Friday, October 23, 2009

ಅಮ್ಮಾ ನಿನ್ನ ಎದೆ ಹಾಲಲ್ಲಿ ಬೆಳೆಯಲಿ ‘ಅಮೃತ’ ಬಳ್ಳಿ

ಅದು ಅಕ್ಷರಶಃ ಅಮೃತಧಾರೆ. ತಾಯ ಹೃದಯಾಂತರಾಳದಿಂದ ಉಕ್ಕುವ ಆ ವಾತ್ಸಲ್ಯ ಧಾರೆಗೆ ಸರಿಸಮನಾದುದು ಈ ಜಗತ್ತಿನಲ್ಲಿ ಬೇರಾವುದೂ ಸಿಗಲಾರದು. ಜೀವವನ್ನು ಪೊರೆದು ಒಂದಿಡೀ ಬದುಕಿಗೆ ಭದ್ರ ಬುನಾದಿ ಹಾಕಿಕೊಡುವ ಅಮ್ಮನಕ್ಕರೆಯ ಸವಿ ಸಕ್ಕರೆಯ ಆ ಒಂದೊಂದು ಹನಿಯೂ ಈ ಭೂಮಿಯ ಮೇಲೆ ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ಅಂಥ ಅಮ್ಮನ ಅತ್ಯಮೂಲ್ಯ ಎದೆ ಹಾಲಿನಿಂದಲೇ ವಂಚಿತರಾಗಿಬಿಟ್ಟರೆ ? ಆ ಜೀವಿ ಕಳಕೊಳ್ಳುವುದಕ್ಕೆ ಬೇರೇನು ಬಾಕಿ ಉಳಿದೀತು ? ಬಹುಶಃ ಇದೀಗ ಮೊಳಕೆಯೊಡೆ ಯುತ್ತಿರುವ ಈ ಕನಸು ಸಾಕಾರಗೊಂಡರೆ ಭಾರತದ ಯಾವ ಮಗುವೂ ತಾಯ ಹಾಲಿಂದ ವಂಚಿತವಾಗಲಾರದು.
ಭಾರತದಲ್ಲಿ ತಾಯಂದಿರಿಗೆ ಸರಿಯಾದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಅದರ ಫಲವಾಗಿ ಜನಿಸಿದ ೨೪ ಗಂಟೆಗಳಲ್ಲಿ ನಿತ್ಯವೂ ೪ ಲಕ್ಷ ಮಕ್ಕಳು ಕೊನೆಯುಸಿರೆಳೆಯುತ್ತಿದ್ದಾರೆ. ಅದರ ನಡುವೆಯೂ ಬದುಕುವ ಬಹಳಷ್ಟು ಮಕ್ಕಳಿಗೆ ಮತ್ತೆ ಎದುರಾಗುವ ಸಮಸ್ಯೆ ಎದೆಹಾಲು !
ಇಂಥ ಸೂಕ್ಷ್ಮ ಸಮಸ್ಯೆಯನ್ನು ಪರಿಹರಿಸಲು ಗುಜರಾತ್‌ನಲ್ಲಿ ‘ತಾಯಿ ಎದೆಹಾಲು ಕೇಂದ್ರ’ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿಯೊಬ್ಬ ತಾಯಂದಿರೂ ತಮ್ಮ ಮಕ್ಕಳಿಗೆ ಆಗಿ ಉಳಿಯುವ ಬಹುಪಾಲು ಹಾಲನ್ನು ಈ ಕೇಂದ್ರಕ್ಕೆ ತಂದು ನೀಡುತ್ತಾರೆ !! ಆಶ್ಚರ್ಯವಾದರೂ ಇದು ನಿಜ.
ಇದೊಂದು ವಿನೂತನ ಪ್ರಯೋಗ. ಆದರೆ ಪ್ರಪಂಚದ ಪರಿವೆಯೇ ಇಲ್ಲದೆ ಭುವಿಗೆ ಬರುವ ಮಗುವಿನ ಪುಟ್ಟ ಹೊಟ್ಟೆಯನ್ನೂ ತುಂಬಿಸಲಾಗದೆ ಲಕ್ಷಾಂತರ ತಾಯಂದಿರು ಕೊರಗುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಗುಜರಾತ್‌ನಲ್ಲಿ ‘ಮದರ್ ಮಿಲ್ಕ್ ಬ್ಯಾಂಕ್’ ನಿರ್ಮಾಣ ಮಾಡಲಾಗಿದೆ. ಈ ಬ್ಯಾಂಕ್‌ನ ಹಾಲು ಕುಡಿದು ಇಂದು ಅದೆಷ್ಟೊ ಮಕ್ಕಳು ಹಸಿವು ನೀಗಿಸಿಕೊಳ್ಳುತ್ತಿವೆ.
ಸರಿಯಾಗಿ ಬೆಳವಣಿಗೆಯಾಗದ, ಅನಾರೋಗ್ಯದಿಂದ ಬಳಲುವ ಹಾಗೂ ದತ್ತು ಪಡೆದ ಮಕ್ಕಳಿಗೆ, ಎದೆ ಹಾಲಿಲ್ಲದೆ ಬಳಲುವ ತಾಯಂದಿರ ಮಕ್ಕಳಿಗೆ, ಅನಾಥ ಶಿಶುಗಳಿಗೆ ಇಂಥ ‘ದೂರದ ತಾಯಂದಿರು’ ತಮ್ಮ ಎದೆ ಹಾಲನ್ನು ಧಾರೆ ಎರೆಯುತ್ತಿದ್ದಾರೆ. ಎಲ್ಲೋ ಹುಟ್ಟಿ ಬಳಲುವ ಮಕ್ಕಳು ಇದನ್ನು ಕುಡಿಯುವ ಮೂಲಕ ಚೇತರಿಸಿಕೊಳ್ಳುತ್ತಿವೆ...
ಇದು ಇದೇ ಮೊದಲಲ್ಲ, ದಕ್ಷಿಣ ಅಮೇರಿಕದಲ್ಲಿ ಕನಿಷ್ಠ ೬ ಮಿಲಿಯನ್ ತಾಯಿ ಎದೆ ಹಾಲು ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಈ ಬ್ಯಾಂಕ್‌ಗಳು ಮೊಲೆ ಹಾಲು ದಾನ ಮಾಡುವ ತಾಯಂದಿರಿಗೆ ಗೌರವಧನವನ್ನೂ ನೀಡುತ್ತಿವೆ.
ಆರೋಗ್ಯವಂತ ತಾಯಂದಿರಿಂದ ಪಡೆದ ಮೊಲೆ ಹಾಲನ್ನು ಈ ಬ್ಯಾಂಕ್‌ಗಳು ಪರೀಕ್ಷಿಸಿ, ಶೇಖರಿಸಿಡುತ್ತವೆ. ಆನಂತರ ನಿಗದಿತ ತಜ್ಞರನ್ನು ಸಂಪರ್ಕಿಸಿ ಅಗತ್ಯವಿರುವ ಮಕ್ಕಳಿಗೆ ಪೂರೈಕೆ ಮಾಡುತ್ತವೆ. ಆ ಮೂಲಕ ಕಣ್ಣಿಗೆ ಕಾಣದ, ದೂರದ ಯಾವುದೋ ಮಗುವಿಗೆ ಇನ್ನಾವುದೋ ಮಹಿಳೆ ‘ತಾಯಿ’ಯಾಗುವ ಭಾಗ್ಯ ಒದಗಿಸುತ್ತಿವೆ.
ಈ ‘ಮದರ್ ಮಿಲ್ಕ್ ಬ್ಯಾಂಕ್’ ಮೊದಲು ಆರಂಭವಾಗಿದ್ದು ೧೯೮೫ರಲ್ಲಿ. ಕೊಲೊರಾಡೊದಲ್ಲಿ ಮೊಟ್ಟ ಮೊದಲ ಬಾರಿ ಮದರ್ ಮಿಲ್ಕ್ ಕ್ಲಿನಿಕ್ ಆರಂಭವಾದಾಗ ಆರಂಭದಲ್ಲಿ ಕೆಲವರು ಮೂಗು ಮುರಿದರೂ ಆನಂತರ ಅದೇ ಜನಮನ್ನಣೆ ಗಳಿಸಿತು. ಮುಂದಿನ ದಿನಗಳಲ್ಲಿ ಅದೇ ‘ಮದರ್ ಮಿಲ್ಕ್ ಬ್ಯಾಂಕ್’ ಆಗಿ ಮಾರ್ಪಾಡಾಯಿತು.
ಅಲ್ಲಿಂದ ಮುಂದೆ ಅಮೆರಿಕದಲ್ಲಿ ೬, ಉತ್ತರ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋದಲ್ಲಿ ತಲಾ ಒಂದೊಂದು ಎದೆ ಹಾಲಿನ ಬ್ಯಾಂಕ್‌ಗಳಿವೆ. ಆನಂತರ ವಿಶ್ವದ ೫ ದೇಶಗಳ ೪೬ ರಾಜ್ಯಗಳಲ್ಲಿ ಎದೆ ಹಾಲು ಕೆಂದ್ರಗಳ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ಹಾಗೂ ತರಬೇತಿ ಮೂಲಕ ತಿಳಿ ಹೇಳಲಾಗುತ್ತಿದೆ.
ಗುಜರಾತ್‌ನಲ್ಲಿ ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್(ಎನ್‌ಡಿಡಿಬಿ) ಹಾಗೂ ಅಮುಲ್ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೇಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ಸಹಯೋಗದೊಂದಿಗೆ ಎದೆ ಹಾಲಿನ ಪ್ಯಾಕ್‌ಗಳನ್ನು ತಯಾರಿಸಲಾಗುತ್ತಿದೆ. ಗಾಂನಗರದಲ್ಲಿ ತಯಾರಾಗುವ ಈ ‘ಅಮುಲ್’ ಎದೆಹಾಲನ್ನು ೪೫೦೦ ಡೀಲರ‍್ಸ್ ಮೂಲಕ ರಾಜ್ಯಾದ್ಯಂತ ವಿತರಣೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಈ ಎದೆ ಹಾಲು ಲಭ್ಯವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಜಿಸಿಎಂಎಂಎಫ್‌ನ ಪ್ರಧಾನ ವ್ಯವಸ್ಥಾಪಕ ಆರ್.ಎಸ್. ಸೋ.
೨೦ ವರ್ಷಗಳಿಂದ ‘ಅಮುಲ್’ ಮಾರುಕಟ್ಟೆಯಲ್ಲಿದ್ದು, ಈಗ ೨೦೦೫ರಲ್ಲಿ ‘ಸುಗಮ್’ ಎಂಬ ಹೊಸ ಬ್ರಾಂಡ್ ನೇಮ್‌ನೊಂದಿಗೆ ಮತ್ತೊಂದು ಪರಿಷ್ಕೃತ ಎದೆ ಹಾಲಿನ ಪ್ಯಾಕ್‌ಗಳನ್ನು( ಅಲಹಾಬಾದ್‌ನಲ್ಲಿ ಶೇಖರಣೆ) ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಲಿನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಇಲ್ಲಿನ ಜಿಸಿಎಂಎಂಎಫ್ ಹೊಸದಿಲ್ಲಿಯ ಮದರ್ ಡೈರಿ ಇಂಡಿಯಾ ಲಿಮಿಟೆಡ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಇದರಿಂದ ‘ಸುಗಮ್’ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇಷ್ಟು ದಿನ ರಕ್ತದಾನ, ನೇತ್ರದಾನ ಸೇರಿದಂತೆ ಮನುಷ್ಯನ ದೇಹದ ಅಮೂಲ್ಯವಾದ ನಾನಾ ಭಾಗಗಳನ್ನು ದಾನ ಮಾಡುವುದು ವಾಡಿಕೆಯಾಗಿತ್ತು. ಆದರೆ ಸದ್ಯದ ಮಟ್ಟಿಗೆ ಹಾಗೂ ಭಾರತದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸೋರಿ ಹೋಗುತ್ತಿರುವ ಮಾನವ ಸಂಪನ್ಮೂಲವನ್ನು ಸರಿಯಾದ ರೀತಿ ಸದ್ಬಳಕೆ ಮಾಡಿಕೊಳ್ಳಬೇಕಾದರೆ ಇಂಥ ‘ಎದೆ ಹಾಲು ದಾನ ಕೂಡ ಅತ್ಯಮೂಲ್ಯ’.
ಆ ಮೂಲಕ ಹುಟ್ಟಿದ ಮರುಕ್ಷಣದಿಂದಲೇ ಹಸಿವಿನ ರುಚಿ ನೋಡುತ್ತಲೇ ನೊಂದು, ಬೆಂದು ಬದುಕುವ ಅಥವಾ ಅರ್ಧಕ್ಕೇ ಕಣ್ಣು ಮುಚ್ಚುವ ಮಕ್ಕಳಿಗೆ ಬದುಕು, ಜೀವ ಎರಡೂ ದೊರೆತಂತಾಗುತ್ತದೆ. ಒಂದು ಮಗುವಿಗೆ ಹೆಣ್ಣು ಜನ್ಮ ನೀಡಿ ‘ತಾಯಿ’ ಎನಿಸಿಕೊಳ್ಳಬಹುದು; ಆದರೆ ಅದೇ ಮಗುವಿಗೆ ಆಕೆಯಿಂದ ಎದೆ ಹಾಲು ನೀಡಲಾಗಲಿಲ್ಲ ಎಂದರೆ ಆ ತಾಯಿಯ ಕರುಳಿನ ಕೂಗು ಅರ್ಥವಾಗುವುದಾದರೂ ಯಾರಿಗೆ? ಅದು ಮತ್ತೊಬ್ಬ ತಾಯಿಗೆ ಮಾತ್ರ.
ಆದ್ದರಿಂದ ಪ್ರತಿಯೊಬ್ಬ ತಾಯಂದಿರೂ ಕೂಡ ತಮ್ಮ ಮಗುವಿಗೆ ಉಣಬಡಿಸಿ ಉಳಿಯುವ ಹಾಲನ್ನು ಹಿಂಡಿ ಅದನ್ನು ಒಂದು ಬಾಟಲಿಯಲ್ಲಿ ಭದ್ರವಾಗಿ ಶೇಖರಿಸಿ ಇಂಥ ‘ಮದರ್ ಮಿಲ್ಕ್ ಬ್ಯಾಂಕ್’ಗಳಿಗೆ ನೀಡುವುದು ಉತ್ತಮ. ಇದರಿಂದ ಅವರು ಕಳೆದುಕೊಳ್ಳುವುದು ಏನೂ ಇಲ್ಲ. ಜತೆಗೆ ನೆನಪಿರಲಿ, ಇದು ಕೃತಕವಾಗಿ ತಯಾರಿಸುವ ಪೇಯವಲ್ಲ. ನಿಜವಾದ ‘ಅಮೃತ’. ಇಂಥ ಕೇಂದ್ರಗಳು ಕರ್ನಾಟಕದಲ್ಲೂ ಸ್ಥಾಪನೆಯಾದರೆ ಒಳ್ಳೆಯದು. ಆ ಮೂಲಕ ರಾಜ್ಯದ ಬೀದಿ ಬೀದಿಗಳಲ್ಲಿ ಅನಾಥವಾಗಿ, ಅಪೌಷ್ಟಿಕತೆಯಿಂದ ಪ್ರಪಂಚ ನೋಡುವ ಲಕ್ಷಾಂತರ ಎಳೆಯ ಕಂದಮ್ಮಗಳಿಗೆ ಮಹಾತಾಯಂದಿರ ಅಮೂಲ್ಯವಾದ ಎದೆ ಹಾಲು ಜೀವನ ಜ್ಯೋತಿಯಾಗಲಿ...
ಇದು ನೆನಪಿರಲಿ...
  • *ನಿಮ್ಮ ಮಗು ಮೊಲೆ ಹಾಲು ಕುಡಿಯುವುದನ್ನು ಬಿಟ್ಟಿದ್ದರೆ ನೀವು ನಿಮ್ಮ ಹಾಲನ್ನು ದಾನ ಮಾಡಬಹುದು.
  • *ಹಾಲು ದಾನ ಮಾಡುವುದರಿಂದ ನಿಮ್ಮ ಎದೆಯಲ್ಲಿ ಹಾಲು ಉತ್ಪಾದನೆ ನಿಲ್ಲುವುದಿಲ್ಲ.
  • *ನಿಮ್ಮ ದೇಹದಲ್ಲಿ ಎದೆ ಹಾಲಿನ ಪ್ರಮಾಣ ಹೆಚ್ಚಿದ್ದರೂ ಅಥವಾ ನಿಮ್ಮ ಮಗುವಿಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚಿದ್ದರೂ ದಾನ ಮಾಡಬಹುದು.
  • *ಒಂದು ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿದ್ದ ಆರೋಗ್ಯವಂತ ತಾಯಂದಿರು ಹಾಲು ದಾನ ಮಾಡಬಹುದು.
  • * ದಾನ ಮಾಡುವ ತಾಯಂದಿರು ಮದ್ಯಪಾನ, ಧೂಮಪಾನ, ಅತಿಯಾದ ಔಷಧ ಸೇವನೆ, ಗಿಡಮೂಲಿಕೆ ಅಥವಾ ಮಾದಕ ವಸ್ತುಗಳಿಗೆ ಅಂಟಿಕೊಂಡಿರಬಾರದು.
  • * ದಾನ ಮಾಡುವ ಮುನ್ನ ಬ್ಯಾಂಕ್‌ಗಳಲ್ಲಿ ನಿಮ್ಮ ರಕ್ತ ಹಾಗೂ ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ನೀವು ಆರೋಗ್ಯವಾಗಿದ್ದರೆ ಮಾತ್ರ ದಾನಕ್ಕೆ ಅವಕಾಶ.
  • *ರಕ್ತ ಪರೀಕ್ಷೆಯ ಜತೆಗೆ ಸಿಫಿಲಿಸ್, ಹೆಪಟೈಟಿಸ್ ಬಿ ಮತ್ತು ಸಿ, ಎಚ್‌ಐವಿ ೧ ಮತ್ತು ೨, ಎಚ್‌ಟಿಎಲ್‌ವಿ ಪರೀಕ್ಷೆ ಮಾಡಲಾಗುತ್ತದೆ.
  • *ಯಾವ ಪರೀಕ್ಷೆಗೂ ಎದೆ ಹಾಲು ದಾನಿಗಳಿಂದ ಹಣ ಪಾವತಿಸಿಕೊಳ್ಳುವುದಿಲ್ಲ.
  • *ನಿಮ್ಮ ಮಗು ಆಸ್ಪತ್ರೆಯಲ್ಲಿದ್ದರೆ ಅಥವಾ ನಿಮ್ಮ ಎದೆ ಹಾಲನ್ನು ಸಂಪೂರ್ಣವಾಗಿ ಮಗು ಕುಡಿಯದಿದ್ದಾಗ ಅದನ್ನು ಅನಾವಶ್ಯಕವಾಗಿ ಹಾಳು ಮಾಡಬೇಡಿ.

ತಾಯಂದಿರಿಗೊಂದು ಟಿಪ್ಸ್
ನಿಮ್ಮ ಮಗು ಎಷ್ಟು ಹಾಲು ಕುಡಿಯುತ್ತದೆ ಎಂದು ಮೊದಲು ತಿಳಿದುಕೊಳ್ಳಿ. ನೀವು ಉದ್ಯೋಗಕ್ಕೆ ಹೋಗುವವರಾದರೆ ನಿಮ್ಮ ಎದೆ ಹಾಲನ್ನು ಒಂದು ಫೀಡಿಂಗ್ ಬಾಟಲಿಯಲ್ಲಿ ತುಂಬಿ ಅದನ್ನು ನಿಮ್ಮ ಮಗು ಮನೆಯಲ್ಲಿದ್ದರೆ ಮನೆಯವರಿಗೆ ತೋರಿಸಿ ಹೋಗಿ, ಇಲ್ಲವೇ ಡೇ ಕೇರ್‌ಗೆ ಮಗುವನ್ನು ಬಿಡುವುದಾದರೆ ಮಗುವಿನ ಜತೆ ಕೊಟ್ಟುಬಿಡಿ. ಆಗ ನಿಮ್ಮ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ನೀವು ಎಲ್ಲೇ ಇದ್ದರೂ ನಿಮ್ಮ ಮಗು ನಿಮ್ಮ ಎದೆ ಹಾಲನ್ನೇ ಕುಡಿದು ಬೆಳೆಯುತ್ತದೆ. ಆದರೆ ಎದೆ ಹಾಲನ್ನು ಹಾಳು ಮಾಡಬೇಡಿ. ಅದಕ್ಕೆ ಒಂದು ಜೀವವನ್ನೊ ಪೊರೆಯುವ ಶಕ್ತಿ ಇದೆ. ನಿಮ್ಮ ಎದೆ ಹಾಲು ಅಮೃತಕ್ಕೆ ಸಮಾನ ಎಂಬುದನ್ನು ಮರೆಯದಿರಿ. ಅದು ನೀಡುವ ಆರೋಗ್ಯವನ್ನು ಯಾವುದೇ ಹಾಲು ಅಥವಾ ಸಿದ್ಧ ಆಹಾರವೂ ನೀಡಲಾರದು.

1 comment:

sweet hammu said...

thumba uthama tiluvalike baraha sir

Powered By Blogger