
ಚೀನಾಗೆ ರಾಜಕಾರಣಿಗಳ ಜಾಲಿ ರೈಡ್!
ಬಿಜೆಪಿ ಕಾರ್ಯಕರ್ತರಿಗೆ, ಪುಡಾರಿ ರಾಜಕಾರಣಿಗಳಿಗೆ ಇದೀಗ ಸುಗ್ಗಿ. ಅಕಾರ ವಹಿಸಿಕೊಂಡ ಆರೇ ತಿಂಗಳಲ್ಲಿ ಮೂರು ಬಾರಿ ವಿದೇಶ ಪ್ರಯಾಣ ಮಾಡಿ ಜತೆಗೆ ಡಾಕ್ಟರೇಟ್ ದೋಚಿಕೊಂಡು ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದೀಗ ತಮ್ಮ ಕಾರ್ಯಕರ್ತರಿಗೂ ವಿದೇಶ ಪ್ರಯಾಣದ ರುಚಿ ತೋರಿಸಲು ಅಣಿಯಾಗಿದ್ದಾರೆ.
ಆರಂಭದಿಂದ ಇಲ್ಲಿಯವರೆಗೆ ಕೇವಲ ರೈತರ ಹೆಸರಿನಲ್ಲೆ ರಾಜಕೀಯ ಬೇಳೆ ಬೇಯಿಸಿಕೊಂಡು ಬಂದ ಯಡಿಯೂರಪ್ಪ ಈಗಲೂ ರೈತರ ಹೆಸರಿನಲ್ಲಿಯೇ ವಂಚನೆಗೆ ಇಳಿದಿದ್ದಾರೆ. ನಿಜಕ್ಕೂ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಎನ್ನುವುದಿದ್ದರೆ, ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಅದನ್ನು ಇಲ್ಲಿ ಕಾರ್ಯಗತ ಮಾಡಿ ತೋರಿಸಬಹುದಿತ್ತು. ಅದಕ್ಕೆ ಆರು ತಿಂಗಳು ಬೇಕಿರಲಿಲ್ಲ. ಕೈಲಿ ಅಕಾರ ಇರುವಾಗ ಕೇವಲ ಒಂದು ದಿನ ಸಾಕಿತ್ತು .
ಆದರೆ ಅಸಲಿಗೆ ಯಡಿಯೂರಪ್ಪನವರಿಗೆ ಆಗಬೇಕಿರುವುದು ರೈತರ ಉದ್ಧಾರವಲ್ಲ. ಅವರ ಹೆಸರಿನಲ್ಲಿ ತಮ್ಮ ಬೇಳೆ ಬೇಯ್ಯಬೇಕಷ್ಟೆ . ಭಾರತದ ಕೃಷಿಗೆ ಪುರಾತನ ಹಿನ್ನೆಲೆ ಇದೆ. ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳ ಕುತಂತ್ರಕ್ಕೆ ಬಲಿಯಾಗಿ ಈಗ ಇಡೀ ದೇಶದ ಕೃಷಿ ಪದ್ಧತಿ ಹಳ್ಳ ಹತ್ತಿದೆ. ರೈತರು ಕುಟುಂಬ ಸಮೇತ ಬೀದಿಗೆ ಬಿದ್ದಿದ್ದಾರೆ. ತಾವೇ ಬೆಳೆದ ಬೀಜಗಳನ್ನು ಬಿತ್ತನೆಗೆ ಇಟ್ಟುಕೊಂಡು, ಉಳಿದವನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ರೈತರ ಜೀವನ ಶೈಲಿ ಈಗ ಅದೇ ಚೀನಾ, ಅಮೆರಿಕ, ರಷ್ಯಾ, ಇಟಲಿಯಂತ ರಾಷ್ಟ್ರಗಳ ಕೈಗೆ ಸಿಕ್ಕಿ ನುಚ್ಚು ನೂರಾಗಿದೆ.
ಅಲ್ಲಿನ ಬುಹು ರಾಷ್ಟ್ರೀಯ ಕಂಪೆನಿಗಳು ಹೂಡಿದ ತಂತ್ರಕ್ಕೆ ಇಲ್ಲಿನ ಅಮಾಯಕ ರೈತರು ಮಾರು ಹೋಗಿ ಈಗ ತಾವೇ ಬೆಳೆದ ಬೆಳೆ ತಮಗೇ ತಿನ್ನಲು ಸಿಗುತ್ತಿಲ್ಲ. ಪ್ರತೀವರ್ಷ ಬಹುರಾಷ್ಟ್ರೀಯ ಕಂಪೆನಿಗಳು ತಯಾರಿಸಿದ ಕೆಮಿಕಲ್‌ಯುಕ್ತ ಬೀಜಗಳನ್ನು ಬಿತ್ತಿ ಬೆಳೆ ತೆಗೆಯಬೇಕಿದೆ.
ಕ್ಷಮಿಸಿ, ಈ ಬೀಜಗಳನ್ನು ಕೇವಲ ಬಿತ್ತಿದ ಮಾತ್ರಕ್ಕೆ, ಸರಿಯಾಗಿ ನೀರು ಉಣಿಸಿದ ಮಾತ್ರಕ್ಕೆ ಬೆಳೆ ಬಂದು ಬಿಡುವುದಿಲ್ಲ. ಅದಕ್ಕೆ ಅದೇ ರಾಷ್ಟ್ರಗಳು ತಯಾರಿಸುವ ಗೊಬ್ಬರ ಹಾಕಬೇಕು. ಔಷಧ ಸಿಂಪಡಿಸಬೇಕು ! ಅಬ್ಬಾ ಎಂಥ ಭಯಾನಕ ಕುತಂತ್ರ...?
ನಮ್ಮದೇ ಬೀಜಗಳನ್ನು ಇಪ್ಪತ್ತು ವರ್ಷಗಳ ಹಿಂದೆ ಆಮದು ಮಾಡಿಕೊಳ್ಳುತ್ತಿದ್ದ ಅನ್ಯ ದೇಶಗಳ ಕಂಪೆನಿಗಳು ಈಗ ಅದೇ ಬೀಜಗಳನ್ನು ಇಲ್ಲಿಗೆ ದುಪ್ಪಟ್ಟು ಹಣಕ್ಕೆ ರವಾನೆ ಮಾಡುತ್ತಿವೆ. ಕೇವಲ ಹತ್ತು ವರ್ಷದಲ್ಲಿ ಇಡೀ ನಮ್ಮ ನೆಲ ಬಂಜರಾಗಿ, ಯಾವುದೇ ಬೀಜವನ್ನು ಬಿತ್ತಿದರೂ ಅದಕ್ಕೆ ರಸಗೊಬ್ಬರ ಬಳಸಲೇಬೇಕಾದ ಅನಿವಾರ್ಯತೆ ಸೃಷ್ಟಿವೆ.
ಇದಕ್ಕೆಲ್ಲಾ ಇಲ್ಲಿನ ಮಾನಗೆಟ್ಟ ಸರಕಾರಗಳೇ ಕಾರಣ. ಹಸಿರು ಕ್ರಾಂತಿಯ ಹೆಸರಿನಲ್ಲಿ ರೈತರ ದಿಕ್ಕು ತಪ್ಪಿಸಿದ್ದ ಸರಕಾರಗಳು ಈಗ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ಯಡಿಯೂರಪ್ಪ ಈಗ ಮಾಡುತ್ತಿರುವುದು ಅದನ್ನೇ. ಆದರೆ ಸ್ವಲ್ಪ ಡಿಫರೆಂಟ್. ಹಿಂದಿನ ಸರಕಾರಗಳು ರಾತ್ರಿ ದರೋಡೆ ಮಾಡಿದರೆ, ಯಡಿಯೂರಪ್ಪ ಹಗಲು ದರೋಡೆಗೆ ಇಳಿದಿದ್ದಾರೆ ಅಷ್ಟೆ .
ಚೀನಾದ ನೆಲದಲ್ಲಿ ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಅಲ್ಲಿನ ರೈತರು ಬೆಳೆಯುವ ಕೃಷಿ ಪದ್ಧತಿಯನ್ನು ಇಲ್ಲಿನ ರೈತರಿಗೆ ತೋರಿಸುವುದಾಗಿ ಹೇಳಿ ರೈತರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಈ ಯೋಜನೆ ರೂಪಿಸುವ ಮುಂಚೆ ಯಡಿಯೂರಪ್ಪ ಕಿಂಚಿತ್ತಾದರೂ ಯೋಚಿಸಬಹುದಿತ್ತು. ನಿಜಕ್ಕೂ ಯಡ್ಡಿ ರೈತನ ಮಗನಾಗಿದ್ದರೆ ಅದು ಗೊತ್ತಾಗುತ್ತಿತ್ತು. ಇಲ್ಲಿನ ಪರಿಸರದ ಕೃಷಿಗೂ ಅಲ್ಲಿನ ಕೃಷಿ ಪದ್ಧತಿಗೂ ಅಜಗಜಾಂತರ ವ್ಯತ್ಯಾಸವಿದೆ !
ಯಡಿಯೂರಪ್ಪ ರೈತನ ಮಗ(!?). ಬಹುಶಃ ಅದು ಅವರಿಗೂ ಗೊತ್ತಿರಬಹುದು. ಅದಕ್ಕೇ ಅವರು ರೈತರ ಹೆಸರಿನಲ್ಲಿ ಬಿಜೆಪಿ ಮುಖಂಡರನ್ನು , ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟದ ರಾಜಕಾರಣಿಗಳು, ಕಾರ್ಯಕರ್ತರನ್ನು ಕರೆದುಕೊಂಡು ಚೀನಾ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಅದು ಮೋಜು, ಮಸ್ತಿಗಾಗಿ.
ರಾಜಕೀಯ ಗಿಮಿಕ್ಕು :
ಈ ಕಾರ್ಯಕರ್ತರಲ್ಲಿ ಕೇವಲ ಬಿಜೆಪಿ ಕಾರ್ಯಕರ್ತರು ಮಾತ್ರ ಇಲ್ಲ. ಎಲ್ಲ ಪಕ್ಷಗಳ ಕಾರ್ಯಕರ್ತರೂ ಇದ್ದಾರೆ! ಆದರೆ ಒಬ್ಬನೇ ಒಬ್ಬ ನಿಜವಾದ ರೈತನೂ ಇಲ್ಲ. ಈಗಿನ ವಿಧಾನಸಭೆ ಮರು ಚುನಾವಣೆ ಹಾಗೂ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಯಡಿಯೂರಪ್ಪ ಈ ಪ್ರವಾಸಕ್ಕೆ ಕೈ ಹಾಕಿದ್ದಾರೆ.ಶಾಸಕರನ್ನು ಈಗಾಗಲೇ ಖರೀದಿಸುವ ಮೂಲಕ ತಮ್ಮ ಕಡೆ ಸೆಳೆದುಕೊಂಡಿರುವ ಯಡಿಯೂರಪ್ಪ, ತಳ ಮಟ್ಟದಲ್ಲಿ ಕಾರ್ಯಕರ್ತರನ್ನು ಆಸೆ ಆಮಿಷಗಳ ಮೂಲಕ ತಮ್ಮತ್ತ ಎಳೆದುಕೊಳ್ಳಲು ಈ ಕುತಂತ್ರ ಮಾಡಿದ್ದಾರೆ. ಚೀನಾದ ನೆಲದಲ್ಲಿ ಇಲ್ಲಿನ ಪಡ್ಡೆ ರಾಜಕಾರಣಿಗಳಿಗೆ ಮೋಜು ಮಾಡಿಸಲು ಈ ಪ್ರವಾಸ... ಇದು ಒಂದು ರೀತಿ ಹಿಂದಿನ ‘ರೆಸಾರ್ಟ್ ರಾಜಕಾರಣ’ದಂತೆ ‘ಜಾಲಿರೈಡ್ ರಾಜಕಾರಣ’. ಪಾಪ , ಅದು ನಮ್ಮ ಬಡ ರೈತರಿಗೆ ಎಲ್ಲಿಂದ ಅರ್ಥವಾಗಬೇಕು...? ಏನೆ ಆಗಲಿ ಯಡ್ಡಿ ನಿಜಕ್ಕೂ ಬುದ್ದಿಶಾಲಿ ಬಿಡಿ.