Thursday, September 10, 2009

ಪುಸ್ತಕ ಪ್ರೀತಿ ಸಾರಿದ ಮದುವೆ

ಸಾಮಾನ್ಯವಾಗಿ ಮದುವೆಎಂಬ ಮಧುರ ಪದ ಕೇಳುತ್ತಿದ್ದ ಹಾಗೆಯೇ ಬಹಳಷ್ಟು ಜನರ ಮೈ ರೋಮಾಂಚನಗೊಳ್ಳುತ್ತದೆ. ಮತ್ತೆ ಕೆಲಸವರ ಮನ ಮುಂಜಾನೆಯ ಮಂಜಿನ ಹಾಗೆ ತಂಪಾಗುತ್ತದೆ. ಮತ್ತೆ ಕೆಲವರಿಗೆ ಕನಸುಗಳು ಗರಿಗೆದರುತ್ತವೆ. ಮನಸಿನ ಹಾಸಿಗೆಯಲ್ಲಿ ಹೂಮಳೆ ಚೆಲ್ಲುತ್ತದೆ. ಹೀಗೆ ಒಬ್ಬೊಬ್ಬರ ಮನದಲ್ಲು ಒಂದೊಂದು ಭಾವನಾ ಲಹರಿ ಪಾರಿಜಾತವಾಗಿ ಹಾರಾಡುತ್ತದೆ.
ಆದರೆ ಮದುವೆ ಜೀವನದ ಒಂದು ಮಧುರ ಕ್ಷಣ ನಿಜ, ಆದರೆ ಅದು ಆಡಂಭರವಾಗಿಯೇ ಇರಬೇಕು ಎಂದು ಬಹಳಷ್ಟು ಜನ ಇಷ್ಟಪಡುತ್ತಾರೆ. ಮದುವೆಗೆ ಬಂದವರಿಗೆ ಒಳ್ಳೊಳ್ಳೆ ಉಡುಗೊರೆ ಕೊಡಬೇಕು ಎಂದು ಸಾಮಾನ್ಯ ವರ್ಗದವರೂ ಅಂದುಕೊಳ್ಳುವುದು ಸಾಮಾನ್ಯ. ಇನ್ನು ಉಳ್ಳವರಂತೂ ಅದೇ ತಮ್ಮ ಶ್ರೀಮಂತಿಕೆಯ ತೋರಿಕೆಗೆ ‘ಸಾಕ್ಷಿ’ಯಾಗಲಿ ಎಂದುಕೊಳ್ಳುತ್ತಾರೆ.
ಜೀವನದ ಆ ಸುಮಧುರ ಗಳಿಗೆಯನ್ನು ಜೀವನ ಪೂರ್ತಿ ತಾವು ಮಾತ್ರವಲ್ಲ, ಇತರರೂ ನೆನಪಿನಲ್ಲಿಟ್ಟುಕೊಂಡು ಬದುಕುವಂತೆ ಸ್ಪೂರ್ತಿ ನೀಡುವ ಮಂದಿ ಬಹಳ ವಿರಳ. ಅಂಥವರ ಸಾಲಿನಲ್ಲಿದ್ದಾರೆ ಸ್ನೇಹಿತ ಕೆ.ವಿ.ಧರಣೇಶ್. ಸದ್ಯಕ್ಕಿವರು ‘ವಿಜಯ ಕರ್ನಾಟಕ’ದಲ್ಲಿ ಪೇಜಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಹಾಗೇ ಸುಮ್ಮನೆ ಕೈಗೆ ಸಿಕ್ಕ ಒಂದು ಚಿಕ್ಕ ಹೊತ್ತಿಗೆಯನ್ನು ಕಣ್ಣಾಯಿಸಿದಾಗ ನಿಜಕ್ಕೂ ಆಶ್ಚರ್ಯ ! ಆ ಕಾರಣಕ್ಕಾಗಿಯೇ ಸುಮಾರು ೯ ವರ್ಷಗಳ ಹಿಂದಿನ ಘಟನೆಯೊಂದನ್ನು ಇಲ್ಲಿ ಮೆಲುಕು ಹಾಕುತ್ತಿದ್ದೇನೆ.
ನನ್ನ ಕೈಗೆ ಸಿಕ್ಕ ಆ ಕಿರು ಹೊತ್ತಿಗೆಯ ಹೆಸರು ವಚನ ತಾಂಬೂಲ". ಮದುವೆಗೆ ಬರುವ ಎಲ್ಲರಿಗೂ ಸಾಮಾನ್ಯವಾಗಿ ಅಡಕೆ, ಎಲೆ, ಸುಣ್ಣ ಅಥವಾ ಒಂದು ಕಾಯಿಯನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಇದು ಸಾಮಾನ್ಯ ವರ್ಗದ ಕುಟುಂಬಗಳ ಕಾರ್ಯವೈಖರಿ. ಆದರೆ ಶ್ರೀಮಂತರ ಮಾತು ಬೇರೆ ಬಿಡಿ.
ಇಲ್ಲಿ ಧರಣೇಶ್ ಕೂಡ ಶ್ರೀಸಾಮಾನ್ಯ ಕುಟುಂಬದಿಂದಲೇ ಬಂದವರು. ಆದರೆ ೨೦೦೦ನೇ ಇಸ್ವಿ ಸೆಪ್ಟಂಬರ್ ೬ರಂದು ಚಿತ್ರದುರ್ಗದಲ್ಲಿ ನಡೆದ ತಮ್ಮ ಮದುವೆಯಲ್ಲಿ ಇವರು ಉಡುಗೊರೆ ನೀಡಿದ್ದು ಇದೇ ‘ವಚನ ತಾಂಬೂಲ’ವನ್ನು... ನಿಜಕ್ಕೂ ನಾವೆಲ್ಲಾ ಈಗ ಪುಸ್ತಕ ಪ್ರೀತಿ ಕಡಿಮೆಯಾಗುತ್ತಿದೆ. ಸಿನಿಮಾ, ದೂರದರ್ಶನ ಹಾಗೂ ಪಾಶ್ಚಾತ್ಯೀಕರಣದ ಸಾಂಸ್ಕೃತಿಕ ದಾಳಿಗೆ ಸಿಕ್ಕಿ ಯುವಜನತೆ ದಿಕ್ಕು ತಪ್ಪುತ್ತಿದೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತೇವೆ. ಆದರೆ ಅದರ ಉಳಿವಿಗೆ ಮಾಡಬೇಕಾದದ್ದು ಏನು ? ಎಂಬುದನ್ನು ಒಂದೇ ಒಂದು ಕ್ಷಣ ಕೂಡ ಯೋಚಿಸುವುದಿಲ್ಲ. ಆದರೆ ಧರಣೇಶ್ ಬೇರೆಯವರನ್ನು ನಿಂಸುವ ಗೊಡವೆಗೇ ಹೋಗದೆ ಸದ್ದಿಲ್ಲದೆ ತಮ್ಮ ಮದುವೆಗೆ ಬಂದ ಎಲ್ಲರಿಗೂ ‘ವಚನ ತಾಂಬೂಲ’ ನೀಡಿ ಪುಸ್ತಕ ಪ್ರೀತಿ ಮೆರೆದಿದ್ದಾರೆ. ಅವರಿಗೆ ನಿಜಕ್ಕೂ ಹ್ಯಾಟ್ಸ್ ಆಫ್...
ಈ ಕಿರು ಹೊತ್ತಿಗೆಯಲ್ಲಿ ಆರಂಭದಲ್ಲಿಯೇ ಮುರುಘ ರಾಜೇಂದ್ರ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮೀಜಿಯ ಲೋಕ ಸಂದೇಶವಿದೆ. ಬಸವ ತತ್ತ್ವದ ಸೂತ್ರಗಳಿವೆ. ಚನ್ನಬಸವಣ್ಣ, ಶರಣೆ ಸತ್ಯಕ್ಕ, ಶರಣೆ ಆಯ್ದಕ್ಕಿ ಲಕ್ಕಮ್ಮ, ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಷಣ್ಮುಖ ಶಿವಯೋಗಿಗಳು, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಮೊಗ್ಗೆಯ ಮಾಯಿದೇವರು, ಅಲ್ಲಮ ಪ್ರಭುದೇವರು, ಸರ್ವಜ್ಞನವರ ವಚನಗಳನ್ನು ಮುದ್ರಿಸಿ ಕಿರು ಹೊತ್ತಿಗೆ ಮಾಡಿ, ಎಲ್ಲರಿಗೆ ಹಂಚಲಾಗಿದೆ. ಇದು ನಿಜಕ್ಕೂ ಅರ್ಥಪೂರ್ಣ ನಿಲುವು. ಅಂದ ಹಾಗೆ ಅವರ ಕೈ ಹಿಡಿದಿದ್ದು ಸಿ.ಜೆ.ಪದ್ಮಾ. ಪುಸ್ತಕ ಪ್ರೀತಿಯನ್ನು ಸದ್ದಿಲ್ಲದೆ ಪಸರಿಸಿದ ಈ ದಂಪತಿ ಶೀಘ್ರದಲ್ಲಿಯೇ ದಶಮಾನೋತ್ಸವ ಆಚರಿಸಲಿದ್ದಾರೆ... ಅವರಿಗೆ ಮತ್ತೊಂದು ಹ್ಯಾಟ್ಸ್ ಆಫ್...

Sunday, September 6, 2009

ಬಂದಿದೆ ರೆಡಿಮೇಡ್ ‘ಹಸಿರು ಹಾಸಿಗೆ’

ಕೃಷಿ ಕ್ಷೇತ್ರದಲ್ಲಿ ಇದೊಂದು ಹೊಸ ಆವಿಷ್ಕಾರ. ಒಂದೆಡೆ ಹಸಿರು ಮಾಯವಾಗುತ್ತಿದ್ದರೆ ಈಗಿನ ದುನಿಯಾಗೆ ಅನುಕೂಲವಾಗುವ ಹಾಗೆ ಹಸಿರು ಬೆಳೆಸುವ ಹೊಸ ಆವಿಷ್ಕಾರಕ್ಕೆ ಕೇಂದ್ರ ನಾರು ಮಂಡಳಿ ಕೈ ಹಾಕಿದೆ. ಆಧುನಿಕತೆಗೆ ಎಷ್ಟೇ ಒಗ್ಗಿಕೊಂಡಿದ್ದರೂ ಮನುಷ್ಯನಿಗೆ ಹಸಿರಿನಿಂದ ದೂರ ಇರುವ ಸಾಮರ್ಥ್ಯವೇ ಇಲ್ಲ ಎಂಬುದು ನಿಶ್ಚಿತ. ಅದನ್ನು ಮನಗಂಡಿರುವ ಇಲ್ಲಿನ ಸಂಶೋಧಕರು ಆಧುನಿಕ ಜಗತ್ತಿಗೆ ಸರಿ ಹೊಂದುವಂಥ ‘ಹುಲ್ಲಿನ ಹಾಸಿಗೆ’ ತಯಾರಿಸಿದ್ದಾರೆ!
ಆಶ್ಚರ್ಯ ಆಗುತ್ತಿದೆಯೇ ? ನಿಜ, ಇದು ರೆಡಿಮೇಡ್ ಹಸಿರು ಹಾಸಿಗೆ (Green Lawn). ಹಸಿರು ನೆಲವೇ ಕಾಣದ ಈ ದಿನಮಾನಗಳಲ್ಲಿ ಪ್ರತಿ ಮನೆಗೂ ಹೊಂದಿಕೊಳ್ಳುವಂಥ ನೈಸರ್ಗಿಕ ಹಸಿರು ಹಾಸಿಗೆಯನ್ನು ತಯಾರಿಸುವ ತಂತ್ರeನವನ್ನು ನಾರು ಮಂಡಳಿಯ ಸಂಶೋಧಕರು ಕಂಡು ಹಿಡಿದಿದ್ದು, ಅದಕ್ಕೆ ಪೇಟೆಂಟ್ ಕೂಡ ಪಡೆದಿದ್ದಾರೆ. ಕೇರಳದ ಯಾಲಪಿಯಲ್ಲಿರುವ ಕೇಂದ್ರೀಯ ನಾರು ಸಂಶೋಧನ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಈ ಆವಿಷ್ಕಾರ ಮಾಡಲಾಗಿದ್ದು, ಈಗ ಕರ್ನಾಟಕದಲ್ಲೂ ಇದರ ಪ್ರಯೋಗವಾಗಿದೆ. ಈಗಾಗಲೇ ಮೂವರು ಇದರ ಸೌಲಭ್ಯ ಪಡೆದಿದ್ದಾರೆ.
ಭಾರತದಲ್ಲಿ ನ್ಯಾಷನಲ್ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಾಗೂ ನಾರು ಮಂಡಳಿ ಎರಡೂ ಕಡೆ ಇದನ್ನು ಹೇಗೆ ರೂಪಿಸುವುದು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಹಾಸಿಗೆ ರೆಡಿ ಮಾಡಲು ಕೆಲವು ತಂತ್ರeನಗಳಿವೆ. ಅದನ್ನು ಅದೇ ಮಾದರಿಯಲ್ಲಿ ತಯಾರಿಸಬೇಕು. ಹೀಗಾಗಿ ಇದಕ್ಕೆ ಪರವಾನಗಿ ಪಡೆದು ಆರ್ಥಿಕ ಒಪ್ಪಂದಕ್ಕೆ (MOU)ಸಹಿ ಹಾಕಬೇಕು. ಜತೆಗೆ ತರಬೇತಿಯನ್ನು ಪಡೆಯಬೇಕು. ಅದನ್ನು ನಾರು ಮಂಡಳಿ ಹಾಗೂ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಮಾಡುತ್ತಿವೆ.
ಇದರಿಂದ ಅನುಕೂಲಗಳು:
ನಾರು ಹಾಗೂ ನಾರಿನ ಪುಡಿಯನ್ನು ಹಾಸಿಗೆ ರೂಪದಲ್ಲಿ ಬಳಸಿ ಹಸಿರನ್ನು ಬೆಳೆಸಲಾಗುತ್ತದೆ. ಇದರಲ್ಲಿ ಗರಿಕೆ ಸೇರಿದಂತೆ ಎಲ್ಲ ರೀತಿಯ ಹುಲ್ಲು ಹಾಸಿಗೆಯನ್ನೂ ತಯಾರಿಸಬಹುದು. ಒಂದೇ ಬಾರಿ ಹಲವು ಹಂತಗಳಲ್ಲಿ ಹಾಸಿಗೆ ತಯಾರಿಸಬಹುದು. ಇದರ ಮೇಲೆ ಹುಲ್ಲುಬೆಳೆಯಲು ಕನಿಷ್ಠ ಒಂದರಿಂದ ಒಂದೂವರೆ ತಿಂಗಳು ಬೇಕು. ಈ ಹಾಸಿಗೆಯಲ್ಲಿ ಹುಲ್ಲು ಬೆಳೆದ ನಂತರ ಅದನ್ನು ಬೆಡ್ ಶೀಟ್ ರೀತಿ ಮಡಚಿ ಇಡಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಲೀಸಾಗಿ ಇದನ್ನು ಸುತ್ತಿಕೊಂಡು ಹೋಗಬಹುದು ಅಥವಾ ಸ್ಥಳಾಂತರಿಸಬಹುದು. ಜತೆಗೆ ಯಾವ ಸ್ಥಳಕ್ಕೆ ಬೇಕೋ ಹಾಗೆ ಈ ಹುಲ್ಲನ್ನು ಕಟ್ ಮಾಡಿ ಜೋಡಿಸಬಹುದು. ಮನೆ ಮುಂದೆ ಈ ಹಾಸಿಗೆ ಜೋಡಿಸಿದರೆ ಇಡೀ ಮನೆ ಬೃಂದಾವನ !
ಈ ಹುಲ್ಲಿನ ಹಾಸಿಗೆಯನ್ನು ಕೇವಲ ಸಾಮಾನ್ಯ ಮನೆಗಳ ಮುಂದೆ ಹೊರಾಂಗಣಕ್ಕೆ ಮಾತ್ರವಲ್ಲ, ಮಹಡಿ ಮನೆಯಲ್ಲೂ ಅಲಂಕಾರಕ್ಕಾಗಿ ಬಳಸಬಹುದು. ಕಾಲುದಾರಿಯಲ್ಲೂ ಬಳಸಬಹುದು. ಮನೆಯ ಚಾವಣಿಗೆ ಕೂಡ ಬಳಸಬಹುದು. ಇದರಿಂದ ಮನೆ ಕೂಡ ತಂಪಾಗಿರುತ್ತದೆ. ರೆಸ್ಟೋರೆಂಟ್, ಆಸ್ಪತ್ರೆ ಹೀಗೆ ಎಲ್ಲೆಂದರೆ ಇದನ್ನು ಉಪಯೋಗಿಸಬಹುದು. ಎಲ್ಲ ಋತುಗಳಿಗೂ ಹೊಂದಿಕೊಳ್ಳುವ ಈ ಹುಲ್ಲಿನ ಹಾಸಿಗೆಯನ್ನು ಸುಲಭವಾಗಿ ಪೋಷಣೆ ಮಾಡಬಹುದು. ಜತೆಗೆ ಇದು ಶೇ. ೮೦೦ರಷ್ಟು ತಂಪಾಗಿರುವುದರಿಂದ ಸುತ್ತಮುತ್ತಲಿನ ವಾತಾವರಣ ಕೂಡ ತಂಪಾಗಿರುತ್ತದೆ.
ಹಾಸಿಗೆ ಬೆಳೆಸುವ ವಿಧಾನ:
ನಾರನ್ನು ಮೊದಲು ತಾಂತ್ರ್ರಿಕವಾಗಿ ಜೋಡಿಸಿಕೊಂಡು (ನೀಡಲ್ ಫಿಲ್ಟ್ ಮಾಡಿ) ಒಂದು ಸ್ಥಳದಲ್ಲಿ ಅದನ್ನು ಸಮನಾಗಿ ಹರಡಿಕೊಳ್ಳಬೇಕು. ಅದರ ಮೇಲೆ ಜಿಯೋಟೆಕ್ಸೆಲ್ಸ್ ( ತಿಳಿ ಮಣ್ಣಿನಾಕಾರದ ನಾರು ಪುಡಿ) ಅದರ ಮೇಲೆ ಪಿಥ್(ಸಂಸ್ಕರಿಸಿದ ನಾರು ಪುಡಿ) ಹಾಕಿ, ಸ್ವಲ್ಪ ನೀರು ಚಿಮುಕಿಸಬೇಕು. ಅದರಲ್ಲಿ ನಿಮಗೆ ಯಾವ ಹುಲ್ಲು ಬೇಕೋ ಆ ಹುಲ್ಲಿನ ಬೀಜ ಬಿತ್ತಬೇಕು, ಇಲ್ಲವೇ ಬೇರು ಹೊಂದಿರುವ ಹುಲ್ಲಿನ ಚೂರುಗಳನ್ನು ನೆಟ್ಟರೂ ಸಾಕು. ಅನಂತರ ಇದಕ್ಕೆ ಪ್ರತಿನಿತ್ಯ ನೀರು ಚಿಮುಕಿಸುತ್ತಿರಬೇಕು. ಹೀಗೆ ಮಾಡಿದರೆ ಕೇವಲ ಒಂದೂವರೆ ತಿಂಗಳಿನಲ್ಲಿ ನಿಮಗೆ ಹುಲ್ಲಿನ ಹಾಸಿಗೆ ತಯಾರಾಗುತ್ತದೆ. ಹುಲ್ಲಿನ ಬೇರುಗಳು ಕೂಡ ಭದ್ರವಾಗುತ್ತವೆ. ಆಗ ನೀವು ಯಾವ ಆಕಾರಕ್ಕೆ ಬೇಕೋ ಆ ಆಕಾರಕ್ಕೆ ಸಲೀಸಾಗಿ ಕಟ್ ಮಾಡಿ ಅದನ್ನು ನಿಮಗೆ ಬೇಕಾದ ಸ್ಥಳಗಳಲ್ಲಿ ಜೋಡಿಸಿಕೊಳ್ಳಬಹುದು.

Thursday, September 3, 2009

ಉಳ್ಳವರಿಗೆ ದೇವರು ಹತ್ತಿರವಂತೆ! ಹೌದಾ...?

ಇವತ್ತು ದೇವರ ಹೆಸರು ಹೇಳಿಕೊಂಡು ಅದೆಷ್ಟೋ ಮಂದಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ದೇವರಿದ್ದಾನೋ ಇಲ್ಲವೋ ಬೇರೆ ವಿಚಾರ, ಆದರೆ ಅವನ ಹೆಸರು ಹೇಳಿಕೊಂಡು ಬದುಕುವವರು ಮಾತ್ರ ‘ಸೊಂಪಾಗಿದ್ದಾರೆ’. ಮೊನ್ನೆ ಸಣ್ಣದೊಂದು ಪ್ರವಾಸಕ್ಕೆಂದು ಬೇರೆ ಕಡೆಗೆ ಹೋಗಿದ್ದೆ. ಆ ಸ್ಥಳದಲ್ಲಿ ಒಬ್ಬ ಆತ್ಮೀಯ ಗೆಳೆಯನಿದ್ದ. ಅವನ ಮನೆಗೆಂದು ಹೋದಾಗ ಅವನು ತನ್ನ ಹಬ್ಬದ ದಿನವಾಗಿದ್ದರಿಂದ ತನ್ನ ಎಳೆಯ ಮಕ್ಕಳಿಗೆ ಪ್ರಸಾದ ತರಬೇಕೆಂದು ಒಂದು ‘ಭವ್ಯ ದೇವಸ್ಥಾನ’ಕ್ಕೆ ಕರೆದುಕೊಂಡು ಹೋಗಿದ್ದ.
ದೇವರು ಎಂದರೆ ನನಗೆ ಮೊದಲಿನಿಂದಲೂ ದೂರ. ಆದರೆ ‘ಆ ದೇವಸ್ಥಾನದಲ್ಲಿ ಶೂದ್ರರೇ ಪೂಜೆ ಮಾಡ್ತಾರೆ. ಬೇಕಾದವರು ಪೂಜೆ ಮಾಡಿಸ್ಕೊಳ್ಳಬಹುದು, ಇಲ್ಲದಿದ್ರೆ ಸುಮ್ನೆ ದೇವಾಲಯ ಸುತ್ತಿಕೊಂಡು ಬರಬಹ್ದು, ದೇವಸ್ಥಾನದ ಸುತ್ತ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗಿದೆ. ಅಲ್ಲಿ ಕೊಳ ಇದೆ, ಸುಂದರ ಪಾರ್ಕ್ ಇದೆ’ ಎಂದು ಅವನು ತಿಳಿಸಿದ. ಜತೆಗೆ ಆ ದೇವಸ್ಥಾನದಿಂದ ಮಕ್ಕಳಿಗೆ ಪ್ರಸಾದ ತರಬೇಕೆಂಬುದು ಅವನ ತಾಯಿಯ ಒತ್ತಾಸೆ ಕೂಡ ಆಗಿತ್ತು. ಆದ್ದರಿಂದ ಅವನು ಹೋಗಲೇಬೇಕಿತ್ತು. ಅವನ ಒತ್ತಾಯ ಹಾಗೂ ಆತ ಹೇಳಿದ ಕೆಲವು ಮಾತುಗಳಿಂದ ಕುತೂಹಲ ಶುರುವಾಯಿತು. ಸರಿ ಇಬ್ಬರೂ ಹೋದೆವು.
ದೇವಸ್ಥಾನದಲ್ಲಿ ಮಕ್ಕ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಲು ಅವನು ರಶೀದಿ ಖರೀದಿಸಿದ. ಆರಂಭದಲ್ಲೇ ಅವನು ಹೇಳಿದ ಮಾತು ಅಲ್ಲಿ ಸುಳ್ಳಾಗಿತ್ತು. ಅಷ್ಟೆಲ್ಲಾ ಹೇಳಿದ ಅವನೇ ಹೋಗಿ ಹಣ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದ. ದೇವಸ್ಥಾನ ಸುಂದರ ಹಾಗೂ ಪ್ರಶಾಂತವಾಗಿದ್ದರಿಂದ ಸ್ವಲ್ಪ ಸುತ್ತಾಡುತ್ತಿದೆ. ಅವನು ಪ್ರಸಾದಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ. ಅಲ್ಲಿ ನವಗ್ರಹ ದೇವತೆಗಳು, ಅನ್ನಪೂರ್ಣೇಶ್ವರಿ, ವಿಘ್ನ ನಿವಾರಕ ಗಣೇಶ, ಶಿವ ಪಾರ್ವತಿ, ಶಾರದೆ ಹೀಗೆ ಎಲ್ಲ ಬಗೆಯ ದೇವಾನು ದೇವತೆಗಳಿದ್ದರು!
ಅಷ್ಟು ಸಾಲದೆಂಬಂತೆ ದೇವಾಲಯದ ಬಳಿ ಪಾರ್ಕ್ ಹಾಗೂ ಕೊಳಗಳಿದ್ದವು. ಅವು ತುಂಬಾ ಸುಂದರವಾಗಿದ್ದವು. ಮಕ್ಕಳಿಗಂತೂ ಅಲ್ಲಿ ಹೋದರೆ ಹಬ್ಬ. ಇವೆಲ್ಲದರ ಜೊತೆಗೆ ದೇವಸ್ಥಾನದ ಹಿಂದೆ ಬಡವರಿಗಾಗಿಯೇ ಒಂದು ವಿವಾಹ ಮಂಟಪ, ಶ್ರೀಮಂತರಿಗಾಗಿ ಪಕ್ಕದಲ್ಲಿ ಮತ್ತೊಂದು ಮಂಟಪ. ಇದೂವರೆಗೆ ಕಂಡ ಹಾಗೆ ಬಹುತೇಕ ಕಡೆಗಳಲ್ಲಿ ದೇವಸ್ಥಾನ ಅಥವಾ ಮಠಗಳನ್ನು ನಿರ್ಮಾಣ ಮಾಡಿದರೆ ಹಣ ಗಳಿಕೆಗಾಗಿಯೇ ಅಲ್ಲೊಂದು ‘ಕಲ್ಯಾಣ’ ಮಂಟಪ ಇದ್ದೇ ಇರುತ್ತದೆ. ಆದರೆ ಇದು ಸ್ವಲ್ಪ ವಿಭಿನ್ನ. ಶ್ರೀಮಂತರ ಕಲ್ಯಾಣ ಮಂಟಪದಿಂದ ಬಂದ ಹಣದಿಂದ ಬಡವರ ಕಲ್ಯಾಣಕ್ಕಾಗಿಯೂ ತುಸು ಉಪಯೋಗಿಸುತ್ತಿದ್ದಾರೆ.
ಆದರೆ ಇಲ್ಲಿ ವಿಚಾರ ಅದಲ್ಲ, ತಿರುಪತಿಯಲ್ಲಿರುವಂತೆ ಎಲ್ಲ ದೇವಾಲಯಗಳಲ್ಲೂ ಹುಂಡಿಗೆ ಹೆಚ್ಚು ಹಣ ಹಾಕುವ ಶ್ರೀಮಂತರಿಗಾಗಿಯೇ ವಿಶೇಷ ಮಾರ್ಗ ಇದ್ದೇ ಇರುತ್ತವೆ. ಅದು ಕಾಣುವುದಿಲ್ಲ ಅಷ್ಟೆ. ಅವರಿಗೆಲ್ಲಾ ಅಲ್ಲಿ ದೇವರು ತುಂಬಾ ಬೇಗ ಸಿಗುತ್ತಾನೆ. ಆದರೆ ಬಡವರು ಮಾತ್ರ ಅದೇ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತು, ಬೆವರಿಳಿಸಿ ದೇವರ ದರ್ಶನ ಪಡೆಯಬೇಕು! ಕೇಳಿದ್ದಕ್ಕೆಲ್ಲ ತಥಾಸ್ತು ಎನ್ನುತ್ತಾನೋ ಇಲ್ಲವೋ ಅದು ಬೇರೆ ವಿಚಾರ. ಆದರೆ ಉಳ್ಳವರಿಗೆ ಹಾಗಿಲ್ಲ...
ಮೊನ್ನೆ ಅಲ್ಲಿ ಆಗಿದ್ದೂ ಅದೇ; ಸರದಿಯಲ್ಲಿ ನಿಂತಿದ್ದ ನನ್ನ ಸ್ನೇಹಿತನನ್ನು ಕಂಡ ಆ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಅವನನ್ನು ಕರೆದು ಮಾತನಾಡಿಸಿದರು. ‘ಇದೇನ್ ಸರ್ ನೀವು ಕ್ಯೂನಲ್ಲಿ ನಿಂತಿದ್ದೀರಿ. ನಂಗೆ ಒಂದ್ ಮಾತ್ ಹೇಳೋದ್ ಬ್ಯಾಡ್ವಾ... ಬನ್ನಿ..’ ಎಂದು ಅವನನ್ನು ಕರೆದುಕೊಂಡು ಗರ್ಭ ಗುಡಿಯ ಎದುರು ಹೋಗಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಅವರು ಮತ್ತಷ್ಟು ಶ್ರೀಮಂತ ಸ್ನೇಹಿತರು ಆಗಮಿಸಿದ್ದಾರೆ. ಎಲ್ಲರೂ ಕೂಡಿ ಅಲ್ಲಿ ಮಾತಿಗಿಳಿದಾಗ ನನ್ನ ಸ್ನೇಹಿತ ‘ನಾನು ಹಾಗೂ ನನ್ನ ಸ್ನೇಹಿತ ಬಂದಿದ್ದೇವೆ’ ಎಂದಿದ್ದಾನೆ. ತಕ್ಷಣ ‘ಅವರನ್ನು ಕರ್‍ಕೊಂಡು ಬನ್ನಿ...’ ಎಂದು ಕಳುಹಿಸಿದರು.
ಬರುವುದಿಲ್ಲ ಎಂದರೂ ನನ್ನ ಗೆಳೆಯ ಬಿಡಲಿಲ್ಲ. ‘ನಾನು ಅವರ ಬಳಿ ಹೇಳಿಬಿಟ್ಟಿದ್ದೇನೆ, ನೀನು ಬರದೆ ಹೋದ್ರೆ ಅವರು ಬೇಸರ ಮಾಡಿಕೊಳ್ಳುತ್ತಾರೆ. ಬರಲೇಬೇಕು’ ಎಂದು ದುಂಬಾಲು ಬಿದ್ದ. ಅವನ ಕಾಟ ತಾಳದೆ ಹೋದರೆ ಹೇಳದೆ ಇದ್ದರೂ ವಿಶೇಷ ಪೂಜೆ! ಶುಲ್ಕ ಪಾವತಿ ಮಾಡದಿದ್ದರೂ ವಿಶೇಷ ಪ್ರಸಾದ, ಕುಂಕುಮ, ಹೂವು, ಹಣ್ಣು, ಕಾಯಿ ಹಾಕಿ ಪ್ಯಾಕ್ ಮಾಡಿ ಕೊಟ್ಟರು!! ನನ್ನ ಸ್ನೇಹಿತ ಶುಲ್ಕ ಪಾವತಿ ಮಾಡಿ ಪೂಜೆ ಮಾಡಿಸಿದ್ದಕ್ಕೆ ಒಂದು, ಅಧ್ಯಕ್ಷರ ಒತ್ತಾಯದ ಮೇರೆಗೆ ಮತ್ತೊಂದು ಪ್ರಸಾದ ಚೀಲ!! ಹೇಗಿದೆ ನೋಡಿ ಕಾಲ...ಇಂಥ ಮನೋಧರ್ಮ ಈಗ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಶೂದ್ರರು ಪೂಜೆ ಮಾಡುವ ದೇವಸ್ಥಾನಗಳಲ್ಲಿಯೇ ಹೀಗಾದರೆ, ಪೂಜೆಯನ್ನೇ ಕುಲ ಕಸುಬಾಗಿಸಿಕೊಂಡು ಬಂದವರ ದೇವಸ್ಥಾನಗಳಲ್ಲಿ ಇನ್ನು ಹೆಂಗೆ..?
ಆದರೆ ನಮ್ಮ ಮುಂದೆ ಬಂದ ಅದೆಷ್ಟೋ ಬಡಪಾಯಿಗಳು ಪೂಜೆಗಾಗಿ ಕಾಯುತ್ತಿದ್ದವರು ಕಾಯುತ್ತಿಲೇ ಇದ್ದವು. ನಾವು ಮಾತ್ರ ಮನೆಯ ಕಡೆ ಹೆಜ್ಜೆ ಹಾಕಿದೆವು. ಆಗ ಕಾಡಿದ ಒಂದೇ ಪ್ರಶ್ನೆ ಉಳ್ಳವರಿಗೆ ದೇವರು ತುಂಬಾ ಹತ್ತಿರನಾ...?

Thursday, August 27, 2009

ಹಂದಿಜ್ವರ: ಯಾಕೆ ಈ ಥರ ?

ಕುಟುಂಬ ಸಮೇತ ಶಿವಮೊಗ್ಗಕ್ಕೆ ಹೊರಡಲೆಂದು ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಾಗ ಸರಿ ಸುಮಾರು ೧೦ ಗಂಟೆ. ರಾಷ್ಟ್ರದಾದ್ಯಂತ ಈಗ ಹಂದಿ ಜ್ವರ(ಎಚ್೧ಎನ್೧)ದ್ದೇ ಸುದ್ದಿ. ಸುಖಾ ಸುಮ್ಮನೆ ಸಾಯುವುದು ಎಂದರೆ ಯಾರಿಗೆ ತಾನೆ ಭಯ ಆಗುವುದಿಲ್ಲ? ಅದಕ್ಕೇ ರೈಲ್ವೆ ನಿಲ್ದಾಣಕ್ಕೆ ಬರುವ ಕೆಲವರು ಮುಖಕ್ಕೆ ಮಾಸ್ಕ್(ಮುಖಗವಸು) ಹಾಕಿಕೊಂಡಿದ್ದರು.
ರೈಲ್ವೆ ನಿಲ್ದಾಣದಲ್ಲಿರುವ ಕೆಲವು ಮೆಡಿಕಲ್ ಸ್ಟೋರ್‌ಗಳಲ್ಲಿ ೧೦ರೂ.ಗೆ ಮಾರುವ ಮಾಸ್ಕ್‌ಗಳನ್ನು ೨೦, ೩೦ರೂ.ಗೆ ಮಾರಿಕೊಳ್ಳುತ್ತಿದ್ದರು. ಅದು ವ್ಯಾಪಾರಿ ವಂಚಕತನ. ಇರಲಿ, ಆದರೆ ಮಾಸ್ಕ್ ಹಾಕಿಕೊಂಡು ನಿಲ್ದಾಣದ ಒಳಗೆ ಹೋಗುವವರನ್ನು ಮಾಸ್ಕ್ ಹಾಕಿಕೊಳ್ಳದವರು ನೋಡುತ್ತಿದ್ದ ಹಾಗೂ ಗಮನಿಸುತ್ತಿದ್ದ ರೀತಿ ನೋಡಿದರೆ ನಿಜಕ್ಕೂ ಭಯವಾಗುತ್ತಿತ್ತು. ದೇಶ ವಿದೇಶಗಳ ಎಲ್ಲ ಮೀಡಿಯಾಗಳಲ್ಲಿಯೂ ಅದು ರೋಗ ತಡೆಗೆ ಬಳಸುವ ಒಂದು ವಿಧಾನ ಎಂದು ಬೊಬ್ಬೆ ಹೊಡೆಯುತ್ತಿದ್ದರೂ ಅವರೇನೋ ತಪ್ಪು ಮಾಡುತ್ತಿದ್ದಾರೆ ಎನ್ನುವಂತೆ ಜ ವಿಚಿತ್ರವಾಗಿ ನೋಡುತ್ತಿದ್ದರು. ಹತ್ತಿರ ಹೋದರೆ ಬೆದರಿದ ಹೋರಿಗಳಂತಾಡುತ್ತಿದ್ದರು !
ಶಿವಮೊಗ್ಗದ ನಂತರ ಉಡುಪಿ, ಮಂಗಳೂರಿಗೂ ಹೋಗಬೇಕಾದ್ದರಿಂದ ನಾವು ಕುಟುಂಬವರೆಲ್ಲ ಮಾಸ್ಕ್ ತೆಗೆದುಕೊಂಡಿದ್ದೆವು. ಆದರೆ ಕಟ್ಟಿಕೊಂಡಿರಲಿಲ್ಲ. ನಾನು ಹಾಗೇ ಸುಮ್ಮನೆ ಕೆಲವರನ್ನು ಗಮನಿಸುತ್ತಲೇ ಸಾಗುತ್ತಿದ್ದೆ. ಮಾಸ್ಕ್ ಹಾಕಿಕೊಂಡವರು ಹತ್ತಿರ ಬಂದ ಕೂಡಲೇ ಬಹುತೇಕರು ಭಯ ಭೀತಿಯಿಂದ ಓಡುತ್ತಿದ್ದರು! ಇಲ್ಲವೇ ದೂರ ಸರಿದು ಮೂಗು ಮುಚ್ಚಿಕೊಳ್ಳುತ್ತಿದ್ದರು. ಮಾಸ್ಕ್ ಹಾಕಿಕೊಂಡವರು ಹತ್ತಿರ ಬಂದರೆ ಹಂದಿಜ್ವರ ಬರುತ್ತದೆ ಎಂಬಂತೆ ನಡೆದುಕೊಳ್ಳುತ್ತಿದ್ದರು. ಒಂದೇ ಮಾತಲ್ಲಿ ಹೇಳುಬೇಕೆಂದರೆ ಮಾಸ್ಕ್ ಹಾಕಿಕೊಂಡವರೆಲ್ಲ ಒಂದು ರೀತಿ ಅಲ್ಲಿ ಅಸ್ಪೃಶ್ಯರಾಗಿದ್ದರು!
ಹೀಗಿದ್ದಾಗಲೇ ಮಾಸ್ಕ್ ಹಾಕಿಕೊಂಡವನೊಬ್ಬ ಸಹಜವಾಗಿ ಸೀನಿಬಿಟ್ಟ. ದೂರದಲ್ಲಿ ಅವನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದ ಕೆಲವರು ಕ್ಷಣಾರ್ಧದಲ್ಲಿ ನೆಲಕ್ಕೆ ಎಸೆದ ಚಂಡು ಪುಟಿದೇಳುವ ಹಾಗೆ ದೂರಕ್ಕೆ ಓಡಿದರು. ಅದನ್ನು ಕಂಡು ನಿಜಕ್ಕೂ ನಾನು ತಬ್ಬಿಬ್ಬಾದೆ. ಹಂದಿ ಜ್ವರ ಜನ ಸಾಮಾನ್ಯರಲ್ಲಿ ಅಷ್ಟೊಂದು ಭೀತಿ ಹುಟ್ಟಿಸಿದೆಯಾ? ಎಂಬ ಆತಂಕ ಒಂದೆಡೆಯಾದರೆ, ಇಷ್ಟೆಲ್ಲಾ ಜಾಗೃತಿ ಇದ್ದು, ಸಮಾಜ ಮುಂದುವರಿದಿದ್ದರೂ ಇಂಥ ನಡವಳಿಕೆಗೆ ಕಾರಣವೇನು? ಎಂಬ ಪ್ರಶ್ನೆ ಕಾಡತೊಡಗಿತು. ಆದರೆ ಉತ್ತರ ಇನ್ನೂ ಸಿಕ್ಕಿಲ್ಲ.
ಸರಕಾರಗಳು ಹಂದಿ ಜ್ವರಕ್ಕೆ ಮದ್ದಿದೆ. ಅದು ಬರದಂತೆ ತಡೆಯಲು ಕೆಲವೇ ಮುಂಜಾಗೃತ ಕ್ರಮಗಳನ್ನು ಅನುಸರಿಸಿದರೆ ಸಾಕು, ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಎಲ್ಲ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿವೆ. ಆದರೂ ಈ ರೀತಿಯ ಭಯವೇಕೆ? ಒಂದು ರೀತಿಯಲ್ಲಿ ಈ ಭಯಕ್ಕೆ ಮಾಧ್ಯಮಗಳೂ ಕಾರಣವೇ? ಎಂಬ ಅನುಮಾನ ನಿಜಕ್ಕೂ ಕಾಡುತ್ತಿದೆ. ವೈದ್ಯರು ‘ಇದೇನೂ ಅಂಥ ಭಯಾನಕ ಕಾಯಿಲೆ ಅಲ್ಲ, ಇದಕ್ಕೆ ಚಿಕಿತ್ಸೆ ಇದೆ’ ಎನ್ನುತ್ತಾರೆ. ಇಷ್ಟಾದರೂ ಮೀಡಿಯಾಗಳು ಹಂದಿ ಜ್ವರ ಭಯಾನಕ ಎನ್ನುವಂತೆ ಬಿಂಬಿಸಿ ನಿತ್ಯವೂ ವರದಿ ಮಾಡುತ್ತಿವೆ. ಇಲ್ಲಿ ಎಡವುತ್ತಿರುವುದು ಎಲ್ಲಿ ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರಕಾರಗಳು ಕೂಡ ಸದ್ದಿಲ್ಲದೆ ಬಂದ ಈ ಕಾಯಿಲೆಗೆ ಮದ್ದು ಹಾಗೂ ಸೂಕ್ತ ಚಿಕಿತ್ಸೆಗೆ ವೈದ್ಯರ ನೇಮಕ ಮಾಡುವ ಬದಲು ‘ನಮ್ಮ ರಾಜ್ಯದಲ್ಲಿ ಇನ್ನೂ ಯಾರೂ ಸತ್ತಿಲ್ಲ, ಜ್ವರದ ತೀವ್ರತೆ ಇಲ್ಲ.’ಎಂದು ಹೇಳಿ ಆರಂಭದಲ್ಲಿ ಕೈ ತೊಳೆದುಕೊಂಡವು. ಆದರೆ ಈಗ ?
ಯಾವುದೇ ಕಾಯಿಲೆಗಾದರೂ ಸರಿ, ಮುಂಜಾಗೃತೆ ವಹಿಸುವುದು ಒಳ್ಳೆಯದು. ಆದರೆ ಜಾಗೃತಿವಹಿಸುವ ಬದಲು ಅಂಥವರನ್ನು ನೋಡಿ ಇತರರು ಅಣಕಿಸುವಂತೆ ನೋಡುವುದು ಎಷ್ಟು ಸರಿ?
ಲೇಖನ ವಿಜಯ ಕರ್ನಾಟಕ ದಿನಪತ್ರಿಕೆಯ ಸಿಂಪ್ಲಿಸಿಟಿ ಪೇಜ್ನಲ್ಲಿ ಅಗಸ್ಟ್ ೨೭ರ ಸಂಚಿಕೆಯಲ್ಲಿ ಪ್ರಕಟಗೊಂಡಿದೆ. ಆದರೂ ಹಂದಿ ಜ್ವರದ ಬಗ್ಗೆ ಜನರಲ್ಲಿ ಇರುವ ಭಯ ಕೊಂಚವಾದರೂ ದೂರ ಮಾಡಲು ಇದು ಕೆಲವರಲ್ಲಾದರೂ ಅರಿವು ಮೂಡಿಸೀತು ಎಂಭ ಆಸೆಯಿಂದ ಇಲ್ಲಿ ಬಿತ್ತರಿಸಿದ್ದೇನೆ...

Monday, August 17, 2009

ನೀರಾ... ಏಕೆ ಈ ನಿರಾಸಕ್ತಿ...?

‘ನೀರಾದಿಂ ಬೆಲ್ಲ ತಯಾರಿಸಬಹುದು. ಅದು ತುಂಬಾ ಸಿಹಿ. ಕಬ್ಬಿನ ಬೆಲ್ಲಕ್ಕಿಂತ ಈ ಬೆಲ್ಲ ಅತ್ಯಂತ ಉತ್ಕೃಷ್ಟದ್ದು. ನೀರಾದಿಂದ ತಯಾರಿಸುವ ಬೆಲ್ಲ ಸಿಹಿ ಹಾಗೂ ಸ್ವಾದಿಷ್ಟಯುಕ್ತ ಕೂಡ. ಇದರಿಂದ ಕೋಟಿಗಟ್ಟಲೆ ಹಣ ಸಂಪಾದಿಸಬಹುದು. ಎಲ್ಲಿ ತೆಂಗು ಬೆಳೆಯಲಾಗುತ್ತದೆಯೋ ಅಲ್ಲಿ ಅದರ ಬೆಲ್ಲ ತಯಾರಿಸಬಹುದು. ಇದು ಬಡತನ ನಿರ್ಮೂಲನೆಗೆ ದಾರಿ ಕೂಡ. ಆ ಮೂಲಕ ಈ ಧರೆಯಿಂದಲೇ ಬಡತನವನ್ನು ದೂರ ಮಾಡಬಹುದು’. -ಮಹಾತ್ಮ ಗಾಂಧಿ .
ಹೀಗೆ ಮಹಾತ್ಮ ಗಾಂಜಿ ಅವರೇ ನೀರಾ ಇಳಿಸುವುದನ್ನು ಸಮರ್ಥಿಸಿದ್ದರು. ಅಲ್ಲದೆ ಅವರ ‘ಹರಿಜನ’ ಪತ್ರಿಕೆಯಲ್ಲೂ ದಿ.ಗಜಾನನ ನಾಯಕ್ ಅರು ೧೯೩೯ರ ಜನವರಿ೭ರ ಸಂಚಿಕೆಯಲ್ಲಿ ‘ಗರ್ಭಿಣಿಯರು ವಾರಕ್ಕೆ ಎರಡ್ಮೂರು ಬಾರಿ ನೀರಾ ಸೇವಿಸಿದರೆ ಹುಟ್ಟುವ ಮಗು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯಪೂರ್ಣವಾಗಿ ಹಾಗೂ ಸೌಂದರ್ಯಯುತವಾಗಿ ಹುಟ್ಟುತ್ತವೆ’ ಎಂದು ಬರೆದಿದ್ದರು.
ಇಷ್ಟೆಲ್ಲಾ ನಿದರ್ಶನಗಳು ಕಣ್ಮುಂದೆ ಇದ್ದರೂ ನಮ್ಮ ಸರಕಾರಗಳಿಗೆ ಮಾತ್ರ ನೀರಾವನ್ನು ಅಭಿವೃದ್ಧಿಪಡಿಸುವ ಬಗ್ಗೆಯಾಗಲಿ, ಅದರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದಕ್ಕಾಗಲಿ, ರೈತರ ಬದುಕನ್ನು ಆ ಮೂಲಕ ಹಸನು ಮಾಡುವುದಕ್ಕಾಗಲಿ ಕಾಳಜಿ ಇದ್ದಂತಿಲ್ಲ. ಕರ್ನಾಟಕದಲ್ಲಿ ‘ನೀರಾ ಚಳವಳಿ’ ನಡೆದು ೯ ವರ್ಷಗಳಾಗುತ್ತಿವೆ. ೨೦೦೧ರ ಅಕ್ಟೋಬರ್ ೯ಕ್ಕೆ ಇದೇ ಚಳವಳಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿಯ ಇಬ್ಬರು ರೈತರು ಬಲಿಯಾದರೂ ಸರಕಾರ ಮಾತ್ರ ಕೇವಲ ಭರವಸೆಯ ‘ಮತ್ತಿನಲ್ಲಿ’ಯೇ ತೇಲಾ(ಡುತ್ತಿದೆ.) ಡಿಸುತ್ತಿದೆ.
ಬೆಂಗಳೂರಿನ ಗಾಂ ಭವನದಲ್ಲಿ ಅದೇ ೨೦೦೧ರ ಆಗಸ್ಟ್೧೩ರಂದು ‘ನುಸಿಪೀಡೆ ಹಾಗೂ ನೀರಾ’ಎಂಬ ವಿಷಯದ ಕುರಿತು ನಡೆಸಿದ ರಾಷ್ಟ್ರೀಯ ಕಾರ್ಯಾಗಾರವೇ ನೀರಾ ಚಳವಳಿಗೆ ಪ್ರಮುಖ ಪ್ರೇರಣೆಯಾಯಿತು. ಚಳವಳಿಗೆ ಆದೇ ಆ.೨೭ರಂದು ಸರಕಾರ ಸ್ಪಂದಿಸುವ ನಾಟಕವಾಡಿ ಮೊಸಳೆ ಕಣ್ಣೀರು ಸುರಿಸಿ ನೀರಾ ಇಳಿಸಲು ಅನುಮತಿ ನೀಡುವುದಾಗಿ ತಿಳಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಅದರ ಫಲವಾಗಿಯೇ ಚಳವಳಿ ತೀವ್ರ ಸ್ವರೂಪ ಪಡೆಯಿತು. ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಅದೇ ವರ್ಷ ಅಕ್ಟೋಬರ್ ೯ರಂದು ನಡೆದ ಹೋರಾಟ ತೀವ್ರ ಸ್ವರೂಪ ಪಡೆದಾಗ ಸರಕಾರ ಉತ್ತರ ನೀಡಿದ್ದು ಬಂದೂಕಿನ ನಳಿಕೆಯ ಮೂಲಕ! ಅದಕ್ಕೆ ತಮ್ಮಯ್ಯ ಹಾಗೂ ಪುಟ್ಟನಂಜಯ್ಯ ಎಂಬ ಇಬ್ಬರು ಅಮಾಯಕ ರೈತರು ಬಲಿಯಾದರು. ಆದರೆ ಅವರ ಬಲಿದಾನವಾದರೂ ಸರಕಾರಗಳು ಇಂದಿಗೂ ಬಗ್ಗದಿರುವುದು ಇತ್ತೀಚಿನ ಸರಕಾರಗಳು ಎಷ್ಟರಮಟ್ಟಿಗೆ ಜನಪರ, ರೈತಪರವಾಗಿವೆ ಎಂಬುದನ್ನು ತೋರಿಸುತ್ತವೆ.
ಅಂದು ಅದೇ ಚಳವಳಿಯನ್ನು ರಾಜಕೀಯ ದಾಳವಾಗಿಸಿಕೊಂಡ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್, ಎಚ್.ಕೆ.ಪಾಟೀಲ್ ಹಾಗೂ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ರಾಜಕೀಯವಾಗಿ ಮತ್ತಷ್ಟು ಬೆಳೆದುನಿಂತರು. ದೇವೇಗೌಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಠಲೇನಹಳ್ಳಿಯಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಮಾಡಿದರು. ಆದರೆ ಅದರಿಂದ ಬಡ ರೈತರಿಗೆ ಮಾತ್ರ ಸಿಕ್ಕಿದ್ದು ಕೋರ್ಟ್‌ಗೆ ಅಲೆಯುವ ಕಾಯಕ. ಆ ರೈತರ ಮೇಲೆ ಹಾಕಲಾಗಿರುವ ಪ್ರಕರಣಗಳು ಇಂದಿಗೂ ಇತ್ಯರ್ಥವಾಗಿಲ್ಲ, ಜತೆಗೆ ಚಳವಳಿಯ ಆಶಯವೂ ಈಡೇರಿಲ್ಲ! ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪದ್ಮರಾಜ್ ಆಯೋಗವನ್ನು ನೇಮಕ ಮಾಡಲಾಯಿತು. ಆ ಆಯೋಗ ವರದಿ ತಯಾರಿಸಿ ಸರಕಾರಕ್ಕೆ ನೀಡಿತಾದರೂ ಅದರಲ್ಲಿ ಏನಿದೆ ಎಂಬುದು ಇಂದಿಗೂ ಬಹಿರಂಗವಾಗಲಿಲ್ಲ.
ಲಕ್ಷಾಂತರ ರೈತರ ಬದುಕನ್ನು ಹಸನುಗೊಳಿಸಿದ ಕಲ್ಪವೃಕ್ಷಕ್ಕೆ ನುಸಿ ಪೀಡೆ ಕಾಣಿಸಿಕೊಂಡ ನಂತರ ಅವರು ಕಂಡುಕೊಂಡಿದ್ದು ನೀರಾ ಉತ್ಪನ್ನವನ್ನು. ನೀರಾ ಚಳವಳಿ ಆರಂಭವಾದ ನಂತರ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ವಿಶ್ವವೇ ಬೆರಗಾಗುವ ರೀತಿಯಲ್ಲಿ ನೀರಾದಿಂದ ಸಕ್ಕರೆ ತಯಾರಿಸುವ ಪ್ರಶಿಕ್ಷಣ ತರಬೇತಿ ನೀಡಲಾಯಿತು. ಆದರೆ ಅನಂತರ ಅದಕ್ಕೆ ಮಾರುಕಟ್ಟೆ ಸಮಸ್ಯೆ ಹಾಗೂ ಸರಕಾರದ ನಿರುತ್ಸಾಹ ಎದುರಾಯಿತು. ಅಂದಿನಿಂದ ತೆಂಗು ಬೆಳೆಗಾರರು ಮತ್ತೆ ಅತಂತ್ರವಾದರು.
೨೦೦೦ರಿಂದ ೨೦೦೩ರ ವರೆಗೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆ ಬೀದಿ ಬೀದಿಗಳಲ್ಲಿ ಚಳವಳಿ ನಡೆಸಿದರು. ನೀರಾ ಬಗ್ಗೆ ರೈತರು ಹಾಗೂ ಸರಕಾರದ ಕಣ್ಣು ತೆರೆಸಿದರು. ೨೦೦೮ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಭಾರತೀಯ ಸತ್ಸಂಗ ಸಮಾಜದ ಅಧ್ಯಕ್ಷರಾದ ಶ್ರೀ ಭಕ್ತಿ ತೀರ್ಥ ಸ್ವಾಮೀಜಿ ಕೂಡ ನೀರಾಗೆ ಸಂಬಂಸಿದಂತೆ ಹೋರಾಟ ನಡೆಸಿದರು. ಕರ್ನಾಟಕ ನೀರಾ ಮಹಾಮಂಡಳಿ ರಚನೆಗೆ ಒತ್ತಾಯಿಸಿದ್ದರು. ಬಜೆಟ್‌ನಲ್ಲಿ ೧೦ ಕೋಟಿ ರೂ.ಗಳನ್ನು ನೀರಾ ಉತ್ಪಾದನೆ, ಅಭಿವೃದ್ಧಿ ಹಾಗೂ ವಹಿವಾಟಿಗಾಗಿಯೇ ಮೀಸಲಿಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದರು. ರಾಜ್ಯದ ಬಹುತೇಕ ಕಡೆಗಳಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಿದರು. ಆದರೂ ಸರಕಾರ ಮಾತ್ರ ಅಕಾರದ ಅಮಲಿನಲ್ಲಿ ಬೀದಿ ಬೀದಿಯಲ್ಲಿ ಹೆಂಡದಂಗಡಿ, ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಮುಂದಾಗುತ್ತಿದೆಯೇ ಹೊರತು ನೀರಾ ಉತ್ಪಾದನೆಗೆ ಸಹಕಾರ ನೀಡಲೇ ಇಲ್ಲ.
ನೀರಾ ಉತ್ಪಾದನೆಯ ಹಿನ್ನೆಲೆ:
ಭಾರತದಲ್ಲಿ ಅನಾದಿ ಕಾಲದಿಂದಲೂ ನೀರಾ ತಯಾರಿಸಲಾಗುತ್ತಿದೆ. ಇದು ಆಯುರ್ವೇದದಲ್ಲಿ ಹೆಚ್ಚು ಚಿರಪರಿಚಿತವೂ ಹೌದು. ಎಲ್ಲ ರೀತಿಯ ರೋಗಗಳಿಗೂ ಇದು ಮದ್ದು. ಆದರೆ ರಾಜ್ಯದಲ್ಲಿ ೧೯೫೧ರಲ್ಲಿ ಮೊದಲ ಬಾರಿಗೆ ನೀರಾ ಉತ್ಪಾದಿಸಲಾಯಿತು. ಆಗಲೇ ಕರ್ನಾಟಕದಲ್ಲಿ ೧೬೭ ಪಟ್ಟಣ ಹಾಗೂ ೧೫೨ ಪ್ರಮುಖ ಗ್ರಾಮೀಣ ಭಾಗಗಳಲ್ಲಿ ನೀರಾ ಮಾರಾಟ ಕೇಂದ್ರಗಳು ಸ್ಥಾಪನೆಯಾದವು. ೧೭ ನೀರಾ ಮತ್ತು ಪನೆ ಬೆಲ್ಲ ಸಹಕಾರಿ ಸಂಘಗಳು ಕಾರ್ಯನಿರ್ವಹಿಸತೊಡಗಿದವು. ೧೯೫೮ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ನೀರಾ ಮತ್ತು ಪನೆ ಬೆಲ್ಲ ಸಂಯುಕ್ತ ಸಂಘಗಳು ಆಸ್ತಿತ್ವಕ್ಕೆ ಬಂದವು.
ಕೇವಲ ಹತ್ತು ವರ್ಷಗಳ ನಂತರ ಸರಕಾರ ತಂದ ೧೯೬೮ರ ಶಾಸನದಿಂದ ನೀರಾ ಉದ್ಯಮ ಸಂಪೂರ್ಣ ನೆಲ ಕಚ್ಚಿತು. ಆದರೆ ೨೦೦೧ರಲ್ಲಿ ಎಲ್ಲೆಡೆ ತೆಂಗಿಗೆ ನುಸಿಪೀಡೆ ಕಾಣಿಸಿಕೊಂಡಾಗ ಮತ್ತೆ ನೀರಾ ಕುರಿತ ಚಿಂತನೆ, ಚಳವಳಿ ಆರಂಭವಾಗಿದ್ದು.
ಉಪಯೋಗ ಹಾಗೂ ಸಾಧ್ಯತೆ:
ನೀರಾ ಬಗ್ಗೆ ಜನಪ್ರತಿನಿಗಳಿಗೆ ಹಾಗೂ ಅಕಾರಿಗಳಿಗೆ ಸರಿಯಾದ ಅರಿವು ಇಲ್ಲದಿರುವುದೇ ನಿರುತ್ಸಾಹಕ್ಕೆ ಕಾರಣ ಎನ್ನಲಾಗಿದೆ. ಅದನ್ನು ಮರದಿಂದ ಇಳಿಸಿದ ಕೆಲವೇ ಗಂಟೆಗಳಲ್ಲಿ ಇದು ಹುಳಿ ಬಂದು ಹೆಂಡವಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ನೀರಾ ನಿಜಕ್ಕೂ ಪರಿಪೂರ್ಣ ಪೇಯ. ಕೋಕಾ ಕೋಲಾ, ಪೆಪ್ಸಿಯಂತ ವಿದೇಶಿ ಹಾಗೂ ಹಾನಿಕಾರಕ ಪಾನೀಯಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಎದುರು ನಿಂತು ಬೆಳೆಯಬಲ್ಲ ಸಾಮರ್ಥ್ಯ ಇರುವುದು ಎಳೆನೀರು ಹಾಗೂ ನೀರಾಗೆ ಮಾತ್ರ! ಹೌದು, ಇವೆರಡೂ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ.
ನೀರಾ ಎಂದರೆ ಹೆಂಡ(ಸರಾಯಿ) ಎಂದಲ್ಲ. ಇದು ಎಲ್ಲ ವಯೋಮಿತಿಯ ಜನರಿಗೂ ಉಪಯುಕ್ತವಾಗುವ ಆರೋಗ್ಯದಾಯಕ ಪಾನೀಯ. ಆದರೆ ಕೆಲವರು ನೀರಾ ಹೆಸರಿನಲ್ಲಿ ಅಬಕಾರಿ ಅಕಾರಿಗಳ ಜತೆ ಸೇರಿಕೊಂಡು ಹೆಂಡವನ್ನು ಮಾರುವ ದಂಧೆ ಆರಂಭಿಸಿದ್ದಾರೆ. ಇಂಥವರು ನಿಜಕ್ಕೂ ರೈತರಲ್ಲ ಎಂಬುದು ಬಹಿರಂಗ ಸತ್ಯ. ನೀರಾ, ನೀರಿನಂತೆ ಪರಿಶುದ್ಧ, ಪಾರದರ್ಶಕ ಹಳದಿ ಬಣ್ಣದಿಂದ ಕೂಡಿರುತ್ತದೆ. ಇದನ್ನು ಇಳಿಸಿದ ನಂತರ ಮೂರು ಗಂಟೆಯವರೆಗೆ ಹಾಗೆಯೇ ಇಟ್ಟರೂ ಮತ್ತಿನ ಅಂಶ ಇರುವುದಿಲ್ಲ. ೧೨ ಗಂಟೆಯ ನಂತರವಷ್ಟೇ ಶೇ.೦.೭ ರಿಂದ ಶೇ.೦.೮ರಷ್ಟು ಮತ್ತು ಬರುತ್ತದೆ. ಆದರೆ ವೈeನಿಕವಾಗಿ ಇದನ್ನು ಸಂಸ್ಕರಿಸಿದರೆ ೬ ತಿಂಗಳ ಕಾಲ ರುಚಿ ಕೆಡದಂತೆ ಹಾಗೆಯೇ ಇಡಬಹುದು ಎಂಬುದು ತಜ್ಞರ ಅಭಿಪ್ರಾಯ.
ನೀರಾ ನಿಜಕ್ಕೂ ಆರೋಗ್ಯದಾಯಕ, ರೋಗನಿರೋಧಕ ಶಕ್ತಿ ಹೊಂದಿದ ಹಾಗೂ ನರದೌರ್ಬಲ್ಯ ಹೊಂದಿದವರಿಗೆ ದಿವ್ಯ ಔಷಧ ಕೂಡ ಹೌದು. ಇದರಿಂದ ಬೆಲ್ಲ, ಕಲ್ಲು ಸಕ್ಕರೆ, ಜ್ಯೂಸ್, ಜಾಮ್, ಚಾಕೋಲೇಟ್, ಬಿಸ್ಕೆಟ್, ಸಿರಪ್ ಹಾಗೂ ಇನ್ನಿತರೆ ಸಿಹಿ ತಿಂಡಿಗಳನ್ನು ತಯಾರಿಸಬಹುದು! ಆಯುರ್ವೇದದಲ್ಲಿ ತೆಂಗಿನ ಉತ್ಪಾದನೆಗಳಿಗೆ ಶ್ರೇಷ್ಠ ಸ್ಥಾನವಿದೆ. ಆದರೆ ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಈಗಿನ ಯಾವ ಜನಪ್ರತಿನಿಗಳಿಗೂ ಇಲ್ಲ.
ನೆರೆಯ ಕೇರಳ, ತಮಿಳು ನಾಡು, ಮಹಾರಾಷ್ಟ್ರದಲ್ಲಿ ನೀರಾ ಉದ್ಯಮ ಬೆಳೆದಂತೆ ಕರ್ನಾಟಕದಲ್ಲಿ ಬೆಳೆದಿಲ್ಲ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಅಕಾರಿಗಳಿಗೆ ಹಾಗೂ ಜನಪ್ರತಿನಿಗಳಿಗೆ ಇದರ ಬಗ್ಗೆ ಇರುವ ಅರಿವಿನ ಕೊರತೆ ಹಾಗೂ ರೈತರ ಬಗ್ಗೆ ಇವರಿಗಿರುವ ನಿಷ್ಕಾಳಜಿ. ನೀರಾ ನಿಜಕ್ಕೂ ರೈತರ ಪಾಲಿನ ಆಶಾಕಿರಣ. ಇಲ್ಲಿ ಕೃಷಿಕರಿಗೆ ವಿಫುಲವಾದ ಅವಕಾಶಗಳಿವೆ. ಅವುಗಳನ್ನು ಸರಕಾರ ಕಂಡುಕೊಳ್ಳಬೇಕಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೆಂಡದ ಅಮಲಿನಲ್ಲಿ ಕುಣಿದಾಡುವುದಕ್ಕಿಂತ ವೈಜ್ಞಾನಿಕವಾಗಿ ನೀರಾದಿಂದಾಗುವ ಉಪಯೋಗಗಳನ್ನು ಪತ್ತೆ ಹಚ್ಚಬೇಕಿದೆ. ಜತೆಗೆ ಸರಕಾರದಿಂದ ಪರವಾನಗಿ ಪಡೆದು ನೀರಾ ಉತ್ಪಾದನೆಗೆ ಕೈ ಹಾಕುವಂತೆ ಮಾಡಬೇಕಿದೆ. ಜತೆಗೆ ನೀರಾ ಉತ್ಪನ್ನಗಳ ಅಭಿವೃದ್ಧಿ ಬಗ್ಗೆ ಚಿಂತಿಸಿದರೆ ರೈತರ ಬಾಳು ಕೂಡ ಹಸನಾಗುವುದರಲ್ಲಿ ಸಂಶಯವಿಲ್ಲ.
ಇಂದು ಕರ್ನಾಟಕದಲ್ಲಿ ಶೇ.೩೫ ರಿಂದ ಶೇ.೪೦ ರಷ್ಟು ಕೃಷಿ ಹಾಗೂ ತೋಟಗಾರಿಕೆ ಉತ್ಮನ್ನಗಳು ವಿನಾಕಾರಣ ಹಾಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತರುವ ತುರ್ತು ಅಗತ್ಯವಿದೆ. ವಿಶ್ವದಲ್ಲಿ ಇಂದು ರೈತರು ಜಾಗತಿಕರಣ, ಉದಾರೀಕರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೆ ಇಳಿಯಬೇಕಿದ್ದು, ಮೌಲ್ಯರ್ವತ ವಸ್ತುಗಳನ್ನು ಉತ್ಪಾದಿಸುವ ಮೂಲಕ ಸ್ಪರ್ಧೆಯಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಳ್ಳಬೇಕಿದೆ. ಈ ಕಾರಣಕ್ಕಾಗಿಯೇ ಸರಕಾರಗಳು ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಕೃಷಿ ಉತ್ಪನ್ನಗಳನ್ನು ಉದ್ಯಮವಾಗಿ ನಿರ್ಮಾಣ ಮಾಡುವ ಇಚ್ಛಾಶಕ್ತಿ ತೋರಬೇಕಿದೆ.

Sunday, August 2, 2009

ಅವಳು ಮಮತೆಯ ಮಡಿಲು...

My Dear Friend,
ಆಗಿನ್ನೂ ಮೈಸೂರಿಗೆ ಬಂದಿಳಿದು ಮೂರು ದಿನಗಳಾಗಿರಲಿಲ್ಲ. ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಆ ಹಸಿರು ಹಾಸಿಗೆ ಮೇಲೆ ಕುಳಿತು ನಾ ಏನೋ ಗೀಚುತ್ತಿದ್ದ ಸಮಯದಲ್ಲಿ ನೀ ಬಂದು ಮಾತನಾಡಿಸಿದ ದೃಶ್ಯ ಇನ್ನೂ ಕಣ್ಣಂಚಿನಲ್ಲೇ ಇದೆ. ಪರಿಚಯ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ನೇಹದ ಚಿಗುರೊಡೆದಿತ್ತು. ಅಂದು ನಿನ್ನ ಧ್ವನಿಯಿಂದ ಹೊರ ಬಂದ ಮಮತೆಯ ನಾದ ಇಂದಿಗೂ ನನ್ನೆದೆಯಲ್ಲಿ ಝೇಂಕರಿಸುತ್ತಲೇ ಇದೆ. ಅದಕ್ಕೆ ಅಲ್ಲಿನ ಆ ಹಸಿರೇ ಸಾಕ್ಷಿ!
ಅಲ್ಲಿಂದ ಶುರುವಾದ ನಮ್ಮಿಬ್ಬರ ಸ್ನೇಹ ಹೆಮ್ಮರವಾಗಿದ್ದು ನಿನಗೂ ಗೊತ್ತು. ತುಂಟಾಟ, ತರಲೆಗಳು, ವಿಚಾರಗಳ ವಿನಿಮಯ, ಚಿಂತನೆಗಳು ನಮ್ಮೊಳಗೆ ಬ್ರೇಕಿಲ್ಲದ ಕಾರಿನಂತೆ ಓಡಿದ್ದೂ ಉಂಟು. ಗಂಡು ಹೆಣ್ಣು ಕೇವಲ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂಬ ಮಾತಿಗೆ ಅಪವಾದ ನೀನು. ನಿನ್ನೊಂದಿಗೆ ಕಳೆದ ಎರಡು ವರ್ಷಗಳು ಇನ್ನೂ ಆ ಹಸಿರಿನಂತೆಯೇ ಹಸಿರಾಗಿ ಉಸಿರಾಡುತ್ತಿವೆ. ಸ್ನೇಹದ ಹಾಳೆಗೆ ಮಮತೆಯ ಬಣ್ಣ ಹಚ್ಚಿ ಅಂದಗೊಳಿಸಿದವಳು ನೀನು. ಆ ಇಡೀ ಎರಡು ವರ್ಷಪೂರ್ತಿ ನಿನ್ನ ‘ಮಮತೆಯ ಸಿಹಿ’ ಉಂಡು ಕೊಬ್ಬಿದ ನನಗೆ ಮತ್ಯಾಕೊ ಕೊರಗು ಶುರುವಾಯಿತಲ್ಲ! ಕಾರಣ, ನೀನು ದಿಢೀರ್ ಮರೆಯಾದದ್ದೇ ಇರಬೇಕು!?
ಪ್ರತಿನಿತ್ಯ ನಿನ್ನ ಮಾತು ಕೇಳುತ್ತಲೇ ನಿನ್ನ ತುಂಟತನ, ನಿರ್ಮಲ ನಗು, ವಿಚಾರಲಹರಿಗಳಿಗೆ ತಲೆ ದೂಗುತ್ತಲೇ ಇದ್ದವನು ನಾನು. ನೀ ಹೇಳದೆ, ಕೇಳದೆ, ಒಂದು ಮಾತೂ ಉಲಿಯದೆ ನಾಪತ್ತೆಯಾಗೊದೆ? ಅಂದಿನಿಂದ ನಾನು ಧ್ವನಿಯಿಲ್ಲದ ಕೋಗಿಲೆಯಾಗಿದ್ದೆ. ಅಂದವಿಲ್ಲದ ಅರಗಿಣಿಯಾಗಿದ್ದೆ. ರೆಕ್ಕೆಪುಕ್ಕಗಳೆಲ್ಲ ಇದ್ದೂ ಕುಣಿಯಲಾಗದ ನವಿಲಾಗಿದ್ದೆ.
ಈ ಜಗತ್ತಿನಲ್ಲಿ ಪ್ರೀತಿ, ಸ್ನೇಹಕ್ಕೆ ಬರವಿಲ್ಲ(?). ಆದರೆ ನಿರ್ಮಲ ಪ್ರೀತಿ, ‘ಮುಕ್ತಮನದ ಸ್ನೇಹ’ ಅದೆಷ್ಟು ಜನರಿಗೆ ಸಿಕ್ಕಿದೆ ಹೇಳು? ಅಪ್ಪಟ ಗೆಳೆಯರೆಂದು ನಂಬಿ ಕಷ್ಟ ಸುಖಗಳೆಲ್ಲವನ್ನೂ ಬಿಚ್ಚಿಟ್ಟ ಮಾರನೆ ದಿನವೇ ಸಹಾಯ ಮಾಡುವ ಗೋಜಿಗೂ ಹೋಗದೆ ಸಮಯ ಸಾಧಕತನವನ್ನು ತೋರಿಸಿ, ಅದನ್ನೇ ಬಂಡವಾಳ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುವ ಈ ದಿನಮಾನಗಳಲ್ಲಿ ನೀನು ನಿಜಕ್ಕೂ ‘ಕಡಲಾಳದ ಮುತ್ತು’. ಆ ವಿಚಾರದಲ್ಲಿ ನಾ ನಿಜಕ್ಕೂ ಆದೃಷ್ಟವಂತ; ಆಂದುಕೊಂಡಿದ್ದೆ. ನೀ ಮರೆಯಾದಾಗ ಅದೇ ಕಡಲಲ್ಲಿ ಈ ಮುತ್ತು ಕಳೆದು ಹೋಯಿತು ಎಂದುಕೊಂಡೆ. ಆ ಗಳಿಗೆಯಿಂದ ಸುಮಾರು ಐದು ವರ್ಷ ನಮ್ಮ ನಿರ್ಮಲ ಸ್ನೇಹ ನನಗೇ ಕನಸೆಂಬಂತೆ ಭಾಸವಾಗಿತ್ತು.
ಮನದಾಳದ ಎಷ್ಟೋ ನೋವು ನಲಿವುಗಳನ್ನು ಆಗ ನಿನ್ನೊಂದಿಗೆ ಬಿಚ್ಚಿಟ್ಟಿದ್ದೆ. ಆಗಾಗ ಮಾಡಿದ ತಪ್ಪಿಗೆ ಬೈಸಿಕೊಂಡಿದ್ದೆ, ಬೈದಿದ್ದೆ. ಆನಂತರ ಈ ಹಕ್ಕಿ ಮೂಕವಾಗಿತ್ತು! ನೀ ಮರೆಯಾದಾಗ ಇನ್ನೆಂದೂ ಸಿಗಲಾರೆ ಎಂಬ ಭಯ, ನಿನ್ನ ನೆನಪು ಆಗಾಗ ಕಡಲಿನಲ್ಲಿ ಭುಗಿಲೇಳುವ ಅಲೆಗಳ ಹಾಗೆ ಭೋರ್ಗರೆಯುತ್ತ ಅಪ್ಪಳಿಸುತ್ತಿದ್ದವು. ನೀನು ಬರೆದುಕೊಟ್ಟ ವಿಳಾಸದ ಆಟೋಗ್ರಾಫ್ ಡೈರಿ ಕೂಡ ನನ್ನ ದುರಾದೃಷ್ಟಕ್ಕೆ ಕಳೆದುಹೋಗಿತ್ತು. ನಿನ್ನ ಊರು ಗೊತ್ತಿದ್ದರೂ ವಿಳಾಸ ಗೊತ್ತಿರಲಿಲ್ಲ, ನೀನೆಲ್ಲಿದ್ದೆ ತಿಳಿಯಲಿಲ್ಲ. ಈಗ ನನ್ನ ಮನದಾಳದ ಸಾಗರ ಪ್ರಶಾಂತವಾಗಿದೆ. ತುಪ್ಪವೇ ಬಂದು ರೊಟ್ಟಿಗೆ ಬಿದ್ದಹಾಗೆ ನೀ ಮೊನ್ನೆ ನನ್ನ Cellಗೆ ಅದೆಲ್ಲಿಂದಲೋ "I am Kamala. how r u ?'' ಎಂಬ ಸಂದೇಶ ಕಳುಹಿಸಿದಾಗ ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ!
ನೀ ಸಿಕ್ಕಿದ್ದು ಕಾಯಿಲೆ ಬಿದ್ದ ಕೋಗಿಲೆಗೆ ಹುಶಾರಾಗಿ ಧ್ವನಿ ಬಂದಹಾಗಿತ್ತು, ನವಿಲಿಗೆ ನರ್ತಿಸಿದ ಖುಷಿ. ಹೆಣ್ಣು ಮಮತಾಮಯಿ, ಅವಳ ಹೃದಯ ಸಾಗರದಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ ಮಮತೆಗಳಿಗೆ ಅಪಾರ ಜಾಗ ಎಂದು ಕೇಳಿದ್ದೆ. ಅದು ಈಗ ಮತ್ತೆ ನಿಜವಾಯಿತು.
ನೀ ಮತ್ತೆ ಸಿಕ್ಕ ಈ ಗಳಿಗೆಯನ್ನು ನಿಜಕ್ಕೂ ನನ್ನಿಂದ ವರ್ಣಿಸಲಾಗುತ್ತಿಲ್ಲ. ನಿನ್ನ ಮಮತೆಗೆ ನಿಜಕ್ಕೂ ಈ ಹೃದಯದ ಗೆಳೆಯನ ಥ್ಯಾಂಕ್ಸ್.

Thursday, July 30, 2009

ಬೇರು ಬಿಡದ ನಾರು ಉದ್ಯಮ...

ರಾಜ್ಯದಲ್ಲಿ ನಾರು ಉದ್ಯಮ ನಲುಗುತ್ತಿದೆ. ನರಳುವಿಕೆಯಲ್ಲೇ ಇದು ಮೇಲೆದ್ದು ನಳನಳಿಸುತ್ತಾ ದೇಶದಲ್ಲಿಯೇ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಆಶ್ಚರ್ಯ ಆಗುತ್ತಿದೆಯೇ? ಹೌದು, ತೆಂಗು ಬೆಳೆಯುವಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ೨ನೇ ಸ್ಥಾನ. ಭಾರತದಲ್ಲಿ ವಾರ್ಷಿಕ ೧೩ ಸಾವಿರ ದಶಲಕ್ಷ ತೆಂಗಿನಕಾಯಿ ಇಳುವರಿ ಬರುತ್ತಿದೆ. ಅದರಲ್ಲಿ ೧,೫೨೫ದಶಲಕ್ಷ ತೆಂಗು ಕರ್ನಾಟಕದಲ್ಲಿ ಬೆಳೆದವು !
ರಾಜ್ಯದ ೩,೮೭,೦೫೨ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇಲ್ಲಿನ ೧೫ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಬೆಳೆಯ ಶೇ.೧೭ರಷ್ಟು ಮಾತ್ರ ತೆಂಗಿನ ಸಿಪ್ಪೆಗಳನ್ನು ನಾರು ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ೪,೨೦೨ ತೆಂಗು ನಾರು ಉತ್ಪನ್ನಗಳ ತಯಾರಿಕಾ ಘಟಕಗಳಿವೆ. ಈ ಘಟಕಗಳಲ್ಲಿ ೨೦ಸಾವಿರ ಪುರುಷ ಹಾಗೂ ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ಇವುಗಳಿಂದ ವಾರ್ಷಿಕ ೨೪ ಸಾವಿರ ಮೆಟ್ರಿಕ್ ಟನ್ ನಾರು ಉತ್ಪಾದಿಸಲಾಗುತ್ತಿದೆ. ಈ ನಾರಿನಲ್ಲಿ ಶೇ.೪೦ ಮಾತ್ರ ‘ರಬ್ಬರೈಸ್ಡ್ ಕಾಯರ್ ಮ್ಯಾಟ್ರೆಸ್ ’ ತಯಾರಿಸಲು ಬೇಕಾಗುವ ಸುರುಳಿ ನಾರಿನ ಹಗ್ಗವನ್ನು ತಯಾರಿಸಲಾಗುತ್ತಿದೆ.
ಉಳಿದದ್ದನ್ನು ಕಾಯರ್ ಮ್ಯಾಟ್ಸ್ , ಮ್ಯಾಟಿಂಗ್ಸ್ , ಜಿಯೋ ಟೆಕ್ಸ್‌ಟೈಲ್ಸ್ , ಕೋಕೋಲಾನ್ ಬ್ರೆಷಸ್ ಮುಂತಾದ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿದೆ. ರಾಜ್ಯ ತೆಂಗು ನಾರಿನ ಸಹಕಾರ ಮಹಾಮಂಡಳಿಯು ಪ್ರತಿ ವರ್ಷ ೧೮ರಿಂದ ೪೦ಲಕ್ಷ ರೂ. ಲಾಭ ಗಳಿಸುತ್ತಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಉಳಿದ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆದರೂ ನಾರು ಉತ್ಪಾದನೆಗೆ ಬೇಕಾದ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಸರಕಾರಕ್ಕಿಲ್ಲ. ಜತೆಗೆ ಖಾಸಗಿಯವರೂ ಇಲ್ಲಿ ಘಟಕಗಳನ್ನು ಸ್ಥಾಪಿಸಲು ಹಿಂದೇಟು ಹಾಕುತ್ತಿದ್ದಾರೆ.
ನೆರೆಯ ಕೇರಳ ಹಾಗೂ ತಮಿಳುನಾಡುಗಳಲ್ಲಿ ತೆಂಗು ನಾರು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿರುವ ಪರಿಣಾಮ ಅವು ದೇಶದಲ್ಲಿಯೇ ಅತಿ ಹೆಚ್ಚು ಉತ್ಪಾದನೆ ಮಾಡುತ್ತಿವೆ. ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿವೆ. ಆ ಮೂಲಕ ಪ್ರಗತಿ ಸಾಸಿವೆ. ಆ ಇಚ್ಛಾಶಕ್ತಿ ನಮ್ಮ ರಾಜ್ಯ ಸರಕಾರಕ್ಕೆ ಏಕಿಲ್ಲ? ಕೃಷಿ, ಕೃಷಿ ಉತ್ಪನ್ನಗಳು, ಅದರ ಉಪ ಕಸುಬುಗಳು ಉದ್ಯಮವಾಗದೆ ರೈತರ ಉದ್ಧಾರ ಅಸಾಧ್ಯ. ಈ ನೀತಿ ಮಾತ್ರ ಸರಕಾರಗಳಿಗೆ ಅರ್ಥವಾಗುತ್ತಲೇ ಇಲ್ಲ.
ರಾಜ್ಯದಲ್ಲಿ ೩೦೨ ಕೇಂದ್ರಗಳಲ್ಲಿ ಈ ನಾರು ಹಾಗೂ ಅವುಗಳ ಉತ್ಪನ್ನಗಳ ತಯಾರಿಕೆ ನಡೆಯುತ್ತಿದೆ. ಆದರೆ ಅವುಗಳ ಜತೆಗೆ ೩,೯೦೦ ಮನೆಗಳಲ್ಲಿ ಗ್ರಾಮೀಣ ಮಹಿಳೆಯರೇ ಇದರಿಂದ ಉದ್ಯೋಗ ಕಂಡುಕೊಂಡಿದ್ದಾರೆ ! ಇದಕ್ಕೆ ಪ್ರೋತ್ಸಾಹ ನೀಡಿದರೆ ಸ್ವಯಂ ಉದ್ಯೋಗದ ಸೃಷ್ಟಿ ಹೆಚ್ಚಾಗುತ್ತದೆ ಎಂಬ ನಿದರ್ಶನ ಕಣ್ಣೆದುರೇ ಇದ್ದರೂ ರಾಜ್ಯ ಸರಕಾರ ಮಾತ್ರ ನಿರ್ಲಕ್ಷ್ಯತೋರುತ್ತಿದೆ. ಇದರಿಂದ ಇಡೀ ಉದ್ಯಮ ನಲುಗುತ್ತಿದೆ.
ರಾಜ್ಯದ ತುಮಕೂರು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೋಲಾರ, ಹಾಸನ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ಆದರೆ ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಇದು ಈ ನಾಡಿನ ದುಸ್ಥಿತಿ.
ರಫ್ತು ಮತ್ತು ಆದಾಯ :
ಭಾರತದಲ್ಲಿ ತೆಂಗು ನಾರನ್ನು ಒಂದು ಉದ್ಯಮವಾಗಿ ರೂಪಿಸಿದ್ದು ೧೯೬೫ರಲ್ಲಿ . ಆನಂತರ ತೆಂಗುನಾರು ತಂತ್ರeನ ಸಂಶೋಧನಾ ಕೇಂದ್ರೀಯ ಸಂಸ್ಥೆಯ ಸ್ಥಾಪನೆಯಾಯಿತು. ಈ ಸಂಸ್ಥೆ ೧೯೭೮ರಲ್ಲಿ ಹಲವೆಡೆ ತರಬೇತಿ ನೀಡಲಾರಂಭಿಸಿತು. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭಿಸಿದಾಗ ಅಂದಿನ ರಾಜ್ಯ ಸರಕಾರ ಪ್ರೋತ್ಸಾಹ ನೀಡಲಿಲ್ಲ.
ಆದರೂ ಭಾರತ ಪ್ರಸ್ತುತ ೬೫೦ ಕೋಟಿ ರೂ. ನಾರು ಉತ್ಪಾದನೆಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ರಫ್ತಿನಲ್ಲೂ ಕೇರಳ ಹಾಗೂ ತಮಿಳುನಾಡುಗಳದ್ದೇ ಮೇಲುಗೈ. ಕೇವಲ ಶೇ.೧೭ರಷ್ಟು ತೆಂಗು ನಾರನ್ನು ಬಳಕೆ ಮಾಡಿಕೊಳ್ಳುತ್ತಿರುವ ಕರ್ನಾಟಕಕ್ಕೆ ೩ನೇ ಸ್ಥಾನ. ಇದರ ನಡುವೆಯೂ ಒರಿಸ್ಸಾದಿಂದ ತೆಂಗು ನಾರಿನ ಕರಕುಶಲ ವಸ್ತುಗಳು ಹೆಚ್ಚು ರಫ್ತಾಗುತ್ತಿವೆ. ಕರ್ನಾಟಕದಿಂದ ಬೆಡ್ ಹಾಗೂ ಕುಷನ್ ವಸ್ತುಗಳು ಹೆಚ್ಚಾಗಿ ಹೊರ ದೇಶಗಳಿಗೆ ಸಾಗಣೆಯಾಗುತ್ತಿವೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಅತ್ಯಂತ ಬೇಡಿಕೆ ಸೃಷ್ಟಿಸಿವೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಕುರ್ಲಾ ಬೆಡ್ ಮತ್ತು ರಸ್ಟೋಲೆಕ್ಸ್‌ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಅರಸೀಕೆರೆ ಹಾಗೂ ತಿಪಟೂರು ನಾರು ಹಗ್ಗ ಹೆಚ್ಚು ಬಲಿಷ್ಠ ಎಂಬುದು ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ. ಇಲ್ಲಿನ ಮ್ಯಾಟ್ರೆಸ್‌ಗೆ ಕೂಡ ಸೌದಿ ಅರೇಬಿಯಾದಲ್ಲಿ ಬೇಡಿಕೆ ಹೆಚ್ಚಾಗಿದೆ. ಆಶ್ಚರ್ಯದ ಅಂಶ ಎಂದರೆ ಬೇಡಿಕೆಗೆ ತಕ್ಕ ಹಾಗೆ ನಾರು ಉತ್ಪನ್ನಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ !
ಇದೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ಅಂಶ ಎಂದರೆ ಮಲೆನಾಡು ಮತ್ತು ಕರಾವಳಿಯ ತೆಂಗು ನಾರು ಹೇಗೆ? ಅದರ ಗುಣಮಟ್ಟ ಎಷ್ಟು ? ಎಂಬುದರ ಬಗ್ಗೆ ಸಂಶೋಧನೆಗಳೇ ಆಗಲಿಲ್ಲ. ಈ ಭಾಗದಲ್ಲಿ ಹೇರಳವಾಗಿ ತೆಂಗು ಬೆಳೆದರೂ ಅದರ ನಾರು ಮಾತ್ರ ವಿನಾಕಾರಣ ಹಾಳಾಗುತ್ತಿದೆ. ಇದರ ನಡುವೆಯೂ ಬೆಂಗಳೂರಿನ ಕೆಂಗೇರಿ, ಮೈಸೂರು ರಸ್ತೆ, ಹೊರ ವಲಯದ ಹೊಸೂರುಗಳಲ್ಲಿ ಫ್ಲೈವುಡ್ ತಯಾರಿಸಲಾಗುತ್ತಿದೆ. ಹೊಸದಾಗಿ ಆವಿಷ್ಕಾರಗೊಂಡ ವಸ್ತುಗಳನ್ನು ತಯಾರಿಸಲು ಸರಕಾರದ ಪ್ರೋತ್ಸಾಹ ಹಾಗೂ ಯುವಜನತೆಯ ಆಸಕ್ತಿ ಬೇಕಿದೆ.
ಮಾರುಕಟ್ಟೆ ವ್ಯವಸ್ಥೆ:
ತೆಂಗು ನಾರು ಬಳಸಿ ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಕೇಂದ್ರ ಸರಕಾರ ದೇಶದ ೩೦ಕ್ಕೂ ಹೆಚ್ಚು ಕಡೆಗಳಲ್ಲಿ ಬೃಹತ್ ಶೋ ರೂಂ ನಿರ್ಮಾಣ ಮಾಡಿದೆ. ಇದರ ಜತೆಗೆ ದೇಶ, ವಿದೇಶಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳಲ್ಲಿ ನಾರು ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲು ಕೂಡ ಮಳಿಗೆ ನಿರ್ಮಿಸುತ್ತದೆ. ಒಂದು ಉದ್ಯಮ ಸಮೃದ್ಧವಾಗಿ ಬೆಳೆಯಲು ಇನ್ನೇನು ಬೇಕು ?
ರಾಜ್ಯದಲ್ಲಿ ಕೂಡ ತೆಂಗು ನಾರು ಸಹಕಾರ ಮಹಾ ಮಂಡಳಿ ೧೮ ಮಾರಾಟ ಮಳಿಗೆಗಳನ್ನು, ೨ ಸಂಚಾರಿ ಮಾರಾಟ ವಾಹನಗಳನ್ನು ಹೊಂದಿದೆ. ಆಗಾಗ ಪ್ರದರ್ಶನವೂ ನಡೆಯುತ್ತದೆ. ಆ ಮೂಲಕವೇ ಮಂಡಳಿ ೨೦೦೪ರಿಂದ ೨೦೦೮ರ ವರೆಗೆ ೭೨೬ ಲಕ್ಷ ರೂ. ವಹಿವಾಟು ನಡೆಸಿದೆ. ಆದರೂ ಬೇರೆ ಉದ್ಯಮದಂತೆ ಇದನ್ನೂ ಸರಕಾರ ಪರಿಗಣಿಸದಿರುವುದರಿಂದ ರಾಜ್ಯದ ಉದ್ಯಮಿಗಳು, ಕಾರ್ಮಿಕರು ಹೀನಾಯ ಸ್ಥಿತಿಯಲ್ಲಿದ್ದಾರೆ. ನೆರೆಯ ರಾಜ್ಯಗಳಲ್ಲಿ ಅವುಗಳಿಂದಲೇ ಅಭಿವೃದ್ಧಿ ಸಾಸಲಾಗುತ್ತಿದೆ. ಆ ಪ್ರe ಇಲ್ಲಿನ ಸರಕಾರಕ್ಕಿಲ್ಲ.
ಈ ಉದ್ಯಮದಲ್ಲಿ ದುಡಿಯುವ ರಾಜ್ಯದ ೨೦ ಸಾವಿರ ಕಾರ್ಮಿಕರಲ್ಲಿ ಶೇ.೭೫ರಷ್ಟು ಮಹಿಳೆಯರಿದ್ದಾರೆ. ಅದಲ್ಲಿ ಶೇ.೯೦ ಗ್ರಾಮೀಣ ಮಹಿಳೆಯರು. ಇದರಿಂದ ಕೇಂದ್ರ ಸರಕಾರ ಮಹಿಳಾ ಕಾಯರ್ ಯೋಜನೆ ಜಾರಿಗೊಳಿಸಿತು. ಕೇರಳ, ಒರಿಸ್ಸಾ, ತಮಿಳು ನಾಡು ಹಾಗೂ ಆಂಧ್ರಪ್ರದೇಶಗಳೇ ಹೆಚ್ಚು ಇದರ ಸದುಪಯೋಗ ಪಡೆದವು. ನಮ್ಮ ಸರಕಾರದ ತಾತ್ಸಾರದಿಂದ ಉದ್ಯಮ ಬೆಳೆಯಲೇ ಇಲ್ಲ. ೨೦೦೩ರಿಂದ ೨೦೦೭ರವರೆಗೆ ಕೇವಲ ೨,೧೮೦ ಮಹಿಳೆಯರು ಮಾತ್ರ ಈ ತರಬೇತಿ ಪಡೆದಿದ್ದಾರೆ. ಮಹಿಳೆಯರಿಗೆ ಕೇರಳ, ತಮಿಳುನಾಡು, ಆಂಧ್ರ ಸರಕಾರಗಳು ಶೇ.೭೫ ಸಬ್ಸಿಡಿ ನೀಡಿ, ಉತ್ತೇಜನ ನೀಡುತ್ತಿವೆ. ಇದರಿಂದ ವಾರ್ಷಿಕ ಹೆಚ್ಚು ಆದಾಯ ಬರುತ್ತಿದೆ. ಆದರೆ ಕರ್ನಾಟಕದಲ್ಲಿ...?
ರಾಜ್ಯ ಸರಕಾರದಿಂದಲೇ ಅನ್ಯಾಯ..!
ಈ ಉದ್ಯಮವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ೮ನೇ ಪಂಚವಾರ್ಷಿಕ ಯೋಜನೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಒರಿಸ್ಸಾ, ಅಸ್ಸಾಂಗಳಲ್ಲಿ ತೆಂಗು ನಾರು ತರಬೇತಿ ಮತ್ತು ಅಭಿವೃದ್ಧಿ ವಿಭಾಗೀಯ ಕಚೇರಿಯನ್ನು ತೆರೆದಿತ್ತು.
ಗ್ರಾಮೀಣ ಮಹಿಳೆಯರು ಹಾಗೂ ಯುವ ಜನರಿಗೆ ಈ ಉದ್ಯಮದ ಬಗ್ಗೆ ಸೂಕ್ತ ತರಬೇತಿ ನೀಡಿ, ಅಗತ್ಯ ಸವಲತ್ತು ನೀಡಿ, ಉದ್ಯಮವನ್ನು ಬೆಳೆಸುವುದು ಅದರ ಉದ್ದೇಶವಾಗಿತ್ತು. ರಾಜ್ಯದಲ್ಲಿ ಅರಸೀಕೆರೆಯಲ್ಲಿ ಕಚೇರಿ ತೆರೆಯಲಾಗಿತ್ತು. ತರಬೇತಿ ಹಾಗೂ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿತ್ತು. ಇದಕ್ಕಾಗಿ ಕೇಂದ್ರ ಸರಕಾರದ ಹಣದಲ್ಲಿ ಒಂದು ಸುಸಜ್ಜಿತ ಕಟ್ಟಡವನ್ನೂ ಕಟ್ಟಲಾಗಿತ್ತು.
ಅಲ್ಲಿ ಮೂರು ತಿಂಗಳ ತರಬೇತಿ ಕೋರ್ಸ್ ಆರಂಭಿಸಲಾಗಿತ್ತು. ಆ ಸಮಯದಲ್ಲಿ ತರಬೇತಿ ಪಡೆದವರು ಇಂದಿಗೂ ತೆಂಗು ನಾರು ಉದ್ಯಮವನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ. ಕೆಲವು ವರ್ಷಗಳವರೆಗೆ ಎಲ್ಲ ವಿಭಾಗೀಯ ಕಚೇರಿ ಹೊಣೆಯನ್ನು ಕೇಂದ್ರ ಸರಕಾರವೇ ಹೊತ್ತುಕೊಂಡಿತ್ತು. ಅವು ಸರಾಗವಾಗಿ ನಡೆಯುತ್ತವೆ ಎಂಬ ನಂಬಿಕೆ ಬಂದ ನಂತರ ಅವುಗಳನ್ನು ೧೦ನೇ ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ಆಯಾ ರಾಜ್ಯ ಸರಕಾರಗಳಿಗೆ ವಹಿಸಲಾಯಿತು. ಅಂದು ಅಕಾರದಲ್ಲಿದ್ದ ಸರಕಾರ ತೀವ್ರ ನಿರ್ಲಕ್ಷ್ಯವಹಿಸಿತು. ಇದರಿಂದಾಗಿ ಅರಸೀಕೆರೆಯ ಕಚೇರಿಯನ್ನು ಮುಚ್ಚಬೇಕಾಯಿತು !
ರಾಜ್ಯದಲ್ಲಿ ತೆಂಗು ನಾರು ಉದ್ಯಮ ಹಿಂದೆ ಬೀಳಲು ಮತ್ತೊಂದು ಪ್ರಮುಖ ಕಾರಣ ವಿದ್ಯುತ್. ರಾಜ್ಯದಲ್ಲಿ ೧೨೬.೭೩ ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ೭.೭೬ ದಶಲಕ್ಷ ಯೂನಿಟ್ ವಿದ್ಯುತ್ ಕೊರತೆಯಿದೆ. ಇದರಿಂದ ಸರಕಾರ ತೆಂಗುನಾರು ಉದ್ಯಮಕ್ಕೆ ವಿದ್ಯುತ್ ನೀಡುವುದಾದರೂ ಎಲ್ಲಿಂದ? ಉದ್ಯಮ ಸ್ಥಾಪಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳಲ್ಲಿ ಆ ಸರಕಾರಗಳು ವಿದ್ಯುತ್ ಸಬ್ಸಿಡಿ ನೀಡುತ್ತವೆ . ನಮ್ಮಲ್ಲಿ ಅದ್ಯಾವ ಸವಲತ್ತೂ ಇಲ್ಲ. ಈ ಕಾರಣದಿಂದಲೂ ಉದ್ಯಮದಲ್ಲಿ ತೊಡಗಿಕೊಳ್ಳಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರಕಾರ ಈ ವಿದ್ಯುತ್ ಕೊರತೆಯನ್ನು ನೀಗಿಸಿಕೊಂಡು, ಉದ್ಯಮಕ್ಕೆ ಪ್ರೋತ್ಸಾಹ ನೀಡಿದರೆ ಗ್ರಾಮೀಣ ಜನರ ಬದುಕು ಹಸನಾಗುತ್ತದೆ. ಜತೆಗೆ ರಾಜ್ಯಕ್ಕೂ ಹೆಚ್ಚು ಆದಾಯ ಹರಿದು ಬರುತ್ತದೆ.

ತೆಂಗು ನಾರಿನಲ್ಲಿ ಹೊಸ ಆವಿಷ್ಕಾರ !
*ಬೆಡ್, ಮ್ಯಾಟ್, ಹಗ್ಗ, ಸೇರಿದಂತೆ ಕುಷನ್ ವಸ್ತುಗಳು, ಗೊಬ್ಬರ ( ಕರ್ನಾಟಕ). *ಬೊಂಬೆ, ಜೋಕಾಲಿ, ಗಡಿಯಾರ, ಕರಕುಶಲ ವಸ್ತುಗಳು (ಒರಿಸ್ಸಾ) . * ಪಿತ್ ( ಪುಡಿ ನಾರು), ಕತ್ತ , ಹಗ್ಗ, ಮ್ಯಾಟ್ (ಅಲಂಕಾರಿಕ) ಮತ್ತಿತರ ತರಹೇವಾರಿ ವಸ್ತುಗಳು (ಕೇರಳ, ತಮಿಳುನಾಡು, ಆಂಧ್ರ ,ಅಸ್ಸಾಂ ). * ಊಟದ ತಟ್ಟೆ , ಲೋಟ, ಮಡಿಕೆ, ಅಲಂಕಾರಿಕ ಪಾಟ್, ಗ್ರೀನ್ ಹೌಸ್, ಟೈಲ್ಸ್ ,ಕುರ್ಚಿ, ಮೇಜು, ಟೇಬಲ್, ಮಂಚ ,ಕಿಟಕಿ , ಬಾಗಿಲು, ಪ್ಲೇ ವುಡ್ ಮುಂತಾದ ಗಟ್ಟಿ ವಸ್ತುಗಳು ( ಕರ್ನಾಟಕದ ಹೊಸ ಆವಿಷ್ಕಾರಗಳು)

ಒಂದು ತೆಂಗಿನ ಸಿಪ್ಪೆಗೆ ಎಲ್ಲೆಲ್ಲಿ ಎಷ್ಟು ದರ ?
ರಾಜ್ಯಗಳು ದರ
* ಕರ್ನಾಟಕ ೧.೫೦ರೂ. * ತಮಿಳುನಾಡು ೧.೦೦ರೂ.ನಿಂದ ೨.೦೦ರೂ. * ಕೇರಳ ೧.೫೦ ರೂ.ನಿಂದ ೨.೫೦ ರೂ. * ಆಂಧ್ರಪ್ರದೇಶ ೧.೦೦ರೂ. ನಿಂದ ೨.೦೦ರೂ. * ಓರಿಸ್ಸಾ ೨.೦೦ ರೂ.
Powered By Blogger