Sunday, September 6, 2009

ಬಂದಿದೆ ರೆಡಿಮೇಡ್ ‘ಹಸಿರು ಹಾಸಿಗೆ’

ಕೃಷಿ ಕ್ಷೇತ್ರದಲ್ಲಿ ಇದೊಂದು ಹೊಸ ಆವಿಷ್ಕಾರ. ಒಂದೆಡೆ ಹಸಿರು ಮಾಯವಾಗುತ್ತಿದ್ದರೆ ಈಗಿನ ದುನಿಯಾಗೆ ಅನುಕೂಲವಾಗುವ ಹಾಗೆ ಹಸಿರು ಬೆಳೆಸುವ ಹೊಸ ಆವಿಷ್ಕಾರಕ್ಕೆ ಕೇಂದ್ರ ನಾರು ಮಂಡಳಿ ಕೈ ಹಾಕಿದೆ. ಆಧುನಿಕತೆಗೆ ಎಷ್ಟೇ ಒಗ್ಗಿಕೊಂಡಿದ್ದರೂ ಮನುಷ್ಯನಿಗೆ ಹಸಿರಿನಿಂದ ದೂರ ಇರುವ ಸಾಮರ್ಥ್ಯವೇ ಇಲ್ಲ ಎಂಬುದು ನಿಶ್ಚಿತ. ಅದನ್ನು ಮನಗಂಡಿರುವ ಇಲ್ಲಿನ ಸಂಶೋಧಕರು ಆಧುನಿಕ ಜಗತ್ತಿಗೆ ಸರಿ ಹೊಂದುವಂಥ ‘ಹುಲ್ಲಿನ ಹಾಸಿಗೆ’ ತಯಾರಿಸಿದ್ದಾರೆ!
ಆಶ್ಚರ್ಯ ಆಗುತ್ತಿದೆಯೇ ? ನಿಜ, ಇದು ರೆಡಿಮೇಡ್ ಹಸಿರು ಹಾಸಿಗೆ (Green Lawn). ಹಸಿರು ನೆಲವೇ ಕಾಣದ ಈ ದಿನಮಾನಗಳಲ್ಲಿ ಪ್ರತಿ ಮನೆಗೂ ಹೊಂದಿಕೊಳ್ಳುವಂಥ ನೈಸರ್ಗಿಕ ಹಸಿರು ಹಾಸಿಗೆಯನ್ನು ತಯಾರಿಸುವ ತಂತ್ರeನವನ್ನು ನಾರು ಮಂಡಳಿಯ ಸಂಶೋಧಕರು ಕಂಡು ಹಿಡಿದಿದ್ದು, ಅದಕ್ಕೆ ಪೇಟೆಂಟ್ ಕೂಡ ಪಡೆದಿದ್ದಾರೆ. ಕೇರಳದ ಯಾಲಪಿಯಲ್ಲಿರುವ ಕೇಂದ್ರೀಯ ನಾರು ಸಂಶೋಧನ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಈ ಆವಿಷ್ಕಾರ ಮಾಡಲಾಗಿದ್ದು, ಈಗ ಕರ್ನಾಟಕದಲ್ಲೂ ಇದರ ಪ್ರಯೋಗವಾಗಿದೆ. ಈಗಾಗಲೇ ಮೂವರು ಇದರ ಸೌಲಭ್ಯ ಪಡೆದಿದ್ದಾರೆ.
ಭಾರತದಲ್ಲಿ ನ್ಯಾಷನಲ್ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಾಗೂ ನಾರು ಮಂಡಳಿ ಎರಡೂ ಕಡೆ ಇದನ್ನು ಹೇಗೆ ರೂಪಿಸುವುದು ಎಂಬುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಹಾಸಿಗೆ ರೆಡಿ ಮಾಡಲು ಕೆಲವು ತಂತ್ರeನಗಳಿವೆ. ಅದನ್ನು ಅದೇ ಮಾದರಿಯಲ್ಲಿ ತಯಾರಿಸಬೇಕು. ಹೀಗಾಗಿ ಇದಕ್ಕೆ ಪರವಾನಗಿ ಪಡೆದು ಆರ್ಥಿಕ ಒಪ್ಪಂದಕ್ಕೆ (MOU)ಸಹಿ ಹಾಕಬೇಕು. ಜತೆಗೆ ತರಬೇತಿಯನ್ನು ಪಡೆಯಬೇಕು. ಅದನ್ನು ನಾರು ಮಂಡಳಿ ಹಾಗೂ ರೂರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಮಾಡುತ್ತಿವೆ.
ಇದರಿಂದ ಅನುಕೂಲಗಳು:
ನಾರು ಹಾಗೂ ನಾರಿನ ಪುಡಿಯನ್ನು ಹಾಸಿಗೆ ರೂಪದಲ್ಲಿ ಬಳಸಿ ಹಸಿರನ್ನು ಬೆಳೆಸಲಾಗುತ್ತದೆ. ಇದರಲ್ಲಿ ಗರಿಕೆ ಸೇರಿದಂತೆ ಎಲ್ಲ ರೀತಿಯ ಹುಲ್ಲು ಹಾಸಿಗೆಯನ್ನೂ ತಯಾರಿಸಬಹುದು. ಒಂದೇ ಬಾರಿ ಹಲವು ಹಂತಗಳಲ್ಲಿ ಹಾಸಿಗೆ ತಯಾರಿಸಬಹುದು. ಇದರ ಮೇಲೆ ಹುಲ್ಲುಬೆಳೆಯಲು ಕನಿಷ್ಠ ಒಂದರಿಂದ ಒಂದೂವರೆ ತಿಂಗಳು ಬೇಕು. ಈ ಹಾಸಿಗೆಯಲ್ಲಿ ಹುಲ್ಲು ಬೆಳೆದ ನಂತರ ಅದನ್ನು ಬೆಡ್ ಶೀಟ್ ರೀತಿ ಮಡಚಿ ಇಡಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಲೀಸಾಗಿ ಇದನ್ನು ಸುತ್ತಿಕೊಂಡು ಹೋಗಬಹುದು ಅಥವಾ ಸ್ಥಳಾಂತರಿಸಬಹುದು. ಜತೆಗೆ ಯಾವ ಸ್ಥಳಕ್ಕೆ ಬೇಕೋ ಹಾಗೆ ಈ ಹುಲ್ಲನ್ನು ಕಟ್ ಮಾಡಿ ಜೋಡಿಸಬಹುದು. ಮನೆ ಮುಂದೆ ಈ ಹಾಸಿಗೆ ಜೋಡಿಸಿದರೆ ಇಡೀ ಮನೆ ಬೃಂದಾವನ !
ಈ ಹುಲ್ಲಿನ ಹಾಸಿಗೆಯನ್ನು ಕೇವಲ ಸಾಮಾನ್ಯ ಮನೆಗಳ ಮುಂದೆ ಹೊರಾಂಗಣಕ್ಕೆ ಮಾತ್ರವಲ್ಲ, ಮಹಡಿ ಮನೆಯಲ್ಲೂ ಅಲಂಕಾರಕ್ಕಾಗಿ ಬಳಸಬಹುದು. ಕಾಲುದಾರಿಯಲ್ಲೂ ಬಳಸಬಹುದು. ಮನೆಯ ಚಾವಣಿಗೆ ಕೂಡ ಬಳಸಬಹುದು. ಇದರಿಂದ ಮನೆ ಕೂಡ ತಂಪಾಗಿರುತ್ತದೆ. ರೆಸ್ಟೋರೆಂಟ್, ಆಸ್ಪತ್ರೆ ಹೀಗೆ ಎಲ್ಲೆಂದರೆ ಇದನ್ನು ಉಪಯೋಗಿಸಬಹುದು. ಎಲ್ಲ ಋತುಗಳಿಗೂ ಹೊಂದಿಕೊಳ್ಳುವ ಈ ಹುಲ್ಲಿನ ಹಾಸಿಗೆಯನ್ನು ಸುಲಭವಾಗಿ ಪೋಷಣೆ ಮಾಡಬಹುದು. ಜತೆಗೆ ಇದು ಶೇ. ೮೦೦ರಷ್ಟು ತಂಪಾಗಿರುವುದರಿಂದ ಸುತ್ತಮುತ್ತಲಿನ ವಾತಾವರಣ ಕೂಡ ತಂಪಾಗಿರುತ್ತದೆ.
ಹಾಸಿಗೆ ಬೆಳೆಸುವ ವಿಧಾನ:
ನಾರನ್ನು ಮೊದಲು ತಾಂತ್ರ್ರಿಕವಾಗಿ ಜೋಡಿಸಿಕೊಂಡು (ನೀಡಲ್ ಫಿಲ್ಟ್ ಮಾಡಿ) ಒಂದು ಸ್ಥಳದಲ್ಲಿ ಅದನ್ನು ಸಮನಾಗಿ ಹರಡಿಕೊಳ್ಳಬೇಕು. ಅದರ ಮೇಲೆ ಜಿಯೋಟೆಕ್ಸೆಲ್ಸ್ ( ತಿಳಿ ಮಣ್ಣಿನಾಕಾರದ ನಾರು ಪುಡಿ) ಅದರ ಮೇಲೆ ಪಿಥ್(ಸಂಸ್ಕರಿಸಿದ ನಾರು ಪುಡಿ) ಹಾಕಿ, ಸ್ವಲ್ಪ ನೀರು ಚಿಮುಕಿಸಬೇಕು. ಅದರಲ್ಲಿ ನಿಮಗೆ ಯಾವ ಹುಲ್ಲು ಬೇಕೋ ಆ ಹುಲ್ಲಿನ ಬೀಜ ಬಿತ್ತಬೇಕು, ಇಲ್ಲವೇ ಬೇರು ಹೊಂದಿರುವ ಹುಲ್ಲಿನ ಚೂರುಗಳನ್ನು ನೆಟ್ಟರೂ ಸಾಕು. ಅನಂತರ ಇದಕ್ಕೆ ಪ್ರತಿನಿತ್ಯ ನೀರು ಚಿಮುಕಿಸುತ್ತಿರಬೇಕು. ಹೀಗೆ ಮಾಡಿದರೆ ಕೇವಲ ಒಂದೂವರೆ ತಿಂಗಳಿನಲ್ಲಿ ನಿಮಗೆ ಹುಲ್ಲಿನ ಹಾಸಿಗೆ ತಯಾರಾಗುತ್ತದೆ. ಹುಲ್ಲಿನ ಬೇರುಗಳು ಕೂಡ ಭದ್ರವಾಗುತ್ತವೆ. ಆಗ ನೀವು ಯಾವ ಆಕಾರಕ್ಕೆ ಬೇಕೋ ಆ ಆಕಾರಕ್ಕೆ ಸಲೀಸಾಗಿ ಕಟ್ ಮಾಡಿ ಅದನ್ನು ನಿಮಗೆ ಬೇಕಾದ ಸ್ಥಳಗಳಲ್ಲಿ ಜೋಡಿಸಿಕೊಳ್ಳಬಹುದು.
Powered By Blogger