Sunday, November 9, 2008

ದೀಪ್ತಿಯಾಗಲಿ ಎಲ್ಲರ ಬದುಕು...





ದೀವಳಿಗೆ ಹಬ್ಬ ದೀಪಾವಳಿ. ಹಳ್ಳಿ ಜನರಿಗೆ ಸುಗ್ಗಿ ಕಾಲ. ಎಷ್ಟೊಂದು ಅರ್ಥಪೂರ್ಣ ಹಬ್ಬ ಅಲ್ಲವೇ ? ವರ್ಷವಿಡೀ ಹೊಲದಲ್ಲಿ ಬಿಸಿಲು, ಮಳೆ ಎನ್ನದೆ ಬೆವರು ಸುರಿಸಿ ದುಡಿದ ರೈತನಿಗೆ ಬೆಳೆ ಬಂದ ಸಂತಸ ಆ ಮೂಲಕ ಆ ಇಡೀ ಕುಟುಂಬದ ಬಾಳಿನಲ್ಲಿ ಬೆಳಕು ಮೂಡುವ ಅಪೂರ್ವ ಕ್ಷಣ ಈ ಕಾರ್ತಿಕ ಮಾಸ...
ಹೆಚ್ಚುತ್ತಿರುವ ನಗರೀಕರಣ, ಪಾಶ್ಚಾತ್ಯೀಕರಣ, ಆಧುನಿಕತೆಯ ಸೋಗುಗಳು ಇಂದು ಈ ನೆಲದ ಸೊಗಡನ್ನು ಒಂದೊಂದಾಗಿ ನುಂಗಿ ನೀರು ಕುಡಿಯುತ್ತಿವೆ. ಆದರೆ ಎಲ್ಲೋ ಒಂದು ಮೂಲೆಯಲ್ಲಿ ಇನ್ನೂ ಆ ಸೊಗಡು ಉಳಿದಿದೆ. ಮತ್ತೆ ಚಿಗುರೊಡೆಯಲು ಹಪಹಪಿಸುತ್ತಿದೆ. ಆ ಸೊಗಡುಗಳಲ್ಲಿ ದೀಪಾವಳಿ ಹಬ್ಬ ಕೂಡ ಒಂದು. ನಗರ ಪ್ರದೇಶಗಳಲ್ಲಿ ದೀವಳಿಗೆಯನ್ನು ಕೇವಲ ಪಟಾಕಿ ಸಿಡಿಸಿ, ಕಿವಿಗಡುಚಿಕ್ಕುವಂತೆ ಶಬ್ದ ಬರಿಸಿ ಸಂಭ್ರಮಿಸುವ ಸಂಪ್ರದಾಯ ಬೆಳೆದು ಬರುತ್ತಿದೆ.
ಆದರೆ ಹಳ್ಳಿಗಳಲ್ಲಿ ಹಾಗಿಲ್ಲ. ದೀಪಾವಳಿಗೆ ವಿಶೇಷ ಆದ್ಯತೆ . ಈ ಹಬ್ಬಕ್ಕೆ ಕೇವಲ ಮನೆ ಅಂಗಳದಲ್ಲಿ ಮಾತ್ರ ದೀಪ ಹಚ್ಚುವುದಿಲ್ಲ. ಮನದ ಅಂಗಳದಲ್ಲೂ ದೀಪ ಬೆಳಗಿಸುತ್ತದೆ. ಅದು ನಂದಾದೀಪವಾಗಲಿ ಎಂದು ಎಲ್ಲರೂ ಹಾರೈಸುತ್ತಾರೆ.
ಈ ದೀಪಾವಳಿಗೆ ಹಳ್ಳಿಗಳಲ್ಲಿ ಕೆಲವು ಕಡೆ ‘ಹಟ್ಟಿಹಬ್ಬ ’ ಎಂಥಲೂ ಕರೆಯುವುದುಂಟು. ಏಕೆಂದರೆ ಹಳ್ಳಿಗಳಲ್ಲಿ ರೈತರ ಬದುಕು ಹಸನಾಗಲು ದನಕರುಗಳು ಬೇಕೇ ಬೇಕು. ಆಧುನಿಕತೆ ಎಷ್ಟೇ ಮುಂದುವರಿದರೂ ಅವರ ಬದುಕು ಅವುಗಳ ಮೇಲೆಯೇ ಅವಲಂಬಿತವಾಗಿರುತ್ತದೆ . ದನಕರುಗಳ ವಾಸ ಸ್ಥಾನ ಹಟ್ಟಿ ಅಥವಾ ಕೊಟ್ಟಿಗೆ. ಹೀಗಾಗಿ ಅದು ಚೆನ್ನಾಗಿದ್ದರೆ ದನಕರುಗಳು ಚೆನ್ನಾಗಿರುತ್ತವೆ. ದನಕರುಗಳು ಚೆನ್ನಾಗಿದ್ದರೆ ನಾವೆಲ್ಲಾ ಚೆನ್ನಾಗಿರುತ್ತೇವೆ ಎನ್ನುವುದು ಗ್ರಾಮೀಣ ಪ್ರದೇಶದ ಜನರ ನಂಬಿಕೆ.
ಹಟ್ಟಿ ಪೂಜೆ :
ಅಮಾವಾಸ್ಯೆಯ ದಿನ ಹಳ್ಳಿಗಳಲ್ಲಿ ತಮ್ಮ ಮನೆಯನ್ನು ಒಪ್ಪ ಓರಣವಾಗಿ ಮಾಡುತ್ತಾರೆ. ಸುಣ್ಣ, ಬಣ್ಣ ಬಳಿಯುತ್ತಾರೆ. ಮನೆಯ ನೆಲ ಹಾಗೂ ಹಟ್ಟಿಯನ್ನು ಸಾರಿಸಿ ರಂಗೋಲಿ ಹಾಕುತ್ತಾರೆ. ಬೆಳಗ್ಗೆಯೇ ದನಕರುಗಳಿಗೆ ಸ್ನಾನ ಮಾಡಿಸಿ ಅವುಗಳಿಗೆ ‘ಗುಲ್ಲು ’ ಕೊಡುತ್ತಾರೆ . ಇದು ಕೇವಲ ದನಕರುಗಳಿಗೆ ಮಾತ್ರವಲ್ಲ ಮಕ್ಕಳಿಗೆ ನಡೆಯುತ್ತದೆ. ಆದರೆ ಅವರಿಗೆ ಊದುಬತ್ತಿಯಲ್ಲಿ ಗುಲ್ಲು ಕೊಡುತ್ತಾರೆ. ಈ ಗುಲ್ಲು ಕೊಡುವುದರಿಂದ ಯಾವುದೇ ರೋಗರುಜಿನಗಳು ಬರುವುದಿಲ್ಲ ಎಂಬುದು ಹಳ್ಳಿಗರ ನಂಬಿಕೆ.
ಯುವತಿಯರು ರಂಗೋಲಿ ಇಡುವುದರಲ್ಲಿ ಮನೆಯನ್ನು ಶೃಂಗಾರಗೊಳಿಸುವುದರಲ್ಲಿ ನಿರತರಾಗಿ ಸಂಭ್ರಮಪಟ್ಟರೆ , ಯುವಕರು ಎತ್ತುಗಳಿಗೆ ಮೈ ತೊಳೆದು ಅವುಗಳನ್ನು ಸಿಂಗರಿಸಿ, ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ , ಟೇಪು , ಕೊಬ್ಬರಿ ಕಟ್ಟಿ ಖುಷಿ ಅನುಭವಿಸುತ್ತಾರೆ. ಅದಕ್ಕೂ ಮುಂಚೆ ನೇಗಿಲು, ನೊಗ, ಎತ್ತಿನ ಗಾಡಿ, ಕೊರಡು, ಕುಂಟೆಗಳೆಲ್ಲವನ್ನೂ ತೊಳೆದು ಅವುಗಳಿಗೆ ಸುಣ್ಣ ಹಾಗೂ ಕೆಮ್ಮಣ್ಣುವಿನಿಂದ ಗುಲ್ಲು ಇಡುತ್ತಾರೆ. ಮನೆಯಲ್ಲಿ ಇರುವ ಆಯುಧಗಳನ್ನು ಹಾಗೂ ಯಂತ್ರಗಳನ್ನು ತೊಳೆದು ಪೂಜೆ ಮಾಡುತ್ತಾರೆ. ಅದೇ ಲಕ್ಷ್ಮೀ ಪೂಜೆ.
ವರ್ಷವಿಡೀ ದುಡಿದ ರೈತನಿಗೆ ಕೆಲವೊಮ್ಮೆ ಬೆಳೆ ಮಾರಿದ ಹಣ ಕೂಡ ಬಂದಿರುತ್ತದೆ. ಆಗ ನಿಜಕ್ಕೂ ಲಕ್ಷ್ಮೀ ಪೂಜೆ. ಆಯುಧಗಳ ಜತೆಗೆ ಹಣವನ್ನೂ ಇಟ್ಟು ಕೆಲವೆಡೆ ಪೂಜೆ ಮಾಡುತ್ತಾರೆ.
ಬಲಿಪಾಡ್ಯಮಿಯ ದಿನ ನಿಜಕ್ಕೂ ಹಟ್ಟಿ ಹಬ್ಬ ಅಥವಾ ದೀಪಾವಳಿ. ಬೆಳಗ್ಗೆಯೇ ಮನೆ ಹಾಗೂ ಹಟ್ಟಿ ಹಸಿರು ಮಾವಿನ ತೋರಣಗಳಿಂದ ಸಿಂಗಾರಗೊಂಡಿರುತ್ತದೆ. ಅದನ್ನು ನೋಡಲು ಎರಡು ಕಣ್ಣುಗಳು ಸಾಲವು. ಬೆಳಗ್ಗೆ ಎದ್ದು ಮಹಿಳೆಯರು ಸೆಗಣಿಯಿಂದಲೇ ಕೊಟ್ಟಿಗೆಯಲ್ಲಿ ‘ಹಟ್ಟಿ ’ ( ನವ ದೇವತೆಗಳಿಗಾಗಿ ಒಂಬತ್ತು ಮನೆಯ ಒಂದು ಆವಾಸ ಸ್ಥಾನ ) ಹಾಕುತ್ತಾರೆ .
ಹೋಳಿಗೆ , ಅಕ್ಕಿ ಹುಗ್ಗಿ, ತರ ತರನಾದ ಪಲ್ಯೆ, ಅನ್ನ , ಸಾಂಬಾರು ಮಾಡಿ, ಮನೆ ದೇವರಿಗೆ ನೈವೇದ್ಯ ಮಾಡುತ್ತಾರೆ. ಅನಂತರ ಸೆಗಣಿಯಲ್ಲಿ ಗುಪ್ಪೆಗಳನ್ನು ( ಗುರುಜವ್ವ ದೇವತೆ) ಮಾಡಿ ನಮೆಯ ಎಲ್ಲ ಬಾಗಿಲುಗಳಿಗೆ ಎರಡೆರಡು ಇಡುತ್ತಾರೆ. (ಇದು ದುಷ್ಟ ಶಕ್ತಿಯನ್ನು ಮನೆಯೊಳಗೆ ಬಿಡದಂತೆ ಕಾಪಾಡುವ ಶಕ್ತಿ ಹೊಂದಿದೆ ಎಂಬುದು ಅವರ ನಂಬಿಕೆ.) ನಂತರ ಹಟ್ಟಿಯ ಒಂಬತ್ತು ಕೋಣೆಗಳಿಗೆ ಒಂದೊಂದು ರೀತಿಯ ಬಣ್ಣ ಬಳಿದು, ಅದನ್ನು ಚೆಂಡು ಹೂವು, ಉತ್ರಾಣಿ ಕಡ್ಡಿ, ಅಣ್ಣಿ ಹೂವು, ಗೇರು ಬೀಜ, ಬತ್ತದ ಗರಿ, ಬಾಮ್‌ದಂಡಿ, ಕಬ್ಬು, ಗರಿಕೆ ಹುಲ್ಲು, ಮುಂತಾದ ಹಟ್ಟಿಗೆ ಪ್ರಿಯವಾದ ಹೂವು ಹಣ್ಣುಗಳಿಂದ ಸಿಂಗರಿಸುತ್ತಾರೆ. ನಂತರ ಒಂದು ಮಣ್ಣಿನ ಮಡಕೆಯಲ್ಲಿ ನೀರು ತುಂಬಿ ಅದಕ್ಕೆ ಸೀರೆ, ಅಥವಾ ರವಿಕೆ ಬಟ್ಟೆಯನ್ನು ಹೊದಿಸಿ, ತಾಳಿ ಹಾಕಿ ವಿಶಿಷ್ಟವಾಗಿ ಪೂಜೆ ಮಾಡುತ್ತಾರೆ. ಮನೆಯವರೆಲ್ಲಾ ಪೂಜೆ ಮಾಡಿದ ಬಳಿಕ ಕೃಷಿ ಸಲಕರಣೆಗಳಾದ ನೇಗಿಲು, ನೊಗ, ಎತ್ತಿನ ಗಾಡಿ, ಕುಂಟೆ, ಕೊರಡುಗಳಿಗೂ ಪೂಜೆ ಮಾಡುತ್ತಾರೆ.
ಇದೆಲ್ಲವೂ ಆದ ಮೇಲೆ ಎತ್ತುಗಳಿಗೆ ಹಸುಗಳಿಗೆ ಪೂಜೆ. ಎತ್ತುಗಳನ್ನು ಅಂದು ಕೊಟ್ಟಿಗೆಗೆ ತಂದು ಅವುಗಳಿಗೆ ಪೂಜೆ ಮಾಡಿದ, ನೈವೇದ್ಯ ಮಾಡಿದ ನಂತರ ಮನೆಯವರಿಗೆ ಊಟ...
ಹಬ್ಬ ಇಲ್ಲಿಗೇ ಮುಗಿಯುವುದಿಲ್ಲ ; ನಿಜವಾದ ಹಬ್ಬ ಶುರುವಾಗುವುದೇ ಈಗ...
ದನ ಬೆದರಿಸುವುದು....
ದೀಪಾವಳಿಯು ಬಹು ಮುಖ್ಯವಾಗಿ ರಂಗು ಪಡೆಯುವುದೇ ಮಧ್ಯಾಹ್ನದ ಮೇಲೆ. ಹೌದು, ಬೆದರುವ ಎತ್ತುಗಳನ್ನು ಚೆನ್ನಾಗಿ ಸಿಂಗರಿಸಿ, ಅವುಗಳನ್ನು ಊರ ಅಗಸಿ ಬಾಗಿಲಿನಲ್ಲಿ ಜನರ ಮಧ್ಯೆ ತಂದು ಬಿಡುತ್ತಾರೆ. ಅದಕ್ಕೂ ಮುನ್ನ ಅವುಗಳಿಗೆ ಕೊಬ್ಬರಿ ( ಕೆಲವೆಡೆ ಗಿಟಗ ಎನ್ನುತ್ತಾರೆ) ಸರ ಕಟ್ಟುತ್ತಾರೆ. ಅವುಗಳನ್ನು ಪಡ್ಡೆ ಹುಡುಗರು ಹಿಡಿದು ಕಿತ್ತುಕೊಳ್ಳಬೇಕು( ಕೆಲವೆಡೆ ಇದಕ್ಕೆ ಬಹುಮಾನವೂ ಇರುತ್ತದೆ.).
ಇದನ್ನು ನೋಡುವುದೇ ಹಳ್ಳಿಯ ಜನರಿಗೆ ಒಂದು ಸಂಭ್ರಮ. ಆ ದಿನ ಮಹಿಳೆಯರು, ಮಕ್ಕಳು ವೃದ್ಧರು ಎನ್ನದೇ ಎಲ್ಲರೂ ಅಗಸಿ ಬಾಗಿಲಿನಲ್ಲಿ ನಿಲ್ಲುತ್ತಾರೆ. ಹಬ್ಬವನ್ನು ಮನಸ್ಪೂರ್ವಕವಾಗಿ ಸವಿಯುತ್ತಾರೆ.
ಒಂದೊಂದು ಹೋರಿ ಒಂದೊಂದು ರೀತಿ ಅಂದು ತನ್ನ ತಾಕತ್ತು ಹಾಗೂ ಚಾಕಚಕ್ಯತೆ ಪ್ರದರ್ಶನ ಮಾಡುತ್ತದೆ. ಹೆಚ್ಚು ಸಾರಿ ಜನರ ಮಧ್ಯೆ ಕೊಬ್ಬರಿ ಕಿತ್ತುಕೊಳ್ಳಲು ಅವಕಾಶ ನೀಡದೇ ತಪ್ಪಿಸಿಕೊಂಡು ಬರುವ ಎತ್ತಿಗೆ ಅಂದು ಬಹುಮಾನ. ಅವರ ಮನೆಯವರಿಗೆ ಸಗ್ಗದ ಸಿರಿ. ನಿಜಕ್ಕೂ ಅದು ರೋಮಾಂಚನ. ಇಲ್ಲಿ ಕೆಲವೊಮ್ಮೆ ಅವಘಡಗಳೂ ಸಂಭವಿಸುವ ಸಾಧ್ಯತೆ ಇರುತ್ತದೆ. ಆದರೆ ಆ ಸಂಭ್ರಮದ ನಡುವೆ ಅದೆಲ್ಲವೂ ನಗಣ್ಯ...
ಅದಕ್ಕಾಗಿಯೇ ಇಡೀ ಊರಿನ ಎಲ್ಲ ಮನೆಯಿಂದಲೂ ಹಣ ಸಂಗ್ರಹಿಸಿ ಊರಿನ ಮುಂಭಾಗವನ್ನು ಸಿಂಗಾರ ಮಾಡಿರುತ್ತಾರೆ. ಮೈಕು ಹಾಕಿರುತ್ತಾರೆ. ಹೀಗಾಗಿ ಎಲ್ಲ ಜಾತಿ ಮತ, ಭೇದಗಳನ್ನೂ ಮರೆತು ಸಾಮರಸ್ಯದಿಂದ ಹಬ್ಬ ಆಚರಿಸುತ್ತಾರೆ.
ದೀಪದಿಂದ ದೀಪವ...:
ಸಂಜೆಯಾಗುತ್ತಿದ್ದಂತೆಯೇ ಮಕ್ಕಳಿಗೆ ಸಂಭ್ರಮ. ಹೊತ್ತು ಮುಳುಗುವ ಮುನ್ನವೇ ಪಂಜುಗಳನ್ನು ಹೊತ್ತಿಸುತ್ತಾರೆ ಮಕ್ಕಳು. ಇವು ಒಂದು ತಿಂಗಳ ಮುಂಚೆಯೇ ತಯಾರಾಗಿರುತ್ತವೆ. ಮುತ್ತುಗದ ಮರದಿಂದ ಇವುಗಳನ್ನು ತಯಾರಿಸಿ, ಅವುಗಳನ್ನು ಒಂದು ತಿಂಗಳ ಕಾಲ ಬಿಸಿಲಿನಲ್ಲಿ ಒಣಗಿಸಿರುತ್ತಾರೆ. ಹೀಗಾಗಿ ಅದು ಬೆಂಕಿ ಹೊತ್ತಿಕೊಂಡ ಕ್ಷಣವೇ ಪ್ರಾಂಜಲವಾಗಿ ಉರಿಯುತ್ತದೆ.
ಮಕ್ಕಳು ಊರ ಹೊರಗೆ ಇವುಗಳನ್ನು ಉರಿಸಿ ರಾತ್ರಿ ೧೦ ಗಂಟೆಯವರೆಗೆ ಸಂಭ್ರಮಿಸುತ್ತಾರೆ. ಇಲ್ಲಿ ಪಟಾಕಿ ಶಬ್ದವೇ ಇಲ್ಲ ! ನಿಜಕ್ಕೂ ಇದು ಇಲ್ಲಿ ಬೆಳಕಾಗುತ್ತದೆ. ಇತ್ತ ಮನೆಯ ಅಂಗಳದಲ್ಲಿ ಯುವತಿಯರು, ಮಹಿಳೆಯರು ದೀಪವನ್ನು ಬೆಳಗಿಸುತ್ತಾರೆ. ಎಲ್ಲರ ಮನೆಯಲ್ಲೂ ಅವುಗಳ ಜತೆಗೆ ಆಕಾಶ ಬುಟ್ಟಿ ಕೂಡ ಈಗ ಬೆಳಕು ಚೆಲ್ಲುತ್ತಿವೆ.
ಇದೆಲ್ಲ ಎಷ್ಟು ಅರ್ಥಪೂರ್ಣ ಅಲ್ಲವೇ ? ದೀಪಾವಳಿಯ ಹೆಸರಲ್ಲಿ ಕಿವಿ ಕಿತ್ತುಹೋಗುವಂತೆ ಪಟಾಕಿ ಸಿಡಿಸಿ, ಆಕಸ್ಮಿಕವಾಗಿ ಸುಟ್ಟುಕೊಂಡು ಆರ್ತನಾದ ಅನುಭವಿಸುವುದಕ್ಕಿಂತ ಹಳ್ಳಿಗರ ಈ ಅರ್ಥಪೂರ್ಣ ದೀವಳಿಗೆ ಎಷ್ಟು ಚೆಂದ ?
ನಿಜ, ಮನುಷ್ಯ ದೀಪದಿಂದ ದೀಪ ಹಚ್ಚಿ ಬೆಳಕು ನೀಡುವ ಕೆಲಸ ಮಾಡಬೇಕೇ ಹೊರತು ಬೆಂಕಿ ಮೈ ,ಮನಸುಗಳನ್ನು, ಸಿಡಿಸುವ ಕೆಲಸ ಮಾಡಬಾರದು... ಆಧುನಿಕತೆಯ ಮೋಜಿಗೆ ಬಲಿಯಾಗುವುದಕ್ಕಿಂತ ನಮ್ಮತನವನ್ನು ಎಲ್ಲೆಡೆ ಪಸರಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು.

No comments:

Powered By Blogger