Tuesday, May 26, 2009

ಮಗ್ಗಲು ಬದಲಿಸಲಿ ಅಭಿವೃದ್ಧಿಯ ಪರಿಕಲ್ಪನೆ

ಅಭಿವೃದ್ಧಿ! ಈ ಪದ ಕೇಳಿದಾಗಲೆಲ್ಲ ಜನ ಬೆಚ್ಚಿ ಬೀಳುವಂತಾಗುತ್ತಿದೆ. ಎಲ್ಲವನ್ನೂ ಅನುಮಾನದಿಂದ ನೋಡುವ ಪರಿಪಾಠ ಬೆಳೆಯುತ್ತಿದೆ. ಸರಕಾದಿಂದ ಯಾವುದೇ ಅಭಿವೃದ್ಧಿ ಯೋಜನೆಗಳೇ ಜಾರಿಯಾಗುವುದು ಬೇಡ ಎನ್ನು ಮಟ್ಟಿಗೆ ಭಯ ಜನ ಸಾಮಾನ್ಯರನ್ನು ಕಾಡುತ್ತಿದೆ.
ಇವತ್ತು ಯಾವುದೇ ಸರಕಾರಗಳು ಅಸ್ತಿತ್ವಕ್ಕೆ ಬರಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತವೆ. ಅದನ್ನೇ ಬಂಡವಾಳ ಮಾಡಿಕೊಂಡು ಅಕಾರದ ಗದ್ದುಗೆ ಏರುತ್ತವೆ. ಆದರೆ ಒಬ್ಬೊಬ್ಬರು ಒಂದು ರೀತಿಯ ಮುಖವಾಡ ಧರಿಸುತ್ತಾರೆ ಅಷ್ಟೆ. ಕಾರಣ ಇಷ್ಟೆ , ಎಲ್ಲರೂ ಏಳಿಗೆಯನ್ನು ಬಯಸುತ್ತಾರೆ. ತಮ್ಮ ಈ ‘ಮಂತ್ರ’ಕ್ಕೆ ತಲೆದೂಗಲೇಬೇಕು ಎಂಬುದು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವುದಾದರೂ ಏನು? ಒಮ್ಮೆ ತುಂಬಾ ಸೂಕ್ಷ್ಮವಾಗಿ ತುಲನೆ ಮಾಡಿ ನೋಡಿದರೆ ಪ್ರeವಂತರಾದ ಎಂಥವರಿಗೂ ಭಯ ಕಾಡದೆ ಇರದು.
ರಾಜ್ಯ ಅಥವಾ ಕೇಂದ್ರ ಸರಕಾರ ಒಂದೇ ಒಂದು ಸಣ್ಣ ರಸ್ತೆಯ ಅಭಿವೃದ್ಧಿಕೆ ಕೈ ಹಾಕಿದರೆ ಅಲ್ಲಿ ನೂರಾರು ಮರಗಳ ಮಾರಣ ಹೋಮ ನಿಶ್ಚಿತ. ಇನ್ನು ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡರೆ ಪರಿಸ್ಥಿತಿ ಊಹಿಸಲಸಾಧ್ಯ. ಒಂದು ಮರದ ಕೊಂಬೆಯನ್ನು ಕಡಿಯಲು ಗುತ್ತಿಗೆದಾನಿಗೆ ಪರವಾನಗಿ ನೀಡಿದರೆ ಇಲ್ಲಸಲ್ಲದ ಸಬೂಬು ಹೇಳಿ ಅವನು ಇಡೀ ಮರವನ್ನೇ ಕಡಿದು ಮನೆಗೆ ಸಾಗಿಸಿಬಿಡುತ್ತಾನೆ. ಆದರೆ ಅದರ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಸರಕಾರಗಳಿಗೆ ಅಭಿವೃದ್ಧಿ ಎಂದರೆ ಗೊತ್ತಿರುವುದು ಒಂದೇ ಪರಿಸರವನ್ನು ನಾಶ ಮಾಡಿ ಕಾಂಕ್ರೀಟ್ ಕಾಡು ನಿರ್ಮಾಣ ಮಾಡುವ ಕಲೆ. ಇದರಲ್ಲಿ ಈಗ ಎಲ್ಲ ಮಂತ್ರಿ ಮಹೋದಯರೂ ಕಲಾಕಾರರು. ಕಾರಣ ಮೇಲು ನೋಟಕ್ಕೆ ಅಲ್ಲಿ ಅಭಿವೃದ್ಧಿಯ ಹೆಸರಿದ್ದರೂ ಒಳಗಡೆ ಸ್ವಾರ್ಥ ಭರತನಾಟ್ಯವಾಡುತ್ತಿರುತ್ತದೆ. ಯಾವುದೇ ಅಭಿವೃದ್ಧಿಗೆ ಕೈ ಹಾಕಿದರೂ ಅಲ್ಲಿ ಮರಗಳನ್ನು ಕಡಿಯಲೇ ಬೇಕೆಂಬುದು ಇವರ ಮೂಲ ಮಂತ್ರ. ಕಾಮಗಾರಿಯಿಂದ ಶೇಕಡಾವಾರು ಹಣ ಬರುವುದು ಒಂದೆಡೆಯಾದರೆ ಮರ ಕಡಿಯುವವರು, ಸಿಮೆಂಟ್, ಇಟ್ಟಿಗೆ, ಕಬ್ಬಿಣ ಮುಂತಾದ ಅಗತ್ಯ ಮೂಲ ವಸ್ತುಗಳ ಸರಬರಾಜು ಮಾಡುವ ಗುತ್ತಿಗೆದಾರರಿಂದ ಮಾಮೂಲಿ ವಸೂಲಿ ಮಾಡುವುದು ಇವರ ಎರಡಂಶದ ಕಾರ್ಯಕ್ರಮ. ಇದೆಲ್ಲ ಅವರಿಗೆ ವರ‘ದಾನ’.
ಯಾವುದೇ ಸರಕಾರ ಅಥವಾ ಮಂತ್ರಿಗಳು ಅಭಿವೃದ್ಧಿ ಯೋಜನೆಗೆ ಕೈ ಹಾಕಿದರೆ ಅವರ ಜೇಬು ತುಂಬುವುದು ಶತಸಿದ್ಧ. ಆದರೆ ಅಸಲಿಗೆ ಅಭಿವೃದ್ಧಿ ಎಂದರೇನು ಎಂಬ ಪರಿಕಲ್ಪನೆಯೇ ಯಾರಿಗೂ ಇಲ್ಲ. ಮಾತಿಗಿಳಯುವ ಮುನ್ನ ಮರಗಳ ಮಾರಣ ಹೋಮ ಮಾಡುತ್ತಾರೆ. ಆದರೆ ಯಾರೊಬ್ಬರೂ ಒಂದೇ ಒಂದು ಸಣ್ಣ ಗಿಡವನ್ನು ಬೆಳೆಸಲು ಯೋಜನೆ ರೂಪಿಸುವುದಿಲ್ಲ!
ರಾಜ್ಯದಲ್ಲಿ ಈ ಬಾರಿ ಶೇ.೪೦ ಕಬ್ಬು ಉತ್ಪನ್ನ ಕುಸಿತ ಕಂಡಿದೆ. ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ದೇಶದಲ್ಲಿ ೩೦ ಕೋಟಿ ಜನರಿಗೆ ಮಾನ ಮುಚ್ಚಿಕೊಳ್ಳಲು ಬಟ್ಟೆಯಾಗಲಿ, ಹೊಟ್ಟೆಗೆ ಹಿಟ್ಟಾಗಲಿ ಇಲ್ಲ. ೧೫ಸಾವಿರ ಮಹಿಳೆಯರು ಪ್ರತೀ ವರ್ಷ ವರದಕ್ಷಣೆಯೆಂಬ ಕ್ರೂರಮೃಗಕ್ಕೆ ಬಲಿಯಾಗುತ್ತಲೇ ಇದ್ದಾರೆ. ೧೬ ಕೋಟಿ ದಲಿತರು ಮಾನವ ಗೌರವ ವಂಚಿತ ಬದುಕು ಸಾಗಿಸುತ್ತಿದ್ದಾರೆ. ೨ ಲಕ್ಷ ಮಂದಿ ತಮಗೆ ಅನ್ಯಾಯವಾಗಿದ್ದರೂ ದುಬಾರಿ ನ್ಯಾಯದಿಂದಾಗಿ ನ್ಯಾಯ ವಂಚಿತರಾಗಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಸಾವಿರಾರು ಬುಟಕಟ್ಟು ಸಮುದಾಯಗಳ ಗ್ರಾಮಗಳಿಗೆ ಮೂಲ ಸೌಲತ್ತುಗಳೇ ಇಲ್ಲ. ಇಂಥ ಯಾವುದೇ ವಿಚಾರಗಳು ನಮ್ಮ ಸರಕಾರಗಳಿಗೆ, ಮಂತ್ರಿಗಳಿಗೆ ಅಭಿವೃದ್ಧಿ ಎನಿಸುವುದೇ ಇಲ್ಲ.
ಇಂಥ ನಿಲುವುಗಳು ಒಂದೆಡೆಯಾದರೆ ಅಭಿವೃದ್ಧಿಯ ಹೆಸರಿನಲ್ಲಿ ಇದ್ದ ಸವಲತ್ತುಗಳನ್ನೂ ಕಸಿದುಕೊಂಡು ಅಮಾಯಕರನ್ನು ಬೀದಿಗೆ ಬಿಸಾಕುವ ವ್ಯವಸ್ತೆ ಇನ್ನೊಂದೆಡೆ. ಇವುಗಳಿಂದಾಗಿ ಜನ ಸಾಮಾನ್ಯರು ನಲುಗುತ್ತಿದ್ದರೂ ಅವುಗಳನ್ನು ಕೇಳುವವರಿಲ್ಲ.
ಈ ಸರಕಾರಿ ವ್ಯವಸ್ಥೆ ರೂಪಿಸುವ ಯಾವುದೇ ಯೋಜನೆಗಳಿಗೆ ಜನ ಸಾಮಾನ್ಯರಿಂದ ವಿರೋಧ ವ್ಯಕ್ತವಾಗದೆ ಇರುವುದು ಇಲ್ಲವೇ ಇಲ್ಲ. ಆದರೂ ಜನಪ್ರತಿನಿಗಳಿಗೆ ಇಂಥ ‘ಅಭಿವೃದ್ಧಿ’ ಬೇಕು!! ಈ ವಿಚಾರದ ಬಗ್ಗೆ ಮಾತನಾಡುವಾಗ ಮೊನ್ನೆಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಜನ ತಮ್ಮ ಪಕ್ಷವನ್ನು ಬೆಂಬಲಿಸಲಿಲ್ಲ ಎಂಬ ಕಾರಣಕ್ಕೆ ‘ನಾನು ಬೆಂಗಳೂರು ಅಭಿವೃದ್ಧಿಗೆ ಎಷ್ಟೊಂದು ಶ್ರಮಿಸಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡಿದೆ. ಸಾಕಷ್ಟು ಕಡೆ ಆಧಾಯ ಬರುವಂತೆ ಮಳಿಗೆಗಳನ್ನು ನಿರ್ಮಾಣ ಮಾಡಿದೆ. ಆದರೆ ಜನ ನನ್ನನ್ನು ಮರೆತರು. ಅದು ತುಂಬಾ ನೋವುಂಟು ಮಾಡಿದೆ’ ಎಂದು ಅಳಲು ತೋಡಿಕೊಂಡಿದ್ದು ನೆನಪಾಗುತ್ತದೆ. ಒಬ್ಬ ರಾಜಕಾರಣಿಯ ದೃಷ್ಟಿಯಲ್ಲಿ ನಗರದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಅಭಿವೃದ್ಧಿ! ಆದರೆ ಜನ ಸಾಮನ್ಯನ ದೃಷ್ಟಿಯಲ್ಲಿ? ಈ ಪ್ರಶ್ನೆಗೆ ಉತ್ತರ ಹುಡುಕುವವರೆ ಇಲ್ಲವಾಗಿದೆ.
ಶತಮಾನಗಳ ಹಿಂದೆ ಶಿವಮೊಗ್ಗದಲ್ಲಿ ಲಿಂಗನಮಕ್ಕಿ, ಚಕ್ರ ಸಾವೆ ಹಕ್ಲು ಡ್ಯಾಂಗಳನ್ನು ಕಟ್ಟಲು ಸರಕಾರ ಹತ್ತಾರು ಕುಗ್ರಾಮಗಳನ್ನು ಒಕ್ಕಲೆಬ್ಬಿಸಿತು. ಅದಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆಲ್ಲ ಪರಿಹಾರದ ಆಮಿಷ ತೋರಿಸಿತು. ಕೊನೆಗೂ ಸರಕಾರವೇ ಗೆದ್ದಿತು. ಅಲ್ಲಿನ ಮಲೆನಾಡ ಜನ ತಾವು ಆಡಿ ಬೆಳೆದ, ಮನೆ, ಹೊಲ, ಪರಿಸರವನ್ನೆಲ್ಲ ಬಿಟ್ಟು ಬಂದರು. ಇವತ್ತು ಅದು ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಆದರೆ ಇವತ್ತಿಗೂ ಪರಿಹಾರವೆಂಬುದು ಮರೀಚಿಕೆ. ಕೊನೆಗೂ ಸೂತಿದ್ದು ಜನರೆ.
ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವಾಗಲೂ ವ್ಯಾಪಕ ವಿರೋಧ ವ್ಯಕ್ತವಾಯಿತು. ಆದರೆ ಅಲ್ಲೂ ಜನ ಸೋತರು. ಅಲ್ಲಿ ಕೂಡ ಬಹುತೇಕ ಜನರಿಗೆ ಪರಿಹಾರ ಕನಸಾಗಿಯೇ ಉಳಿದಿದೆ.
ಪಶ್ಚಿಮ ಬಂಗಾಳದ ನಂದಿ ಗ್ರಾಮದಲ್ಲಿ ಇದೇ ವಿಚಾರದ ವಿರುದ್ಧ ಜನ ಗೆಲ್ಲಲು ತಿಂಗಳಾನುಗಟ್ಟಲೆ ಹೋರಾಟ ಮಾಡಿದ್ದಲ್ಲದೆ ಕೊನೆಗೆ ಹಿಂಸಾ ಮಾರ್ಗಕ್ಕೆ ಇಳಿಯಬೇಕಾಯಿತು. ಅಷ್ಟು ದೂರದ ಮಾತೇಕೆ ರಾಜ್ಯದ ಶಿವಮೊಗ್ಗ, ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ವಿಚಾರದಲ್ಲೂ ಆಗಿದ್ದು ಇದೇ. ಜನ ಎಷ್ಟೇ ವಿರೋಸಿದರೂ ಜನಪ್ರತಿನಿಗಳು ಮಾತ್ರ ತಮ್ಮ ಪಟ್ಟು ಬಿಡುವುದೇ ಇಲ್ಲ. ಅವರಿಗೆಲ್ಲ ಇದು ‘ಅಭಿವೃದ್ಧಿ’.
ಈಗ ಕೋಲಾರದಲ್ಲಿ ತೋಟಗಾರಿಕೆ ವಿವಿ ಸ್ಥಾಪನೆ ವಿಚಾರದಲ್ಲಿ ಆಗುತ್ತಿರುವುದೂ ಅದೇ. ೫೦೦ ಎಕರೆ ವಿಸ್ತೀರ್ಣವಿರುವ ಶ್ರೀನಿವಾಸಪುರದ ಹೊಗಳಗೆರೆ ಫಾರಂನ್ನು ವಿವಿ ಸ್ಥಾಪನೆಗಾಗಿ ಗುರುತಿಸಿದ್ದರೂ ಜಿಲ್ಲಾ ಕೇಂದ್ರಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದೆ ಎಂಬ ಕಾರಣಕ್ಕೆ ಕೇವಲ ೪೦ ಎಕರೆ ಇರುವ ಹಲಸು ತಳಿ ಅಭಿವೃದ್ಧಿ ಕ್ಷೇತ್ರದಲ್ಲಿಯೇ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸರಕಾರ ಚಿಂತನೆ ನಡೆಸುತ್ತಿದೆ. ಯಥಾ ಪ್ರಕಾರ ಇಲ್ಲೂ ಜನ ಬೀದಿಗಿಳಿದಿದ್ದಾರೆ.
ಡ್ಯಾಂ, ನದಿಜೋಡಣೆ, ವಿದ್ಯುತ್ ಉತ್ಪಾದನಾ ಘಟಕ, ವಿಶೇಷ ವಿತ್ತ ವಲಯ, ಕೇಗಾರಿಕೆ ಕೇಂದ್ರ ಹೀಗೆ ಯಾವುದೇ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡರೂ ಸರಕಾರದ ಕೈ ಹೋಗುವುದು ರೈತರ ಜಮೀನಿಗೇ. ಹೀಗಾಗಿಯೇ ಈಗ ಆಹಾರೋತ್ಪಾದನೆ ಹಾಗೂ ಆಹಾರ ಉತ್ಪನ್ನಗಳ ಖರ್ಚಿನಲ್ಲಿ ಸಾಕಷ್ಟು ಏರುಪೇರಾಗಿ ಬೆಲೆಗಳು ಗಗನಕ್ಕೇರಿವೆ.
ಅಭಿವೃದ್ಧಿ ಎಂದರೆ ಕೇವಲ ಮರ ಕಡಿಯುವುದು, ರೈತರು, ಬುಡಕಟ್ಟು ಜನರಂಥ ಅಮಾಯಕರನ್ನು ಒಕ್ಕಲೆಬ್ಬಿಸಿ ಅವರ ಆಸ್ತಿಪಾಸ್ತಿಗಳನ್ನು ನುಂಗಿ ನೀರುಕುಡಿಯುವುದೇ ಆದರೆ ಇದನ್ನು ಅಭಿವೃದ್ಧಿ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ? ಯಾವುದೇ ಒಂದು ಅಭಿವೃದ್ಧಿಯಿಂದ ಜನಸಾಮಾನ್ಯರು ನೆಮ್ಮದಿಯಿಂದ, ನಿಶ್ಚಿಂತರಾಗಿ ಬದುಕುವಂತಾಗಬೇಕೆ ಹೊರತು, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳುವಂತಾಗಬಾರದು.
ಈ ಪರಿಕಲ್ಪನೆ ಹೀಗೆಯೇ ಮುಂದುವರಿದರೆ ಉಸಿರಾಟಕ್ಕಾಗಿ ಬೇರೊಂದು ಕೃತಕ ಮಾರ್ಗ ಕಂಡುಕೊಳ್ಳಬೇಕಾದ ಪರಿಸ್ಥಿತಿಯನ್ನು ನಾವೇ ತಂದುಕೊಳ್ಳಬೇಕಾಗುತ್ತದೆ. ಹಸಿರು ಗಿಡ ಮರಗಳನ್ನು ಕೇವಲ ಚಿತ್ರಗಳಲ್ಲಿ ಮಾತ್ರ ಮುಂದಿನ ಪೀಳಿಗೆ ನೋಡುವಂಥ ಭಯಾನಕ ಪರಿಸ್ಥಿತಿಯನ್ನು ನಾವು ಸೃಷ್ಟಿಸಿಕೊಂಡಂತಾಗುತ್ತದೆ. ಹೀಗಾಗಿ ಈ ಪರಿಕಲ್ಪನೆಯನ್ನೇ ಬದಲಿಸುವ ತುರ್ತು ಅಗತ್ಯವಿದೆ. ನೀವೇನಂತೀರಿ....?

2 comments:

ಕಿರಣ ಮಾರಶೆಟ್ಟಿಹಳ್ಳಿ said...

hay ramesh,

namma deshada nayakarige, e deshakke bekaada "abhivruddi neeti"yannu roopisalu saadhyavaagilla.yekendare bahalashtu mandige adhikaara endare tamma gantu tumbikolluvudu mattu shuddha hastaviruva prabhavi naayakaru bandavaalashahiya gulamarante vartisuttiruvudu e bruhut deshada duranta. avarige gurugalu samrajyashahi dashagalavaru aaguttaareye vinaha e manninalle hutti, illiya praadeshikatege sariyaada arthikate-saamajikateyannu chintisida buddha, basavanna, gandhi, ambedkar.... intavaru maargadarshakaraaguvudilla.... bruhut bandavala hoodidare maatra adu "abhivruddi", chikka swavalambi yojanegalu "abhivruddi" alla emba kalpane namma janarige.. idu badalaadare "abhivruddi"ya parikalpaneya maggulu badalaagabahudu.... neevenantiri...?

Unknown said...

HAI FRIEND SUPERAGIDE

Powered By Blogger