ಭಾರತದಲ್ಲಿ ಗುರುವಿಗೆ ತನ್ನದೇ ಆದ ಸ್ಥಾನಮಾನ ನೀಡಲಾಗಿದೆ. ಈ ಸಮಾಜವನ್ನು ಯಾವ ದಿಕ್ಕಿಗೆ ಬೇಕಾದರೂ ಕೊಂಡೊಯ್ಯುವ ‘ತಾಕತ್’ ಇರುವುದು ಅವನೊಬ್ಬನಿಗೆ ಮಾತ್ರ. ಹೌದು, ಗುರು ಒಬ್ಬ ಶಿಲ್ಪಿ, ಕಲಾಕಾರ. ತಾಯಿ ಮಗುವನ್ನು ಹೆತ್ತು ಸಮಾಜಕ್ಕೆ ನೀಡುತ್ತಾಳೆ. ತಾಯಿ ತಾನೆ ಮೊದಲ ಗುರು ಎಂದರೂ ಅನಂತರದ ದಿನಗಳಲ್ಲಿ ಮಕ್ಕಳು ಹೆಚ್ಚು ಕಲಿಯುವುದು ಗುರುವಿನಿಂದ. ಎಳೆಯ ಮಕ್ಕಳೆಂಬ ಕಲ್ಲನ್ನು ಹೇಗೆ ಬೇಕೋ ಹಾಗೆ ಕೆತ್ತಿ, ತಿದ್ದಿ, ತೀಡಿ ಸಮಾಜಕ್ಕೆ ಕೊಡುವ ಅಭೂತಪೂರ್ವ ಕಲೆಗಾರಿಕೆ, ಸದವಕಾಶ ಇರುವುದು ಅವನೊಬ್ಬನಿಗೆ. ಆ ಹಿನ್ನೆಲೆಯಲ್ಲಿಯೇ ಗುರುಕುಲಗಳು ತಲೆ ಎತ್ತಿದ್ದು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅದಿರಲಿ, ಇಲ್ಲಿ ಚರ್ಚಿಸಬೇಕಾದ ವಿಚಾರ ಗುರುಕುಲಗಳ ಬಗ್ಗೆ ಅಲ್ಲ, ಗುರುವಿನ ಬಗ್ಗೆ. ಹಿಂದೆ ಗುರುವಿಗಿದ್ದ ಗೌರವಗಳು ಈಗಿವೆಯಾ...?
ಇಂಥದ್ದೊಂದು ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಅದು ಸಿಗುವುದೇ ಕಷ್ಟ. ಹಾಗೇ ಆ ಗೌರವ ಕಡಿಮೆಯಾಗಲು ಕಾರಣವೇನು? ಎಂಬುದಕ್ಕೆ ಮಾತ್ರ ಉತ್ತರ ಒಂದೇ ‘ಗುರು ಬದಲಾಗಿದ್ದಾನೆ’. ಹೌದು, ಗುರುಕುಲಗಳು ಮಾಯವಾದ ಬೆನ್ನಲ್ಲೇ ಗುರುವೂ ಬದಲಾಗಿದ್ದಾನೆ. ಆತನ ಸ್ಥಿತಿಗತಿಗಳೂ ಬದಲಾಗಿವೆ. ಹಿಂದೆ ಗುರುವಿಗೆ ಸಂಬಳವೇ ಇರಲಿಲ್ಲ. ಅಂಥದರಲ್ಲೂ ಗುರುಗಳು ಮಕ್ಕಳಿಗೆ ಶ್ರದ್ಧೆಯಿಂದ ಪಾಠ ಮಾಡುತ್ತಿದ್ದರು. eನವನ್ನು ಧಾರೆ ಎರೆಯುತ್ತಿದ್ದರು. ಈಗ ಒಳ್ಳೆಯ ಶಿಕ್ಷಕರಿಲ್ಲ ಪಾಠ ಮಾಡುತ್ತಿಲ್ಲ ಎಂದಲ್ಲ; ಇದ್ದಾರೆ, ಆದರೆ ಸ್ವರೂಪ ಬದಲಾಗಿದೆ. ಕೈತುಂಬ ಸಂಬಳ ಬರುತ್ತಿದ್ದರೂ ಪಾಠ ಪ್ರವಚನಗಳ ಶೈಲಿ ಹಿಂದಿನಂತಿಲ್ಲ. ಅದಕ್ಕೆ ಕಾರಣ ಹುಡುಕಲು ಹೊರಟರೆ ದೊಡ್ಡ ಪರ್ವತವೇ ಎದುರಾಗುತ್ತದೆ, ಅಷ್ಟೊಂದು ಕಾರಣಗಳಿವೆ.
ಮೊನ್ನೆ ಮೊನ್ನೆಯಷ್ಟೆ ನಡೆದ ಶಿಕ್ಷಕರ ಸಂಘದ ತಾಲೂಕು ಮಟ್ಟದ ಚುನಾವಣೆಗಳನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಆ ಎಲ್ಲ ಕಾರಣಗಳು ಎದುರಿಗೆ ಧುತ್ತೆಂದು ಬೀಳುತ್ತವೆ. ಶಿಕ್ಷಕರು ಹಿಂದೆ ಪಾಠದ ಜತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುತ್ತಿದ್ದರು. ಆದರೆ ಈಗ ಪಾಠದ ಜತೆಗೆ ರಾಜಕೀಯ ! ಮೊದಲ ಆದ್ಯತೆ ರಾಜಕೀಯಕ್ಕೆ ನಂತರ ಪಾಠಕ್ಕೆ(!?) ಎಂಬಂತಾಗಿದೆ. ಸಂವಿಧಾನದಲ್ಲಿ ಶಿಕ್ಷಕರಿಗೆ ಎಲ್ಲ ರೀತಿಯ ಸವಲತ್ತುಗಳನ್ನೂ ನೀಡಲಾಗಿದೆ. ಅವರ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಂಘದ ನಿರ್ಮಾಣಕ್ಕೆ ಅವಕಾಶ ನೀಡಿದೆ. ಆದರೆ ಈಗ ಅದರ ಹೆಸರಿನಲ್ಲಿ ಪಾಠ ನಿಧಾನವಾಗಿ, ಸಂಘದ (ರಾಜಕೀಯ) ಚಟುವಟಿಕೆಗಳೇ ಪ್ರಧಾನವಾಗಿವೆ.
ಯಾವುದೇ ರಾಜಕೀಯ ನಾಯಕರಿಗೂ ಸಾಟಿಯಿಲ್ಲದಂತೆ ತಾಲೂಕು ಮಟ್ಟದ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆ ಮಾಡಿದ್ದಾರೆ. ಬಾಡೂಟ ಹಾಕಿಸಿ, ‘ಹಬ್ಬ’ ಮಾಡಿದ್ದಾರೆ. ಸಮಾಜ ಶಿಕ್ಷಕರಿಗೆ ಅಪಾರ ಗೌರವ ನೀಡುತ್ತದೆ. ಅದನ್ನು ಉಳಿಸಿಕೊಳ್ಳುವ ಸಲುವಾಗಿ ಹಿಂದೆ ಶಿಕ್ಷಕರು ಹರ ಸಾಹಸ ಮಾಡುತ್ತಿದ್ದರು. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಿದ್ದರು. ಆದರೆ ಈಗ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಸಾರಾಯಿ ಅಂಗಡಿಗಳ ಕೌಂಟರ್‌ಗಳಲ್ಲಿಯೇ ಬಹಿರಂಗವಾಗಿ ಕುಡಿದು, ಕುಣಿದು ಕುಪ್ಪಳಿಸುವ ಹಂತಕ್ಕೆ ಬಂದಿದ್ದಾರೆ ಎಂದರೆ ಇಡೀ ಸಮಾಜವೇ ತಲೆ ತಗ್ಗಿಸುವ ವಿಚಾರ.
ಈಗತಾನೆ ಶಾಲೆಗಳು ಆರಂಭವಾಗಿವೆ. ಮಕ್ಕಳು ರಜೆಯ ಗುಂಗಿನಲ್ಲಿಯೇ ಇದ್ದಾರೆ. ಅವರನ್ನು ಪಠ್ಯದೆಡೆಗೆ ಕೈ ಹಿಡಿದು ಕರೆತರುವ ಜವಾಬ್ದಾರಿ ಶಿಕ್ಷಕರದ್ದು. ಆದರೆ ಈಗ ಶಿಕ್ಷಕರು ಚುನಾವಣೆಯಲ್ಲಿ ಫುಲ್ ಬಿಸಿ! ಈಗತಾನೆ ತಾಲೂಕು ಮಟ್ಟದ ಚುನಾವಣೆ ನಡೆದಿದೆ. ಇನ್ನೂ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಚುನಾವಣೆ ಬಾಕಿ ಇದೆ!! ಹೀಗಾದರೆ ಪಾಠ ಪ್ರವಚನಗಳ ಗತಿ ಏನು? ಈ ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿ ಹಾಗೂ ಅಂಥ ಸೌಭಾಗ್ಯ ಸಿಗುವುದು ಶಿಕ್ಷಕನಿಗೆ ಮಾತ್ರ. ಏಕೆಂದರೆ ಅವರಿಗೆ ಮಕ್ಕಳು ಸಿಗುವಷ್ಟು ಹೊತ್ತು ಪೋಷಕರಿಗೂ ಸಿಗುವುದಿಲ್ಲ. ಆದರೆ ಈಗ ಶಿಕ್ಷಕರು ಮಾಡುತ್ತಿರುವುದಾದರೂ ಏನು? ಪ್ರತಿ ತಾಲೂಕಿನಲ್ಲೂ ಒಬ್ಬೊಬ್ಬ ಮುಖಂಡರ ಹೆಸರಿನಲ್ಲಿ ಗುಂಪು ಗುಂಪಾಗಿ ರಾಜಕೀಯ...
ರಾಜ್ಯದಲ್ಲಿ ಪ್ರೌಢ ಶಾಲೆಯ ೬೪,೨೫೫ ಶಿಕ್ಷಕರಿದ್ದಾರೆ. ಪ್ರಾಥಮಿಕ ಶಾಲೆಯ ೨,೩೮,೯೦೯ ಶಿಕ್ಷಕರಿದ್ದಾರೆ. ಇವುಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪೈಕಿ ಪ್ರತಿ ಐವತ್ತು ಶಿಕ್ಷಕರಿಗೆ ಒಬ್ಬರಂತೆ ಎಲ್ಲ ತಾಲೂಕುಗಳಿಂದಲೂ ೬ ಮಂದಿ ಶಿಕ್ಷಕರಂತೆ ಒಟ್ಟು ೪೦೦೦ ಶಿಕ್ಷಕರು ತಾಲೂಕು ಪ್ರತಿನಿಗಳಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಎಲ್ಲ ತಾಲೂಕಿನ ಪ್ರತಿನಿಗಳು ಸೇರಿ ಜಿಲ್ಲೆಗೆ ೬ ಮಂದಿ ಪದಾಕಾರಿಗಳನ್ನು ಆಯ್ಕೆ ಮಾಡುತ್ತಾರೆ. ಅನಂತರ ರಾಜ್ಯ ಸಂಘಕ್ಕೆ ೬ ಮಂದಿ ಪದಾಕಾರಿಗಳನ್ನು ಆಯ್ಕೆ ಮಾಡಲಾಗುವುದು. ಆದರೆ ಇದಕ್ಕೆ ನಡೆಯುವ ಹೋರಾಟ, ರಾಜಕೀಯ, ತಂತ್ರಗಾರಿಕೆಗಳನ್ನು ನೋಡಿದರೆ ನಮ್ಮ ರಾಜಕೀಯ ಪಕ್ಷಗಳ ನಾಯಕರೂ ನಾಚಿಕೊಂಡಾರು!
ಈ ಚುನಾವಣೆಯಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಪ್ರತಿ ತಾಲೂಕಿನಲ್ಲಿಯೂ ೧೦೦ ರಿಂದ ೧೫೦ ಕುಲಗೆಟ್ಟ ಮತಗಳು ಕಂಡು ಬಂದಿವೆ. ಕೋಲಾರ ಜಿಲ್ಲೆಯೊಂದರಲ್ಲಿಯೇ ೬೦೦೪ ಶಿಕ್ಷಕರಲ್ಲಿ ೪೬೦ ಮತಗಳು ಕುಲಗೆಟ್ಟಿವೆ. (ಇದೇ ಅತಿ ಹೆಚ್ಚು) ಆದರೆ ಇದಕ್ಕೆ ರಾಜ್ಯ ಸರಕಾರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಗುರಿಕಾರ್ ಅವರು ‘ರಾಜ್ಯದ ಗಡಿ ಪ್ರದೇಶ ಹಾಗೂ ಇತರ ಭಾಷಾ ಶಾಲೆ ಶಿಕ್ಷಕರಿಗೆ ಕನ್ನಡದ ಅರಿವಿನ ಕೊರತೆಯಿದೆ. ಆ ಕಾರಣಕ್ಕೆ ಈ ರೀತಿಯ ಸಮಸ್ಯೆಯಾಗಿದೆ ಎನ್ನುತ್ತಾರೆ. ಅದೇನೇ ಇರಲಿ. ಇದು ಶಿಕ್ಷಕರ eನ ಮಟ್ಟವನ್ನೂ ಎತ್ತಿ ತೋರಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇದು ಪ್ರಜಾಪ್ರಭುತ್ವ. ಇಲ್ಲಿ ಎಲ್ಲರಿಗೂ ಹಕ್ಕುಗಳಿವೆ. ಅವುಗಳನ್ನು ರಕ್ಷಿಸಿಕೊಳ್ಳಲೇಬೇಕು. ಹಾಗಂತ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕಲ್ಲ. ಅಕಾರ ದರ್ಪಕ್ಕಲ್ಲ. ಶಿಕ್ಷಕರ ವರ್ತನೆಗಳು ಮಕ್ಕಳಿಗೆ ಆದರ್ಶ. ಅವರು ಹಸಿ ಗೋಡೆಗಳಂತೆ. ಯಾವುದನ್ನಾದರೂ ಸಲೀಸಾಗಿ ಸ್ವೀಕರಿಸುತ್ತಾರೆ. ಅವರ ಮುಂದಿರುವ ಆದರ್ಶ ಜೀವಿ ಒಬ್ಬನೇ, ಅದು ಶಿಕ್ಷಕ. ಆದರೆ ಇದನ್ನು ಮರೆತ ಇಂದಿನ ಬಹುತೇಕ ಶಿಕ್ಷಕರು ದೇಶ ಕಟ್ಟುವ ಉತ್ತಮ ಪ್ರಜೆಗಳನ್ನು ಸೃಷ್ಟಿಸುವ ಬದಲು ‘ಹೊಲಸು ರಾಜಕೀಯ’ಕ್ಕೆ ಹುರಿಯಾಳುಗಳನ್ನು ತಯಾರು ಮಾಡುತ್ತಿರುವಂತೆ ಕಾಣುತ್ತದೆ.
ಶಿಕ್ಷಕ ಹುದ್ದೆ ಕೇವಲ ಉದ್ಯೋಗವಲ್ಲ, ಅದೊಂದು ವಿಶೇಷ ಕರ್ತವ್ಯ. ಉತ್ತಮ ವ್ಯಕ್ತಿಗಳನ್ನು ಈ ದೇಶಕ್ಕೆ ತಯಾರು ಮಾಡುವ ಸುವರ್ಣಾವಕಾಶ. ಜಗತ್ತಲ್ಲಿ ಯಾರಿಗೂ ಸಿಗದ ಅಪರೂಪದ ಅವಕಾಶ. ಅದನ್ನು ಬಹುತೇಕರು ಮರೆತ ಹಾಗೆ ಕಾಣುತ್ತದೆ. ಇಂಥ ಅನುಮಾನಗಳಿಗೆ ಮೊನ್ನೆ ನಡೆದ ಚುನಾವಣೆ ಬಹಳಷ್ಟು ಕಡೆ ಎಡೆ ಮಾಡಿಕೊಟ್ಟಿದೆ.
ಜವಾಬ್ದಾರಿ ಮರೆತು ವರ್ತಿಸುವ ಶಿಕ್ಷಕರೇ ಇತ್ತೀಚೆಗೆ ಹೆಚ್ಚಾಗುತ್ತಿರುವುದರಿಂದ ಅವರ ಮೇಲೆ ಅನೇಕ ಆರೋಪಗಳು ಕೇಳಿಬರುತ್ತಲೇ ಇವೆ. ಅತ್ಯಾಚಾರವೂ ಸೇರಿದಂತೆ ಅನೇಕ ಕಳಂಕವನ್ನು ಹೊತ್ತ ಶಿಕ್ಷಕರು ರಾಜ್ಯ ಹಾಗೂ ರಾಷ್ಟ್ರಾದ್ಯಂತ ಕಾಣುತ್ತಿದ್ದಾರೆ. ಅವು ಗುಟ್ಟಾಗಿಯೂ ಉಳಿದಿಲ್ಲ. ಮಾಧ್ಯಮಗಳಲ್ಲಿ ಇಂಥ ಸುದ್ದಿಗಳು ಆಗಾಗ ಪ್ರಕಟವಾಗುತ್ತಲೇ ಇದ್ದರೂ ಕೆಲವು ಶಿಕ್ಷರು ಮಾತ್ರ ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಇದು ಈ ಕಾಲದ ಬಹುದೊಡ್ಡ ದುರಂತ.
ಶಿಕ್ಷಕರಿಗೆ ಸಮಸ್ಯೆಗಳಿವೆ ನಿಜ, ಆದರೆ ಅವುಗಳನ್ನು ಸರಕಾರದ ಅಥವಾ ಮೇಲಕಾರಿಗಳ ಮುಂದಿಟ್ಟು ಬಗೆಹರಿಸಿಕೊಳ್ಳಬಹುದು. ಆದರೆ ಅದಕ್ಕೆಂದು ಪಾಠ ಪ್ರವಚನಗಳನ್ನು, ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿ ಬೇಜವಾಬ್ದಾರಿಯಿಂದ ವರ್ತಿಸುವುದು ತರವಲ್ಲ.
ಯಥಾ ಗುರು ತಥಾ ಶಿಷ್ಯ ಎಂಬುದನ್ನು ಮರೆಯದೆ ಶಿಕ್ಷಕರು ವರ್ತಿಸುವುದನ್ನು ಕಲಿತರೆ ಈ ಸಮಾಜಕ್ಕೆ ಒಳ್ಳೆಯದು. ಇಲ್ಲದಿದ್ದರೆ ಅವರೇ ಸೃಷ್ಟಿಸಿದ ಬಲೆಯಲ್ಲಿ ಅವರೇ ಆಹುತಿಯಾಗುವುದು ನಿಶ್ಚಿತ.
7 comments:
ನಿಮ್ಮ ಲೇಖನ ತುಂಬಾ ಚನ್ನಾಗಿದೆ. ಇದನ್ನು ನಾನು ವಿಜಯ ಕರ್ನಾಟಕದ ಶಿಕ್ಷಣ ವಿಜಯದಲ್ಲಿ ಓದಿದ್ದೆ... ನಾನು ಕೂಡ ಶಿಕ್ಷಕಿಯಾಗಿ ಹೇಳುವದಾದರೆ... ಇದು ಅಪ್ಪಟ ಸತ್ಯ.. ಇತ್ತೀಚಿಗೆ ವ್ಯವಸ್ಥೆ ಹಾಗಾಗಿದೆ... ಶಿಕ್ಷಕರಿಗೆ ಬುದ್ದಿ ಕಳಿಸಬೇಕಾದ sandharba bandide...- sangeeta.
lechana is very nice...keep it...sir.
-Chandru.H.K
ವ್ಯಕ್ತಿತ್ವ ವಿಕಸನ ಶಿಕ್ಷಣದ ಉದ್ದೇಶವಾಗಿತ್ತು. ವೈಯಕ್ತಿಕತೆಗೆ ಸಾಮಾಜಿಕ ಆಯಾಮ ನೀಡುವ ಉದ್ದೇಶವೂ ಇತ್ತು. ಇದನ್ನ ಒಪ್ಪಿಕೊಂಡು ಶಿಕ್ಷಕರಾಗಿದ್ದವರು ಸಹಜವಾಗಿಯೇ ತಮ್ಮ ವ್ಯಕ್ತಿತ್ವವನ್ನು ಶುಭ್ರವಾಗಿ ಇಟ್ಟುಕೊಳ್ಳುತ್ತಿದ್ದರು. ಅದು ಅನಿವಾರ್ಯವಾಗಿತ್ತು. ನಿಧಾನವಾಗಿ ಶಿಕ್ಷಣದ ಉದ್ದೇಶ ಬದಲಾಗಿ ಅದು ಮಾಹಿತಿಯನ್ನು ವರ್ಗಾಯಿಸುವಷ್ಟಕ್ಕೇ ಸೀಮಿತವಾಯಿತು.ಜಗತ್ತನ್ನು ಜಯಿಸಲು ಮಾಹಿತಿಗಳ ಸಂಗ್ರಹವೇ ಮೂಲಶಕ್ತಿ ಎಂದು ನಾವೆಲ್ಲ ಭಾವಿಸಿದೆವು.ಕೊಡುವ ಮಾಹಿತಿ ಮುಖ್ಯವಾಗಿ,ಮಾಹಿತಿ ಕೊಡುವವ ಹೇಗಿದ್ದರೇನು ಎಂಬ ಅನಿಸಿಕೆ ಬೆಳೆಯಿತು. ನಮಗೆ ನಮ್ಮ ಸಾಮಾಜಿಕ ಮುಖಕ್ಕಿಂತ ವೈಯಕ್ತಿಕ ಮುಖವೇ ಮುಖ್ಯವಾಯಿತು. ಇದಕ್ಕೆ ಶಿಕ್ಷಕರು ಮಾತ್ರ ಹೇಗೆ ಹೊರತಾದಾರು?
ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ನಿಮ್ಮ ಬ್ಲಾಗ್ ನೋಡಿದೆ... ಕುತೂಹಲದಿಂದ ಇಡೀ ಲೇಖನ ಓದಿದೆ. ಇಂದು ಶಿಕ್ಷಕರು ತಮ್ಮ ನಿಜ ಸ್ಥಾನವನ್ನು ಉಳಿಸಿಕೊಂಡಿಲ್ಲ. ಅದು ಸತ್ಯ. ಅದನ್ನ ಈ ಲೇಖನ ತುಂಬಾ ಚೆನ್ನಾಗಿ ಅನಾವರಣಗೊಳಿಸಿದೆ... -ಪ್ರದೀಪ್ ಕುಮಾರ್, ಮೈಸೂರು.
ಲೇಖನ ತುಂಬಾ ಚನ್ನಾಗಿದೆ... ಮುಂದುವರಿಸಿ..-ಸಂಕೇತ್
ಹೊಸಮನೆ ಅವರೇ ನಿಮ್ಮ ನಿಲುವಿನಲ್ಲಿ ಖಂಡಿಂತ ನನಗೂ ಸಹಮತವಿದೆ. ಇಂಥ ವಯಕ್ತಿಕ ಕಾರಣಕ್ಕಾಗಿಯೇ ಇಂದು ಎಲ್ಲ ಸ್ತರಗಳಲ್ಲಿ ಕೆಲಸ ಮಾಡುವ ಜನ ಸ್ವಾರ್ತಿಗಲಾಗುತ್ತಿದ್ದರೆ... ಸಾಮಾಜಿಕ ಚಿಂತನೆಗಳೇ ಮಾಯವಾಗುತ್ತಿವೆ..
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅದನ್ನು ಮರೆತು ಶಿಕ್ಷಕರು ಈ ರೀತಿ ನಡೆದುಕೊಳ್ಳುವುದು ನಿಜಕ್ಕೂ ಸರಿಯಲ್ಲ...-ಸುಹಾಸ್
Post a Comment