ರೈಲ್ವೆ ನಿಲ್ದಾಣದಲ್ಲಿರುವ ಕೆಲವು ಮೆಡಿಕಲ್ ಸ್ಟೋರ್ಗಳಲ್ಲಿ ೧೦ರೂ.ಗೆ ಮಾರುವ ಮಾಸ್ಕ್ಗಳನ್ನು ೨೦, ೩೦ರೂ.ಗೆ ಮಾರಿಕೊಳ್ಳುತ್ತಿದ್ದರು. ಅದು ವ್ಯಾಪಾರಿ ವಂಚಕತನ. ಇರಲಿ, ಆದರೆ ಮಾಸ್ಕ್ ಹಾಕಿಕೊಂಡು ನಿಲ್ದಾಣದ ಒಳಗೆ ಹೋಗುವವರನ್ನು ಮಾಸ್ಕ್ ಹಾಕಿಕೊಳ್ಳದವರು ನೋಡುತ್ತಿದ್ದ ಹಾಗೂ ಗಮನಿಸುತ್ತಿದ್ದ ರೀತಿ ನೋಡಿದರೆ ನಿಜಕ್ಕೂ ಭಯವಾಗುತ್ತಿತ್ತು. ದೇಶ ವಿದೇಶಗಳ ಎಲ್ಲ ಮೀಡಿಯಾಗಳಲ್ಲಿಯೂ ಅದು ರೋಗ ತಡೆಗೆ ಬಳಸುವ ಒಂದು ವಿಧಾನ ಎಂದು ಬೊಬ್ಬೆ ಹೊಡೆಯುತ್ತಿದ್ದರೂ ಅವರೇನೋ ತಪ್ಪು ಮಾಡುತ್ತಿದ್ದಾರೆ ಎನ್ನುವಂತೆ ಜನ ವಿಚಿತ್ರವಾಗಿ ನೋಡುತ್ತಿದ್ದರು. ಹತ್ತಿರ ಹೋದರೆ ಬೆದರಿದ ಹೋರಿಗಳಂತಾಡುತ್ತಿದ್ದರು !
ಶಿವಮೊಗ್ಗದ ನಂತರ ಉಡುಪಿ, ಮಂಗಳೂರಿಗೂ ಹೋಗಬೇಕಾದ್ದರಿಂದ ನಾವು ಕುಟುಂಬವರೆಲ್ಲ ಮಾಸ್ಕ್ ತೆಗೆದುಕೊಂಡಿದ್ದೆವು. ಆದರೆ ಕಟ್ಟಿಕೊಂಡಿರಲಿಲ್ಲ. ನಾನು ಹಾಗೇ ಸುಮ್ಮನೆ ಕೆಲವರನ್ನು ಗಮನಿಸುತ್ತಲೇ ಸಾಗುತ್ತಿದ್ದೆ. ಮಾಸ್ಕ್ ಹಾಕಿಕೊಂಡವರು ಹತ್ತಿರ ಬಂದ ಕೂಡಲೇ ಬಹುತೇಕರು ಭಯ ಭೀತಿಯಿಂದ ಓಡುತ್ತಿದ್ದರು! ಇಲ್ಲವೇ ದೂರ ಸರಿದು ಮೂಗು ಮುಚ್ಚಿಕೊಳ್ಳುತ್ತಿದ್ದರು. ಮಾಸ್ಕ್ ಹಾಕಿಕೊಂಡವರು ಹತ್ತಿರ ಬಂದರೆ ಹಂದಿಜ್ವರ ಬರುತ್ತದೆ ಎಂಬಂತೆ ನಡೆದುಕೊಳ್ಳುತ್ತಿದ್ದರು. ಒಂದೇ ಮಾತಲ್ಲಿ ಹೇಳುಬೇಕೆಂದರೆ ಮಾಸ್ಕ್ ಹಾಕಿಕೊಂಡವರೆಲ್ಲ ಒಂದು ರೀತಿ ಅಲ್ಲಿ ಅಸ್ಪೃಶ್ಯರಾಗಿದ್ದರು!
ಹೀಗಿದ್ದಾಗಲೇ ಮಾಸ್ಕ್ ಹಾಕಿಕೊಂಡವನೊಬ್ಬ ಸಹಜವಾಗಿ ಸೀನಿಬಿಟ್ಟ. ದೂರದಲ್ಲಿ ಅವನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದ ಕೆಲವರು ಕ್ಷಣಾರ್ಧದಲ್ಲಿ ನೆಲಕ್ಕೆ ಎಸೆದ ಚಂಡು ಪುಟಿದೇಳುವ ಹಾಗೆ ದೂರಕ್ಕೆ ಓಡಿದರು. ಅದನ್ನು ಕಂಡು ನಿಜಕ್ಕೂ ನಾನು ತಬ್ಬಿಬ್ಬಾದೆ. ಹಂದಿ ಜ್ವರ ಜನ ಸಾಮಾನ್ಯರಲ್ಲಿ ಅಷ್ಟೊಂದು ಭೀತಿ ಹುಟ್ಟಿಸಿದೆಯಾ? ಎಂಬ ಆತಂಕ ಒಂದೆಡೆಯಾದರೆ, ಇಷ್ಟೆಲ್ಲಾ ಜಾಗೃತಿ ಇದ್ದು, ಸಮಾಜ ಮುಂದುವರಿದಿದ್ದರೂ ಇಂಥ ನಡವಳಿಕೆಗೆ ಕಾರಣವೇನು? ಎಂಬ ಪ್ರಶ್ನೆ ಕಾಡತೊಡಗಿತು. ಆದರೆ ಉತ್ತರ ಇನ್ನೂ ಸಿಕ್ಕಿಲ್ಲ.
ಸರಕಾರಗಳು ಹಂದಿ ಜ್ವರಕ್ಕೆ ಮದ್ದಿದೆ. ಅದು ಬರದಂತೆ ತಡೆಯಲು ಕೆಲವೇ ಮುಂಜಾಗೃತ ಕ್ರಮಗಳನ್ನು ಅನುಸರಿಸಿದರೆ ಸಾಕು, ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಎಲ್ಲ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿವೆ. ಆದರೂ ಈ ರೀತಿಯ ಭಯವೇಕೆ? ಒಂದು ರೀತಿಯಲ್ಲಿ ಈ ಭಯಕ್ಕೆ ಮಾಧ್ಯಮಗಳೂ ಕಾರಣವೇ? ಎಂಬ ಅನುಮಾನ ನಿಜಕ್ಕೂ ಕಾಡುತ್ತಿದೆ. ವೈದ್ಯರು ‘ಇದೇನೂ ಅಂಥ ಭಯಾನಕ ಕಾಯಿಲೆ ಅಲ್ಲ, ಇದಕ್ಕೆ ಚಿಕಿತ್ಸೆ ಇದೆ’ ಎನ್ನುತ್ತಾರೆ. ಇಷ್ಟಾದರೂ ಮೀಡಿಯಾಗಳು ಹಂದಿ ಜ್ವರ ಭಯಾನಕ ಎನ್ನುವಂತೆ ಬಿಂಬಿಸಿ ನಿತ್ಯವೂ ವರದಿ ಮಾಡುತ್ತಿವೆ. ಇಲ್ಲಿ ಎಡವುತ್ತಿರುವುದು ಎಲ್ಲಿ ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರಕಾರಗಳು ಕೂಡ ಸದ್ದಿಲ್ಲದೆ ಬಂದ ಈ ಕಾಯಿಲೆಗೆ ಮದ್ದು ಹಾಗೂ ಸೂಕ್ತ ಚಿಕಿತ್ಸೆಗೆ ವೈದ್ಯರ ನೇಮಕ ಮಾಡುವ ಬದಲು ‘ನಮ್ಮ ರಾಜ್ಯದಲ್ಲಿ ಇನ್ನೂ ಯಾರೂ ಸತ್ತಿಲ್ಲ, ಜ್ವರದ ತೀವ್ರತೆ ಇಲ್ಲ.’ಎಂದು ಹೇಳಿ ಆರಂಭದಲ್ಲಿ ಕೈ ತೊಳೆದುಕೊಂಡವು. ಆದರೆ ಈಗ ?
ಯಾವುದೇ ಕಾಯಿಲೆಗಾದರೂ ಸರಿ, ಮುಂಜಾಗೃತೆ ವಹಿಸುವುದು ಒಳ್ಳೆಯದು. ಆದರೆ ಜಾಗೃತಿವಹಿಸುವ ಬದಲು ಅಂಥವರನ್ನು ನೋಡಿ ಇತರರು ಅಣಕಿಸುವಂತೆ ನೋಡುವುದು ಎಷ್ಟು ಸರಿ?
ಈ ಲೇಖನ ವಿಜಯ ಕರ್ನಾಟಕ ದಿನಪತ್ರಿಕೆಯ ಸಿಂಪ್ಲಿಸಿಟಿ ಪೇಜ್ನಲ್ಲಿ ಅಗಸ್ಟ್ ೨೭ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಆದರೂ ಹಂದಿ ಜ್ವರದ ಬಗ್ಗೆ ಜನರಲ್ಲಿ ಇರುವ ಭಯ ಕೊಂಚವಾದರೂ ದೂರ ಮಾಡಲು ಇದು ಕೆಲವರಲ್ಲಾದರೂ ಅರಿವು ಮೂಡಿಸೀತು ಎಂಭ ಆಸೆಯಿಂದ ಇಲ್ಲಿ ಬಿತ್ತರಿಸಿದ್ದೇನೆ...
3 comments:
really Its wonderfully.. some people needs like this tipoff articles...So Good Luck...-Pratapkumar.
ಸರ್, ಲೇಖನ ತುಂಬಾ ಚನ್ನಾಗಿದೆ. ಹಂದಿ ಜ್ವರ ಇಷ್ಟು ವೇಗವಾಗಿ ಹರಡಲು ಒಂದು ರೀತಿ ಜನತೆಯ ನಿರ್ಲಕ್ಷ ಹಾಗು ವೈದ್ಯರ ನಿರ್ಲಕ್ಷ ಕೂಡ ಕಾರ ಎನಿಸುತ್ತದೆ... -ಸುಹಾಸಿನಿ, ಮಂಗಳೂರು.
ನಮ್ಮ ಜನರೇ ಹಾಗೆ ಸರ್, ಜನ ಮರುಳೋ ಜಾತ್ರೆ ಮರುಳೆ ಎನ್ನುವಂತೆ ಆಡುತ್ತಾರೆ... ಜನರಿಗೆ ಬುದ್ದಿ ಕಳಿಸುವುದು ತುಂಬಾ ಕಷ್ಟ...ಸಾಗರ್.
Post a Comment