Monday, April 20, 2009

ಎಚ್ಚರ ಮತದಾರರೆ ಎಚ್ಚರ!!

ಮತದಾರ ಪ್ರಭವೇ ನಮನ,
ನಿನಗೊಂದು ಖಾಸಗಿ ಪತ್ರ ಬರೆಯುವ ತುರ್ತು ಅಗತ್ಯವಿದೆ. ಚುನಾವಣೆ ಎದುರಾಗಿದೆ. ಹಣ ಕೋಡಿಯಾಗಿ ಹರಿಯುತ್ತಿದೆ. ಅದನ್ನು ಕೊಳ್ಳೆ ಹೊಡೆದವರ್‍ಯಾರು ? ಅದೆಲ್ಲ ಯಾರ ಹಣ ಎಂಬುದು ನಮ್ಮ ಚುನಾವಣೆ ಅಕಾರಿಗಳಿಗೆ ಸಷ್ಟವಾಗಿ ಗೊತ್ತು. ಆದರೆ ಯಾವುದೂ ಬಹಿರಂಗವಾಗಿಲ್ಲ.
ಇದೂವರೆಗೆ ಕರ್ನಾಟಕದಲ್ಲೇ ೧೬ ಕೋಟಿ ರೂ. ಅಕೃತವಾಗಿ ಪೊಲೀಸರ ವಶಕ್ಕೆ ಸಿಕ್ಕಿದೆ (ಅನಕೃತವಾಗಿ ?)೨.೭೫ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ಹಾಗೂ ಇತರ ವಸ್ತುಗಳು ಪತ್ತೆಯಾಗಿವೆ. ಇವೆಲ್ಲವೂ ಮತದಾರರಾದ ನಿಮ್ಮನ್ನು ಓಲೈಸಲು, ತಮ್ಮ ಕಡೆ ಸೆಳೆದುಕೊಳ್ಳಲು.
ಇವರೆಲ್ಲಾ ಇಂದು ನಿಮ್ಮ ಮನೆ ಬಾಗಿಲಿಗೆ ನಾಯಿಗಳಂತೆ, ಬಿಕ್ಷುಕರಂತೆ ಅಲೆಯುತ್ತಿದ್ದಾರೆ. ಅವರು ಕೊಡುವ ಹಣ, ಹೆಂಡ ಮತ್ತಿತರೆ ವಸ್ತುಗಳನ್ನು ಒಮ್ಮೆ ನೀವು ಪಡೆದರೆ ಮತ್ತೆ ಅವರು ನಿಮ್ಮನ್ನು ಮೂಸಿಯೂ ನೋಡುವುದಿಲ್ಲ. ನೆನಪಿರಲಿ ಅವರು ಗೆದ್ದ ನಂತರ ‘ನಾನು ನಿನಗೆ ಮತ ನೀಡಿದ್ದೇನೆ, ನನ್ನದೊಂದು ಕೆಲಸ ಆಗಬೇಕು’ ಎಂದು ಹೋದರೆ ‘ನೀನೊಬ್ಬನೇ ಮತ ನೀಡಿಲ್ಲ ಹೋಗಲ್ಲೋ...’ ಎಂದು ಉತ್ತರಿಸುತ್ತಾರೆ! ಇದು ಅಕ್ಷರಶಃ ಸತ್ಯ. ಈಗಾಲೇ ಇಂತ ಹಸಿ ಕಹಿಗಳನ್ನು ಅನೇಕರು ಅನುಭವಿಸಿದ್ದಾರೆ. ಆದರೆ ಬಹಿರಂಗವಾಗಿಲ್ಲ.
ಅಭ್ಯರ್ಥಿಗಳ ಪರವಾಗಿ ಪುಡಾರಿ ರಾಜಕಾರಣಿಗಳು ನೀಡುವ ಹಣ, ಹೆಂಡ ಮತ್ತಿತರ ವಸ್ತುಗಳನ್ನು ಒಮ್ಮೆ ನೀವು ಮುಟ್ಟಿದರೆ ಈಗ ಅವರಿಗೆ ಬಂದಿರುವ ಪಾಡು (ಮನೆ ಬಾಗಿಲ ವರೆಗೆ ಅಲೆಯುವುದು) ನಾಳೆ ನಿಮಗೆ ಬರುತ್ತದೆ. ಮನುಷ್ಯನ್ನಾಗಿ ಕೊಂಚವೂ ಸ್ವಾಭಿಮಾನಿಗಳಾಗಿರದಿದ್ದರೆ ಹೇಗೆ? ಈಗಾಲೇ ಕಹಿ ಅನುಭವ ಅನುಭವಿಸಿದವರು ಅವರಿಗೆ ತಿರುಗು ಬಾಣ ನೀಡಿ.
ಜನವಾಗಿಯೂ ಹಣವಿಲ್ಲದೆಯೂ ನಿಮಗಾಗಿ, ನಿಮ್ಮ ಏಳಿಗೆಗಾಗಿ ಸೇವೆ ಮಾಡಲು ಮನೆ ಬಾಗಿಲಿಗೆ ಬರುವ ಜನ ಸೇವಕರಿಗೆ(ನಾಯಕರಿಗಲ್ಲ!) ಅಮೂಲ್ಯವಾದ ಮತ ನೀಡಿ.
ಬಿಜೆಪಿಗಂತೂ ಬೇಡವೇ ಬೇಡ:
ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಅಕಾರದ ರುಚಿ ಉಂಡಿದೆ. ಅದರ ಫಲವಾಗಿ ಹಾವೇರಿಯಲ್ಲಿ ಅಮಾಯಕ ರೈತರು ಗೋಲಿಬಾರ್‌ಗೆ ತುತ್ತಾಗಿದ್ದಾರೆ. ರಾಜ್ಯಾದ್ಯಂತ ರೈತರು ಬೀಜ ಗೊಬ್ಬರಕ್ಕಾಗಿ ಹಗಲು ರಾತ್ರಿ ಬೀದಿಯಲ್ಲಿ ಕಳೆದು ಬಸವಳಿದಿದ್ದಾರೆ. ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಯುವತಿಯರು ಬೀದಿಯಲ್ಲಿ ಹಲ್ಲೆ ಮಾಡಿಸಿಕೊಂಡಿದ್ದಾರೆ. ಸಮಾಜದಲ್ಲಿ ಜಾತಿ, ಮತ, ಧರ್ಮಗಳ ನಡುವೆ ಬೇಧವೆಂಬ ಬೆಂಕಿ ಹಚ್ಚಿ ಅದರ ಝಳದಲ್ಲಿ ಬೇಳೆ ಬೇಯಿಸಿಕೊಳ್ಳುವ ಚಡ್ಡಿಗಳಿಗೆ ಖಂಡಿತಾ ಮತ ನೀಡಬೇಡಿ.
ಭಯೋತ್ಪಾದನೆಗೆ ಯಾವುದೇ ಮತದ ಹಣೆಪಟ್ಟಿಯಿಲ್ಲ, ಮುಂಬೈನಲ್ಲಿ ಮುಸ್ಲೀಮರು ಧಾಳಿ ನಡೆಸಿದರೆ ಮಲೆಗಾಂವ್‌ನಲ್ಲಿ ಹಿಂದೂಗಳು ದಾಳಿ ನಡೆಸಿದ್ದಾರೆ. ಈ ಎರಡೂ ಘಟನೆಗಳಲ್ಲಿ ಸತ್ತವರು ಮಾತ್ರ ಅಮಾಯಕ, ಮುಗ್ದ ನಾಗರಿಕರು. ಇಲ್ಲಿ ಎಲ್ಲ ಧರ್ಮೀಯರೂ ಇದ್ದಾರೆ. ಹಿಂದೂ ಹಾಗೂ ಮುಸ್ಲೀಮರ ಹೆಸರು ಹೇಳಿಕೊಂಡು ರಕ್ತ ಹರಿಸುವ ಇವರೆಲ್ಲಾ ರಾಕ್ಷಸರೆ!! ಇನ್ನೊಂದು ಖಟು ಸತ್ಯ ಎಂದರೆ ಈ ಎರಡೂ ರೀತಿ ಭಯೋತ್ಪಾದಕರಿಗೂ ‘ಲಿಂಕ್’ ಇದ್ದೇ ಇದೆ!!
ಇವರೆಲ್ಲಾ ರಾಜಕೀಯ ಧಾಳಗಳು. ಬಿಜೆಪಿಯಲ್ಲಿ ಎಂಥ ಒಳ್ಳೆಯ ಅಭ್ಯರ್ಥಿ ನಿಂತರೂ ಅದು ಮುಟ್ಟುವುದು ಕೊನೆಗೆ ರಕ್ತ ಸಿಕ್ತ ಪಾತ್ರೆಯನ್ನೆ... ಗೀಗಾಗಿ ಬಿಜೆಪಿಗೆ ಮತ ನೀಡುವುದು ಬೇಡ. ಉಳಿದಂತೆ ನಿಮ್ಮ ನಿಮ್ಮ ಪ್ರದೇಶದಲ್ಲಿ ಯಾವುದೇ ವ್ಯಕ್ತಿಗಾದರೂ ಅವನ ಗುಣಾವಗುಣಗಳನ್ನು ತುಲನೆ ಮಾಡಿ, ಪರಾಮರ್ಶಿಸಿ ಮತ ನೀಡಿ... ನೆನಪಿರಲಿ ಆಮಿಷಕ್ಕೆ ಬಲಿಯಾಗದಿರಿ.

Tuesday, April 7, 2009

ಅಭ್ಯರ್ಥಿಗಳಿಗಿಲ್ಲ ಆರ್ಥಿಕ ಹಿಂಜರಿತ...!

ಬೆಂಗಳೂರು : ಆರು ತಿಂಗಳಿನಿಂದೀಚೆಗೆ ಭಾರತ ಮಾತ್ರವಲ್ಲ ಇಡೀ ವಿಶ್ವದ ಮೇಲೆ ಆರ್ಥಿಕ ಹಿಂಜರಿತದ ಎಫೆಕ್ಟ್ ಆಗಿದೆ. ಆದರೆ ಅದು ಲೋಕಸಭೆ ಚುನವಾಣೆಯ ಮೇಲೆ ಮಾತ್ರ ಯಾವುದೇ ಪರಿಣಾಮ ಬೀರಿಲ್ಲ!
ಹೌದು, ಆರ್ಥಿಕ ಕುಸಿತರಿಂದ ಮುಂಬೈ, ಹೊಸದಿಲ್ಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ದೊಡ್ಡ ಶ್ರೀಮಂತರೇ ಬೀದಿಪಾಲಾಗಿದ್ದಾರೆ. ಕೆಲವರು ಕುಟುಂಬ ಸಮೇತರಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಈ ಸ್ವಯಂ ಘೋಷಿತ ಶ್ರೀಮಂತರಿಗೆ ಮಾತ್ರ ಆ ಬಿಸಿ ತಟ್ಟಿಲ್ಲ.
ಭಾರತ ಮೇಲ್ನೋಟಕ್ಕೆ ಬಡ ದೇಶವಾಗಿ ಕಾಣುತ್ತಿದೆಯೇ ಹೊರತು ಒಳಗಡೆ ಭಾರೀ ಶ್ರೀಮಂತ ದೇಶ. ಆದರೆ ಒಳ ಸೇರಿರುವ ಕಪ್ಪು ಹಣ ಮಾತ್ರ ಬೆಳಕಿಗೆ ಬರುತ್ತಲೇ ಇಲ್ಲ. ಹೊಸದಿಲ್ಲಿಯಲ್ಲಿರುವ ರಾಷ್ಟ್ರೀಯ ಪಕ್ಷಗಳ ಕಚೇರಿಗೆ ಹೋಗಿ ನಿಂತು ನೋಡಿದರೆ ಚುನಾವಣೆಗೆ ನಿಲ್ಲಲು ಅಥವಾ ಟಿಕೆಟ್‌ಗಾಗಿ ಅಭ್ಯರ್ಥಿಗಳು ಕೋಟಿ ಕೋಟಿ ಹಣವನ್ನು ಚೀಲಗಳಲ್ಲಿ, ಸೂಟ್‌ಕೇಸ್‌ಗಳಲ್ಲಿ ತಂದು ಸುರಿಯುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು.
ಇದು ಕೇವಲ ಬಿಜೆಪಿ, ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳಿಗೆ ಮಾತ್ರ ಸೀಮಿತವಾಗಿಲ್ಲ. ಯಾವ ಪ್ರಾದೇಶಿಕ ಪಕ್ಷಗಳ ನಾಯಕರು ಕೂಡ ಆರ್ಥಿಕ ಕುಸಿತದ ಬಿಸಿಗೆ ಕರಗಿಲ್ಲ. ಅದಕ್ಕೆ ಪ್ರತ್ಯಕ್ಷ ನಿದರ್ಶನ ನೀಡಲು ಕೇವಲ ಕರ್ನಾಟಕವೊಂದೇ ಸಾಕು. ಚುನಾವಣೆ ಘೋಷಣೆಯಾದ ಕೆಲವೇ ದಿನಗಳಲ್ಲಿ ರಾಜ್ಯ ಚುನಾವಣೆ ಆಯೋಗ ಈಗಾಗಲೇ ಯಾವುದೇ ದಾಖಲೆಯಿಲ್ಲದ ೧.೨೫ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ.
ಚುನಾವಣೆ ಆರೋಗದ ಹದ್ದಿನ ಕಣ್ಣಿಗೂ ಮಣ್ಣೆರಚಿ ನಮ್ಮ ಕರುನಾಡಿನ ಜನಪ್ರತಿನಿಗಳ ವಿರುದ್ಧ ೧೦,೫೭೪ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಅಂಥವರ ವಿರುದ್ಧ ೫೨೫೧ಪ್ರಕರಣ ದಾಖಲಿಸಲಾಗಿದೆ. ರಾಜ್ಯ ಚುನಾವಣಾಕಾರಿಗಳು ಅಷ್ಟೆಲ್ಲಾ ಪ್ರಚಾರ ಮಾಡಿ ಅಬ್ಬರದ ಪ್ರಚಾರ ಮಾಡಬೇಡಿ ಎಂದರೂ ಬ್ಯಾನರ್, ಬಂಟಿಂಗ್ಸ್ ಹಾಗೂ ಪೋಸ್ಟರ್ ಅಂಟಿಸಿರುವ ವಿಚಾರಕ್ಕೆ ಸಂಬಂಸಿದಂತೆ ೫೪ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿದ್ದರೂ ೯೫ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದು ೮೩೪ ಪ್ರಕರಣಗಳನ್ನು ದಾಕಲಿಸಿಕೊಳ್ಳಲಾಗಿದೆ.
ಇಷ್ಟಾದರೂ ಚುನಾವಣೆಗೆ ರ್ಸ್ಪಸಿದ ಅಭ್ಯರ್ಥಿಗಳು ತಮ್ಮ ಕಾಯಕರ್ತರ ಮೂಲಕ ಪ್ರತೀ ಹಳ್ಳಿ ಹಳ್ಳಿಗಳಲ್ಲಿ ಹಣ, ಹೆಂಡ ಶೇಖರಿಸಿಟ್ಟಿದ್ದಾರೆ. ಮನೆ ಮನೆಗೂ ಹಂಚುತ್ತಿದ್ದಾರೆ. ಜತೆಗೆ ಮತಗಳನ್ನು ತಮ್ಮ ಕಡೆ ಸೆಳೆಯಲು ಅವರಿಗೆ ಸೀರೆ, ಪಂಚೆ ಹಾಗೂ ಗೃಹ ಬಳಕೆಯ ವಸ್ತುಗಳನ್ನು ತಂದು ವಿತರಿಸಿದ್ದಾರೆ, ವಿತರಿಸುತ್ತಿದ್ದಾರೆ.
ಆರ್ಥಿಕ ಕುಸಿತದಿಂದ ಇಂಗ್ಲೆಂಡ್‌ನಲ್ಲಿ ೩೫ಸಾವಿರ ಕಂಪನಿಗಳು ದಿವಾಳಿಯಾಗಿವೆ. ಇದರಿಂದ ಅಲ್ಲಿನ ೧.೨೫ಲಕ್ಷ ಶ್ರೀಮಂತರು ಬೀದಿಗೆ ಬಂದಿದ್ದಾರೆ. ಭಾರತದಲ್ಲಿ ಕೂಡ ಉದ್ಯಮಿಗಳ ಹಾಗೂ ಜನ ಸಾಮಾನ್ಯರ ಮೇಲೆ ಆರ್ಥಿಕ ಕುಸಿತದಿಂದ ಭಾರೀ ನಷ್ಟವಾಗಿದೆ. ಕಾರ್ಮಿಕ ವರ್ಗ ಕೂಡ ಇದರಿಂದ ಕಂಗಾಲಾಗಿದೆ. ಆದರೆ ಇಲ್ಲಿನ ಜನ ಪ್ರತಿನಿಗಳಿಗೆ ಮಾತ್ರ ಆದರ ಯಾವುದೇ ಎಫೆಕ್ಟ್ ಇಲ್ಲ.
ರಾಜ್ಯಸಭೆಯ ಅರ್ಧದಷ್ಟು ಹಾಗೂ ಲೋಕಸಭೆಯ ಮೂರನೇ ಒಂದರಷ್ಟು ಸದಸ್ಯರು ಬಾರೀ ಶ್ರೀಮಂತರೆ. ಇವರೆಲ್ಲರೂ ಕಪ್ಪು , ಬಿಳುಪು ಹಣ ಇಟ್ಟುಕೊಂಡು ದರ್ಬಾರು ಮಾಡುವವರೆ. ಜನ ಪ್ರತಿನಿಗಳು ತೆರಿಗೆ ಇಲಾಖೆಗೆ ಲೆಕ್ಕಪತ್ರ ಸಲ್ಲಿಸುತ್ತಾರಾದರೂ ಕಪ್ಪು ಹಣದ ಬಗ್ಗೆ ಯಾವುದೇ ಲೆಕ್ಕ ಇರುವುದಿಲ್ಲ. ಅದನ್ನು ಕೇಳುವವರೂ ಇಲ್ಲ. ಹೀಗಾಗಿ ಇವರ್‍ಯಾರಿಗೂ ಆರ್ಥಿಕ ಕುಸಿತದಿಂದ ಯಾವುದೇ ತೊಂದರೆಯಾಗಿಲ್ಲ. ಆ ಕಾರಣಕ್ಕಾಗಿಯೇ ಮತದಾರರನ್ನು ಇವರು ತಮ್ಮ ನೋಟಿನ ಮೊನೆಯಲ್ಲಿಯೇ ಕುಣಿಸುತ್ತಿದ್ದಾರೆ. ಮತಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

Monday, March 16, 2009

ಹೊರಗಣವರಿವರು...

ಎರಡು ಗೊಡ್ಡೆಮ್ಮೆ, ಗೊಡ್ಡು ದನ ಕಟ್ಟಿಕೊಂಡು ಪೋಟೋಕ್ಕೆ ಫೋಜು ಕೊಡುವ ಅವರ (ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ) ಬಳಿ ವೋಟು ಇಲ್ಲ, ಪಾಟೂ ಇಲ್ಲ, ಅವರು ಬಿಜೆಪಿ ಸ್ವಾಮಿ...’
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಈ ಮಾತಿನ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ. ಅವರೇನೋ ಮಹಾ ಅಪರಾಧ ಮಾಡಿಬಿಟ್ಟರು ಎಂಬಂತೆ ಬಲಪಂಥೀಯ ರಾಜಕೀಯ ಮುಖಂಡರು, ಬರಹಗಾರರು ಅವರನ್ನು ಟೀಕಿಸಲು ಮುಂದಾಗುತ್ತಿದ್ದಾರೆ. ಕೇವಲ ಚೆಡ್ಡಿ ತೊಟ್ಟ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್‌ನಲ್ಲಿರುವ ಹವ್ಯಕ ಬ್ರಾಹ್ಮಣ ನಾಯಕರು ಕೂಡ ‘ಬಂಗಾರಪ್ಪ ಅವರ ಈ ಹೇಳಿಕೆ ಖಂಡನೀಯ’ ಎಂದು ಪಕ್ಷಾತೀತದ ಹೆಸರಿನಲ್ಲಿ ಪ್ರೆಸ್‌ಮೀಟ್ ಮಾಡಿ ಫೋಜು ಕೊಡುತ್ತಿದ್ದಾರೆ. ಇದೆಲ್ಲಾ ಯಾವ ಪುರುಷಾರ್ಥಕ್ಕೆ...?
ಸಮಾಜದಲ್ಲಿ ಬಡತನ, ದಾರಿದ್ರ್ಯ, ಮೌಢ್ಯತೆಗಳು ಇನ್ನೂ ರಾರಾಜಿಸುತ್ತ ರೌದ್ರ ನರ್ತನ ನಡೆಸಿವೆ. ಆಧುನಿಕತೆ, ತಂತ್ರeನದ ಹೆಸರಿನಲ್ಲಿ ನಾವು ಏನೆಲ್ಲಾ ಮಾಡಿದರೂ ಈ ಮೌಢ್ಯಗಳು, ಪೊಳ್ಳು ಕಂದಾಚಾರಗಳನ್ನು ಇನ್ನೂ ದೂರ ಮಾಡಿಲ್ಲ, ಉನ್ನತ ವ್ಯಾಸಂಗ ಮಾಡಿ ಪ್ರತಿ ವರ್ಷ ಹೊರ ಬರುವ ಲಕ್ಷಾಂತರ ಯುವಕ ಯುವತಿಯರು ಪ್ರತಿಭೆ ಇದ್ದೂ ಇಂದು ಅನಾಥರಂತೆ ಸರಕಾರ ನೀಡುವ ಸರ್ಟಿಪಿಕೇಟ್ ಹಿಡಿದು ಬೀದಿಗೆ ಬಿಳುತ್ತಿದ್ದಾರೆ. ಇಂಥ ವಿಚಾರಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.
ಯಾವುದೋ ಒಬ್ಬ ಸ್ವಾಮೀಜಿಯ ವಿರುದ್ಧ ಅಪ್ಪಿ ತಪ್ಪಿ ಒಂದು ಮಾತಂದರೆ ಅದೇ ದೊಡ್ಡ ವಿಷಯವಾಗಿ ಚರ್ಚೆಗೆ ಕೂತುಬಿಡುತ್ತದೆ. ಹೀಗಾದರೆ ಈ ಸಮಾಜದಿಂದ ಜಾತೀಯತೆ, ಮೌಢ್ಯತೆಗಳು ಎಲ್ಲಿಂದ ದೂರವಾಗುತ್ತವೆ ?
ಬಡತನ ಎನ್ನುವುದು ಕೇವಲ ದಲಿತರಿಗೆ, ಹಿಂದುಳಿದವರಿಗೆ ಸೀಮೀತವಾಗಿಲ್ಲ. ಬ್ರಾಹ್ಮಣತ್ವ ಎನ್ನುವುದು ಕೇವಲ ಬ್ರಾಹ್ಮಣ ಜಾತಿಯವರಿಗೆ ಮಾತ್ರ ಅಂಟಿಕೊಂಡಿಲ್ಲ ಅಲ್ಲೂ ಲಕ್ಷಾಂತರ ಕುಟುಂಬಗಳು ಅನ್ನ ನೀರಿಲ್ಲದೆ ಪರಿತಪಿಸುತ್ತಿವೆ. ಇವೆರಡೂ ಎಚ್‌ಐವಿ ವೈರಸ್ ಇದ್ದ ಹಾಗೆ. ಎಲ್ಲೆಡೆ ಸದ್ದಿಲ್ಲದೆ ಪಸರಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿ, ಮನುಕುಲವನ್ನೇ ನಾಶ ಮಾಡುತ್ತಿವೆ. ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿರುವ ರಾಮಚಂದ್ರಾಪುರ ಮಠದ ಬಗ್ಗೆ ಸರಿ ಸುಮಾರು ೧೦ ವರ್ಷಗಳ ಹಿಂದೆ ಯಾರಿಗೂ ಗೊತ್ತಿರಲಿಲ್ಲ. ಯಾವಾಗ ಆ ಗದ್ದುಗೆಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಎಂಬ ವ್ಯಕ್ತಿ ಬಂದು ಕುಳಿತರೋ ಅಲ್ಲಿಂದ ಅದು ಪ್ರಖ್ಯಾತವಾಗುತ್ತಾ ಬರುತ್ತಿದೆ. ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಪ್ರತಿಷ್ಠೆ ಮೆರೆಯುತ್ತಿದೆ.
ಧನಕರುಗಳುನ್ನು ಸಾಕಿ ಬೆಳೆಸುವುದು, ಅವುಗಳನ್ನು ಉಳಿಸಿ, ಜೋರ್ಣೋದ್ಧಾರ ಮಾಡುವುದು ಕೇವಲ ಒಂದು ಮಠ, ಮಂದಿರ, ಮಸೀದಿ ಅಥವಾ ಚರ್ಚ್‌ನಿಂದ ಮಾತ್ರ ಸಾಧ್ಯವಿಲ್ಲ. ಅವು ಈ ದೇಶಕ್ಕೆ ಅನ್ನ ನೀಡುವ ಅನ್ನದಾತನ ಸ್ನೇಹಿತರು. ಬೇರೆ ಯಾವುದೇ ಉದ್ಯಮವನ್ನು ಕಟ್ಟಿ ಬೆಳೆಸಬಹುದು. ಆದರೆ ಕೃಷಿ ಹಾಗೂ ರೈತನ ಬದುಕನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಧನಕರುಗಳನ್ನು ಉಳಿಸಿ ಬೆಳೆಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ಅದು ಸರಕಾರದಿಂದ ಆಗಬೇಕು. ಕೃಷಿಯಿಂದ ಅವು, ಅವುಗಳಿಂದ ಕೃಷಿ. ಇಂದು ದಿನೇ ದಿನೆ ಕೃಷಿ ರೈತರಿಂದಲೂ ದೂರವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಜಮೀನನ್ನು ಒಟ್ಟೊಟ್ಟಿಗೆ ಸರಕಾರ ಕಿತ್ತುಕೊಂಡು ಅವರನ್ನು, ಅವರ ದನಕರುಗಳನ್ನು ಬೀದಿಗೆ ತಳ್ಳುವ ಸರಕಾರದಿಂದ ಆ ಕೆಲಸ ಸಾಧ್ಯವೇ?
ಇಂದು ಲಕ್ಷಾಂತರ ಜೆಒಸಿ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಪರಿತಪಿಸುತ್ತಿದ್ದಾರೆ. ಆ ಪರೀಕ್ಷೆ ನಡೆಸಿದರೆ ಸರಕಾರದ ಬೊಕ್ಕಸಕ್ಕೆ ೧೦ ಲಕ್ಷ ರೂ. ಹೊರೆಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ವೃತ್ತಿ ಶಿಕ್ಷಣ ಇಲಾಖೆಯು ಪರೀಕ್ಷೆ ನಡೆಸುತ್ತಿಲ್ಲ. ಇದರಿಂದ ಈ ಎಲ್ಲ ವಿದ್ಯಾರ್ಥಿಗಳ ಬದುಕು ಕತ್ತಲೆಯಲ್ಲಿ ಸಾಗುತ್ತಿದೆ. ಒಂದೊಂದು ಮಠ ಮಾನ್ಯಗಳಿಗೆ ಲಕ್ಷಾಂತರ ರೂ.ಗಳನ್ನು ಚಿಲ್ಲರೆ ಕಾಸಿನಂತೆ ಬಿಜೆಪಿ ಸರಕಾರ ಹಂಚುತ್ತಿದೆ. ಈ ದೇಶದ ಆಸ್ತಿ, ಭಾವೀ ಪ್ರಜೆಗಳು, ಸ್ವಂತ ಕಾಲ ಮೇಲೆ ನಿಲ್ಲಲು ವೃತ್ತಿ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ಓದುವ ವಿದ್ಯಾರ್ಥಿಗಳ ಮೇಲೆ ಈ ಸರಕಾರ ಅದೆಷ್ಟು ಪ್ರೀತಿ ತೋರುತ್ತಿದೆ ನೋಡಿ...
ಇನ್ನು ಮಠ ಮಂದಿರ, ಮಸೀದಿ ಚರ್ಚ್‌ಗಳು ಜನ ಸಮಾನ್ಯರನ್ನು ಜಾತಿ ಮತ ಭೇದ ಮರೆತು ಒಂದುಗೂಡಿ ಸಾಮರಸ್ಯದಿಂದ ಬಾಳವಂತೆ ಮಾಡಿ ಅದಕ್ಕೆ ಪ್ರೇರಣೆಯಾಗಬೇಕು. ಆದರೆ ಈ ಮಠಗಳು ಮಾಡುತ್ತಿರುವುದಾದರೂ ಏನು ? ಮನುಷ್ಯ ಸಂಕುಲವನ್ನೇ ಜಾತಿ ಧರ್ಮಗಳ ಹೆಸರಿನಲ್ಲಿ ಜನರನ್ನು ತುಂಡು ತುಂಡು ಮಾಡುತ್ತಿವೆ. ಒಂದ ಸಮುದಾಯದ ಮಠಗಳಿಗೂ ಇನ್ನೊಂದು ಸಮುದಾಯದ ಮಠಗಳಿಗೂ ಬದ್ಧ ವೈರತ್ವ. ಪುಡಾರಿ ರಾಜಕಾರಣಿಗಳಿಗೂ ಮಠಗಳಲ್ಲಿನ ಸ್ವಾಮೀಜಿಗಳಿಗೂ ಈಗ ಯಾವುದೇ ವ್ಯತ್ಯಾಸಗಳಿಲ್ಲವಾಗಿದೆ. ಅದಕ್ಕೆ ಮೂರ್‍ನಾಲ್ಕು ವರ್ಷಗಳಿಂದೀಚಿನ ಘಟನಾವಳಿಗಳೇ ಪ್ರತ್ಯಕ್ಷ ನಿದರ್ಶನ.
ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡಿ, ಜಾತಿ, ಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ಕೊಳ್ಳಿ ಇಟ್ಟು ಅದರ ಝಳದಲ್ಲಿ ಕೈ ಕಾಯಿಸುವುದು, ಬೇಳೆ ಬೇಯಿಸಿಕೊಳ್ಳುವುದನ್ನು ಬಿಜೆಪಿ ಸರಕಾರ ಹಾಗೂ ಅದರ ಅಂಗ ಸಂಘಗಳು ಮೊದಲು ಬಿಡಲಿ, ಮಠ ಮಂದಿರಗಳನ್ನು ಪೋಷಿಸುವುದನ್ನು ನಿಲ್ಲಿಸಿ ಸಮಾಜದ ಒಟ್ಟು ಏಳಿಗೆಗೆ ಶ್ರಮಿಸಲಿ. ಇಲ್ಲ, ಸ್ವಾಸ್ಥ್ಯ ಸಮಾಜದಿಂದ ತಮ್ಮ ಪಾಡಿಗೆ ತಾವು ದೂರ ಇರಲಿ...

Thursday, March 12, 2009

ಎಲ್ಲರೂ ಒಂದೇ ದೋಣಿಯ ಕಳ್ಳರು...

ರಾಜಕೀಯ ಅನ್ನೋದೇ ಹೊಲಸು ಹೀಗಂತಾ ಸಾಮಾನ್ಯ ಜನ ಮಾತನಾಡಿಕೊಳ್ಳುತ್ತಾರೆ. ಅದಕ್ಕೆ ಕಾರಣ ನಮ್ಮ ಜನಪ್ರತಿನಿಗಳು ಹಾಗೂ ಅವರು ಆಡುವ ದೊಂಬರಾಟ. ಇಲ್ಲಿ ಯಾರೂ ಸಾಚಾ ಅಲ್ಲ, ಯಾರೂ ನಿಷ್ಠನಲ್ಲ, ಯಾರೂ ಪ್ರಮಾಣಿಕರಲ್ಲ ಎಂಬುದೇ ಅದರ ಅರ್ಥ.
ರಾಜಕಾರಣ ಎನ್ನುವುದು ಒಂದು ಸಮುದ್ರ. ಇಲ್ಲಿ ಈಜಿದಷ್ಟೂ ನಮ್ಮ ಜನಪ್ರತಿನಿಗಳಿಗೆ ಖುಷಿಯೋ ಖುಷಿ. ಮನ ತಣಿಯುವುದೇ ಇಲ್ಲ . ಏಳಲಿ, ಮುಳುಗಲಿ, ನೀರು ಕುಡಿಯಲಿ, ಕುಡಿಸಲಿ ಎಲ್ಲದೂ ಒಂದು ರೀತಿಯ ಖುಷಿ . ಅಷ್ಟೆಲ್ಲಾ ಏಳು ಬೀಳುಗಳನ್ನು ಕಂಡರೂ ಅವರನ್ನು ಒಮ್ಮೆ ಕೇಳಿ ನೋಡಿ? ‘ರಾಜಕೀಯದಲ್ಲಿದ್ದೊಷ್ಟು ಹೊಲಸು ಬೇರೆಲ್ಲೂ ಇಲ್ಲ, ಇಲ್ಲಿ ಯಾರಿಗೂ ತತ್ತ್ವ ಸಿದ್ಧಾಂತಗಳಿಲ್ಲ, ಎಲ್ಲರೂ ...ಬಿಟ್ಟಿದ್ದಾರೆ.’ ಎಂದು ಕಟುವಾಗಿ ಮಾತನಾಡುತ್ತಾರೆ.
ಈ ಸಾಗರದಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ, ಸಂಘಪರಿವಾರಕ್ಕೆ ‘ರಾಮಬಾಣ’ವೇ ಅಸ್ತ್ರ. ಕಾಂಗ್ರೆಸ್ ಬತ್ತಳಿಕೆಯಲ್ಲಿರುವುದು ‘ಗಾಂವಾದ’. ಜೆಡಿಎಸ್‌ನಲ್ಲಿರುವುದು ‘ಜಾ(ತ್ಯ)ತೀ(ತ)ವಾದ ’. ಇನ್ನು ಉಳಿದ ಪಕ್ಷಗಳು ಕೂಡ ಅವರದ್ದೇ ಆದ ಬತ್ತಳಿಕೆಯಲ್ಲಿ ಅವರದ್ದೇ ಆದ ‘ಅಸ್ತ್ರ’ಗಳನ್ನು ಇಟ್ಟುಕೊಂಡಿವೆ. ಇವರೆಲ್ಲರೂ ಹೇಳುವುದು ಒಂದೇ ‘ ಅವರು ಸರಿ ಇಲ್ಲ’. ಇವರೆಲ್ಲರೂ ಬೇರೆಯವರನ್ನು ಬೆರಳು ಮಾಡಿ ತೋರಿಸುತ್ತಾರೆ. ಆದರೆ ಅವರ ನಾಲ್ಕು ಬೆರಳುಗಳು ಮಾತ್ರ ಆಪಾದಿಸುವವರನ್ನೇ ತೋರಿಸುತ್ತಿರುತ್ತವೆ. ಇದು ಇಂದಿನ ರಾಜಕೀಯ.
ಇಲ್ಲಿನ ಚಟವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸರಳವಾಗಿ ಹೇಳುವುದಾದರೆ ‘ಎಲ್ಲೂ ಸಲ್ಲದವನು ಇಲ್ಲಿ ಸಲ್ಲುವನಯ್ಯ’. ರಾಜಕೀಯ ಪರಿಣಿತರು, ಧುರೀಣರೇ ಹೇಳುವ ಹಾಗೆ ರಾಜಕೀಯದಲ್ಲಿ ಯಾರೂ ಶತೃಗಳಲ್ಲ, ಯಾರೂ ಮಿತ್ರರಲ್ಲ. ಜತೆಗೆ ಇವರ್‍ಯಾರಿಗೂ ಇಂದಿನ ಸ್ಥಿತಿಯಲ್ಲಿ ರ್ನಿಷ್ಟ ತತ್ತ್ವ ಸಿದ್ಧಾಂತಗಳಿಲ್ಲ!
‘ಮೊದ ಮೊದಲು ಬಂಗಾರಪ್ಪ ಅವರನ್ನು ಪಕ್ಷಾಂತರಿ, ಒಂದು ಪಕ್ಷದಲ್ಲಿ ಉಳಿಯುವುದು ಗೊತ್ತಿಲ್ಲ. ಅವರಿಗೆ ಅಕಾರ ಬೇಕು’ ಎಂದು ಹೇಳುತ್ತಿದ್ದ ಘಟಾನುಘಟಿ ರಾಜಕಾರಣಿಗಳಲ್ಲಿ ಕೆಲವರು ಈಗ ಆಪರೇಷನ್ ಕಮಲಕ್ಕೆ ಸಿಕ್ಕಿ ಗಾಳದೊಳಗಿನ ಮೀನುಗಳಾಗಿದ್ದಾರೆ. ಮತ್ತೆ ಕೆಲವರು ತತ್ತ್ವ ಸಿದ್ಧಾಂತಗಳನ್ನೆಲ್ಲಾ ಗಾಳಿಗೆ ತೂರಿ ಒಂದು ಸುತ್ತು ಸುತ್ತಿ, ಸುಸ್ತಾಗಿ ಮತ್ತೆ ಅದೇ ಪಕ್ಷಕ್ಕೆ ಬಂದು ನೆಲೆ ನಿಂತಿದ್ದಾರೆ. ಬಂಗಾರಪ್ಪನವರನ್ನು ರಾಜಕೀಯವಾಗಿ ವಿರೋಸುತ್ತಿದ್ದವರು ಅವರನ್ನೂ ಮೀರಿಸುವಂತೆ ಪಕ್ಷಾಂತರ ಮಾಡಿ ‘ಮರಕೋತಿ’ ಎನಿಸಿಕೊಂಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಜೆಡಿಯು, ಬಿಜೆಪಿ ಯಾವುದೇ ಪಕ್ಷಕ್ಕೆ ಹೋದರೂ ಅಲ್ಲಿ ಎಲ್ಲರೂ ಕನವರಿಸುವುದು ಅಕಾರದ ಗದ್ದುಗೆಯನ್ನೇ. ಆದರೆ ಹೆಸರಿಗೆ ಮಾತ್ರ, ಜನಸಾಮಾನ್ಯರನ್ನು ಯಾಮಾರಿಸಲು, ತೋರುಗಾಣಿಕೆಗೆ ತತ್ತ್ವ ಸಿದ್ಧಾಂತ ಹಾಗೂ ವ್ಯಕ್ತಿಗತ ವಿಚಾರಗಳನ್ನು ಮುಂದಿಡುತ್ತಾರಷ್ಟೆ. ಅದು ಈಗ ಮತ್ತೆ ಸಾಭೀತಾಗಿದೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿದೆ ಎಂದು ಒಂದು ಕಾಲದಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಗೌಡರು ಜನತಾ ದಳ ಛದ್ರವಾದ ನಂತರ ಜಾ(ತ್ಯ)ತೀ(ತ) ಜನತಾದಳ ಮಾಡಿ, ಅದರ ನೆರಳಲ್ಲೇ ತಮ್ಮ ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ ಅವರನ್ನು ಪೋಷಿಸಿ ಬೆಳೆಸಿದರು. ಅದು ನಡೆದದ್ದು ಅಕಾರ ಬಂದ ನಂತರವೇ...
ಈಗ ಅದೇ ಕೆಲಸವನ್ನು ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮಾಡಿದ್ದಾರೆ. ತಮ್ಮ ಪುತ್ರ ಇದೂವರೆಗೆ ಬಿಜೆಪಿಗಾಗಿ ಏನನ್ನೂ ಮಾಡದಿದ್ದರೂ ಶಿಕಾರಿಪುರ ಪುರಸಭೆಯ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು. ಈಗ ನೇರವಾಗಿ ದಿಲ್ಲಿಗೆ ದಿಬ್ಬಣ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ವಿರೋಸುತ್ತಿದ್ದ ಯಡಿಯೂರಪ್ಪನವರೇ ಈಗ ತಮ್ಮ ಮಗನಿಗೆ ಲೋಕಸಭೆಗೆ ಟಿಕೆಟ್ ಕೊಡಿಸುವ ಮೂಲಕ ‘ಪುತ್ರ ವಾತ್ಸಲ್ಯ’ ಮೆರೆಯುತ್ತಿದ್ದಾರೆ.
ಇದರಿಂದ ಎಲ್ಲ ರಾಜಕೀಯ ಪಕ್ಷಗಳು, ನಾಯಕರೂ ಪರಿತಪಿಸುವುದು ಅಕಾರಕ್ಕಾಗಿ ಎಂಬುದು ಸಾಭೀತಾಗಿದೆ. ಎಲ್ಲರ ಮನದಾಳದ ಮೂಲೆಯಲ್ಲಿರುವುದು ದೇಶದ ಅಥವಾ ರಾಜ್ಯದ ಹಿತಕ್ಕಿಂತ ಕುಟುಂಬದ ಹಿತ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ. ಇವರೆಲ್ಲಾ ಒಂದೇ ದೋಣಿಯಲ್ಲಿ ಬಂದಿರುವ, ನಾನಾ ಮುಖವಾಡಗಳನ್ನು ಅಂಟಿಸಿಕೊಂಡಿರುವ ಕಳ್ಳರು ಎನ್ನುವುದು ಧೃಡಪಟ್ಟಿದೆ.
ಚುನಾವಣೆ ಮತ್ತೆ ಜನರ ಮುಂದೆ ಬಂದಿದೆ. ಮುಗ್ದ ಮತದಾರನ ಮತವನ್ನು ಕೊಳ್ಳೆ ಹೊಡೆದ ಅಥವಾ ಕೊಳ್ಳೆ ಹೊಡೆಯುವ ಖದೀಮರು ಯಾರು ಎಂದರೆ ಉತ್ತರ ಅದೇ. ಒಂದೇ ದೋಣಿಯ ಕಳ್ಳರು...!

Thursday, February 26, 2009

ಹೌದು; ಅಮ್ಮಂದಿರು ಹೀಗೂ ಇರ್ತಾರೆ...!



ರೈಲು ಆಗ ಸಮಯ ಮಧ್ಯಾಹ್ನ ೨.೪೫. ಕಾಲು ಗಂಟೆ ಲೇಟಾಗಿ ಶಿವಮೊಗ್ಗ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಹೊರಟಿತ್ತು. ಹೆಸರಿಗೆ ‘ಎಕ್ಸ್‌ಪ್ರೆಸ್’ ಆದರೂ ಅದು ಜನರ ಮನಸಿನಲ್ಲಿ ‘ಡಕೋಟಾ ಎಕ್ಸ್‌ಪ್ರೆಸ್’! ಭದ್ರಾವತಿಗೆ ಬರುತ್ತಿದ್ದಂತೆ ಜನಸಂದಣಿ ಹೆಚ್ಚಾಗಿತ್ತು. ಭದ್ರಾವತಿಯಿಂದ ರೈಲು ಹೊರಡುತ್ತಿದ್ದಂತೆ ನಾನು ಕೂತ ಸೀಟಿನ ಎರಡು ಸೀಟಿನಾಚೆ ಹಸುಳೆಯೊಂದು ಅಳಲಾರಂಭಿಸಿತು.
ಅದಕ್ಕೆ ಸುಮಾರು ೩ ತಿಂಗಳೂ ತುಂಬಿರಲಿಲ್ಲ. ಜನ ಹೆಚ್ಚಾಗಿದ್ದರಿಂದ ಸೆಕೆ ಜಾಸ್ತಿಯಾಗಿ ಮಗು ಅಳುತ್ತಿರಬೇಕೆಂದು ನಾವೆಲ್ಲಾ ಅಂದುಕೊಂಡೆವು. ಅಕ್ಕಪಕ್ಕದವರೂ ಹಾಗೇ ಅಂದುಕೊಂಡಿರಬೇಕು. ಈ ಮದ್ಯೆ ಮಗು ತುಸು ಹೊತ್ತು ಅಳು ನಿಲ್ಲಿಸಿತು. ಅನಂತರ ಅತ್ತ ಕಡೆ ಯಾರೂ ಗಮನ ಹರಿಸಲಿಲ್ಲ. ತರೀಕೆರೆಗೆ ಆಗಮಿಸುತ್ತಿದ್ದಂತೆ ರೈಲಿನಲ್ಲಿ ರಶ್ ಕಡಿಮೆಯಾಯಿತು. ರೈಲು ತರೀಕೆರೆ ದಾಟುತ್ತಿದ್ದಂತೆ ಮಗು ಮತ್ತೆ ಎಚ್ಚರಗೊಂಡು ಅಳಲಾರಂಭಿಸಿತು.
ಅದರ ಅಪ್ಪ ,ಅಮ್ಮ ಇಬ್ಬರೂ ಇದ್ದರು. ಇಬ್ಬರೂ ಜೀನ್ಸ್ , ಟೀ ಶರ್ಟ್ ಧಾರಿಗಳು. ಸ್ವಲ್ಪ ಹೊತ್ತು ಅಪ್ಪ ಮಗುವನ್ನು ಸಂತೈಸಲು ಯತ್ನಿಸಿದ. ಮಗುವಿನ ಅಳು ಯಾರಿಗೆ ತಾನೆ ಕರಳು ಚುರುಕ್ ಎನಿಸುವುದಿಲ್ಲ ಹೇಳಿ ? ಆದ್ದರಿಂದ ಸಹಜವಾಗಿಯೇ ಎಲ್ಲರೂ ಆ ಮಗುವನ್ನೇ ದಿಟ್ಟಿಸಿ ಮನ ಮಿಡಿಯುತ್ತಿದ್ದರು. ಆದರೆ ಮಗು ಮಾತ್ರ ಅಳು ನಿಲ್ಲಿಸಲೇ ಇಲ್ಲ. ಬೀರೂರಿಗೆ ಬರುವ ಹೊತ್ತಿಗೆ ಸಂಜೆ ೪.೩೦. ಸತತವಾಗಿ ಎರಡು ಗಂಟೆಗಳ ಕಾಲ ಮಗು ಅಳುತ್ತಲೇ ಇತ್ತು. ಕ್ರಾಸಿಂಗ್ ಇದ್ದಿದ್ದರಿಂದ ಅಲ್ಲಿ ಬಹಳ ಹೊತ್ತು ರೈಲು ನಿಂತಿತ್ತು. ಅದರ ಅಪ್ಪ ಮಗುವನ್ನು ಎತ್ತಿಕೊಂಡು ಅತ್ತಿಂದಿತ್ತ, ಇತ್ತಿಂದತ್ತ ಸುತ್ತಾಡಿದರು. ರೈಲು ಹೊರಟ ನಂತರ ಬಂದು ಸೀಟಿನಲ್ಲಿ ಕುಳಿತರು. ಮಗು ಮಾತ್ರ ‘ರಾಗ ’ ನಿಲ್ಲಿಸಿರಲಿಲ್ಲ.
ಅನಂತರ ಅದರ ಅಮ್ಮ (ಅಪ್ಪನಿಗೆ ಸುಸ್ತಾಗಿರಬೇಕು!?) ಎತ್ತಿಕೊಂಡು ಸಂತೈಸಿದಳು. ಆ ಹೊತ್ತಿಗಾಗಲೇ ಮಗುವಿಗೆ ಹಸಿವಾಗಿದೆ ಎಂಬುದು ಅಕ್ಕಪಕ್ಕ ಕುಳಿತಿದ್ದವರಿಗೆಲ್ಲಾ ತಿಳಿದಿತ್ತು. ಮಗು ಅಳುವಿನ ಮೂಲಕ ತನ್ನದೇ ಭಾಷೆಯಲ್ಲಿ ಹೇಳುತ್ತಿತ್ತು. ಆದರೆ ಆ ‘ಮಹಾತಾಯಿ’ಗೆ ಮಗುವಿನ ಹಸಿವು ಅರ್ಥವಾಗಿರಲಿಲ್ಲ!!
ರೈಲು ತುಮಕೂರು ತಲುಪುವವರೆಗೆ ಮಗುವಿನ ನೋವನ್ನು ಅರಿತೂ ಅಕ್ಕ ಪಕ್ಕದ ಜನ ಸುಮ್ಮನೇ ಇದ್ದರು. ಮಗುವನ್ನು ಹೆತ್ತ ಮಹಾತಾಯಿ ತನ್ನ ಕರುಳ ಬಳ್ಳಿಗೆ ಕುಡಿಯಲು ಕನಿಷ್ಠ ಪಕ್ಷ ಬಾಟಲಿಯಲ್ಲಾದರೂ ಹಾಲು ತಂದಿರಲಿಲ್ಲ! ತಮ್ಮ ದಾಹ ತಣಿಸಿಕೊಳ್ಳಲು ಮಾತ್ರ ‘ಬಿಸ್ಲೇರಿ ಬಾಟಲಿ’ ತಂದಿದ್ದರು...
ಅದ್ಯಾಕೋ ನನಗೆ ಅನಂತರ ಸುಮ್ಮನಿರಲಾಗಲಿಲ್ಲ. ಆ ತಾಯಿಗೆ ಹೇಳಲು ಧೈರ್ಯ ಸಾಲದೆ ಎದುರಿಗಿದ್ದ ಒಬ್ಬ ವೃದ್ಧ ಮಹಿಳೆಗೆ ‘ಆ ಮಗು ಆಗ್ಲಿಂದ ಆಳ್ತಾನೆ ಇದೆ, ಹಾಲು ಕುಡಿಸ್ಬೇಕು ಅನ್ನೋ eನ ಕೂಡ ಆ ಹೆಂಗಸಿಗೆ ಇಲ್ಲ ನೋಡಿ...’ ಎಂದೆ. ಅವರು ಕೂಡ ಅದನ್ನೇ ಗಮನಿಸುತ್ತಿದ್ದರು ಎನಿಸುತ್ತೆ. ತಕ್ಷಣ ‘ ನಾನೂ ಅದನ್ನೇ ಗಮನಿಸ್ತಿದೀನಪ್ಪ, ಅವ್ಳೀಗೆ ಸ್ವಲ್ಪಾನೂ ಕರುಣೆ ಅನ್ನೋದಿಲ್ವಾ...? ನಿಜವಾಗ್ಲು ಅವ್ಳು ಅದರ ತಾಯಿನಾ ಅನಿಸ್ತಿದೆ. ನಮ್ಮ ಕಾಲದಾಗೆ ಹಿಂಗೆಲ್ಲಾ ಇರ್‍ಲಿಲ್ಲ...’ ಎಂದು ನಿಟ್ಟುಸಿರು ಬಿಟ್ಟರು.
ಅರಸೀಕೆರೆ ಬರುವ ಮುಂಚೆಯೇ ಆ ವೃದ್ಧೆ ‘ ಏನವ್ವಾ... ಆ ಕೂಸು ಹೊಟ್ಟೆ ಹಸ್ತು ಶಿಮೊಗ್ಗದಿಂದ ಹೊಯ್ಕೊಳ್ತಾ ಐತಿ. ಹಾಲು ಕುಡಿಸ್ಬೇಕು ಅಂತಾ ಗೊತ್ತಾಗಂಗಿಲ್ಲಾ...?’ ಎಂದು ಗುಡುಗಿದರು. ಅದರಮ್ಮ ತುಟಿ ಬಿಡದೆ ವೃದ್ಧೆಯನ್ನು ಗುರಾಯಿಸಿ ಸುಮ್ಮನಾದಳು. ಆದರೆ ಅದರಪ್ಪ ‘ಹಾಲಿನ ಬಾಟಲ್ ತರೋದೆ ನೆನಪಾಗಲಿಲ್ಲ.’ ಎಂದ. ಈಉತ್ತರದಿಂದ ತೃಪ್ತಿಯಾಗದ ವೃದ್ಧೆ ‘ ತರೀಕೆರೆ ಸ್ಟೇಷನ್‌ನಲ್ಲಿ ಹಾಲು ಸಿಕ್ರೆ ತಗೊಂಡು ಬಂದು ಕುಡ್ಸಿ’ ಎಂದರು.
ಸ್ಟೇಷನ್ ಬಂದ ಮೇಲೆ ಇಳಿದು ಹೋದ ಆತ ಸ್ವಲ್ಪ ಸುತ್ತಾಡಿ ಬರಿಗೈಯ್ಯಲ್ಲಿ ಬಂದ. ಮಗು ಮಾತ್ರ ಅಳುತ್ತಲೇ ಇತ್ತು. ಆದರೆ ಅಮ್ಮನ ಹೃದಯದಲ್ಲಿ ಮಾತ್ರ ಕರುಣೆ ಉಕ್ಕಿ ಬರಲೇ ಇಲ್ಲ! ಬದಲಿಗೆ ಸಿಟ್ಟು ಕಾಣುತ್ತಿತ್ತು. ಅದು ಗಂಡ ಹಾಗೂ ಮಗುವಿನ ನಡುವೆ ಹೊಯ್ದಾಡುತ್ತಿತ್ತು. ಅಷ್ಟೊತ್ತಿಗಾಗಲೇ ರಾತ್ರಿ ೮ ಗಂಟೆಯಾಗಿತ್ತು. ಅಷ್ಟಕ್ಕೂ ಸುಮ್ಮನಾಗದ ವೃದ್ಧೆ ‘ ಹೋಗು ತಾಯಿ, ಆ ಟಾಯ್ಲೆಟ್ ರೂಮಲ್ಲಾದ್ರೂ ನಿಂತ್ಗಂಡು ಎದೆ ಹಾಲು ಕುಡ್ಸು, ಅದು ಅಳೋದು ನಮ್ಮಿಂದ ನೋಡಾಕಾಗಂಗಿಲ್ಲ.’ ಎಂದರು.
ಆದರೆ ಆ ‘ಕರುಣಾಮಾತೆ ’ ಮಗು ಗೋಳಿಟ್ಟರೂ ಪರವಾಗಿಲ್ಲ, ಎದೆಹಾಲು ಕುಡಿಸಲು ರೆಡಿ ಇರಲಿಲ್ಲ !! ಸುತ್ತಮುತ್ತ ಕೂತವರೆಲ್ಲಾ ಅದೇ ಮಾತನ್ನು ಹೇಳಿದರು. ಆಕೆ ಮಾತ್ರ ಜಾಗ ಬಿಟ್ಟು ಕದಲಲಿಲ್ಲ. ಅದೇಕೊ ಅಪ್ಪನಿಗೆ ತಡೆಯಲಾಗಲಿಲ್ಲವೇನೋ. ಆ ಮಗುವನ್ನು ಅಂಗಾತ ಮಲಗಿಸಿ ಬಿಸಿಲರಿ ಬಾಟಲಿಯ ಮುಚ್ಚಳದಿಂದ ಮಗುವಿನ ಬಾಯಿಗೆ ನೀರು ಸುರಿದ...
ಅದನ್ನು ನೋಡಿದ ಜನ ಮತ್ತೆ ಬಾಯಿ ಬಿಡಲಿಲ್ಲ...!! ಅಲ್ಲಿ ನೀರವ ಮೌನ ತಾಂಡವವಾಡುತ್ತಿತ್ತು. ಬೆಂಗಳೂರು ತಲುಪಿದಾಗ ರಾತ್ರಿ ೧೦.೩೦. ಆಲ್ಲಿಯವರೆಗೂ ಆ ವಾತ್ಸಲ್ಯರೂಪಿಣಿ ಎದೆಹಾಲು ಕುಡಿಸಲೇ ಇಲ್ಲ ; ಮಗು ಅಳು ನಿಲ್ಲಿಸಲೇ ಇಲ್ಲ. ಜನ ಮಾತ್ರ ನಂತರ ತುಟಿ ಬಿಚ್ಚಲಿಲ್ಲ....

Thursday, February 12, 2009

ಪ್ರೀತ್ಸೋದ್ ತಪ್ಪಾ ...?

‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ?
ಮಳೆ ಸುರಿದೀತು ಹೇಗೆ...?
-ಹೀಗೆ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಹಿಂದೆಯೇ ತಮ್ಮ ಕಾವ್ಯದಲ್ಲಿ ಪ್ರಶ್ನೆ ಮಾಡಿದ್ದಾರೆ.
ಪ್ರಪಂಚದ ಯಾವುದೇ ಒಂದೇ ಒಂದು ಜೀವಿಯ ಮನದಾಳದಲ್ಲಿ ಪ್ರೀತಿ ಇಲ್ಲ ಎಂದು ತೋರಿಸಲು ಸಾಧ್ಯವೇ ? ಸಾಧ್ಯವೇ ಇಲ್ಲ. ಪ್ರೀತಿ ಜಗತ್ತಿನ ಉದಯಕ್ಕೆ ಸಾಕ್ಷಿ. ಪ್ರೀತಿ ಜೀವನೋತ್ಸಾಹದ ಚಿಲುಮೆ. ಪ್ರೀತಿ ಸೂರ್ತಿ. ಅದನ್ನು ಹೃದಯಪೂರ್ವಕವಾಗಿ ಅನುಭವಿಸಿದವರಿಗೇ ಗೊತ್ತು ಅದರ ಗಂಧ ಗಾಳಿ...
ಗೋರ್ಕಲ್ಲ ಮೇಲೆ ಮಳೆ ಸುರಿದು ಪ್ರಯೋಜನವಾದರೂ ಏನು ? ಈಗ ರಾಜ್ಯದಲ್ಲಿ ಆಗುತ್ತಿರುವುದೂ ಅದೇ. ಶ್ರೀರಾಮಸೇನೆ ಹಾಗೂ ಸಂಘಪರಿವಾರ ‘ಭಾರತೀಯ ಸಂಸ್ಕೃತಿ’ಯ ಹೆಸರಿನಲ್ಲಿ ತಾವೇ ‘ಸಂಸ್ಕೃತಿ ರಕ್ಷಕರು’ ಎಂದು ಸ್ವಯಂ ಘೋಷಿಸಿಕೊಂಡು ಅದರ ಉಳಿವಿಗೆ ಹೋರಾಡುವುದು ಅನಾಗರಿಕತನ.
ಪ್ರೀತಿ ಅನ್ನೋ ಆ ಹೂವು ಯಾರಲ್ಲೂ ಹೇಳಿ ಕೇಳಿ ಹುಟ್ಟುವುದಿಲ್ಲ. ಅದಕ್ಕೆ ಒಂದು ದಿನ ಅಥವಾ ಒಂದು ಸಮಯ ಎಂಬುದೇ ಇಲ್ಲ. ಅದರ ಉಗಮವೇ ಆಗೋಚರ. ಹಾಗೆಂದು ನಾವು ಪ್ರೀತಿಸಿದವರೆಲ್ಲರನ್ನೂ ಮದುವೆಯಾಗಬೇಕು ಎಂಬುದು ಕೂಡ ಖಡು ಮೂರ್ಖತನ. ಭಾರತೀಯ ಸಂಸ್ಕೃತಿ ರಕ್ಷಕರು ಎಂದು ಹೇಳಿಕೊಳ್ಳುವ ಈ ಭಟ್ಟಂಗಿಗಳಿಗೆ ಸ್ತ್ರೀಯನ್ನು ಗೌರವಿಸುವ ಕನಿಷ್ಠ eನ ಕೂಡ ಇಲ್ಲ. ಹೀಗಿರುವಾಗ ಇವರು ರಕ್ಷಿಸುವುದಾದರೂ ಏನು ?
ಸಮಾಜದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಸಮಾನವಾದ ಸ್ಥಾನ ಮಾನಗಳಿವೆ. ಹೀಗಿರುವಾಗ ಪ್ರೀತಿಸುವ ಹೃದಯಗಳೆರಡು ಸಮಾಜದಲ್ಲಿ ಸಮಾನವಾಗಿ ಬದುಕುವುದರಲ್ಲಿ ತಪ್ಪೇನು ? ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದರ ಹರಣವಾಗಬಾರದು ಅಷ್ಟೇ. ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಅದನ್ನು ರಕ್ಷಿಸುವ ಹೆಸರಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಲು ಶ್ರೀರಾಮಸೇನೆ ನಾಯಕರಿಗೆ ಯಾವ ನೈತಿಕ ಹಕ್ಕಿದೆ ?
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಮೂಲಭೂತ ಹಕ್ಕುಗಳಿವೆ. ಅವುಗಳನ್ನು ಈಗ ಈ ಭಟ್ಟಂಗಿಗಳು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಅನ್ಯ ಕೋಮಿನ ಹರೆಯದ ಯುವಕ ಯುವತಿಯರು ಒಟ್ಟುಗೂಡಿ ನಡೆದಾಡಿದರೆ ಅವರು ಪ್ರೇಮಿಗಳೇ ಇರಬೇಕು !? ಅವರ ನಡುವೆ ಅನೈತಿಕ ಸಂಬಂಧವೇ ಇರಬೇಕು !? ಎಂದು ಭಾವಿಸುವುದು. ಅವರ ಮೇಲೆ ಹಲ್ಲೆ ಮಾಡುವುದು ಸಂಸ್ಕೃತಿ ರಕ್ಷಣೆಯಾ...? ಈ ಸಮಾಜದಲ್ಲಿ ಜಾತಿ, ಧರ್ಮಗಳಾಚೆಗೆ ಸ್ನೇಹ, ಸೌಹಾರ್ಧತೆ, ಪ್ರೀತಿ, ಸಂಬಂಧಗಳು ಬೆಳೆಯಲೇಬಾರದೆ...? ಸಾಮರಸ್ಯ ಎಲ್ಲಿರುತ್ತದೋ ಅಲ್ಲಿ ಸಹಬಾಳ್ವೆ ಇದ್ದೆ ಇರುತ್ತದೆ. ಅದನ್ನು ನಾವು ಮೊದಲು ಅರಿಯಬೇಕು.
ಪಬ್‌ಗಳಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡುವುದು ತಪ್ಪು. ಹೀಗಿರುವಾಗ ಅದಕ್ಕೆ ಅನುಮತಿ ನೀಡುವುದಾದರೂ ಏಕೆ..? ಸರಕಾರಕ್ಕೆ ಬುದ್ದಿ ಇಲ್ಲವೇ ? ಅಲ್ಲಿರುವ ಸಚಿವರು, ಅಕಾರಿಗಳು ಬುದ್ದಿ ಹೀನರೆ..? ಕುಡಿತ ಕೂಡ ಆರೋಗ್ಯಕ್ಕೆ ಹಾನಿ. ಹೀಗಿರುವಾಗ ಗಲ್ಲಿಗೊಂದರಂತೆ ಬಾರ್‌ಗಳು, ರೆಸ್ಟೋರಂಟ್‌ಗಳು ತಲೆ ಎತ್ತಿರುವುದು ಯಾಕೆ..? ಅದು ಪುರುಷರು ಮಾಡಿದರೆ ತಪ್ಪು ಮಹಿಳೆಯರು ಮಾಡಿದರೆ ಅನೈತಿಕ, ಅಪಚಾರ... ಇದು ಯಾವ ರೀತಿಯ ಕಾನೂನು ?
ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್‌ಗೆ ಪ್ರೀತಿ ಅರ್ಥವೇ ಗೊತ್ತಿಲ್ಲ. ಅವನೊಬ್ಬ ಬ್ರಹ್ಮಚಾರಿ. ಹೀಗಿರುವಾಗ ಅದರ ಅರಿವೇ ಇಲ್ಲದೆ ಪ್ರೇಮಿಗಳ ದಿನವನ್ನು ನಿಷೇಸಿ, ಪ್ರೇಮಿಗಳು ಕಂಡರೆ ಮದುವೆ ಮಾಡಿಸುತ್ತೇವೆ ಎನ್ನುವ ಆತನಿಗೆ ಯಾವ ನೈತಿಕ ಹಕ್ಕಿದೆ ಎಂಬುದು ಆತನಿಗೇ ಗೊತ್ತಿಲ್ಲ. ಕಲ್ಲು ಬಂಡೆಯಂತಿರುವ ಪ್ರಮೋದ್ ಮೊದಲು ಧರ್ಮವನ್ನೂ ಮೀರಿ ನಡೆದುಕೊಳ್ಳುವುದನ್ನ, ಅನ್ಯ ಕೋಮಿನವರೊಡನೆ ಸಹಬಾಳ್ವೆಯಿಂದ ಬದುಕುವುದನ್ನು ಕಲಿಯಲಿ. ಅನಂತರ ಆ ವಿಚಾರದ ಬಗ್ಗೆ ಮಾತನಾಡಲಿ.
ಎಲ್ಲರ ಹೃದಯದಲ್ಲೂ ಅರಳಲೇಬೇಕಾದ ಕೋಮಲ ಹೂವು ಈ ಪ್ರೀತಿ. ಎಳೆಯ ಹೃಯದಲ್ಲಿ ಅದು ಅರಳಿದರೆ ಆ ವ್ಯಕ್ತಿ ಸರಿ ದಾರಿಯಲ್ಲಿ , ಮಾನವೀಯತೆಯಿಂದ ಬದುಕಲು ಸಾಧ್ಯ. ಬರೀ ದ್ವೇಷ, ಅಸೂಹೆ, ಧರ್ಮಾಂಧತೆಗಳನ್ನೇ ಮೈಗೂಡಿಸಿಕೊಂಡರೆ ಸಮಾಜಕ್ಕೆ ಒಂದು ‘ಕೆಟ್ಟ ಹುಳ ’ ಹುಟ್ಟಿಕೊಂಡಂತೆಯೇ. ಈಗ ಹೇಳಿ ಪ್ರೀತ್ಸೋದ್ ತಪ್ಪಾ ?
ಸಾರ್ವಜನಿಕರನ್ನು ಕೆಣಕಿದವರು ಈ ಸಮಾಜದಲ್ಲಿ ಯಾರೋಬ್ಬರೂ ನೆಟ್ಟಗೆ ಬದುಕಿದ ಇತಿಹಾಸವಿಲ್ಲ. ಪ್ರೇಮಿಗಳ ದಿನವಾದ ಫೆ.೧೪ರಂದು ಗಲಭೆ ಮಾಡಲು ಹೊರಡುವ ಶ್ರೀರಾಮ ಸೇನೆಯ ನಾಯಕರನ್ನು ಅದೇ ಯುವ ಸಮೂಹ ಚೆಡ್ಡಿ ಬಿಚ್ಚಿ ಪುಟಗೋಸಿಯಲ್ಲಿ ಕಳಿಸೀತು ! ಎಚ್ಚರವಿರಲಿ...

Monday, January 19, 2009

ಕನ್ನಡಿಗರೇ ಓಡೋಡಿ ಬನ್ನಿ

ಕಸ್ತೂರಿ ಕನ್ನಡಕೆ
ಕೊಡಲಿ ಪೆಟ್ಟು ಬಿದ್ದೈತೆ
ಹೃದಯದಾ ಮಾತು
ಮರೆಯಾಗಿ ಹೊಂಟೈತೆ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ನೂರಾರು ವರ್ಷ ಆಳಿದಾ ಪರಕೀಯರು
ಮಾಡಲಿಲ್ಲ ಕನ್ನಡಕೆ ದ್ರೋಹ.
ಸ್ವಾತಂತ್ರ್ಯ ಬಂದ ಮರು ಕ್ಷಣವೆ
ಆಯ್ತು ಕನ್ನಡ ಛಿದ್ರ ಛಿದ್ರ
ವಿಚಿತ್ರ ಜನರಿಂದ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ನಗರದಲ್ಲಿ ನಿಂತು ನಗಾರಿ ಬಾರಿಸಿದ್ರೂ
ಕೇಳುವವರಿಲ್ಲ ಕನ್ನಡಾಂಬೆಯ ಗೋಳು
ರೈತರೇ ಬನ್ನಿ, ಕೂಲಿ ಕಾರ್ಮಿಕರೇ ಬನ್ನಿ ,
ಕೈಲಿರುವ ಸಲಕರಣೆಗಳ ಹೊತ್ತು ತನ್ನಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ತಿಳಿದವರೇ ತುಳಿದರು ಕನ್ನಡವನ್ನ
ಮೆರೆಸಿದರು ಒಟ್ಟುಗೂಡಿ ಇಂಗ್ಲಿಷನ್ನ
ಉಳಿಸಿ ಬೆಳೆಸೋಣ ಕನ್ನಡಾನ
ಹೊಡೆದೋಡಿಸೋಣ ಇಂಗ್ಲಿಷ್‌ನ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಅನುದಿನವೂ ನರಳುತಿದೆ
ಅನುಕ್ಷಣವೂ ಕೊರಗುತಿದೆ
ತಾಯಿ ಎದೆಹಾಲು
ಕುಡಿದು ಕಲಿತ ಕನ್ನಡ
ರಕ್ಷಣೆಗೆ ಬನ್ನಿ ಕನ್ನಡಿಗರೆ
ಓಡೋಡಿ ಬನ್ನಿ... ||

ಅರವತ್ತು ವರುಷ ಕಳೆದರೂ
ಕನ್ನಡಾಭಿಮಾನ ಬರಲಿಲ್ಲ
ಅನ್ಯ ಭಾಷೆಗೆ ಪಲ್ಲಂಗ ಹಾಸುವುದ ಬಿಡಲಿಲ್ಲ
ಅದಕೇ ಬಿತ್ತು ಕನ್ನಡ ಅಂಗಳದಲ್ಲಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಹಿಂದೂ, ಮುಸ್ಲಿಂ ಎಂದು
ಹಿಂದು ಮುಂದು ನೋಡದಿರಿ
ಜಾತಿ ಭೇದಗಳ ಮರೆಯಲ್ಲಿ
ಕನ್ನಡಾಂಬೆಯ ಮರೆಯದಿರಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ ... ||

ತಾಯಿ ಎದೆ ಹಾಲುಂಡು
ಮೊಲೆ ಕೊಯ್ಯುವರಿಹರಿಲ್ಲಿ
ಅನ್ಯಳಾ ಉಬ್ಬಿದೆದೆಯನು ಕಂಡು
ಜೊಲ್ಲು ಸುರಿಸುವರಿಹರಿಲ್ಲಿ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಭುವನೇಶ್ವರಿಯ ನಯನದಲಿ
ಸುರಿಯುತಿದೆ ರಕ್ತಕಣ್ಣೀರು
ತನ್ನ ಮಕ್ಕಳೇ ಇರಿದ
ಚೂರಿ ಉರಿಯಿಂದ
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||

ಅನ್ಯ ಭಾಷೆಗಳ ವ್ಯಾಮೋಹ
ಹುಚ್ಚು ಹಿಡಿಸಿದೆ . ಆಹಾ...!
ಮುತ್ತುಕೊಡುವಳು ಬಂದಾಗ
ತುತ್ತು ಕೊಟ್ಟೋಳ ಮರೆಯೋದೆ ?
ರಕ್ಷಣೆಗೆ ಬನ್ನಿ ಕನ್ನಡಿಗರೇ
ಓಡೋಡಿ ಬನ್ನಿ... ||
Powered By Blogger