Friday, March 11, 2011

ಮತ್ತೆ ಬಾರದ, ಮರೆಯಲಾಗದ ಅನುಭವ

ಕಾಲೇಜು ಜೀವನ ನಿಜಕ್ಕೂ ಅನುಭವಿಸಲೇಬೇಕಾದ ಮಧುರ ಕ್ಷಣ. ವಿದ್ಯಾರ್ಥಿಯಾದ ಪ್ರತಿಯೊಬ್ಬರಿಗೂ ಕಾಲೇಜು ಲೈಫ್ ದಕ್ಕಲೇಬೇಕು. ಆ ಜೀವನವಿಲ್ಲದೆ ವಿದ್ಯಾರ್ಥಿ ಎನಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ಅದನ್ನು ಕಾಲೇಜ್ ಲೈಫ್ ಗೋಲ್ಡನ್ ಲೈಫ್ ಎನ್ನುವುದು. ಹೀಗಿರುವಾಗ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುವ ಚಟುವಟಿಕೆಗಳನ್ನು ನೆನಪಿಸಿಕೊಂಡರೆ ‘ಛೇ.. ಆ ಕ್ಷಣ ಮತ್ತೆ ಬರಬಾರದೇ...’ ಎನಿಸಿಬಿಡುತ್ತದೆ. ಪ್ರಾಥಮಿಕ ಹಂತದಿಂದ ಕಾಲೇಜು ಜೀವನದವರೆಗೆ ಗಂಡು ಹೆಣ್ಣುಗಳೆಂಬ ಭೇದ ಬಾವವಿಲ್ಲದೆ ಎಲ್ಲರೂ ಒಟ್ಟುಗೂಡಿ ಕಲೆತು ಬೆರೆತು ಬಾಳುವವರಿಗೆ ಕಾಲೇಜಿಗೆ ಬರುತ್ತಿದ್ದಂತೆ ಮೈಮನದೊಳಗೆ ಹೊಸ ಹೊಸ ಆಸೆ, ಕನಸುಗಳು ನವಿರಾಗಿ ಚಿಗುರೊಡೆಯುತ್ತವೆ.
ಮೈ ಹರೆಯಕ್ಕೆ ಕಾಲಿಡುತ್ತಿದ್ದಂತೆ ಚೈತನ್ಯ ಎನ್ನುವುದು ಮೊಗ್ಗಾಗಿರುತ್ತದೆ. ಮನದಾಳದಲ್ಲಿ ಎಲ್ಲವನ್ನೂ ಜಯಿಸುವ, ನವ ನವೀನವಾದ ಕನಸುಗಳ ಗೋಪುರ ಕಟ್ಟುತ್ತ ಅವುಗಳನ್ನು ಒಂದೊಂದಾಗಿ ನನಸಾಗಿಸುವ ಕಾಲ ಅದು. ಹೀಗಿರುವಾಗ ಕಾಲೇಜು ಕ್ಯಾಂಪಸ್‌ನ ಹಾಸುಗಲ್ಲಿನ ಮೇಲೆ ಕುಳಿತು ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈ ಹಾಕಿಕೊಂಡು ತರಲೆ ಮಾಡುತ್ತ ಎಲ್ಲವನ್ನು ಹರವಿಕೊಳ್ಳುವ ಸುಮಯವದು...
ಕುಗ್ರಾಮವೊಂದರಿಂದ ಬೆಳೆದು ಬಂದ ನಾನು ಶಿವಮೊಗ್ಗದ ಡಿವಿಎಸ್(ದೇಶೀಯ ವಿದ್ಯಾ ಶಾಲೆ) ಕಾಲೇಜಿಗೆ ಪದವಿ ಶಿಕ್ಷಣಕ್ಕಾಗಿ ಪ್ರವೇಶ ಪಡೆದೆ. ಹಳ್ಳಿಯಲ್ಲಿ ನಮ್ಮದೇ ಆದ ಜಂಜಡದ ನಡುವೆ ಬೆಳೆದ ನನಗೆ ಸಾಮಾನ್ಯವಾಗಿ ಶಿಕ್ಷಕನಾಗಬೇಕು ಎಂಬ ಹಂಬಲವಿತ್ತು. ಆ ಕಾರಣಕ್ಕಾಗಿಯೇ ಪಿಯುಸಿಯಲ್ಲಿ ಶಿಕ್ಷಣ ವಿಷಯವನ್ನು ಆರಿಸಿಕೊಂಡಿದ್ದೆ. ಆದರೆ ಮನೆಯ ಆರ್ಥಿಕ ಕಾರಣಗಳಿಂದ ಅದು ಕೈಗೂಡದೆ ಮತ್ತೆ ಪದವಿ ಮಾಡಲು ಹಾತೊರೆದು ಡಿವಿಎಸ್‌ಗೆ ಬಂದು ಬಿದ್ದಿದ್ದೆ.
ಆಗ ಮುಂದೆ ಯಾವುದನ್ನು ಓದಬೇಕು ಎಂಬುದೇ ಗೊಂದಲ ಶುರುವಾಗಿತ್ತು. ಆ ಹೊತ್ತಿನಲ್ಲಿ ಕೃಷ್ಣಮೂರ್ತಿ ಎಂಬ ಪ್ರಾಧ್ಯಾಪಕರು ‘ಕನ್ನಡ ಐಶ್ಚಿಕ ವಿಷಯ ತೆಗೆದುಕೊಂಡರೆ ಒಳ್ಳೆಯದು...’ ಎಂದ ಮಾತು ಕಿವಿಗೆ ಬಿದ್ದು, ಇದೇ ಇರಲಿ ಎಂದು ಅಚಾನಕ್ಕಾಗಿ ಅದಕ್ಕೇ ಗುರುತು ಹಾಕಿ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಿದ್ದೆ. ಸೀಟು ಸಲೀಸಾಗಿಯೇ ಸಿಕ್ಕಿತು. ಆದರೆ ವಸತಿಯದು ದೊಡ್ಡ ಸಮಸ್ಯೆಯಾಯಿತು. ಆದರೆ ಆ ಕ್ಷಣದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಇದ್ದಿದ್ದರಿಂದ ಎದೆಗುಂದದೆ ಒಂದು ಕಡೆ ಸಂಜೆ ಕೆಲಸಕ್ಕೆ ಸೇರಿ ಚಿಕ್ಕದೊಂದು ರೂಮ್ ಮಾಡಿಕೊಂಡು ವಿದ್ಯಾಬ್ಯಾಸ ಆರಂಬಿಸಿದೆ. ಸಂಜೆ ಕೆಲಸ ಆ ವಯಸ್ಸಿಗೆ ಬೇಸರ ತರಿಸಿದರೂ ಬೆಳಗ್ಗೆಯಿಂದ ಸಂಜೆ ವರೆಗೆ ಕಾಲೇಜಿನಲ್ಲಿರುತ್ತಿದ್ದರಿಂದ ಆ ಎಲ್ಲ ಬೇಸರ, ನೋವು, ಹತಾಷೆಗಳು ಮಾಯವಾಗುತ್ತಿದ್ದವು.
ಹೇಳಿಕೇಳಿ ನನ್ನದು ಕನ್ನಡ ಐಶ್ಚಿಕ ವಿಷಯ. ಅಲ್ಲಿ ನನ್ನ ಜತೆಗೆ ಆ ವಿಷಯಕ್ಕೆ ಪ್ರವೇಶ ಪಡೆದಿದ್ದು ಕೇವಲ ೧೨ ಮಂದಿ. ಅವರಲ್ಲಿ ಇಬ್ಬರು ಮಾತ್ರ ಹುಡುಗಿಯರು! ಹೀಗಾಗಿ ನಮಗೆ ಪ್ರಾಧ್ಯಾಪಕರ ಜತೆಗೆ ಒಡನಾಟ ಇಟ್ಟುಕೊಳ್ಳಲು ಸುಲಭ ಮಾರ್ಗ ದೊರೆತ್ತಿತ್ತು. ಆದರೆ ತರಗತಿಯಿಂದ ಹೊರಗೆ ಬಂದ ನಂತರ ಕಾಲೇಜು ನಿಜಕ್ಕೂ ದೊಡ್ಡ ಸಾಗರ. ಒಂದೇ ಕಾಲೇಜಿನಲ್ಲಿ ಹಲವು ವಿಭಾಗಗಳು. ಆ ವಿಭಾಗಗಳಲ್ಲಿ ಒಂದನೇ ತರ
ಗತಿಯಿಂದ ಪದವಿ ವರೆಗೆ ಹತ್ತಾರು ಸೆಕ್ಷನ್‌ಗಳು. ಇದರಿಂದ ಆ ಕಾಲೇಜು ಕ್ಯಾಂಪಸ್ ಸದಾ ಕಲರ್‌ಫುಲ್ ಜಗತ್ತು.
ಎಲ್ಲಿ ನೋಡಿದರಲ್ಲಿ ಹುಡುಗ-ಹುಡುಗಿಯರ ಬಣ್ಣದ ಲೋಕ. ಅಲ್ಲಿ ಪ್ರೇಮಿಗಳು ಯಾರೊ? ಸ್ನೇಹಿತರು ಯಾರೊ? ಸೋದರ ಸೋದರಿಯರ‍್ಯಾರೋ? ಒಂದು ತಿಳಿಯುತ್ತಿರಲಿಲ್ಲ. ಅಲ್ಲಿದ್ದ ಮರಗಳ ಮೇಲೆ ಹಕ್ಕಿಗಳ ಕಲರವ. ಕೆಳಗೆ ಈ ಹಕ್ಕಿಗಳು... ಒಂದಂತೂ ಸತ್ಯ ಅಲ್ಲಿ ಪ್ರೇಮಿಗಳು ಹಾಗೂ ಸ್ನೇಹಿತರ ಸಂಖ್ಯೆಯೇ ಹೆಚ್ಚಾಗಿತ್ತು. ವಿಶಾಲವಾದ ಕ್ಯಾಂಪಸ್‌ನಲ್ಲಿ ಅವರು ಅವರದ್ದೇ ಆದ ಜಗತ್ತಿನಲ್ಲಿ
ಮೈಮರೆತು ಕಾಲ ಕಳೆಯುತ್ತಿದ್ದರು. ಗಲಾಟೆಗಳು, ಹೊಡೆದಾಟಗಳೂ ಕೂಡ ಇದ್ದವು! ಆದರೆ ಅವುಗಳು ಎಲ್ಲೋ ಒಮ್ಮೊಮ್ಮೆ ನಡೆಯುತ್ತಿದ್ದವು. ಆದರೆ ಅವುಗಳ ನಡುವೆ ರ‍್ಯಾಗಿಂಗು ಹೆಚ್ಚಾಗಿತ್ತು. ಅಮಾಯಕ ಹುಡುಗಿಯರು ಸೈಲೆಂಟಾಗಿ ಬರುತ್ತಿದ್ದರೆ ಸೀನಿಯರ್ ಹುಡುಗರು ಅವರನ್ನು ರೇಗಿಸುತ್ತಿದ್ದರು. ಕೆಲವು ತೀರಾ ಸೌಮ್ಯ ಸ್ವಭಾವದ ಹುಡುಗಿಯರು ಅಳುತ್ತ ಓಡಿದರೆ ಮತ್ತೆ ಕೆಲವು ಹುಡುಗಿಯರು ರೇಗಿಸಿದ ಹುಡುಗರೇ ಅಳುವಂತೆ ಮಾಡುತ್ತಿದ್ದರು!!
ಹಾಗಂತ ಕಾಲೇಜಂದರೆ ಇವಿಷ್ಟೇ ಅಲ್ಲ, ಸ್ನೇಹಕ್ಕೆ ಅಲ್ಲಿ ಪ್ರಮುಖ ಸ್ಥಾನ. ಅದಿಲ್ಲದೆ ಅಲ್ಲಿ ಯಾವುದೂ ನಡೆಯುತ್ತಿರಲಿಲ್ಲ. ರ‍್ಯಾಂಗಿಂಗ್ ಕೆಲವೊಮ್ಮೆ ಅತಿರೇಕ ಎನಿಸಿದರೂ ಅಲ್ಲಿಂದಲೇ ಎಷ್ಟೋ ಸಾರಿ ಹೊಸ ಸ್ನೇಹ ಚಿಗುರೊಡೆದಿದ್ದೂ ಉಂಟು. ಆ ಕಾಲದ ಸ್ನೇಹದಲ್ಲಿ ಯಾವು
ದೇ ಮುಚ್ಚುಮರೆಯಿಲ್ಲ. ಅಶ್ಲೀಲತೆ, ಗೌಪ್ಯತೆ ಎಂಬ ಯಾವುದೇ ಭೇದ ಕೂಡ ಅಲ್ಲಿರುತ್ತಿರಲಿಲ್ಲ. ಇದರಿಂದಾಗಿ ಎಲ್ಲವೂ ನಿಸ್ಸಂಕೋಚವಾಗಿ ಹಂಚಿಕೆಯಾಗುತ್ತಿದ್ದವು. ಒಳ್ಳೆಯದು, ಕೆಟ್ಟದ್ದು ಎಲ್ಲವೂ ವಿನಿಮಯವಾಗುತ್ತಿದ್ದರಿಂದ ಸ್ನೇಹ ಮತ್ತಷ್ಟು ಗಟ್ಟಿಕೊಳ್ಳಿತ್ತು.
ಬದುಕು ಹೊಸ ದಿಕ್ಕಿಗೆ ತೆರೆದುಕೊಳ್ಳುತ್ತಿತ್ತು. ಸ್ವಲ್ಪ ಎಚ್ಚರ ತಪ್ಪಿದ್ದರೂ ಆ ಕ್ಯಾಂಪಸ್ ಬಾಳ ಹಾದಿಯ ಗುರಿಯನ್ನೇ ದಿಕ್ಕು ತಪ್ಪಿಸುವ ಸಾಧ್ಯತೆಯೂ ಇತ್ತು. ಆದರೆ ಹಾಗಾಗಲಿಲ್ಲ... ಹಾಗಾಗಿ ನಿಜಕ್ಕೂ ಅದು ಮತ್ತೆ ಬಾರದ ಮರೆಯಲಾಗದ ಅನುಭವ.

No comments:

Powered By Blogger