Wednesday, August 25, 2010

ಅವರು ನಿಮ್ಮ ಕಣ್ಣಿಗೆ ಮನುಷ್ಯರಂತೆ ಕಾಣುವುದಿಲ್ಲವೆ ?

‘ಮರು ವಸತಿ ಕೇಂದ್ರದಲ್ಲಿ ಭಿಕ್ಷುಕರ ಸಾವು ಸಾಮಾನ್ಯ ಸಂಗತಿ. ಇದರಲ್ಲಿ ವಿಶೇಷವೇನಿಲ್ಲ’ ಇದು ‘ಸಮಾಜ ಕಲ್ಯಾಣ’ ಖಾತೆ ಸಚಿವರಾಗಿದ್ದ ಡಿ.ಸುಧಾಕರ ಅವರ ಕಲ್ಯಾಣದ ನುಡಿಗಳು.
ಈ ಮಾತನ್ನು ಗಮನಿಸಿದರೆ ಅವರಿಗೆ ಅಕಾರದ ಮದ ಎಷ್ಟರ ಮಟ್ಟಿಗೆ ಏರಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಗೋವುಗಳ ಬಗ್ಗೆಯೇ ಮಾನವೀಯ ಹಿನ್ನೆಲೆಯಲ್ಲಿ ಮಾತನಾಡು ಪಕ್ಷದ ಸಚಿವರಲ್ಲಿ ಮನುಷ್ಯರ ಜೀವಕ್ಕೆ ಎಷ್ಟರಮಟ್ಟಿಗೆ ಬೆಲೆಯಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಎಲ್ಲೆಲ್ಲೊ ಭಿಕ್ಷೆ ಬೇಡಿಕೊಂಡು ಹೇಗೋ ಬದುಕುತ್ತಿದ್ದವರು ಬೆಂಗಳೂರಿನ ಭಿಕ್ಷುಕರ ಕಾಲೊನಿಯೆಂಬ ‘ನರಕ’ದಲ್ಲಿ ಸಾಲು ಸಾಲಾಗಿ ಹೆಣಗಳಾಗಿ ಮಲಗುತ್ತಿದ್ದಾರೆ. ಇಲ್ಲಿವರೆಗೆ ೨೬ ಮಂದಿ ಸಾವಿನ ಕದ ತಟ್ಟಿದ್ದಾರೆ. ಅಕ್ಷರಶಃ ಆ ಭಿಕ್ಷುಕರ ಪುನರ್ವಸತಿ ಕೇಂದ್ರ ಸಾವಿನ ಮನೆಯಾಗಿದೆ.
ಭಿಕ್ಷುಕರು ಎಂದಾಕ್ಷಣ ಎಲ್ಲರೂ ದೂರ ಸರಿಯುತ್ತಾರೆ. ನಿಜ, ಕೊಳಕು ಕೊಳಕಾಗಿರುವ ಭಿಕ್ಷುಕರು ಎದುರು ಬಂದರೆ ಬಹುತೇಕ ಮಂದಿ ಗೊಣಗುತ್ತಲೇ ಆತನನ್ನು ದೂರ ಕಳುಹಿಸುತ್ತಾರೆ. ಆದರೆ ಅದೇ ಭಿಕ್ಷುಕರು ನಾಯಿಗಳ ಹಾಗೆ ಸಾಮೂಹಿಕವಾಗಿ ಮಲಗಿದ್ದಲ್ಲಿ ಹೆಣವಾಗುತ್ತಾರೆ ಎಂದರೆ ಗೊಣಗಿದವರೂ ಸುಮ್ಮನೆ ಕೂರುವುದಿಲ್ಲ. ಹೀಗೆ ಸಾಲು ಸಾಲು ಹೆಣಗಳುರುಳಿದ್ದು ಅಕಾರಿಗಳ, ಸಂಭಂಸಿದವರ ನಿರ್ಲಕ್ಷ್ಯದಿಂದಲೇ ಎನ್ನುವುದನ್ನ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಜತೆಗೆ ತಿಂಗಳಲ್ಲಿ ಅಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ಹೋದ ಪ್ರಾಣ ಮತ್ತೆ ಬರಲು ಸಾಧ್ಯವೇ?
ಇದೊಂದೇ ಅಲ್ಲ, ರಾಜ್ಯದಲ್ಲಿ ಇಂಥ ೨೦ ಕಡೆಗಳಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರಗಳಿವೆ. ಆದರೆ ಧಾರವಾಡ ಒಂದನ್ನು ಹೊರತುಪಡಿಸಿದರೆ ಉಳಿದ ೧೯ ಕೇಂದ್ರಳಲ್ಲಿರುವ ಬಹುತೇಕ ಭಿಕ್ಷುಕರ ಸ್ಥತಿ ಬೆಂಗಳೂರಿನ ಭಿಕ್ಷುಕರಿಗಿಂತ ಭಿನ್ನವಾಗಿಯೇನು ಇಲ್ಲ!
ಸರಕಾರದಿಂದ ಭಿಕ್ಷುಕರ ಹೆಸರಿನಲ್ಲಿ ಬಿಡುಗಡೆಯಾಗುವ ಕೋಟ್ಯಂತರ ಹಣವನ್ನು ಸಂಪೂರ್ಣವಾಗಿ ಸ್ವಾಹ ಮಾಡಿ ಅಲ್ಲಿನ ಭಿಕ್ಷುಕರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಾಣುತ್ತಿದೆ. ಆದರೆ ಈಗ ಬೆಂಗಳೂರಿನ ಬೆಗ್ಗರ್ಸ್ ಕಾಲೊನಿಯಲ್ಲಿ ೧೧ ಮಂದಿ ಏಕಕಾಲಕ್ಕೆ ಮೃತಪಟ್ಟ ಕಾರಣಕ್ಕೆ ಇವುಗಳ ನಗ್ನ ಸತ್ಯ ಬಯಲಾಗಿದೆ. ಇಲ್ಲಿವರೆಗೆ ಭಿಕ್ಷುಕರನ್ನು ಕಂಡಾಕ್ಷಣ ‘ಈ ಭಿಕ್ಷುಕರಿಗೆ ಅಲ್ಲೆಲ್ಲೊ ಒಂದು ಕಾಲೊನಿ ಇದೆಯಂತೆ. ಅಲ್ಲಿ ಹೋಗಿ ನೆಮ್ಮದಿಯಿಂದಿರಬಾರ‍್ದಾ..?’ ಎಂದು ಗೊಣಗುತ್ತಿದ್ದವರೂ ಕೂಡ ‘ಹೇಗೊ ಇಲ್ಲೇ ಬದುಕಲಿ ಬಿಡಿ’ ಎನ್ನುವಷ್ಟರ ಮಟ್ಟಿಗೆ ಭಯಾನಕ ಚಿತ್ರ ಹೊರ ಬಿದ್ದಿದೆ.
ತಿಂಗಳಿಗೆ ಇಂತಿಷ್ಟು ಭಿಕ್ಷುಕರನ್ನು ಈ ಕಾಲೊನಿಗೆ ತಂದು ತುಂಬಬೇಕು ಎಂದು ಸಚಿವ ಸುಧಾಕರ್ ರಚಿಸಿದ ‘ಸ್ಪಷೆಲ್ ಡ್ರೈವ್’ ನಿಂದಾಗಿ ೧೭೦೦ಕ್ಕೂ ಹೆಚ್ಚು ಮಂದಿಯನ್ನು ನಾಯಿಗಳ ಹಾಗೆ ಹಿಡಿದು ತಂದು ಇಲ್ಲಿ ಕುರಿಗಳ ಹಾಗೆ ತುಂಬಲಾಗಿತ್ತು. ಹಾಗೆ ಮಾಡುವಾಗ ಅವರ ಬಳಿ ಇದ್ದ ಚಿನ್ನಾಭರಣಗಳನ್ನೂ ಕಿತ್ತುಕೊಂಡು ‘ಸಾಧನೆ’ ಮೆರೆದ ಅಕಾರಿಗಳು ಈಗ ಸದ್ದು ಗದ್ದಲವಿಲ್ಲದೆ ಅಲ್ಲಿಂದ ಮಾಯವಾಗಿದ್ದಾರೆ.
ಮನುಷ್ಯ ಸಂಬಂಧಗಳೇ ಮಾಯವಾಗುವ ಕಾಲದಲ್ಲಿ ಪಾಪ ಈ ಭಿಕ್ಷುಕರ ಬಗ್ಗೆ ಅದ್ಯಾವ ಅಕಾರಿಗಳಿಗೆ ತಾನೆ ಕನಿಕರ ಹುಟ್ಟಬೇಕು ಹೇಳಿ? ಬಹುಶಃ ಇಲ್ಲಿನ ಅಕಾರಿಗಳಿಗೆ ಅವರು ಮನುಷ್ಯರಂತೆಯೇ ಕಾಣುತ್ತಿಲ್ಲವೆ? ಈ ಪ್ರಕರಣ ನಡೆದ ಬಳಿಕ ಈ ನಿರಾಶ್ರಿತರ ಕೇಂದ್ರದಲ್ಲಿ ನಡೆ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಲೇ ಇವೆ. ಇಲ್ಲಿ ತಿಂಗಳಿಗೆ ಹತ್ತಾರು ಭಿಕ್ಷುಕರು ಕೊನೆಯುಸಿರೆಳೆಯುತ್ತಿದ್ದರು. ಅವುಗಳನ್ನು ಸದ್ದಿಲ್ಲದೆ ಪೀಣ್ಯಾದ ಚಿತಾಗಾರದಲ್ಲಿ ಯಾವುದೇ ಶವಪರೀಕ್ಷೆ ನಡೆಸದೆ ಸುಟ್ಟು ಹಾಕುತ್ತಿದ್ದರು ಎನ್ನುವ ಅಂಶ ಕೂಡ ಬಯಲಾಗಿದೆ. ಹೀಗೆ ಸಾಗಿದ ಇಲ್ಲಿನ ಅಕಾರಿಗಳ ದರ್ಪದಲ್ಲಿ ಕೆಲ ತಿಂಗಳೀಚೆಗೆ ೨೧೯ಕ್ಕೂ ಹೆಚ್ಚು ಮಂದಿಯನ್ನು ಸುಟ್ಟು ಹಾಕಿರುವ ಶಂಕೆ ಹೊಗೆಯಾಡುತ್ತಿದೆ.
ಸರಕಾರಿ ಸಂಬಳ ಸಾಲದೆ ಭಿಕ್ಷುಕರಿಗಾಗಿ ಬಿಡುಗಡೆ ಮಾಡುವ ಹಣದಲ್ಲೂ ತಿಂದು ತೇಗುವ ಅಕಾರಿಗಳ ದಾಹ ಬಹುಶಃ ಇನ್ನೂ ಇಂಗಿದಂತೆ ಕಾಣುತ್ತಿಲ್ಲ. ೨೦೦೪ರಲ್ಲಿ ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗಲೇ ಈ ಪುನರ್ವಸತಿ ಕೇಂದ್ರದಲ್ಲಿ ಅವ್ಯವಹಾರ ನಡೆಯುತ್ತಿತ್ತು. ಅಲ್ಲಿನ ಭಿಕ್ಷುಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರು ನೀಡಲಾಗಿತ್ತು. ಆದರೆ ಆಗ ಕೂಡ ಆ ಅಕಾರಿಗೆ ಯಾವುದೇ ಶಿಕ್ಷೆಯಾಗಲಿಲ್ಲ. ಬದಲಿಗೆ ಪ್ರಮೋಷನ್ ಕೊಟ್ಟರು!
ಮುಖ್ಯಮಂತ್ರಿಯವರೇ ಹೇಳಿದ ಹಾಗೆ ‘ಇಲ್ಲಿಗೆ ಬರುವ ಅಕಾರಿಗಳು ಸಂಬಳಕ್ಕೆ ಬರುತ್ತಾರೆ’, ಜತೆಗೆ ಗಿಂಬಳಕ್ಕು ಹಾತೊರೆಯುತ್ತಾರೆ. ಹೀಗಾಗಿಯೇ ಇಲ್ಲಿ ಸೇವಾ ಮನೋಭಾವ ಮಾಯವಾಗಿದೆ. ಈ ಕೇಂದ್ರದ ಸುಪರ್ದಿಯಲ್ಲಿ ೩೧೦ ಎಕರೆ ಭೂಮಿಯಿದೆ. ಅದನ್ನು ಕಬಳಿಸಲು ಹಲವು ವರ್ಷಗಳ ಹಿಂದಿನಿಂದಲೂ ಯತ್ನ ನಡೆಯುತ್ತಲೇ ಇದೆ. ಹೀಗೆ ಇಲ್ಲಿ ನಡೆಯುವ ಅವ್ಯವಹಾರಗಳು ಒಂದೆರಡಲ್ಲ. ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಇಲ್ಲಿನ ಜನರಿಗೆ ಚಿತ್ರ ಹಿಂಸೆ ನೀಡುತ್ತಾ ಅವರನ್ನು ಅಕ್ಷರಶಃ ನಿರ್ಗತಿಕರನ್ನಾಗಿ ಮಾಡಲಾಗಿದೆ.
ನಾಗರಿಕ ಸಮಾಜಕ್ಕೆ ಅವಮಾನವಾಗಬಾರದು ಎಂಬ ಕಾರಣಕ್ಕಾಗಿಯೇ ರಾಜ್ಯದಲ್ಲಿ ೧೯೪೮ರಲ್ಲಿಯೇ ನಿರ್ಗತಿಕರ ಪುನರ್ವಸತಿ ಕೆಂದ್ರ ಕಲ್ಪನೆಯನ್ನು ಮೈಸೂರು ಅರಸರು ತಂದಿದ್ದರು. ಅದರ ಫಲವಾಗಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅದೇ ಸಮಯದಲ್ಲಿ ಒಂದು ಪುನರ್ವಸತಿ ಕೇಂದ್ರ ತೆರೆಯಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದನ್ನು ಸ್ಥಳಾಂತರಿಸಿ, ಅದಕ್ಕೆ ಭಿಕ್ಷುಕರ ಕಾಲೊನಿ ಎಂದು ನಾಮಕರಣ ಮಾಡಿದರೆ ಹೊರತು ಅಲ್ಲಿಗೆ ಹಿಡಿದು ತರುವ ಜನರಿಗೆ ಪುನರ್ವಸತಿ ಕಲ್ಪಿಸಲೇ ಇಲ್ಲ. ಭಿಕ್ಷುಕರು ಬೀದಿ ಬೀದಿಯಲ್ಲಿ ತಿರುಗುತ್ತಾ ಜನರಿಗೆ ಕಿರಿಕಿರಿ ಮಾಡುವುದು ಸರಿಯಲ್ಲ, ಅವರಿಗೂ ಕರಕುಶಲ ಕಲೆ ಕಲಿಸಿ, ಉದ್ಯೋಗ ಒದಗಿಸಬೇಕು, ಅವರೂ ಎಲ್ಲರಂತೆ ಬದುಕಬೇಕೆಂದು ಈ ಪುನರ್ವಸತಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಯಿತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.
ಈ ಪುನರ್ವಸತಿ ಕೇಂದ್ರದ ಉಸ್ತುವಾರಿಗಾಗಿಯೇ ಒಂದು ಸಮಿತಿ ಮಾಡಿ ಅದಕ್ಕೆ ಮಂಜೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಸಾಲದ್ದಕ್ಕೆ ಅವರಿಗೆ ಎಲ್ಲ ಸರಕಾರಿ ಸವಲತ್ತು, ಕಾರು ಎಲ್ಲವೂ ಇತ್ತು. ಪಾಪ ಅವರು ಅಕಾರದ ಅಮಲಿನಲ್ಲಿ ತೇಲುತ್ತಿದ್ದರೆ ಹೊರತು ಒಮ್ಮೆಯೂ ಇತ್ತ ಸುಳಿದಿರಲಿಲ್ಲ. ಜತೆಗೆ ಸರಕಾರ ಕೂಡ ಇಷ್ಟೆಲ್ಲ ಭಿಕ್ಷುಕರನ್ನು ನೋಡಿಕೊಳ್ಳಲು ಪಕ್ಕದಲ್ಲಿಯೇ ಇರುವ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರನ್ನು ಬಿಟ್ಟಿದೆ !
ಹೀಗೆ ನಿಜವಾದ ಉದ್ದೇಶಗಳೆಲ್ಲವೂ ಗಾಳಿಗೋಪುರವಾಗಿದ್ದು, ಕೈಗೆ ಸಿಕ್ಕ ಅಮಾಯಕರು, ಬಸ್, ರೈಲು ಕಾಯುತ್ತಿದ್ದವರು, ಕೂಲಿ ಕಾರ್ಮಿಕರು, ಕೆಲವು ನೌಕರರನ್ನೂ ಎಳೆದು ತಂದು ಇಲ್ಲಿ ನಿಜಕ್ಕೂ ನಿರ್ಗತಿಕರನ್ನಾಗಿ ಮಾಡಲಾಗಿದೆ. ಇದೆಲ್ಲವೂ ಸಮಾಜ ಕಲ್ಯಾಣ ಇಲಾಖೆಯ ಅಕಾರಿಗಳಿಗೆ, ಸಚಿವರಿಗೆ ಗೊತ್ತಿತ್ತು! ಆದರೆ ಅವರೆಲ್ಲಾ ಭಿಕ್ಷುಕರು, ಅವರ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬ ತಾತ್ಸಾರದಿಂದ ದಿನ ದೂಡುತ್ತಿದ್ದರು. ಅದರ ಫಲವಾಗಿ ೨೬ ಮಂದಿ ಸ್ಮಶಾನ ಸೇರಿದ್ದಾರೆ.
ಈ ದುರಂತಕ್ಕೆ ಮುಂಚೆಯೂ ಇಲ್ಲಿ ಸಾವು ನೋವು ಸಾಮಾನ್ಯವಾಗಿತ್ತು! ಆದರೆ ಅದು ಬೆಳಕಿಗೆ ಬಂದಿರಲಿಲ್ಲ. ತಿಂಗಳಿಗೆ ಹತ್ತಾರು ಮಂದಿ ಇಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ‍್ಯಾರನ್ನೂ ಶವ ಪರೀಕ್ಷೆ ಕೂಡ ಮಾಡದೆ ಸುಟ್ಟು ಹಾಕಿದ್ದಾರೆ. ಸೆಕ್ಷನ್ ೫೯ರ ಪ್ರಕಾರ ಕಸ್ಟಡಿಯಲ್ಲಿರುವವರು ಯಾರೇ ಮೃತಪಟ್ಟರೂ ಅವರನ್ನು ಶವಪರೀಕ್ಷೆ ಮಾಡಬೇಕು. ಅದೂ ಕೂಡ ಇಲ್ಲಿ ಆಗಿಲ್ಲ. ಸಚಿವ ಸುಧಾಕರ್ ಮಾತಿನಂತೆ ಅವೆಲ್ಲವೂ ‘ಸಾಮಾನ್ಯ ಸಾವು’. ಆದರೆ ಅವರೂ ಮನುಷ್ಯರು ಎನ್ನುವ ಆಲೋಚನೆ ಅಲ್ಲಿದ್ದ ಒಬ್ಬನೇ ಒಬ್ಬ ಅಕಾರಿಗೂ ಬರಲೇ ಇಲ್ಲವೆ ? ಅವರ ದೃಷ್ಟಿಯಲ್ಲಿ ಭಿಕ್ಷುಕರ ಕಾಲೊನಿಯಲ್ಲಿದ್ದವರೆಲ್ಲ ಪ್ರಾಣಿಗಳೇ? ಕೈಗೆ ಸಿಕ್ಕವರನ್ನೆಲ್ಲಾ ತಂದು ಈ ದೊಡ್ಡಿಯಲ್ಲಿ ತುಂಬಿದವರಿಗೆ ಸಂಬಂಕರು ಯಾರಾದರೂ ಇದ್ದಾರೆಯೇ ಎಂದು ಹುಡುಕುವ ವ್ಯವದಾನ ಕೂಡ ಇರಲಿಲ್ಲವೆ? ಅವರೂ ತಮ್ಮ ಅಪ್ಪ,-ಅಮ್ಮ, ಅಣ್ಣ- ತಂಗಿ, ಅಕ್ಕ -ತಮ್ಮನಂತೆಯೇ ಮನುಷ್ಯರು ಎನಿಸಲಿಲ್ಲವೆ? ಛೇ... ಎಂಥ ದುರುಳ ಜನ...

Monday, July 5, 2010

"ಜ್ಯೋತಿಬಸು'' ಬಿಡುಗಡೆ''


ಈ ದೇಶ ಕಂಡ ಅದ್ಭುತ ನಾಯಕ ಜ್ಯೋತಿ ಬಸು. ಅವರ ಬದುಕು, ರಾಜಕೀಯ ನಡೆ, ನಡವಳಿಕೆ, ಸಂಯಮ, ತಾಳ್ಮೆ ಹೀಗೆ ಎಲ್ಲವೂ ಇಂದಿನ ಯುವಕರಿಗೆ ಮಾದರಿ.
ಅಂತ ಮಹಾನ್ ನಾಯಕನ ಹುಟ್ಟು ಹಬ್ಬದ ಪ್ರಯುಕ್ತ ಅವರ ಇಡೀ "ಜೀವನ ಚರಿತ್ರೆ''ಯನ್ನ ಪದ್ಮಶ್ರೀ ಪುರಸ್ಕೃತ ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ನಮ್ಮಗಳ ಮುಂದೆ ಇಡಲಿದ್ದಾರೆ... ಮರೆಯದೆ ಬನ್ನಿ, ಭಾಗವಹಿಸಿ...

Friday, June 18, 2010

ಕೇಳದೆ ನಿಮಗೀಗ ಪ್ರಕೃತಿ ನರಳುವ ಕೂಗು...

‘ಪ್ರಕೃತಿಯನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ’ ಎಂಬ ಮಾತಿದೆ. ಅದು ನೂರಕ್ಕೆ ನೂರು ಸತ್ಯ. ಪ್ರತಿನಿತ್ಯ ನಾವು ‘ಅಭಿವೃದ್ಧಿ’ ಹೆಸರಿನಲ್ಲಿ ಪ್ರಕೃತಿದತ್ತವಾಗಿ ಬೆಳೆದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮರಗಳನ್ನು ಕ್ಷಣಾರ್ಧದಲ್ಲಿ ಸರ್ವನಾಶ ಮಾಡುತ್ತಿದ್ದೇವೆ. ಆದರೆ ಅದಕ್ಕೆ ಪರ್ಯಾಯವಾಗಿ ಅದೆಷ್ಟು ಮರಗಳನ್ನು ಸಾಕಿ ಬೆಳೆಸಿದ್ದೇವೆ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡರೆ ನಾಲಗೆಯಲ್ಲಿ ಪದಗಳೇ ಉಸುರುವುದಿಲ್ಲ...
ನಿಜ, ದಿನಗಳೆದಂತೆ ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯ ಎಲ್ಲೆ ಮೀರುತ್ತಿದೆ. ಸಹನೆಯ ಕಟ್ಟೆಯೊಡೆದು ಪ್ರಕೃತಿ ಕೂಡ ಒಂದಿಲ್ಲೊಂದು ಹೊಸ ಹೊಸ ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಲೇ ಇದೆ. ಮಳೆಯನ್ನೇ ನಂಬಿ ಬೆಳೆ ಬೆಳೆಯುವ ರೈ ಕೂಡ ಸಂಪೂರ್ಣ ಸೋತು ಸುಣ್ಣವಾಗಿದ್ದಾನೆ.
ಇದು ಯಾಂತ್ರಿಕ ಯುಗ. ಈಗ ಎಲ್ಲರಿಗೂ ಸೌಲಭ್ಯಗಳು ಮನೆ ಬಾಗಿಲಿಗೆ ಎಟಕಬೇಕು. ಹೀಗಾಗಿ ಯಾರೂ ಕೂಡ ಕಷ್ಟಪಡಲು ತಯಾರಿಲ್ಲ. ಏನೆಲ್ಲಾ ಅನುಕೂಲಗಳ ನಡುವೆಯೂ ಇನ್ನೂ ಆಸೆ ತೀರುತ್ತಿಲ್ಲ. ಇದರಿಂದಾಗಿ ಪ್ರತಿನಿತ್ಯ ಹೆಜ್ಜೆ ಹೆಜ್ಜೆಗೂ ಪ್ರತಿಯೊಬ್ಬರು ಒಂದಿಲ್ಲೊಂದು ರೀತಿ ಮರಗಳನ್ನು ಬೆಳೆಸುವ ಬದಲು ಅವುಗಳನ್ನು ಧರೆಗುರುಳಿಸಿ ‘ನಾಟಾ’ ತಯಾರು ಮಾಡುವ ಬಗ್ಗೆಯೇ ಆಲೋಚಿಸುತ್ತಿದ್ದೇವೆ. ಈ ದು ಮರಗಳು ಮರೆಯಾಗುತ್ತಲೇ ಇವೆ. ಜತೆಗೆ ದಟ್ಟ ಕಾನನವನ್ನು ಕಾಪಾಡಲೆಂದೇ ಸೃಷ್ಟಿ ಮಾಡಿರುವ ‘ಅರಣ್ಯ ಇಲಾಖೆ’ ಕೂಡ ಅನಾಯಾಸವಾಗಿ ಮಲಗಿದೆ. ಮರಗಳನ್ನು ಬೆಳೆಸಲೆಂದು ಸರಕಾರದಿಂದ ಬಿಡುಗಡೆಯಾಗುವ ಕೋಟಿ ಕೋಟಿ ಹಣದಲ್ಲಿ ಸಲೀಸಾಗಿ ನೀಲಿಗಿರಿ, ಅಕೇಶಿಯಾದಂಥ ‘ರಾಕ್ಷಸಿ ಮರ’ಗಳನ್ನು ಬೆಳೆಸಿ ಅರಣ್ಯ ಇಲಾಖೆ ಕೈ ತೊಳೆದುಕೊಳ್ಳುತ್ತಿದೆ. ಇದು ಇಂದಿನ ಕತೆಯಲ್ಲ. ಕಳೆದ ಇಪ್ಪತೈದು ವರ್ಷಗಳೀಚೆಗೆ ನಡೆಯುತ್ತಿರುವ ನಿರಂತರ ಪ್ರಕ್ರಿಯೆ.
ಹೀಗಾಗಿ ದಿನಕಳೆದಂತೆ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ನೂರಾರು ಅಡಿ ಬೋರ್‌ವೆಲ್ ಕೊರೆಯಿಸಿದರೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಗಾಳಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗಿ ಓಜೋನ್ ಪದರ ದಿನನಿತ್ಯ ಹರಿದು ಛಿದ್ರವಾಗುತ್ತಿದೆ. ಜನರ ಆರೋಗ್ಯ ಹದಗೆಟ್ಟು ದಿನಕಳೆದಂತೆ ಹೊಸ ಹೊಸ ಕಾಯಿಲೆಗಳು ದಾಂಗುಡಿಯಿಡುತ್ತಿವೆ. ಜತೆಗೆ ಸರಿಯಾದ ಸಮಯದಲ್ಲಿ ಮಳೆಯಿಲ್ಲದೆ ರೈತರು ಬೀದಿಗೆ ಬೀಳುತ್ತಿದ್ದಾರೆ. ಅನ್ನ, ನೀರಿಲ್ಲದೆ ನಿತ್ಯವೂ ಪರದಾಡುತ್ತಿದ್ದಾರೆ.
ಈಗಾಲೇ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿಯಂತ ಜಿಲ್ಲೆಗಳಲ್ಲಿ ಕುಡಿಯಲು ಕೂಡ ನೀರಿಲ್ಲ. ಬೆಂಗಳೂರಿನಂಥ ಮಹಾನಗರಗಳಲ್ಲಿ ಇದ್ದ ೭೬೧ ಕೆರೆಗಳೂ ಮಾಯವಾಗಿ ನೀರಿಗಾಗಿ ಹಾಹಾಕಾರ ಶುರುವಾಗುತ್ತಿದೆ. ಆದರೂ ನಗರಗಳ ವಿಸ್ತರಣೆ ಎನ್ನುವುದು ನಿರಂತರವಾಗಿ ನಡೆದೇ ಇದೆ. ಪರಿಸರವನ್ನು ನಾಶ ಮಾಡಿ ಹೀಗೆ ಮಾಡುತ್ತಿರುವ ಅಭಿವೃದ್ಧಿಯಿಂದಲೇ ಮನುಕುಲ ಮಾತ್ರವಲ್ಲ , ಸಕಲ ಜೀವರಾಶಿಗಳೂ ವಿನಾಶದಂಚಿಗೆ ಹತ್ತಿರವಾಗುತ್ತಿವೆ ಎಂಬ ಸತ್ಯದ ಬಗ್ಗೆ ಯಾರೂ ಯೋಚಿಸುತ್ತಿಲ್ಲ.
ಇದಲ್ಲದೆ ಈಗ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ನೆಪದಲ್ಲಂತೂ ಮರಗಳ ಸಾಮೂಹಿಕ ಮಾರಣಹೋಮ ನಡೆಯುತ್ತಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಎಲ್ಲೂ ಮರಗಳನ್ನು ನೆಡುತ್ತಿಲ್ಲ. ಶಿವಮೊಗ್ಗ, ಬೆಳಗಾವಿ, ತುಮಕೂರು, ರಾಯಚೂರು ವಿಭಾಗಗಳಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು ಕೆಶಿಪ್ (ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್) -೧ರ ಅಡಿ ೨,೩೯೫ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದು, ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಅದಕ್ಕಾಗಿ ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲು ಅರ್ಜಿ ಸಲ್ಲಿಸಲಾಗಿದೆ.
ರಸ್ತೆಗಳ ನಿರ್ಮಾಣವಾಗುತ್ತದೆ ಎಂಬ ಕಾರಣಕ್ಕೆ ಅಂಧಕಾರದಲ್ಲಿ ಮುಳುಗುವುದು ಯಾವ ನ್ಯಾಯ? ಅಭಿವೃದ್ಧಿ ಬೇಕೆ ಬೇಕು ಎಂದಾದರೆ ಅದಕ್ಕೆ ಪರ್ಯಾಯವಾಗಿ ಮರಗಳನ್ನಾದರೂ ನೆಡಬೇಕಲ್ಲ? ಅದೂ ಇಲ್ಲ. ಗಿಡ ಬೆಳೆಸುವ ಗೋಜಿಗೇ ಹೋಗದೆ ೨,೩೯೫ಕಿ.ಮೀ. ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕೆಶಿಪ್-೧ರ ಅಡಿ ೧,೭೭,೦೦೦ ಮರಗಳನ್ನು ಧರೆಗುರುಳಿಸಲಾಗಿದೆ. ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ೫೫,೫೯೬ ಮರಗಳನ್ನು ಕಡಿದು ಹಾಕಲು ತಂತ್ರ ರೂಪಿಸಲಾಗಿದೆ. ಇದರಲ್ಲಿ ಈಗಾಗಲೇ ೯,೮೦೮ ಮರಗಳನ್ನು ಸರ್ವನಾಶ ಮಾಡಿಯಾಗಿದೆ. ಉಳಿದ ೪೫,೮೦೮ ಮರಗಳಿಗೆ ಸದ್ಯದಲ್ಲಿಯೇ ಕೊಡಲಿ ಏಟು ಬೀಳಲಿದೆ.
ಇದು ಕೇವಲ ಸರಕಾರಿ ಜಾಗದಲ್ಲಿರುವ ಮರಗಳ ಸಂಖ್ಯೆ. ಅದರಲ್ಲೂ ಇಲಾಖೆ ನೀಡುವ ಮಾಹಿತಿ. ಖಾಸಗಿ ಜಮೀನು ಸೇರಿದಂತೆ ಲೆಕ್ಕದಿಂದ ತಪ್ಪಿದ ಲಕ್ಷಾಂತರ ಮರಗಳ ಮಾರಣಹೋಮ ನಡೆದಿದೆ ಎನ್ನುವ ಕೂಗು ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಆದರೆ ಇದ್ಯಾವುದೂ ಇಲಾಖೆಯ ಅಥವಾ ಸಂಬಂಸಿದ ಅಕಾರಿಗಳ, ಜನಪ್ರತಿನಿಗಳ ಕಿವಿಗೆ ಬೀಳುತ್ತಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ, ಕೋಟಿಗಟ್ಟಲೆ ಬೆಲೆ ಬಾಳುವ ಮರಗಳನ್ನು ಹೀಗೆ ಹಿಂದು ಮುಂದು ನೋಡದೆ ಗುತ್ತಿಗೆ ಕೊಟ್ಟು ಕತ್ತರಿಸಿ ಹಾಕುವ ಅರಣ್ಯ ಇಲಾಖೆಯ ಅಕಾರಿಗಳಿಗೆ ಅಷ್ಟೇ ಸಲೀಸಾಗಿ ಮರಗಳನ್ನು ಬೆಳೆಸಲು ಆದೀತೆ...? ಖಂಡಿತಾ ಇಲ್ಲ. ಒಂದು ಮರ ಸ್ವತಂತ್ರವಾಗಿ ಬೆಳೆಯಲು ಅಣಿಯಾಗಬೇಕಾದರೆ ಕನಿಷ್ಠ ೭ ವರ್ಷಗಳಾದರೂ ಬೇಕು. ಅಲ್ಲಿಯವರೆಗೆ ಅವುಗಳನ್ನು ಸಹನೆಯಿಂದ ಸಾಕುವ ವ್ಯವಧಾನ ಈ ಅರಣ್ಯ ಇಲಾಖೆಯ ಸಿಬ್ಬಂದಿಗೆ ಇದೆಯೇ?
ಗಿಡ ನೆಡುವ ಅವಕಾಶ ಸಿಕ್ಕಾಗಲೆಲ್ಲಾ ನೀಲಿಗಿರಿ, ಅಕೇಶಿಯಾದಂಥ ಪರಿಸರಕ್ಕೆ ಮಾರಕವಾದ ಗಿಡಗಳನ್ನು ಬೆಳೆಸಿ ಭೂಮಿಯನ್ನು ಹಾಳು ಮಾಡುವುದರ ಜತೆಗೆ ತಮಗೆ ‘ಆದಾಯ’ ಮಾಡಿಕೊಳ್ಳುವ ಇಂಥವರು ಮಮತೆಯಿಂದ ಮರಗಳನ್ನು ಬೆಳೆಸುವುದಾದರೂ ಎಂದು ? ಅದಿರಲಿ, ಅವುಗಳು ಮನುಷ್ಯನೂ ಸೇರಿದಂತೆ ಪ್ರಾಣಿ, ಪಕ್ಷಿಗಳ ಸಂಕುಲಗಳಿವೆ ನೀಡುವ ಉಸಿರಿಗೆ ಬೆಲೆ ಕಟ್ಟಲಾದೀತೆ...? ಅರಣ್ಯ ಇಲಾಖೆ ಕೇವಲ ನೆಪ ಮಾತ್ರಕ್ಕಿದೆ ಎಂಬ ಮಾತು ಈಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನೈಜವಾಗಿ ಬೆಳೆದ ಕಡೆಗಳಲ್ಲೆಲ್ಲ ‘ಪರವಾನಗಿ’ ಹೆಸರಿನಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕೆಲವು ಅರಣ್ಯ ಇಲಾಖೆಯ ಅಕಾರಿಗಳೇ ಅಗತ್ಯಕ್ಕಿಂತ ಹೆಚ್ಚು ಮರಗಳನ್ನು ಕತ್ತರಿಸುತ್ತಿರುವುದೂ ಬಹಿರಂಗ ಸತ್ಯ. ಆದರೆ ಅವುಗಳ ಜಾಗದಲ್ಲಿ ಇಲಾಖೆ ಬೆಳೆಸುತ್ತಿರುವುದು ಮಾತ್ರ ಕೇವಲ ಪ್ರಕೃತಿ ವಿರೋಯಾದ ಅಕೇಶಿಯಾ ಹಾಗೂ ನೀಲಿಗಿರಿ ಮರಗಳನ್ನು.
ಜತೆಗೆ ಅರಣ್ಯ ಇಲಾಖೆ ಹೇಗೆಂದರೆ ಹಾಗೆ ಮರ ಕಡಿಯಲು ನೀಡುತ್ತಿರುವ ಅನುಮತಿಗೆ ಲೆಕ್ಕವೇ ಇಲ್ಲ. ಜತೆಗೆ ಸಣ್ಣಪುಟ್ಟ ಕಾಮಗಾರಿಗಳಾದರೂ ಅದೇ ನೆಪದಲ್ಲಿ ಬೃಹದಾಕಾರದ ಮರಗಳು ನೆಲಕಚ್ಚುತ್ತಿವೆ. ಅವುಗಳಿಗೆ ಯಾವ ಲೆಕ್ಕವೂ ಇಲ್ಲ. ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಹೆಸರಲ್ಲಿ, ಅಂಡರ್‌ಪಾಸ್, ಅಥವಾ ಮೇಲ್ಸೇತುವೆ ಮುಂತಾದ ಕಾರಣಗಳಿಗಾಗಿ ಎರಡು ವರ್ಷದಿಂದೀಚೆ ಐದು ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಶಿವಮೊಗ್ಗ, ಮಂಡ್ಯ, ಕೋಲಾರ, ತುಮಕೂರು, ಬಳ್ಳಾರಿ ಮುಂತಾದ ನಗರಗಳಲ್ಲಿ ಸಣ್ಣಪುಟ್ಟ ರಸ್ತೆ ವಿಸ್ತರಣೆಗೂ ನೂರಾರು ಮರಗಳನ್ನು ಧರೆಗುರುಳಿಸಲಾಗಿದೆ. ಆದರೆ ಎಲ್ಲೂ ಉತ್ತಮ ತಳಿಯ ಮರಗಳನ್ನು ನೆಟ್ಟಿಲ್ಲ! ಮರಗಳ ಕಳ್ಳಸಾಗಣೆ, ಗಣಿ ಹೆಸರಿನಲ್ಲಂತೂ ಅರಣ್ಯಕ್ಕೆ ಅರಣ್ಯವೇ ಸಮಾಪ್ತಿಯಾಗುತ್ತಿದೆ... ಇವುಗಳ ಬಗ್ಗೆ ಮಾತ್ರ ಪ್ರಶ್ನೆ ಮಾಡುವವರೇ ಇಲ್ಲ.
ಕೆಶಿಪ್ ಅಡಿ ಕಡಿದಿರುವ ಮರಗಳ ಬದಲಿಗೆ ಒಂದು ಕಿ.ಮೀ.ಗೆ ೨೦೦ ಮರಗಳಂತೆ ಮರಗಳನ್ನು ಬೆಳೆಸಿ ನೆಡಲು ಹಾಗೂ ೭ವರ್ಷಗಳ ವರೆಗೆ ಅವುಗಳ ಮುತುವರ್ಜಿ ನೋಡಿಕೊಳ್ಳಲು ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್ ಹಾಗೂ ಅರಣ್ಯ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಅದಕ್ಕೆ ತಗಲುವ ವೆಚ್ಚವನ್ನೂ ಕೆಶಿಪ್ ಭರಿಸಲು ಒಪ್ಪಿಗೆ ನೀಡಿ, ಹಂತ ಹಂತವಾಗಿ ಹಣ ನೀಡುತ್ತಿದೆ. ಆದರೆ ಇಲ್ಲೂ ಅರಣ್ಯ ಇಲಾಖೆ ಇನ್ನೂ ಒಂದೇ ಒಂದು ಗಿಡಗಳನ್ನೂ ಎಲ್ಲೂ ನೆಟ್ಟಿಲ್ಲ !
ಸಂಪದ್ಭರಿತವಾದ ಕಾಡುಗಳನ್ನು ಕಡಿದು ಅಲ್ಲಿ ಜೀವ ವೈವಿಧ್ಯ ವಿರೋ ನೀಲಿಗಿರಿ, ಅಕೇಶಿಯಾ ಬೆಳೆಸಿದ ರೀತಿಯಲ್ಲಿ ರಸ್ತೆಯುದ್ದಕ್ಕೂ ಅರಣ್ಯ ಇಲಾಖೆ ನಾಳೆ ಇದೇ ಮರಗಳನ್ನು ನೆಟ್ಟರೆ ಭೂಮಿಯ ತಾಪಮಾನ ಈಗಿನದ್ದಕ್ಕಿಂತ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಅಂತರ್ಜಲದ ಮಟ್ಟ ಪಾತಾಳ ಸೇರಿ ಕೋಲಾರ ಜಿಲ್ಲೆಯಲ್ಲಿರುವ ನೀರಿನ ಸಮಸ್ಯೆ ಇಡೀ ರಾಜ್ಯಕ್ಕೆ ವಕ್ಕರಿಸಿಕೊಳ್ಳುವುದು ನಿಶ್ಚಿತ. ಆದ್ದರಿಂದ ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಜನಸಾಮಾನ್ಯರೂ ಕೂಡ ಇಂಥ ಮಾರಕ ಹಾಗೂ ಅನಾವಶ್ಯಕ ಅಭಿವೃದ್ಧಿ, ಪರಿಸರ ವಿರೋ ನಿರ್ಧಾರಗಳ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೊಂದು ದಿನ ಉಸಿರಾಡಲೂ ಕೂಡ ಹಣ ನೀಡಿ ಆಮ್ಲಜನಕವನ್ನು ಖರೀದಿಸಬೇಕಾದ ದಿನ ದೂರವಿಲ್ಲ !

Monday, May 17, 2010

ಸುಣ್ಣ ಬೆಣ್ಣೆ ಹಚ್ಚುವ ಪೈಂಟರ್‌ಗಳಿವರು !

ಬಿಜೆಪಿ ಸರಕಾರ ರಾಜ್ಯದಲ್ಲಿ ಅಕಾರಕ್ಕೆ ಬಂದಾಗಿನಿಂದ ಸಮಾಜ ಇಷ್ಟು ಕುಲಗೆಟ್ಟು ಹೋಯಿತೆ ? ಎಂಬ ಪ್ರಶ್ನೆ ಮತ್ತೆ ಮತ್ತೆ ಮನದಾಳದಲ್ಲಿ ಅಲೆಯೆಬ್ಬಿಸುತ್ತಲೇ ಇದೆ. ಎಲ್ಲಿ ನೋಡಿದರಲ್ಲಿ ಕ್ರೈಂ, ಅಮಾನವೀಯತೆ, ಲೈಂಗಿಕ ಕಿರುಕುಳಗಳು ಎಲ್ಲೆ ಮೀರುತ್ತಿವೆ.
ಹಾಗಂತ ಹಿಂದೆ ಇವೆಲ್ಲ ಇರಲಿಲ್ಲವೇ ಎಂದು ಕೇಳಬಹುದು. ‘ಊರು ಎಂದ ಮೇಲೆ ಹೊಲೆಗೇರಿ ಇದ್ದದ್ದೆ’. ಆದರೆ ಅದು ಅಷ್ಟು ಕೊಳಕಾಗಬಾರದು. ಆದರೆ ಇಂಥ ವಾತಾವರಣಕ್ಕೆ ಸಂಪೂರ್ಣ ಕಾರಣ ಬಿಜೆಪಿ ಸರಕಾರ. ಆರಂಭದಲ್ಲಿ ‘ಜೆಡಿಎಸ್ ನಮಗೆ ಮೋಸ ಮಾಡಿತು’. ‘ವಚನ ಭ್ರಷ್ಟರು ಮಾತು ತಪ್ಪಿದರು’ ಎಂದು ಅಳುತ್ತಲೇ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರ ಇನ್ನೂ ‘ಅಳುತ್ತಲೇ ಇದೆ’. ಆರಂಭದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕುಮಾರಸ್ವಾಮಿ ಹಾಗೂ ದೇವೇಗೌಡರ ವಿಚಾರದಲ್ಲಿ ಅಳುತ್ತಿದ್ದರು. ಆನಂತರ ಗಣಿ ರೆಡ್ಡಿಗಳು ಅಳುವಂತೆ ಮಾಡಿದರು. ಮತ್ತೆ ‘ಆಪ್ತ’ ಸ್ನೇಹಿತೆ ಶೋಭಾ ಕರಂದ್ಲಾಜೆಗಾಗಿ ಯಡಿಯೂರಪ್ಪನವರೇ ಕಣ್ಣೀರಿಟ್ಟರು.
ಹೋಗಲಿ ಅದು ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ರೇಣುಕಾಚಾರ್ಯನ ಪುರಾಣ ಬಿಚ್ಚಿಕೊಂಡಿತು. ಅಲ್ಲೋ ಯಡಿಯೂರಪ್ಪ ರೇಣುಕಾನನ್ನು ತಬ್ಬಿಕೊಂಡು ‘ತಂತ್ರ’ ಉಪಯೋಗಿಸಿ ಮಂತ್ರಿ ಮಾಡಿದರು. ಆದರೆ ಗಣಿ ರೆಡ್ಡಿಗಳು ಧೂಳು ಮಾತ್ರ ಕಡಿಮೆಯಾಗಲೇ ಇಲ್ಲ. ಇದೆಲ್ಲದರ ನಡುವೆ ಹಾವೇರಿ ಗೋಲಿಬಾರ್(ಅದರಲ್ಲಿ ಸತ್ತವರು ರೈತರೇ ಅಲ್ಲ ಎಂದಿದೆ ಸರಕಾರಿ ಸಮಿತಿಯ ವರದಿ!), ತಿರುಕ್ಕುರುಳ್ ಪ್ರತಿಮೆ, ಹೊಗೇನಕಲ್ ವಿವಾದ, ಕಾವೇರಿ ವಿವಾದ, ನೈಸ್ ವಿವಾದ, ನಿತ್ಯಾನಂದನ ರಾಸಲೀಲೆ ಹೀಗೆ ಒಂದಲ್ಲಾ ಒಂದು ಪ್ರಕರಣಗಳು ಬೀದಿಗೆ ಬೀಳುತ್ತಲೇ ಬಂದವು.
ಈಗ ಹಾಲಪ್ಪನ ಕಾಮ ಪುರಾಣ. ಆದರೆ ಇಷ್ಟೆಲ್ಲಾ ಘಟನೆಗಳ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ತಮ್ಮ ಹಿತಾಸಕ್ತಿಯನ್ನು ಹಾಗೂ ಪಕ್ಷದಲ್ಲೇ ಇರುವ ಅವರ ವಿರೋ ಬಣ ಅವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತಲೇ ಬಂದಿದ್ದಾರೆ ! ಅಮಾಯಕರು ಮಾತ್ರ ಇಂಥವರ ಮಧ್ಯೆ ಸಿಲುಕಿ ನಲುಗುತ್ತಲೇ ಇದ್ದಾರೆ. ಬೌದ್ಧಿಕವಾಗಿ ವೀಕ್ ಇರುವವರು ಹಾಗೂ ಚೆಡ್ಡಿಗಳಲ್ಲದೆ ಚೆಡ್ಡಿ ಹಾಕಿಕೊಂಡವರು ಮಾತ್ರ ಅಲ್ಲಿ ವಿಲಿ ವಿಲಿ ಒದ್ದಾಡುತ್ತಿದ್ದಾರೆ. ಆರಂಭದಿಂದಲೂ ಚೆಡ್ಡಿಯಲ್ಲೇ ನಿಂತವರು ಬಲವಾಗಿಯೇ ನಿಂತಿದ್ದಾರೆ.
ಮೊನ್ನೆ ನೋಡಿ ಶ್ರೀರಾಮನ ಹೆಸರು ಹೇಳಿಕೊಂಡು ನೈತಿಕತೆ ಭೋದಿಸುತ್ತ ಇಡೀ ರಾಮಾಯಣ, ಮಹಾಭಾರತಗಳನ್ನು ಗುತ್ತಿಗೆ ಪಡೆದವರ ಹಾಗೆ ವರ್ತಿಸುತ್ತಲೇ ಪಾಕಿಸ್ತಾನದ ಮುಸ್ಲೀಂ ಟೆರರಿಸ್ಟ್ ಗಳಂತೆಯೇ ಬೆಳೆದು ನಿಂತಿರುವ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಬಂಡವಾಳ ಬಟಾಬಯಲಾಗಿದೆ(ಹೆಡ್‌ಲೈನ್ಸ್ ಟುಡೆ ಹಾಗೂ ತೆಹಲ್ಕಾ ಕಾರ್ಯಾಚರಣೆ ವೇಳೆ). ಗುಟ್ಟು ರಟ್ಟಾಗುತ್ತಿದ್ದಂತೆ ಆತನ ಕಿರುಚಾಟ, ಅರಚಾಟ ಜೊರಾಗಿಯೇ ಸಾಗಿದೆ. ಬೆಂಗಳೂರಿನ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಕಲಾ ಪ್ರದರ್ಶನವೊಂದರಲ್ಲಿ ಕೋಮು ದಳ್ಳುರಿ ಹಚ್ಚಲು ೬೦ಲಕ್ಷಕ್ಕೆ ಡೀಲ್ ಮಾಡಿ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾನೆ. ಆದರೆ ಸರಕಾರ ಮಾತ್ರ ಕೇವಲ ಒಂದು ಪ್ರತಿಕ್ರಿಯೆ ನೀಡಿ ಸ್ಥಬ್ದವಾಗಿದೆ. ಯಾಕೆ ?
ನಿತ್ಯಾನಂದನೇನೋ ಧರ್ಮ, ದ್ಯಾನದ ಹೆಸರಿನಲ್ಲಿ ಅಮಾಯಕ ಮಹಿಳೆಯರಿಗೆ ‘ಯೋಗ’ ಹೇಳಿಕೊಟ್ಟು ಕೆಡ್ಡಾಗೆ ಬಿದ್ದಿದ್ದ. ಆದರೆ ಆಹಾರ ಹಾಗೂ ನಾಗರಿಕ ಸರಬರಾಜು ಖಾತೆ ಸಚಿವನಾಗಿದ್ದ ಹರತಾಳು ಹಾಲಪ್ಪ ‘ಊಟ’ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ! ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗದು ಎನ್ನುವಂತಿದ್ದ ಹಾಲಪ್ಪ ಈಗ ಬೀದಿಗೆ ಬಂದಿದ್ದಾನೆ. ಆದರೆ ಇದು ‘ಒಪ್ಪಿತ ಯೋಗ ಪುರಾಣ’.
ಹಾಗಂತ ಇಲ್ಲಿ ನಾನು ಹಾಲಪ್ಪನ ಪರ ವಾದಿಸುತ್ತಿಲ್ಲ. ಈ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಇದರ ಬಗ್ಗೆ ಚರ್ಚೆ ಮಾಡುವುದು ತಪ್ಪು. ಆದರೂ ಸುಮ್ಮನಿರಲಾಗುತ್ತಿಲ್ಲ. ಕಾರಣ ಸರಕಾರದ ಧೊರಣೆ. ಇಲ್ಲಿ ಕೆಲವು ಪ್ರಶ್ನೆಗಳು ಏಳುತ್ತವೆ. ಹಾಲಪ್ಪ ಅತ್ಯಾಚಾರ ಮಾಡುವಾಗ ಚಂದ್ರಾವತಿ ಕೂಗಿದರೂ ಮನೆಯಲ್ಲಿದ್ದ ಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳು ಏಳಲೇ ಇಲ್ಲವೆ(ದಂಪತಿ ಪ್ರಕಾರ ಮನೆಯಲ್ಲಿದ್ದರು)? ಆಕೆಯ ಪತಿ ವೆಂಕಟೇಶ ಮೂರ್ತಿಯ ಹಿನ್ನೆಲೆ ಎಂಥಹದ್ದು ? ಮಕ್ಕಳನ್ನು ಅದೇ ದಿನ ಶಿವಮೊಗ್ಗದ ತಿರುಮಲ ಲಾಡ್ಜ್‌ನಲ್ಲಿ ಬಿಟ್ಟಿದ್ದಾದರೂ(ಸಿಒಡಿ ತನಿಖೆಯಿಂದ ಬಹಿರಂಗವಾಗಿದೆ) ಏಕೆ ? ಹೆಣ್ಣೆಂಬ ಮಾತ್ರಕ್ಕೆ ಚಂದ್ರಾವತಿಯ ಎಲ್ಲ ತಪ್ಪುಗಳನ್ನೂ ಇಲ್ಲ ಮನ್ನಿಸಲೇಬೇಕೆ ? ಇದಲ್ಲಿ ಅವಳ ತಪ್ಪೆ ಇಲ್ಲವೇ? ಇವೆಲ್ಲವಕ್ಕೂ ಉತ್ತರ ಸದ್ಯದಲ್ಲಿಯೇ ಸಿಗಲಿದೆ.
ಆದರೆ ಹಾಲಪ್ಪನ ಪ್ರಕರಣಕ್ಕೂ ‘ಮುತಾಲಿಕ್ ಲಂಚ ಪ್ರಕರಣ’ಕ್ಕೂ ಹೋಲಿಸಿದರೆ ಮುತಾಲಿಕ್ ಪ್ರಕರಣ ಬಹಳ ಮುಖ್ಯ. ಆದರೆ ಅವನನ್ಯಾಕೆ (ಏಕವಚನಕ್ಕೆ ಕ್ಷಮೆ ಇರಲಿ) ಬಂಸಿ ತನಿಖೆ ನಡೆಸುತ್ತಿಲ್ಲ ? ಆತ ಬಿಜೆಪಿಯ ಬಲಪಂಥೀಯ, ಜತೆಗೆ ಪಕ್ಷದ ಸಂಘಟನೆಗಳಲ್ಲಿ ಇಂದಿಗೂ ಒಡನಾಟ ಇದೆ ಎಂದೆ ? ತಪ್ಪು ಯಾರು ಮಾಡಿದರೂ ತಪ್ಪೆ. ಹಾಲಪ್ಪ ಒಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆದರೆ ಮುತಾಲಿಕ್ ನಿತ್ಯ ಸಾವಿರಾರು, ಲಕ್ಷಾಂತರ ಜನರ ಮರ್ಯಾದೆಯ, ಮುಗ್ದತೆ, ಭಾವನೆಗಳ ಮೇಲೆ ಅತ್ಯಾಚಾರ ಮಾಡುತ್ತಲೆ ಇದ್ದಾನೆ. ಅನೇಕರ ಹತ್ಯೆಗೆ ಕಾರಣವಾಗುತ್ತಿದ್ದಾನೆ. ಇದು ನ್ಯಾಯವೇ ?
ಲವ್ ಜಿಹಾದ್ ಎಂದು ಬೊಬ್ಬಿಡುವ ಇದೇ ಶ್ರೀರಾಮ ಸೇನೆಯ ಮುಖಂಡರು ಹಾಸನದಲ್ಲಿ ಮನೆಯವರು ವಿರೋಸಿದರೆಂಬ ಕಾರಣಕ್ಕೆ ಮುಸ್ಲಿಂ ಹುಡುಗಿಯೊಬ್ಬಳನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿ ಮುಂದೆ ನಿಂತು ಮದುವೆ ಮಾಡಿದರಲ್ಲ ಅದು ತಪ್ಪಲ್ಲವೇ? ಪ್ರೀತಿಯ ಮುಂದೆ ಜಾತಿ, ಮತ, ಧರ್ಮಗಳು ಮುಖ್ಯವಾಗುವುದಿಲ್ಲ. ಆದರೆ ಹೀಗೆ ಧರ್ಮ, ಧಾರ್ಮಿಕತೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತ ಹೋಗುವ, ಹಣದಾಸೆಗೆ ಅಮಾಯಕರ ಜೀವ ತಿನ್ನುವ ಇಂಥವರನ್ನು ಮೊದಲು ಸರಕಾರ ಕಂಬಿ ಎಣಿಸುವಂತೆ ಮಾಡಬೇಕು.
ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತ ಏನೂ ತಿಳಿಯದು ಎನ್ನುವ ರೀತಿ ವರ್ತಿಸುವ ಈ ಬಿಜೆಪಿ ಸರಕಾರ ತಕ್ಷಣ ಬುದ್ದಿ ಕಲಿಯದಿದ್ದರೆ ಜನಸಾಮಾನ್ಯರೇ ಬುದ್ದಿ ಕಲಿಸುವ ಕಾಲ ಇಂದಲ್ಲ ನಾಳೆ ಬಂದೇ ಬರುತ್ತದೆ. ನೆನಪಿರಲಿ...

Thursday, April 22, 2010

ಶಿಕ್ಷಣ ಕ್ಷೇತ್ರದಲ್ಲಿ ‘ಕುರುಡು ಕಾಂಚಾಣ’ದ ನರ್ತನ ನಿಲ್ಲಲಿ

ಶಿಕ್ಷಣ ಇಂದು ಕೇವಲ ಉಳ್ಳವರ ಸ್ವತ್ತಾಗುತ್ತಿದೆ. ಶಿಕ್ಷಣ ಕ್ಷೇತ್ರ ಕೇವಲ ಉದ್ಯಮವಾಗುತ್ತಿದೆ. ಗುರುವಿಗಿರುವ ಮಹತ್ವ ಕೂಡ ಮಾಯವಾಗುತ್ತಿದೆ. ಕೆಲವೇ ವರ್ಷಗಳ ಮುಂಚೆ ‘ಮುಂದೆ ಗುರಿಯಿರಬೇಕು ಹಿಂದೆ ಗುರುವಿರಬೇಕು’ ಎಂಬ ಮಾತಿತ್ತು. ಈಗ ಅದನ್ನು ಕೊಂಚ ಬದಲಿಸಿ ‘ಮುಂದೆ ಹಣವಿರಬೇಕು ಹಿಂದೂ ಹಣವಿರಬೇಕು’ ಎನ್ನಬೇಕಾಗಿದೆ.
ಎಳೆಯ ಮಕ್ಕಳನ್ನು ಕೂಡ ಇಂದು ಅಂಗನವಾಡಿಗಳಿಗೆ ಅಥವಾ ಶಾಲೆಗೆ ಸೇರಿಸಬೇಕೆಂದರೆ ‘ಕಾಂಚಣಂ ಕಾರ್ಯಸಿದ್ಧಿ’ ಎನ್ನುತ್ತಿವೆ ಶಿಕ್ಷಣ ಸಂಸ್ಥೆಗಳು. ಇಡೀ ಶಿಕ್ಷಣ ವ್ಯವಸ್ಥೆ ಭ್ರಷ್ಟತನದಲ್ಲಿ ಮುಳುಗೆದ್ದು ಎಲ್ಲಿ ನೋಡಿದರಲ್ಲಿ ಡೊನೇಷನ್ ವಸೂಲಿ ಮಾಡುವ ಖಯಾಲಿ ಶುರುವಾಗಿದೆ. ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ಮಾತ್ರವಲ್ಲ, ಆನಂತರದ ಉನ್ನತ ಶಿಕ್ಷಣಕ್ಷೇತ್ರದಲ್ಲಿಯೂ ಕುರುಡು ಕಾಂಚಾಣ ಕುಣಿಯುತ್ತಲಿದೆ. ಆದರೆ ಅದರ ಕಾಲಿಗೆ ಸಿಕ್ಕವರು ಮಾತ್ರ ನಜ್ಜುಗುಜ್ಜಾಗುತ್ತಲೇ ಇದ್ದಾರೆ!!
ಹೀಗಾಗಿ ನಗರ ಪ್ರದೇಶಗಳಲ್ಲಿ ಕೂಲಿನಾಲಿ ಅಥವಾ ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಕೆಲಸ ಮಾಡಿ ಬದುಕುವ ಅದೆಷ್ಟೋ ಮಂದಿಯ ಮಕ್ಕಳು ಇಂದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂದ ಮಾತ್ರಕ್ಕೆ ಹಳ್ಳಿಗಳು ಕೂಡ ಇದರಿಂದ ಹೊರತಾಗಿಲ್ಲ! ಅಲ್ಲೂ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ಮೂಲ ಕಾರಣ ಶಿಕ್ಷಣ ಉದ್ಯಮವಾಗಿ ಬೆಳೆದು ನಿಂತಿರುವುದು. ಯಾಂತ್ರಿಕ ಜೀವನ ಹೆಚ್ಚಾದಂತೆ ಪೋಷಕರು ಕೂಡ ತಮ್ಮ ಮಕ್ಕಳ ಕಾಳಜಿಯನ್ನು ಶಿಕ್ಷಣ ಸಂಸ್ಥೆಗಳಿಗೆ ವಹಿಸಿ ತಾವು ಮಾತ್ರ ದುಡ್ಡು ದುಡ್ಡು ಎಂದು ದುಡಿಮೆಗೆ ನಿಂತಿದ್ದಾರೆ. ಹಣವೊಂದೆ ಜೀವನವೇ ?ಎನ್ನುವ ಪ್ರಶ್ನೆಗೆ ಉತ್ತರ ದೊರೆಯದಿದ್ದರೂ ಹಣದ ಬೆನ್ನು ಬಿದ್ದು ಬೆಂಬಿಡದೆ ಓಡುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಈಗ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಮನೆಬಾಗಿಲಿಗೆ ಶಾಲಾ ವಾಹನಗಳು ಬೇಕು. ಹೀಗೆ ಸೌಲಭ್ಯ ನೀಡುವ ನೆಪ ಮಾಡಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಹಾಗೂ ಪೋಷಕರ ರಕ್ತ ಹೀರುತ್ತಿವೆ. ಆದರೆ ಇಂಥ ಜಿಗಣೆಗಳು ಹೀರುವ ರಕ್ತವನ್ನೂ ನೋಡಿಕೊಳ್ಳದ ಅಥವಾ ಅವುಗಳನ್ನು ಕಿತ್ತು ಬಿಸಾಡುವ ವ್ಯವದಾನ ಪೋಷಕರಲ್ಲಿ ಇಲ್ಲವಾಗಿದೆ. ಆ ಕಾರಣಕ್ಕೇ ಸರಕಾರಿ ಶಾಲೆಗಳಿಗೂ ನಿರ್ಲಕ್ಷ್ಯಕ್ಕೊಳಗಾಗಿವೆ.
ಇಂಥ ವ್ಯವಸ್ಥೆಯಲ್ಲಿ ಶಿಕ್ಷಕರು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಲು ಶತಪ್ರಯತ್ನ ನಡೆಸುವುದು ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಬಡವರು, ಕೂಲಿ ಕಾರ್ಮಿಕರು, ನಿಗರ್ತಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದೇ ಕಷ್ಟವಾಗಿದೆ. ಇಲ್ಲಿ ಯಾವುದೇ ಜಾತಿ ಭೇದವಿಲ್ಲ, ಬ್ರಾಹ್ಮಣರಿಂದ ಹಿಡಿದು ದಲಿತರ ವರೆಗೆ ಎಲ್ಲರೂ ಇದರ ಸುಳಿಯಲ್ಲಿ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಕೇಂದ್ರ ಯುಪಿಎ ಸರಕಾರ ಏ.೧ರಿಂದ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು’ ಕಾಯಿದೆ ಜಾರಿಗೆ ತಂದಿರುವುದು ನಿಜಕ್ಕೂ ಎಲ್ಲ ವರ್ಗದವರಿಗೆ ಅನುಕೂಲ. ಆದರೆ ಅದು ಪ್ರಾಮಾಣಿಕವಾಗಿ ಅನುಷ್ಠಾನವಾಗಬೇಕು ಅಷ್ಟೆ.
ದೇಶದಲ್ಲಿರುವ ೬ರಿಂದ ೧೪ ವರ್ಷದೊಳಗಿನ ೨೨ಕೋಟಿ ಮಕ್ಕಳಲ್ಲಿ ಈಗಾಗಲೇ ೯೨ಲಕ್ಷ ಮಕ್ಕಳು (ಶೇ.೪.೬) ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂಥ ಮಕ್ಕಳೆಲ್ಲ ಇನ್ನು ಶಾಲೆಗೆ ಬರಬೇಕಾದರೆ ಈ ಕಡ್ಡಾಯ ಕಾನೂನು ಕಡ್ಡಾಯವಾಗಿಯೇ ಜಾರಿಗೆ ಬರಬೇಕು. ಈ ದೇಶದಲ್ಲಿ ಸಾಕಷ್ಟು ಕಾನೂನುಗಳಿವೆ, ಆದರೆ ಯಾವ ಕಾನೂನು ಕೂಡ ಇದೂವರೆಗೆ ಕಡ್ಡಾಯವಾಗಿ ಜಾರಿಗೆ ಬರುತ್ತಿಲ್ಲ. ಜತೆಗೆ ಉಲ್ಲಂಘನೆಗಳು ಬಹಿರಂಗವಾಗಿ ನಡೆಯುತ್ತಿವೆ. ಇದಕ್ಕೆ ಸಂಬಂಸಿದ ಅಕಾರಿಗಳು ಅಥವಾ ಜನಪ್ರತಿನಿಗಳ ನಿರ್ಲಕ್ಷ್ಯವೇ ಕಾರಣ ಎನ್ನುವುದರಲ್ಲಿ ಯಾವುದೇ ಗೊಂದಲವಿಲ್ಲ. ಇದೊಂದು ‘ಐತಿಹಾಸಿಕ ಯೋಜನೆ’ ಎಂಬ ಕಾರಣಕ್ಕೆ ಇದನ್ನೇ ರಾಜಕೀಯ ಗಿಮಿಕ್ ಆಗಿ ಬಳಸಿಕೊಳ್ಳದೆ ಅದು ಪ್ರಾಮಾಣಿಕವಾಗಿ ಜಾರಿಯಾಗಲು ಎಲ್ಲ ಅಕಾರಿಗಳ ಹಾಗೂ ರಾಜ್ಯ ಸರಕಾರಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಯುಪಿಎ ಕಾರ್ಯರೂಪಗೊಳಿಸಬೇಕಿದೆ. ಆಗ ಮಾತ್ರ ಈ ಕಾನೂನು ರೂಪಿಸಿದ್ದಕ್ಕೆ ಸಾರ್ಥಕ.
ಶಾಲೆಯಿಂದ ಹೊರಗುಳಿದ ದೇಶದ ೯೨ಲಕ್ಷ ಮಕ್ಕಳನ್ನು ಮರಳಿ ಶಾಲೆಗೆ ತರುವ ಹೊಣೆಗಾರಿಕೆಯನ್ನು ರಾಜ್ಯ ಹಾಗೂ ಸ್ಥಳಿಯ ಆಡಳಿತಗಳಿಗೆ ವಹಿಸಲಾಗಿದೆ. ಇದಕ್ಕಾಗಿ ೫ ವರ್ಷಗಳ ವರೆಗೆ ತಗಲುವ ೧.೭೧ಲಕ್ಷ ಕೋಟಿ ರೂ.ಗಳನ್ನು ಭರಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಕೇಂದ್ರದಿಂದ ಶೇ.೫೫ ಹಣ ನೀಡಿದರೆ ರಾಜ್ಯ ಸರಕಾರಗಳು ಇದಕ್ಕೆ ಉಳಿದ ಶೇ.೪೫ ಹಣವನ್ನು ಒದಗಿಸಬೇಕಿದೆ. ೨೦೦೨ರಲ್ಲಿಯೇ ಸಂವಿದಾನದ ೮೬ನೇ ತಿದ್ದುಪಡಿ ರೂಪದಲ್ಲಿ ಈ ಕಾಯಿದೆ ಜಾರಿಗೆ ತರಲು ನಿರ್ಧರಿಸಲಾಗಿತ್ತು. ಆದರೆ ಹಿಂದಿನ ವರ್ಷ ಸಂಸತ್‌ನಲ್ಲಿ ಈ ಮಸೂದೆಗೆ ಅಂಗೀಕಾರ ದೊರೆತಿತ್ತು. ಈಗ ಅದು ಜಾರಿಗೆ ಬರುತ್ತಿದೆ.
ಇದು ಕೆಂದ್ರದ ಮೂರನೇ ಮಹತ್ವದ ಯೋಜನೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಮೊದಲ ಹಾಗೂ ೨ನೇ ಮಹತ್ವದ ಯೋಜನೆಗಳಾದ ‘ಮಾಹಿತಿ ಹಕ್ಕು ಹಾಯಿದೆ’ ಹಾಗೂ ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಈಗಾಗಲೇ ಜಾರಿಯಾಗಿದ್ದರೂ ದೇಶದೆಲ್ಲಡೆ ಭ್ರಷ್ಟರ ಕೈಲಿ ಸಿಕ್ಕಿ ಸರಿಯಾಗಿ ಜಾರಿಯಾಗದೆ ವಿಲಿವಿಲಿ ಒದ್ದಾಡುತ್ತಿವೆ. ಈ ಕಾನೂನು ಕೂಡ ಹಾಗೆಯೇ ಆದರೆ ಯಾವುದೇ ಪ್ರಯೋಜನವಿಲ್ಲ.
ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನು ಮುಂದೆ ದುರ್ಬಲ ವರ್ಗದ ಮಕ್ಕಳಿಗೂ ಶೇ.೨೫ ಸೀಟುಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು. ಯಾವುದೇ ಪ್ರಾಥಮಿಕ ಶಾಲೆ ಇನ್ನು ಡೊನೇಷನ್ ಪಡೆಯುವಂತಿಲ್ಲ, ಜತೆಗೆ ಬಡ ವರ್ಗದ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಿಕೊಳ್ಳುವುದಿಲ್ಲ ಎನ್ನವಂತೆಯೂ ಇಲ್ಲ. ಮಕ್ಕಳ ಪೋಷಕರನ್ನು ಸಂದರ್ಶಿಸುವಂತೆಯೂ ಇಲ್ಲ. ಒಂದು ವೇಳೆ ಹೀಗಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತಿದೆ.
ಆದರೆ ಈ ಕಾನೂನು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮೂಲ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ, ಇದು ಸಂವಿದಾನ ವಿರೋಯಾದದ್ದು ಎಂದು ಅದನ್ನು ಪ್ರಶ್ನಿಸಿ ಈಗಾಗಲೇ ಕೆಲವು ಸಂಸ್ಥೆಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ಕರ್ನಾಟಕದಲ್ಲಿ ಈಗ ೪೪,೯೯೮ ಸರಕಾರಿ ಪ್ರಾಥಮಿಕ ಶಾಲೆಗಳು, ೨,೪೯೯ ಅನುದಾನಿತ ಪ್ರಾಥಮಿಕ ಶಾಲೆಗಳು ಹಾಗೂ ೮,೮೫೧ ಅನುದಾನ ರಹಿತ ಪ್ರಾಥಮಿಕ ಶಾಲೆಗಳು ಸೇರಿ ೫೬,೩೪೮ ಪ್ರಾಥಮಿಕ ಶಾಲೆಗಳಿವೆ. ಇಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಸರಕಾರಿ ಶಾಲೆಗಳನ್ನು ಹೊರತುಪಡಿಸಿ ಉಳಿದ ೧೧,೩೫೦ ಶಾಲೆಯಲ್ಲಿ ಓದುವ ಮಕ್ಕಳ ಎಲ್ಲ ಪೋಷಕರು ಪ್ರತಿನಿತ್ಯ ತಮ್ಮ ಮಕ್ಕಳ ಶಿಕ್ಷಣದ ಬದಲಾಗಿ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಯೋಚಿಸುತ್ತಿದ್ದಾರೆ...ಇನ್ನು ಹಾಗಾಗದಿರಲಿ.
ರಾಜ್ಯದಲ್ಲಂತೂ ಇದು ಯಾವ ಮಟ್ಟಕ್ಕೆ ಬಂದಿದೆ ಎಂದರೆ ಹೆಚ್ಚು ಡೊನೇಷನ್ ಪಡೆಯುವ ಶಾಲೆಗಳು ಮಾತ್ರ ಉತ್ತಮ ಶಿಕ್ಷಣ ನೀಡುತ್ತವೆ ಎನ್ನುವ ಹಂತಕ್ಕೆ ಪೋಷಕರು ತಲುಪಿದ್ದಾರೆ. ಶೇ.೮೦ ಅಥವಾ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರವೇಶ ನೀಡಿ ಶೇ.೧೦೦ ಫಲಿತಾಂಶ ಪಡೆಯುವ ಇಂಥ ಖಾಸಗಿ ಶಾಲೆಗಳು ಮಾಡಿದ ಸಾಧನೆಯಾದರೂ ಏನು ? ಮಕ್ಕಳಲ್ಲಿ ಪರೀಕ್ಷೆ ಎಂದರೆ ಭಯ, ಆತಂಕ ತುಂಬುವುದರ ಜತೆಗೆ ಬದುಕು ಕಲಿಸದೆ ಭಯ ಹುಟ್ಟು ಹಾಕಿ ಆತ್ಮಹತ್ಯೆಯ ಹಾದಿಗೆ ತಳ್ಳುವುದೇ?
ಆದ್ದರಿಂದ ಇಂಥ ಶಾಲೆಗಳಿಗೆ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲೇಬೇಕು. ಅದಕ್ಕಾಗಿ ಏ.೧ರಿಂದ ಜಾರಿಗೆ ಬಂದಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು ಕಾಯಿದೆ ಕೇವಲ ಜಾರಿಗೊಂಡರೆ ಸಾಲದು ನಿರ್ಧಾಕ್ಷಿಣ್ಯವಾಗಿ ಅನುಷ್ಠಾನಗೊಳ್ಳಬೇಕು. ಆ ಕೆಲಸಕ್ಕೆ ಇನ್ನು ಪೋಷಕರೂ ಕೂಡ ಆತ್ಮಸ್ಥೈರ್ಯದಿಂದ ಸಹಕರಿಸಬೇಕು. ಆಗ ಮಾತ್ರ ಬಂಡವಾಳಶಾಹಿಗಳ ಕೈಲಿ ಸಿಲುಕುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಬಿಡಿಸಿಕೊಳ್ಳಲು ಸಾಧ್ಯ, ಜತೆಗೆ ಶಿಕ್ಷಣ ಸಂಸ್ಥೆಗಳಲ್ಲಿನ ಕುರುಡು ಕಾಂಚಾಣದ ನರ್ತನವನ್ನು ನಿಲ್ಲಿಸಲು ಸಾಧ್ಯ...

Saturday, March 20, 2010

ವೈದ್ಯ ಲೋಕಕ್ಕೆ ಬರುತ್ತಿದೆ ವಿ- ಸ್ಕ್ಯಾನ್ !

( ಬೆಂಗಳೂರಿನ ಸೆಂಟ್ ಆನ್ಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಎಂ. ಶಿಲ್ಪಾಬರೆದಿದ್ದಾಳೆ.)
ಇನ್ನು ಸ್ಟೆಥಸ್ಕೋಪ್‌ಗೆ ಜಾಗವಿಲ್ಲ...
ಇಷ್ಟು ದಿನ ವೈದ್ಯರ ಕೈ ಹಿಡಿದಿದ್ದ ಸ್ಟೆಥಸ್ಕೋಪ್ ೨೧ನೇ ಶತಮಾನಕ್ಕೆ ವಿ ಸ್ಕ್ಯಾನ್ ಆಗಿ ಬದಲಾಗುತ್ತಿದೆ. ವೈದ್ಯಕೀಯ ಲೋಕಕ್ಕೆ ದಿನೇ ದಿನೆ ಹೊಸ ಹೊಸ ಯಂತ್ರಗಳು ಕಾಲಿಡುತ್ತಲೇ ಇವೆ. ಆ ಮೂಲಕ ರೋಗಿಗಳ ರೋಗ ಪತ್ತೆ ಹಾಗೂ ಚಿಕಿತ್ಸೆ ನೀಡುವ ವಿಧಾನ ಕೂಡ ಸುಲಭ ಹಾಗೂ ಸರಳಗೊಳ್ಳುತ್ತಲೇ ಇದೆ. ಇಂಥದ್ದರ ನಡುವೆಯೇ ಈಗ ಮತ್ತೊಂದು ಸಾಧನ ಈ ವಿಸ್ಮಯ ಲೋಕಕ್ಕೆ ಕಾಲಿಡುತ್ತಿದೆ. ಅದರ ಹೆಸರೇ ವಿ-ಸ್ಕ್ಯಾನ್! ಇದು ತಕ್ಷಣವೇ ಕಾಯಿಲೆ ಅಥವಾ ತೊಂದರೆಯನ್ನು ಸೂಕ್ಷ್ಮವಾಗಿ ಪತ್ತೆ ಹಚ್ಚಿ, ಅದಕ್ಕೆ ಯಾವ ರೀತಿಯ ಚಿಕಿತ್ಸೆ ಬೇಕು ಎಂಬುದನ್ನು ತಿಳಿಯಲು ವೈದ್ಯರಿಗೆ ಸಹಕಾರಿಯಾಗಲಿದೆ. ಇದನ್ನು ಕಂಡುಹಿಡಿದವರು ಸ್ಯಾನ್ ಫ್ರಾನ್ಸಿಸ್ಕೋನ ವೆಬ್ ೨.೦ ಸುಮೀತ್ ಸಂಸ್ಥೆಯ ಸಿಇಒ ಜಿಫ್ ಇಮ್ಲೆಟ್. ಇದು ನೋಡಲು μಪ್ ಒಪನ್ ಮೊಬೈಲ್‌ಗೆ ಐ-ಪಾಡ್ ಜೋಡಿಸಿದಂತೆ ಕಾಣುತ್ತದೆ. ವಿ ಸ್ಕ್ಯಾನ್ ಒಂದು ಪೌಂಡ್ ತೂಕವಿದ್ದು, ಪ್ರಪಂಚದಲ್ಲೆ ಅತಿ ಚಿಕ್ಕ ಅಲ್ಟ್ರಾ ಸೌಂಡ್ ಉಪಕರಣವೆಂದು ಹೆಸರು ಪಡೆದಿದೆ. ಈಗಾಗಲೇ ಇದರ ಬಳಕೆಯ ಬಗ್ಗೆ ಏಷ್ಯಾ, ಯೂರೋಪ್ ಹಾಗೂ ಅಮೆರಿಕದಲ್ಲಿ ಪ್ರಯೋಗ ನಡೆಯುತ್ತಿದೆ. ಇಷ್ಟು ದಿನ ವೈದ್ಯರು ರೋಗಿಗಳನ್ನು ಸ್ಟೆಥಸ್ಕೋಪ್ ಮೂಲಕ ಪರೀಕ್ಷೆ ಮಾಡಿ ಅವರ ಹೃದಯಬಡಿತ, ನಾಡಿ ಮಿಡಿತಗಳನ್ನು ಪತ್ತೆ ಹೆಚ್ಚುತ್ತಿದ್ದರು. ಆ ಮೂಲಕವೇ ರೋಗಿಯ ಪರೀಕ್ಷೆ ನಡೆಯುತ್ತಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಅವಕಾಶವೇ ಇಲ್ಲ! ಅದರ ಜಾಗವನ್ನು ವಿ ಸ್ಕ್ಯಾನ್ ಅಲಂಕರಿಸಲಿದೆ.
ವಿ ಸ್ಕ್ಯಾನ್ ವೈಶಿಷ್ಟ್ಯ :
ಕ್ಯಾಲಿರ್ಫೋನಿಯಾ ವಿಶ್ವ ವಿದ್ಯಾಲಯದ ಡಾ.ಆಂಥೊನಿ ಎನ್. ಡಿಮರಿಯಾ ಅವರ ಪ್ರಕಾರ ಹೊರ ರೋಗಿಗಳಿಗೂ ಮತ್ತು ಆಂಬ್ಯುಲೆನ್ಸ್‌ನಲ್ಲಿ ಕರೆತರುವ ರೋಗಿಗಳಿಗೂ ವಿ-ಸ್ಕ್ಯಾನ್ ಉಪಯುಕ್ತ. ಈ ಉಪಕರಣದ ಬ್ಯಾಟರಿಯನ್ನು ಒಂದು ಗಂಟೆ ಚಾರ್ಜ್ ಮಾಡಿದರೆ ಒಬ್ಬ ರೋಗಿಯ ಪರೀಕ್ಷೆಗೆ ಎರಡು ನಿಮಿಷದ ಹಾಗೆ ೩೦ರಿಂದ ೩೫ ರೋಗಿಯನ್ನು ಪರೀಕ್ಷೆ ಮಾಡಬಹುದು. ಈ ರೀತಿ ಪರೀಕ್ಷೆ ಮಾಡಿದ ಮಾಹಿತಿಯನ್ನು ಪೆನ್‌ಡ್ರೈವ್ ಮೂಲಕವೂ ಸಂಗ್ರಹಿಸಿ ಟ್ಟುಕೊಳ್ಳಬಹುದು. ಒಂದ ವೇಳೆ ಹಿಂದಿನ ಮಾಹಿತಿ
ಇಲ್ಲವಾಗಿದ್ದರೆ ಆನ್‌ಲೈನ್ ಮೂಲಕವೂ ಅದನ್ನು ಪಡೆದುಕೊಳ್ಳಬಹುದು.
ಜಾಗತೀಕರಣದಿಂದಾಗಿ ಇಡೀ ವಿಶ್ವವೇ ಒಂದು ಹಳ್ಳಿಯಂತಾಗುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಈ ‘ವಿ ಸ್ಕ್ಯಾನ್’ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ವೈದ್ಯರ ಕೈ ಹಿಡಿದಿದ್ದ ಸ್ಟೆಥಸ್ಕೋಪ್ ೨೧ನೇ ಶತಮಾನಕ್ಕೆ ವಿ ಸ್ಕ್ಯಾನ್ ಆಗಿ ಬದಲಾಗುತ್ತಿದೆ. ಜತೆಗೆ ನಾಲ್ಕು ಹೆಜ್ಜೆ ಮುಂದೆ ಹೋಗಿ ಸ್ಥಳದಲ್ಲೇ ವೈದ್ಯರು ರೋಗಿಗೆ ಯಾವ ಚಿಕಿತ್ಸೆ ಬೇಕು ಎಂಬುದನ್ನು ನಿಸ್ಸಂಕೋಚವಾಗಿ ಹೇಳಲು ಇದರಿಂದ ಸಹಕಾರಿವಾಗಲಿದೆ.
ಉಪಯೋಗಗಳು :
*ಪ್ರಥಮ ಚಿಕಿತ್ಸಾ ಕ್ರಮಕ್ಕೆ ತುಂಬಾ ಅನುಕೂಲ.
*ಅಲ್ಟ್ರಾ ಸೌಂಡ್ ಮಾಡುವಂಥ ಕೆಲಸವನ್ನು ವಿ-ಸ್ಕ್ಯಾನ್ ತುಂಬಾ ಬೇಗನೆ ಮಾಡುತ್ತದೆ.
*ವಿ-ಸ್ಕ್ಯಾನ್‌ನಿಂದ ಮನುಷ್ಯನ ದೇಹದ ಯಾವುದೇ ಭಾಗವನ್ನು ಪರೀಕ್ಷಿಸಬಹುದು.
*ಇದರಿಂದ ಹೃದಯ ಸಂಬಂ ಕಾಯಿಲೆ ಮತ್ತು ಭ್ರೂಣ ಚಿಕಿತ್ಸೆಗೂ ಸಹಕಾರಿ.
* ರೋಗಿಯ ರೋಗದ ಬಗೆಗಿನ ಮಾಹಿತಿಯನ್ನು ಅದರಲ್ಲಿಯೇ ಶೇಖರಿಸಿಡಲೂಬಹುದು.
*ರೋಗಿಯ ದೇಹದಲ್ಲಾಗುವ ಚಲನವಲನಗಳು ವೀಡಿಯೋ ಶಬ್ದದ ತೀವ್ರತೆ ಕೂಡ ಇದರಲ್ಲಿ ದಾಖಲಾಗುತ್ತದೆ.
*ಹಳ್ಳಿಗಳು ಅಥವಾ ಪ್ರಕೃತಿ ವಿಕೋಪದಂಥ ಪರಿಸ್ಥಿತಿಗಳಲ್ಲಿ ಇದು ಹೆಚ್ಚು ಉಪಯುಕ್ತ.

ಸುಮಂಗಲೆ (ನ್ಯಾನೋ ಕಥೆ )

( ನ್ಯಾನೋ ಕಥೆಗಳ ಜನಕ ಗೆಳೆಯ ಚ.ಹ.ನಟೇಶ್ ಬಾಬು ಹುಟ್ಟಿಸಿದ ಗೀಳು ಅಷ್ಟಿಷ್ಟಲ್ಲ. ಅವನಿಂದ ಸ್ಫೂರ್ತಿ ಪಡೆದ ನಾನು ಕೆಲವು ನ್ಯಾನೋ ಕಥೆಗಳನ್ನ ಬರೆದಿದ್ದೇನೆ ಓದಿ ಆನಂದಿಸಿ, ಹಿಡಿಸದಿದ್ದರೆ ಬೈದಾದರು ಸರಿ ಅಭಿಪ್ರಾಯ ತಿಳಿಸಿ ನಿಮ್ಮ ಎಲ್ಲ ಪ್ರತಿಕ್ರಿಯೆಗಳಿಗೆ ಹೃದಯ ಪೂರ್ವಕ ಸ್ವಾಗತ...)

ಸುಮಂಗಲೆ:

ಸುಮಂಗಲಾ ಆಗತಾನೆ ಪದವಿ ಮುಗಿಸಿದ್ದಳು. ಕಿತ್ತು ತಿನ್ನುವ ಬಡತನದ ನಡುವೆಯೂ ಓದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಳು. ಹಳ್ಳಿಯಲ್ಲಿ ಏನಾದರೂ ಮಾಡಬೇಕೆಂದಿದ್ದವಳಿಗೆ ಅಪ್ಪ ಸುಮ್ಮನಿರಲಾರದೆ ಮದುವೆ ಮಾಡಿದ್ದ. ‘ನೀನು ಹುಡ್ಗಿ, ನೀನು ದುಡ್ದು ನಮ್ಮನ್ನ ಸಾಕೋದ್ ಬ್ಯಾಡ, ನಾನಿನ್ನೂ ಗಟ್ಟಿ ಇದ್ದೀನಿ’ ಎಂದಿದ್ದ. ಹಾಗೇ ಹೇಳಿ ವರ್ಷಕ್ಕೇ ಅವನು ಮಣ್ಣು ಸೇರಿದ್ದ. ಇತ್ತ ಅಪ್ಪನ ಒತ್ತಾಯಕ್ಕೆ ಕಟ್ಟುಬಿದ್ದು ಪೇಟೆಯ ಹುಡುಗನನ್ನು ಮದುವೆಯಾದ ಸುಮಂಗಲಾ ಗಂಡನ ದಾಸಿಯಾಗಿದ್ದಳು. ಅವನೊ ಹೈಟೆಕ್ ಪಿಂಪ್, ಮದುವೆ ನೆಪದಲ್ಲಿ ಆಕೆಯನ್ನು ತಂದು ಮಾಂಸದಡ್ಡೆಗೆ ಬಿಟ್ಟಿದ್ದ. ಎಷ್ಟೇ ಗೋಳಾಡಿದರೂ ಆ ಜಾಲದಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ. ಆತ್ಮಹತ್ಯೆಯ ದಾರಿಯೂ ಅವಳನ್ನು ಕಂಡು ದೂರ ಓಡಿತ್ತು. ಇನ್ನೇನು ಮನೆಯಲ್ಲಿದ್ದ ವಿಧವೆ ಅಮ್ಮ, ಮುಗ್ದ ತಮ್ಮನಿಗಾಗಿ ಗಂಡನಿದ್ದೂ ‘ನಿತ್ಯ ಸಮಂಗಲಿ’ಯಾಗಿದ್ದಳು. ಊರಿಗೆ ಬಂದಾಗ ಎಲ್ಲರೂ ಆಕೆಯನ್ನು ಆರತಿ ಎತ್ತಿ ‘ಹೀಗೇ ಸುಮಂಗಲಿಯಾಗಿರು...’ ಎಂದು ಹರಸಿದ್ದರು !

ಪ್ರೀತಿಯ ಬೆಂಕಿ:
ಹರೆಯಕ್ಕೆ ಕಾಲಿಟ್ಟ ಮಧು ಹಾಗೂ ಮನು ಇಬ್ಬರೂ ಪ್ರೀತಿಯಲ್ಲಿ ಜಾರಿ ಬಿದ್ದಿದ್ದರು. ಹಾಗೇ ಬಿದ್ದಿದ್ದರಿಂದಲೇ ಅವಳಿಗೀಗ ಮೂರು ತಿಂಗಳು ತುಂಬಿತ್ತು. ಇದನ್ನು ಮನೆಯವರಲ್ಲಿ ಹೇಳಲೂ ಮಧುಗೆ ಧೈರ್ಯವಿರಲಿಲ್ಲ; ಅವನಿಗೂ. ಅದೇ ವಿಚಾರದಲ್ಲಿ ಇಬ್ಬರೂ ಮಾತಿಗೆ ಮಾತು ಬೆಳೆಸಿದ್ದರು. ಮಧು ‘ಎಲ್ಲ ಮಾಡಿದವನು ನೀನೆ, ಈಗ ಹಿಂಗೆ ಮಾತನಾಡಿದ್ರೆ ಹೆಂಗೆ?’ ಎಂದಳು. ಅದಕ್ಕವನು ‘ಆಗಿದ್ದೆಲ್ಲಾ ನಿನ್ನಿಂದ್ಲೇ ನೀನು ನನ್ನ ಜೀವನದಲ್ಲಿ ಬರದಿದ್ದರೆ ನಾನು ನೆಮ್ಮದಿಯಾಗಿರುತ್ತಿದ್ದೆ’ ಎಂದ. ಮಾರನೇ ದಿನ ಆಕೆ ಎಲ್ಲವನ್ನೂ ಬರೆದಿಟ್ಟು ಲೋಕವನ್ನು ಬಿಟ್ಟು ಹೋದಳು. ಮರುಕ್ಷಣವೇ ಅವರಿಬ್ಬರ ಮನೆಗೂ ಬೆಂಕಿ ಬಿದ್ದಿತ್ತು. ಮನೆ ಮನಗಳೆರಡೂ ಧಗಧಗಿಸಿ ಉರಿಯುತ್ತಿದ್ದವು.


ಮಕ್ಕಳಾಗದಿರಲಿ ಮನೆ ತುಂಬಾ:
ಆತ ಕುಟುಂಬ ಕಲ್ಯಾಣ ಇಲಾಖೆಯ ಅಕಾರಿ. ಹೆಸರು ಶರಣಪ್ಪ. ‘ಮನೆಗೊಂದು ಮಗು ಸಾಕು’ ಎಂದು ಹೋದ ಹೋದಲ್ಲೆಲ್ಲ ಬಾಷಣ ಬಿಗಿಯುತ್ತಿದ್ದ. ಮದುವೆಯಾಗಿತ್ತು. ವರ್ಷವಾದ ಬಳಿಕ ಇಬ್ಬರು ಅವಳಿಜವಳಿ ಮಕ್ಕಳಾಗಿದ್ದರು. ಅದಾಗಿ ವರ್ಷಕ್ಕೇ ಮತ್ತೊಬ್ಬಳು ಸುಂದರಿಗೆ ಅವ ಶರಣಾಗಿದ್ದ. ಹೋದಲ್ಲೆಲ್ಲ ಎಲ್ಲರನ್ನೂ ಮಾತಿನಲ್ಲಿ ಸೋಲಿಸಿ ಕುಟುಂಬ ಕಲ್ಯಾಣದ ಪಾಠ ಹೇಳುತ್ತಿವ ಹುಡುಗಿಯ ವಿಷಯದಲ್ಲಿ ಸೋತ. ಅದರಿಂದಾಗಿ ಮದುವೆಯಾಗದೇ ಅವಳಿಗೂ ಒಂದು ಮಗುವಾಗಿತ್ತು...!


ಜವ್ಬಾದಾರಿ:
ಮನೆ ಹೊರಗಡೆ ಚಿನ್ನು ಮತ್ತು ಚಿಂಟು ಇಬ್ಬರೂ ಆಟವಾಡುತ್ತಿದ್ದರು. ಒಳಗಡೆ ಅಮ್ಮ ಗೊಣಗುತ್ತಿದ್ದಳು. ‘ಈ ಮಕ್ಳಿಗೆ ಒಂದಿಷ್ಟೂ ಬುದ್ದಿ ಇಲ್ಲ, ಯಾವಾಗ್ ನೋಡೀದ್ರೂ ಆಟ ಆಟ... ಮುಂದಿನ್ ಜೀವ್ನದ್ ಬಗ್ಗೆ ಸ್ವಲ್ಪಾದ್ರೂ ಖಬರ್ ಐತೆನೋ ನೋಡು’ ಎನ್ನುತ್ತಿದ್ದರೆ ಅಪ್ಪ ಹೇಳಿದ ‘ಖಬರ್ ಇದ್ದಿದ್ರ ಅವರ‍್ಯಾಕ್ ಹಂಗ್ ಆಡ್ತಿದ್ರು ? ಖಬರ್ ಇರಾಕ್ ಅವ್ರೇನ್ ನೀನಾ? ಇಲ್ಲಾ ನಾನ?’ ಮಕ್ಕಳಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತ ಎರಡು ಮನೆ ಕಟ್ಟಿ ‘ಇದು ನಿಂಗೆ ಅದು ನಂಗೆ’ ಎನ್ನುತ್ತಿದ್ದರು.

Powered By Blogger