
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಈ ಮಾತಿನ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ. ಅವರೇನೋ ಮಹಾ ಅಪರಾಧ ಮಾಡಿಬಿಟ್ಟರು ಎಂಬಂತೆ ಬಲಪಂಥೀಯ ರಾಜಕೀಯ ಮುಖಂಡರು, ಬರಹಗಾರರು ಅವರನ್ನು ಟೀಕಿಸಲು ಮುಂದಾಗುತ್ತಿದ್ದಾರೆ. ಕೇವಲ ಚೆಡ್ಡಿ ತೊಟ್ಟ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್‌ನಲ್ಲಿರುವ ಹವ್ಯಕ ಬ್ರಾಹ್ಮಣ ನಾಯಕರು ಕೂಡ ‘ಬಂಗಾರಪ್ಪ ಅವರ ಈ ಹೇಳಿಕೆ ಖಂಡನೀಯ’ ಎಂದು ಪಕ್ಷಾತೀತದ ಹೆಸರಿನಲ್ಲಿ ಪ್ರೆಸ್‌ಮೀಟ್ ಮಾಡಿ ಫೋಜು ಕೊಡುತ್ತಿದ್ದಾರೆ. ಇದೆಲ್ಲಾ ಯಾವ ಪುರುಷಾರ್ಥಕ್ಕೆ...?
ಸಮಾಜದಲ್ಲಿ ಬಡತನ, ದಾರಿದ್ರ್ಯ, ಮೌಢ್ಯತೆಗಳು ಇನ್ನೂ ರಾರಾಜಿಸುತ್ತ ರೌದ್ರ ನರ್ತನ ನಡೆಸಿವೆ. ಆಧುನಿಕತೆ, ತಂತ್ರeನದ ಹೆಸರಿನಲ್ಲಿ ನಾವು ಏನೆಲ್ಲಾ ಮಾಡಿದರೂ ಈ ಮೌಢ್ಯಗಳು, ಪೊಳ್ಳು ಕಂದಾಚಾರಗಳನ್ನು ಇನ್ನೂ ದೂರ ಮಾಡಿಲ್ಲ, ಉನ್ನತ ವ್ಯಾಸಂಗ ಮಾಡಿ ಪ್ರತಿ ವರ್ಷ ಹೊರ ಬರುವ ಲಕ್ಷಾಂತರ ಯುವಕ ಯುವತಿಯರು ಪ್ರತಿಭೆ ಇದ್ದೂ ಇಂದು ಅನಾಥರಂತೆ ಸರಕಾರ ನೀಡುವ ಸರ್ಟಿಪಿಕೇಟ್ ಹಿಡಿದು ಬೀದಿಗೆ ಬಿಳುತ್ತಿದ್ದಾರೆ. ಇಂಥ ವಿಚಾರಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.
ಯಾವುದೋ ಒಬ್ಬ ಸ್ವಾಮೀಜಿಯ ವಿರುದ್ಧ ಅಪ್ಪಿ ತಪ್ಪಿ ಒಂದು ಮಾತಂದರೆ ಅದೇ ದೊಡ್ಡ ವಿಷಯವಾಗಿ ಚರ್ಚೆಗೆ ಕೂತುಬಿಡುತ್ತದೆ. ಹೀಗಾದರೆ ಈ ಸಮಾಜದಿಂದ ಜಾತೀಯತೆ, ಮೌಢ್ಯತೆಗಳು ಎಲ್ಲಿಂದ ದೂರವಾಗುತ್ತವೆ ?
ಬಡತನ ಎನ್ನುವುದು ಕೇವಲ ದಲಿತರಿಗೆ, ಹಿಂದುಳಿದವರಿಗೆ ಸೀಮೀತವಾಗಿಲ್ಲ. ಬ್ರಾಹ್ಮಣತ್ವ ಎನ್ನುವುದು ಕೇವಲ ಬ್ರಾಹ್ಮಣ ಜಾತಿಯವರಿಗೆ ಮಾತ್ರ ಅಂಟಿಕೊಂಡಿಲ್ಲ ಅಲ್ಲೂ ಲಕ್ಷಾಂತರ ಕುಟುಂಬಗಳು ಅನ್ನ ನೀರಿಲ್ಲದೆ ಪರಿತಪಿಸುತ್ತಿವೆ. ಇವೆರಡೂ ಎಚ್‌ಐವಿ ವೈರಸ್ ಇದ್ದ ಹಾಗೆ. ಎಲ್ಲೆಡೆ ಸದ್ದಿಲ್ಲದೆ ಪಸರಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿ, ಮನುಕುಲವನ್ನೇ ನಾಶ ಮಾಡುತ್ತಿವೆ. ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿರುವ ರಾಮಚಂದ್ರಾಪುರ ಮಠದ ಬಗ್ಗೆ ಸರಿ ಸುಮಾರು ೧೦ ವರ್ಷಗಳ ಹಿಂದೆ ಯಾರಿಗೂ ಗೊತ್ತಿರಲಿಲ್ಲ. ಯಾವಾಗ ಆ ಗದ್ದುಗೆಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಎಂಬ ವ್ಯಕ್ತಿ ಬಂದು ಕುಳಿತರೋ ಅಲ್ಲಿಂದ ಅದು ಪ್ರಖ್ಯಾತವಾಗುತ್ತಾ ಬರುತ್ತಿದೆ. ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಪ್ರತಿಷ್ಠೆ ಮೆರೆಯುತ್ತಿದೆ.
ಧನಕರುಗಳುನ್ನು ಸಾಕಿ ಬೆಳೆಸುವುದು, ಅವುಗಳನ್ನು ಉಳಿಸಿ, ಜೋರ್ಣೋದ್ಧಾರ ಮಾಡುವುದು ಕೇವಲ ಒಂದು ಮಠ, ಮಂದಿರ, ಮಸೀದಿ ಅಥವಾ ಚರ್ಚ್‌ನಿಂದ ಮಾತ್ರ ಸಾಧ್ಯವಿಲ್ಲ. ಅವು ಈ ದೇಶಕ್ಕೆ ಅನ್ನ ನೀಡುವ ಅನ್ನದಾತನ ಸ್ನೇಹಿತರು. ಬೇರೆ ಯಾವುದೇ ಉದ್ಯಮವನ್ನು ಕಟ್ಟಿ ಬೆಳೆಸಬಹುದು. ಆದರೆ ಕೃಷಿ ಹಾಗೂ ರೈತನ ಬದುಕನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಧನಕರುಗಳನ್ನು ಉಳಿಸಿ ಬೆಳೆಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ಅದು ಸರಕಾರದಿಂದ ಆಗಬೇಕು. ಕೃಷಿಯಿಂದ ಅವು, ಅವುಗಳಿಂದ ಕೃಷಿ. ಇಂದು ದಿನೇ ದಿನೆ ಕೃಷಿ ರೈತರಿಂದಲೂ ದೂರವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಜಮೀನನ್ನು ಒಟ್ಟೊಟ್ಟಿಗೆ ಸರಕಾರ ಕಿತ್ತುಕೊಂಡು ಅವರನ್ನು, ಅವರ ದನಕರುಗಳನ್ನು ಬೀದಿಗೆ ತಳ್ಳುವ ಸರಕಾರದಿಂದ ಆ ಕೆಲಸ ಸಾಧ್ಯವೇ?
ಇಂದು ಲಕ್ಷಾಂತರ ಜೆಒಸಿ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಪರಿತಪಿಸುತ್ತಿದ್ದಾರೆ. ಆ ಪರೀಕ್ಷೆ ನಡೆಸಿದರೆ ಸರಕಾರದ ಬೊಕ್ಕಸಕ್ಕೆ ೧೦ ಲಕ್ಷ ರೂ. ಹೊರೆಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ವೃತ್ತಿ ಶಿಕ್ಷಣ ಇಲಾಖೆಯು ಪರೀಕ್ಷೆ ನಡೆಸುತ್ತಿಲ್ಲ. ಇದರಿಂದ ಈ ಎಲ್ಲ ವಿದ್ಯಾರ್ಥಿಗಳ ಬದುಕು ಕತ್ತಲೆಯಲ್ಲಿ ಸಾಗುತ್ತಿದೆ. ಒಂದೊಂದು ಮಠ ಮಾನ್ಯಗಳಿಗೆ ಲಕ್ಷಾಂತರ ರೂ.ಗಳನ್ನು ಚಿಲ್ಲರೆ ಕಾಸಿನಂತೆ ಬಿಜೆಪಿ ಸರಕಾರ ಹಂಚುತ್ತಿದೆ. ಈ ದೇಶದ ಆಸ್ತಿ, ಭಾವೀ ಪ್ರಜೆಗಳು, ಸ್ವಂತ ಕಾಲ ಮೇಲೆ ನಿಲ್ಲಲು ವೃತ್ತಿ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ಓದುವ ವಿದ್ಯಾರ್ಥಿಗಳ ಮೇಲೆ ಈ ಸರಕಾರ ಅದೆಷ್ಟು ಪ್ರೀತಿ ತೋರುತ್ತಿದೆ ನೋಡಿ...
ಇನ್ನು ಮಠ ಮಂದಿರ, ಮಸೀದಿ ಚರ್ಚ್‌ಗಳು ಜನ ಸಮಾನ್ಯರನ್ನು ಜಾತಿ ಮತ ಭೇದ ಮರೆತು ಒಂದುಗೂಡಿ ಸಾಮರಸ್ಯದಿಂದ ಬಾಳವಂತೆ ಮಾಡಿ ಅದಕ್ಕೆ ಪ್ರೇರಣೆಯಾಗಬೇಕು. ಆದರೆ ಈ ಮಠಗಳು ಮಾಡುತ್ತಿರುವುದಾದರೂ ಏನು ? ಮನುಷ್ಯ ಸಂಕುಲವನ್ನೇ ಜಾತಿ ಧರ್ಮಗಳ ಹೆಸರಿನಲ್ಲಿ ಜನರನ್ನು ತುಂಡು ತುಂಡು ಮಾಡುತ್ತಿವೆ. ಒಂದ ಸಮುದಾಯದ ಮಠಗಳಿಗೂ ಇನ್ನೊಂದು ಸಮುದಾಯದ ಮಠಗಳಿಗೂ ಬದ್ಧ ವೈರತ್ವ. ಪುಡಾರಿ ರಾಜಕಾರಣಿಗಳಿಗೂ ಮಠಗಳಲ್ಲಿನ ಸ್ವಾಮೀಜಿಗಳಿಗೂ ಈಗ ಯಾವುದೇ ವ್ಯತ್ಯಾಸಗಳಿಲ್ಲವಾಗಿದೆ. ಅದಕ್ಕೆ ಮೂರ್‍ನಾಲ್ಕು ವರ್ಷಗಳಿಂದೀಚಿನ ಘಟನಾವಳಿಗಳೇ ಪ್ರತ್ಯಕ್ಷ ನಿದರ್ಶನ.
ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡಿ, ಜಾತಿ, ಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ಕೊಳ್ಳಿ ಇಟ್ಟು ಅದರ ಝಳದಲ್ಲಿ ಕೈ ಕಾಯಿಸುವುದು, ಬೇಳೆ ಬೇಯಿಸಿಕೊಳ್ಳುವುದನ್ನು ಬಿಜೆಪಿ ಸರಕಾರ ಹಾಗೂ ಅದರ ಅಂಗ ಸಂಘಗಳು ಮೊದಲು ಬಿಡಲಿ, ಮಠ ಮಂದಿರಗಳನ್ನು ಪೋಷಿಸುವುದನ್ನು ನಿಲ್ಲಿಸಿ ಸಮಾಜದ ಒಟ್ಟು ಏಳಿಗೆಗೆ ಶ್ರಮಿಸಲಿ. ಇಲ್ಲ, ಸ್ವಾಸ್ಥ್ಯ ಸಮಾಜದಿಂದ ತಮ್ಮ ಪಾಡಿಗೆ ತಾವು ದೂರ ಇರಲಿ...
No comments:
Post a Comment