ಉತ್ತರ ಕರ್ನಾಟಕದ ಮಂದಿ ‘ನೆರೆಯ ತೊರೆ’ಯಲ್ಲಿ ತೇಲಿ ಹೋಗುತ್ತಿದ್ದಾರೆಂಬ ಕಾರಣಕ್ಕೆ ಕರ್ನಾಟಕದ ಉದ್ದಗಲಕ್ಕೂ ಮಾನವೀಯತೆ, ಮಮಕಾರ ಧಾರಾಕಾರವಾಗಿ ಹರಿಯುತ್ತಿದೆ. ಅದರ ಜತೆಗೆ ಕೋಟಿ ಕೋಟಿ ರೂ. ಹಣ ಕೂಡ ಕೋಡಿಯಾಗಿ ಉತ್ತರ ದಿಕ್ಕಿಗೆ ಹರಿಯುತ್ತಲೇ ಇದೆ. ಜತೆಗೆ ದವಸ, ಧಾನ್ಯ, ಬಟ್ಟೆ, ದಿನಸಿ ವಸ್ತುಗಳು, ಸಿದ್ಧ ಆಹಾರಗಳು ಕೂಡ ಲೋಡುಗಟ್ಟಲೆ ಸಾಗುತ್ತಿದೆ...
ಕೆಲವರು ದಾನವನ್ನು ನೇರವಾಗಿ ಹೋಗಿ ತಮಗೆ ಸಿಕ್ಕ ಅಮಾಯಕ ಜನರಿಗೆ ತಲುಪಿಸಿ, ಅವರ ಕಷ್ಟ ನಷ್ಟಗಳನ್ನು ಕೇಳಿ ‘ಭರವಸೆಯ ಬೆಳಕು’ ನೀಡಿ ಬರುತ್ತಿದ್ದಾರೆ (ಅದರಲ್ಲೂ ಕೆಲವರು ಕೇವಲ ಮಂತ್ರಾಲಯಕ್ಕೆ ತೆರಳಿ ಪುನೀತರಾಗುತ್ತಿದ್ದಾರೆ!). ಇನ್ನು ಕೆಲವರು ಸರಕಾರಕ್ಕೆ, ಕೆಲವು ಸಂಘ ಸಂಸ್ಥೆಗಳಿಗೆ, ಮಾಧ್ಯಮ ಕೇಂದ್ರಗಳಿಗೆ ತಲುಪಿಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಂಡ ‘ನಿಧಿ ಸಂಗ್ರಹ ಯಾತ್ರೆ’ಯಲ್ಲಿ ಬೆಂಗಳೂರಿನ ಒಂದೆರಡು ಗಲ್ಲಿಗಳಲ್ಲಿ (ಕೇವಲ ಮೂರು ದಿನ ಪಾದಯಾತ್ರೆ ಮಾಡಿದ್ದಕ್ಕೆ) ಬರೊಬ್ಬರಿ ೭೦೦ ಕೋಟಿ ರೂ. ಹಣ ಸಂಗ್ರಹವಾಗಿದೆ.
ಕೇಂದ್ರ ಸರಕಾರದಿಂದ ಈಗಾಗಲೇ ೧೫೨ ಕೋಟಿ ರೂ. ಗಳನ್ನು ನೆರೆ ಸಂತ್ರಸ್ತರ ಪರಿಹಾರ ನಿಗೆ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರಕಾರ ಕೂಡ ೩೦೦೦ಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಆದರೆ ಇದೆಲ್ಲ ಮೇಲ್ನೋಟಕ್ಕೆ ಕಾಣುವ ಸತ್ಯ! ರಾಜ್ಯ ಸರಕಾರವೇ ಸಾಮಾನ್ಯ ಖಾತೆ ಭೂಮಿಗೆ ಎಕರೆಗೆ ೮೦೦ ರೂ., ನೀರಾವರಿ ಜಮೀನಿನ ಎಕರೆ ಬೆಳೆಗೆ ೧೬೦೦ರೂ., ತೋಟಗಾರಿಕೆ ಬೆಳೆ ನಾಶಕ್ಕೆ ಎಕರೆಗೆ ೨೬೦೦ ರೂ. ಪರಿಹಾರ ನೀಡಲಾಗುವುದೆಂದು ಆದೇಶಿಸಿದೆ. ಇದರ ಜತೆಗೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ ೫೦೦೦ರೂ. ನೀಡುವುದಾಗಿ ಸರಕಾರ ಘೋಷಣೆ ಮಾಡಿದೆ. ಇದೆಲ್ಲ ಯಾವ ಪುರುಷಾರ್ಥಕ್ಕೆ ? ಸರಕಾರ ನೀಡುವ ಸಾವಿರಾರು ರೂ. ಹಣದಿಂದ ಕಳೆದು ಹೋದ ಬದುಕನ್ನು ಒಬ್ಬ ರೈತ ಅಥವಾ ಸಾಮಾನ್ಯ ಪ್ರಜೆ ಮತ್ತೆ ಕಟ್ಟಿಕೊಳ್ಳಲು ಸಾಧ್ಯವೆ ?
ರಾಜ್ಯದಲ್ಲಿ ನೆರೆ ಹಾವಳಿಯಿಂದ ಈಗಾಲೇ ೨೦ ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸರಕಾರವೇ ಘೋಷಿಸಿದೆ. ಇಷ್ಟಾದರೂ ಪರಿಹಾರ ನೀಡುತ್ತಿರುವುದು ಮಾತ್ರ ಪುಡಿಗಾಸು ! ‘ಮಠ, ಮಂದಿರಗಳ ಏಳಿಗೆ’ಗೆ ಹಿಂದು ಮುಂದು ನೋಡದೆ ನೂರಾರು ಕೋಟಿ ರೂ. ನೀಡಿದ ರಾಜ್ಯ ಸರಕಾರಕ್ಕೆ ಸಮಾಜದ ಹಿತ ಕಾಯುವ ದೂರದೃಷ್ಟಿ ಮೊದಲೇ ಇರಲಿಲ್ಲ. ಈಗ ಪ್ರಕೃತಿ ವಿಕೋಪ ಸಂಭವಿಸಿದ ನಂತರ ಅದನ್ನು ಸರಿದೂಗಿಸಲು ನೇರವಾಗಿ ಜನರ ಬಳಿ ಬಂದು ‘ದಾನ ಮಾಡಿ’ ಎಂದು ಬೇಡುವುದರ ಜತೆಗೆ ಹಲವು ಕಸರತ್ತುಗಳನ್ನು ನಡೆಸಿದೆ. ನಡೆಸುತ್ತಲೂ ಇದೆ.
ಇಷ್ಟಾದರೂ ಈಗಾಲೇ ರಾಜ್ಯ ಸರಕಾರದ ಬೊಕ್ಕಸಕ್ಕೆ ಹತ್ತಿರತ್ತಿರ ಸಾವಿರ ಕೋಟಿ ರೂ. ಹಣ ಜನ ಸಾಮಾನ್ಯರಿಂದ ಸಂಗ್ರಹವಾಗಿದೆ. ಆದರೆ ಅದಕ್ಕೆಲ್ಲಾ ಲೆಕ್ಕವೇ ಇಲ್ಲ. ಸಾಧ್ಯವಾದರೆ ಅದೆಲ್ಲವನ್ನು ಪಾರದರ್ಶಕವಾಗಿ ಲೆಕ್ಕ ನೀಡಲಿ. ನಿರ್ಗತಿಕರಿಗೆ ಹಣ ನೀಡಲು ಇನ್ನೂ ಕೆಲವರು ಹಿಂದು ಮುಂದು ನೋಡುತ್ತಿದ್ದಾರೆ. ಕಾರಣ ಸರಕಾರದ ಬೊಕ್ಕಸಕ್ಕೆ ಹೋದ ಹಣ ಸ್ಮಶಾನಕ್ಕೆ ಹೋದ ಹೆಣ ಎರಡೂ ವಾಪಸ್ ಬರುವುದಿಲ್ಲ. ಅದರಿಂದ ಯಾವುದೇ ಪ್ರಯೋಜನವೂ ಇಲ್ಲ ಎಂಬ ಭಯ, ಗಾಬರಿ ಅವರನ್ನು ಕಾಡುತ್ತಿದೆ.
ರಾಜ್ಯದಲ್ಲಿ ಮಾನವೀಯತೆಗೆ ಬರವಿಲ್ಲ. ಆದರೆ ಅದರ ನೆಪದಲ್ಲಿ ಹರಿಯುವ ಹಣ ನೇರವಾಗಿ ಸಂತ್ರಸ್ತರಿಗೆ ತಲುಪುವುದೋ ಇಲ್ಲವೋ ಎಂಬ ಆತಂಕ ರಾಜ್ಯದ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ನೆರವು ನೀಡಲು ಎಲ್ಲ ಮಾಧ್ಯಮಗಳು(ಮುದ್ರಣ ಹಾಗೂ ದೃಶ್ಯ) ಪ್ರತ್ಯೇಕವಾಗಿ ಹಣ, ದವಸ ಧಾನ್ಯ, ನಿತ್ಯ ಬಳಕೆಯ ಸಾಮಗ್ರಿಗಳನ್ನು ಸಂಗ್ರಹಿಸುತ್ತಲೇ ಇವೆ. ಅವುಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಲೇ ಇವೆ. ಈ ವಿಚಾರ ರಾಜ್ಯದ ಪ್ರತಿಯೊಬ್ಬರಿಗೂ ಗೊತ್ತು. ಆದರೂ ರಾಜ್ಯ ಬಿಜೆಪಿ ಸರಕಾರ ಪ್ರತಿನಿತ್ಯ ಲಕ್ಷಾಂತರ ರೂ. ಮೌಲ್ಯದ ಜಾಹೀರಾತುಗಳನ್ನು ಎಲ್ಲ ಮಾಧ್ಯಮಗಳಿಗೆ ನೀಡುತ್ತಲೇ ಇದೆ.
ಸಾಲದ್ದಕ್ಕೆ ಪ್ರತಿಯೊಂದು ಇಲಾಖೆಯ ಸಚಿವರೂ ತಮ್ಮ ಮುಖಚಿತ್ರವನ್ನು ಒಳಗೊಂಡ ಹಾಗೂ ಇಲಾಖೆಯ ಅಕಾರಿಗಳ ಹೆಸರನ್ನು ಹೊಂದಿದ ಜಾಹೀರಾತನ್ನು ನೀಡುತ್ತಲೇ ಇವೆ. ಇದಕ್ಕೆ ಒಂದು ರಾಜ್ಯ ಮಟ್ಟದ ದಿನಪತ್ರಿಕೆಗೆ ಅಥವಾ ದೃಶ್ಯ ಮಾಧ್ಯಮಕ್ಕೆ ಒಂದು ದಿನಕ್ಕೆ ಲಕ್ಷಾನುಗಟ್ಟಲೆ ಹಣ ನೀಡಬೇಕು. ಆದರೆ ಆ ಹಣ ಯಾರ ಮನೆಯದು !? ಪ್ರತಿನಿತ್ಯ ಹೀಗೆ ಸರಕಾರಿ ಬೊಕ್ಕಸದಿಂದ ಅನಾವಶ್ಯಕವಾಗಿ ಮಾಧ್ಯಮ ಕೇಂದ್ರಗಳಿಗೆ ಜಾಹೀರಾತು ಹೆಸರಿನಲ್ಲಿ ಹಣ ಸರಬರಾಜು ಮಾಡುವ ಮೂಲಕ ಬಿಜೆಪಿ ಸರಕಾರ ಮಾಧ್ಯಮಗಳ ಜತೆಗೆ ಅಮೂರ್ತ ಸ್ವರೂಪದ ‘ಸ್ನೇಹ ಸಂಬಂಧ’ ಬೆಳೆಸಿಕೊಳ್ಳಲು ಹವಣಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.
ಪ್ರತಿನಿತ್ಯ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದಾಗೆಲ್ಲ ಒಂದಲ್ಲಾ ಒಂದು ರೀತಿ ನೆರೆ, ಪರಿಹಾರದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಹೀಗಿರುವಾಗಿ ಅದಕ್ಕೆ ಲಕ್ಷಾಂತರ ಮೌಲ್ಯದ ಜಾಹೀರಾತು ಅಗತ್ಯವೇ ? ಪತ್ರಿಕಾಗೋಷ್ಠಿಯಲ್ಲಿಯೇ ಈ ವಿಚಾರವನ್ನು ಹೇಳಿದರೆ ಮಾಧ್ಯಮಗಳು ಅದನ್ನು ಪ್ರಕಟಿಸುವುದಿಲ್ಲ ಎನ್ನುತ್ತವೆಯೇ? ಅವರೂ ಕೂಡ ತಮ್ಮದೇ ಆದ ರೀತಿ ನಿ ಸಂಗ್ರಹಣೆ ಮೂಲಕ ಮಾನವೀಯತೆ ಮೆರೆಯುತ್ತಿರುವುದು ಮುಖ್ಯಮಂತ್ರಿಯ ಗಮನಕ್ಕೆ ಬಂದೇ ಇಲ್ಲವೆ ?
ಕೇವಲ ಪ್ರಚಾರ ಪಡೆಯುವ ಹುನ್ನಾರವನ್ನಿಟ್ಟುಕೊಂಡು ‘ಪೇಪರ್ ಟೈಗರ್’ಗಳಾಗಲು ಸರಕಾರದ ಸಚಿವರು, ಶಾಸಕರು, ಹಿರಿಯ ಅಕಾರಿಗಳು ಯತ್ನಿಸಿದರೆ ಅದರ ಪರಿಣಾಮ ಆಗುವುದು ಜನ ಸಾಮಾನ್ಯರ ಮೇಲೆ ಎಂಬ ಸಣ್ಣ ಸತ್ಯವನ್ನು ಅವರು ಮನಗಾಣಬೇಕಿದೆ. ಅನಾವಶ್ಯಕವಾಗಿ ಜಾಹೀರಾತಿಗಾಗಿ ಸುರಿಯುವ ಲಕ್ಷಾಂತರ ರೂ. ಹಣವನ್ನು ಅದೇ ನಿರ್ಗತಿಕ, ಬಡಬಗ್ಗರ ಬದುಕಿನ ಏಳಿಗೆಗೆ, ಅವರಿಗೆ ‘ಬೆಳಕು ನೀಡಲು’ ಉಪಯೋಗಿಸಿದರೆ ಕನಿಷ್ಠ ಒಂದಷ್ಟು ಮಂದಿಯಾದರೂ ನೆಮ್ಮದಿ ಕಂಡುಕೊಂಡಾರು... ಆದರೆ ಯಾರದ್ದೋ ದುಡ್ಡು ಯಲ್ಲಮನ ಜಾತ್ರೆ ಎಂಬಂತೆ ಜನಪ್ರತಿನಿಗಳು ಬರೀ ಪ್ರಚಾರ, ಮೋಜು ಮಸ್ತಿಗೆ ನಿಂತರೆ ಜನರೇ ಬುದ್ದಿ ಕಲಿಸಿಯಾರು ಎಚ್ಚರವಿರಲಿ... ನೊಂದವರು ನೋವಿನ ನಿಟ್ಟುಸಿರ ಬಿಸಿ ತಟ್ಟದೆ ಇರದು.
No comments:
Post a Comment