Monday, March 7, 2011

ಅದ ಮರೆತೇವೆಂದರೆ ಬದುಕುವುದ್ಹೆಂಗ...!?

ಭಾರತದಲ್ಲಿ ಶೇ.೫೧ರಷ್ಟು ಮಕ್ಕಳು, ರಾಜ್ಯದಲ್ಲಿ ೯,೪೪೬ ಮಕ್ಕಳು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಶೇ.೪೬ ಮಕ್ಕಳಿಗೆ ಕೇವಲ ಆರು ತಿಂಗಳಿಗೇ ಕುಡಿಯಲು ಎದೆ ಹಾಲು ಸಿಗುತ್ತಿಲ್ಲ. ವಿಶ್ವದ ೩೩ ದೇಶಗಳಲ್ಲಿ ಹಸಿವು ರೌದ್ರ ನರ್ತನ ಮಾಡುತ್ತಿದ್ದು, ಭಾರತ ಕೂಡ ಅದರಲ್ಲೊಂದು. ಭಾರತದ ೧೭ರಾಜ್ಯಗಳಲ್ಲಿ ಸರಾಸರಿ ಶೇ.೯೫ ಮಂದಿ ಹೊಟ್ಟೆಗೆ ಅನ್ನ ಗಂಜಿಯೂ ಇಲ್ಲದೆ ನಿತ್ಯ ಬದುಕಿಗಾಗಿ ಪರಿತಪಿಸುತ್ತಿದ್ದಾರೆ...
ಇದರ ಅರ್ಥ ಎಲ್ಲೆಡೆ ಆಹಾರದ ಅಭದ್ರತೆ ಕಾಡುತ್ತಿದೆ ಎಂಬುದು. ಎಲ್ಲೋ ಒಂದು ಕಡೆ ನಾವು ಅಭಿವೃದ್ಧಿ, ನಾಗರಿಕತೆ, ಸಂಸ್ಕೃತಿಯ ಪಲ್ಲಟಗಳ ನೆಪದಲ್ಲಿ ಹೊಟ್ಟೆಗೆ ಹಿಟ್ಟು ನೀಡುವ ನೆಲವನ್ನು ಮರೆತಿದ್ದೇವೆ ಎನ್ನುವುದು ಇವುಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ. ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’. ಆದರೆ ನಾವು ಬಟ್ಟೆಯ ಜತೆಗೆ ಬೇರೆ ಬೇರೆ ಅಗತ್ಯಗಳ ಕಡೆ ಗಮನ ಹರಿಸುತ್ತಿದ್ದೇವೆಯೇ ಹೊರತು, ನಿತ್ಯ ಚೈತನ್ಯ ನೀಡುವ ಹೊಟ್ಟೆಯ ಬಗ್ಗೆ, ಹೊಟ್ಟೆಗೆ ಹಿಟ್ಟು ಒದಗಿಸುವ ಕೃಷಿಯ ಬಗ್ಗೆ ಅಷ್ಟಾಗಿ ಗಮನಹರಿಸುತ್ತಿಲ್ಲ ಎನ್ನುವುದನ್ನು ನಾವೆಲ್ಲ ಪ್ರಶ್ನಾತೀತವಾಗಿ ಒಪ್ಪಿಕೊಳ್ಳಲೇಬೇಕಿದೆ.
ಭಾರತ ಶೇ.೭೨ರಷ್ಟು ಕೃಷಿ ಭೂಮಿಯನ್ನು ಹೊಂದಿದೆ. ಆದರೆ ಇತ್ತೀಚೆಗೆ ಅದರ ಪ್ರಮಾಣ ಕುಸಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ! ಜತೆಗೆ ಕೃಷಿ ಭೂಮಿ ಇದ್ದೂ ಆಹಾರ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಗೆಯೇ ಅವುಗಳ ದರ ಕೂಡ ಗಗನಕ್ಕೇರುತ್ತಿದೆ. ಈ ವರ್ಷ ೨೧೦೮.೩೬ಮೆಟ್ರಿಕ್ ಟನ್ ಈರುಳ್ಳಿ ಬೆಳೆದಿದ್ದರೂ ಅದು ಸಾಕಾಗದೆ ಅಭಾವ ಸೃಷ್ಟಿಯಾಗಿ(ಮಳೆಯಿಂದಲೂ ಇಳುವರಿ ಕುಂಠಿವಾಗಿದೆ) ಇದರ ದರ ಪ್ರತಿ ಕೆಜಿ. ೭೦ರ ಗಡಿ ದಾಟಿದೆ.
ಈ ವರ್ಷ ಭಾರತದಲ್ಲಿ ೧,೬೩,೪೩೫.೧೮ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ. ಇಷ್ಟಾದರೂ ೧೭ರಾಜ್ಯಗಳಲ್ಲಿ ಸಾಮಾನ್ಯ ಜನರಿಗೆ ತಿನ್ನಲೂ ಗಂಜಿಯೂ ಗತಿ ಇಲ್ಲ ಎಂದರೆ ಈ ದೇಶದ ಕೃಷಿ ಎತ್ತ ಸಾಗುತ್ತಿದೆ ಎನ್ನುವುದನ್ನು ಅರಿಯಲೇಬೇಕು. ಕರ್ನಾಟಕ, ಬಿಹಾರ, ಜಾರ್ಕಂಡ್, ಮಧ್ಯ ಪ್ರದೇಶ ತೀರಾ ಬಡತನದಲ್ಲಿ ಬದುಕುತ್ತಿವೆ. ಇದ್ದುದರಲ್ಲಿ ಪಂಜಾಬ್, ಕೇರಳ, ಓರಿಸ್ಸಾ ರಾಜ್ಯಗಳ ಪರಿಸ್ಥಿತಿ ಪರವಾಗಿಲ್ಲ ಎನ್ನುತ್ತವೆ ಪ್ರಸಕ್ತ ವರ್ಷದ ಸಮೀಕ್ಷೆಗಳು. ಹೀಗಿದ್ದೂ ಸರಕಾರಗಳು ಕೃಷಿ ಪ್ರಗತಿ ಹಾಗೂ ಅವುಗಳ ಉತ್ತೇಜನಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತವೇ ಸರಿ.
ದೇಶದ ಪ್ರಗತಿ ಎಂದರೆ ಕೇವಲ ಕೈಗಾರಿಕೆಗಳ ಅಭಿವೃದ್ಧಿ ಎನ್ನುವಂತಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎಲ್ಲ ಯೋಜನೆಗಳೂ ರೈತರ ಜಮೀನಿಗೇ ಹೋಗಿ ನಿಲ್ಲುತ್ತಿವೆ. ಇದರಿಂದ ನಿತ್ಯ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಆಹಾರ ಅಭದ್ರತೆ ದಿನೇದಿನೇ ಹೆಚ್ಚಾಗಿ ಕಾಡುತ್ತಿದೆ. ೧೯೬೦ರಲ್ಲಿ ಆಹಾರ ಸಮಸ್ಯೆ ಕೇವಲ ಭಾರತವನ್ನು ಮಾತ್ರವಲ್ಲ ಇಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡಿದ್ದು ಸುಳ್ಳಲ್ಲ. ಆಗ ಕೃಷಿ ಪ್ರಗತಿಯ ಬಗ್ಗೆ ಕೇವಲ ಶೇ.೨೦ ಮಂದಿ ಮಾತ್ರ ಚಿಂತನೆ ನಡೆಸಿದರು. ಆಹಾರ ಉತ್ಪಾದನೆಯ ಕಡೆ ಹೆಚ್ಚು ಗಮನಹರಿಸಿದ್ದರಿಂದ ತತಕ್ಷಣದಲ್ಲಿಯೇ ಆಹಾರ ಉತ್ಪಾದನೆ, ಅವುಗಳ ಮಾರಾಟ, ಸರಬರಾಜು ಹೀಗೆ ಎಲ್ಲೆಂದರಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯವಾಯಿತು. ಇದರಿಂದ ಎಲ್ಲೆಡೆ ತುಸು ಪ್ರಗತಿ ಕಂಡಿತಾದರೂ ನಂತರದ ದಿನಗಳಲ್ಲಿ ಅದು ಮತ್ತೆ ದಿಕ್ಕು ತಪ್ಪಿತು. ಅದರ ಪರಿಣಾಮ ಮತ್ತೆ ಆಹಾರ ಸಮಸ್ಯೆ ಸೃಷ್ಟಿಯಾಗುತ್ತಿದೆ.
ಕರ್ನಾಟಕ ಒಂದರಿಂದಲೇ ಈ ಬಾರಿ ೮,೦೮೫.೪೦ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ. ಇಷ್ಟಾದರೂ ಆಹಾರ ಸಾಕಾಗುತ್ತಿಲ್ಲ. ಅದಕ್ಕೆ ಕಾರಣ ಒಂದೆಡೆ ಜನಸಂಖ್ಯಾ ಸ್ಫೋಟ ಮತ್ತೊಂದೆಡೆ ಕೃಷಿ ಬಗೆಗಿನ ನಿರ್ಲಕ್ಷ್ಯ. ಒಬ್ಬ ರೈತ ಒಂದು ದಿನ ಕೃಷಿ ಬಿಟ್ಟು ಹೊರ ನಡೆದರೆ ಅಂದು ಕನಿಷ್ಠ ಹತ್ತು ಮಂದಿ ಉಪವಾಸ ಮಲಗಬೇಕು! ಹೀಗಿರುವಾಗ ರೈತರ ಮಕ್ಕಳು ವಿದ್ಯಾವಂತರಾದ ತಕ್ಷಣ ರೈತಾಪಿಯನ್ನು ಬಿಟ್ಟು ಬೇರೆ ದುಡಿಮೆ ಹುಡುಕುತ್ತಿದ್ದಾರೆ. ಇದಕ್ಕೆ ಕಾರಣ ಅವರಿಗೆ ಕೃಷಿ ಬಗ್ಗೆ ಒಲವಿಲ್ಲ ಎಂದಲ್ಲ, ಬದಲಿಗೆ ಅದರಲ್ಲಿ ಯಾವುದೇ ಲಾಭವಿಲ್ಲ; ಬದುಕು ಅಸಾಧ್ಯ ಎನ್ನುವ ಸ್ಥಿತಿಯನ್ನು ಸರಕಾರಗಳು ಸೃಷ್ಟಿಸಿರುವುದು. ಒಂದು ಚಿಕ್ಕ ಚಾಕೋಲೇಟ್ ತಯಾರಿಸುವವನು ಕೂಡ ಅದರ ಬೆಲೆಯನ್ನು ಆತನೇ ನಿರ್ಧರಿಸುತ್ತಾನೆ. ಆದರೆ ರೈತನಿಗೆ ಆ ಹಕ್ಕು ಇಲ್ಲವೇ ಇಲ್ಲ. ಸರಕಾರವಾದರೂ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುತ್ತದೆ ಎಂದರೆ ಊಹೂಂ... ಅದೂ ಸಿಗುತ್ತಿಲ್ಲ, ಒಂದುವೇಳೆ ಅಲ್ಪಸ್ವಲ್ಪ ಬೆಲೆ ಸಿಗಬೇಕು ಎಂದರೂ ಆತ ಬೀದಿಗೆ ಬಂದು ತನ್ನ ಉತ್ಪನ್ನಗಳನ್ನು ಸುರಿದು ಪ್ರತಿಭಟಿಸಬೇಕು. ಹೀಗಿರುವಾಗ ಯಾವ ರೈತ ತಾನೆ ತನ್ನ ಮಗ ರೈತನಾಗಬೇಕೆಂದು ಬಯಸುತ್ತಾನೆ?
ಇದರ ನಡುವೆ ಒಂದಿಲ್ಲೊಂದು ಕಾರಣ ನೀಡಿ ರೈತರಿಗೆ ಹಣದಾಸೆ ತೋರಿಸಿ ಅವರ ಜಮೀನುಗಳನ್ನು ಒಣ ಭೂಮಿಯ ಹೆಸರಿನಲ್ಲಿ ಮುಟ್ಟುಗೋಲು ಹಾಕಿಕೊಂಡು ಪುಡಿಗಾಸು ನೀಡಿ ಕೃಷಿ ಬಿಡಿಸಿದರೆ ಈ ದೇಶದಲ್ಲಿ ಆಹಾರ ಅಭದ್ರತೆ ಕಾಡದೆ ಇನ್ನೇನಾದೀತು? ಅದಕ್ಕಾಗಿಯೇ ಮಹಾತ್ಮಾ ಗಾಂಧೀಜಿ ‘ಅದು ಯಾವುದೇ ಸಮಾಜವಾಗಲಿ ಅಲ್ಲಿ ಮನುಷ್ಯ ಮುಖ್ಯವಾಗಬೇಕು. ಯಂತ್ರಗಳಲ್ಲ!’ ಎಂದಿದ್ದರು.
ಆದರೆ ಆ ರೀತಿ ಚಿಂತನೆಗಳೇ ಇಲ್ಲ. ಬದಲಿಗೆ ‘ರೈತ ದೇಶದ ಬೆನ್ನೆಲುಬು’ ಎನ್ನುತ್ತಲೇ ಆತನನ್ನು ಜಾಗತಿಕರಣವೆಂಬ ಜೇಡರ ಬಲೆಯಲ್ಲಿ ಸಿಕ್ಕಿಸಿ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ. ಸಾವಲ್ಲದೆ ಆತನಿಗೆ ಬೇರೆ ದಾರಿ ಕಾಣದಂತ ಸ್ಥಿತಿಗೆ ಆತನನ್ನು ದೂಡಲಾಗುತ್ತಿದೆ. ಮೊದಲೇ ಕೃಷಿ ಮಳೆಯೊಂದಿಗಿನ ಜೂಜಾಟ. ಅದರಲ್ಲಿ ನಿತ್ಯ ರೈತ ಸೋಲುತ್ತಲೇ ಅದರಲ್ಲೇ ಬದುಕು ಕಂಡುಕೊಳ್ಳಲು ಶತಪ್ರಯತ್ನ ನಡೆಸುತ್ತಲೇ ಇರುತ್ತಾನೆ. ಆದರೆ ಅದ್ಯಾವುದನ್ನೂ ಯಾವುದೇ ಸರಕಾರಗಳು ಅರ್ಥ ಮಾಡಿಕೊಳ್ಳದೆ ಅವನ ಭೂಮಿ ಹಾಗೂ ಆತನ ಬದುಕು ಎರಡನ್ನೂ ನುಂಗಿ ನೀರು ಕುಡಿಯಲು ಯತ್ನಿಸುತ್ತವೆ.
ಭುವಿಯ ಬಗ್ಗೆ ಹೀಗೆಯೇ ನಿರ್ಲಕ್ಷ್ಯ ತೋರುತ್ತಾ ಬಂದರೆ ಈಗಿರುವ ವಾತಾವರಣವೇ ೨೦೫೦ ವೇಳೆಗೆ ಸಂಪೂರ್ಣವಾಗಿ ಬದಲಾಗಲಿದೆ ಎಂಬ ಮಾತುಗಳು ವಿeನ ವಲಯದಲ್ಲಿ ಕೇಳಿಬರುತ್ತಿವೆ. ಅದು ನಿಜವಾದರೆ ಆಹಾರ ಉತ್ಪಾದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶೇ.೭.೬ರಿಂದ ಶೇ.೧೨.೧ರಷ್ಟು ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶೇ.೬.೮ರಿಂದ ಶೇ.೧೨.೨ರಷ್ಟು ತಾನೇ ತಾನಾಗಿ ಕಡಿಮೆಯಾಗುತ್ತದೆ. ಇದರಿಂದ ಆಹಾರ ಉತ್ಪಾದನೆಯ ಪ್ರಮಾಣ ಸಂಪೂರ್ಣವಾಗಿ ಕುಸಿದು ಬೀಳುತ್ತದೆ. ಆಗ ಎಲ್ಲ ರಾಷ್ಟ್ರಗಳೂ ಆಹಾರಕ್ಕಾಗಿ ಪರಿತಪಿಸಬೇಕಾಗುತ್ತದೆ. ಮುಂದೊಂದು ದಿನ ಮನುಷ್ಯನೇ ಮುನುಷ್ಯನನ್ನು ಕೊಂದು ತಿನ್ನುವ ಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ...
ಆದ್ದರಿಂದ ಮೊದಲು ‘ಅಭಿವೃದ್ಧಿ’ಯ ಬಗೆಗಿನ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ. ಅಭಿವೃದ್ಧಿ ಎಂದರೆ ಕೃಷಿಯ ಪ್ರಗತಿ. ಕೃಷಿ ಕ್ಷೇತ್ರದಲ್ಲಿ ಮನುಷ್ಯನಿಗೆ ಕೈತುಂಬ ಕೆಲಸ ಹಾಗೂ ಹೊಟ್ಟೆ ತುಂಬಾ ಆಹಾರ ಪ್ರದಾರ್ಥ ಸಿಗುವಂತಾಗಲು ಯಾವ ರೀತಿಯ ಯೋಜನೆ ರೂಪಿಸಬೇಕೋ ಅದನ್ನು ಮಾಡಬೇಕಿದೆ. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಎನ್ನುವುದನ್ನು ಮರೆತು ಮನುಷ್ಯನಲ್ಲಿರುವ ಬಡತನ ನಿವಾರಣೆ ಮಾಡಿ, ಸಾಮಾಜಿಕ ಭದ್ರತೆ, ಉತ್ತಮ ಆರೋಗ್ಯ ಹಾಗೂ ಪೌಷ್ಠಿಕ ಆಹಾರ ಸಿಗುವಂತೆ ಮಾಡುವಂತಾಗಬೇಕು.
ಈ ನಿಟ್ಟಿನಲ್ಲಿ ಯೋಚಿಸುತ್ತ ಕೃಷಿ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಬೇಕಿದೆ. ಆಗ ಆರ್ಥಿಕ ಭದ್ರತೆ ಹಾಗೂ ಇನ್ನಿತರ ಸವಲತ್ತುಗಳು ತಾನೇ ತಾನಾಗಿ ದೊರೆಯುತ್ತವೆ. ಅದು ಬಿಟ್ಟು ಕೇವಲ ಯಂತ್ರಗಳ ಹಿಂದೆ ಬಿದ್ದು ಕೃಷಿಯನ್ನೇ ಮರೆತು ಧಿಕ್ಕರಿಸಿ ನಿಂತರೆ ನಾಳೆ ಹೊಟ್ಟೆಗೆ ತಿನ್ನುವುದಾದರೂ ಏನನ್ನ? ಬದುಕು ನಡೆಸುವುದಾರೂ ಹೆಂಗ?

Saturday, January 22, 2011

ಮಾನಗೆಟ್ಟ ಸಿ.ಎಂ. : ಮರ್ಯಾದೆ ಮರೆತ ಮತದಾರ.

ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಬಹಳ ವರ್ಷಗಳಿಂದ ಹೊಸ ಬದಲಾವಣೆಯನ್ನು ಬಯಸುತ್ತಿದ್ದ ಕರ್ನಾಟಕಕ್ಕೆ ಇಂಥ ಹೀನ ಸ್ಥಿತಿ ಬೇಕಿತ್ತಾ ಎಂಬ ಪ್ರಶ್ನೆ ಕಾಡುತ್ತದೆ. ರಾಜ್ಯದಲ್ಲಿ ಎಲ್ಲ ಬಗೆಯ ಸರಕಾರಗಳನ್ನು ನೋಡಿ ಆಗಿದೆ ಇನ್ನು ಬಿಜೆಪಿಯನ್ನು ಒಮ್ಮೆ ನೋಡಿ ಬಿಡೋಣ ಎಂದು ಕುತೂಹಲಬರಿತನಾಗಿ ಬೆಮ್ಬಲಿಸಿದ್ದ ಮತದಾರೆ ಈಗೆ ಬಾಯಿ ಬಿಗಿ ಹಿಡಿದು ಕೂರುವ ಸ್ಥಿತಿ ನಿಮಾನವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ... ಆದ್ರೆ ಆ ಎಲ್ಲ ಕಾರಣಗಳನ್ನು ನೋಡಿದರೆ ಅವೆಲ್ಲವೂ ಕುಖ್ಯಾತಿ...!!
ನಿಜ ಹೇಳಿ ಇಂಥ ಸರಕಾರ ಬೇಕಿತ್ತಾ...!? ಖಂಡಿತಾ ಇಲ್ಲ ಎನಿಸದಿರದು. ಸತತ 30 ವರ್ಷಗಳಿಂದ ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿದಿಸುತ್ತಲೇ ವಿರೋಧ ಪಕ್ಷದ ನಾಯಕನಾಗಿ ಮೆರೆದ ಯಡಿಯೂರಪ್ಪ ಆರಂಭದಿಂದಲೂ ರೈತರ ಹೆಸರನ್ನೇ ಹೇಳಿಕೊಂಡು ಬೆಳೆದವರು. ಶಿಕಾರಿಪುರದ ಬಗರ್ ಹುಕುಂ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಪಾದಯಾತ್ರೆ ಮಾಡುವ ಮೂಲಗೆ ಶೈನ್ ಆದ ಯಡಿಯೂರಪ್ಪ ಎಂದು ಶಿಕಾರಿಪುರದ ಅಭಿರುದ್ಧಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ...
ಆದರೆ ಉಪ ಮುಖಮಂತ್ರಿಯಾದ ಮೇಲೆ ಕೇವಲ ಶಿಕಾರಿಪುರ ಮಾತ್ರವಲ್ಲ ಶಿವಮೊಗ್ಗ ಜಿಲ್ಲೆಯನ್ನೇ ಕೊಂಚ ಅಭಿರುದ್ಧಿಯ ದಿಕ್ಕಿನತ್ತ ಕೊಂಡೊಯ್ದಿದ್ದು ನಿಜ. ಆದರೆ ಅಲ್ಲೂ ಭ್ರಷ್ಟತನ ಮೆರೆದಿದ್ದು ಅಷ್ಟೇ ಸತ್ಯ. ಆದ್ರೆ ಶಿಕಾರಿಪುರದ ಬಗರ್ ಹುಕುಂ ರೈತರ ಸಮಸ್ಯೆ ಇನ್ನೂ ಹಾಗೆ ಇದೆ.
ಈ ನಡುವೆ ರಾಜ್ಯಾದ್ಯಂತ ತಮ್ಮ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಂಡಿರುವ ಯಡಿಯೂರಪ್ಪ ಸಿಕ್ಕ ಸಿಕ್ಕಲ್ಲೆಲ್ಲ ತಿಂದು ತೆಗಿದ್ದಾರೆ. ಈ ಹಿಂದೂ ಕಾಂಗ್ರೆಸ್ ಹಾಗು ಜೆಡಿಎಸ್ ಸರಕಾರಗಳು ತಿಂದು ತೆಗಿವೆ ನಿಜ. ಆದ್ರೆ ಯಡಿಯೂರಪ್ಪನಷ್ಟುನುಂಗಿ ನೀರು ಕುಡಿದಿಲ್ಲ. ಆ ಎರಡು ಪಕ್ಷಗಳು ಸೇರಿ 60 ವರ್ಷ ತಿಂದಿದ್ದನ್ನ ಯಡಿಯೂರಪ್ಪ ಕೇವಲ ಎರಡೂವರೆ ವರ್ಷದಲ್ಲಿ ನುಂಗಿದ್ದಾರೆ. ಅದು ಸ್ಪಷ್ಟವಾಗಿ ಜನರ ಕಣ್ಣಿಗೆ ರಾಚುತ್ತಿದೆ.
ಇದಕ್ಕಾಗಿ ಶಿವಮೊಗ್ಗದವರೇ ಅದ ಸಿರಾಜಿನ್ ಬಾಷಾ ಹಾಗು ಬಾಲರಾಜ್ ಸೇರಿ ರಾಜ್ಯಪಾಲರಿಗೆ ಮುಖ್ಯ ಮಂತ್ರಿಗಳ ವಿರುದ್ಧ ಪ್ರಾಶಿಕ್ಯುಶನ್ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರಿಂದ ಆವರ ದಾಖಲೆಗಳನ್ನು ನೋಡಿ 20 ದಿನಗಳ ಕಾಲ ಪರಿಶೀಲಿಸಿ ರಾಜ್ಯಪಾಲ ಹನ್ಸರಾಜ್ ಭಾರದ್ವಾಜ್ ಕೇಸು ದಾಖಲಿಸಲು ಒಪ್ಪಿಗೆ ನೀಡಿದ್ದಾರೆ. ಅವರು ಮಾಡಿದ್ದರಲ್ಲಿ ಯಾವ ತಪ್ಪು ಇಲ್ಲ.. ಆಡಳಿತ ಪಕ್ಷದ ಆಟಾಟೋಪ ನೋಡಿಕೊಂಡು ಕೂರಲು ಅವರೇನು ಪ್ರತಿಪಕ್ಷದ ಮುಖಂಡರಲ್ಲ. ನಿಜ ಹೇಳಬೇಕೆಂದರೆ ಇಲ್ಲ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗು ಜೆಡಿಎಸ್ ಕೂಡ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿವೆ.
ಆದರೆ ಜನರ ಪರವಾಗಿ ರಾಜ್ಯಪಾಲರು ಸರಿಯಾದ ನಿರ್ಧಾರ ತೆಗೆದುಕೊಂಡು ಕೇಸು ದಾಖಲಿಸಲು ಅವಕಾಶ ನೀಡಿದ್ದರಿಂದ ರಾಜ್ಯ ಸರಕಾರ ತನ್ನ ಬಿಜೆಪಿ ಪಾಳಯಕ್ಕೆ ಹೇಳಿ ಅನಾವಶಕವಾಗಿ ಬಂದ್ ನಡೆಸಿ 65 ಕ್ಕೂ ಹೆಚ್ಚು ಬಸ್ಗಳಿಗೆ ಕಲ್ಲು ಹೊಡೆಸಿದೆ. ಕೇವಲ ಸಾರಿಗೆ ಬಸ್ ಸಂಚಾರ ನಿಲ್ಲಿಸಿದ್ದರಿಂದ ಸರಕಾರಕ್ಕೆ 4.5 ಲಕ್ಷ ರೂ. ನಷ್ಟವಾಗಿದೆ. ಇದಕ್ಕೆಲ್ಲ ಕಾರಣ ಯಡಿಯೂರಪ್ಪ.
ಬಂದ್ ನಿಂದ ರಾಜ್ಯದ ನಾನ ಜಿಲ್ಲೆಗಳಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಗುಂಡಾಗಿರಿ ಮೆರೆದರು ಯಡಿಯೂರಪ್ಪ ಮಾತ್ರ "ಜನ ಸ್ವಯಂಪ್ರೇರಿತರಾಗಿ ಬಂದ್ ನಡೆಸಿದ್ದಾರೆ " ಎಂದು ಹೇಳಿ ತಿಪ್ಪೆ ಸಾರಿಸಿದ್ದಾರೆ. ಇಂತ ಹೇಸಿಗೆ ರಾಜಕಾರಣಕ್ಕೆ ಇಳಿದಿರುವ ಯಡಿಯೂರಪ್ಪನಿಗೆ ಜನ ಕೂಡ ಪ್ರತಿಕ್ರಯಿಸದೆ ಸುಮ್ಮನೆ ಕುಳಿತು ನೋಡುತ್ತಿರುವುದು ಮಾತ್ರ ದುರಂತವೇ ಸರಿ.
ಜನ ಹೀಗೆ ಸುಮ್ಮನೆ ಕುಳಿತುಕೊಳ್ಳುವ ಪ್ರವೃತ್ತಿಯನ್ನು ಮುಂದುವರಿಸಿದರೆ ಯಡಿಯೂರಪ್ಪ ಮುಂದೊಂದು ದಿನ ಈ ರಾಜ್ಯವನ್ನು ಅಡವಿಟ್ಟರು ಆಶ್ಚರ್ಯವಿಲ್ಲ... ಕರ್ನಾಟಕ ಕಂಡರಿಯದ ಮುಖ್ಯಮಂತ್ರಿಯಾದ ಯಡಿಯೂರಪ್ಪ ರಾಜ್ಯದಲ್ಲೇ ಮೊದಲ ಬಾರಿಗೆ ಸರಕಾರವೇ ಮುಂದೆ ನಿಂತು ಬಂದ್ ಆಚರಿಸಿದ ಕುಖ್ಯಾತಿಗೂ ಪಾತ್ರರಾಗಿದ್ದಾರೆ. ಪ್ರಜಾಪ್ರಭುತ್ವವನ್ನೇ ಅರಿಯದೆ ಹೀಗೆ ಪ್ರಜೆಗಳ ಸಮಸ್ಯೆ ಹಾಗು ಅವರ ಕಷ್ಟಗಳನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಲಜ್ಜೆಗೆಟ್ಟು ಅಧಿಕಾರ ದಾಹ ತೋರುತ್ತ ಜನರ ಕಣ್ಣಿಗೆ ಮನ್ನೆರೆಚಿ ಸ್ವ ಹಿತಾಸಕ್ತಿ ಮೆರೆಯುವ ಇಂಥ ಮಾನಗೇಡಿ ಮುಖ್ಯಮಂತ್ರಿಯನ್ನು ಮತದಾರ ರಾಜ್ಯದ ಮರ್ಯಾದೆಯನ್ನು ಮನದಲ್ಲಿಟ್ಟುಕೊಂಡು ಮನೆಗೆ ಕಳಿಸದೇಹೋದರೆ ಮುಂದೆ ಇನ್ನು ಮಾನ ಕಳೆದುಕೊಳ್ಳಬೇಕಾಗುತ್ತದೆ...ಜತೆಗೆ ಸಾಮಾನ್ಯರು ಕೂಡ ಯದಿಯುರಪ್ಪನನ್ನೇ ಅನುಸರಿಸುತ್ತ "ಮೂರು ಬಿಟ್ಟವರು ಊರಿಗೆ ದೊಡ್ಡವರು'' ಎನ್ನುವ ಗಾದೆಯನ್ನ ಪಾಲಿಸಿದರು ಅಚ್ಚರಿಪಡಬೇಕಾಗಿಲ್ಲ. ಇದು ಸತ್ಯ....

ಕತ್ತು ಹಿಸುಕುವ ಕುಲಾಂತರಿ ತಳಿಯ ಅಗತ್ಯವೇ ಇಲ್ಲ

ಸಿನೇರಿಯಾ ಬ್ಯಾಕ್ಟೀರಿಯ ವಿಷಯುಕ್ತವಾದದ್ದು. ಇದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲೂ ದುಷ್ಪರಿಣಾಮಗಳಾಗುತ್ತವೆ. ಬಿಟಿ ತಳಿಯ ಆಹಾರ ಉತ್ಪನ್ನಗಳು ಒಮ್ಮೆ ಮಾರುಕಟ್ಟೆ ಪ್ರವೇಶಿಸಿದರೆ ನಾಟಿ ಮತ್ತು ಬಿಟಿ ನಡುವಿನ ವ್ಯತ್ಯಾಸ ಕಂಡುಹಿಡಿಯುವುದೇ ತುಂಬಾ ಕಷ್ಟ. ಅದರಲ್ಲೂ ಇದನ್ನು ಸೇವಿಸಿದರೆ ಆಗುವ ದುಷ್ಪರಿಣಾಮವನ್ನು ಪತ್ತೆ ಹಚ್ಚುವುದು ಇನ್ನೂ ಕಷ್ಟ ಎಂಬ ಜಾಗತಿಕ ತ್ಯದ ಅರಿವಿದ್ದರೂ ಐಸಿಎಆರ್ ವಿe ಕೇಂದ್ರಗಳಂತ ಕೆಲವು ಸಂಸ್ಥೆಗಳನ್ನು ಬಳಸಿಕೊಂಡು ಜಾಗತಿಕ ಕಂಪನಿಗಳು ದೇಶಾದ್ಯಂತ ಅಲ್ಲಲ್ಲಿ ಪ್ರಯೋಗದ ಹೆಸರಿನಲ್ಲಿ ಕುಲಾಂತರಿ ತಳಿಗಳನ್ನು ನುಸುಳಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಇವೆ.

ಕುಲಾಂತರಿ ಎಲ್ಲ ಸಸ್ಯಗಳನ್ನು ವಿಷಯುಕ್ತವಾಗಿಸುತ್ತದೆ. ಆದ್ದರಿಂದ ಇದನ್ನು ಬಳಸಲು ಸಹಜವಾಗಿಯೇ ಭಯವಾಗುತ್ತದೆ. ಇದನ್ನು ಬಳಸುವುದರಿಂದ ನಮ್ಮಷ್ಟಕ್ಕೇ ನಾವೇ ಗುಂಡಿ ತೋಡಿಕೊಂಡ ರೀತಿ. ಅತೀ ಬುದ್ದಿವಂತರು ಎಂದು ಹೇಳಿಕೊಳ್ಳುವ ವಿeನಿಗಳು ಬಿಟಿಯನ್ನು ಬಳಸುವುದರಿಂದ ಹಾನಿಯಾಗುತ್ತದೆ ಎಂಬುದು ಗೊತ್ತಿದ್ದರೂ ತಮ್ಮ ಸ್ವಾರ್ಥಕ್ಕಾಗಿ ಅದನ್ನು ಮುಚ್ಚಿಡುತ್ತಾರೆ ಎನ್ನುವುದು ಅನುವಂಶಿಕತೆ ಶಾಸ್ತ್ರಜ್ಞ(ಜೆನೆಟಿಕ್ಸ್) ಡಾ.ಡೇವಿಡ್ ಸುಜುಕಿ ಅವರ ವಾದ.
ಬಿಟಿ ತಳಿಯಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಜತೆಗೆ ಅನುವಂಶಿಕತೆ ಮೇಲೂ ಪರಿಣಾಮವಾಗುತ್ತದೆ. ಇದರ ಬಳಕೆಯಿಂದ ಮಕ್ಕಳಾಗುವ ಸಾಧ್ಯತೆ ಕೂಡ ಕಡಿಮೆ ಎನ್ನುತ್ತಾರೆ ಇಂಡಿಯನ್ ಬಯೋಡೈವರ್ಸಿಟಿ ಫೋರಂ ಅಧ್ಯಕ್ಷ ಡಾ.ಎಸ್.ಫೈಜಿ.
ಕುಲಾಂತರಿ ತಂತ್ರಜ್ಞಾನದಿಂದ ಪರಿಸರದ ಹಾಗೂ ಜೀವ ಸಂಕುಲದ ಮೇಲೆ ಎಷ್ಟು ಆಳವಾಗಿ ಪರಿಣಾಮ ಬೀರುತ್ತದೆ ಎಂದು ಖಚಿತವಾಗಿ ಹೇಳಲಾಗದು. ಇದರಿಂದಾಗುವ ದುಷ್ಪರಿಣಾಮ ಅಷ್ಟು ಸುಲಭವಾಗಿ, ಬೇಗ ತಿಳಿಯದು. ಅದರಿಂದ ಜೀವ ಸಂಕುಲದ ಚಕ್ರದ ಮೇಲೆ ವ್ಯತಿರಿಕ್ತವಾದ ಪರಿಣಾಮವಾಗಿ ಇಡೀ ವ್ಯವಸ್ಥೆಯೇ ಬದಲಾಗಿಬಿಡುತ್ತದೆ. ಡಿಎನ್‌ಎ ಅನ್ನು ಬಳಸಿ ಅಭಿವೃದ್ಧಿಪಡಿಸುವ ಜೀವತಂತುವನ್ನು ಸಂಪೂರ್ಣವಾಗಿ ಅರ್ಥೈಸಲು ಇದೂವರೆಗೆ ಆಗಿಲ್ಲ. ಜತೆಗೆ ಅದರಿಂದಾಗುವ ದುಷ್ಪರಿಣಾಮಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ (೧೯೯೦) ಎನ್ನುವುದು ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಮುಖ್ಯಸ್ಥರಾದ (ಜೆನಿಟಿಕ್ಸ್) ಪ್ರೊ.ರಿಚರ್ಡ್ಸ್ ಲಿವೋಂಟಿನ್ ಅವರ ಅಭಿಪ್ರಾಯ.
ಹೀಗೆ ಬಯೋಟೆಕ್ನಾಲಜಿ ಬಗ್ಗೆ ಚೆನ್ನಾಗಿ ತಿಳಿದವರೆ ಕುತಾಂತರಿ ತಂತ್ರeನದ ಬಗ್ಗೆ ಬಹಳಷ್ಟು ಸತ್ಯಗಳನ್ನು ಬಹಿರಂಗಪಡಿಸಿದ ಮೇಲೂ ಮಾನ್ಸಂಟೋ ಕಂಪೆನಿ ತಮ್ಮ ಏಜೆಂಟರನ್ನು ಬಿಟ್ಟು ಭಾರತದ ರೈತರ ಮೇಲೆ ಕುಲಾಂತರಿ ತಳಿಗಳನ್ನು ಹೇರುವ ಪ್ರಯತ್ನ ನಡೆಸುತ್ತಲೇ ಇದೆ.
ಸಿನೇರಿಯಾ ಬ್ಯಾಕ್ಟೀರಿಯಾ ವಿಷಯುಕ್ತವಾದದ್ದು. ಇದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲೂ ದುಷ್ಪರಿಣಾಮಗಳಾಗುತ್ತವೆ. ಬಿಟಿ ತಳಿಯ ಆಹಾರ ಉತ್ಪನ್ನಗಳು ಒಮ್ಮೆ ಮಾರುಕಟ್ಟೆ ಪ್ರವೇಶಿಸಿದರೆ ನಾಟಿ ಮತ್ತು ಬಿಟಿ ನಡುವಿನ ವ್ಯತ್ಯಾಸ ಕಂಡುಹಿಡಿಯುವುದೇ ತುಂಬಾ ಕಷ್ಟ. ಅದರಲ್ಲೂ ಇದನ್ನು ಸೇವಿಸಿದರೆ ಆಗುವ ದುಷ್ಪರಿಣಾಮವನ್ನು ಪತ್ತೆ ಹಚ್ಚುವುದು ಇನ್ನೂ ಕಷ್ಟ ಎಂಬ ಜಾಗತಿಕ ಸತ್ಯದ ಅರಿವಿದ್ದರೂ ಐಸಿಎಆರ್ ವಿeನ ಕೇಂದ್ರಗಳಂತ ಕೆಲವು ಸಂಸ್ಥೆಗಳನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ದೇಶಾದ್ಯಂತ ಅಲ್ಲಲ್ಲಿ ಪ್ರಯೋಗದ ಹೆಸರಿನಲ್ಲಿ ಕುಲಾಂತರಿ ತಳಿಗಳನ್ನು ನುಸುಳಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಇವೆ. ಹಣದಾಸೆಗೆ ಬಲಿಯಾಗಿ ಕೆಲವು ವಿವಿಗಳು ಕೂಡ ರೈತರ ನೆಲದಲ್ಲಿ ಈ ಪ್ರಯತ್ನ ನಡೆಸುತ್ತಿವೆ. ಇಂಥ ಪ್ರಯತ್ನದ ಹಿಂದಿರುವ ಏಕೈಕ ಇರಾದೆ ಭಾರತದ ದೇಸಿ ಕೃಷಿ ವ್ಯವಸ್ಥೆ ಹಾಗೂ ರೈತಕುಲದ ಸ್ವಾವಲಂಬನೆಯನ್ನು ಸರ್ವನಾಶ ಮಾಡಿ ಅದರ ಮೇಲೆ ತಮ್ಮ ಹಿಡಿತ ಸಾಸುವುದಾಗಿದೆ...
ಬಹುರಾಷ್ಟ್ರೀಯ ಕಂಪೆನಿಗಳು ಭಾರತದ ಕೃಷಿ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಇದೇ ಮೊದಲಲ್ಲ, ೧೯೫೦ರಿಂದಲೂ ಇಂಥ ಪ್ರವೃತ್ತಿಗಳು ನಡೆಯುತ್ತಲೇ ಇವೆ. ಭಾರತದ ಕೊಬ್ಬರಿ ಎಣ್ಣೆ ತನ್ನ ಉತ್ಕೃಷ್ಟತೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಜನತೆಯ ಗಮನ ಸೆಳೆದಿದ್ದ ಸಮಯದಲ್ಲಿ ಅಮೆರಿಕದ ಸೋಯಾಬೀನ್ ಅಸೋಸಿಯೇಷನ್ ತನ್ನ ಸೋಯಾಬೀನ್ ಹಾಗೂ ಜೋಳದ ಎಣ್ಣೆಗೆ ಜಾಗತಿಕ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳಲಿಕ್ಕಾಗಿ ಭಾರತದ ತೆಂಗಿನ ಎಣ್ಣೆ ಹೃದಯಕ್ಕೆ ಮಾರಕ ಎಂದು ಬಿಂಬಿಸಿ ಶೇ.೯೦ ಮಂದಿ ತೆಂಗಿನ ಎಣ್ಣೆಯನ್ನು ಬಳಸದಂತೆ ಮಾಡಿತ್ತು!
ಅಲ್ಲಿಂದ ಇಲ್ಲಿ ವರೆಗೆ ಕೊಬ್ಬರಿ ಉದ್ಯಮ ಚೇತರಿಸಿಕೊಳ್ಳಲಾಗಿಲ್ಲ. ನೀರಾ, ಪನೆ ಬೆಲ್ಲ, ಎಳೆನೀರು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾರತದ ಕೃಷಿಯನ್ನು ಜಾಗತಿಕ ಕಂಪೆನಿಗಳು ಹತ್ತಿಕ್ಕುತ್ತಲೇ ಬಂದವು. ಇದರಿಂದಾಗಿ ಇಡೀ ಕೃಷಿ ನೀತಿಯೇ ಬದಲಾಗಿ, ರೈತರು ಹೆಜ್ಜೆ ಹೆಜ್ಜೆಗೂ ಆತ್ಮಹತ್ಯೆ ದಾರಿ ತುಳಿಯುವಂತಾಯಿತು. ಹೀಗಾಗಿ ಆಹಾರ ಭದ್ರತೆ, ಬೀಜ ಶೇಖರಣೆ ಸಂಸ್ಕೃತಿ ಎಲ್ಲವೂ ನಾಶವಾಗಿ ಇಡೀ ದೇಶದ ಕೃಷಿ ವ್ಯವಸ್ಥೆಯೇ ಇಂದು ಜಾಗತಿಕ ಕಂಪೆನಿಗಳ ಕಪಿಮುಷ್ಟಿಗೆ ಸಿಲುಕಿದೆ. ಅದರ ನಡುವೆ ಈಗ ಈ ‘ಬಿಟಿ ತಂತ್ರಜ್ಞಾನದ ಹೊಸ ವರಸೆ’. ಭಾರತದ ಕೃಷಿ ಅಭಿವೃದ್ಧಿಗೆ ಕುಲಾಂತರಿ ತಳಿ ತಂತ್ರಜ್ಞಾನವೊಂದೇ ಮುಖ್ಯವಲ್ಲ. ಕಳೆದ ಫೆಬ್ರುವರಿಯಲ್ಲಿ ಬಿಟಿ ಬದನೆ ಬಗ್ಗೆ ದೇಶಾದ್ಯಂತ ದೊಡ್ಡ ಚರ್ಚೆ ನಡೆದಾಗ ರೈತರು ವಿರೋಸಿದ್ದು ಬದನೆಯನ್ನು ಮಾತ್ರವಲ್ಲ, ಇಡೀ ಕುಲಾಂತರಿ ತಂತ್ರeನವನ್ನು.
ಕುಲಾಂತರಿ ತಂತ್ರeನದಿಂದಾಗುವ ದುಷ್ಟಪರಿಣಾಮಗಳನ್ನು ಅರಿಯಲು ಕನಿಷ್ಠ ೨೦ ವರ್ಷ ಬೇಕು. ಅಂತಹದ್ದರಲ್ಲಿ ಕೇಂದ್ರದ ಯುಪಿಎ ಸರಕಾರ ಅದಕ್ಕೊಂದು ಬಯೋಟೆಕ್ನಾಲಜಿ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ(ಬಿಆರ್‌ಎಐ) ಸ್ಥಾಪಿಸುವ ಹೇಳಿಕೆ ನೀಡಿ ಕುಲಾಂತರಿ ಬಗ್ಗೆ ಎದ್ದ ಬಿಸಿಯನ್ನು ತಣ್ಣಗೆ ಮಾಡಿತು ಅಷ್ಟೇ. ಆದರೆ ಈ ಕಂಪೆನಿಗಳು ಅದಕ್ಕೂ ಕೂಡ ಕಾಯದೆ ಆತುರಾತುರವಾಗಿ ಬಿಟಿ ತಂತ್ರಜ್ಞಾನಕ್ಕೆ ಪರವಾನಗಿ ಬೇಕು ಎಂದು ಬೊಬ್ಬೆ ಹೊಡೆಯುತ್ತಿವೆ. ಇವುಗಳ ಹಿಂದಿನ ಉದ್ದೇಶವಾದರೂ ಏನು? ಅಂದರೆ ಇವುಗಳಿಗೆ ಅಷ್ಟೂ ವ್ಯವದಾನವಿಲ್ಲ, ಬೇಗ ಕೃಷಿ ವ್ಯವಸ್ಥೆಯನ್ನು ತಮ್ಮ ಕೈವಶ ಮಾಡಿಕೊಂಡು ಕುಳಿತುಕೊಳ್ಳುವ ದುರುದ್ದೇಶ ಇಲ್ಲಿ ಎದ್ದು ಕಾಣುತ್ತದೆ. ನಾಳೆ ಬಿಆರ್‌ಎಐ ಸ್ಥಾಪಿಸಿದ ನಂತರ ಸಂಪೂರ್ಣವಾಗಿ ಬಿಟಿಯನ್ನು ಇಡೀ ದೇಶವೇ ತಿರಸ್ಕರಿಸಿದರೆ ಕಂಪೆನಿಯ ತಂತ್ರಗಳೆಲ್ಲಾ ತಲೆಕೆಳಗಾಗುತ್ತವೆ ಎನ್ನುವ ಭಯ ಕೂಡ ಕಾಡುತ್ತಿದೆ.
ಈಗ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ದಿಲ್ಲಿ ಹಾಗೂ ಹೈದರಾಬಾದ್ ಮೂಲದ ರಾಷ್ಟ್ರೀಯ ಅಕಾಡೆಮಿ ಆಫ್ ಸೈನ್ಸಸ್ ಸೇರಿದಂತೆ ಏಳು ‘ಅತ್ಯನ್ನತ ಅಕಾಡೆಮಿಗಳು’ ‘ಇಂಟರ್ ಅಕಾಡೆಮಿ ರಿಪೋರ್ಟ್ ಆನ್ ಜಿ.ಎಂ. ಕ್ರಾಪ್ಸ್’ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು ನಿಜ. ಆದರೆ ಕುಲಾಂತರಿ ತಂತ್ರeನದಲ್ಲಿ ಎಲ್ಲವೂ ಸರಿಯಾಗಿವೆ ಅದಕ್ಕಾಗಿ ‘ಕುಲಾಂತರಿ ತಳಿಗೆ ಜೈ ಹೋ’ ಎಂದಿಲ್ಲ! ಬದಲಿಗೆ ‘ಕುಲಾಂತರಿ ತಳಿಗಳು ಕೆಲವು ಅಪಾಯಗಳನ್ನು ತಂದೊಡ್ಡುತ್ತವೆ. ಆದರೆ ವಿಜ್ಞಾನ ಅವುಗಳ ಹಿಂದೆ ನಿಂತರೆ ಆ ಆತಂಕದಿಂದ ದೂರಾಗಬಹುದು’ ಎಂದು ಅಭಿಪ್ರಾಯಪಟ್ಟಿವೆ. ಹಾಗೇಯೇ ‘ಯಾವುದೇ ಪದಾರ್ಥ ಶೇ.೧೦೦ಕ್ಕೆ ನೂರರಷ್ಟು ಸುರಕ್ಷಿತವಲ್ಲ, ಹಾಗಾಗಿ ಬಿಟಿ ಬದನೆಯನ್ನು ಮಾತ್ರ ದೂರುವುದು ಸರಿಯಲ್ಲ’ ಎಂದು ಹೇಳಿವೆ.
ಅಂದರೆ ಈ ‘ಅತ್ಯುನ್ನತ ವಿಜ್ಞಾನ ಅಕಾಡೆಮಿಗಳು’ ಕೂಡ ರೈತರ ವಿಚಾರದಲ್ಲಿ ‘ಸುರಕ್ಷಿತವಲ್ಲ’ ಎನ್ನುವುದು ಇಲ್ಲಿ ಸ್ಪಷ್ಟ. ಈ ವರದಿ ಕೂಡ ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗಿದೆ. ‘ಕುಲಾಂತರಿ ತಳಿಯಿಂದ ಸಾಮಾಜಿಕ ಮತ್ತು ಆರ್ಥಿಕ ಗಂಡಾಂತರಗಳು ಒದಗಲಿವೆಯೋ ಅಥವಾ ಲಾಭಕರವೋ ಎಂಬ ವಿಷಯವನ್ನು ನಿರ್ಧರಿಸಬೇಕಾದದ್ದು ಎನ್‌ಜಿಒಗಳ ಗುಂಪಲ್ಲ’.
ನಿಜ, ಆದರೆ ಅದನ್ನು ನಿರ್ಧರಿಸಬೇಕಾದದ್ದು ಜಾಗತಿಕ ಕಂಪೆನಿಗಳೂ ಅಲ್ಲ. ಅದು ‘ರೈತರ ಹಕ್ಕು’.
ರೈತನು ಬೆಳೆದ ಸರಕು ಮತ್ತು ಸೇವೆಗಳು ಮಾರುಕಟ್ಟೆಯಲ್ಲಿ ನಿರ್ಧಾರವಾಗುತ್ತಿವೆ. ಅದೇ ಈ ದೇಶದ ರೈತರನ್ನು ಬಡತನದಲ್ಲಿ ಬಳಲುವಂತೆ ಮಾಡಿದ್ದು ಎಂಬುದು ಅಕ್ಷರಶಃ ಸತ್ಯ. ರೈತ ಬೆಳೆದ ಪ್ರತಿ ಬೆಳೆಗೂ ಅವನೇ ದರ ನಿಗದಿಪಡಿಸುವ ಹಕ್ಕನ್ನು ಅವನಿಂದ ಕಸಿದುಕೊಳ್ಳದೆ ಹೋಗಿದ್ದರೆ ಇಂದು ಜಾಗತಿಕ ಕಂಪೆನಿಗಳು, ಅವುಗಳ ಪರ ಬೊಬ್ಬಿಡುವ ಸ್ವಯಂಘೋಷಿತ ವಿಜ್ಞಾನಿಗಳು ಇಂದು ರೈತರ ವಿರುದ್ಧ ಬಡಬಡಿಸುವ ಪ್ರಮೆಯವೇ ಬರುತ್ತಿರಲಿಲ್ಲ, ಅದಕ್ಕೆ ಅವಕಾಶವೂ ಇರುತ್ತಿರಲಿಲ್ಲ; ಜತೆಗೆ ರೈತರು ಆತ್ಮಹತ್ಯೆ ದಾರಿಯನ್ನೂ ತುಳಿಯುತ್ತಿರಲಿಲ್ಲ...
ಇಲ್ಲಿ ನಿಜವಾಗಿಯೂ ಆತಂಕ ಪಡುತ್ತಿರುವವರು ರೈತರು. ಅವರ‍್ಯಾರೂ ಕೆಲಸಬಿಟ್ಟು ಮನವಿ ಹಿಡಿದು ವಿeನಿಗಳು ಅಥವಾ ಸರಕಾರದ ಬಳಿ ಬರುವುದಿಲ್ಲ. ಕಾರಣ ಇಷ್ಟೇ ಅವರೆಲ್ಲ ಒಂದು ದಿನ ಉತ್ತುವುದು, ಬಿತ್ತುವುದು ಅಥವಾ ಬೆಳೆಗಳ ನಡುವೆ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಈ ದೇಶದ ಅದೆಷ್ಟೋ ಲಕ್ಷ ಜನ ಅನ್ನವಿಲ್ಲದೆ ಪರದಾಡಬೇಕಾಗುತ್ತದೆ!!
ಜಾಕತಿಕ ಕಂಪೆನಿಗಳು ಈ ರೀತಿ ಮತ್ತೆ ಮತ್ತೆ ‘ಕಿತಬಿ’ ತೆಗೆಯುತ್ತಿರುವುದರಿಂದ ರೈತರು ಬೀದಿಗಿಳಿಯುತ್ತಿದ್ದು, ಅದರಿಂದಾಗಿ ಭಾರತದಲ್ಲಿ ಆಹಾರ ಅಭದ್ರತೆ ನಿತ್ಯ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ೬ ವರ್ಷಗಳಿಂದೀಚೆಗೆ ಈ ಅಭದ್ರತೆ ಎಲ್ಲೆ ಮೀರಿದೆ. ಆದ್ದರಿಂದಲೇ ಜಾಗತಿಕ ಕಂಪೆನಿಗಳ ಇಂಥ ಹುನ್ನಾರಗಳನ್ನು ಅರಿತು ಈ ನೆಲದ ಜನ ಆಗಾಗ ರೈತರ ಬೆನ್ನಿಗೆ ನಿಲ್ಲುವ ಮೂಲಕ ಅನ್ನದ ಋಣ ತೀರಿಸುತ್ತಿದ್ದಾರೆ ಅಷ್ಟೇ...
ಆಗಾಗ ಅಭಿವೃದ್ಧಿ, ಆಧುನಿಕತೆ, ಜಾಗತಿಕರಣ, ಖಾಸಗಿಕರಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಜತೆಗೆ ‘ನಮ್ಮದೇ ಸರಕಾರಗಳು’ ಇನ್ನಿಲ್ಲದ ಹುನ್ನಾರ ನಡೆಸುತ್ತಿವೆ. ಭೂಮಿಯನ್ನು ಕಸಿದುಕೊಳ್ಳುವುದರ ಜತೆಗೆ ಇದ್ದ ತುಸು ಜಾಗದಲ್ಲಾದರೂ ಬೆಳೆ ಬೆಳೆಯೋಣವೆಂದು ರೈತರು ಅಣಿಯಾದಾಗ ಜಾಗತಿಕ ಕಂಪೆನಿಗಳು ಹೀಗೆ ಮತ್ತೆ ಮತ್ತೆ ಈ ದೇಶದ ಸ್ವಾವಲಂಬನೆಯನ್ನು ಅಡವಿಟ್ಟುಕೊಳ್ಳಲು ಕುಂತಂತ್ರ ನಡೆಸತ್ತಲೇ ಇವೆ. ಆದ್ದರಿಂದ ಈ ಮಣ್ಣಿನಲ್ಲಿ ಬೆಳೆದು ಇದೇ ಮಣ್ಣಿನಲ್ಲಿಯೇ ಬದುಕಬೇಕಿರುವ ನಾವು ಇಂಥ ಹುನ್ನಾರಗಳ ಬಗ್ಗೆ ಸದಾ ಜಾಗೃತರಾಗಿರಬೇಕು...

Monday, October 11, 2010

ಮೂರು ಕೃತಿಗಳ ಬಿಡುಗಡೆ

ಸರ್/ ಸ್ನೇಹಿತರೇ,
ನನ್ನ ಮೂರು ಕೃತಿಗಳನ್ನು ಖ್ಯಾತ ಕವಿ ಡಾ.ನಿಸಾರ್ ಅಹಮದ್ ಅವರು ಬಿಡುಗಡೆ ಮಾಡಲಿದ್ದಾರೆ.
ಮೌನ ಬೆಳದಿಂಗಳು(ಕವನ ಸಂಕಲನ), ಸತ್ಯಕ್ಕ-ಕಾಯಕಕ್ಕೆ ಮತ್ತೊಂದು ಹೆಸರು, ಮಗ್ಗುಲು ಮುಳ್ಳು(ಆಯ್ದ ಲೇಖನಗಳು) ಇವು ನನ್ನ ಮೂರು ಕೃತಿಗಳು.
ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಬೆಂಗಳೂರು.
ದಿನಾಂಕ: ಅಕ್ಟೋಬರ್ ೨೪
ಸಮಯ: ಬೆಳಗ್ಗೆ 10.30
ತಾವು ದಯಮಾಡಿ ಆ ಕಾರ್ಯಕ್ರಮಕ್ಕೆ ಆಗಮಿಸಿ, ಆ ಸುಮಧುರ ಗಳಿಗೆಯಲ್ಲಿ ನನ್ನೊಂದಿಗೆ ಇರಬೇಕೆಂದು ಆಶಿಸುತ್ತೇನೆ...
ಮೊ:9449510318, 9964916753.

Wednesday, September 1, 2010

ತೆಂಗಿನೆಣ್ಣೆಯಲ್ಲಿದೆ ತಾಕತ್ತು (ಸೆ.೨ ವಿಶ್ವ ತೆಂಗು ದಿನ)

ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಎಂದಾಕ್ಷಣ ಮೂಗು ಮುರಿಯುವವರೇ ಇತ್ತೀಚೆಗೆ ಹೆಚ್ಚಾಗಿದ್ದಾರೆ. ಆದರೆ ಇದೇ ಎಣ್ಣೆಯಲ್ಲಿ ರೋಗ ನಿರೋಧಕ ಶಕ್ತಿಯಿದೆ, ಇದು ತಾಯಿ ಎದೆ ಹಾಲಿನಷ್ಟೇ ಪೌಷ್ಠಿಕಾಂಶಯುಕ್ತವಾದದ್ದು ಎಂದರೆ ನಂಬಲೇಬೇಕು...
ನಿಜ, ಅದೇ ನಮ್ಮದೇ ಕಲ್ಪವೃಕ್ಷ. ಅದರಲ್ಲಿ ಬೆಳೆದ ತೆಂಗಿನ ಕಾಯಿಯಿಂದ ತಯಾರಿಸುವ ಕೊಬ್ಬರಿ ಎಣ್ಣೆ ಸರ್ವ ರೋಗಕ್ಕೂ ಮದ್ದು ಎಂದರೆ ಅಚ್ಚರಿಪಡಬೇಕಿಲ್ಲ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಜಾಗತಿಕ ಮಟ್ಟದ ಕುತಂತ್ರಗಳಿಂದಾಗಿ ತೆಂಗಿನ ಎಣ್ಣೆ ಇಂದು ತೀರಾ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ತಲೆಯ ಕೂದಲನ್ನು ಬೆಳೆಸಲು ಬಿಟ್ಟರೆ ಬೇರೆ ಯಾವುದಕ್ಕೂ ಅದು ಉಪಯುಕ್ತವಾದುದ್ದಲ್ಲ, ಅದನ್ನು ಸೇವಿಸುವುದರಿಂದ ಬಹಳ ಬೇಗ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ, ಹೃದಯಾಘಾತವಾಗುತ್ತದೆ ಎಂಬ ಸಲ್ಲದ ನಿರ್ಧಾರಕ್ಕೆ ಬಂದುಬಿಡುವಷ್ಟು ನಾವು ಅeನಿಗಳಾಗಿದ್ದೇವೆ. ಇದೆಲ್ಲ ಅಮೆರಿಕ ಹಾಗೂ ಪಶ್ಚಿಮ ರಾಷ್ಟ್ರಗಳ ಕುತಂತ್ರ. ಆದರೆ ಅದ್ಯಾವುದರ ಅರಿವೂ ಇಲ್ಲದೆ ನಾವು ನಮ್ಮದೇ ನೆಲದಲ್ಲಿ ಬೆಳೆದ ತೆಂಗಿನ ಎಣ್ಣೆಯನ್ನು ದೂರ ತಳ್ಳಿ ನಿರಾಳರಾಗಿದ್ದೇವೆ !
ತೆಂಗಿನ ಎಣ್ಣೆಯ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದ ಕೆಲವು ವೈದ್ಯರು ಕೂಡ ಕೊಬ್ಬರಿ ಎಣ್ಣೆ ಬಳಸಿದರೆ ಕೊಬ್ಬು ಹೆಚ್ಚಾಗುತ್ತದೆ ಎಂಥಲೇ ಭಯ ಹುಟ್ಟಿಸುತ್ತಿದ್ದಾರೆ. ಇದರ ಅರಿವಿದ್ದೂ ಕೆಲವು ವಿeನಿಗಳು ಅದೇ ಪಾಠ ಮಾಡುತ್ತಿದ್ದಾರೆ. ಈ ಇಡೀ ಸುಳ್ಳಿನ ಕಂತೆ ಸೃಷ್ಟಿಯಾದದ್ದು ೧೯೫೦ರಲ್ಲಿ. ಕೊಬ್ಬರಿ ಎಣ್ಣೆ ವಿಶ್ವದ ಎಲ್ಲ ಎಣ್ಣೆಗಳಿಗಿಂತ ಶ್ರೇಷ್ಠವಾದ ಎಣ್ಣೆ. ಅದು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಗಳಿಸಿದ ಕಾಲ. ಆದರೆ ಅದೇ ಸಮಯಕ್ಕೆ ಅಮೆರಿಕದ ಸೋಯಾಬೀನ್ ಹಾಗೂ ಜೋಳದ ಎಣ್ಣೆ ಮಾರುಕಟ್ಟೆಗೆ ಬಂದಿತ್ತು. ಅದಕ್ಕೆ ಬೇಡಿಕೆಯೇ ಇರಲಿಲ್ಲ. ಹೀಗಾಗಿ ಅಲ್ಲಿನ ಸೋಯಾಬೀನ್ ಅಸೋಷಿಯೇಷನ್ ತಮ್ಮ ಪದಾರ್ಥಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಳ್ಳುವ ಸಲುವಾಗಿ ಕುತಂತ್ರ ನಡೆಸಿ, ತೆಂಗಿನ ಎಣ್ಣೆಯ ವಿರುದ್ಧ ಹಾಗೂ ತಮ್ಮ ಸೋಯಾಬೀನ್ ಹಾಗೂ ಜೋಳದ ಎಣ್ಣೆಯ ಪರವಾಗಿ ಪ್ರಚಾರಾಂದೋಲನ ನಡೆಸಿತು. ಅದರ ಫಲವಾಗಿ ಇಂದು ಶೇ.೯೦ ಮಂದಿ ತೆಂಗಿನ ಎಣ್ಣೆಯನ್ನು ಕ್ಕರಿಸಿ ಸಿಕ್ಕ ಸಿಕ್ಕ ಎಣ್ಣೆಯನ್ನೆಲ್ಲಾ ಅಡುಗೆಗೆ ಬಳಸಿ ಕೊಬ್ಬು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಅದೆಲ್ಲಕ್ಕಿಂತ ತೆಂಗಿನ ಎಣ್ಣೆಯೇ ಅತ್ಯುತ್ತಮ ಎಂಬ ಅರಿವು ಮಾತ್ರ ಯಾರಿಗೂ ಗೊತ್ತಿಲ್ಲ.
ಹೊಸ ಸಂಶೋಧನೆಯ ಹೆಸರಿನಲ್ಲಿ ಅಮೆರಿಕದ ವಿeನಿಗಳು ಕೊಬ್ಬರಿ ಎಣ್ಣೆಯಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ, ಅದು ದೇಹ ಹಾಗೂ ಹೃದಯ ಎರಡಕ್ಕೂ ಹಾನಿಯುಂಟು ಮಾಡುತ್ತದೆ ಎಂದರು. ಅದನ್ನು ಕಣ್ಣು ಮುಚ್ಚಿಕೊಂಡು ಎಲ್ಲರೂ ಒಪ್ಪಿಕೊಂಡರು. ನಮ್ಮ ತೆಂಗಿನ ಬಗ್ಗೆ ಸಂಶೋಧನೆ ಮಾಡಲು ಅವರ‍್ಯಾರು? ಅದರ ಬಗ್ಗೆ ನಾವೇ ಸಂಶೋಧನೆ ಮಾಡುತ್ತೇವೆ ಎಂದು ಒಬ್ಬರೇ ಒಬ್ಬ ಈ ದೇಶದ ವಿeನಿಗಳು ಮುಂದೆ ಬರಲಿಲ್ಲ. ಹೀಗಾಗಿ ಪಾಪ ಜನ ಸಾಮಾನ್ಯರು ಚಕಾರವೆತ್ತದೆ ಅನ್ಯರ ಸಂಶೋಧನೆಯನ್ನು ಒಪ್ಪಿಕೊಂಡು ಮನೆ ಎಣ್ಣೆಯನ್ನು ದೂರ ತಳ್ಳಿ, ಅಮೆರಿಕದ ಸೋಯಾಬೀನ್ ಹಾಗೂ ಕಾರ್ನ್ ಎಣ್ಣೆಯೆಂಬ ‘ಮಾರಿ’ಯನ್ನು ಮನೆಗೆ ಕರೆತಂದರು.
ಅಲ್ಲಿಗೆ ತೆಂಗಿನ ಎಣ್ಣೆ, ತೆಂಗಿನ ಉತ್ಪನ್ನಗಳು ಹಾಗೂ ಅವುಗಳಿಂದ ತಯಾರಾಗುವ ಸಿಹಿ ಪದಾರ್ಥಗಳೂ ಸೇರಿದಂತೆ ಎಲ್ಲ ಉತ್ಪನ್ನಗಳ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿದುಬಿತ್ತು. ಇದೇ ಖುಷಿಯಲ್ಲಿ ಸೋಯಾಬೀನ್ ಹಾಗೂ ಕಾರ್ನ್ ಎಣ್ಣೆಯಿಂದ ಅಮೆರಿಕ ಬರ್ಜರಿ ಲಾಭ ಮಾಡಿಕೊಂಡಿತು.
ಆದರೆ ಇಷ್ಟು ವರ್ಷಗಳಾದರೂ ತೆಂಗಿನ ಎಣ್ಣೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಅದು ರೋಗ ನಿರೋಧಕ ಶಕ್ತಿ ಹೊಂದಿದೆ. ಕೇವಲ ತಲೆಗೆ ಎಣ್ಣೆ ಹಾಕಿದರೆ ವಾರಗಟ್ಟಲೆ ನಿದ್ದೆ ಮಾಡದವನೂ ನೆಮ್ಮದಿಯಿಂದ ನಿದ್ದೆ ಮಾಡಬಲ್ಲ, ತಲೆ ನೋವು ನಿವಾರಿಸಿಕೊಳ್ಳಬಲ್ಲ ಎಂದಾದರೆ ಇನ್ನು ಅದನ್ನು ಸೇವಿಸುವುದರಿಂದ ಏನೆಲ್ಲ ಉಪಯೋಗವಿದೆ ಎಂಬುದನ್ನು ಒಬ್ಬರೇ ಒಬ್ಬ ವಿeನಿಯಗಲಿ, ವೈದ್ಯೆರಾಗಲಿ ಜನಸಾಮಾನ್ಯರಿಗೆ ತಿಳಿ ಹೇಳಲಿಲ್ಲ.
ಇದರ ಫಲವಾಗಿ ರೈತರು ಕಷ್ಟಪಟ್ಟು ಬೆಳೆದ ತೆಂಗಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರವಲ್ಲ ಸ್ಥಳೀಯ ಮಾರುಕಟ್ಟೆಯಲ್ಲೂ ಬೆಲೆ ಕುಸಿದು ಬಿದ್ದಿದೆ. ಕೇವಲ ಕಾಯಿಯನ್ನು ನಾವು ಅಡುಗೆಗೆ ಬಳಸುವಂತಾಗಿದೆ. ಸಾಲದ್ದಕ್ಕೆ ಇತ್ತೀಚೆಗೆ ತೆಂಗಿನ ಕಾಯಿನ್ನೂ ಬಳಸಿದರೆ ಕೊಬ್ಬು ಹೆಚ್ಚಾಗುತ್ತದೆ ಎನ್ನುತ್ತಲೇ ಫಾಸ್ಟ್ ಫುಡ್ ಪ್ಯಾಕೆಟ್ ಸೇವಿಸುವ ಸಂಸ್ಕೃತಿ ಮೆರೆಯುತ್ತಿದೆ. ಇದೆಲ್ಲದರಿಂದ ಲಾಭ ಮಾತ್ರ ಅಮೆರಿಕ ಹಾಗೂ ಪಶ್ಚಿಮ ರಾಷ್ಟ್ರಗಳಿಗೆ. ಇಂದಿಗೂ ಅದು ತೃತೀಯ ರಾಷ್ಟ್ರಗಳಿಗೆ ತನ್ನ ಎಣ್ಣೆಯನ್ನು ಬ್ಯಾರಲ್‌ಗಟ್ಟಲೆ ರಫ್ತು ಮಾಡುತ್ತ ಲಾಭ ಗಳಿಸುತ್ತಲೇ ಇದೆ. ನಮ್ಮ ತೆಂಗು ಮೂಲೆ ಸೇರಿ ಕೊಳೆಯುತ್ತಿದೆ.
ಆದರೆ ಇಷ್ಟಾದರೂ ಕರಾವಳಿ ಭಾಗದಲ್ಲಿ ಸಾವಿರಾರು ವರ್ಷಗಳಿಂದ ಕಡಲ ತೀರದ ಜನ ಅಡುಗೆಗೆ ತೆಂಗಿನ ಎಣ್ಣೆಯನ್ನೇ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಬೇರೆ ಪ್ರದೇಶದ ಜನರಿಗಿಂತ ಇಂದಿಗೂ ಅವರು ಹೆಚ್ಚು ಆರೋಗ್ಯವಾಗಿದ್ದಾರೆ. ಇದಲ್ಲದೆ ಆಯುರ್ವೇದ ಕೂಡ ತೆಂಗಿನ ಎಣ್ಣೆ ಬಳಕೆ ಒಳ್ಳೆಯದು ಎನ್ನುತ್ತದೆ. ಅನಾದಿ ಕಾಲದಿಂದಲೂ ಸಕಲ ರೋಗ ನಿವಾರಣೆಗೂ ಆಯುರ್ವೇದದಲ್ಲಿ ತೆಂಗಿನ ಎಣ್ಣೆಯನ್ನೇ ಬಳಕೆ ಮಾಡಲಾಗುತ್ತಿದೆ. ಇಷ್ಟಾದರೂ ತೆಂಗಿನೆಣ್ಣೆ ಬಳಕೆ ಬಗ್ಗೆ ಯಾಕೆ ತಾತ್ಸಾರ...?
ತೆಂಗಿನ ಅನುಕೂಲ:
*ತೆಂಗಿನ ಎಣ್ಣೆಯಿಂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. *ಬ್ಯಾಕ್ಟೀರಿಯಾ, ವೈರಾಣುಗಳು ದೇಹ ಪ್ರವೇಶಿಸುವುದನ್ನು ತಡೆಯಬಲ್ಲದು. *ಸಾಮಾನ್ಯ ತಂಡಿ ಅಥವಾ ಶೀತ, ಜ್ವರ, ಹೆಪಟೈಟೀಸ್, ..... ಎಚ್‌ಐವಿ ಮುಂತಾದ ಕಾಯಿಲೆಯನ್ನೂ ತಡೆಯಬಲ್ಲ ಶಕ್ತಿಯಿದೆ. *ತೆಂಗಿನ ಎಣ್ಣೆಯಲ್ಲಿರುವ ಲೂರಿಕ್ ಆಸಿಡ್(....) ತಾಯಿ ಎದೆ ಹಾಲಿನಷ್ಟೇ ಉತ್ಕೃಷ್ಟ ಮತ್ತು ಪೌಷ್ಠಿಕಾಂಶಯುಕ್ತವಾದದ್ದು. * ಕೊಬ್ಬರಿ ಎಣ್ಣೆ ಬಳಕೆಯಿಂದ ಶೇ.೫೦ ಎದೆ ಹಾಲು ವೃದ್ಧಿಯಾಗುತ್ತದೆ. *ಆಯುರ್ವೇದದಲ್ಲಿ ರೋಗ ನಿವಾರಣೆಗೆ ಇದೇ ಎಣ್ಣೆ ಬಳಕೆ.
ಜನಜಾಗೃತಿ ಆಂದೋಲನ:
ಸೆ. ವಿಶ್ವ ತೆಂಗು ದಿನ. ಹೀಗಾಗಿ ನಮ್ಮ ತೆಂಗು ಹಾಗೂ ಅದರ ಎಣ್ಣೆ ಮತ್ತು ಅದರಿಂದ ತಯಾರಿಸುವ ಉತ್ಪನ್ನಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಇಂದಿನಿಂದ ಎರಡು ದಿನಗಳ ಕಾಲ ಸೈಕಲ್ ಜಾಥಾ ಆಯೋಜಿಸಲಾಗಿದೆ. ಬೆಳಗ್ಗೆ ೧೦ಕ್ಕೆ ಚಿಕ್ಕನಾಯಕನ ಹಳ್ಳಿಯಿಂದ ಜಾಥಾ ಆರಂಭವಾಗಿದೆ. ತಿಪಟೂರು, ತುರುವೆಕೆರೆ, ಗುಬ್ಬಿ, ದೊಡ್ಡಬಳ್ಳಾಪುರ ಮಾರ್ಗವಾಗಿ ತುಮಕೂರು ವರೆಗೆ ಜಾಥಾ ಆಗಮಿಸಲಿದೆ.
ಸೆ.೨ರ ಬೆಳಗ್ಗೆ ೧೦ಕ್ಕೆ ಜಾಥಾ ತುಮಕೂರಿಗೆ ಆಗಮಿಸಿದ ನಂತರ ಅಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಈ ಜಾಥಾ ಹಾಗೂ ಸಮಾವೇಶದಲ್ಲಿ ರೈತರು, ಗ್ರಾಹಕರು, ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ತೆಂಗಿನೆಣ್ಣೆ ಹೃದಯಾಘಾತಕ್ಕೆ ಹೇಗೆ ಔಷಧವಾಗಿ ಬಳಕೆಯಾಗುತ್ತದೆ, ಅದರಲ್ಲಿನ ಕೊಬ್ಬಿನಂಶದ ವಾಸ್ತವಾಂಶ ಏನು? ತೆಂಗಿನೆಣ್ಣೆ ಬೇಡಿಕೆ ಹಾಗೂ ಬೆಲೆ ಎರಡನ್ನೂ ಕಳೆದುಕೊಳ್ಳಲು ಜಾಗತಿಕ ಕಾರಣಗಳೇನು? ಇದರ ಗುಣಗಳ ಬಗ್ಗೆ ಜಾಗೃತಿ ಮೂಡದಿರಲು ಹಿಂದಿರುವ ರಾಜಕೀಯವೇನು? ಎಂಬುದರ ಬಗ್ಗೆ ಹೃದಯ ತಜ್ಞ ಡಾ.ಬಿ.ಎಂ.ಹೆಗಡೆ, ಆಹಾರ ತಜ್ಞರಾದ ಕೆ.ಸಿ.ರಘು ಮಾತನಾಡಲಿದ್ದಾರೆ.
ಜಾಥಾದಲ್ಲಿ ಭಾಗವಹಿಸುವವರು ಆಯೋಜಕರಾದ ವಿಶ್ವನಾಥ್ ಅಣೆಕಟ್ಟೆ, ರಘುರಾಮ್( ಮೊ:೮೦೯೫೨೨೨೭೨೮)ಅವರನ್ನು ಸಂಪರ್ಕಿಸಬಹುದು.
ಪ್ರದರ್ಶನ ಮತ್ತು ಮಾರಾಟ:
ಅಂದು ತುಮಕೂರಿನಲ್ಲಿ ತೆಂಗು, ತೆಂಗಿನೆಣ್ಣೆ, ಫಲಪಾಕ, ಸಾಬೂನು, ನಾರು ಉತ್ಮನ್ನಗಳು, ಸಿಹಿ ಪದಾರ್ಥ ಮುಂತಾದ ತೆಂಗು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕೂಡ ನಡೆಯುತ್ತದೆ.

Wednesday, August 25, 2010

ಅವರು ನಿಮ್ಮ ಕಣ್ಣಿಗೆ ಮನುಷ್ಯರಂತೆ ಕಾಣುವುದಿಲ್ಲವೆ ?

‘ಮರು ವಸತಿ ಕೇಂದ್ರದಲ್ಲಿ ಭಿಕ್ಷುಕರ ಸಾವು ಸಾಮಾನ್ಯ ಸಂಗತಿ. ಇದರಲ್ಲಿ ವಿಶೇಷವೇನಿಲ್ಲ’ ಇದು ‘ಸಮಾಜ ಕಲ್ಯಾಣ’ ಖಾತೆ ಸಚಿವರಾಗಿದ್ದ ಡಿ.ಸುಧಾಕರ ಅವರ ಕಲ್ಯಾಣದ ನುಡಿಗಳು.
ಈ ಮಾತನ್ನು ಗಮನಿಸಿದರೆ ಅವರಿಗೆ ಅಕಾರದ ಮದ ಎಷ್ಟರ ಮಟ್ಟಿಗೆ ಏರಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಗೋವುಗಳ ಬಗ್ಗೆಯೇ ಮಾನವೀಯ ಹಿನ್ನೆಲೆಯಲ್ಲಿ ಮಾತನಾಡು ಪಕ್ಷದ ಸಚಿವರಲ್ಲಿ ಮನುಷ್ಯರ ಜೀವಕ್ಕೆ ಎಷ್ಟರಮಟ್ಟಿಗೆ ಬೆಲೆಯಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಎಲ್ಲೆಲ್ಲೊ ಭಿಕ್ಷೆ ಬೇಡಿಕೊಂಡು ಹೇಗೋ ಬದುಕುತ್ತಿದ್ದವರು ಬೆಂಗಳೂರಿನ ಭಿಕ್ಷುಕರ ಕಾಲೊನಿಯೆಂಬ ‘ನರಕ’ದಲ್ಲಿ ಸಾಲು ಸಾಲಾಗಿ ಹೆಣಗಳಾಗಿ ಮಲಗುತ್ತಿದ್ದಾರೆ. ಇಲ್ಲಿವರೆಗೆ ೨೬ ಮಂದಿ ಸಾವಿನ ಕದ ತಟ್ಟಿದ್ದಾರೆ. ಅಕ್ಷರಶಃ ಆ ಭಿಕ್ಷುಕರ ಪುನರ್ವಸತಿ ಕೇಂದ್ರ ಸಾವಿನ ಮನೆಯಾಗಿದೆ.
ಭಿಕ್ಷುಕರು ಎಂದಾಕ್ಷಣ ಎಲ್ಲರೂ ದೂರ ಸರಿಯುತ್ತಾರೆ. ನಿಜ, ಕೊಳಕು ಕೊಳಕಾಗಿರುವ ಭಿಕ್ಷುಕರು ಎದುರು ಬಂದರೆ ಬಹುತೇಕ ಮಂದಿ ಗೊಣಗುತ್ತಲೇ ಆತನನ್ನು ದೂರ ಕಳುಹಿಸುತ್ತಾರೆ. ಆದರೆ ಅದೇ ಭಿಕ್ಷುಕರು ನಾಯಿಗಳ ಹಾಗೆ ಸಾಮೂಹಿಕವಾಗಿ ಮಲಗಿದ್ದಲ್ಲಿ ಹೆಣವಾಗುತ್ತಾರೆ ಎಂದರೆ ಗೊಣಗಿದವರೂ ಸುಮ್ಮನೆ ಕೂರುವುದಿಲ್ಲ. ಹೀಗೆ ಸಾಲು ಸಾಲು ಹೆಣಗಳುರುಳಿದ್ದು ಅಕಾರಿಗಳ, ಸಂಭಂಸಿದವರ ನಿರ್ಲಕ್ಷ್ಯದಿಂದಲೇ ಎನ್ನುವುದನ್ನ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಜತೆಗೆ ತಿಂಗಳಲ್ಲಿ ಅಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ಹೋದ ಪ್ರಾಣ ಮತ್ತೆ ಬರಲು ಸಾಧ್ಯವೇ?
ಇದೊಂದೇ ಅಲ್ಲ, ರಾಜ್ಯದಲ್ಲಿ ಇಂಥ ೨೦ ಕಡೆಗಳಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರಗಳಿವೆ. ಆದರೆ ಧಾರವಾಡ ಒಂದನ್ನು ಹೊರತುಪಡಿಸಿದರೆ ಉಳಿದ ೧೯ ಕೇಂದ್ರಳಲ್ಲಿರುವ ಬಹುತೇಕ ಭಿಕ್ಷುಕರ ಸ್ಥತಿ ಬೆಂಗಳೂರಿನ ಭಿಕ್ಷುಕರಿಗಿಂತ ಭಿನ್ನವಾಗಿಯೇನು ಇಲ್ಲ!
ಸರಕಾರದಿಂದ ಭಿಕ್ಷುಕರ ಹೆಸರಿನಲ್ಲಿ ಬಿಡುಗಡೆಯಾಗುವ ಕೋಟ್ಯಂತರ ಹಣವನ್ನು ಸಂಪೂರ್ಣವಾಗಿ ಸ್ವಾಹ ಮಾಡಿ ಅಲ್ಲಿನ ಭಿಕ್ಷುಕರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣುತ್ತಿದೆ. ಆದರೆ ಈಗ ಬೆಂಗಳೂರಿನ ಬೆಗ್ಗರ್ಸ್ ಕಾಲೊನಿಯಲ್ಲಿ ೧೧ ಮಂದಿ ಏಕಕಾಲಕ್ಕೆ ಮೃತಪಟ್ಟ ಕಾರಣಕ್ಕೆ ಇವುಗಳ ನಗ್ನ ಸತ್ಯ ಬಯಲಾಗಿದೆ. ಇಲ್ಲಿವರೆಗೆ ಭಿಕ್ಷುಕರನ್ನು ಕಂಡಾಕ್ಷಣ ‘ಈ ಭಿಕ್ಷುಕರಿಗೆ ಅಲ್ಲೆಲ್ಲೊ ಒಂದು ಕಾಲೊನಿ ಇದೆಯಂತೆ. ಅಲ್ಲಿ ಹೋಗಿ ನೆಮ್ಮದಿಯಿಂದಿರಬಾರ‍್ದಾ..?’ ಎಂದು ಗೊಣಗುತ್ತಿದ್ದವರೂ ಕೂಡ ‘ಹೇಗೊ ಇಲ್ಲೇ ಬದುಕಲಿ ಬಿಡಿ’ ಎನ್ನುವಷ್ಟರ ಮಟ್ಟಿಗೆ ಭಯಾನಕ ಚಿತ್ರ ಹೊರ ಬಿದ್ದಿದೆ.
ತಿಂಗಳಿಗೆ ಇಂತಿಷ್ಟು ಭಿಕ್ಷುಕರನ್ನು ಈ ಕಾಲೊನಿಗೆ ತಂದು ತುಂಬಬೇಕು ಎಂದು ಸಚಿವ ಸುಧಾಕರ್ ರಚಿಸಿದ ‘ಸ್ಪಷೆಲ್ ಡ್ರೈವ್’ ನಿಂದಾಗಿ ೧೭೦೦ಕ್ಕೂ ಹೆಚ್ಚು ಮಂದಿಯನ್ನು ನಾಯಿಗಳ ಹಾಗೆ ಹಿಡಿದು ತಂದು ಇಲ್ಲಿ ಕುರಿಗಳ ಹಾಗೆ ತುಂಬಲಾಗಿತ್ತು. ಹಾಗೆ ಮಾಡುವಾಗ ಅವರ ಬಳಿ ಇದ್ದ ಚಿನ್ನಾಭರಣಗಳನ್ನೂ ಕಿತ್ತುಕೊಂಡು ‘ಸಾಧನೆ’ ಮೆರೆದ ಅಕಾರಿಗಳು ಈಗ ಸದ್ದು ಗದ್ದಲವಿಲ್ಲದೆ ಅಲ್ಲಿಂದ ಮಾಯವಾಗಿದ್ದಾರೆ.
ಮನುಷ್ಯ ಸಂಬಂಧಗಳೇ ಮಾಯವಾಗುವ ಕಾಲದಲ್ಲಿ ಪಾಪ ಈ ಭಿಕ್ಷುಕರ ಬಗ್ಗೆ ಅದ್ಯಾವ ಅಕಾರಿಗಳಿಗೆ ತಾನೆ ಕನಿಕರ ಹುಟ್ಟಬೇಕು ಹೇಳಿ? ಬಹುಶಃ ಇಲ್ಲಿನ ಅಕಾರಿಗಳಿಗೆ ಅವರು ಮನುಷ್ಯರಂತೆಯೇ ಕಾಣುತ್ತಿಲ್ಲವೆ? ಈ ಪ್ರಕರಣ ನಡೆದ ಬಳಿಕ ಈ ನಿರಾಶ್ರಿತರ ಕೇಂದ್ರದಲ್ಲಿ ನಡೆ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಇಲ್ಲಿ ತಿಂಗಳಿಗೆ ಹತ್ತಾರು ಭಿಕ್ಷುಕರು ಕೊನೆಯುಸಿರೆಳೆಯುತ್ತಿದ್ದರು. ಅವುಗಳನ್ನು ಸದ್ದಿಲ್ಲದೆ ಪೀಣ್ಯಾದ ಚಿತಾಗಾರದಲ್ಲಿ ಯಾವುದೇ ಶವಪರೀಕ್ಷೆ ನಡೆಸದೆ ಸುಟ್ಟು ಹಾಕುತ್ತಿದ್ದರು ಎನ್ನುವ ಅಂಶ ಕೂಡ ಬಯಲಾಗಿದೆ. ಹೀಗೆ ಸಾಗಿದ ಇಲ್ಲಿನ ಅಕಾರಿಗಳ ದರ್ಪದಲ್ಲಿ ಕೆಲ ತಿಂಗಳೀಚೆಗೆ ೨೧೯ಕ್ಕೂ ಹೆಚ್ಚು ಮಂದಿಯನ್ನು ಸುಟ್ಟು ಹಾಕಿರುವ ಶಂಕೆ ಹೊಗೆಯಾಡುತ್ತಿದೆ.
ಸರಕಾರಿ ಸಂಬಳ ಸಾಲದೆ ಭಿಕ್ಷುಕರಿಗಾಗಿ ಬಿಡುಗಡೆ ಮಾಡುವ ಹಣದಲ್ಲೂ ತಿಂದು ತೇಗುವ ಅಕಾರಿಗಳ ದಾಹ ಬಹುಶಃ ಇನ್ನೂ ಇಂಗಿದಂತೆ ಕಾಣುತ್ತಿಲ್ಲ. ೨೦೦೪ರಲ್ಲಿ ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗಲೇ ಈ ಪುನರ್ವಸತಿ ಕೇಂದ್ರದಲ್ಲಿ ಅವ್ಯವಹಾರ ನಡೆಯುತ್ತಿತ್ತು. ಅಲ್ಲಿನ ಭಿಕ್ಷುಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರು ನೀಡಲಾಗಿತ್ತು. ಆದರೆ ಆಗ ಕೂಡ ಆ ಅಕಾರಿಗೆ ಯಾವುದೇ ಶಿಕ್ಷೆಯಾಗಲಿಲ್ಲ. ಬದಲಿಗೆ ಪ್ರಮೋಷನ್ ಕೊಟ್ಟರು!
ಮುಖ್ಯಮಂತ್ರಿಯವರೇ ಹೇಳಿದ ಹಾಗೆ ‘ಇಲ್ಲಿಗೆ ಬರುವ ಅಕಾರಿಗಳು ಸಂಬಳಕ್ಕೆ ಬರುತ್ತಾರೆ’, ಜತೆಗೆ ಗಿಂಬಳಕ್ಕು ಹಾತೊರೆಯುತ್ತಾರೆ. ಹೀಗಾಗಿಯೇ ಇಲ್ಲಿ ಸೇವಾ ಮನೋಭಾವ ಮಾಯವಾಗಿದೆ. ಈ ಕೇಂದ್ರದ ಸುಪರ್ದಿಯಲ್ಲಿ ೩೧೦ ಎಕರೆ ಭೂಮಿಯಿದೆ. ಅದನ್ನು ಕಬಳಿಸಲು ಹಲವು ವರ್ಷಗಳ ಹಿಂದಿನಿಂದಲೂ ಯತ್ನ ನಡೆಯುತ್ತಲೇ ಇದೆ. ಹೀಗೆ ಇಲ್ಲಿ ನಡೆಯುವ ಅವ್ಯವಹಾರಗಳು ಒಂದೆರಡಲ್ಲ. ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಇಲ್ಲಿನ ಜನರಿಗೆ ಚಿತ್ರ ಹಿಂಸೆ ನೀಡುತ್ತಾ ಅವರನ್ನು ಅಕ್ಷರಶಃ ನಿರ್ಗತಿಕರನ್ನಾಗಿ ಮಾಡಲಾಗಿದೆ.
ನಾಗರಿಕ ಸಮಾಜಕ್ಕೆ ಅವಮಾನವಾಗಬಾರದು ಎಂಬ ಕಾರಣಕ್ಕಾಗಿಯೇ ರಾಜ್ಯದಲ್ಲಿ ೧೯೪೮ರಲ್ಲಿಯೇ ನಿರ್ಗತಿಕರ ಪುನರ್ವಸತಿ ಕೆಂದ್ರ ಕಲ್ಪನೆಯನ್ನು ಮೈಸೂರು ಅರಸರು ತಂದಿದ್ದರು. ಅದರ ಫಲವಾಗಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅದೇ ಸಮಯದಲ್ಲಿ ಒಂದು ಪುನರ್ವಸತಿ ಕೇಂದ್ರ ತೆರೆಯಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದನ್ನು ಸ್ಥಳಾಂತರಿಸಿ, ಅದಕ್ಕೆ ಭಿಕ್ಷುಕರ ಕಾಲೊನಿ ಎಂದು ನಾಮಕರಣ ಮಾಡಿದರೆ ಹೊರತು ಅಲ್ಲಿಗೆ ಹಿಡಿದು ತರುವ ಜನರಿಗೆ ಪುನರ್ವಸತಿ ಕಲ್ಪಿಸಲೇ ಇಲ್ಲ. ಭಿಕ್ಷುಕರು ಬೀದಿ ಬೀದಿಯಲ್ಲಿ ತಿರುಗುತ್ತಾ ಜನರಿಗೆ ಕಿರಿಕಿರಿ ಮಾಡುವುದು ಸರಿಯಲ್ಲ, ಅವರಿಗೂ ಕರಕುಶಲ ಕಲೆ ಕಲಿಸಿ, ಉದ್ಯೋಗ ಒದಗಿಸಬೇಕು, ಅವರೂ ಎಲ್ಲರಂತೆ ಬದುಕಬೇಕೆಂದು ಈ ಪುನರ್ವಸತಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಯಿತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.
ಈ ಪುನರ್ವಸತಿ ಕೇಂದ್ರದ ಉಸ್ತುವಾರಿಗಾಗಿಯೇ ಒಂದು ಸಮಿತಿ ಮಾಡಿ ಅದಕ್ಕೆ ಮಂಜೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಸಾಲದ್ದಕ್ಕೆ ಅವರಿಗೆ ಎಲ್ಲ ಸರಕಾರಿ ಸವಲತ್ತು, ಕಾರು ಎಲ್ಲವೂ ಇತ್ತು. ಪಾಪ ಅವರು ಅಕಾರದ ಅಮಲಿನಲ್ಲಿ ತೇಲುತ್ತಿದ್ದರೆ ಹೊರತು ಒಮ್ಮೆಯೂ ಇತ್ತ ಸುಳಿದಿರಲಿಲ್ಲ. ಜತೆಗೆ ಸರಕಾರ ಕೂಡ ಇಷ್ಟೆಲ್ಲ ಭಿಕ್ಷುಕರನ್ನು ನೋಡಿಕೊಳ್ಳಲು ಪಕ್ಕದಲ್ಲಿಯೇ ಇರುವ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರನ್ನು ಬಿಟ್ಟಿದೆ !
ಹೀಗೆ ನಿಜವಾದ ಉದ್ದೇಶಗಳೆಲ್ಲವೂ ಗಾಳಿಗೋಪುರವಾಗಿದ್ದು, ಕೈಗೆ ಸಿಕ್ಕ ಅಮಾಯಕರು, ಬಸ್, ರೈಲು ಕಾಯುತ್ತಿದ್ದವರು, ಕೂಲಿ ಕಾರ್ಮಿಕರು, ಕೆಲವು ನೌಕರರನ್ನೂ ಎಳೆದು ತಂದು ಇಲ್ಲಿ ನಿಜಕ್ಕೂ ನಿರ್ಗತಿಕರನ್ನಾಗಿ ಮಾಡಲಾಗಿದೆ. ಇದೆಲ್ಲವೂ ಸಮಾಜ ಕಲ್ಯಾಣ ಇಲಾಖೆಯ ಅಕಾರಿಗಳಿಗೆ, ಸಚಿವರಿಗೆ ಗೊತ್ತಿತ್ತು! ಆದರೆ ಅವರೆಲ್ಲಾ ಭಿಕ್ಷುಕರು, ಅವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬ ತಾತ್ಸಾರದಿಂದ ದಿನ ದೂಡುತ್ತಿದ್ದರು. ಅದರ ಫಲವಾಗಿ ೨೬ ಮಂದಿ ಸ್ಮಶಾನ ಸೇರಿದ್ದಾರೆ.
ಈ ದುರಂತಕ್ಕೆ ಮುಂಚೆಯೂ ಇಲ್ಲಿ ಸಾವು ನೋವು ಸಾಮಾನ್ಯವಾಗಿತ್ತು! ಆದರೆ ಅದು ಬೆಳಕಿಗೆ ಬಂದಿರಲಿಲ್ಲ. ತಿಂಗಳಿಗೆ ಹತ್ತಾರು ಮಂದಿ ಇಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ‍್ಯಾರನ್ನೂ ಶವ ಪರೀಕ್ಷೆ ಕೂಡ ಮಾಡದೆ ಸುಟ್ಟು ಹಾಕಿದ್ದಾರೆ. ಸೆಕ್ಷನ್ ೫೯ರ ಪ್ರಕಾರ ಕಸ್ಟಡಿಯಲ್ಲಿರುವವರು ಯಾರೇ ಮೃತಪಟ್ಟರೂ ಅವರನ್ನು ಶವಪರೀಕ್ಷೆ ಮಾಡಬೇಕು. ಅದೂ ಕೂಡ ಇಲ್ಲಿ ಆಗಿಲ್ಲ. ಸಚಿವ ಸುಧಾಕರ್ ಮಾತಿನಂತೆ ಅವೆಲ್ಲವೂ ‘ಸಾಮಾನ್ಯ ಸಾವು’. ಆದರೆ ಅವರೂ ಮನುಷ್ಯರು ಎನ್ನುವ ಆಲೋಚನೆ ಅಲ್ಲಿದ್ದ ಒಬ್ಬನೇ ಒಬ್ಬ ಅಕಾರಿಗೂ ಬರಲೇ ಇಲ್ಲವೆ ? ಅವರ ದೃಷ್ಟಿಯಲ್ಲಿ ಭಿಕ್ಷುಕರ ಕಾಲೊನಿಯಲ್ಲಿದ್ದವರೆಲ್ಲ ಪ್ರಾಣಿಗಳೇ? ಕೈಗೆ ಸಿಕ್ಕವರನ್ನೆಲ್ಲಾ ತಂದು ಈ ದೊಡ್ಡಿಯಲ್ಲಿ ತುಂಬಿದವರಿಗೆ ಸಂಬಂಕರು ಯಾರಾದರೂ ಇದ್ದಾರೆಯೇ ಎಂದು ಹುಡುಕುವ ವ್ಯವದಾನ ಕೂಡ ಇರಲಿಲ್ಲವೆ? ಅವರೂ ತಮ್ಮ ಅಪ್ಪ,-ಅಮ್ಮ, ಅಣ್ಣ- ತಂಗಿ, ಅಕ್ಕ -ತಮ್ಮನಂತೆಯೇ ಮನುಷ್ಯರು ಎನಿಸಲಿಲ್ಲವೆ? ಛೇ... ಎಂಥ ದುರುಳ ಜನ...

Monday, July 5, 2010

"ಜ್ಯೋತಿಬಸು'' ಬಿಡುಗಡೆ''


ಈ ದೇಶ ಕಂಡ ಅದ್ಭುತ ನಾಯಕ ಜ್ಯೋತಿ ಬಸು. ಅವರ ಬದುಕು, ರಾಜಕೀಯ ನಡೆ, ನಡವಳಿಕೆ, ಸಂಯಮ, ತಾಳ್ಮೆ ಹೀಗೆ ಎಲ್ಲವೂ ಇಂದಿನ ಯುವಕರಿಗೆ ಮಾದರಿ.
ಅಂತ ಮಹಾನ್ ನಾಯಕನ ಹುಟ್ಟು ಹಬ್ಬದ ಪ್ರಯುಕ್ತ ಅವರ ಇಡೀ "ಜೀವನ ಚರಿತ್ರೆ''ಯನ್ನ ಪದ್ಮಶ್ರೀ ಪುರಸ್ಕೃತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ನಮ್ಮಗಳ ಮುಂದೆ ಇಡಲಿದ್ದಾರೆ... ಮರೆಯದೆ ಬನ್ನಿ, ಭಾಗವಹಿಸಿ...
Powered By Blogger