Thursday, February 26, 2009

ಹೌದು; ಅಮ್ಮಂದಿರು ಹೀಗೂ ಇರ್ತಾರೆ...!



ರೈಲು ಆಗ ಸಮಯ ಮಧ್ಯಾಹ್ನ ೨.೪೫. ಕಾಲು ಗಂಟೆ ಲೇಟಾಗಿ ಶಿವಮೊಗ್ಗ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಹೊರಟಿತ್ತು. ಹೆಸರಿಗೆ ‘ಎಕ್ಸ್‌ಪ್ರೆಸ್’ ಆದರೂ ಅದು ಜನರ ಮನಸಿನಲ್ಲಿ ‘ಡಕೋಟಾ ಎಕ್ಸ್‌ಪ್ರೆಸ್’! ಭದ್ರಾವತಿಗೆ ಬರುತ್ತಿದ್ದಂತೆ ಜನಸಂದಣಿ ಹೆಚ್ಚಾಗಿತ್ತು. ಭದ್ರಾವತಿಯಿಂದ ರೈಲು ಹೊರಡುತ್ತಿದ್ದಂತೆ ನಾನು ಕೂತ ಸೀಟಿನ ಎರಡು ಸೀಟಿನಾಚೆ ಹಸುಳೆಯೊಂದು ಅಳಲಾರಂಭಿಸಿತು.
ಅದಕ್ಕೆ ಸುಮಾರು ೩ ತಿಂಗಳೂ ತುಂಬಿರಲಿಲ್ಲ. ಜನ ಹೆಚ್ಚಾಗಿದ್ದರಿಂದ ಸೆಕೆ ಜಾಸ್ತಿಯಾಗಿ ಮಗು ಅಳುತ್ತಿರಬೇಕೆಂದು ನಾವೆಲ್ಲಾ ಅಂದುಕೊಂಡೆವು. ಅಕ್ಕಪಕ್ಕದವರೂ ಹಾಗೇ ಅಂದುಕೊಂಡಿರಬೇಕು. ಈ ಮದ್ಯೆ ಮಗು ತುಸು ಹೊತ್ತು ಅಳು ನಿಲ್ಲಿಸಿತು. ಅನಂತರ ಅತ್ತ ಕಡೆ ಯಾರೂ ಗಮನ ಹರಿಸಲಿಲ್ಲ. ತರೀಕೆರೆಗೆ ಆಗಮಿಸುತ್ತಿದ್ದಂತೆ ರೈಲಿನಲ್ಲಿ ರಶ್ ಕಡಿಮೆಯಾಯಿತು. ರೈಲು ತರೀಕೆರೆ ದಾಟುತ್ತಿದ್ದಂತೆ ಮಗು ಮತ್ತೆ ಎಚ್ಚರಗೊಂಡು ಅಳಲಾರಂಭಿಸಿತು.
ಅದರ ಅಪ್ಪ ,ಅಮ್ಮ ಇಬ್ಬರೂ ಇದ್ದರು. ಇಬ್ಬರೂ ಜೀನ್ಸ್ , ಟೀ ಶರ್ಟ್ ಧಾರಿಗಳು. ಸ್ವಲ್ಪ ಹೊತ್ತು ಅಪ್ಪ ಮಗುವನ್ನು ಸಂತೈಸಲು ಯತ್ನಿಸಿದ. ಮಗುವಿನ ಅಳು ಯಾರಿಗೆ ತಾನೆ ಕರಳು ಚುರುಕ್ ಎನಿಸುವುದಿಲ್ಲ ಹೇಳಿ ? ಆದ್ದರಿಂದ ಸಹಜವಾಗಿಯೇ ಎಲ್ಲರೂ ಆ ಮಗುವನ್ನೇ ದಿಟ್ಟಿಸಿ ಮನ ಮಿಡಿಯುತ್ತಿದ್ದರು. ಆದರೆ ಮಗು ಮಾತ್ರ ಅಳು ನಿಲ್ಲಿಸಲೇ ಇಲ್ಲ. ಬೀರೂರಿಗೆ ಬರುವ ಹೊತ್ತಿಗೆ ಸಂಜೆ ೪.೩೦. ಸತತವಾಗಿ ಎರಡು ಗಂಟೆಗಳ ಕಾಲ ಮಗು ಅಳುತ್ತಲೇ ಇತ್ತು. ಕ್ರಾಸಿಂಗ್ ಇದ್ದಿದ್ದರಿಂದ ಅಲ್ಲಿ ಬಹಳ ಹೊತ್ತು ರೈಲು ನಿಂತಿತ್ತು. ಅದರ ಅಪ್ಪ ಮಗುವನ್ನು ಎತ್ತಿಕೊಂಡು ಅತ್ತಿಂದಿತ್ತ, ಇತ್ತಿಂದತ್ತ ಸುತ್ತಾಡಿದರು. ರೈಲು ಹೊರಟ ನಂತರ ಬಂದು ಸೀಟಿನಲ್ಲಿ ಕುಳಿತರು. ಮಗು ಮಾತ್ರ ‘ರಾಗ ’ ನಿಲ್ಲಿಸಿರಲಿಲ್ಲ.
ಅನಂತರ ಅದರ ಅಮ್ಮ (ಅಪ್ಪನಿಗೆ ಸುಸ್ತಾಗಿರಬೇಕು!?) ಎತ್ತಿಕೊಂಡು ಸಂತೈಸಿದಳು. ಆ ಹೊತ್ತಿಗಾಗಲೇ ಮಗುವಿಗೆ ಹಸಿವಾಗಿದೆ ಎಂಬುದು ಅಕ್ಕಪಕ್ಕ ಕುಳಿತಿದ್ದವರಿಗೆಲ್ಲಾ ತಿಳಿದಿತ್ತು. ಮಗು ಅಳುವಿನ ಮೂಲಕ ತನ್ನದೇ ಭಾಷೆಯಲ್ಲಿ ಹೇಳುತ್ತಿತ್ತು. ಆದರೆ ಆ ‘ಮಹಾತಾಯಿ’ಗೆ ಮಗುವಿನ ಹಸಿವು ಅರ್ಥವಾಗಿರಲಿಲ್ಲ!!
ರೈಲು ತುಮಕೂರು ತಲುಪುವವರೆಗೆ ಮಗುವಿನ ನೋವನ್ನು ಅರಿತೂ ಅಕ್ಕ ಪಕ್ಕದ ಜನ ಸುಮ್ಮನೇ ಇದ್ದರು. ಮಗುವನ್ನು ಹೆತ್ತ ಮಹಾತಾಯಿ ತನ್ನ ಕರುಳ ಬಳ್ಳಿಗೆ ಕುಡಿಯಲು ಕನಿಷ್ಠ ಪಕ್ಷ ಬಾಟಲಿಯಲ್ಲಾದರೂ ಹಾಲು ತಂದಿರಲಿಲ್ಲ! ತಮ್ಮ ದಾಹ ತಣಿಸಿಕೊಳ್ಳಲು ಮಾತ್ರ ‘ಬಿಸ್ಲೇರಿ ಬಾಟಲಿ’ ತಂದಿದ್ದರು...
ಅದ್ಯಾಕೋ ನನಗೆ ಅನಂತರ ಸುಮ್ಮನಿರಲಾಗಲಿಲ್ಲ. ಆ ತಾಯಿಗೆ ಹೇಳಲು ಧೈರ್ಯ ಸಾಲದೆ ಎದುರಿಗಿದ್ದ ಒಬ್ಬ ವೃದ್ಧ ಮಹಿಳೆಗೆ ‘ಆ ಮಗು ಆಗ್ಲಿಂದ ಆಳ್ತಾನೆ ಇದೆ, ಹಾಲು ಕುಡಿಸ್ಬೇಕು ಅನ್ನೋ eನ ಕೂಡ ಆ ಹೆಂಗಸಿಗೆ ಇಲ್ಲ ನೋಡಿ...’ ಎಂದೆ. ಅವರು ಕೂಡ ಅದನ್ನೇ ಗಮನಿಸುತ್ತಿದ್ದರು ಎನಿಸುತ್ತೆ. ತಕ್ಷಣ ‘ ನಾನೂ ಅದನ್ನೇ ಗಮನಿಸ್ತಿದೀನಪ್ಪ, ಅವ್ಳೀಗೆ ಸ್ವಲ್ಪಾನೂ ಕರುಣೆ ಅನ್ನೋದಿಲ್ವಾ...? ನಿಜವಾಗ್ಲು ಅವ್ಳು ಅದರ ತಾಯಿನಾ ಅನಿಸ್ತಿದೆ. ನಮ್ಮ ಕಾಲದಾಗೆ ಹಿಂಗೆಲ್ಲಾ ಇರ್‍ಲಿಲ್ಲ...’ ಎಂದು ನಿಟ್ಟುಸಿರು ಬಿಟ್ಟರು.
ಅರಸೀಕೆರೆ ಬರುವ ಮುಂಚೆಯೇ ಆ ವೃದ್ಧೆ ‘ ಏನವ್ವಾ... ಆ ಕೂಸು ಹೊಟ್ಟೆ ಹಸ್ತು ಶಿಮೊಗ್ಗದಿಂದ ಹೊಯ್ಕೊಳ್ತಾ ಐತಿ. ಹಾಲು ಕುಡಿಸ್ಬೇಕು ಅಂತಾ ಗೊತ್ತಾಗಂಗಿಲ್ಲಾ...?’ ಎಂದು ಗುಡುಗಿದರು. ಅದರಮ್ಮ ತುಟಿ ಬಿಡದೆ ವೃದ್ಧೆಯನ್ನು ಗುರಾಯಿಸಿ ಸುಮ್ಮನಾದಳು. ಆದರೆ ಅದರಪ್ಪ ‘ಹಾಲಿನ ಬಾಟಲ್ ತರೋದೆ ನೆನಪಾಗಲಿಲ್ಲ.’ ಎಂದ. ಈಉತ್ತರದಿಂದ ತೃಪ್ತಿಯಾಗದ ವೃದ್ಧೆ ‘ ತರೀಕೆರೆ ಸ್ಟೇಷನ್‌ನಲ್ಲಿ ಹಾಲು ಸಿಕ್ರೆ ತಗೊಂಡು ಬಂದು ಕುಡ್ಸಿ’ ಎಂದರು.
ಸ್ಟೇಷನ್ ಬಂದ ಮೇಲೆ ಇಳಿದು ಹೋದ ಆತ ಸ್ವಲ್ಪ ಸುತ್ತಾಡಿ ಬರಿಗೈಯ್ಯಲ್ಲಿ ಬಂದ. ಮಗು ಮಾತ್ರ ಅಳುತ್ತಲೇ ಇತ್ತು. ಆದರೆ ಅಮ್ಮನ ಹೃದಯದಲ್ಲಿ ಮಾತ್ರ ಕರುಣೆ ಉಕ್ಕಿ ಬರಲೇ ಇಲ್ಲ! ಬದಲಿಗೆ ಸಿಟ್ಟು ಕಾಣುತ್ತಿತ್ತು. ಅದು ಗಂಡ ಹಾಗೂ ಮಗುವಿನ ನಡುವೆ ಹೊಯ್ದಾಡುತ್ತಿತ್ತು. ಅಷ್ಟೊತ್ತಿಗಾಗಲೇ ರಾತ್ರಿ ೮ ಗಂಟೆಯಾಗಿತ್ತು. ಅಷ್ಟಕ್ಕೂ ಸುಮ್ಮನಾಗದ ವೃದ್ಧೆ ‘ ಹೋಗು ತಾಯಿ, ಆ ಟಾಯ್ಲೆಟ್ ರೂಮಲ್ಲಾದ್ರೂ ನಿಂತ್ಗಂಡು ಎದೆ ಹಾಲು ಕುಡ್ಸು, ಅದು ಅಳೋದು ನಮ್ಮಿಂದ ನೋಡಾಕಾಗಂಗಿಲ್ಲ.’ ಎಂದರು.
ಆದರೆ ಆ ‘ಕರುಣಾಮಾತೆ ’ ಮಗು ಗೋಳಿಟ್ಟರೂ ಪರವಾಗಿಲ್ಲ, ಎದೆಹಾಲು ಕುಡಿಸಲು ರೆಡಿ ಇರಲಿಲ್ಲ !! ಸುತ್ತಮುತ್ತ ಕೂತವರೆಲ್ಲಾ ಅದೇ ಮಾತನ್ನು ಹೇಳಿದರು. ಆಕೆ ಮಾತ್ರ ಜಾಗ ಬಿಟ್ಟು ಕದಲಲಿಲ್ಲ. ಅದೇಕೊ ಅಪ್ಪನಿಗೆ ತಡೆಯಲಾಗಲಿಲ್ಲವೇನೋ. ಆ ಮಗುವನ್ನು ಅಂಗಾತ ಮಲಗಿಸಿ ಬಿಸಿಲರಿ ಬಾಟಲಿಯ ಮುಚ್ಚಳದಿಂದ ಮಗುವಿನ ಬಾಯಿಗೆ ನೀರು ಸುರಿದ...
ಅದನ್ನು ನೋಡಿದ ಜನ ಮತ್ತೆ ಬಾಯಿ ಬಿಡಲಿಲ್ಲ...!! ಅಲ್ಲಿ ನೀರವ ಮೌನ ತಾಂಡವವಾಡುತ್ತಿತ್ತು. ಬೆಂಗಳೂರು ತಲುಪಿದಾಗ ರಾತ್ರಿ ೧೦.೩೦. ಆಲ್ಲಿಯವರೆಗೂ ಆ ವಾತ್ಸಲ್ಯರೂಪಿಣಿ ಎದೆಹಾಲು ಕುಡಿಸಲೇ ಇಲ್ಲ ; ಮಗು ಅಳು ನಿಲ್ಲಿಸಲೇ ಇಲ್ಲ. ಜನ ಮಾತ್ರ ನಂತರ ತುಟಿ ಬಿಚ್ಚಲಿಲ್ಲ....

1 comment:

T R Sowmyashree said...

I think she is an IT employee. Only those people do such things. I agree theer are exceptions. But most of them are like that as per my observation.

Powered By Blogger