Friday, October 23, 2009

ಅನ್ಯ ದೇಶಗಳ ಪಾಲಾಗುತ್ತಿರುವ ದೇಸಿ ತಳಿಗಳು

ಬದಲಾಯಿಸಲು ಸಾಧ್ಯವೇ ಇಲ್ಲ(!?) ಎನ್ನುವಷ್ಟರಮಟ್ಟಿಗೆ ಕೃಷಿ ಕ್ಷೇತ್ರದ ಮೇಲೆ ಜಾಗತಿಕರಣದ ಕರಾಳ ಬಾಹುಗಳು ಚಾಚಿಕೊಂಡಿರುವುದು ಈಗ ಇತಿಹಾಸ. ಆದರೆ ಇದರ ವ್ಯತಿರಿಕ್ತ ಪರಿಣಾಮ ಕೃಷಿಗೆ ಬೆನ್ನೆಲುಬಾಗಿ ನಿಂತ ರಾಸುಗಳ ಮೇಲೂ ಆಗಿದೆ. ಭಾರದತಲ್ಲಿದ್ದ ಬಹುತೇಕ ಬಲಾಢ್ಯ ಗೋ ತಳಿಗಳನ್ನೆಲ್ಲಾ ವಿದೇಶೀಯರು ತಮ್ಮ ಕೈ ವಶ ಮಾಡಿಕೊಂಡಿದ್ದಾರೆ. ಅವುಗಳಿಂದ ಇಂದಿಗೂ ಹೊಸ ಹೊಸ ರೀತಿಯ ತಳಿಗಳನ್ನು ಆವಿಷ್ಕರಿಸುತ್ತಲೇ ಇದ್ದಾರೆ.
ಇಡೀ ವಿಶ್ವದಲ್ಲಿಯೇ ಉತ್ಕೃಷ್ಟ ಹಾಗೂ ಬಲಾಡ್ಯ ಜಾನುವಾರು ತಳಿಗಳಿದ್ದುದು ಭಾರತದಲ್ಲಿ ಮಾತ್ರ. ಜಾಗತಿಕ ಮಟ್ಟದಲ್ಲಿ ಇಂದು ಗುರುತಿಸಿಕೊಂಡಿರುವ ಕೃಷ್ಣವೇಣಿ, ಒಂಗಲ್, ಅಮೃತಮಹಲ್, ಕಾಂಗಾಯಾಮ್, ದೇವಣಿ, ಪುಂಗನೂರು ಮುಂತಾದ ತಳಿಗಳು ಈಗ ಭಾರತದ ರೈತರಿಗೆ ಕನಸಾಗಿವೆ. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಮಾಡುವ ಹೊಸ ತಂತ್ರeನವನ್ನು ಇಲ್ಲಿನ ರೈತರ ಮೇಲೆ ಹೇರಿದ ವಿದೇಶಿಯ ಲಾಭಿಕೋರರು, ಇಲ್ಲಿನ ಬಲಾಢ್ಯ ತಳಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ನೆಲದಲ್ಲಿ ಅವುಗಳ ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದಾರೆ.
ಬ್ರಿಟೀಷರ ಕಾಲದಿಂದಲೂ ಭಾರತದ ರೈತರ ರೈತಾಪಿ ಶೈಲಿಯನ್ನು ಮನಗಂಡ ವಿದೇಶಿಯರು, ಆರೋಗ್ಯಯುತ ಬೆಳೆ ಬೆಳೆಯಲು ಭಾರತದ ದೇಸಿ ಪದ್ಧತಿ ಹಾಗೂ ಇಲ್ಲಿನ ರಾಸುಗಳ ಬಳಕೆಯೇ ಸೂಕ್ತ ಎಂಬುದನ್ನು ಅಣುಅಣುವಾಗಿ ಗಮನಿಸಿದ್ದಾರೆ. ಆದರೆ ಅದ್ಯಾವುದೂ ನಮ್ಮ ರೈತರ ಗಮನಕ್ಕೆ ಬರಲೇ ಇಲ್ಲ. ಜಾಗತಿಕರಣದ ಪ್ರಭಾವಕ್ಕೆ ಸಿಕ್ಕಿ ವೇಗವಾಗಿ ಬೆಳೆಯುವ ಹಾಗೂ ಪ್ರಗತಿ ಸಾಸುವ ಹುಂಬತನದ ಹಂಬಲದಲ್ಲಿ ನಮ್ಮತನವನ್ನೇ ಗಾಳಿಗೆ ತೂರಿ, ಅನ್ಯರ ಪದ್ಧತಿಯನ್ನು ಅನುಸರಿಸಲಾರಂಭಿಸಿದೆವು. ಅದರ ಪರಿಣಾಮ ಯಾವುದೇ ಬೆಳೆಯ ಕಾಳುಗಳನ್ನು ಇಟ್ಟುಕೊಂಡು ಮತ್ತೆ ಬಿತ್ತನೆಗೆ ಬೀಜವನ್ನಾಗಿ ಬಳಸಿಕೊಳ್ಳುವ ಹಳೇಯ ‘ನಾಟಿ ಪದ್ಧತಿ’ ನೀರಿನಲ್ಲಿ ಕೊಚ್ಚಿ ಹೋಗಿದೆ!
ಅದೊಂದೇ ಅಲ್ಲ, ಜಾನುವಾರುಗಳ ಸಾಕುವಿಕೆಯಲ್ಲೂ ರೈತರು ಮಾಡಿದ ತಪ್ಪು ಅದೇ. ಅದರ ಲಾಭವನ್ನು ವಿದೇಶೀಯರು ಚೆನ್ನಾಗಿ ಬಳಸಿಕೊಂಡರು. ಅದರ ಪರಿಣಾಮ ಕೃಷ್ಣವೇಣಿ, ಒಂಗಲ್, ಅಮೃತಮಹಲ್, ಕಾಂಗಾಯಾಮ್, ದೇವಣಿ, ಪುಂಗನೂರು ಮುಂತಾದ ತಳಿಗಳು ಇಂದು ಇಂಗ್ಲೇಂಡ್, ಅಮೇರಿಕಾ,ಬೆಜಿಲ್, ಈಜಿಪ್ಟ್ ಮುಂತಾದ ದೇಶಗಳ ಪಾಲಾಗಿವೆ.
ಕೃಷ್ಣವೇಣಿ:
ರಾಜ್ಯದ ಮೈಸೂರು ಪ್ರಾಂತ್ಯದಲ್ಲಿ ಉದ್ಭವವಾದ ತಳಿಗಳಲ್ಲಿ ಕೃಷ್ಣವೇಣಿ ಕೂಡ ಒಂದು. ೧೯ನೇ ಶತಮಾನದಲ್ಲಿ ಇದನ್ನು ಕೃಷ್ಣಾ, ಘಟಪ್ರಭ ಹಾಗೂ ಮಲಪ್ರಭ ನದಿ ತೀರಗಳಲ್ಲಿ ಮೈಸೂರು ಭಾಗದಲ್ಲಿದ್ದ ಎರಡ್ಮೂರು ಜಾತಿಯ ತಳಿಗಳನ್ನು ಸಮೀಕರಿಸಿ ಆ ಮೂಲಕ ಕೃಷ್ಣವೇಣಿಯನ್ನು ತಯಾರು ಮಾಡಲಾಯಿತು. ಇದರಲ್ಲಿ ಕಾಥೆವಾಡದ ಗೀರ್ ಹಾಗೂ ಆಂದ್ರದ ನೆಲ್ಲೂರಿನ ಒಂಗಲ್ ಜಾತಿ ತಳಿಗಳನ್ನು ಮಿಶ್ರಣ ಮಾಡಿರಬಹುದು ಎನ್ನಲಾಗಿದೆ. ಆ ಕಾರಣಕ್ಕಾಗಿಯೇ ಕೃಷ್ಣವೇಣಿ ತಳಿಯ ಹೋರಿಗಳು ಉಳುಮೆಗೆ ಹಾಗೂ ಹಸುಗಳು ಅತ್ಯಕ ಹಾಲು ಕರೆಯಲು ಸಹಾಯಕವಾಗಿದ್ದವು.
ಈ ತಳಿ ಅತ್ಯಂತ ಶಕ್ತಿಯುತವಾದದ್ದು. ಯಾವುದೇ ಕೆಲಸ ಕಾರ್ಯಗಳಿಗಾದರೂ ಸರಿ ಸೈ ಎನ್ನುವಂಥದ್ದು. ಆದರೆ ಈಗ ಈ ತಳಿಯೇ ಮಾಯವಾಗುತ್ತಿದೆ. ಅದಕ್ಕೆ ಮೂಲ ಕಾರಣ ಇಲ್ಲಿನ ರೈತರ ನಿರ್ಲಕ್ಷ್ಯ, ಪಶು ಸಂಗೋಪನ ಇಲಾಖೆಯ ಬೇಜವಾಬ್ದಾರಿ ಹಾಗೂ ಅನ್ಯ ದೇಶಗಳ ಹುನ್ನಾರ. ಈ ಎಲ್ಲ ಹಿನ್ನೆಲೆಯಲ್ಲಿ ೧೯೪೬ರಲ್ಲಿ ೬.೫ ಲಕ್ಷ ಇದ್ದ ಕೃಷ್ಣವೇಣಿ ತಳಿ ಈಗ ಕೇವಲ ೨೮೧ಮಾತ್ರ! ಅದೂ ಈಗ ಎಲ್ಲ ಕಡೆ ಸಿಗುವುದಿಲ್ಲ. ಜಮಖಂಡಿ, ಅಥಣಿ, ಮುಧೋಳ್, ಚಿಕ್ಕೋಡಿ, ಚಿಂಚಿಲಿ, ರಾಯಭಾಗ, ಬೆಳಗಾವಿ, ಬಿಜಾಪು ಭಾಗಲಕೋಟೆ ಪ್ರದೇಶಗಳಲ್ಲಿ ಮಾತ್ರ ಕಾಣಬರುತ್ತದೆ. ಉಳಿದಂತೆ ದಕ್ಷಿಣ ಮಹಾರಾಷ್ಟ್ರದ ಸಾಂಗ್ಲಿ, ಈಚಲ, ಮಿರಾಜ್, ಈರಂದವಾಡ, ಕೊಲ್ಲಾಪುರ, ಸತಾರ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
ಇವು ಆಕಾರ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಹೆಚ್ಚು ತೂಕ ಕೂಡ ಹೊಂದಿರುತ್ತವೆ. ಇವುಗಳ ಸಾಮರ್ಥ್ಯ ಹಾಗೂ ಕಷ್ಟ ಸಹಿಷ್ಣತೆಯನ್ನು ಮನಗಂಡ ಬ್ರೆಜಿಲ್ ಹಾಗೂ ಅಮೆರಿಕಾದ ಜಾನುವಾರು ತಳಿ ಅಭಿವೃದ್ಧಿ ಪರಿಣಿತರು ಅವುಗಳನ್ನು ತಮ್ಮ ದೇಶಗಳಿಗೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಈ ಕೃಷ್ಣವೇಣಿ ಈಗ ಆವಿಷ್ಮಾರಗೊಂಡ ರಾಜ್ಯದಲ್ಲಿಯೇ ಅವನತಿಯ ಹಾದಿಯಲ್ಲಿವೆ.
ಅಮೃತ ಮಹಲ್ ಮತ್ತು ಪುಂಗನೂರು:
ಇದು ಕೂಡ ರಾಜ್ಯದಲ್ಲಿಯೇ ಅಸ್ತಿತ್ವ ಪಡೆದ ಕ್ರಾಸ್ ಬೀಡ್ ತಳಿ. ದೈಹಿಕ ಸಾಮರ್ಥ್ಯ ಹಾಗೂ ಶ್ರಮಶಕ್ತಿಯಿಂದ ಎಂಥ ಕೆಲಸಗಳನ್ನಾದರೂ ಮಾಡಬಹುದು ಎಂಬುದನ್ನು ಅರಿತ ಅಮೆರಿಕಾ, ಬ್ರೆಜಿಲ್ ಮುಂತಾದ ದೇಶಗಳನ್ನು ೧,೯೫೬ಕ್ಕಿಂತ ಮುಂಚಿತವಾಗಿಯೇ ಬಹುತೇಕ ರಾಸುಗಳನ್ನು ತಮ್ಮ ದೇಶಗಳಿಗೆ ಆಮದು ಮಾಡಿಕೊಂಡಿದ್ದಾರೆ.
ಇದರಿಂದಾಗಿ ಈ ತಳಿ ಕೂಡ ಇಲ್ಲಿ ಇಲ್ಲದಾಗಿದ್ದು, ಅವನತಿಯ ಹಾದಿಯಲ್ಲಿದೆ. ತರಿಕೆರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಾತ್ರ ಅಂದಾಜು ಒಂದು ಸಾವಿರ ಹೋರಿಗಳು ಮಾತ್ರ ಸಿಗಬಹುದು ಎನ್ನಲಾಗಿದೆ. ಇನ್ನು ಅಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಆವಿಷ್ಕಾರಗೊಳಿಸಲಾದ ಪುಂಗನೂರು ತಳಿ ಕೂಡ ವಿದೇಶಿಗರ ಓರೆಗಣ್ಣಿಗೆ ತುತ್ತಾಗಿ ಈಗ ಸಂಪೂರ್ಣವಾಗಿ ನಾಶವಾಗಿದೆ. ಈ ತಳಿಗಳನ್ನು ಹುಡುಕಾಡಿದರೆ ಆಂಧ್ರದ ಕೆಲವೇ ಕೆಲವು ಕಡೆಗಳಲ್ಲು ೧೦೦ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸಿಗಬಹುದು.
ದೇವಣಿ:
ಮಹಾರಾಷ್ಟ್ರದ ದೇವಣಿಯಲ್ಲಿ ಹಲವು ಜಾತಿಯ ತಳಿಗಳನ್ನು ಸೇರಿಸಿ ರೂಪಿಸಲಾದ ತಳಿಯೇ ದೇವಣಿ. ಇದೂ ಕೂಡ ಕೃಷ್ಣವೇಣಿಯಂತೆಯೇ ಬಲಾಢ್ಯ ಹಾಗೂ ಶಕ್ತಿಯುತವಾದ ತಳಿ. ಆದರೆ ಈಗ ಭಾರತದ ಯಾವ ಮೂಲೆಯಲ್ಲಿಯೂ ಇದರ ಮೂಲ ತಳಿ ಕಾಣಸಿಗುವುದಿಲ್ಲ. ಬದಲಿಗೆ ರೈತರು ಹಾಗೂ ಪಶುಸಂಗೋಪನೆ ಇಲಾಖೆಯ ಅಕಾರಿಗಳು ಇದರೊಂದಿಗೆ ಬೇರೆ ಕೀಳು ಜಾತಿಯ ತಳಿಗಳನ್ನು ಮಿಶ್ರಣ ಮಾಡಿ ಮೂಲ ತಳಿಯನ್ನೇ ಕುಲಗೆಡಿಸಿದ್ದಾರೆ. ಹೀಗಾಗಿ ಇದೂ ಕ್ರಾಸ್ ಬೀಡ್ ಆಗಿದೆ. ಮಹಾರಾಷ್ಟ್ರದ ಕೆಲವು ಕಡೆಗಳಲ್ಲಿ ಮಾತ್ರ ಸುಮಾರು ೨೦ ಸಾವಿರ ಹೋರಿ ಹಾಗೂ ಆಕಳುಗಳು ಕಾಣಬರುತ್ತವೆ.
ಒಂಗಲ್ ಮತ್ತು ಕಾಂಗಾಯಾಮ್
ಆಂಧ್ರಪ್ರದೇಶದ ಗೋದಾವರಿ ನದಿ ತೀರದಲ್ಲಿ ಆವಿಷ್ಕಾರಗೊಳಿಸಿದ ಇನ್ನೊಂದು ದೇಸಿ ತಳಿ ಒಂಗಲ್. ಇದೂ ಕೂಡ ಬಲಿಷ್ಠ ತಳಿ. ಒಂದೇ ಒಂದು ಸಮಾಧಾನದ ಸಂಗತಿಯೆಂದರೆ ಆಂಧ್ರದ ಎಲ್ಲೆಡೆ ಇದು ಕಂಡು ಬರುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಈ ತಳಿಯ ರಾಸುಗಳು ಸಿಗುತ್ತವೆ. ಇದರ ಜತೆಗೆ ದೇಶದಲ್ಲಿ ಉಳಿದಿರುವ ಇನ್ನೊಂದು ತಳಿ ಕಾಂಗಾಯಾಮ್. ಇದೂ ಸಹ ತಮಿಳುನಾಡಿನ ಕೋಯಿಮತ್ತೂರು, ಸೇಲಂ, ಪಟ್ಟಾಯಾಮ್ ಮುಂತಾದ ಪ್ರದೇಶಗಳಲ್ಲಿ ಕಾಣಬರುತ್ತದೆ.
ಈ ಎಲ್ಲ ತಳಿಗಳೂ ಕೂಡ ಉಬಯ ರೀತಿಯ ಕೆಲಸಕ್ಕೆ ಉಪಯುಕ್ತವಾದವು. ಈ ಜಾತಿಯ ಹಸುಗಳು ಕನಿಷ್ಠ ೫ರಿಂದ ೬ಲೀ. ಹಾಲು ನೀಡುತ್ತವೆ. ಹೋಗಿಗಳು ಕನಿಷ್ಠ ೧೦ಗಂಟೆ ನಿರಂತರವಾಗಿ ಕೆಲಸ ಮಾಡಬಲ್ಲವು. ಆದರೆ ಈ ಎಲ್ಲ ತಳಿಯ ರಾಸುಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಅನಂತರದ ಹತ್ತು ವರ್ಷಗಳ ಕಾಲ ನಿರಂತರವಾಗಿ ಭಾರತದಿಂದ ಇಂಗ್ಲೇಂಡ್ ಮತ್ತಿರರ ದೇಶಗಳಿಗೆ ಕೊಂಡೊಯ್ದಿದ್ದಾರೆ. ೧,೮೬೦ರಲ್ಲಿಯೇ ಈಜಿಪ್ಟ್‌ನ ರಾಜ ಪಾಷಾ ಏಕ ಕಾಲಕ್ಕೆ ಸಾವಿರಾರು ರಾಸುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ. ಅವುಗಳನ್ನು ಆರಂಭದಲ್ಲಿ ಮಿಲಿಟರಿಗೆ ಬಳಸಿಕೊಳ್ಳಲಾಗುತ್ತಿತ್ತು. ಅನಂತರ ಅವುಗಳ ದುಡಿಯುವ ಸಾಮರ್ಥ್ಯವನ್ನು ಅರಿತು ಅವುಗಳನ್ನೇ ಬಳಸಿ ಹೊಸ ಹೊಸ ತಳಿಗಳನ್ನು ಕಂಡು ಹಿಡಿಯಲು ವಿದೇಶಗಳಲ್ಲಿರುವ ಕ್ಯಾಟಲ್‌ಬ್ರೀಡರ್ ಅಸೋಸಿಯೇಷ್‌ನ್‌ಗಳು (ಜಾನುವಾರು ತಳಿ ಅಭಿವೃದ್ಧಿ ಕೇಂದ್ರಗಳು) ಆರಂಭಿಸಿದವು.
ಅದೇ ಸಮಯದಲ್ಲಿ ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳು ಒಂದೊಂದಾಗಿ ಹಿಡಿತ ಸಾಸಲು ಆರಂಭಿಸಿದ್ದವು. ಹೀಗಾಗಿ ಪಾಶ್ಚಾತ್ಯೀಕರಣ, ಜಾಗತಿಕರಣದ ವ್ಯಾಮೋಹಕ್ಕೆ ಬಲಿಯಾದ ಇಲ್ಲಿನ ರೈತರು ಕೂಡ ಈ ದೇಸಿ ತಳಿಯ ಹಸು, ಹೋರಿಗಳ ಮೇಲೆ ಹಂತ ಹಂತವಾಗಿ ನಿರ್ಲಕ್ಷ್ಯ ತೋರತೊಡಗಿದರು. ಅದರ ಪರಿಣಾಮ ಇಂದು ಭಾರತದ ಬಹುತೇಕ ಬಲಾಡ್ಯ ತಳಿಗಳು ವಿದೇಶಗಳ ಪಾಲಾಗಿವೆ.
ಪೇಟೆಂಟ್‌ಗೆ ಲಾಭಿ:
ಬೆರಳು ಸಿಕ್ಕರೆ ಹಸ್ತವನ್ನೇ ನುಂಗುವ ಜಾಯಮಾನದವರಾದ ವಿದೇಶೀಯರು ಭಾರತದ ಪ್ರಾದೇಶಿಕ ತಳಿಯ ರಾಸುಗಳ ರುಚಿ ನೋಡಿದ್ದರಿಂದ ಇಲ್ಲಿನ ಬಹುತೇಕ ಎಲ್ಲ ತಳಿಗಳ ಮೇಲು ಕಣ್ಣು ಹಾಕಿದ್ದರು. ಇಲ್ಲಿನ ಪಶು ಸಂಗೋಪನಾ ಇಲಾಖೆ ಹಾಗೂ ರೈತರು ಸಹ ಇದನ್ನು ನೋಡುತ್ತಾ ಕುಳಿತಿದ್ದರು. ಅದರ ಪರಿಣಾಮವಾಗಿ ಈ ಎಲ್ಲ ಬಲಾಡ್ಯ ತಳಿಗಳ ಆವಿಷ್ಕಾರಕ್ಕೆ ಕಾರಣವಾದ ತಳಿಗಳಲ್ಲಿ ಒಂದಾದ ಅಪ್ಪಟ ದೇಸಿ ದನ ‘ಮಲೆನಾಡು ಗಿಡ್ಡ’ದ ಮೇಲೂ ಕೆಲ ದಿನಗಳ ಹಿಂದಷ್ಟೇ ಪೇಟೆಂಟ್ ಪಡೆಯುವ ಯತ್ನಗಳು ನಡೆದಿದ್ದವು. ಅದು ಅನಂತರ ಕೈ ತಪ್ಪಿತು. ಮಲೆನಾಡು ಗಿಡ್ಡದ ಹಾಲಿನಲ್ಲಿ ಕೊಬ್ಬಿನ ಅಂಶ (ಕೊಲೆಷ್ಟ್ರಾಲ್) ಕಡಿಮೆ ಇರುವುದರಿಂದ ಇದು ಆರೋಗ್ಯಕ್ಕೆ ಬೇರೆ ತಳಿಯ ಹಾಲಿಗಿಂತ ಅತ್ಯುತ್ತಮ ಎಂಬ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಪೇಟೆಂಟ್ ಲಾಭಿ ನಡೆದಿತ್ತು.
ಬಲಿಷ್ಠ ಹಾಗೂ ಶಕ್ತಿಯುತವಾದ ಬಹುತೇಕ ತಳಿಗಳ ಹಸುಗಳಿಗೆ ಅಸಮರ್ಥ ಜಾತಿಯ ಹೋರಿಗಳ ವೀರ್ಯವನ್ನು ಕೃತಕವಾಗಿ ಹಾಕುವುದನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿಯೂ ಇಲ್ಲಿನ ದೇಸಿ ತಳಿಗಳು ಸರ್ವನಾಶವಾಗಿವೆ. ಆದ್ದರಿಂದ ಕೃಷಿ ನಿಜಕ್ಕೂ ಉಳಿಯಬೇಕೆಂದರೆ ದೇಸಿ ತಳಿಗಳನ್ನು ಮೊದಲು ಉಳಿಸಿಕೊಳ್ಳುವ ಪ್ರಯತ್ನವನ್ನು ರೈತರು ಮಾಡಬೇಕಿದೆ. ಇಲ್ಲವಾದರಲ್ಲಿ ಇರುವ ತಳಿಗಳೂ ನಾಶವಾಗುವುದರಲ್ಲಿ ಸಂಶಯವಿಲ್ಲ...

No comments:

Powered By Blogger