Sunday, August 2, 2009

ಅವಳು ಮಮತೆಯ ಮಡಿಲು...

My Dear Friend,
ಆಗಿನ್ನೂ ಮೈಸೂರಿಗೆ ಬಂದಿಳಿದು ಮೂರು ದಿನಗಳಾಗಿರಲಿಲ್ಲ. ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಆ ಹಸಿರು ಹಾಸಿಗೆ ಮೇಲೆ ಕುಳಿತು ನಾ ಏನೋ ಗೀಚುತ್ತಿದ್ದ ಸಮಯದಲ್ಲಿ ನೀ ಬಂದು ಮಾತನಾಡಿಸಿದ ದೃಶ್ಯ ಇನ್ನೂ ಕಣ್ಣಂಚಿನಲ್ಲೇ ಇದೆ. ಪರಿಚಯ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಸ್ನೇಹದ ಚಿಗುರೊಡೆದಿತ್ತು. ಅಂದು ನಿನ್ನ ಧ್ವನಿಯಿಂದ ಹೊರ ಬಂದ ಮಮತೆಯ ನಾದ ಇಂದಿಗೂ ನನ್ನೆದೆಯಲ್ಲಿ ಝೇಂಕರಿಸುತ್ತಲೇ ಇದೆ. ಅದಕ್ಕೆ ಅಲ್ಲಿನ ಆ ಹಸಿರೇ ಸಾಕ್ಷಿ!
ಅಲ್ಲಿಂದ ಶುರುವಾದ ನಮ್ಮಿಬ್ಬರ ಸ್ನೇಹ ಹೆಮ್ಮರವಾಗಿದ್ದು ನಿನಗೂ ಗೊತ್ತು. ತುಂಟಾಟ, ತರಲೆಗಳು, ವಿಚಾರಗಳ ವಿನಿಮಯ, ಚಿಂತನೆಗಳು ನಮ್ಮೊಳಗೆ ಬ್ರೇಕಿಲ್ಲದ ಕಾರಿನಂತೆ ಓಡಿದ್ದೂ ಉಂಟು. ಗಂಡು ಹೆಣ್ಣು ಕೇವಲ ಸ್ನೇಹಿತರಾಗಿರಲು ಸಾಧ್ಯವಿಲ್ಲ ಎಂಬ ಮಾತಿಗೆ ಅಪವಾದ ನೀನು. ನಿನ್ನೊಂದಿಗೆ ಕಳೆದ ಎರಡು ವರ್ಷಗಳು ಇನ್ನೂ ಆ ಹಸಿರಿನಂತೆಯೇ ಹಸಿರಾಗಿ ಉಸಿರಾಡುತ್ತಿವೆ. ಸ್ನೇಹದ ಹಾಳೆಗೆ ಮಮತೆಯ ಬಣ್ಣ ಹಚ್ಚಿ ಅಂದಗೊಳಿಸಿದವಳು ನೀನು. ಆ ಇಡೀ ಎರಡು ವರ್ಷಪೂರ್ತಿ ನಿನ್ನ ‘ಮಮತೆಯ ಸಿಹಿ’ ಉಂಡು ಕೊಬ್ಬಿದ ನನಗೆ ಮತ್ಯಾಕೊ ಕೊರಗು ಶುರುವಾಯಿತಲ್ಲ! ಕಾರಣ, ನೀನು ದಿಢೀರ್ ಮರೆಯಾದದ್ದೇ ಇರಬೇಕು!?
ಪ್ರತಿನಿತ್ಯ ನಿನ್ನ ಮಾತು ಕೇಳುತ್ತಲೇ ನಿನ್ನ ತುಂಟತನ, ನಿರ್ಮಲ ನಗು, ವಿಚಾರಲಹರಿಗಳಿಗೆ ತಲೆ ದೂಗುತ್ತಲೇ ಇದ್ದವನು ನಾನು. ನೀ ಹೇಳದೆ, ಕೇಳದೆ, ಒಂದು ಮಾತೂ ಉಲಿಯದೆ ನಾಪತ್ತೆಯಾಗೊದೆ? ಅಂದಿನಿಂದ ನಾನು ಧ್ವನಿಯಿಲ್ಲದ ಕೋಗಿಲೆಯಾಗಿದ್ದೆ. ಅಂದವಿಲ್ಲದ ಅರಗಿಣಿಯಾಗಿದ್ದೆ. ರೆಕ್ಕೆಪುಕ್ಕಗಳೆಲ್ಲ ಇದ್ದೂ ಕುಣಿಯಲಾಗದ ನವಿಲಾಗಿದ್ದೆ.
ಈ ಜಗತ್ತಿನಲ್ಲಿ ಪ್ರೀತಿ, ಸ್ನೇಹಕ್ಕೆ ಬರವಿಲ್ಲ(?). ಆದರೆ ನಿರ್ಮಲ ಪ್ರೀತಿ, ‘ಮುಕ್ತಮನದ ಸ್ನೇಹ’ ಅದೆಷ್ಟು ಜನರಿಗೆ ಸಿಕ್ಕಿದೆ ಹೇಳು? ಅಪ್ಪಟ ಗೆಳೆಯರೆಂದು ನಂಬಿ ಕಷ್ಟ ಸುಖಗಳೆಲ್ಲವನ್ನೂ ಬಿಚ್ಚಿಟ್ಟ ಮಾರನೆ ದಿನವೇ ಸಹಾಯ ಮಾಡುವ ಗೋಜಿಗೂ ಹೋಗದೆ ಸಮಯ ಸಾಧಕತನವನ್ನು ತೋರಿಸಿ, ಅದನ್ನೇ ಬಂಡವಾಳ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುವ ಈ ದಿನಮಾನಗಳಲ್ಲಿ ನೀನು ನಿಜಕ್ಕೂ ‘ಕಡಲಾಳದ ಮುತ್ತು’. ಆ ವಿಚಾರದಲ್ಲಿ ನಾ ನಿಜಕ್ಕೂ ಆದೃಷ್ಟವಂತ; ಆಂದುಕೊಂಡಿದ್ದೆ. ನೀ ಮರೆಯಾದಾಗ ಅದೇ ಕಡಲಲ್ಲಿ ಈ ಮುತ್ತು ಕಳೆದು ಹೋಯಿತು ಎಂದುಕೊಂಡೆ. ಆ ಗಳಿಗೆಯಿಂದ ಸುಮಾರು ಐದು ವರ್ಷ ನಮ್ಮ ನಿರ್ಮಲ ಸ್ನೇಹ ನನಗೇ ಕನಸೆಂಬಂತೆ ಭಾಸವಾಗಿತ್ತು.
ಮನದಾಳದ ಎಷ್ಟೋ ನೋವು ನಲಿವುಗಳನ್ನು ಆಗ ನಿನ್ನೊಂದಿಗೆ ಬಿಚ್ಚಿಟ್ಟಿದ್ದೆ. ಆಗಾಗ ಮಾಡಿದ ತಪ್ಪಿಗೆ ಬೈಸಿಕೊಂಡಿದ್ದೆ, ಬೈದಿದ್ದೆ. ಆನಂತರ ಈ ಹಕ್ಕಿ ಮೂಕವಾಗಿತ್ತು! ನೀ ಮರೆಯಾದಾಗ ಇನ್ನೆಂದೂ ಸಿಗಲಾರೆ ಎಂಬ ಭಯ, ನಿನ್ನ ನೆನಪು ಆಗಾಗ ಕಡಲಿನಲ್ಲಿ ಭುಗಿಲೇಳುವ ಅಲೆಗಳ ಹಾಗೆ ಭೋರ್ಗರೆಯುತ್ತ ಅಪ್ಪಳಿಸುತ್ತಿದ್ದವು. ನೀನು ಬರೆದುಕೊಟ್ಟ ವಿಳಾಸದ ಆಟೋಗ್ರಾಫ್ ಡೈರಿ ಕೂಡ ನನ್ನ ದುರಾದೃಷ್ಟಕ್ಕೆ ಕಳೆದುಹೋಗಿತ್ತು. ನಿನ್ನ ಊರು ಗೊತ್ತಿದ್ದರೂ ವಿಳಾಸ ಗೊತ್ತಿರಲಿಲ್ಲ, ನೀನೆಲ್ಲಿದ್ದೆ ತಿಳಿಯಲಿಲ್ಲ. ಈಗ ನನ್ನ ಮನದಾಳದ ಸಾಗರ ಪ್ರಶಾಂತವಾಗಿದೆ. ತುಪ್ಪವೇ ಬಂದು ರೊಟ್ಟಿಗೆ ಬಿದ್ದಹಾಗೆ ನೀ ಮೊನ್ನೆ ನನ್ನ Cellಗೆ ಅದೆಲ್ಲಿಂದಲೋ "I am Kamala. how r u ?'' ಎಂಬ ಸಂದೇಶ ಕಳುಹಿಸಿದಾಗ ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ!
ನೀ ಸಿಕ್ಕಿದ್ದು ಕಾಯಿಲೆ ಬಿದ್ದ ಕೋಗಿಲೆಗೆ ಹುಶಾರಾಗಿ ಧ್ವನಿ ಬಂದಹಾಗಿತ್ತು, ನವಿಲಿಗೆ ನರ್ತಿಸಿದ ಖುಷಿ. ಹೆಣ್ಣು ಮಮತಾಮಯಿ, ಅವಳ ಹೃದಯ ಸಾಗರದಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ ಮಮತೆಗಳಿಗೆ ಅಪಾರ ಜಾಗ ಎಂದು ಕೇಳಿದ್ದೆ. ಅದು ಈಗ ಮತ್ತೆ ನಿಜವಾಯಿತು.
ನೀ ಮತ್ತೆ ಸಿಕ್ಕ ಈ ಗಳಿಗೆಯನ್ನು ನಿಜಕ್ಕೂ ನನ್ನಿಂದ ವರ್ಣಿಸಲಾಗುತ್ತಿಲ್ಲ. ನಿನ್ನ ಮಮತೆಗೆ ನಿಜಕ್ಕೂ ಈ ಹೃದಯದ ಗೆಳೆಯನ ಥ್ಯಾಂಕ್ಸ್.

Thursday, July 30, 2009

ಬೇರು ಬಿಡದ ನಾರು ಉದ್ಯಮ...

ರಾಜ್ಯದಲ್ಲಿ ನಾರು ಉದ್ಯಮ ನಲುಗುತ್ತಿದೆ. ನರಳುವಿಕೆಯಲ್ಲೇ ಇದು ಮೇಲೆದ್ದು ನಳನಳಿಸುತ್ತಾ ದೇಶದಲ್ಲಿಯೇ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಆಶ್ಚರ್ಯ ಆಗುತ್ತಿದೆಯೇ? ಹೌದು, ತೆಂಗು ಬೆಳೆಯುವಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ೨ನೇ ಸ್ಥಾನ. ಭಾರತದಲ್ಲಿ ವಾರ್ಷಿಕ ೧೩ ಸಾವಿರ ದಶಲಕ್ಷ ತೆಂಗಿನಕಾಯಿ ಇಳುವರಿ ಬರುತ್ತಿದೆ. ಅದರಲ್ಲಿ ೧,೫೨೫ದಶಲಕ್ಷ ತೆಂಗು ಕರ್ನಾಟಕದಲ್ಲಿ ಬೆಳೆದವು !
ರಾಜ್ಯದ ೩,೮೭,೦೫೨ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇಲ್ಲಿನ ೧೫ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಬೆಳೆಯ ಶೇ.೧೭ರಷ್ಟು ಮಾತ್ರ ತೆಂಗಿನ ಸಿಪ್ಪೆಗಳನ್ನು ನಾರು ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ೪,೨೦೨ ತೆಂಗು ನಾರು ಉತ್ಪನ್ನಗಳ ತಯಾರಿಕಾ ಘಟಕಗಳಿವೆ. ಈ ಘಟಕಗಳಲ್ಲಿ ೨೦ಸಾವಿರ ಪುರುಷ ಹಾಗೂ ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ಇವುಗಳಿಂದ ವಾರ್ಷಿಕ ೨೪ ಸಾವಿರ ಮೆಟ್ರಿಕ್ ಟನ್ ನಾರು ಉತ್ಪಾದಿಸಲಾಗುತ್ತಿದೆ. ಈ ನಾರಿನಲ್ಲಿ ಶೇ.೪೦ ಮಾತ್ರ ‘ರಬ್ಬರೈಸ್ಡ್ ಕಾಯರ್ ಮ್ಯಾಟ್ರೆಸ್ ’ ತಯಾರಿಸಲು ಬೇಕಾಗುವ ಸುರುಳಿ ನಾರಿನ ಹಗ್ಗವನ್ನು ತಯಾರಿಸಲಾಗುತ್ತಿದೆ.
ಉಳಿದದ್ದನ್ನು ಕಾಯರ್ ಮ್ಯಾಟ್ಸ್ , ಮ್ಯಾಟಿಂಗ್ಸ್ , ಜಿಯೋ ಟೆಕ್ಸ್‌ಟೈಲ್ಸ್ , ಕೋಕೋಲಾನ್ ಬ್ರೆಷಸ್ ಮುಂತಾದ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿದೆ. ರಾಜ್ಯ ತೆಂಗು ನಾರಿನ ಸಹಕಾರ ಮಹಾಮಂಡಳಿಯು ಪ್ರತಿ ವರ್ಷ ೧೮ರಿಂದ ೪೦ಲಕ್ಷ ರೂ. ಲಾಭ ಗಳಿಸುತ್ತಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಉಳಿದ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆದರೂ ನಾರು ಉತ್ಪಾದನೆಗೆ ಬೇಕಾದ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಸರಕಾರಕ್ಕಿಲ್ಲ. ಜತೆಗೆ ಖಾಸಗಿಯವರೂ ಇಲ್ಲಿ ಘಟಕಗಳನ್ನು ಸ್ಥಾಪಿಸಲು ಹಿಂದೇಟು ಹಾಕುತ್ತಿದ್ದಾರೆ.
ನೆರೆಯ ಕೇರಳ ಹಾಗೂ ತಮಿಳುನಾಡುಗಳಲ್ಲಿ ತೆಂಗು ನಾರು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿರುವ ಪರಿಣಾಮ ಅವು ದೇಶದಲ್ಲಿಯೇ ಅತಿ ಹೆಚ್ಚು ಉತ್ಪಾದನೆ ಮಾಡುತ್ತಿವೆ. ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿವೆ. ಆ ಮೂಲಕ ಪ್ರಗತಿ ಸಾಸಿವೆ. ಆ ಇಚ್ಛಾಶಕ್ತಿ ನಮ್ಮ ರಾಜ್ಯ ಸರಕಾರಕ್ಕೆ ಏಕಿಲ್ಲ? ಕೃಷಿ, ಕೃಷಿ ಉತ್ಪನ್ನಗಳು, ಅದರ ಉಪ ಕಸುಬುಗಳು ಉದ್ಯಮವಾಗದೆ ರೈತರ ಉದ್ಧಾರ ಅಸಾಧ್ಯ. ಈ ನೀತಿ ಮಾತ್ರ ಸರಕಾರಗಳಿಗೆ ಅರ್ಥವಾಗುತ್ತಲೇ ಇಲ್ಲ.
ರಾಜ್ಯದಲ್ಲಿ ೩೦೨ ಕೇಂದ್ರಗಳಲ್ಲಿ ಈ ನಾರು ಹಾಗೂ ಅವುಗಳ ಉತ್ಪನ್ನಗಳ ತಯಾರಿಕೆ ನಡೆಯುತ್ತಿದೆ. ಆದರೆ ಅವುಗಳ ಜತೆಗೆ ೩,೯೦೦ ಮನೆಗಳಲ್ಲಿ ಗ್ರಾಮೀಣ ಮಹಿಳೆಯರೇ ಇದರಿಂದ ಉದ್ಯೋಗ ಕಂಡುಕೊಂಡಿದ್ದಾರೆ ! ಇದಕ್ಕೆ ಪ್ರೋತ್ಸಾಹ ನೀಡಿದರೆ ಸ್ವಯಂ ಉದ್ಯೋಗದ ಸೃಷ್ಟಿ ಹೆಚ್ಚಾಗುತ್ತದೆ ಎಂಬ ನಿದರ್ಶನ ಕಣ್ಣೆದುರೇ ಇದ್ದರೂ ರಾಜ್ಯ ಸರಕಾರ ಮಾತ್ರ ನಿರ್ಲಕ್ಷ್ಯತೋರುತ್ತಿದೆ. ಇದರಿಂದ ಇಡೀ ಉದ್ಯಮ ನಲುಗುತ್ತಿದೆ.
ರಾಜ್ಯದ ತುಮಕೂರು, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೋಲಾರ, ಹಾಸನ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ಆದರೆ ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ರಾಮನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾತ್ರ ನಾರು ಉತ್ಪನ್ನ ಘಟಕಗಳಿವೆ. ಇದು ಈ ನಾಡಿನ ದುಸ್ಥಿತಿ.
ರಫ್ತು ಮತ್ತು ಆದಾಯ :
ಭಾರತದಲ್ಲಿ ತೆಂಗು ನಾರನ್ನು ಒಂದು ಉದ್ಯಮವಾಗಿ ರೂಪಿಸಿದ್ದು ೧೯೬೫ರಲ್ಲಿ . ಆನಂತರ ತೆಂಗುನಾರು ತಂತ್ರeನ ಸಂಶೋಧನಾ ಕೇಂದ್ರೀಯ ಸಂಸ್ಥೆಯ ಸ್ಥಾಪನೆಯಾಯಿತು. ಈ ಸಂಸ್ಥೆ ೧೯೭೮ರಲ್ಲಿ ಹಲವೆಡೆ ತರಬೇತಿ ನೀಡಲಾರಂಭಿಸಿತು. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭಿಸಿದಾಗ ಅಂದಿನ ರಾಜ್ಯ ಸರಕಾರ ಪ್ರೋತ್ಸಾಹ ನೀಡಲಿಲ್ಲ.
ಆದರೂ ಭಾರತ ಪ್ರಸ್ತುತ ೬೫೦ ಕೋಟಿ ರೂ. ನಾರು ಉತ್ಪಾದನೆಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ರಫ್ತಿನಲ್ಲೂ ಕೇರಳ ಹಾಗೂ ತಮಿಳುನಾಡುಗಳದ್ದೇ ಮೇಲುಗೈ. ಕೇವಲ ಶೇ.೧೭ರಷ್ಟು ತೆಂಗು ನಾರನ್ನು ಬಳಕೆ ಮಾಡಿಕೊಳ್ಳುತ್ತಿರುವ ಕರ್ನಾಟಕಕ್ಕೆ ೩ನೇ ಸ್ಥಾನ. ಇದರ ನಡುವೆಯೂ ಒರಿಸ್ಸಾದಿಂದ ತೆಂಗು ನಾರಿನ ಕರಕುಶಲ ವಸ್ತುಗಳು ಹೆಚ್ಚು ರಫ್ತಾಗುತ್ತಿವೆ. ಕರ್ನಾಟಕದಿಂದ ಬೆಡ್ ಹಾಗೂ ಕುಷನ್ ವಸ್ತುಗಳು ಹೆಚ್ಚಾಗಿ ಹೊರ ದೇಶಗಳಿಗೆ ಸಾಗಣೆಯಾಗುತ್ತಿವೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಅತ್ಯಂತ ಬೇಡಿಕೆ ಸೃಷ್ಟಿಸಿವೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಕುರ್ಲಾ ಬೆಡ್ ಮತ್ತು ರಸ್ಟೋಲೆಕ್ಸ್‌ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಅರಸೀಕೆರೆ ಹಾಗೂ ತಿಪಟೂರು ನಾರು ಹಗ್ಗ ಹೆಚ್ಚು ಬಲಿಷ್ಠ ಎಂಬುದು ಜಾಗತಿಕ ಮಟ್ಟದಲ್ಲಿ ಸಾಬೀತಾಗಿದೆ. ಇಲ್ಲಿನ ಮ್ಯಾಟ್ರೆಸ್‌ಗೆ ಕೂಡ ಸೌದಿ ಅರೇಬಿಯಾದಲ್ಲಿ ಬೇಡಿಕೆ ಹೆಚ್ಚಾಗಿದೆ. ಆಶ್ಚರ್ಯದ ಅಂಶ ಎಂದರೆ ಬೇಡಿಕೆಗೆ ತಕ್ಕ ಹಾಗೆ ನಾರು ಉತ್ಪನ್ನಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ !
ಇದೆಲ್ಲದರ ನಡುವೆ ಮತ್ತೊಂದು ಆಘಾತಕಾರಿ ಅಂಶ ಎಂದರೆ ಮಲೆನಾಡು ಮತ್ತು ಕರಾವಳಿಯ ತೆಂಗು ನಾರು ಹೇಗೆ? ಅದರ ಗುಣಮಟ್ಟ ಎಷ್ಟು ? ಎಂಬುದರ ಬಗ್ಗೆ ಸಂಶೋಧನೆಗಳೇ ಆಗಲಿಲ್ಲ. ಈ ಭಾಗದಲ್ಲಿ ಹೇರಳವಾಗಿ ತೆಂಗು ಬೆಳೆದರೂ ಅದರ ನಾರು ಮಾತ್ರ ವಿನಾಕಾರಣ ಹಾಳಾಗುತ್ತಿದೆ. ಇದರ ನಡುವೆಯೂ ಬೆಂಗಳೂರಿನ ಕೆಂಗೇರಿ, ಮೈಸೂರು ರಸ್ತೆ, ಹೊರ ವಲಯದ ಹೊಸೂರುಗಳಲ್ಲಿ ಫ್ಲೈವುಡ್ ತಯಾರಿಸಲಾಗುತ್ತಿದೆ. ಹೊಸದಾಗಿ ಆವಿಷ್ಕಾರಗೊಂಡ ವಸ್ತುಗಳನ್ನು ತಯಾರಿಸಲು ಸರಕಾರದ ಪ್ರೋತ್ಸಾಹ ಹಾಗೂ ಯುವಜನತೆಯ ಆಸಕ್ತಿ ಬೇಕಿದೆ.
ಮಾರುಕಟ್ಟೆ ವ್ಯವಸ್ಥೆ:
ತೆಂಗು ನಾರು ಬಳಸಿ ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಕೇಂದ್ರ ಸರಕಾರ ದೇಶದ ೩೦ಕ್ಕೂ ಹೆಚ್ಚು ಕಡೆಗಳಲ್ಲಿ ಬೃಹತ್ ಶೋ ರೂಂ ನಿರ್ಮಾಣ ಮಾಡಿದೆ. ಇದರ ಜತೆಗೆ ದೇಶ, ವಿದೇಶಗಳಲ್ಲಿ ನಡೆಯುವ ವಸ್ತು ಪ್ರದರ್ಶನಗಳಲ್ಲಿ ನಾರು ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲು ಕೂಡ ಮಳಿಗೆ ನಿರ್ಮಿಸುತ್ತದೆ. ಒಂದು ಉದ್ಯಮ ಸಮೃದ್ಧವಾಗಿ ಬೆಳೆಯಲು ಇನ್ನೇನು ಬೇಕು ?
ರಾಜ್ಯದಲ್ಲಿ ಕೂಡ ತೆಂಗು ನಾರು ಸಹಕಾರ ಮಹಾ ಮಂಡಳಿ ೧೮ ಮಾರಾಟ ಮಳಿಗೆಗಳನ್ನು, ೨ ಸಂಚಾರಿ ಮಾರಾಟ ವಾಹನಗಳನ್ನು ಹೊಂದಿದೆ. ಆಗಾಗ ಪ್ರದರ್ಶನವೂ ನಡೆಯುತ್ತದೆ. ಆ ಮೂಲಕವೇ ಮಂಡಳಿ ೨೦೦೪ರಿಂದ ೨೦೦೮ರ ವರೆಗೆ ೭೨೬ ಲಕ್ಷ ರೂ. ವಹಿವಾಟು ನಡೆಸಿದೆ. ಆದರೂ ಬೇರೆ ಉದ್ಯಮದಂತೆ ಇದನ್ನೂ ಸರಕಾರ ಪರಿಗಣಿಸದಿರುವುದರಿಂದ ರಾಜ್ಯದ ಉದ್ಯಮಿಗಳು, ಕಾರ್ಮಿಕರು ಹೀನಾಯ ಸ್ಥಿತಿಯಲ್ಲಿದ್ದಾರೆ. ನೆರೆಯ ರಾಜ್ಯಗಳಲ್ಲಿ ಅವುಗಳಿಂದಲೇ ಅಭಿವೃದ್ಧಿ ಸಾಸಲಾಗುತ್ತಿದೆ. ಆ ಪ್ರe ಇಲ್ಲಿನ ಸರಕಾರಕ್ಕಿಲ್ಲ.
ಈ ಉದ್ಯಮದಲ್ಲಿ ದುಡಿಯುವ ರಾಜ್ಯದ ೨೦ ಸಾವಿರ ಕಾರ್ಮಿಕರಲ್ಲಿ ಶೇ.೭೫ರಷ್ಟು ಮಹಿಳೆಯರಿದ್ದಾರೆ. ಅದಲ್ಲಿ ಶೇ.೯೦ ಗ್ರಾಮೀಣ ಮಹಿಳೆಯರು. ಇದರಿಂದ ಕೇಂದ್ರ ಸರಕಾರ ಮಹಿಳಾ ಕಾಯರ್ ಯೋಜನೆ ಜಾರಿಗೊಳಿಸಿತು. ಕೇರಳ, ಒರಿಸ್ಸಾ, ತಮಿಳು ನಾಡು ಹಾಗೂ ಆಂಧ್ರಪ್ರದೇಶಗಳೇ ಹೆಚ್ಚು ಇದರ ಸದುಪಯೋಗ ಪಡೆದವು. ನಮ್ಮ ಸರಕಾರದ ತಾತ್ಸಾರದಿಂದ ಉದ್ಯಮ ಬೆಳೆಯಲೇ ಇಲ್ಲ. ೨೦೦೩ರಿಂದ ೨೦೦೭ರವರೆಗೆ ಕೇವಲ ೨,೧೮೦ ಮಹಿಳೆಯರು ಮಾತ್ರ ಈ ತರಬೇತಿ ಪಡೆದಿದ್ದಾರೆ. ಮಹಿಳೆಯರಿಗೆ ಕೇರಳ, ತಮಿಳುನಾಡು, ಆಂಧ್ರ ಸರಕಾರಗಳು ಶೇ.೭೫ ಸಬ್ಸಿಡಿ ನೀಡಿ, ಉತ್ತೇಜನ ನೀಡುತ್ತಿವೆ. ಇದರಿಂದ ವಾರ್ಷಿಕ ಹೆಚ್ಚು ಆದಾಯ ಬರುತ್ತಿದೆ. ಆದರೆ ಕರ್ನಾಟಕದಲ್ಲಿ...?
ರಾಜ್ಯ ಸರಕಾರದಿಂದಲೇ ಅನ್ಯಾಯ..!
ಈ ಉದ್ಯಮವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ೮ನೇ ಪಂಚವಾರ್ಷಿಕ ಯೋಜನೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಒರಿಸ್ಸಾ, ಅಸ್ಸಾಂಗಳಲ್ಲಿ ತೆಂಗು ನಾರು ತರಬೇತಿ ಮತ್ತು ಅಭಿವೃದ್ಧಿ ವಿಭಾಗೀಯ ಕಚೇರಿಯನ್ನು ತೆರೆದಿತ್ತು.
ಗ್ರಾಮೀಣ ಮಹಿಳೆಯರು ಹಾಗೂ ಯುವ ಜನರಿಗೆ ಈ ಉದ್ಯಮದ ಬಗ್ಗೆ ಸೂಕ್ತ ತರಬೇತಿ ನೀಡಿ, ಅಗತ್ಯ ಸವಲತ್ತು ನೀಡಿ, ಉದ್ಯಮವನ್ನು ಬೆಳೆಸುವುದು ಅದರ ಉದ್ದೇಶವಾಗಿತ್ತು. ರಾಜ್ಯದಲ್ಲಿ ಅರಸೀಕೆರೆಯಲ್ಲಿ ಕಚೇರಿ ತೆರೆಯಲಾಗಿತ್ತು. ತರಬೇತಿ ಹಾಗೂ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿತ್ತು. ಇದಕ್ಕಾಗಿ ಕೇಂದ್ರ ಸರಕಾರದ ಹಣದಲ್ಲಿ ಒಂದು ಸುಸಜ್ಜಿತ ಕಟ್ಟಡವನ್ನೂ ಕಟ್ಟಲಾಗಿತ್ತು.
ಅಲ್ಲಿ ಮೂರು ತಿಂಗಳ ತರಬೇತಿ ಕೋರ್ಸ್ ಆರಂಭಿಸಲಾಗಿತ್ತು. ಆ ಸಮಯದಲ್ಲಿ ತರಬೇತಿ ಪಡೆದವರು ಇಂದಿಗೂ ತೆಂಗು ನಾರು ಉದ್ಯಮವನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ. ಕೆಲವು ವರ್ಷಗಳವರೆಗೆ ಎಲ್ಲ ವಿಭಾಗೀಯ ಕಚೇರಿ ಹೊಣೆಯನ್ನು ಕೇಂದ್ರ ಸರಕಾರವೇ ಹೊತ್ತುಕೊಂಡಿತ್ತು. ಅವು ಸರಾಗವಾಗಿ ನಡೆಯುತ್ತವೆ ಎಂಬ ನಂಬಿಕೆ ಬಂದ ನಂತರ ಅವುಗಳನ್ನು ೧೦ನೇ ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ಆಯಾ ರಾಜ್ಯ ಸರಕಾರಗಳಿಗೆ ವಹಿಸಲಾಯಿತು. ಅಂದು ಅಕಾರದಲ್ಲಿದ್ದ ಸರಕಾರ ತೀವ್ರ ನಿರ್ಲಕ್ಷ್ಯವಹಿಸಿತು. ಇದರಿಂದಾಗಿ ಅರಸೀಕೆರೆಯ ಕಚೇರಿಯನ್ನು ಮುಚ್ಚಬೇಕಾಯಿತು !
ರಾಜ್ಯದಲ್ಲಿ ತೆಂಗು ನಾರು ಉದ್ಯಮ ಹಿಂದೆ ಬೀಳಲು ಮತ್ತೊಂದು ಪ್ರಮುಖ ಕಾರಣ ವಿದ್ಯುತ್. ರಾಜ್ಯದಲ್ಲಿ ೧೨೬.೭೩ ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ೭.೭೬ ದಶಲಕ್ಷ ಯೂನಿಟ್ ವಿದ್ಯುತ್ ಕೊರತೆಯಿದೆ. ಇದರಿಂದ ಸರಕಾರ ತೆಂಗುನಾರು ಉದ್ಯಮಕ್ಕೆ ವಿದ್ಯುತ್ ನೀಡುವುದಾದರೂ ಎಲ್ಲಿಂದ? ಉದ್ಯಮ ಸ್ಥಾಪಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ರಾಜ್ಯಗಳಲ್ಲಿ ಆ ಸರಕಾರಗಳು ವಿದ್ಯುತ್ ಸಬ್ಸಿಡಿ ನೀಡುತ್ತವೆ . ನಮ್ಮಲ್ಲಿ ಅದ್ಯಾವ ಸವಲತ್ತೂ ಇಲ್ಲ. ಈ ಕಾರಣದಿಂದಲೂ ಉದ್ಯಮದಲ್ಲಿ ತೊಡಗಿಕೊಳ್ಳಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರಕಾರ ಈ ವಿದ್ಯುತ್ ಕೊರತೆಯನ್ನು ನೀಗಿಸಿಕೊಂಡು, ಉದ್ಯಮಕ್ಕೆ ಪ್ರೋತ್ಸಾಹ ನೀಡಿದರೆ ಗ್ರಾಮೀಣ ಜನರ ಬದುಕು ಹಸನಾಗುತ್ತದೆ. ಜತೆಗೆ ರಾಜ್ಯಕ್ಕೂ ಹೆಚ್ಚು ಆದಾಯ ಹರಿದು ಬರುತ್ತದೆ.

ತೆಂಗು ನಾರಿನಲ್ಲಿ ಹೊಸ ಆವಿಷ್ಕಾರ !
*ಬೆಡ್, ಮ್ಯಾಟ್, ಹಗ್ಗ, ಸೇರಿದಂತೆ ಕುಷನ್ ವಸ್ತುಗಳು, ಗೊಬ್ಬರ ( ಕರ್ನಾಟಕ). *ಬೊಂಬೆ, ಜೋಕಾಲಿ, ಗಡಿಯಾರ, ಕರಕುಶಲ ವಸ್ತುಗಳು (ಒರಿಸ್ಸಾ) . * ಪಿತ್ ( ಪುಡಿ ನಾರು), ಕತ್ತ , ಹಗ್ಗ, ಮ್ಯಾಟ್ (ಅಲಂಕಾರಿಕ) ಮತ್ತಿತರ ತರಹೇವಾರಿ ವಸ್ತುಗಳು (ಕೇರಳ, ತಮಿಳುನಾಡು, ಆಂಧ್ರ ,ಅಸ್ಸಾಂ ). * ಊಟದ ತಟ್ಟೆ , ಲೋಟ, ಮಡಿಕೆ, ಅಲಂಕಾರಿಕ ಪಾಟ್, ಗ್ರೀನ್ ಹೌಸ್, ಟೈಲ್ಸ್ ,ಕುರ್ಚಿ, ಮೇಜು, ಟೇಬಲ್, ಮಂಚ ,ಕಿಟಕಿ , ಬಾಗಿಲು, ಪ್ಲೇ ವುಡ್ ಮುಂತಾದ ಗಟ್ಟಿ ವಸ್ತುಗಳು ( ಕರ್ನಾಟಕದ ಹೊಸ ಆವಿಷ್ಕಾರಗಳು)

ಒಂದು ತೆಂಗಿನ ಸಿಪ್ಪೆಗೆ ಎಲ್ಲೆಲ್ಲಿ ಎಷ್ಟು ದರ ?
ರಾಜ್ಯಗಳು ದರ
* ಕರ್ನಾಟಕ ೧.೫೦ರೂ. * ತಮಿಳುನಾಡು ೧.೦೦ರೂ.ನಿಂದ ೨.೦೦ರೂ. * ಕೇರಳ ೧.೫೦ ರೂ.ನಿಂದ ೨.೫೦ ರೂ. * ಆಂಧ್ರಪ್ರದೇಶ ೧.೦೦ರೂ. ನಿಂದ ೨.೦೦ರೂ. * ಓರಿಸ್ಸಾ ೨.೦೦ ರೂ.

Friday, July 24, 2009

ರಾಜಕೀಯ ಪುಡಾರಿಗಳಾಗುತ್ತಿರುವ ಗುರುಗಳು...!?

ಭಾರತದಲ್ಲಿ ಗುರುವಿಗೆ ತನ್ನದೇ ಆದ ಸ್ಥಾನಮಾನ ನೀಡಲಾಗಿದೆ. ಈ ಸಮಾಜವನ್ನು ಯಾವ ದಿಕ್ಕಿಗೆ ಬೇಕಾದರೂ ಕೊಂಡೊಯ್ಯುವ ‘ತಾಕತ್’ ಇರುವುದು ಅವನೊಬ್ಬನಿಗೆ ಮಾತ್ರ. ಹೌದು, ಗುರು ಒಬ್ಬ ಶಿಲ್ಪಿ, ಕಲಾಕಾರ. ತಾಯಿ ಮಗುವನ್ನು ಹೆತ್ತು ಸಮಾಜಕ್ಕೆ ನೀಡುತ್ತಾಳೆ. ತಾಯಿ ತಾನೆ ಮೊದಲ ಗುರು ಎಂದರೂ ಅನಂತರದ ದಿನಗಳಲ್ಲಿ ಮಕ್ಕಳು ಹೆಚ್ಚು ಕಲಿಯುವುದು ಗುರುವಿನಿಂದ. ಎಳೆಯ ಮಕ್ಕಳೆಂಬ ಕಲ್ಲನ್ನು ಹೇಗೆ ಬೇಕೋ ಹಾಗೆ ಕೆತ್ತಿ, ತಿದ್ದಿ, ತೀಡಿ ಸಮಾಜಕ್ಕೆ ಕೊಡುವ ಅಭೂತಪೂರ್ವ ಕಲೆಗಾರಿಕೆ, ಸದವಕಾಶ ಇರುವುದು ಅವನೊಬ್ಬನಿಗೆ. ಆ ಹಿನ್ನೆಲೆಯಲ್ಲಿಯೇ ಗುರುಕುಲಗಳು ತಲೆ ಎತ್ತಿದ್ದು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅದಿರಲಿ, ಇಲ್ಲಿ ಚರ್ಚಿಸಬೇಕಾದ ವಿಚಾರ ಗುರುಕುಲಗಳ ಬಗ್ಗೆ ಅಲ್ಲ, ಗುರುವಿನ ಬಗ್ಗೆ. ಹಿಂದೆ ಗುರುವಿಗಿದ್ದ ಗೌರವಗಳು ಈಗಿವೆಯಾ...?
ಇಂಥದ್ದೊಂದು ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಅದು ಸಿಗುವುದೇ ಕಷ್ಟ. ಹಾಗೇ ಆ ಗೌರವ ಕಡಿಮೆಯಾಗಲು ಕಾರಣವೇನು? ಎಂಬುದಕ್ಕೆ ಮಾತ್ರ ಉತ್ತರ ಒಂದೇ ‘ಗುರು ಬದಲಾಗಿದ್ದಾನೆ’. ಹೌದು, ಗುರುಕುಲಗಳು ಮಾಯವಾದ ಬೆನ್ನಲ್ಲೇ ಗುರುವೂ ಬದಲಾಗಿದ್ದಾನೆ. ಆತನ ಸ್ಥಿತಿಗತಿಗಳೂ ಬದಲಾಗಿವೆ. ಹಿಂದೆ ಗುರುವಿಗೆ ಸಂಬಳವೇ ಇರಲಿಲ್ಲ. ಅಂಥದರಲ್ಲೂ ಗುರುಗಳು ಮಕ್ಕಳಿಗೆ ಶ್ರದ್ಧೆಯಿಂದ ಪಾಠ ಮಾಡುತ್ತಿದ್ದರು. eನವನ್ನು ಧಾರೆ ಎರೆಯುತ್ತಿದ್ದರು. ಈಗ ಒಳ್ಳೆಯ ಶಿಕ್ಷಕರಿಲ್ಲ ಪಾಠ ಮಾಡುತ್ತಿಲ್ಲ ಎಂದಲ್ಲ; ಇದ್ದಾರೆ, ಆದರೆ ಸ್ವರೂಪ ಬದಲಾಗಿದೆ. ಕೈತುಂಬ ಸಂಬಳ ಬರುತ್ತಿದ್ದರೂ ಪಾಠ ಪ್ರವಚನಗಳ ಶೈಲಿ ಹಿಂದಿನಂತಿಲ್ಲ. ಅದಕ್ಕೆ ಕಾರಣ ಹುಡುಕಲು ಹೊರಟರೆ ದೊಡ್ಡ ಪರ್ವತವೇ ಎದುರಾಗುತ್ತದೆ, ಅಷ್ಟೊಂದು ಕಾರಣಗಳಿವೆ.
ಮೊನ್ನೆ ಮೊನ್ನೆಯಷ್ಟೆ ನಡೆದ ಶಿಕ್ಷಕರ ಸಂಘದ ತಾಲೂಕು ಮಟ್ಟದ ಚುನಾವಣೆಗಳನ್ನು ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಆ ಎಲ್ಲ ಕಾರಣಗಳು ಎದುರಿಗೆ ಧುತ್ತೆಂದು ಬೀಳುತ್ತವೆ. ಶಿಕ್ಷಕರು ಹಿಂದೆ ಪಾಠದ ಜತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುತ್ತಿದ್ದರು. ಆದರೆ ಈಗ ಪಾಠದ ಜತೆಗೆ ರಾಜಕೀಯ ! ಮೊದಲ ಆದ್ಯತೆ ರಾಜಕೀಯಕ್ಕೆ ನಂತರ ಪಾಠಕ್ಕೆ(!?) ಎಂಬಂತಾಗಿದೆ. ಸಂವಿಧಾನದಲ್ಲಿ ಶಿಕ್ಷಕರಿಗೆ ಎಲ್ಲ ರೀತಿಯ ಸವಲತ್ತುಗಳನ್ನೂ ನೀಡಲಾಗಿದೆ. ಅವರ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸಂಘದ ನಿರ್ಮಾಣಕ್ಕೆ ಅವಕಾಶ ನೀಡಿದೆ. ಆದರೆ ಈಗ ಅದರ ಹೆಸರಿನಲ್ಲಿ ಪಾಠ ನಿಧಾನವಾಗಿ, ಸಂಘದ (ರಾಜಕೀಯ) ಚಟುವಟಿಕೆಗಳೇ ಪ್ರಧಾನವಾಗಿವೆ.
ಯಾವುದೇ ರಾಜಕೀಯ ನಾಯಕರಿಗೂ ಸಾಟಿಯಿಲ್ಲದಂತೆ ತಾಲೂಕು ಮಟ್ಟದ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಹಣ, ಹೆಂಡ ಹಂಚಿಕೆ ಮಾಡಿದ್ದಾರೆ. ಬಾಡೂಟ ಹಾಕಿಸಿ, ‘ಹಬ್ಬ’ ಮಾಡಿದ್ದಾರೆ. ಸಮಾಜ ಶಿಕ್ಷಕರಿಗೆ ಅಪಾರ ಗೌರವ ನೀಡುತ್ತದೆ. ಅದನ್ನು ಉಳಿಸಿಕೊಳ್ಳುವ ಸಲುವಾಗಿ ಹಿಂದೆ ಶಿಕ್ಷಕರು ಹರ ಸಾಹಸ ಮಾಡುತ್ತಿದ್ದರು. ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುತ್ತಿದ್ದರು. ಆದರೆ ಈಗ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಸಾರಾಯಿ ಅಂಗಡಿಗಳ ಕೌಂಟರ್‌ಗಳಲ್ಲಿಯೇ ಬಹಿರಂಗವಾಗಿ ಕುಡಿದು, ಕುಣಿದು ಕುಪ್ಪಳಿಸುವ ಹಂತಕ್ಕೆ ಬಂದಿದ್ದಾರೆ ಎಂದರೆ ಇಡೀ ಸಮಾಜವೇ ತಲೆ ತಗ್ಗಿಸುವ ವಿಚಾರ.
ಈಗತಾನೆ ಶಾಲೆಗಳು ಆರಂಭವಾಗಿವೆ. ಮಕ್ಕಳು ರಜೆಯ ಗುಂಗಿನಲ್ಲಿಯೇ ಇದ್ದಾರೆ. ಅವರನ್ನು ಪಠ್ಯದೆಡೆಗೆ ಕೈ ಹಿಡಿದು ಕರೆತರುವ ಜವಾಬ್ದಾರಿ ಶಿಕ್ಷಕರದ್ದು. ಆದರೆ ಈಗ ಶಿಕ್ಷಕರು ಚುನಾವಣೆಯಲ್ಲಿ ಫುಲ್ ಬಿಸಿ! ಈಗತಾನೆ ತಾಲೂಕು ಮಟ್ಟದ ಚುನಾವಣೆ ನಡೆದಿದೆ. ಇನ್ನೂ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಚುನಾವಣೆ ಬಾಕಿ ಇದೆ!! ಹೀಗಾದರೆ ಪಾಠ ಪ್ರವಚನಗಳ ಗತಿ ಏನು? ಈ ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಬಹುದೊಡ್ಡ ಜವಾಬ್ದಾರಿ ಹಾಗೂ ಅಂಥ ಸೌಭಾಗ್ಯ ಸಿಗುವುದು ಶಿಕ್ಷಕನಿಗೆ ಮಾತ್ರ. ಏಕೆಂದರೆ ಅವರಿಗೆ ಮಕ್ಕಳು ಸಿಗುವಷ್ಟು ಹೊತ್ತು ಪೋಷಕರಿಗೂ ಸಿಗುವುದಿಲ್ಲ. ಆದರೆ ಈಗ ಶಿಕ್ಷಕರು ಮಾಡುತ್ತಿರುವುದಾದರೂ ಏನು? ಪ್ರತಿ ತಾಲೂಕಿನಲ್ಲೂ ಒಬ್ಬೊಬ್ಬ ಮುಖಂಡರ ಹೆಸರಿನಲ್ಲಿ ಗುಂಪು ಗುಂಪಾಗಿ ರಾಜಕೀಯ...
ರಾಜ್ಯದಲ್ಲಿ ಪ್ರೌಢ ಶಾಲೆಯ ೬೪,೨೫೫ ಶಿಕ್ಷಕರಿದ್ದಾರೆ. ಪ್ರಾಥಮಿಕ ಶಾಲೆಯ ೨,೩೮,೯೦೯ ಶಿಕ್ಷಕರಿದ್ದಾರೆ. ಇವುಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪೈಕಿ ಪ್ರತಿ ಐವತ್ತು ಶಿಕ್ಷಕರಿಗೆ ಒಬ್ಬರಂತೆ ಎಲ್ಲ ತಾಲೂಕುಗಳಿಂದಲೂ ೬ ಮಂದಿ ಶಿಕ್ಷಕರಂತೆ ಒಟ್ಟು ೪೦೦೦ ಶಿಕ್ಷಕರು ತಾಲೂಕು ಪ್ರತಿನಿಗಳಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಎಲ್ಲ ತಾಲೂಕಿನ ಪ್ರತಿನಿಗಳು ಸೇರಿ ಜಿಲ್ಲೆಗೆ ೬ ಮಂದಿ ಪದಾಕಾರಿಗಳನ್ನು ಆಯ್ಕೆ ಮಾಡುತ್ತಾರೆ. ಅನಂತರ ರಾಜ್ಯ ಸಂಘಕ್ಕೆ ೬ ಮಂದಿ ಪದಾಕಾರಿಗಳನ್ನು ಆಯ್ಕೆ ಮಾಡಲಾಗುವುದು. ಆದರೆ ಇದಕ್ಕೆ ನಡೆಯುವ ಹೋರಾಟ, ರಾಜಕೀಯ, ತಂತ್ರಗಾರಿಕೆಗಳನ್ನು ನೋಡಿದರೆ ನಮ್ಮ ರಾಜಕೀಯ ಪಕ್ಷಗಳ ನಾಯಕರೂ ನಾಚಿಕೊಂಡಾರು!
ಈ ಚುನಾವಣೆಯಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಪ್ರತಿ ತಾಲೂಕಿನಲ್ಲಿಯೂ ೧೦೦ ರಿಂದ ೧೫೦ ಕುಲಗೆಟ್ಟ ಮತಗಳು ಕಂಡು ಬಂದಿವೆ. ಕೋಲಾರ ಜಿಲ್ಲೆಯೊಂದರಲ್ಲಿಯೇ ೬೦೦೪ ಶಿಕ್ಷಕರಲ್ಲಿ ೪೬೦ ಮತಗಳು ಕುಲಗೆಟ್ಟಿವೆ. (ಇದೇ ಅತಿ ಹೆಚ್ಚು) ಆದರೆ ಇದಕ್ಕೆ ರಾಜ್ಯ ಸರಕಾರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಗುರಿಕಾರ್ ಅವರು ‘ರಾಜ್ಯದ ಗಡಿ ಪ್ರದೇಶ ಹಾಗೂ ಇತರ ಭಾಷಾ ಶಾಲೆ ಶಿಕ್ಷಕರಿಗೆ ಕನ್ನಡದ ಅರಿವಿನ ಕೊರತೆಯಿದೆ. ಆ ಕಾರಣಕ್ಕೆ ಈ ರೀತಿಯ ಸಮಸ್ಯೆಯಾಗಿದೆ ಎನ್ನುತ್ತಾರೆ. ಅದೇನೇ ಇರಲಿ. ಇದು ಶಿಕ್ಷಕರ eನ ಮಟ್ಟವನ್ನೂ ಎತ್ತಿ ತೋರಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇದು ಪ್ರಜಾಪ್ರಭುತ್ವ. ಇಲ್ಲಿ ಎಲ್ಲರಿಗೂ ಹಕ್ಕುಗಳಿವೆ. ಅವುಗಳನ್ನು ರಕ್ಷಿಸಿಕೊಳ್ಳಲೇಬೇಕು. ಹಾಗಂತ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕಲ್ಲ. ಅಕಾರ ದರ್ಪಕ್ಕಲ್ಲ. ಶಿಕ್ಷಕರ ವರ್ತನೆಗಳು ಮಕ್ಕಳಿಗೆ ಆದರ್ಶ. ಅವರು ಹಸಿ ಗೋಡೆಗಳಂತೆ. ಯಾವುದನ್ನಾದರೂ ಸಲೀಸಾಗಿ ಸ್ವೀಕರಿಸುತ್ತಾರೆ. ಅವರ ಮುಂದಿರುವ ಆದರ್ಶ ಜೀವಿ ಒಬ್ಬನೇ, ಅದು ಶಿಕ್ಷಕ. ಆದರೆ ಇದನ್ನು ಮರೆತ ಇಂದಿನ ಬಹುತೇಕ ಶಿಕ್ಷಕರು ದೇಶ ಕಟ್ಟುವ ಉತ್ತಮ ಪ್ರಜೆಗಳನ್ನು ಸೃಷ್ಟಿಸುವ ಬದಲು ‘ಹೊಲಸು ರಾಜಕೀಯ’ಕ್ಕೆ ಹುರಿಯಾಳುಗಳನ್ನು ತಯಾರು ಮಾಡುತ್ತಿರುವಂತೆ ಕಾಣುತ್ತದೆ.
ಶಿಕ್ಷಕ ಹುದ್ದೆ ಕೇವಲ ಉದ್ಯೋಗವಲ್ಲ, ಅದೊಂದು ವಿಶೇಷ ಕರ್ತವ್ಯ. ಉತ್ತಮ ವ್ಯಕ್ತಿಗಳನ್ನು ಈ ದೇಶಕ್ಕೆ ತಯಾರು ಮಾಡುವ ಸುವರ್ಣಾವಕಾಶ. ಜಗತ್ತಲ್ಲಿ ಯಾರಿಗೂ ಸಿಗದ ಅಪರೂಪದ ಅವಕಾಶ. ಅದನ್ನು ಬಹುತೇಕರು ಮರೆತ ಹಾಗೆ ಕಾಣುತ್ತದೆ. ಇಂಥ ಅನುಮಾನಗಳಿಗೆ ಮೊನ್ನೆ ನಡೆದ ಚುನಾವಣೆ ಬಹಳಷ್ಟು ಕಡೆ ಎಡೆ ಮಾಡಿಕೊಟ್ಟಿದೆ.
ಜವಾಬ್ದಾರಿ ಮರೆತು ವರ್ತಿಸುವ ಶಿಕ್ಷಕರೇ ಇತ್ತೀಚೆಗೆ ಹೆಚ್ಚಾಗುತ್ತಿರುವುದರಿಂದ ಅವರ ಮೇಲೆ ಅನೇಕ ಆರೋಪಗಳು ಕೇಳಿಬರುತ್ತಲೇ ಇವೆ. ಅತ್ಯಾಚಾರವೂ ಸೇರಿದಂತೆ ಅನೇಕ ಕಳಂಕವನ್ನು ಹೊತ್ತ ಶಿಕ್ಷಕರು ರಾಜ್ಯ ಹಾಗೂ ರಾಷ್ಟ್ರಾದ್ಯಂತ ಕಾಣುತ್ತಿದ್ದಾರೆ. ಅವು ಗುಟ್ಟಾಗಿಯೂ ಉಳಿದಿಲ್ಲ. ಮಾಧ್ಯಮಗಳಲ್ಲಿ ಇಂಥ ಸುದ್ದಿಗಳು ಆಗಾಗ ಪ್ರಕಟವಾಗುತ್ತಲೇ ಇದ್ದರೂ ಕೆಲವು ಶಿಕ್ಷರು ಮಾತ್ರ ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಇದು ಈ ಕಾಲದ ಬಹುದೊಡ್ಡ ದುರಂತ.
ಶಿಕ್ಷಕರಿಗೆ ಸಮಸ್ಯೆಗಳಿವೆ ನಿಜ, ಆದರೆ ಅವುಗಳನ್ನು ಸರಕಾರದ ಅಥವಾ ಮೇಲಕಾರಿಗಳ ಮುಂದಿಟ್ಟು ಬಗೆಹರಿಸಿಕೊಳ್ಳಬಹುದು. ಆದರೆ ಅದಕ್ಕೆಂದು ಪಾಠ ಪ್ರವಚನಗಳನ್ನು, ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿ ಬೇಜವಾಬ್ದಾರಿಯಿಂದ ವರ್ತಿಸುವುದು ತರವಲ್ಲ.
ಯಥಾ ಗುರು ತಥಾ ಶಿಷ್ಯ ಎಂಬುದನ್ನು ಮರೆಯದೆ ಶಿಕ್ಷಕರು ವರ್ತಿಸುವುದನ್ನು ಕಲಿತರೆ ಈ ಸಮಾಜಕ್ಕೆ ಒಳ್ಳೆಯದು. ಇಲ್ಲದಿದ್ದರೆ ಅವರೇ ಸೃಷ್ಟಿಸಿದ ಬಲೆಯಲ್ಲಿ ಅವರೇ ಆಹುತಿಯಾಗುವುದು ನಿಶ್ಚಿತ.

Thursday, June 25, 2009

ಸಂಗೀತ ನಿರ್ದೇಶಕ ಹಂಸಲೇಖ ಜೊತೆ ಹಾಗೆ ಸುಮ್ಮನೆ...

ಕನ್ನಡ ಚಿತ್ರ ರಂಗದ ದಿಗ್ಗಜ, ಸಂಗೀತ ನಿರ್ದೇಶಕಹಂಸಲೇಖ ಅವರ ಜೊತೆ ಹಾಗೆ ಸುಮ್ಮನೆ ಮಾತಿಗಿಳಿದಾಗ... ಕೇಳಿದ ಕೆಲವು ಪ್ರಶ್ನೆಗಳು, ಅವುಗಳಿಗೆ ತುಂಬಾ ಜಾಣತನದಿಂದ ಅವ್ರು ನೀಡಿದ ಉತ್ತರಗಳು ಇಲ್ಲಿವೆ. ನೀವು ಹಾಗೆ ಸುಮ್ಮನೆ ಕಣ್ಣಾಯಿಸಿ....

.ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯಕಳವುಹೆಚ್ಚಾಗಿದ್ದೇಕೆ ?
*ಈಗ ಹೊಸ ಟ್ರೆಂಡ್ ಶುರುವಾಗಿದೆ. ಜಯಂತ ಕಾಯ್ಕಿಣಿ, ನಾಗೇಂದ್ರ ಪ್ರಸಾದ್‌ರಂಥ ಉತ್ತಮ ಸಾಹಿತಿಗಳು ಅತ್ಯುತ್ತಮ ಗೀತೆ ಬರೆಯುತ್ತಿದ್ದಾರೆ. ಕದ್ದು ಸಾಹಿತ್ಯ ಬರೆಯುವವರು ಸಾಹಿತಿಗಳೇ ಅಲ್ಲ, ಟೆಕ್ನಿಷಿಯನ್ಸ್. ಬೇರೆ ಯಾವುದೋ ಕಾರಣಕ್ಕೆ ಬಂದವರು. ಆದರೆ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ರೀಮೇಕ್ ಹಾಗೂ ಕದಿಯುವ ಸಾಹಿತ್ಯವನ್ನು ಮೊದಲಿನಿಂದಲೂ ನಾನು ವಿರೋಸಿದ್ದೇನೆ.
.ಹಿಂದಿನ ಹಂಸಲೇಖ ಎಲ್ಲೋದರು ?
*ಇಲ್ಲ, ನಾನು ಇನ್ನೂ ನನ್ನ ಟ್ರೆಂಡ್‌ನಲ್ಲಿದ್ದೇನೆ. ಕೆಲವರು ಹೊಸ ಟ್ರೆಂಡ್‌ನಲ್ಲಿದ್ದಾರೆ. ಆಗ ಪ್ರೇಮ, ಯುಗಳ ಗೀತೆಗಳೇ ಹೆಚ್ಚಾಗಿದ್ದವು. ರವಿಚಂದ್ರನ್ ಹಾಗೂ ನನ್ನದು ಒಂದು ಕಮರ್ಷಿಯಲ್ ಕಾಂಬಿನೇಷನ್ ಅಷ್ಟೇ. ಅನಂತರವೂ ‘ನೆನಪಿರಲಿ’ವರೆಗೆ ಒಳ್ಳೆ ಗೀತೆ ನೀಡಿದ್ದೇನೆ, ಜನ ಒಪ್ಪಿದ್ದಾರೆ. ಆ ಕಾರಣಕ್ಕಾಗಿಯೇ ನಾನು ಇನ್ನೂ ಚಿತ್ರರಂಗದಲ್ಲಿ ಜೀವಂತವಾಗಿದ್ದೇನೆ.
.ಈಗಿನ ಕನ್ನಡ ಸಿನಿಮಾರಂಗ ಹೇಗೆನಿಸುತ್ತದೆ ?
*ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಇದು ಪುಣ್ಯ ಕಾಲ; ಜತೆಗೆ ಅಂಜಿಕೆ ಹುಟ್ಟಿಸುವ ಕಾಲ! ಚಿತ್ರರಂಗ ಸ್ವಂತ ಕಾಲ ಮೇಲೆ ನಿಲ್ಲಲು ಹಣ ಬೇಕಿತ್ತು. ಅದನ್ನು ಕಳೆದ ಏಳೆಂಟು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ತಂದು ಸುರಿದಿದ್ದಾರೆ. ಆ ಮೂಲಕ ನೆಲೆ ಒದಗಿಸಿಕೊಟ್ಟಿದ್ದಾರೆ. ಆದರೆ ಅವರಿಗೆ ಗುಣಮಟ್ಟ ನೀಡಲು ಆಗಿಲ್ಲ. ಅದು ಅವರ ಕೆಲಸವೂ ಅಲ್ಲ. ಪ್ರಯೋಗಗಳಿಗೆ ಇದು ಪರ್ವ ಕಾಲ. ಭಾರತದ ಏಳು ರಾಜ್ಯಗಳಲ್ಲಿ ಪ್ರಾದೇಶಿಕ ಚಿತ್ರರಂಗ ನೆಲಕಚ್ಚಿದೆ. ಆದರೆ ಕನ್ನಡದಲ್ಲಿ ನೆಲೆ ನಿಂತಿದೆ. ಅದೊಂದೇ ಅವರಿಂದ ಆದ ಉಪಯೋಗ.
.ಪಾಶ್ಚಾತ್ಯ ಸಂಸ್ಕೃತಿ ಚಿತ್ರ ಸಾಹಿತ್ಯದ ಮೇಲೆಷ್ಟು ಪರಿಣಾಮ ಬೀರಿದೆ ?
*ನಮ್ಮ ಬಂಗಾರವನ್ನು ನಾವೇ ನವೀಕರಿಸಬೇಕು, ಎಸೆಯಬಾರದು. ಜಾಗತಿಕ ಪ್ರತಿರೋಧವನ್ನು ಎದುರಿಸುವ ಎದೆಗಾರಿಕೆ, ಲಯ ನಮ್ಮಲ್ಲಿ ಹುಟ್ಟಬೇಕು. ನಮ್ಮ ದೇಸೀತನ ದೊಡ್ಡದಾಗಿ ಎದ್ದೇಳಬೇಕು. ಬುದ್ಧಿವಂತ ನಿರ್ದೇಶಕರು ನಾಯಕರ ಮಾತು ಕೇಳದೆ, ಕಥೆಯ ಮತ್ತು ಹೃದಯದ ಮಾತು ಕೇಳಬೇಕು. ಆಗ ಮತ್ತೊಂದು ಸುವರ್ಣಯುಗ ಬರುವುದರಲ್ಲಿ ಅಚ್ಚರಿಯಿಲ್ಲ.
.ದೇಸೀ ವಿದ್ಯಾಸಂಸ್ಥೆ ಸ್ಥಾಪನೆಯ ಉದ್ದೇಶ ?
*ಇದು ನನ್ನ ಪಾರ್ಟ್ ಆಫ್ ಜಾಬ್. ಕಲೆ ಇಷ್ಟು ವರ್ಷ ನನಗೆ ಗೌರವ, ಪುರಸ್ಕಾರ ತಂದುಕೊಟ್ಟಿದೆ. ಅದನ್ನು ಈಗ ಶಿಕ್ಷಣದ ಮೂಲಕ ಮರಳಿಸಬೇಕಿದೆ. ನಮ್ಮ ವಿ.ವಿಗಳು ೫೦ ವರ್ಷಗಳಿಂದ ದೇಸೀ ವಿಮರ್ಶಕರು, ಪಂಡಿತರನ್ನು ಸೃಷ್ಟಿಸಿವೆ. ಆದರೆ ದೇಸೀ ಕಲಾವಿದರನ್ನು ಹುಟ್ಟು ಹಾಕಿಲ್ಲ. ದೇಸೀಯತೆ ನಮ್ಮ ರಕ್ತದಲ್ಲಿದೆ. ಆದ್ದರಿಂದ ಶಿಕ್ಷಣದ ಮೂಲಕ ಕಲೆ, ಕಲೆ ಮೂಲಕ ಶಿಕ್ಷಣ ನೀಡಿ ದೇಸೀಯ ಕಲಾವಿದರನ್ನು ಹುಟ್ಟು ಹಾಕುವ ಸಲುವಾಗಿ ಈ ವಿದ್ಯಾಸಂಸ್ಥೆ ಸ್ಥಾಪಿಸಿದ್ದೇನೆ.

Thursday, June 18, 2009

ಶಿಕ್ಷರೆ ಇದು ಸರಿಯ...?

ಮಕ್ಕಳಿಗೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಹಾಗೂ ಗುಣವಂತರಾಗಲು ಬುದ್ದಿ ಹೇಳಬೇಕಾದ ಶಿಕ್ಷಕರೇ ಈಗ ಬುದ್ದಿ ಹೇಳಿಸಿಕೊಳ್ಳುವಂತಾಗಿದ್ದಾರೆ. ಮೊನ್ನೆ ನಡೆದ ಶಿಕ್ಷಕರ ಸಂಘದ ಚುನಾವಣೆಯೇ ಅದಕ್ಕೆ ಪ್ರತ್ಯಕ್ಷ ನಿದರ್ಶನ... ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರಾದ ಬಸವರಾಜ ಗುರಿಕಾರ್, ಅವರ ಜತೆ ನಡೆಸಿದ ಸಂದರ್ಶನ ನಿಲ್ಲಿದೆ... ಅವರು ಏನೆನ್ನುತ್ತಾರೆ ನೀವೇ ನೋಡಿ...

೧.ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗುಂಪು ರಾಜಕೀಯವೇಕೆ?
*ಗುಂಪುಗಾರಿಕೆಯಿಲ್ಲ, ಇದು ಚುನಾವಣೆಗಾಗಿ ಮಾತ್ರ. ಪ್ರತಿ ತಾಲೂಕಿನಿಂದ ಐವತ್ತು ಶಿಕ್ಷಕರಿಗೆ ಒಬ್ಬರಂತೆ ತಾಲೂಕು ಪ್ರತಿನಿಗಳನ್ನು ಆಯ್ಕೆ ಮಾಡಬೇಕಿದೆ. ಅದಕ್ಕಾಗಿ ಈಗ ಚುನಾವಣೆ ನಡೆದಿದೆ. ಮುಂದೆ ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ಪದಾಕಾರಿಗಳ ಆಯ್ಕೆ ನಡೆಯುತ್ತದೆ. ಚುನಾವಣೆ ಮುಗಿದ ನಂತರ ಎಲ್ಲ ಶಿಕ್ಷಕರೂ ಒಂದೇ ರೀತಿ. ಶಿಕ್ಷಕರ ಮೊದಲ ಪ್ರಾಧಾನ್ಯತೆ ಪಾಠ. ಹೀಗಾಗಿ ಚುನಾವಣೆ ಸಮಯದಲ್ಲಿ ಅದು ಮೇಲು ನೋಟಕ್ಕೆ ಹಾಗೆ ಕಾಣುತ್ತದೆ.
೨.ಶಿಕ್ಷಕರ ಇತ್ತೀಚಿನ ನಡವಳಿಕೆಗಳು ಹೇಗನಿಸುತ್ತವೆ?
*ಶಿಕ್ಷಕರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಆದರೆ ಅವರಿಗೆ ಸೌಲಭ್ಯಗಳಿಲ್ಲ. ಶಾಲೆಗಳಲ್ಲಿ ಕುಡಿಯುವ ನೀರಿನ ಸವಲತ್ತುಗಳಿಲ್ಲ, ನಲ್ಲಿ ಸಂಪರ್ಕ ಇದ್ದರೂ ನೀರು ಬರುವುದಿಲ್ಲ. ಇದರಿಂದ ಶೌಚಾಲಯಗಳು ಉಪಯೋಗಕ್ಕೆ ಬರುತ್ತಿಲ್ಲ. ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕು. ಪ್ರತಿ ಶಾಲೆಗೊಂದರಂತೆ ಬೋರ್‌ವೆಲ್ ಕೊರೆಸುವುದು ಒಳಿತು. ಸ್ಥಳೀಯ ಮಟ್ಟದಲ್ಲಿ ಶೇ.೧ರಷ್ಟು ಮಾತ್ರ ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಸಂಘ ಬೆಂಬಲಿಸುವುದಿಲ್ಲ. ಆದರೆ ಅವುಗಳನ್ನೇ ಮುಂದಿಟ್ಟುಕೊಂಡು ಕೆಲವರು ಶಿಕ್ಷಕ ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸಲ್ಲದು.
೩.ಪ್ರಾಥಮಿಕ ಶಿಕ್ಷಕರ ಇತ್ತೀಚಿನ ಸಮಸ್ಯೆಗಳೇನು?
*ಶಿಕ್ಷಕ ಕೂಡ ಸಾಮಾನ್ಯ ಪ್ರಜೆ, ನಮಗೂ ನಮ್ಮದೇ ಆದ ಸಮಸ್ಯೆಗಳಿವೆ. ಆದರೆ ಅವುಗಳನ್ನು ಮರೆತು ಮಕ್ಕಳು ದೇವರೆಂದು ಭಾವಿಸಿ ಪಾಠ ಮಾಡುತ್ತೇವೆ. ಆದರೆ ಇತ್ತೀಚೆಗೆ ಬೋಧನೆ ಮಾಡುವ ಶಿಕ್ಷಕನಿಗೆ ಅದಕ್ಕಿಂತ ಬೇರೆ ಕೆಲಸಗಳೇ ಹೆಚ್ಚಾಗುತ್ತಿವೆ. ಸರಕಾರ ೪ನೇ ದರ್ಜೆಯ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಇದರಿಂದ ಎಲ್ಲ ಕೆಲಸಗಳನ್ನು ಶಿಕ್ಷಕರೇ ಮಾಡಿಕೊಳ್ಳಬೇಕಿದೆ. ಕಾಗದ ಪತ್ರ ತಯಾರಿಕೆ ಸೇರಿದಂತೆ ಇತರ ಕೆಲಸಗಳೇ ಹೆಚ್ಚು ಹೊರೆಯಾಗುತ್ತಿವೆ. ಇದೆಲ್ಲದರ ನಡುವೆ ಶಿಕ್ಷಕ ತನ್ನ ಚೌಕಟ್ಟನ್ನು ಮೀರದೆ ಪಾಠ ಹೇಳಿಕೊಡುತ್ತಿದ್ದಾನೆ. ಇಲ್ಲಿ ಪೋಷಕರೂ ಮಕ್ಕಳ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಎಸ್‌ಡಿಎಂಸಿಗಳಿಂದ ಅನುಕೂಲಗಳಾಗಿವೆ. ಆದರೆ ಕೆಲವೆಡೆ ಹಸ್ತಕ್ಷೇಪವೂ ಇದೆ. ಅದು ನಿಲ್ಲಬೇಕು. ಶಿಕ್ಷಕರನ್ನು ಬೇರೆ ಕೆಲಸಗಳಿಂದ ವಿಮುಕ್ತಿಗೊಳಿಸಿ, ಮುಕ್ತವಾಗಿ ಪಾಠ ಮಾಡಲು ಅವಕಾಶ ನೀಡಬೇಕು.
೪.ಸಂಯುಕ್ತ ಪ್ರೌಢ ಶಾಲಾ ವ್ಯವಸ್ಥೆಯನ್ನು ರದ್ದುಗೊಳಿಸಲು ಕಾರಣ ?
*ಅದು ತುಂಬಾ ಅವೈeನಿಕ ವ್ಯವಸ್ಥೆ. ಪ್ರೌಢಶಾಲೆ ವಿದ್ಯಾರ್ಥಿಗಳು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಒಂದೇ ಕಡೆ ವಿದ್ಯಾಭ್ಯಾಸ ಮಾಡಬೇಕಿತ್ತು. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಅದನ್ನು ರದ್ದುಗೊಳಿಸುವ ಮೂಲಕ ಮಕ್ಕಳ ಶಿಕ್ಷಣದ ಹಾದಿಯನ್ನು ಸುಗಮಗೊಳಿಸಿದ್ದೇವೆ.
೫.ನಿಮ್ಮ ಇದೂವರೆಗಿನ ಅಕಾರವಯ ಕೆಲಸ ತೃಪ್ತಿ ತಂದಿದೆಯೇ?
*ಹೌದು, ನೆರೆಯ ರಾಜ್ಯಗಳಲ್ಲಿ ಹಾಗೂ ಕೇಂದ ಸರಕಾರಿ ಪ್ರಾಥಮಿಕ ಶಿಕ್ಷಕರಿಗೂ ರಾಜ್ಯ ಶಿಕ್ಷರಿಗೂ ಬಹಳ ವ್ಯತ್ಯಾಸವಿತ್ತು. ಸರಕಾರದ ಮೇಲೆ ಒತ್ತಡ ಹೇರಿ ನನ್ನ ಅವಯಲ್ಲಿ ೫ನೇ ವೇತನ ಆಯೋಗದಂತೆ ಆರಂಭಧ ವೇತನವನ್ನು ೬,೮೦೦ ರೂ.ಗಳಿಂದ ಹಾಗೂ ಅಂತಿಮ ವೇತನವನ್ನು ೧೩,೦೦೦ರೂ. ವರೆಗೆ ಹೆಚ್ಚಿಸಲು ಶ್ರಮಿಸಿದ್ದೇವೆ. ೨೦೦ರೂ. ವಿಶೇಷ ವೇತನ ಜಾರಿಗೊಳಿಸಲು ವ್ಯವಸ್ಥೆ ಮಾಡಿದ್ದೇವೆ. ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ೭೪೧೬ ಹುದ್ದೆಗಳು ಮಂಜೂರು ಮಾಡಿಸಿದ್ದೇವೆ.

Tuesday, June 2, 2009

ಎಲ್ಲಿದೆಯೋ ನ್ಯಾಯ....? ಅಣ್ಣಾ...

ಬೆಂಗಳೂರಿನಲ್ಲಿ ಅದೇ ಹಳೇ ಪ್ರವೃತ್ತಿ ಮುಂದುವರಿದಿದೆ. ಹೈಟೆಕ್ ಸಿಟಿ, ಐಟಿ ಬಿಟಿ ಕೇಂದ್ರ ಎಂದೆಲ್ಲ ನಮ್ಮನ್ನು ನಾವೇ ಬೆನ್ನು ತಟ್ಟಿಕೊಳ್ಳುತ್ತಿದ್ದರೂ ಇಲ್ಲಿ ಇನ್ನೂ ಮೂಲ ಸವಲತ್ತುಗಳು ದೊರೆಯುವುದು ಕನಸಾಗಿಯೇ ಉಳಿದಿದೆ. ಇದಕ್ಕೆ ಪ್ರಮುಖ ಕಾರಣ ಜನಪ್ರತಿನಿಗಳು ಎಂದು ನೇರವಾಗಿಯೇ ಹೇಳಬಹುದು.
ಮೊನ್ನೆ ಮಾಯಾನಗರದಲ್ಲಿ ಬಿದ್ದ ಮಳೆಗೆ ತಾಯಿಯ ಕೈ ಅಂಚಿನಲ್ಲಿದ್ದ ಎಳೆಯ ಕರುಳ ಕುಡಿಯೊಂದು ಕಣ್ಣೆದುರೇ ಲಿಂಗರಾಜಪುರದ ಮೋರಿಯಲ್ಲಿ ಕೊಳಚೆ ನೀರುಪಾಲಾಗಿದೆ! ಆ ಹೆತ್ತಮ್ಮನ ಆರ್ತನಾಧ ಮುಗಿಲು ಮುಟ್ಟಿದೆ. ಆದರೆ ಮೂರು ದಿನವಾದರೂ ಆ ಮಗುವನ್ನು ಹುಡುಕುವಲ್ಲಿ ಇಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ವಿಫಲವಾಗಿದೆ.
ಸ್ಥಳೀಯ ಜನರು ಮಗುವಿಗಾಗಿ ನಡೆಸಿದಷ್ಟೂ ಶೋಧವನ್ನು ನುರಿತ, ಪರಿಣಿತ ಅಕಾರಿಗಳು ನಡೆಸದಿರುವುದು, ಸ್ಥಳಕ್ಕೆ ತೆರಳಿ ಹೆತ್ತ ಕರುಳಿಗೆ ಸಾಂತ್ವನ ಹೇಳಲೂ ಪುರುಸೊತ್ತಿಲ್ಲದ ಮುಖ್ಯಮಂತ್ರಿ ಹಾಗೂ ಸಚಿವರ ನಡವಳಿಕೆ ನಿಜಕ್ಕೂ ನಾಚಿಕೆಗೇಡು. ‘ಅಕಾರದ ಕೊಳಕು ಚರಂಡಿ’ಯಲ್ಲಿ ಅಸ್ತಿತ್ವಕ್ಕಾಗಿ ಒದ್ದಾಡುತ್ತಿರುವ ಜನಪ್ರತಿನಿಗಳಿಗೆ ಮುಗ್ದ ಮಗು ಅಭಿಷೇಕ್‌ನ ಸಾವಾಗಲಿ, ಅವನ ತಾಯಿಯ ಕರುಳಿನ ಕೂಗಾಗಲಿ ಎಲ್ಲಿ ಕೇಳಿಸುತ್ತದೆ?
ಮೊನ್ನೆ ಮೊನ್ನೆಯಷ್ಟೇ ‘ದಾಖಲೆ ಪ್ರಮಾಣದ ತೆರಿಗೆ ಸಂಗ್ರಹ’ ಮಾಡಿದ್ದೇವೆ ಎಂದು ಬೀಗುತ್ತ ಪ್ಯಾಲೇಸ್ ಗ್ರೌಂಡ್‌ನಲ್ಲಿ ಕಂಠಪೂರ್ತಿ ಮಾಡು ತಿಂದು, ಕುಡಿದು, ತೇಗಿರುವ ಅಕಾರಿಗಳಿಗೆ ಇನ್ನೂ ಅದರ ಕಮಟು ಇಳಿದಿಲ್ಲ; ಅಮಲಿನ್ಲಿಯೇ ತೇಲಾಡುತ್ತಿದ್ದಾರೆ. ಅದಕ್ಕಾಗಿಯೇ ಒಂದಿಡೀ ದಿನ ಚರಂಡಿಯಲ್ಲಿ ಕುಳಿತು ಮಗು ಸಿಗಲಿಲ್ಲ ಎಂದು ಎದ್ದು ಬಂದು ಕೈ ತೊಲೆದುಕೊಂಡರು. ಅನಾಹುತಗಳು ನಡೆದಾಗೆಲ್ಲ ನೆಪ ಮಾತ್ರಕ್ಕೆ ಪರಿಹಾರ ಘೋಷಿಸುವುದೊಂದೇ ‘ಸಾಧನೆ’ ಎಂದುಕೊಂಡಿರುವ ಅಕಾರಿಗಳು, ಜನಪ್ರತಿನಿಗಳಿಗೆ ಜನರೇ ಬುದ್ದಿ ಕಲಿಸಬೇಕು.
ಮಾನವೀಯತೆ ಮರೆತ ಸಿಎಂ:
ಮಗು ಚರಂಡಿಯಲ್ಲಿ ತೇಲಿ ಹೋಗಿದೆ ಎಂಬ ಬ್ರೇಕಿಂಗ್ ನ್ಯೂಸ್ ಎಲ್ಲ ಟಿವಿ ಚಾನೆಲ್‌ಗಳಲ್ಲೂ ನಿರಂತರವಾಗಿ ಪ್ರಸಾರವಾಗುತ್ತಲೇ ಇದೆ. ಆದರೆ ಮುಖ್ಯಮಂತ್ರಿ ಮಾತ್ರ ‘ಯಾತ್ರೆ’ಯಲ್ಲಿದ್ದಾರೆ! ಊರಿಗೆಲ್ಲಾ ಬೆಂಕಿ ಬಿದ್ದಾಗ ಅವನ್ಯಾವನೋ ಪಿಟೀಲು ಕೊಯ್ಯುತ್ತಿದ್ದನಂತೆ ಹಾಗೆ ಮುಖ್ಯಮಂತ್ರಿ ಎನಿಸಿಕೊಂಡ ‘ದೊರೆ’ ಬಿ.ಎಸ್.ಯಡಿಯೂರಪ್ಪ ಸಾಯಿಬಾಬಾ ಜತೆ ದರ್ಭಾರಿನಲ್ಲಿದ್ದರು. ಪತ್ನಿ ಸತ್ತಾಗಲೇ ಕಣ್ಣೀರು ಸುರಿಸದ ಕರುಣೆಯಿಲ್ಲದ ವ್ಯಕ್ತಿ ಕರುನಾಡಿಗೆ ಮುಖ್ಯಮಂತ್ರಿ(ಕೆಲವರು ಅವನೇ ಕೊಂದಿದ್ದು ಎನ್ನುತ್ತಾರೆ!?).
ಪರಿಹಾರವೇ ಎಲ್ಲವನ್ನೂ ನಿವಾರಿಸಿ ಬಿಡುತ್ತದಾ? ಒಂದು ಮುಗ್ದ ಮಗುವಿನ ಸಾವಿನ ಬೆಲೆ ಕೇಲವ ಒಂದು ಲಕ್ಷ ರೂಪಾಯಿಗೆ ಮಾತ್ರ ಸೀಮಿತವಾ? ಇದೇ ಒಬ್ಬ ಜನಪ್ರತಿನಿಗಿರುವ ನಿಜವಾದಾ ಲಕ್ಷಣವಾ...? ಕಳಕಳಿಯಾ...?

Tuesday, May 26, 2009

ಮಗ್ಗಲು ಬದಲಿಸಲಿ ಅಭಿವೃದ್ಧಿಯ ಪರಿಕಲ್ಪನೆ

ಅಭಿವೃದ್ಧಿ! ಈ ಪದ ಕೇಳಿದಾಗಲೆಲ್ಲ ಜನ ಬೆಚ್ಚಿ ಬೀಳುವಂತಾಗುತ್ತಿದೆ. ಎಲ್ಲವನ್ನೂ ಅನುಮಾನದಿಂದ ನೋಡುವ ಪರಿಪಾಠ ಬೆಳೆಯುತ್ತಿದೆ. ಸರಕಾದಿಂದ ಯಾವುದೇ ಅಭಿವೃದ್ಧಿ ಯೋಜನೆಗಳೇ ಜಾರಿಯಾಗುವುದು ಬೇಡ ಎನ್ನು ಮಟ್ಟಿಗೆ ಭಯ ಜನ ಸಾಮಾನ್ಯರನ್ನು ಕಾಡುತ್ತಿದೆ.
ಇವತ್ತು ಯಾವುದೇ ಸರಕಾರಗಳು ಅಸ್ತಿತ್ವಕ್ಕೆ ಬರಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತವೆ. ಅದನ್ನೇ ಬಂಡವಾಳ ಮಾಡಿಕೊಂಡು ಅಕಾರದ ಗದ್ದುಗೆ ಏರುತ್ತವೆ. ಆದರೆ ಒಬ್ಬೊಬ್ಬರು ಒಂದು ರೀತಿಯ ಮುಖವಾಡ ಧರಿಸುತ್ತಾರೆ ಅಷ್ಟೆ. ಕಾರಣ ಇಷ್ಟೆ , ಎಲ್ಲರೂ ಏಳಿಗೆಯನ್ನು ಬಯಸುತ್ತಾರೆ. ತಮ್ಮ ಈ ‘ಮಂತ್ರ’ಕ್ಕೆ ತಲೆದೂಗಲೇಬೇಕು ಎಂಬುದು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವುದಾದರೂ ಏನು? ಒಮ್ಮೆ ತುಂಬಾ ಸೂಕ್ಷ್ಮವಾಗಿ ತುಲನೆ ಮಾಡಿ ನೋಡಿದರೆ ಪ್ರeವಂತರಾದ ಎಂಥವರಿಗೂ ಭಯ ಕಾಡದೆ ಇರದು.
ರಾಜ್ಯ ಅಥವಾ ಕೇಂದ್ರ ಸರಕಾರ ಒಂದೇ ಒಂದು ಸಣ್ಣ ರಸ್ತೆಯ ಅಭಿವೃದ್ಧಿಕೆ ಕೈ ಹಾಕಿದರೆ ಅಲ್ಲಿ ನೂರಾರು ಮರಗಳ ಮಾರಣ ಹೋಮ ನಿಶ್ಚಿತ. ಇನ್ನು ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡರೆ ಪರಿಸ್ಥಿತಿ ಊಹಿಸಲಸಾಧ್ಯ. ಒಂದು ಮರದ ಕೊಂಬೆಯನ್ನು ಕಡಿಯಲು ಗುತ್ತಿಗೆದಾನಿಗೆ ಪರವಾನಗಿ ನೀಡಿದರೆ ಇಲ್ಲಸಲ್ಲದ ಸಬೂಬು ಹೇಳಿ ಅವನು ಇಡೀ ಮರವನ್ನೇ ಕಡಿದು ಮನೆಗೆ ಸಾಗಿಸಿಬಿಡುತ್ತಾನೆ. ಆದರೆ ಅದರ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಸರಕಾರಗಳಿಗೆ ಅಭಿವೃದ್ಧಿ ಎಂದರೆ ಗೊತ್ತಿರುವುದು ಒಂದೇ ಪರಿಸರವನ್ನು ನಾಶ ಮಾಡಿ ಕಾಂಕ್ರೀಟ್ ಕಾಡು ನಿರ್ಮಾಣ ಮಾಡುವ ಕಲೆ. ಇದರಲ್ಲಿ ಈಗ ಎಲ್ಲ ಮಂತ್ರಿ ಮಹೋದಯರೂ ಕಲಾಕಾರರು. ಕಾರಣ ಮೇಲು ನೋಟಕ್ಕೆ ಅಲ್ಲಿ ಅಭಿವೃದ್ಧಿಯ ಹೆಸರಿದ್ದರೂ ಒಳಗಡೆ ಸ್ವಾರ್ಥ ಭರತನಾಟ್ಯವಾಡುತ್ತಿರುತ್ತದೆ. ಯಾವುದೇ ಅಭಿವೃದ್ಧಿಗೆ ಕೈ ಹಾಕಿದರೂ ಅಲ್ಲಿ ಮರಗಳನ್ನು ಕಡಿಯಲೇ ಬೇಕೆಂಬುದು ಇವರ ಮೂಲ ಮಂತ್ರ. ಕಾಮಗಾರಿಯಿಂದ ಶೇಕಡಾವಾರು ಹಣ ಬರುವುದು ಒಂದೆಡೆಯಾದರೆ ಮರ ಕಡಿಯುವವರು, ಸಿಮೆಂಟ್, ಇಟ್ಟಿಗೆ, ಕಬ್ಬಿಣ ಮುಂತಾದ ಅಗತ್ಯ ಮೂಲ ವಸ್ತುಗಳ ಸರಬರಾಜು ಮಾಡುವ ಗುತ್ತಿಗೆದಾರರಿಂದ ಮಾಮೂಲಿ ವಸೂಲಿ ಮಾಡುವುದು ಇವರ ಎರಡಂಶದ ಕಾರ್ಯಕ್ರಮ. ಇದೆಲ್ಲ ಅವರಿಗೆ ವರ‘ದಾನ’.
ಯಾವುದೇ ಸರಕಾರ ಅಥವಾ ಮಂತ್ರಿಗಳು ಅಭಿವೃದ್ಧಿ ಯೋಜನೆಗೆ ಕೈ ಹಾಕಿದರೆ ಅವರ ಜೇಬು ತುಂಬುವುದು ಶತಸಿದ್ಧ. ಆದರೆ ಅಸಲಿಗೆ ಅಭಿವೃದ್ಧಿ ಎಂದರೇನು ಎಂಬ ಪರಿಕಲ್ಪನೆಯೇ ಯಾರಿಗೂ ಇಲ್ಲ. ಮಾತಿಗಿಳಯುವ ಮುನ್ನ ಮರಗಳ ಮಾರಣ ಹೋಮ ಮಾಡುತ್ತಾರೆ. ಆದರೆ ಯಾರೊಬ್ಬರೂ ಒಂದೇ ಒಂದು ಸಣ್ಣ ಗಿಡವನ್ನು ಬೆಳೆಸಲು ಯೋಜನೆ ರೂಪಿಸುವುದಿಲ್ಲ!
ರಾಜ್ಯದಲ್ಲಿ ಈ ಬಾರಿ ಶೇ.೪೦ ಕಬ್ಬು ಉತ್ಪನ್ನ ಕುಸಿತ ಕಂಡಿದೆ. ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ದೇಶದಲ್ಲಿ ೩೦ ಕೋಟಿ ಜನರಿಗೆ ಮಾನ ಮುಚ್ಚಿಕೊಳ್ಳಲು ಬಟ್ಟೆಯಾಗಲಿ, ಹೊಟ್ಟೆಗೆ ಹಿಟ್ಟಾಗಲಿ ಇಲ್ಲ. ೧೫ಸಾವಿರ ಮಹಿಳೆಯರು ಪ್ರತೀ ವರ್ಷ ವರದಕ್ಷಣೆಯೆಂಬ ಕ್ರೂರಮೃಗಕ್ಕೆ ಬಲಿಯಾಗುತ್ತಲೇ ಇದ್ದಾರೆ. ೧೬ ಕೋಟಿ ದಲಿತರು ಮಾನವ ಗೌರವ ವಂಚಿತ ಬದುಕು ಸಾಗಿಸುತ್ತಿದ್ದಾರೆ. ೨ ಲಕ್ಷ ಮಂದಿ ತಮಗೆ ಅನ್ಯಾಯವಾಗಿದ್ದರೂ ದುಬಾರಿ ನ್ಯಾಯದಿಂದಾಗಿ ನ್ಯಾಯ ವಂಚಿತರಾಗಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಸಾವಿರಾರು ಬುಟಕಟ್ಟು ಸಮುದಾಯಗಳ ಗ್ರಾಮಗಳಿಗೆ ಮೂಲ ಸೌಲತ್ತುಗಳೇ ಇಲ್ಲ. ಇಂಥ ಯಾವುದೇ ವಿಚಾರಗಳು ನಮ್ಮ ಸರಕಾರಗಳಿಗೆ, ಮಂತ್ರಿಗಳಿಗೆ ಅಭಿವೃದ್ಧಿ ಎನಿಸುವುದೇ ಇಲ್ಲ.
ಇಂಥ ನಿಲುವುಗಳು ಒಂದೆಡೆಯಾದರೆ ಅಭಿವೃದ್ಧಿಯ ಹೆಸರಿನಲ್ಲಿ ಇದ್ದ ಸವಲತ್ತುಗಳನ್ನೂ ಕಸಿದುಕೊಂಡು ಅಮಾಯಕರನ್ನು ಬೀದಿಗೆ ಬಿಸಾಕುವ ವ್ಯವಸ್ತೆ ಇನ್ನೊಂದೆಡೆ. ಇವುಗಳಿಂದಾಗಿ ಜನ ಸಾಮಾನ್ಯರು ನಲುಗುತ್ತಿದ್ದರೂ ಅವುಗಳನ್ನು ಕೇಳುವವರಿಲ್ಲ.
ಈ ಸರಕಾರಿ ವ್ಯವಸ್ಥೆ ರೂಪಿಸುವ ಯಾವುದೇ ಯೋಜನೆಗಳಿಗೆ ಜನ ಸಾಮಾನ್ಯರಿಂದ ವಿರೋಧ ವ್ಯಕ್ತವಾಗದೆ ಇರುವುದು ಇಲ್ಲವೇ ಇಲ್ಲ. ಆದರೂ ಜನಪ್ರತಿನಿಗಳಿಗೆ ಇಂಥ ‘ಅಭಿವೃದ್ಧಿ’ ಬೇಕು!! ಈ ವಿಚಾರದ ಬಗ್ಗೆ ಮಾತನಾಡುವಾಗ ಮೊನ್ನೆಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಜನ ತಮ್ಮ ಪಕ್ಷವನ್ನು ಬೆಂಬಲಿಸಲಿಲ್ಲ ಎಂಬ ಕಾರಣಕ್ಕೆ ‘ನಾನು ಬೆಂಗಳೂರು ಅಭಿವೃದ್ಧಿಗೆ ಎಷ್ಟೊಂದು ಶ್ರಮಿಸಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆ ಮಾಡಿದೆ. ಸಾಕಷ್ಟು ಕಡೆ ಆಧಾಯ ಬರುವಂತೆ ಮಳಿಗೆಗಳನ್ನು ನಿರ್ಮಾಣ ಮಾಡಿದೆ. ಆದರೆ ಜನ ನನ್ನನ್ನು ಮರೆತರು. ಅದು ತುಂಬಾ ನೋವುಂಟು ಮಾಡಿದೆ’ ಎಂದು ಅಳಲು ತೋಡಿಕೊಂಡಿದ್ದು ನೆನಪಾಗುತ್ತದೆ. ಒಬ್ಬ ರಾಜಕಾರಣಿಯ ದೃಷ್ಟಿಯಲ್ಲಿ ನಗರದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡುವುದು ಅಭಿವೃದ್ಧಿ! ಆದರೆ ಜನ ಸಾಮನ್ಯನ ದೃಷ್ಟಿಯಲ್ಲಿ? ಈ ಪ್ರಶ್ನೆಗೆ ಉತ್ತರ ಹುಡುಕುವವರೆ ಇಲ್ಲವಾಗಿದೆ.
ಶತಮಾನಗಳ ಹಿಂದೆ ಶಿವಮೊಗ್ಗದಲ್ಲಿ ಲಿಂಗನಮಕ್ಕಿ, ಚಕ್ರ ಸಾವೆ ಹಕ್ಲು ಡ್ಯಾಂಗಳನ್ನು ಕಟ್ಟಲು ಸರಕಾರ ಹತ್ತಾರು ಕುಗ್ರಾಮಗಳನ್ನು ಒಕ್ಕಲೆಬ್ಬಿಸಿತು. ಅದಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆಲ್ಲ ಪರಿಹಾರದ ಆಮಿಷ ತೋರಿಸಿತು. ಕೊನೆಗೂ ಸರಕಾರವೇ ಗೆದ್ದಿತು. ಅಲ್ಲಿನ ಮಲೆನಾಡ ಜನ ತಾವು ಆಡಿ ಬೆಳೆದ, ಮನೆ, ಹೊಲ, ಪರಿಸರವನ್ನೆಲ್ಲ ಬಿಟ್ಟು ಬಂದರು. ಇವತ್ತು ಅದು ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಆದರೆ ಇವತ್ತಿಗೂ ಪರಿಹಾರವೆಂಬುದು ಮರೀಚಿಕೆ. ಕೊನೆಗೂ ಸೂತಿದ್ದು ಜನರೆ.
ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವಾಗಲೂ ವ್ಯಾಪಕ ವಿರೋಧ ವ್ಯಕ್ತವಾಯಿತು. ಆದರೆ ಅಲ್ಲೂ ಜನ ಸೋತರು. ಅಲ್ಲಿ ಕೂಡ ಬಹುತೇಕ ಜನರಿಗೆ ಪರಿಹಾರ ಕನಸಾಗಿಯೇ ಉಳಿದಿದೆ.
ಪಶ್ಚಿಮ ಬಂಗಾಳದ ನಂದಿ ಗ್ರಾಮದಲ್ಲಿ ಇದೇ ವಿಚಾರದ ವಿರುದ್ಧ ಜನ ಗೆಲ್ಲಲು ತಿಂಗಳಾನುಗಟ್ಟಲೆ ಹೋರಾಟ ಮಾಡಿದ್ದಲ್ಲದೆ ಕೊನೆಗೆ ಹಿಂಸಾ ಮಾರ್ಗಕ್ಕೆ ಇಳಿಯಬೇಕಾಯಿತು. ಅಷ್ಟು ದೂರದ ಮಾತೇಕೆ ರಾಜ್ಯದ ಶಿವಮೊಗ್ಗ, ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ವಿಚಾರದಲ್ಲೂ ಆಗಿದ್ದು ಇದೇ. ಜನ ಎಷ್ಟೇ ವಿರೋಸಿದರೂ ಜನಪ್ರತಿನಿಗಳು ಮಾತ್ರ ತಮ್ಮ ಪಟ್ಟು ಬಿಡುವುದೇ ಇಲ್ಲ. ಅವರಿಗೆಲ್ಲ ಇದು ‘ಅಭಿವೃದ್ಧಿ’.
ಈಗ ಕೋಲಾರದಲ್ಲಿ ತೋಟಗಾರಿಕೆ ವಿವಿ ಸ್ಥಾಪನೆ ವಿಚಾರದಲ್ಲಿ ಆಗುತ್ತಿರುವುದೂ ಅದೇ. ೫೦೦ ಎಕರೆ ವಿಸ್ತೀರ್ಣವಿರುವ ಶ್ರೀನಿವಾಸಪುರದ ಹೊಗಳಗೆರೆ ಫಾರಂನ್ನು ವಿವಿ ಸ್ಥಾಪನೆಗಾಗಿ ಗುರುತಿಸಿದ್ದರೂ ಜಿಲ್ಲಾ ಕೇಂದ್ರಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದೆ ಎಂಬ ಕಾರಣಕ್ಕೆ ಕೇವಲ ೪೦ ಎಕರೆ ಇರುವ ಹಲಸು ತಳಿ ಅಭಿವೃದ್ಧಿ ಕ್ಷೇತ್ರದಲ್ಲಿಯೇ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸರಕಾರ ಚಿಂತನೆ ನಡೆಸುತ್ತಿದೆ. ಯಥಾ ಪ್ರಕಾರ ಇಲ್ಲೂ ಜನ ಬೀದಿಗಿಳಿದಿದ್ದಾರೆ.
ಡ್ಯಾಂ, ನದಿಜೋಡಣೆ, ವಿದ್ಯುತ್ ಉತ್ಪಾದನಾ ಘಟಕ, ವಿಶೇಷ ವಿತ್ತ ವಲಯ, ಕೇಗಾರಿಕೆ ಕೇಂದ್ರ ಹೀಗೆ ಯಾವುದೇ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡರೂ ಸರಕಾರದ ಕೈ ಹೋಗುವುದು ರೈತರ ಜಮೀನಿಗೇ. ಹೀಗಾಗಿಯೇ ಈಗ ಆಹಾರೋತ್ಪಾದನೆ ಹಾಗೂ ಆಹಾರ ಉತ್ಪನ್ನಗಳ ಖರ್ಚಿನಲ್ಲಿ ಸಾಕಷ್ಟು ಏರುಪೇರಾಗಿ ಬೆಲೆಗಳು ಗಗನಕ್ಕೇರಿವೆ.
ಅಭಿವೃದ್ಧಿ ಎಂದರೆ ಕೇವಲ ಮರ ಕಡಿಯುವುದು, ರೈತರು, ಬುಡಕಟ್ಟು ಜನರಂಥ ಅಮಾಯಕರನ್ನು ಒಕ್ಕಲೆಬ್ಬಿಸಿ ಅವರ ಆಸ್ತಿಪಾಸ್ತಿಗಳನ್ನು ನುಂಗಿ ನೀರುಕುಡಿಯುವುದೇ ಆದರೆ ಇದನ್ನು ಅಭಿವೃದ್ಧಿ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ? ಯಾವುದೇ ಒಂದು ಅಭಿವೃದ್ಧಿಯಿಂದ ಜನಸಾಮಾನ್ಯರು ನೆಮ್ಮದಿಯಿಂದ, ನಿಶ್ಚಿಂತರಾಗಿ ಬದುಕುವಂತಾಗಬೇಕೆ ಹೊರತು, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳುವಂತಾಗಬಾರದು.
ಈ ಪರಿಕಲ್ಪನೆ ಹೀಗೆಯೇ ಮುಂದುವರಿದರೆ ಉಸಿರಾಟಕ್ಕಾಗಿ ಬೇರೊಂದು ಕೃತಕ ಮಾರ್ಗ ಕಂಡುಕೊಳ್ಳಬೇಕಾದ ಪರಿಸ್ಥಿತಿಯನ್ನು ನಾವೇ ತಂದುಕೊಳ್ಳಬೇಕಾಗುತ್ತದೆ. ಹಸಿರು ಗಿಡ ಮರಗಳನ್ನು ಕೇವಲ ಚಿತ್ರಗಳಲ್ಲಿ ಮಾತ್ರ ಮುಂದಿನ ಪೀಳಿಗೆ ನೋಡುವಂಥ ಭಯಾನಕ ಪರಿಸ್ಥಿತಿಯನ್ನು ನಾವು ಸೃಷ್ಟಿಸಿಕೊಂಡಂತಾಗುತ್ತದೆ. ಹೀಗಾಗಿ ಈ ಪರಿಕಲ್ಪನೆಯನ್ನೇ ಬದಲಿಸುವ ತುರ್ತು ಅಗತ್ಯವಿದೆ. ನೀವೇನಂತೀರಿ....?
Powered By Blogger