Wednesday, March 9, 2011

ವಿಶ್ವ ಕನ್ನಡ ಸಮ್ಮೇಳನಕ್ಕೆ ಮೂರ್ತಿ ಬರಲಿ, ಉದ್ಘಾಟನೆ ಬೇರೆಯವರಿಂದಾಗಲಿ

ಬರೊಬ್ಬರಿ ಇಪ್ಪತ್ತೈದು ವರ್ಷಗಳ ನಂತರ ‘ವಿಶ್ವ ಕನ್ನಡ ಸಮ್ಮೇಳನ’ ನಡೆಯುತ್ತಿದೆ, ಸಂತಸ. ಆದರೆ ಅದು ಗೊಂದಲದ ಗೂಡಾಗಿರುವುದು ಮಾತ್ರ ವಿಪರ್ಯಾಸ. ನಿಜ ಹೇಳಬೇಕೆಂದರೆ ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರಕಾರ. ಇಲ್ಲಿ ಗೊಂದಲ ಉಂಟಾವಾಗಿರುವುದು ಈ ಸಮ್ಮೇಳನವನ್ನು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಉದ್ಘಾಟಿಸಬೇಕೆ? ಬೇಡವೇ? ಎನ್ನುವುದರಲ್ಲಿ. ನಾರಾಯಣ ಮೂರ್ತಿ ಕನ್ನಡಿಗರೆ. ಅವರೇನು ಹೊರಗಿನವರಲ್ಲ. ಜತೆಗೆ ಅವರನ್ನು ಸಮ್ಮೇಳನಕ್ಕೆ ಕರೆಸಲೇಬಾರದು ಎನ್ನುವುದೂ ಅಲ್ಲ. ಆದರೆ ಉದ್ಘಾಟನೆ ಅವರಿಂದ ಆಗುವುದು ಬೇಡ ಎಂಬುದಷ್ಟೆ. ಒಂದು ಸಾಮಾನ್ಯ ಕಾರ್ಯಕ್ರಮವಾದರೆ ಯಾರನ್ನು ಬೇಕಾದರೂ ಕರೆಸಿ ಉದ್ಘಾಟಿಸಬಹುದು. ಅದರಲ್ಲಿ ತಪ್ಪಿಲ್ಲ ಏಕೆಂದರೆ ಇಲ್ಲಿ ಎಲ್ಲರೂ ಕನ್ನಡಿಗರೆ. ಆದರೆ ಇಲ್ಲಿ ಈ ವಿವಾದಕ್ಕೆ ಮೂಲ ಪ್ರೇರಣ ಮೂರ್ತಿಯವರನ್ನು ಕರೆಯುವಲ್ಲಿ ಸರಕಾರದ ಹಿಂದಿರುವ ಉದ್ದೇಶ!
ನಿಜ, ಮೂರ್ತಿಯವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡವರು. ಅವರಿಂದ ಸಮ್ಮೇಳನ ಉದ್ಘಾಟನೆಗೊಂಡರೆ ವಿಶ್ವ ಮಟ್ಟದಲ್ಲಿ ಈ ಸಮ್ಮೇಳನ ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ. ಅದರಿಂದ ವಿಶ್ವದ ಮೂಲೆ ಮೂಲೆಯ ಬಂಡವಾಳಶಾಹಿಗಳು ಬೆಂಗಳೂರು ಅಥವಾ ಕರ್ನಾಟಕದತ್ತ ಮುಖ ಮಾಡುತ್ತಾರೆ ಎನ್ನುವುದು ಇಲ್ಲಿನ ಸರಕಾರದ ಉದ್ದೇಶ. ಹಾಗಾದರೆ ಐಶ್ವರ್ಯ ರೈ ಕನ್ನಡವಳು. ಜಾಗತಿಕ ಮಟ್ಟದಲ್ಲಿ ಆಕೆಯೂ ಹೆಸರು ಮಾಡಿದ್ದಾಳೆ. ಅವಳು ಬಂದರೆ ಜಗತ್ತೇ ಇತ್ತ ತಿರುಗಿ ನೋಡುತ್ತದೆ. ಅವಳನ್ನು ಕರೆಸಿ ಉದ್ಘಾಟಿಸಬಹುದಲ್ಲ? ಅವಳಿರಲಿ, ಶಿಲ್ಪಾಶೆಟ್ಟಿ ಅವಳೂ ಕೂಡ ಕನ್ನಡಿಗಳೇ, ಅವಳು ಕನ್ನಡದಲ್ಲಿ ಹಲವು ಚಿತ್ರದಲ್ಲಿ ನಟಿಸಿದ್ದಾಳೆ. ಅವಳನ್ನಾದರೂ ಕರೆಸಿ ಉದ್ಘಾಟಿಸಬಹದಲ್ಲ!
ಹೀಗೆ ಕೇವಲ ಪ್ರಚಾರ, ಅಥವಾ ಇನ್ನಾವುದೇ ಬಂಡವಾಳದ ಆಸೆ ಆಮಿಷಗಳಿಂದ ಯಾರ‍್ಯಾರಿಂದಲೋ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುತ್ತ ಹೋದರೆ ಅದು ಕನ್ನಡ ಸಮ್ಮೇಳನವಾಗಿ ಉಳಿಯುವುದಿಲ್ಲ. ಎಲ್ಲ ‘ಮಾರಿ ಜಾತ್ರೆ’ಗಳಂತೆ ಅದೂ ಒಂದು ಜಾತ್ರೆಯಾಗಿ ಮೂರೇ ದಿನದಲ್ಲಿ ಮರೆತು ಹೋಗುತ್ತದೆ. ದಿನಗಳೆದಂತೆ ಕನ್ನಡ ಸಾಹಿತ್ಯ ಸಮ್ಮೇಳನಗಳೇ ಕೇವಲ ಜಾತ್ರೆಗಳಾಗುತ್ತಿವೆ. ಅದಕ್ಕೆ ಸ್ಪಷ್ಟ ಉದಾಹರಣೆ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ೭೭ನೇ ಸಾಹಿತ್ಯ ಸಮ್ಮೇಳನ. ಇಲ್ಲಿ ಸಮ್ಮೇಳನ ನಡೆದಾಗ ಕೇವಲ ಚಾಮರಾಜಪೇಟೆ, ಬಸವನಗುಡಿ, ಕಾರ್ಪೋರೇಷನ್, ಮೆಜೆಸ್ಟಿಕ್ ಬಿಟ್ರೆ ಬೇರೇಲ್ಲೂ ಸಾಹಿತ್ಯ ಸಮ್ಮೇಳನದ ಗಾಳಿಯು ಸೋಕಿರಲಿಲ್ಲ. ಇಂಥ ಪರಿಸ್ಥಿತಿ ಹೀಗೇ ಮುಂದುವರಿದರೆ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್‌ಗಳಿಗೆ ಹೋಗುವುದು ಒಂದೇ; ಕನ್ನಡ ಸಮ್ಮೇಳನ ಅಥವಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗುವುದೂ ಒಂದೆಯಾಗಿ ಬಿಡುತ್ತದೆ.
ನಾರಾಯಣ ಮೂರ್ತಿ ಮಧ್ಯಮ ಕುಟುಂಬದಿಂದ ಬಂದವರು, ಕರ್ನಾಟಕದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ನಿಜ, ಅದನ್ನು ಯಾರೂ ಅಲ್ಲಗಳೆಯುವ ಹಾಗಿಲ್ಲ. ಇನ್ಫೋಸಿಸ್ ಸ್ಥಾಪನೆ ಮಾಡಿದ ನಂತರ ಬೆಂಗಳೂರು ಗುರುತಿಸಿಕೊಳ್ಳುವಂತಾಯಿತು, ಜಗತ್ತೇ ಇತ್ತ ತಿರುಗಿನೋಡುವಂತಾಗಿದೆ, ಕನ್ನಡಿಗರೆ ಉದ್ಯೋಗ ದೊರೆತಂತಾಗಿದೆ ಎನ್ನುವುದರಲ್ಲಿ ಹುರುಳಿಲ್ಲ. ಮೊದಲು ಬೆಂಗಳೂರು ‘ಉದ್ಯಾನ ನಗರಿ’ಯಾಗಿ ಹೆಸರು ಮಾಡಿತ್ತು. ಆನಂತರ ನಾರಾಯಣ ಮೂರ್ತಿ ಸೇರಿದಂತೆ ಅನೇಕ ಉದ್ಯಮಿಗಳು ಐಟಿಬಿಟಿ ಸೆಂಟರ್‌ಗಳನ್ನು ನಿರ್ಮಾಣ ಮಾಡಿದ್ದರಿಂದ ಬೆಂಗಳೂರು ಕಾಸ್ಮೋಪಾಟನ್ ಸಿಟಿಯಾಯಿತು (ಅಲ್ಲಿ ಕೆಲಸ ನೆಚ್ಚಿಕೊಂಡು ಹೋದ ಅನೇಕರ ಸ್ಥಿತಿ ಈಗ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ). ನೈರ್ಮಲ್ಯವೇ ಮಾಯವಾಯಿತು. ಐಟಿ ಸಿಟಿಯ ಜತೆಗೆ ಕೊಳಕು ನಗರ ಎನ್ನುವ ಕಳಂಕಬರಿತ ಹಣೆಪಟ್ಟಿಯನ್ನೂ ಜಾಗತಿಕ ಮಟ್ಟದಲ್ಲಿಯೇ ಪಡೆದುಕೊಳ್ಳುತ್ತಿದೆ. ಈ ಹಣೆ ಪಟ್ಟಿಯನ್ನೂ ನಾರಾಯಣಮೂರ್ತಿಯೊಬ್ಬರಿಗೇ ಅಂಟಿಸಿಬಿಡೋಣವೇ?
ಸುಖಾಸುಮ್ಮನೆ ಈಗ ನಾರಾಯಣ ಮೂರ್ತಿಯವರ ಒಂದೊಂದೇ ವಿಚಾರಗಳು ಹೊರಗೆ ಬರುತ್ತಿವೆ. ಅವರು ಸಹ ಎಂದೂ ಸುಮ್ಮನೆ ಕುಳಿತವರಲ್ಲ. ಕನ್ನಡ, ನಾಡು ನುಡಿ ವಿಚಾರ ಬಂದಾಗಲೆಲ್ಲ ಅದಕ್ಕೆ ವಿರುದ್ಧವಾಗಿ ನಿಂತವರು ಮೂರ್ತಿ. ಅದು ಒಂದನೇ ತರಗತಿಯಿಂದ ಕನ್ನಡ ಕಲಿಸುವುದಾಗಲಿ, ನಾಡ ಗೀತೆ ವಿಚಾರದಲ್ಲಾಗಲಿ. ಕನ್ನಡದ ಪರವಾಗಿದ್ದವರಲ್ಲವೇ ಅಲ್ಲ. ಜತೆಗೆ ತೆರಿಗೆ ವಿನಾಯಿತಿ ಸಿಕ್ಕಿದ್ದರೂ ಸರಕಾರಕ್ಕೆ ಸರಿಯಾದ ಲೆಕ್ಕ ಪತ್ರ ನೀಡದೆ ೪೫೦ಕೋಟಿ ರೂ. ತೆರಿಗೆ ಹಣ ವಂಚಿಸಿದ್ದ ಬಗ್ಗೆಯೂ ಆರೋಪಗಳಿವೆ. ಅದಕ್ಕೆ ಅವರು ಹೊಣೆಯೇ ಅಲ್ಲ, ಬೃಹತ್ ಕಾರ್ಪೋರೇಷನ್ ಕಂಪನಿಗಳಲ್ಲೆಲ್ಲಾ ಇದು ಸಾಮಾನ್ಯ ಎಂದು ಸುಮ್ಮನಿರಲಾಗುತ್ತದೆಯೇ? ಕನ್ನಡ ಭಾಷೆ, ಕನ್ನಡ ಸಾಹಿತ್ಯಕ್ಕೆ ಭ್ರಷ್ಟಾಚಾರವನ್ನು ತಡೆಯುವ ಶಕ್ತಿ ತಕ್ಷಣಕ್ಕೆ ಇಲ್ಲದಿರಬಹುದು. ಆದರೆ ನಿಧಾನವಾಗಿ ತಡೆಯುವ ಶಕ್ತಿ ಖಂಡಿತಾ ಇದೆ. ಆ ಕೆಲಸವನ್ನು ಕನ್ನಡಿಗರೆನಿಸಿಕೊಳ್ಳುವ ನಾವು ನೀವು ಮಾಡಬೇಕಷ್ಟೇ... ‘ಹೋಗಲಿ ಬಿಡಿ...’ ಎಂದು ಕುಳಿತರೆ ಅದು ಹೆಮ್ಮರವಾಗುತ್ತದೆ. ಜತೆಗೆ ನಾರಾಯಣ ಮೂರ್ತಿಯವರು ೧೦ -೧೫ ಸಾವಿರ ಕನ್ನಡ ಮಂದಿಗೆ ಉದ್ಯೋಗ ನೀಡಿದ್ದಾರೆಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಲಕ್ಷಾಂತರ ಕನ್ನಡಿಗರಿಗೆ ಕೆಲಸ ನೀಡಿದ್ದಾರೆ ಎಂದು ಬರೆಯುತ್ತಾರೆ. ಆದರೆ ನಿಜಕ್ಕೂ ವಸ್ತುಸ್ಥಿತಿ ಏನು ಎಂಬುದನ್ನು ಇನ್ಫೋಸಿಸ್‌ನ ನಾರಾಯಣ ಮೂರ್ತಿಯವರೇ ಸ್ಪಷ್ಟ ಅಂಕಿ ಅಂಶಗಳ ಮೂಲಕ ಬಹಿರಂಗಪಡಿಸಲಿ ನೋಡೋಣ. ಅದು ಅವರಿಗೆ ಸಾಧ್ಯವಾ?
ನಾರಾಯಣ ಮೂರ್ತಿಯವರು ಜಾಗತಿಕ ಮಟ್ಟದಲ್ಲಿ ಇಷ್ಟು ಸಾಧನೆ ಮಾಡಿದ್ದರಲ್ಲಿ ಅನುಮಾನವಿಲ್ಲ. ಆದರೆ ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಇಲ್ಲಿನ ಸರಕಾರ. ರೈತರ ಹಾಗೂ ಸರಕಾರದ ಭೂಮಿಯನ್ನು ಅನಾಮತ್ತಾಗಿ ಅವರಿಗೆ ನೀಡಿದ್ದಲ್ಲದೆ ಸರಕಾರಿ ತೆರಿಗೆಯಲ್ಲೂ ವಿನಾಯಿತಿ ನೀಡಿದ್ದರಿಂದ ನಾರಾಯಣ ಮೂರ್ತಿ ಅವರು ಅಷ್ಟು ಬೇಗ ಬೆಳೆಯಲು ಸಾಧ್ಯವಾಯಿತು. ಸರಕಾರ ಅವರೊಬ್ಬರಿಗೇ ನೀಡಿಲ್ಲ, ಅಂಥ ಬಹಳಷ್ಟು ಉದ್ಯಮಿಗಳಿಗೆ ಇದೇ ರೀತಿ ನೀಡಿದೆ! ಇರಲಿ.
ಆದರೆ ಕನ್ನಡ ಸಮ್ಮೇಳನ ಸಾಹಿತ್ಯ ಸಮ್ಮೇಳನವಲ್ಲ, ನಿಜ. ಆದರೆ ಕನ್ನಡ ಒಂದು ಭಾಷೆ. ಸಾಹಿತ್ಯವಿಲ್ಲದೆ ಭಾಷೆ ಇಲ್ಲ, ಭಾಷೆ ಇಲ್ಲದೆ ಸಾಹಿತ್ಯವಿಲ್ಲ. ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಚರ್ಚೆಯಾಗಬೇಕು, ರೂಪುರೇಷೆ ಸಿದ್ಧಪಡಿಸಬೇಕೆ ಹೊರತು, ಇಂಗ್ಲಿಷ್ ಪ್ರೇಮಿಗಳನ್ನು, ಕನ್ನಡ ಭಾಷಾ ವಿರೋಧಿಗಳನ್ನು ಕಟ್ಟಿಕೊಂಡು ಈ ‘ಜಾತ್ರೆ’ ಮಾಡುವ ಅಗತ್ಯವಿಲ್ಲ. ಹಾಗಂತ ಇಲ್ಲಿ ೧೯೮೫ರ ಹಾಗೆ ಯಾರೂ ‘ವಿಶ್ವಕನ್ನಡ ಸಮ್ಮೇಳನ ವಿರೋಧಿ ಒಕ್ಕೂಟ’ ಕಟ್ಟಿಕೊಂಡು ಯಾರೂ ಹೋರಾಟ ನಡೆಸುತ್ತಿಲ್ಲ. ನಾರಾಯಣ ಮೂರ್ತಿ ಕನ್ನಡ ಭಾಷೆಯ ಪರ ಕೆಲಸ ಮಾಡಿದವರಲ್ಲ. ಆದರೂ ಅವರೂ ಸಮ್ಮೇಳದಲ್ಲಿ ಭಾಗವಹಿಸಲಿ. ಆದರೆ ಉದ್ಘಾಟನೆಯನ್ನು ಅವರನ್ನು ಬಿಟ್ಟು ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಹೋರಾಟ ಮಾಡಿದವರು, ಸೇವೆ ಸಲ್ಲಿಸಿದವರು ರಾಜ್ಯದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರಲ್ಲಿ ಯಾರಾದರೊಬ್ಬರನ್ನು ಕರೆಸಿ ಉದ್ಘಾಟಿಸಿ ಎನ್ನುದು ಕನ್ನಡಪರ ಕಾಳಜಿಯುಳ್ಳವರ ಒತ್ತಾಯ.
ಕೆಲವು ‘ಸದಾ ಎದ್ದೆತ್ತಿನ ಬಾಲ ಹಿಡಿದು ಹೋಗುವ ಹೋರಾಟಗಾರ’ರು ಕೇವಲ ಹೆಸರು ಗಳಿಸುವುದಕ್ಕಾಗಿ, ಪ್ರಭಾವಿಯಾಗಿ ಬೆಳೆಯುವುದಕ್ಕಾಗಿ ಎಲ್ಲೆಂದಲ್ಲಿ ಕನ್ನಡದ ಬಾವುಟ ಪ್ರದರ್ಶಿಸಿ ಕೆಲಸವಾದ ಕೂಡಲೇ ಅದನ್ನು ಅಲ್ಲಿಯೇ ಬಿಸಾಡಿ ಬರುತ್ತಿದ್ದಾರೆ. ಇಂಥ ಹೋರಾಟಗಾರರಿಂದಲೂ ಈ ನಾಡಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕೇವಲ ಉದ್ಯೋಗ ಸೃಷ್ಠಿ ಮಾಡಿದ ಮಾತ್ರಕ್ಕೆ ನಾರಾಯಣ ಮೂರ್ತಿ ಶ್ರೇಷ್ಠ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಅಂಥ ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಇಂದು ಕೋಲಾರದ ಗುಲಾಬಿಗೆ, ತುಮಕೂರಿನ ತೆಂಗಿಗೆ, ಮಲೆನಾಡು ಶಿವಮೊಗ್ಗ ಭಾಗದ ಅಡಿಕೆಗೆ ಜಾಗತಿಕ ಮಟ್ದಲ್ಲಿ ಉತ್ತಮ ಬೆಲೆಯಿದೆ. ಅದನ್ನು ಮಾಡಿದವರು ನಮ್ಮ ರೈತರು. ಅವರಿಗಿಂತ ಇವರು ಶೇಷ್ಠವೇ? ನಮ್ಮ ತಾಯಿಯನ್ನು ನಾವೇ ಪೋಷಿಸದೆ ಬೇರೊಬ್ಬರ ವೃದ್ಧಾಶ್ರಮದಲ್ಲಿ ಬಿಟ್ಟು ಕೇವಲ ನಮ್ಮ ಸ್ವಾರ್ಥ ನೋಡಿಕೊಳ್ಳುವುದು ಹೆತ್ತ ತಾಯಿಗೆ ಮಾಡಿದ ದ್ರೋಹ. ಇಂಥ ನಿಲುವುಗಳನ್ನು ಕೈ ಬಿಟ್ಟು ನಮ್ಮ ಭಾಷೆ, ನೆಲ, ಜಲದ ಬಗ್ಗೆ ಸಹಜವಾದ ಅಭಿಮಾನ ಬೆಳಸಿಕೊಂಡರೆ ತನ್ನಷ್ಟಕ್ಕೆ ತಾನೆ ಉದ್ಯೂಗ, ಭದ್ರತೆ ಎಲ್ಲವೂ ದೊರೆಯುತ್ತದೆ. ವಿಶ್ವದಲ್ಲಿ ಕೇವಲ ಏಳೆಂಟು ರಾಷ್ಟ್ರಗಳಲ್ಲಿ ಮಾತನಾಡುವ, ಅಂಥ ಯಾವುದೇ ಇತಿಹಾಸವಿಲ್ಲದ ಇಂಗ್ಲಿಷ್ ಭಾಷೆ ಇಂದು ಜಗತ್ತನ್ನೇ ವ್ಯಾಪಿಸಲು ಹೊರಟಿದೆ. ಅದಕ್ಕೆ ಮೂಲ ಕಾರಣ ಇಂಗ್ಲೆಂಡ್ ಹಾಗೂ ಅಮೆರಿಕ ಮತ್ತು ಅಲ್ಲಿನ ಜನರ ಛಲ, ವಿಶ್ವಾಸ. ಆದರೆ ಅಂಥ ವಿಶ್ವಾಸ, ಅಭಿಮಾನ, ಛಲ ಶತಮಾನಗಳ ಇತಿಹಾಸ ಹೊಂದಿರುವ ಕನ್ನಡವನ್ನು ಮಾತನಾಡುವ ನಮ್ಮಲ್ಯಾಕಿಲ್ಲ?
೧೯೮೫ರ ಡಿಸೆಂಬರ್‌ನಲ್ಲಿ ಡಾ.ಶಿವರಾಮ ಕಾರಂತರ ಅಧ್ಯಕ್ಷತೆಯ ನಡುವೆ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದ್ದ ಕವಿ ಕುವೆಂಪು ‘ಕರ್ನಾಟಕದಲ್ಲಿ ಮೊದಲನೇ ತರಗತಿಯಿಂದಲೇ ಕನ್ನಡ ಶಿಕ್ಷಣ ಮಾಧ್ಯಮವಾದಾಗ ಮಾತ್ರ ಕನ್ನಡ ನಾಡು ನುಡಿಯ ಏಳಿಗೆ’ ಎಂದಿದ್ದರು. ಆದರೆ ಕೇವಲ ೨೫ ವರ್ಷಗಳ ಅಂತರದಲ್ಲಿ ಅದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ, ಅವರು ಬರೆದ ನಾಡ ಗೀತೆಗೆ ಅಪಮಾನ ಮಾಡಿದ ವ್ಯಕ್ತಿಯನ್ನೇ ವಿಶ್ವಕನ್ನಡ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡುವುದು ಕನ್ನಡಿಗರ ದೌಭಾರ್ಗ್ಯವೇ ಸರಿ. ಒಟ್ಟಾರೆ ಬಿಜೆಪಿ ಸರಕಾರದ ಅವಧಿಯಲ್ಲಿ ಕನ್ನಡ ನಾಡು, ನುಡಿ ವಿಚಾರದಲ್ಲಿ ಭಾಷೆ, ನೆಲ ಜಲಕ್ಕಿಂತ ಅಧಿಕಾರಶಾಹಿತನ ಹಾಗೂ ಲಾಭದಾಯಕ ರಾಜಕೀಯ ನೀತಿಯೇ ಮೇಲುಗೈ ಸಾಧಿಸುತ್ತಿರುವುದು ಸ್ಪಷ್ಟ...
ಸರಕಾರ ಈಗಾಗಲೇ ಈ ಸಮ್ಮೇಳನಕ್ಕೆ ೩೦ ಕೋಟಿ ರೂ. ಬಿಡುಗಡೆ ಮಾಡಿದೆ. ದೇಶ ವಿದೇಶದಿಂದ ಬರುವ ಗಣ್ಯರಿಗೆ ರತ್ನಗಂಬಳಿ ಹಾಸಿ, ವಸತಿ, ರೈಲು, ವಿಮಾನ ವ್ಯವಸ್ಥೆ ಮಾಡಿಯಾಗಿದೆ. ಇನ್ನೂ ಕಾಲ ಮಿಂಚಿಲ್ಲ. ಸರಕಾರ ತನ್ನ ನಿಲುವುದು ಬದಲಿಸಿ ಸೂಕ್ತ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿ ವಿಶ್ವ ಕನ್ನಡ ಸಮ್ಮೇಳನವನ್ನು ಜರುಗಿಸಲಿ. ಆ ಮೂಲಕ ಕನ್ನಡದ ಕಂಪು ವಿಶ್ವದಾಧ್ಯಂತ ಪಸರಿಸುವಂತಾಗಲಿ.

No comments:

Powered By Blogger