ಶಿಕ್ಷಣ ಇಂದು ಕೇವಲ ಉಳ್ಳವರ ಸ್ವತ್ತಾಗುತ್ತಿದೆ. ಶಿಕ್ಷಣ ಕ್ಷೇತ್ರ ಕೇವಲ ಉದ್ಯಮವಾಗುತ್ತಿದೆ. ಗುರುವಿಗಿರುವ ಮಹತ್ವ ಕೂಡ ಮಾಯವಾಗುತ್ತಿದೆ. ಕೆಲವೇ ವರ್ಷಗಳ ಮುಂಚೆ ‘ಮುಂದೆ ಗುರಿಯಿರಬೇಕು ಹಿಂದೆ ಗುರುವಿರಬೇಕು’ ಎಂಬ ಮಾತಿತ್ತು. ಈಗ ಅದನ್ನು ಕೊಂಚ ಬದಲಿಸಿ ‘ಮುಂದೆ ಹಣವಿರಬೇಕು ಹಿಂದೂ ಹಣವಿರಬೇಕು’ ಎನ್ನಬೇಕಾಗಿದೆ.
ಎಳೆಯ ಮಕ್ಕಳನ್ನು ಕೂಡ ಇಂದು ಅಂಗನವಾಡಿಗಳಿಗೆ ಅಥವಾ ಶಾಲೆಗೆ ಸೇರಿಸಬೇಕೆಂದರೆ ‘ಕಾಂಚಣಂ ಕಾರ್ಯಸಿದ್ಧಿ’ ಎನ್ನುತ್ತಿವೆ ಶಿಕ್ಷಣ ಸಂಸ್ಥೆಗಳು. ಇಡೀ ಶಿಕ್ಷಣ ವ್ಯವಸ್ಥೆ ಭ್ರಷ್ಟತನದಲ್ಲಿ ಮುಳುಗೆದ್ದು ಎಲ್ಲಿ ನೋಡಿದರಲ್ಲಿ ಡೊನೇಷನ್ ವಸೂಲಿ ಮಾಡುವ ಖಯಾಲಿ ಶುರುವಾಗಿದೆ. ಎಲ್ಕೆಜಿಯಿಂದ ಎಸ್ಎಸ್ಎಲ್ಸಿ ವರೆಗೆ ಮಾತ್ರವಲ್ಲ, ಆನಂತರದ ಉನ್ನತ ಶಿಕ್ಷಣಕ್ಷೇತ್ರದಲ್ಲಿಯೂ ಕುರುಡು ಕಾಂಚಾಣ ಕುಣಿಯುತ್ತಲಿದೆ. ಆದರೆ ಅದರ ಕಾಲಿಗೆ ಸಿಕ್ಕವರು ಮಾತ್ರ ನಜ್ಜುಗುಜ್ಜಾಗುತ್ತಲೇ ಇದ್ದಾರೆ!!
ಹೀಗಾಗಿ ನಗರ ಪ್ರದೇಶಗಳಲ್ಲಿ ಕೂಲಿನಾಲಿ ಅಥವಾ ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಕೆಲಸ ಮಾಡಿ ಬದುಕುವ ಅದೆಷ್ಟೋ ಮಂದಿಯ ಮಕ್ಕಳು ಇಂದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂದ ಮಾತ್ರಕ್ಕೆ ಹಳ್ಳಿಗಳು ಕೂಡ ಇದರಿಂದ ಹೊರತಾಗಿಲ್ಲ! ಅಲ್ಲೂ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ಮೂಲ ಕಾರಣ ಶಿಕ್ಷಣ ಉದ್ಯಮವಾಗಿ ಬೆಳೆದು ನಿಂತಿರುವುದು. ಯಾಂತ್ರಿಕ ಜೀವನ ಹೆಚ್ಚಾದಂತೆ ಪೋಷಕರು ಕೂಡ ತಮ್ಮ ಮಕ್ಕಳ ಕಾಳಜಿಯನ್ನು ಶಿಕ್ಷಣ ಸಂಸ್ಥೆಗಳಿಗೆ ವಹಿಸಿ ತಾವು ಮಾತ್ರ ದುಡ್ಡು ದುಡ್ಡು ಎಂದು ದುಡಿಮೆಗೆ ನಿಂತಿದ್ದಾರೆ. ಹಣವೊಂದೆ ಜೀವನವೇ ?ಎನ್ನುವ ಪ್ರಶ್ನೆಗೆ ಉತ್ತರ ದೊರೆಯದಿದ್ದರೂ ಹಣದ ಬೆನ್ನು ಬಿದ್ದು ಬೆಂಬಿಡದೆ ಓಡುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಈಗ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಮನೆಬಾಗಿಲಿಗೆ ಶಾಲಾ ವಾಹನಗಳು ಬೇಕು. ಹೀಗೆ ಸೌಲಭ್ಯ ನೀಡುವ ನೆಪ ಮಾಡಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಹಾಗೂ ಪೋಷಕರ ರಕ್ತ ಹೀರುತ್ತಿವೆ. ಆದರೆ ಇಂಥ ಜಿಗಣೆಗಳು ಹೀರುವ ರಕ್ತವನ್ನೂ ನೋಡಿಕೊಳ್ಳದ ಅಥವಾ ಅವುಗಳನ್ನು ಕಿತ್ತು ಬಿಸಾಡುವ ವ್ಯವದಾನ ಪೋಷಕರಲ್ಲಿ ಇಲ್ಲವಾಗಿದೆ. ಆ ಕಾರಣಕ್ಕೇ ಸರಕಾರಿ ಶಾಲೆಗಳಿಗೂ ನಿರ್ಲಕ್ಷ್ಯಕ್ಕೊಳಗಾಗಿವೆ.
ಇಂಥ ವ್ಯವಸ್ಥೆಯಲ್ಲಿ ಶಿಕ್ಷಕರು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಲು ಶತಪ್ರಯತ್ನ ನಡೆಸುವುದು ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಬಡವರು, ಕೂಲಿ ಕಾರ್ಮಿಕರು, ನಿಗರ್ತಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದೇ ಕಷ್ಟವಾಗಿದೆ. ಇಲ್ಲಿ ಯಾವುದೇ ಜಾತಿ ಭೇದವಿಲ್ಲ, ಬ್ರಾಹ್ಮಣರಿಂದ ಹಿಡಿದು ದಲಿತರ ವರೆಗೆ ಎಲ್ಲರೂ ಇದರ ಸುಳಿಯಲ್ಲಿ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಯುಪಿಎ ಸರಕಾರ ಏ.೧ರಿಂದ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು’ ಕಾಯಿದೆ ಜಾರಿಗೆ ತಂದಿರುವುದು ನಿಜಕ್ಕೂ ಎಲ್ಲ ವರ್ಗದವರಿಗೆ ಅನುಕೂಲ. ಆದರೆ ಅದು ಪ್ರಾಮಾಣಿಕವಾಗಿ ಅನುಷ್ಠಾನವಾಗಬೇಕು ಅಷ್ಟೆ.
ದೇಶದಲ್ಲಿರುವ ೬ರಿಂದ ೧೪ ವರ್ಷದೊಳಗಿನ ೨೨ಕೋಟಿ ಮಕ್ಕಳಲ್ಲಿ ಈಗಾಗಲೇ ೯೨ಲಕ್ಷ ಮಕ್ಕಳು (ಶೇ.೪.೬) ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂಥ ಮಕ್ಕಳೆಲ್ಲ ಇನ್ನು ಶಾಲೆಗೆ ಬರಬೇಕಾದರೆ ಈ ಕಡ್ಡಾಯ ಕಾನೂನು ಕಡ್ಡಾಯವಾಗಿಯೇ ಜಾರಿಗೆ ಬರಬೇಕು. ಈ ದೇಶದಲ್ಲಿ ಸಾಕಷ್ಟು ಕಾನೂನುಗಳಿವೆ, ಆದರೆ ಯಾವ ಕಾನೂನು ಕೂಡ ಇದೂವರೆಗೆ ಕಡ್ಡಾಯವಾಗಿ ಜಾರಿಗೆ ಬರುತ್ತಿಲ್ಲ. ಜತೆಗೆ ಉಲ್ಲಂಘನೆಗಳು ಬಹಿರಂಗವಾಗಿ ನಡೆಯುತ್ತಿವೆ. ಇದಕ್ಕೆ ಸಂಬಂಸಿದ ಅಕಾರಿಗಳು ಅಥವಾ ಜನಪ್ರತಿನಿಗಳ ನಿರ್ಲಕ್ಷ್ಯವೇ ಕಾರಣ ಎನ್ನುವುದರಲ್ಲಿ ಯಾವುದೇ ಗೊಂದಲವಿಲ್ಲ. ಇದೊಂದು ‘ಐತಿಹಾಸಿಕ ಯೋಜನೆ’ ಎಂಬ ಕಾರಣಕ್ಕೆ ಇದನ್ನೇ ರಾಜಕೀಯ ಗಿಮಿಕ್ ಆಗಿ ಬಳಸಿಕೊಳ್ಳದೆ ಅದು ಪ್ರಾಮಾಣಿಕವಾಗಿ ಜಾರಿಯಾಗಲು ಎಲ್ಲ ಅಕಾರಿಗಳ ಹಾಗೂ ರಾಜ್ಯ ಸರಕಾರಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಯುಪಿಎ ಕಾರ್ಯರೂಪಗೊಳಿಸಬೇಕಿದೆ. ಆಗ ಮಾತ್ರ ಈ ಕಾನೂನು ರೂಪಿಸಿದ್ದಕ್ಕೆ ಸಾರ್ಥಕ.
ಶಾಲೆಯಿಂದ ಹೊರಗುಳಿದ ದೇಶದ ೯೨ಲಕ್ಷ ಮಕ್ಕಳನ್ನು ಮರಳಿ ಶಾಲೆಗೆ ತರುವ ಹೊಣೆಗಾರಿಕೆಯನ್ನು ರಾಜ್ಯ ಹಾಗೂ ಸ್ಥಳಿಯ ಆಡಳಿತಗಳಿಗೆ ವಹಿಸಲಾಗಿದೆ. ಇದಕ್ಕಾಗಿ ೫ ವರ್ಷಗಳ ವರೆಗೆ ತಗಲುವ ೧.೭೧ಲಕ್ಷ ಕೋಟಿ ರೂ.ಗಳನ್ನು ಭರಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಕೇಂದ್ರದಿಂದ ಶೇ.೫೫ ಹಣ ನೀಡಿದರೆ ರಾಜ್ಯ ಸರಕಾರಗಳು ಇದಕ್ಕೆ ಉಳಿದ ಶೇ.೪೫ ಹಣವನ್ನು ಒದಗಿಸಬೇಕಿದೆ. ೨೦೦೨ರಲ್ಲಿಯೇ ಸಂವಿದಾನದ ೮೬ನೇ ತಿದ್ದುಪಡಿ ರೂಪದಲ್ಲಿ ಈ ಕಾಯಿದೆ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ಹಿಂದಿನ ವರ್ಷ ಸಂಸತ್ನಲ್ಲಿ ಈ ಮಸೂದೆಗೆ ಅಂಗೀಕಾರ ದೊರೆತಿತ್ತು. ಈಗ ಅದು ಜಾರಿಗೆ ಬರುತ್ತಿದೆ.
ಇದು ಕೆಂದ್ರದ ಮೂರನೇ ಮಹತ್ವದ ಯೋಜನೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಮೊದಲ ಹಾಗೂ ೨ನೇ ಮಹತ್ವದ ಯೋಜನೆಗಳಾದ ‘ಮಾಹಿತಿ ಹಕ್ಕು ಹಾಯಿದೆ’ ಹಾಗೂ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಈಗಾಗಲೇ ಜಾರಿಯಾಗಿದ್ದರೂ ದೇಶದೆಲ್ಲಡೆ ಭ್ರಷ್ಟರ ಕೈಲಿ ಸಿಕ್ಕಿ ಸರಿಯಾಗಿ ಜಾರಿಯಾಗದೆ ವಿಲಿವಿಲಿ ಒದ್ದಾಡುತ್ತಿವೆ. ಈ ಕಾನೂನು ಕೂಡ ಹಾಗೆಯೇ ಆದರೆ ಯಾವುದೇ ಪ್ರಯೋಜನವಿಲ್ಲ.
ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ದುರ್ಬಲ ವರ್ಗದ ಮಕ್ಕಳಿಗೂ ಶೇ.೨೫ ಸೀಟುಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಯಾವುದೇ ಪ್ರಾಥಮಿಕ ಶಾಲೆ ಇನ್ನು ಡೊನೇಷನ್ ಪಡೆಯುವಂತಿಲ್ಲ, ಜತೆಗೆ ಬಡ ವರ್ಗದ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಿಕೊಳ್ಳುವುದಿಲ್ಲ ಎನ್ನವಂತೆಯೂ ಇಲ್ಲ. ಮಕ್ಕಳ ಪೋಷಕರನ್ನು ಸಂದರ್ಶಿಸುವಂತೆಯೂ ಇಲ್ಲ. ಒಂದು ವೇಳೆ ಹೀಗಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತಿದೆ.
ಆದರೆ ಈ ಕಾನೂನು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮೂಲ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ, ಇದು ಸಂವಿದಾನ ವಿರೋಯಾದದ್ದು ಎಂದು ಅದನ್ನು ಪ್ರಶ್ನಿಸಿ ಈಗಾಗಲೇ ಕೆಲವು ಸಂಸ್ಥೆಗಳು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿವೆ. ಕರ್ನಾಟಕದಲ್ಲಿ ಈಗ ೪೪,೯೯೮ ಸರಕಾರಿ ಪ್ರಾಥಮಿಕ ಶಾಲೆಗಳು, ೨,೪೯೯ ಅನುದಾನಿತ ಪ್ರಾಥಮಿಕ ಶಾಲೆಗಳು ಹಾಗೂ ೮,೮೫೧ ಅನುದಾನ ರಹಿತ ಪ್ರಾಥಮಿಕ ಶಾಲೆಗಳು ಸೇರಿ ೫೬,೩೪೮ ಪ್ರಾಥಮಿಕ ಶಾಲೆಗಳಿವೆ. ಇಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಸರಕಾರಿ ಶಾಲೆಗಳನ್ನು ಹೊರತುಪಡಿಸಿ ಉಳಿದ ೧೧,೩೫೦ ಶಾಲೆಯಲ್ಲಿ ಓದುವ ಮಕ್ಕಳ ಎಲ್ಲ ಪೋಷಕರು ಪ್ರತಿನಿತ್ಯ ತಮ್ಮ ಮಕ್ಕಳ ಶಿಕ್ಷಣದ ಬದಲಾಗಿ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಯೋಚಿಸುತ್ತಿದ್ದಾರೆ...ಇನ್ನು ಹಾಗಾಗದಿರಲಿ.
ರಾಜ್ಯದಲ್ಲಂತೂ ಇದು ಯಾವ ಮಟ್ಟಕ್ಕೆ ಬಂದಿದೆ ಎಂದರೆ ಹೆಚ್ಚು ಡೊನೇಷನ್ ಪಡೆಯುವ ಶಾಲೆಗಳು ಮಾತ್ರ ಉತ್ತಮ ಶಿಕ್ಷಣ ನೀಡುತ್ತವೆ ಎನ್ನುವ ಹಂತಕ್ಕೆ ಪೋಷಕರು ತಲುಪಿದ್ದಾರೆ. ಶೇ.೮೦ ಅಥವಾ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರವೇಶ ನೀಡಿ ಶೇ.೧೦೦ ಫಲಿತಾಂಶ ಪಡೆಯುವ ಇಂಥ ಖಾಸಗಿ ಶಾಲೆಗಳು ಮಾಡಿದ ಸಾಧನೆಯಾದರೂ ಏನು ? ಮಕ್ಕಳಲ್ಲಿ ಪರೀಕ್ಷೆ ಎಂದರೆ ಭಯ, ಆತಂಕ ತುಂಬುವುದರ ಜತೆಗೆ ಬದುಕು ಕಲಿಸದೆ ಭಯ ಹುಟ್ಟು ಹಾಕಿ ಆತ್ಮಹತ್ಯೆಯ ಹಾದಿಗೆ ತಳ್ಳುವುದೇ?
ಆದ್ದರಿಂದ ಇಂಥ ಶಾಲೆಗಳಿಗೆ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲೇಬೇಕು. ಅದಕ್ಕಾಗಿ ಏ.೧ರಿಂದ ಜಾರಿಗೆ ಬಂದಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು ಕಾಯಿದೆ ಕೇವಲ ಜಾರಿಗೊಂಡರೆ ಸಾಲದು ನಿರ್ಧಾಕ್ಷಿಣ್ಯವಾಗಿ ಅನುಷ್ಠಾನಗೊಳ್ಳಬೇಕು. ಆ ಕೆಲಸಕ್ಕೆ ಇನ್ನು ಪೋಷಕರೂ ಕೂಡ ಆತ್ಮಸ್ಥೈರ್ಯದಿಂದ ಸಹಕರಿಸಬೇಕು. ಆಗ ಮಾತ್ರ ಬಂಡವಾಳಶಾಹಿಗಳ ಕೈಲಿ ಸಿಲುಕುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಬಿಡಿಸಿಕೊಳ್ಳಲು ಸಾಧ್ಯ, ಜತೆಗೆ ಶಿಕ್ಷಣ ಸಂಸ್ಥೆಗಳಲ್ಲಿನ ಕುರುಡು ಕಾಂಚಾಣದ ನರ್ತನವನ್ನು ನಿಲ್ಲಿಸಲು ಸಾಧ್ಯ...