
ಕುಲಾಂತರಿ ಎಲ್ಲ ಸಸ್ಯಗಳನ್ನು ವಿಷಯುಕ್ತವಾಗಿಸುತ್ತದೆ. ಆದ್ದರಿಂದ ಇದನ್ನು ಬಳಸಲು ಸಹಜವಾಗಿಯೇ ಭಯವಾಗುತ್ತದೆ. ಇದನ್ನು ಬಳಸುವುದರಿಂದ ನಮ್ಮಷ್ಟಕ್ಕೇ ನಾವೇ ಗುಂಡಿ ತೋಡಿಕೊಂಡ ರೀತಿ. ಅತೀ ಬುದ್ದಿವಂತರು ಎಂದು ಹೇಳಿಕೊಳ್ಳುವ ವಿeನಿಗಳು ಬಿಟಿಯನ್ನು ಬಳಸುವುದರಿಂದ ಹಾನಿಯಾಗುತ್ತದೆ ಎಂಬುದು ಗೊತ್ತಿದ್ದರೂ ತಮ್ಮ ಸ್ವಾರ್ಥಕ್ಕಾಗಿ ಅದನ್ನು ಮುಚ್ಚಿಡುತ್ತಾರೆ ಎನ್ನುವುದು ಅನುವಂಶಿಕತೆ ಶಾಸ್ತ್ರಜ್ಞ(ಜೆನೆಟಿಕ್ಸ್) ಡಾ.ಡೇವಿಡ್ ಸುಜುಕಿ ಅವರ ವಾದ.
ಬಿಟಿ ತಳಿಯಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಜತೆಗೆ ಅನುವಂಶಿಕತೆ ಮೇಲೂ ಪರಿಣಾಮವಾಗುತ್ತದೆ. ಇದರ ಬಳಕೆಯಿಂದ ಮಕ್ಕಳಾಗುವ ಸಾಧ್ಯತೆ ಕೂಡ ಕಡಿಮೆ ಎನ್ನುತ್ತಾರೆ ಇಂಡಿಯನ್ ಬಯೋಡೈವರ್ಸಿಟಿ ಫೋರಂ ಅಧ್ಯಕ್ಷ ಡಾ.ಎಸ್.ಫೈಜಿ.
ಕುಲಾಂತರಿ ತಂತ್ರಜ್ಞಾನದಿಂದ ಪರಿಸರದ ಹಾಗೂ ಜೀವ ಸಂಕುಲದ ಮೇಲೆ ಎಷ್ಟು ಆಳವಾಗಿ ಪರಿಣಾಮ ಬೀರುತ್ತದೆ ಎಂದು ಖಚಿತವಾಗಿ ಹೇಳಲಾಗದು. ಇದರಿಂದಾಗುವ ದುಷ್ಪರಿಣಾಮ ಅಷ್ಟು ಸುಲಭವಾಗಿ, ಬೇಗ ತಿಳಿಯದು. ಅದರಿಂದ ಜೀವ ಸಂಕುಲದ ಚಕ್ರದ ಮೇಲೆ ವ್ಯತಿರಿಕ್ತವಾದ ಪರಿಣಾಮವಾಗಿ ಇಡೀ ವ್ಯವಸ್ಥೆಯೇ ಬದಲಾಗಿಬಿಡುತ್ತದೆ. ಡಿಎನ್‌ಎ ಅನ್ನು ಬಳಸಿ ಅಭಿವೃದ್ಧಿಪಡಿಸುವ ಜೀವತಂತುವನ್ನು ಸಂಪೂರ್ಣವಾಗಿ ಅರ್ಥೈಸಲು ಇದೂವರೆಗೆ ಆಗಿಲ್ಲ. ಜತೆಗೆ ಅದರಿಂದಾಗುವ ದುಷ್ಪರಿಣಾಮಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ (೧೯೯೦) ಎನ್ನುವುದು ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಮುಖ್ಯಸ್ಥರಾದ (ಜೆನಿಟಿಕ್ಸ್) ಪ್ರೊ.ರಿಚರ್ಡ್ಸ್ ಲಿವೋಂಟಿನ್ ಅವರ ಅಭಿಪ್ರಾಯ.
ಹೀಗೆ ಬಯೋಟೆಕ್ನಾಲಜಿ ಬಗ್ಗೆ ಚೆನ್ನಾಗಿ ತಿಳಿದವರೆ ಕುತಾಂತರಿ ತಂತ್ರeನದ ಬಗ್ಗೆ ಬಹಳಷ್ಟು ಸತ್ಯಗಳನ್ನು ಬಹಿರಂಗಪಡಿಸಿದ ಮೇಲೂ ಮಾನ್ಸಂಟೋ ಕಂಪೆನಿ ತಮ್ಮ ಏಜೆಂಟರನ್ನು ಬಿಟ್ಟು ಭಾರತದ ರೈತರ ಮೇಲೆ ಕುಲಾಂತರಿ ತಳಿಗಳನ್ನು ಹೇರುವ ಪ್ರಯತ್ನ ನಡೆಸುತ್ತಲೇ ಇದೆ.
ಸಿನೇರಿಯಾ ಬ್ಯಾಕ್ಟೀರಿ

ಬಹುರಾಷ್ಟ್ರೀಯ ಕಂಪೆನಿಗಳು ಭಾರತದ ಕೃಷಿ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಇದೇ ಮೊದಲಲ್ಲ, ೧೯೫೦ರಿಂದಲೂ ಇಂಥ ಪ್ರವೃತ್ತಿಗಳು ನಡೆಯುತ್ತಲೇ ಇವೆ. ಭಾರತದ ಕೊಬ್ಬರಿ ಎಣ್ಣೆ ತನ್ನ ಉತ್ಕೃಷ್ಟತೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಜನತೆಯ ಗಮನ ಸೆಳೆದಿದ್ದ ಸಮಯದಲ್ಲಿ ಅಮೆರಿಕದ ಸೋಯಾಬೀನ್ ಅಸೋಸಿಯೇಷನ್ ತನ್ನ ಸೋಯಾಬೀನ್ ಹಾಗೂ ಜೋಳದ ಎಣ್ಣೆಗೆ ಜಾಗತಿಕ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳಲಿಕ್ಕಾಗಿ ಭಾರತದ ತೆಂಗಿನ ಎಣ್ಣೆ ಹೃದಯಕ್ಕೆ ಮಾರಕ ಎಂದು ಬಿಂಬಿಸಿ ಶೇ.೯೦ ಮಂದಿ ತೆಂಗಿನ ಎಣ್ಣೆಯನ್ನು ಬಳಸದಂತೆ ಮಾಡಿತ್ತು!
ಅಲ್ಲಿಂದ ಇಲ್ಲಿ ವರೆಗೆ ಕೊಬ್ಬರಿ ಉದ್ಯಮ ಚೇತರಿಸಿಕೊಳ್ಳಲಾಗಿಲ್ಲ. ನೀರಾ, ಪನೆ ಬೆಲ್ಲ, ಎಳೆನೀರು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾರತದ ಕೃಷಿಯನ್ನು ಜಾಗತಿಕ ಕಂಪೆನಿಗಳು ಹತ್ತಿಕ್ಕುತ್ತಲೇ ಬಂದವು. ಇದರಿಂದಾಗಿ ಇಡೀ ಕೃಷಿ ನೀತಿಯೇ ಬದಲಾಗಿ, ರೈತರು ಹೆಜ್ಜೆ ಹೆಜ್ಜೆಗೂ ಆತ್ಮಹತ್ಯೆ ದಾರಿ ತುಳಿಯುವಂತಾಯಿತು. ಹೀಗಾಗಿ ಆಹಾರ ಭದ್ರತೆ, ಬೀಜ ಶೇಖರಣೆ ಸಂಸ್ಕೃತಿ ಎಲ್ಲವೂ ನಾಶವಾಗಿ ಇಡೀ ದೇಶದ ಕೃಷಿ ವ್ಯವಸ್ಥೆಯೇ ಇಂದು ಜಾಗತಿಕ ಕಂಪೆನಿಗಳ ಕಪಿಮುಷ್ಟಿಗೆ ಸಿಲುಕಿದೆ. ಅದರ ನಡುವೆ ಈಗ ಈ ‘ಬಿಟಿ ತಂತ್ರಜ್ಞಾನದ ಹೊಸ ವರಸೆ’. ಭಾರತದ ಕೃಷಿ ಅಭಿವೃದ್ಧಿಗೆ ಕುಲಾಂತರಿ ತಳಿ ತಂತ್ರಜ್ಞಾನವೊಂದೇ ಮುಖ್ಯವಲ್ಲ. ಕಳೆದ ಫೆಬ್ರುವರಿಯಲ್ಲಿ ಬಿಟಿ ಬದನೆ ಬಗ್ಗೆ ದೇಶಾದ್ಯಂತ ದೊಡ್ಡ ಚರ್ಚೆ ನಡೆದಾಗ ರೈತರು ವಿರೋಸಿದ್ದು ಬದನೆಯನ್ನು ಮಾತ್ರವಲ್ಲ, ಇಡೀ ಕುಲಾಂತರಿ ತಂತ್ರeನವನ್ನು.
ಕುಲಾಂತರಿ ತಂತ್ರeನದಿಂದಾಗುವ ದುಷ್ಟಪರಿಣಾಮಗಳನ್ನು ಅರಿಯಲು ಕನಿಷ್ಠ ೨೦ ವರ್ಷ ಬೇಕು. ಅಂತಹದ್ದರಲ್ಲಿ ಕೇಂದ್ರದ ಯುಪಿಎ ಸರಕಾರ ಅದಕ್ಕೊಂದು ಬಯೋಟೆಕ್ನಾಲಜಿ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ(ಬಿಆರ್‌ಎಐ) ಸ್ಥಾಪಿಸುವ ಹೇಳಿಕೆ ನೀಡಿ ಕುಲಾಂತರಿ ಬಗ್ಗೆ ಎದ್ದ ಬಿಸಿಯನ್ನು ತಣ್ಣಗೆ ಮಾಡಿತು ಅಷ್ಟೇ. ಆದರೆ ಈ ಕಂಪೆನಿಗಳು ಅದಕ್ಕೂ ಕೂಡ ಕಾಯದೆ ಆತುರಾತುರವಾಗಿ ಬಿಟಿ ತಂತ್ರಜ್ಞಾನಕ್ಕೆ ಪರವಾನಗಿ ಬೇಕು ಎಂದು ಬೊಬ್ಬೆ ಹೊಡೆಯುತ್ತಿವೆ. ಇವುಗಳ ಹಿಂದಿನ ಉದ್ದೇಶವಾದರೂ ಏನು? ಅಂದರೆ ಇವುಗಳಿಗೆ ಅಷ್ಟೂ ವ್ಯವದಾನವಿಲ್ಲ, ಬೇಗ ಕೃಷಿ ವ್ಯವಸ್ಥೆಯನ್ನು ತಮ್ಮ ಕೈವಶ ಮಾಡಿಕೊಂಡು ಕುಳಿತುಕೊಳ್ಳುವ ದುರುದ್ದೇಶ ಇಲ್ಲಿ ಎದ್ದು ಕಾಣುತ್ತದೆ. ನಾಳೆ ಬಿಆರ್‌ಎಐ ಸ್ಥಾಪಿಸಿದ ನಂತರ ಸಂಪೂರ್ಣವಾಗಿ ಬಿಟಿಯನ್ನು ಇಡೀ ದೇಶವೇ ತಿರಸ್ಕರಿಸಿದರೆ ಕಂಪೆನಿಯ ತಂತ್ರಗಳೆಲ್ಲಾ ತಲೆಕೆಳಗಾಗುತ್ತವೆ ಎನ್ನುವ ಭಯ ಕೂಡ ಕಾಡುತ್ತಿದೆ.
ಈಗ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ದಿಲ್ಲಿ ಹಾಗೂ ಹೈದರಾಬಾದ್ ಮೂಲದ ರಾಷ್ಟ್ರೀಯ ಅಕಾಡೆಮಿ ಆಫ್ ಸೈನ್ಸಸ್ ಸೇರಿದಂತೆ ಏಳು ‘ಅತ್ಯನ್ನತ ಅಕಾಡೆಮಿಗಳು’ ‘ಇಂಟರ್ ಅಕಾಡೆಮಿ ರಿಪೋರ್ಟ್ ಆನ್ ಜಿ.ಎಂ. ಕ್ರಾಪ್ಸ್’ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು ನಿಜ. ಆದರೆ ಕುಲಾಂತರಿ ತಂತ್ರeನದಲ್ಲಿ ಎಲ್ಲವೂ ಸರಿಯಾಗಿವೆ ಅದಕ್ಕಾಗಿ ‘ಕುಲಾಂತರಿ ತಳಿಗೆ ಜೈ ಹೋ’ ಎಂದಿಲ್ಲ! ಬದಲಿಗೆ ‘ಕುಲಾಂತರಿ ತಳಿಗಳು ಕೆಲವು ಅಪಾಯಗಳನ್ನು ತಂದೊಡ್ಡುತ್ತವೆ. ಆದರೆ ವಿಜ್ಞಾನ ಅವುಗಳ ಹಿಂದೆ ನಿಂತರೆ ಆ ಆತಂಕದಿಂದ ದೂರಾಗಬಹುದು’ ಎಂದು ಅಭಿಪ್ರಾಯಪಟ್ಟಿವೆ. ಹಾಗೇಯೇ ‘ಯಾವುದೇ ಪದಾರ್ಥ ಶೇ.೧೦೦ಕ್ಕೆ ನೂರರಷ್ಟು ಸುರಕ್ಷಿತವಲ್ಲ, ಹಾಗಾಗಿ ಬಿಟಿ ಬದನೆಯನ್ನು ಮಾತ್ರ ದೂರುವುದು ಸರಿಯಲ್ಲ’ ಎಂದು ಹೇಳಿವೆ.
ಅಂದರೆ ಈ ‘ಅತ್ಯುನ್ನತ ವಿಜ್ಞಾನ ಅಕಾಡೆಮಿಗಳು’ ಕೂಡ ರೈತರ ವಿಚಾರದಲ್ಲಿ ‘ಸುರಕ್ಷಿತವಲ್ಲ’ ಎನ್ನುವುದು ಇಲ್ಲಿ ಸ್ಪಷ್ಟ. ಈ ವರದಿ ಕೂಡ ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗಿದೆ. ‘ಕುಲಾಂತರಿ ತಳಿಯಿಂದ ಸಾಮಾಜಿಕ ಮತ್ತು ಆರ್ಥಿಕ ಗಂಡಾಂತರಗಳು ಒದಗಲಿವೆಯೋ ಅಥವಾ ಲಾಭಕರವೋ ಎಂಬ ವಿಷಯವನ್ನು ನಿರ್ಧರಿಸಬೇಕಾದದ್ದು ಎನ್‌ಜಿಒಗಳ ಗುಂಪಲ್ಲ’.

ನಿಜ, ಆದರೆ ಅದನ್ನು ನಿರ್ಧರಿಸಬೇಕಾದದ್ದು ಜಾಗತಿಕ ಕಂಪೆನಿಗಳೂ ಅಲ್ಲ. ಅದು ‘ರೈತರ ಹಕ್ಕು’.
ರೈತನು ಬೆಳೆದ ಸರಕು ಮತ್ತು ಸೇವೆಗಳು ಮಾರುಕಟ್ಟೆಯಲ್ಲಿ ನಿರ್ಧಾರವಾಗುತ್ತಿವೆ. ಅದೇ ಈ ದೇಶದ ರೈತರನ್ನು ಬಡತನದಲ್ಲಿ ಬಳಲುವಂತೆ ಮಾಡಿದ್ದು ಎಂಬುದು ಅಕ್ಷರಶಃ ಸತ್ಯ. ರೈತ ಬೆಳೆದ ಪ್ರತಿ ಬೆಳೆಗೂ ಅವನೇ ದರ ನಿಗದಿಪಡಿಸುವ ಹಕ್ಕನ್ನು ಅವನಿಂದ ಕಸಿದುಕೊಳ್ಳದೆ ಹೋಗಿದ್ದರೆ ಇಂದು ಜಾಗತಿಕ ಕಂಪೆನಿಗಳು, ಅವುಗಳ ಪರ ಬೊಬ್ಬಿಡುವ ಸ್ವಯಂಘೋಷಿತ ವಿಜ್ಞಾನಿಗಳು ಇಂದು ರೈತರ ವಿರುದ್ಧ ಬಡಬಡಿಸುವ ಪ್ರಮೆಯವೇ ಬರುತ್ತಿರಲಿಲ್ಲ, ಅದಕ್ಕೆ ಅವಕಾಶವೂ ಇರುತ್ತಿರಲಿಲ್ಲ; ಜತೆಗೆ ರೈತರು ಆತ್ಮಹತ್ಯೆ ದಾರಿಯನ್ನೂ ತುಳಿಯುತ್ತಿರಲಿಲ್ಲ...
ಇಲ್ಲಿ ನಿಜವಾಗಿಯೂ ಆತಂಕ ಪಡುತ್ತಿರುವವರು ರೈತರು. ಅವರ‍್ಯಾರೂ ಕೆಲಸಬಿಟ್ಟು ಮನವಿ ಹಿಡಿದು ವಿeನಿಗಳು ಅಥವಾ ಸರಕಾರದ ಬಳಿ ಬರುವುದಿಲ್ಲ. ಕಾರಣ ಇಷ್ಟೇ ಅವರೆಲ್ಲ ಒಂದು ದಿನ ಉತ್ತುವುದು, ಬಿತ್ತುವುದು ಅಥವಾ ಬೆಳೆಗಳ ನಡುವೆ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಈ ದೇಶದ ಅದೆಷ್ಟೋ ಲಕ್ಷ ಜನ ಅನ್ನವಿಲ್ಲದೆ ಪರದಾಡಬೇಕಾಗುತ್ತದೆ!!
ಜಾಕತಿಕ ಕಂಪೆನಿಗಳು ಈ ರೀತಿ ಮತ್ತೆ ಮತ್ತೆ ‘ಕಿತಬಿ’ ತೆಗೆಯುತ್ತಿರುವುದರಿಂದ ರೈತರು ಬೀದಿಗಿಳಿಯುತ್ತಿದ್ದು, ಅದರಿಂದಾಗಿ ಭಾರತದಲ್ಲಿ ಆಹಾರ ಅಭದ್ರತೆ ನಿತ್ಯ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ೬ ವರ್ಷಗಳಿಂದೀಚೆಗೆ ಈ ಅಭದ್ರತೆ ಎಲ್ಲೆ ಮೀರಿದೆ. ಆದ್ದರಿಂದಲೇ ಜಾಗತಿಕ ಕಂಪೆನಿಗಳ ಇಂಥ ಹುನ್ನಾರಗಳನ್ನು ಅರಿತು ಈ ನೆಲದ ಜನ ಆಗಾಗ ರೈತರ ಬೆನ್ನಿಗೆ ನಿಲ್ಲುವ ಮೂಲಕ ಅನ್ನದ ಋಣ ತೀರಿಸುತ್ತಿದ್ದಾರೆ ಅಷ್ಟೇ...
ಆಗಾಗ ಅಭಿವೃದ್ಧಿ, ಆಧುನಿಕತೆ, ಜಾಗತಿಕರಣ, ಖಾಸಗಿಕರಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಜತೆಗೆ ‘ನಮ್ಮದೇ ಸರಕಾರಗಳು’ ಇನ್ನಿಲ್ಲದ ಹುನ್ನಾರ ನಡೆಸುತ್ತಿವೆ. ಭೂಮಿಯನ್ನು ಕಸಿದುಕೊಳ್ಳುವುದರ ಜತೆಗೆ ಇದ್ದ ತುಸು ಜಾಗದಲ್ಲಾದರೂ ಬೆಳೆ ಬೆಳೆಯೋಣವೆಂದು ರೈತರು ಅಣಿಯಾದಾಗ ಜಾಗತಿಕ ಕಂಪೆನಿಗಳು ಹೀಗೆ ಮತ್ತೆ ಮತ್ತೆ ಈ ದೇಶದ ಸ್ವಾವಲಂಬನೆಯನ್ನು ಅಡವಿಟ್ಟುಕೊಳ್ಳಲು ಕುಂತಂತ್ರ ನಡೆಸತ್ತಲೇ ಇವೆ. ಆದ್ದರಿಂದ ಈ ಮಣ್ಣಿನಲ್ಲಿ ಬೆಳೆದು ಇದೇ ಮಣ್ಣಿನಲ್ಲಿಯೇ ಬದುಕಬೇಕಿರುವ ನಾವು ಇಂಥ ಹುನ್ನಾರಗಳ ಬಗ್ಗೆ ಸದಾ ಜಾಗೃತರಾಗಿರಬೇಕು...
No comments:
Post a Comment