಲಿ ಯಾವುದೇ ಅನಾಚಾರ ನಡೆದಿಲ್ಲ ಎಂದು ಸಮರ್ತಿಸಿಕೊಂಡರು. ಅದರ ಬೆನ್ನಲ್ಲೇ ಈಗ ಸಚಿವರಾದ ಲಕ್ಷ್ಮಣ ಸವದಿ "ಸಹಕಾರ" ದಿಂದ ಸಿ.ಸಿ.ಪಾಟೀಲ್ ಹಾಗು ಕೃಷ್ಣ ಪಾಲೆಮಾರ್ ವಿಧಾನ ಸೌಧದಲ್ಲಿಯೇ ನೀಲಿ ಚಿತ್ರ ವೀಕ್ಷಣೆ ಮಾಡಿ "ಹೊಸ ಸಂಸ್ಕೃತಿ" ಗೆ ನಾಂದಿ ಹಾಡಿದ್ದಾರೆ. ಜೊತೆಗೆ ಅದು ತಪ್ಪೇ ಅಲ್ಲ, ನಾವು ನಿರಪರಾದಿಗಳು. ಇದು ಮಾದ್ಯಮಗಳ ಪಿತೂರಿ ಎನ್ನುವಂತೆ ನಾಚಿಕೆ ಬಿಟ್ಟು ಸಮರ್ಥಿಸಿಕೊಂಡಿದ್ದಾರೆ! ಜೊತೆಗೆ ಅದಕ್ಕೆ ಮುಸ್ಲಿಂ ದೇಶದಲ್ಲಿ ಒಬ್ಬ ಮಹಿಳೆಯ ಮೇಲಿನ ದೌರ್ಜನ್ಯವನ್ನು ವೀಕ್ಷಿಸುತ್ತಿದ್ದೆ ಎಂದು ಹೇಳುವ ಮೂಲಕ ಇಲ್ಲೂ ಕೂಡ ತಮ್ಮ ಕೊಮುವಾದಿತನವನ್ನು ಪ್ರದರ್ಶಿಸಲು ಮುಂದಾಗಿ ಸೋತಿದ್ದಾರೆ.
ಅಲ್ಲಿಗೆ ಬಿಜೆಪಿಯ ಒಳಗೆ "ನಿಜ ರಾಮನಿಲ್ಲ" ಇಲ್ಲಿರುವುದು "ಕಾಮ" ಮಾತ್ರ ರಾವನಿನ ಹೊಲಿಕೆಗೂ ಇವರು ಸಮರ್ತರಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ.
ಇದಕ್ಕೆ ಸರಿ ಹೊಂದುವಂತೆ ಬಿಜೆಪಿಯ ರಾಜ್ಯಾದ್ಯಕ್ಷ ಈಶ್ವರಪ್ಪ, ಮುಖ್ಯ ಮಂತ್ರಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರು "ಅವರೇ ಸ್ವಯಂಪ್ರೇರಿತರಾಗಿ ರಾಜೆನಾಮೆ ನೀಡಿದ್ದಾರೆ" ಎಂದು ಹೇಳುವ ಮೂಲಕ ತಿಪ್ಪೆ ಸಾರಿಸಲು ಯತ್ನಿಸುತ್ತಿದ್ದಾರೆ.
ಪಕ್ಷೇತರ ಶಾಸಕರನ್ನು ರಾತ್ರೋ ರಾತ್ರಿ ವಜಾಗೊಳಿಸಿ ತಮ್ಮದು ಸಮರ್ಥ ನಿರ್ಧಾರ ಎಂದು ಹೇಳಿಕೊಂಡಿದ್ದ ಸ್ಪೀಕರ್ ಭೂಪಯ್ಯ ಕೂಡ ಮಾಧ್ಯಮದಲ್ಲಿ ಅಸ್ಟೆಲ್ಲ ಸುದ್ದಿಯಾಗಿದ್ದರು "ಅದು ನನ್ನ ಗಮನಕ್ಕೆ ಬಂದಿಲ್ಲ" ಎಂದರು. ಆನತರ "ಕಾನೂನು ಏನು ಹೇಳುತ್ತದೆ ನೋಡಿ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ" ಎಂದರು. ಅಂದರೆ ಅಲ್ಲಿ ಸ್ಪೀಕರ್ ಗೂ ಸಂಪೂರ್ಣ ಅಧಿಕಾರ ಇಲ್ಲ ಎನ್ನುವುದು ಶ್ರೀರಾಮುಲು ಪ್ರಕರಣದ ನಟರ ಮತ್ತೊಮ್ಮೆ ಸಾಬೀತಾಗಿದೆ ಇಲ್ಲವೇ ಸ್ಪೀಕರ್ ಕೂಡ ಬಿಜೆಪಿ ಪಕ್ಷದ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ಬಿಜೆಪಿ ಹಾಗು ಸಂಘ ಪರಿವಾರದ "ಯೋಗ ಶಿಬಿರ" ನಡೆದ ದಿನವೇ ವಿಧಾನ ಸೌಧದಲ್ಲಿ ಮತ್ತೊಂದು "ಯೋಗ ಪುರಾಣ" ಹೊರಬಿದ್ದಿದ್ದು. ಅದೇ ದಿನ ರಾಜ್ಯ ಸರಕಾರ ನೀಡಲು ಇಚ್ಚಿಸಿದ್ದ "ಬಸವಶ್ರೀ ಪ್ರಶಸ್ತಿ"ಯನ್ನು ನರ್ಮದ ಬಚಾವೋ ಅಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ "ಕರ್ನಾಟಕ ಸರಕಾರ ತನ್ನ ಹಗರಣಗಳ ಬಗ್ಗೆಯೇ ಸರಿಯಾದ ತನಿಖೆ ನಡೆಸಿಲ್ಲ ಅಂತ ಸರಕಾರ ನೀಡುವ ಪ್ರಶಸ್ತಿ ನನಗೆ ಬೇಡ" ಎಂದು ತಿರಸ್ಕರಿಸಿರುವುದು ಈ ರಾಜ್ಯದ ಜನತೆಗೆ ತೀರ ನಾಚಿಕೆಗೇಡಿನ ಸಂಗತಿ.
ಇಂಥ ಹೀನ ಜನಪ್ರತಿನಿಧಿಗಳಿಗೆ ಜನಸಾಮಾನ್ಯರು ಮುಂದೆಯಾದರೂ ಸರಿಯಾದ ಪಾಠ ಕಲಿಸಲೇಬೇಕು. ಇಲ್ಲದೆ ಹೋದರೆ ಅದರ ಪರಿಣಾಮವನ್ನು ಜನಸಾಮಾನ್ಯರೇ ಉಣ್ಣಬೇಕಾದ ದಿನ ದೂರವಿಲ್ಲ... ಎಚ್ಚ್ಚರ...