Sunday, November 9, 2008

ದೇಸಿ ಕೃಷಿಯಿಂದ ಮಾತ್ರ ರೈತರಿಗೆ ಬದುಕು...

ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಒಂದೇ ತಿಂಗಳಲ್ಲಿ ಹತ್ತು ರೈತರು ಗೊಬ್ಬರದ ವಿಚಾರಕ್ಕೆ ಕೊನೆಯುಸಿರೆಳೆದಿದ್ದಾರೆ. ಒಬ್ಬ ಗೋಲಿಬಾರ್‌ನಲ್ಲಿ, ಮತ್ತೆ ಒಂಬತ್ತು ಮಂದಿ ವಿಷ ಕುಡಿದು ತಮ್ಮ ಕುಟುಂಬವನ್ನು ಬೀದಿಗೆ ತಂದಿಟ್ಟಿದ್ದಾರೆ. ಈ ಎರಡೂ ರೀತಿಯ ಸಾವಿಗೆ ಸರಕಾರವೇ ನೇರ ಕಾರಣ.
೧೯೬೦ಕ್ಕಿಂತ ಹಿಂದೆ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದುಳಿದಿದ್ದಾಗ ಅದನ್ನು ಸರಿದೂಗಿಸುವ ಸಲುವಾಗಿ ಕೇಂದ್ರ ಸರಕಾರ ಸ್ವಾಮಿನಾಥನ್ ಆಯೋಗವನ್ನು ರಚಿಸಿ, ಕೃಷಿ ನೀತಿಯನ್ನು ಬದಲಿಸಲು ಪ್ರಯತ್ನಿಸಿತು. ರೈತರು ತಮ್ಮ ಜಮೀನುಗಳಲ್ಲಿ ಉತ್ತಮ ಹಾಗೂ ಅತ್ಯಕ ಬೆಳೆ ಬೆಳೆಯಬೇಕಾದರೆ ಐರೋಪ್ಯ ರಾಷ್ಟ್ರಗಳಂತೆ ಆಧುನಿಕ ಕೃಷಿ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ಪ್ರಚಾರ ಮಾಡಿ, ರೈತರನ್ನು ದಿಕ್ಕು ತಪ್ಪಿಸಲಾಯಿತು.
ಆದರೆ ಆಧುನಿಕ ನೀತಿಯಿಂದ ಅಡ್ಡ ಪರಿಣಾಮಗಳಾಗಬಹುದು, ಮುಂದೊಂದು ದಿನ ಇಂಥ ಸ್ಥಿತಿ ತಲುಪುತ್ತೇವೆ ಎಂಬ ಭಯವಾಗಲಿ, ವಿಚಾರಶೀಲತೆ, ವಿವೇಕವಾಗಲಿ ಆಗ ಅಂದಿನ ಸಚಿವರಿಗಾಗಲಿ, ಅಕಾರಿಗಳಿಗಾಗಲಿ ಇರಲಿಲ್ಲ. ಅದರ ಫಲವಾಗಿ ಉಂಟಾಗಿದ್ದೇ ‘ಹಸಿರುಕ್ರಾಂತಿ’. ಆಗ ರಸಗೊಬ್ಬರ ಬಳಕೆ ಅತಿಯಾಗದಂತೆ ಮತ್ತು ಇದರ ಬಳಕೆಯಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಯಾರೊಬ್ಬರೂ ಯೋಚಿಸಲಿಲ್ಲ. ಸರಕಾರ ಕೂಡ ಅದರ ಬಗ್ಗೆ ಜನಜಾಗೃತಿ ಮೂಡಿಸಲಿಲ್ಲ. ಅದರ ಪ್ರತಿಫಲಗಳೇ ಇಂದಿನ ರೋದನಗಳು...
ಜಾಗತೀಕರಣದ ಹೆಸರಿನಲ್ಲಿ ಕಾಲಿಟ್ಟ ಆಧುನಿಕ ನೀತಿಗೆ ದೇಶದ ರೈತರು ಮೊರೆ ಹೋಗಿ ತಮ್ಮ ಮೂಲ ಪದ್ಧತಿಯನ್ನೇ ಮೂಲೆಗುಂಪು ಮಾಡಿದರು. ಸರಕಾರಗಳ ಮೇಲೆ ನಂಬಿಕೆ ಇಟ್ಟ ಅನ್ನದಾತ ಇಂದು ದೇಶಕ್ಕಿರಲಿ, ತನಗೇ ಅನ್ನವಿಲ್ಲದೆ ಪರದಾಡುವಂತಾಗಿದೆ. ನಮ್ಮ ಸರಕಾರಗಳು ಆ ಮಟ್ಟಿಗೆ ರೈತರನ್ನು ಹಾದಿ ತಪ್ಪಿಸಿ, ಆಟ ಆಡುತ್ತಿವೆ.
ಸ್ವಾತಂತ್ರ್ಯ ಬಂದು ೬೦ ವರ್ಷಗಳಾದರೂ ಕೇಂದ್ರ ಹಾಗೂ ರಾಜ್ಯಗಳಲ್ಲಿ ಕೃಷಿ ಬಗ್ಗೆ ಪರಿಣತಿ ಪಡೆದ ಒಬ್ಬರೇ ಒಬ್ಬರು ಕೂಡ ಮಂತ್ರಿಗಳಾಗಲಿಲ್ಲ. ಮಂತ್ರಿಗಳಾದ ಮಹನೀಯರಿಗೆ ಕೃಷಿಯ ವಾಸ್ತವ ಸ್ಥಿತಿ ಗೊತ್ತಿರಲಿಲ್ಲ, ಕೊನೆಪಕ್ಷ ತಿಳಿದುಕೊಳ್ಳುವ ಪ್ರಯತ್ನ ಕೂಡ ಆಗಲಿಲ್ಲ. ಅದರ ಫಲವಾಗಿ ಇಂದು ರೈತ ವಿಷ ಕುಡಿಯುವ, ನೇಣಿಗೆ ಕೊರಳೊಡ್ಡುವ ದಾರಿ ಹಿಡಿಯುತ್ತಿದ್ದಾನೆ. ಆಗಾಗ ತಾಳ್ಮೆ ಕಳೆದುಕೊಂಡು ‘ಗುಂಡಿಗೆ’ ಬಲಿಯಾಗುತ್ತಿದ್ದಾನೆ.
ರೈತರ ಬದುಕು ಬೀದಿಗೆ ಬಿದ್ದು ಈ ರೀತಿ ಮಾಧ್ಯಮಗಳಲ್ಲಿ ಸುದ್ದಿಯಾದಾಗಲೆಲ್ಲ ಜನಪ್ರತಿನಿಗಳು, ಬುದ್ಧಿಜೀವಿಗಳು, ಪ್ರಗತಿಪರ ಕೃಷಿಕರು ಸಾವಯವ ಕೃಷಿಯ ಬಗ್ಗೆ ಮಾತನಾಡುತ್ತಾರೆ !
ನಮ್ಮ ರೈತರಲ್ಲಿ ಮಳೆಯನ್ನು ಕಂಡು ಬೆಳೆ ಬೆಳೆಯುವವರೆ ಹೆಚ್ಚು . ಮೇಲಾಗಿ ಈ ರೈತರು ಈಗಾಗಲೇ ಶೇ.೧೭೦ರಷ್ಟು ರಸಗೊಬ್ಬರ ಬಳಕೆಯನ್ನೇ ಮುಂದುವರಿಸಿದ್ದಾರೆ. ರಸಗೊಬ್ಬರ ಹಾಕಿದರೆ ಮಾತ್ರ ಬೆಳೆ ಬೆಳೆಯಲು ಸಾಧ್ಯ ಎಂಬ ಅನಿವಾರ್ಯ ಸ್ಥಿತಿ ತಲುಪಿದ್ದಾರೆ. ಇದರಿಂದ ಭೂಮಿಯಲ್ಲಿರುವ ಸೂಕ್ಷ್ಮಜೀವಿಗಳು ಶೇ.೭೫ರಷ್ಟು ನಾಶವಾಗಿವೆ ! ಹೀಗಾಗಿ ರಸಗೊಬ್ಬರ ಬೇಕೆ ಬೇಕು...
ಬೆಳೆ ಬೆಳೆಯುವ ನಮ್ಮ ಜನರಿಗೆ ಸುಲಭವಾಗಿ ಸಿಕ್ಕುವುದು ಕೊಟ್ಟಿಗೆ ಅಥವಾ ತಿಪ್ಪೆಗೊಬ್ಬರ. ಸೆಗಣಿಗೆ ಸಾಕಷ್ಟು ದಿನಗಳ ವರೆಗೆ ತೇವಾಂಶವನ್ನು ಹಿಡಿದಿಡುವ ಶಕ್ತಿ ಇದೆ. ಅದೇ ಕಾರಣಕ್ಕೆ ರೈತನಿಗೆ ಇದೇ ಜೀವಾಳ. ಯಾವುದೇ ಗ್ರಾಮೀಣ ಪ್ರದೇಶಗಳಿಗೆ ಹೋದರೂ ಅಲ್ಲಿ ದನ, ಕರು, ಕುರಿಗಳನ್ನು ಸಾಕುವ ರೈತರು ಊರ ಹೊರಗಡೆ ಸೆಗಣಿ, ಗಂಜಲ, ಹಸುಗಳು ತಿಂದು ಬಿಟ್ಟ ಹುಲ್ಲನ್ನು ಪ್ರತಿನಿತ್ಯವೂ ತಿಪ್ಪೆಗೆ ಹಾಕಿ ವರ್ಷಕ್ಕೆ ಒಮ್ಮೆ ಇದನ್ನು ಹೊಲಗಳಿಗೆ ಸಾಗಿಸುತ್ತಾರೆ. ಆದರೂ ಜತೆಗೆ ರಸಗೊಬ್ಬರ ಬಳಸುತ್ತಿದ್ದಾರೆ.
ರೈತರಿಗೀಗ ಬೇಕಿರುವುದು ಕೇವಲ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಹೇಳುವ ‘ಕೃಷಿ ಪಾಠ ’ ವಲ್ಲ ; ರಾಜಕಾರಣಿಗಳ ಭರವಸೆಗಳ ‘ನುಡಿಮುತ್ತು’ಗಳೂ ಅಲ್ಲ. ‘ಪ್ರಗತಿಪರ ರೈತ’ರೆನಿಸಿಕೊಂಡಿರುವ ‘ಶ್ರೀಮಂತ ರೈತ ’ರ ಭೂಧನೆಗಳೂ ಅಲ್ಲ. ಬದಲಿಗೆ ವಾಸ್ತವ ಕೃಷಿ ದೇಸಿ ಕೃಷಿ ...
ಹೌದು, ನಾವು ಹೇಳುವ ಮಾತಿಗೂ ವಾಸ್ತವ ಕೃಷಿಗೂ ಅಜಗಜಾಂತರ ವ್ಯತ್ಯಾಸವಿದೆ. ಆ ಕಾರಣಕ್ಕೇ ರೈತರು ಇದೂವರೆಗೂ ಉದ್ಧಾರವಾಗಿಲ್ಲ. ಮಳೆ ನೋಡಿ ಬೆಳೆ ಬೆಳೆಯುವ ರೈತರು ನೇರವಾಗಿ ಸಾವಯವ ಕೃಷಿಗೆ ಮುಂದಾಗದೆ ಕೈಸುಟ್ಟುಕೊಂಡು ಬೆಳೆ ಬರುವುದಕ್ಕಿಂತ ಮುಂಚಿತವಾಗಿಯೇ ಬೀದಿಗೆ ಬೀಳುತ್ತಾರೆ. ಆ ಕಾರಣಕ್ಕೇ ಎಲ್ಲರೂ ಹಿಂದೆ ಮುಂದೆ ನೋಡುವುದು. ಏಕ ಕಾಲಕ್ಕೆ ಸಾವಯವ ಕೃಷಿಗೆ ಕೈ ಹಾಕುವುದು ‘ಪುಸ್ತಕದ ಬದನೆಕಾಯಿ’ ಯನ್ನು ಸಾಂಬಾರು ಮಾಡಿದಂತೆ !!
ರೈತರ ಹೊಲ ಗದ್ದೆಗಳೀಗ ಹತ್ತಾರು ವರ್ಷಗಳ ಹಿಂದೆ ಹೈಟೆಕ್ ಸಿಟಿಗಳಿಗೆ ಸೇರಿದ ಕುಟುಂಬದಂತಾಗಿದೆ. ಆಧುನಿಕ ನಗರದಲ್ಲಿ ಬೆಳೆದ ಮಕ್ಕಳು ಸದಾ ಪಿಜಾ, ಬರ್ಗರ್, ಐಸ್‌ಕ್ರೀಮ್ ಹಾಗೂ ಫಾಸ್ಟ್ ಫುಡ್ ತಿಂದು ಬೆಳೆದಿರುತ್ತಾರೆ. ನೈಜ ಉಪ್ಪು , ಹುಳಿ, ಖಾರದ ರುಚಿ ಹಾಗೂ ಅವುಗಳಿಂದ ಆರೋಗ್ಯಕ್ಕಾಗುವ ಲಾಭಗಳೇ ಅವರಿಗೆ ಗೊತ್ತಿರುವುದಿಲ್ಲ. ಅವರಿಗೆ ಏಕಾಏಕಿ ಒಣ ಜೋಳದ ರೊಟ್ಟಿ, ಖಾರದ ಚಟ್ನಿ ಕೊಟ್ಟು ‘ತಿನ್ನು ’ ಎಂದರೆ ಹೇಗೆ ಸಾಧ್ಯ ?
ರೊಟ್ಟಿ ಚಟ್ನಿ ಅಗೆದು ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ಜತೆಗೆ ಮುಖದ ಸ್ನಾಯುಗಳ ವ್ಯಾಯಾಮಕ್ಕೂ ಅದು ಸಹಕಾರಿ ಎನ್ನುವುದು ಗೊತ್ತು. ಅದನ್ನೇ ತಿಂದು ಬದುಕುತ್ತಿದ್ದ ಹಿಂದಿನವರೂ ಆರೋಗ್ಯವಂತವಾಗಿದ್ದರು ; ಹೆಚ್ಚು ಕಾಲ ಬದುಕುತ್ತಿದ್ದರು ಎಂಬುದನ್ನು ಅವರು ಅರಿತಿರುತ್ತಾರೆ. ಆದರೆ ಏಕಾಏಕಿ ಅದನ್ನೇ ತಿಂದು ಬದುಕಬೇಕು ಎಂದು ಹೇಳಿದರೆ ಹೇಗಾಗುತ್ತದೆ ಯೋಚಿಸಿ. ಅದೇ ಸ್ಥಿತಿ ಈಗ ರೈತರ ಭೂಮಿಯದ್ದಾಗಿದೆ.
ಸಾವಯವ ಕೃಷಿ ನಡೆಸಬೇಕಾದರೆ ಸ್ವಲ್ಪವಾದರೂ ನೀರು ಬೇಕು. ಮೂಲ ಸೌಕರ್ಯ ಬೇಕು. ಕುಡಿಯಲು ನೀರಿಲ್ಲದೆ ಪ್ರತಿನಿತ್ಯ ಪರಿತಪಿಸುವ ರೈತರು ಹೇಗೋ ಬದುಕು ಸಾಗಿಸುತ್ತಾರೆ. ಅಂಥದರಲ್ಲಿ ಸಾವಯವ ಕೃಷಿ ಮಾಡುವುದಾದರೂ ಎಲ್ಲಿಂದ ? ಅವರಿಗೆ ಗೊತ್ತಿರುವುದು ಒಂದೇ, ಕೊಟ್ಟಿಗೆ ಗೊಬ್ಬರ ಬಳಸಿ ರೈತಾಪಿ ಮಾಡುವುದು. ಹಿಂದೆ ಮಾಡುತ್ತಿದ್ದುದೂ ಇದೆ. ಆದರೆ ಜಾಗತೀಕರಣದ ಕುತಂತ್ರ ಹಾಗೂ ಸರಕಾರಗಳ ದೂರಾಲೋಚನೆಯ ಕೊರತೆಯಿಂದ ರೈತರು ಇಂದು ಬಲಿಪಶುಗಳಾಗಿ ಕೊನೆಯುಸಿರೆಳೆಯಬೇಕಾಗಿದೆ.
ನಮ್ಮ ಭೂಮಿಯಲ್ಲಿ ಈಗ ನೀರಿನ ಅಂಶ ಕೂಡ ಇಲ್ಲದಾಗಿದೆ. ಮಳೆಯ ನೀರು ಜಮೀನುಗಳಲ್ಲಿಯೇ ಇಂಗಿಸುವ ಕೆಲಸ ಮೊದಲು ಆಗಬೇಕು. ಅದೂ ಸಣ್ಣ ಸಣ್ಣ ಪ್ರಮಾಣದಲ್ಲಿ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ. ಜತೆಗೆ ಹಳೆಯ ದೇಸೀ ಕೃಷಿ ನೀತಿಯನ್ನು ಪುನಃ ಮುಂದುವರಿಸುವಂತೆ ವಾಸ್ತವ ಪ್ರಾತ್ಯಕ್ಷಿಕೆಯ ಮೂಲಕ ಜನ ಜಾಗೃತಿ ಮೂಡಿಸಬೇಕು .
ಇಲ್ಲಿ ಅರ್ಧ ಗುಂಟೆಯಿಂದ ೩ ಎಕರೆ ಒಳಗಡೆಯೇ ಜಮೀನು ಹೊಂದಿರುವ ಸಣ್ಣ ರೈತರೇ ಹೆಚ್ಚು. ಅವರಿಗೆ ಯಾವುದೇ ಬೋರ್‌ವೆಲ್‌ಗಳಿರುವುದಿಲ್ಲ. ಕೆರೆ ಕಟ್ಟೆಗಳ ಸೌಲಭ್ಯವೂ ಇಲ್ಲ. ಆದ್ದರಿಂದ ಶ್ರೀಮಂತ ರೈತರಿಗೆ ಹಾಗೂ ಬೋರ್‌ವೆಲ್ ಹೊಂದಿರುವ ರೈತರಿಗೆ ಮಾಹಿತಿ ನೀಡುವ ಬದಲು ಬಡ ಹಾಗೂ ಸಣ್ಣ ರೈತರಿಗೆ ಸಮಗ್ರ ಮಾಹಿತಿ ನೀಡಿ, ಜನಾಂದೋಲನದ ರೀತಿ ಸರಕಾರ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಬೇಕು. ಅದು ಕೇವಲ ಒಂದು ವರ್ಷವಲ್ಲ. ನಿರಂತರವಾಗಿ... ಇದರಿಂದ ಎಲ್ಲೆಡೆ ಭೂಮಿಯ ಆಳದಲ್ಲಿ ನೀರು ಶೇಖರಣೆಯಾಗುತ್ತದೆ. ಭೂಮಿ ತನ್ನ ಸತ್ವ ಗಳಿಸಿಕೊಳ್ಳುತ್ತದೆ. ಆಗ ಮಾತ್ರ ಸಾವಯವ ಕೃಷಿ ನೀತಿಯನ್ನು ಅಳವಡಿಸಬಹುದು.
ರಸಗೊಬ್ಬರಗಳಿಗೆ ಒಗ್ಗಿ ಹೋಗಿರುವ ನೆಲ ಈಗ ಮತ್ತೆ ಹಳೆ ರೀತಿಯಲ್ಲಿ ಹೊಂದಿಕೊಳ್ಳಬೇಕಾದಲ್ಲಿ ಕನಿಷ್ಠ ೩೦ ವರ್ಷಗಳು ಬೇಕು ! ಅದನ್ನು ಮೊದಲು ಸರಕಾರ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ನೀರು ಇಂಗಿಸುವ ಹಾಗೂ ಸಹಜ ಕೃಷಿಯನ್ನು ಕಾರ್ಯರೂಪಗೊಳಿಸುವ ಕೆಲಸ ಸರಕಾರದ ನೇತೃತ್ವದಲ್ಲಿಯೇ ನಡೆಯಬೇಕು. ಆಗ ಮಾತ್ರ ರೈತರು ಈ ರಸಗೊಬ್ಬರ ಸಮಸ್ಯೆಯಿಂದ ದೂರ ಉಳಿಯಲು ಸಾಧ್ಯ. ದೇಸಿ ಕೃಷಿಯ ಅಳವಡಿಕೆ ಮೂಲಕ ರೈತರ ಬದುಕು ಹಸನಾದರೆ ಮತ್ತೆ ದೇಶ ತನ್ನತನವನ್ನು ಮೆರೆಯಲು ಸಾಧ್ಯ.

No comments: