Thursday, June 25, 2009

ಸಂಗೀತ ನಿರ್ದೇಶಕ ಹಂಸಲೇಖ ಜೊತೆ ಹಾಗೆ ಸುಮ್ಮನೆ...

ಕನ್ನಡ ಚಿತ್ರ ರಂಗದ ದಿಗ್ಗಜ, ಸಂಗೀತ ನಿರ್ದೇಶಕಹಂಸಲೇಖ ಅವರ ಜೊತೆ ಹಾಗೆ ಸುಮ್ಮನೆ ಮಾತಿಗಿಳಿದಾಗ... ಕೇಳಿದ ಕೆಲವು ಪ್ರಶ್ನೆಗಳು, ಅವುಗಳಿಗೆ ತುಂಬಾ ಜಾಣತನದಿಂದ ಅವ್ರು ನೀಡಿದ ಉತ್ತರಗಳು ಇಲ್ಲಿವೆ. ನೀವು ಹಾಗೆ ಸುಮ್ಮನೆ ಕಣ್ಣಾಯಿಸಿ....

.ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯಕಳವುಹೆಚ್ಚಾಗಿದ್ದೇಕೆ ?
*ಈಗ ಹೊಸ ಟ್ರೆಂಡ್ ಶುರುವಾಗಿದೆ. ಜಯಂತ ಕಾಯ್ಕಿಣಿ, ನಾಗೇಂದ್ರ ಪ್ರಸಾದ್‌ರಂಥ ಉತ್ತಮ ಸಾಹಿತಿಗಳು ಅತ್ಯುತ್ತಮ ಗೀತೆ ಬರೆಯುತ್ತಿದ್ದಾರೆ. ಕದ್ದು ಸಾಹಿತ್ಯ ಬರೆಯುವವರು ಸಾಹಿತಿಗಳೇ ಅಲ್ಲ, ಟೆಕ್ನಿಷಿಯನ್ಸ್. ಬೇರೆ ಯಾವುದೋ ಕಾರಣಕ್ಕೆ ಬಂದವರು. ಆದರೆ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ರೀಮೇಕ್ ಹಾಗೂ ಕದಿಯುವ ಸಾಹಿತ್ಯವನ್ನು ಮೊದಲಿನಿಂದಲೂ ನಾನು ವಿರೋಸಿದ್ದೇನೆ.
.ಹಿಂದಿನ ಹಂಸಲೇಖ ಎಲ್ಲೋದರು ?
*ಇಲ್ಲ, ನಾನು ಇನ್ನೂ ನನ್ನ ಟ್ರೆಂಡ್‌ನಲ್ಲಿದ್ದೇನೆ. ಕೆಲವರು ಹೊಸ ಟ್ರೆಂಡ್‌ನಲ್ಲಿದ್ದಾರೆ. ಆಗ ಪ್ರೇಮ, ಯುಗಳ ಗೀತೆಗಳೇ ಹೆಚ್ಚಾಗಿದ್ದವು. ರವಿಚಂದ್ರನ್ ಹಾಗೂ ನನ್ನದು ಒಂದು ಕಮರ್ಷಿಯಲ್ ಕಾಂಬಿನೇಷನ್ ಅಷ್ಟೇ. ಅನಂತರವೂ ‘ನೆನಪಿರಲಿ’ವರೆಗೆ ಒಳ್ಳೆ ಗೀತೆ ನೀಡಿದ್ದೇನೆ, ಜನ ಒಪ್ಪಿದ್ದಾರೆ. ಆ ಕಾರಣಕ್ಕಾಗಿಯೇ ನಾನು ಇನ್ನೂ ಚಿತ್ರರಂಗದಲ್ಲಿ ಜೀವಂತವಾಗಿದ್ದೇನೆ.
.ಈಗಿನ ಕನ್ನಡ ಸಿನಿಮಾರಂಗ ಹೇಗೆನಿಸುತ್ತದೆ ?
*ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಇದು ಪುಣ್ಯ ಕಾಲ; ಜತೆಗೆ ಅಂಜಿಕೆ ಹುಟ್ಟಿಸುವ ಕಾಲ! ಚಿತ್ರರಂಗ ಸ್ವಂತ ಕಾಲ ಮೇಲೆ ನಿಲ್ಲಲು ಹಣ ಬೇಕಿತ್ತು. ಅದನ್ನು ಕಳೆದ ಏಳೆಂಟು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ತಂದು ಸುರಿದಿದ್ದಾರೆ. ಆ ಮೂಲಕ ನೆಲೆ ಒದಗಿಸಿಕೊಟ್ಟಿದ್ದಾರೆ. ಆದರೆ ಅವರಿಗೆ ಗುಣಮಟ್ಟ ನೀಡಲು ಆಗಿಲ್ಲ. ಅದು ಅವರ ಕೆಲಸವೂ ಅಲ್ಲ. ಪ್ರಯೋಗಗಳಿಗೆ ಇದು ಪರ್ವ ಕಾಲ. ಭಾರತದ ಏಳು ರಾಜ್ಯಗಳಲ್ಲಿ ಪ್ರಾದೇಶಿಕ ಚಿತ್ರರಂಗ ನೆಲಕಚ್ಚಿದೆ. ಆದರೆ ಕನ್ನಡದಲ್ಲಿ ನೆಲೆ ನಿಂತಿದೆ. ಅದೊಂದೇ ಅವರಿಂದ ಆದ ಉಪಯೋಗ.
.ಪಾಶ್ಚಾತ್ಯ ಸಂಸ್ಕೃತಿ ಚಿತ್ರ ಸಾಹಿತ್ಯದ ಮೇಲೆಷ್ಟು ಪರಿಣಾಮ ಬೀರಿದೆ ?
*ನಮ್ಮ ಬಂಗಾರವನ್ನು ನಾವೇ ನವೀಕರಿಸಬೇಕು, ಎಸೆಯಬಾರದು. ಜಾಗತಿಕ ಪ್ರತಿರೋಧವನ್ನು ಎದುರಿಸುವ ಎದೆಗಾರಿಕೆ, ಲಯ ನಮ್ಮಲ್ಲಿ ಹುಟ್ಟಬೇಕು. ನಮ್ಮ ದೇಸೀತನ ದೊಡ್ಡದಾಗಿ ಎದ್ದೇಳಬೇಕು. ಬುದ್ಧಿವಂತ ನಿರ್ದೇಶಕರು ನಾಯಕರ ಮಾತು ಕೇಳದೆ, ಕಥೆಯ ಮತ್ತು ಹೃದಯದ ಮಾತು ಕೇಳಬೇಕು. ಆಗ ಮತ್ತೊಂದು ಸುವರ್ಣಯುಗ ಬರುವುದರಲ್ಲಿ ಅಚ್ಚರಿಯಿಲ್ಲ.
.ದೇಸೀ ವಿದ್ಯಾಸಂಸ್ಥೆ ಸ್ಥಾಪನೆಯ ಉದ್ದೇಶ ?
*ಇದು ನನ್ನ ಪಾರ್ಟ್ ಆಫ್ ಜಾಬ್. ಕಲೆ ಇಷ್ಟು ವರ್ಷ ನನಗೆ ಗೌರವ, ಪುರಸ್ಕಾರ ತಂದುಕೊಟ್ಟಿದೆ. ಅದನ್ನು ಈಗ ಶಿಕ್ಷಣದ ಮೂಲಕ ಮರಳಿಸಬೇಕಿದೆ. ನಮ್ಮ ವಿ.ವಿಗಳು ೫೦ ವರ್ಷಗಳಿಂದ ದೇಸೀ ವಿಮರ್ಶಕರು, ಪಂಡಿತರನ್ನು ಸೃಷ್ಟಿಸಿವೆ. ಆದರೆ ದೇಸೀ ಕಲಾವಿದರನ್ನು ಹುಟ್ಟು ಹಾಕಿಲ್ಲ. ದೇಸೀಯತೆ ನಮ್ಮ ರಕ್ತದಲ್ಲಿದೆ. ಆದ್ದರಿಂದ ಶಿಕ್ಷಣದ ಮೂಲಕ ಕಲೆ, ಕಲೆ ಮೂಲಕ ಶಿಕ್ಷಣ ನೀಡಿ ದೇಸೀಯ ಕಲಾವಿದರನ್ನು ಹುಟ್ಟು ಹಾಕುವ ಸಲುವಾಗಿ ಈ ವಿದ್ಯಾಸಂಸ್ಥೆ ಸ್ಥಾಪಿಸಿದ್ದೇನೆ.

2 comments:

Anonymous said...

ನಿಮ್ಮ ಈ ಸಂದರ್ಶನ ತುಂಬಾ ಚನ್ನಾಗಿದೆ...-ರಾಜೇಶ್

Anonymous said...

Very nice, my wish is to contact again and again for these kind of musiclegends instead of asking tasteless questions to persons who just talk with u by entering industry through high currency.

Powered By Blogger