Tuesday, March 26, 2013
Thursday, March 21, 2013
Monday, March 18, 2013
Sunday, March 10, 2013
ಹನಿ ನೀರಿಗೂ ಹರಸಾಹಸ
* ಜೀವ ಜಲಕಿಲ್ಲಿ ಆರ್ತನಾದ *ಅಡ್ಡಕತ್ತರಿಯಲ್ಲಿ ರಾಜ್ಯದ ಕೃಷಿಕರು
ಆರೂವರೆ ಎಕರೆ ಜಮೀನಿನಲ್ಲಿ ಸಿಂಗಾನಲ್ಲೂರಿನ ರೈತ ಸುಂದರಪ್ಪ ಒಂದು ಕಾಲದಲ್ಲಿ ಸಮದ್ಧ ಬೆಳೆ ತೆಗೆಯುತ್ತಿದ್ದವರು. ಇಡೀ ಊರಿಗೆ ಉತ್ತಮ ಕಷಿಕ ಎನಿಸಿಕೊಂಡವರು. ೧೯೮೩ರಲ್ಲಿ ಅವರ ಜಮೀನಿನಲ್ಲಿ ೫ರಿಂದ ೬ ಅಡಿ ಆಳ ತೆಗೆದ ತೆರೆದ ಬಾವಿಯಲ್ಲೇ ನೀರು ಸಿಗುತ್ತಿತ್ತು. ಇದರಿಂದ ಬರಪೂರ ಕೃಷಿ ನಡೆಯುತ್ತಿತ್ತು.
ಹೀಗಿದ್ದ ನೆಲದಲ್ಲಿ ೧೯೯೨ರಿಂದ ಅಂತರ್ಜಲ ಮಟ್ಟ ಕುಸಿಯತೊಡಗಿತ್ತು. ಕೊಳವೆ ಬಾವಿ ಕೊರೆಸಿದಾಗ ೩೦೦ ಅಡಿಗೆ ಎರಡೂವರೆ ಇಂಚು ನೀರು ಸಿಕ್ಕಿತ್ತು. ಅದೇ ಜಮೀನಿನಲ್ಲಿ ಎರಡು ಬಾವಿ ಕೊರೆಸಿದ್ದರು. ಕ್ರಮೇಣ ಎರಡೂ ಕೊಳವೆ ಬಾವಿಯಿಂದ ಅರ್ಧ ಎಕರೆಗೂ ನೀರು ಸಾಕಾಗದಂತಾಯಿತು. ಕೆಲವೆ ವರ್ಷಗಳ ನಂತರ ಅದೇ ಭೂಮಿಯಲ್ಲಿ ಆರು ಬೋರ್‌ವೆಲ್‌ಗಳನ್ನು ಕೊರೆಸಿದರೂ ನೀರಿಲ್ಲ! ಒಂದೇ ಒಂದು ಬೋರ್‌ವೆಲ್‌ನಲ್ಲಿ ಅರ್ಧ ಇಂಚು ನೀರು ಬಿತ್ತು. ಮರುದಿನ ಅಲ್ಲಿಗೆ ಮೋಟಾರ್ ಕೂರಿಸಿ ನೋಡಿದರೆ ಇದ್ದ ನೀರು ಮಾಯ!!
ಇದು ಕೇವಲ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ರೈತ ಸುಂದರಪ್ಪನವರೊಬ್ಬರ ಸ್ಥಿತಿಯಲ್ಲ; ಇಡೀ ತಾಲೂಕಿನ ಜನರದ್ದು, ಅಲ್ಲಲ್ಲ ಇಡೀ ಕರ್ನಾಟಕದ ಹಳ್ಳಿ ಜನರ, ಕಷಿಕರ ಬದುಕಿನ ಕರುಣಾಜನಕ ಸ್ಥಿತಿ...
ಇದೇ ಕೋಳ್ಳೇಗಾಲ ತಾಲೂಕಿನ ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಳ್ಳಿಗಳ ಸ್ಥಿತಿ ಇದಕ್ಕಿಂತ ಘನಘೋರ. ಸಾಲು ಸಾಲು ತೆಂಗಿನ ಮರಗಳು, ಮಾವು ಸೇರಿದಂತೆ ಎಲ್ಲ ಬೆಳೆ ಒಣಗಿವೆ. ಹತ್ತಿರದ ಸಾಗರ್ ಆಗ್ರೋ ಾರಂನಲ್ಲಿ ಹತ್ತು ವರ್ಷಗಳ ಹಿಂದೆ ೫ ತೆರೆದ ಬಾವಿ ಆರು ಬೋರ್‌ವೆಲ್‌ಗಳಿದ್ದವು. ೧೩೨ ಎಕರೆ ಜಮೀನಿನಲ್ಲಿ ರೈತ ಪಳನಿಯಪ್ಪ ರತ್ನಗಿರಿ ಆಲ್ಫೋನ್ಸಾ, ಇತರ ತಳಿಯ ಮಾವು, ಸಪೋಟ, ದಾಳಿಂಬೆ, ತೆಂಗು, ಕಬ್ಬು, ಹತ್ತಿ, ಅರಿಶಿಣ ಮುಂತಾದ ಬೆಳೆಯನ್ನು ಸಮೃದ್ಧವಾಗಿ ಬೆಳೆಯುತ್ತಿದ್ದರು. ಆದರೆ ಈಗ ಇಡೀ ಎಸ್ಟೇಟ್ ಈಗ ಬರುಡು ಭೂಮಿ. ಕಾರಣ ಅಲ್ಲಿ ಬೆಳೆಗಿರಲಿ ಕುಡಿಯಲೂ ನೀರು ಸಿಗುತ್ತಿಲ್ಲ. ಎಲ್ಲ ಬಾವಿ, ಬೋರ್‌ವೆಲ್‌ಗಳು ಖಾಲಿ ಖಾಲಿ!
ಬೆಳೆಗೆ ನೀರುಸಿಗುವುದಿರಲಿ ಕುಡಿಯಲು ನೀರು ಸಿಕ್ಕರೆ ಹೇಗೋ ಬದುಕಿಕೊಳ್ತೇವೆ ಎನ್ನುವ ಅವರ ಮುಖದಲ್ಲಿ ಬದುಕಿಗಾಗಿ ಪರಿತಪಿಸುವ ನೋವು ತಾಂಡವವಾಡುತ್ತಿತ್ತು.
ಮಾವು ಬಹುವಾರ್ಷಿಕ ಬೆಳೆ. ಕೆಲ ದಿನ ನೀರಿಲ್ಲದಿದ್ದರೂ ಅದು ಒಣಗಬಾರದು. ಆದರೆ ಅಂತರ್ಜಲ ಮಟ್ಟ ೧೨೦೦ಕ್ಕೂ ಹೆಚ್ಚು ಅಡಿ ಆಳ ತಲುಪಿದೆ ಎಂದರೆ ಮುಂದೆ ಹಳ್ಳಿಗರ ಬದುಕು ಅದೆಷ್ಟು ಬರ್ಭರವಾಗಬಹುದು ಎಂಬುದು ಮಾತ್ರ ಊಹೆಗೂ ನಿಲುಕದ ವಿಚಾರ.
ಮೇವಿಗಾಗಿ ಪರದಾಟ:
ಇನ್ನು ಪಕ್ಕದಲ್ಲೇ ಇರುವ ಕೆಂಚಯ್ಯನ ದೊಡ್ಡಿ, ಎಲ್ಲೆಮಾಳಗಳಲ್ಲಿ ಪ್ರತಿ ಕುಟುಂಬಗಳೂ ಜಮೀನು ಹಾಗೂ ಜಾನುವಾರುಗಳನ್ನೇ ಅವಲಂಬಿಸಿ ಬದುಕುತ್ತಿವೆ. ಆದರೆ ಎಲ್ಲೆಮಾಳ ಗ್ರಾಮದಲ್ಲಿ ೧೭೦೦ಕ್ಕೂ ಜಾಸ್ತಿ ಜಾನುವಾರುಗಳಿವೆ. ೧೫೦೦ಕ್ಕೂ ಹೆಚ್ಚು ಕುರಿಗಳಿವೆ. ಇಲ್ಲಿರುವವರು ಹೆಚ್ಚಾಗಿ ಗೊಲ್ಲ ಸಮುದಾಯದವರು. ಇವರಿಗೆ ಕಷಿ ಹಾಗೂ ಹೈನು ಉದ್ಯಮ ಬಿಟ್ಟರೆ ಬೇರೆ ಗೊತ್ತಿಲ್ಲ. ಆದರೆ ಈಗ ಜಾನುವಾರುಗಳನ್ನು ಕಾಡಿಗೆ ಹೊಡೆದುಕೊಂಡು ಹೋದರೂ ಮೇವು ಸಿಗುತ್ತಿಲ್ಲ! ಮೇವಿರಲಿ ಕುಡಿಯಲು ನೀರಿಲ್ಲದೆ ಜಾನುವಾರುಗಳು ನಿತ್ಯ ಕೊನೆಯುಸಿರೆಳೆಯುತ್ತಿವೆ. ಇದನ್ನು ನೋಡಿ ಗೊಲ್ಲ ಸಮುದಾಯ ಕಣ್ಣೀರಿಡುತ್ತಿದೆ.
ಜನರಿಗೂ ನೀರಿಲ್ಲ!
ಕೆರೆಕಟ್ಟೆಗಳಿರಲಿ ಕೊಳವೆ ಬಾವಿಯಲ್ಲೂ ನೀರು ಸಿಗದಿರುವುದರಿಂದ ಇಡೀ ತಾಲೂಕಿನ ಜನ ಹಸಿವು ಹಾಗೂ ದಾಹದಿಂದ ಪ್ರತಿದಿನವೂ ಬಳಲಿ ಬೆಂಡಾಗುತ್ತಿದ್ದಾರೆ.
ತಟ್ಟೆಹಳ್ಳ, ತೋಮಿಯಾರ ಪಾಳ್ಯದಲ್ಲಿ ಕಬ್ಬು, ಹತ್ತಿ, ಮೆಣಸು, ಅರಿಶಿಣ ಬೆಳೆದುಕೊಂಡು ಸೊಂಪಾಗಿದ್ದ ರೈತರು ಈಗ ಹನಿ ನೀರಿಗೂ ಪರದಾಡುತ್ತಿದ್ದಾರೆ. ಈ ಗ್ರಾಮಗಳ ಸುತ್ತ ಮುತ್ತ ೪೦೦ರಿಂದ ೫೦೦ ಬೋರ್‌ವೆಲ್‌ಗಳಿವೆ. ಆದರೆ ನೀರು ಸಿಗುತ್ತಿರುವುದು ಮಾತ್ರ ಕೇವಲ ಒಂದು ಬೋರ್‌ವೆಲ್‌ನಲ್ಲಿ! ಇದೇ ಇವರಿಗೆ ಜೀವ ಜಲ. ಇದು ಬತ್ತಿದರೆ ಬದುಕು ಹರೋಹರ! ಈ ಕಾರಣಕ್ಕೇ ಸುತ್ತಮುತ್ತಲ ಗ್ರಾಮಗಳಲ್ಲಿ ಬಹಳಷ್ಟು ರೈತರು ಜಾನುವಾರುಗಳನ್ನು ಮಾರಾಟ ಮಾಡಿ ನಗರ ಪ್ರದೇಶಗಳಿಗೆ ವಲಸ ಹೋಗಿದ್ದಾರೆ, ಇನ್ನೂ ಹೋಗುತ್ತಲೇ ಇದ್ದಾರೆ.
ಎಚ್ಚರಿಕೆ ಅಗತ್ಯ
ಪರಿಸರ, ದಟ್ಟ ಕಾಡು ಹೀಗೇ ನಿತ್ಯ ಸರ್ವನಾಶವಾಗಿದೆ. ಕೃಷಿ ಭೂಮಿ ಬರುಡಾಗುತ್ತಿದೆ. ಕುಡಿಯುವ ಹನಿ ನೀರಿಗೂ ಹೀಗೆ ತತ್ವಾರ ಉಂಟಾದರೆ ಇನ್ನು ರೈತರು ಆಹಾರ ಬೆಳೆಯುವುದೆಲ್ಲಿ? ಮನುಕುಲ ಈ ಬಗ್ಗೆ ಎಚ್ಚರವಹಿಸದೆ ಪರಿಸ್ಥಿತಿ ಹೀಗೆ ಮುಂದುವರಿದರೆ ಕೋರಿಯಾದಲ್ಲಿ ಮನುಷ್ಯರನ್ನೇ ಮನುಷ್ಯರು ಕಿತ್ತು ತಿನ್ನುತ್ತಿರುವ ಚಿತ್ರಣ ಕರ್ನಾಟಕದಲ್ಲಿ ಕಂಡರೂ ಆಶ್ಚರ್ಯವಿಲ್ಲ!
Monday, March 4, 2013
Subscribe to:
Posts (Atom)