Tuesday, February 28, 2012

ಚೇತರಿಸಿಕೊಂಡ "ನಿತ್ಯೋತ್ಸವ ಕವಿ" ಮತ್ತು ಹೃದಯವಂತಿಕೆ


ಕವಿ ನಿಸಾರ್ ಅಹಮದ್
 ನಿತ್ಯೋತ್ಸವ ಕವಿ ಎಂದೇ ಕರೆಸಿಕೊಂಡಿರುವ ಕವಿ ಪ್ರೊ.ನಿಸಾರ್ ಅಹಮದ್ ಅವರು ಹುಷಾರ್ ಇಲ್ಲದಾಗಿನಿಂದ ಅವರನ್ನು ಇಷ್ಟಪಡುವ, ಪ್ರೀತಿಸುವ, ಅವರ ಬರಹಗಳಿಂದ ಪ್ರಭಾವಿತರಾಗಿರುವ ಲೆಕ್ಕವಿಲ್ಲದಷ್ಟು ಕವಿ ಪ್ರೇಮಿಗಳಿಗೆ ದಿಗಿಲು ಬದಿದಂತಾಗಿದೆ. ನನಗೆ ತಿಳಿದ ಮಟ್ಟಿಗೆ ಎಸ್ಟೋ ಜನ ಅವರು ಚೇತರಿಸಿಕೊಳ್ಳಲಿ ಎಂದು ಪೂಜೆ ಮಾಡಿದ್ದಾರೆ (ಆದರೆ ಅದು ಎಲ್ಲೂ ಸುದ್ದಿಯಾಗಿಲ್ಲ). ಅಲ್ಲಾನನ್ನು ಬೇಡಿದ್ದರೆ, ಮಂದಿರದಲ್ಲಿ ಪ್ರಾರ್ಥಿಸಿದ್ದಾರೆ. ನಿಸಾರ್ ಸರ್ ಹುಷಾರಿ ಬರಲಿ ಎಂದು ಹಾರೈಸಿದ್ದಾರೆ. ಆಧಾರ ಫಲವೋ ಏನೋ ಎಂಬಂತೆ ದಿನಗಳೆದಂತೆ ನಿಸಾರ್ ಸರ್ ಚೇತರಿಸಿಕೊಳ್ಳುತ್ತಿದ್ದಾರೆ.
ನಿಸಾರ್ ಕೇವಲ ಕವಿ ಅಥವಾ ಸಾಹಿತಿ ಮಾತ್ರವಲ್ಲ, ಉತ್ತಮ ಸಹೃದಯಿ. ಮಗು ಮನಸ್ಸಿನ "ಕವಿರಾಜ". ಅವರ ಅಂಥ ಗುಣದಿಂದಲೇ ಇಂದು ಅವರನ್ನ ಕನ್ನಡ ನಾಡು ಮಾತ್ರವಲ್ಲ ಇತರ ರಾಜ್ಯಗಳು, ಅಮೇರಿಕ, ಲಂಡನ್ದು, ಬೈ, ಕುವೈತ್ ಮುಂತಾದ ದೇಶಗಳಲ್ಲೂ ಅವರನ್ನು ಪ್ರೀತಿಸುವ ಜನರಿದ್ದಾರೆ. ಮೊದಲನೆಯದಾಗಿ ಅವರು ಚೇತರಿಸಿಕೊಳ್ಳಲಿ ಎಂದು ಹರಸಿದ ಎಲ್ಲ ಕವಿಪ್ರೀತಿ ಹೃದಯಗಳಿಗೆ ಅವರ ಹಾಗೂ ಅವರ ಶಿಷ್ಯನಾದ ನನ್ನ ಪರವಾಗಿ ಧನ್ಯವಾದಗಳು.
ನಿಸಾರ್ ಜೊತೆ ಸಮಾಲೋಚನೆ ವೇಳೆ.
ನಿಜ ಹೇಳ ಬೇಕೆಂದರೆ ಅವರು ನನ್ನಗೆ "ನಿತ್ಯೋತ್ಸವ" ಕವಿತೆಯ ಮೂಲವೇ ಪರಿಚಯವಾದದ್ದು. ಅಲ್ಲಿಂದ ನಿರಂತರವಾಗಿ ಅವರ ಸನಿಹದಲ್ಲಿಯೇ ಇದ್ದು ಅವರಿಂದ ಸಾಕಷ್ಟು ಬುದ್ದಿವಾದ ಕೇಳಿಸಿಕೊಂಡು ಬೆಳೆದವನು ನಾನು. ಪುಟ್ಟ ಮಗುವೊಂದು ಒಂದು ಹೂವು ಹಿಡಿದು "ಹ್ಯಾಪಿ ಬರ್ತ್ ಡೇ... ತಾತ" ಎಂದಾಗಲು ಅದನ್ನು ಎತ್ತಿ ಒಂದು ಮುತ್ತು ಜತೆಗೊಂದು ಜೇಬಲ್ಲಿದ್ದ ಚಾಕೊಲೆಟ್ ಕೊಟ್ಟು "ನೂರು ಕಾಲ ಬಾಳಪ್ಪ" ಎಂದು ಹರಸುವ ಮಧುರ ಮನಸ್ಸು ಅವರದ್ದು. ಅವರಿಗಿಂತ ಹಿರಿಯರಾದವರು ಅವರನ್ನು ನೋಡಲು ಹೋದಾಗಲೂ "ಇಲ್ಲಿವರೆಗೆ ಯಾಕೆ ಈ ವಯಸ್ಸಲ್ಲಿ ಬರೋಕೆ ಹೋದ್ರಿ? ಒಂದು ಫೋನ್ ಮಾಡಿದ್ರೆ ಸಾಕಿತ್ತು ಅಲ್ವ... ನಿಮ್ಮ ಆರೋಗ್ಯ ಚನ್ನಾಗಿ ನೋಡಿಕೊಳ್ಳಿ" ಎಂದು ಕಾಲಟಿ ತೋರುತ್ತಿದ್ದ ತಾಯಿ ಪ್ರೀತಿ ಅವರದು.
ನಿಸಾರ್ ಹಾಗು ಅವರ ಮಡದಿ
 ಷಾನವಾಜ್ ಬೇಗಂ ಜೊತೆ ನಾನು
ಅಂಥ  ಕವಿ ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ನ್ಯುಮೋನಿಯಕ್ಕೆ ಚಿಕಿತ್ಸೆ ಪಡೆಯಲು ದಾಖಲಾದಾಗ ನನಗಂತೂ ಆಕಾಶವೇ ತಲೆ ಮೇಲೆ ಬಿದ್ದ ಅನುಭವ. ಅವರು ಆಸ್ಪತ್ರೆಗೆ ಸೇರಿದಾಗಿನಿಂದ ನಿತ್ಯ ನಾನು ಅವರ ಸಂಪರ್ಕದಲ್ಲಿದ್ದೇನೆ, ಅವರ ಆರೋಗ್ಯ ವಿಚಾರಿಸುತ್ತಿದ್ದೇನೆ. ಅವರಿಗೆ ಚಿಕಿತ್ಸೆ ಕೊಡುತ್ತಿರುವ ಮೂವರು ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಅವರ ಪ್ರಕಾರ ಈಗ ನಿಸಾರ್ ಸರ್ ಚೇತರಿಸಿಕೊಳ್ಳುತ್ತಿದ್ದಾರೆ. ಇಸಿಯೂನಿಂದ ಈಗ ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿ ಅವರನ್ನು ನೋಡಲು ಬರುವರಿಂದ ಅವರು ದೂರ ಇದ್ದಾರೆ ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ. ಕಾರಣ ಇಷ್ಟೇ, ಬಂದವರನ್ನು ನೋಡಿದ ತಕ್ಷಣ ನಿಸಾರ್ ಸರ್ ಸುಮ್ಮನೆ ಇರುವುದಿಲ್ಲ. ಅವರ ಜೊತೆ ಮಾತಿಗೆ ಇಳಿಯುತ್ತಾರೆ. ಅವರಿಗಿಂತ ಮೊದಲೇ ಇವರೇ ಬಂದವರ ಆರೋಗ್ಯ ವಿಚಾರಿಸುತ್ತಾರೆ. ಇದೆ ವೈದ್ಯರಿಗೆ ಸವಾಲಾಗಿದೆ. ಆದರು ಸಂದರ್ಶಕರನ್ನು ಸಾಕಷ್ಟು ಅವೈಡ್ ಮಾಡಿದ್ದಾರೆ. ಇದು ಕೇವಲ ಅವರ ಆರೋಗ್ಯಕ್ಕಾಗಿ, ಕವಿ ಬೇಗ ಚೇತರಿಸಿಕೊಳ್ಳಲಿ ಎಂಬ ಸದುದ್ದೇಶದಿಂದ. ಹಾಗಾಗಿ ವೈದ್ಯರಿಗೆ ಥ್ಯಾಂಕ್ಸ್ ಹೇಳಲೇಬೇಕು.
ಅವರ 75 ನೇ ವರ್ಷದ ನೆನಪಿಗೆ ನೀಡಿದ
 "ನಿತ್ಯೋತ್ಸವ" ಸಿಡಿ (ಚಿತ್ರ: ರವೀಂದ್ರ ನಾಯಕ್) 
ನಿತ್ಯ ಅವರನ್ನು ನೋಡಲು ಬಂದವರ ಜೊತೆ ನಿಸಾರ್ ಮಾತನಾಡದೆ ಇರಲಾರರು. ಮೊನ್ನೆ ಬೆಳಗ್ಗೆ ನಿಸಾರ್ ಅವರನ್ನು ನೋಡಲು ಎಂದಿನಂತೆ ಹೊರತು ನಿಂತಾಗ ನನ್ನ ಮಡದಿ ಉಷಾ "ನಾನು ಬರುತ್ತೇನೆ, ಅವರನ್ನೊಮ್ಮೆ ನೋಡಬೇಕು ಅನಿಸುತ್ತಿದೆ" ಎಂದು ಹಟಕ್ಕೆ ಬಿದ್ದವಳಂತೆ ಆಡತೊಡಗಿದಳು.  ಸರಿ ಇನ್ನೇನು ಮಾಡುವುದು ಎಂದು ಕರೆದುಕೊಂಡು ಹೋದೆ. ನಾವು ಅವರ ವಾರ್ಡ್ಗೆ ಕಾಲಿಡುತ್ತಿದ್ದಂತೆಯೇ ನನ್ನ ಮಡದಿಯನ್ನು ಮೊದಲೇ ಗೊತ್ತಿದ್ದಿದ್ದರಿಂದ ಹೇಗಿದ್ದೀಯಮ್ಮ, ಆರೋಗ್ಯನ... ಎಂದು ವಿಚಾರಿಸಿದರು. ಅವಳಿಗೆ ಸ್ವಲ್ಪ ಕಸಿವಿಸಿ ಆಯಿತು "ಆಸ್ಪತ್ರೆಯಲ್ಲಿರುವವರು ನೀವು, ನಾವು ನಿಮ್ಮ ಆರೋಗ್ಯ ವಿಚಾರಿಸಲು ಬಂದಿದ್ದು. ನೀವು ದಯಮಾಡಿ ಹೇಗೆಲ್ಲ ಮಾತನಾಡದೆ ವಿಶ್ರಾಂತಿ ತೆಗೆದುಕೊಳ್ಳಿ" ಎಂದಳು. ನಾನು ಕೂಡ ಅದನ್ನೇ ಬೆಂಬಲಿಸಿದೆ. ಆಗ ವೈದ್ಯರು ಹತ್ತಿರ ಬಂದು ಅವರು ಹೇಳಿದ್ದು ಸರಿ ಎಂದರು. ಆನಂತರ ಚಿಕತ್ಸೆ ಮುಂದುವರಿಯಿತು...
ಹೀಗೆ ಸದಾ ಬೇರೆಯವರಿಗೆ ಒಳಿತನ್ನೇ ಬಯಸುವ ಕವಿ ನಿಸಾರ್, ತಮ್ಮ ಬಗ್ಗೆ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ದು ನಿಜ. ಅದೂ ಈ ಇಲಿ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದದ್ದು ತೀರ ಮುಖ್ಯ. ಅದನ್ನು ಬದಿಗಿಟ್ಟು ಅವರು ಹೆಚ್ಚು ಓಡಾಟದಲ್ಲಿ ತೊಡಗಿದ್ದರು. ಅದು ಜನರ ಪ್ರೀತಿಗಾಗಿ. ಆ ಪ್ರೀತಿಯೇ ಅವರನ್ನು ಇಂದು ಕಾಪಾಡಿದೆ. ಆ ಪ್ರೀತಿ ನೀಡಿದ ನಿಮ್ಮೆಲ್ಲರಿಗೂ ಅನಂತ ಅನಂತ ಧನ್ಯವಾದಗಳು...

No comments:

Powered By Blogger