Friday, October 2, 2009

ಉತ್ತರ ತತ್ತರ: ಸರಕಾರಕ್ಕಾಗಲಿಲ್ಲ ಎಚ್ಚರ...!

ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇಡೀ ಉತ್ತರ ಕರ್ನಾಟಕ ತತ್ತರಗೊಂಡಿದೆ. ಆದರೆ ವಿಧಾನಸೌಧದಲ್ಲಿ ಮಾತ್ರ ಒಬ್ಬರೇ ಒಬ್ಬ ಸಚಿವರೂ ಇಲ್ಲ! ಎಲ್ಲರೂ ಸುತ್ತೂರು ಮಠದಲ್ಲಿ ‘ವ್ಯಾಯಾಮ’ ಮಾಡುತ್ತ, ಚಿಂತನ ಬೈಠಕ್ ನಡೆಸಿಕೊಂಡಿದ್ದರು. ಇದ್ದಕ್ಕಿಂದ್ದಂತೆ ವರುಣ ಮಂತ್ರಾಲಯದ ಒಳಗೆ ನುಗ್ಗಿದ್ದಾನೆ. ಆಗ ಸಚಿವೋದಯರೆಲ್ಲಾ ವಿಧಾನಸೌಧದ ಕಡೆ ಮುಖ ಮಾಡಿ ನಿಂತಿದ್ದಾರೆ!!
ಬಳ್ಳಾರಿ, ಬಿಜಾಪುರ, ಕೊಪ್ಪಳ, ರಾಯಚೂರು, ಬೆಳಗಾವಿ, ಧಾವಣಗೆರೆ, ಚಿತ್ರದುರ್ಗ, ದಾರವಾಡ, ಗದಗ ಜಿಲ್ಲೆಗಳಲ್ಲಿ ಮೂರು ದಿನಗಳಿಂದಲೂ ನಿರಂತರವಾಗಿ ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಮಳೆ ಸುರಿಯುತ್ತಲೇ ಇದೆ. ಅಲ್ಲಿಯ ಜನರಿಗೆ ವರುಣ ಯಮನಂತೆ ಗೋಚರಿಸುತ್ತಿದ್ದಾನೆ. ಮಾಧ್ಯಮಗಳು ಮೇಲಿಂದ ಮೇಲೆ ಅವುಗಳ ಬಗ್ಗೆ ವರದಿ ಮಾಡುತ್ತಲೇ ಇವೆ. ಆದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಹೋದ್ಯೋಗಿ ಮಂತ್ರಿಗಳ ‘ಚಿಂತನ ಬೈಠಕ್’ ಮುಗಿದಿರಲಿಲ್ಲ.
ಇವರಿಗೆಲ್ಲ ಜನತೆಯ ಕಷ್ಟ ಕಾರ್ಪಣ್ಯಗಳಿಗಿಂತ ಮೋದಿಯ ‘ಪಾಠ ’ವೇ ಮುಖ್ಯವಾಗಿತ್ತು. ಪ್ರತಿಯೊಂದನ್ನೂ ರಾಜಕೀಯದ ನಾಸಿಕದಿಂದಲೇ ಮೂಸಿ ನೋಡುವ ಜನಪ್ರತಿನಿಗಳಿಗೆ ಜನತೆಯ ಆರ್ಥನಾದ ಮಾತ್ರ ಕೇಳಲೇ ಇಲ್ಲ. ಮೊದಲ ದಿನವೇ ಬಿಜಾಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ೨೨ಮಂದಿ ಸಾವಿಗೀಡಾದರು. ಆದರೆ ಅದು ಮುಖ್ಯಮಂತ್ರಿಗಳ ಹಾಗೂ ರಾಜ್ಯಸರಕಾರದೊಳಗಿರುವ ಮಂತ್ರಿ ಮಹೋದಯರ ಹೃದಯವನ್ನು ಕರಗಿಸಲಿಲ್ಲ. ಏಕೆಂದರೆ ಅವರೆಲ್ಲ ಜನ‘ಸಾಮಾನ್ಯರು’.
ಪ್ರತಿಪಕ್ಷದ ನಾಯಕರು ಇದನ್ನು ಗಮನಿಸಿ ಮುಖ್ಯಮಂತ್ರಿಗಳನ್ನು ಮಾತಿನ ಮೂಲಕ ತಿವಿದರೂ ಯಡಿಯೂರಪ್ಪ ಮಾತ್ರ ಎಚ್ಚೆತ್ತುಕೊಳ್ಳಲೇ ಇಲ್ಲ. ಪ್ರತಿಪಕ್ಷಗಳ ಮಾತನ್ನು ಕೇವಲ ಟೀಕೆ ಎಂತಲೇ ನೋಡುವ ಜಾಯಮಾನದ ಯಡಿಯೂರಪ್ಪ ಮಾತ್ರ ‘ಪ್ರತಿಪಕ್ಷದವರ ತಟ್ಟೆಯಲ್ಲಿ ಆನೆಯೇ ಬಿದ್ದಿದೆ. ಅದನ್ನು ಎತ್ತಿಕೊಳ್ಳಲಿ’ ಎಂದು ಕೇಂದ್ರದ ಕಡೆ ಕೈ ತೋರಿಸಿ ಪ್ರತಿ ಟೀಕೆ ಮಾಡಿದರೆ ಹೊರತು, ಜನ ಸಾಮಾನ್ಯರ ರಕ್ಷಣೆಗೆ ಮುಂದಾಗಲೇ ಇಲ್ಲ. ಅದರ ಫಲವಾಗಿ ಮಳೇ ಶುರುವಾದ ಮೂರೇ ದಿನಕ್ಕೆ ಇಡೀ ಉತ್ತರ ಕರ್ನಾಟಕದಲ್ಲಿ ೧೦೯ ಮಂದಿ ಕೊನೆಯುಸಿರೆಳೆದಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ರಾಜ್ಯದ ರೈತರ, ಜನ ಸಾಮಾನ್ಯರ ಬಗ್ಗೆ ಇರುವ ‘ಕಾಳಜಿ’ !!
ಅಂದರೆ ಸಿಎಂ ಹೋಗಿ ಮಳೆ ನಿಲ್ಲಿಸುತ್ತಾರೆ ಎಂದಲ್ಲ. ಕೊನೇ ಪಕ್ಷ ಅದಕ್ಕೆ ಸ್ಪಂದಿಸಿ ನಡುಗಡೆಗಳಲ್ಲಿ, ನೀರಿನಲ್ಲಿ ಸಿಕ್ಕಿಕೊಂಡವರನ್ನು ತಮ್ಮ ನಿರ್ದೇಶನದ ಮೂಲಕ ರಕ್ಷಿಸಬಹುದು. ನಿರಾಶ್ರಿತರಿಗೆ ಎಲ್ಲಾದರೂ ಸುರಕ್ಷಿತ ಸ್ಥಳದಲ್ಲಿ ಆಶ್ರಯ ನೀಡಬಹುದು. ಆದರೆ ಆ ಸಣ್ಣ ಕೆಲಸವನ್ನೇ ಮಾಡಲು ಇವರಿಗೆ ಮನಸಿರಲಿಲ್ಲ.
ಸರಕಾರದ ಮೇಲೆ ಟೀಕೆ ಸಾಮಾನ್ಯ. ಆದರೆ ಅದರಲ್ಲೂ ಒಂದು ಕಾಳಜಿ ಇರುತ್ತದೆ ಎನ್ನುವುದನ್ನೇ ಮರೆತ ಸಿಎಂ, ಥೇಟ್ ತೊಗಲಕ್ ರೀತಿ ವರ್ತಿಸುತ್ತಿರುವುದು ಮಾತ್ರ ನಿಜಕ್ಕೂ ನಾಚಿಕೆಗೇಡು. ನಿತ್ಯವೂ ಉತ್ತರ ಕರ್ನಾಟಕ ತತ್ತರಗೊಳ್ಳುತ್ತಿದ್ದು, ಸಾವು, ನೋವು ಸಂಭವಿಸುತ್ತಲೇ ಇದೆ. ಆದರೂ ಅತ್ತ ಕಡೆ ತಿರುಗಿ ಕೂಡ ನೋಡಲಿಲ್ಲ. ಸಾರ್ವಜನಿಕರ ಆಸ್ತಿಪಾಸ್ತಿ ಹಾಳಾದರೆ, ಅವರ ಸಾಕು ದನ, ಕುರಿಗಳು ಸಾವಿಗೀಡಾದರೆ, ಜನ ಬೀದಿಗೆ ಬಂದರೆ ಇವರಿಗೆ ನಷ್ಟ, ಕಷ್ಟ ಎನಿಸುವುದೇ ಇಲ್ಲ.
ಮಾತೆತ್ತಿದರೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಯಡಿಯೂರಪ್ಪ ರಾಜ್ಯಸರಕಾರದಿಂದ ಜನ ಸಾಮಾನ್ಯರ ಏಳಿಗೆಗೆ ಏನೆಲ್ಲಾ ಮಾಡಿದ್ದಾರೆ ಎಂದು ಪಟ್ಟಿ ಮಾಡಲಿ. ಪ್ರತಿಯೊಂದನ್ನು ‘ರಾಜಕೀಯ ಲಾಭ’ದ ದೃಷ್ಟಿಯಿಂದಲೇ ನೋಡುವ ಹಳದಿ ಕಣ್ಣಿನ ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬರಲು ತಮ್ಮನ್ನು ಕೈ ಹಿಡಿದಿದ್ದರು ಅದೇ ಉತ್ತರ ಕರ್ನಾಟಕದ ಮಂದಿ ಎನ್ನುವುದನ್ನು ಮರೆತಂತಿದೆ.
ಅಕಾರಕ್ಕೇರುವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿದರು. ಅದೇ ಸಮಯದಲ್ಲಿ ಬರ ಬಂದು ರೈತರು ಸಂಕಷ್ಟದಲ್ಲಿದ್ದಾರೆಂದು ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿದಾಗ ‘ಇನ್ನು ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವುದೇ ನನ್ನ ಕೆಲಸ. ಹಾರ ತುರಾಯಿಗಳನ್ನು ನನಗೆ ಹಾಕಬೇಡಿ, ಅಂಥ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಬೇಡಿ’. ಎಂದ ಸಿಎಂ ಗೆ ಈಗ ತಾವು ಹೇಳಿದ ಮಾತು ಮರೆತುಹೋದಂತಿದೆ. ಆ ಕಾರಣಕ್ಕೇ ಜಲಪ್ರಳಯದಿಂದ ನೂರಾರು ಮಂದಿ ಕೊನೆಯುಸಿರೆಳೆಯುತ್ತಿದ್ದರೂ ಯಡಿಯೂರಪ್ಪ ಮಾತ್ರ ಡಾಬಸ್‌ಪೇಟೆಯಲ್ಲಿ ಬೆಳ್ಳಿ ಕಿರೀಟ ತೊಟ್ಟುಕೊಂಡು, ಸನ್ಮಾನ ಮಾಡಿಸಿಕೊಳ್ಳಲು ಬೆಂಗಳೂರಿನಿಂದ ತೆರಳಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿದೆಯಾ...?
ನೆರೆಯ ಆಂಧ್ರ ಪ್ರದೇಶದಲ್ಲೂ ಕೂಡ ಪ್ರವಾಹ ಬಂದಿದೆ. ಆದರೆ ಅಲ್ಲಿನ ಸರಕಾರ ಸ್ಪಂದಿಸಿದ ರೀತಿಗೂ ಕರ್ನಾಟಕದ ಬಿಜೆಪಿ ಸರಕಾರ ಸ್ಪಂದಿಸಿದ ರೀತಿ ಎರಡನ್ನೂ ನೋಡಿದರೆ ಇದು ನಿಜಕ್ಕೂ ಮಾನವೀಯತೆ ಮರೆತ ಸರಕಾರ ಎಂದು ಎನಿಸದಿರದು.
೨೦೦೮-೦೯ನೇ ಸಾಲಿನಲ್ಲಿ ಸಿಆರ್‌ಎಫ್ ಯೋಜನೆಯಡಿ ೯೯.೫೫ ಕೋಟಿ ರೂ. (ರಾಜ್ಯದ ಪಾಲು ೩೩.೧೮ಕೋಟಿ.), ಎನ್‌ಸಿಸಿಎಫ್ ಅನುದಾನ ೧೦೯.೯೧ ಕೋಟಿ ರೂ. (ರಾಜ್ಯದ ಪಾಲು ೭೭.೩೩ ಕೋಟಿ ರೂ.) ಸೇರಿ ಪ್ರಕೃತಿ ವಿಕೋಪ ಪರಿಹಾರ ನಿಯಡಿ ೩೨೧.೮೩ ಕೋಟಿ ರೂ. ಬಳಕೆ ಮಾಡಬೇಕಿದೆ. ೨೦೦೯-೧೦ನೇ ಸಾಲಿನಲ್ಲಿ ಸಿಆರ್‌ಎಫ್, ಎನ್‌ಸಿಸಿಎಪ್ ೧೫೩.೫೧ ಕೋಟಿ ರೂ. ಬಳಕೆಯಾಗಬೇಕಿದೆ. ಆದರೆ ಈ ಹಣದಲ್ಲಿ ಒಂದು ಪೈಸೆ ಕೂಡ ಬಳಕೆ ಮಾಡಿಕೊಂದಿಲ್ಲ. ಆದರೆ ಕೇಂದ್ರದ ಕಡೆ ಕೈ ತೋರಿಸಿ ಪ್ರತಿಪಕ್ಷದ ನಾಯಕರಂತೆ ವರ್ತಿಸುವುದು ಇನ್ನೂ ನಿಂತಿಲ್ಲ. ಇದು ನಿಜಕ್ಕೂ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ವರ್ತಿಸುವವರ ಲಕ್ಷಣವೇ?
ಮಂತ್ರಾಲಯದಲ್ಲಿ ಸ್ವಾಮೀಜಿಯೊಬ್ಬರು ಜಲ ಪ್ರವಾಹಕ್ಕೆ ಸಿಕ್ಕು ೨ನೇ ಮಹಡಿ ಏರಿ ಕುಳಿತಿದ್ದಾರೆ ಎಂಬ ಸುದ್ದಿ ಬಂದ ನಂತರ ಹೋಗಿ ದಿಢೀರ್ ಸಭೆ ಕರೆದು ಬೆಂಗಳೂರಿನಿಂದ ಎರಡು ಹೆಲಿಕ್ಯಾಪ್ಟರ್ ಕಳುಹಿಸಿದ್ದಾರೆ ಮುಖ್ಯಮಂತ್ರಿ. ಇವರಿಗೆ ಸ್ವಾಮೀಜಿಗಳು ಮಾತ್ರ ಮನುಷ್ಯರಂತೆ ಕಾಣಿಸುತ್ತಾರೆಯೇ? ಜನ ಸಾಮಾನ್ಯರದ್ದು ಕೂಡ ಜೀವ ಎಂದು ಒಮ್ಮೆಯೂ ಅನ್ನಿಸುವುದಿಲ್ಲವೆ ? ಹೋರಾಟದ ಹಾದಿಯಲ್ಲೇ ಬೆಳದು ಬಂದ ಮುಖ್ಯಮಂತ್ರಿ ಯಡಿಯೂರಪ್ಪ , ಈ ರೀತಿ ಅಮಾನವೀಯವಾಗಿ ವರ್ತಿಸುವ ಬದಲು ಗೌರವಯುತವಾದ ಆ ಸ್ಥಾನಕ್ಕೆ ರಾಜೀನಾಮೆ ಗೀಚಿ, ತಾವೇ ಒಂದು ‘ಮಠ’ ಕಟ್ಟಿ ಅಲ್ಲಿಗೆ ತಾವೇ ಸ್ವಾಮೀಜಿಯಾಗಿ ಕುಳಿತುಕೊಳ್ಳುವುದು ಒಳ್ಳೆಯದು. ಆಗಲಾದರೂ ಕೆಲವರಿಗೆ ಒಳ್ಳೆಯದಾದರೂ ಆಗಬಹುದು...

3 comments:

chetan said...

I appreciate your view towards public. Iam really proud of you bec. As i know That u belong to lingayath community .Though your community person has become chief minister your protesting the way he is behaving. I like to here from u these kind of blog more and more.

I like to include one personal statement . When kumaranna dint handover power all public showed sympathy on yeddi and Now he his not in the position to do the same for public. I think this is a great lesson thought to public by Yeddi

Anonymous said...

I appreciate your view towards public. Iam really proud of you bec. As i know That u belong to lingayath community .Though your community person has become chief minister your protesting the way he is behaving. I like to here from u these kind of blog more and more.

I like to include one personal statement . When kumaranna dint handover power all public showed sympathy on yeddi and Now he his not in the position to do the same for public. I think this is a great lesson thought to public by Yeddi

Anonymous said...

ಲೇಖನ ತುಂಬಾ ಚನ್ನಾಗಿದೆ... ಹೀಗೆ ಮುಂದುವರಿಸಿ... ಜಯಾ, ಶಿವಮೊಗ್ಗ.