Thursday, September 10, 2009

ಪುಸ್ತಕ ಪ್ರೀತಿ ಸಾರಿದ ಮದುವೆ

ಸಾಮಾನ್ಯವಾಗಿ ಮದುವೆಎಂಬ ಮಧುರ ಪದ ಕೇಳುತ್ತಿದ್ದ ಹಾಗೆಯೇ ಬಹಳಷ್ಟು ಜನರ ಮೈ ರೋಮಾಂಚನಗೊಳ್ಳುತ್ತದೆ. ಮತ್ತೆ ಕೆಲಸವರ ಮನ ಮುಂಜಾನೆಯ ಮಂಜಿನ ಹಾಗೆ ತಂಪಾಗುತ್ತದೆ. ಮತ್ತೆ ಕೆಲವರಿಗೆ ಕನಸುಗಳು ಗರಿಗೆದರುತ್ತವೆ. ಮನಸಿನ ಹಾಸಿಗೆಯಲ್ಲಿ ಹೂಮಳೆ ಚೆಲ್ಲುತ್ತದೆ. ಹೀಗೆ ಒಬ್ಬೊಬ್ಬರ ಮನದಲ್ಲು ಒಂದೊಂದು ಭಾವನಾ ಲಹರಿ ಪಾರಿಜಾತವಾಗಿ ಹಾರಾಡುತ್ತದೆ.
ಆದರೆ ಮದುವೆ ಜೀವನದ ಒಂದು ಮಧುರ ಕ್ಷಣ ನಿಜ, ಆದರೆ ಅದು ಆಡಂಭರವಾಗಿಯೇ ಇರಬೇಕು ಎಂದು ಬಹಳಷ್ಟು ಜನ ಇಷ್ಟಪಡುತ್ತಾರೆ. ಮದುವೆಗೆ ಬಂದವರಿಗೆ ಒಳ್ಳೊಳ್ಳೆ ಉಡುಗೊರೆ ಕೊಡಬೇಕು ಎಂದು ಸಾಮಾನ್ಯ ವರ್ಗದವರೂ ಅಂದುಕೊಳ್ಳುವುದು ಸಾಮಾನ್ಯ. ಇನ್ನು ಉಳ್ಳವರಂತೂ ಅದೇ ತಮ್ಮ ಶ್ರೀಮಂತಿಕೆಯ ತೋರಿಕೆಗೆ ‘ಸಾಕ್ಷಿ’ಯಾಗಲಿ ಎಂದುಕೊಳ್ಳುತ್ತಾರೆ.
ಜೀವನದ ಆ ಸುಮಧುರ ಗಳಿಗೆಯನ್ನು ಜೀವನ ಪೂರ್ತಿ ತಾವು ಮಾತ್ರವಲ್ಲ, ಇತರರೂ ನೆನಪಿನಲ್ಲಿಟ್ಟುಕೊಂಡು ಬದುಕುವಂತೆ ಸ್ಪೂರ್ತಿ ನೀಡುವ ಮಂದಿ ಬಹಳ ವಿರಳ. ಅಂಥವರ ಸಾಲಿನಲ್ಲಿದ್ದಾರೆ ಸ್ನೇಹಿತ ಕೆ.ವಿ.ಧರಣೇಶ್. ಸದ್ಯಕ್ಕಿವರು ‘ವಿಜಯ ಕರ್ನಾಟಕ’ದಲ್ಲಿ ಪೇಜಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಹಾಗೇ ಸುಮ್ಮನೆ ಕೈಗೆ ಸಿಕ್ಕ ಒಂದು ಚಿಕ್ಕ ಹೊತ್ತಿಗೆಯನ್ನು ಕಣ್ಣಾಯಿಸಿದಾಗ ನಿಜಕ್ಕೂ ಆಶ್ಚರ್ಯ ! ಆ ಕಾರಣಕ್ಕಾಗಿಯೇ ಸುಮಾರು ೯ ವರ್ಷಗಳ ಹಿಂದಿನ ಘಟನೆಯೊಂದನ್ನು ಇಲ್ಲಿ ಮೆಲುಕು ಹಾಕುತ್ತಿದ್ದೇನೆ.
ನನ್ನ ಕೈಗೆ ಸಿಕ್ಕ ಆ ಕಿರು ಹೊತ್ತಿಗೆಯ ಹೆಸರು ವಚನ ತಾಂಬೂಲ". ಮದುವೆಗೆ ಬರುವ ಎಲ್ಲರಿಗೂ ಸಾಮಾನ್ಯವಾಗಿ ಅಡಕೆ, ಎಲೆ, ಸುಣ್ಣ ಅಥವಾ ಒಂದು ಕಾಯಿಯನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಇದು ಸಾಮಾನ್ಯ ವರ್ಗದ ಕುಟುಂಬಗಳ ಕಾರ್ಯವೈಖರಿ. ಆದರೆ ಶ್ರೀಮಂತರ ಮಾತು ಬೇರೆ ಬಿಡಿ.
ಇಲ್ಲಿ ಧರಣೇಶ್ ಕೂಡ ಶ್ರೀಸಾಮಾನ್ಯ ಕುಟುಂಬದಿಂದಲೇ ಬಂದವರು. ಆದರೆ ೨೦೦೦ನೇ ಇಸ್ವಿ ಸೆಪ್ಟಂಬರ್ ೬ರಂದು ಚಿತ್ರದುರ್ಗದಲ್ಲಿ ನಡೆದ ತಮ್ಮ ಮದುವೆಯಲ್ಲಿ ಇವರು ಉಡುಗೊರೆ ನೀಡಿದ್ದು ಇದೇ ‘ವಚನ ತಾಂಬೂಲ’ವನ್ನು... ನಿಜಕ್ಕೂ ನಾವೆಲ್ಲಾ ಈಗ ಪುಸ್ತಕ ಪ್ರೀತಿ ಕಡಿಮೆಯಾಗುತ್ತಿದೆ. ಸಿನಿಮಾ, ದೂರದರ್ಶನ ಹಾಗೂ ಪಾಶ್ಚಾತ್ಯೀಕರಣದ ಸಾಂಸ್ಕೃತಿಕ ದಾಳಿಗೆ ಸಿಕ್ಕಿ ಯುವಜನತೆ ದಿಕ್ಕು ತಪ್ಪುತ್ತಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತೇವೆ. ಆದರೆ ಅದರ ಉಳಿವಿಗೆ ಮಾಡಬೇಕಾದದ್ದು ಏನು ? ಎಂಬುದನ್ನು ಒಂದೇ ಒಂದು ಕ್ಷಣ ಕೂಡ ಯೋಚಿಸುವುದಿಲ್ಲ. ಆದರೆ ಧರಣೇಶ್ ಬೇರೆಯವರನ್ನು ನಿಂಸುವ ಗೊಡವೆಗೇ ಹೋಗದೆ ಸದ್ದಿಲ್ಲದೆ ತಮ್ಮ ಮದುವೆಗೆ ಬಂದ ಎಲ್ಲರಿಗೂ ‘ವಚನ ತಾಂಬೂಲ’ ನೀಡಿ ಪುಸ್ತಕ ಪ್ರೀತಿ ಮೆರೆದಿದ್ದಾರೆ. ಅವರಿಗೆ ನಿಜಕ್ಕೂ ಹ್ಯಾಟ್ಸ್ ಆಫ್...
ಈ ಕಿರು ಹೊತ್ತಿಗೆಯಲ್ಲಿ ಆರಂಭದಲ್ಲಿಯೇ ಮುರುಘ ರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮೀಜಿಯ ಲೋಕ ಸಂದೇಶವಿದೆ. ಬಸವ ತತ್ತ್ವದ ಸೂತ್ರಗಳಿವೆ. ಚನ್ನಬಸವಣ್ಣ, ಶರಣೆ ಸತ್ಯಕ್ಕ, ಶರಣೆ ಆಯ್ದಕ್ಕಿ ಲಕ್ಕಮ್ಮ, ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಷಣ್ಮುಖ ಶಿವಯೋಗಿಗಳು, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಮೊಗ್ಗೆಯ ಮಾಯಿದೇವರು, ಅಲ್ಲಮ ಪ್ರಭುದೇವರು, ಸರ್ವಜ್ಞನವರ ವಚನಗಳನ್ನು ಮುದ್ರಿಸಿ ಕಿರು ಹೊತ್ತಿಗೆ ಮಾಡಿ, ಎಲ್ಲರಿಗೆ ಹಂಚಲಾಗಿದೆ. ಇದು ನಿಜಕ್ಕೂ ಅರ್ಥಪೂರ್ಣ ನಿಲುವು. ಅಂದ ಹಾಗೆ ಅವರ ಕೈ ಹಿಡಿದಿದ್ದು ಸಿ.ಜೆ.ಪದ್ಮಾ. ಪುಸ್ತಕ ಪ್ರೀತಿಯನ್ನು ಸದ್ದಿಲ್ಲದೆ ಪಸರಿಸಿದ ಈ ದಂಪತಿ ಶೀಘ್ರದಲ್ಲಿಯೇ ದಶಮಾನೋತ್ಸವ ಆಚರಿಸಲಿದ್ದಾರೆ... ಅವರಿಗೆ ಮತ್ತೊಂದು ಹ್ಯಾಟ್ಸ್ ಆಫ್...

3 comments:

Anonymous said...

ಪುಸ್ತಕ ಪ್ರೀತಿ ಕಡಿಮೆಯಾಗಿದೆ ಎನ್ನುವ ಮಾತೇನೋ ನಿಜ, ಆದರೆ ಅದನ್ನು ತಡೆಯಲು ಇಂಥ ಕೆಲವು ಹೊಸ ಬೆಳವಣಿಗೆಗಳು ಅಗತ್ಯ. ಸಾರಿಕಾ.

Anonymous said...

ಲೇಖನ ತುಂಬಾ ಚನ್ನಾಗಿದೆ. ಪುಸ್ತಕದ ಬಗೆ ಪ್ರೀತಿ ಬೆಳೆಸಲು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಇಂಥ ಯಾವುದಾದರೊಂದು ಕೆಲಸ ಮಾಡಲೇ ಬೇಕು. =ಸಾಗರ್.

sweet hammu said...

nijakku uthama prayathna, uthama belavanigege nandiyagali.

Powered By Blogger